ಬಸವಣ್ಣನವರ ವಚನ ವಿಶ್ಲೇಷಣೆ |  ಡಾ. ನೀಲಾಂಬಿಕಾ ಪೋಲಿಸ ಪಾಟೀಲ, ಕಲಬುರಗಿ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.
ನನೆಯೊಳಗಣ ಪರಿಮಳದಂತಿದ್ದಿತ್ತು.
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1)

ಬಸವಣ್ಣನವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಮತ್ತು ಮಹಾನ್ ಮಾನವತಾವಾದಿಗಳು. ಮಾನವ ಇಹ-ಪರ ಎರಡನ್ನೂ ಹೇಗೆ ಸಾಧಿಸಕೊಳ್ಳಬೇಕೆಂಬುದನ್ನು ತಮ್ಮ ನಡೆ ಮತ್ತು ನುಡಿಯಿಂದ ತೋರಿಸಿ ಕೊಟ್ಟವರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ, ಸಾಧನಾ ಭೂಮಿ ಅದೇ ಜಿಲ್ಲೆಯ ಕೂಡಲ ಸಂಗಮ, ಕಾಯಕ ಭೂಮಿ ಬೀದರ ಜಿಲ್ಲೆಯ ಬಸವಕಲ್ಯಾಣ. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಅಕ್ಕ ಶರಣೆ ಅಕ್ಕನಾಗಮ್ಮ, ಮಡದಿಯರು ಶರಣಿ ಗಂಗಾಬಿಕೆ ಮತ್ತು ಶರಣಿ ನೀಲಾಂಬಿಕಾ, ಮಗ ಬಾಲಸಂಗಣ್ಣ. ಅವರ ಕಾಯಕ ಕಲ್ಯಾಣದ ಕಳಚುರಿ ವಂಶದ ರಾಜ ಬಿಜ್ಜಳನಲ್ಲಿ ಕರಣಿಕರಾಗಿ ಮುಂದೆ ಆ ರಾಜ್ಯದ ಪ್ರಧಾನಮಂತ್ರಿಯಾಗಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿದವರು. ಲಿಂಗೈಕ್ಯರಾದದ್ದು ಕೂಡಲ ಸಂಗಮದಲ್ಲಿ.

ವ್ಯಾಖ್ಯಾನ:
ಬಸವಣ್ಣನವರು ಭಕ್ತಸ್ಥಲದಲ್ಲಿಯ ಪಿಂಡಸ್ಥಲದ ವಚನವಿದು. ಪಿಂಡವೆಂದರೆ ದೇಹ, ತನು. ಈ ಪ್ರಸಾದ ಕಾಯದೊಳಗೆ ಶಿವ ಅಡಗಿರುವ ಪರಿಯನ್ನು ಈ ವಚನ ನಿರ್ದೇಶಿಸುತ್ತದೆ. ಸ್ಥೂಲ, ಸೂಕ್ಷ್ಮ, ಕಾರಣಗಳಿಂದ ಕೂಡಿದ ಈ ಶರೀರದಲ್ಲಿಯ ಮಹತ್ವ ಅಪಾರವಾದುದು. ಅಂತಹ ಪರಾತ್ಮರ ವಸ್ತುವಿನ ನಿಲುವನ್ನು ಬಸವಣ್ಣನವರು ಅರ್ಥಪೂರ್ಣ ಸಾದೃಶ್ಯಗಳಿಂದ ಉಪಮಾಲಂಕಾರ ರೀತಿಯೊಳು ವಿವರಿಸುವರು. ಈ ವಚನದಲ್ಲಿ ಮೊದಲನೇಯ ಉಪಮೆ ಉದಕದೊಳಗೆ ಬಚ್ಚಿಟ್ಟ ಬಯ್ಕೆ, ಎರಡನೇಯ ಉಪಮೆ ಸಸಿಯೊಳಗಿರುವ ಅಂದರೆ ಗಿಡದೊಳಗಿರುವ ರಸದ ರುಚಿ, ಮೂರನೇಯ ಉಪಮೆ ಮೊಗ್ಗಿನೊಳಗಿರುವ ಪರಿಮಳ, ನಾಲ್ಕನೇಯ ಉಪಮೆ ಕನ್ನೆಯ ಸ್ನೇಹ.

ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ಡಿತು:
ಉದಕವೆಂದರೆ ನೀರು. ನೀರಿನಲ್ಲಿ ಬೆಂಕಿಯಿದೆ, ಆದರೆ ಅದು ಸೂಕ್ಷ್ಮ ರೂಪದಲ್ಲಿದ್ದು ಅವ್ಯಕ್ತ ರೂಪದಲ್ಲಿದೆ. ಆ ಬೆಂಕಿ ಕಣ್ಣಿಗೆ ಕಾಣುವಂತಹದಲ್ಲ, ಆದರೆ ಅದರೊಳಗೆ ಬೆಂಕಿಯಿದೆಯೆಂಬುದಂತೂ ಸತ್ಯ. ಇಂದು ಆಧುನಿಕ ಕಾಲಘಟ್ಟದಲ್ಲಿ ಕಣ್ಣಿಗೆ ಕಾಣುವ ಬೆಳಕಿನ ಮೂಲವಾದ ವಿದ್ಯುತ್ ನೀರಿನಿಂದ ತಯಾರಾಗುತ್ತಲಿರುವದು. ಆದರೆ ಬಚ್ಚಿಟ್ಟುಕೊಂಡ ಕಿಚ್ಚು ಜಲವನ್ನು ಸುಡುವುದಿಲ್ಲ. ಹತ್ತಿ ಉರಿಯುತ್ತಿರುವ ಬೆಂಕಿಯನ್ನು ಸುಡದೆ ಬಿಡುವುದಿಲ್ಲ. ಇದು ಉದಕದ ವೈಶಿಷ್ಠ್ಯ. ಹಾಗೆಯೆ ಈ ತನು ಸಹ ಜಲ ಬಿಂದುವಿನಿಂದ ನಿರ್ಮಾಣಗೊಂಡು ರಕ್ತ, ಮಾಂಸ, ಮೂಳೆ ಮುಂತಾದ ರೀತಿಯೊಳು ಬೆಳೆದು ನಂತರ ಚರ್ಮದ ಕವಚವಾಗಿ ತನುವಾಯಿತು. ಇಂತಹ ತನುವಿಲ್ಲಿ ಪರಶಿವ ಕಿಚ್ಚಿನ ರೂಪದೊಳು ಇರುವನು.

ಸಸಿಯೊಳಗಣ ರಸದ ರುಚಿಯಂತಿದ್ದಿತ್ತು:
ಸಸಿ ಅರ್ಥಾತ ಮರ ಬೃಹದಾಕಾರದಲ್ಲಿ ಬೆಳೆದು ನಿಂತಿರುವುದಕ್ಕೆ ಹಿಂದೆ ಅನೇಕ ವಿಷಯಗಳುಂಟು. ಭೂಮಿಯಿಂದ ನೀರು, ಮಣ್ಣು ಹೀರಿಕೊಂಡು ಸೂರ್ಯನ ಬಿಸಿಲಿನ ಸಹಾಯ ಪಡೆದು ಬೆಳೆಯುವದು. ಆ ಎಲ್ಲದರ ಸಾರವೆ ಅದು ಕೊಡುವ ಫಲ. ಆ ಹಣ್ಣು ನೋಡುವುದರಿಂದ ಮುಟ್ಟುವದರಿಂದ ಅದರ ಸಾರ ಸವಿಯಲು ಆಗುವುದಿಲ್ಲ. ತಿಂದಾಗ ಮಾತ್ರ ಆನಂದ ಪಡಲು ಹೇಗೆ ಸಾಧ್ಯವೋ ಹಾಗೆ ತನುವಿನೊಳಗಿನ ಅನೇಕ ಅರಿಷಡ್ವರ್ಗಗಳನ್ನು ತೆಗೆದು ಒಳಗಿರುವ ಪರಮ ಸತ್ಯವನ್ನು ಕಾಣಬಹುದು.

