
ಅರಿವರತು ಮರಹು ನಷ್ಟವಾದರೆ ಭಕ್ತ
ಆಚಾರವರತು ಅನಾಚಾರ ನಷ್ಟವಾದರೆ ಜಂಗಮ
ಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿ
ಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿ
ಪರಿಣಾಮವರತು ಪರಮಸುಖಿಯಾದರೆ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯ.
ಈ ವಚನವನ್ನು ಸಹಸ್ರ ಬಾರಿ ಬರೆದರೂ ನನಗೆ ಬೇಸರವಿಲ್ಲ, ಕಾರಣ ಅದು ಹುದುಗಿರಿಸಿಕೊಂಡ ಅಪಾರವಾದ ಸಿರಿ ಅಂಥದ್ದು.
ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿರುವ ಬಸವ ಪುರಾಣದಲ್ಲಿ ಭಾಗಿಯಾಗಿದ್ದೆ. ಬಸವಣ್ಣ ಮತ್ತು ಪುರಾಣ ಇವೆರಡಕ್ಕೂ ಯಾವ ಸಂಬಂಧ? ಭೀಮ ಕವಿ ಬಿಂಬಿಸಿದ ಪವಾಡಗಳ ಸರಮಾಲೆ ಅದೆಷ್ಟು ವರ್ತಮಾನಕ್ಕೆ ಪ್ರಸ್ತುತ? ಮುಂತಾಗಿ ನನ್ನ ಮನಸ್ಸು ಚಿಂತಿಸತೊಡಗಿತ್ತು. ಹಾಗೆಯೇ ನಾವು ಚಿಕ್ಕವರಿರುವಾಗ ನಡೆಯುತ್ತಿದ್ದ ನಾಲ್ಕು ತಿಂಗಳುಗಳ ಕಾಲದ ಬಸವ ಪುರಾಣ ಸಂಭ್ರಮದ ದಿನಗಳು ಮನಸ್ಸಿನ ಕಣ್ಣ ಮುಂದೆ ಕುಣಿಯತೊಡಗಿದ್ದವು. ಅಂದಂದಿನ ಪುರಾಣದ ಘಟನೆಗಳು ಈ ಕ್ಷಣಕ್ಕೆ ಪ್ರತ್ಯಕ್ಷ ನಡೆಯುತ್ತಿರುವ ಹಾಗೆ ಬಿಂಬಿಸುವ ಆ ಚಿತ್ರಣ ಅಪರೂಪದ್ದು.
ಬಸವ ಅಂದ್ರೆ ಅಲ್ಲಿ ಎಲ್ಲವೂ ರೋಕ್ ವ್ಯವಹಾರ. ಉದ್ರಿ ಇಲ್ಲ ಇಲ್ಲಿ. ನೀವು ಉಚ್ಛರಿಸಿದ ಪ್ರತಿ ಶಬ್ದವೂ ಇಲ್ಲಿ ಜೀವಂತವಾಗಿ ಪ್ರತ್ಯಕ್ಷವಾಗಲಿರುವುದು. ಈ ನಿಟ್ಟಿನಲ್ಲಿ ನನ್ನ ಈ ದಿನದ ಸಿಂಹಾವಲೋಕನ ಮಾಡಿಕೊಳ್ಳುತ್ತಾ … … … … …
ನನ್ನ ವಾಸ್ತವ್ಯ ಇಂದು ಬೆಳಗಾವಿ ಹುಕ್ಕೇರಿ ತಾಲೂಕಿನ ಗೌಡವಾದ ಗ್ರಾಮದಲ್ಲಿದೆ. ಇಲ್ಲಿ ಮಾರ್ಕಂಡೇಯ ನದಿ ಹರಿದಿದೆ. ಆಚೆ ದಡದಲ್ಲಿ ಹೊಳೆಮ್ಮ ದೇವಿ, ಈಚೆ ದಡದಲ್ಲಿ ಸಿದ್ಧಲಿಂಗೇಶ್ವರ. ಬಹಳ ಚಿಕ್ಕಂದಿನಿಂದ ನಾನು ಈ ಎರಡೂ ಕ್ಷೇತ್ರಗಳನ್ನು ಗಮನಿಸಿಕೊಂಡು ಬಂದಿದ್ದೇನೆ. ನನ್ನ ಪೂರ್ವಾಶ್ರಮದ ತಾಯಿಯ ತವರು ಮನೆ ಇರೋದೇ ಗೌಡವಾದದಲ್ಲಿ, ಹೀಗಾಗಿ ಬಹುಶಃ ಹಾಲುಗಲ್ಲದ ಹಸುಳೆಯಾಗಿದ್ದಾಗಿನ ನನ್ನ ಮೊದಲ ಹೆಜ್ಜೆ ಗುರುತುಗಳು ಈ ನೆಲದಲ್ಲೆಲ್ಲಾ ಹರಿದಾಡಿವೆ ಎನ್ನಲಡ್ಡಿಯಿಲ್ಲ.
