
ಮಾಡುವಂತಿರಬೇಕು, ಮಾಡದಂತಿರಬೇಕು.
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.
ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.
(ಸಮಗ್ರ ವಚನ ಸಂಪುಟ: ಒಂದು-2016 ಪುಟ ಸಂಖ್ಯೆ-120/ವಚನ ಸಂಖ್ಯೆ-1310)
ಸಕಲ ಜೀವಾತ್ಮರ ಲೇಸಿಗಾಗಿ, ಮಾನವ ಕುಲದ ಕಲ್ಯಾಣಕ್ಕಾಗಿ ದೀನ ದಲಿತರ ಶೂದ್ರ ಅಸ್ಪೃಶ್ಯರ ಉದ್ಧಾರಕ್ಕಾಗಿ ಕಲ್ಯಾಣ ಕ್ರಾಂತಿಗೈದ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯಾದ ಅಂದಿನ ವಿಜಾಪುರ ಜಿಲ್ಲೆಯ ಹಿಪ್ಪರಿಗಿ ಪಾಲ್ ಬಾವಿ ಹಿರಿಯಮಠದ ಶರಣ ದಂಪತಿಗಳಾದ ಶ್ರೀ ವಿರೂಪಾಕ್ಷಯ್ಯ ಹಾಗೂ ನೀಲಮ್ಮನವರ ಉದರದಲ್ಲಿ 1930 ಆಗಸ್ಟ್ 1 ರಂದು ಜನಿಸಿದರು.
ಸೌದಿಯ ವಿರಕ್ತ ಮಠದ ಪೂಜ್ಯ ಶ್ರೀ ಸಂಗನ ಬಸವ ಶಿವಯೋಗಿಗಳ ಕೃಪೆಗೆ ಪಾತ್ರರಾಗಿ “ಮಹಾಂತ” ರೆಂದು ನಾಮಕರಣಗೊಂಡು ಆ ಮಠದ ಉತ್ತರಾಧಿಕಾರಿಯಾಗಿ ಬೆಳೆದರು
ಬಾಲ್ಯದಲ್ಲಿ ಹಿಪ್ಪರಗಿ ಹಾಗೂ ಮುಧೋಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಶಿವಯೋಗ ಮಂದಿರದಲ್ಲಿ ಮಾಧ್ಯಮಿಕ ಶಿಕ್ಷಣದೊಂದಿಗೆ ಯೋಗ ಸಾಧನೆ ಮಾಡಿ ಉನ್ನತ ಶಿಕ್ಷಣಕ್ಕಾಗಿ ಉತ್ತರ ಭಾರತದ ಬನಾರಸ್ ಗೆ ಹೋಗಿ ಅಲ್ಲಿ ಕ್ಲಿನ್ಸ್ ಕಾಲೇಜಿನಲ್ಲಿ ಹಿಂದಿ, ಸಂಸ್ಕೃತಗಳನ್ನು ಅಧ್ಯಯನ ಮಾಡಿದರು. ಅಲ್ಲಿಂದ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿದ್ದು ಸಂಗೀತ ಶಿಕ್ಷಣದೊಂದಿಗೆ ಶರಣರ ವಚನ ಸಿದ್ಧಾಂತಗಳನ್ನು ಅಧ್ಯಯನ ಮಾಡಿದರು. ನಂತರ ನಾಡಿನುದ್ದಕ್ಕೂ ಬಸವ ತತ್ತ್ವ ಪ್ರಸಾರ ಮಾಡುತ್ತಾ ಚರ ಜಂಗಮರಾಗಿ
“ಬಯಸಿ ಬಂದುದು ಅಂಗ ಭೋಗ ಬಯಸದೆ ಬಂದುದು ಲಿಂಗ ಭೋಗ” ಎಂಬ ಬಸವಣ್ಣನವರ ವಚನ ವಾಣಿಯಂತೆ ಸಮಾಜ ಸೇವೆಯೇ ಜಂಗಮ ಕಾರ್ಯವೆಂದು ಅರಿತರು
ಆಗ ಚಿತ್ತರಗಿ ಪೀಠದ ಸಮಸ್ತ ಸದ್ಭಕ್ತರು ತಮ್ಮ ಮಠಕ್ಕೆ ಯೋಗ್ಯ ಮಠಾಧಿಪತಿಗಳು ಆಗಬಲ್ಲರೆಂದು ನಿರ್ಧರಿಸಿ ಭಕ್ತಿ ಗೌರವದಿಂದ ಒಪ್ಪಿಸಿ ಚಿತ್ತರಗಿ-ಇಳಕಲ್ಲ ಶ್ರೀ ಮಠಕ್ಕೆ 19 ನೇ ಪೀಠಾಧಿಪತಿಗಳನ್ನಾಗಿ 07.05.1970 ರಂದು ಪಟ್ಟಾಭಿಷೇಕ ಮಾಡಿದರು. ಡಾ. ಮಹಾಂತ ಅಪ್ಪಗಳು ಇತಿಹಾಸಕಾರರಲ್ಲ ಇತಿಹಾಸ ನಿರ್ಮಿಸಿದರು. ಸಾಹಿತಿಗಳಲ್ಲ ಸಾಹಿತ್ಯಕ್ಕೆ ವಸ್ತುವಾದರು. ಡಾಕ್ಟರೇಟ್ ಮಾಡಿದವರಲ್ಲ ಆದರೆ ಡಾಕ್ಟರೇಟ್ ಅಧ್ಯಯನಕ್ಕೆ
ಭಾಜನರಾದರು.
