
ಹಲವಾರು ಚಿಂತನೆಗಳಿಗೆ ತೆರೆದುಕೊಳ್ಳುವ ವಚನ ಸಾಹಿತ್ಯ ಬಹು ಮೌಲ್ವಿಕವಾದ ವಿಷಯಗಳನ್ನು ತನ್ನೊಳಗೆ ಬಚ್ಚಿಟುಕೊಂಡಿದೆ. ಇಂತಹ ಅಮೂಲ್ಯವಾದ ವಚನ ಸಾಹಿತ್ಯದ ಗಂಟನ್ನು ಬಿಚ್ಚುತ್ತಾ ಹೋದಂತೆ ಒಂದೊಂದು ವಚನವೂ ಕೂಡಾ ಚಿಂತಕರ, ವಿಮರ್ಶಕರ, ಓದುಗರ ಬುದ್ಧಿಗೆ ಸವಾಲಾಗಿ ನಿಲ್ಲುತ್ತದೆ.
“ವಚನ ಸಾಹಿತ್ಯದಲ್ಲಿ ಏನಿದೆ?” ಎಂಬ ಬಾಲಿಷ ಪ್ರಶ್ನೆಗಳಿಗೆ “ವಚನ ಸಾಹಿತ್ಯದಲ್ಲಿ ಏನಿಲ್ಲ?” ಎಂಬ ಪ್ರಶ್ನೆಯೇ ಉತ್ತರವಾಗಿದೆ. ಇಂತಹ ತಾರ್ಕಿಕವಾದ ಪ್ರಶ್ನೋತ್ತರಗಳ ಹಿನ್ನಲೆಯಲ್ಲಿ ಮತ್ತೊಮ್ಮೆ ಪ್ರಶ್ನಾತೀತವಾಗಿ ಕಾಡುವ ವಿಷಯ “ವಚನ ಸಾಹಿತ್ಯದಲ್ಲಿ ಸಖ್ಯಭಾವ” ಎಂಬುದು ಕೂಡ ಒಂದಾಗಿದೆ.
ಭೂಮಿಯ ಮೇಲೆ ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದ ಮೇಲೆ ಈ ಬದುಕನ್ನು ಸಮರ್ಥವಾಗಿ ಸುಂದರವಾಗಿ ಬದುಕಬೇಕು. ಬದುಕಬೇಕು ಎಂದರೆ ಈ ಜೀವನ ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಹೋದರಾಯಿತು ಎಂಬ ಉದಾಸಿನತೆಯೋ ಅಥವಾ ನಿರಾಸೆ ಭಾವದಿಂದಲೋ ಅಲ್ಲ. ಈ ಲೋಕವನ್ನೂ, ಈ ಬದುಕನ್ನು ಬದುಕಿನ ಪ್ರತಿ ಗಳಿಗೆಯನ್ನು ತುಂಬಾ ಎಂದರೆ ತುಂಬಾ ಪ್ರೀತಿಯಿಂದ, ಅರಿವಿನಿಂದ ಅಪ್ಪಿಕೊಳ್ಳುವುದು ನಿಜವಾದ ಬದುಕಾಗಿದೆ. ಕಷ್ಟ ಕಾರ್ಪಣ್ಯಗಳು ಬಂದಾಗ ಬದುಕನ್ನು ದೂಷಿಸುವುದಾಗಲಿ ಅದರಿಂದ ಪಲಾಯನ ಮಾಡುವುದೂ ಅಲ್ಲ. ಬದುಕಿನಲ್ಲಿ ಇದ್ದುಕೊಂಡೆ ಎಲ್ಲವನ್ನೂ ಎದುರಿಸುತ್ತಾ ಸಾಗುವುದು, ನಮ್ಮ ಇಂದ್ರಿಯಗಳಿಗೆ ನಿಲುಕುವ ಈ ಜೀವ ಜಗತ್ತಿನ ಅಸ್ತಿತ್ವವನ್ನು ತುಂಬು ಹೃದಯದಿಂದ ಸ್ವೀಕರಿಸಿ ಒಲಿಯುವುದು ಮತ್ತು ಒಲಿಸಿಕೊಳ್ಳವುದು. ನಮ್ಮ ಇಡೀ ಬದುಕನ್ನು ರೂಪಿಸುವ ಪರಿಸರವನ್ನು ಸತ್ಯ, ಶುದ್ಧವಾಗಿಟ್ಟುಕೊಂಡು ಸನ್ಮಾರ್ಗದಿಂದ ಬಳಸಿಕೊಳ್ಳುವುದು. ಸತ್ಯಂ-ಶಿವಂ-ಸುಂದರಂ ಎಂಬಂತೆ ಎಲ್ಲಿ ಸತ್ಯವಿರುವುದೋ ಅಲ್ಲಿ ಸೌಂದರ್ಯವಿರುತ್ತದೆ. ಎಲ್ಲಿ ಸತ್ಯ, ಸೌಂದರ್ಯವಿರುವುದೋ ಅಲ್ಲಿ ಅರಿವೆಂಬ ಶಿವನಿರುತ್ತಾನೆ. ಅರಿವು ಎಂಬುದು ನಮ್ಮ ತಿಳುವಳಿಕೆ ಆಗಬೇಕಿದೆ. ಇಂತಹ ಅನೇಕ ಅರಿವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವುದೆ ವಚನ ಸಾಹಿತ್ಯ. ವಚನ ಸಾಹಿತ್ಯವು ಪ್ರಜ್ಞಾಪಾತಳಿಯ ಮೇಲೆ ನಡೆದು ಬಂದಿದೆ. ಇದೊಂದು ಸಾಗರೋಪಾದಿಯಲ್ಲಿರುವ ಎಂದೂ ಬತ್ತದೇ ಇರುವ ಸಾಹಿತ್ಯ. ಎಷ್ಟೆಲ್ಲಾ ವಿಷಯ, ವಸ್ತುಗಳು ಇದರ ಆಂತರ್ಯದಲ್ಲಿವೆ. ಅದರಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ವಿಷಯ “ಸಖ್ಯಭಾವ” ವನ್ನು. ತಮ್ಮ ಬದುಕನ್ನು, ತಮ್ಮ ಕಾಯವನ್ನು, ತಮ್ಮ ಕಾಯಕವನ್ನು, ಈ ಇಹಲೋಕವನ್ನು ಪ್ರೀತಿಸುತ್ತಲೆ ಪರಮಾತ್ಮನೊಂದಿಗೆ ಸಲುಗೆಯ ಸಖ್ಯಭಾವಹೊಂದಿ ಅನುಸಂಧಾನಗೊಂಡ ಶಿವಶರಣ-ಶರಣೆಯರ ವಚನಗಳಲ್ಲಿ ಅಡಗಿರುವ “ಸಖ್ಯಭಾವ” ನನ್ನು ಶೋಧಿಸುವ ಸಣ್ಣ ಪ್ರಯತ್ನ ನನ್ನದಾಗಿದೆ.
“ಸಖ್ಯ” ಎಂಬ ಪದದ ಅರ್ಥ ಮೇಲ್ನೋಟಕ್ಕೆ
ಸಲುಗೆ.
ಗೆಳೆತನ.
ಸ್ನೇಹ.
ಸಖ-ಸಖಿ,
ಆತ್ಮಸಂಗಾತಿ.
ಎಂಬ ಅರ್ಥವನ್ನು ಸ್ಫುರಿಸಿದರೆ, ಅಂತರಾರ್ಥದಲ್ಲಿ “ಸಖ್ಯ” ವೆಂಬುದು ಬೇರೊಂದು ವಿಧದಲ್ಲಿ ತೆರೆದುಕೊಳ್ಳವುದು. ಅದು:
ವಿರೋಧವಿಲ್ಲದ ಭಾವನೆ.
ಸಮಾನ ಮನೋಸ್ಥಿತಿ.
ಸಮಾನ ಆಶಯ.
ಸಮಾನ ವಿಚಾರ.
ಎಂಬುದಾಗಿದೆ. ಸಖ್ಯಭಾವ ಎಂಬುದು ಒಟ್ಟಾರೆಯಾಗಿ ಒಂದು ಆತ್ಮೀಯವಾದ, ಹಿತವಾದ ಬಾಂಧ್ಯವನ್ನು ಕಟ್ಟಿಕೊಡುವುದಾಗಿದೆ.
ಸಖ್ಯದ ಆಯಾಮಗಳು ಹಲವು ವಿಧದಲ್ಲಿ ಹರಡಿಕೊಂಡಿವೆ. ಭಾರತೀಯ ಸಂಸ್ಕೃತಿಯಲ್ಲಿ ಪುರಸ್ಕರಿಸಲ್ಪಟ್ಟ, ಗೌರವಿಸಲ್ಪಟ್ಟ “ವೈವಾಹಿಕ ವ್ಯವಸ್ಥೆ” ಯಲ್ಲಿ ದಾಂಪತ್ಯದಲ್ಲಿ ಪತಿ-ಪತ್ನಿಯರ ಮಧ್ಯೆ ಏರ್ಪಡುವ ಸಖ್ಯ, ಲೋಕ ವ್ಯವಹಾರದಲ್ಲಿ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ–ವ್ಯಕ್ತಿಗಳ ನಡುವೆ ಏರ್ಪಡುವ ಸಖ್ಯ, ಪ್ರಕೃತಿಯ ಚರಾಚರ ಜೀವಿಗಳಲ್ಲಿ ಏರ್ಪಡುವ ಸಖ್ಯ ಹೀಗೆ ಅನೇಕ ಹಂತಗಳಲ್ಲಿ ಸಖ್ಯಭಾವ ಅನಾವರಣಗೊಳ್ಳುತ್ತದೆ. ಇದು ಇಷ್ಟಕ್ಕೆ ಸೀಮಿತವಾಗದೇ ಆಧ್ಯಾತ್ಮ ಲೋಕಕ್ಕೂ ವಿಸ್ತರಿಸಿಕೊಳ್ಳುತ್ತದೆ. ಅಲ್ಲಿ ಪರಮಾತ್ಮ-ಭಕ್ತನ ನಡುವೆ, ಜೀವಾತ್ಮ-ಪರಮಾತ್ಮನ ನಡುವೆ ಆತ್ಮೀಯವಾದ ಸಖ್ಯದ ನಂಟು ಅಂಟಿಕೊಳ್ಳುತ್ತದೆ. ಸಖ್ಯಭಾವವು ಪರಮಾತ್ಮನನ್ನು ಒಲಿಸಿಕೊಳ್ಳುವ ಪರಿಶುದ್ಧ ಭಾವವಾಗಿದ್ದು, ಪರಮಾತ್ಮನನ್ನು ಪ್ರೀತಿಸಲು ಮತ್ತು ಭಕ್ತಿಯನ್ನು ಸಮರ್ಪಿಸಲು ತಳಹದಿಯಾಗುತ್ತದೆ. ಭಕ್ತಿಯನ್ನು ಸಮರ್ಪಿಸಲು ಭಕ್ತ ಯಾವತ್ತೂ ಸ್ವತಂತ್ರನಾಗಿರುವುದರಿಂದ ನಮ್ಮ ಶಿವಶರಣ ಶರಣೆಯರು ಈ ಸಖ್ಯಭಾವದಲ್ಲೂ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಸಖ್ಯಭಾವವು ಪ್ರಕೃತಿಯು ಚರಾಚರ ವಸ್ತುಗಳಲ್ಲೂ ಲೀನವಾಗಿದೆ. ಈ ಪ್ರಕೃತಿಯ ನೈಜಗತಿಯಲ್ಲಿ ತನ್ನ ಕಾರ್ಯಗಮನ ಹರಿಸುವಲ್ಲಿ ಸಹಕರಿಸುವುದು. ಅಂತೆಯೇ ಮರಗಳಿಂದ ತಂಪು ಮಾರುತ ಬೀಸುವುದು, ನದಿ-ಸಾಗರಗಳ ಗರ್ಭದಲ್ಲಿ ಅಲೆಗಳ ನರ್ತನ ನಡೆಯುವುದು, ಆ ನರ್ತನದಲ್ಲಿ ಜಲಚರ ಜೀವರಾಶಿಗಳ ಜೀವನ ನೃತ್ಯ ನಡೆಯುತ್ತಿರುವುದು, ನೀರು ಆವಿಯಾಗಿ ಮೋಡವಾಗುದು, ಮೋಡ ಶೈತ್ಯ ಸ್ಪರ್ಶದಿಂದ ಮಳೆ ಹನಿಯಾಗುವುದು, ಆ ಮಳೆ ಹನಿಯು ಕಾತರಿಸುವ ಭೂ ರಮಣೀಯ ಗರ್ಭ ಸೇರುವುದು, ಆ ಗರ್ಭದಿಂದ ಹಸಿರ ಶಿಶು ಹೊರಬರುವುದು ಹೀಗೆ ಸೃಷ್ಟಿಯ ಎಲ್ಲ ಲೀಲೆಗಳೂ ಸಖ್ಯಮಯವೇ ಆಗಿದೆ.
ಕಾವ್ಯದಲ್ಲಿಯೂ ಸಖ್ಯಭಾವ ತಂಗಾಳಿಯಂತೆ ಸುಳಿದಾಡಿದೆ. ಕಾವ್ಯದ ಜಟಿಲತೆಗಳನ್ನು ಸರಳೀಕರಣಗೊಳಿಸುವಲ್ಲಿ ಮತ್ತು ಕಾವ್ಯದ ಶ್ರೇಷ್ಠತೆಯನ್ನು ಪ್ರಚಾರ ಪಡಿಸುವುದರಲ್ಲಿ ಕಾವ್ಯ ಮೀಮಾಂಸಕರು ಒಪ್ಪಿಕೊಂಡಿದ್ದು ಈ ಸಖ್ಯಭಾವವನ್ನೆ. “ಕಾಂತಾ ಸಂಹಿತತೋಪದೇಶಯುಜೆ” ಎನ್ನುವ ಕಾವ್ಯ ಮೀಮಾಂಸಕರು ಪ್ರಭು ಸಂಹಿತ, ಮಿತ್ರ ಸಂಹಿತ ಉಪದೇಶಕ್ಕಿಂತ ಕಾಂತಾ ಸಂಹಿತ ಉಪದೇಶಕ್ಕೆ ಒತ್ತು ನೀಡಿದ್ದು ಕಂಡು ಬರುತ್ತದೆ.
ಕಾಂತೆ-ನಲ್ಲೆ-ಪ್ರಿಯತಮೆ ಅಂದರೇನೇ ಒಂದು ಮಧುರ ಸಖ್ಯ. ಇಂತಹ ಮಧುರ ಸಖ್ಯಕ್ಕೆ ಬದ್ಧವಾಗಿ ಕಾವ್ಯ ಚಿಂತನೆಯೂ ನಡೆದದ್ದು ಗಮನಾರ್ಹ. ವರಕವಿ ಬೇಂದ್ರೆಯವರೂ ತಮ್ಮ ಸಖೀಗಿತದಲ್ಲಿ “ಸಖ್ಯಭಾವ” ಕ್ಕೆ ಇಂಬು ಕೊಟ್ಟಿದ್ದಾರೆ.
ಚಿತ್ತದ ಸೂತ್ರಕೆ ಬುದ್ಧಿಯ ಹುರಿಹಾಕಿ
ಹಮ್ಮಿನ ಮುರಿಹಾಕಿ ಮನ ಹೆಣೆದಿರೆ
ಅಂತಃಕರಣದ ಗೋಪು ಭಾವದ ಕೋಪು
ಎಲ್ಲರ ಕೊರಳೆದೆ ಸಿಂಗರಿಸಿದೆ
ಹೀಗೆ ಸಖ್ಯಭಾವವು ಹೆಣೆಯಲ್ಪಟ್ಟ ವಿಧಾನವನ್ನು ವಿವರಿಸುತ್ತಾರೆ.
“ಸಖ್ಯ” ಎಂಬ ಪದವೇ ಮಾರ್ದವತೆಯನ್ನು ಹುಟ್ಟಿಸುವುದು. ಮನಸ್ಸನ್ನು ಅರಳಿಸುವುದು. “ಸಖ್ಯ” ವು ಸ್ಥಾಯಿಭಾವವಾಗಿದ್ದು, ಸದಾ ನಮ್ಮನ್ನು ಜೀವನ್ಮುಖಿಗಳನ್ನಾಗಿಸುವ ಭಾವ. ಇದು ಯಾವಾಗಲೂ ಸಕಾರಾತ್ಮಕವಾದ ಅಂಶವಾಗಿದ್ದು, ನೋವನ್ನು ಗೆಲ್ಲುವ, ನಗುವಿಗೆ ನಲಿವನ್ನು ಬೆರೆಸುವ ಕಣ್ಣಿರನ್ನು ತಡೆಯುವ ಶಕ್ತಿ ಸಖ್ಯಕ್ಕಿದೆ.
ಸಖ್ಯದ ಆಯಾಮ ಪ್ರೀತಿಯಲ್ಲಿ ಪರ್ಯಾವಸಾನವಾಗುವುದು. ಸಖ್ಯ ಮತ್ತು ಪ್ರೀತಿ ಒಂದೇ ರೇಖೆಯಲ್ಲಿ ಚಲಿಸಿದರೂ, ಸಖ್ಯಭಾವ ಮೂಲವಾಗಿದ್ದು ಪ್ರೀತಿ ಅದರ ಭಾಗವಾಗಿ ಹೊಮ್ಮುವುದು. ಭಕ್ತನಿಗೆ ದೇವರಲ್ಲಿ ಸಖ್ಯವಿದೆ. ತಂದೆ–ತಾಯಿ–ಮಕ್ಕಳು ಈ ಎಲ್ಲ ಸಂಬಂಧದಲ್ಲೂ ಸಖ್ಯವಿದೆ. ಗುರು-ಶಿಷ್ಯರಲ್ಲಿ ಸಖ್ಯವಿದೆ. ಸಖ್ಯವೆಂಬುದು ಅನ್ಯೋನ್ಯ ಆತ್ಮೀಯ ಸಂಬಂಧವಾಗಿದ್ದು, ಅದು ಜೀವನದ ನಂಬಿಕೆ, ವಿಶ್ವಾಸಗಳಿಗೆ ಅಡಿಪಾಯವಾಗಿದೆ. ಜೀವನದಲ್ಲಿ ನಮಗ್ಯಾರೂ ಸಖ-ಸಖಿಯರಿಲ್ಲ ಎಂದು ಹೇಳಿಕೊಳ್ಳುವ ಜನರು ಮೂರ್ಖರು. ಏಕೆಂದರೆ ಪ್ರತಿಯೊಬ್ಬರ ಒಳಗೊಬ್ಬ ಸಖ ಅಥವಾ ಸಖಿ ಇದ್ದೇ ಇರುತ್ತಾರೆ. ಅದೇ ಅವರವರ ಮನಸ್ಸು ನಮ್ಮೆಲ್ಲಾ ಪಾಪ-ಪುಣ್ಯಗಳಿಗೆ, ಸುಖ–ದುಃಖಗಳಿಗೆ, ನೋವು-ನಲಿವುಗಳಿಗೆ ಆ ಮನಸ್ಸೇ ಸಖಿಯಾಗಿ, ಸಖ್ಯದ ಸ್ಥಾನವನ್ನು ತುಂಬಿರುತ್ತದೆ. ಧ್ವೇಷಾಸೂಯೆ ಮಾತ್ಸರ್ಯಗಳ ದಳ್ಳುರಿಗೆ ಉದಕದಂತೆ ಸಖ್ಯ ಶಮನಕಾರಿಯಾಗಿ ನಿಲ್ಲಬಲ್ಲುದು.
ದೇವರನ್ನು ತಾಯಿಯಾಗಿ, ತಂದೆಯಾಗಿ, ಬಂಧುವಾಗಿ, ಗೆಳಯನಾಗಿ ಕೆಲವರು ಭಜಿಸಿದರೆ, ದೇವರನ್ನು ಪತಿಯಾಗಿ ಅಥವಾ ಪ್ರಿಯಕರನಾಗಿ ಭಾವಿಸುವುದು ಮಧುರ ಭಕ್ತಿಯ ರೀತಿ. ಈ ಭಕ್ತಿಯಲ್ಲಿ ಪ್ರಣಯ, ಅನುರಾಗ, ಮಾನಾಪಮಾನ, ಸಿಟ್ಟು, ಸೆಡವು, ತಳಮಳ, ಪರಸ್ಪರ ಆಕರ್ಷಣೆ ಹಾಗೂ ಅತ್ಯಂತ ಸುಖ ಇರುತ್ತವೆ. ಸಖ್ಯ ಭಕ್ತಿಯು ನವ ವಿಧ ಭಕ್ತಿಗಳಲ್ಲಿ ಒಂದು.
- ಶ್ರವಣ ಭಕ್ತಿ.
- ಕೀರ್ತನ ಭಕ್ತಿ.
- ಸ್ಮರಣ ಭಕ್ತಿ.
- ಪಾದಸೇವನ ಭಕ್ತಿ.
- ಅರ್ಚನ ಭಕ್ತಿ.
- ವಂದನ ಭಕ್ತಿ.
- ದಾಸ್ಯ ಭಕ್ತಿ.
- ಆತ್ಮನಿವೇದನ ಭಕ್ತಿ.
- ಸಖ್ಯ ಭಕ್ತಿ.
ಹೀಗೆ ಇವುಗಳು ನವವಿಧ ಭಕ್ತಿಗಳು. ಶಿವ ಶರಣ-ಶರಣೆಯರಲ್ಲಿ ಇವುಗಳನ್ನು ಮೀರಿದ ಭಕ್ತಿ ಪರಂಪರೆ ಇದೆ. ಅಷ್ಟಾವರಣ, ಘಟ್ಸ್ಥಲ, ಪಂಚಾಚಾರಗಳ ಜೊತೆಗೆ ಅಂಗ-ಲಿಂಗದ ಲಿಂಗಾಂಗ ಸಾಮರಸ್ಯ ಇದೆ.
ಇಂತಹ ಲಿಂಗಾಂಗ ಸಾಮರಸ್ಯವು ಸತಿ-ಪತಿ ಭಾವದೊಂದಿಗೆ ಉದ್ದೀಪನವಾಗುತ್ತದೆ. ಇದು ಸಖ್ಯದ ವ್ಯಾಖ್ಯಾನದೊಂದಿಗೆ ಹೊಂದಿಕೊಳ್ಳುತ್ತದೆ. ವರಕವಿ ಬೇಂದ್ರೆಯವರು ಹೇಳುವಂತೆ “ನವವಿಧ ಭಕ್ತಿಗಳ ಸಾಧನೆಗೆ ದಾಂಪತ್ಯವೇ ಉತ್ತಮವಾದ ರಂಗಸ್ಥಲ” ಎಂಬಂತೆ ಶರಣರು ದಾಂಪತ್ಯ ಧರ್ಮವನ್ನು ಮೀರದೆ ಸಂಸಾರವನ್ನು ತುಚ್ಛೀಕರಿಸದೇ ಪರಸ್ಪರ ಸತಿ-ಪತಿಗಳು ಸಾಮರಸ್ಯದಿಂದ ಕುಟುಂಬ ಧರ್ಮ ಪರಿಪಾಲಿಸಿದ್ದರಿಂದ ಅವರಲ್ಲಿ ಸಖ್ಯಭಾವವಿತ್ತು. ಆ ಅನುರಾಗವೇ ಲಿಂಗಪತಿಯಲ್ಲಿಯೂ ನೆಲೆ ನಿಂತಿತು. ಸಖ್ಯಭಾವಕ್ಕೆ ದಾಂಪತ್ಯ ರಂಗಸ್ಥಲ ಎಂಬುದನ್ನು ಬೇಂದ್ರೆಯವರು, ಸಖ್ಯಭಾವವು,
ಅದು ಇದೆ ಎದೆಯಲ್ಲಿ, ಬೆಳಕಿನ ಬದಿಯಲ್ಲಿ
ರಸಗಂಗಾನದಿಯಲ್ಲಿ ಅದರುಗಮವು (ಅದರ ಉಗಮವು)
ಹೆಸರದಕೆ ಪ್ರೀತಿಯು, ಹಿಗ್ಗಿನ ರೀತಿಯು
ಆತ್ಮದ ನೀತಿಯು ಮಧುಸಂಗಮ
ಎಂದಿದ್ದಾರೆ.
ಈ “ಪ್ರೀತಿ” ಯ ಅನುಭವ ಕವಿ, ಕಾಮಿ ಮತ್ತು ಭಕ್ತರಿಗೆ ಒದಗುವುದರಲ್ಲಿ ಅಂತರವಿದೆ.
- ಕಾಮಿಯದು ದೈಹಿಕ ಭೋಗ ಲಾಲಸೆಯಾದರೆ
- ಕವಿ ಹಾಗೂ ಭಕ್ತನದು ಅನಂಗ, ನಿರಾಕಾರ ಆತ್ಮೀಕವಾದ ಆರಾಧನೆ.
ಶರಣರೆಲ್ಲರೂ ನಿರಾಕಾರ ತತ್ವ ಒಪ್ಪಿಕೊಂಡವರು. ಅವರ ವಚನಗಳಲ್ಲಿ ಹುದುಗಿದ ಸಖ್ಯಭಾವವು ಒಂದು ತತ್ವಕ್ಕೆ, ವಿಚಾರಕ್ಕೆ ಅಂಟಿಕೊಳ್ಳದೆ ಬದುಕಿನ ಏರಿಳಿತಕ್ಕೆ ತಕ್ಕಂತೆ, ಬಾಗುತ್ತಾ ಬಳುಕುತ್ತಾ ಪಂಚಾಚಾರಗಳಲ್ಲಿ ತೊಡಗಿಸಿಕೊಂಡು, ಷಟ್ಸ್ಥಲದ ಒಂದೊಂದೇ ಮೆಟ್ಟಿಲೇರುತ್ತಾ, ಅಷ್ಟಾವರಣಗಳಲ್ಲಿ ಅನುಸಂಧಾನಗೊಳುತ್ತಾ ತ್ರಿವಿಧ ಭಕ್ತಿಯಲ್ಲಿ ಲೀನವಾಗುವ ಹಂತಗಳನ್ನು ಗುರುತಿಸಬಹುದು.
ಶರಣ್ಯ ಭಾವದೊಂದಿಗೆ ಲಿಂಗದೊಂದಿಗೆ ಸಖ್ಯಭಾವ ಹೊಂದಿರುವ ಶಿವ-ಶರಣರು ಬದುಕಿದ್ದು ನಿರ್ಮಲವಾದ ಬದುಕನ್ನು. ಅವರ ನಿರ್ಮಲವಾದ ಹೃದಯ ಸರೋವರದಲ್ಲಿ “ಸಖ್ಯಭಾವ” ವೆಂಬ ಭಾವ ಕಮಲ ಅರಳಿತು. ಆ ಸಖ್ಯಭಾವದೊಂದಿಗೆ ಶಿವ-ಶರಣರೆಲ್ಲ ಲಿಂಗಪತಿಯೊಂದಿಗೆ ಆತ್ಮಿಕವಾದ ಸಂವಾದ ನಡೆಸಿದರು. ಭಕ್ತಿಯ ಇನ್ನೊಂದು ಮುಖವಾದ ಸಖ್ಯಭಕ್ತಿಯು “ಲಿಂಗವೇ ನೀನು ನನ್ನ ಪ್ರಿಯ ಸಖ” ಎಂಬ ಆಪ್ತವಾದ ಭಾವದಿಂದ ಒಡಗೂಡಿರುತ್ತದೆ.
ಸಂಸಾರವೆಂಬ ಶ್ವಾನನಟ್ಟಿ,
ಮೀಸಲ ಬೀಸರವ ಮಾಡದಿರಯ್ಯಾ,
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ.
ನೀವಲ್ಲದೆ ಮತ್ತೇನನೂ ಅರಿಯೆನು.
ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು.
ಮನ್ನಿಸು ಕಂಡಾ, ಮಹಾಲಿಂಗವೆ.
ಸತಿಯಾನು, ಪತಿ ನೀನಯ್ಯಾ.
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀವೆನ್ನ ಮನವ ಕಾಯ್ದಿಪ್ಪ ಗಂಡನು.
ನಿಮಗೋತ ಮನವನನ್ಯಕ್ಕೆ ಹರಿಸಿದಡೆ
ನಿಮ್ಮ ಅಭಿಮಾನ ಹಾನಿ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-132/ವಚನ ಸಂಖ್ಯೆ-505)
ವಿಶ್ವಗುರು ಬಸವಣ್ಣನವರು ಮನಸಾರೆ “ಸತಿಯಾನು ಪತಿ ನೀನಯ್ಯಾ” ಎಂದು ಕೂಡಲಸಂಗಮದೇವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ತಾವೊಬ್ಬ ಆಪ್ತ ಸಖಿಯಂತೆ ಸಂಗಮನನ್ನು ಪ್ರೀತಿಸುತ್ತಾರೆ. ತಮ್ಮ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕಷ್ಟ-ಸುಖಗಳನ್ನು ಯಜಮಾನನಲ್ಲಿ ಹೇಳಿಕೊಳ್ಳುವುದಕ್ಕಿಂತ ಸ್ನೇಹಿತನಲ್ಲಿ, ಪ್ರಿಯರಾದವರಲ್ಲಿ ಹೇಳಿಕೊಳ್ಳುವುದು ಹೆಚ್ಚು ಆಪ್ತವಾಗುತ್ತದೆ. ಇದೇ ಸಖ್ಯಭಾವ ಬಸವಣ್ಣನವರ ವಚನದಲ್ಲಿ ಇದೆ. ಸಖ-ಸಖಿಯರ ಆಪ್ತತೆಯ ಭಾವ ಇಲ್ಲಿದೆ. ತಮ್ಮ ಬುದ್ಧಿ-ಭಾವದ ತುಂಬ ಕೂಡಲಸಂಗಮನ ಧ್ಯಾನವನ್ನೇ ತುಂಬಿಕೊಂಡಿರುವ, ಸಂಗಮನಾಥವಲ್ಲದೇ ಬೇರೆ ಯಾವ ವಿಷಯಕ್ಕೂ ಹಾತೊರೆಯದ ಮನವು ಬಸವಣ್ಣನವರದು. ಆ ಮನದ ಸ್ಥಿರತೆಗೆ ಧಕ್ಕೆಯಾಗದಂತೆ ಮನವನ್ನು ಕಾಯುವ ಜವಾಬ್ದಾರಿಯನ್ನು ಸಂಗಮನಾಥನ ಹೆಗಲಿಗೇರಿಸುತ್ತಾರೆ. ನೀನೇ ನನ್ನ ಪತಿ, ಗಂಡ, ಯಜಮಾನ ಎಂಬ ಭಾವದಲ್ಲಿ ಮಿಂದಿರುವ ಅಪ್ಪ ಬಸವಣ್ಣನವರು “ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ ನೀವೆನ್ನ ಮನವ ಕಾಯ್ದಿಪ್ಪ ಗಂಡನು” ಎಂದು ಒಪ್ಪಿಕೊಂಡು ಬಿಡುತ್ತಾರೆ. ನಿಮಗೆ ಒಲಿದ ಮನಸ್ಸನ್ನು ನಾನು ಬೇರೆಯೆಡೆ ಹರಿಸಿದರೆ ಅದು ಅಭಿಮಾನ ಹಾನಿ ಎಂಬ ಭಾವವು ಸಂಪೂರ್ಣ ಶರಣಾಗತ ಭಾವವಾಗಿದೆ. ಲಿಂಗದಲ್ಲಿ ಏರ್ಪಟ್ಟ ಸಖ್ಯದ ಅತ್ಯಂತ ತೀವ್ರತರವಾದ ಹಂತವನ್ನು ಬಸವಣ್ಣನವರ ಈ ವಚನದಲ್ಲಿ ಕಾಣಬಹುದು. ಲೌಕಿಕ ಪ್ರಪಂಚದಿಂದ ಅಲೌಕಿಕ ಸುಖದೆಡೆಗೆ ಧಾವಿಸುವ ಧಾವಂತ ಇಲ್ಲಿದೆ.