ಈ ಊರಿನ ವಿಚಿತ್ರವೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳ ಒಕ್ಕೂಟದ ನಡುವೆ ಸಿದ್ಧಲಿಂಗೇಶ್ವರ ವಿರಾಜಮಾನವಾಗಿರುವುದು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಒಂದೂ ಜ್ಯೋತಿರ್ಲಿಂಗವಿಲ್ಲ. ಹಾಗೆಯೇ ವಿಷ್ಣುವಿನ ಹತ್ತು ಅವತಾರದ ಕ್ಷೇತ್ರಗಳು ಅತ್ಯಂತ ವಿರಳ. ನನ್ನ ಪ್ರಕಾರ ಇಲ್ಲಿ ಹನುಮಂತನಾದಿಯಾಗಿ ಬಸವಾದಿ ಪ್ರಮಥಗಣಂಗಳೆಲ್ಲರೂ ಸದೈವ ಬಾಗಿದ ತಲೆ ಮುಗಿದ ಕೈಯ್ಯಾಗಿ ತಮ್ಮ ಆರಾಧ್ಯ ದೈವಂಗಳನ್ನು ಹೃದಯದಲ್ಲಿರಿಸಿಕೊಂಡು ಆರಾಧಿಸಿರುವುದರಿಂದಲೂ ಜಂಗಮವೇ ಲಿಂಗವೆಂಬ ಭಾಷೆ ಚಲಾವಣೆಯಲ್ಲಿ ಇರುವುದರಿಂದಲೂ ಇಲ್ಲಿ ಸ್ಥಾವರ ಕ್ಷೇತ್ರಗಳಿಗೆ ಇಂಬಿಲ್ಲವಿರಬೇಕು. ಆದರೆ ಬಹು ಕಾಲದಿಂದ ಅರೆಬರೆಯಾಗಿ ಉಳಿದಿದ್ದ ಹನ್ನೆರಡು ಜ್ಯೋತಿರ್ಲಿಂಗಗಳ ಕಟ್ಟಡ ಈಗಷ್ಟೇ ಪೂರ್ತಿಯಾಗಿ ಪೂಜೆಗೆ ಅಣಿಯಾಗಿ ನಿಂತಿದೆ.
ವೈಯಕ್ತಿಕವಾಗಿ ನಾನೆಷ್ಟು ಶುದ್ಧವಾಗಿರಬೇಕೆಂದರೂ ಗಾಳಿ ಬೀಸಿ ಎಲ್ಲಿಂದಲೋ ಕಸ ಬಂದು ಬೀಳುತ್ತಲೇ ಇರುತ್ತದೆ. ಇದಕ್ಕಾರು ಹೊಣೆ? ಸಮಾಜದಲ್ಲಿ ಎಂತೆಂಥ ಸವಾಲು ಎದುರಿಸಬೇಕಾಗಿ ಬರುತ್ತದೆ ಅಂತ ಹೇಳುವುದಕ್ಜಾಗಲ್ಲ. ಯಾವುದಕ್ಕೂ ಅವರಿವರನ್ನು ಹೊಣೆಯಾಗಿಸದೆ ಜವಾಬ್ದಾರಿಯಿಂದ ಪರಿಸ್ಥಿತಿ ನಿಭಾಯಿಸುವುದು ಇದೆಯಲ್ಲಾ ಅದನ್ನೇ ಪ್ರಸಾದ ಅಂತಾರೆ. ಅಂಥದ್ದೇ ಒಂದು ಪ್ರಸಾದ ರೂಪಿ ಘಟನೆ.