ಪರಧರ್ಮವನ್ನು ಪ್ರೀತಿಸುತ್ತಿದ್ದರು. ಚಿತ್ತರಗಿ_ಇಳಕಲ್ಲ ಪೀಠಾಧೀಶರಾಗಿ ಸುಮಾರು 48 ವರ್ಷಗಳ ಸುದೀರ್ಘ ಅವಧಿಯಲ್ಲಿ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಸಮಾಜದಲ್ಲಿ ಬಿತ್ತಿದ್ದರು. ಬಸವ ತತ್ವ ಪ್ರಸಾರಕ್ಕಾಗಿಯೇ ಹುಟ್ಟಿದ ಮಾಣಿಕ್ಯ ಅಂದರೆ ತಪ್ಪಾಗಲಿಕ್ಕಿಲ್ಲ.
ಮಹಾಂತ ಜೋಳಿಗೆಯನ್ನು 1975 ರಲ್ಲಿ ಹುಟ್ಟು ಹಾಕಿ ಈ ಜೋಳಿಗೆಯಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಮತ್ತು ಪ್ರಪಂಚವನ್ನೇ ಹಾಳು ಮಾಡುವ ದುಶ್ಚಟ, ದುರಾಚಾರ, ಮೂಢನಂಬಿಕೆ, ಕಂದಾಚಾರ, ಜಾತಿಯತೆ, ಲಂಚ-ವಂಚನೆ, ಭ್ರಷ್ಟಾಚಾರ, ವ್ಯಭಿಚಾರ ಮುಂತಾದ ಸಮಾಜದ ಧಾರ್ಮಿಕ ಅನಿಷ್ಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ನೊಂದ ಹಲವಾರು ಹೆಣ್ಣು ಮಕ್ಕಳ ಬಾಳನ್ನು ಕರುಣಿಸಿ ಬದುಕನ್ನು ಬೆಳಗಿಸಿದ ಮಹಾನ್ ಜ್ಯೋತಿ ಡಾ. ಮಹಾಂತ ಅಪ್ಪಗಳು.
ಮಹಾಂತ ಜೋಳಿಗೆಯನ್ನು ಹಿಡಿದು ನಾಡಿನುದ್ದಕ್ಕೂ ಸಂಚರಿಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಅನೇಕ ಜನರ ಜೀವನವನ್ನೇ ಬದಲಾಯಿಸಿದರು. ಇಂತಹ ಸಮಾಝ ಸುಧಾರಣೆಯ ಕೈಂಕರ್ಯಕ್ಕಾಗಿ ಕರ್ನಾಟಲ ಸರ್ಕಾರ ಅವರ ಜನ್ಮದಿನವಾದ ಅಗಸ್ಟ 1 ನೇ ತಾರೀಖಿನಂದು “ವ್ಯಸನಮುಕ್ತ ದಿನಾಚರಣೆ” ಯಾಗಿ ಆಚರಿಸಲು ನಿರ್ಧರಿಸಿದೆ.

ಬಸವ ವಚನ ಪಠಣಗಳ ಮೂಲಕ ಪೂಜೆ, ಜಾತ್ರೆ, ಮನೆಯಲ್ಲಿ ಮಹಾಮನೆ, ಬಸವ ಬೆಳಗು ಪತ್ರಿಕೆ ಹೊರತಂದು ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. ವಚನ ಪಠಣ, ಕಲ್ಯಾಣ ಮಹೋತ್ಸವ ಊಟ ಮಾಡುವ ಅಕ್ಕಿಯನ್ನು ಚಲ್ಲದೇ ಬಡಬಗ್ಗರಿಗೆ ದಾನ ಮಾಡುವುದು, ಮಕ್ಕಳು ಕುಡಿಯುವ ಹಾಲನ್ನು ಕಲ್ಲನಾಗರಕ್ಕೆರೆಯದೆ ಮಕ್ಕಳಿಗೆ ಹಾಲನ್ನು ಕುಡಿಸಿ ಭವಿಷ್ಯದ ಸದೃಢ ಪ್ರಜೆಗಳನ್ನಾಗಿ ರೂಪಿಸುವ ಮಹೋನ್ನತ ಕಾರ್ಯವನ್ನು ಕೈಗೊಂಡರು. ದಲಿತ ಕೇರಿಗೆ ಭೇಟಿ ನೀಡಿ ಸಹಪಂಕ್ತಿ ಭೋಜನ, ಜಾತಿ ರಹಿತ ಸಮಾಜ, ಮೂಢನಂಬಿಕೆಗಳ ನಿರ್ಮೂಲನೆ ಮೊದಲಾದ ರಚನಾತ್ಮಕ ಕಾರ್ಯಗಳಿಗೆ ತನು-ಮನದಿಂದ ದುಡಿದಿದ್ದಾರೆ.
ವಚನ ಕಟ್ಟುಗಳೇ ಇವರ ದೊಡ್ಡ ಆಸ್ತಿಯಾಗಿತ್ತು. ಸಾಗರದಾಚೆಗೂ ಬಸವ ತತ್ವ ಪ್ರಚಾರ ಮಾಡಿ ಬಸವಣ್ಣ ವಿಶ್ವ ಮಾನವ ಎಂದು ಜಗತ್ತಿಗೆ ತೋರಿಸಿದರು. ಬಸವ ತತ್ವವನ್ನು ಆಡದೇ ಮಾಡಿ ತೋರಿಸಿದ ಪೂಜ್ಯರು. ಡಾ. ಮಹಾಂತ ಅಪ್ಪಗಳವರ ಮಹಾಂತ ಜೋಳಿಗೆ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯ, ಹೊರರಾಜ್ಯ, ದೇಶ ವಿದೇಶಗಳಲ್ಲೂ ಸಂಚರಿಸಿ ದುಶ್ಚಟಗಳಿಂದ ನೊಂದು-ಬೆಂದವರ ಸಂಸಾರಗಳಿಗೆ ಸಂಸ್ಕಾರ ಕೊಟ್ಟು ಸುಸಂಸ್ಕೃತರನ್ನಾಗಿ ಮಾಡಿದವರು ಡಾ. ಮಹಾಂತ ಅಪ್ಪಗಳವರು. ಜೋಳಿಗೆಯಿಂದಲೇ ಜಗದ ಏಳಿಗೆಯನ್ನು ಬಯಸಿದ್ದರು .
ಡಾ. ಮಹಾಂತ ಅಪ್ಪಗಳು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಶಾಶ್ವತವಾಗಿ ನಮ್ಮೊಂದಿಗಿದ್ದಾರೆ. ಅವರ ತತ್ವಗಳನ್ನು ಪಾಲಿಸುವುದೆ ನಾವು ಅವರಿಗೆ ಕೊಟ್ಟ ಗೌರವ.
ಸವದಿ ಮಠದ ಸಂಗನ ಬಸವರ ಕಾರುಣ್ಯದ ಶಿಶು, ಚಿತ್ತರಗಿ ಪೀಠದ ಪರಂಜ್ಯೋತಿ “ಬಸವ ಜ್ಯೋತಿ” ಯಾಗಿ ಭಕ್ತರ ಮನೆ-ಮನಂಗಳಲ್ಲೆಲ್ಲ ಬಸವ ಬೆಳಗನ್ನು ಬೆಳಗುವಂತೆ ಮಾಡಿದ ಪೂಜ್ಯ ಶ್ರೀಗಳಿಗೆ ನಮೋ ನಮೋ.
ಶ್ರೀಮತಿ. ಅಮರವಾಣಿ ಐದನಾಳ,
ಲಿಂಗಸೂಗೂರು.
ಮೋಬೈಲ್. ಸಂ. 99809 58759
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು. ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 97413 57132 / e-Mail ID: info@vachanamandara.com.