ಪ್ರಾಣಲಿಂಗ ಸ್ಥಲ – ಪ್ರಾಣಲಿಂಗಕ್ಕೆ ಕಾಯವೆ ಸಜ್ಜೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಷಟ್ ಸ್ಥಲಗಳಲ್ಲಿ ನಾಲ್ಕನೆಯ ಸ್ಥಲವಾದ ಪ್ರಾಣಲಿಂಗಸ್ಥಲ ಶರಣ ಧರ್ಮವನ್ನು ಬಿಂಬಿಸುವ ವಿಶಿಷ್ಟ ಸ್ಥಲವಾಗಿದೆ. ಪ್ರಾಚೀನ ಅದ್ವೈತ ಧರ್ಮದಲ್ಲಿ ಶಂಕರಾಚಾರ್ಯರು ಹೇಳುವ “ಅಹಂ ಬ್ರಹ್ಮಾಸ್ಮಿ” ತತ್ವಕ್ಕೆ ಈ ಸ್ಥಲವನ್ನು ಹೋಲಿಸಬಹುದು. ಶರಣರು ಹೇಳುವ ಪ್ರಾಣಲಿಂಗಿ ಸ್ಥಲವು ಪ್ರಾಣವನ್ನು ಲಿಂಗವನ್ನಾಗಿಸಿ ಕೊಳ್ಳುವ ಪ್ರಕ್ರಿಯೆ ಎಂಬುದು ಗಮನಾರ್ಹ. ಅಲ್ಲಮಪ್ರಭು ಹೇಳುವಂತೆ ಲಿಂಗ ಸಾಧಕರೆಲ್ಲಾ ಭೂ ಬಾಧಕರಾದರು. ಅಂದರೆ ಅಂಗವು ಲಿಂಗವಾಗಿ ದೂರವುಳಿದರೆ ಸಮಾಜಕ್ಕೆ ಪ್ರಯೋಜನವೇನು? ಅದು ಮುಂದುವರಿದು ಸಮಾಜದ ಜಂಗಮದಲ್ಲಿ ಒಂದಾಗಬೇಕು ಏಕವಾಗಬೇಕು. ಅರವಿಂದ ಘೋಷರು ಅಂಗವನ್ನು ಲಿಂಗವಾಗಿಸಿ ಕೊಂಡಿದ್ದರು. ಗಾಂಧೀಜಿಯವರು ಮುಂದುವರಿದು ಸಮಾಜಮುಖಿಯಾಗಿ ವಿಶಾಲವಾಗಿಸಿದರು. ಬಸವಣ್ಣನವರು ಹೇಳಿದಂತೆ ಅರವಿಂದ ಘೋಷರಾಗುವುದಲ್ಲ. ಗಾಂಧೀಜಿಯಾಗುವುದನ್ನು. ಒಟ್ಟಾರೆ ಪ್ರಾಣಲಿಂಗಿ ಸ್ಥಲದ ಅಧ್ಯಯನವೇ ಶರಣ ಸಮಾಜದ ಅಧ್ಯಯನವಾಗಿದೆ.

ಪ್ರಾಣ ಲಿಂಗವೆಂಬ ಮಾತೆ ಶರಣ ಧರ್ಮದ ಮೇರುತನವನ್ನು ಸೂಚಿಸುವ ತಾತ್ವಿಕ ಅನುಸಂಧಾನವಾಗಿದೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳು ಶರಣರ ಆಂತರಿಕ ಅನುಭಾವ ಪ್ರಜ್ಞೆಯಾಗಿದೆ. ಲಿಂಗದಲ್ಲಿ ಪ್ರಾಣವಿರಿಸಿ ಪ್ರಾಣದಲ್ಲಿ ಲಿಂಗವಿರಿಸಿ ನೆನೆವುತ್ತಿದ್ದೆ ಕಾರಣ ಪ್ರಾಣಲಿಂಗವಾಗಿದೆ. ಪ್ರಾಣಲಿಂಗದಲ್ಲಿ ಉಪಾಸನೆ ಮಾಡುವುದರಿಂದ ಮನಸ್ಸು ಮನೋಲಯವಾದತ್ತದೆ. ಲಿಂಗ ಜ್ಯೋತಿ ಗೋಚರವಾಗುವ ಯೋಗ ಸಾಧನೆಯ ಪ್ರಮುಖ ಘಟ್ಟ ಇದಾಗಿದೆ. ಕರಸ್ಥಲದ ಲಿಂಗ ಪೂಜೆ ಏಕಾಗ್ರತೆಯ ಚಿತ್ತದಿಂದ ಪ್ರಾಣ ಲಿಂಗಪೂಜೆ ಸಮರ್ಪಿಸಿದಾಗ ಪ್ರಾಣಲಿಂಗ ಭೇದವನ್ನು ಅರಿಯಲು ಸಾಧ್ಯವಾಗುತ್ತದೆ. ಇಷ್ಟಲಿಂಗದ ಬೆಳಕು ಪ್ರಾಣದಲ್ಲಿ ಸಮಾಗಮವಾಗುವ ಚಿತ್ ಪ್ರಭೆ ಸ್ಥಲವೇ ಪ್ರಾಣಲಿಂಗವಾಗಿದೆ.

ಸ್ಥೂಲತನು ಇಷ್ಟಲಿಂಗದಲ್ಲಿ, ಸೂಕ್ಷ್ಮತನುವು ಪ್ರಾಣಲಿಂಗದಲ್ಲಿ, ಕಾರಣ ತನುವು ಭಾವಲಿಂಗದಲ್ಲಿ ಕೂಡಿ ಮೂರುತನುಗಳು ನಷ್ಟವಾಗಿ ಹೋಗುವ ಈ ಮೂರು ಲಿಂಗಗಳು ಒಂದೇ ಎಂದು, ಇದನ್ನೇ  ಶಿವಯೋಗವೆಂದು ಶರಣ ಧರ್ಮದಲ್ಲಿ ಸ್ಪಷ್ಟಪಡಿಸಬಹುದು. ಪ್ರಾಣಲಿಂಗ ಅಧ್ಯಯನ ಶಿವಶಕ್ತಿಯ ವಚನ ಅಧ್ಯಯನವೆನ್ನುವುದೇ ಗಮನಾರ್ಹ.

ಪ್ರಾಣ ಲಿಂಗದ ಪೂಜೆ ಶಿವಶಕ್ತಿಯ ಚೈತನ್ಯದ ಪೀಠವದು. ಅದ್ವೈತ ಮನಸ್ಥಿತಿಯ ದೈವ ಸಮಾಗಮದ ಬೆಳಕಾಗಿದೆ. ಆಕಾಶ ಗಂಗೆಯಲ್ಲಿ ಸ್ನಾನ, ಹೂವಿಲ್ಲದ ಸುಗಂಧದ ಲೇಪನ ಹೃದಯ ಕಮಲದಲ್ಲಿ ಶಿವನೆಂಬ ಶಬ್ದ ಅಡಕವಾಗಿರುತ್ತದೆ. ಪ್ರಸಾದಿ ಸ್ಥಲದ ಇಷ್ಟಲಿಂಗೋಪಾಸನೆ. ಬಹಿರಂಗದ ಪೂಜೆ ಅಂತರಂಗದ ನಿರ್ಮಲ ಪೂಜೆ. ಪರಂಜ್ಯೋತಿಯಡೆಗೆ ಹೋಗುವ ಮನಸ್ಥಿತಿಯದು.

ಐತರೇಯೋಪನಿಷನಲ್ಲಿ ಆತ್ಮವು ತಲೆಯ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ದೇಹವನ್ನು ಪ್ರವೇಶಿಸಿದ ಆತ್ಮವು ಮೆದುಳಿನ ಮೂರನೇ ಕುಹರದ ಪೀನಲ್ ಗ್ರಂಥಿಯಲ್ಲಿ ಸ್ಥಾನ ಪಡೆದಿರುತ್ತದೆ. ಈ ಪೀನಲ್ ಆತ್ಮದ ಸ್ಥಾನವಾಗಿದೆ. ಇದನ್ನು ವಿಶ್ವ ಪ್ರಜ್ಞೆಯ ಸ್ಥಾನವೆಂದು ಇದನ್ನು ಶಿವಯೋಗದಲ್ಲಿ ಮಹಾಲಿಂಗವೆಂದು ಕರೆಯಲಾಗುತ್ತದೆ. ಪ್ರಾಣಲಿಂಗದ ಬಗ್ಗೆ ವ್ಯಾಖ್ಯಾನಿಸುವಾಗ ಅದ್ವೈತ ಪ್ರಜ್ಞೆಯ ಸೂಕ್ಷ್ಮತೆ ನಮ್ಮ ಶರಣ ಧರ್ಮದ  ಪ್ರಾಣಲಿಂಗಕ್ಕೆ ಇದೆ.

ದೇಹದ ಸಂವೇದನಾಶೀಲ ಇಂದ್ರಿಯಗಳೆಂದರೆ ಪಂಚೇಂದ್ರಿಯಗಳಾಗಿವೆ. ದೃಷ್ಟಿ, ಶ್ರವಣ, ಸ್ಪರ್ಶ, ರುಚಿ, ವಾಸನೆಗಳು ಭಕ್ತಿ, ಜ್ಞಾನ, ಕ್ರಿಯೆಗಳ ಮೂಲಕ ಪಂಚೇಂದ್ರಿಯಗಳು ಲಿಂಗೇಂದ್ರಿಯಗಳಾಗುತ್ತವೆ. ಇಂತಹ ಅದ್ವೈತ ಪ್ರಜ್ಞೆಯು ನಿಗೂಢವಾದರೂ ಸತ್ಯವಾದವುಗಳಾಗಿವೆ. ದಾಸೋಹದ ಸಂಗಣ್ಣನು ಹೇಳುವಂತೆ “ಭಕ್ತಂಗೆ ಕ್ರೀ ಮಹೇಶ್ವರಂಗೆ ನಿಶ್ಚಯ ಪ್ರಸಾದಿಗೆ ಅರ್ಪಣೆ ಪ್ರಾಣ ಲಿಂಗಿಗೆ ಯೋಗ ಶರಣಂಗೆ ನಿಬ್ಬೆರಗು ಐಕ್ಯಂಗೆ ನಿರ್ಲೇಪ” ಪ್ರಾಣಲಿಂಗಸ್ಥ ಲ ಯೋಗಾಭ್ಯಾಸದ ವಿಶೇಷ ತತ್ವ ಮಾರ್ಗದ ಕೊನೆಯ ಅವಸ್ಥೆಯಾಗಿದೆ.

ಪ್ರಭು ಪ್ರಾಣಲಿಂಗ ಸ್ಥಲದ ವಾಸ್ತವ ಸತ್ಯವನ್ನು ಹೇಳುತ್ತಾರೆ. ಅಂದು ಅಧ್ಯಾತ್ಮ ಎನ್ನುವುದು ವ್ಯಾವಹಾರಿಕ ಬಂಡವಾಳವಾಗಿತ್ತು. ಯಾಂತ್ರಿಕ ಬದುಕಿನ ಮಾನಸಿಕ ಅಸ್ವಸ್ಥತೆ ಕಾರಣವಾಗಿ ಅಂಗ ಲಿಂಗದ ಅರಿವು ಕುರುಹುಗಳನ್ನು ನಿರ್ಲಕ್ಷಿಸಿದ್ದರು. ವೃತಗೇಡಿಗಳೇ ಹೆಚ್ಚಾಗಿರುವ ಸಮಾಜದಲ್ಲಿ ಧರ್ಮದ ಮುಖವಾಡ ಹಾಕಿಕೊಂಡು ನೈತಿಕತೆಯನ್ನು ಮರೆತಿದ್ದರು. ಕಿವಿಯಲ್ಲಿ ಪ್ರಣವ ಮಂತ್ರವನ್ನು ಉಪದೇಶಿಸಿ ಭವಿಯಿಂದ ಭಕ್ತನನ್ನಾಗಿಸಿದ ಗುರು ಸದಾಚಾರ ಧರ್ಮವನ್ನೇ ಮರೆತಿದ್ದನು. ಇದನ್ನೇ ಪ್ರಭು ಹೇಳುವುದು ಪ್ರಾಣಲಿಂಗದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತುಗಳು ಕೇಳಲಾಗದು. ಪ್ರಾಣಲಿಂಗದಲ್ಲಿ ಪ್ರಾಣಶಕ್ತಿಯನ್ನು ತುಂಬಬೇಕು. ಕಾಯದ ವಿಕಾರ ಗುಣಗಳನ್ನು ಹೋಗಲಾಡಿಸುವ ಶಕ್ತಿ ಪ್ರಾಣಲಿಂಗಕ್ಕೆ ಇದೆ. ಮಲ, ಮೂತ್ರ, ಮಾಂಸ, ಹೇಸಿಗೆಯೊಳಗೆ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ಲಿಂಗ ತತ್ವವೆಂಬ ತೇಜೋಮಯ ಶಕ್ತಿಯನ್ನು ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಪ್ರಾಣಲಿಂಗಕ್ಕೆ ಜೀವ ಚೈತನ್ಯವ  ನೀಡಿ ಲಿಂಗವಂತರನ್ನಾಗಿಸಿದ ವಿಶಿಷ್ಟತೆಯನ್ನು ಅಲ್ಲಮಪ್ರಭುಗಳು ಮನದಟ್ಟು ಮಾಡಿದ್ದನ್ನು ಕಾಣಬಹುದು. ಪ್ರಾಣಲಿಂಗ ಶೋಧದ ಪ್ರಯತ್ನದಲ್ಲಿ ಶರಣ ಭಾವದಲ್ಲಿ ವಿಲೀನವಾಗುವ ವಿಶಿಷ್ಟ ಯಶಸ್ಸನ್ನು ಕಾಣಲಾಗುತ್ತದೆ.

ಹೀಗಾಗಿ ಅದ್ವೈತ ಸ್ಥಿತಿಯ ಸ್ಥಲ ವರ್ಗೀಕರಣ ಶರಣರ ಆಧ್ಯಾತ್ಮಿಕ ಶೋಧಗಳಾಗಿವೆ. ಭಕ್ತಿಯ ಮೇರು ತನದ ಇಷ್ಟಾರ್ಥಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗುತ್ತವೆ. ನಾವಿಂದು ಆಧ್ಯಾತ್ಮಿಕ ಮಾರ್ಗವನ್ನು ತರ್ಕಿಸುವ ವಿಮರ್ಶಿಸುವ ದೃಷ್ಟಿಕೋನವನ್ನು ಪಡೆದಿದ್ದೇವೆ ಎಂದರೆ ಶರಣ ಪ್ರಜ್ಞೆಯ ಸ್ಥಲಗಳ ತಾತ್ವಿಕತೆಯಾಗಿದೆ. ಏಕೆಂದರೆ ಲಿಂಗ ಮೀಮಾಂಸೆ ವಚನ ಪ್ರಯೋಗದಲ್ಲಿ ಶಿವನ ನಿರಾಕಾರ ತತ್ವವನ್ನು ಪ್ರಾಣಲಿಂಗವನ್ನು ದೈವವಾಗಿ ಹಿಡಿದಿಡುವ ಉದ್ದೇಶದಲ್ಲಿ ಸಾರ್ಥಕ್ಯ ಯಶಸ್ಸನ್ನು ಪಡೆಯಿತು.

ಹುಟ್ಟು ಸಾವುಗಳ ನಿರಂತರ ಪ್ರಕ್ರಿಯೆಯಲ್ಲಿ ಪಾಪ ಪುಣ್ಯ ಮಾನ ಅಪಮಾನಗಳು ಮನುಷ್ಯನನ್ನು ಕಾಡುತ್ತವೆ. ಸಾವಿನ ನಂತರ ಬದುಕಿದೆ ಎಂಬ ಕಲ್ಪನೆ ಕೆಲವರಿಗೆ ಶಾಪ. ಮತ್ತೆ ಜನ್ಮ ಪಡೆಯದಂತೆ ಮಾಡು ತಂದೆ ಎಂಬ ನಿವೇದನೆ  ಶರಣರದು. ಲಿಂಗ ತನು, ಲಿಂಗ ದೇಹ, ಸೂಕ್ಷ್ಮಶರೀರ ಇವು ಲಿಂಗ ಶರೀರದ ಪದಗಳಾದರೆ, ಮನುಷ್ಯನ ಸುಖ ದುಃಖಾದಿಗಳು ಲಿಂಗ ಶರೀರಕ್ಕೆ ಹೊರತು ಆತ್ಮನಿಗಲ್ಲ. ಸಾವು ಜ್ಞಾನೋದಯಕ್ಕೆ ಕಾರಣವೆಂಬ ಅಂಶವನ್ನು ಶರಣರು ಒತ್ತಿ ಒತ್ತಿ ಹೇಳಿದ್ದಾರೆ. ಸಾವಿನ ಎದುರು ವಿನೀತರಾಗಿ ಶರಣೆಂದವರು ವಚನಕಾರರಾಗಿದ್ದರು.

ಸಾವಿನ ಕುರಿತು ಹೇಳುತ್ತಲೇ ಬದುಕಿನ ಸಂಘರ್ಷವನ್ನು ಬೆರಗಾಗುವಂತೆ ಹೇಳಲು ಪ್ರಯತ್ನಿಸಿದರು. ಲಿಂಗೈಕ್ಯ ಎಂಬ ಪದವೇ ಶರಣರು ಸಾವಿನ ಪವಿತ್ರತೆಯನ್ನು ಸ್ಪಷ್ಟಪಡಿಸಿದ್ದರು. ಬಯಲಲ್ಲಿ ಬಯಲಾದ ಬಳಿಕ ಲಿಂಗದೊಳಗಾದ ಭಾವ ಕುರಿತು ಅಪಾರವಾದ ಗೌರವವನ್ನು ಹೊಂದಿದ್ದರು.

ಕರ್ತಾರನ ಕಮ್ಮಟದ ಕುಲುಮೆಯಲ್ಲಿ ಬೆಂದಾಗ ತಾನೇ ಲಿಂಗೈಕ್ಯನಾಗಲು ಸಾಧ್ಯ. ಕ್ಷಣದ ಬದುಕಷ್ಟೇ ಸತ್ಯ. ಹುಟ್ಟು ಸಾವಿನ ಮಧ್ಯದಲ್ಲಿ ಪಾಪ ಪುಣ್ಯ ಮಾನ ಅಪಮಾನ ಯಾವುದು ಕಾಡುವುದಿಲ್ಲ. ಕಷ್ಟ ಸುಖ ನೋವು ಸಂಕಷ್ಟ ಅಸಮಾಧಾನಗಳ ಸಮ್ಮಿಶ್ರಣದ ಬದುಕಿನಲ್ಲಿ ಕಾಯಕ ದಾಸೋಹ ಪ್ರಸಾದ ಲಿಂಗ ಪರಿಕಲ್ಪನೆಯಲ್ಲಿ ಪ್ರಾಣಲಿಂಗಕ್ಕೆ ದೈವತ್ವದ ಪವಿತ್ರತೆಯನ್ನು ಕಟ್ಟಿಕೊಟ್ಟರು ಶರಣರು.

ಕರ್ತಾರನ ಕುಮ್ಮಟದ ಕುಲುಮೆಯಲ್ಲಿ ಬೆಂದು ಕೊನೆಯಾದಾಗ ತಾನೇ ಲಿಂಗೈಕ್ಯನಾಗಲು ಸಾದ್ಯ. ಪ್ರಾಣಲಿಂಗ ಸ್ಥಲದಲ್ಲಿ ಆತ್ಮಸ್ಥಲ ಅಂಗಲಿಂಗಸ್ಥಲವಿರುವುದರಿಂದ ಶರಣರ ಮಾರ್ಗವೇ ಸತ್ಯವಾದ ಮುಕ್ತಿಯ ಮಾರ್ಗವಾಗಿದೆ.

ಅಂಗಲಿಂಗ ಪ್ರಾಣಲಿಂಗ ಪೂಜೆ ಲಿಂಗಾಂಗ ಸಾಮರಸ್ಯವದು. ಒಂದಕ್ಕೊಂದು ಸಾಮರಸ್ಯ ಎಂದು ಹೇಳಿದರೆ ಸಾಲದು. ಹೃತ್ಕಮಲದಲ್ಲಿ ಧ್ಯಾನಿಸುವ ಭಾವನಾ ಲಿಂಗವೇ ಪ್ರಾಣಲಿಂಗ. ಲಿಂಗವೇ ಶಿವ. ಹೀಗಾಗಿ ಪ್ರಾಣಲಿಂಗ ತತ್ವದ ತಿರುಳು ಏನಾಗಿರಬಹುದು ಎಂಬುದನ್ನು ಸ್ಪಷ್ಟಪಡಿಸಬೇಕು. ಏಕೆಂದರೆ ಪ್ರಾಣಲಿಂಗ ಕುರಿತು ಸಾಕಷ್ಟು ವಚನಗಳು ನಮಗೆ ಸಿಗುತ್ತವೆ. ಲಿಂಗಾಂಗ ಸಾಮರಸ್ಯವೆಂದು ಪ್ರತಿಪಾದಿಸುವ ವಚನಗಳು ಇವೆ.

ಈ ನೆಲೆಯಿಂದ ನೋಡಿದಾಗ ಪಿಂಡಾಂಡ ಬ್ರಹ್ಮಾಂಡದ ಕುರಿತು ಹೇಳುವ ತತ್ವವಾಗಿತ್ತೆ ವಿನಃ ಅದೊಂದು ಪ್ರತಿಮೆಯಲ್ಲ. ಶರಣರು ನಂಬಿದ ಕರಸ್ಥಲದ ಲಿಂಗವು ಕ್ರಿಯಾಧೀನವಾದ ಕುರುಹು ಲಿಂಗಾಚಾರ ಶಿವಾಚಾರದಿಂದ ವಿಮುಖವಾಗಲು ಸಾಧ್ಯವೇ ಇಲ್ಲ. ಕುರುಹು ದೇವರಾಗಿ ಪ್ರಾಣ ಸಂವಾದದೊಂದಿಗೆ ನೈತಿಕ ಎಚ್ಚರಿಕೆಯೂ ಕಂಡು ಬರುತ್ತದೆ. ಇಷ್ಟಲಿಂಗ ಪ್ರಾಣಲಿಂಗ ಭೇದವನಾರು ಬಲ್ಲರು ಹೇಳಾ. ಇಂತಹ ಸೂಕ್ಷ್ಮತೆಗಳು ಸುಪ್ತವಾಗಿ ಕಂಡು ಬಂದರೆ ಅನುಭಾವಿಕ ಪ್ರಜ್ಞೆ ಬೇಕಾಗುತ್ತದೆ. ಆಧ್ಯಾತ್ಮಿಕ ಪ್ರಜ್ಞೆಯೇ ಪ್ರಾಣ. ಜ್ಞಾನದ ಶರೀರ ಪ್ರಾಣ ಶರೀರ.

ಮನುಷ್ಯನ ನೈತಿಕತೆಯೇ ಶರಣ ಧರ್ಮದ ಜೀವಾಳ. ಶರಣರು ಕಂಡುಕೊಂಡ ಪಿಂಡಾಂಡವು ಪ್ರಕೃತಿಯಲ್ಲಿ ಕಾಣುವ ಸತ್ಯವನ್ನು ವಿಶಾಲವಾಗಿಸಿ ನೋಡಿದ್ದಾರೆ. ಪ್ರಕೃತಿಯ ಕಲಾತತ್ವ ಬಹಿರಂಗದ ಸತ್ಯ ಮಾತ್ರವಲ್ಲ. ಅದು ಅಂತರಂಗ ಸತ್ಯದ  ಬಿಂಬವದು. ಇದನ್ನೇ ಅಲ್ಲಮಪ್ರಭುಗಳ ಹೇಳುವುದು:

ಅಹಿಂಸೆಯೇ ಮೊದಲನೆ ಹೂವು. ಇಂದ್ರಿಯ ನಿಗ್ರಹವು ಎರಡನೇ ಹೂವು. ಅಹಂಕಾರವಳಿದು ಶಾಂತನಾಗಿರುವುದು ಮೂರನೇ ಹೂವು. ದೇಹ ಮನಸ್ಸುಗಳ ವ್ಯಾಪಾರವನ್ನು ಬಿಟ್ಟಿರುವುದು ನಾಲ್ಕನೇಯ ಹೂವು. ಸದ್ಭಾವವು ಐದನೇಯ ಹೂವು. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿವುದು ಆರನೆಯ ಹೂವು. ಸತ್ಯ ವಾಕ್ಯವು ಏಳನೆಯ ಹೂವು. ಶಿವಜ್ಞಾನ ಎಂಟನೇ ಹೂವು. ಹೃದಯ ಕಮಲದಲ್ಲಿ ಶಿವ ಶಿವಾ ಎಂಬ ಶಬ್ದ ಇದು ಅದ್ವೈತ ಕಾಣಿರೋ.

ಪ್ರಭುವಿನ ಲಿಂಗಸ್ಥಲದ ಬೆರಗು ಶೂನ್ಯ ಪರಿಕಲ್ಪನೆಯ ಅಸಾಧಾರಣ ಆಧ್ಯಾತ್ಮದ ಪ್ರತಿ ಸೃಷ್ಟಿಯದು. ಇಡೀ ವಿಶ್ವವೇ ಲಿಂಗ ಸ್ವರೂಪವಾದಾಗ ಅದರ ಚಿಕ್ಕದಾದ ಪಿಂಡಾಂಡ ಆಕೃತಿಯಲ್ಲಿ ಭಿನ್ನ ಆಧ್ಯಾತ್ಮದ ಆಯಾಮಗಳ ಮೂಲಕ ಸ್ಪಷ್ಟಪಡಿಸಿದರು. ಕ್ಷಮೆಯೆಂಬ ಜಲದಿಂದ ಅಭಿಷೇಕ. ನಿತ್ಯಾನಿತ್ಯ ವಿವೇಕವು ವಸ್ತು. ಸತ್ಯ ಆಭರಣ. ವೈರಾಗ್ಯವು ಹೂಮಾಲೆ. ಸಮಾಧಿಯು ಗಂಧ. ನಿರಹಂಕಾರವು ಅಕ್ಷತೆ. ಶ್ರದ್ಧೆಯು ಧೂಪ. ಮಹಾಜ್ಞಾನವು ದೀಪ. ಭ್ರಾಂತಿ ಮೂಲವಾದ ದೇಹಾದಿಗಳ ನಿವೇದನೆ ನೈವೇದ್ಯ. ವಿಷಯಗಳ ಆಕರ್ಷಣೆ ತಾಂಬೂಲ. ಭ್ರಾಂತಿಯನ್ನು ಬಿಡುವುದು ಪ್ರದಕ್ಷಿಣೆ. ಪ್ರಾಣಲಿಂಗಾಸಕ್ತಿ ನಮಸ್ಕಾರ. ಅಂತಃಕರಣದ ಈ ಮನಸ್ಸಿನಲ್ಲಿ ಪರವಸ್ತು ಸೂಕ್ಷ್ಮವಾಗಿರುತ್ತದೆ. ಅದನ್ನು ನೆನೆಯಲು ಮನಸ್ಸು ಶಾಂತವಾಗಿರಬೇಕು. ಭಾವಲಿಂಗ ಪ್ರಾಣಲಿಂಗಗಳು ಆತ್ಮಲಿಂಗವಾದಾಗ ಅದ್ವೈತವಾಗುತ್ತದೆ. ಶರಣರ ಲಿಂಗಾಸಕ್ತಿಯ ಅಧ್ಯಯನ. ಪ್ರಾಣಲಿಂಗದ ಸಖ್ಯ ಅನುಭಾವದ ಸಂಗ ಇವೆರಡನ್ನು ತುಂಬಾ ಆಪ್ತವಾಗಿ ನಮ್ಮೊಂದಿಗೆ ತೆರೆದಿಟ್ಟಿದ್ದಾರೆ.

ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.
ಮೋಬೈಲ್‌ ನಂ. +91 94499 46839

Loading

Leave a Reply