ಬಸವ ಪುರಾಣದ ಈ ಸಮಯದಲ್ಲಿ ಇಂದು ಈ ಹನ್ನೆರಡು ಜ್ಯೋತಿರ್ಲಿಂಗಗಳ ಬಿಲ್ವಾರ್ಚನೆಯ ಪ್ರಸಂಗಕ್ಕೆ ನಾನು ಸಾಕ್ಷಿಯಾಗಬೇಕಾಗಿ ಬಂದಿತ್ತು. ಹಾಗೆ ನೋಡಿದರೆ ಪುರಾಣ ಅನ್ನುವ ಪದಕ್ಕೂ ಬಸವನಿಗೂ ಯಾವ ಸಂಬಂಧ ಅನ್ನೋದೇ ಒಗಟಾಗಿರುವ ಸಂದರ್ಭದಲ್ಲಿ ಕರದಿಷ್ಟಲಿಂಗಕ್ಕೂ ಜ್ಯೋತಿರ್ಲಿಂಗಕ್ಕೂ ತಾಳ ಮೇಳ ಹೊಂದಿಸಿಕೊಂಡು ಹೆಜ್ಜೆ ಹಾಕಬೇಕಾದ ಸವಾಲು ಬೇರೆ.
ಒಂದಲ್ಲ ಎರಡಲ್ಲ ಹನ್ನೆರಡು ಜ್ಯೋತಿರ್ಲಿಂಗಗಳ ಮೇಳ. ಇಲ್ಲಿ ಪುರಾಣ ಹೇಳಲು ಬಂದಿರುವ ಅಮ್ಮ ಶಾಂತಮ್ಮನವರು ನೂರೆಂಟು ಶಿವನಾಮಾವಳಿಗಳ ಹೇಳುತ್ತ ಅವರವರ ಇಷ್ಟಲಿಂಗಕ್ಕೆ ಬಿಲ್ವಾರ್ಚನೆ ಮಾಡಿಸಿದರು. ಆ ಬಳಿಕ ಆ ಬಿಲ್ವದ ನಿರ್ಮಾಲ್ಯವನ್ನು ಸಾಮಾನ್ಯವಾಗಿ ನದಿಗಳಿಗೆ ಹಾಕುವ ವಾಡಿಕೆ. ಇಲ್ಲಿ ಇವರಿಗೆ ಹನ್ನೆರಡು ಜ್ಯೋತಿರ್ಲಿಂಗಗಳ ಮೇಲೆ ವಿಸರ್ಜಿಸಲು ಹೇಳಿಕೊಡಲಾಯಿತು.
ನನ್ನ ಮನಸ್ಸು ಇವರನ್ನೇ ಹಿಂಬಾಲಿಸಿಕೊಂಡು ಹೊರಟೇ ಬಿಟ್ಟಿತು ಮತ್ತು ನಾಳೆ ನಾನು ಪೂಜಾರಿ ಬರುವ ಮೊದಲೇ ಎಲ್ಲಾ ಜ್ಯೋತಿರ್ಲಿಂಗಗಳ ಮೇಲಿನ ನಿರ್ಮಾಲ್ಯವನ್ನು ಎತ್ತಿಕೊಂಡು ಬಿಡುವ ಹೊಂಚು ಹಾಕಿರುವೆ. ಟೆಂಪಲ್ ವೇಸ್ಟ್ ನಿಂದ ಪ್ರಯೋಜನಕಾರಿ ಉತ್ಪನ್ನಗಳ ತಯಾರಿಸುವ ಹಾಗೆ ನನ್ನ ಎಂಜಿನಿಯರಿಂಗ್ ಮೈಂಡ್ ಒತ್ತಾಯಿಸುತ್ತಿದೆ. ದೇವಸ್ಥಾನಗಳಲ್ಲಿ ಕೂಡಿ ಬೀಳುವ ಇಂತಹ ಪರಿಕರಗಳ ಬಳಸಿ ಕಾಯಕ ಪ್ರಕಲ್ಪವನ್ನೇಕೆ ರೂಪಿಸಬಾರದು? ಪುರಾಣವನ್ನು ಪುಂಡರ ಗೋಷ್ಠಿ ಎಂದು ಘೋಷಿಸಿದ ಬಸವಣ್ಣನೇ ಪುರಾಣವಾಗಿ ಬಿಡುವ ಹಾಗಾಗುವುದಾದರೆ ದೇವಸ್ಥಾನಗಳನ್ನು ಸ್ಥಾವರವೆಂದೇ ವರ್ಣಿಸಿದ ಬಸವಣ್ಣನ ಕಾಯಕ ಸಿದ್ಧಾಂತವನ್ನೇಕೆ ದೇವಸ್ಥಾನಗಳ ಜೊತೆಗೆ ನಾನು ಥಳುಕು ಹಾಕಬಾರದು?
