
ಕಲ್ಯಾಣವೆಂಬ ಪ್ರಣತೆಯಲ್ಲಿ
ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ
ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ
ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ
ಸಂಗನಬಸವಣ್ಣನ ಮಹಿಮೆಯ ನೋಡಾ
ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059)
ಜಗತ್ತಿನ ಶ್ರೇಷ್ಠ ಅನುಭಾವಿಗಳಲ್ಲಿ ಜ್ಞಾನ ವೈರಾಗ್ಯ ಮೂರ್ತಿಗಳಾದ ಅಲ್ಲಮ ಪ್ರಭುದೇವರು ಒಬ್ಬರು. ಪ್ರಭುಗಳ ಶ್ರೇಷ್ಠ ವಚನಗಳಲ್ಲಿ ಒಂದಾದ ಮೇಲಿನ ವಚನ ಆಚಾರ-ವಿಚಾರಗಳಿಗೆ ಕನ್ನಡಿ ಹಿಡಿದಂತಿದೆ. ಮಾನವರ ದೇಹವೆಂಬುದು ಪ್ರಣತೆ ಇದ್ದಂತೆ. ಪ್ರಣತೆ ಒಂದು ಜಡ ವಸ್ತು. ಹಾಗೆಯೇ ಮಾನವ ದೇಹ ಜಡವಾದುದು. ಹಾಗಾದರೆ ಜಡ ದೇಹಕ್ಕೆ ಚೈತನ್ಯ ಬೇಕು. ಭಕ್ತಿರಸವೆಂಬ ತೈಲವನ್ನು ಆ ದೇಹಕ್ಕೆ ಎರೆಯಲು ಜಡ ದೇಹ ಚೈತನ್ಯವಾಗುವುದು. ಚೈತನ್ಯವು ಚಲನಶೀಲವಾಗಿರಬೇಕು, ಅದಕ್ಕಾಗಿ ಆಚಾರದ ಬತ್ತಿ ಬೇಕು. ಆಚಾರವೆಂಬ ಬತ್ತಿಯು ಸದಾ ಬೆಳಗುತ್ತಿರಬೇಕು. ಆಚಾರವು ಆಚಾರವಾಗಿ ಉಳಿಯದೇ ವಿಚಾರದಿಂದ (ಅರಿವು) ಕೂಡಿರಬೇಕು. ಅದಕ್ಕೆ ಪ್ರಭುಗಳು ಹೇಳುವಂತೆ ಆಚಾರವೆಂಬ ಬತ್ತಿಗೆ “ಬಸವಣ್ಣ” ನೆಂಬ ಜ್ಯೋತಿಯ ಮುಟ್ಟಿಸಬೇಕು. ಇದು ತುಂಬಾ ಮುಖ್ಯವಾದ ಅಂಶ. ಬಸವಣ್ಣನೆಂಬುದು ವ್ಯಕ್ತಿಯಲ್ಲ, ಬಸವಣ್ಣ ಎಂಬುದೇ ಒಂದು ಪ್ರಜ್ಞೆ, ಜಾಗೃತಾವಸ್ಥೆ. ಆ ಜ್ಯೋತಿ ಮುಟ್ಟಿದಾಗ ಶಿವನ ಪ್ರಕಾಶ ತೊಳಗಿ ಬೆಳಗುತ್ತದೆ. ಶಿವನ ಪ್ರಕಾಶವೆಂದರೆ ಅರಿವಿನ ಬೆಳಕು ವಿಚಾರದ ಬೆಳಕು ಅಂದರೆ ಬಾಹ್ಯ ಆಚರಣೆಗಳೊಂದಿಗೆ ಅಂತರಂಗದ ಅರಿವು ಬಹಳ ಮುಖ್ಯ. ಬಸವಣ್ಣನೆಂಬ ಜ್ಯೋತಿ ಅಂತರಂಗದ ಅರಿವಿನ ಬೆಳಕು. ಆ ಜ್ಯೋತಿಯ ಬೆಳಕು ಪ್ರಜ್ಞೆಯ ಸಂಕೇತ. ಶಿವನ ಪ್ರಕಾಶವೆಂಬುದು ಅಂತರಂಗವನ್ನು ಬೆಳಗುವ ಅರಿವಿನ ಆಧ್ಯಾತ್ಮಲೋಕದ ಮಹಾಬೆಳಕು. ಮಾನವರ ಅಂತರಂಗದಲ್ಲಿ ಇಂತಹ ವಿಚಾರದ ಬೆಳಕು ಮೂಡಿದಾಗ ಜಡದೇಹ ಚೈತನ್ಯಮಯವಾಗಿ ಪಾವನವಾಗುದು. ಇದನ್ನು ಸಮಾಜ (ಸಮಷ್ಠಿ) ಕ್ಕೂ ಅನ್ವಯಿಸಿ ಕೊಳ್ಳಬಹುದು. ಆಚಾರಕ್ಕೆ ವಿಚಾರದ ಸ್ವರ್ಶ ನೀಡುವ ಬಸವಾದಿ ಶಿವಶರಣರ ವಚನಗಳು ನಮಗೆ ಇವತ್ತಿಗೂ ಪ್ರಸ್ತುತವೆನಿಸುತ್ತವೆ.
ಅಂದು 12 ನೇ ಶತಮಾನದಲ್ಲಿ ಮನುಕುಲವನ್ನು ಒಂದುಗೂಡಿಸುವ ಕಾರ್ಯ ಬಸವಣ್ಣನವರಿಂದ ಆಯಿತು. ಸಮಾಜವನ್ನು ಒಂದುಗೂಡಿಸುವ ಕೆಲಸ ಅಷ್ಟು ಸುಲಭವಾದುದಲ್ಲ. ಕಲ್ಯಾಣದಲ್ಲಿ ಬಸವಣ್ಣನವರು ಅಂತಹ ಅಸಾಧ್ಯವಾದ ಕೆಲಸವನ್ನು ಸುಲಭಗೊಳಿಸಿದರು. ಕಾಯಕ ಜೀವಿಗಳನ್ನೆಲ್ಲಾ ಒಂದುಗೂಡಿಸಿ ಅವರ ಕಾಯಕಕ್ಕೆ ವಿಚಾರದ ದೀಪ ಹಚ್ಚಿದರು. ಕಾಯಕವು ಆಚರಣೆಯಾದರೆ ದಾಸೋಹವು ವಿಚಾರವಾಯಿತು. ಶ್ರಮದ ಬೆವರು ಎಲ್ಲೋ ಹರಿದು ಹೋಗಬಾರದೆಂದು ಬಸವಣ್ಣನವರು ದಾಸೋಹವೆಂಬ ವಿಚಾರ (ಅರಿವು) ದ ಕಟ್ಟೆ ಕಟ್ಟಿ, ಅನುಭಾವದ ಬೆಳೆಯನ್ನು ಬೆಳೆದರು. ಆಚಾರದ ಹಿಂದೆ ವಿಚಾರವಿರಬೇಕೆಂಬ ತತ್ವವನ್ನು ಬಸವಣ್ಣನವರು ಕಟ್ಟಿದರೆ ಮುಂದಿನ ಶಿವ-ಶರಣರೆಲ್ಲಾ ಬಸವಣ್ಣನವರು ತೋರಿದ ದಾರಿಯಲ್ಲಿ ನಡೆದರು. ಹೀಗಾಗಿ ಅಂದು ಕಲ್ಯಾಣವೆಂಬುದು ಪ್ರಣತೆಯಾಗಿದ್ದರೆ, ಭಕ್ತಿರಸವೆಂಬುದು ತೈಲವಾಗಿತ್ತು. ಆಚಾರವೆಂಬುದು ಬತ್ತಿಯಾಗಿದ್ದರೆ ಬಸವಣ್ಣನೆಂಬ ವಿಚಾರ (ಅರಿವು ಪ್ರಜ್ಞೆ) ಜ್ಯೋತಿಯಾಗಿತ್ತು. ಆ “ಅರಿವು” ಎಂಬ ಶಿವನ ಪ್ರಕಾಶದಲ್ಲಿ ಅಸಂಖ್ಯಾತ ಶಿವಶರಣರು ಮಿಂದೆದ್ದಿದ್ದರು. ಆಚಾರದೊಂದಿಗೆ ವಿಚಾರವನ್ನು ಹೊತ್ತು ನಿಂತ ಶಿವಶರಣರು ಮಾಯಾ-ಮೋಹದಿಂದ ಆಲಿಪ್ತರಾಗಿ, ಅಷ್ಟಮದ, ಅರಿಷಡ್ವರ್ಗಗಳಿಂದ ಮುಕ್ತರಾಗಿದ್ದರು. ಈ ಕಾರಣದಿಂದ ಕಲ್ಯಾಣವೆಂಬುದು ಆತ್ಮಕಲ್ಯಾಣವಾಗಿತ್ತು. ಲೌಕಿಕ ವಿಷಯಾಸಕ್ತಿಗಳಿಂದ ಮುಕ್ತವಾದ ಅವಿಮುಕ್ತ ಕ್ಷೇತ್ರವಾಗಿತ್ತು. ಹೀಗಾಗಿ ಕಲ್ಯಾಣ ಪರಮ ಪಾವನವಾಗಿತ್ತು. “ಇದಕ್ಕೆಲ್ಲಾ ಕಾರಣ ಕರ್ತನಾದ ಸಂಗನಬಸವಣ್ಣನ ಕಂಡು ನಾನು ಬದುಕಿದೆನು” ಎಂದು ಅಲ್ಲಮಪ್ರಭುಗಳು ಹೇಳಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.
ಬಸವಾದಿ ಶಿವಶರಣರು ಆಚರಿಸಿಕೊಂಡು ಬಂದ ತತ್ವ ಸಿದ್ಧಾಂತಗಳಲ್ಲಿ ಆಚಾರ ವಿಚಾರವೆಂಬುದು ಒಂದಾಗಿದೆ. ಆಚಾರಗಳು ನಿಜಾಚಾರಗಳಾಗಬೇಕು. ಆಚರಣೆಗಳೆಲ್ಲಾ ನಿಜಾಚಾರಣೆಗಳಾಗಬೇಕು. ಆಚಾರ-ಆಚರಣೆಗಳಿಗೆ ವಿಚಾರವೆಂಬ ತಾತ್ವಿಕ ಚೌಕಟ್ಟು ಇದ್ದರೆ ಅವುಗಳೆಲ್ಲಾ ಮೌಲ್ಯಾಧಾರಿತವಾಗುತ್ತವೆ. ಬಸವಾದಿ ಶಿವಶರಣರೆಲ್ಲಾ ಆಚಾರ–ವಿಚಾರ ಎರಡರ ಸಮನ್ವಯ ಸಾಧಿಸಿದವರು. ಉದಾಹರಣೆಗೆ ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ನಿತ್ಯ ಪೂಜಿಸುವುದು ಆಚಾರವಾದರೆ, ಅಂಗವನ್ನು ಲಿಂಗವನ್ನಾಗಿಸಿಕೊಳ್ಳುವುದು ವಿಚಾರ. ಇದೊಂದು ಅರಿವು ಅಂತಃಪ್ರಜ್ಞೆ ಹೀಗೆ ಲಿಂಗಾಂಗ ಸಾಮರಸ್ಯ ಸಾಧಿಸಿ, ಆಚಾರ–ವಿಚಾರಗಳನ್ನು ತಮ್ಮ ತಾತ್ವಿಕತೆಯ ತಳಹದಿಯಾಗಿರಿಸಿಕೊಂಡು, ನಡೆಯಲ್ಲಿ-ನುಡಿಯನ್ನು, ನುಡಿಯಲ್ಲಿ-ನಡೆಯನ್ನು ಏಕೀರ್ಭವಿಸಿಕೊಂಡು, ಕ್ರಾಂತಿಕುಂಡ ಹೊತ್ತು ಹೊಸ ಪಥ ಸಂಚಲನಕ್ಕೆ ನಾಂದಿ ಹಾಡಿದವರು ನಮ್ಮ ಬಸವಾದಿ ಶಿವಶರಣರು.
ಆಚಾರ-ವಿಚಾರ ಇವು ಜೋಡಿ ಪದಗಳು ಇವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆ ನಾಣ್ಯಕ್ಕೆ ಆಚಾರದ ಒಂದೇ ಮುಖವಿದ್ದರೂ ಬೆಲೆಯಿಲ್ಲ. ವಿಚಾರದ ಒಂದೇ ಮುಖವಿದ್ದರೂ ಬೆಲೆಯಿಲ್ಲ. ಒಟ್ಟಿನಲ್ಲಿ ಶಿವಶರಣರ ದೃಷ್ಠಿಯಲ್ಲಿ ಆಚಾರದೊಂದಿಗೆ ವಿಚಾರ, ವಿಚಾರದೊಂದಿಗೆ ಆಚಾರ ಇರಲೇಬೇಕು. ಅವೆರಡೂ ಜೊತೆಯಾಗಿ ಇರಲೇಬೇಕು. ಅಂದಾಗಲೇ ಈ ಬದುಕಿಗೆ ಬೆಲೆ ಎಂಬುದಾಗಿದೆ. ಇದು ಸತ್ಯವಾದ ಮಾತೂ ಹೌದು.
ಶರಣರ ಪರಿಭಾಷೆಯಲ್ಲಿ “ಆಚಾರ” ಎಂದರೆ ಕ್ರಿಯೆ, ಆಚರಣೆ, ಕೆಲಸ ಎಂಬುದಾಗಿದೆ. “ವಿಚಾರ” ಎಂದರೆ ಅರಿವು, ಜ್ಞಾನ, ಪ್ರಜ್ಞೆ, ಜಾಗೃತೆ ಎಂಬುದಾಗಿದೆ. ಬಸವಾದಿ ಶಿವಶರಣರು ತಮ್ಮ ಶರಣ ಧರ್ಮದಲ್ಲಿ ವಿಶಿಷ್ಟವಾದ ಪರಿಕಲ್ಪನೆಗಳನ್ನು ನೀಡಿದರು. ಉಣ್ಣುವ ಆಹಾರಕ್ಕೆ “ಪ್ರಸಾದ” ಎಂದರು, ಮಾಡುವ ಕೆಲಸಕ್ಕೆ “ಕಾಯಕ” ಎಂದರು, ದೇಹವನ್ನು ದೇಗುಲವಾಗಿಸಿದರು. ದಾಸೋಹದ ಮಾಟದಲ್ಲಿ ಸಮನ್ವಯತೆಯನ್ನು, ಕೂಡಿ ಉಣ್ಣುವ, ಕೂಡಿ ಬಾಳುವ ಸಂಸ್ಕೃತಿಯನ್ನು ಕಲಿಸಿದರು. ಇಂತಹ ವಿಶಾಲವಾದ ಪರಿಕಲ್ಪನೆಗಳು ಶರಣರ ಶ್ರೇಷ್ಠ ಕೊಡುಗೆಗಳಾದಂತೆ, ಆಚಾರ-ವಿಚಾರ ತತ್ವವೂ ಎಂಬ ತತ್ವವೂ ಒಂದಾಗಿದೆ.
ಆಚಾರವಂತರು ಎಂದು ಯಾರನ್ನು ಕರೆಯುತ್ತಾರೆ ಎಂದರೆ ಯಾರು ಸಮಾಜ-ಸಂಘ–ಪರಿವಾರದೊಂದಿಗೆ ಹೊಂದಾಣಿಕೆಯಿಂದ ಇರುತ್ತಾರೋ, ಯಾರು ವಿನಯಶಾಲಿಗಳಾಗಿ ಸನ್ನಡತೆ ಹೊಂದಿರುತ್ತಾರೋ, ಯಾರು ಪರಸ್ಪರ ಒಬ್ಬರಿಗೊಬ್ಬರು ಗೌರವಿಸಿಕೊಳ್ಳುತ್ತಾ, ಬದುಕಿನಲ್ಲಿ ಸಹನೆ, ತಾಳ್ಮೆ, ವಿನಯ, ಪರಸ್ಪರ ಸಹಕಾರ, ಸಹಾಯ ಗುಣಗಳಿಂದ ಬದುಕುತ್ತಿರುತ್ತಾರೋ ಒಟ್ಟಾರೆ ಒಳ್ಳೆಯದು ಎಂಬುದು ಏನಿದೆಯೋ ಅದೆಲ್ಲವನ್ನು ರೂಢಿಸಿಕೊಂಡಿರುತ್ತಾರೋ ಅವರೇ ಆಚಾರವಂತರು ಎನಿಸಿಕೊಳ್ಳುತ್ತಾರೆ. ಹೀಗಿದ್ದವರೆಲ್ಲಾ ವಿಚಾರವಂತರೇ ಆಗಿರುತ್ತಾರೆ. ಅಂದರೆ ಅರಿತು ಅರಿತು ಬಾಳುವವರು ಎಂದರ್ಥ. ಇದೇ ಆಚಾರ_ವಿಚಾರದ ಸಮನ್ವಯತೆ. ಇಂತಹ ಸಾಮಾಜಿಕ ಬದುಕಿನಲ್ಲಿ ಇವೆರಡೂ ಮಾನವರ ಬದುಕನ್ನು ಸುಂದರಗೊಳಿಸುತ್ತವೆ. ಜನಪದರು ಸದಾ ಇಂತಹ ಬದುಕಿನ ಆಕಾಂಕ್ಷಿಗಳಾಗಿದ್ದರು.
ಆಚಾರಕ ಅರಸಾಗು | ನೀತಿಗೆ ಪ್ರಭುವಾಗು ||
ಮಾತಿನಲಿ ಚೂಡಾಮಣಿ | ನೀನಾಗು ನನ ಕಂದ ||
ಜ್ಯೋತಿಯೇ | ಆಗು ಜಗಕ್ಕೆಲ್ಲಾ ||
ಇಂತಹ ಜನಪದ ತಾಯಿ (ಗರತಿ) ಯ ಜೋಗುಳ ಭವಿತವ್ಯಕ್ಕೆ ತನ್ನ ಕರುಳ ಕುಡಿ ಬೆಳಕಾಗಲಿ ಎಂಬ ಹಾರೈಕೆಯಿಂದ ಕೂಡಿರುತ್ತಿತ್ತು. ಜನಪದ ಗರತಿಯ ಹಾಡುಗಳಂತೆ ಶಾಸನಗಳು ಸಹ ಇಂತಹ ಆಚಾರ–ವಿಚಾರಗಳ ತತ್ವ ಮೌಲ್ಯಗಳನ್ನು ಪ್ರತಿಪಾದಿಸಿದ್ದನ್ನು ಕಾಣುತ್ತೇವೆ. ಅಂತಹ ಶಾಸನಗಳಲ್ಲಿ ಒಂದಾದ “ಲಕ್ಷ್ಮೀಧರ ಅಮಾತ್ಯ” ನ ಶಾಸನವು ಆಚಾರ–ವಿಚಾರದ ಸಮನ್ವಯತೆಗೆ ಸಾಕ್ಷಿಯಾಗಿದೆ.
ವಿಜಯನಗರದ ಅರಸನಾಗಿದ್ದ ಒಂದನೆಯ ದೇವರಾಯನ ಮಂತ್ರಿ (ಅಮಾತ್ಯ) ಯಾಗಿದ್ದ ಲಕ್ಷ್ಮೀಧರನು ಮಗುವಾಗಿದ್ದಾಗ ಅವನ ತಾಯಿಯಾದ ಸಿಂಗಲೆ ಆ ಮಗುವಿಗೆ ಹಾಲುಣಿಸುತ್ತಾ ಕಿವಿಯಲ್ಲಿ ಹೇಳಿದ ಮಾತುಗಳು ಶಾಸನದಲ್ಲಿ ಉಲ್ಲೇಖಿತವಾಗಿವೆ. ಕ್ರಿ. ಶ. 1410 ರ ಈ ಶಾಸನವು ಹಂಪಿಯಲ್ಲಿ ಕಂಡುಬರುತ್ತದೆ.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಂ ಮಾಡಿಸು
ರಜ್ಜೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್
ನಂಬಿದರ್ಗೆರೆವಟ್ಟಾಗಿರು ಶಿಷ್ಟರಂ ಪೊರೆ ಎನ್ನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯಳ್ ಲಕ್ಷ್ಮೀಧರಾಮಾತ್ಯನಾ
ಕೆರೆಯನ್ನು ಕಟ್ಟಿಸುವುದ, ಬಾವಿಯನ್ನು ತೋಡಿಸುವುದು, ದೇವಾಲಯ ನಿರ್ಮಿಸುವುದು, ಕಷ್ಟದಲ್ಲಿ ಸಿಲುಕಿದ ಅನಾಥರನ್ನು ಬಿಡಿಸುವುದು, ಸ್ನೇಹಿತರಿಗೆ ಆಶ್ರಯ ನೀಡುವುದು, ನಂಬಿದವರಿಗೆ ಎರವಾಗುವುದು, ಶಿಷ್ಟರನ್ನು ಪೊರೆಯುವುದು ಇವೆಲ್ಲವುಗಳೂ ಉತ್ತಮ ಆಚಾರಗಳು–ವಿಚಾರಗಳು. ಲೌಕಿಕವಾಗಿ, ಸಾಮಾಜಿಕವಾಗಿ ಮಾಡಬೇಕಾದ ಕಾರ್ಯಗಳೆ ಇವು.
ಬಸವಾದಿ ಶಿವಶರಣರ ದೃಷ್ಠಿಯಲ್ಲಿ ಆಚಾರ ವಿಚಾರಗಳು ಲೌಕಿಕದಿಂದ ಅಲೌಕಿದೆಡೆಗೂ ವಿಸ್ತರಿಸಿಕೊಂಡಿವೆ. ತುಂಬಾ ವಿಶಿಷ್ಠವಾಗಿ ರೂಪಿತವಾಗಿರುವ ಶರಣರ ಆಚಾರ ವಿಚಾರ ತತ್ವಗಳು ಮನವರ ಅಂತರಂಗ ಮತ್ತು ಬಹಿರಂಗ ಎರಡನ್ನೂ ವಿಕಾಸಗೊಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ. ಶರಣರ ದೃಷ್ಠಿಯಲ್ಲಿ ಕೆರೆ, ಕಾಲುವೆ, ಬಾವಿ, ದೇವಾಲಯ ಕಟ್ಟಿಸುವುದು ಜನೋಪಯೋಗಿಯಾಗಿ ಎಷ್ಟು ಮಹತ್ವವಾದುದೋ ಅಷ್ಟೇ ಮಹತ್ವವಾದುದು ಮಾನವರ ಮನಸ್ಸು ಮನಸ್ಸುಗಳನ್ನು ಕಟ್ಟುವುದಾಗಿತ್ತು. ಏಕೆಂದರೆ ಈ ಬದುಕು ಜಡ ಮತ್ತು ಚೇತನಗಳ ಸಮ್ಮಿಲನ. ದೇಹ ಜಡವಾದರೆ, ಅದರೊಳಗಿರುವ ಆತ್ಮ ಚೇತನವಾದುದು. ದೇಹದ ಜಡತೆ ನೀಗಿಸಲು ಆಚಾರ ಬೇಕು. ಆತ್ಮದ ಚೈತನ್ಯಕ್ಕೆ ವಿಚಾರಬೇಕು. ಇವೆರಡರ ಸಾಮರಸ್ಯವೇ ಅಂತರಂಗ-ಬಹಿರಂಗದ ವಿಕಾಸಕ್ಕೆ ನಾಂದಿಯಾಗುವುದು. ದೇಹಕ್ಕೆ ಆಚಾರದ ಮೂಲಕ ಸಂಸ್ಕಾರ ನೀಡಬೇಕೆಂದ ಶಿವಶರಣರು, ವಿಚಾರ (ಅರಿವು) ದ ಮೂಲಕ ಮನಸ್ಸಿಗೆ ಸಂಸ್ಕಾರ ನೀಡಲು ಶ್ರಮಿಸಿದರು. ಮನಸ್ಸುಗಳನ್ನು ಕಟ್ಟಲು ಬಯಸಿದ ಶರಣರು ಆ ಕಾಲಘಟ್ಟದಲ್ಲಿ ಮಠ-ಮಂದಿರ ಕಟ್ಟಿಸಲು ಬಯಸದೇ ಮನಸ್ಸು–ಮನಸ್ಸು ಕಟ್ಟಲು ಬಯಸಿದರು. ವ್ಯಕ್ತಿ ವ್ಯಕ್ತಿಗಳ ಮನಸ್ಸು ಕಟ್ಟಿದರೆ ಮುಂದೆ ಏನಾದರೂ ಕಟ್ಟಬಹುದು ಎಂಬುದೇ ಶರಣರ ವಿಚಾರವಾಗಿತ್ತು.
ಈ ದೃಷ್ಟಿಯಿಂದಲೆ ಬಸವಾದಿ ಶಿವಶರಣರು ಸಮಷ್ಟಿ ಒಂದುಗೂಡಿಸುವ ಪ್ರಮುಖವಾದ ಕಾಯಕ-ಪ್ರಸಾದ-ದಾಸೋಹ-ಇಷ್ಟಲಿಂಗ ಪೂಜೆ, ಅನುಭಾವ ಮುಂತಾದ ಸದಾಚಾರಗಳನ್ನು ವಿಚಾರ ಸಹಿತವಾಗಿ ಮುನ್ನಲೆಗೆ ತಂದರು. ಈ ಕಾರಣದಿಂದಲೆ ಅಪ್ಪ ಬಸವಣ್ಣರು ದೇಹ ಜಡವಾಗಬಾರದು ಎಂಬುದಕ್ಕೆ ಎಲ್ಲರೂ ಪ್ರತಿಯೊಬ್ಬ ವ್ಯಕ್ತಿಯೂ ದುಡಿಯಬೇಕು ಎಂಬ “ಕಾಯಕ ಪ್ರಜ್ಞೆ” ಯನ್ನು ಜಾಗೃತಗೊಳಿಸಿದರು. ತದನಂತರದಲ್ಲಿ “ಕೂಡಿ ಉಣ್ಣುವ” ತತ್ವವನ್ನು ಜಾರಿಗೆಗೊಳಿಸಿ ಸಮಷ್ಟಿ ಪ್ರಜ್ಞೆಯನ್ನು ಮೂಡಿಸಲು, ನಾವೆಲ್ಲರೂ ಒಂದೇ ಎಂಬ ಭಾವ ಬಲಿಯುವಂತೆ ಮಾಡಲು “ದಾಸೋಹದ ಪ್ರಜ್ಞೆ” ಯನ್ನು ಹುಟ್ಟು ಹಾಕಿದರು. ಕಾಯಕ ಎಂಬುದು ಆಚಾರವಾದರೇ, ಪ್ರಸಾದದ ಪರಿಕಲ್ಪನೆ, ದಾಸೋಹದ ಪ್ರಜ್ಞೆ ವಿಚಾರವಾಯಿತು. ಹೀಗಾಗಿ ಶರಣ ಸಮಾಜದಲ್ಲಿ ಕಾಯಕ, ದಾಸೋಹ, ಪ್ರಸಾದ ಅತ್ಯಂತ ಪವಿತ್ರವಾಗಿದ್ದು. ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆಯುವ ಕೊಂಡಿಯಾಗಿದೆ. 12 ನೇ ಶತಮಾನದಲ್ಲಿ ಕಾಯಕ ಜೀವಿಗಳ ಬಹು ದೊಡ್ಡ ಆಂದೋಲನವೇ ನಡೆಯಿತು. ಕಾಯಕದಿಂದಲೇ ಜೀವನ್ಮುಕ್ತಿ, ಕಾಯಕವೇ ಕೈಲಾಸ ಎಂಬ ವಿಚಾರವು ಆಚರಣೆಗೆ ಬಂದಿತು. ಮುಂದೆ ಇದೇ ನಿಜಾಚಾರವೆನಿಸಿತು. ಅಂತರಂಗದ ವಿಚಾರ ಬಹಿರಂಗದ ಆಚಾರವೆನಿಸಿತು.
ಕಾಯಕ ತತ್ವ (ಆಚಾರ-ವಿಚಾರ):
ಭಾರತೀಯ ತತ್ವಮಾರ್ಗ ನಡೆದು ಬಂದ ದಾರಿಯನ್ನು ವೀಕ್ಷಿಸಿದಾಗ ಭಕ್ತಿ ಮಾರ್ಗದಿಂದ ದೇವರನ್ನು ಒಲಿಸುವ, ಕರ್ಮ ಮಾರ್ಗದಿಂದ ಮುಕ್ತಿಯನ್ನು ಅರಸುವ, ಜ್ಞಾನ ಮಾರ್ಗದಿಂದ ದೇವರಲ್ಲಿ ಒಂದಾಗುವ (ಐಕ್ಯ), ಯೋಗ ಮಾರ್ಗದಿಂದ ಕೈಲಾಸ ಸಾಧಿಸುವ ಹೀಗೆ ಹಲವಾರು ಮಾರ್ಗಗಳನ್ನು ಕಾಣಬಹುದು. ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ ಮಾರ್ಗವನ್ನು 12 ನೇ ಶತಮಾನದ ಶಿವಶರಣರು ಹುಟ್ಟುಹಾಕಿದರು. ಆದೇ “ಕಾಯಕ ಯೋಗ” ಎಂಬ ಮಾರ್ಗ. ಈ ಕಾಯಕ ಮಾರ್ಗವು ಜ್ಞಾನೋತ್ಪಾದನೆಯ ಮೂಲ ಬೇರಾಗಿತ್ತು. ಕಾಯಕದ ಅನುಭವದಿಂದ ಜ್ಞಾನ ಸ್ಫೋಟವಾಯಿತು. ಕಾಯಕದಿಂದ ಜ್ಞಾನ, ಕೌಶಲ್ಯ, ಪರಿಣತಿಗಳು ಕಾಯಕ ಜೀವಿಗಳಿಗೆ ದೊರೆತವು. ಈ ಜ್ಞಾನವು ವಿಶ್ವವಿದ್ಯಾಲಯಗಳು ಕೊಡುವ ಜ್ಞಾನಕ್ಕಿಂತ ಭಿನ್ನವಾಗಿತ್ತು. ಇದು ಪ್ರಾಯೋಗಿಕ ಜ್ಞಾನ (Practical Knowledge) ವಾಗಿತ್ತು. ಡಾರ್ವಿನ್ ಸಿದ್ಧಾಂತವು ಇದನ್ನೇ ಹೇಳುತ್ತದೆ. “ಅರಿವಿನ ವಿಕಾಸವಾದದ್ದು ಮನುಷ್ಯರು ಕೆಲಸ ಮಾಡುತ್ತಾ ಹೋದಂತೆ” ಎಂಬ ಡಾರ್ವಿನ್‌ನ ಈ ಸಿದ್ಧಾಂತ ಇತ್ತೀಚನದಾದರೆ ಇದನ್ನು 12 ನೇ ಶತಮಾನದಲ್ಲೇ ಶಿವಶರಣರು ಸಾಧಿಸಿ ತೋರಿದ್ದರು. ಶರಣರಿಗೆ ದಯೆಯು ಹೇಗೆ ಧರ್ಮದ ಮೂಲವಾಗಿತ್ತೋ ಕಾಯಕ ಧರ್ಮವು ಆದರ ಉಸಿರಾಗಿತ್ತು. ಇಂತಹ ಉನ್ನತ ಹಂತದ ಆಚಾರ-ವಿಚಾರಗಳು ಬಸವಾದಿ ಶಿವಶರಣರಲ್ಲಿದ್ದವು. ಅದಕ್ಕೆ ಅವರು ಬರೆದ ವಚನಗಳೇ ಮೈಲುಗಲ್ಲುಗಳಾಗಿ ನಿಲ್ಲುತ್ತವೆ.
