
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
ಅನುಭವ ಮಂಟಪದ ಅನುಭಾವಿಯಾಗಿ, ಕಾಯಕ ತತ್ವದೊಳಗೆ ನಿಷ್ಠೆಯಿಟ್ಟು, ಕಲ್ಯಾಣ ಕ್ರಾಂತಿಯ ನಂತರ ಅಕ್ಕನಾಗಮ್ಮ, ಚೆನ್ನಬಸವಣ್ಣ ಮುಂತಾದ ಶರಣರೊಂದಿಗೆ ಉಳುವಿಯ ಕಡೆಗೆ ಹೊರಟ ಶರಣರಿವರು. ಜನ್ಮಸ್ಥಳ ವಿಜಾಪುರ ಜಿಲ್ಲೆಯ ಶಿವಣಗಿ ಗ್ರಾಮ. ಕಾಯಕ ನೆಲೆ ಬಸವಕಲ್ಯಾಣ. ಲಿಂಗೈಕ್ಯಗೊಂಡ ಸ್ಥಳ ಚಿತ್ರದುರ್ಗ ಜಿಲ್ಲೆಯ ಆರ್. ನುಲೇನೂರು. ಕಾಯಕ ಮೆದೆಹುಲ್ಲು, ಪುಂಡಿಕಟ್ಟಿಗೆಯಿಂದ ಹಗ್ಗ ಹೊಸೆಯುವುದು. ಇವರ ವಚನಾಂಕಿತ “ಚಂದೇಶ್ವರಲಿಂಗ”. ಇವರು ರಚಿಸಿದ ಒಟ್ಟು 48 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.
ನಿರ್ವಚನ:
ಕಾಯಕ ತತ್ವದ ಪರಾಕಾಷ್ಟತೆ ಈ ವಚನದಲ್ಲಿ ಕಾಣಬಹುದು. ಎಲ್ಲರಿಗೂ ಪೂಜ್ಯನೀಯ ತತ್ವ ಸಿದ್ಧಾಂತಗಳಾದ ಗುರು-ಲಿಂಗ-ಜಂಗಮ ತತ್ವಗಳಿಗಿಂತ ಕಾಯಕ ಶ್ರೇಷ್ಠ ಎಂಬ ನಿಲುವಿಗೆ ಬದ್ಧರಾಗಿದ್ದವರು ಚೆಂದಯ್ಯ ಶರಣರು. ಆ ಮೂರೂ ಸಹ ತಮ್ಮ ಲೌಕಿಕ ಬಂಧನಗಳಿಂದ ಮುಕ್ತಿ ಕಾಣಬೇಕಾದರೆ ಕಾಯಕದ ಮುಖಾಂತರ ಮಾತ್ರ ಸಾಧ್ಯ ಎನ್ನುತ್ತಾರೆ ನುಲಿಯ ಚಂದಯ್ಯನವರು.
ಬಸವಣ್ಣನವರು “ಲಾಂಛನಕ್ಕೆ ಶರಣೆಂಬೆ, ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಕೂಡಲಸಂಗಮದೇವರ ಸಾಕ್ಷಿಯಾಗಿ ಛೀ ಎಂಬೆ” ಎನ್ನುತ್ತಾರೆ. ಆ ಆಚರಣೆಯೊಳು ಅತೀ ಮುಖ್ಯವಾದುದು ಕಾಯಕ ಎಂಬುದು ಇವರ ಸ್ಪಷ್ಟ ನಿಲುವಾಗಿದೆ. ಸ್ವ-ಕಾಯಕದಿಂದ ಬಂದುದರಿಂದ ಮಾತ್ರ ದಾಸೋಹ ನಡೆಯಬೇಕು. ಯಾರೋ ಮಾಡಿರುವದನ್ನು ತಂದು ದಾಸೋಹ ಮಾಡುವಂತಿಲ್ಲ. ಇಲ್ಲಿ ಆ ಶರಣರು ಬಳಸಿದ ಚರಸೇವೆ ಶಬ್ದ ಅದು ದಾಸೋಹ ಶಬ್ಧದ ಅರ್ಥವೇ ಒಳಗೊಂಡದ್ದಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ಈ ಶರಣ ಧರ್ಮದಲ್ಲಿ ಹರಸೇವೆ ಹರಿಸೇವೆಗಳಿಲ್ಲ. ಏನಿದ್ದರೂ ಅದು ಚರಸೇವೆ, ಜೀವರಾಶಿಗಳ ಸೇವೆ, ಮಾನವರಾದಿಯಾಗಿ ಪಶು, ಪಕ್ಷಿ, ಪ್ರಾಣಿ ಸಂಕುಲ ಸೇವೆ ಮಾಡುವದೆ ಗುರು-ಲಿಂಗ-ಜಂಗಮರ ಕಾಯಕವಾಗಿದೆ.