ದೇವಸ್ಥಾನ ಅಂದ್ರೆ ಅಲ್ಲಿ ದೇವರೇ ಇರಬೇಕಂತೇನೂ ಇಲ್ಲ. ಹಾಗೆಯೇ ಪುರಾಣ ಅಂದರೆ ಹಾಗೆ ನಡೆದಿದ್ದು ಅಂತೇನೂ ಅಲ್ಲ. ಒಪ್ಪಿಗೆ ತಾನೇ? ದೇವಸ್ಥಾನ ಅಂದ್ರೆ ಅಲ್ಲಿಗೆ ಬರುವವರು ತಮ್ಮನ್ನು ತಾವು ಪಿಶಾಚಿ, ಭೂತ, ರಾಕ್ಷಸ, ಪಶು, ಮಾನವ ಅಥವಾ ಶರಣ ಇವರಲ್ಲಿ ನಾನಾರು? ಅನ್ನೋದನ್ನ ಮನದ ಕನ್ನಡಿಯಲ್ಲಿ ನೋಡಿಕೊಳ್ಳಲು ಇರೋ ಒಂದು ವ್ಯವಸ್ಥೆ. ಹಾಗೆಯೇ ಪುರಾಣ ಅಂದ್ರೆ ನಿರಂತರವಾಗಿ ಎಲ್ಲರ ಬದುಕಿನಲ್ಲೂ ನಡೀತಾನೆ ಇರೋ ಅದ್ವಾನಗಳಿಗೆ ತಿರುವು ಕೊಡಬಹುದಾದ ಸಾಧ್ಯತೆಗಳ ವಿವರ ಏನಂತೀರಾ?
ಆದರೂ ನಮಗೆ ಬಸವ ಅನ್ನುವ ಪದ ಬಹಳ ಬಹಳ ಮೌಲಿಕವಾದದ್ದು. ಅದನ್ನು ನಾನು ಅಷ್ಟು ಸುಲಭವಾಗಿ ಬಳಸೋದಿಲ್ಲ. ಹಾಗೆ ಯಾರಾದರೂ ಬಳಸಿದರೆ, ಅದನ್ನು ನಾನು ಕೇಳಿಸಿಕೊಂಡರೇನೇ ನನಗೆ ರೋಮಾಂಚನವಾಗುತ್ತದೆ ಮತ್ತು ಅದು ಬರಿ ಶಬ್ದವಲ್ಲ, ಅದು ನನಗೆ ಪ್ರತ್ಯಕ್ಷ. ಈಗ ಬಸವ ಪುರಾಣ ಮತ್ತು ಜ್ಯೋತಿರ್ಲಿಂಗಗಳ ಮೇಳ ಬರಿ ಔಪಚಾರಿಕ ಪ್ರಸ್ತಾಪವಾಗಬಾರದಷ್ಟೇ ಅಂತ ಒಳಗೊಳಗೇ ಒಂದು ನೋವು, ವೇದನೆ ಜೊತೆಗೆ ಆತ್ಮ ನಿವೇದನೆಯೂ ಸೇರಿಕೊಂಡಿತ್ತು.