ತನ್ನ ಸ್ವಕಾಯಕದಿಂದ ಮಾಡುವ, ಭಕ್ತನ ವ್ರತವೆ ವ್ರತ;
ಆತನಾಚಾರವೆ ಸತ್ಯ;
ಆತನಾಶ್ರಯದ ಶೇಷವೆ ಸಂಜೀವನಪ್ರಸಾದ.
ಆತನ ರೂಪೇ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದ ನಷ್ಟರೂಪು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-181/ವಚನ ಸಂಖ್ಯೆ-488)
ವ್ರತದಂತೆ ಆಚರಿಸುವ ಭಕ್ತನ ಸ್ವಕಾಯಕಗಳ ಕುರಿತು ಶರಣೆ ಅಕ್ಕಮ್ಮನವರು ಈ ವಚನದ ಮೂಲಕ ಮಾತನಾಡುತ್ತಾರೆ. 770 ಅಮರಗಣಂಗಳಿಂದ ಕೂಡಿದ ಕಲ್ಯಾಣದಲ್ಲಿ ಪ್ರತಿಯೊಬ್ಬ ಶರಣರು ಕಾಯಕ ನಿರತರಾಗಿದ್ದರು. ಅವರು ಮಾಡಿಕೊಂಡಿದ್ದ ಸ್ವಕಾರ್ಯಗಳೆಂದರೆ ಕುದುರೆಗೆ ಹುಲ್ಲು ತರುವ, ಅಕ್ಕಿ ಆಯುವ, ದೋಣಿ ನಡೆಸುವ, ಕ್ಷೌರ ಮಾಡುವ, ಚಪ್ಪಲಿ ಹೊಲೆಯುವ, ಬಟ್ಟೆ ನೇಯುವ, ಶರಣರ ಬಟ್ಟೆ ಮಡಿ ಮಾಡುವ, ಬೀದಿ ಕಸಗೂಡಿಸುವ, ಮಡಿಕೆ ಮಾಡುವ, ಬುಟ್ಟಿ ಹೆಣೆಯುವ ಇಂತಹ ನೂರಾರು ಸ್ವಕಾಯಕಗಳನ್ನು ಮಾಡಿಕೊಂಡಿದ್ದ ಶರಣರು ಬಿಸಿಲು, ಚಳಿ, ಮಳೆಯೆನ್ನದೆ ತಮ್ಮ ಕಾರ್ಯವನ್ನು ಒಂದು ವ್ರತದಂತೆ ಪರಿಪಾಲಸಿಕೊಂಡು ಬಂದಿದ್ದರು. ಅದು ನಿಜವಾದ ಸತ್ಯದ ಆಚಾರವಾಗಿತ್ತು. ತಮ್ಮ ಕಾಯಕದೊಂದಿಗೆ ಇಷ್ಟಲಿಂಗ ಪೂಜೆಯ ಉಪಾಸನೆ ಕೈಗೊಂಡು ಶರಣರು ಆಚಾರಕ್ಕೆ ವಿಚಾರವನ್ನು ಮೇಳೈಸಿದ್ದರು. ಅಂತಹವರ ಆಶ್ರಯದಲ್ಲಿರುವದು ಪರಮಸುಖ. ಅವರು ತಿಂದು ಬಿಟ್ಟ (ಶೇಷ) ಎಂಜಲು ಕೊಟ್ಟರೂ ಅದು ಸಂಜೀವಿನಿ ಪ್ರಸಾದವಾಗುತ್ತದೆಯೇ ವಿನಃ ಎಂಜಲು ಅಲ್ಲ. ಕಾಯಕ ನಿರತ ಶರಣರು ರಾಮೇಶ್ವರ ಲಿಂಗದ ಸ್ವರೂಪಿಗಳು ಎಂದು “ಆಚಾರ ಪ್ರಾಣವಾದ ರಾಮೇಶ್ವರ ಲಿಂಗ” ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ ಶರಣೆ ಅಕ್ಕಮ್ಮನವರು ನಿಜಶರಣರ ನಿಜಾಚರಣೆ, ಸತ್ಯದ ಆಚಾರವನ್ನು ಇಲ್ಲಿ ಪ್ರತಿಪಾದಿಸುತ್ತಾರೆ. ಯಾವ ಶರಣರು ಸ್ವಕಾರ್ಯವನ್ನು ನಿಷ್ಠೆಯಿಂದ ನಿತ್ಯವೂ ಬಿಡದೇ ಮಾಡುತ್ತಾರೋ ಅಂತಹ ಭಕ್ತನ ಸತ್ಯಕಾಯಕ ಎಲ್ಲಾ ವ್ರತಗಳಿಗಿಂತಲೂ ಶ್ರೇಷ್ಠ, ಯಾವ ಸಂದರ್ಭದಲ್ಲೂ ತಮ್ಮ ಕಾಯಕ ನಿಲ್ಲಬಾರದು ಎಂಬ ಅವರ ವಿಚಾರ (ಅರಿವು, ಪ್ರಜ್ಞೆ, ಜ್ಞಾನ) ವೂ ಅಷ್ಟೇ ಸತ್ಯವಾದುದು. ಸ್ವಕಾಯಕವು ಶರಣರಲ್ಲಿ ಪರಿಪೂರ್ಣತೆ, ಕೌಶಲ್ಯ ವೃದ್ಧಿಸುವಂತೆಯೂ, ಅವರು ಸ್ವಾಭಿಮಾನಿಗಳಾಗುವಂತೆಯೂ ಮಾಡಿತ್ತು. ಚಪ್ಪಲಿ ಹೊಲೆಯುವ ಕಾಯಕವನ್ನು ನಾವು ಕೀಳು ಅಂತಾ ಹೇಗೆ ಹೇಳಲಾದೀತು? ನಮಗೆ ಆ ಕಾಯಕದ ಅರಿವಿದೆಯೇ? ಯಾವ ಚರ್ಮ ತೆಗೆದುಕೊಳ್ಳಬೇಕು, ಹೇಗೆ ಹದ ಮಾಡಿಕೊಳ್ಳಬೇಕು, ಯಾವ ಆಕಾರ, ಗಾತ್ರಕ್ಕೆ ಕತ್ತರಿಸಬೇಕು, ಹೇಗೆ ಹೊಲಿಯಬೇಕು ಎಂಬುದು ನಮಗೆ ಗೊತ್ತಿರುವುದಿಲ್ಲ. ಏಕೆಂದರೆ ನಾವು ಸಹ ನಮ್ಮ ನಮ್ಮ ಕಾಯಕದಲ್ಲಿ ಪರಿಣತರು ಹಾಗಾಗಿ ಚಪ್ಪಲಿ ಹೊಲೆಯುವುದು ಒಂದು ನೈಪುಣ್ಯ. ಅದು ಸಹ ಕೌಶಲ್ಯ. ಅದನ್ನು ಹೊಲೆಯುತ್ತಾ ಹೊಲೆಯುತ್ತಾ ಆ ಶರಣನು ಅನುಭವ ಹೊಂದಿ ಪರಿಣಿತನಾಗುತ್ತಾನೆ. ಹೀಗೆ ಯಾವ ಕಾಯಕವಾದರೂ ಆಚರಣೆಯಿಂದ ವಿಕಾಸವಾಗುತ್ತದೆ. ಆಚಾರಕ್ಕೆ ವಿಚಾರವೂ ಸೇರಿದಾಗ ಇದೆಲ್ಲಾ ಸಾಧ್ಯ.
18 ನೇ ಶತಮಾನದಲ್ಲಿ French naturalist Jean-Baptiste Lamarck (1744-1829) ಎಂಬ ವಿಜ್ಞಾನಿ ಒಂದು Theory (ಸಿದ್ಧಾಂತ) ಹೇಳುತ್ತಾನೆ. ಆ ಸಿದ್ಧಾಂತದ ಹೆಸರು “Theory of Use and Disuse” ಇದರಲ್ಲಿ ಬ್ಯಾಪಿಸ್ಟ್ ಲಾಮಾರ್ಕ್ ಹೀಗೆ ಹೇಳುತ್ತಾನೆ;
All organisms physically adjust to their environment in ways that these new physical characteristics could be inherited by their offspring. Therefore, it is also known as the theory of inheritance of acquired characteristics.
“ದೇಹದ ಯಾವ ಅಂಗಗಳು ಹೆಚ್ಚು ಶ್ರಮ ಪಡುತ್ತವೆಯೋ ಆ ಅಂಗಗಳು ವಿಕಾಸಗೊಳ್ಳುತ್ತವೆ”
ಎಂದು ಪ್ರತಿಪಾದಿಸುತ್ತಾನೆ. ಉದಾಹರಣೆಗೆ ಜಿರಾಫೆ ಕತ್ತು ಉದ್ದವಾದದ್ದು, ನಾಲ್ಕು ಕಾಲಿನ ಮಾನವನ ಎರಡು ಕಾಲುಗಳು ಎರಡು ಕೈಗಳಾಗಿ ಪರಿವರ್ತನೆಗೊಂಡಿದ್ದು ಮುಂತಾದವುಗಳು ಶ್ರಮದಿಂದ ವಿಕಾಸಗೊಂಡಿವೆ.
ದೇಹ ಮತ್ತು ಬುದ್ಧಿ ಇವೆರಡರ ವಿಕಾಸ ಶ್ರಮದಿಂದ ಸಾಧ್ಯ ಎಂಬುದು ಆಧುನಿಕ ಜೀವ ವಿಜ್ಞಾನಿಗಳ ವಾದವೂ ಆಗಿದೆ. ಅದನ್ನು ಬಸವಾದಿ ಶಿವಶರಣರು ತಮ್ಮ ಆಚಾರ_ವಿಚಾರಗಳಿಂದ ಅಂದೇ ಉದ್ಧೀಪನಗೊಳಿಸಿಕೊಂಡಿದ್ದರು. ಸದಾ ಕಾಯಕ ನಿರತರಾದದ್ದು ಅವರ ಆಚಾರವಾಗಿದ್ದರೇ ಕಾಯಕಕ್ಕೆ ಇಷ್ಟಲಿಂಗ ಪೂಜೆಯ ಮೂಲಕ ಪಾವಿತ್ರತೆಯನ್ನು ತಂದು ಕೊಟ್ಟಿದು ಶರಣ ವಿಚಾರವಾಗಿತ್ತು. ಬಹಿರಂಗದ ಆಚಾರ ಅಂತರಂಗದ ಅರಿವಾದುದು, ಇಷ್ಟಲಿಂಗ ಪೂಜೆಯ ಮೂಲಕವೇ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇವಲ ಭಕ್ತಿ, ಜ್ಞಾನ, ಕರ್ಮ, ಯೋಗ ಮಾರ್ಗದಿಂದ ದೊರೆಯದ ಆತ್ಮ ಸುಖ, ಆತ್ಮ ಜಾಗೃತಿ ಆಚಾರ-ವಿಚಾರಗಳಿಂದ ಅಂದರೆ ಅರಿವಿನಿಂದ ಕೂಡಿದ ಕಾಯಕ ಆಚರಣೆಯ ಮೂಲಕ ಸಾಧ್ಯ ಎಂದು ಶರಣೆ ಅಕ್ಕಮನವರೂ ಪ್ರತಿಪಾದಿಸುತ್ತಾರೆ.
ಕಾಯಕವೆಂಬ ಆಚಾರಕ್ಕೆ ವಿಚಾರವೆಂಬುದು ಅರಿವಾಗಿ ನಿಂತಾಗ ಅದು ಸಮಾಜಕ್ಕೆ ಬೆಳಕಾಗುತ್ತದೆ. ಆಚಾರ_ವಿಚಾರಗಳು ಕಾಯಕದೊಳಗೆ ಇರಬೇಕು. ಲಿಂಗವಂತನು ಕಾಯಕದ ಜೊತೆಗೆ ಆತ್ಮಲಿಂಗವನ್ನು-ಇಷ್ಟಲಿಂಗವನ್ನು ಪೂಜಿಸಿಬೇಕು. ಅಂದಾಗ ಅದು ಸರಿಯಾದ ಆಚಾರ-ವಿಚಾರವಾಗುತ್ತದೆ. ಇಲ್ಲದಿದ್ದರೆ ಆ ಕಾಯಕ ಕೇವಲ ಉದರ ಪೋಷಣೆಯಾಗುತ್ತದೆ. ಅದನ್ನು ಶರಣ ಉರಿಲಿಂಗಪೆದ್ದಿಗಳು ತಮ್ಮ ವಚನದ ಮೂಲಕ ಅಭಿವ್ಯಕ್ತಿಸುತ್ತಾರೆ;
ವೇದಶಾಸ್ತ್ರಪುರಾಣಾಗಮಗ್ರಂಥಂಗಳ
ನೋಡಿದವರೆಲ್ಲರೇನು ಹಿರಿಯರೆಂಬೆನೆ?
ಅಲ್ಲಲ್ಲ, ನಿಲ್ಲು, ಮಾಣು.
ಅವರೇ ಹಿರಿಯರಾದಡೆ, [ನಟ್ಟುವೆ], ಗಳೆಯಾಟ,
ಮಿಣಿಯಾಟ, ಅದೃಶ್ಯಕರಣ, ಅಗ್ನಿಸ್ತಂಭ, ಆಕರ್ಷಣ,
ಚೌಷಷ್ಠಿಕಲಾವಿದ್ಯೆಯ ಸಾಧಿಸಿದ
ಡೊಂಬನೇನು ಕಿರಿಯನೇ?
ಇದು ಹಿರಿದು ಕಿರಿದಿನ ಪರಿಯಲ್ಲ.
ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ.
ಇದು ಉದರಪೋಷಣವಿದ್ಯೆ ಎನಿಸುವುದು.
ಅವರನೆಂತು ಸರಿ ಎಂಬೆನಯ್ಯ, ಲಿಂಗವಂತಂಗೆ?
ಇದು ಕಾರಣ, ಗುಣ, ಜ್ಞಾನ, ಧರ್ಮ, ಆಚಾರ,
ಶೀಲ ಸಾದ್ಥಿಸಿದಾತನೇ ಹಿರಿಯ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-655/ವಚನ ಸಂಖ್ಯೆ-1535)
ವೇದಶಾಸ್ತ್ರ, ಪುರಾಣಾಗಮಗಳನ್ನು ಓದಿಕೊಂಡವರು, ಪಂಡಿತರಷ್ಟೇ ಹಿರಿಯರೇನು? ಅಧ್ಯಯನವೆಂಬುದು ಪಂಡಿತರ ಸಾಧನೆ, ಕಸರತ್ತು ಆದರೆ, ನಟ್ಟುವ (ನಟುವ ಜನಾಂಗದವರ ಕಸರತ್ತು, ಕಲೆ), ಗಳೆಯಾಟ (ಬಿದಿರ ಗಳದ ಮೇಲೆ ನಡೆದಾಡುವ ಕಸರತ್ತು) ಮಿಣಿಯಾಟ (ಹಗ್ಗದ ಮೇಲೆ ನಡೆಯುವ ಕಸರತ್ತು,) ಜಾದೂಗಾರನ ಆ (ಅದೃಶ್ಯಕರಣ), ಅಗ್ನಿಸ್ತಂಭ (ಬೆಂಕಿಯೊಂದಿಗಿನ ಕಸರತ್ತು), ಆಕರ್ಷಣ (ಮೋಡಿಯಾಟ) ಮುಂತಾದ ಇಂತಹ ಅರವತ್ನಾಲ್ಕು ವಿದ್ಯೆ ಕಲಿತ ಡೊಂಬನನ್ನು ಕಿರಿಯನೆನಬಹುದೇ? ಇವನ ಕಲೆ, ವಿದ್ಯೆ, ಕಸರತ್ತಿನ ಹಿಂದೆ ಶ್ರಮವಿಲ್ಲವೇ? ಪಂಡಿತನಾಗಲಿ, ಡೊಂಬನಾಗಲಿ ತಮ್ಮ ಆಚಾರ (ಆಚರಣೆ) ಗಳ ಹಿಂದೆ ವಿಚಾರ (ಅರಿವು) ಇಟ್ಟುಕೊಳ್ಳದಿದ್ದರೆ ಇವೆಲ್ಲವೂ ಕೇವಲ ಉದರ ಪೋಷಣಾ ವಿದ್ಯೆಗಳಾಗುತ್ತವೆ. ಇವರನ್ನು ಲಿಂಗವಂತನಿಗೆ ಹೋಲಿಸಲಾಗದು. ಲಿಂಗವಂತನು ಲಿಂಗಧಾರಣೆ, ಲಿಂಗಪೂಜೆ, ಲಿಂಗ ಉಪಾಸನೆ, ಲಿಂಗಾಂಗ ಸಾಮರಸ್ಯದ ಮೂಲಕ ಗುಣ, ಜ್ಞಾನ, ಧರ್ಮ, ಆಚಾರ, ಶೀಲವನ್ನು ಸಾಧಿಸಿದವನಾಗಿರುತ್ತಾನೆ. ಇದು ಲಿಂಗವಂತನ ಧರ್ಮವಾಗಿರುತ್ತದೆ. ಅವರ ಆಚಾರಗಳು ವಿಚಾರಗಳೊಂದಿಗೆ ಬೆರೆತುಕೊಂಡಿರುವುದರಿಂದ ಅವರು ಹಿರಿಯರು ಅವರು ಲಿಂಗವಂತರು ಅವರು ನಿಜಶರಣರು ಎಂಬುದೇ ಶಿವಶರಣ ಉರಿಲಿಂಗಪೆದ್ದಿಗಳ ನಿಲುವು. ಉದರ ಪೋಷಣೆಗಾಗಿ ಮಾಡುವ ವಿವಿಧ ವೃತ್ತಿಗಳು ದೈನಂದಿನ ಆಚಾರಗಳಾದರೇ ಅವುಗಳೊಂದಿಗೆ ವಿಚಾರ (ಅರಿವು) ಬೆರೆತಾಗ ಅವೆಲ್ಲವೂ ಕಾಯಕವಾಗುತ್ತವೆ ಎಂಬ ದೊಡ್ಡ ಸಿದ್ಧಾಂತವನ್ನು ಬಸವಾದಿ ಶಿವಶರಣರು ತಮ್ಮ ಆಚಾರ_ವಿಚಾರಗಳ ಮೂಲಕ ಸುಮಾರು 900 ವರ್ಷಗಳ ಹಿಂದೆಯೇ ನಡೆದು ತೋರಿದ್ದರು.
ಕಾಯಕದ ಮಹತ್ವವನ್ನು ಶಿವಶರಣ_ಶರಣೆಯರು ಪ್ರತಿಪಾದಿಸುತ್ತ ಅದನ್ನು ನಡೆದು ತೋರಿದರು. ಕಾಯಕ ನಿರತರಾದವರಿಗೆ ದೇವರ ಹಂಗಿಲ್ಲ ಎಂಬುದು ಅವರ ನಿಲುವಾಗಿತ್ತು. ಅದಕ್ಕಾಗಿ ಆಯ್ದಕ್ಕಿ ಮಾರಯ್ಯನಂತಹ ಶರಣರು “ಕಾಯಕದಲ್ಲಿ ನಿರತನಾದಡೆ ದೇವರು ಮುಂದಿದ್ದರೂ ಹಂಗು ಹರಿಯಬೇಕು” ಎನ್ನುವ ಮೂಲಕ ಯಾರು ಕಾಯಕವನ್ನು ಆಚಾರವೆಂದು ನಂಬಿ ನಡೆಯುತ್ತಿರುತ್ತಾರೋ ಅಂತಹ ಶರಣರಿಗೆ ತಮ್ಮ ಕಾಯಕವೇ ದೇವರು.
ನಿಜವಾದ ಆಚಾರವೆಂದರೆ ಸದಾ ಕಾಲ ಕಾಯಕದಲ್ಲಿ ನಿರತನಾಗುವುದು. ಇದನ್ನು ಕಾಯಕ ಜೀವಿ, ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರರು ಸಾಧಿಸಿ ತೋರಿಸಿದರು. ಸತ್ಯವಾದ ಕಾಯಕದಂತಹ ಆಚಾರವೇ ಶ್ರೇಷ್ಠ ಎಂಬ ನಿಲುವು ಅವರದು.
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ;
ಗುರುವಿನ ಗದ್ದುಗೆ ಬೇಕಿಲ್ಲ;
ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ;
ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು
ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-143/ವಚನ ಸಂಖ್ಯೆ-469)
12 ನೇ ಶತಮಾನದಲ್ಲಿ ಸ್ಥಾವರಲಿಂಗ ಪೂಜೆಯ ಭ್ರಮೆಯಿಂದ ಅಂದಿನ ಸಮಾಜದ ಬಳಲುತ್ತಿತ್ತು. ಆ ಮೌಢ್ಯದಿಂದ, ಮೂರ್ತಿ ಪೂಜೆಯಂತಹ, ಪುರೋಹಿತ ಶಾಹಿಯಂತಹ ಕಪಿ ಮುಷ್ಠಿಯಿಂದ ಜನಸಾಮಾನ್ಯರನ್ನು ಬಸವಾದಿ ಶಿವಶರಣರು ಪಾರು ಮಾಡಬೇಕಿತ್ತು. ಅದಕ್ಕಾಗಿ ಶಿವಶರಣರು “ದೇವರು” ಎಂಬ ಭ್ರಮೆಯಿಂದ ಇಡೀ ಸಮಾಜವನ್ನು ಮುಕ್ತಗೊಳಿಸಿ, ದೇವರನ್ನು ಪೂಜಿಸುತ್ತಾ ಗುಡಿ, ಗುಂಡಾರ ಸುತ್ತುವುದು ಆಚಾರವಲ್ಲ, ಕಾಯಕದಿಂದಲೇ ಮುಕ್ತಿ ಹೊಂದುವುದು ನಿಜವಾದ ವಿಚಾರ ಎಂಬ ಅರಿವನ್ನು, ಪ್ರಜ್ಞೆಯನ್ನು ಜನಮಾನಸದಲ್ಲಿ ನೆಲೆಗೊಳಿಸಿದರು.
ತನುವಿಂಗೆ ಕ್ರೀ, ಆತ್ಮಂಗೆ ವ್ರತ.
ಆ ವ್ರತಕ್ಕೆ ನಿಶ್ಚಯ ಕರಿಗೊಂಡು
ಬಾಹ್ಯದ ಕ್ರೀ, ಅರಿವಿನ ಆಚರಣೆ,
ಭಾಷೆ ಓಸರಿಸದೆ ನಿಂದಾತನೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-181/ವಚನ ಸಂಖ್ಯೆ-490)
ಎನ್ನುವ ಶಿವಶರಣೆ ಅಕ್ಕಮ್ಮನವರು ಬಾಹ್ಯದಲ್ಲಿ ಮಾಡುವ ಕಾಯಕ (ಆಚಾರ) ಅಂತರಂಗದ ಅರಿವು (ವಿಚಾರ) ಎರಡನ್ನೂ ತನು-ಆತ್ಮಕ್ಕೆ ಸಮೀಕರಿಸುತ್ತಾ, ಆಚಾರ-ವಿಚಾರ ಇವೆರಡನ್ನೂ ಮಾತು ತಪ್ಪದಂತೆ ನಡೆಸಿಕೊಂಡು ಬರುವವನೇ ನಿಜವಾದ ಶರಣ ಎಂದು ಸ್ಪಷ್ಟವಾಗಿ ತಮ್ಮ ವಚನದ ಮೂಲಕ ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಬಸವಾದಿ ಶಿವಶರಣ-ಶರಣೆಯರ ದೃಷ್ಠಿಯಲ್ಲಿ ಆಚಾರ-ವಿಚಾರವೆಂದರೆ ಮಾನವರು ಮಾಡುವ ಆಚರಣೆಯ ಹಿಂದೆ ವಿಚಾರವಿರಬೇಕು ಎಂಬುದಾಗಿದ್ದು, ಕಾಯಕ ಸಿದ್ಧಾಂತ ಅದನ್ನು ನಿರೂಪಿಸುವ ಮಹತ್ವದ ತತ್ವ ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿಪಡಿಸಿದ್ದಾರೆ.
ದಾಸೋಹ ತತ್ವ (ಆಚಾರ-ವಿಚಾರ):
“ದಾಸೋಹ” ಪದ ದಾಸೋಹಂ ಮೂಲಕ ಬಂದದ್ದು. ದಾಸಃ + ಅಹಂ ಎಂಬ ಶಬ್ದಗಳು ಕೂಡಿ ದಾಸೋಹಂ ಪದವಾಗಿದೆ. “ನಾನು ದಾಸ” ನೆಂಬ ಅರ್ಥವನ್ನು ಹೊಂದಿದ ಈ ದಾಸೋಹಂ ಎಂಬ ಅರಿವು ದಾಸೋಹವೆಂಬ ಆಚಾರದ ಮೂಲಕವೇ ಜಾಗೃತವಾದುದು. ಸಮಾಜದ ಜೀವಂತಿಕೆಗೆ ಸಾಕ್ಷಿಯಾದ ದಾಸೋಹವು ಸಮಷ್ಟಿ ಪ್ರಜ್ಞೆಗೆ ಕಾರಣವಾಯಿತು. ಶಿವಶರಣ ಸಂಕುಲವು ಸಮಾಜ ಶಿವನನ್ನು ಈ ಮೂಲಕ ಪೂಜಿಸಿತು. ಪ್ರತಿಯೊಬ್ಬರಲ್ಲೂ ಶಿವನಿದ್ದಾನೆ ಎಂಬ ಭಾವ ಧರಿಸಿದ್ಧ ಶಿವಶರಣ_ಶರಣೆಯರು ಮುಂದುವರೆದು ಪ್ರತಿಯೊಂದು ಜೀವಿಯಲ್ಲೂ ಆ ಶಿವನನ್ನು ದರ್ಶಿಸಿದರು. ಈ ಕಾರಣದಿಂದಲೇ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವನೆ ನಿಜವಾದ ಶರಣ ಎಂಬ ತಿಳುವಳಿಕೆ ಎಲ್ಲರಲ್ಲೂ ಜಾಗೃತವಾಗಿತ್ತು. ಇದು ನಿಜವಾದ ಅರಿವಿನ ಸ್ಪೋಟ. ಪ್ರತಿ ಜೀವಿಯಲ್ಲೂ ಶಿವನಿದ್ದಾನೆ ಎಂಬ ಈ ವಿಚಾರವನ್ನು ದಾಸೋಹವೆಂಬ ಆಚಾರದ ಮೂಲಕ ಶರಣರು ಜಾರಿಗೆ ತಂದರು. ಹಸಿದವರಿಗೆ ಅನ್ನವನಿತ್ತು, ನೀರಡಿಸಿದವರಿಗೆ ನೀರನಿತ್ತು, ಜೀವಾತ್ಮಗಳನ್ನು ಸಂತೃಪ್ತಿಪಡಿಸುವ ಅನ್ನದಾಸೋಹದ ಜೊತೆಗೆ, ಹಸಿದ ನೆತ್ತಿಗೆ ಅನುಭಾವದ ಅಮೃತ ಉಣಿಸಿ ಅಜ್ಞಾನ, ಮೌಢ್ಯವನ್ನು ತೊಲಗಿಸಿ ಜ್ಞಾನದ ದಾಸೋಹವನ್ನೂ ಏಕಕಾಲಕ್ಕೆ ಬಸವಾದಿ ಶಿವಶರಣ-ಶರಣೆಯರು ತಮ್ಮ ಜೀವಿತಾವಧಿಯವರೆಗೂ ನಡೆಸಿಕೊಂಡು ಬಂದರು. ಸಕಲ ಜೀವಾತ್ಮರ ಉದ್ಧಾರಕ್ಕೆ ತನು, ಮನ, ಧನವನ್ನು ಸವೆಸಿದರು. ಹೀಗಾಗಿ ಅನ್ನದಾಸೋಹ, ಜ್ಞಾನ ದಾಸೋಹ ಶರಣರ ದೃಷ್ಠಿಯಲ್ಲಿ ನಿಜವಾದ ಆಚಾರ-ವಿಚಾರವಾಗಿತ್ತು. ತಮ್ಮ ಸುತ್ತಮುತ್ತಲಿನ ಪರಿಸರದ ಸಹಜೀವಿಗಳ ಹಿತಕ್ಕಾಗಿ ಅವರ ಅರಿವು ಜಾಗೃತವಾಯಿತು. ಅದರಲ್ಲಿಯೇ ಅವರು ಪರಮಾತ್ಮನನ್ನು ಕಂಡರು. ಅವರಿಗೆ ಮತ್ತೊಂದು ತಪಸ್ಸು ಬೇಕಿರಲಿಲ್ಲ. ಸತ್ಯ ಶುದ್ಧವಾದ ಕಾಯಕದ ಮೂಲಕ ಬಂದದ್ದನ್ನು ಗುರು-ಲಿಂಗ–ಜಂಗಮಕ್ಕೆ ಅರ್ಪಿಸಿ ಧನ್ಯರಾದರು.
ದಾಸೋಹವೆಂಬುದು ಒಂದು ತತ್ವವಾಗಿದ್ದು, ಕಾಯಕದಂತೆ ಅದು ಸತ್ಯ ಶುದ್ಧವಾಗಿರಬೇಕು. ದಾಸೋಹವೆಂಬ ಆಚಾರ ವಿಚಾರ (ಅರಿವು) ದಿಂದ ಕೂಡಿರಬೇಕು ಎಂಬುದಕ್ಕೆ ಬದ್ಧರಾಗಿದ್ದ ಶಿವಶರಣರ-ಶರಣೆಯರು ದಾಸೋಹ ಎಂಬುದಕ್ಕೆ ಸ್ಪಷ್ಟವಾದ ವಿಚಾರವನ್ನು ನೀಡಿದ್ದಾರೆ;
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋಹವ ಮಾಡಬಹುದೆ?
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲಬೇಕು ಮಾರಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-273/ವಚನ ಸಂಖ್ಯೆ-722)
ಎಂದು ಶಿವಶರಣೆ ಆಯ್ದಕ್ಕಿ ಲಕ್ಕಮ್ಮನವರು ದಾಸೋಹದ ವಿಧಾನವನ್ನು ಸ್ಪಷ್ಟಿಕರಿಸುತ್ತಾರೆ. ಕಾಯಕ-ದಾಸೋಹದಂತಹ ಆಚಾರಗಳು ದೃಢ ಮನಸ್ಸಿನಿಂದ, ಸತ್ಯ ಶುದ್ಧತೆಯಿಂದ ಕೂಡಿರಬೇಕು. “ಒಮ್ಮನದಲ್ಲಿಯೇ ತಂದು ಒಮ್ಮನದಲ್ಲಿಯೇ ಮಾಡಿ ಇಮ್ಮನವಾಗುವ ಮುನ್ನವೇ ದಾಸೋಹದ ಆಜಾರ ನಡೆಯಬೇಕು” ಎಂಬ ವಿಚಾರ ಶರಣರದು. ಇಂತಹ ಆಚಾರ-ವಿಚಾರವನ್ನು ದಾಸೋಹ ತತ್ವದಲ್ಲಿ ಬಸವಾದಿ ಶಿವಶರಣ-ಶರಣೆಯರು ಕಂಡುಕೊAಡಿದ್ದರು.
ಪ್ರಸಾದ ತತ್ವದಲ್ಲಿ ಆಚಾರ-ವಿಚಾರ:
ಸತ್ಯ ಶುದ್ಧವಾದ ಕಾಯಕ-ದಾಸೋಹದಿಂದ ಬಂದ ಪ್ರಸಾದ ದೇವರಿಂದ ಬಂದ ಪ್ರಸಾದದಷ್ಟೇ ಶುದ್ಧವಾಗಿರುತ್ತದೆ ಎಂಬ ಇನ್ನೊಂದು ಪ್ರಸಾದ ತತ್ವದಲ್ಲಿರುವ ಆಚಾರ-ವಿಚಾರವನ್ನು ಶರಣ ಸಂಕುಲ ಪ್ರತಿಪಾದಿಸಿದೆ. ಕಾಯಕದಿಂದ ಬಂದದ್ದು ದಾಸೋಹದ ಮೂಲಕ ವಿನಿಯೋಗವಾಗುವಾಗ ಆ ಪ್ರಸಾದ ಸಮಾಜ ಶಿವನಿಗೆ ಅರ್ಪಿತವಾಗುತ್ತದೆ. ಅದು ಅಮೃತಕ್ಕೆ ಸಮಾನವಾಗಿರುತ್ತದೆ. ಹೀಗಿರುವಾಗ ಆ ಪ್ರಸಾದದಲ್ಲಿ ರುಚಿ-ಅರುಚಿ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರಸಾದದ ಪ್ರತಿ ಅಗುಳನ್ನೂ ಸಹಮತವಾಗಿ ಸ್ವೀಕರಿಸಬೇಕು. ಏಕೆಂದರೆ ಅದು ಶ್ರಮದ ಬೆವರಿನಿಂದ ತಯಾರಿಸಲ್ಪಟ್ಟಿರುತ್ತದೆ. ದಾಸೋಹದಲ್ಲಿ “ನಾನು” ಎಂಬ ಭಾವ ನಿರಸನವಾದಂತೆ, ಪ್ರಸಾದದಲ್ಲಿ ಪಾವಿತ್ರತೆಯ ಅರಿವು ಜಾಗೃತವಾಗಬೇಕು. ಈ ಅರಿವು ಯಾವಾಗ ಎಲ್ಲರಲ್ಲೂ ಜಾಗೃತವಾಗುವುದೋ ಆಗ ಪರಮಾತ್ಮನ ಪ್ರತಿಯೊಂದು ಕೊಡುಗೆಯೂ ಪ್ರಸಾದವಾಗಿ ಗೋಚರಿಸುತ್ತದೆ. ಈ ಕಾರಣದಿಂದಲೇ ಶಿವಶರಣರ ದೃಷ್ಠಿಯಲ್ಲಿ ಈ ಭೂಮಿ, ಮಣ್ಣು, ಗಾಳಿ, ಬೆಳಕು, ನೀರು ಎಲ್ಲವೂ ಪರಮಾತ್ಮನ ಪ್ರಸಾದವೆ ಆಗಿ ಗೋಚರಿಸಿದೆ. ಅಷ್ಟೇ ಏಕೆ ಮಾನವರ ಕಾಯವೂ ಆ ದೇವರ ಪ್ರಸಾದವೇ ಆಗಿದ್ದು, ಅದನ್ನು ಅಂತರಂಗ-ಬಹಿರಂಗ ಶುದ್ಧಿಯ ಮೂಲಕ ಶುದ್ಧ ಪ್ರಸಾದ ಕಾಯವನ್ನಾಗಿಸಿಕೊಳ್ಳುವ ಆಚಾರ_ವಿಚಾರಗಳನ್ನು ಬಸವಾದಿ ಶಿವಶರಣರು ಮನುಕುಲಕ್ಕೆ ನೀಡಿದ್ದಾರೆ. ಹೀಗಾಗಿ “ಪ್ರಸಾದ ಕಾಯ” ಎಂಬ ಹೊಸ ಪಾರಿಭಾಷಿಕ ಶಬ್ದವೂ ಶಿವಶರಣರ ಕೊಡುಗೆಯೇ ಆಗಿದೆ.
ಕೆವಿನ್ ಕಾರ್ಟರ್ ಎಂಬುವ ದಕ್ಷಿಣ ಆಫ್ರಿಕಾದ ಪ್ರಖ್ಯಾತ ಪತ್ರಿಕಾ ಛಾಯಾಗ್ರಾಹಕ. ಒಮ್ಮೆ ಸುಡಾನಲ್ಲಿ ಭೀಕರ ಬರಗಾಲ ಆವರಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಅಲ್ಲಲ್ಲಿ “ಗಂಜಿಕೇಂದ್ರ” ಸ್ಥಾಪನೆ ಮಾಡಿರುತ್ತದೆ. ಒಂದು ಗಂಜಿಕೇಂದ್ರದ ಹತ್ತಿರ ಅಶಕ್ತವಾದ ಮಗುವೊಂದು ತುಂಬಾ ಹಸಿವಿನಿಂದ ಬಳಲಿ ತೆವಳುತ್ತಾ ಗಂಜಿಕೇಂದ್ರದತ್ತ ಹೋಗುತ್ತಿರುತ್ತದೆ. ಈಗಲೋ ಆಗಲೋ ಸಾಯುವಂತಿರುವ ಆ ಮಗು ಯಾವಾಗ ಸಾಯುತ್ತದೊ ಎಂದು ಒಂದು ಹದ್ದು ಹೊಂಚು ಹಾಕುತ್ತ ಕುಳಿತಿರುತ್ತದೆ. ಈ ದೃಶ್ಯವನ್ನು ಕೆವಿನ್ ಕಾರ್ಟರ್ ರೋಚಕವಾಗಿ ಸೆರೆ ಹಿಡಿದು ಒಂದು ಪತ್ರಿಕೆಯಲ್ಲಿ ಪ್ರಕಟಿಸುತ್ತಾನೆ. ಆ ಅದ್ಭುತವಾದ ಛಾಯಾಚಿತ್ರಕ್ಕೆ 1994 ರಲ್ಲಿ ಕೇವಿನ್‌ಗೆ ವಿಶ್ವಪ್ರಸಿದ್ಧವಾದ “ಪುಲಿಟ್ಜರ್ ಪ್ರಶಸ್ತಿ” ದೊರೆಯುತ್ತದೆ. ಪತ್ರಿಕೆಯನ್ನು ನೋಡಿದ ಓದುಗರು “ಕೆವಿನ್ ಕಾರ್ಟರ್ ಚಿತ್ರ ತೆಗೆಯುವ ಆತುರದಲ್ಲಿ ಮಗುವಿನ ಸಾವು-ಬದುಕಿನ ಕುರಿತು ಯೋಚಿಸಲೇ ಇಲ್ಲಾ; ಮಾನವೀಯತೆಯೇ ಇಲ್ಲದ ಈ ಛಾಯಾಚಿತ್ರದಿಂದ ಏನು ಉಪಯೋಗ? ಎಂದು ಪ್ರತಿಕ್ರಿಯ ಹೇಳಿಕೆ ನೀಡುತ್ತಾರೆ. ಇದರಿಂದ ಕೆವಿನ್ ಕಾರ್ಟರ್‌ಗೆ ತನ್ನ ತಪ್ಪಿನ ಅರಿವಾಗಿ ತುಂಬಾ ನೋವಿನಿಂದ ಪಶ್ಚಾತ್ತಾಪ ಪಡುತ್ತಾನೆ.
ಈ ಘಟನೆ ಅವನಿಗೆ ಎಷ್ಟು ಘಾಸಿಗೊಳಿಸುತ್ತದೆ ಎಂದರೆ ಅವನು ಕುಳಿತಲ್ಲಿ, ನಿಂತಲ್ಲಿ ಒಂದು ತುತ್ತು ಅನ್ನಕ್ಕಾಗಿ ಆ ಮಗು ಪರಿತಪಿಸುತ್ತಿದ್ದ ದೃಶ್ಯ ಮತ್ತು ಆ ಮಗುವನ್ನು ತಿನ್ನಲು ಕಾದು ಕುಳಿತ ಆ ರಣಹದ್ದಿನ ದೃಶ್ಯ ಇವೆರೆಡೂ ದೃಶ್ಯಗಳು ಅವನನ್ನು ತುಂಬಾ ಕಾಡತೊಡಗುತ್ತವೆ.
ಅಂದಿನಿಂದ ಪ್ರಶ್ಚಾತ್ತಾಪದಿಂದ ಪರಿತಪಿಸಿದ ಕೆವಿನ್ ಕಾರ್ಟರ್ ಅನ್ನದ ಮಹತ್ವ ಕುರಿತು ಜನರಲ್ಲಿ ಅರಿವನ್ನು, ಜಾಗೃತಿಯನ್ನು ಮೂಡಿಸತೊಡಗಿದನು. ಅನ್ನವನ್ನು ಪ್ರಸಾದವಾಗಿ ಕಾಣತೊಡಗಿದನು. ಈ ವಿಚಾರ ಕುರಿತು ತನ್ನ ತಾಯಿಗೆ ಪತ್ರವನ್ನೂ ಬರೆದನು. ಆ ಪತ್ರದಲ್ಲಿ ಹೀಗೆ ಬರೆದಿದ್ದನು;
ಅಮ್ಮಾ ನನ್ನ ಹೊಟ್ಟೆ ತುಂಬಿದ್ದರೂ, ಎಷ್ಟೆ ಅರುಚಿಯಾಗಿದ್ದರೂ, ನನ್ನ ಪಾಲಿಗೆ ಬಂದ ಆಹಾರವನ್ನು ನಾನೆಂದೂ ಹಾಳು ಮಾಡುವುದಿಲ್ಲ ಮತ್ತು ಆ ಮಗುವನ್ನು ರಕ್ಷಿಸು, ದಾರಿ ತೋರು, ದುರಂತದಿಂದ ಪಾರು ಮಾಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಅಮ್ಮಾ ನನಗೀಗ ಅರ್ಥವಾಗುತ್ತಿದೆ. ನಾವು ನಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು ಎಂದು. ನಾನು ಈಗ ಹಾಗೇ ಇರಲು ಆಶಿಸುತ್ತೇನೆ. ನಾವು ನಮ್ಮ ಸ್ವಾರ್ಥಭಾವ ಮತ್ತು ಹಿತಾಸಕ್ತಿಗಳಿಂದ ಕುರುಡರಾಗಬಾರದು. ಈ ವಿಚಾರವನ್ನು ಎಲ್ಲರಿಗೂ ಹಂಚುತ್ತಲೇ ಇರಬೇಕು. ದುಃಖದಿಂದ ಬಳಲುತ್ತಿರುವ ಎಲ್ಲರಿಗಾಗಿ ನಾವು ಪ್ರಾರ್ಥಿಸೋಣ. ಈ ಸ್ನೇಹಭಾವ ಪತ್ರವನ್ನು ಎಲ್ಲರಿಗೂ ಕಳುಹಿಸೋಣ. ಜನರಿಗೆ ಸಂದೇಶ ಕೊಡೋಣ ನೀವು ಆಹಾರದ ಬಗ್ಗೆ ದೂರುವಾಗ ಮತ್ತು ಪ್ರತಿದಿನ ಆಹಾರವನ್ನು ಹಾಳು ಮಾಡುವಾಗ ಈ ಕುರಿತು ಚಿಂತನೆ ಮಾಡಿರಿ.
ಎಂದು ಪತ್ರದಲ್ಲಿ ಬರೆಯುತ್ತಾನೆ. ಕಾರ್ಟರ್ ಈ ಘಟನೆಯಿಂದ ಎಷ್ಟು ನೊಂದಿದ್ದನೆಂದರೇ ಅವನು ಮಾನಸಿಕವಾಗಿ ತುಂಬಾ ಜರ್ಝರಿತನಾಗಿರುತ್ತಾನೆ. ನಂತರದ ಮೂರು ತಿಂಗಳಲ್ಲಿ ಕೆವಿನ್ ಕಾರ್ಟರ್ ಆತ್ಮಹತ್ಯೆಯನ್ನೇ ಮಾಡಿಕೊಳ್ಳುತ್ತಾನೆ. ಪ್ರಸಾದದ ಮಹತ್ವದ ಕುರಿತು ಅವನು ಬರೆದ ಪತ್ರ ಜಗತ್ತಿನ ತುಂಬೆಲ್ಲಾ ಪ್ರಚಲಿತವಾಗುತ್ತದೆ. ಇವತ್ತಿಗೂ ಮಾನವರಲ್ಲಿ ಜಾಗೃತಿ ಮೂಡಿಸುತ್ತಿದೆ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು
ಹೇಳಿಹೆ ಕೇಳಿರೇ:
ಶುದ್ಧಪ್ರಸಾದವು ಗುರುವಿನಲ್ಲಿ,
ಸಿದ್ಧಪ್ರಸಾದವು ಲಿಂಗದಲ್ಲಿ,
ಪ್ರಸಿದ್ಧಪ್ರಸಾದವು ಜಂಗಮದಲ್ಲಿ.
ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ?
ಘನಕ್ಕೆ ಘನ ಮಹಾಘನ ಪ್ರಸಾದವು.
ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು
ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-109 / ವಚನ ಸಂಖ್ಯೆ-249)
ಶುದ್ಧ ಸಿದ್ಧ ಮತ್ತು ಪ್ರಸಿದ್ಧ ಪ್ರಸಾಧಗಳನ್ನು ಇಷ್ಟಲಿಂಗ ಪ್ರಸಾದ, ಪ್ರಾಣಲಿಂಗ ಪ್ರಸಾದ ಮತ್ತು ಭಾವಲಿಂಗ ಪ್ರಸಾದಗಳೆಂದು ಹೇಳ್ತಾರೆ. ಅರಿವು ಜ್ಞಾನವನ್ನು ತಿಳಿಸುವ ಈ ಶುದ್ಧ ಪ್ರಸಾದವು ಗುರುವಿನಲ್ಲಿ ಎಂದು ಹೇಳುವ ಮೂಲಕ ಗುರುಪ್ರಸಾದ ಎಂತಲೂ ಅಥವಾ ಇಷ್ಟಲಿಂಗ ಪ್ರಸಾದ ಎಂತಲೂ ಹೇಳಬಹುದು. ಅರಿವು ತಾನಾಗುವ ಅಥವಾ ತಾನೆ ಅರಿವಾಗುವ ಶಬ್ದ ಮುಗ್ಧವಾಗುವ ಈ ಸಿದ್ಧಿ ಪ್ರಸಾದವು ಲಿಂಗದಲ್ಲಿ ಎಂದು ಹೇಳುವ ಮೂಲಕ ಇದನ್ನು ಪ್ರಾಣಲಿಂಗ ಪ್ರಸಾದ ಅಂತಾನೂ ಕರಿತಾರೆ. ಜಂಗಮದ ಅರಿವನ್ನು ಅರಿತು, ಅರಿವಿನ ಭಾವವಾದ ಪ್ರಸಿದ್ಧ ಪ್ರಸಾದವು ಜಂಗಮದಲ್ಲಿ ಎಂದು ಹೇಳುವ ಮೂಲಕ ಭಾವಲಿಂಗ ಪ್ರಸಾದ ಎಂದು ಹೇಳುತ್ತಾರೆ. ಈ ಮೂರು ಪ್ರಸಾದಗಳು ಯಾವವು ಹೆಚ್ಚಿಲ್ಲ, ಯಾವವೂ ಕಡಿಮೆ ಇಲ್ಲ, ಎಲ್ಲವೂ ಮಹಾಘನ ತತ್ವಗಳು ಮತ್ತು ಕಾಯವನ್ನು ಪ್ರಸಾದ ಕಾಯವಾಗಿಸುವ ನಿಟ್ಟಿನಲ್ಲಿ ನೋಡುವಂತಹ ತತ್ವಗಳು ಈ ಮೂರು ಪ್ರಸಾದಗಳು ಆತ್ಮದ ಶುದ್ಧಿ, ಅರಿವಿನ ಶುದ್ಧಿ ಮತ್ತು ಚಿತ್ತ ಶುದ್ಧಿಯನ್ನು ನೀಡುತ್ತವೆ.
ಇಂತಹ ಅಮೋಘ ಕೆಲಸವನ್ನು 900 ವರ್ಷಗಳ ಹಿಂದೆಯೇ ಬಸವಣ್ಣನವರು ಆಚರಣೆಗೆ ತಂದಿದ್ದರು. ಪ್ರಸಾದದ ಪ್ರತಿ ಅಗಳೂ ಪವಿತ್ರ ಎಂಬ ಅರಿವನ್ನು ಬಿತ್ತಿದ್ದರು. ತಮ್ಮ ಕಾಲಘಟ್ಟದಲ್ಲಿ ಬಸವಾದಿ ಶಿವಶರಣ-ಶರಣೆಯರು ಕಾಯಕ, ದಾಸೋಹ, ಪ್ರಸಾದ ತತ್ವಗಳ ಕುರಿತು ಜನಮಾನಸದಲ್ಲಿ ಅರಿವನ್ನು ಮೂಡಿಸಿದ್ದರು. ಇಂತಹ ಆಚಾರ-ವಿಚಾರಗಳನ್ನರಿತ ಬಸವಾದಿ ಶಿವಶರಣ-ಶರಣೆಯರ ಅನುಯಾಯಿಗಳು ಒಂದು ಅಗಳನ್ನೂ ಸಹ ಹಾಳು ಮಾಡುವುದಿಲ್ಲ. ಪ್ರಸಾದದಲ್ಲಿ ರುಚಿ_ಅರುಚಿ ಎಂಬ ಭೇದ ಎನಿಸುವುದಿಲ್ಲ. ಪ್ರಸಾದ ತತ್ವದಲ್ಲಿ ಪವಿತ್ರಭಾವ ಹೊಂದಿರಬೇಕು ಎಂಬ ವಿಚಾರವು ಶರಣರ ದೃಷ್ಠಿಯಲ್ಲಿ ಒಂದು ಆಚಾರ ತತ್ವದಾಗಿತ್ತು.
ಬಸವಾದಿ ಶಿವಶರಣ-ಶರಣೆಯರ ಆಚಾರ-ವಿಚಾರಗಳು ವಿದೇಶಿಯರ ಮೇಲೆ ತುಂಬಾ ಪರಿಣಾಮ ಬೀರಿದೆ. ಇದಕ್ಕೊಂದು ನಡೆದ ಘಟನೆಯ ಸಾಕ್ಷಿ ಇದೆ; ಥಿಯೋಡರ್ ಎಂಬವರು ಸುಮಾರು 45 ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದರು. ಆ ಸಂದರ್ಭದಲ್ಲಿ ಇವರು ಬಸವಣ್ಣನವರ ಐದು ವಚನಗಳನ್ನು ಇಂಗ್ಲೀಷಗೆ ಅನುವಾದ ಮಾಡುತ್ತಾರೆ. ತಾವು ಅನುವಾದ ಮಾಡಿದ ಆ ವಚನಗಳನ್ನು ಇಂಗ್ಲಂಡನಲ್ಲಿದ್ದ ತಮ್ಮ ಗುರುಗಳಾದ W. H. ರಾಬರ್ಟ್ಸನ್ ಅವರಿಗೆ ಕಳುಹಿಸುತ್ತಾರೆ. ಆಗ BBC ಸಲಹೆಗಾರರಾಗಿದ್ದ ರಾಬರ್ಟ್ಸನ್ ಅವರು ಕೇವಲ ಬಸವಣ್ಣನವರ ಐದು ವಚನಗಳಿಂದ ಎಷ್ಟು ಪ್ರಭಾವಕ್ಕೆ ಒಳಗಾಗುತ್ತಾರೆ ಎಂದರೆ ತಕ್ಷಣವೇ ಅವರು ಬಸವಣ್ಣನವರ ಜನ್ಮಭೂಮಿ, ವಿದ್ಯಾಭೂಮಿ, ಕರ್ಮಭೂಮಿಯನ್ನು ನೋಡಲು ಇಂಗ್ಲಂಡನಿಂದ ಹೊರಟು ಕರ್ನಾಟಕಕ್ಕೆ ಬಂದೇ ಬಿಡುತ್ತಾರೆ. ರಾಬರ್ಟ್ಸನ್ ಅವರಿಗೆ ಈ ಎಲ್ಲಾ ಕ್ಷೇತ್ರ ತೋರಿಸಲು ಕನ್ನಡ ವಿದ್ವಾಂಸರಾದ ಮಾಣಿಕರಾವ್ ಧನಶ್ರೀ ಅವರು ಅವರ ಜೊತೆಗೆ ಬರುತ್ತಾರೆ. ಬಾಗೇವಾಡಿ, ಕೂಡಲಸಂಗಮ ದರ್ಶಿಸಿ, ರಾಬರ್ಟ್ಸನ್ ಬಸವಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಅವರು ತ್ರಿಪುರಾಂತಕ ಕೆರೆಯ ದಂಡೆಯ ಮೇಲೆ ಹೋಗುತ್ತಿರುವಾಗ ಒಬ್ಬ ಮಹಿಳೆ ಘನಲಿಂಗ ರುದ್ರಮುನಿ ಗವಿಯ ಮುಂದಿನ ಅಂಗಳವನ್ನು ಸೆಗಣಿಯಿಂದ ಸಾರಿಸುತ್ತಿದ್ದಳು. ರಾಬರ್ಟ್ಸನ್ ಜೊತೆಗೆ ಬಿಂದಿದ್ದ ಕಲ್ಯಾಣದ ಒಬ್ಬ ವ್ಯಕ್ತಿ ಅವರನ್ನು ಉದ್ದೇಶಿ “She is doing her work” ಎಂದು ಅವಳನ್ನು ತೋರಿಸುತ್ತಾನೆ. ತಕ್ಷಣವೇ ಪ್ರತಿಕ್ರಿಯಿಸಿದ ರಾಬರ್ಟ್ಸನ್ “No No She is doing her Kayaka” ಎಂದರು. ಮುಂದುವರೆದು ಮಧ್ಯಾಹ್ನದ ಸಮಯ ಆಗುತ್ತದೆ ಪುನಃ ಆ ವ್ಯಕ್ತಿ ಅವರಿಗೆ “Shall we have lunch?!” ಎನ್ನುತ್ತಾನೆ. ಮತ್ತೆ ಪ್ರತಿಕ್ರಿಯಿಸಿದ ರಾಬರ್ಟ್ಸನ್ “No No we shall have prasad” ಎನ್ನುತ್ತಾರೆ. ತಾವೇ ಮಾತು ಮುಂದುವರಿಸಿ ಆ ವ್ಯಕ್ತಿಗೆ ಹೇಳುತ್ತಾರೆ; “Please release Basaveshwara from your narrow bonds” ಎಂದು. ಎಂತಹ ಅದ್ಭುತವಾದ ವಿಚಾರವಿದು! ಶ್ರೇಷ್ಠವಾದ ವಿಚಾರಗಳನ್ನು ಆಚರಣೆಗೆ ತಂದ ಬಸವಣ್ಣನವರು ಸಮಾಜ ಕಲ್ಯಾಣದ ಜೊತೆ ಜೊತೆಗೆ ಆತ್ಮಕಲ್ಯಾಣವನ್ನೂ ಮಾಡಿದರು. ಅದಕ್ಕೆ ಬಸವಕಲ್ಯಾಣ ಕೇವಲ ಬಸವಕಲ್ಯಾಣವಾಗಿ ಉಳಿಯದೇ ಆತ್ಮಕಲ್ಯಾಣವಾಗಿತ್ತು ಎಂಬ ಮಾತು ಸತ್ಯವಾದುದು.
ವಚನಗಳಲ್ಲಿ ಆಚಾರ-ವಿಚಾರ:
ಬಸವಾದಿ ಶರಣರು ತಮ್ಮ ವಚನಗಳಲ್ಲಿ ತುಂಬಾ ಸರಳವಾಗಿ ಅತ್ಯಂತ ಶ್ರೇಷ್ಠತಮವಾದ ಆಚಾರ-ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಇವು ನಮ್ಮ ಬದುಕಿನ ಪಯಣದಲ್ಲಿ “ದಾರಿಬುತ್ತಿ”. ಜ್ಞಾನದ ಹಸಿವಾದಾಗ, ಅಜ್ಞಾನದ ಕತ್ತಲೆ ಆವರಿಸಿದಾಗ ನಮ್ಮ ನೆತ್ತಿಗೂ, ಮನಕ್ಕೂ ಪೌಷ್ಠಿಕತೆಯನ್ನು ಈ ಬುತ್ತಿ ಉಣಬಡಿಸುತ್ತದೆ.
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ.
ಕೂಡಲಸಂಗಮದೇವಾ, ನೀವೆ ಪ್ರಮಾಣು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-239)
ತುಂಬಾ ಸರಳವಾದ ಆಚಾರ-ವಿಚಾರದ ತತ್ವವಿದು. ಬಸವಣ್ಣನವರು ತುಂಬಾ ಸರಳವಾಗಿ ಸುಂದರವಾಗಿ ಹೇಳಿರುವ ತತ್ವವೆಂದರೆ ಸದಾ ಸತ್ಯ ನುಡಿಯಬೇಕು. ಆ ಸತ್ಯಮಾತು ದೇವಲೋಕವನ್ನೇ ಸೃಷ್ಟಿಸುತ್ತದೆ. ಮಿಥ್ಯ ನುಡಿಯುವುದೆಂದರೆ ಅಸತ್ಯ ಮಾತನಾಡುವುದು. ಸುಳ್ಳಿಗೆ ಸುಖವಿಲ್ಲ ಏಂಬಂತೆ ಸುಳ್ಳು, ಅಥವಾ ಅಸತ್ಯ ಬಹಳ ದಿನ ಬಾಳುವುದಿಲ್ಲ. ಕಾಣದ ಸ್ವರ್ಗ, ನರಕಗಳ ಹುಸಿ ಕಲ್ಪನೆಯನ್ನು ಒಡೆದ ಬಸವಾದಿ ಶರಣರು ಸತ್ಯದಲ್ಲಿ ಸ್ವರ್ಗ ಅಸತ್ಯದಲ್ಲಿ ನರಕವಿದೆ ಎಂದು ವಾಸ್ತವತೆಯನ್ನು ಪ್ರತಿಪಾದಿಸಿ ಸಾಮಾನ್ಯ ಜನರಲ್ಲಿ ಇಂತಹ ಆಚಾರ-ವಿಚಾರದ ಬಳಕೆಯನ್ನು ತಂದರು.
ಬಸವಣ್ಣನವರ ದೃಷ್ಟಿಯಲ್ಲಿಂತೂ ಅಂತರಂಗ-ಬಹಿರಂಗ ಶುದ್ಧಿ, ನಡೆಶುದ್ಧಿ ನುಡಿಶುದ್ಧಿಗೆ ಪ್ರಾಶಸ್ತ್ಯ ನೀಡಿ ಇವುಗಳೆ ನಿಜವಾದ ಆಚಾರಗಳು ಎಂದು ಸಪ್ತ ಸೂತ್ರಗಳನ್ನೇ ನೀಡುತ್ತಾರೆ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ,
ಇದೇ ಅಂತರಂಗಶುದ್ಧ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-235)
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಮಗುವಿನ ಬಾಯಲ್ಲೂ ಸಹ ಮಂತ್ರದಂತೆ ಉಚ್ಛರಿಸುವ ವಚನವಿದು. ಕಳ್ಳತನ ಮಾಡಬೇಡ ಎನ್ನುವ ಬಸವಣ್ಣನವರು ಇದನ್ನು ವಿಶೇಷ ಅರ್ಥದಲ್ಲಿ ಹೇಳುತ್ತಾರೆ. ಬಾಹ್ಯದಲ್ಲಿ ಕಳ್ಳತನವನ್ನೇ ಮಾಡಿ ಬದುಕುವ ಕಳ್ಳರ ಗುಂಪೊಂದು ಇರುತ್ತದೆ. ನಾವೆಲ್ಲರೂ ಒಂದರ್ಥದಲ್ಲಿ ಕಳ್ಳರು. ಕದ್ದು ನೋಡುವುದು, ಕದ್ದು ಕೇಳುವುದು, ಕದ್ದು ತಿನ್ನುವ ನಾವೆಲ್ಲರೂ ಕಳ್ಳರೆ. ಅದು ಒಳ್ಳೆಯ ಆಚಾರವಲ್ಲ ಎಂಬುದು ಬಸವಣ್ಣನವರ ವಿಚಾರ. ಎಷ್ಟೋ ಜನರು ಮಾತಿನಿಂದಲೇ ಕೊಲೆ ಮಾಡುತ್ತಾರೆ. ಅವರ ನಾಲಿಗೆಯೇ ಹರಿತವಾದ ಆಯುಧವಾಗಿ ಅಮಾಯಕರ ಬಲಿ ತೆಗೆದುಕೊಳ್ಳುತ್ತಿರುತ್ತದೆ. ಹೀಗೆ ಮಾನಸಿಕವಾಗಿ ಹಿಂಸೆ ನೀಡುವುದೂ ಒಂದು ಹಂತದಲ್ಲಿ ಕೊಲೆಯೇ ಆಗುತ್ತದೆ, ಇದು ಸಹ ಒಳ್ಳೆಯ ಆಚಾರವಲ್ಲ ಎನ್ನುವ ಬಸವಣ್ಣನವರು ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ. ಅದಕ್ಕಾಗಿ ಮುನಿಸು ಕೂಡಾ ಆಚಾರವಲ್ಲ. ಹೀಗೆ ಇಂತಹ ಅನಾಚಾರಗಳಿಂದ ದೂರವಿರುವುದೇ ಅಂತರಂಗ-ಬಹಿರಂಗ ಶುದ್ಧಿ ಎನ್ನುವ ಮೂಲಕ ಆಚಾರ-ವಿಚಾರಗಳ ಸನ್ಮಾರ್ಗವನ್ನು ಬಸವಣ್ಣರು ತೋರಿದ್ದಾರೆ. ನಡೆದಂತೆ ನುಡಿಯುವುದು ನುಡಿದಂತೆ ನುಡಿಯುವುದೇ ಬಹುದೊಡ್ಡ ಆಚಾರ.