ಅಂದರೆ ಕುಳಿತು ಉಣ್ಣುವ ಹಕ್ಕು ಆರಿಗೂ ಇಲ್ಲ, ಮರ್ತ್ಯಲೋಕದೊಳು ಹುಟ್ಟಿದ ಬಳಿಕ ಕಾಯಕ ಮಾಡಲೇಬೇಕು, ಕಾಲು ಚಾಚಿಕೊಂಡು ಇನ್ನೊಬ್ಬರಿಂದ ಕೈ ಕಾಲು ಬೀಳಿಸಿಕೊಳ್ಳುತ್ತಾ, ದೊಡ್ಡ ದೊಡ್ಡ ಉಪದೇಶ ಮಾತುಗಳನ್ನು ಆಡುವ ಮೂಲಕ ಗುರು-ಲಿಂಗ-ಜಂಗಮ ಸೇವೆಯನ್ನು ಮಾಡುವುದು ಬೇಡವೆಂಬುದು ಶರಣ ನುಲಿಯ ಚೆಂದಯ್ಯನವರ ದಿಟ್ಟ ನುಡಿ. ಇದು ಕೇವಲ ನುಡಿಯಾಗಲಿಲ್ಲ, ನಡೆಯೊಳಗೆ ತಂದರು. ಕೊರಳೊಳಗಿನ ಇಷ್ಟಲಿಂಗ ಕೆರೆಯೊಳಗೆ ಬಿದ್ದಾಗ ಅದನ್ನು ನಿರ್ಲಕ್ಷ ಮಾಡಿ ತನ್ನ ಕಾಯಕದೊಳಗೆ ಚಿತ್ತವಿಟ್ಟವರು. ಏಕೆಂದರೆ ಕಾಯಕದ ಮೂಲಕವೇ ಚರಸೇವೆ ಕೈಕೊಳ್ಳಬೇಕಾಗಿದೆ. ಆದರೂ ಮಡಿವಾಳ ಮಾಚಿದೇವರ ಮೂಲಕ ಅಲ್ಲಮ ಪ್ರಭುದೇವರ ಸಾರಥ್ಯದಲ್ಲಿ ಇಷ್ಟಲಿಂಗವನ್ನು ಮತ್ತೆ ಪಡೆಯಲು ಸಿದ್ಧರಾದರೂ ಕೂಡ ಆ ಲಿಂಗದಿಂದಲೇ ಕಲ್ಯಾಣದ ಬೀದಿಯೊಳಗೆ ಕಾಯಕ ಮಾಡಿಸಿದ ಮಹಾಶರಣರು ನುಲಿಯ ಚಂದಯ್ಯನವರು.
ಒಟ್ಟಿನಲ್ಲಿ ಕಾಯಕವೇ ಭಕ್ತಿ ಹಾಗೂ ಸೇವೆಯೆ ಪೂಜೆ. ಇವುಗಳನ್ನು ಯಾರು ಯಾವ ಸ್ಥಾನದಲ್ಲಿದ್ದರೂ ಕಾಯಕ ಮತ್ತು ಚರಸೇವೆ ಮಾಡಲೇಬೇಕು. ಇಲ್ಲದೇ ಹೋದರೆ ಭಕ್ತಿ ಪೂರ್ಣವಾಗದು. ಅದಕ್ಕಾಗಿಯೇ ಶಿನ ಸೇವೆಯೇ ಜನ ಸೇವೆ ಎನ್ನುತ್ತಾರೆ. (No Religion is greater than service, service to humanity is greater than God)
ಶ್ರೀಮತಿ ಸುವರ್ಣ ಗೋಲಗೇರಿ,
ಶರಣ ತತ್ವ ಚಿಂತರಕರು,
ರಾಯಚೂರು.
ಮೋಬೈಲ್ ನಂ. 94811 79641
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51417
ಓಂ ಶ್ರೀ ಗುರು ಬಸವ ಲಿಂಗಾಯ ನಮಃ