
ಆದಿಯುಗದಲ್ಲೊಬ್ಬಳು ಮಾಯಾಂಗನೆ,
ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,
ಹೆಡಿಗೆ ತುಂಬ ದೇವರ ಹೊತ್ತುಕೊಂಡು,
ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.
ಎಂದಡೆ ಆ ದೇವರನಾರೂ ಕೊಂಬವರಿಲ್ಲ.
ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,
ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ
ಬದುಕಿದೆನು ಕಾಣಾ, ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-206/ವಚನ ಸಂಖ್ಯೆ-498)
ಹನ್ನೆರಡನೆಯ ಶತಮಾನದ ಮಡಿವಾಳ ಮಾಚಿತಂದೆವರು ಈ ನುಡಿ ಗೌರವದ ಕಾರಣ ಪುರುಷ ಬಸವಣ್ಣನವರ ಜಯಂತಿಯನ್ನು ಎಲ್ಲ ಕಡೆ ಆಚರಿಸುತ್ತಿದ್ದೇವೆ. ಈ ನೆಪದಲ್ಲಾದರೂ ಆ ಜೀವನ ಜ್ಯೋತಿಯ ಸ್ಮರಣೆಯನ್ನು ಜೀವಂತವಾಗಿ ಇಟ್ಟಿದ್ದೇವೆಂಬುದೇ ಒಂದು ಸಮಾಧಾನ.
ಹನ್ನೆರಡನೆಯ ಶತಮಾನದಲ್ಲಿ ಸೃಷ್ಟಿಯಾದ ವಚನೋದ್ಯಾನದ ವಿಚಾರ ಫಲವೃಕ್ಷಗಳಲ್ಲಿ ಕಾಣ ಸಿಗುವ ಒಂದು ಮಾಗಿದ ಫಲ – “ಬದುಕಿದೆನು ಕಾಣಾ” ಎನ್ನುವ ಸೂಳ್ನುಡಿ. ಇದು ನೋಟಕ್ಕೆ ಸರಳವೆಂಬಂತೆ ಕಂಡರೂ ಶರಣ ಮಾರ್ಗಕ್ಕೆ ಮಾತ್ರ ಸನ್ನಿಹಿತವಾದ ಅವಿರಳ ಅನುಭಾವವ ನುಡಿ. ವಚನ ಸಾಹಿತ್ಯದಲ್ಲಿ ವಿಫುಲವಾಗಿ ದೊರೆಯುವ ಈ ಮಾತು ಕೇವಲ ಪದ ಸಮುಚ್ಚಯವಲ್ಲ. ಜೀವನದ ಪರಿಪೂರ್ಣತೆಯನ್ನು ಸಾಂಕೇತಿಸುವ ಪದ ಸಮುಚ್ಚಯ. ಇದರ ಗೊತ್ತು ಇರುವುದು ಸಾಮಾನ್ಯ ಅನುಭಾವದಲ್ಲಲ್ಲ; ಅಸಾಮಾನ್ಯ ಅನುಭಾವದಲ್ಲಿ.
ಈ ಮಾತಿಗೆ “ಸೂಳ್ಳುಡಿ” ಎಂದಿದ್ದೇನೆ. ಸೂಳ್ನುಡಿ ಎಂದರೆ ತತ್ವಜ್ಞಾನದ ಮಾತು. ಆ ಮಾತಿನಲ್ಲಿ ತುಂಬಿಕೊಂಡಿರುವ ಅನುಭವಾಮೃತದ ಸತ್ಯ, ಸತ್ವಗಳಿಗೆ, ಘನತೆ, ಗಾಂಭೀರ್ಯಗಳಿಗೆ ಅರ್ಥ ನೀಡಲು ಪ್ರಯತ್ನಿಸುವ ನನ್ನ ಯಾವ ಮಾತೂ ನೀರಸವೆನಿಸಬಹುದು. ಆದ್ದರಿಂದ ನಾವು ನೇರವಾಗಿ ವಚನೋದ್ಯಾನಕ್ಕೇ ಹೋಗಿ ಆ ರಸಾನುಭವವನ್ನು ಪಡೆಯಬೇಕಾಗುತ್ತದೆ.
“ನಿಮ್ಮಿಂದ ಬದುಕಿದೆನು” ಎಂಬ ಮಾತು ಅನೇಕ ಶರಣರ ವಚನಗಳಲ್ಲಿ ಬಂದಿದೆ. ಈ ಮಾತು ಸದುವಿನಯದ ಸದಾಭಿವ್ಯಕ್ತಿ. ಅನನ್ಯವಾದ ಅನುಭಾವೋಕ್ತಿ. ಇದು ಲೋಕ ವ್ಯವಹಾರದ ಒಂದು ಔಪಚಾರಿಕ ಮಾತಲ್ಲ. ಅರಿತು ಅನುಭಾವಿಸಿದವರ ಕೃತಜ್ಞತೆಯ ನುಡಿ. ಸಜ್ಜನಿಕೆಯ ಸಂಸ್ಕೃತಿ ನುಡಿ. ಮಾತೆಂಬ ಜ್ಯೋತಿರ್ಲಿಂಗ! ಅದರ ಬೆಳಗಿನ ಅನುಭಾವ ಅನಿರ್ವಚನೀಯ. ಅಂತರಂಗಕ್ಕೆ ಮಾತ್ರ ಅದರ ದಿವ್ಯದರ್ಶನ! ಈ ದರ್ಶನಕ್ಕಾಗಿ, ನಮ್ಮ ಶರಣ ತತ್ವಜ್ಞಾನದ ರಸಗಟ್ಟಿಯಂತಿರುವ “ಶೂನ್ಯ ಸಂಪಾದನೆ” ಯ ಪ್ರಾಂಗಣಕ್ಕೆ ಹೋಗಿ ಅಲ್ಲಿ ವ್ಯಾಖ್ಯಾನಗೊಂಡಿರುವ ಒಂದು ಪ್ರಸಂಗವನ್ನು ಅವಲೋಕಿಸೋಣ. ಅದು ಪ್ರಭುದೇವರ ಶೂನ್ಯ ಸಂಪಾದನೆಯಲ್ಲಿ ಬರುವ ಮರುಳಶಂಕರದೇವರ ಪ್ರಸಂಗ.
