ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? | ಬಿ. ಎಸ್. ಷಣ್ಮುಖಪ್ಪ | ಕೃಪೆ: ಪ್ರಜಾವಾಣಿ | ಸಂಗತ | 23.04.2010
ಲಿಂಗಾಯತ ಧರ್ಮವನ್ನು ಇತಿಹಾಸದುದ್ದಕ್ಕೂ ಹೈಜಾಕ್ ಮಾಡುತ್ತಲೇ ಬಂದಿರುವ ವೀರಶೈವ ಪಂಚಪೀಠಾಧಿಪತಿಗಳು ಮೂಲತಃ ಚತುರಾಚಾರ್ಯರು ಎಂಬುದಕ್ಕೆ 1698 ರಲ್ಲಿ ರಚಿತವಾದ “ಸಂಪಾದನೆಯ ಪರ್ವತೇಶನ ಚತುರಾರ್ಯರ ಚರಿತ್ರೆ” ಒಂದು ಉತ್ತಮ ಆಕರ ಸಾಕ್ಷಿ. ರಂಭಾಪುರಿಯ ರೇಣುಕ, ಉಜ್ಜಯಿನಿಯ ಮರುಳಸಿದ್ದ, ಕೇದಾರದ ಭೀಮಾಶಂಕರಲಿಂಗ, ಶ್ರೀಶೈಲದ ಪಂಡಿತಾರಾಧ್ಯರೇ ಈ ಚತುರಾಚಾರ್ಯರು. ಇವರು 16 ನೇ ಶತಮಾನದ ನಂತರ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುವ ನೆಪದಲ್ಲಿ ಐದನೆಯ ಪೀಠವನ್ನಾಗಿ ಕಾಶಿಯ ಪೀಠವನ್ನು ಸೃಷ್ಟಿಸಿಕೊಂಡರು. ಇದಕ್ಕೆ “ಜ್ಞಾನ ಸಿಂಹಾಸನಾ ಪೀಠ” ಎಂದು ಹೆಸರಿಟ್ಟುಕೊಂಡರು. ಅದಕ್ಕಾಗಿ ಕಾಶಿಯ ಜಂಗಮವಾಡಿಯಲ್ಲಿ ಶಾಖೆಯೊಂದನ್ನು ತೆರೆದು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿದರು.
ಇವರು ಕಾಶಿಯನ್ನೇ ಪೀಠವನ್ನಾಗಿಸಿಕೊಂಡಿದ್ದಕ್ಕೆ ಒಂದು ಪ್ರಬಲ ಕಾರಣವೂ ಇದೆ. ಕಾಶಿ ಎಂಬುದು ಭಾರತದಧಾರ್ಮಿಕ ಭೂಪಟದಲ್ಲಿ ಬಹಳಷ್ಟು ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆ ಹೊಂದಿದ ಪ್ರದೇಶ. ಇಂತಹ ಕಾಶಿಯಲ್ಲಿ 17 ನೇ ಶತಮಾನದಲ್ಲಿ ಸ್ಥಳೀಯ ಗೋಸಾವಿ ಮಠಕ್ಕೆ (ನಾಥ ಸಂಪ್ರದಾಯ)ಒಬ್ಬ ಮಲ್ಲಿಕಾರ್ಜುನ ಗೋಸಾವಿ ಎಂಬ ಲಿಂಗಾಯತ ನೇಮಕವಾಗಿದ್ದ. ನಾಥ ಸಂಪ್ರದಾಯ ಎಂದರೆ ಇಲ್ಲಿ ಯಾರು ಬೇಕಾದರೂ ಮಠಾಧಿಪತಿಗಳಾಗಬಹುದು. ನಮ್ಮ ಹುಬ್ಬಳ್ಳಿ ಸಿದ್ಧಾರೂಢರ ಮಠದಂತೆ. ಹೀಗಾಗಿ ಇಂತಹ ಮಠಕ್ಕೆ ಯಾವಾಗ ಲಿಂಗಾಯತನೊಬ್ಬ ಪೀಠಾಧಿಪತಿಯಾಗಿ ಕುಳಿತು ಸತ್ತು ಹೋದನೋ ಆ ಬಳಿಕ ಈ ಚತುರಾಚಾರ್ಯರ ಕಣ್ಣು ಇದರ ಮೇಲೆ ಬಿದ್ದಿತು. ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಸೃಷ್ಟಿಸಿ ಇದೂ ಕೂಡಾ ತಮ್ಮದೇ ಮಠ ಎಂದು ಅನುಯಾಯಿಗಳನ್ನು ನಂಬಿಸಿ ತಮ್ಮದು ಪಂಚಪೀಠದ ಪರಂಪರೆ ಎಂದು ಬಿಂಬಿಸಿಕೊಂಡರು.
ಮೂಲತಃ ಆಂಧ್ರಪ್ರದೇಶದ ಆರಾಧ್ಯ ಶೈವರಾದ ಈ ಚತುರಾಚಾರ್ಯರು ವಾಸ್ತವದಲ್ಲಿ ಶೈವ ಪಂಥದ ಆರಾಧಕರು. 12 ನೇ ಶತಮಾನದಲ್ಲಿ ಇವರು ವೀರವ್ರತಗಳನ್ನು ಹಿಡಿಯುತ್ತಿದ್ದರು. ಅಂದರೆ ವೀರಭದ್ರನ ಆರಾಧನೆಯಲ್ಲಿ ವ್ರತಾಚರಣೆ ನಡೆಸುವುದು ಇವರ ಪರಿಪಾಠವಾಗಿತ್ತು. ಹೀಗೆ ವ್ರತ ಹಿಡಿದ ಪುರವಂತರು ವೀರಗಾಸೆ ಹಾಕಿ ವೀರಭದ್ರನ ವರ್ಣನೆ ಮಾಡುತ್ತಾ ಕುಣಿಯುತ್ತಿದ್ದರೆ ಇವರ ಆರ್ಭಟ, ನೋಡುಗರಿಗೆ ಅತ್ಯಂತ ಆಕರ್ಷಕವಾಗಿರುತ್ತಿದ್ದವು. ಈ ವೇಶಕ್ಕೆ ಲಿಂಗಾಯತರು ಮಾರು ಹೋದರು. ಒಡಲೊಳಗೆ ಪುರೋಹಿತಶಾಹಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಬಸವಣ್ಣನ ಮೇಲೆ ಕೆಂಡ ಕಾರುತ್ತಿದ್ದ ಶೈವಾರಾಧಕರು ನಿಧಾನವಾಗಿ ಇಂತಹ ವೀರವ್ರತ ಹಿಡಿಯುವವರೆಲ್ಲಾ ವೀರಶೈವರೆಂದು ಕರೆದುಕೊಳ್ಳಲಾರಂಭಿಸಿದರು.
