ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಶ್ರೀ. ಗುರುಮಹಾಂತ ಸ್ವಾಮೀಜಿಯವರ ಪಟ್ಟಾಧಿಕಾರದ 20 ನೇ ವರ್ಷದ ಸಂಭ್ರಮಾಚರಣೆ / ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸೂಗೂರ.

ಬಸವ ಭಕ್ತಿ ಸಂಪನ್ನರು, ಸದು ವಿನಯದ ಭಂಡಾರಿಗಳು, ಸುಶಿಕ್ಷಿತ ವಿದ್ಯಾವಂತರು ಹಾಗೂ ಮಾತೃ ಹೃದಯಿಗಳಾದ ಶ್ರೀ. ಮ. ನಿ. ಪ್ರ. ಗುರು ಮಹಾಂತ ಪೂಜ್ಯರ ಪಟ್ಟಾಧಿಕಾರದ 20 ನೇ ವರ್ಷದ ಸಂಭ್ರಮಾಚರಣೆಗೆ ಭಕ್ತಿಯ ಪ್ರಣಾಮಗಳು.

ಶರಣ ದಂಪತಿಗಳಾದ ಶ್ರೀ. ವೀರಪ್ಪನವರು ಹಾಗೂ ಶ್ರೀಮತಿ. ಶಾಂತಮ್ಮನವರ ಉದರದಲ್ಲಿ  27.05.1960 ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇವರ ಪ್ರಾಥಮಿಕ, ಪ್ರೌಢ & ಪದವಿ ಪೂರ್ವ ಶಿಕ್ಷಣ ನರಗುಂದದಲ್ಲಿಯೇ ಆಯಿತು. ನಂತರ ಪದವಿ ಶಿಕ್ಷಣವನ್ನು ಧಾರವಾಡದ ಮುರುಘಾ ಮಠದ ವಸತಿ ನಿಲಯದಲ್ಲಿದ್ದು ಬಿ. ಎ. ಮತ್ತು ಎಲ್. ಎಲ್. ಬಿ ಪದವೀಧರರಾದರು.

ಧಾರವಾಡದ ಮುರುಘಾಮಠದಲ್ಲಿ ಸತತ 10 ವರ್ಷಗಳ ಕಾಲ “ಅಖಿಲ ಭಾರತ ಶಿವಾನುಭವ” ಸಂಸ್ಥೆಯಲ್ಲಿ ಸಾಧಕರಾಗಿ, ಬೋಧಕರಾಗಿ, ಚಿಂತಕರಾಗಿ ಸೇವೆಗೈದರು. ಹೀಗೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಬಸವ ಕೇಂದ್ರಗಳ ನಿರ್ಮಾಣ, ಮನೆಯಲ್ಲಿ ಮಹಾಮನೆ, ವಚನ ಗೋಷ್ಠಿಗಳ ಸಹಜ ಶಿವಯೋಗ ಶಿಬಿರ, ಶರಣ ಸಂಸ್ಕೃತಿ ಕಾರ್ಯಕ್ರಮಗಳು, ಬಸವತತ್ವ ಮಹಾವಿದ್ಯಾಲಯ,  ಪಾಠ ಪ್ರವಚನಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪೂಜ್ಯಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಪೂಜ್ಯರಿಂದ ಜಂಗಮ ದೀಕ್ಷೆ ಪಡೆದು “ಶ್ರೀ ಸಿದ್ದರಾಮ ಶರಣರಾದರು.

ಬಸವ ತತ್ವ ಪ್ರಸಾರದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಪೂಜ್ಯರ ಜೊತೆ ಸೇರಿ ದೇಶ ವಿದೇಶಗಳನ್ನು ಸುತ್ತುತ್ತಾ ಬಸವತತ್ವ ಪ್ರಚಾರ, ಜಾಗತಿಕ ಸೌಹಾರ್ದತೆ, ವಿಶ್ವ ಶಾಂತಿ ಯಾತ್ರೆಗಳಲ್ಲಿ ಪಾಲ್ಗೊಂಡು ಬಸವ ತತ್ವ ಹೆಮ್ಮರವಾಗಿ ಬೆಳೆಯುವಲ್ಲಿ ಶ್ರಮಿಸಿದರು.