ಲೋಕ ಜಂಗಮ ಆತ್ಮಜ್ಞಾನಿ ಅಲ್ಲಮಪ್ರಭು ತನ್ನ ಸಂಚಾರ ಮಾರ್ಗದಲ್ಲಿ ಕಂಡ ಕರ್ಮಯೋಗಿ ಸಿದ್ಧರಾಮನನ್ನು ಶಿವಯೋಗಿ ಸಿದ್ಧರಾಮನನ್ನಾಗಿ ಪ್ರಮಾಣಿಸಲು ಅವನನ್ನು ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾನೆ. ಕಲ್ಯಾಣವೆಂದರೆ ಮತ್ತೆಲ್ಲಿ ಹೋಗುವುದು? ಬಸವಣ್ಣನವರ ಮಹಾಮನೆಗೆ ಹೋಗಬೇಕು. ಅಲ್ಲಿಗೆ ಬಂದು ಮಹಾದ್ವಾರದಲ್ಲಿ ಅಲ್ಲಮಪ್ರಭು ಮತ್ತು ಸಿದ್ಧರಾಮ ನಿಂತಿರುವುದು ಲಿಂಗಪೂಜೆಯಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ತಿಳಿಯುತ್ತದೆ. ಅವರನ್ನು ಕರೆದುಕೊಂಡು ಬರಲು ಪರಿಚಾರಕರನ್ನು ಕಳುಹಿಸುತ್ತಾರೆ.
ಅತಿಥಿಗಳನ್ನು ಕರೆಯ ಹೋದ ಹಡಪದ ಅಪ್ಪಣ್ಣ “ಶರಣ ಬಸವಣ್ಣನಟ್ಟಿದನು ಕೃಪೆ ಮಾಡು ಗುರುವೆ” ಎಂದು ಪ್ರಭುದೇವರಲ್ಲಿ ವಿನಯದಿಂದ ಬಿನ್ನವಿಸಿಕೊಳ್ಳುತ್ತಾನೆ. ಆದರೆ ಸುಲಭ ಸಾಧ್ಯನಲ್ಲದ ಆ ಜಂಗಮ ಅಷ್ಟು ಸುಲಭವಾಗಿ ಒಪ್ಪುತ್ತಾನೆಯೆ? “ಹಿರಿಯರು ಬಂದರೆ ಇದಿರೆದ್ದು ಬಾರದವರ ಮನೆಗೆ ಅಡಿಯಿಡೆವು” ಎಂದು ಹೇಳುತ್ತಾನೆ ಅಲ್ಲಮ. ಹಡಪದ ಅಪ್ಪಣ್ಣ ಹಿಂತಿರುಗಿ ಹೋಗಿ ಬಸವಣ್ಣನವರಲ್ಲಿ ವರದಿ ಮಾಡುತ್ತಾನೆ. ಅದಕ್ಕೆ ಬಸವಣ್ಣನವರು “ಭಕ್ತನ ಕಾಯವ ಧರಿಸಿದ ಜಂಗಮ ತನ್ನ ಮಠಕ್ಕೆ ತಾ ಬರಲು ಮುನಿಸುಂಟೆ” ಎಂದು ಹೇಳಿ ಹಡಪದ ಅಪ್ಪಣ್ಣನನ್ನು ಮತ್ತೆ ಕಳುಹಿಸುತ್ತಾರೆ.
ಆದರೇನು? ಪ್ರಭುಗಳು:
ಭಕ್ತ-ಜಂಗಮದ ಸಕೀಲಸಂಬಂಧವನು
ಆರು ಬಲ್ಲರು ಹೇಳಾ?
ಅರ್ಥವನೊಪ್ಪಿಸಿದಾತ ಭಕ್ತನಲ್ಲ,
ಪ್ರಾಣವನೊಪ್ಪಿಸಿದಾತ ಭಕ್ತನಲ್ಲ,
ಅಭಿಮಾನವನೊಪ್ಪಿಸಿದಾತ ಭಕ್ತನಲ್ಲ.
ಅದೇನು ಕಾರಣವೆಂದಡೆ, ಸತ್ಯಸದಾಚಾರಕ್ಕೆ ಸಲ್ಲನಾಗಿ.
ಆ ಭಕ್ತನ ಮನೆಯ ಹೊಕ್ಕು_ಪಾದಾರ್ಚನೆಯ ಮಾಡಿಸಿಕೊಂಡು
ಒಡಲ ಕುಕ್ಕಲತೆಗೆ ಅಶನವನುಂಡು,
ವ್ಯಸನದ ಕಕ್ಕುಲತೆಗೆ ಹಣವ ಬೇಡಿ,
ಕೊಟ್ಟಡೆ ಕೊಂಡಾಡಿ
ಕೊಡದಿರ್ದಡೆ ದೂರಿಕೊಂಡು ಹೋಹಾತ ಜಂಗಮವಲ್ಲ.
ಆದಿ ಅನಾದಿಯಿಂದಲತ್ತತ್ತ ಮುನ್ನಲಾದ,
ಮಹಾಘನವ ಭೇದಿಸಿ ಕಂಡು ಅರಿದು
ಕಾಯದ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ,
ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ.
ಸುಳುಹಿನ ಸೂತಕ ಮೈದೋರದೆ,
ಒಡಲ ಕಳವಳದ ರುಚಿಗೆ ಹಾರೈಸದೆ,
ಅರಿವೆ ಅಂಗವಾಗಿ ಆಪ್ಯಾಯನವೆ ಭಕ್ತಿಯಾಗಿ,
ಕಿಂಕುರ್ವಾಣವೆಂಬ ಶಿವಮಂತ್ರಕ್ಕೆ
ನಮೋ ನಮೋ ಎನಬಲ್ಲಡೆ ಆತ ಜಂಗಮ.
ಆ ಜಂಗಮದ ಆ ಭಕ್ತನ ಸಮ್ಮೇಳವೆ ಸಮ್ಮೇಳ.
ಮಿಕ್ಕಿನ ಅರೆಭಕ್ತರ ಒಡತಣ ಸಂಗ
ನಮ್ಮ ಗುಹೇಶ್ವರಲಿಂಗಕ್ಕೆ ಸೊಗಸದು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-526/ವಚನ ಸಂಖ್ಯೆ-1391)
“ಕಕ್ಕುಲತೆಗೆ ಅಶನವನುಂಡು, ವ್ಯಸನದ ಕಕ್ಕುಲತೆಗೆ ಹಣ ಬೇಡಿ, ಕೊಟ್ಟಡೆ ಕೊಂಡಾಡಿ, ಕೊಡದಿರ್ದಡೆ ದೂರಿಕೊಂಡು ಹೋಗುವ ಜಂಗಮನಲ್ಲ. ಬಂದ ಜಂಗಮದ ಇಂಗಿತವರಿಯದ, ನಿಂದ ನಿಲವನರಿಯದ ಅಹಂಕಾರಿಗಳ ಮನೆಗೆ ಬರಲಾಗದು” ಎಂದು ಮತ್ತಷ್ಟು ನಿಷ್ಠುರವಾಗಿ ನುಡಿಯುತ್ತಾನೆ. “ಬಸವಣ್ಣನ ಭಕ್ತಿ ತಲೆಕೆಳಗಾಗಿದೆ” ಎನ್ನುವಷ್ಟು ಕಠಿಣವಾಗಿ ಹೇಳುತ್ತಾನೆ.
ಈ ಅಟ್ಟಾಟಿಕೆಯಿಂದ ಅಲ್ಲಮನ ಪಟ್ಟು ಬಿಡಸಲಾಗದೆಂದು ಮನಗಂಡ ಹಡಪದ ಅಪ್ಪಣ್ಣ ಬಸವಣ್ಣನವರಿಗೆ ‘ಎಮ್ಮ ನುಡಿ ನಿಮ್ಮ ಶರಣರ ತಾಗಬಲ್ಲುದೆ? ಅವರು ಎನ್ನ ಮಾತಿಂಗೆ ಬಾರರು. ನೀವೆ ಬಿಜಯಂಗೈಸಿಕೊಂಡು ಬರಬೇಕು” ಎನ್ನುತ್ತಾನೆ.
ಆಗ ಬಸವಣ್ಣನವರಿಗೆ ತಮ್ಮ ತಪ್ಪು ಅರಿವಾಯಿತು. ಅವರಲ್ಲಿ ಚೆನ್ನಬಸವಣ್ಣನೂ ಕರ್ತವ್ಯ ಪ್ರಜ್ಞೆ ಮೂಡಿಸಿದ. ಆಗ ಜಾಗೃತರಾದ ಬಸವಣ್ಣ “ನಾನು ನಿನ್ನ ಕೃಪೆಯಿಂದ ಬದುಕಿದೆನಯ್ಯಾ” ಎಂದು ಹೇಳಿ ಪ್ರಭುದೇವ ಮತ್ತು ಸಿದ್ದರಾಮರನ್ನು ಸ್ವಾಗತಿಸಲು ತಾವೇ ಮಹಾದ್ವಾರದ ಬಳಿಗೆ ಬರುತ್ತಾರೆ. ಜೊತೆಯಲ್ಲಿ ಹಡಪದ ಅಪ್ಪಣ್ಣ. ಚೆನ್ನಬಸವಣ್ಣ, ಸೊಡ್ಡಳ ಬಾಚರಸ ಮೊದಲಾಗಿ ಅಸಂಖ್ಯಾತ ಮಹಾಗಣಂಗಳು ಇರುತ್ತಾರೆ.
ಪ್ರಭುವಿಗೆ ದೀರ್ಘದಂಡ ನಮಸ್ಕಾರ ಮಾಡಿದ ಬಸವಣ್ಣ ತಮ್ಮ ತಪ್ಪುಗಳನ್ನೆಲ್ಲ ಮನ್ನಿಸಿ ಮಹಾಮನೆಗೆ ದಯಮಾಡಿಸಬೇಕೆಂದು ಬಿನ್ನವಿಸಿಕೊಳ್ಳುತ್ತಾರೆ. ಆದರೆ ಪ್ರಭು ಒಮ್ಮೆಲೇ ಬಡಂಬಡುವ ಕುಳವಲ್ಲ. ಬಸವಣ್ಣ ಎಷ್ಟು ವಿಧದಲ್ಲಿ ಹೇಳಿಕೊಂಡರೂ ಮತ್ತೆ ಮತ್ತೆ ಒರೆಹಚ್ಚಿ ಬಸವ ಬೆಳಗನ್ನು ಪ್ರಕಾಶಿಸಿದ ನಂತರವೇ ಸಮ್ಮತಿಸುತ್ತಾನೆ. ಎಲ್ಲರೂ ಕೂಡಿಕೊಂಡು ಮಹಾದ್ವಾರವನ್ನು ಪ್ರವೇಶಿಸುತ್ತಾರೆ.
ಅವರು ಹಾಗೆ ಪ್ರವೇಶಿಸಿದ ಅಂಗಳದಲ್ಲಿದ್ದ ಮಹಾಮನೆಯ ಪ್ರಸಾದಕುಂಡ ಪ್ರಭುವಿನ ಕಣ್ಣಿಗೆ ಬೀಳುತ್ತದೆ. ಆ ಪ್ರಸಾದ ಕುಂಡದಲ್ಲಿ ಅದುವರೆಗೆ ಯಾರ ಗಮನಕ್ಕೂ ಬಾರದಿದ್ದ ಮರುಳಶಂಕರದೇವ ಕುಂಡದಿಂದ ಮೆಲ್ಲನೆ ಹೊರಗೆ ಬರುತ್ತಾನೆ. ಅದನ್ನು ಕಂಡು ಪ್ರಭು ಬಸವಣ್ಣವರ ಕಡೆಗೆ ತಿರುಗಿ:
ನೀರು ಕ್ಷೀರದಂತೆ ಕೂಡಿದ ಭೇದವ,
ಆರಿಗೂ ಹೇಳಲಿಲ್ಲ, ಕೇಳಲಿಲ್ಲ.
ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ?