ಮೆತ್ತಗೇ ಸಂಪ್ರದಾಯ, ಆಚರಣೆಗಳ ನೆಪದಲ್ಲಿ ಲಿಂಗಾಯತರಿಗೆ ತಾವೇ ಗುರುಗಳೆಂದು ಬಿಂಬಿಸಿಕೊಂಡು ಅವರ ಮೇಲೆ ಸವಾರಿ ಶುರು ಮಾಡಿದರು. ಹಾಗೆ ನೋಡಿದರೆ ಲಿಂಗಾಯತರ ಗುರು ಪರಂಪರೆ ಹೊಂದಿದ ಮಠಗಳೆಂದರೆ ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಗದಗಿನ ತೋಂಟದಾರ್ಯ ಮಠಗಳೇ ಮುಖ್ಯವಾದವು. ಇವು ಬಸವ ಧರ್ಮದ ಗುರು-ವಿರಕ್ತ ಪರಂಪರೆಯ ತಾಣಗಳು.
15 ನೇ ಶತಮಾನವನ್ನು ಲಿಂಗಾಯತರ ಪುನರುಜ್ಜೀವನ ಕಾಲ ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಚತುರಾಚಾರ್ಯರು ಅತ್ಯಂತ ಪ್ರವರ್ಧಮಾನಕ್ಕೆ ಬರುವ ಮೂಲಕ ತಮ್ಮನ್ನು ತಾವೇ ಜಗದ್ಗುರು ಎಂದು ಕರೆದುಕೊಂಡ ಗಳಿಗೆಯಿದು (ನಿಜವಾಗಿಯೂ ಇವರ್‍ಯಾರು ಜಗದ್ಗುರಳಾಗಿರಲೇ ಇಲ್ಲ. ಜಗದಾಚಾರ್ಯರು ಎಂದೇ ಇವರನ್ನು ಸಂಬೋಧಿಸುವುದು ಸೂಕ್ತ). ಕುರುಬರ ಸಮುದಾಯದ ರೇವಣನನ್ನು ಆಪೋಶನಗೈದದ್ದು, 12 ನೇ ಶತಮಾನದ ಏಕಾಂತ ರಾಮಯ್ಯ ಎಂಬ ತಳಸ್ಥರದ ಶರಣ ಏಕೋರಾಮರಾಧ್ಯ ಆಗಿದ್ದು ಇದೇ ಸಂದರ್ಭದಲ್ಲಿ. ನಿಜವಾಗಿಯೂ ಲಿಂಗವಂತರು ವೀರಶೈವೀಕರಣಗೊಳ್ಳುತ್ತಿದ್ದ ಸಂಕಟದ ಕಾಲವಿದು.
ಈ ಸಮಯದಲ್ಲಿ ಲಿಂಗಾಯತ ಧರ್ಮವನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟಗಳು ನಡೆದವು. ಯಾವಾಗ ಜಗದಾಚಾರ್ಯರು ಪಂಚಪೀಠಾಧೀಶ್ವರರಾದರೋ ಆಗ ಇವರಿಗೊಂದು ಧರ್ಮ ಗ್ರಂಥ ಬೇಕಿತ್ತು. ಅದಕ್ಕೆಂದೇ ಶರಣರು ಸೂಚಿಸಿದ್ದ ಷಟ್‌ಸ್ಥಳಗಳ ಮಾದರಿಯಲ್ಲಿ 101 ಸ್ಥಲಗಳ ಬೊಂತೆಯಾದ ಸಂಸ್ಕೃತ ಭೂಯಿಷ್ಠ “ಸಿದ್ಧಾಂತ ಶಿಖಾಮಣಿ” ಯನ್ನು ಸೃಷ್ಟಿಸಿಕೊಂಡರು. ವೇದ, ಆಗಮ, ಶಾಸ್ತ್ರಗಳಲ್ಲಿನ ಸಾಕಷ್ಟು ಅಂಶಗಳನ್ನು ಹೆಕ್ಕಿ ತೆಗೆದು ತಮ್ಮ ಮೂಗಿನ ನೇರಕ್ಕೆ ಇದರಲ್ಲಿ ತುರುಕಿದರು. ಇಲ್ಲದ ಸಂಗತಿಗಳನ್ನೆಲ್ಲಾ ಈ ಸಿದ್ಧಾಂತ ಶಿಖಾಮಣಿಯ ಹೆಸರಿನಲ್ಲಿ ಪ್ರಚುರಪಡಿಸಿಕೊಂಡು ಹೊರಟರು.
12 ನೇ ಶತಮಾನದ ಯಾವುದೇ ಶರಣ ಚಳವಳಿ ಸಂದರ್ಭದಲ್ಲಿ, ಎಲ್ಲಿಯೂ ಕೂಡಾ ಈ ಚತುರಾಚಾರ್ಯರ ಬಗೆಗಾಗಲೀ ಅಥವಾ ಪಂಚಪೀಠಾಧಿಪತಿಗಳ ಬಗೆಗಾಗಲಿ ಲವಶೇಷದಷ್ಟೂ ಇತಿಹಾಸ ದೊರೆಯುವುದಿಲ್ಲ. ಇವರೆಲ್ಲಾ 14 ಮತ್ತು 15 ನೇ ಶತಮಾನದ ಸಂದರ್ಭದಲ್ಲೇ ಅಸ್ತಿತ್ವ ರೂಪಿಸಿಕೊಳ್ಳುತ್ತಾ ಸಾಗಿ ಬಂದವರು ಎಂಬುದು ನಿರ್ವಿವಾದ. ಮೊದಲು ಈ ಚತುರಾಚಾರ್ಯರೆಲ್ಲಾ ತಮ್ಮನ್ನು ತಾವು “ಭಾರದ್ವಾಜ ಗೋತ್ರ” ದವರೆಂದು ಕರೆದುಕೊಳ್ಳುತ್ತಿದ್ದರು. ತಳಸ್ಥರದ ಭಕ್ತ ಸಮುದಾಯ ಜಾಸ್ತಿಯಾಗತೊಡಗಿದಂತೆ ಕ್ರಮೇಣ ಶಿವಗೋತ್ರಕ್ಕೆ ಗಂಟು ಬಿದ್ದರು. ತಮ್ಮದು ನಂದಿ, ವೀರಭದ್ರ ಹಾಗೂ ವೃಷಭ ಗೋತ್ರಗಳೆಂದು ಹೇಳಿಕೊಳ್ಳುತ್ತಾ ಪುರೋಹಿತ ಶಾಹಿ ವ್ಯವಸ್ಥೆಯನ್ನು ಈ ಜನರ ಮೇಲೆ ತಣ್ಣಗೆ ಬಲಗೊಳಿಸಿದರು.
ಈ ಪಂಚಪೀಠಾಧೀಶ್ವರರು ಎಂದು ಕೂಡಾ ಬಸವ ತತ್ವಗಳನ್ನು ಪ್ರತಿಪಾದಿಸಿದವರೇ ಅಲ್ಲ. 19 ನೇ ಶತಮಾನದ ಅಂತ್ಯ ಹಾಗೂ 20 ನೇ ಶತಮಾನದ ಆದಿ ಭಾಗದಲ್ಲಿನ ಇತಿಹಾಸವನ್ನು ಸುಮ್ಮನೇ ಗಮನಿಸಿದಾಗ ಎಲ್ಲೆಡೆಯೂ ಲಿಂಗಾಯತ ಪದದ ಬಳಕೆಯೇ ಹೆಚ್ಚು ಪ್ರಚಲಿತವಿದ್ದುದು ನಮಗೆ ಸ್ಪಷ್ಟವಾಗಿ ಕಂಡು ಬರುತ್ತದೆ. ಕೇವಲ ಸಿಂಹಾಸನ, ಛತ್ರಿ, ಚಾಮರ, ಪ್ರಸಾದ, ದಕ್ಷಿಣೆ, ಸೇವೆ ಎಂದು ನೂರೆಂಟು ಶೋಷಣೆಗಳ ಮುಖಾಂತರ ಒಂದು ಇಡೀ ಮಾನವ ಸಮುದಾಯವನ್ನು ಯುಕ್ತಿಯಿಂದ ಆಳುತ್ತಾ ಬಂದ ಚತುರ ವರ್ಗ ಇದು. ಗುಡಿ ಸಂಸ್ಕೃತಿ ಧಿಕ್ಕರಿಸಿದ ಬಸವಣ್ಣನವರಿಗೆ ಸವಾಲಾಗಿ ಕಲ್ಲಿನಲ್ಲಿ ರೇಣುಕನನ್ನು ಸೃಷ್ಟಿಸಿದ ಜನರಿವರು.
20 ನೇ ಶತಮಾನದ ಆರಂಭದಲ್ಲಿ ಸೊಲ್ಲಾಪುರದ ದಾನಿ ವಾರದ ಮಲ್ಲಪ್ಪನವರಿಗೆ ಗಂಟು ಬಿದ್ದ ಈ ಚತುರಾಚಾರ್ಯರು ಸ್ಥಾಪಿಸಿದ್ದ “ಲಿಂಗೀ ಬ್ರಾಹ್ಮಣ ಗ್ರಂಥಮಾಲೆ” ಯಲ್ಲಿ ಇವರು ಬ್ರಾಹ್ಮಣ ಸಮುದಾಯದವರೆಂಬುದು ಸ್ಪಷ್ಟವಾಗಿ ನಿರೂಪಿತವೂ ಆಗಿದೆ. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ವೀರಶೈವ ಎಂಬ ಪದ ಯಾವತ್ತೂ ಬಳಕೆಯಲ್ಲಿ ಇರಲೇ ಇಲ್ಲ. 20 ನೇ ಶತಮಾನದ ಆದಿ ಭಾಗದಿಂದ ಈ ಪದವನ್ನು ಪ್ರಚುರ ಪಡಿಸುವ ಯತ್ನಕ್ಕೆ ಈ ಪಂಚಪೀಠಾಧಿಪತಿ (ಪಂಪಿ) ಗಳು ಮುಂದಾದರು. ಒಂದು ವೇಳೆ ವೀರಶೈವ ಪದ ಬಳಕೆಯೇ ನಿಜವಾಗಿದ್ದಲ್ಲಿ 1867 ರಲ್ಲಿ ಡೆಪ್ಯೂಟಿ ಚನ್ನಬಸಪ್ಪನವರು ಸ್ಥಾಪಿಸಿದ್ದ ಉಚಿತ ವಿದ್ಯಾರ್ಥಿ ನಿಲಯಕ್ಕೆ ಲಿಂಗಾಯತ ಫ್ರೀ ಬೋರ್ಡಿಂಗ್‌ಎಂದು ಹೆಸರಿಡುತ್ತಿರಲಿಲ್ಲ. 1885 ರಲ್ಲಿ ಸ್ಥಾಪಿಸಲಾದ ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಲಿಂಗಾಯತ ಎಂಬ ಪದ ಹೊಂದುತ್ತಿರಲಿಲ್ಲ. 1916 ರಲ್ಲಿ ಸ್ಥಾಪಿತವಾದ ಬೆಳಗಾವಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ ಕೂಡಾ ಲಿಂಗಾಯತ ಪದ ಹೊಂದಬೇಕಾಗಿರಲಿಲ್ಲ. ಅಷ್ಟೇಕೆ ಬೆಂಗಳೂರಿನ ಟೌನ್‌ಹಾಲ್ ಕಟ್ಟಿಸಿದ ಪುಟ್ಟಣ್ಣಶೆಟ್ಟರೂ ಕೂಡಾ ಲಿಂಗಾಯತ ಹೆಸರಿನಲ್ಲಿಯೇ ವಿದ್ಯಾ ಸಂಸ್ಥೆ ಸ್ಥಾಪಿಸಿದವರು.
