
ಕಲ್ಯಾಣದಲ್ಲಿ ರಾಜಪ್ರಭುತ್ವ ನಮ್ಮನ್ನು ಉಚ್ಚಾಟನೆಗೊಳಿಸಿತ್ತು. ಬಿಜ್ಜಳ ಮಹಾರಾಜರು ಆರು ತಿಂಗಳ ಕಾಲ ನಾನು ಇಲ್ಲಿ ಇರಬಾರದು ಎಂದು ಆಜ್ಞಾಪಿಸಿದ್ದರು. ಆದರೆ ಅವರ ಮಗ ಸೋವಿದೇವ ನನಗೆ ಜೀವಿತಾವಧಿಯಲ್ಲಿ ಕಲ್ಯಾಣಕೆ ಬರಬಾರದು ಎನ್ನುವ ಸುಗ್ರೀವಾಜ್ಞೆ ಹೊರಡಿಸಿದ್ದ. ನಾನು ಅಪ್ಪಣ್ಣಗಳು, ಮಸಣಯ್ಯನವರು ಗುರುಬಸವ ಮಹಾಂತರಂತಹ ಅನೇಕ ತೊಂಬತೈದು ಶರಣರು ಆರಂಭದಲ್ಲಿ ನಮ್ಮ ಕಲ್ಯಾಣ ನಿರ್ಗಮನದ ಪ್ರಯಾಣದಲ್ಲಿ ಭಾಗವಹಿಸಿದ್ದರೂ ಕೂಡ ಅವರನ್ನು ಶರಣಧರ್ಮಗಳ ಉಪದೇಶಕ್ಕಾಗಿ ಆಯಾ ಆಯಾ ಊರುಗಳಲಿ ಬಿಟ್ಟು ನಾನು ಮತ್ತು ಅಪ್ಪಣ್ಣಗಳು ನಡೆಯುತ್ತ ನಡೆಯುತ್ತ ಬಾಗೇವಾಡಿಗೆ ಬಂದು ನಿಂತಿದ್ದೆವು. ಇಲ್ಲಿಂದ ಸಂಗಮ ಇನ್ನೂ ಐವತ್ತು ಹರಿದಾರಿಗಳ ದೂರವಿತ್ತು.
ಆಗ ಮಟ ಮಟ ಮಧ್ಯಾಹ್ನವಾಗಿತ್ತು. ನಾವು ಈಗ ಬಾಗೇವಾಡಿಯ ನಂದೀಶ್ವರನ ಗುಡಿಯಿಂದ ಒಂದು ಅರ್ಧಾರಿಗೆ ದೂರದಲ್ಲಿದ್ದೆವು. ಇಂದು ದಟ್ಟವಾದ ಮರದ ತೋಪಿನ ಕೆಳಗೆ ಬಂದು ನಿಂತಿದ್ದೆವು. ನಂದೀಶ್ವರ ಗುಡಿಯ ಶಿಖರ ಕಾಣುತ್ತಿತ್ತು. ನನಗೆ ಕಣ್ಣುಗಳು ಒತ್ತರಿಸಿ ಬಂದವು. ಸುಮಾರು ಐವತ್ತು ವರ್ಷಗಳ ಹಿಂದೆಯೇ ನಾನು ಈ ಊರನ್ನು ತ್ಯಜಿಸಿದ್ದೆ. ಈ ಊರಲ್ಲಿ ಇದ್ದದ್ದು ಹತ್ತು ವರುಷಗಳು ಮಾತ್ರ. ಆ ಹತ್ತು ವರ್ಷಗಳಲ್ಲಿ ಅನೇಕ ನೆನಪಿನ ಬುತ್ತಿಗಳು ನನಗೆ ಈ ಊರು ಕೊಟ್ಟಿತ್ತು. ನಾನು ಈ ಊರು ತ್ಯಜಿಸಿದ್ದು ಈ ಊರಿನ ದೆಸೆಯಿಂದಲ್ಲ, ಅಗ್ರಹಾರದ ದೆಸೆಯಿಂದ. ಈ ಅಗ್ರಹಾರದ ಜನ ನನ್ನ ತಂದೆ ಮಂಡಿಗೆ ಮಹಾರಾಜ ಮಾದರಸನನ್ನು ಆರಾಮವಿರಲು ಬಿಡಲೇ ಇಲ್ಲ. ನಾನಿನ್ನು ಚಿಕ್ಕ ಮಗ. ನನ್ನಣ್ಣ ದೇವರಾಜ ಲಿಂಗೈಕ್ಯನಾದ. ಆತನನ್ನು ಹೂಳಬೇಕೋ ಅಥವಾ ಸುಡಬೇಕೊ? ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ನಮ್ಮ ವೈಯಕ್ತಿಕ ದುಃಖ ಅಭಿವ್ಯಕ್ತಿಯ ಮೇಲೆ ಪ್ರಹಾರ ಮಾಡಿದ್ದರು ಈ ವೈದಿಕರು. ಅಣ್ಣನನ್ನು ಶಿವಾಗಮದ ಪ್ರಕಾರ ಅಪ್ಪ ಹೂಳಿ, ಈ ವೈದಿಕರಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ. ಬಾಗುಡಿಯ ಅಗ್ರಹಾರವೆಂದರೆ ಬಹಿಷ್ಕಾರದ ಪ್ರತಿರೂಪವೇ ಆಗಿತ್ತು.
ದಾರಿಯಲ್ಲಿ ಬರುವಾಗಲೇ ಅಣ್ಣ ದೇವರಾಜನ ಸಮಾಧಿ ಮಾಡಿದ ಸ್ಥಳದಲ್ಲಿ ಅದಮ್ಯ ಕಾಡು ಬೆಳೆದು ನಿಂತಿತ್ತು. ಕ್ಷಣ ಹೊತ್ತು ನಾನು ಮತ್ತು ಅಪ್ಪಣ್ಣಗಳು ಅಲ್ಲಿ ಕುಳಿತೆವು. ಅಲ್ಲಿ ಅಣ್ಣ ದೇವರಾಜ ಮಣ್ಣಿನಲ್ಲಿ ಮಣ್ಣಾಗಿ ಯಾವುದೋ ಗಿಡಗಳಿಗೆ, ಆಹಾರವಾಗಿ ಮತ್ತೆ ಬೆಳೆದು ನಿಂತಿದ್ದ. ನಾನು ಪೂರ್ವಾಶ್ರಮದ ಬಂಧಗಳನ್ನು ಧಿಕ್ಕರಿಸಿದರೂ ಯಾಕೋ ದೇವರಾಜ ನನ್ನನ್ನು ಬಹುವಾಗಿ ಕಾಡಿದ. ನನ್ನನ್ನು ಎತ್ತಿಕೊಳ್ಳಲು ಹೋಗಿ ಮತ್ತೆ ನೆಲಕ್ಕೆ ಕೆಡವುತ್ತಿದ್ದ ದೇವರಾಜ. ಎಲ್ಲರಿಂದಲೂ ಬೈಸಿಕೊಳ್ಳುತ್ತಿದ್ದ. ಅಕ್ಕ, ಅಮ್ಮ ಎಲ್ಲರೂ ಬೈಯ್ಯುತ್ತಿದ್ದರು. ನಂದೀಶ್ವರ ಗೋಪುರ ಹಾಗೆಯೇ ಹೊಳೆಯುತ್ತಿತ್ತು. ಇದನ್ನು ಕಟ್ಟಲಿಕ್ಕೆ ಬಲದೇವ ಸಿದ್ಧರಸರೆಂಬ ನನ್ನ ಸೋದರ ಮಾವಂದಿರು ಅಂದರೆ ನನ್ನ ತಾಯಿಯ ಅಣ್ಣಂದಿರು ಚಾಲುಕ್ಯ ರಾಜರನ್ನು ಒಪ್ಪಿಸಿದ್ದರು. ಅದರ ಪ್ರಕಾರ ಬೊಕ್ಕಸದಿಂದ ಹಣ ಬಂದು ನಂದೀಶ್ವರನ ಗುಡಿಯಾಗಿ ಜನ್ಮತಾಳತ್ತು. ಅಪ್ಪಣ್ಣ ನಾವು ಪುರ ಪ್ರವೇಶಿಸಿದೆವು. ನಾನು ಚಿಕ್ಕವನಾಗಿದ್ದಾಗ ಇದ್ದ ಆ ಊರಿಗೂ ಈ ಊರಿಗೂ ಬಹಳ ವ್ಯತ್ಯಾಸ ಕಂಡುಬರುತ್ತಿತ್ತು. ಈ ನಂದೀಶ್ವರ ಗುಡಿ ಪ್ರವೇಶಿಸಿದೆವು. ನಾನು ನೆನಪುಗಳಿಗೆ ಮುಖಾಮುಖಿಯಾಗಬೇಕಾಗಿತ್ತು. ಈ ಗುಡಿಯಲ್ಲಿ ಅಮ್ಮ ಹಾಗು ಅಕ್ಕ ನನ್ನನ್ನು ಎತ್ತಿಕೊಂಡು ಬಂದು ಪೂಜಾ ಕಾರ್ಯಗಳನು ಮಾಡಿಸಿಕೊಂಡು ಹೋಗುತ್ತಿದ್ದರು. ನನಗೆ ಈ ನಂದಿಯ ವಿಗ್ರಹವೇ ವಿಸ್ಮಯ. ಶಿವನ ವಾಹನವಾಗಿದ್ದ ಈ ನಂದಿ ನನ್ನ ಹುಟ್ಟಿಗೂ ಕಾರಣವಾಗಿದ್ದ ಎಂದು ಅಮ್ಮ ಹೇಳುತ್ತಿದ್ದಳು. ನಾವು ನಂದಿಯನ್ನು ಹಾಗೆಯೇ ತದೇಕ ಚಿತ್ತದಿಂದ ನೋಡಿದೆ. ಅಪ್ಪಣ್ಣಗಳು ಹಾಗೆಯೇ ನೋಡಹತ್ತಿದ್ದರು.
ಜಯವೆಂದು ಆರತಿ ಬೆಳಗಿರೋ
ಹರನೆಂದು ಆರತಿ ಬೆಳಗಿರೋ
ಮಾದಲಾಂಬೆಯ ಗರ್ಭದಲುದಯಿಸಿದ
ಮೂಜಗಕೆ ಬೆಳಕನು ಕಲ್ಪಿಸಿ
ಬಿಜ್ಜಳನ ಮಂತ್ರಿಯಾದ ಬಸವಯ್ಯಗೆ ಎಂದು ಆರತಿ ಮಾಡಿ ನಮಗೆ ಜ್ಯೋತಿ ಮುಂದೆ ಹಿಡಿದರು. ನಾನು ತಬ್ಬಿಬ್ಬಾದೆ. ಇದು ನೀವು ಹೇಳುವ ಮಂತ್ರಾರತಿ ಯಾಕೋ ಸರಿಯಲ್ಲ ಅನ್ನಿಸುತ್ತದೆ. ಎಲ್ಲಕ್ಕಿಂತ ದೊಡ್ಡವನು ಲಿಂಗಯ್ಯ ಶಿವನು. ಆತನ ಬಗ್ಗೆ ಹೇಳಿರಿ ಎಂದಾಗ ಪೂಜೆ ಮಾಡುತ್ತಿದ್ದ ಆತ ಯಾಕೋ ಸಿಟ್ಟಿಗೆದ್ದು ನನ್ನತ್ತ ನೋಡಿದ. ನೀವು ಬಾಗೇವಾಡಿಗೆ ಬರುವುದು ಇಲ್ಲಿಯ ಜನರಿಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ ಜನಸಾಗರವೇ ನೆರೆದಿರುತ್ತಿತ್ತು ಎಂದು ಅಪ್ಪಣ್ಣಗಳು ಕಣ್ಣೀರು ಹಾಕಿದರು. ಅವರ ಕಣ್ಣೀರಿನ ಹನಿಗಳು ನನಗೆ ಕಲ್ಯಾಣದ ಚಿಂತೆಯ ಕತೆ ಹೇಳುತ್ತಿತ್ತು. ಹೊರಗೆ ಹೋದೆವು. ಪಕ್ಕದಲ್ಲಿರುವ ದೊಡ್ಡ ಬಾವಿಯತ್ತ ಹೆಜ್ಜೆ ಹಾಕಿ ಅಲ್ಲೇ ಸ್ನಾನ ಪೂಜೆಗಳನು ಮಾಡಿಕೊಂಡು ನಂದೀಶ್ವರನ ದಾಸೋಹದಲ್ಲೆ ಊಟ ಮಾಡಿದೆವು.
ಈ ಬಾವಿಗೆ ನನ್ನಣ್ಣ ದೇವರಾಜ, ನಾಗಮ್ಮ ಸ್ನಾನಕ್ಕೆ ಬರುತ್ತಿದ್ದ ನೆನಪು ಥಟ್ಟನೆ ಬಂತು. ನನ್ನ ಅಣ್ಣನ ವಯಸ್ಸಿನ ನಾಗವರ್ಮನೆಂಬ ಸ್ನೇಹಿತ ಈ ಭಾವಿಯಲ್ಲಿ ಬಿದ್ದು ಲಿಂಗೈಕ್ಯನಾಗಿದ್ದ. ಅದು ಮಂಡಿಗೆಯ ಮಾದರಸನ ಮಕ್ಕಳಾದ ನಾನು ನಾಗಮ್ಮ, ದೇವರಾಜರ ಮೇಲೆ ಆಪಾದನೆ ಬಂದಿತ್ತು. ನಾನು ಆ ಭಾವಿಯಲಿ ತದೇಕಚಿತ್ತದಿಂದ ನೋಡಿದೆ. ಪಕ್ಕದಲ್ಲಿ ದೇವಸ್ಥಾನದ ತೋಟವಿತ್ತು. ಅದು ನನ್ನ ಸೋದರಮಾವ ಬಲದೇವ ಮಾವನವರು ದೇವಸ್ಥಾನದ ಖರ್ಚಿಗಾಗಿ ವೆಚ್ಚಕ್ಕಾಗಿ ತೋಟವನ್ನು ಅವರೇ ಖರೀದಿಸಿದ್ದರು. ಇದೇ ತೋಟದಲಿ ಕುಳಿತು ಅವನ ಸಾವಿಗಾಗಿ ಚಿಂತಿಸಿದೆ. ಆತನ ಸಾವು ನನ್ನನ್ನು ದಿಗ್ಮೂಡನನ್ನಾಗಿ ಮಾಡಿತ್ತು. ಅಲ್ಲಿಯವರೆಗೆ ನಮ್ಮ ಜೊತೆ ಇದ್ದ ಮುಷ್ಠಿಯಲಿ ಬೆಲ್ಲದ ಹಚ್ಚು ಹಿಡಿದು ತರುತ್ತಿದ್ದ ನಾಗವರ್ಮ ಇಲ್ಲವಾಗಿದ್ದ. ಅವನು ವೈದಿಕ ಮನೆತನದ ಹುಡುಗ. ಊರಲಿ ವೈದಿಕರಿಗೂ ನಮಗೂ ಕದನವೇರ್ಪಟ್ಟಿತ್ತು. ಆಗಮಿಕ ಕಮ್ಮೆ ಬ್ರಾಹ್ಮಣನಾದ ಅಪ್ಪನ ಮೇಲೆ ಅವರು ಕತ್ತಿ ಮಸೆಯುತ್ತಿದ್ದರು. ಅವನು ಪುರವಾಧೀಶ್ವರನಾಗಿದ್ದುದ್ದು ಅವರಿಗೆ ಯಾಕೋ ಸರಿ ಅನ್ನಿಸುತ್ತಿರಲಿಲ್ಲ. ಈ ವಿಷಯದಲಿ ಹೇಗಾದರೂ ಮಾಡಿ ಅಪ್ಪನನು ಸಿಕ್ಕಿಸಿ, ಆತನನು ಪದಚ್ಯುತಿಗೊಳಿಸಬೇಕೆಂದು ವೈದಿಕ ಗಣದ ಅಧಿಪತಿ ಕೃಷ್ಣಾಚಾರ್ಯರು ಪಟ್ಟು ಹಿಡಿದು ರಾಜ್ಯ ಪಾಲಕರತ್ತ ದೂರು ಒಯ್ದಿದ್ದರು. ಅಪ್ಪನ ಗುಣ ಆತನ ಮಕ್ಕಳ ಗುಣಗಳ ಅರುವಿದ್ದ ರಾಜ್ಯಪಾಲಕರು ಈ ಘಟನೆಯನ್ನು ಅತ್ಯಂತ ಸಹಜ ರೀತಿಯಲ್ಲಿ ಬಗೆಹರಿಸಿದರು. ಅಂದು ಸಂಜೆ, ರಕ್ಕಸತಂಗಡಿ ರಸ್ತೆಯಲಿ ನಾಗವರ್ಮನನು ಸುಡಲಾಯಿತು. ನೋಡು ನೋಡುತ್ತಿದ್ದಂತೆ ಅಗ್ನಿಗೆ ಆಹುತಿಯಾಗಿ ಹೋದ ನಾಗವರ್ಮನ ಸಾವು ನನಗೆ ವೈಯಕ್ತಿಕವಾಗಿ ಬಹುವಾಗಿ ಕಾಡಿತ್ತು ಈಗಲೂ ಕಾಡುತ್ತದೆ.
ನನ್ನ ಜೊತೆಗೆ ಯಾವಾಗಲೂ ಇರುತ್ತಿದ್ದ ನನ್ನ ಮಾತು ಆಲಿಸುತ್ತ ಶಿವಾಗಮಗಳ ಕೇಳಲು ಮನೆಗೆ ಬರುತ್ತಿದ್ದ ನಾಗವರ್ಮ ನನ್ನಣ್ಣನ ವಯಸ್ಸಿನವನಾದರೂ ನನಗೆ ಅತ್ಯಂತ ಹತ್ತಿರದವನಾಗಿದ್ದ. ನಾನು ಸಂಗಮಕ್ಕೆ ಅಕ್ಕನ ಮನೆಗೆ ಹೋದಾಗ ಅವನು ಹಿಂಬಾಲಿಸಿ ಬಂದಿದ್ದ. ಅಲ್ಲಿಯ ಸಂಗಮನಾಥನನು ಕೈಯಿಂದ ಸ್ಪರ್ಶಿಸಿ ಘಟಪ್ರಭದಲ್ಲಿ ಯಥೇಚ್ಛವಾಗಿ ಈಜಿದ್ದ. ಇಂಥಹ ಗೆಳೆತನ ನಮ್ಮದಾಗಿತ್ತು. ಶಿವಾಗಮದ ಈ ಶ್ಲೋಕ ಆತನಿಗೆ ಬಹು ಅಚ್ಚುಮೆಚ್ಚಿನದಾಗಿತ್ತು. ಮನುಷ್ಯರ ಮಧ್ಯ ಯಾವುದೇ ಜಾತಿಗಳಿಲ್ಲ. ಇವೆಲ್ಲ ನಾವು ಮಾಡಿಕೊಂಡ ಅನಿಷ್ಟಗಳು ಎಂದು ನಾನು ಹೇಳುವಾಗ ತದೇಕ ಚಿತ್ತದಿಂದ ಕೇಳುತ್ತಿದ್ದ. ನಾಗವರ್ಮ ಈ ಭಾವಿಯ ಪ್ರತಿ ಅಂಗುಲದಲ್ಲೂ ನೆನಪುಗಳಾಗಿ ತುಂಬಿದ್ದಾನೆ ಎನ್ನಿಸಿತ್ತು.
ಎಷ್ಟೋ ದಿನಗಳ ಕಾಲ ನನಗೆ ನಿದ್ರೆಯೆಂಬುದಕ್ಕೆ ಮರೀಚಿಕೆಯಾಗಿತ್ತು. ನಾನು ಅಪ್ಪನನು ಅಮ್ಮನನು ನಮಗೆ ಪಾಠ ಹೇಳಿಕೊಡಲು ಬರುತ್ತಿದ್ದ ಶಿವಾದ್ವೈತ ಮುನಿಗೆ ಪದೇ ಪದೇ ಕೇಳುತ್ತಿದ್ದೆ ಸಾವು ಎಂದರೇನು? ನಾಗವರ್ಮ ಏಕೆ ಸತ್ತ? ಆತನನು ಬದುಕಿಸಿಕೊಳ್ಳಲು ಸಾಧ್ಯವಿರಲಿಲ್ಲವೇ ಎಂದು. ನನ್ನ ಪ್ರಶ್ನೆಗಳಿಗೆ ಅಂತಹ ನಿಖರವಾದ ಉತ್ತರಗಳು ಯಾರಲ್ಲಿಯೂ ಇರಲಿಲ್ಲ. ಮತ್ತೆ ನೀರನ್ನು ಸ್ಪರ್ಶಿಸಿದೆ. ನಾಗವರ್ಮ ಬಸವ ಬಸವ ನಾನೂ ಬರುತ್ತಿದ್ದ ಕಲ್ಯಾಣಕ್ಕೆ, ನನ್ನನು ಬಿಟ್ಟು ಯಾಕೆ ಹೋದೆ ಎಂದು ಕೂಗಿದಂತಾಯಿತು. ಹೌದು, ನನಗನಿಸುತ್ತಿದೆ. ಹದಿನಾರು ಆಗಮಗಳನು ಅಗ್ರಹಾರದ ವಿರೋಧದ ನಡುವೆಯೇ ನನ್ನ ಜೊತೆ ಅಧ್ಯಯನ ಮಾಡಿದ ನಾಗವರ್ಮ ಖಂಡಿತವಾಗಿ ನನ್ನ ಜೊತೆ ಬರುತ್ತಿದ್ದ ಅನ್ನಿಸಿತು. ಆತನೂ ಒಬ್ಬ ಶರಣನಾಗಿರುತ್ತಿದ್ದ ಅನ್ನಿಸಿತು.
ನನ್ನ ಮುಖದ ಭಾವ ನೋಡಿ ಅಪ್ಪಣ್ಣನವರಿಗೆ ಅರ್ಥವಾಯಿತು ಅನ್ನಿಸುತ್ತಿದೆ. ನಿಮ್ಮ ಅಣ್ಣ ದೇವರಾಜರು ಮತ್ತು ಅಕ್ಕ ನಾಗಮ್ಮನ ಜೊತೆ ನೀವು ಈಜಿದ ಕೊಳವಿದು. ಅದು ನೆನಪಾಯಿತೆ? ಎಂದರು. ನನಗೆ ಕಣ್ಣಾಲೆಗಳು ತುಂಬಿಬಂದವು. ನನ್ನಣ್ಣ ದೇವರಾಜ ಮಡಿವಾಳ ಮಾಚಯ್ಯನಂಥವನು. ಅಕ್ಕ, ತಮ್ಮ ಅಂದರೆ ಅವನಿಗೆ ಪ್ರಾಣ. ಅವನ ಶಿವಾಗಮಗಳನು ಬಾಯಿಯಿಂದ ಪಟಪಟ ಹೇಳುವವನಾಗಿದ್ದ. ಎಲ್ಲಾಕ್ಕಿಂತ ಹೆಚ್ಚಾಗಿ ಕರುಣಾಮೂರ್ತಿಯಾಗಿದ್ದ. ಅಪ್ಪನ ಜೊತೆ ಶಿವಾದ್ವೈತ ಪಂಡಿತರೊಂದಿಗೆ ನಾನು ವಾದಕ್ಕೆ ಇಳಿದರೆ ಅವನದೆ ಬೆಂಬಲ. ನಂದೀಶ್ವರನ ಬಾವಿಯ ಮೇಟಿಯ ಮೇಲಿಂದ ಜಿಗಿಯುವದು ಅವನಿಗೆ ಎಲ್ಲಿಲ್ಲದ ಸಡಗರ. ಖಂಡಿತವಾಗಿ ಮುಂದೆ ನಾನು ಸಂಗಮದಿಂದ ಹೊರಟುನಿಂತಾಗ ಅವನಿಗೆ ಅಕ್ಕ ಅಕ್ಕನಾಗಮ್ಮಳೊಂದಿಗೆ ಅವನೂ ಸಹ ಮಂಗಳವೇಡಕ್ಕೊ ಅಥವಾ ಕಲ್ಯಾಣಕ್ಕೋ ಬರಲು ಹಿಂಬಾಲಿಸುತ್ತಿದ್ದ.
ಅಪ್ಪಣ್ಣನವರಿಗೆ ನಾನು ಹುಟ್ಟಿ ಬೆಳೆದ ಮನೆ ನೋಡಬೇಕಾಗಿತ್ತು. ನಾನು ಬೇಡವೆಂದರೂ ಅವರು ಕೇಳಲಿಲ್ಲ. ಅವರ ಒತ್ತಾಯಕ್ಕೆ ವೈದಿಕರ ಓಣಿಯಲಿ ಅಶ್ವತ್ಥ ಮರದ ಎದರು ಇರುವ ನಾನು ಹುಟ್ಟಿ ಬೆಳೆದ ಮನೆಗೆ ಹೋದೆವು. ಅಶ್ವತ್ಥ ಮರ ಇನ್ನೂ ತನ್ನ ಬಾಹುಗಳನು ಚಾಚಿಕೊಂಡಿತ್ತು. ನಾನು ಸಣ್ಣವನಿದ್ದಾಗ ಈ ಮರಹತ್ತಿ ಮರಕೋತಿ ಆಟವಾಡುತ್ತಿದ್ದದು ನೆನಪಿಗೆ ಬಂತು, ಮನೆ ಹಾಳು ಬಿದ್ದಿತ್ತು. ಮನೆಯ ಪಕ್ಕದಲ್ಲಿದ್ದ ಅಪ್ಪನಿಗಿಂತಲೂ 7–8 ವರ್ಷ ದೊಡ್ಡವರಾಗಿದ್ದ ಕ್ರಮಿತನೆಂಬುವರು ಇದ್ದರು. ಅವರಿಗಾಗಲೇ ವಯಸ್ಸಾಗಿತ್ತು. ನಾವು ಚಿಕ್ಕವರಾಗಿದ್ದಾಗ ಆತ ನಮ್ಮನ್ನೆಲ್ಲ ಬಾಯಿಗೆ ಬಂದ ಹಾಗೆ ಬಯ್ದು ಕಳಿಸುತ್ತಿದ್ದರು. ಅವರ ಹೆಸರು ಈಗ ನೆನಪಿಗೆ ಬಂತು. ಶ್ರೀರಾಮಕ್ರಮಿತ್ರ ಅವರು ಒಂದು ಬಡಿಗೆ ಹಿಡಿದು ಆಲದ ಮರದ ಕೆಳಗೆ ಕುಳಿತಿದ್ದರು. ನಾವು ಬಿದ್ದ ಹಾಳಾದ ಮನೆಯನ್ನು ವೀಕ್ಷಿಸುತ್ತಿದ್ದಾಗ ಯಾರು ನೀವು ಯಾರು ನೀವು ಇದು ನನ್ನ ಮನೆ ಎಂದು ಹೇಳಿದರು. ಹೌದು ಇದು ನಿಮ್ಮದೆ ಎಂದೆ. ಈ ಮನೆಯಲಿ ಹಿಂದೆ ಇದ್ದವರು ದೀಪಕ್ಕೆ ದೀಪವಿಲ್ಲದವರಾಗಿ ಹೋಗಿದ್ದಾರೆ ಎಂದ. ಅಪ್ಪಣ್ಣನವರಿಗೆ ಸಿಟ್ಟು ಬಂತು. ಏನು ಮಾತಾಡ್ತೀಯ ಎಂದು ಗುಡುಗಿದರು. ಆದರೆ ಆ ಮುದುಕ ಇನ್ನೂ ಗೊಣಗುತ್ತಲೇ ಇದ್ದ. ಕಲ್ಯಾಣದಲ್ಲಿ ಕೋಲಾಹಲವಂತೆ ಮಾದಪ್ಪನ ಮಗ ಬಸವಣ್ಣ ಕಲ್ಯಾಣ ಹಾಳು ಮಾಡಿದ್ದಾನೆ. ನಿನ್ನೆ ಆತನ ಕೊಲೆ ಆಯಿತಂತೆ ಎಂದು ರಾಮಕ್ರಮಿತ ಹೇಳಿದ. ಅಪ್ಪಣ್ಣನವರು ಏನೋ ಅನ್ನಲು ಹೋದರು. ಆದರೆ ನಾನು ಅವರನ್ನು ಸುಮ್ಮನಿರಿಸಿದೆ. ಬಸವಣ್ಣನ ಅಪ್ಪ ಅಮ್ಮನವರು ಸತ್ತಾಗ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಜನರಿದ್ದಿಲ್ಲ. ಪಕ್ಕದ ಇಂಗಳೇಶ್ವರದಿಂದ ಬಂದು ಶವ ಸಂಸ್ಕಾರ ಮಾಡಿದರು. ಅಲ್ಲಿ ಅವರ ಅಣ್ಣ ದೇವರಾಜ ಬಾಲ್ಯದಲ್ಲೆ ಸತ್ತಿದ್ದಾನೆ. ನಿನ್ನೆಯ ದಿನ ಬಸವ ಮತ್ತು ನಾಗಮ್ಮ ಹಾಗು ಶರಣ ಪರಿವಾರದವರ ಕೊಲೆ ಆಗಿದೆ ಎಂದು ಮುದುಕ ಹೇಳಿದ. ನಿನ್ನೆ ಬಂದ ಸುದ್ದಿ ಇದು. ಬಿಸಿಬಿಸಿ ಸುದ್ದಿ ಎಂದು ಹೇಳಿದ. ಮನೆಯ ಪಕ್ಕದಲ್ಲಿದ್ದ ಬೊಮ್ಮಪ್ಪ ಎನ್ನುವ ಮುದುಕ ಬಂದ. ನನ್ನನು ನೋಡಿದೊಡನೆಯೇ ಈತನೇ ಬಸವ ಈತನೇ ಬಸವ ನಾನು ಕಲ್ಯಾಣಕೆ ಸುಮಾರು ಹತ್ತು ಬಾರಿಯಾದರೂ ಹೋಗಿದ್ದೇನೆ. ಈತನೇ ನನ್ನಪ್ಪ ಎಂದು ಕಿರುಚಿದ. ಬೊಮ್ಮಪ್ಪನಿಗೆ ತಲೆ ಕೆಟ್ಟಿದೆ ಎಂದು ಸುಮ್ಮನೆ ಕುಳ್ಳಿರಿಸಲಾಯಿತು. ಈ ಮನೆಯನು ನೋಡಲು ಜನ ಆಗಾಗ ಬರುತ್ತಿರುತ್ತಾರೆ. ಅದರಂತೆ ಇವರು ಬಂದಿದ್ದಾರೆ ಎಂದು ಜನ ತಿಳಿದುಕೊಂಡರು. ನಾನು ಆಟವಾಡಿದ ಸ್ಥಳಗಳು ಪಾಠ ಹೇಳಿಸಿಕೊಳ್ಳುತ್ತಿದ್ದ ಸ್ಥಳ, ಜನಿವಾರವನು ಕಿತ್ತೊಗೆದ ಸ್ಥಳಗಳು, ಅಲ್ಲಲ್ಲಿ ಜಾಗ ಬದಲಾವಣೆ ಬಯಸದೆ ಇದ್ದವು.
ಕೊಂಚ ಒಳಹೋಗಿ ನೋಡಿದೆ. ಮಣ್ಣಿನಲಿ ಮುರಿದ ತೊಟ್ಟಿಲೊಂದು ಸಿಕ್ಕಿಕೊಂಡಿತ್ತು. ಸಾಗವಾನಿ ಕಟ್ಟಿಗೆಯಿಂದ ಮಾಡಿದ್ದ ಆ ತೊಟ್ಟಿಲು ಸಂಪೂರ್ಣ ನನ್ನ ಬಾಲ್ಯದ ದಿನಗಳಿಗೆ ಕನ್ನಡಿ ಹಿಡಿದಿತ್ತು. ಅಕ್ಕ ನಾಗಾಯಿಗೆ ಈ ತೊಟ್ಟಿಲದಲ್ಲಿ ಹಾಕಿ ನನ್ನನ್ನು ತೂಗುವದು ಯಾವಾಗಲೂ ಆಸಕ್ತಿ. ನಾನು ದೊಡ್ಡವನಾದರೂ ನನ್ನನ್ನು ಹಿಡಿದು ಈ ತೊಟ್ಟಿಲೊಳಗೆ ಕೂಡ್ರಿಸಿ ತೂಗುತ್ತಿದ್ದಳು. ಅದೆ ತೊಟ್ಟಿಲು ಇದು. ನಾನು ಮಣ್ಣಿನಲಿ ಹೂತು ಹೋಗಿದ್ದ ಆ ತೊಟ್ಟಿಲನು ಎತ್ತಲು ಹೋದೆ. ಅಪ್ಪಣ್ಣನವರು ಸಹ, ನನ್ನ ಜೊತೆ ಕೈ ಜೋಡಿಸಿದರು. ಆ ತೊಟ್ಟಿಲು ಎತ್ತಲು ಸಹಾಯ ಮಾಡುತ್ತಿರುವಾಗಲೇ ಆ ರಾಮಕ್ರಮಿತ ಎಂಬ ಮುದುಕ, ಏನು ಮಾಡುತ್ತಿರುವಿರಿ? ಇದು ನನ್ನ ಮನೆ, ನನ್ನ ಜಾಗ ಎಂದು ವರಾತ ತೆಗೆದ. ಅಪ್ಪಣ್ಣನವರು ಆ ಮುದುಕನಿಗೆ ನಾವು ಶೋಧಿಸಲು ಬಂದ ರಾಜಾಧಿಕಾರಿಗಳು ಎಂದು ಹೇಳಿ ಸುಮ್ಮನಾಗಿಸಿದರು. ತೊಟ್ಟಿಲು ಹೇಗೋ ಕಿತ್ತಿ ಹೊರಗೆ ತೆಗೆದೆವು. ತೊಟ್ಟಿಲಿಗೆ ನಾಲ್ಕು ಕಡೆ ಲಿಂಗ ಮುದ್ರೆಗಳಿದ್ದವು. ತೊಟ್ಟಿಲು ತೆಗೆಯುವಾಗ ಅದರ ಜೊತೆ ಕೆಲ ತಾಮ್ರಪಟಗಳು ಮಣ್ಣಿನಲಿ ಹೂತಿದ್ದವಲ್ಲ ಅದೆಲ್ಲ ಕಿತ್ತುಕೊಂಡು ಬಂದವು.
ನಾನು ಓದಿದೆ. ಬಾಗೇವಾಡಿಯ ಪುರವರಾಧೀಶ್ವರ ಮಾದರಸರಿಗೆ ನಂದೀಶ್ವರನ ಪೂಜಾ ಕೈಂಕರ್ಯ ಮಾಡಲು ಹಾಗು ಧರ್ಮಕಾರ್ಯ ನೆರವೇರಿಸಲು ಇಂಗಳೇಶ್ವರ ದಾರಿಗೆ ಹೋಗುವಾಗ ಬಲಬದಿಗೆ ಇರುವ ಹೊಲವನ್ನು ಉಂಬಳಿಯಾಗಿ ಕೊಟ್ಟ ವಿವರವಿತ್ತು. ನನ್ನಪ್ಪ ಮಾದರಸರು ಬಹಳ ಮೃದು ಸ್ವಭಾವದವರಾಗಿದ್ದರು. ಯಾರಿಗೂ ಏನು ಅನ್ನದೇ, ಬಂದ ತನ್ನ ಅಧಿಕಾರವನು ದುರುಪಯೋಗ ಪಡಿಸಿಕೊಳ್ಳದ ಎಂದೂ ತನ್ನ ಅಧಿಕಾರವನ್ನು ಅಧಿಕಾರಕ್ಕಾಗಿ ಚಲಾಯಿಸದ ಮನುಷ್ಯರಾಗಿದ್ದರು.
ಸೋದರಮಾವ ಬಲದೇವರಿಂದ ಇಂಥಹ ಪುರಪಾಲಕ ಹುದ್ದೆ ದಕ್ಕಿತ್ತಾದರು ಇದು ಕಬ್ಬಿಣದ ಕಡಲೆಯಾಗಿತ್ತು. ಸುತ್ತಲಿನ ವೈದಿಕರು ನಮ್ಮ ಕುಟುಂಬವನ್ನು ಬಹು ತುಚ್ಛವಾಗಿ ನೋಡುತ್ತಿದ್ದರು. ನಮ್ಮನ್ನು ಯಾವುದೇ ತಮ್ಮ ಕಾರ್ಯಗಳಿಗೆ ಆಹ್ವಾನಿಸುತ್ತಿದ್ದಿಲ್ಲ. ಯಜ್ಞ ಯಾಗಗಳನ್ನು ನಾವು ಮಾಡುತ್ತಿದ್ದಿಲ್ಲ. ಇದ್ದುದರಲ್ಲಿ ಕರುಣಾಮಯಿಯಾಗಿದ್ದ ತಂದೆ ತಾಯಿಗಳು ಬಡವರ ಬಗ್ಗೆ ಕರುಣೆ ಇದ್ದವರಾಗಿದ್ದರು. ಇನ್ನೊಂದು ತಾಮ್ರಪಟ ಸಿಕ್ಕಿತು. ಅಕ್ಷರಗಳು ಬಹಳ ಮಬ್ಬು ಮಬ್ಬಾಗಿದ್ದವು. ಆದರೂ ಓದಬಹುದಾಗಿತ್ತು ಅದರಲ್ಲಿ ನನ್ನಣ್ಣ ದೇವರಾಜನ ಮರಣದ ಬಗ್ಗೆ ಅಭಿಪ್ರಾಯವಿತ್ತು ಹಾಗೂ ಆತನ ಶ್ರಾದ್ಧಕ್ಕಾಗಿ ಯಾರಾರು ಬಂದಿದ್ದರು ಹಾಗೂ ಕೂಡಲಸಂಗಮದ ಈಶಾನ್ಯ ಗುರುಗಳು ಪರಮ ಆಶೀರ್ವಾದ ಎಂದು ಬರೆಯಲಾಗಿತ್ತು. ನನಗೆ ಕಣ್ಣೀರು ಕಿತ್ತು ಬಂದವು. ಅಪ್ಪಣ್ಣಗೆ ಗೊತ್ತಿಲ್ಲದೆ ಒರೆಸಿಕೊಂಡೆ. ಮಣ್ಣು ಕಣ್ಣಲ್ಲಿ ಬಿದ್ದಂತೆ ನಾಟಕ ಮಾಡಿದೆ. ಆದರೂ ಬಹು ಚಾಣಾಕ್ಷರಾದ ಅಪ್ಪಣ್ಣಗಳು ಅದು ಹೇಗೋ ಕಂಡುಹಿಡಿದು ಸಮಾಧಾನ ಮಾಡಿದರು. ಕಣ್ಣೊರೆಸಿಕೊಳ್ಳಲು ವಸ್ತ್ರವನ್ನು ಕೊಟ್ಟರು. ನಾಗಾಯಿ ಅಕ್ಕ ಹೇಳುತ್ತಿದ್ದಳು. ಅಪ್ಪ ಅಮ್ಮರನು ಶರಣ ಧರ್ಮಕೆ ತರಬಹುದಾಗಿತ್ತು. ಅವರು ಅಂತಹ ಸರಳ ಶರಣರು ಎಂದು. ಆದರೆ ಅವರು ಆಗಲೇ ಕೈಲಾಸವಾಸಿಗಳಾಗಿದ್ದರು. ಲಿಂಗ ಮುದ್ರೆಯ ತೊಟ್ಟಿಲು ಇದು ನಿಸ್ಸಂಶಯವಾಗಿ ನನ್ನದೆ ತೊಟ್ಟಿಲು. ನಾನು ನನ್ನಣ್ಣ ದೇವರಾಜ ನನ್ನ ಅಕ್ಕ ನಾಗಾಯಿ ಇದರಲ್ಲೆ ಆಡಿ ಬೆಳೆದು ದೊಡ್ಡವರಾಗಿದ್ದೆವು. ಇಷ್ಟರಲ್ಲಿ ರಾಮಕ್ರಮಿತ್ರ ಇನ್ನೂ ಆರು ಜನರನ್ನು ಕರೆದುಕೊಂಡು ಬಂದ. ಅವರು ಇಲ್ಲಿ ಏನು ಮಾಡುತ್ತಿರುವಿರಿ? ಇದು ನಮ್ಮ ಸಂಬಂಧಿಗಳ ಮನೆ, ಅವರು ಯಾರು ಈಗ ಬದುಕಿಲ್ಲ ಏನಾಗಬೇಕು ಎಂದರು. ಏನು ಇಲ್ಲ ಬಸವನ ಮನೆ ನೋಡಲು ಬಂದಿದ್ದೆವು ಎಂದು ಅಪ್ಪಣ್ಣನವರು ಹೇಳಿದರು. ಬಸವನಿಗೆ ನಿನ್ನೆ ಮರಣ ದಂಡವಾಯಿತು ಎಂದು ಒಬ್ಬ, ಇಲ್ಲ ಗಡಿಪಾರು ಎಂದು ಇನ್ನೊಬ್ಬ, ಇಲ್ಲ ಕಲ್ಯಾಣದಲ್ಲಿ ಸೆರೆಮನೆಗೆ ಹಾಕಿದ್ದಾರಂತೆ ಎಂದು ಮತ್ತೊಬ್ಬ ಮಾತಾಡುವದು ಕಿವಿಗೆ ಬೀಳುತ್ತಿತ್ತು. ಮೊದಲು ಆಗಮ ವೇದ ಶಾಸ್ತ್ರಿಗಳ ವಿರುದ್ಧ ತಿರುಗಿಬಿದ್ದರೆ ಗತಿ ಹೀಗೆ ಆಗುವುದು ಎಂದು ಹೇಳಿದರು. ಅಪ್ಪಣ್ಣನವರಿಗೆ ಅವರ ಮಾತುಗಳಿಂದ ನಿಜಕ್ಕೂ ದುಖವಾಯಿತು.
ಅಪ್ಪಣ್ಣನವರು ದಣ್ಣಾಯಕರೆ ನಾವು ಹೋಗೋಣವೇ ಎಂದರು? ದಣ್ಣಾಯಕರು ಎಂಬ ಶಬ್ದ ಕಿವಿಗೆ ಬಿದ್ದ ತಕ್ಷಣವೇ 6 ಜನರಿಗೆ ಇವರು ಸೈನ್ಯದ ದಂಡನಾಯಕರು ಎಂದು ಕಿವಿಗೆ ಬಿದ್ದಂತಾಗಿ ಇವರು ದಂಡನಾಯಕರೆ ಎಂದು ಕೇಳಿದರು. ಹೌದು ಎಂದು ಅಪ್ಪಣ್ಣನವರೆ ಹೇಳಿದರು. ಅವರು ಅಂಜಿ ದೂರನಿಂತರು. ನಾವು ಹೊರಡಲು ಅನುವಾದೆವು. ನಾನು ನನ್ನ ಹಾಳುಬಿದ್ದ ಮನೆಯನ್ನು ನೋಡುತ್ತ ಕ್ಷಣ ಹೊತ್ತು ನಿಂತೆ. ಬಹಳ ದುಖವಾಯಿತು. ಬಾಗುಡಿಯ ಪುರವರಾಧೀಶ್ವರನ ಮನೆ ಹೀಗೆ ಹಾಳು ಕೊಂಪೆಯಾಗಿದ್ದು ಕಂಡು ದುಖವಾಯಿತು.
ಸಂಗಮನಲಿ ಬೇಡಿಕೊಂಡೆ, ದೇವ ಸಂಗಮನಾಥ ನನ್ನ ಈಗಿನ ಹಾಳುಬಿದ್ದ ಮನೆಯಂತೆ ಕಲ್ಯಾಣವನು ಮಾಡಬೇಡ. ಈ ಮೂವತ್ತು ವರ್ಷಗಳಿಂದ ಕಲ್ಯಾಣ ಹೇಗೆ ಇತ್ತೊ ಹಾಗೆ ಇರಲಿ ಎಂದು ಸಂಗಮದತ್ತ ಹೊರಡಲು ಅನುವಾದೆವು. ಅಲ್ಲಿದ್ದವರಿಗೆ ಮತ್ತೊಮ್ಮೆ ಶರಣು ಹೇಳಿ ಮೆಲ್ಲನೆ ಹೆಜ್ಜೆ ಹಾಕಿದೆವು.
ಬೊಮ್ಮಪ್ಪ, ಮೆಲ್ಲಮೆಲ್ಲನೆ ನಮ್ಮ ಹಿಂದೆ ಬಂದ, ಆತನ ಮನಸ್ಸು ನಾನೇ ಬಸವನೆಂಬುದನು ಸಾರಿ ಸಾರಿ ಹೇಳುತ್ತಲಿತ್ತು. ಬಂದವನೆ ಅಪ್ಪ ಮಾದರಸರ ಹಾಗೂ ತಾಯಿ ಮಾದಲಾಂಬಿಕೆಯ ಸಮಾಧಿ ನೋಡುವುದಿಲ್ಲವೇ ಎಂದು ಕೇಳಿದ. ನಾನು ತಕ್ಷಣವೇ ನೋಡುವೆ ಎಂದು ಹೇಳಿದೆ. ಆಗ ಅವನು ಜೋರಾಗಿ ನನ್ನನು ತಬ್ಬಿಕೊಂಡ, ನಾನು ತಬ್ಬಿಕೊಂಡೆ. ನೀನೇ ಬಸವ ನೀನೇ ಬಸವ, ಹುಸಿಯು ನುಡಿಯಲು ಬೇಡ ಅಂದವನು ಹುಸಿಯ ನುಡಿಯುತ್ತೀಯಾ ಅಂದ. ಅವನ ಮಾತು ನನಗೆ ಆತ್ಮಸಾಕ್ಷಿ ಕಲಕಿದಂತಾಯಿತು. ಹೌದು ನಾನೆ ನತದೃಷ್ಟ ಆ ಬಸವ ಎಂದು ಕಣ್ಣಲ್ಲಿ ನೀರು ತಂದುಕೊಂಡೆ. ಬೊಮ್ಮಪ್ಪನು ಅಳಹತ್ತಿದ, ಏನು ಮಾಡಲಿ ನಾನು ಭ್ರಷ್ಟನಾಗಿದ್ದೇನೆ ಇದು ಕಲಚೂರಿಗಳ ಊರು. ಇಲ್ಲಿ ಅವರ ಅಧಿಕಾರಿಗಳಿದ್ದಾರೆ. ನಾನು ನನ್ನಪ್ಪನ ಕೂಡಲ ಸಂಗನಲ್ಲಿಗೆ ಹೋಗಲೇಬೇಕು.
ಆತ ನಮ್ಮ ಅಪ್ಪ ಅಮ್ಮರ ಸಮಾಧಿ ಹತ್ತಿರ ಕರೆದುಕೊಂಡು ಹೋದ. ಅವು ಆಗಲೇ ನೆಲಸಮವಾಗಿದ್ದವು. ಬೊಮ್ಮಪ್ಪನೆ ಅಮವಾಸೆ ಹುಣ್ಣಿಮೆಗೆ ನೆಲ ಸಾರಿಸಿ, ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದ. ಚಿಕ್ಕವನಾಗಿದ್ದಾಗಿನಿಂದಲೂ ನನ್ನ ಮನೆಯಲ್ಲಿಯೇ ಇದ್ದ ಬೊಮ್ಮಪ್ಪನಿಗೆ ನಾನು, ನನ್ನ ಅಕ್ಕ, ನಾಗಾಯಿ, ಕೆಂಜೆಡೆಗಳ ಶಿವನೆನ್ನುತ್ತಿದ್ದೆವು.
ಬಾಗೇವಾಡಿಯ ತುಂಬಾ ನನ್ನದೆ ಮಾತು. ಎಲ್ಲಿ ನೋಡಿದರೂ ನನ್ನದೆ ಮಾತುಕತೆ. ಸೋಮಿದೇವ ನನ್ನನ್ನು ತಮ್ಮ ರಾಜ್ಯದಿಂದ ಹೊರದಬ್ಬಿದ ನಂತರ ಗೂಢಾಚಾರರನ್ನು ಬಹು ಜಾಗೃತಗೊಳಿಸಿದ್ದ. ಅದಕ್ಕಾಗಿ ಅಲ್ಲಿ ಬಹಳ ಹೊತ್ತು ನಿಲ್ಲುವಂತಿರಲಿಲ್ಲ. ಬೊಮ್ಮಪ್ಪನಿಗೆ ಗಾಢವಾಗಿ ತಬ್ಬಿಕೊಂಡು ನಾವು ಸಂಗಮದತ್ತ ಹೊರಟೆವು.
ಶ್ರೀ. ಮಹಾಂತೇಶ ನವಲಕಲ್,
102, ಹೊಸಭಾಗ್ಯವಂತಿ ನಗರ,
ಸನ್ ಇಂಟರನ್ಯಾಶನಲ್ ಪಕ್ಕ,
ಕಲಬುರಗಿ – 585 102.
ಮೋಬೈಲ್ ನಂ. 88844 32812
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410