ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? | ಡಾ. ಬಸವರಾಜ ಸಬರದ, ಬೆಂಗಳೂರು.

ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? ಇದೊಂದು ಪ್ರಶ್ನೆ. ಆದರೆ ಇಂದು ಇದು ಪ್ರಶ್ನೆಯಾಗಿ ಉಳಿದಿಲ್ಲ. ಬಸವಣ್ಣನವರು ಪುನರ್ಜನ್ಮವನ್ನು ನಂಬಿರಲಿಲ್ಲವೆಂಬುದಕ್ಕೆ ಅನೇಕ ಆಕರಗಳು ಸಿಗುತ್ತವೆ. ಆದರೆ ಕೆಲವರು ಬಸವಣ್ಣನವರ ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆಂದು ಹೇಳಿದ್ದಾರೆ. ಬಸವ ತತ್ವದ ಕೇಂದ್ರವಾದ ಭಾಲ್ಕಿ ಹಿರೇಮಠ ಸಂಸ್ಥಾನ ತರುತ್ತಿರುವ “ಶಾಂತಿಕಿರಣ” ಮಾಸಿಕ ಪ್ರತಿಕೆಯಲ್ಲಿ (ಮೇ-2025) “ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ” ಎಂಬ ಲೇಖನ ಪ್ರಕಟವಾಗಿದೆ. ಡಾ. ವಿ. ವಿ. ಹೆಬ್ಬಳ್ಳಿ ಎಂಬುವವರು ಈ ಲೇಖನವನ್ನು ಬರೆದಿದ್ದಾರೆ. ಇಂತಹ ಲೇಖನವನ್ನು ಪ್ರಕಟಿಸುವುದರ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಆ ಪತ್ರಿಕೆಯ ಸಂಪಾದಕ ಮಂಡಳಿ ಇಂದು ಚರ್ಚೆಗೆ ಗ್ರಾಸವಾಗಿದೆ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರಿಂದ ಹಿಡಿದು ಡಾ. ಎಂ. ಎಂ. ಕಲಬುರ್ಗಿಯವರು ಸಂಪಾದಿಸಿ ಪ್ರಕಟಿಸಿರುವ ವಚನ ಸಂಪುಟಗಳಲ್ಲಿ ಅನೇಕ ಪ್ರಕ್ಷಿಪ್ತ (ಖೊಟ್ಟಿ) ವಚನಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1993 ರಲ್ಲಿ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸುವ ಸಂದರ್ಭದಲ್ಲಿಯೇ ನಾನು ಡಾ. ಎಂ. ಎಂ. ಕಲಬುರ್ಗಿಯುವರೊಂದಿಗೆ ಚರ್ಚಿಸಿದ್ದೆ.

“ಶರಣರು ರಚಿಸಿರುವ ವಚನಗಳಲ್ಲಿ ಅನೇಕ ಪ್ರಕ್ಷಿಪ್ತ ವಚನಗಳಿವೆ. ಯಾವುದು ನಿಜವಾದ ವಚನ, ಯಾವುದು ಪ್ರಕ್ಷಿಪ್ತ ವಚನ ಎಂಬುದು ಮೊದಲು ನಿರ್ಣಯವಾಗಬೇಕು. ಅದಕ್ಕಾಗಿ ಒಂದು ಸಂಶೋಧನಾ ಸಮಿತಿ ರಚಿಸಬೇಕು. ಸಂಶೋಧಕರು ಸಮಗ್ರವಾಗಿ ಚರ್ಚಿಸಿದ ನಂತರ ಸಮಗ್ರ ಸಂಪುಟಗಳನ್ನು ಪ್ರಕಟಿಸಬೇಕು”

ಎಂದು ನಾನು ಹೇಳಿದ್ದೆ. ಡಾ. ಎಂ. ಎಂ. ಕಲಬುರ್ಗಿಯವರು ನನ್ನ ಮಾತನ್ನು ಒಪ್ಪಿಕೊಂಡರಾದರೂ ಈಗ ಸದ್ಯ ಆ ಕೆಲಸವಾಗವುದಿಲ್ಲ. ಸಮಗ್ರ ಸಂಪುಟಗಳು ಬಂದು ಬಿಡಲಿ. ಅಮೇಲೆ ಆ ಕಾರ್ಯ ಮಾಡೋಣ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದರು. ಆ ನಂತರದಲ್ಲಿ ಆ ಕೆಲಸವಾಗಲೇ ಇಲ್ಲ. “ಶೂನ್ಯ ಸಂಪಾದನೆಯ ಪ್ರಸ್ತುತ ಸವಾಲುಗಳು” ಎಂಬ ನನ್ನ ಪುಸ್ತಕ 2007 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪ್ರಕಟವಾಯಿತು. ಅದರಲ್ಲಿ ನಾನು ಅನೇಕ ಪ್ರಕ್ಷಿಪ್ತ ವಚನಗಳನ್ನು ಗುರುತಿಸಿದ್ದೇನೆ. ಆ ಪುಸ್ತಕ ನೋಡಿದ ನಂತರ ಡಾ. ಎಂ. ಎಂ. ಕಲಬುರ್ಗಿಯವರು ಅವೆಲ್ಲ ಪ್ರಕ್ಷಿಪ್ತ ವಚನಗಳೆಂದು ಒಪ್ಪಿಕೊಂಡರು. ಡಾ. ಬಿ. ವಿ. ಶಿರೂರ ಅವರೂ ಕೂಡ ಈ ಪ್ರಕ್ಷಿಪ್ತ ವಚನಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಶೂನ್ಯ ಸಂಪಾದನೆಗಳು ಬಸವಣ್ಣನವರ 300 ವಚನಗಳನ್ನು ಬಳಸಿಕೊಂಡಿವೆ. ಅವುಗಳಲ್ಲಿ 200 ವಚನಗಳು ಪ್ರಕ್ಷಿಪ್ತ ವಚನಗಳಾಗಿವೆ.

“ಹಾಗೆ ಬಸವಣ್ಣನವರ 200 ವಚನಗಳಲ್ಲಿ 200 ವಚನಗಳು ಸಂಪಾದನಾಕಾರರ ಸೃಷ್ಟಿಯಾಗಿರುವುದು ನಿಜವಾಗಿದ್ದರೆ, ಶೂನ್ಯ ಸಂಪಾದನೆಯ ಮೂರರಲ್ಲಿ ಎರಡು ಪಾಲು ಕೂಡ ವಚನಗಳನ್ನೊಂಡಿವೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ”

ಎಂದು ಡಾ. ಎಂ. ಎಂ. ಕಲಬುರ್ಗಿಯವರು ಮಾರ್ಗ | ಸಂಪುಟ-1” ರಲ್ಲಿ ಹೇಳಿದ್ದಾರೆ (ಪುಟ-607, 1988). ಹೀಗೆ ವಚನ ಸಂಪುಟಗಳಲ್ಲಿ ಈ ಪ್ರಕ್ಷಿಪ್ತ ವಚನಗಳ ಹಾವಳಿ ಜಾಸ್ತಿಯಾಗಿದೆ. ಅಂತಹ ಎರಡು ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು, ಡಾ. ವಿ. ವಿ. ಹೆಬ್ಬಳ್ಳಿಯವರು ಶಾಂತಿ ಕಿರಣದಲ್ಲಿ ಲೇಖನ ಬರೆದಿದ್ದಾರೆ. ಅವರು ಹೇಳಿರುವ ಆ ಎರಡು ವಚನಗಳು ಹೀಗಿವೆ.

ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-4/ವಚನ ಸಂಖ್ಯೆ-4)

ಭವ ಬಂಧನ ಭವಪಾಶವಾದ ಕಾರಣವೇನಯ್ಯಾ?
ಹಿಂದಣ ಜನ್ಮದಲ್ಲಿ ಲಿಂಗವ ಮರೆದನಾಗಿ, ಅರಿದಡೀ ಸಂಸಾರವ ಹೊದ್ದಲೀವೆನೆ,
ಕೂಡಲ ಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-6/ವಚನ ಸಂಖ್ಯೆ-7)

ಈ ಎರಡು ವಚನಗಳನ್ನಿಟ್ಟುಕೊಂಡು ಡಾ. ವಿ. ವಿ. ಹೆಬ್ಬಳ್ಳಿಯವರು ಲೇಖನ ಬರೆದಿದ್ದಾರೆ. “ಲಿಂಗಾಯತ ಧಾರ್ಮಿಕ ಶರಣರಲ್ಲಿ ಜನ್ಮಾಂತರ ಕಲ್ಪನೆಯಿದೆ” ಎಂದು ಒತ್ತಿ ಹೇಳಿದ್ದಾರೆ. ತಾವು ಈ ಲೇಖನ ಬರೆಯಲು ಆಯ್ದುಕೊಂಡಿರುವ ವಚನಗಳ ಸಂಖ್ಯೆಯನ್ನು ನಮೂದಿಸುವ, ಸಂಶೋಧನೆಯ ಕನಿಷ್ಠ ಶಿಸ್ತು ಕೂಡ ಈ ಲೇಖಕರಿಗಿಲ್ಲ; ಲೇಖನದ ಕೊನೆಯಲ್ಲಿ ಡಾ. ವಿ. ವಿ. ಹೆಬ್ಬಳ್ಳಿಯವರು ಹೀಗೆ ಫರ್ಮಾನು ಹೊರಡಿಸುತ್ತಾರೆ:

“ಅನೇಕ ಜನ್ಮಾಂತರದ ಕಥೆಗಳು ಧರ್ಮಶಾಸ್ತ್ರಗಳಲ್ಲಿ ವರ್ಣಿತವಾಗಿವೆ. ಇವುಗಳು ವಿಶ್ವನೀಯವಲ್ಲವೆಂದು ತಿಳಿಯುವುದು ಸಂಸ್ಕೃತಿಯ ಮೇಲೆ ಪ್ರಹಾರ ಮಾಡಿದಂತಾಗುತ್ತದೆ”.
(ಶಾಂತಿಕಿರಣ | ಮೇ-2025 | ಪುಟ-26)

ಈ ರೀತಿಯ ಲೇಖನಗಳನ್ನು ಪ್ರಕಟಿಸುವುದರ ಮೂಲಕ “ಶಾಂತಿ ಕಿರಣಪತ್ರಿಕೆಯು ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಆ ಲೇಖಕರ ಅಭಿಪ್ರಾಯಗಳನ್ನು ಖಂಡಿಸಿ ನಾನು ಈ ಲೇಖನ ಬರೆದಿದ್ದೇನೆ.

ಡಾ. ವಿ. ವಿ. ಹೆಬ್ಬಳ್ಳಿಯವರು ಉಲ್ಲೇಖಿಸಿರುವ ಈ ಎರಡೂ ವಚನಗಳು ಪ್ರಕ್ಷಿಪ್ತ ವಚನಗಳಾಗಿವೆ. “ಕಣ್ಣರಿಯದಿದ್ದರೂ ಕರುಳರಿಯದೆ?” ಎಂಬ ಗಾದೆ ಮಾತೊಂದಿದೆ. ಈ ಗಾದೆ ಮಾತು ಬಹಳ ಮಹತ್ವದ್ದಾಗಿದೆ. ಕಣ್ಣಿಗೆ ಇವೆರಡೂ ವಚನಗಳು ಬಸವಣ್ಣನವರ ವಚನಗಳೇ ಎಂದೆನಿಸಬಹುದು. ಆದರೆ ಬಸವಣ್ಣನವರ ವ್ಯಕ್ತಿತ್ವವನ್ನು ತಿಳಿದುಕೊಂಡ ಯಾರೂ ಕೂಡ ಇವು ಬಸವಣ್ಣನವರು ರಚಿಸಿರುವ ವಚನಗಳಲ್ಲವೆಂದು ಹೇಳುತ್ತಾರೆ.

ಮೊದಲನೇ ವಚನದಲ್ಲಿ, ಏಳು ಜನ್ಮಗಳಲ್ಲಿ ಬಸವಣ್ಣನವರು ಯಾವ ಯಾವ ಹೆಸರಿನಲ್ಲಿ ಹುಟ್ಟಿ ಬಂದರೆಂಬ ವಿವರವಿದೆ.

  1. ಪ್ರಥಮ ಭವಾಂತರದಲ್ಲಿ ಶಿಲಾದರನೆಂಬ ಗಣೇಶ್ವರ.
  2. ಎರಡನೇ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರ.
  3. ಮೂರನೇ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರ.
  4. ನಾಲ್ಕನೇ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರ.
  5. ಐದನೇ ಭವಾಂತರದಲ್ಲಿ ಕಾಲಲೋಚನೆಂಬ ಗಣೇಶ್ವರ.
  6. ಆರನೇ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರ.
  7. ಏಳನೇ ಭವಾಂತರದಲ್ಲಿ ಬಸವಣ್ಣಾಯಕನೆಂಬ ಗಣೇಶ್ವರ.

ಹೀಗೆ ಏಳು ಜನ್ಮಗಳ ಹೆಸರುಗಳು ಇಲ್ಲಿವೆ. ಇಲ್ಲಿ ಏಳನೇ ಜನ್ಮದ ಬಸವಣ್ಣನವರೊಬ್ಬರ ಹೆಸರನ್ನು ಬಿಟ್ಟರೆ, ಉಳಿದೆಲ್ಲ ಹೆಸರುಗಳು ಪುರಾಣದ ಹೆಸರುಗಳಾಗಿವೆ. ಏಳನೇ ಹೆಸರು ಬಸವಣ್ಣನವರದು ಮಾತ್ರ ಐತಿಹಾಸಿಕವಾದ ಹೆಸರಾಗಿದೆ. ಈ ಆರು ಪುರಾಣದ ಹೆಸರುಗಳೊಂದಿಗೆ ಏಳನೆಯದು ಬಸವಣ್ಣನವರ ಹೆಸರಾಗಿದೆ. ಇದು ಹೇಗೆ ಸಾಧ್ಯ? ಶಿಲಾದರ, ಸ್ಕಂದ, ನೀಲಲೋಹಿತ, ಮನೋಹರ, ಕಾಲಲೋಚನ, ವೃಷಭ ಹೀಗೆ ಈ ಆರೂ ಹೆಸರುಗಳು ಪೌರಾಣಿಕ ಹೆಸರುಗಳಾಗಿವೆ. ಇವರಾರೂ ಜನ್ಮ ತಳೆದು ಭೂಲೋಕದಲ್ಲಿ ಹುಟ್ಟಿ ಬಂದವರಲ್ಲ. ಆದರೆ ಏಳನೇ ಹೆಸರಾದ ಬಸವಣ್ಣನವರು ಮಾತ್ರ ಚರಿತ್ರೆಯ ವ್ಯಕ್ತಿಗಳಾಗಿದ್ದಾರೆ. ಇದು ಹೇಗೆ ಸಾಧ್ಯವಾಗುತ್ತದೆ? ಜನ್ಮಾಂತರವೆಂಬುದು ಇದ್ದಿದ್ದರೆ, ಹಿಂದಿನ ಆರು ವ್ಯಕ್ತಿಗಳೂ ಈ ಭೂಲೋಕದಲ್ಲಿ ಹುಟ್ಟಿ ಬರಬೇಕಾಗಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಬಸವಣ್ಣನವರು ಮಾತ್ರ ಹುಟ್ಟಿ ಬಂದಿದ್ದಾರೆ. ಅವರ ಹಿಂದಿನ ಜನ್ಮಾಂತರದ ವ್ಯಕ್ತಿಗಳೂ ಹುಟ್ಟಿ ಬಂದಿಲ್ಲ. ಸತ್ಯ ಸಂಗತಿ ಹೀಗಿದ್ದಾಗ ಇದು ನಿಜವಚನ ಹೇಗಾಗುತ್ತದೆ? ಉದ್ದೇಶಪೂರ್ವಕವಾಗಿ ಪುನರ್ಜನ್ಮವನ್ನು ಸ್ಥಾಪಿಸಲೆಂದೇ ಬೊಟ್ಟಿ ವಚನಕಾರ ಈ ವಚನವನ್ನು ರಚಿಸಿ ಬಸವಣ್ಣನವರ ಹೆಸರಿನಲ್ಲಿ ಸೇರಿಸಿದ್ದಾನೆ. ಸರ್ವಜ್ಞನ ಅನೇಕ (ತ್ರಿಪದಿ) ವಚನಗಳು ಪ್ರಕ್ಷಿಪ್ರ ವಚನಗಳಾಗಿವೆ. ಈ ಸತ್ಯವನ್ನರಿಯದ ಡಾ. ಹೆಬ್ಬಳ್ಳಿಯವರು ಇದು ಬಸವಣ್ಣನವರೇ ರಚಿಸಿರುವ ವಚನವೆಂದು ನಂಬಿ ಈ ಲೇಖನ ಬರೆದಿದ್ದಾರೆ.