ಉರಿಯುಂಡ ಕರ್ಪುರದ ಪರಿಯಂತಿರ್ದುದನು,
ಇದಿರಿಂಗೆ ಕೊಂಡಾಡಿ ಹೇಳಲುಂಟೆ? ಅದಂತಿರಲಿ,_
ನಮ್ಮ ಗುಹೇಶ್ವರಲಿಂಗದ ಕಣ್ಣಮುಂದೆ,
ನಿಮ್ಮ ಧರ್ಮದಿಂದಲೊಂದು ಆಶ್ಚರ್ಯವ
ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-486/ವಚನ ಸಂಖ್ಯೆ-1304)
“ನಿಮ್ಮ ಧರ್ಮದಿಂದಲೊಂದಾಶ್ಚರ್ಯವ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣ” ಎನ್ನುತ್ತಾನೆ. ಅದಕ್ಕೆ ಬಸವಣ್ಣ:
ದೇವ ದೇವ ಮಹಾಪ್ರಸಾದ!
ನೀವೆಂದಂತೆ ನಿಮ್ಮ ಚರಣದಲ್ಲಿ ಸಂದು ಭೇದವಿಲ್ಲದೆ ಇಪ್ಪೆನಲ್ಲದೆ
ಬೇರೆ ಭಿನ್ನವಾಗಿರ್ದೆನಾದಡೆ ನೀವೆ ಸಾಕ್ಷಿ,
ನಿಮ್ಮ ಶ್ರೀಪಾದದ ಕಂಡೆನ್ನ ಭವಂ ನಾಸ್ತಿಯಾಯಿತ್ತು.
ಕೂಡಲಸಂಗಮದೇವಾ,
ನಿಮ್ಮಿಂದೊಂದಾಶ್ಚರ್ಯವಿಲ್ಲವೆಂದು ಶ್ರುತಿಗಳು ಹೊಗಳುತ್ತಿರಲಾಗಿ
ನೀವು ಕಂಡ ಆಶ್ಚರ್ಯವಾವುದೆನಗೊಮ್ಮೆ
ನಿರೂಪಿಸಾ ಪ್ರಭುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-365/ವಚನ ಸಂಖ್ಯೆ-1222)
“ನಿಮ್ಮಿಂದೊಂದಾಶ್ಚರ್ಯವಿಲ್ಲೆಂದು ಸ್ತುತಿ ಹೊಗಳುತ್ತಿರಲಾಗಿ, ನೀವು ಕಂಡ ಆಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ ಪ್ರಭುವೆ” ಎಂದು ಬಿನ್ನವಿಸಿಕೊಳ್ಳುತ್ತಾರೆ.
ಆಗ ಪ್ರಭು “ಹನ್ನೆರಡು ವರ್ಷಗಳ ಗಣಪ್ರಸಾದದ ಕುಳಿಯೊಳಗಿದ್ದು, ಒಕ್ಕು ಮಿಕ್ಕ ಶೇಷ ಪ್ರಸಾದವನ್ನು ಸ್ವೀಕರಿಸಿ, ತಮ್ಮ ನಿಜಸ್ವರೂಪವನ್ನು ಮರೆಸಿಕೊಂಡಿದ್ದ” ಮರುಳಶಂಕರ ದೇವರ ನಿಲವನ್ನು ಬಸವಣ್ಣನವರಿಗೆ ತಿಳಿಸುತ್ತಾನೆ. ಅಷ್ಟರಲ್ಲಿ ಪ್ರಸಾದ ಕುಂಡ ಬಿಟ್ಟು ಹೊರಬಂದ ಮರುಳಶಂಕರದೇವ ಪ್ರಭುದೇವರಿಗೆ ನಮಸ್ಕರಿಸಿ:
ಜಯ ಜಯ ತ್ರಾಹಿ ತ್ರಾಹಿ,
ಗರ್ಭದೊಳಗಣ ಶಿಶು ನವಮಾಸವ ಹಾರಿಕೊಂಡಿರ್ದೆನಯ್ಯಾ.
ಎನ್ನ ಜನ್ಮ ಸಫಲವಾಯಿತ್ತಯ್ಯಾ.
ಶುದ್ಧಸಿದ್ಧ ಪ್ರಸಿದ್ದ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಬಸವರಾಜದೇವರ ದಯದಿಂದ
ಪ್ರಭುದೇವರ ಶ್ರೀಮೂರ್ತಿಯಂ ಕಂಡು ಬದುಕಿದೆನು.
ನಿಮ್ಮ ಧರ್ಮ ನಿಮ್ಮ ಧರ್ಮ
ಶರಣು ಶರಣಾರ್ಥಿ ಸಕಲಪುರಾತರಿಗೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-416/ವಚನ ಸಂಖ್ಯೆ-1099)
“ಬಸವರಾಜರ ದಯದಿಂದ ಪ್ರಭುದೇವರ ಮೂರ್ತಿಯಂ ಕಂಡು ಬದುಕಿದೆನು ನಿಮ್ಮ ಧರ್ಮ” ಎನ್ನುತ್ತಾನೆ.
ಪ್ರಭುದೇವರು ಮರುಳಶಂಕರ ದೇವರನ್ನು ಬಸವಣ್ಣನವರಿಗೆ ಪರಿಚಯಿಸಿ:
ಕಂಡೆಯಾ ಬಸವಣ್ಣಾ,
ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
ಕುಂದಣದೊಳಗಡೆಗಿ ತೋರುವ ಮೃದು ಛಾಯದಂತೆ,
ನವನೀತದೊಳಗಡಗಿದ ಸಾರದ ಸವಿಯಂತೆ,
ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು,
ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ,
ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-387/ವಚನ ಸಂಖ್ಯೆ-1033)
“ಅಂಗವಿಲ್ಲದ ಕುರುಹು, ಭವವಿಲ್ಲದ ಬಯಲು, ಬೆಳಗೆನರಿಯದ ಜ್ಯೋತಿಯ ಕಂಡೆಯಾ ಬಸವಣ್ಣ?” ಎಂದು ಹೇಳುತ್ತಾರೆ. ಆ ಮಾತುಗಳನ್ನು ಕೇಳಿದ ಮರುಳಶಂಕರದೇವ:
ಸಿಂಬೆಗೆ ರಂಭೆತನವುಂಟೆ?
ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ?
ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ?
ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ,
ನೀ ಬಂದೆಯಲ್ಲಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-428/ವಚನ ಸಂಖ್ಯೆ-1119)
“ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ನೀ ಬಂದೆಯಲ್ಲಾ ಪ್ರಭುದೇವರ ಕರುಣೆಯಿಂದ ಬದುಕಿದೆ” ಎನ್ನುತ್ತಾನೆ.
ಮರುಳಶಂಕರದೇವನ ಮಹಿಮೆ ಬಸವಣ್ಣನವರ ಮನ ಮುಟ್ಟುತ್ತದೆ; ಹೃದಯ ತಟ್ಟುತ್ತದೆ
ಅಯ್ಯಾ, ನಿಮ್ಮ ಶರಣರು ಬಂದೆನ್ನ ಅಂಗಳದೊಳಗೆ
ರಕ್ಷಿಸಿಹೆವೆಂದಿರಲು, ನಾನು ತೆರಹು-ಮರಹಾಗಿರ್ದು ಕೆಟ್ಟೆನಯ್ಯಾ,
ನಾನು ಕೆಟ್ಟ ಕೇಡಿಂಗೆ ಕಡೆಯಿಲ್ಲವಯ್ಯಾ.
ಕೂಡಲಸಂಗಮದೇವಾ,
ಎನ್ನ ಭಕ್ತಿ ಸಾವಿರ ನೋಂಪಿಯ ನೋಂತು
ಹಾದರದಲ್ಲಿ ಅಳಿದಂತಾಯಿತ್ತಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-289/ವಚನ ಸಂಖ್ಯೆ-998)
“ಅಯ್ಯಾ, ನಿಮ್ಮ ಶರಣರು ಬಂದೆನ್ನ ಅಂಗಳದೊಳಗೆ ರಕ್ಷಿಸಿಹೆನೆಂದಿರಲು, ನಾನು ತೆರಹು ಮರಹಾಗಿರ್ದು ಕೆಟ್ಟನಯ್ಯಾ, ಅವರ ಇರವನರಿಯದೆ ಭವದೇಹಿಯಾದೆನಯ್ಯಾ” ಎಂದು ಕೊರಗಿ ಮರುಗುತ್ತಾರೆ. ಮರುಳಶಂಕರ ದೇವರ ಕೃಪೆ ಎನಗಿನ್ನೆಂದಷ್ಟು ಹೇಳಾ” ಎಂದು ಬಸವಣ್ಣ ಪ್ರಭುದೇವರಲ್ಲಿ ಮೊರೆಯಿಡುತ್ತಾರೆ.
ಆಗ ಮರುಳಶಂಕರದೇವ:
ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-422/ವಚನ ಸಂಖ್ಯೆ-1111)
“ನಿಮ್ಮ ಶರಣ (ಲಿಂಗವಂತನ) ಬಸವಣ್ಣನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ” ಎಂದು ಅತ್ಯಂತ ವಿನಮ್ರನಾಗಿ ಹೇಳುತ್ತಾನೆ. ಶರಣರ ನಿಲವು ನೋಡಿ, ಮರುಳಶಂಕರದೇವರ ಕೃಪೆಗಾಗಿ ಬೇಡು ಬಸವಣ್ಣನವರ ನಿಲುವನ್ನು ‘ನಾನೆತ್ತ ಬಲ್ಲೆ’ ಎನ್ನುವ ಸಜ್ಜನಿಕೆ ನೋಡಿ. ಅದೇ ಮೊದಲ ಬಾರಿಗೆ ಅವರಿಬ್ಬರ ಭೇಟಿ. ಆದರೂ ಪರಸ್ಪರರ ಬಗೆಗೆ ಅವರು ತೋರುವ ಗೌರವಾದರಗಳು ನಮ್ಮನ್ನು ಸೋಜಿಗಗೊಳಿಸುತ್ತವೆ.
ಮುಂದೆ, ಬಸವಣ್ಣನವರು ಚೆನ್ನಬಸವಣ್ಣನನ್ನು ಕುರಿತು:
ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ,
ಮನದೊಳಗೆ ಅಹಂಕಾರವಿಲ್ಲ.
ದೇಹವೆಂದರಿಯೆ, ನಿರ್ದೇಹವೆಂದರಿಯೆ,
ಜಂತ್ರದ ಸೂತ್ರದಂತೆ ಇಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ!
ಲಿಂಗಜಂಗಮದ ಒಕ್ಕುಮಿಕ್ಕ ಪ್ರಸಾದವ ಕೊಂಡು,
ಮಿಕ್ಕು ಮೀರಿ ನಿಂದ ಮಹಾಪ್ರಸಾದಿಯ ನೋಡಾ!
ತನ್ನನರಿದಹರೆಂದು ಜಗದ ಕಣ್ಣಿಂಗೆ ಮಾಯದ ಮಂಜು ಕವಿಸಿ,
ನಿಜಪದದಲ್ಲಿ ತದುಗತನಾದನು.
ಕೂಡಲಸಂಗಮದೇವರಲ್ಲಿ ಮರುಳುಶಂಕರದೇವರ
ನಿಲವ ನೋಡಾ, ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-329/ವಚನ ಸಂಖ್ಯೆ-1123)
“ನಿಜಪದದಲ್ಲಿ ತದ್ಗತರಾದ ಮರುಳಶಂಕರ ದೇವರ ನಿಲವ ನೋಡಾ” ಎಂದಾಗ, ಚೆನ್ನಬಸವಣ್ಣ:
ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ
ಆಚಾರಲಿಂಗಪ್ರಸಾದಿಯಾದ.
ಪ್ರಾಣವ ಲಿಂಗಕ್ಕರ್ಪಿಸಿ, ಆ ಲಿಂಗವ ಪ್ರಾಣಕ್ಕರ್ಪಿಸಿ
ಪ್ರಾಣಲಿಂಗಪ್ರಸಾದಿಯಾದ.
ದೇಹಭಾವದಹಂಕಾರ
ದಾಸೋಹಭಾವದೊಳಗಲ್ಲದೆ ಅಳಿಯದೆಂದು
ಲಿಂಗಜಂಗಮಕ್ಕೆ ತೊತ್ತುವೊಕ್ಕು
ಲಿಂಗಜಂಗಮಪ್ರಸಾದಿಯಾದ.
ಸತ್ಯಶರಣರ ಅಂಗಳದೊಳಗೆ
ಬಿದ್ದಗುಳನೆತ್ತಿಕೊಂಡಿಪ್ಪೆನೆಂದು,
ನಿಮ್ಮ ಪ್ರಸಾದದ ಕುಳಿಯೊಳಗೆ
ಹನ್ನೆರಡು ವರ್ಷ ನಿರಂತರ ಪ್ರಸಾದಿಯಾಗಿರ್ದ,
ಕೂಡಲಚೆನ್ನಸಂಗಮದೇವರಲ್ಲಿ ಮರುಳಶಂಕರದೇವರ
ಶ್ರೀಪಾದದ ಘನವನು ನಿಮ್ಮಿಂದ
ಕಂಡು ಬದುಕಿದೆನು ಕಾಣಾ
ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-357/ವಚನ ಸಂಖ್ಯೆ-896)
“ಮರುಳಶಂಕರದೇವರ ಶ್ರೀಪಾದದ ಘನವನು ನಿಮ್ಮಿಂದ ಕಂಡು ಬದುಕಿದೆನು ಕಾಣಾ” ಎನ್ನುತ್ತಾನೆ. ಆಗ ಮರುಳಶಂಕರದೇವ “ಆಚಾರ ಸನ್ನಿಹಿತವಾದ ನಮ್ಮ ಚೆನ್ನಬಸವಣ್ಣನು ಸರ್ವಾಚಾರ ಸಂಪನ್ನನು” ಎಂದು ಹೇಳಿ ತನ್ನ ಗೌರವ ತೋರುತ್ತಾನೆ.
ಆಗ ಪ್ರಭುದೇವ:
ಅಂಗವಿಡಿದಂಗಿಯನೇನೆಂಬೆ?
ಆರನೊಳಕೊಂಡ ಅನುಪಮನು ನೋಡಾ!
ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ!
ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-224/ವಚನ ಸಂಖ್ಯೆ-716)
“ಪರಮ ಪ್ರಸಾದಿ ಮರುಳ ಶಂಕರದೇವರ ನಿಲವ ಬಸವಣ್ಣನಿಂದ ಕಂಡೆ ನೋಡಾ” ಎಂದು ಸಿದ್ಧರಾಮನಿಗೆ ಹೇಳಿದರೆ, ಬಸವಣ್ಣ ಮರುಳಶಂಕರದೇವರ ನಿಲವ ಪ್ರಭುದೇವರು-ಸಿದ್ದರಾಮಯ್ಯ ದೇವರಿಂದ ಕಂಡು ಬದುಕಿದೆನು” ಎನ್ನುತ್ತಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮ:
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ,
ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ
ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ
ಕಂಡು ಬದುಕಿದೆನು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-432/ವಚನ ಸಂಖ್ಯೆ-1382)
“ಘನಪಥದಲ್ಲಿ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು -ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ” ಎಂದು ಹೇಳಿದಾಗ, ಬಸವಣ್ಣನವರು ಮತ್ತೆ:
ಏನೆಂದುಪಮಿಸುವೆನಯ್ಯಾ
ತನ್ನಿಂದ ತಾ ತೋರದೆ,
ಗುರುಮುಖದಿಂದ ತೋರಿದ ತನ್ನ ನಿಲವ,
ನಿರುಪಮನು.
ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ
ಇರವೆ ಪರವಾಗಿರ್ದ ಅಜಡನು.
ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ
ಘನಮಹಿಮರ ದರ್ಶನದಿಂದ ಸತ್ಪ್ರಣವವ
ತಾನಾಗಿ ನುಡಿದ ಮೂಲಿಗನು,
ಕೂಡಲಸಂಗಮದೇವರಲ್ಲಿ
ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ
ಪ್ರಭುದೇವರು ಸಿದ್ಧರಾಮಯ್ಯದೇವರು
ಹಡಪದಪ್ಪಣ್ಣನಿಂದ ಕಂಡು
ಎನ್ನ ಜನ್ಮ ಸಫಲವಾಯಿತ್ತಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-432/ವಚನ ಸಂಖ್ಯೆ-1382)
“ಕೂಡಲಸಂಗಮದೇವರಲ್ಲಿ ಬೆರೆಸಿ. ಬೇರಿಲ್ಲದಿಪ್ಪ ಮರುಳಶಂಕರದೇವರ ನಿಲವ ಪ್ರಭು ದೇವರು, ಸಿದ್ಧರಾಮಯ್ಯ ದೇವರು, ಹಡಪದಪ್ಪಣ್ಣಗಳಿಂದ ಕಂಡು ಎನ್ನ ಜನ್ಮ ಸಫಲವಾಯಿತ್ತೆಯ್ಯಾ” ಎನ್ನುತ್ತಾರೆ.
ಆಗ ಹಡಪದ ಅಪ್ಪಣ್ಣ “ಪರಮಪ್ರಸಾದಿ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು” ಎಂದಾಗ, ಅಲ್ಲೇ ಇದ್ದ ಮಡಿವಾಳ ಮಾಚಿದೇವ “ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ ಕಲಿದೇವರ ದೇವಾ” ಎನ್ನುತ್ತಾನೆ. ಈ ಮಾತಿನೊಂದಿಗೆ ಕಿನ್ನರಿ ಬ್ರಹ್ಮಯ್ಯನು ಬಸವಣ್ಣ-ಮಡಿವಾಳದೇವರ ಕರುಣದಿಂದ ಮರುಳಶಂಕರ ದೇವರ ನಿಲವುಕಂಡು ಬದುಕಿದೆನು” ಎಂದು ದನಿಗೂಡಿಸುತ್ತಾನೆ.
ಈ ಪರಸ್ಪರ ಋಣಸಲ್ಲಿಕೆ ಅಷ್ಟಕ್ಕೆ ಮುಗಿಯುವುದಿಲ್ಲ. ‘ಮಡಿವಾಳಯ್ಯನ ಕರುಣದಿಂದ ಮರುಳಶಂಕರದೇವರ ನಿಲವಕಂಡು ಬದುಕಿದೆ ಕಾಣಾ, ಕಿನ್ನರ ಬ್ರಹ್ಮಯ್ಯ” ಎಂದು ಬಸವಣ್ಣನವರು ಹೇಳಿದರೆ, ಕಿನ್ನರಬ್ರಹ್ಮಯ್ಯ “ಮರುಳಶಂಕರದೇವರ ಮೂರ್ತಿಯ ನಿನ್ನಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣ” ಎನ್ನುತ್ತಾನೆ. “ಕಿನ್ನರ ಬ್ರಹ್ಮಯ್ಯಗಳಿಂದ ಮರುಳಶಂಕರದೇವರ ನಿಲವ ಕಂಡು ಬದುಕಿದೆನು” ಎಂದು ಬಸವಣ್ಣನವರು ಮಾರ್ನುಡಿಯುತ್ತಾರೆ.
ಹೀಗೆ ಅಲ್ಲಿದ್ದ ಶರಣಗಣವೆಲ್ಲ ಮರುಳಶಂಕರ ದೇವರ ನಿಲವನ್ನು ಕಾಣಲು ಒಬ್ಬರಿಗೊಬ್ಬರು ಕಾರಣರಾಗುವ ಘನವನ್ನು ನೋಡಬೇಕು. ಒಬ್ಬೊಬ್ಬ ಶರಣನ ಮಾತಿನಿಂದಲೂ ಮರುಳಶಂಕರದೇವರ ಮನ-ಭಾವ-ಕರಣಂಗಳ ಮಾಗಿದ ನಿಲವು ಕಣ್ಣಿಗೆ ಕಟ್ಟಿದಂತೆ ನಮ್ಮ ಮುಂದೆ ನಿಲ್ಲುತ್ತದೆ. ಅಷ್ಟೇ ಅಲ್ಲ, ಅವರಲ್ಲಿ ಪರಸ್ಪರ ಇದ್ದ ಉನ್ನತ ಭಾವನೆಗಳ ಪರಿಚಯವಾಗುತ್ತದೆ. ಕಾರಣಿಕ ಪುರುಷರ ಈ ಸಮಾಗಮ-ಸಂವಾದಗಳು ಮಾನವ ಸಂಬಂಧದ ಒಂದು ನೀತಿ ಸಂಹಿತೆಯನ್ನು ನಮ್ಮ ಮುಂದಿಡುತ್ತವೆ.
ಶರಣ ಸಮೂಹದ ಒಕ್ಕೊರಲಿನ ಪ್ರಶಂಸೆಗೆ ಮರುಳಶಂಕರದೇವ ವಿನೀತನಾಗಿ ತನ್ನ ಕೃತಜ್ಞತೆಯನ್ನು ಹೀಗೆ ವ್ಯಕ್ತಪಡಿಸುತ್ತಾನೆ:
ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು.
ಎನ್ನ ಪರಮಾತ್ಮನ ಚೇತನನಯ್ಯ ಸಿದ್ಧರಾಮೇಶ್ವರದೇವರು.
ಎನ್ನ ಚಿನ್ಮಯಾತ್ಮನ ಚೇತನನಯ್ಯ ಬಸವಣ್ಣನು.
ಎನ್ನ ನಿರ್ಮಲಾತ್ಮನ ಚೇತನನಯ್ಯ ಷಟ್ ಸ್ಥಲಬ್ರಹ್ಮಿ ಚೆನ್ನಬಸವಣ್ಣನು.
ಎನ್ನ ಮಹಾತ್ಮನ ಚೇತನನಯ್ಯ ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣನು.
ಎನ್ನ ಜೀವಾತ್ಮನ ಚೇತನನಯ್ಯ ಮಡಿವಾಳ ಮಾಚಯ್ಯನು.
ಎನ್ನ ಅಂತರಾತ್ಮನ ಚೇತನನಯ್ಯ ಸೊಡ್ಡಳ ಬಾಚರಸರು.
ಎನ್ನ ಅರಿವಿನ ಚೇತನಾತ್ಮಕನಯ್ಯ ಕಿನ್ನರ ಬೊಮ್ಮಯ್ಯನು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣರ ಕರುಣವ ಪಡೆದೆನಾಗಿ,
ಎನ್ನ ಕರ್ಮ ನಿರ್ಮೂಲವಾಯಿತ್ತಯ್ಯ,
ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-414/ವಚನ ಸಂಖ್ಯೆ-1094)
ಎಂತಹ ಮನತುಂಬಿದ ಕೃತಜ್ಞತಾ ಭಾವ, ಮರುಳಶಂಕರದೇವ ಮತ್ತೆ ಸರ್ವರಿಗೂ ‘ಶರಣು ಶರಣಾರ್ಥಿ’ ಎಂದು ಹೇಳಿ, ‘ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯಾ” ಎಂದು ‘ನಿರವಯ’ ನಾಗುತ್ತಾನೆ.
ಆಗ ಚೆನ್ನಬಸವಣ್ಣ:
ಮಾಡಬಾರದ ಭಕ್ತಿಯನೆ ಮಾಡಿ,
ನೋಡಬಾರದ ನೋಟವನೆ ನೋಡಿ,
ಸ್ತುತಿಸುವರೆ ಸ್ತುತಿಗೆ ಬಾರದೆ, ಮುಟ್ಟುವ[ರೆ] ಮುಟ್ಟಬಾರದೆ
ಬಟ್ಟಬಯಲಾಗಿ ಹೋದ ಮರುಳುಶಂಕರದೇವರ
ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ
ಕೂಡಲಚೆನ್ನಸಂಗಮದೇವಾ
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-744/ವಚನ ಸಂಖ್ಯೆ-1518)
“ಬಟ್ಟಬಯಲಾಗಿ ಹೋದ ಮರುಳಶಂಕರದೇವರ ಮಹಾತ್ಮಗೆ ನಮೋ ನಮೋ ಎಂದು ಬದುಕಿದೆನು” ಎಂದು ತನ್ನ ಪ್ರಣಾಮಗಳನ್ನು ಅರ್ಪಿಸುತ್ತಾನೆ.
ಪ್ರಭುದೇವನು:
ಕಂಡೆಯಾ ಬಸವಣ್ಣಾ,
ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ,
ನವನೀತದೊಳಗಡಗಿದ ಸಾರದ ಸವಿಯಂತೆ
ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು,
ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ,
ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-387/ವಚನ ಸಂಖ್ಯೆ-1033)
“ಗುಹೇಶ್ವರನ ಶರಣರು ಎಂಥವರು ಎಂಬುದನ್ನು ಕಂಡೆಯಾ ಬಸವಣ್ಣ?” ಎಂದು ಕೇಳಿದಾಗ ಬಸವಣ್ಣನವರು:
ಅಯ್ಯಾ, ನಿಮ್ಮ ಶರಣರು ಪರಮಸುಖಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ
ಹೊದ್ದದ ನಿಷ್ಕರ್ಮಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಮನದಲ್ಲಿ ನಿರ್ಲೇಪಜ್ಞಾನಿಗಳಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಘನವನೆನಗೆ ಹೇಳಲು, ನಾನು ಕೇಳಲಮ್ಮದೆ
ನಮೋ ನಮೋ ಎನುತಿರ್ದೆನು ಕಾಣಾ, ಪ್ರಭುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-387/ವಚನ ಸಂಖ್ಯೆ-1033)
“ನಿಮ್ಮ ಶರಣರ ಘನವನೆನಗೆ ಹೇಳಲು ನಾನು ಕೇಳಲಮ್ಮದೆ. ನಮೋ ನಮೋ ಎನುತಿರ್ದೆನು ಕಾಣಾ ಪ್ರಭುವೆ” ಎನ್ನುತ್ತಾರೆ.
ಅಯ್ಯಾ, ನಿಮ್ಮ ಶರಣರ ನಿಲವ
ಸ್ವರ್ಗ ಮತ್ರ್ಯ ಪಾತಾಳದೊಳಗೆ ಬಲ್ಲವರಿಲ್ಲವಯ್ಯಾ,
ಅಘಟಿತ ಘಟಿತರು, ಅಖಂಡಿತ ಮಹಿಮರು,
ನಿಜದಲ್ಲಿ ನಿರ್ಲೇಪ ಭಾವಕರು. ಕೂಡಲಸಂಗಮದೇವಾ,
ನಿಮ್ಮ ಶರಣರ ನಿಲವನರಿವಡೆ ನಾನೇತರವನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-288/ವಚನ ಸಂಖ್ಯೆ-994)
“ನಿಮ್ಮ ಶರಣರ ನಿಲವನರಿವಡೆ ನಾನೇತರನವನಯ್ಯಾ” ಎಂದು ಹೇಳುವಷ್ಟು ವಿನಯದ ಸಾಕಾರಮೂರ್ತಿಯಾಗುತ್ತಾರೆ.
ಕಾಯವಳಿದಡೇನು? ಕಾಯ ಉಳಿದಡೇನು?
ಕಾಯ ಬಯಲಾದಡೇನು?
ಮನ ಮನ ಲಯವಾಗಿ ಘನಕ್ಕೆ ಘನವಾದ
ಶರಣರ ಕಂಡಡೆ,
ಕೂಡಲಚೆನ್ನಸಂಗಮನೆಂದು
ಶಬುದ ಮುಗದವಾಗಿರಬೇಕಲ್ಲದೆ,
ಚೋದ್ಯಕ್ಕೆ ಕಾರಣವೇನು
ಹೇಳಾ ಸಂಗನಬಸವಣ್ಣಾ ?
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-288/ವಚನ ಸಂಖ್ಯೆ-994)
“ಕಾಯವಳಿದರೇನು, ಕಾಯ ಉಳಿದರೇನು? ಬಯಲಾದರೇನು? ಮನ ಮನ ಲಯವಾಗಿ, ಘನಕ್ಕೆ ಘನವಾದ ಶರಣರ ಕಂಡಡೆ ಕೂಡಲ ಚೆನ್ನಸಂಗಮ ನೆಂದು ಚೆನ್ನಸಂಗಮನೆಂದು, ಶಬುದ ಮುಗುದವಾಗಿರ ಬೇಕಲ್ಲದೆ ಚೋದ್ಯಕ್ಕೆ ಕಾರಣವೇನು ಹೇಳಾ, ಸಂಗನಬಸವಣ್ಣ” ಎಂದು ಚೆನ್ನಬಸವಣ್ಣನ ಅನುಭಾವದ ನುಡಿಯೊಂದಿಗೆ ಶೂನ್ಯಸಂಪಾದನೆಯ ಮರುಳಶಂಕರದೇವರ ಪ್ರಸಂಗ ಕೊನೆಗೊಳ್ಳುತ್ತದೆ.
ಪ್ರಭುದೇವ ಹೇಳಿರುವಂತೆ “ಶೃಂಗ ನುಂಗಿದ ರುಚಿಯ ನೊಂದು ಮಾಡಿ, ಗುಹೇಶ್ವರನೆಂಬ ಅಂಗದ ಹಂಗನಳಿದ ಶರಣರ ಮರುಳಶಂಕರದೇವ” ರ ಈ ಪ್ರಸಂಗ ನಿಜಕ್ಕೂ ಅವಿರಳವಾದುದು. ಶರಣ ಪರಂಪರೆಯ ಸಮುದಾಯ ಈ ಪ್ರಸಂಗದಿಂದ ಅರಿತುಕೊಳ್ಳಬೇಕಾದದ್ದು, ಆಚರಿಸಬೇಕಾಗಿದದ್ದು ಬಹಳವಿದೆ. ಈ ಹಿನ್ನೆಲೆಯಲ್ಲಿ ಹೇಳಬೇಕೆಂದರೆ ‘ಬದುಕಿದೆನು ಕಾಣಾ’ ಎನ್ನುವ ಸೂಳ್ಳುಡಿ ಒಂದು ಅನುಭಾವ ಸಂಹಿತೆ, ಆಚಾರ ಸಂಹಿತೆ, ನಿಜವಾದ ಧರ್ಮಸಂಹಿತೆ, ವಿನಯಭಾವದ ವಿವೇಕ ಸಂಹಿತೆ!
ಈ ಸಂಹಿತೆಯ ಪಾಲನೆಯೇ ಬಸವ ಜಯಂತಿ ಆಚರಣೆಯ ಆಶಯವಾಗಬೇಕು.
ನಾಡೋಜ ಡಾ. ಗೊ. ರು. ಚನ್ನಬಸಪ್ಪ.
406, “ಪ್ರಣಾಮ” F- ರಸ್ತೆ, 3 ನೇ ಅಡ್ಡ ರಸ್ತೆ,
ಐಡಿಯಲ್ ಹೋಮ್ ಟೌನ್ ಶಿಪ್,
ರಾಜರಾಜೇಶ್ವರಿ ನಗರ,
ಬೆಂಗಳೂರು – 560 098
ಮೋಬೈಲ್ ಸಂ. +91 98456 89845
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in