ನೆನೆಯೊಳಗಣ ಪರಿಮಳದಂತೆ:
ಹೂವು ಅರಳಿ ಪರಿಮಳ ಸೂಸುವ ಮೊದಲು ಮೊಗ್ಗಾಗಿರುವದು. ಪರಿಮಳವು ಅದರೊಳು ಸೂಕ್ಷ್ಮ ರೂಪದಲ್ಲಿರುವದು. ಮೊಗ್ಗು ಅರಳುವ ತನಕ ಹೇಗೆ ಪರಿಮಳವು ಪಡೆಯಲು ಸಾಧ್ಯವಿಲ್ಲವೋ ಹಾಗೆ ಈ ಪಿಂಡ ಅರಿವಿನಿಂದ ಅರಳ ಬೇಕಾಗುವದು. ಕೇವಲ ಜ್ಞಾನದಿಂದ ಇದು ಸಾಧ್ಯವಿಲ್ಲ. ಜ್ಞಾನ ಕ್ರಿಯೆಯೊಳಗೆ ಅಳವಡಬೇಕು. ಆಗ ಮಾತ್ರ ಅರಿವು ಉಂಟಾಗಲು ಸಾಧ್ಯವಿದೆ. ಇಂತಹ ಅರಿವು ಪಡೆದು ಅರಳಿ ಮಹಾನುಭಾವಿಯಾಗಬೇಕು.

ಕನ್ನೆಯ ಸ್ನೇಹದಂತಿದ್ದಿತ್ತು:
ಕನ್ನೆಯ ಸ್ನೇಹ ಬಸವಣ್ಣನವರ ಅರ್ಥಪೂರ್ಣ ಶಬ್ದ ಪ್ರಯೋಗಕ್ಕೆ ಹಿಡಿದ ಕೈಗನ್ನಡಿ. ಅವರು ನುಡಿದಂತೆ ನಡೆದು ಜಾಣರಾದವರು. ಇಲ್ಲಿ ಕನ್ನೆ ಶಬ್ದ ಪ್ರಯೋಗದಲ್ಲಿ ಇದನ್ನು ಕಾಣಬಹುದಾಗಿದೆ. ಕನ್ನೆಯು ಮುಗ್ಧತೆಗೆ ಪ್ರತೀಕ. ನಿರ್ಮಲ, ನಿಷ್ಕಲ್ಮಶ, ನೀರಿನಂತೆ ತಿಳಿಯಾಗಿರುವವಳು. ಏಕೆಂದರೆ ಪರಶಿವ ಒಲಿಯುವದು ಇಂತಹ ಗುಣಗಳಿಗೆ ತಾನೇ? ಆತ ನಾದಪ್ರಿಯ, ವೇದಪ್ರಿಯ ಅಲ್ಲದೇ ಭಕ್ತಪ್ರಿಯನು. ಅಂತಹ ಮುಗ್ಧ ಭಕ್ತಿ ಆ ಕನ್ನೆಯೊಳಗೆ ಕಾಣಬಹುದು.

ಹೀಗೆ ಈ ವಚನದಿಂದ ಅರಿಯಬಹುದಾದ ಅತೀ ಮುಖ್ಯ ಅಂಶವೆದರೆ ಪರಮಾತ್ಮ ಹೊರಗೆ ಎಲ್ಲೂ ಇಲ್ಲ. ಆತ ನಮ್ಮೊಳಗೆ ಇದ್ದಾನೆ. ನಮ್ಮೊಳಗಿರುವ ಆ ದೈವಿಸ್ವರೂಪ ಅರಿವು ಮತ್ತು ಇಷ್ಟಲಿಂಗದಿದ ಮಾತ್ರ ಕಾಣಬುದು. ನಮ್ಮ ನಿಲುವು ಸ್ಪಷ್ಟವಾಗಿಸಿಕೊಂಡು ಏಕಚಿತ್ತದಿಂದ ದೃಢವಾದ ಮನಸ್ಸಿನಿಂದ ಪೂಜಿಸಿದರೆ ನಮ್ಮೊಳಗಿರುವ ಸೃಷ್ಟಿಕರ್ತ ಕಾಣುವನಲ್ಲದೆ ನಾವು ಅವನೇ ಆಗಬಹುದು.

ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್‌ ನಂ. 94821 47084

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply