
ಬಸವ ಬಳ್ಳಿ ಹಬ್ಬಿಸಿ, ಪ್ರವಚನ ಪಿತಾಮಹರಾದ ಮಣಿಗವಳ್ಳಿಯ ಮಾಣಿಕ್ಯ
ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋುತ್ತೆನ್ನಬಹುದೆ?
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ?
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ
ಹೇಳಾ, ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-329)
ಲಿಂಗಾಯತ ಧರ್ಮ ಮತ್ತು ಬಸವ ತತ್ವ ಬೆಳೆಸಲು ಆನೆಯಾಗಿ ಶರಣರ ಚಳುವಳಿಯ ಮಾರ್ಗ ಹಿಡಿದು ಸಾದನೆಯ ಶಿಖರಕ್ಕೇರಿದ ಪೂಜ್ಯ ಲಿಂಗಾನಂದ ಸ್ವಾಮೀಜಿಗಳು ತಮ್ಮ ಪ್ರಖರ ಪ್ರವಚನದ ಮೂಲಕ ಶರಣರ ಬದುಕನ್ನು ಜೀವಂತವಾಗಿ ಸಾಕ್ಷಿಕರಿಸಿದರು. ವಚನ ಸಾಹಿತ್ಯಕ್ಕೆ ಮರುಜನ್ಮ ನೀಡುವಲ್ಲಿ ಹಾಗೂ ಲಿಂಗಾಯತ ಧರ್ಮಕ್ಕೆ ಹೊಸ ಪಥ ಸೃಷ್ಠಿಸುವಲ್ಲಿ ಅವರು ಅನುಭವಿಸಿದ ನೋವು, ಅವಮಾನ, ಕಿರುಕುಳ ಹೇಳಲು ಅಸಾಧ್ಯ. ಅವರ ಬಸವ ತತ್ವದ ಕಾರ್ಯದಲ್ಲಿ ನಿತ್ಯ ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಅಷ್ಟೊಂದು ಕಷ್ಟ, ಕಾರ್ಪಣ್ಯ ಹಾಗೂ ಪರಿಶ್ರಮದ ಮೂಲಕ ಲಿಂಗಾಯತ ಧರ್ಮಕ್ಕೆ ಸ್ಫೂರ್ತಿ ನೀಡಿದ್ದು ನಿಜಕ್ಕೂ ಅವಿಸ್ಮರಣೀಯ!
ಮೂಲತಃ ವಿಜಯಪುರ ಜಿಲ್ಲೆಯ ಅಂದಿನ ಮಣಿಗವಳ್ಳಿಯ ಇಂದಿನ ಮನುಗೂಳಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಕುಟುಂಬದ ಮಲ್ಲಪ್ಪ ಮತ್ತು ಕಲ್ಲಮ್ಮ ಕಪ್ಪರದ ದಂಪತಿಗಳ ಪುತ್ರರಾಗಿ 15.09.1931 ರಂದು ಗಣೇಶ ಚತುರ್ಥಿಯ ದಿನ ಜನಿಸಿದರು. ಹುಟ್ಟೂರಲ್ಲಿ ಪ್ರಾಥಮಿಕ ಹಾಗೂ ವಿಜಯಪುರದ ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಆಗ ರಾಜ್ಯದಲ್ಲಿ ಸ್ವಾತಂತ್ರ್ಯ ಚಳುವಳಿ ಕಾವೇರಿತ್ತು. ಭೂಗತರಾದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯಕರಾಗಿದ್ದ ಸಂಗಮೇಶ ಕಪ್ಪರದ, ಕ್ರಮೇಣ ಸ್ವಾತಂತ್ರ್ಯ ಯೋಧರ ಒಟನಾಟದಿಂದ ಬೆಳಗಾವಿ ಲಿಂಗರಾಜ ಕಾಲೇಜು ಪ್ರವೇಶಿಸಿ ತಮ್ಮ ಬಿ. ಎ ಪದವಿ ವ್ಯಾಸಂಗಕ್ಕೆ ತೊಡಗಿದರು. ಸಂಗಮೇಶ ಬೆಳಗಾವಿಯಲ್ಲಿ ಕಾರ್ಲಮಾರ್ಕ್ಸನ ಕಮ್ಯೂನಿಸಂ ಸಿದ್ಧಾಂತಕ್ಕೆ ಮಾರುಹೋದರು. ಆ ತತ್ವದಿಂದ ನಾಸ್ತಿಕರಾಗಿ ಸಾಮಾಜಿಕ ಅಂಧಶ್ರದ್ಧೆಗಳ ಬಗ್ಗೆ ತೀವ್ರ ಬೇಸರಗೊಂಡರು. ಭೂಮಿಯ ಮೇಲೆ ದೇವರಿಲ್ಲ. ತನ್ನ ಸ್ವಾರ್ಥ ಸುಖದ ಬದುಕಿಗಾಗಿ ಮಾನವರು ಸೃಷ್ಠಿಸಿಕೊಂಡಿದ್ದೆಲ್ಲವೂ ಶಾಶ್ವತವಲ್ಲ ಎಂದು ತಿಳಿದು ವಾದಿಸತೊಡಗಿದರು. ವಾರಕ್ಕೊಮ್ಮೆ ಸ್ನಾನ ಗೈಯ್ಯುತ್ತಿದ್ದ ಸಂಗಮೇಶ ನಿತ್ಯ ಶುಭ್ರ ಬಟ್ಟೆ ಧರಿಸುತ್ತಿರಲಿಲ್ಲ. ಭಸ್ಮ ಮತ್ತು ರುದ್ರಾಕ್ಷಿ ಧಾರಣೆ ತಿಳಿದಿರಲಿಲ್ಲ. ಆಸ್ತಿಕರ ಆರಾಧನೆ ಮತ್ತು ಪ್ರಾರ್ಥನೆಗಳನ್ನು ವಿರೋಧಿಸಿ, ಅವರಿಂದ ದೂರ ಉಳಿಯುತ್ತಿದ್ದರು.
ಅದೇ ಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ರಾಜಗೋಪಾಲ ಅವರು ಒಂದಿನ ಸಂಗಮೇಶರನ್ನು ತಮ್ಮ ಬಳಿ ಕರೆದು ಮಾರ್ಮಿಕ ಉಪದೇಶ ನೀಡಿದ್ದರು. ಅದರ ಪರಿಣಾಮವಾಗಿ ನಾಸ್ತಿಕರಾಗಿದ್ದ ಸಂಗಮೇಶ ಆಸ್ತಿಕರಾಗಿ ಪರಿವರ್ತನೆಗೊಂಡರು. ಪದವಿ ಪೂರೈಸಿದ ಬಳಿಕ ವಿಜಯಪುರದಲ್ಲಿ ಮನೆ ಪಾಠ (ಟ್ಯೂಷನ್) ಹೇಳಿ ಉಪಜೀವನ ಮಾಡುತ್ತಿದ್ದರು. ಕ್ರಮೇಣ ವಿಜಯಪುರದ ಪ್ರೌಢ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷಕರಾಗಿ ನೇಮಕವಾಗಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಅಂದಿನ ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಸ್ವಾಮಿಗಳವರ ಪ್ರವಚನ ಕೇಳಲು ತೊಡಗಿದರು. ಅವರ ಸ್ನೇಹಿತನೋರ್ವ ಸ್ವಾಮೀಜಿ ದರ್ಶನಕ್ಕೆ ಬಂದು, ಸಂಗಮೇಶ ಕಪ್ಪರದ ಬಸವ ತತ್ವ ಅನುಸರಿಸುತ್ತಿಲ್ಲ, ಲಿಂಗಾರ್ಚನೆ ಮಾಡುತ್ತಿಲ್ಲವೆಂದು ಚಾಡಿ ಹೇಳಿದ್ದಕ್ಕೆ, ಸ್ವಾಮೀಜಿ ಸಂಗಮೇಶರಿಗೆ ತಮ್ಮ ಆಶ್ರಮದಲ್ಲೇ ಸ್ನಾನಗೈಯ್ಯಲು, ತಮ್ಮ ಎದುರಲ್ಲೇ ಇಷ್ಟಲಿಂಗ ಪೂಜಿಸಲು ತೊಡಗಿಸಿದ್ದರು. ಕೆಲವು ದಿನಗಳಾದ ನಂತರ ನಿತ್ಯ ಇಷ್ಟಲಿಂಗ ಪೂಜೆಯಿಂದ ಏನಾಗುತ್ತಿದೆ ಎಂದು ಕೇಳಿದಾಗ, “ಆನಂದ” ಆಗುತ್ತಿದೆ ಎಂದು ಉತ್ತರಿಸಿದನು. ಅಂದಿನಿಂದ ಸಂಗಮೇಶ ಬದಲಾಗಿ ನೀ “ಲಿಂಗಾನಂದ” ಆಗು ಎಂದು ಹೆಸರನ್ನು ಬದಲಿಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ. ಎ ತತ್ವಶಾಸ್ತ್ರ ಅಧ್ಯಯನಕ್ಕಾಗಿ ಶಿಫಾರಸುಗೊಳಿಸಿದರಂತೆ.
ಧಾರವಾಡದಲ್ಲಿದ್ದಾಗ ನವಕಲ್ಯಾಣ ಮಠದ ಶ್ರೀಕುಮಾರ ಸ್ವಾಮಿಗಳ ಪ್ರಭಾವ ಬೆಳೆದು, ಲಿಂಗಾನಂದರು (ಸಂಗಮೇಶ) ಕ್ರಮೇಣ ಖಾವಿ ಧರಿಸಿ, ತಮ್ಮ ಸ್ನೇಹಿತರಿಗೆ ಹಾಗೂ ಮಠದ ಭಕ್ತರಿಗೆ ಮುಜುಗರಗೊಳಿಸುತ್ತಿದ್ದರಂತೆ. ಶ್ರೀ. ಕುಮಾರಸ್ವಾಮಿಗಳ ಪ್ರವಚನ ಆಲಿಸುತ್ತ ಸಂತನಂತೆ ವಿವಿಧಡೆ ಸಂಚರಿಸಿದರು. 25.04.1955 ರ ಬಸವ ಜಯಂತಿ ದಿನದಂದು ಆಧಾತ್ಮಿಕ ಮಾನಸ ಸಂತರಾದರು. 19.11.1956 ರಿಂದ ನಿರಂತರ ಪ್ರವಚನ ಕಾರ್ಯದಲ್ಲಿ ತೊಡಗಿದರು. ಸ್ವಪ್ರೇರೆಣೆಯಿಂದ ಸಂಸಾರಿಕ ಜೀವನ ತೊರೆದು “ಲಿಂಗಾನಂದ ಸ್ವಾಮಿ” ಗಳಾದರು. 07.08.1961 ರಂದು ಮೈಸೂರು ಪ್ರಾಂತ್ಯದ ಸುತ್ತೂರು ಮಠದ ಅಂದಿನ ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳಿಂದ “ಜಂಗಮ (ಸನ್ಯಾಸ) ದೀಕ್ಷೆ” ಪಡೆದರು.
ಅದು 1962 ನೆ ವರ್ಷ ಇರಬಹುದು. ದಾವಣೆಗೇರೆಯ ಚನ್ನಗಿರಿ ರಂಗಪ್ಪ ಕಲ್ಯಾಣ ಮಂಟಪದಲ್ಲಿ ಲಿಂಗಾನಂದ ಸ್ವಾಮೀಜಿಯವರು ಪ್ರಭುಲಿಂಗ ಲೀಲೆ ಕುರಿತು ಪ್ರವಚನ ಮಾಡುತ್ತಿದ್ದರು. ಅಪಾರ ಲಿಂಗಾಯತ ಭಕ್ತ ಸಮೂಹ ನೆರೆದಿತ್ತು. “ಜಂಗಮ” ವಿಷಯ ಕುರಿತು ಹೇಳುತ್ತಿದ್ದಾಗ ಅನಾಮಿಕ ಕುಹಕಿಯೋರ್ವ ಕಲ್ಲು ತೂರಿದ. ಆ ಕಲ್ಲು ಪ್ರವಚನ ನಿರತ ಲಿಂಗಾನಂದ ಸ್ವಾಮೀಜಿಯ ಹಣೆಗೆ ತಟ್ಟಿ, ತೀವ್ರ ರಕ್ತ ಸ್ರಾವವಾಗಿಸಿತು. ತಮ್ಮ ಕೈವಸ್ತ್ರದಿಂದ ಹಾಗೆ ಹಿಡಿದು ಹೇಳಬೇಕಾದ ಜಂಗಮ ಮೂಲದ ಕುರಿತಾದ ಪ್ರವಚನ ಪೂರ್ಣಗೊಳಿಸಿದ್ದರು.
ಎತ್ತೆತ್ತ ನೋಡಿದಡೆ ಬಸವಣ್ಣನೆಂಬ ಬಳ್ಳಿ,
ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು.
ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ,
ಭಕ್ತಿರಸಮಯವಾಯಿತ್ತಯ್ಯಾ.
ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು?
ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು?
ಬಸವಗುರು[ವೆ] ಎನ್ನ ಕರಸ್ಥಲದ ಲಿಂಗದ
ಆದಿಯನರುಹಿ ತೋರಿದ ಕಾರಣ,
ಗುಹೇಶ್ವರಲಿಂಗದ ನಿಲವ ನಿನ್ನಿಂದಲರಿದೆ,
ಈ ಲೋಕಾದಿಲೋಕಂಗಳೆಲ್ಲವು
ಎನ್ನ ಮುಖದಲ್ಲಿ ಕಿಂಚಿತ್ತು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-362/ವಚನ ಸಂಖ್ಯೆ-968)
ಹೀಗೆ ನಿರಂತರ ಪ್ರವಚನ ಕಾರ್ಯದಲ್ಲಿ ತೊಡಗಿ ಪ್ರವಚನ ಪಿತಾಮಹರಾದರು. ಅಪೂರ್ವ ವಾಗ್ಮಿಯಾಗಿ ಅಭಿನವ ವಿವೇಕಾನಂದ ಎನಿಸಿದರು. 21.04.1970 ರಂದು ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಸ್ಥಾಪಿಸಿ, ಮಾತೆ ಮಹಾದೇವಿಯವರನ್ನು ನೇಮಿಸಿದರು. 1988 ರಿಂದ ಕೂಡಲಸಂಗಮದಲ್ಲಿ ಶರಣ ಮೇಳ ಆಯೋಜಿಸುತ್ತ, 13.01.1972 ರಂದು ಬಸವ ಧರ್ಮ ಪೀಠ ಸ್ಥಾಪಿಸಿದರು. 1960 ರಲ್ಲಿ ಧಾರವಾಡದಿಂದ ಸುಯಿದಾನ ಸುಗ್ರಂಥ ಎಂಬ ಶರಣ ಸಾಹಿತ್ಯದ ಪ್ರಕಾಶನ ಆರಂಭಿಸಿ, 250 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದರು. ಅವರ ಹಲವು ಕೃತಿಗಳು ಈಗ 10 ಬಾರಿ ಮರು ಮುದ್ರಣಗೊಂಡಿದ್ದು ಗಮನಿಸಿದರೆ ಅವರ ಸಾಹಿತ್ಯದ ಪ್ರಖರಕ್ಕೆ ಕೈಗನ್ನಡಿಯಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ, ಕುಂಬಳಗೋಡದಲ್ಲಿ ಬಸವಗಂಗೋತ್ರಿ, ಅಖಿಲ ಭಾರತ ಲಿಂಗಾಯತ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಧಾರವಾಡದಲ್ಲಿ ಅಕ್ಕ ಮಹಾದೇವಿ ಆಶ್ರಮ ಸ್ಥಾಪಿಸಿದರು. ವಿಶ್ವ ಕಲ್ಯಾಣ ಮಿಷನ್ ಸಂಸ್ಥೆಯ ಮೂಲಕ ಅವರ ಪ್ರವಚನಗಳ ಧ್ವನಿ, ದೃಶ್ಯ, ಶ್ರಾವ್ಯ ಸುರುಳಿಗಳು ಪ್ರಕಟವಾಗುತ್ತಿವೆ.
ಹೀಗೆ ಲಿಂಗಾಯತ ಧರ್ಮ, ಬಸವ ತತ್ವ ಹಾಗೂ ಶರಣ ಸಾಹಿತ್ಯವನ್ನು ಉಛ್ರಾಯಗೊಳಿಸುತ್ತ, ಹಿರಿಯೂರಿನಲ್ಲಿ ಪ್ರವಚನ ನಿರತರಾದ ಸಂದರ್ಭದಲ್ಲಿ 31.06.1995 ರಂದು ಉರಿಯುಂಡ ಕರ್ಪೂರದಂತೆ ಪ್ರಾಣತ್ಯಾಗಗೈದು, ಬಸವೈಕ್ಯವಾದರು. ಪ್ರತಿ ಗಣೇಶ ಚತುರ್ಥಿಯ ದಿನ ತಮ್ಮ ಜನ್ಮ ದಿನವಾಗಿದ್ದು ಅಂದು ರಾಷ್ಟ್ರೀಯ ಬಸವ ದಳದ ಸಂಸ್ಥಪನಾ ದಿನವನ್ನಾಗಿ ಆಚರಿಸಲು ಅವರೆ ಆರಂಭಿಸಿದರು.
ಆಧಾರ ಗ್ರಂಥಗಳು:
- ಧರ್ಮ ಕ್ರಾಂತಿಯ ಧೀರಯೋಗಿ, ಪೂಜ್ಯಶ್ರೀ ಜಗದ್ಗುರು ಮಾತೆ ಮಹಾದೇವಿ.
- ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು: ವಿಶ್ವನಾಥ ಕೋರೆ.
- ಲಿಂಗಾನಂದ ಸ್ವಾಮೀಜಿ ಜನ್ಮ–ಲಿಂಗಾಯತ ಧರ್ಮದ ಪುನರ್ಜನ್ಮ: ಸಚ್ಚಿದಾನಂದ ಚಟ್ನಳ್ಳಿ.
- ಬಸವ ಯುಗಕ್ಕೆ ನಾಂದಿ ಹಾಡಿದ ಚೇತನಾ ಶಕ್ತಿ: ಶ್ರೀಧರ ಗೌಡರ.
- ಪ್ರವಚನ ಪಿತಾಮಹರಾಗಿ ಲಿಂಗಾನಂದ ಸ್ವಾಮಿಜಿ: (www.basavadharmapeetha.org)
ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993