ಹಿಂದೂತ್ವಕ್ಕೆ ಪ್ರತಿದ್ವಂದ್ವಿಯಾಗಿ ಹನ್ನೆರಡನೇ ಶತಮಾನದಲ್ಲಿ ಉದಿಸಿ ಬಂದ ಲಿಂಗಾಯತ ಧರ್ಮ ಎಂಬ ತಮ್ಮ ಪುಸ್ತಕದಲ್ಲಿ | ನೀಲಗಂಗಯ್ಯ ಪುಜಾರ್ | 01.101997
ಅನಾದಿ ಕಾಲದಿಂದ ಲಿಂಗಾಯತ ಧರ್ಮವನ್ನು ಹೊಲಬುಗೆಡಿಸಿದ ಕೀರ್ತಿ ಈ ಪಂಚಪೀಠಾಧೀಶ್ವರರಿಗೆ ಸಲ್ಲಬೇಕು. ಹಿರೇಮಠರು, ಆರಾಧ್ಯರು, ಐಯ್ಯನೋರು ಎಂಬ ಶಿರೋನಾಮೆಗಳಲ್ಲಿ ತಾವು ವೀರಮಾಹೇಶ್ವರರೆಂದು ಪುರೋಹಿತ ವ್ಯವಸ್ಥೆಯನ್ನು ಪೋಷಿಸುತ್ತಲೇ ಮತ್ತೊಂದೆಡೆ ತಾವೆಲ್ಲಾ ಬೇಡ ಜಂಗಮ, ಬುಡುಗ ಜಂಗಮರು ಎಂದು ಸುಳ್ಳು ಹೇಳಿ ಸಾಂವಿಧಾನಿಕ ಮೀಸಲಾತಿಗಳನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೊಗಳೆ ಬಿಡುತ್ತಾ ಇಂತಿಷ್ಟೇ ಎತ್ತರದ ಸೀಟು ಬೇಕು, ಅಡ್ಡಪಲ್ಲಕ್ಕಿಯೇ ಆಗಬೇಕು ಎಂದು ಸ್ವಯಂಘೋಷಿತ ದೇವಮಾನವರಂತೆ ಪೋಸು ಕೊಡುತ್ತಿದ್ದಾರೆ. ಇಂತಹ ಸುಳ್ಳು, ತಟವಟ, ಶೋಷಣೆಗಳೆಲ್ಲಾ ಜನರಿಗೆ ಅರ್ಥವಾಗುವುದು ಯಾವಾಗ?
ಆಗಮಿಕ ಶೈವ ಬ್ರಾಹ್ಮಣರು ಹದಿನೈದನೇ ಶತಮಾನದಿಂದೀಚೆಗೆ ಕರ್ನಾಟಕಕ್ಕೆ ಬಂದು ಲಿಂಗಧಾರಿಗಳಾದರು ಎನ್ನಲು ಅನೇಕ ಐತಿಹಾಸಿಕ ಸಾಕ್ಷ್ಯಗಳು ಲಭ್ಯ ಇವೆ. ತೋಂಟದ ಸಿದ್ಧಲಿಂಗ ಯತಿಗಳು ತಮ್ಮ ಒಂದು ವಚನದಲ್ಲಿ “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನ ಉದಯವಾಗಿದ್ದಡೆ ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ” ಎಂದು ಪ್ರಶ್ನಿಸುತ್ತಾರೆ. ವಿಚಿತ್ರವೆಂದರೆ ಈ ಶ್ರೌತಶೈವರಿಗೆ ಸಿದ್ದಾಂತ ಶಿಖಾಮಣಿಯು ಪ್ರಮಾಣ ಗ್ರಂಥವಾಗಿರುವುದು. ಶ್ರೌತಶೈವರ ಈ ಆಧಾರ ಗ್ರಂಥವನ್ನು ಲಿಂಗಾಯತ ಧರ್ಮದ ಜೀವನ ತಂದು ತೇಲಿಬಿಟ್ಟ ಕಾಲವನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ.
ಮದ್ರಾಸ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಉನ್ನತ ಅಧ್ಯಯನ ಪೀಠದ ಡಾ. ವ್ಹಿ. ರತ್ನ ಸಭಾಪತಿಯವರು ಕರ್ನಾಟಕ ವಿಶ್ವವಿದ್ಯಾಯಲದ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಮ. ನಿ. ಮ್ರತ್ಯುಂಜಯ ಸ್ಮಾರಕ ಊಪನ್ಯಾಸ ಮಾಲೆಯ 1980 ನೇ ವರ್ಷದ ಉಪನ್ಯಾಸಕರಾಗಿ “Perspective in Veerashaivism” ಎಂಬ ವಿಷಯದ ಬಗ್ಗೆ ಮೂರು ಉಪನ್ಯಾಸಗಳನ್ನು ನೀಡಿದ್ದು ಮೊದಲನೇ ಉಪನ್ಯಾಸದಲ್ಲಿಯೇ ಅವರು In conclusion, the term Veerashaivism is coined by the shaivites after the period of Basava ಎಂದು ಹೇಳಿದ್ದಾರೆ.