ಬೆಳಗಿನ ಉಪಹಾರಕ್ಕೆ ಸದಾಶಿವ ಅವರ ತೋಟಕ್ಕೆ ಕರೆ ಬಂದಿತ್ತು. ತೋಟದ ತುಂಬಾ ಬಾಳೆ ಗಿಡಗಳು. ಮಂಗಗಳು ಇವರಿಗೆ ಒಂದು ಹಣ್ಣು ತಿನ್ನಲು ಬಿಡುತ್ತಿಲ್ಲ ಅನ್ನೋ ದೂರು. ಅದಕ್ಕೆ ನಾನು ಕಾಯಿ ಇರುವಾಗಲೇ ತರಕಾರಿ ಮಾಡಿ ಬಳಸಬಾರದೇಕೆ ಅಂತ ಹೇಳುತ್ತಿದ್ದಂತೆ, ಶಿವಲಿಂಗ ಸ್ವಾಮಿಗಳು ಹಸಿ ಬಾಳೆಯ ಗುಡ್ಡೆ ತಂದು ನನ್ನ ಮುಂದಿಟ್ಟೇ ಬಿಟ್ಟರು. ಅಪ್ಪಾಸಾಬ ದೇಸಾಯಿ ಅವರು ಬಿಡದ ಮಳೆಯಲ್ಲಿ ನೆನೆದ ಕಟ್ಟಿಗೆ, ಹಸೀ ಮಣ್ಣಲ್ಲಿ ಅದು ಹೇಗೋ ಒಲೆ ಹೊತ್ತಿಸಿ ಕೊಟ್ಟೇ ಬಿಟ್ಟರು. ಅಲ್ಲಿರುವ ಒಂದೇ ಒಂದು ಪಾತ್ರೆಯಲ್ಲಿ ಬಾಳೆ ಕಟ್ ಮಾಡಿ ತುಂಬಿ ಹಬೆಯಲ್ಲಿ ಬೇಯಿಸಿದ್ದಾಯಿತು. ಚಿಕ್ಕ ಹುಡುಗಿ ಅಮೃತ ಓಡಿ ಹೋಗಿ ತೆಂಗು ತಂದು ಕೊಟ್ಳು, ಹಾಗೆಯೇ ಹೆರೆಯುವ ಮಣೆ, ಮುಚ್ಚಳ, ಉಪ್ಪು ಖಾರ ಹೀಗೇ ಎಲ್ಲ ಬಂದು ಬಿಟ್ಟಿತು.
ಮಳೆಗಾಲದಲ್ಲಿ ಹೇಗೆ ಒಲೆ ಹೊತ್ತಿಸಿದ್ರಿ ಅಂತ ನಾನು ಉದ್ಗಾರ ತಗೀತಿದ್ರೆ ಅಪ್ಪಾಸಾಬ ಅದರ ಕ್ರೆಡಿಟ್ ಎಲ್ಲಾ ನೀವು ಹೇಳಿದ ಮಂತ್ರಕ್ಕೆ ಸೇರಬೇಕು ಅನಬೇಕೆ? ಹೇ ಅಗ್ನಿ ಸ್ವರೂಪ ದೇವನೇ ನಿನ್ನ ಸಂಶೋಧಕ ಸಾಮರ್ಥ್ಯದಲ್ಲಿ ಯಾವ ಯೋಗ್ಯತೆ ಇದೆಯೋ ಆ ಯೋಗ್ಯತೆಯಿಂದ ಇಂದು ನಮ್ಮೆಲ್ಲರನ್ನು ಪವಿತ್ರಗೊಳಿಸು. ಈ ಪ್ರಾರ್ಥನೆ ಬಿಟ್ಟರೆ ಅದರಲ್ಲಿ ಮಂತ್ರವೇನು ಬಂತು ನಾ ಕಾಣೆ.. ಆದರೂ ಇಂಥಾ ನಿಗರ್ವಿ ಮನುಷ್ಯ ನನಗೆ ಆ ಕ್ಷಣಕ್ಕೆ ಅಗ್ನಿ ದೇವನಂತೆಯೇ ಕಂಡ. ಕೊನೆಗೆ ಬಾಳೆ, ನೀರು, ತೆಂಗು, ಟೊಮ್ಯಾಟೋ, ಈರುಳ್ಳಿ, ಕೊತ್ತಂಬರಿ, ಕರಿಬೇವು, ಶೇಂಗಾ, ಉಪ್ಪು, ಖಾರ, ಅರಿಶಿನ, ಇಂಗು ಒಟ್ಟು ಹನ್ನೆರಡು ದಿನಿಸು ಸೇರಿದ ಖಾದ್ಯಕ್ಕೆ ಹನ್ನೆರಡು ಜ್ಯೋತಿರ್ಲಿಂಗ ಅಂತಾನೇ ಹೆಸರಿಟ್ಟು ಸಂಭ್ರಮಿಸಿದ್ವಿ.
ಅಂತೂ ಸ್ಥಾವರವಾಗಿದ್ದ ಜ್ಯೋತಿರ್ಲಿಂಗಗಳೀಗ ಜಂಗಮವಾಗಿ ಕಾಯಕ ದಾಸೋಹಕ್ಕೆ ಸಜ್ಜಾದ ಹಾಗೆ ಅನ್ನಿಸಿತು.
ರಾತ್ರಿ ಬಸವ ಪುರಾಣ ಪೂರೈಸಿದ ಶಾಂತಮ್ಮ ಅಮ್ಮ ಪ್ರಸಾದಕ್ಕೆ ಕೂತಾಗ ನಮ್ಮ ಜ್ಯೋತಿರ್ಲಿಂಗ ಕೂಡಾ ಎಡೆ ಮಾಡಲ್ಪಟ್ಟಿತು. ನುಡಿ ಜ್ಯೋತಿರ್ಲಿಂಗ ಅನ್ನುವ ಮಾತು ಅಲ್ಲಮ ಪ್ರಭುಗಳ ವಚನದಲ್ಲಿ ಕೇಳಿದ್ದೆವು, ಈಗ ನಮ್ಮ ವ್ಯಾಖ್ಯಾನ ವೈವಿಧ್ಯಮಯವಾಗಿ ಹೀಗೇ ಮುಂದುವರೆಯಿತು.
ನಾನು ಇಂದು ಅಮ್ಮ ಪುರಾಣ ಹೇಳಿದ ಬಳಿಕ ಒಂದಷ್ಟು ಮಾತನಾಡಿದೆ. ಅದರಲ್ಲಿ ಕಲ್ಯಾಣದ ಅಂಬಲಿ ಕುರಿತು ಹೇಳುತ್ತಾ ಸಿರಿಧಾನ್ಯದ ನೆನೆದ ಬೀಜವೊಂದು ಜ್ಯೋತಿರ್ಲಿಂಗದಂತೆ ಎಂದು ಬಣ್ಣಿಸಿದೆ. ಯಾವ ರೀತಿ ಜ್ಯೋತಿರ್ಲಿಂಗವು ಸೃಷ್ಟಿ ವಿಕಾಸಕ್ಕೆ ಬೇಕಾದ ಶಿವ-ಶಕ್ತಿ ಸಂಪುಟವನ್ನು ಹೊಂದಿರುತ್ತದೆಯೋ ಅದೇ ರೀತಿ ನೆನೆದ ಸಿರಿ ಧಾನ್ಯದ ಬೀಜವು ಅದು ಗಿಡವಾಗಿ ತೆನೆ ಬಿಡಲು ಬೇಕಾದ ಎಲ್ಲ ಶಕ್ತಿಯನ್ನು ಬಿಡುಗಡೆ ಮಾಡಿಕೊಂಡಿರುತ್ತದೇ. ನೆನೆದ ಬೀಜಗಳ ರುಬ್ಬಿ ಹಾಲು ತೆಗೆದು ಅಂಬಲಿ ಮಾಡಿದರೆ ಅದು ಬರಿ ಹೊಟ್ಟೆ ತುಂಬಿಸುವುದಿಲ್ಲ ಬದಲಿಗೆ ಕೋಟಿ ಜೀವಕೋಶಗಳಿಗೆ ತೃಪ್ತಿ ಪಡಿಸುತ್ತದೆ. ಎಲ್ಲಾ ಜೀವಕೋಶಗಳ ಲೇಸನೇ ಬಯಸುವ ಇದು ಕಲ್ಯಾಣದ ಅಂಬಲಿ, ಜೋಳ ಬಳಸಿದರೆ ಅದು ಬಸವಣ್ಣನ ಅಂಬಲಿ, ಸಜ್ಜೆ ಬಳಸಿದರೆ ದುಗ್ಗಳೆಯ ಅಂಬಲಿ, ನವಣೆ ಬಳಸಿದರೆ ಅಕ್ಕಮಹಾದೇವಿಯ ಅಂಬಲಿ, ಬರಗು ಬಳಸಿದರೆ ಕಲ್ಯಾಣಮ್ಮ ಅಂಬಲಿ.
ಪುರಾಣಗಳ ಖಂಡಿಸಿದ ಬಸವಣ್ಣನ ಪುರಾಣ … ದೇವಸ್ಥಾನ ಖಂಡಿಸಿದ ಬಸವಣ್ಣನ ದೇವಸ್ಥಾನ … ಇದೊಂಥರಾ ಪ್ರಸಾದ ಅನ್ನೋದಾದರೆ ಇಲ್ಲಿ ಪುರಾಣ ದೇವಸ್ಥಾನ ಮುಂತಾದ ಪದಾರ್ಥಗಳು ಭಂಗವಾದವೇ ವಿನಃ ನಷ್ಟವಾಗಲಿಲ್ಲ. ಬೇರೆ ಪುರಾಣ ಬೇಡ ಬಸವ ಪುರಾಣ ಇರಲಿ ಅಂದರೇನರ್ಥ್? ಬೇರೆ ಗುಡಿಗಳು ಬೇಡ ಬಸವಣ್ಣನ ಗುಡಿ ಇರಲಿ ಅಂದರೇನರ್ಥ? ದೇಹ ಎಂಬುದೇ ಪುರ, ಈ ಪುರದೊಳಗಿನ ಜೀವ ತನ್ನೆಲ್ಲಾ ವಿಕಾರಗಳ ವಿವರಿಸಿಕೊಳ್ಳುತ್ತಾ ಅದರಿಂದ ಹೊರಗೆ ಬರಲು ದಾರಿ ಮಾಡಿಕೊಳ್ಳುವ ಬಗೆಯೇ ಪುರಾಣ. ದೇಹವೇ ಗುಡಿ, ಭಾವವೇ ಮಡಿ, ನುಡಿಯೇ ಅದರ ಗೋಪುರ. ಹೀಗಿರೆ ಜೀವನ ಪಾವನ. ಈಗ ಪ್ರಸಾದವರತು ಪದಾರ್ಥ ನಷ್ಟವಾಗಿ ಪರಿಣಾಮಿಗಳೆನಿಸಬಹುದು. ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಅಂತಾರಲ್ಲಾ ಹಾಗೆ ಇದು.
ಲಕ್ಷ್ಮೀ, ಸರಸ್ವತಿ, ಪಾರ್ವತಿ, ಗಣೇಶ, ಹನುಮಂತ, ರಾಮ, ಕೃಷ್ಣ, ಶಿವ, ವಿಷ್ಣು, ಬ್ರಹ್ಮ ಯಾವುದೇ ದೇವತೆಗಳನ್ನೂ ಮೂರ್ತಿಯಾಗಿ ಪೂಜಿಸುವ ಪದ್ಧತಿ ವೇದಗಳಲ್ಲಿ ಎಲ್ಲಿಯೂ ಕಾಣ ಸಿಗುವುದಿಲ್ಲ.