ಪ್ರಪಂಚದಲ್ಲಿ ತಂದೆ–ತಾಯಿ, ಮಕ್ಕಳು, ಹೆಂಡತಿ–ಗಂಡ ಮೊದಲಾದ ಸಂಬಂಧಗಳಿಗಿಂತ ಸ್ನೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ಸ್ನೇಹದ ಸಂಬಂಧ ಮತ್ತು ಪ್ರೀತಿ ಅನ್ಯೋನ್ಯವಾದುದು. ಎರಡಿಲ್ಲದ ಭಾವ ಅಲ್ಲಿ ಅಂಕುರವಾಗಿರುತ್ತದೆ. ಇದೇ ಅದ್ವೈತ ಸ್ಥಿತಿ. ದೇಹಗಳು ಎರಡಾದರೂ ಜೀವ ಒಂದೇ ಎಂಬ ಭಾವ. ನಿಷ್ಕಲ್ಮಶವಾದ ಅರ್ಪಣೆ ಅಲ್ಲಿ ನಡೆಯುತ್ತದೆ. ಶಿವಶರಣ-ಶರಣೆಯರು ಇಂತಹ ಸಖ್ಯಭಾವದಲ್ಲಿ ಲಿಂಗಪತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಒಲುಮೆಯ ಭಾವದಿಂದ ಲಿಂಗಪೂಜೆಯಲ್ಲಿ ಮೈಮರೆಯುವ ಉತ್ಕಟ ಸ್ಥಿತಿಗೆ ತಲುಪುತ್ತಿದ್ದರು. ಲಿಂಗಸ್ನೇಹಿಗಳಾಗಿ ಆತ್ಮರತಿಯಿಂದ ದೂರವಾಗಿ ಲಿಂಗಸಖನೊಂದಿಗೆ ಬೆರೆಯುವ ಸ್ಥಿತಿ ಅದು ಅತ್ಯಂತ ಉಚ್ಛತಮವಾದ ಹಂತ ಅದುವೇ ನಿರ್ವಿಕಾರ ಸ್ಥಿತಿ, ನಿರ್ಭಾವ ಸ್ಥಿತಿ, ಅದುವೆ ಸಮಾಧಿ ಸ್ಥಿತಿ. ಇಂತಹ ಸ್ಥಿತಿ ತಲುಪುವಲ್ಲಿ ಲಿಂಗದೊಂದಿಗೆ ಬೇರೆಯುವ ಆ ಸಖ್ಯಭಾವ ಅನನ್ಯವಾದು.
ಎನ್ನ ಹೃದಯಕಮಲ ಮಧ್ಯದಲ್ಲಿ
ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ
ಎನ್ನ ಕ್ಷಮೆಯೆ ಅಭಿಷೇಕ,
ಎನ್ನ ಪರಮವೈರಾಗ್ಯವೆ ಪುಷ್ಪದ ಮಾಲೆ,
ಎನ್ನ ಸಮಾಧಿಸಂಪತ್ತೆ ಗಂಧ,
ಎನ್ನ ನಿರಹಂಕಾರವೆ ಅಕ್ಷತೆ,
ಎನ್ನ ಸದ್ವಿವೇಕವೆ ವಸ್ತ್ರ,
ಎನ್ನ ಸತ್ಯವೆ ದಿವ್ಯಾಭರಣ,
ಎನ್ನ ವಿಶ್ವಾಸವೆ ಧೂಪ,
ಎನ್ನ ದಿವ್ಯಜ್ಞಾನವೆ ದೀಪ,
ಎನ್ನ ನಿಭ್ರಾಂತಿಯೆ ನೈವೇದ್ಯ,
ಎನ್ನ ನಿರ್ವಿಷಯವೆ ತಾಂಬೂಲ
ಎನ್ನ ಮೌನವೆ ಘಂಟೆ,
ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ,
ಎನ್ನ ಶುದ್ಧಿಯೆ ನಮಸ್ಕಾರ,
ಎನ್ನ ಅಂತಃಕರಣದಿಂದ ಮಾಡುವ
ಸೇವೆಯೆ ಉಪಚಾರಂಗಳು.
ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ
ಪ್ರಾಣಲಿಂಗ ಪೂಜೆಯೆ ಮಾಡಿ
ಬಾಹ್ಯಕ್ರೀಯ ಮರೆದನು
ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-365/ವಚನ ಸಂಖ್ಯೆ-976)
ಬಹು ಧೀರ್ಘವಾದ ವಚನದಲ್ಲಿ ವ್ಯೋಮಕಾಯ ಅಲ್ಲಮಪ್ರಭುಗಳು ಸ್ನೇಹದೊಲುಮೆಯೆ ನೋಟಗಳನ್ನೆಲ್ಲಾ ಬಸವಣ್ಣನವರ ಸಮ್ಮುಖದಲ್ಲಿ ನಿವೇದಿಸಿಕೊಳ್ಳುತ್ತಾರೆ. ಅಂತರಂಗದಲ್ಲಿರುವ ಸಖನಿಗೆ ಪ್ರಾಣಲಿಂಗ ಪೂಜೆಯನ್ನು ಮಾಡಿ ಬಾಹ್ಯದಿಂದ ಮುಕ್ತರಾಗುತ್ತಾರೆ. ಬಾಹ್ಯಕ್ರಿಯೆಗಳಿಂದ ದೂರವಾಗುತ್ತ ಲಿಂಗಪತಿಯಲ್ಲಿ ಕರಗಿ ಹೋಗುವ ವಿಧಾನಗಳನ್ನೆಲ್ಲಾ ತಮ್ಮ ಪರಮಮಿತ್ರ ಸಂಗನಬಸವಣ್ಣನಲ್ಲಿ ಹೇಳಿಕೊಳ್ಳುವ ಅಲ್ಲಮ ಪ್ರಭುಗಳ ಈ ವಚನ. ಸಖ್ಯಭಾವದ ಪರಿಮಳವನ್ನು ಹೊತ್ತು ತಂದಿದೆ. ತಮ್ಮ ಅಂತರಂಗದ ಸಖನಿಗೆ ಕ್ಷಮೆಯ ಅಭಿಷೇಕ, ಪರಮ ವೈರಾಗ್ಯದ ಪುಷ್ಪಮಾಲೆ, ಸಮಾಧಿ ಸಂಪತ್ತೆಂಬ ಗಂಧ, ನಿರಂಹಕಾರದ ಅಕ್ಷತೆ, ಸದ್ವಿವೇಕದ ವಸ್ತ್ರ, ಸತ್ಯವೇ ದಿವ್ಯಾಂಭರಣ, ವಿಶ್ವಾಸವೇ ಧೂಪ, ದಿವ್ಯಜ್ಞಾನವೆ ದೀಪ, ನಿಭ್ರಾಂತಿಯೆ ನೈವೇದ್ಯ, ನಿರ್ವಿಷಯವೆ ತಾಂಬೂಲ, ಮೌನವೇ ಘಂಟೆ, ನಿರ್ವಿಕಲ್ಪತೆಯ ಪ್ರದಕ್ಷಿಣೆ, ಶುದ್ಧಿಯೆ ನಮಸ್ಕಾರ, ಅಂತಃಕರಣದಿಂದ ಮಾಡುವ ಸೇವೆಯ ಉಪಚಾರವನ್ನು ಕೈಗೊಂಡು ತಮ್ಮನ್ನೇ ತಾವು ಮರೆತಿದ್ದಾರೆ. ಅದ್ಭುತವಾದ ಭಾವಪೂರ್ಣವಾದ ವಚನವಿದು! ನಿಜಕ್ಕೂ ಅಚ್ಚರಿಯಾಗುತ್ತದೆ. ತರ್ಕಗಳೇ ತುಂಬಿರುವ, ನಿಗೂಢತೆಯೇ ತುಂಬಿರುವ, ಬೆಡಗೇ ತುಂಬಿರುವ ಗುಹ್ಯಾಂತಗುಹ್ಯ ರಹಸ್ಯೆವೇ ಅಡಗಿರುವ ಜ್ಞಾನನಿಧಿ ಪ್ರಭುಗಳ ವಚನಗಳಲ್ಲಿ ಭಾವ ತುಂಬಿದ, ಸಖ್ಯಭಾವ ಹೊರಹೊಮ್ಮಿದ ಅಪರೂಪದ ವಚನವಿದು.
ಲಿಂಗದ ಒಲುಮೆಯನ್ನು ಬಯಸುವ ಭಕ್ತನ ಮನ, ಲಿಂಗದ ಸಖ್ಯಕ್ಕೆ ಸದಾ ಹಾರೈಸುತ್ತಿರುತ್ತದೆ. ಆ ಲಿಂಗದ ಒಲುಮೆ ದೊರೆಯದೇ ಹೋದಾಗಿನ ಆ ತಳಮಳ, ಚಡಪಡಿಕೆ ಅಗಲಿಕೆಯ ನೋವನ್ನು, ವಿರಹದ ಅನುತಾಪವನ್ನು ಹೆಚ್ಚಿಸುತ್ತದೆ. ಇಂತಹ ಅನುಭವವನ್ನು ಭಕ್ತ ಪರಮಾತ್ಮನಿಗೆ ನಿವೇದಿಸಿಕೊಳ್ಳುವುದು ಆರ್ತಭಕ್ತಿಯಾಗಿ ಹೊಮ್ಮುವುದು ಇಲ್ಲೆಲ್ಲಾ ಸಖ್ಯಭಾವವೇ ಸ್ಥಾಯಿಯಾಗಿರುವುದನ್ನು ದರ್ಶಿಸಬಹುದು.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ಆನಿದ್ದೇನಯ್ಯಾ.
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮ ಒಲವಿಲ್ಲದಂತೆ ಆನಿದ್ದೇನಯ್ಯಾ.
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ,
ನೀನೊಲಿದಂತೆ ಸಲಹಯ್ಯಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-270)
ಈ ಪ್ರೀತಿಯಲ್ಲಿ ಒತ್ತಾಯವೇ ಇಲ್ಲ. ನೀನು ಯಾವಾಗ ಒಲಿಯುತ್ತೇಯೋ ಆಗಲೇ ಸಲಹಯ್ಯಾ! ಎಂದು ಪ್ರಾರ್ಥಿಸುವ ಆರ್ತತೆ ಭಕ್ತಿ ಬಂಡಾರಿ ಬಸವಣ್ಣನವರಲ್ಲಿ ಕಂಡು ಬರುತ್ತದೆ. ಒಬ್ಬ ಹೆಣ್ಣುಮಗಳು ತನ್ನ ಪ್ರಿಯತಮನ ಒಲುಮೆಗಾಗಿ ಸರ್ವಾಲಂಕಾರ ಭೂಷಿತೆಯಾಗುತ್ತಾಳೆ. ಆ ಪ್ರಿಯತಮನ ಒಲುಮೆ ದೊರೆಯದೇ ಹೋದರೆ ಅವಳು ಅನುತಾಪಕ್ಕೆ ಹೇಗೆ ಒಳಗಾಗುವಳೋ ಹಾಗೇ ನೇಹದಿಂದ, ಒಲುಮೆಯಿಂದ, ಸದ್ಭಕ್ತಿಯಿಂದ ಪೂಜಿಸಿದರು ಶಿವನೊಲುಮೆ ಆಗುತ್ತಿಲ್ಲಾ, ಇದರಿಂದ ಬಾಳೆಲ್ಲ ಕೆಟ್ಟು ಹೋಗುತ್ತಿದೆ, ಶರಣ ಸಂಕುಲದಲ್ಲಿ ಶಿವನೊಲುಮೆ ದೊರೆಯದಿದ್ದರೆ ಬದುಕೇ ಇಲ್ಲ, ಹೀಗಿರುವಾಗಲೂ ನಾನು ಅನಂತಕಾಲ ನಿನ್ನನ್ನೇ ಧ್ಯಾನಿಸುವೆ, ನಿನ್ನನ್ನೇ ಪ್ರೀತಿಸುವೆ, ನಿನಗೆ ಯಾವಾಗ ಒಲುಮೆಯ ಕಣ್ಣು ತೆರೆಯುವುದೋ ಅಂದೇ ಸಲಹು ಕೂಡಲಸಂಗಮದೇವಾ ಎಂಬ ಸಖ್ಯಭಾವ ಒತ್ತಾಯದ ಒಲುಮೆಯನ್ನು ಬಯಸುವುದಿಲ್ಲ ಎಂಬುದನ್ನು ದೃಢಪಡಿಸುತ್ತದೆ. ಬಸವಣ್ಣನವರ ಈ ವಚನವೂ ಸಖ್ಯದ ವ್ಯಾಖ್ಯಾನವನ್ನೇ ನುಡಿಯುತ್ತದೆ.
ವೀರ ವಿರಾಗಿಣಿ ಅಕ್ಕಮಹಾದೇವಿಯವರಂತೂ ಚನ್ನಮಲ್ಲಿಕಾರ್ಜುನನ್ನು ಒಲಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿ ಇಲ್ಲ; ಅವನಾಗಿಯೇ ಅವನು ಒಲಿಯುವುದರಲ್ಲಿ ಹಿತವಿದೆ. ಚನ್ನಮಲ್ಲಿಕಾರ್ಜುನನ ಒಲುಮೆ ದೊರೆಯುವವರೆಗೂ ನಾನು ತಾಳ್ಮೆಯಿಂದ ಕಾಯುವೆ ಎಂಬ ಭಾವವೂ ಸಖ್ಯಭಾವವೇ ಇಂತಹ ಸಂಬಂಧವು ಮಧುರ ಭಾವನೆಗಳಿಗೆ ಆವಾಸ್ಥಾನವಾಗಿರುತ್ತದೆ.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?
ನೀನು ಬಹಿರಂಗವ್ಯವಹಾರ ದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ?
ನೀನು ವಾಙ್ಮನಕ್ಕತೀತನು.
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ?
ನೀನು ನಾದಾತೀತನು.
ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ?
ನೀನು ಮತಿಗತೀತನು.
ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?
ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-22/ವಚನ ಸಂಖ್ಯೆ-49)
ಕೊನೆಯಲ್ಲಿ ನೀನು ಒಲಿಯುವುದೇ ಸುಖವಯ್ಯಾ ಎಂಬುದು ಒಂದು ಅಂತಿಮ ಹಂತ. ಆ ಒಲುಮೆಗಾಗಿ ಕಾಯುವುದು ಭಕ್ತರ ಸಹನಶೀಲತೆ. ಶಿವ ಶರಣ-ಶರಣೆಯರು ಲಿಂಗಪತಿಯ ಅನುರಾಗಕ್ಕೆ ಪಡೆಯಲು ತಾಳ್ಮೆಯಿಂದ ಸಾಧನೆಗೆ ತೊಡಗುತ್ತಿದ್ದರು. ಲಿಂಗ ಸಾನಿಧ್ಯಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಶಿವಯೋಗಿ ಸಿದ್ಧರಾಮೇಶ್ವರರ ವಚನದಲ್ಲಿ ಅಂತಹ ಆತುರ–ಕಾತುರ ಭಾವ ಕಾಣುತ್ತದೆ.
[ಅಯ್ಯಾ, ನೀನೇಕೆ ಬಾರೆಯೊ ಹೇಳಯ್ಯಾ]
ಅಯ್ಯ! ನೀ ಬಾರಯ್ಯ!
ಬಂದೆನ್ನ ಹೃದಯ ಮನ ಹಸನವ ಮಾಡಿ ನೀನು ನಿಲ್ಲಯ್ಯ.
ಹಾ! ಅಯ್ಯಾ! ಅಯ್ಯಾ! ನೀ ಬಾರ! ನಿನ್ನ ಧರ್ಮ!
ಕಪಿಲಸಿದ್ಧಮಲ್ಲಿನಾಥಯ್ಯ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-57)
ಅಯ್ಯಾ ನೀ ಬಾರಯ್ಯಾ, ನೀ ಬಾರಾ ಎಂದು ಮಲ್ಲಿನಾಥನನ್ನು ಕರೆಯುವಲ್ಲಿ ಸಿದ್ಧರಾಮೇಶ್ವರರಿಗೆ ಅದೆಂತಹ ಪ್ರೀತಿ, ಸಲುಗೆ, ಸ್ನೇಹ! ಇಂತಹ ಸಖ್ಯಭಾವ ಬಸವಾದಿ ಶಿವಶರಣರ ಸಾಕಷ್ಟು ವಚನಗಳಲ್ಲಿ ನಾವು ಕಾಣುತ್ತೇವೆ. “ಲಿಂಗ” ವನ್ನು ಇನಿಯ, ಗೆಳೆಯ, ಸ್ನೇಹಿತ, ಸಖ, ನಲ್ಲ ಎಂಬ ಭಾವದಲ್ಲಿ ಆರಾಧಿಸಿದ ಶರಣ-ಶರಣೆಯರು ವಿರಹದ ತಾಪವನ್ನು ಅನುಭವಿಸಿದ್ದಾರೆ. ಸದಾ ಲಿಂಗಸುಖದಲ್ಲಿ, ಲಿಂಗಸಾನಿಧ್ಯದಲ್ಲಿ ಇರಲು ಹವಣಿಸಿದ್ದಾರೆ. ಅಂತಹ ಉತ್ಕಟಭಾವವು ಅವರ ವಚನಗಳಲ್ಲಿ ಕಾಣಸಿಗುತ್ತದೆ.
ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.
ಮನದಿಚ್ಫೆಯನರಿವ ಸಖಿಯರಿಲ್ಲ, ಇನ್ನೇವೆನವ್ವಾ?
ಮನುಮಥವೈರಿಯ ಅನುಭಾವದಲ್ಲಿ
ಎನ್ನ ಮನ ಸಿಲುಕಿ ಬಿಡದು,
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ?
ದಿನ ವೃಥ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1210)
ಶರಣೆ ಸತ್ಯಕ್ಕನವರು ಈ ವಚನದಲ್ಲಿ ತಮ್ಮ ಅಂತರಂಗದ ಇನಿಯನ ಕುರಿತು ಮಾತನಾಡುತ್ತಾರೆ. ಆ ಇನಿಯ ಬೇರಾರೂ ಅಲ್ಲ ಅವರ ಅಂತರಂಗದ ಶಂಭುಜಕ್ಕೇಶ್ವರ (ಆತ್ಮಲಿಂಗ-ಪ್ರಾಣಲಿಂಗ). “ಇನಿಯನನ್ನು ಕೊಡುವ ತನಕ ನನಗೆ ಸೈರಣೆ ಇಲ್ಲ” ಎಂಬುದೇ ಲಿಂಗಾಂಗ ಸಾಮರಸ್ಯದ ಪರಮೋಚ್ಛ ಹಂತ. ಸತ್ಯಕ್ಕನವರಲ್ಲಿರುವ ಲಿಂಗ–ಅಂಗದ ಸಾಮರಸ್ಯ ಅನುಭಾವದಲ್ಲಿ ಅಳವಟ್ಟಿದೆ. ಮನದ ಈ ತೀವ್ರ ಬಯಕೆಯ ಬಿಸಿ ಆರಿ ಹೋಗುವ ಮುನ್ನ ಆ ಲಿಂಗದಲ್ಲಿ ನಾನು ಒಂದಾಗಬೇಕಾಗಿದೆ ಎಂಬುದು ಸತಿಭಕ್ತಳ ಆರ್ತ ಮನೋಭಾವ. ಲಿಂಗಪತಿಗೆ ತಲುಪುವ ದಾರಿಗಾಗಿ ಶರಣ ಸಂಕುಲವನ್ನು ಬೇಡಿಕೊಳ್ಳುತ್ತಾರೆ. ಇದು ಸಖ್ಯಭಾವದ ಮಧುರಭಕ್ತಿ, ಲಿಂಗವನ್ನು ಆರಾಧಿಸುತ್ತಾ ಬಹಿರಂಗವನ್ನು ಮರೆಯುವ ಶರಣೆ ಸತ್ಯಕ್ಕನವರು ಗುಪ್ತವಾಗಿ, ಅರಿವಿಲ್ಲದೆ ಆತ್ಮದಲ್ಲಿ ಬೆರೆತು ತನ್ನ ಅಂತರಂಗದಲ್ಲಿ ನೆಲೆಗೊಳ್ಳುವ ಆಪ್ತ ಸಖನ ನಡಾವಳಿಗೆ ಅಚ್ಚರಿಯನ್ನು ವ್ಯಕ್ತಮಾಡುವ ವಚನವೂ ಗಮನಾರ್ಹ.
ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ;
ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು.
ತೆರಹಿಲ್ಲದಭವ ನುಡಿಗೆಡೆಗೊಡನು;
ಆತನ ಬಯಲಿಂಗೆ ಬೇಟಗೊಂಡೆನವ್ವಾ.
ನಾನೇನ ಮಾಡುವೆನೆಲೆ ತಾಯೆ,
ಮರೆದಡೆ ಎಚ್ಚರಿಸುವ ಕುರುಹಿಲ್ಲದ ಗಂಡನು.
ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1230)
ದ್ವೈತಭಾವದಲ್ಲಿ ನಿಂತ ಭಕ್ತಿ ಸಾಧಕಳಾದ ಸತ್ಯಕ್ಕನವರು ಲಿಂಗವನ್ನು ಆರಾಧಿಸುತ್ತಾ ಲಿಂಗಪತಿಯೊಂದಿಗೆ ಒಂದಾಗುವ ಅದ್ವೈತ ಹಂತವನ್ನು ತನ್ನದೇ ಪರಿಭಾಷೆಯಲ್ಲಿ ಅಭಿವ್ಯಕ್ತಿಸುತ್ತಾಳೆ. “ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ, ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು” ಎಂಬಲ್ಲಿ ಜೀವಾತ್ಮ ಪರಮಾತ್ಮವಾಗುವ, ಲಿಂಗಾಂಗ ಸಾಮರಸ್ಯ ಹೊಂದುವ, ಸಖ-ಸಖಿ ಒಂದಾಗಿ ಸತಿಪತಿ ಭಾವ ತಲುಪಿದ ಹಂತಗಳನ್ನು ಸತ್ಯಕ್ಕನವರು ಪ್ರಬುದ್ಧ ನೆಲೆಯಲ್ಲಿ ಅಭಿವ್ಯಕ್ತಿಸುತ್ತಾರೆ.
ವಚನಕಾರರಲ್ಲಿ ಸಖ್ಯಭಾವದ, ಸತಿಪತಿ ಭಾವದ ವಚನಗಳು ಹೆಚ್ಚಾಗಿ ಉರಿಲಿಂಗದೇವರು ಮತ್ತು ಗಜೇಶ ಮಸಣಯ್ಯ ಶರಣರಲ್ಲಿ ಕಂಡು ಬರುತ್ತದೆ. ಲಿಂಗವನ್ನು “ನಲ್ಲ” ನೆಂದು ಸಂಬೋಧಿಸುವ ಶರಣ ಉರಿಲಿಂಗ ದೇವರು ಲಿಂಗಾಂಗ ಸಾಮರಸ್ಯದ ಉತ್ಕಟ ನೆಲೆಯನ್ನು ನಲ್ಲ-ನಲ್ಲೆಯರ ಸಮಾಗಮದ ನೆಲೆಯಲ್ಲಿ ಪ್ರಕಟಪಡಿಸುತ್ತಾರೆ.
ಈ ನಲ್ಲನ ಬೇಟದ ಕೂಟದ ಪರಿಯನು
ಏನೆಂದು ಹೇಳುವೆ? ವಿಪರೀತ ಕೆಳದಿ.
ಪುರುಷ ಶಕ್ತಿಯಾಗಿ, ಶಕ್ತಿ ಪುರುಷನಾಗಿ
ನೆರೆದು ಸುಖಿಸುವನು ಕೇಳಾ ಕೆಳದಿ.
ಅತಿ ಕಾಮಿ ವಿಪರೀತನು ಉರಿಲಿಂಗದೇವನು,
ನೆರೆಯಲು ನೆರೆವುದು ಮನದಿಚ್ಚೆ ಕೆಳದಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-456/ವಚನ ಸಂಖ್ಯೆ-1223)
ಅತ್ಯಂತ ಪ್ರಜ್ಞಾವಂತ ಮನಸ್ಥಿತಿಗೆ ಇದು ಅರ್ಥವಾಗುವುದು ಈ “ನಲ್ಲನ ಬೇಟದ ಕೂಟದ ಪರಿ” ಇಲ್ಲಿ ಬಳಸಿದ “ಕೆಳದಿ” ಎಂದರೆ ಗೆಳತಿಯನ್ನುದ್ದೇಶಿಸಿ ತನ್ನ ನಲ್ಲನೊಂದಿಗೆ ಬೆರೆಯುವ ಸುಖವನ್ನು ಉರಿಲಿಂಗದೇವರು ಹೇಳಿಕೊಳ್ಳುತ್ತಾರೆ. ಮಧುರವಾದ ಸಖ್ಯಭಾವ ಇಲ್ಲಿದೆ. ನಲ್ಲನ ಜೊತೆಗಿನ ಸಮಾಗವು ಅತ್ಯಂತ ಸುಖವನ್ನು ಒದಗಿಸಿದ ಪರಿ ಉರಿಲಿಂಗದೇವರ ವಚನದಲ್ಲಿ ಆತ್ಮೀಯವಾಗಿ ಹೊಮ್ಮಿದೆ.
ನಲ್ಲನ ರೂಪೆನ್ನ ನೇತ್ರವ ತುಂಬಿತ್ತು,
ನಲ್ಲನ ನುಡಿಯೆನ್ನ ಶ್ರೋತ್ರವ ತುಂಬಿತ್ತು,
ನಲ್ಲನ ಸುಗಂಧವೆನ್ನ ಘ್ರಾಣವ ತುಂಬಿತ್ತು,
ನಲ್ಲನ ಚುಂಬನವೆನ್ನ ಜಿಹ್ವೆಯ ತುಂಬಿತ್ತು,
ನಲ್ಲನ ಆಲಿಂಗವೆನ್ನ ಅಂತರಂಗ ಬಹಿರಂಗದಲ್ಲಿ,
ನಲ್ಲನ ಪ್ರೇಮವೆನ್ನ ಮನವ ತುಂಬಿತ್ತು,
ಕೂಡಿ ಸುಖಿಯಾದೆ ಉರಿಲಿಂಗದೇವನ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-462/ವಚನ ಸಂಖ್ಯೆ-1246)
ನಲ್ಲೆಯಾಗುವ ಶರಣ, ನಲ್ಲನಾಗುವ ದೇವ, ಆಧ್ಯಾತ್ಮಿಕ ನೆಲೆಯಲ್ಲಿ ಒಂದಾಗುವ ನಲ್ಲ-ನಲ್ಲೆ (ಜೀವಾತ್ಮ-ಪರಮಾತ್ಮ) ರ ಈ ಮಿಲನ ಸಖ್ಯಭಾವದೊಂದಿಗೆ ಮೂಡಿ ಸತಿಪತಿಭಾವದಲ್ಲಿ ಸ್ಥಾಯಿಯಾಗುತ್ತದೆ.
ಶರಣ ಗಜೇಶ ಮಸಯ್ಯನವರಂತೂ ತನ್ನ ನಲ್ಲನೊಂದಿಗೆ (ಲಿಂಗ) ಬೆರೆಯುವುದೆಂದರೆ “ಕರ್ಪೂರವನ್ನು ಉರಿಕೊಂಬಂತೆ” ಎಂಬ ಉಪಮೆಯನ್ನು ಸಾದರಪಡಿಸಿ ಲಿಂಗದೊಂದಿಗೆ ಬೆರೆಯುವ ಆ ಸುಖ ಮಾತಿಗೆ ನಿಲುಕಲಾರದ್ದು, ಅನಿರ್ವಚನೀಯ ಸ್ಥಿತಿ ಎಂದು ಹೇಳುತ್ತಾರೆ;
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ,
ಹೇಳಲೂಬಾರದು, ಕೇಳಲೂಬಾರದು;
ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ.
ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ
ಹೇಳಲು ಬಾರದವ್ವಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-204)
ಇದು ಉಪಮಿಸಲು ಬಾರದ ಹಂತ ಎಂಬ ಭಾವದ ವಚನವಿದು,
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ
ಇರುಳಿನ ತಾವರೆಯಂತೆ ಮುಖ ಬಾಡಿ,
ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ,
ಇರುಳಿನ ಸಮುದ್ರದಂತೆ ಘನವಾಗಿ,
ಸಲೆ ಉಮ್ಮಳಿಸಿ ಸಂಜೆವರಿದು
ಮಹಾಲಿಂಗ ಗಜೇಶ್ವರನ
ಬರವಿಂಗೆ ಬೆಳಗಾಯಿತು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-88/ವಚನ ಸಂಖ್ಯೆ-208)
ನಮ್ಮ ಶರಣರ ವಚನಗಳಲ್ಲಿ ಅಡಗಿದ ಕಾವ್ಯಶಕ್ತಿ ಇದು. ಕಾವ್ಯಮೀಮಾಂಸೆಯಲ್ಲಿ ಇಂತಹ ರಚನೆಗಳನ್ನು “ವಿಪ್ರಲಂಬ ಶೃಂಗಾರ” ಎನ್ನುತ್ತಾರೆ. ಇಲ್ಲಿ ವಿಪ್ರಲಂಬ ಶೃಂಗಾರ ರಸವೆ ಹರಿದೆ. ವಿರಹದ ಅನುತಾಪದಲ್ಲಿ ಬೆಂದ ಹೃದಯದ ಮೊರೆತ ಇದು
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ?
ಅವರನೊಲ್ಲೆನೆಂದಡೆ ಸಾಲದೆ?
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ!
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-216)
ಎಂತಹ ಪ್ರೇಮ ಭಾಷೆಯಿದು! ಒಲಿದವರನ್ನು ಕೊಲ್ಲಲು ಹರಿತವಾದ ಖಡ್ಗವೇ ಬೇಕಿಲ್ಲವಂತೆ, ಅವರನ್ನು ನಿರಾಕರಿಸಿದರೆ ಸಾಕು. ಅದು ಅವರಿಗೆ ಸಾವೇ. ನಲ್ಲನಿಂದ ನಾನು ಅಗಲಿದರೆ “ತುಪ್ಪದಲ್ಲಿ ಕಿಚ್ಚನ್ನು ನಂದಿಸಿದಂತಾದೆನವ್ವಾ” ಇದಕ್ಕಿಂತ ವಿರಹದ ತಾಪಕ್ಕೆ ಮತ್ತೊಂದು ಉಪಮೆಬೇಕೆ? ನಮ್ಮ ವಚನಕಾರರ ಸಾಹಿತ್ಯ ಅದೆಷ್ಟು ಅಮೋಘವಾದದ್ದು ಎಂಬುದಕ್ಕೆ ಇಷ್ಟು ಸಾಕು.
ಸ್ನೇಹ ಗೆಳೆತನದಲ್ಲಿ ಹೆದರಿಕೆ, ಸಂಕೋಚಗಳಿಗೆ ಆಸ್ಪದವಿಲ್ಲ. ಅಲ್ಲಿ ಸಲುಗೆಯೇ ಹೆಚ್ಚು. ಅಂತಹ ಸಖ್ಯಭಾವವನ್ನು ಶಿವಶರಣೆ ಅಕ್ಕಮಹಾದೇವಿಯರಲ್ಲಿ ಹೆಚ್ಚು ಕಂಡು ಬರುತ್ತದೆ.
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ನೋಡಿದಡೆ ನೋಡು, ನೋಡದಡೆ ಮಾಣು
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ಮೆಚ್ಚಿದೆಡೆ ಮೆಚ್ಚು, ಮೆಚ್ಚದಡೆ ಮಾಣು
ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ.
ಅಯ್ಯಾ, ನೀನು ಒಲಿದಡೆ ಒಲಿ, ಒಲಿಯದಡೆ ಮಾಣು
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಆನು ನಿಮ್ಮನರ್ಚಿಸಿ ಪೂಜಿಸಿ
ಹರುಷದೊಳೋಲಾಡುವೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-32)
ಇದಲ್ಲವೇ ಸುಂದರವಾದ ಸಖ್ಯಭಾವ! ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಸಾಧಕಿಯಾದ ಅಕ್ಕಮಹಾದೇವಿಯವರು ಶಿವಯೋಗ ಸಾಧನೆಯಿಂದ ಶಿವಸಖ್ಯ ಹೊಂದಿದವರು. ಈ ಕಾರಣದಿಂದ ಸಖ್ಯದ ಸಲುಗೆ ಅಕ್ಕನವರಲ್ಲಿ ಗೋಚರಿಸುತ್ತದೆ. “ನೀ ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ, ಒಲಿದರೂ ಸರಿ, ಒಲಿಯದಿದ್ದರೂ ಸರಿ, ನಾ ನಿನ್ನ ಸಖ್ಯ ತೊರೆಯುವುದಿಲ್ಲ” ಎಂಬ ಹಂತಕ್ಕೆ ಅವರ ಭಾವ ತಲುಪಿದೆ, ಇಂತಹ ನಿರ್ಭಿಡತೆ, ಸಲುಗೆ ಬರಬೇಕಾದರೆ ಅದು ಗೆಳೆತನದಲ್ಲಿ ಮಾತ್ರ ಸಾಧ್ಯ. ಆ ಸ್ನೇಹದಲ್ಲಿ ಸಖ್ಯಭಾವ ಅಂಕುರವಾದಗಲೇ ಸಾಧ್ಯ. ಆದರೆ ಶಿವಶರಣ-ಶರಣೆಯರಲ್ಲಿ ನೆಲೆ ನಿಂತದ್ದು ದೇಹಭಾವದ ಸಖ್ಯವಲ್ಲ, ಅದು ದೇವಭಾವದ ಸಖ್ಯ. ಇದು ಅನನ್ಯವಾದುದು. ಇದನ್ನು ಶಿವಶರಣ-ಶರಣೆಯರು ತಮ್ಮ ವಚನಗಳಲ್ಲಿ ನೆಲೆಗೊಳಿಸಿದ್ದಾರೆ. ಹೀಗೆ ಅಕ್ಕಮಹಾದೇವಿಯವರು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದಲ್ಲಿ ಅನುಭಾವದ ದೃಷ್ಟಿ ನೆಟ್ಟಿರುವರು. ಅಂಗದ ಮೇಲೆ ಲಿಂಗವನ್ನು ಧರಿಸಿದ ಆ ಲಿಂಗವನ್ನು ಅನನ್ಯ ಶ್ರದ್ಧೆಯಿಂದ ಉಪಾಸಿಸಿದ ಅಕ್ಕಮಹಾದೇವಿಯರು ಅನುಪಮ ಸಾಧಕಿ. ಲಿಂಗದ ಉಪಾಸನೆಯೂ ಸಖ್ಯದ ಸ್ವರೂಪವೇ ಆಗಿದೆ. ಸ್ವತಃ ಅಕ್ಕಮಹಾದೇವಿಯವರೇ ಹೇಳುವಂತೆ “ಲಿಂಗದೊಳು ಮೆಚ್ಚಿ ಮನ ಹಿಂಗದಿಹ ಭಾವಸುಖ ಸಂಗ ಸುಖವಾರಿಗಹುದೋ” ಎಂದಿರುವರು.
ಈ ಸಂದರ್ಭದಲ್ಲಿ ನೆನೆಯತಕ್ಕ ಇನ್ನೊಬ್ಬ ಶಿವಶರಣೆ ಬೌದ್ಧಿಕ, ತಾತ್ವಿಕ ವಿಚಾರಗಳಿಂದ ಪ್ರಸಿದ್ಧಳಾದ ಶಿವಶರಣೆ ಮುಕ್ತಾಯಕ್ಕ. ಮುಕ್ತಾಯಕ್ಕನವರನ್ನು ಇವರ ನಿಲುವಿನಲ್ಲಿ ಸಾಧಕನಿಗೂ, ಗುರುವಿಗೂ ಇರುವ ಅವಿನಾಭಾವ ಸಂಬಂಧದಲ್ಲಿ ಅರಿವಿಲ್ಲದೇ ಘನವಾಗಿ ಬೆರೆತಿರುವ ಸಖ್ಯಭಾವವು ತನ್ನನ್ನು ತಾನು ಅರಿವಲ್ಲಿ ಉಪಕರಿಸಿದೆ. ಸಾಧಕನಿಗೆ ಗುರುವಿನ ಅವಶ್ಯಕತೆ ನಿರಂತರವಾಗಿ ಬೇಕಾಗುತ್ತದೆ. ಗುರುವಿನಿಂದ ದೀಕ್ಷೆ ಪಡೆದು ಸಾಧನೆಯಲ್ಲಿ ತೊಡಗಿದ ಭಕ್ತನಿಗೆ ಗುರುವು ಕೊನೆಯವರೆಗೂ ಮಾರ್ಗದರ್ಶಕನಾಗಿರುತ್ತಾನೆ. ತದನಂತರ ಭಕ್ತನು ತನ್ನ ಅರಿವಿನಿಂದ ಸ್ವತಃ ಗುರುತ್ವ ಪಡೆಯುತ್ತಾನೆ. ಹೀಗಾಗಿ ಸಾಧಕ-ಭಕ್ತ–ಗುರುವಿಗೆ ಸಖ್ಯಭಾವ (ಆತ್ಮೀಯ ಸಂಬಂದ, ವಿರೋಧವಿಲ್ಲದ ಭಾವ) ಉಂಟಾಗುವುದು ಸಹಜ.
ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.
ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ
ಇಂದು ಜ್ಞಾನೋದಯವಾದಡೆ
ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ?
ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ
ಗುರುವಿಲ್ಲದೆ ಆಗದು ಕೇಳಾ.
ಎನ್ನ ಅಜಗಣ್ಣನೆಂಬ ಗುರುವಿಲ್ಲದೆ
ಆರೂಢಿಯ ಕೂಟ ಸಮನಿಸದು ಕೇಳಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-398/ವಚನ ಸಂಖ್ಯೆ-1109)
ಶಿವಶರಣೆ ಮುಕ್ತಾಯಕ್ಕನವರ ಈ ವಚನದ ಮೂಲಕ “ಗುರು” ವಿನ ಮಹಿಮೆಯನ್ನು ಮತ್ತು ತನಗೆ ಅರಿವು ನೀಡಿದ ಅಣ್ಣ ಅಜಗಣ್ಣನ ಮಹಿಮೆಯನ್ನು ಹೇಳುತ್ತ ಗುರುವಾದ ಅಜಗಣ್ಣನ ಸಾಂಗತ್ಯದಲ್ಲಿ “ಅರಿವು” – ಜ್ಞಾನೋದಯ ಸನ್ನಿತವಾದದ್ದನ್ನು ಸ್ಮರಿಸಿಕೊಳ್ಳುತ್ತಾ,
ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು
ಬದುಕಿದೆನಯ್ಯಾ ಅಜಗಣ್ಣತಂದೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1104)
ಭಾವಕ್ಕೆ ಗುರುವಾದ ಬಸವಣ್ಣ, ನೋಟಕ್ಕೆ ಲಿಂಗವಾದ ಚನ್ನಬಸವಣ್ಣ, ಜ್ಞಾನಕ್ಕೆ ಜಂಗಮವಾದ ಪ್ರಭುದೇವ, ಪರಿಣಾಮಕ್ಕೆ ಪ್ರಸಾದವಾದ ಮರುಳಶಂಕರದೇವ, ಹೃದಯಕ್ಕೆ ಮಂತ್ರವಾದ ಮಡಿವಾಳಯ್ಯ ಎನ್ನುತ್ತಲೇ ಗುರು-ಲಿಂಗ–ಜಂಗಮ-ಪ್ರಸಾದ ತತ್ವಗಳ ನೆಲೆಯನ್ನರಿತುಕೊಂಡ ನಾನು ಒಂಟಿಯಲ್ಲ, ನನ್ನ ಆತ್ಮ ಸಂಗಾತಕ್ಕೆ ಹಿರಿಯ ಶರಣರೆಲ್ಲಾ ಇದ್ದಾರೆ ಎಂದು ಆತ್ಮವಿಶ್ವಾಸದಿಂದ ಶರಣೆ ಮುಕ್ತಾಯಕ್ಕನವರ ನುಡಿಗಳಿಂದ ಶಿವಶರಣೆಯರು ಆತ್ಮಸಖ್ಯಕ್ಕೆ ಹಾತೊರೆದವರು ಎಂಬುದು ಸಾಬೀತಾಗುತ್ತದೆ.
ಶರಣೆ ಹಡಪದ ಲಿಂಗಮ್ಮನ ವಚನದಲ್ಲೂ ಸಖ್ಯಭಾವದ ಪರಿಕಲ್ಪನೆ ಇದೇ ತೆರನಾಗಿ ಮೂಡಿ ಬಂದಿದೆ.
ನಿರ್ಮಳವಾದ ದೇಹದಲ್ಲಿ ಇನ್ನೊಂದ ಕಲ್ಪಿಸಲುಂಟೆ?
ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ?
ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ,
ಇನ್ನೊಂದರ ನೆನಹುಂಟೆ?
ಈ ಸರ್ವಾಂಗವೂ ಲಿಂಗವಾಗಿ, ಜಂಗಮನೆ ಪ್ರಾಣವಾಗಿ,
ಅವರ ಪಾದದಲ್ಲಿಯೇ ನಾನು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-486/ವಚನ ಸಂಖ್ಯೆ-1314)
ಶರಣೆ ಮುಕ್ತಾಯಕ್ಕನವರಂತೆ ಶರಣೆ ಹಡಪದ ಲಿಂಗಮ್ಮನವರು ಗುರು-ಲಿಂಗ–ಜಂಗಮ, ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗಗಳಲ್ಲಿ ಬೆಸೆಯಲ್ಪಟ್ಟ ಸಖ್ಯವನ್ನು ಒಪ್ಪಿಕೊಂಡಿದ್ದಾರೆ. ಸಖ್ಯಭಾವದ ತೆಕ್ಕೆ ಸಡಿಲಿಕೆಯಾಗದಂತೆ ಜೀವಾತ್ಮನ ತನು–ಮನ-ಭಾವಗಳು ಪರಮಾತ್ಮನಲ್ಲಿ ವಿಲೀನವಾಗುವ ಸುಂದರ ಸಖ್ಯಭಾವದ ಸಿದ್ಧಾಂತವನ್ನು ತಮ್ಮ ವಚನಗಳಲ್ಲಿ ಶರಣೆ ಲಿಂಗಮ್ಮನವರು ಸಾದರಪಡಿಸುತ್ತಾರೆ. ಅಂಗ ಲಿಂಗವಾಗುವ, ಜಂಗಮ ಪ್ರಾಣವಾಗುವ, ಕಾಯ ಪ್ರಸಾದವಾಗುವ, ಪ್ರಸಾದ ಕಾಯದಲ್ಲಿ ಪ್ರಾಣಲಿಂಗ ನೆಲೆನಿಲ್ಲುವ ಒಟ್ಟಾರೆ ಭಕ್ತನು ದೇವನಾಗುವ ಹಂತಗಳನ್ನು ಪ್ರಾಣಲಿಂಗದ ಪಾದ ಸನ್ನಿಧಿಯಲ್ಲಿ ನಿಜ ಭುಕುತಿಯನ್ನು ಸಾಧಿಸಿದ ಮಧುರ ಸಖ್ಯವನ್ನು ಶರಣೆ ಲಿಂಗಮ್ಮನವರು ಅನುಭವಿಸುತ್ತಾರೆ.
ಪರಮಾತ್ಮ ಕರುಣಾಶಾಲಿ, ಶಕ್ತಿಶಾಲಿ ಅವನ ಸ್ನೇಹ ಸಂಪಾದಿಸಿದರೆ ಅವನಲ್ಲಿ ಆತ್ಮೀಯವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ದೊರೆಯುತ್ತದೆ. ಅವನೊಂದಿಗೆ ಮುನಿಸಿಕೊಳ್ಳಬಹುದು, ಪ್ರಶ್ನಿಸಬಹುದು, ಬೈಯಬಹುದು, ನಿಂದಿಸಬಹುದು, ಬೇಡಿಕೊಳ್ಳಬಹುದು, ಮನಸ್ಸಿನಲ್ಲಿರುವುದನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಬಹುದು. ಈ ಕಾರಣದಿಂದ ಶಿವಶರಣ-ಶರಣೆಯರು ಲಿಂಗದೊಂದಿಗೆ ಸಖ್ಯಭಾವ ಹೊಂದಿದರು. ಸಖ್ಯಭಾವ-ಸಖ್ಯಭಕ್ತಿ ವೈದಿಕ ಭಕ್ತಿ ಎಂದು ಹೇಳುವವರಿದ್ದಾರೆ, ಆದರೆ ನಮ್ಮ ಶರಣ ಪರಂಪರೆಯಲ್ಲಿ ಸತಿ-ಪತಿಭಾವವೇ ಸಖ್ಯಭಕ್ತಿ ಎಂಬುದನ್ನು ನಮ್ಮ ಶರಣ ಪರಂಪರೆ ನಡೆದು ತೋರಿದೆ. ಲಿಂಗ ಸಖ್ಯಭಾವ ಹೊಂದಿದ ನಮ್ಮ ಶಿವಶರಣ-ಶರಣೆಯರೆಲ್ಲರೂ ಒಂದಿಲ್ಲಾ ಒಂದು ನೆಲೆಯಲ್ಲಿ ಪ್ರೇಮಿಗಳಾಗಿದ್ದಾರೆ, ವಿರಹಿಗಳಾಗಿದ್ದಾರೆ, ಸ್ನೇಹಿತರಾಗಿದ್ದಾರೆ, ಇವರ ಅನುರಾಗ, ಸಖ್ಯ, ಪ್ರೇಮ, ವಿರಹ, ತಾಪಗಳೆಲ್ಲವೂ ಅಲೌಕಿಕ ನೆಲೆಯಲ್ಲಿವೆ.
ಈ ಲೇಖನದಲ್ಲಿ ಬಳಸಿಕೊಂಡ ವಚನಗಳ ಹೊರತಾಗಿಯೂ ಇನ್ನೂ ಸಾಕಷ್ಟು ವಚನಗಳಲ್ಲಿ ಸಖ್ಯಭಾವವನ್ನು ಹುಡುಕಬಹುದು. ಶಿವಶರಣ-ಶರಣೆಯರಲ್ಲಿ ಸಖ್ಯಭಾವ ಒಲವಾಗಿ ಹೊಮ್ಮಿದೆ. ಲಿಂಗಪತಿ-ನಾನುಸತಿ ಎಂಬ ಭಾವವೇ ಅದು. ಹಾಗೆ ನೋಡಿದರೆ ಸತಿ-ಪತಿಗಳೇ ನಿಜವಾದ ಸ್ನೇಹಿತರು. ಅವರೇ ನಿಜವಾದ ಪ್ರೇಮಿಗಳು, ಆ ಸ್ನೇಹ ಪ್ರೇಮದಲ್ಲಿ ಪ್ರೀತಿ, ಪ್ರೇಮ, ಕಾಮ, ಸಹನೆ, ಸೋಲುವಿಕೆ, ಕರಗುವಿಕೆ, ಬಿಗುವು, ಬಿನ್ನಾಣ, ಸೆಡವು, ಸರಸ, ಸಲ್ಲಾಪ, ಕೋಪ, ತಾಪ ಎಲ್ಲವೂ ಇರುತ್ತವೆ. ಬಸವಾದಿ ಶರಣ-ಶರಣೆಯರ ವಚನಗಳಲ್ಲಿ ಈ ಎಲ್ಲಾ ಭಾವಗಳನ್ನೂ ಗುರುತಿಸಬಹುದಾಗಿದೆ.
ವಚನ ಸಾಹಿತ್ಯದ ಹರಹು ಬಹು ವಿಸ್ತಾರವಾದುದು. ವಚನಗಳ ಒಳನೋಟವೂ ಅಷ್ಟೇ ಗಹನವಾದದ್ದು. ಅರ್ಥೈಸಿದಷ್ಟು ಹಿಗ್ಗುತ್ತಲೇ ಹೋಗುವುದು. ಹೊಸ ಹೊಸ ಚಿಂತನೆಗಳಿಗೆ ತನ್ನನ್ನು ತೆರೆದುಕೊಳ್ಳವುದು.
ಅವರವರ ಭಾವಕೆ ಅವರವರ ದರುಶನಕೆ
ಅವರಿವರಿಗೆಲ್ಲಾ ಗುರು ನೀನೇ ದೇವಾ
ಎಂಬ ನುಡಿಗಳಂತೆ ಅವರವರ ಭಾವಗ್ರಹಿಕೆಗೆ ನಿಲ್ಲುವಂತಹ ವಚನಗಳಲ್ಲಿ ಹೊಸ ವಿಚಾರಗಳನ್ನು ಹುಡುಕಲು ಇನ್ನೂ ಸಾಧ್ಯವಿದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಒಂದು ವಚನ ಹತ್ತು ಹಲವು ವಿಚಾರಗಳಿಗೆ ನಾಂದಿಯಾಗಲು ಸಾಧ್ಯವಿದೆ. ಇದನ್ನು ಚಿಂತಕರು, ವಿಮರ್ಶಕರು ಯಾವ ಭಾವದಿಂದ ನೋಡುತ್ತಾರೋ ಅದು ಅವರವರ ಭಾವಕ್ಕೆ ಅವರು ಕಂಡುಕೊಳ್ಳುವ ವಿಚಾರದರ್ಶನಕ್ಕೆ ಒಳಪಡುತ್ತದೆ. ಏಕೆಂದರೆ ಚಿಂತನೆಗೆ ಪೂರ್ಣ ವಿರಾಮವಿಲ್ಲ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು,
ಬ್ಯಾಡಗಿ ತಾಲೂಕ, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in