ಪರಮಪೂಜ್ಯ ಡಾ. ಮಹಾಂತಪ್ಪಗಳು ತಮಗೆ 74 ವರ್ಷ ತುಂಬಿದ ಬಳಿಕ ಚಿತ್ತರಗಿ ಸಂಸ್ಥಾನ ಇಳಕಲ್ ಮಠಕ್ಕೆ 20 ನೇ ಪೀಠಾಧಿಪತಿಯನ್ನಾಗಿ ಬಸವ ಭಕ್ತ ಸಂಪನ್ನರು, ಸದುವಿನಯ, ಸುಶಿಕ್ಷಿತ ವಿದ್ಯಾವಂತರಾದ ನರಗುಂದದ ಹೆಗಡಾಳ ಶರಣ ಮನೆತನದ ಶ್ರೀ ಸಿದ್ದರಾಮ ಸ್ವಾಮಿಗಳನ್ನು ಆಯ್ಕೆ ಮಾಡಿಕೊಂಡು ನಾಡಿನ ನೂರಾರು ಜನ ಜಗದ್ಗುರುಗಳು, ಗುರು-ವಿರಕ್ತ ಸ್ವಾಮಿಗಳ ಸಾನಿಧ್ಯದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದ ಪೂಜ್ಯರಾದ ಶ್ರೀ. ಮ. ನಿ. ಪ್ರ. ಚನ್ನಬಸವ ಸ್ವಾಮಿಗಳವರ ಲಿಂಗ ಹಸ್ತದಿಂದ ಜಂಗಮ ಸ್ಥಲ ಪ್ರಸಾದ ದೊಂದಿಗೆ “ಶ್ರೀ. ಮ. ನಿ. ಪ್ರ. ಗುರು ಮಹಾಂತ ಸ್ವಾಮಿಗಳೆಂದು ನಾಮಕರಣ ಮಾಡಿ ಚಿತ್ತರಗಿ ಪೀಠದ 20 ನೇ ಪೀಠಾಧಿಪತಿಗಳನ್ನಾಗಿ ಪಟ್ಟಾಧಿಕಾರ ಮಾಡಿದರು.

ಸಂಸಾರವೆಂಬ ಅಡವಿಯಲ್ಲಿ
ಹುಲಿಯುಂಟು, ಕರಡಿಯುಂಟು
ಶರಣನಂಜ! ಮಹಾಧೀರ
ಶರಣನಂಜ!
ಕೂಡಲಸಂಗನ ಶರಣ ನಿರ್ಭಯ

ಎನ್ನುವ ಬಸವಣ್ಣನವರ ವಚನವೇ ಶ್ರೀ ರಕ್ಷೆಯಾಗಿಸಿಕೊಂಡು ಅಜ್ಞಾನಿ ಸಮಾಜ ಸುಧಾರಿಸಬೇಕೆಂದು ಪಟ್ಟಾಧಿಕಾರವನ್ನು ಸ್ವೀಕರಿಸಿದರು. ಜನರನ್ನು ಬದುಕಿಸಬೇಕು ಎಂದು ಪ್ರಯತ್ನಿಸಿದ ಏಸು ಕ್ರಿಸ್ತನಿಗೆ ಶಿಲುಬೆಗೇರಿಸಿತು. ಸಾಕ್ರೆಟಿಸನಿಗೆ ವಿಷವನುಣಿಸಿತು, ಪೈಗಂಬರರಿಗೆ ಮಕ್ಕಾದಿಂದ ಮದಿನಾಕ್ಕೆ ಕಳಿಸಿತು. ಬಸವಣ್ಣನವರನ್ನು ಕಲ್ಯಾಣದಿಂದ ಸಂಗಮಕ್ಕೆ ಗಡಿಪಾರು ಮಾಡಿತು. ಮಹಾತ್ಮ ಗಾಂಧಿಗೆ ಗುಂಡಿಕ್ಕಿತು. ಅದೇ ರೀತಿ ಶ್ರೀ. ಗುರು ಮಹಾಂತಪ್ಪಗಳಿಗೆ ಪಟ್ಟಾಭಿಷೇಕ ಮಾಡಿದಾಗ ಅವರ ಮೇಲೆ ಕಲ್ಲು, ದೊಣ್ಣೆಗಳ ಏಟು ಕೊಟ್ಟಿತು. ಆಗ ಪೂಜ್ಯರು ಕಲ್ಲು ಬಡಿಗೆಗಳು ನಮ್ಮ ಲಿಂಗಯ್ಯನಿಗೆ ಪತ್ರೆ ಪುಷ್ಪಗಳು ಅರ್ಪಿಸಿದಂತಾಯಿತು. ಇವೆಲ್ಲ ಬಸವಣ್ಣನವರ ಮಹಾ ಪ್ರಸಾದ ಎಂದು ಎಲ್ಲಾ ಹಂತಗಳನ್ನು

ನಿರ್ಭಯವಾಗಿ ದಾಟಿ ಮುನ್ನಡೆದರು.

ಚಿತ್ತರಗಿ ಪೀಠದ 20 ನೇ ಪೀಠಾಧಿಪತಿಯಾಗಿ ಡಾ. ಮಹಾಂತಪ್ಪಗಳ ಕೃಪೆಗೆ ಪಾತ್ರರಾಗಿ ಸುಜ್ಞಾನದ ವಚನದೀಪ ಬೆಳಗಿಸಿ ಭಕ್ತರ ಜನಮಾನಸ ಸ್ವಚ್ಛಗೊಳಿಸುವ ಜಂಗಮ ಕಾಯಕದಲ್ಲಿ ಜಂಗಮ ಕಾಯಕದಲ್ಲಿ ಮುನ್ನಡೆದು “ತಂದೆಗೆ ತಕ್ಕ ಮಗ ಪೀಠಕ್ಕೆ ತಕ್ಕ ಸ್ವಾಮಿಗಳು” ಎನ್ನುವ ಗಾದೆಯ ಮಾತಿನ ಹಾಗೆ ಗುರು ಮಹಾಂತ ಸ್ವಾಮಿಗಳ ನಯ, ವಿನಯ, ಗುರು ಪ್ರೇಮ, ಒಬ್ಬ ಸಮರ್ಥ ಶ್ರೀಗಳಿಗೆ ಸಮರ್ಥ ಸ್ವಾಮಿ ಸಿಕ್ಕಂತಾದರು. ಹೂವು ಮಾರಿದ ಮಠದಲ್ಲಿ ಹೂವನ್ನೇ ಮಾರಿ ಪರಿಮಳ ಪಸರಿಸಬಲ್ಲಂತ ಉತ್ತರಾಧಿಕಾರಿ ದೊರೆತದ್ದು ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಸದ್ಭಕ್ತರ ಸೌಭಾಗ್ಯ. ಶ್ರೀ. ಗುರು ಮಹಾಂತ ಸ್ವಾಮಿಗಳು “ಸೇವೆಯಿಂದ ಸ್ವಾಮಿತ್ವ” ಎಂಬ ಅನುಭವದ ನಾನ್ನುಡಿಗೆ ನಿದರ್ಶನರಾಗಿದ್ದಾರೆ.

ಡಾ ಮಹಾಂತಪ್ಪಗಳು ಜ್ಞಾನಜ್ಯೋತಿ ಎಂಬ ರತ್ನವನ್ನು ಚಿತ್ತರಿಗೆ ಇಳಕಲ್ ಮಠಕ್ಕೆ ಕೊಟ್ಟಿದ್ದಾರೆ. ಈ ಜ್ಞಾನದ ದೀಪ ಚಿತ್ತರಗಿ ಚಿಜ್ಯೋತಿಯ ಬೆಳಕು ಅದು ಬಸವ ಜ್ಯೋತಿಯ ಬೆಳಕು. ಈ ಮಹಾಂತ ಬೆಳಗಿನಲ್ಲಿ ಗುರು ಮಹಾಂತರೊಂದಿಗೆ ಎಲ್ಲರೂ ಸಾಗಿ ಶಾಂತಿ ಸೌಹಾರ್ದತೆ ಸಹ ಬಾಳ್ವೆಯಿಂದ ಸುಜ್ಞಾನದ ವಚನ ದೀಪವನ್ನು ಅರಿತುಕೊಳ್ಳೋಣ.

ಮಾಡುವಂತಿರಬೇಕು ಮಾಡದಂತಿರಬೇಕು
ಮಾಡುವ ಮಾಟದೊಳಗೆ ತಾನ ಇಲ್ಲದಂತಿರಬೇಕು
ಕೂಡಲಸಂಗಮದೇವರ
ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-120 / ವಚನ ಸಂಖ್ಯೆ-1310)

ಡಾ. ಮಹಾಂತಪ್ಪಗಳು ಹಾಕಿಕೊಟ್ಟ ದಾರಿಯಲ್ಲಿ ನಡೆದು ಬಂದು ಬಸವ ಪರಂಪರೆಯನ್ನು ಜಗದ ಜನಜೀವನದಲ್ಲಿ ಸ್ಥಿರಗೊಳಿಸಲು ಸದಾಚಾರವನ್ನು ಬಿತ್ತಿ ಬೆಳೆಯುತ್ತಿರುವ ಚಿತ್ತರಗಿ ಮಾತೃ ಹೃದಯಿಗಳು, ಮುಗ್ಧ ಮನಸ್ಸು, ಸರಳ ವ್ಯಕ್ತಿತ್ವ, ಉನ್ನತ ಚಿಂತನೆ, ಮೌಢ್ಯತೆಯನ್ನು ತೊಡೆದು ವೈಚಾರಿಕತೆಯನ್ನು ಬಿತ್ತುವ ಹಂಬಲ, ಸದಾ ಸಮಾಜ ಮುಖಿ ಚಿಂತನೆಯಿಂದ ಪೂಜ್ಯರ ಉನ್ನತ ವ್ಯಕ್ತಿತ್ವ ಜಗಕೆಲ್ಲ ಮಾದರಿ.

ಇಂತಹ ಮಹಾನ್ ಶಿವಯೋಗಿಯವರನ್ನು ಕಂಡ ನಮ್ಮ ಜನ್ಮವೇ ಪಾವನ & ಸಾರ್ಥಕ.

ಸರಕಾರದಿಂದ ಕೊಡ ಮಾಡುವ ಸಂಯಮ ಪ್ರಶಸ್ತಿ, ಶ್ರೀ ರಮಣ ಪ್ರಶಸ್ತಿ ಇತ್ಯಾದಿ ಅನೇಕ ಉನ್ನತ ಪ್ರಶಸ್ತಿಗಳು ನಮ್ಮ ಪೂಜ್ಯರ ಮುಡಿಯನ್ನು ಅಲಂಕರಿಸಿವೆ.

 ಮಹಾಂತ ತತ್ವದ ಅರಿವು ಗುರು ಮಹಾಂತರಲ್ಲಿ.
ಮಹಾಂತ ತತ್ವದ ಆಚರಣೆ ಗುರು ಮಹಾಂತರಲ್ಲಿ.
ಮಹಾಂತ ತತ್ವದ ಅನುಭಾವ ಗುರು ಮಹಾಂತರಲ್ಲಿ.
ಇದ ಕಾರಣ ಗುರು ಮಹಾಂತ ಬಸವ ಬೆಳಗು ಬೆಳಗುತ್ತಿದೆ ನೋಡ
ನಮ್ಮ ಜಗಜ್ಯೋತಿ ಚಿಜ್ಯೋತಿ ಡಾ. ಮಹಾಂತರಲ್ಲಿ.

ಶರಣು ಶರಣಾರ್ಥಿಗಳು.

ಶ್ರೀಮತಿ. ಅಮರವಾಣಿ ಐದನಾಳ್‌,

ಲಿಂಗಸೂಗೂರ.

ಮೋಬೈಲ್.‌ ಸಂಖ್ಯೆ: 99809 58759

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply