
ಎನಗೆ ಲಿಂಗವು ನೀವೆ ಬಸವಯ್ಯ,
ಎನಗೆ ಸಂಗವೂ ನೀವೆ ಬಸವಯ್ಯ,
ಎನಗೆ ಪ್ರಾಣವು ನೀವೆ ಬಸವಯ್ಯ,
ಎನಗೆ ಪ್ರಸಾದವು ನೀವೆ ಬಸವಯ್ಯ,
ಎನಗೆ ಪ್ರಭೆ ಮೂರ್ತಿಯೂ ನೀವೆ ಬಸವಯ್ಯ,
ಎನಗೆ ಸಂಗಯ್ಯನು ನೀವೆ ಬಸಯ್ಯ
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-876)
ಬಸವಣ್ಣನವರ ಜೀವನದ ಒಂದು ಪ್ರಮುಖ ಭಾಗ ಮತ್ತು ಅಂತರಂಗದ ಸಖಿ ನೀಲಮ್ಮ ತಾಯಿಯವರು. ವಿದ್ಯೆ, ವಿನಯ ಮತ್ತು ಸಂಸ್ಕೃತಿಗಳ ಸಂಗಮವಾದ ನೀಲಮ್ಮನವರು ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವರಿಗೆ ತಮ್ಮನ್ನ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಸಹ ಸರಳ ಜೀವನವನ್ನು ತಮ್ಮದಾಗಿಸಿಕೊಂಡ ನೀಲಮ್ಮ ತಾಯಿಯವರು ನಿತ್ಯವೂ ಮಹಾಮನೆ ನಡೆಯುವ ದಾಸೋಹದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದರು. ಹಾಗೆಯೇ ಅನುಭವ ಮಂಟಪದ ಕಾರ್ಯಗಳಲ್ಲಿಯೂ ಕೈಜೋಡಿಸುತ್ತಿದ್ದರು. ಹೀಗೆ ಮಹಾಮನೆಯ ಅನ್ನದಾಸೋಹ ಮತ್ತು ಅನುಭವ ಮಂಟಪದ ಜ್ಞಾನದಾಸೋಹದ ಕಾರ್ಯಗಳಲ್ಲಿ ತಮ್ಮ ತನು-ಮನಗಳನ್ನು ಅರ್ಪಿಸಿಕೊಂಡಿದ್ದರು. ಗುರು ಬಸವಣ್ಣನವರಂಥ ಮಹಾಮಹಿಮರ ಪತ್ನಿಯಾಗಿ ನೀಲಮ್ಮ ತಾಯಿಯವರು ಲಿಂಗಭಕ್ತಿ ಮತ್ತು ಪತಿಭಕ್ತಿಯ ಬಲದಿಂದ ಆದರ್ಶ ಪತ್ನಿ ಎನಿಸಿಕೊಂಡು ಮಹಾಮನೆಯ ಮಹಾತಾಯಿ ಎಂದು ಪ್ರಸಿದ್ಧಿ ಪಡೆದರು. ಮಹಾ ಮನೆಗೆ ಸತತವಾಗಿ ಬರುವ ಶರಣ ಸಮುದಾಯದ ಸೇವೆಯ ನಡುವೆಯೂ ತ್ರಿಕಾಲ ಲಿಂಗಾರ್ಚನೆಯನ್ನು ಚಾಚೂ ತಪ್ಪದೇ ಮಾಡುತ್ತಾ ಲಿಂಗಾಂಗ ಯೋಗಿಯಾಗಿ ಅಪ್ರತಿಮ ಸಿದ್ಧಿಯನ್ನು ಪಡೆದರು. ಜೊತೆಗೆ ಅನುಭವ ಮಂಟಪಕ್ಕೆ ಬರುವ ಅಸಂಖ್ಯಾತ ಸಾಧಕರಿಗೆ ಮಹಾತಾಯಿ ಆಗಿದ್ದರು.
