
ಜಾನಪದ ಸಾಹಿತ್ಯವನ್ನು ಸೃಜನಶೀಲ ಮನಸ್ಸುಗಳು ಮೌಖಿಕ ಪರಂಪರೆಯನ್ನು ಸೃಷ್ಟಿಸಿ ಆ ಮೂಲಕ ಸಂಸ್ಕೃತಿ, ಪರಂಪರೆ, ಜಾನಪದ ಸಾಹಿತ್ಯವನ್ನು ಹುಲುಸಾಗಿ ಬೆಳೆಸಿವೆ. ಜನಪದ ಸಾಹಿತ್ಯ ಒಬ್ಬ ಸೃಜನಶೀಲರಲ್ಲಿ ಹುಟ್ಟಿ ಅದು ಗುಂಪಿನಲ್ಲಿ ಬೆಳೆದು ಸಾಮುದಾಯಿಕ ಮನ್ನಣೆಯನ್ನು ಪಡೆದಿದೆ. ಆಯಾಯ ಕಾಲಘಟ್ಟದಲ್ಲಿ ಸೃಷ್ಟಿಯಾಗಿ ಮೌಖಿಕವಾಗಿ ಪರಂಪರೆಯಲ್ಲಿ ಹರಿದು ಬಂದ ಜ್ಞಾನಧಾರೆ ಜಾನಪದ ಸಾಹಿತ್ಯ. ಆ ಕಾಲದಲ್ಲಿ ಏನೇ ಘಟನೆ ಸಂಭವಿಸಿದರೂ ಅದನ್ನು ಮೌಖಿಕ ದಾಖಲೆ ಮಾಡಿದವರು ನಮ್ಮ ಜನಪದರು. ಏಕೆಂದರೆ ಸೃಜನಶೀಲ ಮನಸ್ಸು ಯಾವಾಗಲೂ ಹುಡುಕಾಟದಲ್ಲಿರುತ್ತದೆ. ಆ ಶೋಧನಾ ಆಸಕ್ತಿ ಇಂಥ ಜನಪದ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ಅಂದರೆ ಜನಪದರು ತಮ್ಮ ಪರಂಪರೆಯ ಸಾಹಿತ್ಯದಿಂದ ಅಲಿಖಿತ ಇತಿಹಾಸಕರ್ತರೂ ಆಗಿದ್ದಾರೆ. ಆದರೆ ಆ ಸಾಹಿತ್ಯವನ್ನು ಕೂಡ ಒರೆಗೆ ಹಚ್ಚಿ ಸತ್ಯವನ್ನು ಅರಿಯಬೇಕಾದುದು ನಮ್ಮ ಕರ್ತವ್ಯವಾಗಿದೆ.
ಹಡೆದವ್ವ ಮಾದವ್ವ ಹಡೆದಪ್ಪ ಮಾದರಸು
ಪಡೆದವ್ವ ಅಕ್ಕನಾಗಾಯಿ ಬಸವನಿಗೆ
ಬಿಡದೆ ಸಲುಹಿದನು ವರಸಂಗ
ಈ ತ್ರಿಪದಿಯಲ್ಲಿ ಬಸವಣ್ಣನವರ ಕೌಟುಂಬಿಕ ಜೀವನದ ಬಗ್ಗೆ ಜನಪದರು ಮಾತನಾಡುತ್ತಾರೆ. ತಂದೆ ತಾಯಿಯಿಂದ ಸಂಸ್ಕಾರವಂತನಾದ ಬಸವಣ್ಣನವರು ಅಕ್ಕನಾಗಾಯಿಗೆ ಉಪನಯನವನ್ನು ಮಾಡಲು ಪುರೋಹಿತರು ನಿರಾಕರಿಸಿದರು. ಅದನ್ನು ಪ್ರಶ್ನಿಸಿದ ಬಸವಣ್ಣನು ಅಕ್ಕನಾಗಮ್ಮನಿಗೆ ನೀಡದ ಉಪನಯನ ನನಗೂ ಬೇಡ ಎಂದು ಧಿಕ್ಕರಿಸಿದರು. ಆ ಬಾಲ್ಯದ ದಿನಗಳಲ್ಲಿಯೇ ಬಸವಣ್ಣನವರಿಗೆ ಸಮಾನತೆಯ ಅರಿವು ಕಾಡಿತ್ತು. ಅಕ್ಕನಾಗಾಯಿ ತನ್ನ ತಮ್ಮ ಬಸವಣ್ಣನನ್ನು ಬಿಡದೆ ಸಾಕಿ ಸಲುಹಿದ ತಾಯಿ. ತಮ್ಮ ವಚನಗಳಲ್ಲಿ ಬಸವಣ್ಣನವರು ಮಾದಾರ ಚೆನ್ನಯ್ಯನ ಮಗ ಮತ್ತು ಡೋಹಾರ ಕಕ್ಕಯ್ಯನ ಮಗ, ಅವರ ತೊತ್ತಿನ ಮಗ ತಾನು ಎಂದೆನ್ನುತ್ತಾರೆ. ಇಂಥ ಮಾತುಗಳು ಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇಡೀ ಮನುಕುಲವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮದೇ ಕುಟುಂಬ ಎಂದು ಪರಿಭಾವಿಸುವ ಗುಣ ಬಸವಣ್ಣನವರದು.
ಓದಿದನು ಬಸವಯ್ಯ ವೇದದೊಳಗಿನ ಹುಸಿಯ
ಬೇಧ ಬೇಧವನೇ ಬಿಚ್ಚಿಟ್ಟ
ಜನಪದಕೆ ತೇದುಂಡ ಜೀವಿ ಬಸವಣ್ಣ
ವೇದ, ಉಪನಿಷತ್ತು, ಆಗಮ, ಪುರಾಣ, ಶಾಸ್ತ್ರಗಳಲ್ಲಿನ ಎಲ್ಲಾ ತಾರತಮ್ಯವನ್ನು ಮುಕ್ತವಾಗಿ ಬಸವಣ್ಣನವರು ತಮ್ಮ ವಚನಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ನಡೆ-ನುಡಿಯಲ್ಲಿ. ಬದುಕಿನ ರೀತಿಯಲ್ಲಿ ಬಸವಣ್ಣನವರು ತಮ್ಮನ್ನು ತಾವು ಅರಿತುಕೊಂಡು ತಮ್ಮ ಜೀವನವನ್ನೇ ಸಮಾಜದ ಉದ್ಧಾರಕ್ಕಾಗಿ ಒಡ್ಡಿಕೊಂಡ ಮಹಾನ್ ಮಾನವತಾವಾದಿ. ನೊಂದ ಜನತೆಗಾಗಿ ಬಸವಣ್ಣನವರು ಅವರೆಲ್ಲರ ನಿಕೃಷ್ಟ ಬದುಕನ್ನು ಕಂಡು ಮರುಗಿದ ಜೀವಿ. ಇಂಥ ಬಸವಣ್ಣನವರ ಬೌದ್ಧಿಕತೆಯನ್ನು ಕುರಿತು ಜನಪದರು ತ್ರಿಪದಿಯಲ್ಲಿ ಅಭಿಮಾನಪೂರ್ವಕವಾಗಿ ಹಾಡಿದ್ದಾರೆ. ಜನಪದರ ಬದುಕನ್ನು ಉನ್ನತೀಕರಿಸಿದ ವೈಚಾರಿಕ ಚಿಂತಕರು ಹನ್ನೆರಡನೇ ಶತಮಾನದ ಅಣ್ಣ ಬಸವಣ್ಣನವರು.
ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ
ಸತ್ಯ ಶಿವಮಂತ್ರ ನಿನ್ಹೆಸರು ಬಸವಯ್ಯ
ಮರ್ತ್ಯದೊಳು ಮಂತ್ರ ಜೀವನಕೆ
ಕೃಷಿಯು ಮಾನವನ ಜೀವನಾಧಾರ ವೃತ್ತಿ. ಈ ವೃತ್ತಿ ಧರ್ಮದ ನೆಲೆಯಲ್ಲಿ ನಾವು ಬದುಕಿಗೆ ಅರ್ಥವನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ದುಡಿದು ಬದುಕಬೇಕೆಂಬುದು ಬಸವಣ್ಣನವರ ನಿಲುವು. ಸತ್ಯವೆಂಬುದು ಶಿವನ ಸಾಕ್ಷಾತ್ಕಾರ. ದುಡಿಮೆಯಲ್ಲಿ ದೈವತ್ವವನ್ನು ಕಾಣಬೇಕೆಂಬುದು ಜನಪದರ ಆಶಯವಾಗಿದೆ. ಕಾಯಕ ಮತ್ತು ದಾಸೋಹವನ್ನು ಕಲಿಸಿದ ಗುರು ಬಸವಣ್ಣ. ಮರ್ತ್ಯಲೋಕದಲ್ಲಿ ಬಸವಾ ಎಂಬ ಹೆಸರೇ ಜನಪದರಿಗೆ ಜೀವನದ ಮಂತ್ರವಾಯಿತು. ಬಸವಾ ಎಂದೊಡೆ ಪಾಪ ದೆಸೆಗೆಟ್ಟು ಹೋಗುವುದು ಎಂದು ಜನಪದರ ಅಭಿಮಾನದ ಮಾತಾಗಿದೆ.