ಯಾವ ರೀತಿ ಬಸವಾದಿ ಪ್ರಮಥ ಗಣಗಳ ಭಾವಚಿತ್ರಗಳನ್ನು, ಮೂರ್ತಿಗಳನ್ನು ಇತ್ತೀಚೆಗೆ ಕಲ್ಪಿಸಿ ರೂಪಿಸಲಾಗುತ್ತಿದೆಯೋ ಅದೇ ರೀತಿ ರವಿವರ್ಮನ ಕುಂಚದಿಂದ ದೇವಾದಿ ದೇವತೆಗಳ ತೈಲ ಚಿತ್ರಗಳು ಮೂಡಿಬಂದವು. ಜಕ್ಕಣಾಚಾರ್ಯರಿಂದ ಮೂರ್ತಿಗಳು ಕೆತ್ತಲ್ಪಟ್ಟವು. ವಾಸ್ತವದಲ್ಲಿ ಇವರೆಲ್ಲರೂ ಮಂತ್ರ ಸ್ವರೂಪಿಗಳು.
ಈ ಮಂತ್ರಗಳನ್ನಾದರೂ ಯಾರೂ ಬರೆದಿಲ್ಲ. ಯಾವ ರೀತಿ ವಚನಗಳು ಯಾವುದೋ ಸಾಹಿತ್ಯ ಪ್ರಕಾರದ ಬರವಣಿಗೆಗಳಲ್ಲವೋ ಅದೇ ರೀತಿ ರುದ್ರ ಮೊದಲಾದ ಮಂತ್ರಗಳು ಕೂಡ ಬರೆದವುಗಳಲ್ಲ. ಅಂತರಿಕ್ಷದಿಂದ ಹೊರಹೊಮ್ಮಿದ ಧ್ವನಿಗಳು.
ಶ್ರಾವಣ ಅರ್ಥಾತ್ ನಿನ್ನ ಆತ್ಮದ ಒಳದನಿಯನಾಲಿಸು ಅಥವಾ ಹಾಗೆ ಆಲಿಸಿದವರ ಮಾತುಗಳ ಕೇಳು. ಈಗ ಶ್ರಾವಣ ಒಂದು ತಿಂಗಳಿಗೆ ಮೀಸಲಾಗಿರದು. ನಿತ್ಯ ನಿತ್ಯ ಶ್ರಾವಣ. ವರುಷದಲ್ಲಿ ಒಂದು ತಿಂಗಳು ಶ್ರಾವಣ. ಹಾಗಾದರೆ ಮಿಕ್ಕೆಲ್ಲ ತಿಂಗಳುಗಳು? ಇಲ್ಲಿ ಶ್ರಾವಣ ತಿಂಗಳು ಅನ್ನೋದು ಪ್ರಸಾದ ಅಹುದು. ಆದರೆ ಅಲ್ಲಿ ಪದಾರ್ಥ ಭಂಗವಾಗಿದೆ ಬಿಟ್ಟರೆ ನಷ್ಟವಾಗಿಲ್ಲ. ಅಂದರೆ ಬೇರೆ ಯಾರದ್ದೋ ಪುರಾಣವೆಂತಲೂ, ಅದೆಲ್ಲಾ ಅವರಿಗೆ ಮಾತ್ರ ನಮಗಲ್ಲ ಎನುವ ನುಣುಚಿಕೊಳ್ಳುವಿಕೆಗಿದು ಆಸ್ಪದ ಕೊಡುವುದರಿಂದ ಇಲ್ಲಿ ಪದಾರ್ಥ ನಷ್ಟವಾಗಿಲ್ಲ.
ಯಾವಾಗ ನಾನು ನನ್ನ ಒಳ ದನಿಯನ್ನು ಆಲಿಸುವ ರೀತಿಯ ಅನುಷ್ಠಾನ ಪೂರ್ವಕ ಶ್ರಾವಣವು ಸಮಾಜ ಮಾನಸದಲ್ಲಿ ನೆಲೆಯಾಗುವುದೋ ಆಗಲೇ ನಾವು ಪರಿಣಾಮಿಗಳೆನಿಸುವೆವು.
ಯೋಗಮಯಿ ಸತ್ಯಮೇಧಾವಿ
ಮೋಬೈಲ್ ನಂ. 9945749663
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in