
12 ನೇ ಶತಮಾನದ ಶರಣ ಚಳುವಳಿ ಎಂಬುದು ಜಗತ್ತು ಕಂಡ ಅಪರೂಪದ ಕಾಲಘಟ್ಟ. ಶತ-ಶತಮಾನಗಳಿಂದಲೂ ವರ್ಗ, ವರ್ಣ, ಲಿಂಗ ಭೇದದಿಂದ ಶೋಷಿತ ಜನಾಂಗದವರು ತತ್ತರಿಸಿ ಹೋಗಿದ್ದರು. ಬಸವ ಬೆಳಗಿನಲ್ಲಿ ಸ್ವಾತಂತ್ರ್ಯದ ಕಿಟಕಿಗಳನ್ನು ತೆರೆದು ಪರಿಶುದ್ಧವಾದ ಗಾಳಿ, ಬೆಳಕು ಪಡೆದು ಸರ್ವ ಸಮಾನವಾದ ಹಕ್ಕುಗಳಿಗೆ ಭಾಜನರಾಗಿದ್ದು ಇಂದಿಗೂ ಒಂದು ಬೆರಗು. ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಹಡಪದ, ಮಾದರ, ಡೋಹರ, ಅಂಬಿಗ, ಮಡಿವಾಳರಂಥ ಕಾಯಕ ಜೀವಿಗಳು ಇಲ್ಲಿ ಸಮಾನ ಗೌರವವನ್ನು ಕಂಡು ಸ್ವಾಭಿಮಾನದ ಬದುಕಿನ ಭಾಷ್ಯವನ್ನು ಬರೆದರು. ಇನ್ನೂ ಮುಂದುವರೆದು ಕಳ್ಳರು ಸಾರಾಯಿ ಮಾರುವವರು ಕೂಡ ಇಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿ ಮೌಲಿಕ ಬದುಕನ್ನು ಅಪ್ಪಿಕೊಂಡರು. ವೇಶ್ಯೆಯರಂತೂ ಸಮಾಜದಿಂದ ತಿರಸ್ಕರಿಸಲ್ಪಟ್ಟು ದೂರಿಕರಿಸಲ್ಪಟ್ಟಿದ್ದರು. ಅಂಥ ನಿಕೃಷ್ಟವಾಗಿ ಕಂಡಂಥವರನ್ನೂ ಕೂಡ ಆ ಕ್ರೂರ ಕತ್ತಲ ಕೂಪದಿಂದ ಹೊರತಂದವರು ಬಸವಾದಿ ಶರಣರು. ದುಷ್ಟ ಹಾಗೂ ಹೇಯ ಸಮಾಜದ ಭದ್ರವಾದ ಕೋಟೆಗಳಿಂದ ಬಿಡಿಸಿ ಅವರಿಗೂ ಬದುಕುವ ಹಕ್ಕು ಇದೆ ಎಂದು ಅವರಿಗೂ ಕೂಡ ಬದುಕಿನ ದಾರಿ ತೋರಿಸಿ ಮುಖ್ಯವಾಹಿನಿಗೆ ತಂದು ಸೇರಿಸಿದ್ದು ಬಸವಣ್ಣನವರ ಅಸ್ಖಲಿತವಾದ ಕಾರ್ಯ. ಶರಣರು ತಮ್ಮ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಹಾಗೂ ಕ್ರಾಂತಿಯ ಪರಿಣಾಮದಿಂದ ಶರಣರ ಬಗ್ಗೆ ಇದ್ದಂಥ ಅಷ್ಟಿಷ್ಟು ಕುರುಹುಗಳು ಕೂಡ ಕಾಲಗರ್ಭದಲ್ಲಿ ಅಳಿಸಿ ಹೋಗಿವೆ. ಹೀಗಾಗಿ ಅವರ ಬಗ್ಗೆ ವಿವರಗಳು ದಾಖಲೆಗಳು ಸಿಗುವುದು ದುರ್ಲಭ. ಅವರ ಹಾಗೂ ಇತರರ ವಚನ ಸಾಹಿತ್ಯ ಹಾಗೂ ಸ್ಥಳೀಯ ಪುರಾಣ, ಸ್ಥಳ ಐತಿಹ್ಯ, ಕಾವ್ಯಗಳ ಮೂಲಕ ಕೆಲವು ದಾಖಲೆಗಳು ಲಭ್ಯವಾಗಿವೆ. ಸೂಳೆ ಸಂಕವ್ವೆಯವರ ಬಗ್ಗೆಯೂ ಕೂಡ ಹೆಚ್ಚಿನ ವಿವರಗಳು ಇಲ್ಲಿಯವರೆಗೆ ಸಿಕ್ಕಿಲ್ಲ.
“ಸೂಳೆ ಸಂಕವ್ವೆ” ಹೆಸರೇ ಸೂಚಿಸುವಂತೆ ಪೂರ್ವಾಶ್ರಮದಲ್ಲಿ ಅವರು ವೇಶ್ಯಾ ವೃತ್ತಿ ಯನ್ನು ನಡೆಸುತ್ತಿದ್ದು ತದನಂತರ ಶರಣ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ವೃತ್ತಿಯನ್ನು ತೊರೆದು ಸಾತ್ವಿಕ ಬದುಕನ್ನು ಅಪ್ಪಿಕೊಂಡು ಶರಣೆಯಾಗಿರುವದು ಕಾಣುವುದು. ಅವರ ಒಂದು ವಚನ ಮಾತ್ರ ಲಭ್ಯವಾಗಿದೆ. ಅವರ ವಚನಾಂಕಿತ “ನಿರ್ಲಜ್ಜೇಶ್ವರಾ” ಎಂದುದಾಗಿದೆ. ಅವರ ಅತೀತದ ಬದುಕಿನ ಒಂದು ಎಳೆಯನ್ನು ಈ ವಚನಾಂಕಿತ ವ್ಯಕ್ತಪಡಿಸುವಂತೆ ತೋರುವದು. ಅಲ್ಲದೆ ದೇಹಭಾವಗಳಾಚೆ ಬೆಳೆದುನಿಂತ ನಿರ್ಭಾವದ ಸಂಕೇತವೂ ಆಗಿದೆ. ಅನೇಕ ಶರಣೆಯರ ವಚನಾಂಕಿತಗಳು ಅವರ ಮನೋಭಾವವನ್ನು ವ್ಯಕ್ತಪಡಿಸುವಂಥವುಗಳಾಗಿವೆ. ಉದಾಹರಣೆಗೆ ಬೋಂತಾದೇವಿಯವರ ಬಿಡಾಡಿ ಎಂಬ ಅಂಕಿತ ಯಾವ ಕಟ್ಟುಪಾಡುಗಳಿಲ್ಲದ, ನಿರ್ಭಿಡೆಯ ಸ್ವತಂತ್ರವಾದ ಮನೋಭಾವವನ್ನು ವ್ಯಕ್ತಪಡಿಸುವುದು. ಕಾಲಕಣ್ಣಿಯ ಕಾಮಮ್ಮನವರದುದು “ನಿರ್ಭೀತಿ ನಿಜಲಿಂಗದಲ್ಲಿ” ಎಂಬ ಅಂಕಿತ ಕೂಡ ಅವರ ಮನೋಸ್ಥೈರ್ಯವನ್ನು ವ್ಯಕ್ತಪಡಿಸುವದು. ಗೊಗ್ಗವ್ವೆಯವರ “ನಾಸ್ತಿನಾಥ” ಎಂಬ ಅಂಕಿತ ದೇವರ ಅಮೂರ್ತ ಆಸ್ತಿತ್ವದ ಇರುವಿಕೆಯ ಪ್ರತೀಕವಾಗಿದೆ.
ಸೂಳೆ ಸಂಕವ್ವೆಯವರ ವಚನ:
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ,
ಹಿಡಿದಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ.
ವ್ರತಹೀನನರಿದು ಬೆರೆದಡೆ
ಕಾದಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-449/ವಚನ ಸಂಖ್ಯೆ-1232)
ತಮ್ಮ ಪೂರ್ವಾಶ್ರಯದ ವೃತ್ತಿಯ ಒಂದು ಉದಾಹರಣೆಯನ್ನಾಗಿ ತೆಗೆದುಕೊಳ್ಳುವರು. ಕಾಯಕದ ಮೇಲಿನ ಏಕೋನಿಷ್ಠೆ ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಪ್ರಾಮಾಣಿಕತೆಯನ್ನು ಮೆರೆಯುವ ಮೌಲಿಕ ನಡೆ ಇಲ್ಲಿ ವ್ಯಕ್ತವಾಗುತ್ತದೆ. ಒಬ್ಬ ಗ್ರಾಹಕನಿಗೆ ಒಪ್ಪಿದ ಮೇಲೆ ಯಾವ ದುರಾಸೆಗೆ ಬಲಿಯಾಗದೆ ಆತನಿಗೇ ಮೀಸಲಾಗುವ ಸ್ಥಿರತೆ ಅವರ ಕಾಯಕ ನಿಷ್ಠೆಯನ್ನು ತೋರುವದು. ಅಂತಹ ತಪ್ಪಿಗಾಗಿ “ತನ್ನನ್ನೆ ತಾನು ಬತ್ತಲೆ ನಿಲಿಸಿ ಕೊಲ್ಲುವರಯ್ಯಾ” ಎಂದು ಶಿಕ್ಷೆಗೆ ಗುರಿಯಾಗಿಸಿಕೊಳ್ಳುವ ಅವರು ಅಂದಿನ ಸಮಾಜದ ಕ್ರೌರ್ಯವನ್ನೂ ಕೂಡ ವ್ಯಕ್ತಪಡಿಸುತ್ತಾರೆ. ವ್ರತಹೀನನ ಅರಿದು ಬೆರೆದಡೆ ಅಂದರೆ ನೈತಿಕ ಎಲ್ಲೆಯನ್ನು ಮೀರಿ ನಡೆಯುವದು ಅಂತಹ ನಡೆಗೆ ಕೂಡ ಅವರು ಕಾದ ಕತ್ತಿಯಿಂದ ಕಿವಿ, ಮೂಗ ಕೊಯ್ವ ಶಿಕ್ಷೆಗೆ ಗುರಿಮಾಡಿಕೊಳ್ಳುತ್ತಾ ಆ ಅಪರಾಧ ಅಂತಹ ಘೋರವಾದದ್ದೆಂದು ಮೌಲ್ಯಯುತ ಜೀವನಧಾರೆಯ ಪಥವನ್ನು ತೋರುವರು. ಹೀಗೆ ಅವರ ಒಂದೇ ಒಂದು ವಚನ ದೊರಕಿದ್ದರೂ ಕೂಡ ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,
ಧಾರವಾಡ – 580007
ಮೋಬೈಲ್ ನಂ. 99864 37474
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in