ಅರಸ ಬಿಜ್ಜಳರಾಯ ಮರೆತಂದಯ ಕುಲಮತವ
ಕರೆಸಿ ಬಸವನಿಗೆ ಒಪ್ಪಿಸಿದ ಮಂತ್ರಿ ಪದವಿ
ಹರುಷದಲಿ ರಾಜಮುದ್ರಿಕೆಯ
ಕಲ್ಯಾಣದ ಅರಸ ಬಿಜ್ಜಳರಾಯ ಮೌಲ್ಯಯುತ ಆಳ್ವಿಕೆಗೆ ಮನಸು ಮಾಡಿದ ದಿಟ್ಟ ಮತದ ಹಿರಿಯರನ್ನು ಕರೆಯಿಸಿ ಬಸವಣ್ಣನವರ ಗುಣ, ಸ್ವಭಾವ ಮತ್ತು ಬೌದ್ಧಿಕ ಮಟ್ಟವನ್ನು ಕಂಡುಂಡವರು ಬಿಜ್ಜಳರಸ. ಇಂಥ ವ್ಯಕ್ತಿ ಮಂತ್ರಿಯಾದರೆ ಸಾಮ್ರಾಜ್ಯದ ಉನ್ನತಿಯನ್ನು ಕಾಣಬಹುದೆಂಬ ಅಭಿಲಾಷೆಯಿಂದ ಸಂತಸದಿಂದ ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ಒಪ್ಪಿಸುತ್ತಾರೆ. ಕಲ್ಯಾಣದ ರಾಜಮುದ್ರಿಕೆಯನ್ನು ನೀಡಿ ಬಿಜ್ಜಳರಾಯ ತನ್ನ ಆಸ್ಥಾನದಲ್ಲಿ ಬಸವಣ್ಣನವರಿಗೆ ಮಂತ್ರಿ ಸ್ಥಾನವನ್ನು ನೀಡಿ ಗೌರವಿಸುತ್ತಾರೆ.
ಮೆಚ್ಚಿದನು ಬಲದೇವ ಇಚ್ಛೆಯಲಿ ಮಗಳಿತ್ತ
ಕೆಚ್ಚೆದೆಯ ವೀರ ಬಸವನಿಗೆ
ಕಲ್ಯಾಣ ನೆಚ್ಚಿ ಸಲಹೆಂದು ಕೈಮುಗಿದು
ಬಲದೇವ ಬಸವಣ್ಣನವರ ಸೋದರ ಮಾವ. ತಮ್ಮ ಮಗಳಾದ ಗಂಗಾಂಬಿಕೆಯನ್ನು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಧಾರೆ ಎರೆದರು. ಬಸವಣ್ಣನವರು ಮೌನಿಗಳಲ್ಲಿ ಮಹಾಮೌನಿ. ದೊಡ್ಡ ಸಮಾಧಾನಿ. ತಣ್ಣನೆಯ ನೀರನ್ನು ಥಣಿಸಿ ಕುಡಿಯುವ ಮನಸ್ಸು ಬಸವಣ್ಣನವರದು. ಸೂಕ್ಷ್ಮಗ್ರಾಹಿಯಾದ ಬಲದೇವರು ಸೋದರಳಿಯನನ್ನು ಅರ್ಥಮಾಡಿಕೊಂಡವರು. ಸಮಾಜವನ್ನು ತಿದ್ದುವ ಕೆಚ್ಚೆದೆಯ ವೀರ ಗಣಾಚಾರಿ ಬಸವಣ್ಣನವರು. ಕಲ್ಯಾಣವನ್ನು ನಂಬಿಕೆಯಿಂದ ಎಲ್ಲ ಜನರ ವಿಶ್ವಾಸಗಳಿಸಿ ಅವರನ್ನು ಸಲುಹಿರಿ ಎಂದು ಬಸವಣ್ಣನವರಿಗೆ ಬಲದೇವ ಹಾರೈಕೆ ಮಾಡಿ ಕೈಮುಗಿಯುತ್ತಾರೆ ಎಂದು ಜನಪದರು ಈ ತ್ರಿಪದಿಯಲ್ಲಿ ಹಾಡಿದ್ದಾರೆ.
ಸಾಗಿ ಬಸವನು ಬಂದು ತೂಗಿದನು ಕಲ್ಯಾಣ
ಹಾಗಿನಲ್ಲೊ ಕಟ್ಟಿ ಅನುಭಾವ ಮಂಟಪದ
ಕೂಗು ಕೇಳುತಲಿ ಜನವೆದ್ದು
ಕಲ್ಯಾಣಕ್ಕೆ ಸಾಗಿ ಬಂದಿರುವ ಬಸವಣ್ಣನವರು ಬಿಜ್ಜಳರಸ ನೀಡಿದ ಮಂತ್ರಿ ಪದವಿ ಮುಖೇನ ಕಾಯಕ ಮತ್ತು ದಾಸೋಹದಿಂದ ರಾಜ್ಯಭಾರವನ್ನು ಸರಾಗವಾಗಿ ಮುನ್ನಡೆಸುತ್ತಾರೆ. ಒಂದು ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯ ಪ್ರತಿ ಸೂರ್ಯನಾಗಿ ಬಸವಣ್ಣನವರು ಛಲದಿಂದ ಅನುಭವ ಮಂಟಪವನ್ನು ಕಟ್ಟಿದರು. ಜನಸಾಮಾನ್ಯರಿಗೆ ಇಷ್ಟಲಿಂಗವನ್ನು ನೀಡಿದರು. ಅರಿವೇ ಗುರುವಾಗಿ ನಿಮ್ಮ ದೈವ ನಿಮ್ಮ ಕೈಯಲ್ಲಿದೆ ಎಂದು ಅಭಿಮಾನದಿಂದ ಪ್ರತಿಯೊಬ್ಬ ದುಡಿಮೆಗಾರರಿಗೆ ಆತ್ಮ ಗೌರವವನ್ನು ತಂದುಕೊಟ್ಟರು. ಶಿವಶರಣರಿಗೆ ಅಕ್ಷರ ಕಲಿಕೆಯಿಂದ ಆತ್ಮಸ್ಥೈರ್ಯವನ್ನು ಬಸವಣ್ಣನವರು ತುಂಬಿದರು. ಆದ್ದರಿಂದ ಜನಪದರು ಕಲ್ಯಾಣದಲ್ಲಿಯ ಅನುಭವ ಮಂಟಪ ಕಟ್ಟಿದ ಕೂಗನ್ನು ಕೇಳುತ್ತಲೇ ಅರಿವಿನದಾರಿಗೆ ಜನತೆ ಬಂದರು. ತಮ್ಮನ್ನು ತಾವು ಅನುಭವ ಮಂಟಪದಲ್ಲಿ ಗುರುತಿಸಿಕೊಂಡರು. ಹಾಗೆಯೇ ತಮ್ಮನ್ನೂ ತಾವು ಅರಿತವರಾದರು.
ಕಾಯಕವ ಕಲಿಸುದಕ ನಾಯಕನು ಬಸವಣ್ಣ
ಜೀಯ ಹೊಸಮತಕೆ ಶಿವಭಕ್ತಿ ಸಾರುದಕೆ
ರಾಯ ಜೀವನದ ಹೊಸ ನುಡಿ
ನಿಮ್ಮ ಕುಲಕಸಬನ್ನು ನೀವು ಮಾಡಿರಿ. ಅದೇ ನಿಮ್ಮ ಕಾಯಕ. ಮನುಷ್ಯ ದುಡಿದು ಬದುಕಬೇಕು. ಆ ದುಡಿತದ ಶ್ರಮಕ್ಕೆ, ಆ ಬೆವರಿನ ಹನಿಗೆ ಅದರದೇ ಆದ ಮಹತ್ವವನ್ನು ಹೊಂದಿದೆ. ಕಾಯಕದಿಂದ ಬಂದ ಆದಾಯ ದಾಸೋಹದ ನೆಲೆಯಲ್ಲಿ ಸಾಗಲಿ ಎಂಬುದು ಬಸವಣ್ಣನವರ ಅಭಿಮತ. ಆದ್ದರಿಂದ ಜನಪದರು ನಮ್ಮ ಕಾಯಕವನ್ನು ನಾವು ನಮಗೆ ಕಲಿಸಿದ ನಾಯಕ ಬಸವಣ್ಣ ಎಂದು ಹೇಳುತ್ತಾರೆ. ಕಾಯಕ ದಾಸೋಹದ ಜೊತೆಗೆ ಹೊಸ ಮತವೆಂಬ ಲಿಂಗಾಯತ ಧರ್ಮಕ್ಕೆ ಶಿವಭಕ್ತಿಯ ರಸವನ್ನು ದುಡಿತದವರ್ಗಕ್ಕೆ ಪ್ರವಹಿಸುವ ಮೂಲಕ ಬಸವಣ್ಣ ಭಕ್ತಿ ಭಂಡಾರಿಯಾದರು. ಭಕ್ತಿಯನ್ನು ಸಾರಿ ಜನಪದರ ಜೀವನದ ಹೊಸನುಡಿಗೆ ಬಸವಣ್ಣ ನಾಂದಿ ಹಾಡಿದ್ದಾರೆ. ಬಸವಣ್ಣ ಹೇಳಿದಾಗಲೇ ಅಂದಿನ ಪ್ರತಿಯೊಬ್ಬ ಕಾಯಕ ಜೀವಿಗೆ ತಮ್ಮ ದುಡಿಮೆಯ ಮೌಲ್ಯವನ್ನು ಅರಿವುದರ ಜೊತೆಗೆ ಇಷ್ಟಲಿಂಗ ಪಡೆದು ತಮ್ಮ ತಾವು ಅರಿತು ಧನ್ಯರಾದರು.
ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು
ದೇಶ ದೇಶಕ್ಕೆಲ್ಲಾ ಕೇಳುತಲಿ ಹೊಸಮಾತ
ಹೇಳಿದವು ವೇದ ಹುಸಿಯೆಂದು
ಬಸವಣ್ಣನವರು ತಮ್ಮ ಮನೆಗೆ ಕಳ್ಳ ಬಂದಾಗ ನೀವೇ ಕೂಡಲಸಂಗಮರು ಏನು ಬೇಕಾದರೂ ತೆಗೆದುಕೊಂಡು ಹೋಗಿರಿ ಎಂದವರು. ದಿನನಿತ್ಯವೂ ಬಸವಣ್ಣನವರು ಕಾಯಕ ಮತ್ತು ದಾಸೋಹದ ಚಿಂತನೆಯಲ್ಲಿಯೇ ಇರುವಂತಹ ಮನಸ್ಸು. ಆದ್ದರಿಂದ ದಾಸೋಹದ ಹರಿಕಾರರಾದ ಬಸವಣ್ಣನವರು ಎಲ್ಲ ಶಿವಶರಣರಿಗೂ ದಾಸೋಹವನ್ನು ಕಲಿಸಿದರು. ಸತ್ಯ ಶುದ್ಧ ಕಾಯಕದಿಂದ ಬಂದ ಫಲವು ದಾಸೋಹದ ನೆಲೆಯಲ್ಲಿ ಪರಿಪೂರ್ಣವಾಗಬೇಕು. ಅದು ಅಕ್ಷರ ದಾಸೋಹ, ಅನ್ನದಾಸೋಹಗಳು ಭಕ್ತಿಯ ನಿಜ ಸ್ವರೂಪದಲ್ಲಿ ತನ್ನನ್ನು ತಾನರಿಯಬೇಕು. ಈ ಎರಡೂ ಹನ್ನೆರಡನೆಯ ಶತಮಾನದ ಅದ್ಭುತ ಪರಿಕಲ್ಪನೆಗಳು. ಇವುಗಳನ್ನೆಲ್ಲಾ ಸಾಕಾರಗೊಳಿಸಿದ ಬಸವಣ್ಣನವರ ಬಗ್ಗೆ ದೇಶ ದೇಶಕ್ಕೆಲ್ಲಾ ಕೇಳುವಂತೆ ಜನರು ಹೊಸ ಮಾತನ್ನು ಹಾಡಿ ಹರಸಿದರು. ವೇದದಲ್ಲಿ ಇದ್ದ ಎಲ್ಲ ಅಸಮಾನತೆಗಳನ್ನು ಮತ್ತು ಕಲ್ಪನೆಗಳನ್ನು ಬಸವಣ್ಣನವರು ಹುಸಿ ಎಂದು ಸಾರಿ ಕನ್ನಡದ ಮಹತ್ವವನ್ನು ಹೆಚ್ಚಿಸಿದರು.
ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ
ಸೂಡು ಕಟ್ಟಿದರು ಶಿವನುಡಿಯ
ಕಾಯಕದ ಗೂಡಾತು ಲೋಕ ಜನ ಹಿಗ್ಗಿ
ಬಸವವಣ್ಣನವರು ಅಂದಿನ ಜನ ಸಾಮಾನ್ಯರಾದ ಶ್ರಮಿಕ ವರ್ಗಕ್ಕೆ ಹೊಸ ಸಂಚಲನವನ್ನು ನೀಡಿದ ಧೀಮಂತ. ಜಾತಿ, ವರ್ಗ, ಲಿಂಗ ಅಸಮಾನತೆಯಿಂದ ತಮಂಧದಲ್ಲಿದ್ದ ಸಮಾಜಕ್ಕೆ ಮಾನವೀಯತೆಯ ಕಂದೀಲು ಹಚ್ಚಿದವರು. ಅಂಧಕಾರದಲ್ಲಿ ಬದುಕುತ್ತಿದ್ದ ಜನತೆ ಇದ್ದಕ್ಕಿದ್ದಂತೆ ಹುಮ್ಮಸ್ಸಿನಿಂದ ಒಂದೆಡೆ ಬಂದು ಸೇರುತ್ತಾರೆ. ಆ ನಾಡಿನ ಬಲ್ಲಿದರೆಲ್ಲಾ ವಚನಗಳನ್ನು ಬರೆದು ಕಟ್ಟಿ ಹಾಡಿದರು. ಅರಿವಿನೆಡೆಗೆ ಸಾಗಿದ ಜನತೆ ಕಾಯಕ ಮತ್ತು ದಾಸೋಹದ ಕಾರ್ಯದಲ್ಲಿ ಎಲ್ಲರೂ ಒಂದಾಗಿ ಸಂಭ್ರಮಿಸಿದರು.
ಅರ್ಪಣೆಯು ಅನುಭಾವ ಹೆಪ್ಪುಗಟ್ಟಿತು
ಲೋಕ ಬೆಪ್ಪಾತು ನಾಕ ಕಾಯಕದ
ಹಾಲ್ದೊಳೆಯ ತೆಪ್ಪ ದಾಸೋಹ ತೇಲುತಲಿ
ಅನುಭವ ಮಂಟಪದ ಸಂವಾದದಲ್ಲಿ ನಡೆ-ನುಡಿಯಲ್ಲಿ ಏಕತೆಯನ್ನು ಸಾಧಿಸಿದವರು ಶಿವಶರಣರು. ಕಾಯಕದಿಂದ ಅರ್ಪಣೆ ಮತ್ತು ಅನುಭವದಿಂದ ಎಲ್ಲರ ಮನೋಭೂಮಿಕೆಯಲ್ಲಿ ಅಂದು ಸಮಾಜ ಗಟ್ಟಿಯಾದ ನೆಲೆಯನ್ನು ಕಂಡುಕೊಂಡಿತು. ಇಂಥ ಬದಲಾವಣೆನ್ನು ಕಂಡು ಸ್ವರ್ಗವೇ ಅಚ್ಚರಿಗೊಂಡಿತ್ತು. ವಚನಕಾರರು ಗುಂಪು ಗುಂಪಾದ ತಂಡದಲ್ಲಿ ಶಿವಶರಣರು ಹಾಲಿನ ಹೊಳೆಯನ್ನು ಹರಿಸಿದವರು. ಹಾಲಿನಂಥ ಗುಣದ ಬಸವಣ್ಣನವರ ಮನಸ್ಸಿನಲ್ಲಿ ದಾಸೋಹ ಎಂಬ ತೆಪ್ಪವು ದಿನ ನಿತ್ಯವೂ ತೇಲುತ್ತಿತ್ತು. ಇಡೀ ಕಲ್ಯಾಣವೇ ಕಾಯಕ ದಾಸೋಹದಿಂದ ಒಗ್ಗಟ್ಟಾಗಿ ಶಿವಶರಣರು ಆತ್ಮ ಕಲ್ಯಾಣವನ್ನು ಮಾಡುವುದರೊಂದಿಗೆ ಜಗದ ಕಲ್ಯಾಣವನ್ನು ಸಾಧಿಸಿದರು. ಜನಸಾಮಾನ್ಯರಿಗೆ ವ್ಯಕ್ತಿಗತ ಗೌರವ ಮತ್ತು ಘನತೆ ದೊರೆತ್ತಿದ್ದು ಈ ಕಾಲದಲ್ಲಿಯೇ. ಆತ್ಮ ಕಲ್ಯಾಣದಿಂದ ಆಗ ಜಗದ ಕಲ್ಯಾಣವೂ ಯುಗದ ಕಲ್ಯಾಣವೂ ಆಯಿತು. ಕಲ್ಯಾಣದ ಜನತೆಯ ಸಡಗರಕ್ಕೆ ಅಂದು ಪಾರವೇ ಇಲ್ಲದಂತಾಯಿತು.
ವಾದ ವಾದವೇ ನಡೆದು ವೇದ ವೇದವೇ ಸೋತು
ಭೇದ ಬೇಡೆಂದ ಬಸವಣ್ಣ
ಸಾರುದಕೆ ಹೋದ ಹೋದಲ್ಲಿ ಹೊಸಮಾತು
ಬಸವಣ್ಣನವರು ತಮ್ಮ ಪ್ರಜ್ಞೆಯಿಂದ ಸಮಾಜದಲ್ಲದ್ದ ಅಸಮಾನತೆಯನ್ನು ಎತ್ತಿಹಿಡಿದರು. ವಾದ, ಚರ್ಚೆ ನಡೆಸಿದರು. ಆಗ ಇವರ ಸಮಾನತಾವಾದದ ಎದುರುಗಡೆ ವೇದವು ಕೆಂಪು ವಸ್ತ್ರದಲ್ಲಿ ಅಡಗಿ ಕುಳಿತಿತ್ತು. ಸರ್ವ ಜನತೆಯ ನಾಯಕರಾದ ಬಸವಣ್ಣನವರು ಸಮಾನತೆಯ ಹರಿಕಾರ. ಇವರ ಬಗ್ಗೆ ಜನತೆ ಕಂಡ ಕಂಡಲ್ಲಿ ಹೊಸ ಮಾತನ್ನು ಮಾತಾಡಿ ಮನದಣಿಯೇ ಬಸವಣ್ಣನವರನ್ನು ಸ್ಮರಿಸುತ್ತ ಹಾಡಿ ಹರಿಸಿದ್ದಾರೆ.
ಎಲ್ಲ ಬಲ್ಲಿದನಯ್ಯ ಕಲ್ಯಾಣದ ಬಸವಯ್ಯ
ಚೆಲ್ಲಿದನು ತಂದು ಶಿವ ಬೆಳಕ
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು
ಬಸವಣ್ಣನವರು ಬದುಕಿನ ಎಲ್ಲ ಮಗ್ಗುಲುಗಳನ್ನು ಬಾಲ್ಯದಲ್ಲಿಯೇ ಅರಿತವರು. ಬೆಳೆಯುತ್ತ ಬೆಳೆಯುತ್ತ ಇಡೀ ವ್ಯವಸ್ಥೆಯ ಹುಳುಕುಗಳನ್ನೆಲ್ಲ ಅನಾವರಣಗೊಳಿಸಿದರು. ಮೌಢ್ಯ, ಶೋಷಣೆಯನ್ನು ಕಂಡು ಬಸವಣ್ಣನವರು ಮಮ್ಮಲ ಮರುಗಿದರು. ಆಗ ಕಲ್ಯಾಣದಲ್ಲಿ ಮಂತ್ರಿಯಾದ ಮೇಲೆ ಮಹಾಮನೆಯನ್ನು ಕಟ್ಟಿದರು. ಅಲ್ಲಿ ಅನುಭವ ಮಂಟಪವೆಂಬ ಚಿಂತನಾ ವೇದಿಕೆಯಲ್ಲಿ ಅಲ್ಲಮಪ್ರಭುಗಳಂಥ ಮೇಧಾವಿಯವರನ್ನು ಶೂನ್ಯಪೀಠದ ಅಧ್ಯಕ್ಷರನ್ನಾಗಿ ಮಾಡಿದರು. ಜ್ಞಾನವೆಂಬ ಬೆಳಕನ್ನು ಪಸರಿಸಿದ ಬಸವಣ್ಣನವರು ಅಕ್ಷರವನ್ನು ಪ್ರತಿಯೊಬ್ಬರಿಗೂ ಕಲಿಸಿದರು.
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ?
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-143)
“ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು” ಎಂದು ಬಸವಣ್ಣನವರು ಅಭಿಮಾನದಿಂದ ನುಡಿಯುತ್ತಾರೆ. ಇಂಥ ಜ್ಞಾನ ಧಾರೆಯು ಲೋಕಕ್ಕೆ ಬೆಳಕನ್ನು ತಂದಿತು. ಆ ಬೆಳಕನ್ನೇ ಜನಪದರು ಶಿವಬೆಳಕೆಂದು ನಾಡಿನಲ್ಲೆಲ್ಲಾ ಸೊಲ್ಲೆತ್ತಿ ಹಾಡಿ ಹರ್ಷಿತರಾದರು. ಭೂಲೋಕದಲ್ಲಿ ಹೊಸದಾದ ಜ್ಞಾನವೆಂಬ ಬೆಳಕು ಎಲ್ಲೆಲ್ಲೂ ಪಸರಿಸಿದ ಸಂದರ್ಭವನ್ನು ಕಂಡು ಜನಪದ ಕವಿ ಮನಸುಗಳು ಹಾಡಿರುವುದು ಇಲ್ಲಿ ಸ್ತುತ್ತ್ಯಾರ್ಹವಾಗಿದೆ.
ಹೊಲೆಯ ಮಾದಿಗರೆಂಬ ಬಲೆಯಾತ
ಕಿತ್ತೊಗೆದ ಛಲದಿ ಬಸವಯ್ಯ ಬಸವರಸ
ನಿನ್ಹೆಸರು ನೆಲೆಯಾತು ನಿತ್ಯ ಜನಪದಕೆ
ಮನುಷ್ಯ ಸಂಘಜೀವಿ. ಅವನಲ್ಲಿ ಭಾವನೆ, ನೋಟ, ದುಃಖ, ಸಂತೋಷ, ರುಚಿ ಎಲ್ಲವೂ ಒಂದೇ. ಆದರೆ ಆಯಾಯ ಪ್ರದೇಶದ ಭಿನ್ನ ಭಿನ್ನವಾದ ಭಾಷೆ, ವೇಷ, ಆಹಾರ ಪದ್ದತಿಯಲ್ಲಿ ವಿಭಿನ್ನವಾಗಿ ರೂಢಿಸಿಕೊಂಡು ಬಂದಿರುತ್ತಾರೆ. ಸಮುದಾಯದಲ್ಲಿದ್ದ ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ಬುಡ ಸಮೇತ ಕಲ್ಯಾಣ ರಾಜ್ಯದಲ್ಲಿ ಕಿತ್ತೊಗೆದವರು ಬಸವಣ್ಣನವರು. ಎಲ್ಲರನ್ನೂ ಬಸವಣ್ಣನವರು ಅಪ್ಪಿಕೊಂಡು ಒಪ್ಪಿಕೊಂಡವರು. ಅವರ ಮನೆಗೆ ಹೋಗಿ ಅಂಬಲಿಯನ್ನು ಕುಡಿದವರು. ದುಡಿಯುವವರ ದುಡಿತ ಸಂದರ್ಭದಲ್ಲಿಯೇ ತಾವು ಅವರ ಮೈದಡವಿದರು. ಇಂಥ ಪ್ರೋತ್ಸಾಹವನ್ನು ಎಂದೂ ಕಾಣದ ಜನಪದ ಮನಸುಗಳು ನಿತ್ಯ ಬಸವಣ್ಣನನ್ನು ನಿನ್ನ ಹೆಸರಿನ ಸ್ಮರಣೆ ಮಾಡಬೇಕು ಎನ್ನುತ್ತಾರೆ. ಜನಪದರ ದುಡಿಮೆಗೆ ಅವರ ಶ್ರಮಕ್ಕೆ, ಘನತೆಯನ್ನು, ಮೌಲ್ಯವನ್ನು, ಗೌರವವನ್ನು ತಂದುಕೊಟ್ಟವರು ಬಸವಣ್ಣವರು ಎಂದು ಜನಪದ ಕಾವ್ಯಗಳಲ್ಲಿ ಮನಸಾರೆ ಹಾಡಿ ಹೊಗಳಿದ್ದಾರೆ.
ಇಂಥ ಜನಪದ ಮನಸ್ಸುಗಳೇ ಮುಂದೆ ಅಕ್ಷರವನ್ನು ಕಲಿತು ವಚನಕಾರರಾಗಿ ಶಿವಶರಣರಾದರು. ಇಷ್ಟಲಿಂಗ ಎಂಬುದು ಅನನ್ಯತೆಯ ಸಂಕೇತ. ಇಷ್ಟಲಿಂಗ ಪಡೆದ ಜನತೆಗೆ ಎಲ್ಲ ಸೂತಕವನ್ನು ಕಳೆದಂತಹ ಅನುಭವ ಧಕ್ಕಿತು. ಆ ಮೂಲಕ ಜನತೆಯ ಘನತೆಯು ಊರ್ಜಿತವಾಯಿತು. ಈ ಎಲ್ಲಕ್ಕೂ ಮೂಲ ಗುರು ಬಸವಣ್ಣನವರು. ಅವರನ್ನು ಅರಿವಿನ ಗುರು ಎಂದೇ ಜನಪದರು ಕರೆದಿದ್ದಾರೆ. ಹಾಗೆಯೇ ಗುರುವಿಲ್ಲದ ಗುಡ್ಡ ನಮ್ಮ ಬಸವಣ್ಣ ಎಂದಿದ್ದಾರೆ. ಆಕಾಶವೆಂಬ ತಂದೆಗೆ, ಭೂಮಿ ಎಂಬ ತಾಯಿಗೆ ಕಾಯಕ ಮತ್ತು ದಾಸೋಹವೆಂಬ ಭಕ್ತಿ ನೆಲೆಯ ಸೇತುವೆಯನ್ನು ಕಟ್ಟಿದವರು ವಿಶ್ವಗುರು ಬಸವಣ್ಣನವರು.
ಒಟ್ಟಾರೆ ಜನಪದರು ತಮ್ಮ ದುಡಿಮೆಯ ದಣಿವನ್ನು ನಿವಾರಿಸಿಕೊಳ್ಳಲು ಹಾಡಿದ್ದಾರೆ. ತಮ್ಮ ಅಭಿವ್ಯಕ್ತಿ ಕೌಶಲವನ್ನು ಈ ಮೂಲಕ ಪ್ರಕಟ ಪಡಿಸಿದ್ದಾರೆ. ತಮ್ಮ ಕೈಕಾಲು ಕೆಲಸ ಮಾಡುವಾಗ ಜನಪದರ ಮನಸ್ಸು ಮತ್ತು ಬುದ್ದಿಯನ್ನು ತಮ್ಮ ಸಾಹಿತ್ಯದ ಮೂಲಕ ಸೃಜನಶೀಲತೆಯೊಂದಿಗೆ ಕ್ರಿಯಾಶೀಲತೆಯನ್ನು ಮೆರೆದಿರುವುದು ಹೆಚ್ಚುಗಾರಿಕೆ. ಇಂಥ ಜನಪದರ ಜ್ಞಾನಧಾರೆಗೆ ನಾವೆಲ್ಲರೂ ಅಭಿಮಾನವನ್ನು ಪಡಲೇಬೇಕು.
ಡಾ. ಸುಜಾತಾ ಅಕ್ಕಿ,
ಮೈಸೂರು.
ಮೋಬೈಲ್ ಸಂ. 99012 85196.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara,in