ಅವರು ಆರಿಸಿಕೊಂಡಿರುವ ಇನ್ನೊಂದು ವಚನ ಕೂಡ ಪ್ರಕ್ಷಿಪ್ತ ವಚನವೇ ಆಗಿದೆ. ಬಸವಣ್ಣನವರಿಗೆ ಭವಬಂಧನವೆಂದೂ ಭವಪಾಶವಾಗಿಲ್ಲ. ಹೀಗಾಗಿ ಹಿಂದಣ ಜನ್ಮದಲ್ಲಿ ಲಿಂಗವನ್ನು ಮರೆಯುವುದು, ಜಂಗಮನನ್ನು ಮರೆಯುವುದು ಸಾಧ್ಯವೇ ಇಲ್ಲ. ಬಸವಣ್ಣನವರು ಭವವನ್ನು ಗೆದ್ದವರು. ಇಹದ ಮೂಲಕ ಪರವನ್ನು ಕಂಡವರು. ಲೌಕಿಕದ ಮೂಲಕ, ಅಲೌಕಿಕವನ್ನು ಕಂಡವರು. “ಶಿವನಿಗಿಂತ ಶಿವಶರಣನಧಿಕ” ಎಂದು ಸ್ಪಷ್ಟವಾಗಿ ಹೇಳಿದವರು. ಇಂತಹವರು ಭವಪಾಶದಲ್ಲಿ ಸಿಲುಕಲು ಸಾಧ್ಯವೆ? ಹಿಂದಿನ ಜನ್ಮದ ಬಗೆಗೆ ನಂಬಲು ಸಾಧ್ಯವೆ? ಈ ಎರಡು ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರ ವಚನಗಳಲ್ಲಿ ಜನ್ಮಾಂತರದ ವಿಚಾರಗಳಿವೆಯೆಂದು ಹೇಳುವುದು ಸೂಕ್ತವಲ್ಲ.

ತಾಳ ಮಾನ ಸರಿಸವನರಿಯೆ,
ಓಜೆ ಬಜಾವಣೆ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ,
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-494)

ಎಂದು ಹೇಳಿರು ಬಸವಣ್ಣನವರು, ಗಣೇಶ್ವರನ್ನು ನಂಬಲು ಸಾಧ್ಯವೆ?

ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು
ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,
ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ.
ಕೂಡಲಸಂಗಮದೇವಾ
ಅನ್ಯವೆಂಬುದನರಿಯೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-496)

“ಸುರರು ಕಿನ್ನರರು ಕಿಂಪುರುಷರೆಂಬುವರನಾರು ಬಲ್ಲರು?” ಎಂದು ತಿಳಿಸಿರುವ ಬಸವಣ್ಣನವರು ಪುರಾಣದ ಪರಿಕಲ್ಪನೆಗಳನ್ನು ಒಪ್ಪಲು ಸಾಧ್ಯವೆ?

ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-549)

ಎಂದು ಗಟ್ಟಿಧ್ವನಿಯಲ್ಲಿ ಹೇಳಿದ ಬಸವಣ್ಣನವರು ವೈದಿಕರ ಪುನರ್ಜನ್ಮವನ್ನು ಒಪ್ಪಲುಂಟೆ? ಕಣ್ಣಿಗೆ ಕಾಣುವುದು ಮಾತ್ರ ಸತ್ಯವಲ್ಲ. ಅವರ ಹೆಸರಿನಲ್ಲಿ ವಚನ ಸಿಕ್ಕರೆ ಮಾತ್ರ ಮುಖ್ಯವಲ್ಲ ಅದು ಅವರದೊ, ಮತ್ಯಾರದೊ ಎಂಬುದನ್ನು ಮೊದಲು ನಿರ್ಣಯಿಸಬೇಕು.

ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ
ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ,
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ
ಆಚಾರದ್ರೋಹ ಪ್ರಸಾದದ್ರೋಹ.
ಇಂತೀ ಪಂಚಮಹಾಪಾತಕಂಗಳು
ಭಕ್ತಂಗಲ್ಲದೆ ಭವಿಗೆಲ್ಲಿಯದೊ
ಗುರುವಿದು, ಲಿಂಗವಿದು, ಜಂಗಮವಿದು
ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ
ಕುಂಭಿಪಾತಕ ನಾಯಕನರಕ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-768)

ಹಿಂದಣ ಪೂರ್ವಾಶ್ರಯವ ಬರೆಸಬಾರದೆಂದು ಹೇಳಿರುವ ಬಸವಣ್ಣನವರು ಪುನರ್ಜನ್ಮವನ್ನು ಒಪ್ಪಲು ಸಾಧ್ಯವೆ? ಅವರು ಪುನರ್ಜನ್ಮವನ್ನು ನಂಬಿರಲಿಲ್ಲ ಎಂಬುದಕ್ಕೆ ಇನ್ನೂ ಹಲವು ವಚನಗಳನ್ನು ಉದಾಹರಿಸಬಹುದು.

ಜನ್ಮ ಜನ್ಮಕ್ಕೆ ಹೋಗಲೀಯದೆ,
`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-834)

ಈ ವಚನದಲ್ಲಿ ಬಸವಣ್ಣನವರು “ಜನ್ಮ ಜನ್ಮಕ್ಕೆ ಹೋಗಲಿಯದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಸೋಹಂ’ ಎಂದೆನಿಸದೆ, ‘ದಾಸೋಹಂ’ ಎಂದೆನಿಸಯ್ಯಾ ಎಂಬುದು ಅವರ ಕೋರಿಕೆಯಾಗಿದೆ.

ಪೂರ್ವಜನ್ಮನಿವೃತ್ತಿಯಾಗಿ ಗುರುಕರುಣವಿಡಿದಂಗೆ
ಬಂಧನವೆಲ್ಲಿಯದೊ
ಭವಬಂಧನವೆಲ್ಲಿಯದೊ
ಸಂಕಲ್ಪ-ವಿಕಲ್ಪವೆಂಬ ಸಂದೇಹ ಕಳೆದುಳಿದಂಗೆ
ಕೂಡಲಸಂಗಮದೇವರ ತ್ರಿಸಂಧ್ಯಾಕಾಲದಲ್ಲಿ ಮಾಣದೆ ನೆನೆವಂಗೆ!
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-871)

ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಇಲ್ಲಿ ಬಳಸಿರುವ ಪೂರ್ವಜನ್ಮವೆಂಬುದು ಪೂರ್ವಾಶ್ರಮವಾಗಿದೆ. ಒಂದು ಸಲ ಭಕ್ತನಾದವ ತನ್ನ ಪೂರ್ವಾಶ್ರಮವನ್ನು ಬಿಟ್ಟು ಶರಣನಾದಾಗ ಆತನಿಗೆ ಯಾವ ಬಂಧನವೂ ಇಲ್ಲವೆಂದು ತಿಳಿಸಿದ್ದಾರೆ. ಇಲ್ಲಿ ಪೂರ್ವಾಶ್ರಮವೆಂದರೆ ಆತನ ಜಾತಿಯಾಗಿರಬಹುದು. ಆತನ ಸಂಬಂಧಗಳಾಗಿರಬಹುದು. ಆತನ ಆಸ್ತಿ-ಅಂತಸ್ತುಗಳಾಗಿರಬಹುದು. ಇವೆಲ್ಲ ಬರುತ್ತವೆ. ಶರಣನಾದ ಬಳಿಕ ಪೂರ್ವಾಶ್ರಮವನ್ನೇ ಮರೆಯಬೇಕೆಂದು ಹೇಳಿರುವ ಬಸವಣ್ಣನವರು ಪೂರ್ವಜನ್ಮವನ್ನು ಒಪ್ಪಲು ಸಾಧ್ಯವೆ? ಇಂತಹ ಅನೇಕ ವಚನಗಳಲ್ಲಿ ಬಸವಣ್ಣನವರು ಪೂರ್ವಾಶ್ರಮವನ್ನು, ಪುನರ್ಜನ್ಮವನ್ನು ತಿರಸ್ಕರಿಸಿದ್ದಾರೆ.

ಸತ್ತು ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ
ಆಕಾರ ನಿರಾಕಾರ ನೋಡಯ್ಯಾ !
ಕಾಯವಂಚಕನಲ್ಲ, ಜೀವವಂಚಕನಲ್ಲ
ನಿರಂತರ ಸಹಜ ನೋಡಯ್ಯಾ !
ಶಂಕೆಯಿಲ್ಲದ ಮಹಿಮನು ನೋಡಯ್ಯಾ,
ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ವಚನ ಸಂಖ್ಯೆ-941)

ಇದು ಬಸವಣ್ಣನವರ ಮಹತ್ವದ ವಚನವಾಗಿದೆ.

ಸತ್ತು ಹುಟ್ಟುವನಲ್ಲ” ಎಂಬ ನುಡಿ ಅತ್ಯಂತ ಮಹತ್ವದ್ದಾಗಿದೆ. ಸತ್ತು ಹುಟ್ಟುವುದು, ಸಂದೇಹ ಸೂತಕಿಯಾಗಿರುವುದು ಶರಣರಲ್ಲಿ ಸಾಧ್ಯವೇ ಇಲ್ಲ. “ಇದೇ ಜನ್ಮ ಕಡೆ” ಎಂದು ಹೇಳಿರುವ ಶರಣರು ಪುನರ್ಜನ್ಮವನ್ನು ನಂಬಲು ಸಾಧ್ಯವೆ? ಶರಣರ ಇಂತಹ ಇನ್ನೂ ಅನೇಕ ವಚನಗಳನ್ನು ಉದಾಹರಿಸಬಹುದಾಗಿದೆ. ಶರಣರು ಪುನರ್ಜನ್ಮವನ್ನು ನಂಬುತ್ತಿರಲಿಲ್ಲವೆಂಬುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದಾಗಿದೆ. ಆ ವಿವರಗಳಿಗೆ ನಾನಿಲ್ಲಿ ಹೋಗುವುದಿಲ್ಲ. ಈ ಎಲ್ಲ ಆಕರಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬುತ್ತಿರಲಿಲ್ಲವಂದು ಸ್ಪಷ್ಟಪಡಿಸಬಯಸುತ್ತೇನೆ. ಡಾ. ವಿ. ವಿ. ಹೆಬ್ಬಳ್ಳಿಯವರು ಆಯ್ದುಕೊಂಡಿರುವ ವಚನಗಳು ಬೊಟ್ಟಿ ವಚನಗಳೆಂದು ಹೇಳಲು ಬಯಸುತ್ತೇನೆ.

ಡಾ. ವಿ. ವಿ. ಹೆಬ್ಬಳ್ಳಿಯವರು ಮಾತ್ರವಲ್ಲ, ಇನ್ನೂ ಕೆಲವು ಲೇಖಕರು ಈ ರೀತಿಯ ಲೇಖನಗಳನ್ನು ಬರೆದಿದ್ದಾರೆ. ಶರಣರು ಜಾತಿಯನ್ನೇ ನಿರಾಕರಿಸಿಲ್ಲವೆಂದು ಹೇಳಿರುವ ಮಹಾತ್ಮರೂ ಇದ್ದಾರೆ. ಶರಣರು ಹುಟ್ಟಿರಲೇ ಇಲ್ಲ, ಇದೆಲ್ಲಾ ಊಹಾಪೋಹ ಎಂದು ಹೇಳಿರುವ ಪುಣ್ಯಾತ್ಮರೂ ಇದ್ದಾರೆ. ಇತ್ತೀಚಿಗೆ ಪ್ರಕಟವಾಗಿರುವ ಬಸವ ದರ್ಶನ” ಕೃತಿಯಲ್ಲಿ ಬಂದಿರುವ ಲೇಖನಗಳನ್ನು ಓದಿದಾಗ ಈ ಪರೋಹಿತಶಾಹಿಗಳ ಕೊಳಕು ಮನಸ್ಸು ಹೇಗಿದೆಯೆಂಬುದು ಗಮನಕ್ಕೆ ಯಾವ ಶರಣರು ಪುನರ್ಜನ್ಮವನ್ನು ನಿರಾಕರಿಸಿದರೂ ಅವರ ಮೂಲಕವೇ ಮತ್ತೆ ಗಮನಕ್ಕೆ ಬರುತ್ತದೆ. ಯಾವ ಶರಣರು ಮೌಢ್ಯತೆಯನ್ನು ವಿರೋಧಿಸಿದರೋ, ಅದೇ ಮೌಢ್ಯತೆಯನ್ನು ಬಿತ್ತುವ ಕೆಲಸ ಉದ್ದೇಶಪೂರ್ವಕವಾಗಿ ನಡೆದಿದೆ. ನಮ್ಮವರ ಮೂಲಕವೇ ನಮ್ಮ ಸಿದ್ಧಾಂತಗಳನ್ನು ತಿರುಚುವ ಕಾರ್ಯ ನಡೆದಿದೆ.

ಲಿಂಗಾಯತ ಧರ್ಮ ಸಂಸ್ಥಾಪಕರಾದ ಬಸವಣ್ಣನವರೇ ಪುನರ್ಜನ್ಮವನ್ನು ನಂಬುತ್ತಿದ್ದರು, ಜಾತಿವ್ಯವಸ್ಥೆಯನ್ನು ಅವರು ವಿರೋಧಿಸಿರಲಿಲ್ಲ. ಅವರು ಕ್ರಾಂತಿಕಾರಿಗಳಲ್ಲ ಎಂಬ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯವೇ ಇದೆ. “ಬಸವ ದರ್ಶನ” ಪುಸ್ತಕದ ಹಿಂದೆ ಮತೀಯವಾದಿಗಳ ಕೈವಾಡವಿದೆಯೆಂಬ ಸತ್ಯ ಈಗಾಗಲೇ ಜಗಜ್ಜಾಹಿರವಾಗಿದೆ.

ಪುರೋಹಿತಶಾಹಿಯೆಂಬುದು ಯಾವಾಗಲೂ ನಮ್ಮವರ ಮೂಲಕವೇ ನಮ್ಮನ್ನು ಛಿದ್ರಛಿದ್ರಗೊಳಿಸುತ್ತದೆ. “ವಚನ ದರ್ಶನ” ಕೃತಿಯ ಹಿಂದೆ ಪುರೋಹಿತಶಾಹಿ ಹಾಗೂ ಮತೀಯವಾದಿಗಳ ಕೈವಾಡವಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಪುರೋಹಿತಶಾಹಿಗಳಿಗೆ ಬೇಕಾಗಿಲ್ಲ. ನೂರಾರು ಉಪಜಾತಿಗಳು ಲಿಂಗಾಯತ ಧರ್ಮದಲ್ಲಿವೆ. ಅವುಗಳಲ್ಲಿ ಭೇದ ಹುಟ್ಟಿಸಿ, ಒಡೆದಾಳುವುದೇ ಪುರೋಹಿತಶಾಹಿಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಅದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದನ್ನು ತಪ್ಪಿಸಿದವರು, ಪುರೋಹಿತ ಮಠಾಧೀಶರು ಹಾಗೂ ಕೇಂದ್ರದ ಮತೀಯವಾದಿಗಳೇ ಆಗಿದ್ದಾರೆ. ಈ ಸತ್ಯವನ್ನು ಬಸವಾನುಯಾಯಿಗಳು ಅರಿಯಬೇಕಾಗಿದೆ. ನಮ್ಮವರ ಮೂಲಕವೇ ನಮ್ಮ ಶರಣರನ್ನು ಮೂಲೆಗುಂಪು ಮಾಡುವ ಕೆಲಸ ಬಹಿರಂಗವಾಗಿಯೇ ನಡೆದಿದೆ. ಈ ಸತ್ಯವನ್ನು ಪ್ರತಿಯೊಬ್ಬ ಲಿಂಗಾಯತರೂ ಅರ್ಥಮಾಡಿಕೊಳ್ಳಬೇಕಾಗಿದೆ.

ಪ್ರಕಟಿಸುವ ಮೊದಲು ಬೊಟ್ಟಿ ವಚನಗಳನ್ನು ತೆಗೆದುಹಾಕಬೇಕಾಗಿದೆ. ಅದಕ್ಕಾಗಿ ಒಂದು ಸಂಶೋಧಕರ ಸಮಿತಿಯನ್ನು ಸರಕಾರ ನೇಮಿಸಬೇಕು. ಇಲ್ಲದಿದ್ದರೆ ಇನ್ನೂ ಹೆಚ್ಚು ಅವಾಂತರಗಳು ನಡೆಯುತ್ತವೆ. ಇನ್ನೂ ಹತ್ತು ಸಂಪುಟಗಳಾಗುವಷ್ಟು ಹೊಸ ವಚನಗಳು ದೊರಕಿವೆ. ಅವುಗಳನ್ನು ಪರಿಷ್ಕರಿಸುವ, ಕಾರ್ಯವಾಗಬೇಕಾಗಿದೆ. ಇದಕ್ಕಾಗಿ “ಶರಣಸಾಹಿತ್ಯ ಸಂಶೋಧನಾ ಪ್ರಾಧಿಕಾರ” ಪ್ರಾರಂಭಿಸಬೇಕೆಂದು ಒಂದು ಸಭೆಯಲ್ಲಿ ನಾನು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದೆ. ಆದರೆ ಅದಕ್ಕವರು ಏನೂ ಹೇಳಲಿಲ್ಲ. “ಬಸವಣ್ಣ ಸಾಂಸ್ಕೃತಿಕ ನಾಯಕ” ನೆಂದು ಹೇಳಿದರೆ ಸಾಲದು. ಬಸವಾದಿ ಶರಣರ ನಿಜ ಸತ್ವವನ್ನು ಮುಂದಿನ ಜನಾಂಗ ಅರಿತುಕೊಳ್ಳುವಂತೆ ಮಾಡಬೇಕು.

2025 ರಲ್ಲಿ “ಬಸವ ವಚನ” ಎಂಬ ಕೃತಿ ಬೀದರದ ಬಸವ ಕಾಯಕ ದಾಸೋಹ ಫೌಂಡೇಶನ್‌ದಿಂದ ಪ್ರಕಟವಾಗಿದೆ. ಡಾ. ಸೋಮನಾಥ ಯಳವಾರ ಮತ್ತು ಡಾ. ರಘುಶಂಖ ಭಾತಂಬ್ರಾ ಈ ಕೃತಿಯ ಸಂಪಾದಕರಾಗಿದ್ದಾರೆ. ಬಸವಣ್ಣನವರ 48 ಖೊಟ್ಟಿ ವಚನಗಳನ್ನು ತೆಗೆದು ಹಾಕಿ ಈ ಪುಸ್ತಕವನ್ನು ಪ್ರಕಟಿಸಿರುವುದಾಗಿ ಡಾ. ಸೋಮನಾಥ ಯಳವಾರ ಅವರು ನನಗೆ ತಿಳಿಸಿದರು. ಇದು ಅತ್ಯಂತ ಸ್ತುತ್ಯಾರ್ಹ ಕಾರ್ಯವಾಗಿದೆ. ಇವರು ಕೈಬಿಟ್ಟಿರುವ 48 ಕೊಟ್ಟಿ ವಚನಗಳಲ್ಲಿ ಡಾ. ವಿ. ವಿ. ಹೆಬ್ಬಳ್ಳಿಯವರು ಆಯ್ದುಕೊಂಡಿರುವ ವಚನವೂ ಸೇರಿದೆ. ಹೀಗಾಗಿ ಇದು ಖೊಟ್ಟಿ ವಚನವೆಂಬುದು ಈಗ ಸ್ಪಷ್ಟವಾಗಿದೆ. ಈ 48 ಹೊಟ್ಟಿ ವಚನಗಳನ್ನು ತೆಗೆದು ಹಾಕಿ ಬಸವಣ್ಣನವರ ವಚನಗಳನ್ನು ಪ್ರಕಟಿಸಿರುವ ಈ ಸಂಪಾದಕರು ಅಭಿನಂದನಾರ್ಹರಾಗಿದ್ದಾರೆ. ಈ ಕಾರ್ಯ ಸಮಗ್ರವಾಗಿ, ಪೂರ್ಣ ಪ್ರಮಾಣದಲ್ಲಿ ನಡೆಯಬೇಕಾದರೆ “ಶರಣಸಾಹಿತ್ಯ ಸಂಶೋಧನಾ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಬೇಕು. ಆ ಮೂಲಕ ಶರಣರ ವಚನಗಳ ಸಂಗ್ರಹ, ಸಂಸ್ಕರಣ. ಪರಿಷ್ಕರಣ, ಸಂಪಾದನೆ, ಪ್ರಕಟನೆಯ ಕಾರ್ಯ ನಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಲಿಂಗಾಯತ ನಾಯಕರು ಸರಕಾರವನ್ನು ಒತ್ತಾಯಿಸಬೇಕಾಗಿದೆ. ಶರಣರ ಸಾಹಿತ್ಯವನ್ನು 21 ನೇ ಶತಮಾನದಲ್ಲಿಟ್ಟು ಹೊಸ ಓದು ಪ್ರಾರಂಭಿಸುವ ಕೆಲಸವೂ ಆಗಬೇಕಾಗಿದೆ. ಒಂದು ಸಲ ಈ ಖೊಟ್ಟಿ ವಚನಗಳನ್ನು ತೆಗೆದು ಹಾಕಿಬಿಟ್ಟರೆ, ಇಂತಹ ಅವಘಡಗಳು ನಡೆಯುವುದಿಲ್ಲ. ಈ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ. ಈ ವಿಷಯದತ್ತ ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ, ಬಸವ ಕೇಂದ್ರಗಳು, ಬಸವ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಮತ್ತು ಶರಣರ ಹೆಸರಿನಲ್ಲಿ ಸಕ್ರಿಯವಾಗಿರುವ ಎಲ್ಲ ಸಂಘ ಸಂಸ್ಥೆಗಳು ಜಾಗೃತರಾಗಿ ಸಂಘಟಿತರಾಗಬೇಕಾಗಿದೆ. ಇಲ್ಲದಿದ್ದರೆ ನಮ್ಮವರಿಂದಲೇ ನಮ್ಮನ್ನು ನಿರ್ನಾಮ ಮಾಡುವ ಕಾರ್ಯವನ್ನು ಮತೀಯ ಶಕ್ತಿಗಳು, ಪುರೋಹಿತಶಾಹಿಗಳು ಮಾಡುತ್ತಲೇ ಇರುತ್ತವೆ. ಕೇವಲ ಲಿಂಗಾಯತರು ಮಾತ್ರವಲ್ಲ, ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ನಂಬಿಕೆ ಇದ್ದವರೆಲ್ಲ ಕೂಡಿ ಇಂತಹ ಜನಪರ ಹೋರಾಟಗಳನ್ನು ಹುಟ್ಟು ಹಾಕಬೇಕಾಗಿದೆ.

ಡಾ. ಬಸವರಾಜ ಸಬರದ,
ಮನೆ ನಂ. 1, 2 ನೇ ಮೇನ್‌, 2 ನೇ ಕ್ರಾಸ್‌,
ಅಮರಜ್ಯೋತಿ ಲೇ ಔಟ್, ಕುಪ್ಪಸ್ವಾಮಿ ಪಾರ್ಕ್,
ಹೆಬ್ಬಾಳ,
ಬೆಂಗಳೂರು-560032,
ಮೋಬೈಲ್‌ ಸಂ. 98866 19220

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply