ಬಸವಣ್ಣ ವೈಚಾರಿಕ ಚಿಂತಕ, ಪುರಾಣ ಪುರುಷನಲ್ಲ | ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಬಸವಣ್ಣನವರು ಪುರಾಣ ಪುರುಷನಲ್ಲ, ಪವಾಡ ಪುರುಷನಲ್ಲ, ಉದ್ಭವ ಮೂರ್ತಿಯಲ್ಲ. ಅವರು ಮೌಲ್ಯಗಳ ಮೊತ್ತ, ತತ್ತ್ವಗಳ ತೇಜ, ಆದರ್ಶಗಳ ಆಗರ, ಅರಿವಿನ ಓಗರ, ಆಚಾರದ ಅರಸ, ಅನುಭಾವದ ಶಿಖರವಾಗಿದ್ದಾರೆ. ಬಸವಣ್ಣನವರು ದಕ್ಷ ಆಡಳಿತಗಾರ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ನೈತಿಕತಜ್ಞ, ಸಂಘಟನಕಾರ, ಸಮಾನತೆಯ ಹರಿಕಾರ, ಸಮನ್ವಯತೆಯ ಸಾಧಕ, ಭಕ್ತಿ ಭಾಂಡಾರಿ, ಕಾಯಕಯೋಗಿ, ಮಹಾದಾಸೋಹಿ, ಅನುಭವ ಮಂಟಪವೆಂಬ ಧಾರ್ಮಿಕ ಸಂಸತ್‌ಶಿಲ್ಪಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಸಮಾಜ ಶಿಲ್ಪಿ, ದೈವತ್ವದೆಡೆಗಿನ ಶಬ್ದಸೋಪಾನ ಕಟ್ಟಿದ ವಚನಶಿಲ್ಪಿ, ಸತ್ಯಶೋಧಕ, ಶ್ರೇಷ್ಠ ತತ್ತ್ವಜ್ಞಾನಿ, ಮಹಾದಾರ್ಶನಿಕ, ಸಕಾರಾತ್ಮಕ ವಿಚಾರವಾದಿ, ವೈಜ್ಞಾನಿಕ ಮನೋಭಾವಿ ಮತ್ತು ವೈಚಾರಿಕ ಚಿಂತಕರಾಗಿದ್ದಾರೆ. ನಿರಂಜನ, ನಿಜಶರಣ, ನಿಜೈಕ್ಯ, ಕಿಂಕರತ್ವದ ಪ್ರತಿಪಾದಕ, ಶಂಕರತ್ವದ ಪ್ರತೀಕವಾದ ಮಹಾಮಹಿಮ ಬಸವಣ್ಣನವರದು ಉಪಮೆ, ಕಲ್ಪನೆ, ಪದಗಳಿಗೆ ನಿಲುಕದ ನಿಲುವಾಗಿದೆ.

ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಬದುಕುವ ಎಲ್ಲ ಅವಕಾಶಗಳು ಅವರಿಗಿದ್ದರೂ ಅವರು ಸಮಾನತೆಯ ಹೋರಾಟದ ಹಾದಿಯನ್ನು ಆರಿಸಿಕೊಂಡರು. ಅಬಲರನ್ನು ಮೇಲಕ್ಕೆತ್ತಲು ಮಂತ್ರಿ ಪದವಿಯಿಂದ ಕೆಳಗಿಳಿದು ಬಂದ ಮಹಾಂತ. ಪರಹಿತಕ್ಕೆ ಸ್ವಹಿತವನ್ನು ತೊರೆದ ಸಂತ, ಪ್ರಜೆಗಳಿಗಾಗಿ ಪ್ರಭುತ್ವವನ್ನು ಎದುರು ಹಾಕಿಕೊಂಡ ಧೀಮಂತರಾಗಿದ್ದಾರೆ.

ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ ‘ಅನುಭವ ಮಂಟಪ’ದಲ್ಲಿ ಎಲ್ಲರಿಗೂ ಮುಕ್ತ ಅವಕಾಶ, ಮುಕ್ತ ಪ್ರವೇಶವಿತ್ತು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯಯವಿತ್ತು. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಅನುಭವ ಮಂಟಪಕ್ಕೆ ಬಂದಿದ್ದರು. ಕಸಗೂಡಿಸುವ ಕಾಯಕದ ಸತ್ಯಕ್ಕ ವಚನ ರಚನೆಯ ಮಟ್ಟಕ್ಕೇರಿದಳು. ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯ ತಂದುಕೊಟ್ಟ ಮಹಾಕಾರಣಿಕ. ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣು, ಅಧಿಕಾರಕ್ಕಾಗಿ ರಕ್ತ ಕ್ರಾಂತಿಗಳೇ ನಡೆದಿವೆ. ಆದರೆ, ಶರಣರದು ಸಮಾನತೆಗಾಗಿ ನಡೆದ ವೈಚಾರಿಕ ಕ್ರಾಂತಿಯಾಗಿದೆ. ಒಂದೇ ಕುಟುಂಬದ ಬಸವಣ್ಣ, ನೀಲಾಂಬಿಕೆ, ಗಂಗಾಬಿಕೆ, ಅಕ್ಕನಾಗಲಾಂಬಿಕೆ, ಚೆನ್ನಬಸವಣ್ಣನವರು ವಚನ ಚಳವಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಬಸವಣ್ಣನವರು ಜಾತಿ ನಾಶಕ್ಕೆ ಪಣ ತೊಟ್ಟರು. ಮಾದಾರ ಚೆನ್ನಯ್ಯ ನನ್ನ ಅಪ್ಪ, ಡೋಹರ ಕಕ್ಕಯ್ಯ ನನ್ನ ಚಿಕ್ಕಪ್ಪ ಎಂದು ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡ ಮಹಾತ್ಮರಾಗಿದ್ದಾರೆ. ಅವರು ಪ್ರತಿಪಾದಿಸಿದ ಕಾಯಕ, ದಾಸೋಹ ಪರಿಕಲ್ಪನೆಗಳು ವ್ಯಕ್ತಿಗತ ಶುದ್ಧಿಯೊಂದಿಗೆ ಸಾಮಾಜಿಕ ಪ್ರಗತಿಗೂ ಕಾರಣವಾಗಿವೆ. ಕಾರ್ಲ್‌ ಮಾರ್ಕ್ಸ್ ಅವರದು ಆರ್ಥಿಕ ಮೂಲ ಸಿದ್ಧಾಂತವಾದರೆ, ಬಸವಣ್ಣನವರದು ಆತ್ಮ ಮೂಲ ಸಿದ್ಧಾಂತವಾಗಿದೆ.

ಬಸವಣ್ಣನವರು ವೇದಕ್ಕೆ ಒರೆ ಹಚ್ಚಿದರು. ಜಿಡ್ಡುಗಟ್ಟಿದ ಸಮಾಜೋ-ಧಾರ್ಮಿಕ ವ್ಯವಸ್ಥೆಯನ್ನು ಪ್ರಶ್ನಿಸಿ, ಪರೀಕ್ಷಿಸಿ, ವಿಶ್ಲೇಷಿಸಿ ವೈಚಾರಿಕ ಸ್ಪರ್ಶ ನೀಡಿ ವಚನಗಳ ಮೂಲಕ ವಿಶ್ವ ಸತ್ಯವನ್ನು ಬೋಧಿಸಿದರು. ಪುರೋಹಿತರು ಜನಸಾಮಾನ್ಯರಿಗೆ ದೇವಾಲಯ ಪ್ರವೇಶವನ್ನು ಬಹಿಷ್ಕರಿಸಿದರೆ ಬಸವಣ್ಣನವರು ದೇಹವೇ ದೇವಾಲಯವೆಂದು ದೇವಾಲಯ ಸಂಪ್ರದಾಯವನ್ನೇ ನಿರಾಕರಿಸಿದರು. ‘ಪಶುಪತಿ ನೀನು ಜಗಕ್ಕೇಕೋದೇವ’ ಎಂದು ಹಲವು ದೇವರುಗಳ ಹಾವಳಿ ತಪ್ಪಿಸಿದರು. ಇಷ್ಟಲಿಂಗದ ಮೂಲಕ ಅನಂತತೆಯನ್ನು ಅಂಗೈಗೆ ತಂದುಕೊಟ್ಟು ದೇವ ಮತ್ತು ಭಕ್ತರ ನಡುವಿನ ದಲ್ಲಾಳಿಗಳನ್ನು ದೂರೀಕರಿಸಿದರು. ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಸಾಂಪ್ರದಾಯಿಕ ಸ್ವರ್ಗ, ನರಕಗಳನ್ನು ಅತಿಗಳೆದು ವೈಚಾರಿಕ ನೆಲೆಗಟ್ಟಿನ ಸ್ವರ್ಗ, ನರಕಗಳನ್ನು ಪ್ರತಿಪಾದಿಸಿದರು. ದಯವೇ ಧರ್ಮದ ಮೂಲವೆಂದು ಧರ್ಮವನ್ನು ದಯಾಪರಗೊಳಿಸಿದರು..

‘ಮಹಾಮಹಿಮ ಸಂಗನಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಕಕ್ಕೆಲ್ಲ ಗುರು ಕಾಣಾ ಗುಹೇಶ್ವರಾ’ ಎಂಬ ಅಲ್ಲಮರ ವಚನ ಅಕ್ಷರಶಃ ಸತ್ಯವಾಗಿದೆ. ‘ಬಸವಣ್ಣನಿಂದ ಬದುಕಿತೀಲೋಕ’ ಎಂಬ ಬಹರೂಪಿ ಚೌಡಯ್ಯನವರ ವಾಣಿಯಂತೆ ಬಸವಣ್ಣನವರ ವಿಚಾರಧಾರೆಗಳು ಇಂದು ಕಡಲಾಚೆಗೂ ಮನ್ನಣೆ ಪಡೆದಿವೆ. ಬಸವಣ್ಣ ಯುಗಯುಗದ ಉತ್ಸಾಹ. ಬಸವ ಸಾಹಿತ್ಯ ಬತ್ತದ ನಿತ್ಯ ನವೋಲ್ಲಾಸವನ್ನು ನೀಡುವ ಜ್ಞಾನಸಾಗರವಾಗಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,
ಜಮಖಂಡಿ.
ಮೋಬೈಲ್‌ ಸಂ. 94497 13204

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply