ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ-ನಿರ್ವಚನ | ಪ್ರೊ. ಶ್ರೀದೇವಿ ಶೀಲವಂತ, ಕಲಬುರಗಿ.

ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ
ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ
ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ:
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು,
ಅಷ್ಟಮದಂಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ
ಮುಕ್ತಿಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗವ
ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ
ಪ್ರಮಥರು ಮೆಚ್ಚುವರೆ?
ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ
ಹೊರಗೆಂದಾತನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26)

12 ನೇಯ ಶತಮಾನದ ಅನುಭವ ಮಂಟಪದಲ್ಲಿದ್ದ ಮಹಾಶರಣರು ಅಂಬಿಗರ ಚೌಡಯ್ಯನವರು. ಹಾವೇರಿ ಜಿಲ್ಲೆಯ ರಾಣಬೆನ್ನೂರು ತಾಲೂಕಿನ ಚೌಡದಾನಪುಗ್ರಾಮದಲ್ಲಿ ಜನಿಸಿದ ಈ ಶರಣರ ತಂದೆಯವರ ಹೆಸರು ವಿರೂಪಾಕ್ಷ, ತಾಯಿಯವರ ಹೆಸರು ಪಂಪಾದೇವಿ. ಮಡದಿ ಹೆಸರು ಸುಲೋಚನಾ, ಮಗನ ಹೆಸರು ಪುರವಂತ. ಇವರ ಗುರುಗಳು ಶಿವದೇವ. ಚೌಡಯ್ಯನವರು ದೋಣಿ ನಡೆಸುವ ಅಂಬಿಗನ ಕಾಯಕ ಕೈಕೊಂಡವರು. ವೀರ ಗಣಾಚಾರಿ ಎನಿಸಿಕೊಂಡ ಇವರು ತಮ್ಮ ಹೆಸರನ್ನೆ ವಚನಾಂಕಿತವನ್ನಾಗಿರಿಸಿಕೊಂಡವರು. ಅಂಬಿಗರ ಚೌಡಯ್ಯ ಎನ್ನುವ ಅಂಕಿತನಾಮದಲ್ಲಿ ಇವರ 275 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ವಚನ ನಿರ್ವಚನ:
ಗುರು ಶಿಷ್ಯರು ಒಂದು ನಾಣ್ಯದ ಎರಡು ಮುಖಗಳು. ಸಾಧನೆಯ ಹಾದಿಯಲ್ಲಿರುವ ಶಿಷ್ಯನಿಗೆ ಶ್ರೇಷ್ಠ ಗುರು ಬೇಕು. ಗುರು ಆದವರು ಸಹ ಏನೇನೂ ನೋಡದೆ ಸಿಕ್ಕ ಸಿಕ್ಕವರನ್ನು ಶಿಷ್ಯರನ್ನಾಗಿಸಿಕೊಳ್ಳಬೇಕಿಲ್ಲ ಎನ್ನುತ್ತಾರೆ ಅಂಬಿಗರ ಚೌಡಯ್ಯನವರು. ಆ ಶಿಷ್ಯನ ಭಕ್ತಿ, ಸಾಧನೆಯ ಛಲ, ಪರಶಿವನನ್ನು ಅರಿಯಬೇಕೆನ್ನುವ ಉತ್ಕಟತೆ ನೋಡಿ ಶಿಷ್ಯ ಮಾಡಿಕೊಳ್ಳುವ ಮೂಲಕ ಗುರು ಉಪದೇಶ ಮಾಡಬೇಕೆಂದು ಹೇಳುತ್ತಾರೆ. ಏನನ್ನೂ ಅರಿಯದ ಶತಧಡ್ಡರನ್ನು ಶಿಷ್ಯರನನ್ನಾಗಿ ಮಾಡಿಕೊಂಡು ಅವರಿಗೆ ಉಪದೇಶ ಮಾಡುವ ಗುರುವಿನ ಮುಖ ಎನಗೆ ತೋರದಿರು ಎಂದು ಹೇಳುತ್ತಾ ವಚನಕಾರರು ಅಂದಿನ ವಾಸ್ತವಿಕ ಸತ್ಯವನ್ನು ಮುಂದಿಡುತ್ತಾರೆ. ಹಾಗೆಂದ ಮಾತ್ರಕ್ಕೆ ಅದು ಅಂದು ಮಾತ್ರ ಇತ್ತು ಇಂದು ಇಲ್ಲ ಎಂಬುವುದು ಅಲ್ಲ. ಅಂದಿನವರಿಗೂ, ಇಂದಿನವರಿಗೂ, ಮುಂದಿನವರಿಗೂ ಸಹ ಎಚ್ಚರಿಗೆ ನೀಡಿದ್ದಾರೆ.

ಮುಂದುವರಿದು ಶರಣರು ಪ್ರಪಂಚದಲ್ಲಿದ್ದು ಪಾರಾಮಾರ್ಥ ಸಾಧಿಸಿದವರು. ಪ್ರಾಪಂಚಿಕ ಆಶೆ-ಆಮಿಷಗಳನ್ನು ಶಿಷ್ಯನಿಂದ ಅಳಿಸಿ ಪಾರಮಾರ್ಥಿಕ ಸಾಧನೆಗೈಯುವ ಮಾರ್ಗ ತೋರಬೇಕಾದದ್ದು ಗುರುವಿನ ಆದ್ತ ಕರ್ತವ್ಯ. ಆದರೆ ಗುರುವಾದವನು ಈ ನಿಟ್ಟಿನಲ್ಲಿ ಆ ಮಾರ್ಗ ತೋರದೆ ಹೋದರೆ ಅವನು ಗುರು ಅಲ್ಲ ಎಂಬುವುದು ಚೌಡಯ್ಯನವರ ನಿಶ್ಚಯ ನಿಲುವಾಗಿತ್ತು. ಈತನ ಲಿಂಗದೀಕ್ಷೆ ಆ ಶಿಷ್ಯನ ಪ್ರಾಪಂಚಿಕ ವ್ಯಾಮೋಹ ಅಳಿಸಬೇಕು. ಪಂಚೇಂದ್ರಿಯಗಳ ವಿಷಯ ವಾಸನೆಗಳು ಕಳೆಯಬೇಕು.

ಗುರು ದೀಕ್ಷೆ ನೀಡಿರಬಹುದು. ಆದರೆ ಶಿಷ್ಯನಲ್ಲಿರುವ ಆ ಸಪ್ತವ್ಯಸನಂಗಳಾದ ತನು, ಮನ, ಧನ, ವಿಶ್ವ, ಉತ್ಸಾಹ, ವಾಹನ, ಸೇವಕ ವ್ಯಸನಂಗಳು ನಿರ್ಮೋಹಗೊಳಿಸದೆ, ಅಷ್ಟ ಮದಗಳಾದ ಧನ, ಕುಲ, ವಿದ್ಯೆ, ರೂಪ, ಯೌವ್ವನ, ಬಲ, ಅಧಿಕಾರ, ಕುಟುಂಬ ಇಂತಹ ಖೊಟ್ಟಿ ಗುಣಗಳು ಕೀಳದೆ ದೀಕ್ಷೆ ಕೊಟ್ಟೆ ಎನ್ನುವದು ಸರಿಯಲ್ಲ ಎನ್ನುತ್ತಾರೆ. ಆತನಿಗೆ ಸುತ್ತಿಕೊಂಡ ಸೂತಕಗಳಾದ ಜಾತಿ, ಜನನ, ಪ್ರೇ, ರಜ, ಮತ್ತು ಉಚ್ಛಿಷ್ಠ ಸೂತಕಗಳು ಅಳಿಯದೆ ಆಣವ, ಮಾಯಾ, ಕಾರ್ಮಿಕ ಮಲತ್ರಯಗಳು ಬಿಡಿಸದೆ ಮುಕ್ತಿ ಪಥ ತೋರದ ಗುರು ಅದೇತರ ಗುರು ಎಂದು ಪ್ರಶ್ನಿಸುತ್ತಾರೆ ಅಂಬಿಗರ ಚೌಡಯ್ಯನವರು.

ತನ್ನ ತನು, ಮನ, ಭಾವತ್ರಯಂಗಳಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದ ಅರಿವು ಶಿಷ್ಯನಾದವನು ಗುರುವಿನಿಂದ ಪಡೆದುಕೊಳ್ಳಲೇಬೇಕು. ಹಾಗಾಗದೆ ಕೇವಲ ಬಾಹ್ಯದಲ್ಲಿ ಮಾತ್ರ ಇವು ತೋರಿಕೆಗಳಾದರೆ ಅವರಿಬ್ಬರೂ ಅನರ್ಹರು ಎಂದು ಹೇಳುತ್ತಾರಲ್ಲದೆ ನಿರ್ದಾಕ್ಷಿಣ್ಯವಾಗಿ ಅಂತಹವರನ್ನು ತಳ್ಳಿ ಹಾಕುವ ಮೂಲಕ ಎಚ್ಚರಿಕೆಯ ಸಂದೇಶ ಕೊಡುತ್ತಾರೆ. ಇರ್ವರು ನಡೆ ನುಡಿಗಳಿಂದ ಶುದ್ಧರಾಗಿರಬೇಕೆಂದು.

ಪ್ರೊ. ಶ್ರೀದೇವಿ ಶೀಲವಂತ,
ಅರ್ಧಶಾಸ್ತ್ರ ಪ್ರಾಧ್ಯಾಪಕರು (ನಿವೃತ್ತ),
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್.‌ ಸಂ. 79754 94686

Loading

Leave a Reply