ಅದೇ ಉಪನ್ಯಾಸದಲ್ಲಿ ಅವರು ಡಾ. ಎಚ್ ಪಿ ಮಲ್ಲದೇವರ Essentials of Veerashaisism ಗ್ರಂಥದಲ್ಲಿನ ವಾಕ್ಯ incontravertible evidence is necessary to prove that panchacharyas were the originators of Veerashaisism ಎಂಬುದನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ ಅವರು ಬಸವಣ್ಣನವರ ಬಗ್ಗೆ However, there is an ample evidence to prove that Basava in the 12th century, gave it ಎನ್ನುತ್ತˌ ಕೊನೆಗೆ Lingayat is founded by the heroic attempts of Basava ಎಂದು ನಿರ್ಧಾರಯುತವಾಗಿ ಉಲ್ಲೇಖಿಸಿದ್ದನ್ನು ಪ್ರಾಸ್ಥಾಪಿಸಿದ್ದಾರೆ.
ಪಂಚ ಪೀಠ – ಕಟ್ಟು ಕಥೆ ತುಂಬಿದ ಅಸಂಗತ ವಾದ | ಸಿದ್ಧಲಿಂಗ ದೇಸಾಯಿ, ಧಾರವಾಡ | ಪ್ರಜಾವಾಣಿ | ಸಂಗತ | 04.05.2010
ಸ್ಥಾವರಲಿಂಗ ಸ್ಥಾಪಿಸಿದ ಕಥೆಯನ್ನು ಹೆಣೆಯುತ್ತಾರೆ. ಪಂಚಾಚಾರ್ಯರನ್ನು ವೈಭವೀಕರಿಸಿ ಕಥೆ ಹೆಣೆಯುವುದೇ ಡಾ. ಸವದತ್ತಿಮಠರಂಥವರ ಕಾಯಕವಾಗಿದೆ. “ಭಾರತಾದ್ಯಂತ ವೀರಶೈವ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿತ್ತು” ಪಂಚಾಚಾರ್ಯರ ವಿಚಾರಕ್ಕೆ ಚಂದಾದಾರರಾಗಿರುವ ಡಾ. ಸಂಗಮೇಶ ಸವದತ್ತಿಮಠರು ಏಪ್ರಿಲ್ 27 ರಂದು ಇದೇ ಪತ್ರಿಕೆಯ “ಸಂಗತ” ಎನ್ನುವ ಅಂಕಣದಲ್ಲಿ “ಪಂಚಪೀಠಗಳು ಮತ್ತು ನೈಜ ಸಂಗತಿಗಳು” ಎನ್ನುವ ಒಂದು ಅಸಂಗತ ಲೇಖನವನ್ನು ಬರೆದಿದ್ದಾರೆ. ಇದಕ್ಕೆ ಪ್ರೇರಣೆ: ಈಗ ಕೆಲವು ದಿನಗಳ ಹಿಂದೆ. ಬಿ.ಎಸ್. ಷಣ್ಮುಖಪ್ಪ ಅವರು ಇದೇ ಅಂಕಣದಲ್ಲಿ ಬರೆದ “ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು?” ಎಂಬ ಲೇಖನ. ಅದರಲ್ಲಿ ಬಿ.ಎಸ್. ಷಣ್ಮುಖಪ್ಪ ಅವರು “ಲಿಂಗಾಯತ ಧರ್ಮವನ್ನು ಹೈಜಾಕ್ ಮಾಡುತ್ತಲೇ ಬಂದ” ಪಂಚಪೀಠಾಧೀಶರ ಹೂರಣವನ್ನು ಬಯಲಿಗೆಳೆದಿದ್ದಾರಲ್ಲದೆ, ಮೊದಲು ಕೇವಲ ಚತುರಾಚಾರ್ಯರಾಗಿದ್ದ ಇವರು ಇತ್ತೀಚೆಗೆ ಪಂಚಾಚಾರ್ಯರಾಗಿ ಲಿಂಗಾಯತ ಧರ್ಮವನ್ನು ಪ್ರವೇಶಿಸಿ ಅದೆಂಥ ಅನಾಹುತ ಮಾಡುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದಕ್ಕೆ ಡಾ. ಸಂಗಮೇಶ ಸವದತ್ತಿಮಠರು ಮನನೊಂದು “ಪಂಚಪೀಠಗಳು ಮತ್ತು ನೈಜ ಸಂಗತಿಗಳು” ಎಂಬ ಲೇಖನ ಬರೆದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈ ನನ್ನ ಲೇಖನ.
“ಹುಸಿಯ ನುಡಿಯಲು ಬೇಡ ಎಂಬುದು ಬಸವಣ್ಣನವರ ಆದೇಶ” ಎಂದು ಆರಂಭ ಮಾಡುವ ಸವದತ್ತಿಮಠರು ಇಡೀ ಲೇಖನದ ತುಂಬ ಹುಸಿಯನ್ನೇ ತುಂಬಿದ್ದಾರೆ. ಪಂಚಾಚಾರ್ಯರ ಬಗೆಗಿದ್ದ ಆಕರಗಳೆಂದರೆ ಪುರಾಣಗಳು ಹಾಗೂ ಅವರನ್ನು ಪ್ರತಿಪಾದಿಸುವವರ ಭ್ರಮೆಗಳು. ಅವಕ್ಕೆ ಬುದ್ಧಿ ಇದ್ದವರು ಪಕ್ಕಾಗಬೇಕು ಹಾಗೂ ಅವುಗಳನ್ನು ಒಪ್ಪಿ ಮನ್ನಿಸಬೇಕು ಎಂದು ಅವರು ಬಯಸುವುದು ವಿಚಿತ್ರ. ಪಂಚಾಚಾರ್ಯರ ಲಿಂಗೋದ್ಭವ ಕಥೆಯನ್ನು ಯಾವ ವ್ಯಕ್ತಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸದ ಪೂರ್ವಕಾಲದಿಂದ ಬಿಜ್ಜಳನವರೆಗೆ ಅವರ ಅಸ್ತಿತ್ವದ ಕಥೆಯನ್ನು ಹೇಳುತ್ತಾರೆ. ಇಷ್ಟಲಿಂಗದ ಬೋಧಕರಾದ ಈ ಪಂಚಾಚಾರ್ಯರು ಸ್ಥಾವರಲಿಂಗದಿಂದ ಜನಿಸಿದರೆಂದು ಬರೆಯುತ್ತಾರೆ.
ಸ್ಥಾವರಲಿಂಗ ಸ್ಥಾಪಿಸಿದ ಕಥೆಯನ್ನು ಹೆಣೆಯುತ್ತಾರೆ. ಪಂಚಾಚಾರ್ಯರನ್ನು ವೈಭವೀಕರಿಸಿ ಕಥೆ ಹೆಣೆಯುವುದೇ ಡಾ. ಸವದತ್ತಿಮಠರಂಥವರ ಕಾಯಕವಾಗಿದೆ. “ಭಾರತಾದ್ಯಂತ ವೀರಶೈವ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿತ್ತು” ಎಂದು ಬರೆಯುವ ಸವದತ್ತಿಮಠರು ಜಗತ್ತು ಸೃಷ್ಟಿಯಾಗುವ ಮೊದಲೇ ಈ ವೀರಶೈವ ಧರ್ಮ ಅಸ್ತಿತ್ವದಲ್ಲಿತ್ತೆಂದು ಕಟ್ಟುಕಥೆ ಹೇಳುತ್ತಾರೆ. ಹಾಗಾದರೆ ವೀರಶೈವ ಧರ್ಮವು ಇಷ್ಟೊತ್ತಿಗಾಗಲೇ ವಿಶ್ವವನ್ನೇ ವ್ಯಾಪಿಸಬೇಕಾಗಿತ್ತು. ಆದರೆ ಇವರು ಪ್ರತಿಪಾದಿಸುವ ವೀರಶೈವ ಧರ್ಮ ಕೇವಲ ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ಗಡಿ ಭಾಗದ ಇತರ ರಾಜ್ಯಗಳಲ್ಲಷ್ಟೇ ಏಕಿದೆ?
ವಾಸ್ತವವಾಗಿ ಬಸವಾದಿ ಶರಣರು ಬೋಧಿಸಿದ ಧರ್ಮವೆಂದರೆ “ಲಿಂಗಾಯತ ಧರ್ಮ” ಆದರೆ ಆರಾಧ್ಯರ ಧಾರ್ಮಿಕ ಸಂಪ್ರದಾಯದ ಈ ಪಂಚಪೀಠಗಳವರು ಆಗ ಅಸ್ತಿತ್ವದಲ್ಲಿದ್ದ ವೀರವೈಷ್ಣವರ ವಿರುದ್ಧ ಈ ವೀರಶೈವ ಧರ್ಮವನ್ನು ಹುಟ್ಟು ಹಾಕಿ “ವೀರಶೈವ” ವನ್ನು ಪ್ರಚಲಿತಕ್ಕೆ ತಂದರೇ ವಿನಃ ಅದು ಬಸವಾದಿ ಶರಣರು ಬೋಧಿಸಿದ ಲಿಂಗಾಯತ ಧರ್ಮವಲ್ಲ. ಅದು ಹೇಗೆ? ಯಾವಾಗ ಈ “ವೀರಶೈವ” ಶಬ್ದ ಪ್ರಚಲಿತಕ್ಕೆ ಬಂದಿತೆಂಬ ಸ್ವಾರಸ್ಯಕರ ಸಂಗತಿ ಮೈಸೂರು ವಿಶ್ವವಿದ್ಯಾಲಯ 1935 ರಲ್ಲಿ ಪ್ರಕಟಿಸಿದ “ದಿ ಮೈಸೂರ್ ಟ್ರೈಬ್ಸ್ ಅಂಡ್ ಕಾಸ್ಟ್ಸ್” ಎಂಬ ಗ್ರಂಥದ ಮೊದಲ ಸಂಪುಟದ 153 ಹಾಗೂ 154 ನೇ ಪುಟಗಳಲ್ಲಿ ಸ್ಪಷ್ಟವಾಗಿ ನಮೋದ ಆಗಿದೆ.
ಬಹುಕಾಲದಿಂದ ಪ್ರಚಲಿತವಿದ್ದ ತಮ್ಮ ಜಾತಿಗಳ ಹೆಸರಿನ ಬದಲಾಗಿ ಬೇರೊಂದು ಹೊಸ ಹೆಸರಿನಿಂದ ಸಂಭೋದಿಸಬೇಕೆನ್ನುವ ಬೇಡಿಕೆ ಹಲವಾರು ಸಮಾಜಗಳ ಇತ್ತೀಚಿನ ಪ್ರವೃತ್ತಿಯಾಗಿದೆ. ಇದಕ್ಕೆ ಬಹುಶಃ ಆ ಸಮಾಜದ ಸಾಂಪತ್ತಿಕ ಸ್ಥಿತಿಗತಿಯ ಸುಧಾರಣೆ ಹಾಗೂ ಶ್ರೇಷ್ಠತೆಯ ಕಲ್ಪನೆ ಮತ್ತು ಇನ್ನುಳಿದ ಹಲವಾರು ಸಂಗತಿಗಳು ಈ ರೀತಿಯ ಬೇಡಿಕೆಗೆ ಕಾರಣಗಳಾಗಿರಬಹುದು. ಉದಾಹರಣೆಗೆ: ವೈಷ್ಣವ ದೇವಾಲಯಗಳಲ್ಲಿ ಸೇವೆ ಮಾಡುವ ಬ್ರಾಹ್ಮಣ ಸನಾತನಿಗಳು ತಮ್ಮನ್ನು ವೆಂಕಟಪುರ ಬ್ರಾಹ್ಮಣರು, ವಿಷ್ಣು ಬ್ರಾಹ್ಮಣರು ಅಥವಾ ಪ್ರಪನ್ನ ವೈಷ್ಣವ ಬ್ರಾಹ್ಮಣರು ಎಂದು ಕರೆಯಬೇಕೆಂದು ಅಪೇಕ್ಷಿಸುತ್ತಾರೆ. ಅದರಂತೆ ನಾಯಿಂದರು (ಕ್ಷೌರಿಕರು) ತಮ್ಮನ್ನು ನಾಯಿಂದ ಬ್ರಾಹ್ಮಣರು ಎಂದು ಸಂಭೋದಿಸಬೇಕೆಂದು ಅಪೇಕ್ಷಿಸುತ್ತಾರೆ. ಅದರಂತೆ ತಮ್ಮ ಸಮಾಜವನ್ನು ನೇಗಿಯವರು ಎಂದು ಕರೆಯದೆ ದೇವಾಂಗ ಬ್ರಾಹ್ಮಣರೆಂದು ದಾಖಲಿಸಬೇಕೆಂದು ದೇವಾಂಗ ಧರ್ಮ ಪ್ರಕಾಶಿಕಾ ಸಂಸ್ಥೆ ಬೇಡಿಕೆಯನ್ನಿಟ್ಟಿದೆ. ಪಾಂಚಾಳರು ತಮ್ಮನ್ನು ವಿಶ್ವಕರ್ಮ ಬ್ರಾಹ್ಮಣರೆಂದು ಕರೆಯಬೇಕೆಂದು ಬಹಳ ಗಟ್ಟಿಯಾಗಿ ಹೋರಾಡುತ್ತಿದ್ದಾರೆ. ನಾಗಮಂಗಲ ತಾಲ್ಲೂಕಿನಲ್ಲಿರುವ ಬಹುಕಾಲದಿಂದ ತಿರುಕುಲದವರು ಎಂದು ಕರೆಯಲ್ಪಡುತ್ತಿದ್ದ ಸಮಾಜದವರು ತಮ್ಮನ್ನು ಕಣಿಕನ್ನಾ ಎಂದು ಕರೆಯಬೇಕೆಂದು ಬಯಸುತ್ತಾರೆ. ಕೃಷ್ಣರಾಜಪೇಟೆಯ ಹಾಗೂ ಇನ್ನಿತೆರೆಡೆಯ ಲಿಂಗಾಯತರು ತಮ್ಮನ್ನೂ ವೀರಶೈವರೆಂದು ಕರೆಯಬೇಕೆಂದು ಬಯಸುತ್ತಾರೆ. ಕುರುಬ ಸಮಾಜದ ಒಬ್ಬರ ಕುರುಬರನ್ನು ಇನ್ನುಮೇಲಿಂದ ಆರ್ಯಕ್ಷತ್ರಿಯರೆಂದು ಕರೆಯಬೇಕೆಂದು ಸೂಚಿಸುತ್ತಾರೆ.
ಹೀಗೆ ಲಿಂಗಾಯತರು ತಮ್ಮ ಕೀಳರಿಮೆಯಿಂದ ಹೊರಬರಲು ಹೇರಿಕೊಂಡದ್ದೇ “ವೀರಶೈವ”. ವೀರಶೈವ ಮತ್ತು ಲಿಂಗಾಯತ ಶಬ್ದಗಳ ಬಗ್ಗೆ ಚರ್ಚೆ ನಡೆದು, ವೀರಶೈವ ಶಬ್ದ 12 ನೇ ಶತಮಾನದ ತರುವಾಯ ಬಳಕೆಯಲ್ಲಿ ಬಂದಿದೆ ಎಂಬ ವಾಸ್ತವವನ್ನು ನಾನೂ ಸೇರಿದಂತೆ ಡಾ. ಎಂ.ಎಂ. ಕಲಬುರ್ಗಿಯಾದಿಯಾಗಿ ಅನೇಕರು ಪ್ರತಿಪಾದಿಸಿ ಸತ್ಯವನ್ನು ಸ್ಥಾಪಿಸಲಾಗಿದೆ.
ಬರಿ ಜಾತಿ ಜಂಗಮರೇ ಪಂಚಾಚಾರ್ಯರ ಹಾಗೂ ವೀರಶೈವ ಪರ ವಕಾಲತ್ತು ವಹಿಸುತ್ತಲಿರುವುದು, ಇದನ್ನು ವಿರೋಧಿಸುತ್ತಿರುವವರಲ್ಲಿ ಸುಜ್ಞಾನಿ ಜಂಗಮರನ್ನೊಳಗೊಂಡು ಇತರ ಲಿಂಗಾಯತರಿರುವುದು ಏನನ್ನು ಸೂಚಿಸುತ್ತದೆ? ವೀರಶೈವವೂ ಒಂದು ಪ್ರಾಚೀನ ಧರ್ಮವಾದ್ದರಿಂದ ಅದರ ಬೇರುಗಳು ಸಂಸ್ಕೃತ ಕೃತಿಗಳಲ್ಲಿರುವದು ಸ್ಪಷ್ಟವಾಗಿದೆ ಎಂದು ಡಾ. ಸವದತ್ತಿಮಠರು ಬರೆಯುತ್ತಾರೆ. ವಚನಗಳೇ ಲಿಂಗಾಯತ ಧರ್ಮದ ಶಾಸ್ತ್ರ ಸಾಹಿತ್ಯವೆಂದು ನನ್ನ ಸ್ಪಷ್ಟವಾದ ಅಭಿಪ್ರಾಯವೆಂದು “ಹಿಸ್ಟರಿ ಅಂಡ್ ಫಿಲಾಸಫಿ ಆಫ್ ಲಿಂಗಾಯತ್ ರಿಲಿಜನ್” ಎಂಬ ಗ್ರಂಥದಲ್ಲಿ ಪ್ರೊ. ಎಂ.ಆರ್. ಸಾಖರೆಯವರು ತಿಳಿಸಿದ್ದಾರೆ. ಡಾ. ಸವದತ್ತಿಮಠರು ತಿಳಿಸಿರುವಂತೆ “ಶ್ರೀಕರಭಾಷ್ಯ” ಹಾಗೂ “ಸಿದ್ಧಾಂತ ಶಿಖಾಮಣಿ” ಗ್ರಂಥಗಳು ಸನಾತನವೂ ಅಲ್ಲ, ಪುರಾತನವೂ ಅಲ್ಲ. ಹದಿಮೂರು ಹದಿನಾಲ್ಕನೇ ಶತಮಾನದವುಗಳೆಂದು ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ ಒಂದು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.
12 ನೇ ಶತಮಾನದ ಶಿವಶರಣರು ತಮ್ಮ ವಚನಗಳಲ್ಲಿ ವೇದಾಗಮಗಳಲ್ಲಿರುವ ವೀರಶೈವ ತತ್ವಗಳನ್ನೇ ಹೇಳುತ್ತಿರುವುದಾಗಿ ಎಂದು ಡಾ. ಸವದತ್ತಿಮಠರು ಹೇಳುತ್ತಾರೆ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕದ ಬೆನ್ನ ಭಾರವನೆತ್ತುವೆ
ಆಗಮದ ಮೂಗ ಕೊಯ್ಯುವೆ
ನೋಡಯ್ಯಾ ಮಹಾದಾನಿ ಕೂಡಲ ಸಂಗಮದೇವಾ
ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ
ಹೀಗೆ ವೇದ, ಆಗಮ, ಉಪನಿಷತ್ತು, ತತ್ವಶಾಸ್ತ್ರಗಳನ್ನು ಟೀಕಿಸಿದ ಹಾಗೂ ಅಪಹಾಸ್ಯ ಮಾಡಿದ ಅನೇಕ ವಚನಗಳು ಶರಣರ ವಚನಗಳಲ್ಲಿ ಬರುತ್ತವೆ. ಇವೂ ವೇದಗಳಲ್ಲಿ ಬಂದಿದ್ದರೆ ಸಂತೋಷ!
ಅಂತೂ ‘ಸಂಗತ’ ಅಂಕಣದಲ್ಲಿ ತಮ್ಮ ಅಸಂಗತ ವಿಚಾರವನ್ನು ಹರಿಬಿಟ್ಟ ಡಾ. ಸವದತ್ತಿಮಠರು ತಮ್ಮ ನಿಜ ಬಣ್ಣವನ್ನು ಹೊರಗೆಡವಿದ್ದಾರೆ.
ಪೇಜಾವರ ಶ್ರೀಗಳಿಗೆ ಬಹಿರಂಗ ಪತ್ರ | ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು.

ಪೂಜ್ಯ ಪೇಚಾವರ ಶ್ರೀಗಳೇ ಮಂಗಳೂರಿನಲ್ಲಿ ನಡದ ವಚನ ಸಾಹಿತ್ಯ ಸಮ್ಮೇಳನದಲ್ಲಿ ನೀವು ಶಾಸ್ತ್ರಗಳಲ್ಲಿ ಇರುವುದನ್ನೇ ಕನ್ನಡದಲ್ಲಿ ಶರಣರು ಮನೆಮನೆಗೆ ತಲುಪಿಸಿದ್ದಾರೆ ಎಂದು ಅಪ್ಪಣೆ ಕೊಟ್ಟಿದ್ದೀರಿ
ನಿಮ್ಮ ಅಭಿಪ್ರಾಯದಂತೆ ನಮಗೆ ಕೆಲವು ವಚನಗಳ ಅರ್ಥ ಗೊತ್ತಾಗುತ್ತಿಲ್ಲ ಅಂತಹ ಕೆಲವು ವಚನಗಳ ಸಾಲುಗಳನ್ನು ಇಲ್ಲಿ ಉದಾಹರಿಸುತ್ತೇನೆ ತಾವುಗಳು ದಯಮಾಡಿ ಆ ವಚನಗಳ ಅರ್ಥ ಸಹಿತ ವಿವರಿಸಬೇಕಾಗಿ ಅತ್ಯಂತ ವಿನಮ್ರ ಪ್ರಾರ್ಥನೆ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು. ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.
ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. “ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?
ವೇದಂಗಳೆಂಬವು ಬ್ರಹ್ಮನ ಬೂತಾಟ. ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ. ಆಗಮಗಳೆಂಬವು ಋಷಿಯ ಮರುಳಾಟ. ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?) ಇಂತು ಇವನು ಅರಿದವರ ನೇತಿಗಳೆದು ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು !
ವೇದಂಗಳ ಹಿಂದೆ ಹರಿಯದಿರು ಹರಿಯದಿರು. ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು. ಪುರಾಣಂಗಳ ಹಿಂದೆ ಬಳಸದಿರು ಬಳಸದಿರು. ಆಗಮಂಗಳ ಹಿಂದೆ ತೊಳಲದಿರು ತೊಳಲದಿರು. ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.
ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ. ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ. ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ. ತರ್ಕವೆಂಬುದು ಮರ್ಕಟಾಟವಯ್ಯಾ. ಆಗಮವೆಂಬುದು ಯೋಗದ ಘೋರವಯ್ಯಾ. ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ. ಸ್ಮøತಿಯೆಂಬುದು ಪಾಪಪುಣ್ಯವಿಚಾರವಯ್ಯಾ. ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ.
ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ. ಸ್ಮøತಿಗಳು ಸಮುದ್ರದ ಪಾಲಾಗಲಿ; ಶ್ರುತಿಗಳು ವೈಕುಂಠವ ಸೇರಲಿ; ಪುರಾಣಗಳು ಅಗ್ನಿಯ ಸೇರಲಿ; ಆಗಮಗಳು ವಾಯುವ ಹೊಂದಲಿ. ಎಮ್ಮ ನುಡಿ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ.
ಇಂಥಹ ಸಾವಿರಾರು ವಚನಗಳು ಇವೆ ದಯವಿಟ್ಟು ಈಗ ಸದ್ಯಕ್ಕೆ ಈ ವಚನಗಳಿಗೆ ವಿವರಣೆ ನೀಡಿದರೆ ನಿಮ್ಮ ಹೇಳಿಕೆಯಾದ ಶರಣರು ಶಾಸ್ತ್ರಗಳನ್ನು ಸುಲಭವಾಗಿ ಕನ್ನಡದಲ್ಲಿ ಮನೆಮನೆಗೆ ತಲುಪಿಸಿದ್ದಾರೆ ಎಂಬ ಮಾತನ್ನು ಒಪ್ಪಬಹುದು
ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು
ಪ್ರದಾನ ಕಾರ್ಯದರ್ಶಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು
9945439171
ಸಂಗ್ರಹ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com