
ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.
ರೂಪೆಂಬೆನೆ? ನೇತ್ರದೆಂಜಲು. ರುಚಿಯೆಂಬೆನೆ? ಘ್ರಾಣದೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬೆ ಭಿನ್ನವಳಿದ, ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-182 / ವಚನ ಸಂಖ್ಯೆ-564)
ವಚನ ಸಾಹಿತ್ಯದ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳು. ಅಲ್ಲಮ ಪ್ರಭುಗಳ ವಚನಗಳು ಪಾರಮಾರ್ಥಿಕ, ಸೃಜನಶೀಲತೆಗೆ ಮತ್ತು ವೈಚಾರಿಕ ಬದ್ಧತೆಗೆ ಒಳಗಾಗುತ್ತವೆ. ವಚನ ಸಾಹಿತ್ಯ ಸಂಸ್ಕೃತಿಗೆ ಅಲ್ಲಮ ಪ್ರಭುಗಳಿಗೆ ವಿಶಿಷ್ಟ ಮತ್ತು ಗಂಭೀರ ಸ್ಥಾನವಿದೆ.
ಅಲ್ಲಮ ಪ್ರಭುಗಳ ತತ್ವ ಮತ್ತು ಸಿದ್ಧಾಂತವನ್ನು ಪ್ರತಿಕ್ರಿಯಿಸುವಾಗ 12 ನೇ ಶತಮಾನದ ಸಾಮಾನ್ಯ ಭಾಷೆ ಪರಿವರ್ತನಾಶೀಲತೆಯನ್ನು ಪಡೆದುಕೊಳ್ಳುತ್ತದೆ. ವಚನ ಭಾಷೆಯ ವ್ಯಾಖ್ಯಾನವನ್ನು ಕೊಡುವುದರ ಜೊತೆಗೆ ಧರ್ಮ ಮತ್ತು ಆಧ್ಯಾತ್ಮದ ಅನುಸಂಧಾನದಲ್ಲಿ ಪ್ರಕೃತಿಯ ತತ್ವಗಳನ್ನು ಪರಿಣಾಮಕಾರಿಯಾಗಿ ಅಲ್ಲಮ ಪ್ರಭುಗಳು ಸಮರ್ಥಿಸುತ್ತಾರೆ.
ಜ್ಞಾನೇಂದ್ರಿಯಗಳ ಬಗ್ಗೆ ವಿಶ್ಲೇಷಿಸುವಾಗ ವೈಜ್ಞಾನಿಕ ಚಿಂತನೆಗೆ ಆಧ್ಯತೆ ನೀಡುವರು. ಪ್ರಕೃತಿಯಲ್ಲಿ ಕಣ್ಣಿಗೆ ಕಾಣದೆ ಇರುವ ಶಕ್ತಿಯನ್ನು ಗುಹೇಶ್ವರನೆಂಬ ಚಿಂತನೆಗೈಯ್ಯುವ ಅಲ್ಲಮ ಪ್ರಭುಗಳು ಪ್ರಕೃತಿಯ ಪಂಚತತ್ವಗಳಾದ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳು ವಿಶ್ವವ್ಯಾಪಿಯಾಗಿವೆ. ಪಿಂಡಾಂಡದಲ್ಲಿ ಬ್ರಹ್ಮಾಂಡವನ್ನು ಕಾಣುವ ತವಕ ಅಲ್ಲಮ ಪ್ರಭುಗಳಿಗೆ.
ಈ ವಚನದಲ್ಲಿ ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ ಮತ್ತು ಘ್ರಾಣ ವ್ಯಾಖ್ಯಾನ ಮಾಡುವಾಗ, ಪಂಚಭೂತಗಳಲ್ಲಿ ಲೀನವಾಗುವ ಈ ದೇಹಕ್ಕೆ ವೈಜ್ಞಾನಿಕ ಹೋಲಿಕೆಯನ್ನು ಕೊಡುತ್ತಾರೆ. ಪಂಚಭೂತಗಳಿಂದ ಆವೃತವಾದ ಈ ಶರೀರಕ್ಕೆ ವಿಶ್ವ ಚೈತನ್ಯದ ಮಹತ್ವವಿದೆ.
ಎಂಜಲು ಎಂದು ಬಳಸುವ ಪರಿಕ್ರಮ. ಸಂಸಾರದ ಪಯಣದಲ್ಲಿ ಈ ದೇಹ ಇಂದ್ರಿಯಗಳಿಗೆ ವಶವಾಗಿ ಎಂಜಲಾಗಿದೆ ಎಂದು ಹೇಳುವಲ್ಲಿ ಅಲ್ಲಮ ಪ್ರಭುಗಳ ಭಾಷಾ ಸ್ವತಂತ್ರತೆಯನ್ನು ಗಮನಿಸಬೇಕು. ಆದರೆ ಅಲ್ಲಮ ಪ್ರಭುಗಳು ವಚನ ಭಾಷೆಯಲ್ಲಿ ಪಂಚೇಂದ್ರಿಯಗಳನ್ನು ತಾತ್ವಿಕವಾಗಿ ಗೌರವಿಸುತ್ತಾರೆ. ಪುರುಷನೇ ಕರ್ತೃ. ಪ್ರಕೃತಿಯಿಂದ ಆದ ಈ ದೇಹ ಎಂಜಲಾಗಿ ಅನುಭವಿಸಿದ ವಸ್ತುವಾಗಿದೆ.
“ಶಬ್ದವೆಂಬೆನೆ ಶ್ರೋತ್ರದೆಂಜಲು” ಆತ್ಮ ವಿಶ್ವಾಸದ ಮಾತುಗಳು. ಹೀಗಾಗಿ ಅಲ್ಲಮ ಪ್ರಭುಗಳು ಭಾಷೆಯನ್ನು ಬಳಸುವ ತಲ್ಲೀನತೆಯಲ್ಲಿ ಪ್ರಾಚೀನ ದಾರ್ಶನಿಕರ ಉಪಮೆಯನ್ನು ಬೆಳಗಾಗಿಸುತ್ತಾರೆ. ವಚನ ಪರಂಪರೆಗೆ ಬಂದಾಗ ತಾತ್ವಿಕ ಕವಿ ಸಮಯದ ಭಾಷೆಯ ಸಮರ್ಥಿಸುವ ಪರಿ ಅದು. ಸಹಜವಾಗಿ ಭಾಷೆಗೆ ಸುಂದರತೆಯನ್ನು ಕೊಡುವಲ್ಲಿ “ಬೆಳಗಿನೊಳಗಣ ಬೆಳಗು” ಗುಹೇಶ್ವರನೆಂಬ ಲಿಂಗವು ಪಂಚೇಂದ್ರಿಯಗಳಲ್ಲಿ ಶಬ್ದ ಸೂತಕದ ಭಾಷೆಯ ನೆಪದಲ್ಲಿ ಮಹಾಘನವಾಗಿಸುತ್ತಾನೆ. ನೇತ್ರದೆಂಜಲು, ಘ್ರಾಣದೆಂಜಲು, ಅರಿವಿನೆಂಜಲು ಈ ಕಾಯದ ಸಮೀಕ್ಷೆಯಾಗಿದೆ.
ನೋಡುವ ಕಣ್ಣುಗಳು ಎಂಜಲಾಗಬಾರದು. ವಾಸನೆಯನ್ನು ಗ್ರಹಿಸುವ ಮೂಗು ಎಂಜಲಾಗಬಾರದು. ಮತ್ತೊಬ್ಬರ ಜ್ಞಾನದ ಜೊತೆ ಹಿಂಬಾಲಿಸಿ ಎಂಜಲಾಗಿಸಬಾರದು. ಅಲ್ಲಮ ಪ್ರಭುಗಳ ಈ ತಾತ್ವಿಕ ಭಾಷೆಯಲ್ಲಿ ಸಾಧಾರಣವಾದ ಪದಗಳಿಗೆ ಶುಭ್ರತೆ ಕೊಡುವುದನ್ನು ಗಮನಿಸಬೇಕು. ಪ್ರಕೃತಿ ಮತ್ತು ಪುರುಷ ತತ್ವದಲ್ಲಿ ಮನವೇ ಘ್ರಾಣವಾದ ಈ ಕಾಯ ಎಂಜಲಾದಾಗ ಗುಹೇಶ್ವರನೆಂಬ ಲಿಂಗಕ್ಕೆ ನೈವೇದ್ಯ ಸಲ್ಲಿಸಲಾಗದು. ಹೀಗಾಗಿ ಅಲ್ಲಮ ಪ್ರಭುಗಳು ಭಕ್ತಿಯ ತುರೀಯಾವಸ್ಥೆಯಲ್ಲಿ ಅಲಂಕಾರದ ಭಾಷೆಯನ್ನು ದ್ವಿಗುಣಗೊಳಿಸುತ್ತಾರೆ. ಶಿವನೆಂಬ ಶಬ್ದಕ್ಕೆ ಪ್ರಾಣಲಿಂಗದ ಪೂಜೆ ಅದು. ಅಲ್ಲಮ ಪ್ರಭುಗಳು ಪ್ರಕೃತಿ ತತ್ವಗಳನ್ನು ಮೂಲ ಪ್ರತಿಮೆಗಳಾಗಿ ಬಳಸುವಾಗ ತತ್ವಕ್ಕೆ ಕಾವ್ಯಶಕ್ತಿಯನ್ನು ಘನೀಕರಿಸುವ ನಿಲುವು ಅದು. ಗುಹೇಶ್ವರನೆಂಬ ಲಿಂಗವೇ ಕಣ್ಣು, ಕಿವಿ, ಮೂಗು, ನಾಲಿಗೆ, ಅರಿವಿನ ಸಂವೇದನೆಗೆ ಒಳಗಾಗುವ ಕವಿ ಪ್ರಜ್ಞೆಯ ಸಮರ್ಥನೆಯಾಗಿದೆ.
ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ಮ. ನಂ. 6-2-74/8/4
ಮಾಣಿಕ ಪ್ರಭು ದೇವಸ್ಥಾನ ರಸ್ತೆ,
ಪಂಚಲಿಂಗೇಶ್ವರ ಕಾಲೋನಿ,
ರಾಯಚೂರು – 584 101
ಮೋಬೈಲ್ ಸಂ: +91 94499 46839.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು. ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 97413 57132 / e-Mail ID: info@vachanamandara.in