ಬಾಲ್ಯ:
ನೀಲಾಂಬಿಕೆ ತಾಯಿಯವರ ಕಾಲಘಟ್ಟ ಸುಮಾರು ಕ್ರಿ. ಶ. 1160. ಬಿಜ್ಜಳ ಅರಸನ ಮಂತ್ರಿ ಮತ್ತು ಡಣ್ಣಾಯಕರಾದ ಸಿದ್ದರಸರ ಮಗಳು. ಬಲದೇವರಸರು ಮತ್ತು ಸಿದ್ಧರಸರು ಬಸವಣ್ಣನವರ ತಾಯಿ ಮಾದಲಾಂಬಿಕೆಯ ಸಹೋದರರು. ತಂದೆ ಸಿದ್ದರಸರ ಮರಣದ ನಂತರ ನೀಲಮ್ಮನವರನ್ನು ಬಿಜ್ಜಳ ತನ್ನ ಸಹೋದರಿಯಾಗಿ ಸ್ವೀಕರಿಸಿ ಸಾಕಿದ್ದಾರೆ ಅಂತ ಉಲ್ಲೇಖಗಳು ಬರುತ್ತವೆ. ನೀಲಿ ಬಣ್ಣದ ನೇತ್ರಗಳಿದ್ದುದರಿಂದ ನೀಲಲೋಚನೆ ಅಥವಾ ನೀಲಾಂಬಿಕೆ ಅಂತ ಕರೆಯಲಾಗಿದೆ. ನೀಲಾಂಬಿಕೆಯವರ ಜೀವನದ ವಿವರಗಳು ಸಿದ್ಧನಂಜೇಶನ ಗುರುರಾಜ ಚಾರಿತ್ರ್ಯ, ಸಿಂಗರಾಜನ ಸಿಂಗಿರಾಜ ಪುರಾಣದಲ್ಲಿ ನೋಡಬಹುದು. ರಾಜಕೀಯ ಮನೆತನದಲ್ಲಿ ಬೆಳೆದಿದ್ದರಿಂದ ಸಹಜವಾಗಿ ಧೈರ್ಯ ಸ್ಥೈರ್ಯಗಳು ಬೆಳೆದು ಬಂದಿದ್ದವು.
ವ್ಯಕ್ತಿತ್ವ:
ಮಡದಿ ಎನಲಾಗದು ಬಸವಂಗೆ ಎನ್ನನು,
ಪುರುಷನೆನಲಾಗದು ಬಸವನ ಎನಗೆ,
ಉಭಯದ ಕುಳವಹರಿದು ಬಸವಂಗೆ ಶಿಶುವಾದೆನು,
ಬಸವನೆನ್ನ ಶಿಶುವಾದನು.
ಪ್ರಮಥರು, ಪುರಾತರು ಸಾಕ್ಷಿಯಾಗಿ
ಸಂಗಯ್ಯ ನಿಕ್ಕಿದ ದಿಬ್ಯವ ಮೀರದೆ
ಬಸವನೊಳಗಾನಡಗಿದೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-1023)
ನೀಲಾಂಬಿಕೆಯವರ ಈ ವಚನವನ್ನು ಗಮನಿಸಿದಾಗ, ಅವರು ತುಂಬಾ ವಿಶೇಷವಾದ ವ್ಯಕ್ತಿತ್ವದ ವಚನಕಾರ್ತಿಯಾಗಿದ್ದರೆಂದು ತಿಳಿದು ಬರುತ್ತದೆ. ಬಸವಣ್ಣನವರ ಅನುಭವದಿಂದ ತಾನು ವಿಚಾರ ಪತ್ನಿಯಾಗಿ ಬೆಳೆದೆನೆಂದು ಹೇಳಿಕೊಳ್ಳುತ್ತಾರೆ. ತಾನು ಬಸವನಿಗೆ ಮಡದಿ ಮಾತ್ರವಲ್ಲ, ಬಸವ ತಮಗೆ ಪತಿ ಮಾತ್ರವಲ್ಲ ಮತ್ತು ನಮ್ಮಿಬ್ಬರ ಸತಿ-ಪತಿ ಸಂಬಂಧ ಇವೆಲ್ಲವನ್ನ ಮೀರಿದ್ದು ಎಂದು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ನೀಲಾಂಬಿಕೆ ತಾಯಿ ಬಸವಣ್ಣನವರನ್ನು ಮದುವೆಯಾದ ನಂತರ ಆಧ್ಯಾತ್ಮ ಕ್ಷೇತ್ರದಲ್ಲಿ ಎತ್ತರವಾಗಿ ಬೆಳೆದು ನಿಲ್ಲುತ್ತಾರೆ. ಸಾಹಿತ್ಯಿಕವಾಗಿಯೂ ಕೂಡ ಮಹತ್ವದ ವಚನಕಾರ್ತಿಯಾಗಿ ನಿಲ್ಲುತ್ತಾರೆ. ನೀಲಾಂಬಿಕೆ ತಾಯಿಯವರು ಸಂಗಯ್ಯ ಎಂಬ ವಚನಾಂಕಿತದಿಂದ ಬರೆದ ಸುಮಾರು 288 ವಚನಗಳು ಲಭ್ಯವಾಗಿವೆ. ಮಹತ್ವದ ಸಂಗತಿ ಎಂದರೆ ಇವರು ಏಳು ಸ್ವರ ವಚನಗಳನ್ನು ಮತ್ತು ಒಂದು ಕಾಲಜ್ಞಾನ ವಚನಗಳನ್ನು ರಚಿಸಿದ್ದಾರೆ. ಆತ್ಮಸಾಕ್ಷಾತ್ಕಾರದ ಪಥ ಮತ್ತು ಸಿದ್ಧಾಂತ ಷಟ್‌ಸ್ಥಳ, ಶರಣ ದಾಸೋಹ ಮತ್ತು ಶಿವಾನುಭವಗಳಲ್ಲಿ ವಹಿಸಿದ ಪಾತ್ರ ಮಹತ್ತರವಾಗಿದೆ. ಪತಿ ಸೇವೆ, ಜಂಗಮ ದಾಸೋಹ, ಲಿಂಗಾರ್ಚನೆ ನೀಲಮ್ಮನವರ ವ್ಯಕ್ತಿತ್ವವನ್ನು ಹಿರಿದಾಗಿಸಿದೆ. ಏಕ ಮಾತ್ರ ಪುತ್ರ ಬಾಲಸಂಗಯ್ಯ ಚಿಕ್ಕಂದಿನಲ್ಲೇ ತೀರಿಕೊಂಡರೂ, ಮಗನ ಮರಣದ ದುಃಖವನ್ನು ಶರಣರ ದಾಸೋಹದಲ್ಲಿ ಮರೆಯುತ್ತಾರೆ. ಅವರು ಪತಿ-ಪತ್ನಿ ಭಾವ ಅಳಿದು ಗುರು-ಶಿಷ್ಯ ಎಂಬ ಭಾವ ಅಳವಡಿಸಿಕೊಳ್ಳುತ್ತಾರೆ.
ನೀಲಮ್ಮನವರ ವಚನಗಳು:
ಎಲೆ ಶರಣರಿರಾ, ಎಲೆ ಭಕ್ತರಿರಾ,
ಭಕ್ತಿ ಕಾಂಡದ ಮೂಲಿಗನ ಕಾಣಿರೆ ಬಸವನ?
ಆ ಭಕ್ತಿಯಸಂಗದ ಶಿವೈಕ್ಯನ ಕಾಣಿರೆ ಬಸವನ?
ಭಕ್ತಿಯ ನಿಜಸಮಾಧಿಯ ಸುಖವ
ಕರಣಿಸುವ ಅಯ್ಯ ಬಸವನ
ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು,
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-340/ವಚನ ಸಂಖ್ಯೆ-899)
ಬಸವಣ್ಣನವರು ವೈಚಾರಿಕವಾದ ಭಕ್ತಿ ಪರಂಪರೆಯ ಮೂಲಿಗರಾಗಿದ್ದಾರೆ ಅವರನ್ನ ನಂಬಿ ಭಕ್ತಿಯ ನಿಜ ಸುಖವನ್ನು ಅನುಭವಿಸಿ ಎಂದು ಈ ವಚನದಲ್ಲಿ ಹೇಳಿದ್ದಾರೆ. ಆತ್ಮಕಥನದಂತಿರುವ ವಚನಗಳು ಅವರು ಜೀವಿಸುವ ಬಗ್ಗೆ, ವಿಪರೀತ ಪರಿಸ್ಥಿತಿಗಳಲ್ಲಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ನಿರ್ಣಯಗಳ ಬಗ್ಗೆ ತಿಳಿಸಿಕೊಡುತ್ತದೆ. ಹೀಗಾಗಿ ಅವರ ಎಲ್ಲಾ ವಚನಗಳು ಒಂದಿಲ್ಲಾ ಒಂದು ಸಂದೇಶವನ್ನು ನೀಡುತ್ತವೆ.
ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು,
ಆಹಾ ಮನವೆ, ಸಂತೈಸಿಕೋ ನಿನ್ನ ನೀನೆ,
ಆಗಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಛೆಯಲ್ಲ,
ಭೋಗಾದಿಭೋಗಂಗಳೆಲ್ಲವೂ ಸಂಗಯ್ಯನ ಅಧೀನವಾಗಿ
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-321/ವಚನ ಸಂಖ್ಯೆ-834)
ಈ ವಚನವನ್ನ ಬಹುಶಃ ನೀಲಮ್ಮನವರ ಮಗ ಬಾಲಸಂಗಯ್ಯನವರು ಲಿಂಗೈಕರಾದಾಗ ಬರದಿರಬಹುದು ಎಂದು ಅನಿಸುತ್ತದೆ. ಜೀವನದಲ್ಲಿ ಬರುವಂತಹ ಸುಖ-ದುಃಖ, ನೋವು-ನಲಿವು, ಆಪತ್ತು-ವಿಪತ್ತುಗಳೆಲ್ಲ ದೇವರ ಆಧೀನದಲ್ಲಿರುತ್ತವೆ. ಭಯ ಬೀಳಬಾರದು ಎಂದು ತಿಳಿಸುತ್ತಾರೆ.
“ಅಂಗದೊಳಗೆ ತನು ಲಿಂಗದೊಳಗೆ ಮನ ಜಂಗಮದಲ್ಲಿ ಧನರ್ಪಿತವಾಗಿಯೇ ಲಿಂಗಾಂಗಿತವಾಗಿರಬಲ್ಲಡೆ ಸಂಗನೊಳು ಶೀಲ” ಇದು ನೀಲಾಂಬಿಕೆ ತಾಯಿಯವರ ಒಂದು ಸ್ವರವಚನ. ಈ ವಚನದಲ್ಲಿ ಶರಣ ಧರ್ಮದ ತತ್ವ ಅಡಗಿದೆ.
ನೀಲಾಂಬಿಕೆ ತಾಯಿಯವರ ವಚನಗಳಲ್ಲಿ ಬಸವಣ್ಣನವರು ಆವರಿಸಿಬಿಟ್ಟಿದ್ದಾರೆ.
ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.
ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು.
ಉಭಯದ ಹಂಗಹರಿದು ಉಪಮಾತೀತನಾದ
ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-312/ವಚನ ಸಂಖ್ಯೆ-801)
ಆಡದ ಭಾಷೆಯ ನುಡಿಯುವಳಲ್ಲ ನಾನು ಬಸವಾ,
ಆ ನುಡಿಯ ಭಾಷೆಯ ಕೇಳುವವಳಲ್ಲ ನಾನು ಬಸವಾ,
ರೂಪಳಿದು ನಿರೂಪಿಯಾನು ಬಸವಾ,
ಅಂಗವಳಿದ ನಿರಂಗಿಯಾನು ಬಸವಾ,
ದ್ವಯವಳಿದ ಪ್ರಸಾದಿಯಾನು ಬಸವಾ,
ಪರಿಣಾಮವರತ ಹೆಣ್ಣೆಂದು ಎಮ್ಮವರೆನ್ನ ಹೆಸರಿಡಲು,
ನಾನು ಬಸವನ ಪಾದದಲ್ಲಿ
ತಲ್ಲೀಯವಾದೆನಯ್ಯಾ ಸಂಗಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-321/ವಚನ ಸಂಖ್ಯೆ-836)
ಎರಡರಿಲ್ಲದ ವಸ್ತುವೇ ನೀನೆರಡಾದೆದೆಯಲ್ಲ ಬಸವಯ್ಯ,
ಎರಡನೇಕೀಕರಿಸಿ ಭ್ರಮೆಯ ಬಿಡಿಸಿದೆಯಲ್ಲ ಬಸವಯ್ಯ,
ಭ್ರಮೆಯನಳಿದು ಪರಿಣಾಮದ ಸಂಗವ
ಮಾಡಿದೆಯಲ್ಲ ಬಸವಯ್ಯ.
ತೆರಹಿಲ್ಲದ ವಸ್ತುವಾದೆಯಲ್ಲಾ ಬಸವಯ್ಯ ಗುರುವೆ.
ಸಂಗಯ್ಯನಲ್ಲಿ ಸದುಹೃದಯನಾದೆಯಲ್ಲ ಬಸವಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-338/ವಚನ ಸಂಖ್ಯೆ-888)
ಎಲೆ ಅಯ್ಯಗಳಿರಾ,
ಎಲೆಗಳೆದ ವೃಕ್ಷವ ಕಂಡರೆ ಬಸವನ?
ಎಲೆ ಅಯ್ಯಗಳಿರಾ,
ರೂಹಿಲ್ಲದ ಚೋಹವ ಕಂಡಿರೆ ಬಸವನ?
ಎಲೆ ಸ್ವಾಮಿಗಳಿರಾ, ನಿಮ್ಮ ನಿಲುವಿನ
ದರ್ಪಣವ ಕಂಡಿರೆ ಬಸವನ?
ಸಂಗಯ್ಯನಲ್ಲಿ ಸ್ವಯವಳಿದ
ಬಸವನ ಕುರುಹ ಕಂಡಿರೆ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-339/ವಚನ ಸಂಖ್ಯೆ-892)
ಏಕಾಂಗವೆನಗೆ ಅನೇಕ ಬಸವಾ,
ಪ್ರಾಣಪ್ರಸನ್ನವದನೆಯಾದೆನು ಬಸವಾ,
ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ,
ಇಷ್ಟದ ಸಂಗದ ಕುಳವಳಿದ ಬಳಿಕ
ಪ್ರಾಣಯೋಗವಾಯಿತ್ತು ಬಸವಾ,
ಸಂಗಯ್ಯಾ, ನಿಮ್ಮ ಬಸವನ ರೂಪು
ಹೆಸರಿಲ್ಲದೆ ಹೋದ ಬಳಿಕ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-345/ವಚನ ಸಂಖ್ಯೆ-918)
ಹೀಗೆ ನೀಲಾಂಬಿಕೆಯವರ ಅನೇಕ ವಚನಗಳ ತುಂಬಾ ಬಸವಣ್ಣನವರು ತುಂಬಿಕೊಂಡಿದ್ದಾರೆ. ಅಕ್ಕನ ಚೆನ್ನಮಲ್ಲಿಕಾರ್ಜುನ ಆಮೂರ್ತ ರೂಪವಾಗಿ ವರ್ಣನೆಗೆ ಒಳಗಾಗಿದ್ದರೆ ನೀಲಾಂಬಿಕೆಯವರ ಬಸವಣ್ಣ ಮೂರ್ತರೂಪದ ಮಹಾ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.
ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ;
ಆಕಾರವಳಿದ ಬಸವಾ; ನಿರಾಕಾರವಳಿದ ಬಸವಾ;
ಸಂಗವಳಿದ ಬಸವಾ; ನಿಸ್ಸಂಗವಳಿದ ಬಸವಾ;
ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-314/ವಚನ ಸಂಖ್ಯೆ-807)
ಅಂಡಜವಳಿದ ಪಿಂಡಜವಳಿದ, ಆಕಾರವಳಿದ, ನಿರಾಕಾರವಳಿದ, ಸಂಗವಳಿದ, ನಿಸ್ಸಂಗವಳಿದ ಬಸವಣ್ಣನವರು ನೀಲಾಂಬಿಕೆಯವರ ದೃಷ್ಟಿಯಲ್ಲಿ ಮಹಾತ್ಮರಾಗಿದ್ದಾರೆ.
ಅಲ್ಲಮನ ವಂಶದವಳು ನಾನು.
ಆಜಾತ ಶರಣರ ವಂಶದವಳು ನಾನು.
ಅಪ್ರತಿಮ ಶರಣರ ವಂಶದವಳು ನಾನು.
ಆಗಮಾನಂದಿಗಳ ವಂಶದವಳಾನು.
ನಾನು ಆವ ದೇಶದಲ್ಲಿಯಿದ್ದಡೇನು?
ನಾನು ಆವಸ್ಥಾನದಲ್ಲಿಯಿದ್ದಡೇನು?
ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-320/ವಚನ ಸಂಖ್ಯೆ-830)
ಅಲ್ಲಮನ ವಂಶದವಳು ನಾನು, ಅಜಾತಶರಣರ ವಂಶದೊಳಗೆ ನಾನು, ಅಪ್ರತಿಮ ಶರಣರ ವಂಶದವಳು ನಾನು ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿರುವ ನೀಲಾಂಬಿಕೆಯವರು ಇಡೀ ಶರಣ ಸಂಕುಲವನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ.
ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ,
ಆನು ನಿಜ ಸುಖಿಯಲ್ಲ.
ಆನು ಬಸವನ ಮೂರ್ತಿಯ ಕಂಡು
ಬದುಕಿದೆನಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-327/ವಚನ ಸಂಖ್ಯೆ-846)
ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ ಎಂಬ ಅವರ ನುಡಿಗಳಲ್ಲಿ ಆತ್ಮ ಶೋಧನೆ ಇರುವುದನ್ನು ಕಾಣಬಹುದು.
ಹೀಗೆ ನೀಲಾಂಬಿಕೆಯ ವಚನಗಳ ತುಂಬಾ ಬಸವಣ್ಣನವರು ತುಂಬಿಕೊಂಡಿದ್ದಾರೆ. ಅಕ್ಕಂಹಾದೇವಿಯವರ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನನ ಆಮೂರ್ತ ರೂಪ ವರ್ಣನೆಗೆ ಒಳಗಾಗಿದ್ದರೆ, ನೀಲಾಂಬಿಕೆಯವರ ಬಸವಣ್ಣನವರು ಮೂರ್ತರೂಪದ ಮಹಾ ವ್ಯಕ್ತಿಯಾಗಿ ಕಾಣಿಸಿಕೊಳ್ತಾರೆ.
ಶರಣರ ದೃಷ್ಟಿಯಲ್ಲಿ ನೀಲಾಂಬಿಕ ತಾಯಿಯವರು:
ಬಸವಣ್ಣನವರು ನೀಲಾಂಬಿಕೆಯವರನ್ನು ತಮ್ಮ ವಿಚಾರ ಪತ್ನಿ ಎಂದು ಒಪ್ಪಿಕೊಂಡಿದ್ದರು. ಅವರ ಮೇಲೆ ಸಂಪೂರ್ಣ ನಂಬಿಕೆ ವಿಶ್ವಾಸವನ್ನು ಇಟ್ಟಿದ್ದರು. “ಪೃಥ್ವಿಗಗ್ಗಳದ ಚೆಲುವೆ” ಎಂದು ನೀಲಾಂಬಿಕೆಯವರನ್ನು ಆರಾಧಿಸಿದ್ದರು. ನೀಲಾಂಬಿಕೆಯವರ ಮೇಲಿರುವ ಪ್ರೀತಿ ವಿಶ್ವಾಸಗಳನ್ನ ಅಪರೋಕ್ಷವಾಗಿ ಈ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.
ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು,
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
… … … … … … … … … … … … …
… … … … … … … … … … … … …
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
… … … … … … … … … … … … …
… … … … … … … … … … … … …
ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ.
… … … … … … … … … … … … …
… … … … … … … … … … … … …
ನೀನು ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು,
… … … … … … … … … … … … …
… … … … … … … … … … … … …
ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-325/ವಚನ ಸಂಖ್ಯೆ-1112)
ಮೂವರಳಿದು, ಮೂರ್ತಿಯ ಕಳೆದು,
ಅನಿಮಿಷಯೋಗ ವಿಚಾರವನನುಭವಿಸಿ,
ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ
ಅಡಗ ನಿಂದೆನಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-381/ವಚನ ಸಂಖ್ಯೆ-1056)
ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗ ಯೋಗವ ಮಾಡುತ್ತಾ ಸ್ಥೂಲ, ಸೂಕ್ಷ್ಮ, ಕಾರಣ ಶರೀರವೆಂಬ ಮೂರಳಿದು, ಭಾವ ಲಿಂಗೈಕ್ಯ ಸ್ಥಿತಿಯನ್ನು ಪಡೆದುಕೊಂಡ ಅನುಭವವನ್ನು ಈ ವಚನದಲ್ಲಿ ತಿಳಿಸಿದ್ದಾರೆ.
ಶಿವಯೋಗಿ ಸಿದ್ದರಾಮರು ಪರಮ ದಾಸೋಹಿ, ಲಿಂಗಾಂಗಯೋಗಿ ನೀಲಾಂಬಿಕೆ ತಾಯಿಯವರ ಹಿರಿಮೆಯನ್ನು ಈ ವಚನದಲ್ಲಿ ಬರೆದಿದ್ದಾರೆ.
ಜ್ಞಾನಕ್ರಿಯಾಗಳಿಂದ ಲಿಂಗದಲ್ಲಿ
ನಿಬ್ಬೆರಗಾದ ನೀಲಮ್ಮನ
ಪಾದದ ಕಂದ ನಾನು, ಪಾದದ ದಾಸ ನಾನು,
ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-167/ವಚನ ಸಂಖ್ಯೆ-540)
ಅಲ್ಲಮರನ್ನ ನೋಡಿ ಅಬ್ಬರಿಸಿದ ಸಿದ್ದರಾಮೇಶ್ವರರು ನೀಲಮ್ಮ ತಾಯಿಯವರ ಚರಣಗಳಲ್ಲಿ ಕರಗುವುದನ್ನ ನೋಡಿದಾಗ ನೀಲಮ್ಮನವರ ಅಗಾಧ ವ್ಯಕ್ತಿತ್ವ ನಮ್ಮ ಅರಿವಿಗೆ ಬರುತ್ತದೆ. ನೀಲಮ್ಮನವರ ನುಡಿಯಿಂದ ಲಿಂಗ ಪೂಜೆಯ ಸಂಪತ್ತು ಎಂದು ಕಿನ್ನರಿ ಬೊಮ್ಮಯ್ಯನವರು ನೀಲಾಂಬಿಕೆಯನ್ನು ನೆನೆಸಿಕೊಳ್ಳುತ್ತಾರೆ.
ಅನೇಕ ಜನಪದ ಕವಿಗಳು ಜನಪದ ಗರತಿಯರು ನೀಲಾಂಬಿಕೆ ಅವರನ್ನು ಕುರಿತು ತಮ್ಮ ತ್ರಿಪದಿಗಳಲ್ಲಿ ಸ್ತುತಿ ಮಾಡಿದ್ದಾರೆ.
ನೀಲವ್ವ ನೀ ಬಾರ, ನೀಲಲೋಚನೆ ಬಾರ
ನೀ ನನ್ನ ಮನೆಗೆ ಇರಬಾರ | ಸೋಮಾರ
ಹಾಲಿಗೆ ಹೆಪ್ಪು ಕೊಡಬಾರ ||
(ಕನ್ನಡ ಜಾನಪದ ಗೀತೆಗಳು: 2017-ಡಾ. ಬಿ ಎಸ್ ಗದ್ದಗಿಮಠ/ಪುಟ ಸಂ. 19)
ಶರಣರ ನೆನೆದಾರ, ಸರಗೀಯ ಇಟ್ಟಂಗ
ಅರಳ ಮಲ್ಲೀಗೆ ಮುಡಿದ್ಹಂಗ | ಕಲ್ಯಾಣ
ಶರಣರ ನೆನೆಯೊ ಎಲೆ ಮನವೆ ||
(ಕನ್ನಡ ಜಾನಪದ ಗೀತೆಗಳು: 2017-ಡಾ. ಬಿ ಎಸ್ ಗದ್ದಗಿಮಠ/ಪುಟ ಸಂ. 18)
ಎಂಬ ಜನಪದ ಗರತಿಯರ ಪದಗಳಲ್ಲಿ ಶರಣರ ಮಹತ್ವ ಅರಿವಾಗುತ್ತದೆ.
ನಾಡೋಜ ಚನ್ನವೀರ ಕಣವಿಯವರು ನೀಲಮ್ಮನವರ ಕುರಿತು ಅದ್ಭುತ ಕವನವನ್ನು ರಚಿಸಿದ್ದಾರೆ.
ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ,
ಕಲ್ಯಾಣದ ಅಂಗಳದಲಿ
ತಳೆ ಹೊಡೆದಳು ಛಂದಕೆ.
ಸಮಚಿತ್ತದ ರಂಗೋಲಿಯು
ಒಳ-ಹೊರಗೂ ದೂಪವು,
ಹಾದಾಡುವ ಹೊಸತಿಲಲ್ಲಿ
ಹೊಯ್ದಾಡದ ದೀಪವು.
ಮಹಾಮನೆಯ ಮಹಾತಾಯಿ
ಮಾಸದ ಮಡಿ ಹಾಸಲು,
ದಾಸೋಹಕೆ ಮೀಸಲಾದ
ತೃಪ್ತಿಯ ನಗೆ ಸೂಸಲು,
ಎಲ್ಲೆಲ್ಲಿಯೂ ಗಣ ತಿಂಥಿಣಿ
ತಣಿದು ಹಾಡಿ ಹರಸಲು
ಭಕ್ತಿಭಂಡಾರ ತುಂಬಿ
ಹರಡಿತು ಬೆಳುದಿಂಗಳು.
(ಎರಡು ದಡ-1976 / ಚನ್ನವೀರ ಕಣವಿ / ಪುಟ ಸ. 61 / ನೀಲಾಂಬಿಕೆ)
ಎಂದು ನೀಲಾಂಬಿಕೆಯ ಭವ್ಯ ಚಿತ್ರಣವನ್ನೇ ನೀಡಿದ್ದಾರೆ.
ಲಿಂಗೈಕ್ಯ:
ಕಲ್ಯಾಣದಲ್ಲಿ ಕ್ರಾಂತಿಯಾದ ನಂತರ ಬಸವಣ್ಣನವರು ಕಪ್ಪಡಿ ಸಂಗಮದಲ್ಲಿ ಬಂದು ನೆಲೆಸಿದಾಗ ನೀಲಾಂಬಿಕೆಯವರನ್ನ ಕರೆದು ತರುವಂತೆ ಅಪ್ಪಣ್ಣನವರಿಗೆ ಹೇಳಿ ಕಳಿಸುತ್ತಾರೆ. ಆಗ ನೀಲಾಂಬಿಕೆಯವರು ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ಎಂದು ಹೇಳಿ ಕಲ್ಯಾಣದ ಶರಣರ ಸೇವೆಗೆ ನಿಲ್ಲುತ್ತಾರೆ. ಕೊನೆಗೆ ಬಸವಣ್ಣನವರನ್ನು ಭೇಟಿ ಮಾಡಲು ಹೊರಟ ನೀಲಮ್ಮನವರಿಗೆ ಮಾರ್ಗ ಮಧ್ಯದಲ್ಲಿಯೇ ಅಂದರೆ ತಂಗಡಿಗೆ ಹತ್ತಿರ ಬಂದಾಗ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ತಿಳಿದು ಬರುತ್ತದೆ. ಬಸವಣ್ಣನವರು ಲಿಂಗೈಕ್ಯರಾದ ನಂತರ ನೀಲಾಂಬಿಕೆಯವರು ಬರೆದ ವಚನಗಳನ್ನ ಓದಿದಾಗ ನಮ್ಮ ಹೃದಯ ಕಲಕಿದಂತಾಗುತ್ತದೆ. ಮರುದಿನ ಅಂದರೆ ಶ್ರಾವಣ ಶುದ್ಧ ಷಷ್ಟಿಯಂದು ನೀಲಾಂಬಿಕೆಯವರು ಲಿಂಗೈಕ್ಯರಾಗುತ್ತಾರೆ. ತಂಗಡಿಗಿಯಲಿ ನೀಲಮ್ಮನವರ ಐಕ್ಯಮಂಟಪ ಮತ್ತು ಜಮೀನಿನಲ್ಲಿ ನೀಲಮ್ಮನವರ ಕಟ್ಟೆ ಇದೆ. ಊರ ಹೊರಗೆ ಗುಡಿಯನ್ನು ನಿರ್ಮಿಸಲಾಗಿದೆ. ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯೂ ಇದೆ. ಹೊರಗಡೆ ಅಂಗಳದಲ್ಲಿ ಮಡಿವಾಳ ಮಾಚಯ್ಯನವರ ಶಿಲ್ಪವಿದೆ.
ನೀಲಾಂಬಿಕೆ ಅವರನ್ನ ಕುರಿತು ನಂತರದ ಕವಿಗಳು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನೀಲಮ್ಮನ ಸ್ತೋತ್ರ, ನೀಲಾಂಬಿಕಾ ಪಂಚವಿಂಶತಿ, ನೀಲಮ್ಮನ ತ್ರಿವಿಧಿ ಪ್ರಮುಖವಾದವುಗಳು. ಕಾರ್ತಿಕ ಮಾಸದ ಹುಣ್ಣಿಮೆಯಂದು ನೀಲಾಂಬಿಕೆ ತಾಯಿಯವರ ಜಯಂತಿ. ಈ ಲೇಖನದ ಮೂಲಕ ಅವರನ್ನು ನೆನಪಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನ.
ಶರಣು ಶರಣಾರ್ಥಿಗಳು …
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410
ಅನುಪಮ ಪಾಟೀಲ್ ಮೇಡಂ, ಅತುತ್ತಮವಾದ ಲೇಖನ, ಬಸವಣ್ಣ ನವರ ಬಗ್ಗೆ ಗೊತ್ತಿತ್ತು, ನೀಲಾಬಿಕಾ ತಾಯಿ l ಅವರ ಬಗ್ಗೆ ತಿಳಿದಿರಲಿಲ್ಲ, ಧನ್ಯವಾದಗಳು