ನಡೆಯ ಚೆನ್ನ ನುಡಿದು ತೋರಿ,
ನುಡಿಯ ಚೆನ್ನ ನಡೆದು ತೋರಿ,
ಆ ನಡೆನುಡಿ ಎರಡರ ಚೆನ್ನ ಮೃಡ ನಿಮ್ಮೊಳಗಡಗಿಸಿ,
ತಾವೆಡೆಯಿಲ್ಲದೆ ಪರಿಪೂರ್ಣರಾವವರ ಪಡುಗವ ಹೊರುವೆ,
ಪಾದರಕ್ಷೆಯ ಹಿಡಿವೆ, ಎನಗಿದೆ ಮಾಟ, ಬಯಸುವ ಬೇಟ,
ಕೂಡಲಸಂಗಮದೇವಾ
ಇದು ನಿಮ್ಮ ಕೂಡುವ ಕೂಟ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-370/ವಚನ ಸಂಖ್ಯೆ-1237)
ಕೂಡಲಸಂಗಮದಲ್ಲಿ ಬೆರೆಯುವುದಕ್ಕೆ (ಒಂದಾಗುವುದಕ್ಕೆ) ಬೇರೆನೂ ಬೇಕಿಲ್ಲ. ನಡೆ ಚಂದ, ನುಡಿ ಚಂದ ಇದ್ದರೆ ಸಾಕು ಎಂಬ ಭಾವ, ಶುದ್ಧ ಆಚಾರವನ್ನು ಎತ್ತಿ ಹಿಡಿಯುತ್ತದೆ. ನಡೆ-ನುಡಿ ಸಾಮರಸ್ಯದಂತೆ, ನುಡಿ ಶುದ್ಧಿಗೆ ಶಿವಶರಣರು ಒತ್ತು ಕೊಟ್ಟರು. ಲಿಂಗನುಡಿಗಳಿಂದ ನೊಂದವರ ಎದೆಯ ನೋವಿಗೆ ಮುಲಾಮು ಹಚ್ಚಬಹುದು. “ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ”. ಅಯ್ಯಾ ಎಂಬ ಪದ ಸಂಸ್ಕಾರ. ಎಲ್ಲವೋ ಎಂಬುದು ಅಹಂಕಾರದ ಅಧಮ ಪದ. ಯಾವ ವೈದಿಕರು ಅಸ್ಪೃಶ್ಯತೆಯನ್ನು ಹುಟ್ಟು ಹಾಕಿದ್ದರೋ ಅವರ ನುಡಿಯಲ್ಲೂ ಆ ಭಾವವನ್ನೇ ಪ್ರಕಟಿಸುತ್ತಿದ್ದರು. ಅಸ್ಪೃಶ್ಯರನ್ನು ತುಚ್ಛವಾಗಿ ನಡೆಸಿಕೊಂಡಿದ್ದಷ್ಟೇ ಅಲ್ಲಾ ಅವರನ್ನು ಎಲವೋ ಹೊಲೆಯ, ಎಲವೋ ಮಾದಿಗ, ಎಲವೋ ಹಜಾಮ ಎಂದೆಲ್ಲಾ ನಿಕೃಷ್ಟ ಪದಗಳಿಂದ ಅಂತ್ಯಜರನ್ನು ಅವಾಚ್ಯವಾಗಿ ನಿಂದಿಸಿ ಕೆಡೆನುಡಿಯುವಾಗ ಆ ನುಡಿಯ ಅಧಮತೆಯನ್ನು ಬಸವಾದಿ ಶಿವಶರಣರು ಅಲ್ಲಗಳೆದರು.
ಅಪ್ಪನು ನಮ್ಮ ಮಾದಾರ ಚನ್ನಯ್ಯ,
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯಾ,
ಎನ್ನನೇತಕ್ಕರಿಯಿರಿ? ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-349)
ಅಪ್ಪ, ಬೊಪ್ಪ, ಅಣ್ಣ ಎಂತಹ ಸೌಜನ್ಯದ ನುಡಿಗಳಿವು! ವ್ಯಕ್ತಿ ಗೌರವ ನೀಡಿ ಅವರನ್ನು ತಲೆ ಎತ್ತಿ ನಡೆಯುವಂತೆ ಬಸವ ಸಂಸ್ಕೃತಿ ಆಚಾರ-ವಿಚಾರಕ್ಕೆ ಬಹುದೊಡ್ಡ ಕೊಡುಗೆ. ಏಕೆಂದರೆ ಮೇಲ್ವರ್ಗದವರಿಗೆ ತಾವು ಶೋಷಣೆ ಮಾಡಿದ ಪಾಪಪ್ರಜ್ಞೆ ಕಾಡಿದರೆ ಶೋಷಿತರಿಗೆ ಸಾಮಾಜಿಕ ಗೌರವ-ಸ್ಥಾನಮಾನ ಸಿಕ್ಕಾಗ ಜಾಗೃತ ಪ್ರಜ್ಞೆ ಬರಬೇಕು. ಇವರೆಡನ್ನೂ 12 ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದರು. ತಾವು ಜಾತಿಯಿಂದ ಶ್ರೇಷ್ಠರಾಗಿದ್ದಾಗ್ಯೂ ತಮ್ಮವರಿಂದಾದ ಶೋಷಣೆಯ ಆ ಪಾಪಪ್ರಜ್ಞೆಯಿಂದಲೆ ಎನ್ನನ್ನು ಏಕೆ ಅರಿಯಿರಿ? ಎಂದು ಪ್ರಶ್ನಿಸಿಕೊಳ್ಳುತ್ತಾ ಕೆಳವರ್ಗದವರಿಗೆ ಜಾಗೃತ ಪ್ರಜ್ಞೆ ಮೂಡಿಸಿದ್ದೇ ಬಸವಣ್ಣನವರು ನಡೆದು ತೋರಿದ ಆಚಾರ-ವಿಚಾರ. ಅದ್ದರಿಂದಲೇ ಬಸವಣ್ಣನವರು ಶರಣರಾದ ಮಾದಾರ ಚನ್ನಯ್ಯನವರನ್ನು, ಡೋಹಾರ ಕಕ್ಕಯ್ಯನವರನ್ನು, ಹಡಪದ ಅಪ್ಪಣ್ಣನವರನ್ನು, ಮಡಿವಾಳ ಮಾಚಿದೇವರನ್ನು, ಅಂಬಿಗರ ಚೌಡಯ್ಯನವರನ್ನು ನಿಜ ಶರಣರೆಂದು ತುಂಬಾ ಗೌರವ ನೀಡಿದ್ದರು. ಸಂಬೋಳಿ ಶಿವನಾಗಿದೇವನನ್ನು ಎತ್ತಿ ಅಪ್ಪಿಕೊಂಡು ಸಂತೈಸಿದ್ದು ನೀವೆಲ್ಲರೂ ನನ್ನ ಆಪ್ತಬಂಧುಗಳು ಎಂದು ಕರೆದದ್ದು, ಅವರ ಓಣಿಗೆ ಹೋಗಿ ಸಹ ಭೋಜನ ಮಾಡಿದ್ದು ಇವಲ್ಲವೇ ನಿಜವಾದ ಆಚಾರ-ವಿಚಾರಗಳು!
ಬಸವಾದಿ ಶಿವಶರಣರ ಆಚಾರದ ಹಿಂದಿನ ವಿಚಾರ ಶ್ರೇಣಿಕೃತ ವ್ಯವಸ್ಥೆಯನ್ನೇ ಪ್ರಶ್ನಿಸಿ ಅದನ್ನು ಒಡೆಯುವ ಪ್ರಯತ್ನ ಮಾಡಿತು. ಬಡವ-ಬಲ್ಲಿದ, ಹೆಣ್ಣು–ಗಂಡು, ಉಚ್ಛ-ನೀಚ ಜಾತಿಯೆಂಬ ಶ್ರೇಷ್ಠ-ಕನಿಷ್ಠತೆಯ ಗೋಡೆ ಒಡೆದದ್ದೇ ಬಸವಾದಿ ಶಿವಶರಣರ ಜೀವಿತಾವಧಿಯ ಆಚಾರ–ವಿಚಾರ.
ಏನ ಬಂದಿರಿ, ಹದುಳಿದ್ದೀರಿ ಎಂದಡೆ
ನಿ[ಮ್ಮೈ]ಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಶಿರ, ಹೊಟ್ಟೆಯೊಡೆಯುವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-241)
ಇವು ಸಾಮಾನ್ಯವಾದ ಆಚಾರಗಳು. ಗುಣಗಳೇ ಇಲ್ಲದ ಮೇಲೆ ಅಂತಹವರಿಗೆ ಮೂಗ ಕೊಯ್ಯದೇ (ಶಿಕ್ಷಿಸದೆ) ಬಿಡುವನೇ? ಎಂಬಲ್ಲಿ ಮಾನವೀಯತೆಯು ಸಿರಿವಂತಿಕೆಯಲ್ಲಿ ಕಾಣಬೇಕು. ಇಲ್ಲದಿದ್ದರೆ ಅದು ನಾಯಿಯ ಮೊಲೆಯ ಹಾಲಿನಂತೆ ಆಗುವುದೆಂಬ ಸದಾಚಾರದ ವಿಚಾರಗಳಿವು.
ತನು ಮನ ಧನವ ಹಿಂದಿಕಿಕೊಂಡು,
ಮಾತಿನ ಬಣಬೆಯ ಮುಂದಿಟ್ಟುಕೊಂಡು,
ಒಳಲೊಟ್ಟಿಯ ನುಡಿವವರು ನೀವೆಲ್ಲರೂ ಕೇಳಿರೆ,
ತಲಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ
ಗುರಿಯ ತಾಗಬಲ್ಲುದೆ?
ಮಾಯಾಪಾಶವ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-55/ವಚನ ಸಂಖ್ಯೆ-202)
ಆಚಾರವೆಂದರೆ ಕೇವಲ ಮಾತಿನ ಮಂಟಪ ಕಟ್ಟುವುದಲ್ಲ. ಆಚಾರವೆಂದರೆ ಮಾಯಾಪಾಶ ಹರಿದುಕೊಂಡು ಮನದ ಸಂಕುಚಿತತೆ ನೀಗುವುದೇ ನಿಜವಾದ ಆಚಾರ. ತನು, ಮನ, ಧನದಿಂದ ಸಮಾಜ ಶಿವನ ಜಂಗಮರ ಸೇವೆ ಮಾಡುವುದೇ ಶಿವಶರಣರ ದೃಷ್ಟಿಯಲ್ಲಿ ನಿಜವಾದ ಆಚಾರವಾಗಿದೆ.
ಶಿವಶರಣರ ದೃಷ್ಟಿಯಲ್ಲಿ ಡಂಬಾಚಾರದ ಪೂಜೆ ನಿಜವಾದ ಆಚಾರವಲ್ಲ.
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಹೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು, ತಂಬುಲಗೊಂಡು ಹೋಹುದಲ್ಲ,
ತನು ಮನ ಧನವ ಸಮರ್ಪಿಸದವರ
ಕೂಡಲಸಂಗಮದೇವರೆಂತೊಲಿವ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-56/ವಚನ ಸಂಖ್ಯೆ-205)
ರುದ್ರಾಕ್ಷಿ, ವಿಭೂತಿ, ಬಾಯಲ್ಲಿ ಮಂತ್ರ ಇಂತಹ ತೋರಿಕೆಯ ಲಾಂಛನಗಳು, ಆಡಂಬರದ ಪೂಜೆ, ಆವೇಶ ಇವುಗಳ್ಯಾವುವು ಪೂಜಾಚರಗಳೇ ಅಲ್ಲಾ. ತನು, ಮನ, ಧನ ಸವೆಸದೇ ತೋರಿಕೆಯ ಪೂಜೆಗೆ ಶಿವಶರಣರು ಇಂಬುಗೊಡಲಿಲ್ಲ. ನಿಜ ಮನಸ್ಸಿನಿಂದ ಮಾಡುವ ಪೂಜೆಯಲ್ಲಿ ಆಚಾರವೂ ಇದೆ, ವಿಚಾರವೂ ಇದೆ ಎಂಬುದನ್ನು ಶಿವಶರಣ – ಶರಣೆಯರು ನಡೆದು ತೋರಿದರು. ಜೇಡರ ದಾಸಿಮಯ್ಯನವರಂತೂ ಅದನ್ನು ಕಠೋರವಾಗಿಯೇ ಖಂಡಿಸುತ್ತಾರೆ.
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ.
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ! ರಾಮನಾಥಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-287/ವಚನ ಸಂಖ್ಯೆ-824)
ಬೆಕ್ಕು-ಇಲಿಯ ರೂಪಕದ ಮೂಲಕ ಆಚಾರದ ನಿಜವಾದ ವಿಚಾರವನ್ನು ಜೇಡರ ದಾಸಿಮಯ್ಯನವರು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗಾದರೆ ಶಿವಶರಣರ ದೃಷ್ಟಿಯಲ್ಲಿ ಆಚಾರ-ವಿಚಾರಗಳು ಯಾವವು ಎಂದರೆ;
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು,
ಈ ತ್ರಿವಿಧವ ಹೊರಗು ಮಾಡಿ,
ಹರೆಯ ಹೊಯಿಸಿ,
ಕುರುಹ ಪೂಜಿಸುವ ಗೊರವರ ಮೆಚ್ಚ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-56/ವಚನ ಸಂಖ್ಯೆ-206)
ಶಿವಶರಣ ದೃಷ್ಠಿಯಲ್ಲಿ ತನವು ಗುರುವಿನ ಸೇವೆಗೆ ಸವೆಯಬೇಕು. ಮನವು ಲಿಂಗಪೂಜೆಗೆ ಸವೆಯಬೇಕು. ಧನವು ಜಂಗಮ ಸೇವೆಗೆ ಸವೆಯಬೇಕು. ಹೀಗೆ ತನು, ಮನ, ಧನವು ಗುರು-ಲಿಂಗ–ಜಂಗಮಕ್ಕೆ ಸಮರ್ಪಣೆ ಮಾಡುವುದೇ ಆಚಾರ, ಅದೇ ವಿಚಾರ. ಈ ತ್ರಿವಿಧ ಸೇವೆಯನ್ನು ಬಿಟ್ಟು ಕೇವಲ ಕುರುಹ ಪೂಜಿಸಿದರೆ ಅದು ಬಾಹ್ಯದ ಆಚರಣೆಯಾಗುವುದೇ ವಿನಃ ಅಂತರಂಗದ ಅರಿವು ಆಗುವುದಿಲ್ಲ ಎಂಬುದಾಗಿದೆ. ಶಿವಶರಣ ದೃಷ್ಟಿಯಲ್ಲಿ ಅಹಂಕಾರ ನಿರಸನವೇ ಆಚಾರ, ಅದೇ ಶುದ್ಧ ವಿಚಾರವೂ ಆಗಿದೆ. ಆ ಅಹಂಕಾರದ ಆಚಾರವನ್ನು ತುಂಬಾ ನಿಷ್ಠುರವಾಗಿ ಅವರು ಖಂಡಿಸುತ್ತಿದ್ದರು. ಅಂತಹ ಒಂದು ವಚನ ಬಸವಣ್ಣನವರದು ಹೀಗಿದೆ;
ಹತ್ತು ಮತ್ತರ ಭೂಮಿ, ಬತ್ತದ ಹಯನು,
ನಂದಾದೀವಿಗೆಯ
ನಡೆಸಿಹೆವೆಂಬರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ವಿಜ, ಜರಾಮುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೋ?
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೆ ಆಯಿತ್ತು, ಎನ್ನಿಂದಲೇ ಹೋಯಿತ್ತು ಎಂಬುವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-61/ವಚನ ಸಂಖ್ಯೆ-225)
ಆಚಾರ ಎಂದರೆ ಬಾಹ್ಯದಲ್ಲಿ ತೋರುಂಬ ಲಾಭವಲ್ಲ. ಪ್ರಚಾರ ಗಿಟ್ಟಿಸಿಕೊಳ್ಳುವುದೂ ಅಲ್ಲ. ನನ್ನಿಂದಲೇ ಆಗಿದ್ದು, ನನ್ನಿಂದಲೇ ಎಲ್ಲವೂ ಎಂಬುದು ಆಚಾರವಲ್ಲ. ನಾನು ಮಾಡಿದ್ದೇನೆ ಎನಲು ನಾನು ತಂದಿರುವುದಾದರೂ ಏನನ್ನು? ಎಂಬ ವಿಚಾರ ನಮಗಿರಬೇಕುಲ್ಲವೇ? ಅದಕ್ಕೆ ಪ್ರಭುದೇವರು ಬಹಳ ಸ್ವಷ್ಟ ಉತ್ತರ ನೀಡಿದ್ದಾರೆ;
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ,
ಕಾಮಿನಿ ನಿನ್ನವಳಲ್ಲ_
ಅವು ಜಗಕ್ಕಿಕ್ಕಿದ ವಿಧಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪ ದಿವ್ಯರತ್ನವ ಕೆಡಗುಡದೆ,
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ, ಎಲೆ ಮನವೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-535/ವಚನ ಸಂಖ್ಯೆ-1412)
ಎನ್ನುವ ಮಾತುಗಳಲ್ಲಿ ಈ ಭೂಮಿ, ನೀರು, ಗಾಳಿ, ಸಂಪತ್ತು, ಇವ್ಯಾವು ನಾವು ತಂದಿದ್ದೂ ಅಲ್ಲಾ, ಅವು ನಮ್ಮವೂ ಅಲ್ಲಾ. ಇವೆಲ್ಲಾ ನಾವು ಹುಟ್ಟುವ ಮೊದಲೇ ಇದ್ದಂತಹವುಗಳು. ನಮ್ಮದೆನ್ನುವಂತಹದ್ದು ಏನಾದರೂ ಇದ್ದರೆ ಅದು ನಾವು ಸಂಪಾದಿಸಿದ ಜ್ಞಾನ, ಅರಿವು ಎಂಬುದು.
ಶಿವಶರಣರ ದೃಷ್ಟಿಯಲ್ಲಿ ಬಹುದೇವೋಪಾಸನೆಗಿಂತ ಇಷ್ಟಲಿಂಗ ಪೂಜೆಯೇ ನಿಜವಾದ ಆಚಾರ-ವಿಚಾರವಾಗಿತ್ತು. ಹೀಗಾಗಿ ಶರಣರು ಮೌಢ್ಯಯುತವಾದ ಪೂಜೆಯನ್ನು, ಬಹುದೇವೊಪಾಸನೆಯನ್ನು ಖಂಡಿಸಿದರು.
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲುನಾರಿ ದೈವ, ಕಾಣಿರೋ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-562)
ಪ್ರಕೃತಿಯಲ್ಲಿ ದೇವರಿದ್ದಾನೆ ಎಂಬ ಭಾವ ಒಳ್ಳೆಯದೇ, ಹಾಗಂತ ಕಂಡ ಕಂಡದ್ದನ್ನೆಲ್ಲಾ ಪೂಜಿಸಿದರೆ ಪೂಜೆಯ ಅರ್ಥವೆ ಕೆಡುವುದು. ಇಂತಹ ವಿಚಾರವಿಲ್ಲದ ಆಚಾರವನ್ನು ಶರಣರು ಒಪ್ಪಲಿಲ್ಲ. ಇಂತಹ ಕುರುಡು ನಂಬಿಕೆಯಿಂದ ಹೊರ ಬರಲು ಇಷ್ಟಲಿಂಗವನ್ನು ನೀಡಿದರು. ಬಸವಣ್ಣನವರು ಹೀಗೆ ಇಷ್ಟಲಿಂಗವನ್ನು ಕರಸ್ಥಲಕ್ಕೆ ನೀಡಿ ಲಿಂಗಾಂಗ ಸಾಮರಸ್ಯದ ಆತ್ಮಾನಂದವನ್ನು ಹೊಂದುವ ಆಚಾರವನ್ನು ಹೇಳಿಕೊಟ್ಟರು. ದೇಹವನ್ನೇ ದೇವಾಲಯವನ್ನಾಗಿ ಮಾಡಿದರು. ಕರಸ್ಥಲದ ಲಿಂಗ, ಪ್ರಾಣಲಿಂಗ, ಭಾವಲಿಂಗವಾಗುವ ಆಚಾರವನ್ನು ಜೊತೆಗೆ ವಿಚಾರವನ್ನು (ಅರಿವು) ಕಲಿಸಿಕೊಟ್ಟರು. ಇಷ್ಟಲಿಂಗದಿಂದ ದೇವರು–ದೇವಾಲಯದ ಹಂಗನ್ನು ಬಿಡಿಸಿದರು. ಇಷ್ಟಲಿಂಗವನ್ನು ಬಿಟ್ಟು ಬೆಟ್ಟದ (ಸ್ಥಾವರ) ಲಿಂಗಕ್ಕೆ ಹೋಗುವ ಅಜ್ಞಾನಿಗಳನ್ನು ತಮ್ಮ ಅರಿವಿನ ನುಡಿಗಳಿಂದ ಎಚ್ಚರಿಸಿದರು.
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-38/ವಚನ ಸಂಖ್ಯೆ-92)
ಕಟ್ಟಿದ ಲಿಂಗ (ಇಷ್ಟಲಿಂಗ) ಪೂಜೆಯೇ ಅರಿವಿನ ಮೂಲ ಎಂಬ ವಿಚಾರವನ್ನು ಶಿವಶರಣರು ಸ್ವಪಷ್ಟಪಡಿಸಿದರು. ಕಟ್ಟಿದ ಲಿಂಗಕ್ಕೆ ತುಂಬಾ ಸರಳವಾದ ಪೂಜೆ ಮಾಡಿದರೂ ಸಾಕು, ಆ ಲಿಂಗದ ಆಚರಣೆ ತುಂಬಾ ಸರಳವಾದುದು ಎಂಬುದನ್ನು ತಿಳಿಸುತ್ತಲೇ ಕುರಿ ಬಲಿ, ಪ್ರಾಣಿ ಬಲಿಯಂತಹ ಅನಿಷ್ಟು ಆಚರಣೆಗಳನ್ನು ಸಮಾಜದಿಂದ ಉಚ್ಛಾಟಿಸು ವಿಚಾರದ ಜೀಜವನ್ನು ಬಿತ್ತಿದರು.
ಮೊರನ ಗೋಟಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿಸತ್ತು ಕಾವುದೆ ಹರ ಮುಳಿದವರ?
ಕುರಿ ಬೇಡ, ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-150/ವಚನ ಸಂಖ್ಯೆ-560)
ಹೀಗೆ ಬಸವಾದಿ ಶಿವಶರಣ – ಶರಣೆಯರು ನಿಜವಾದ ಆಚಾರ-ವಿಚಾರಗಳನ್ನು ತಮ್ಮ ವಚನಗಳ ಮೂಲಕ ತಿಳಿಯಪಡಿಸಿದರು. ಶರಣ ಸಿದ್ಧಾಂತ ನಿಜವಾದ ಆಚಾರ-ವಿಚಾರಗಳ ಮೂಲ ತತ್ವಗಳು ಗುರು-ಲಿಂಗ-ಜಂಗಮ ಪೂಜೆ ಎಂದು ಹೇಳುತ್ತಾ;
- ವ್ಯಕ್ತಿ ಗುರುವಾಗಬೇಕೆಂದರೆ ಅವನು ಜ್ಞಾನಿ ಆಗಬೇಕು (ಇದು ಆಚಾರ).
- ಲಿಂಗವಾಗಬೇಕು ಎಂದರೆ ಜ್ಞಾನವನ್ನು ಕ್ರಿಯೆಯಲ್ಲಿ ತರಬೇಕು (ಇದು ಆಚಾರ).
- ಜಂಗಮವಾಗಬೇಕು ಎಂದರೆ ಜ್ಞಾನ+ಕ್ರಿಯೆ+ಪ್ರಸಾರ ಮಾಡಬೇಕು (ಇದು ಆಚಾರ+ವಿಚಾರ)
ಶಿವಶರಣರ ಆಚಾರ-ವಿಚಾರಗಳಿಗೆ ಭಕ್ತಿಯೇ ಭೂಮಿಕೆ ಆಗಿದೆ. ವ್ಯಕ್ತಿಯಲ್ಲಿ ಭಕ್ತಿ ನೆಲೆಗೊಳ್ಳಲು ಬೇಕಾಗಿರುವುದು ಶ್ರದ್ಧೆ, ನಿಷ್ಟೆ, ಅವಧಾನ, ಅನುಭಾವ, ಆನಂದ, ಸಮರಸಗಳಂತಹ ಆಚಾರಗಳು ವಿಚಾರ (ಅರಿವು) ಗಳಾಗಿ ಮುಂದೆ ವ್ಯಕ್ತಿತ್ವ ವಿಕಾಸಕ್ಕೆ ನಾಂದಿಯಾಗುತ್ತವೆ.
ಈ ವಿಕಾಸದ ಆಚಾರ-ವಿಚಾರಗಳೆ ಷಟ್‌ಸ್ಥಲಗಳು. ಹೇಗೆಂದರೆ ಭಕ್ತ, ಮಹೇಶ ಸ್ಥಲದಲ್ಲಿ ಗುರು ಜ್ಞಾನಿ ಆಗುತ್ತಾನೆ. ಪ್ರಸಾದಿ, ಪ್ರಾಣಲಿಂಗಿಸ್ಥಳದಲ್ಲಿ ಜ್ಞಾನ, ಕ್ರಿಯಾ ಸಾಮರಸ್ಯ ಹೊಂದಿ ಲಿಂಗ ಆಗುತ್ತಾನೆ. ಶರಣ, ಐಕ್ಯ ಸ್ಥಲದಲ್ಲಿ ಜಂಗಮನಾಗಿ ಸಮರ್ಪಣಾ ಭಾವಿಯಾಗುತ್ತಾನೆ. ಇದನ್ನು ಡಾ. ಎಮ್. ಎಮ್. ಕಲಬುರ್ಗಿಯವರು “ಲಿಂಗವಿಡಿದು ಲಿಂಗಸಿದ್ಧಿ” ಎಂದಿದ್ದಾರೆ.
ಶಿವಶರಣರು ನಡೆದು ತೋರಿದ ಐದು ಆಚಾರಗಳು (ಪಂಚಾಚಾರ) ಮನುಕುಲದ ಉದ್ಧಾರದ ಬೀಜ ಮಂತ್ರಗಳಾಗಿವೆ. ಅವುಗಳೇ:
- ಲಿಂಗಾಚಾರ.
- ಸದಾಚಾರ.
- ಶಿವಾಚಾರ.
- ಗಣಾಚಾರ.
- ಭೃತ್ಯಾಚಾರ.
ಇಷ್ಟಲಿಂಗ ಪೂಜೆ, ಲಿಂಗಾಚಾರ, ಲಿಂಗ ಪೂಜಿಸುತ್ತಾ ಜನ-ಮನ ಒಪ್ಪಿತವಾಗಿ ಆಚಾರವಂತನಾಗುವುದೇ ಸದಾಚಾರ, ತಾನೇ ಶಿವನಾಗುವ ಆಚಾರ ಶಿವಾಚಾರ, ಶಿವನಿಂದೆ ಕೇಳದಿರುವುದೇ ಗಣಾಚಾರ, ಲಿಂಗಕ್ಕೆ ನಿಷ್ಠವಾಗಿರುವುದು ಭೃತ್ಯಾಚಾರ.
- ಲಿಂಗಾಚಾರವೆಂದರೆ _ ಏಕದೇವೊಪಾಸನೆ.
- ಸದಾಚಾರವೆಂದರೆ – ದಾಸೋಹಿಯಾಗಿ, ಕಾಯಕ ಜೀವಿ ಆಗಿರುವುದು.
- ಶಿವಾಚಾರವೆಂದರೆ – ಎಲ್ಲರೂ ಶಿವಸಂಜಾತರೆಂಬ ಭಾವ.
- ಗಣಾಚಾರವೆಂದರೆ – ಶರಣ ಸಿದ್ಧಾಂತ, ತತ್ವಗಳ ಬಗ್ಗೆ ನಿಷ್ಠೆ.
- ಭೃತ್ಯಾಚಾರವೆಂದರೆ – ಲಿಂಗಭಕ್ತರ (ಶರಣರ) ಸೇವೆ.
ಬಸವಾದಿ ಶಿವಶರಣರು ಕೊಟ್ಟ ಆಚಾರಗಳು ಮಾನವರ ಬದುಕನ್ನೇ ಹಸನು ಮಾಡುತ್ತವೆ.
- ಲಿಂಗಾಚಾರದಿಂದ ಅಂಗದ ಶುದ್ಧಿ.
- ಸದಾಚಾರದಂದ ಮನದ ಶುದ್ಧಿ.
- ಶಿವಾಚಾರದಿಂದ ಧನದ ಶುದ್ಧಿ.
- ಗಣಾಚಾರದಿಂದ ನಡೆಯ ಶುದ್ದಿ.
- ಭೃತ್ಯಾಚಾರದಿಂದ ನುಡಿಯಶುದ್ಧಿ.
ಹೀಗೆ ಪಂಚಾಚಾರಗಳಿಂದ ಜಡದೇಹವು ಚೈತನ್ಯಮಯವಾಗಿ ಶುದ್ಧವಾಗುವುದು ಎಂಬ ವಿಚಾರಗಳಿಂದ ಶಿವಶರಣರ ಆಚಾರಗಳು ನಡೆದುಕೊಂಡು ಬಂದಿವೆ. ಇವುಗಳಿಗೆ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳು ಜೊತೆಯಾಗಿ ದೇಹಕ್ಕೆ ರಕ್ಷಾ ಕವಚವಾದವು. ಪಂಚಾಚಾರಗಳು ಮಾನವರ ಸನ್ನಡತೆಗೆ ದಾರಿಯಾದವು, ಷಟ್‌ಸ್ಥಲಗಳು ಭಕ್ತಿ, ಜ್ಞಾನ, ಕ್ರಿಯೆಗಳ ಸಂಗಮವಾದವು. ಸಾಕಷ್ಟು ವಚನಗಳ ಆಧಾರದಿಂದ ಬಸವಾದಿ ಶಿವಶರಣರು ಕಟ್ಟಿ ಕೊಟ್ಟ ಆಚಾರ–ವಿಚಾರಗಳ ಚಿಂತನೆ ಮಾಡಬಹುದು. ಈ ಚಿಂತನೆಗೆ ಕೊನೆಯೆಂಬುದಿಲ್ಲ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಪರಾಮರ್ಶನ ಕೃತಿಗಳು:
- ಬಸವ ಯುಗದ ವಚನ ಮಹಾ ಸಂಪುಟಗಳು: ಸಂ. ಡಾ. ಎಮ್. ಎಮ್. ಕಲಬುರ್ಗಿ.
- ವಚನ ಸಾಹಿತ್ಯ ಸಮೀಕ್ಷೆ: ಡಾ. ವಿ. ಜಿ. ಪೂಜಾರ.
- ಬಸವ ಸಾಗರ-ಸ್ಮರಣ ಗ್ರಂಥ: ಸಂ. ಡಾ. ಈಶ್ವರಯ್ಯಮಠ.
- ವಚನ ಬೆಳಕು: ಶ್ರೀ. ರಂಜಾನ್ ದರ್ಗಾ.
- ಷಟ್ ಸ್ಥಲ ಸಿದ್ಧಾಂತಗಳು: ಡಾ. ವಿಜಯಕುಮಾರ ಕಮ್ಮಾರ.
- ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು: ಡಾ. ವಿಜಯಕುಮಾರ ಕಮ್ಮಾರ.
- ಶರಣರು ನೀಡಿದ ಬೆಳಕು: ಡಾ. ಎಚ್. ಎಮ್. ಮರುಳಸಿದ್ಧಯ್ಯ.
- ಮತ್ತೆ ಕಲ್ಯಾಣ: ಸಂ. ಡಾ. ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.
- ಸಾರ್ಥಕ ಬದುಕು ಸಂಪುಟ 1-2: ಸಂ. ಡಾ. ಅಮರೇಶ ಯತಗಲ್ಲ.
- ಬಸವಧರ್ಮದ ವಿಶ್ವ ಸಂದೇಶ: ಶ್ರೀ. ರಂಜಾನ್ ದರ್ಗಾ.
- ವಚನ ಸಂಜೀವಿನಿ: ಪೂಜ್ಯ ಶ್ರೀ. ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in | admin@vachanamandara.in