ನಿಜಸುಖಿ ಹಡಪದ ಅಪ್ಪಣ್ಣನವರ ವಚನ ವಿಶ್ಲೇಷಣೆ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?
ಹಾಡಲೇಕೊ ಹರನ ಕಂಡಾತಂಗೆ?
ಬೇಡಿ ಕಾಡಲೇಕೊ ನೋಡುವ
ಕಂಗಳಿಗೆ ತೃಪ್ತಿಯಾದವಂಗೆ?
ನೀಡಿ ಮಾಡಲೇಕೊ ಉಡುವಾತನು
ಉಂಬುವಾತನು ಏಕವಾದ ಮೇಲೆ.
ಮುಂದು ನೋಡುವರಾರುಂಟು ಹೇಳಾ,
ಬಸವಪ್ರಿಯ ಕೂಡಲ ಚನ್ನಬಸವಣ್ಣಾ?
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-919)

ಪ್ರಸ್ತುತ ಅರ್ಥಗರ್ಭಿತವಾದ ವಚನ ನಿಜ ಶರಣರಾದ ಹಡಪದ ಅಪ್ಪಣ್ಣನವರದು. ಹಡಪದರು ಎಂದರೆ ಕ್ಷೌರಿಕರು ಎಂಬ ಸಮಾನ ಪದಗಳು ಬಳಕೆಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿ, ಸಂಕುಚಿತ ಮನದವರಲ್ಲಿ ಹಡಪದರು ಎದುರು ಬಂದರೆ ಅಪಶಕುನವೆಂದು ತರಗುಟ್ಟುತ್ತಿದ್ದ ಕಾಲಘಟ್ಟದಲ್ಲಿ ಹಡಪದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡು ಪ್ರಾಣದಂತೆ ಅವರೊಂದಿಗೆ ಸದಾ ಒಡನಾಡಿದವರು ವಿಶ್ವಗುರು ಬಸವಣ್ಣನವರು. ವ್ಯಕ್ತಿಗೂ ಮತ್ತು ವೃತ್ತಿಗೂ ಏಕಕಾಲಕ್ಕೆ ಗೌರವ ಸಲ್ಲುವಂತಹ ವ್ಯವಸ್ಥೆಯನ್ನು ಸೃಷ್ಟಿಸಿ ಬಸವಣ್ಣನವರು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮ ಗೌರವದೊಂದಿಗೆ ಬದುಕುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಹಡಪದ ಅಪ್ಪಣ್ಣನವರೂ ಸಹ ಬಸವಣ್ಣನವರ ಆಪ್ತ ಒಡನಾಡಿಯಾಗಿದ್ದು ಒಬ್ಬ ಆಪ್ತಕಾರ್ಯದರ್ಶಿ ಈಗಿನ Corporate ಪರಿಭಾಷೆಯಲ್ಲಿ ಹೇಳಬೇಕೆಂದರೆ Personal Secretary (PS) ಹೇಗಿರಬೇಕು ಎಂಬುದಕ್ಕೆ ನಿದರ್ಶನರಾಗಿದ್ದರು. ಅಷ್ಟೊಂದು ಕಾರ್ಯಕ್ಷಮತೆ, ದಕ್ಷತೆ, ಸೂಕ್ಷ್ಮಗ್ರಹಿಕೆ, ಕಾರ್ಯ ನಿಭಾಯಿಸುವಿಕೆಯ ಶ್ರೇಷ್ಠತೆ ಅವರದಾಗಿತ್ತು.

12 ನೇ ಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶರಣರು ಹಡಪದ ಅಪ್ಪಣ್ಣನವರಾಗಿದ್ದಾರೆ. ಇವರನ್ನು “ನಿಜಸುಖಿ ಹಡಪದ ಅಪ್ಪಣ್ಣ” ಎಂದೂ ಕರೆಯಲಾಗಿದೆ. ಇವರ ಧರ್ಮಪತ್ನಿ ಲಿಂಗಮ್ಮನವರು ಸಹ ಅಧ್ಯಾತ್ಮವಾದಿಗಳಾಗಿದ್ದು ತತ್ವಬೋಧೆಯ ವಚನಗಳನ್ನು ರಚಿಸಿದವರು. ಹಡಪದ ಅಪ್ಪಣ್ಣನವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿದೆ. ಇವರು “ಬಸವಪ್ರಿಯ ಕೂಡಲಚನ್ನಬಸವಣ್ಣ” ಎಂಬ ವಚನಾಂಕಿತದಲ್ಲಿ ಸುಮಾರು 251 ವಚನಗಳನ್ನು ರಚಿಸಿದ್ದಾರೆ.

ಮಹಾನುಭಾವಿಯಾದ ಹಡಪದ ಅಪ್ಪಣ್ಣನವರು ಬೆಡಗಿನ ವಚನ ರಚನೆಗೆ ಹೆಸರಾದವರು. ಕಾಯಕನಿಷ್ಠೆ, ಜೀವನನಿಷ್ಠೆ ಹಾಗೂ ಸೇವಾನಿಷ್ಠೆಗಳಿಂದ ತಮ್ಮ ಕಾಯಕ ಮತ್ತು ಕುಲಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟವರು. ಅಜ್ಞಾನದ ಕೂದಲೆಂಬ ಕಳೆಯನ್ನು ತಮ್ಮ ತತ್ವನೀತಿಯೆಂಬ ಕತ್ತಿಯಿಂದ ಚರಚರನೆ ಕತ್ತರಿಸಿ ಜ್ಞಾನದ ಬೆಳೆ ಬೆಳೆಸಿದವರು.

ವೈಚಾರಿಕ ನೆಲೆಯಲ್ಲಿ ನಿಂತ ಅಪ್ಪಣ್ಣನವರು ತಮ್ಮ ಸರಳತೆ, ಸಮತಾಭಾವದಿಂದ ಕಲ್ಯಾಣದಲ್ಲಿ ಸಕಲ ಶಿವಶರಣರ ಗಾಢ ಸಂಪರ್ಕ ಹೊಂದಿದವರಾಗಿದ್ದರು. ಪ್ರಸ್ತುತ ಅವರ ಈ ವಚನವು ಕೆಲವು ಪ್ರಶ್ನೆಗಳನ್ನು ಬಿಚ್ಚಿಕೊಳ್ಳುತ್ತಾ ಅದಕ್ಕೆ ಉತ್ತರ ಕಂಡುಕೊಳ್ಳುತ್ತಾ ಸಾಗುತ್ತದೆ. ಓದಲೇಕೋ? ಹಾಡಲೇಕೋ? ಬೇಡಿ ಕಾಡಲೇಕೊ? ನೀಡಿ ಮಾಡಲೇಕೋ? ಎನ್ನುವ ಪ್ರಶ್ನೆಗಳು ಅಪ್ಪಣ್ಣನವರು ಏನನ್ನು ಹೇಳಲು ಹೊರಟಿದ್ದಾರೆ ಎಂಬ ಜಿಜ್ಞಾಸೆಯಲ್ಲಿ ಮುಳುಗಿಸುತ್ತವೆ.

ಓದುವುದು, ಹಾಡುವುದು, ಬೇಡುವುದು, ಕಾಡುವುದು, ನೀಡುವುದು, ಮಾಡುವುದು, ಉಡುವುದು, ಉಣ್ಣುವುದು ಇವೆಲ್ಲವೂ ಲೌಕಿಕ ಪ್ರಾಪಂಚಿಕರು ತಮ್ಮ ತೃಪ್ತಿಗಾಗಿ ಮಾಡುವ ಕ್ರಿಯೆಗಳು. ಎಲ್ಲವನ್ನೂ ಪಡೆದುಕೊಂಡು ಸಂತೃಪ್ತವಾದ ಮೇಲೆ ಒಂದು ಶೂನ್ಯ ಸ್ಥಿತಿ ಕಾಡಲಾರಂಭಿಸುತ್ತದೆ. ಭೌತಿಕ ದಾಹದ ತೃಪ್ತಿಯೇ ಜೀವನದ ಅಂತಿಮ ಸತ್ಯವೇ? ಅದರಾಚೆ ಇನ್ನೂ ಏನೋ ಹೊಂದುವ ಬಯಕೆ ಕಾಡುತ್ತದೆ. ಅದುವೇ ಆತ್ಮಾನಂದ. ಈ ಆತ್ಮಾನಂದವು ಅಲೌಕಿಕವಾದ ಅಂತರಗದ ಕ್ರಿಯೆ. ಇದನ್ನು ಬಸವಾದಿ ಶಿವಶರಣರು ಲಿಂಗವನ್ನು ಪೂಜಿಸಿ ಪಡೆದುಕೊಂಡರು. ಅದರಿಂದ ದೊರೆತ ಆತ್ಮಸುಖಕ್ಕಿಂತ ಭೌತಿಕ ವಸ್ತುಗಳಿಂದ ದೊರೆತ ಸುಖ ಕ್ಷಣಿಕವೆಂದು ಅವರು ಅರಿತುಕೊಂಡಿದ್ದರು. ಅದನ್ನೇ ಅಪ್ಪಣ್ಣನವರು ತಮ್ಮ ವಚನದ ಮೂಲಕ ಅಭಿವ್ಯಕ್ತಿಸುತ್ತಾರೆ;

ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?” ಎನ್ನುವ ಪ್ರಶ್ನೆಯಲ್ಲಿಯೇ ಉತ್ತರವಿದೆ. “ಓದು” ಎಂಬುದು ಜ್ಞಾನ. ಓದುವುದರಿಂದ ಜ್ಞಾನವಂತರಾಗಬಹುದೇ ವಿನಹಂ ಲಿಂಗಜ್ಞಾನಿಗಳಾಗಲು ಸಾಧ್ಯವೇ? ಜ್ಞಾನ ಮತ್ತು ಕ್ರಿಯೆಗಳು ಮುಖಾಮುಖಿಯಾಗಬೇಕಲ್ಲವೇ? ಲಿಂಗವನ್ನು ಪೂಜಿಸಿ ಆತ್ಮಜ್ಞಾನಿಯಾದ ಬಳಿಕ ಆತ್ಮಸುಖ ಹೊಂದಿದ ಬಳಿಕ ಮಾಡುವ, ನೋಡುವ, ಹಾಡುವ, ಕೇಳುವ ಕ್ರಿಯೆಯಲ್ಲವೂ ಲಿಂಗಮಯವಾಗುತ್ತದೆ. ಓದಿ, ಕಂಠಪಾಠ ಮಾಡಿ, ಜ್ಞಾನ ಸಂಪಾದಿಸಿ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ ಅಂತಹ ಓದಿನಿಂದ ಆಗುವ ಪ್ರಯೋಜನವಾದರೂ ಏನು? ಯಾರು ಲಿಂಗಜ್ಞಾನ ಹೊಂದುತ್ತಾರೋ ಅವರು ಲಿಂಗಕ್ಕೂ ಅಂಗಕ್ಕೂ ಭೇದವಿಲ್ಲವೆಂದೂ, ಆತ್ಮಕ್ಕೂ-ಪರಮಾತ್ಮಕ್ಕೂ ಭೇದವಿಲ್ಲವೆಂದು ಅರಿತುಕೊಳ್ಳುತ್ತಾರೆ. ಅವರು ಮಾತ್ರ ಲಿಂಗಾಗ ಸಾಮರಸ್ಯದ ಮೂಲಕ ಲಿಂಗದ ನಿಜವಾದ ನೆಲೆಯನ್ನು ಅರಿತುಕೊಳ್ಳುತ್ತಾರೆ. ಇಲ್ಲಿ “ಲಿಂಗದ ಭೇದಾದಿಭೇದವನರಿಯುವುದು” ಎಂದರೆ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಾನವರು ಸಮಾನರು. ಇಲ್ಲಿ ಯಾರು ಶ್ರೇಷ್ಠರೂ ಅಲ್ಲ ಕನಿಷ್ಠರೂ ಅಲ್ಲ. ವರ್ಗ, ವರ್ಣ, ಲಿಂಗ ವ್ಯವಸ್ಥೆಯಲ್ಲಿ ಶ್ರೇಣಿಕೃತ ವ್ಯವಸ್ಥೆಯನ್ನು ದೂರ ಸರಿಸಿ ಏಕತೆಯನ್ನು ಕಾಪಾಡಿಕೊಳ್ಳುವ ನೀತಿಯನ್ನು ಅಪ್ಪಣ್ಣನವರ ಈ ವಚನ ಅರ್ಥೈಸುತ್ತದೆ. “ಹರ” ನೆಂದರೆ ನಾವು ಭಾವಿಸುವಂತೆ ‘ಶಿವ’ ಎಂಬ ದೇವರಲ್ಲ. ಹರನೆಂದರೆ ಸತ್ಯಕರವಾದುದು, ಮಂಗಳಕರವಾದುದು ಎಂದರ್ಥ ಯಾರು ಸತ್ಯದಲ್ಲಿ ಶಿವನನ್ನು, ಸತ್ಯ+ಶಿವ ಏಕೀರ್ಭವಿಸಿದಲ್ಲಿ ಸೌಂದರ್ಯವನ್ನು ಕಂಡು ತನ್ಮಯರಾಗುತ್ತಾರೋ ಅವರಿಗೆ ಮಂತ್ರ ಪಠಣೆ, ಹಾಡು, ಸ್ತುತಿ, ಗಾನಗಳ ಹಂಗು ಇರುವುದಿಲ್ಲ.

ಸತ್ಯದ ಸಾಕ್ಷಾತ್ಕಾರವಾದ ಮೇಲೆ ನೋಡುವ ಕಂಗಳಲ್ಲಿ ಮಹಾಬೆಳಕು ತುಂಬಿಕೊಡಿರುತ್ತದೆ. ಲಿಂಗಜ್ಞಾನದ ಪೂರ್ಣ ಪರಮಾನಂದದ ತೃಪ್ತಿ ಕಂಗಳಿಗೆ ಒದಗುತ್ತದೆ. ಅದ್ವೆತ್ವದ ನೆಲೆಗೇರಿ ಜೀವಾತ್ಮ ಪರಮಾತ್ಮ ಒಂದಾದಾಗ ಅಂಗವೇ ಲಿಂಗವಾಗಿ, ಲಿಂಗವೇ ಅಂಗವಾಗಿ ಸರ್ವಾಂಗವೂ ಲಿಂಗಮಯವಾದಾಗ, ಜ್ಞಾನವನ್ನು ಉಡುವವನು, ಜ್ಞಾನವನ್ನು ಉಂಬುವವನು ಜೀವಾತ್ಮನೇ ಆಗಿದ್ದು ಮುಂದೆ ಈ ಉಭಯ ಕ್ರಿಯೆಯಿಂದ ಪರಮಾತ್ಮನಾದಾಗ ಮಹಾಬೆಳಗನ್ನು ದೃಷ್ಠಿನೆಟ್ಟು ನೋಡಲು ಸಾಮಾನ್ಯರಿಗೆ ಸಾಧ್ಯವೇ? ಎಂಬ ಲಿಂಗಜ್ಞಾನ ಕ್ರಿಯೆಯನ್ನು ಹಡಪದ ಅಪ್ಪಣ್ಣನವರು “ಉಡುವಾತನು ಉಂಬುವಾತನು ಏಕವಾದ ಮೇಲೆ ಮುಂದು ನೋಡುವರರಾರುಂಟು ಹೇಳು ಬಸವಪ್ರಿಯ ಕೂಡಲಚನ್ನಬಸವಣ್ಣಾ?” ಎನ್ನುತ್ತಾರೆ. ಹೀಗೆ ಆತ್ಮಜ್ಞಾನದ ಮೂಲಕ ಲಿಂಗಜ್ಞಾನ ಹೊಂದಿ, ಅನುಭವದಿಂದ ಅನುಭಾವಿಕ ನೆಲೆಗೇರುವ, ಅನಿರ್ವಚನೀಯವಾದ ಸಾಧಕ ಶರಣ ಏರುವ ಶಿವಾನುಭವದ ಉತ್ತುಂಗ ನೆಲೆಯನ್ನು ಈ ವಚನದ ಮೂಲಕ ಪ್ರತಿಪಾದಿಸುತ್ತಾರೆ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೊಬೈಲ್ ಸಂ. 97407 38330

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply