
- ಸತ್ಯ ಶರಣರ ಕಗ್ಗೊಲೆಯಾದ ದಿನ. ವೈದಿಕರ ವಂಚನೆಗೆ ಸತ್ಯ ಸತ್ತ ದಿನ.
- ಶರಣರಿಗೆ ಮರಣವು ಮಹಾನವಮಿಯಾಯಿತು!
- ವೈದಿಕರಿಗೆ ವಿಜಯೋತ್ಸವವಾಯಿತು!
- ಲಿಂಗಾಯತ ಧರ್ಮದವರಾದ ನಾವು ವಿಜಯೋತ್ಸವ ಆಚರಿಸುವುದು ಸತ್ಸಂಪ್ರದಾಯವೋ ಅಥವಾ ಸತ್ತ ಸಂಪ್ರದಾಯದವೋ ಸ್ವಲ್ಪ ಯೋಚಿಸಿ.
ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿದ ಬಸವಣ್ಣನವರು ಸಾಮಾಜಿಕ ನ್ಯಾಯದ ಮೊದಲ ಹರಿಕಾರರು.
ಬಸವಣ್ಣನವರು ಮತ್ತು ಬಸವಾದಿ ಶರಣರು ಆಳುವ ವರ್ಗದವರನ್ನು ಜಾಗೃತಗೊಳಿಸಲಿಲ್ಲ. ಆದರೆ ಆಳಿಸಿಕೊಳ್ಳುವವರನ್ನು ಜಾಗೃತಗೊಳಿಸಿದರು. ಹಾಗಾಗಿ ಈ ಸಮಷ್ಠಿ ಪ್ರಜ್ಞೆಯೆಯಿಂದ ಬಸವಣ್ಣನವರು ಹಾಗೂ ಸಮಕಾಲೀನ ಬಸವಾದಿ ಶರಣರು ಕಟ್ಟಿದ ಸಮಾಜವನ್ನು “ಸರ್ವ ಸಮಾನತೆಯ ಸಮಾಜ” ಎಂದು ಐತಿಹಾಸಿಕವಾಗಿ ಗುರುತಿಸಲಾಗಿದೆ. ಅದು ವರ್ಗರಹಿತ, ವರ್ಣರಹಿತ, ಲಿಂಗತಾರತಮ್ಯರಹಿತ ಹಾಗೂ ಜಾತಿರಹಿತವಾದ ಸಮಾಜ ನಿರ್ಮಿಸುವುದು ವಚನಕಾರರ ಘನವಾದ ಉದ್ದೇಶ ಈಡೇರಿದ ಕಾಲಘಟ್ಟ. ಅದಕ್ಕಾಗಿಯೇ ಬಹುತೇಕ ಶರಣರು ಪ್ರಾಣತ್ಯಾಗ ಮಾಡಿದ್ದಕ್ಕೆ ಇತಿಹಾಸವೇ ಸಾಕ್ಷಿ. 12 ನೇ ಶತಮಾನದ ಅಂದಿನ ರಾಜ್ಯಶಾಹಿ ಆಡಳಿತ ವ್ಯವಸ್ಥೆಯು ಸ್ಥಳೀಯ ರೈತಾಪಿ ವರ್ಗ, ಕೂಲಿಕಾರ್ಮಿಕರ ಮೇಲೆ ರಾಜ್ಯಭಾರ ನಡೆಸುತ್ತಾ ತೀವ್ರವಾಗಿ ಶೋಷಣೆಗೆ ಒಳಪಡಿಸಿತ್ತು. ಅದನ್ನು ಶರಣರು ವ್ಯಾಪಕವಾಗಿ ವಿರೋಧಿಸಿದರು. ವೈದಿಕ ಸನಾತನಿ ವರ್ಗದ ದಬ್ಬಾಳಿಕೆಯಿಂದ ಶೋಷಿತ ವರ್ಗಗಳಿಗೆ ಮುಕ್ತಿ ದೊರಕಿಸುವ ದೃಷ್ಟಿಕೋನದಿಂದ ಕಾಯಕ ಮತ್ತು ದಾಸೋಹ ಸಿದ್ಧಾಂತದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಬದುಕಿದರು. ಶೇಣೀಕೃತ ಸಮಾಜದಲ್ಲಿದ್ದ ತಳಸ್ಥರದ ಕಾಯಕ ಯೋಗಿಗಳ ಶೋಷಣೆಯನ್ನು ವೈಭವೀಕರಿಸುವ ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದ್ದು ಶರಣರ ವಿಶಿಷ್ಟ ಹಾಗೂ ಮೈನವಿರೇಳಿಸುವ ಚಿಂತನೆಯಾಗಿದೆ. ಕಾಯಕಯೋಗಿ ಶ್ರಮಿಕ ಸಮುದಾಯದ ಎಲ್ಲಾ ಶರಣರನ್ನು ಕಾಯಕ ಸಿದ್ಧಾಂತಕ್ಕೆ ಒಳಪಡಿಸಿ “ಜಾತಿವಿನಾಶ” ಸಮಾಜ ಸ್ಥಾಪಿಸುವುದು ಬಸವಣ್ಣನವರ ಬಹುದೊಡ್ಡ ಪರಿಕಲ್ಪನೆಯಾಗಿತ್ತು.
ಕಳೆದ ಮೂರು ದಶಕಗಳ ನನ್ನ ವಚನ ಸಾಹಿತ್ಯ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ ಅಂದರೆ ವಚನ ಬೇರೆ ಅಲ್ಲ ವಾಸ್ತವತೆ ಬೇರೆ ಅಲ್ಲ. ವಚನಕ್ಕೆ ಸರಿಯಾಗಿ ನಿರ್ವಚನ ಆಗಿ ಅದು ಕಾಲ ಕಾಲಕ್ಕೆ ಪಚನಗೊಳ್ಳತಾನೆ ಇದೆ.
- ಓದಿದಷ್ಟೂ ಓದಿಸಿಕೊಳ್ಳುವ,
- ಬರೆದಷ್ಟೂ ಬರೆಸಿಕೊಳ್ಳುವ,
- ಚಿಂತಿಸಿದಷ್ಟೂ ಚಿಂತನೆಗೆ ಹಚ್ಚಿಕೊಳ್ಳುವ,
- ವಿವರಿಸಿದಷ್ಟೂ ವಿಹಂಗಮ ನೋಟಕ್ಕೆ ಎಡೆ ಮಾಡಿಕೊಳ್ಳುವ,
ಯೋಗ ಮತ್ತು ಯೋಗ್ಯತೆ ವಚನ ಸಾಹಿತ್ಯಕ್ಕೆ ಇದೆ ಅಂತಾ “ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ)” ಅಂತರ್ಜಾಲ ಉಪನ್ಯಾಸಗಳ ಮಾಲಿಕೆಯ ದಿನಾಂಕ 05.11.2022 ರ ಕಾರ್ಯಕ್ರಮದಲ್ಲಿ ಡಾ. ಶ್ರೀಪತಿ ಹಳಗುಂದ ಸರ್ ಹೇಳಿದ್ದು ಈಗ ಜ್ಞಾಪಕಕ್ಕೆ ಬರುತ್ತದೆ.
- ಕಾಲವಾಗಿ 12 ನೇ ಶತಮಾನ.
- ಪುಣ್ಯಕ್ಷೇತ್ರವಾಗಿ ಕಲ್ಯಾಣ.
- ರಾಜನಾಗಿ ಬಿಜ್ಜಳ.
- ವ್ಯಕ್ತಿಯಾಗಿ ಬಸವಣ್ಣ.
- ಭಾಷೆಯಾಗಿ ಕನ್ನಡ.
- ವಿದ್ಯಮಾನವಾಗಿ ವಚನ ಚಳುವಳಿ.
- ಶಕ್ತಿಯಾಗಿ ವಚನಗಳು.
- ಭಾವನೆಯಾಗಿ ಅನುಭವ.
- ಅಭಿವ್ಯಕ್ತಿಯಾಗಿ ಅನುಭಾವ.
ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜಾತಿ-ಜನಾಂಗವನ್ನೂ ಮೀರಿದ ಒಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಅದಕ್ಕಾಗಿಯೇ ಸರಿ ಸುಮಾರು 900 ವರ್ಷಗಳಾದರೂ ಇಂದಿಗೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮತ್ತು ಗೌರವದಿಂದ ವಚನ ಸಾಹಿತ್ಯವನ್ನು ನಾವು ಆರಾಧಿಸುತ್ತೇವೆ. ಗೋಪಾಲ ಕೃಷ್ಣ ಅಡಿಗರು ಹೇಳುವ ಹಾಗೆ:
ಹೊಸ ನೆತ್ತರು ಉಕ್ಕಿ ಉಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
ಹೀಗೆ ವಚನಕಾರರು ತಮ್ಮ ರಕ್ತ ಆರಿ ಹೋಗುವ ಮುನ್ನ ಹೊಸ ನಾಡನ್ನು ಕಟ್ಟಿದ್ದಾರೆ. ಈ ಕನ್ನಡ ನಾಡಿನಲ್ಲಿ ಅವರ ರಕ್ತ ಇನ್ನೂ ಆರಿ ಹೋಗಿಲ್ಲ ಎನ್ನುವುದಕ್ಕೆ ಇಡೀ ವರ್ಷಪೂರ್ತಿಯಾಗಿ ನಡೆಯುವ ವಚನ ಸಾಹಿತ್ಯ ಮತ್ತು ಕನ್ನಡ ನಾಡು-ನುಡಿಯ ಉತ್ಸವಗಳು ಮತ್ತು ಕಾರ್ಯಕ್ರಮಗಳು ಸಾಕ್ಷೀಭೂತವಾಗಿವೆ.
ಇನ್ನು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ನಮಗೆ ಹಲವಾರು ವೈಶಿಷ್ಟ್ಯತೆಗಳು ಕಂಡು ಬರುತ್ತವೆ. ಅವುಗಳಲ್ಲಿ ಕೆಲವೊಂದು ಪಟ್ಟಿ ಮಾಡುವುದಾದರೆ:
- ರಾಜ ಪ್ರಭುತ್ವವನ್ನು ವಿರೋಧಿಸಿದ್ದರಿಂದ ರಾಜಾಶ್ರಯವಿಲ್ಲದೇ ಬೆಳೆದ ಸಾಹಿತ್ಯ.
- ಜನಪರ ಕಾಳಜಿಯುಳ್ಳಂಥ ಹಾಗೂ ಸಾಮಾನ್ಯ ಜನರ ಆಡುಭಾಷೆಯನ್ನೇ ಉಪಯೋಗಿಸಿದ ಸಾಹಿತ್ಯ ಎನ್ನುವ ಹೆಗ್ಗಳಿಕೆ.
- ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ತಳಹದಿಯ ಮೇಲೆ ವಿಕಾಸವಾದ ಸಾಹಿತ್ಯ.
- ಸಾಮಾಜಿಕ ವಿಡಂಬನಾತ್ಮಕ ಸಾಹಿತ್ಯ, ಉದಾಹರಣೆಗೆ ಹೇಳುವುದಾದರೆ ಸ್ಥಾವರ ಮೂರ್ತಿ ಪೂಜೆಯ ನಿರಾಕಾರಣೆ.
- ಅತ್ಯಂತ ಪ್ರಮುಖವಾದ ಚಿಂತನೆ ಅಂದರೆ ಜಾತಿ ವ್ಯವಸ್ಥೆಯ ನಿರಾಕರಣೆಯ ಮೂಲಕ ಸಮ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಸಾಹಿತ್ಯ.
- ಸ್ತ್ರೀ ಸಮಾನತೆಯಂತ ಉತ್ಕೃಷ್ಠ ಸಾಮಾಜಿಕ ಸಮಾನತೆ ನಿರೂಪಿಸಿದ ಸಾಹಿತ್ಯ.
ವಚನಕಾರರು ರಾಜರನ್ನು ಹೊಗಳಿರುವವರನ್ನೂ ಕೂಡ ತಿರಸ್ಕರಿಸಿರುವುದನ್ನು ನಾವು ಕಾಣಬಹುದು. ಇದು ವಚನ ಸಾಹಿತ್ಯದ ಭಾಷೆಗಿರುವ ತಾಕತ್ತು. ಶರಣ ಆದಯ್ಯನವರ ಒಂದು ವಚನ ಇಂತಹ ಚಿಂತನೆಗಳಿಗೆ ಪುಷ್ಟಿಯನ್ನು ನೀಡುತ್ತದೆ.
ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ,
ಪೂಜೆಯ ಮಾಜದೆ ರಾಜದ್ವಾರದಲ್ಲಿ ಸುಳಿದು
ಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೋ?
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತಲ್ಲೀಯವಾದ
ಶರಣರತ್ತತ್ತಲಲ್ಲದೆ ಇತ್ತಿತ್ತಲೆಂತಿಹರೋ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-325/ವಚನ ಸಂಖ್ಯೆ-894)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಮಾಜದೆ: ಮರೆಮಾಚದೆ
ಕರ್ನಾಟಕದ ಇತಿಹಾಸದಲ್ಲಿ ರಾಜರನ್ನು ಹಾಗೂ ರಾಜಪ್ರಭುತ್ವವನ್ನು ಹೊಗಳುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದನ್ನು ನಾವು ಕಾಣುತ್ತೇವೆ. ವ್ಯಕ್ತಿ ಕೇಂದ್ರೀಕೃತವಾದ ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಹೊಗಳು ಭಟ್ಟರನ್ನೂ ಕೂಡ ನಿರಾಕರಿಸಿದರು. ಯಾವುದೇ ಸಾಹಿತ್ಯ ಪ್ರಾಕಾರಗಳಲ್ಲಿ ಇಂಥ ದಿಟ್ಟತನದ ಭಾಷಾ ಪ್ರಯೋಗ ಅತ್ಯಂತ ವಿರಳವಾಗಿ ಕಂಡು ಬರುತ್ತದೆ.
ಇಂಥ ಅದ್ಭುತ ಚಿಂತನೆಗಳ ಮೂಲಕ ಬಸವಾದಿ ಶರಣರು ಕಟ್ಟಿಕೊಟ್ಟ ಬಹುಮೂಲ್ಯ ವಿಶ್ವಮಾನ್ಯ ತತ್ವಗಳು ಅಂದರೆ:
- ಬಡತನ ನಿರ್ಮೂಲನೆ.
- ಅನಕ್ಷರತೆಯ ನಿರ್ಮೂಲನೆ.
- ಸಂಪತ್ತಿನ ಸಮಾನ ವಿನಿಯೋಗ.
- ಸಮಸಮಾಜದ ನಿರ್ಮಾಣ.
- ವ್ಯಕ್ತಿ ಸ್ವಾತಂತ್ರ್ಯದ ಸ್ಥಾಪನೆ.
- ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸಿದ್ದು.
ಇಂಥ ಒಂದು ವಿಶಿಷ್ಠ ಕಾಲಘಟ್ಟದಲ್ಲಿ ಶರಣ ಹರಳಯ್ಯನವರ ಮಗನಾದ ಶೀಲವಂತನಿಗೂ ಮತ್ತು ಶರಣ ಮಧುವರಸರ ಮಗಳಾದ ಲಾವಣ್ಯವತಿಯ ಮದುವೆಯು ಶರಣರ ಕಗ್ಗೊಲೆಯಂತಹ ದುರಂತದ ಇತಿಹಾಸಕ್ಕೆ ಸಾಕ್ಷೀಭೂತವಾಗಿದೆ. ಕಲ್ಯಾಣದ ವೈದಿಕರು ಹಾಗೂ ಸನಾತನಿಗಳು ಇದನ್ನು ವಿರೋಧಿಸಿ ಬಿಜ್ಜಳನ ಮೂಲಕ ಶರಣ ಹರಳಯ್ಯ ಮತ್ತು ಶರಣ ಮಧುವರಸರಿಗೆ “ಎಳೆಹೂಟೆ” ಶಿಕ್ಷೆ ವಿಧಿಸಿದಾಗ, ಇದು ಕಲ್ಯಾಣದಲ್ಲಿ ಅಶಾಂತಿ ಮೂಡಿಸಿತು ಮತ್ತು ಶರಣರ ಹತ್ಯಾಕಾಂಡಕ್ಕೆ ಕಾರಣವಾಯಿತು. ಮದುವೆಯ ನಂತರದ ಘಟನೆಗಳಲ್ಲಿ ಪ್ರಮುಖವಾಗಿ ವೈದಿಕ ಪುರೋಹಿತಶಾಹಿಗಳು ಅಟ್ಟಹಾಸದಿಂದ ಪ್ರತಿಭಟನೆ ಮಾಡಿದರು. ಈ ಮದುವೆಯನ್ನು ವೈದಿಕವಾದಿಗಳು ತಿರಸ್ಕರಿಸುವುದರ ಮೂಲಕ ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವೆಂದು ವಾದಿಸಿ ಬಿಜ್ಜಳನಿಗೆ ದೂರು ಕೊಟ್ಟಾಗ ಬಿಜ್ಜಳನು ವೈದಿಕರ ಮತ್ತು ಸನಾತನಿಗಳ ಪರ ನಿಂತು ಹರಳಯ್ಯ ಮತ್ತು ಮಧುವರಸರಿಗೆ “ಎಳೆಹೂಟೆ” ಎಂಬ ಶಿಕ್ಷೆ ನೀಡಿದನು. ಈ ಘಟನೆಯು ಕಲ್ಯಾಣದಲ್ಲಿ ದಂಗೆಗೆ ಕಾರಣವಾಯಿತು. ಅನೇಕ ಶರಣರು ಹತ್ಯೆಗೀಡಾದರು ಮತ್ತು ವಚನ ಸಾಹಿತ್ಯ ಬೆಂಕಿಗೆ ಆಹುತಿಯಾಯಿತು. ರಾಜಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು ಬಿಡದೆ ಹುಡುಕಿಸಿ ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು. ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯು ಬಸವಕ್ರಾಂತಿಯ ಉತ್ತುಂಗತೆಯನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಸಮಾನತೆಗಾಗಿ ಆದ ತ್ಯಾಗವನ್ನು ಸ್ಮರಿಸುತ್ತದೆ. ಈ ಕರಾಳ ಘಟನೆ ನಡೆದದ್ದು ನವಮಿ/ವಿಜಯದಶಮಿಯಂದು. ಶರಣರ ಕಗ್ಗೊಲೆಯಂಥ ಹೀನ ಕೃತ್ಯ ನಡೆದ ಈ ದಿನವನ್ನು “ಮರಣವೇ ಮಹಾನವಮಿ” ಎಂದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.
ಈ ಮದುವೆಯ ಸಂದರ್ಭದ ಒಂದು ಚಿತ್ರಣವನ್ನು ನಾವು ಗಮನಿಸೋಣ:
ಒಂದು ದಿನ ಎಂದಿನಂತೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ ಶರಣ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಮನೆಗೆ ಮರಳುವಾಗ ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಗುರು ಬಸವಣ್ಣನವರು ಹರಳಯ್ಯನವರಿಗೆ ಎದುರಾದರು. ಇವರನ್ನು ಕಂಡ ಕೂಡಲೇ ಹರಳಯ್ಯನವರು; “ಗುರು ಬಸವೇಶ ಶರಣು ತಂದೆ” ಎಂದು ಕೈ ಮುಗಿದರು. “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ನಂಬಿಕೊಂಡು ಬಂದ ಬಸವಣ್ಣನವರು ಅದಕ್ಕೆ ಪ್ರತಿಯಾಗಿ “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ” ಎಂದು ತಲೆಬಾಗಿ ನಮಸ್ಕರಿಸಿ ಮುಂದೆ ಸಾಗಿದರು.
ತನ್ನ ಒಂದು “ಶರಣು” ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ನಂಬಿದ್ದ ಹರಳಯ್ಯನನವರಿಗೆ ಗುರು ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ ದಿಕ್ಕು ತೋಚದಂತಾಗಿ ಆಕಾಶ ಕಳಚಿ ಮೈ ಮೇಲೆ ಬಿದ್ದಂತಾಯಿತು. ಇದು ಕನಸೋ ನನಸೋ ಒಂದೂ ತಿಳಿಯದಾಯಿತು. ಯಾಕೆಂದರೆ ಇಲ್ಲಿಯವರೆಗೂ ಸವರ್ಣೀಯರು ತಮಗೆ ಹಾಗೂ ತಮ್ಮ ಕುಲ ಬಾಂಧವರಿಗೆ ನಮಸ್ಕಾರ ಮಾಡುವುದಂತೂ ಒತ್ತಟ್ಟಿಗಿರಲಿ; ನೆರಳೂ ಕೂಡಾ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸ್ವತಃ ಪ್ರಧಾನಿಯಾದ, ಹುಟ್ಟು ಬ್ರಾಹ್ಮಣರಾದ ಗುರು ಬಸವಣ್ಣನವರು ತನಗೆ ಎರಡು ಸಲ ಶರಣು ಅನ್ನುವುದೆಂದರೇನು ಎಂಬ ಪ್ರಶ್ನೆ ಕಾಡಿತು. ಒಂದು ರಾಜ್ಯದ ಪ್ರಧಾನ ಮಂತ್ರಿಯಿಂದ, ಎರಡು ಬಾರಿ ನಮಸ್ಕರಿಸಿಕೊಂಡ ಸಂಗತಿಯನ್ನು, ಮನದಲ್ಲೇ ಮೆಲಕು ಹಾಕುತ್ತ, ಮನೆಗೆ ಬಂದ ಹರಳಯ್ಯನವರನ್ನು ಇದಿರುಗೊಂಡ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖವನ್ನು ಗಮನಿಸಿ ತಾವೂ ಆತಂಕಗೊಳ್ಳುತ್ತಾರೆ.
ಹರಳಯ್ಯನವರ ಮನದಾಳದಲ್ಲಿ ಗುರು ಬಸವಣ್ಣನವರು ಎರಡು ಬಾರಿ ಶರಣು ಹೇಳಿದ ಸಂಗತಿಯಿಂದ ಮಾನಸಿಕವಾಗಿ ಹೊರಲಾರದ ಹೊರೆಯನ್ನು ಹೇಗೆ ಇಳಿಸಿಕೊಳ್ಳುವ ಭಾರದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದೆಂದು ಚಿಂತಿಸುತ್ತಲೇ ಇದ್ದರು. ಪತಿಗೆ ತಕ್ಕ ಸತಿಯಾದ ಕಲ್ಯಾಣಮ್ಮನವರು ಪತಿಯ ಪ್ರತೀ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ ಸದ್ಗೃಹಿಣಿ. ಪತಿಯ ಚಿಂತಾಕ್ರಾಂತಕ್ಕೆ ಕಾರಣ ತಿಳಿಯಲು ಯತ್ನಿಸಿದರು. ಹರಳಯ್ಯನವರು ಇದಕ್ಕೆ ಉತ್ತರವನ್ನು ಪತ್ನಿಗೆ ನೀಡಲು ಬಯಸುತ್ತಿಲ್ಲ. ಆದರೆ ಬಹಳ ಹೊತ್ತಿನ ನಂತರ ಹೇಳಿದ ಶರಣ ಹರಳಯ್ಯನವರು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿದರು. ಪತಿಯ ಮುಗ್ಧತೆ ಹಾಗೂ ದುಗುಡವನ್ನರಿತ ಕಲ್ಯಾಣಮ್ಮ “ಆ ಗುರು ಬಸವಣ್ಣನವರು ಮಾಡಿದ್ದಾಗಲಿ, ಹೀಗೆ ಚಿಂತೆ ಮಾಡುತ್ತ ಕಾಲ ಹರಣ ಮಾಡುವುದು ತರವಲ್ಲ; ಅದಕ್ಕೇನಾದರೂ ಒಂದು ಮಾರ್ಗೋಪಾಯ ಹುಡುಕಿದರಾಯಿತು; ಎದ್ದೇಳಿ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ” ಎಂದಾಗ ಹರಳಯ್ಯನವರಿಗೆ ಕಪ್ಪು ಮೋಡದಲ್ಲೊಂದು ಬೆಳ್ಳಿಯ ಕೋಲ್ಮಿಂಚು ಕಂಡಂತಾಯಿತು.
ಇದೇ ಗುಂಗಿನಲ್ಲಿದ್ದ ಶರಣ ಹರಳಯ್ಯನವರಿಗೆ “ಗುರು ಬಸವಣ್ಣನವರಿಗೆ ಸುಂದರವಾದ ಚಮ್ಮಾವುಗೆಗಳನ್ನು ನಮ್ಮ ತೊಡೆಯ ಚರ್ಮದಿಂದ ಚೆಮ್ಮಾವುಗೆಗಳನ್ನು ಮಾಡಿ ಅರ್ಪಿಸೋಣ” ಎಂದು ಕಲ್ಯಾಣಮ್ಮನವರು ತಿಳಿಸುತ್ತಾರೆ. ಹೀಗೆ ಪವಿತ್ರ ಮನದಿಂದ ತಯಾರಿಸಿದ ಪಾದರಕ್ಷೆಗಳನ್ನು ಗುರು ಬಸವಣ್ಣನವರು ಮೆಟ್ಟಿದರೆ ನಾವು ಪುನೀತರಾಗುತ್ತೇವೆ” ಎಂದು ಪತಿಗೆ ಸಲಹೆ ನೀಡಿದ ತಕ್ಷಣ ಹರಳಯ್ಯನವರಿಗೆ ಒಪ್ಪಿಗೆಯಾಯಿತು.
ಬಸವನಾಮವನ್ನು ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ ಹಾಗೂ ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿ ಚೆಮ್ಮಾವುಗೆಗಳನ್ನು ತಯಾರು ಮಾಡುತ್ತಾರೆ.
ಮರುದಿನವೆ ಹರಳಯ್ಯ | ಕೊರೆದ ಬಲದೊಡಿ ಚರ್ಮ ||
ಹರನೆಂದು ಮಡದಿಯೆಡದೊಡೆಯ | ತಾ ಕೊಯ್ದು ||
ಭರದಿ ಹದಮಾಡಿ | ಒಣಗಿಸಿದ ||
ಎಂದು ಜಾನಪದರು ಹೃದಯಸ್ಪರ್ಶಿಯಾಗಿ ತ್ರಿಪದಿಯನ್ನು ಕಟ್ಟಿ ಹಾಡಿದ್ದಾರೆ.
ಪಾದರಕ್ಷೆಗಳನ್ನು ತಯಾರಿಸುವ ಅನುಭವವನ್ನೆಲ್ಲ ಧಾರೆಯೆರೆದು ತಮ್ಮ ಕರಕುಶಲ ನೈಪುಣ್ಯವನ್ನೆಲ್ಲ ವಿನಿಯೋಗಿಸಿ ಚಮ್ಮಾವುಗೆಗಳನ್ನು ಸಿದ್ಧಪಡಿಸಿದರು. ಭಕ್ತಿ ಭಂಡಾರಿ ಬಸವಣ್ಣನವರು ಮೆಟ್ಟಿದರೆ ತಾವು ಪುನೀತರಾಗುವೆವೆಂದು ಹರಳಯ್ಯ ದಂಪತಿಗಳು ಆನಂದಭರಿತರಾದರು.
ಸಡಗರದಿಂದ ಶುಭ್ರ ವಸ್ತ್ರವನ್ನು ಚಮ್ಮಾವುಗೆಗಳಿಗೆ ಹೊದಿಸಿ, ಭಯ ಭಕ್ತಿಯಿಂದ ಗುರು ಬಸವಣ್ಣನವರನ್ನು ಸ್ಮರಿಸುತ್ತ ಮಹಾಮನೆಯತ್ತ ಹೊರಟರು. ಬಸವಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯ ದಂಪತಿಗಳನ್ನು ಗಮನಿಸಿ ಪತ್ನಿ ಸಮೇತರಾಗಿ ಬಂದು ಇದಿರ್ಗೊಂಡು, ಕೈಕಾಲು ಮುಖ ತೊಳೆಯಲು ನೀರಿತ್ತು, ಸತ್ಕರಿಸಿ ಒಳಗೆ ಕರೆದೊಯ್ದರು. ಹರಳಯ್ಯನವರು ತಮ್ಮಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದಾಗ, ಭಾವ ಪುನೀತರಾದ ಹರಳಯ್ಯನವರು ತಾವು ತಂದ ಚಮ್ಮಾವುಗೆಗಳನ್ನು ಗುರು ಬಸವಣ್ಣನವರಿಗೆ ತೋರಿಸಿ ಸ್ವೀಕರಿಸಬೇಕೆಂದು ಬಹು ನಮ್ರತೆಯಿಂದ ಬೇಡಿಕೊಂಡರು. ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ, ಅವುಗಳನ್ನು ಮೆಟ್ಟಿಕೊಳ್ಳದೇ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು …
ನಿಮ್ಮ ಶರಣರ ಚಮ್ಮಾವುಗೆಗೆ
ಪೃಥ್ವಿ ಸಮಬಾರದು;
ಸರಿಯಲ್ಲ, ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-164/ವಚನ ಸಂಖ್ಯೆ-604)
“ಇವು ಕೂಡಲಸಂಗಮನಾಥನಿಗೆ ಸಲ್ಲಬೇಕಾದ ಪಾದರಕ್ಷೆಗಳು” ಎಂದರು. “ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ ನನ್ನದಲ್ಲ. ಕೂಡಲಸಂಗಮನಿಗಲ್ಲದೆ ನನಗೆ ಸಲ್ಲವು” ಎಂದು ನುಡಿದಾಗ, ಹರಳಯ್ಯ ಮತ್ತು ಕಲ್ಯಾಣಮ್ಮನವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ನೆನೆದು ಭಾವಪರವಶರಾದರು.
ಒಂದು ಭಾರವನ್ನು ಇಳಿಸಿಕೊಳ್ಳಲು ಹೋಗಿ, ಅದರ ಹತ್ತಾರು ಪಟ್ಟು ಹೊರೆ ಹೊತ್ತ ಭಾವದಿಂದ ಹರಳಯ್ಯನವರು ಖಿನ್ನ-ಮನಸ್ಕರಾದರು. ನೊಂದ ಮನದಿಂದ ಬಾಡಿದ ಮುಖದಿಂದ ಹರಳಯ್ಯ ದಂಪತಿಗಳು ಮರಳಿ ಮನೆಯತ್ತ ಸಾಗಿದರು. ಮಹಾಮನೆಯಲ್ಲಿ ನಡೆದ ಘಟನೆಯ ವಿಚಾರದಲ್ಲಿ ಮುಳುಗಿ ದಾರಿ ಕ್ರಮಿಸುತ್ತಿದ್ದ ಶರಣ ದಂಪತಿಗಳಿಗೆ ಮಧುವರಸರು ಕಂಡರು. ಹರಳಯ್ಯನವರ ತಲೆಯ ಮೇಲಿದ್ದ ಚಮ್ಮಾವುಗೆಗಳಿಗೆ ಮಾರು ಹೋಗಿ ಮಧುವರಸರು ತಮಗೆ ಕೊಡುವಂತೆ ಕೇಳಿಕೊಂಡರು. ಹರಳಯ್ಯನವರು ಕೊಡಲು ನಿರಾಕರಿಸಿದಾಗ, ಮಧುವರಸರು ತಮ್ಮ ಸೇವಕರಿಂದ ಚಮ್ಮಾವುಗೆಗಳನ್ನು ಕಿತ್ತುಕೊಂಡು ಮೆಡುವುದೊಂದೇ ತಡ, ಮಧುವರಸರ ಮೈಯ್ಯಲ್ಲಾ ಉರುಪಿನಿಂದ ಭಯಂಕರವಾಗಿ ಉರಿಯ ಹತ್ತಿತು.
ಹರಳಯ್ಯನವರ ಮಾತಿಗೆ ಬೆಲೆ ಕೊಡದೆ, ಶರಣರ ಮಹಿಮೆಯನ್ನರಿಯದೆ, ಅವರನ್ನು ತಿರಸ್ಕರಿಸಿ ತಾನು ಮಾಡಿದ ಅಪರಾಧಕ್ಕಾಗಿ ಮಧುವರಸರಿಗೆ ದಿಕ್ಕೇ ತೋಚದಂತಾಯಿತು. ಮೈಯ್ಯುರಿ ಹೆಚ್ಚುತ್ತಲೇ ಇತ್ತು. ಹಲವಾರು ತಜ್ಣ ವೈದ್ಯರ ಉಪಚಾರವೆಲ್ಲ ನಿರರ್ಥಕವಾಯಿತು. ಅದ್ಯಾವ ಪುಣ್ಯಾತ್ಮ ಸಲಹೆ ಕೊಟ್ಟನೋ ಏನೋ, ಹರಳಯ್ಯನವರ ಮನೆಯ “ಕರಿಬಾನಿ” ನೀರು ಚುಮುಕಿಸಿದರೆ ಮೈಯುರಿ ಪ್ರಶಾಂತಗೊಳ್ಳುವುದೆಂದರಂತೆ. ಹಾಗೆ ಮಾಡಿದಾಗ ಮಧುವರಸರ ಮೈ ತಾಪ ತಣ್ಣಗಾಗಿ ಯಥಾಸ್ಥಿತಿಗೆ ಮರಳಿತು ಎನ್ನುವುದು ಜನಜನಿತವಾದ ಒಂದು ರೂಪಕ.
ಈಗ ಮಧುವರಸರಿಗೆ ಶರಣರ ಬದುಕಿನ ಹಿರಿಮೆ, ಗರಿಮೆ ಹಾಗೂ ಮಹಿಮೆಯ ಅರಿವಾಯಿತು. ಅವರಿಗೆ ಜ್ಣಾನೋದಯವಾಯಿತು. ಅವರು ಹರಳಯ್ಯನವರಲ್ಲಿ ಕ್ಷಮೆ ಕೇಳಿದರು. ಗುರುಕರುಣೆಯಿಂದ ಇಷ್ಟಲಿಂಗಧಾರಿಗಳಾದರು. ಶರಣ ಧರ್ಮವನ್ನು ಅಂಗೀಕರಿಸಿದ ಅವರು ತಮ್ಮ ಮುದ್ದು ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಮಗ ಶೀಲವಂತನಿಗೆ ಮದುವೆ ಮಾಡಿಕೊಡಲು ಮುಂದಾದರು.

“ಇಷ್ಟಲಿಂಗಧಾರಿಗಳಾದ ಶರಣರ ಮಗಳನ್ನು ಶರಣರ ಮಗನಿಗೆ ಕೊಡಲು ಯಾವ ತಪ್ಪೂ ಇಲ್ಲ” ಎಂದು ಮಹಾಮನೆಯೂ ಒಪ್ಪಿಗೆ ನೀಡಿತು. ಆದರೆ ಶ್ರೇಣೀಕೃತ ಸಮಾಜದ ವೈದಿಕರ ಕಣ್ಣಿಗೆ ಇದು ಸಮಾಜ ವಿರೋಧಿ ಕಾರ್ಯವಾಗಿತ್ತು, ಪ್ರತಿಲೋಮ ವಿವಾಹದ ಪ್ರಾಕಾರವಾಗಿತ್ತು. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಈ ಮದುವೆಯು ಸಂಪ್ರದಾಯಕ್ಕೆ ಕೊಡಲಿ ಏಟು ಹಾಕಿತ್ತು. ಬಸವಣ್ಣನವರ ಈ ಕ್ರಾಂತಿಕಾರಿ ನಡಿಗೆಯನ್ನು ಗಮನಿಸಿದ ಸಂಪ್ರದಾಯವಾದಿ ಪುರೋಹಿತಶಾಹಿಗಳು ಸಹಿಸದಾದರು. ಜನಸಾಮಾನ್ಯರನ್ನು ರೊಚ್ಚಿಗೇಳುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕುಮ್ಮಕ್ಕು ನೀಡಿದವು. ಜಾತಿ ಕೆಟ್ಟು ಹೋಯಿತೆಂದರು. ಜಾತಿ ಜಾತಿಗಳ ನಡುವೆ ಮೇಲು-ಕೀಳಿನ ಜಾತಿ ವಿಧ್ವೇಷದ ಕಿಚ್ಚು ಹಚ್ಚಿದರು. ಧರ್ಮ ಹಾಳಾಯಿತೆಂದರು. ಕೆಳ ಜಾತಿಗಳಿಗೆ ಸೊಕ್ಕು ಹೆಚ್ಚಾಯಿತೆಂದರು. ನಾಯಿಗಳಿಗೆ ಸಲುಗೆ ಕೊಟ್ಟರೆ ಹೆಗಲೇರುತ್ತವೆಯೆಂದರು. ಮೇಲ್ಜಾತೀಯ ಸವರ್ಣೀಯರು ಸಹಜವಾಗಿ ದೊರೆಗೆ ದೂರಿತ್ತರು.
ಬಸವಣ್ಣನವರು ಒಂದು ವಚನದಲ್ಲಿ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ?
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ.
ಆನೀ ಬಿಜ್ಜಳಂಗಜುವೆನೆ ಅಯ್ಯಾ?
ಕೂಡಲಸಂಗಮದೇವಾ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-200/ವಚನ ಸಂಖ್ಯೆ-737)
ಬಸವಾದಿ ಶರಣರು ಜಾತಿ ಪರಿಕಲ್ಪನೆಯ ಸಮಾಜವನ್ನು ದಿಕ್ಕರಿಸಿ ವರ್ಣ-ವರ್ಗರಹಿತ, ಜಾತಿನಿರಸನ ಸಿದ್ಧಾಂತವನ್ನು ಅನುಷ್ಠಾನಗೊಳಿಸಿಕೊಂಡು ಅದರಂತೇ ಬದುಕಿದವರು. ಅಸಮಾನತೆಯ ಸಮಾಜವನ್ನು ತಿರಸ್ಕರಿಸಿ ಸತ್ಯ ನಿಷ್ಠೆ ಹಾಗೂ ಕಾಯಕದ ಸಮನ್ವಯ ಸಮಾಜ ಸ್ಥಾಪನೆಗಾಗಿಯೇ ಹೆಚ್ಚು ಶ್ರಮಿಸಿದ್ದಾರೆ. ಕಾಯಕ ಮತ್ತು ದಾಸೋಹ ಚಳವಳಿಯ ಮಹತ್ವದ ಗುರಿಯೂ ಇದೇ ಆಗಿತ್ತು.
ಈ ಮದುವೆಗೆ ವಿರೋಧ ವ್ಯಕ್ಪಡಿಸಿದ ರಾಜ ಬಿಜ್ಜಳ “ವರ್ಣ ಸಂಕರ ಮಾಡಿದವರಿಗೆ ಎಳೆ ಹೂಟ್ಟೆ ಶಿಕ್ಷೆ ವಿಧಿಸಿ” ಎಂಬ ಆಜ್ಷೆಯನ್ನು ಇದೇ ನವಮಿ/ವಿಜಯದಶಮಿಯ ದಿನದಂದು ಹೊರಡಿಸಿದನು. ಹರಳಯ್ಯ-ಮಧುವರಸರ ಕಣ್ಣು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ ಕಲ್ಯಾಣದ ತುಂಬೆಲ್ಲ ಎಳೆದಾಡಿಸಿದರು. ಶರಣರ ಜಂಘಾಬಲ ಉಡುಗುವಂತೆ ಕೊಂಡೆಯ ಮಂಚಣ್ಣ ನೋಡಿಕೊಂಡನು. ಹರಳಯ್ಯ ಹಾಗೂ ಮಧುವಯ್ಯನವರು ಈ ಘಟನೆಯಲ್ಲಿ ಪ್ರಾಣ ತೆತ್ತರು. ಇದರಿಂದ ಕಲ್ಯಾಣದಲ್ಲಿ ಮಹಾಕ್ರಾಂತಿಯಾಯಿತು. ಸಿಕ್ಕ ಸಿಕ್ಕಲ್ಲಿ ಶರಣರ ಕಗ್ಗೊಲೆ ನಡೆಯಿತು. ಶರಣ ತತ್ವ ಉಳಿಸಿ ಪ್ರಸಾರ ಕೈಗೊಳ್ಳಲು ಅಸಂಖ್ಯ ಶರಣ ಶರಣೆಯರು, ಕಲ್ಯಾಣ ಬಿಟ್ಟು ಹೊರ ಬಂದರು. ಆದರೂ ಹಲವಾರು ಶರಣರನ್ನು ಬಿಜ್ಜಳನ ಸೈನಿಕರು, ಸಂಪ್ರದಾಯವಾದಿಗಳು, ಜಾತಿವಾದಿಗಳು ಹಿಡಿದು ಕೊಲ್ಲುವದನ್ನು ಮಾಡುತ್ತಲೇ ಹೋದರು.
ಕ್ರಾಂತಿಯು ಉತ್ತುಂಗಕ್ಕೇರಿದಾಗ ಇಡೀ ಕಲ್ಯಾಣವು ಗೊಂದಲದ ಗೂಡಾಯಿತು. ಅರಾಜಕತೆಯ ಅಟ್ಟಹಾಸದ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮುತ್ತಿತ್ತು. ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೆಂದರೆ ಕಲ್ಯಾಣಮ್ಮ ಮತ್ತು ಹರಳಯ್ಯನವರ ತೊಡೆಯ ಚರ್ಮದಿಂದ ತಯಾರಿಸಿದ ಪವಿತ್ರ ಚಮ್ಮಾವುಗೆಗಳೇ ಅಥವಾ ಬಸವಾದಿ ಶರಣರು ಕಟ್ಟಿದ ಸಮ-ಸಮಾಜದಿಂದ ವೈದಿಕರ ಅಡುಗೆ ಮನೆಗಳಲ್ಲಿ ಧಾನ್ಯಗಳ ಕೊರತೆಯಾಯಿತೇ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ!ಇದಕ್ಕೆ ಶರಣ ತುರಗಾಹಿ ರಾಮಣ್ಣನವರ ಒಂದು ವಚನ ಸಾಕ್ಷಿಯಾಗಿ ನಿಲ್ಲುತ್ತದೆ.
ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-349/ವಚನ ಸಂಖ್ಯೆ-1026)
ಇವತ್ತಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿ ಈ ಪಾದರಕ್ಷೆಗಳನ್ನು ಸಮಗಾರ ಹರಳಯ್ಯ ದಂಪತಿಗಳು ತಯಾರಿಸಿದ ಪವಿತ್ರ ಪಾದರಕ್ಷೆಗಳೆಂದೇ ಭಯ ಭಕ್ತಿಯಿಂದ ಇಂದಿಗೂ ಕೂಡ ಪೂಜಿಸಲಾಗುತ್ತದೆ. ಹರಳಯ್ಯನವರ ಹೆಸರಿನಿಂದ ವರ್ಷಕ್ಕೊಮ್ಮೆ ದಾಸೋಹ ನಡೆಯುತ್ತದೆ. ಬಿಜನಳ್ಳಿಯ ಈ ಚಮ್ಮಾವುಗೆಗಳು ಹರಳಯ್ಯ ದಂಪತಿಗಳ ತೊಡೆಯ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳೆಂದು ಸಂಶೋದಕರು, ವಿಜ್ಞಾನಿಗಳು ಧೃಢೀಕರಿಸಿದ್ದಾರೆ.
ಮಹಾನವಮಿ ಕುರಿತು ನಮ್ಮ ಬಸವಾದಿ ಶರಣರು ಏನು ಹೇಳಿದ್ದಾರೆ ನೋಡೋಣ:
ಬಸವಣ್ಣನವರ ವಚನ:
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-190/ವಚನ ಸಂಖ್ಯೆ-699)
ಶರಣರು ಭಗವಂತನ ಸೇವೆ ಮಾಡುವಾಗ ಮರಣ ಬಂದರೂ ಅಂಜುವುದಿಲ್ಲವೆಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಭಾವ. ಸೇವೆ ಮಾಡುವವರಲ್ಲಿ “ಜೋಳವಾಳಿ” ಎಂದರೆ ತಾವು ಪಡೆದ ಜೋಳಕ್ಕಾಗಿ ಅಂದರೆ ಕೂಲಿಗಾಗಿ ದುಡಿಯುವವರು. ಮತ್ತು “ವೇಳೆವಾಳಿ” ಎಂದರೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಒಡೆಯನಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಜೋಳವಾಳಿ ಆತನಿಗಾಗಿ ಪ್ರಾಣವನ್ನು ಕೊಡುವುದಕ್ಕೂ ಸಿದ್ಧರಾದವರು. ಬಸವಣ್ಣನವರು ಶಿವಕೈಂಕರ್ಯದಲ್ಲಿ ತಾವು ಜೋಳವಾಳಿಯಲ್ಲ, ವೇಳೆವಾಳಿಯ ಏಕೈಕನಿಷ್ಠೆಯುಳ್ಳವರೆಂದು ಹೇಳಿಕೊಳ್ಳುತ್ತಾರೆ. ಅನ್ನಕ್ಕಾಗಿ ಸ್ವಾಮಿಸೇವೆ ಮಾಡುವವರು ತಾವಲ್ಲ. ಹಾಳುಗೆಟ್ಟು ಓಡುವವರಲ್ಲ. ಏನೇ ವಿಪತ್ತುಗಳು ಬಂದರೂ ಅಂಜದೆ ಪ್ರಾಣಕ್ಕೆ ಪ್ರಾಣಕೊಟ್ಟು ಶಿವಸಾಧನೆಗೆ ತಮ್ಮನ್ನು ಅರ್ಪಿಸಿಕೊಳ್ಳುವುದಾಗಿ ಹೇಳುತ್ತಾರೆ. ಸತ್ಯಸಾಧನೆಯ ಮಾರ್ಗದಲ್ಲಿ ಮರಣವನ್ನು ಎದುರಿಸಬೇಕಾಗಿ ಬಂದರೂ ಅದೇ ಹಬ್ಬ ಎನ್ನುತ್ತಾರೆ. “ಮರಣವೇ ಮಹಾನವಮಿ” ಎನ್ನುವುದು ಬಹಳ ಅರ್ಥವತ್ತಾದ ಮಾತು. ಸತ್ಯನಿಷ್ಠೆಯ ಸಾಧಕನ ಸಾರ್ಥಕ ಜೀವನದ ಉದ್ಗಾರವನ್ನು ಇಲ್ಲಿ ಕಾಣುತ್ತೇವೆ.
ಅಲ್ಲಮಪ್ರಭುಗಳ ವಚನ:
ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು !
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-171/ವಚನ ಸಂಖ್ಯೆ-546)
ಶರಣರ ಅಂತರಂಗ ಮತ್ತು ಬಹಿರಂಗಗಳು ಅತ್ಯಂತ ಪರಿಶುದ್ಧ. ಅಲ್ಲಿರುವ ನಿರ್ಮಲ ಭಾವವು ಅಂತರಂಗದ ಅವಿವಿನ ಪ್ರಜ್ಞೆಯಾದ ನಿರಾಕಾರ ಶಿವನಿಗೆ ಮೀಸಲಾದುದು. ಹಾಗಾಗಿ ಶರಣರ ಬದುಕು ಆನಂದಮಯ. ಶರಣರಿಗೆ ಮರಣವೂ ಕೂಡ ಮಹಾನವಮಿಯೇ.
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು?
“ಜಾತಸ್ಯ ಮರಣಂ ಧ್ರುವಂ” ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-697)
ಬದುಕಿನ ಹೋರಾಟದಲ್ಲಿ ಹೋರಾಡಲಾರದೆ ಆಪತ್ತುಗಳು ಬಾರದಿರಲೆಂದು ಪ್ರಾರ್ಥಿಸುವುದು ಹೇಡಿಯ ಲಕ್ಷಣ. ವಿಪತ್ತನ್ನು ಆಹ್ವಾನಿಸಿ ವಿಜಯಿಯಾಗಲು ಸಾಹಸ ಮಾಡುವುದು ವೀರನ ಲಕ್ಷಣ. ಇಂತಹ ವೀರನ ಧೈರ್ಯ, ಸಾಹಸಗಳು ಈ ವಚನದಲ್ಲಿ ನಿರೂಪಣೆ ಮಾಡಲಾಗಿದೆ. ನಾಳೆ ಬರಲಿರುವ ಕಷ್ಟ ನಾಳೆಯೇ ಬಾರದೆ ಮುಂದಕ್ಕೆ ಹೋಗಲಿ ಎನ್ನದೆ ನಾಳೆ ಬರುವುದು ನಮಗಿಂದೇ ಬರಲಿ ಎಂದೂ, ಇಂದು ಬರುವುದು ಈಗಲೇ ಬರಲಿ ಎಂದೂ ಆಹ್ವಾನಿಸಿ ಅದನ್ನು ಎದುರಿಸಲು ಸಿದ್ಧರಾಗಿದ್ದಾರೆ. ಬಸವಣ್ಣನವರು ಹುಟ್ಟಿದವನಿಗೆ ಮರಣ ಕಟ್ಟಿಟ್ಟ ಬುತ್ತಿ. ಅದಕ್ಕೆ ಏಕೆ ಅಂಜಬೇಕು?ನಮ್ಮ ಬದುಕಿನಲ್ಲಾಗುವ ಆಗು-ಹೋಗುಗಳಿಗೆ ಹರಿ ಬ್ರಹ್ಮಾದಿಗಳಿಂದಲೂ ಅಳಿಸಲು ಸಾಧ್ಯವಿಲ್ಲ. ಸಾವು ಬಂದರೆರೂಡ ಅದು ಕೂಡಲಸಂಗಮದೇವರು ನೀಡಿದ ಪ್ರಸಾದವಲ್ಲದೆ ಬೇರೆಯಲ್ಲ. ಅದನ್ನು ಸ್ವಾಗತಿಸುವುದು ಶರಣರ ಆದ್ಯ ಕರ್ತವ್ಯ. ಅಂತೆಯೇ ಶರಣರು “ಮರಣವೇ ಮಹಾನವಮಿಯಮಗೆ” ಎಂದು ತಿಳಿಸಿದವರು. ಹಾಗಾಗಿ ಶರಣರಿಗೆ ಮರಣವು ಭಯ ಭೀತಿಯನ್ನು ತರುವ ಒಂದು ಕರಾಳ ದಿನವಾಗದೆ ಮಹಾನವಮಿ ಹಬ್ಬವಾಗಿ ಸಂತಸವನ್ನು ತರುವ ಶ್ರೇಷ್ಠ ದಿನವಾಯಿತು.
ಇಷ್ಟೆಲ್ಲ ನಡೆದ ನಂತರ ವೀರಗಂಟಿ ಶರಣ ಮಡಿವಾಳ ಮಾಚಿದೇವರು ಬರೆದ ಹೃದಯಸ್ಪರ್ಶಿ ವಚನವಿದು:
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.
ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ
ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-212/ವಚನ ಸಂಖ್ಯೆ-516)
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ವೀರಗಂಟಿ ಶರಣ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಸುತ್ತಾರೆ. ಅತ್ಯಂತ ದಕ್ಷತನದಿಂದ ನೇತೃತ್ವ ವಹಿಸಿ ವಚನಗಳನ್ನು ಸಂರಕ್ಷಣೆ ಮಾಡುವುದರ ಮೂಲಕ “ವೀರ ಗಣಾಚಾರಿ” ಎನ್ನುವ ಹೆಸರಿಗೆ ತಕ್ಕಂತೆ ನಡೆದುಕೊಂಡವರು.
ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಶರಣರ ಮಾರಣ ಹೋಮವಾಗಿ, ಮನನೊಂದು ಬಸವಣ್ಣನವರು ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ಕೂಡಲಸಂಗಮಕ್ಕೆ ಹೋಗುತ್ತಾರೆ ಮತ್ತು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಬಸವಣ್ಣನವರ ಅನುಪಸ್ಥಿತಿಯಲ್ಲಿ ಮನನೊಂದು ಮಡಿವಾಳ ಮಾಚಿದೇವರ ಮನದಾಳದಿಂದ ಹೊರಬಂದ ಹೃದಯಸ್ಪರ್ಷಿ ವಚನವಿದು.
“ಉಟ್ಟ ಸೀರೆಯ ಹರಿದು” ಅಂದರೆ ಬಸವಣ್ಣನವರು ಸವೆಸಿದ ಕಠಿಣ ಹಾದಿ ಅಥವಾ ಕಷ್ಟ ಕಾರ್ಪಣ್ಯಗಳನ್ನು ಮುಂದೆ ಬರುವ ಪ್ರಧಾನಿಗಳು ಅನುಭವಿಸದಿರಲಿ ಎಂದು ಸಾಂಕೇತಿಕವಾಗಿ ಹರಿದು ಹಾಕಿದರು ಬಸವಣ್ಣನವರು.
ರಾಜೋಚಿತವಾದ ಪಾದರಕ್ಷೆಗಳನ್ನು ಮತ್ತು ಕಟ್ಟಿದ ಮುಡಿ ಅಂದರೆ ರತ್ನ ಖಚಿತವಾದ ಕಿರೀಟವನ್ನು ಕಳಚಿಟ್ಟರು. ಬಸವಣ್ಣನವರು ಕಲ್ಯಾಣದಲ್ಲಿ ಇರುವಷ್ಟು ದಿನ ತಮಗೆ ದೊರೆತ ಪದವಿಗಳು ಅವರಿಗೆ ಅಹಂಕಾರ ಬರದಂತೆ ನಡೆದುಕೊಂಡರು. ಎಂದೂ ಅಧಿಕಾರದ ದರ್ಪ-ದಾರ್ಷ್ಟ್ಯತೆಗಳು ಅವರಲ್ಲಿ ಕಂಡು ಬರಲಿಲ್ಲ.
ಯಾವ ಕಲ್ಯಾಣ ರಾಜ್ಯವನ್ನು ಸಮ ಸಮಾಜದ ಪರಿಕಲ್ಪನೆಯಡಿಯಲ್ಲಿ ಸಮರ್ಥವಾಗಿ ನಿರ್ಮಿಸಿದರೋ ಅದೇ ಕಲ್ಯಾಣ ಛಿದ್ರ ಛಿದ್ರವಾಗುವುದನ್ನು ಕಣ್ಣಾರೆ ಕಂಡ ಬಸವಣ್ಣನವರು ಸೀಮೆಯನ್ನು ತೊರೆದು ಹೋದದ್ದನ್ನು ನೊಂದುಕೊಂಡು ಮಾಚಿದೇವರು ಇಲ್ಲಿ ಹೇಳಿದ್ದಾರೆ. ತಾವೇ ಕಟ್ಟಿ ಬೆಳೆಸಿದ, ತಾವೇ ನಿರ್ಮಿಸಿದ ಕಲ್ಯಾಣವೆಂಬ ಸಮ ಸಮಾಜವನ್ನು ತೊರೆದರು.
“ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ” ಎನ್ನುವಲ್ಲಿ ಇಷ್ಟಲಿಂಗದಲ್ಲಿ ನಂಬಿಕೆಯನ್ನು ಉಳಿಸಿಕೊಂಡೇ ಹೋದರು. ಇಲ್ಲಿ ಲಿಂಗವೆಂದರೆ ಸಂಸ್ಕೃತಿ ಸಂಸ್ಕಾರಗಳ ಪ್ರತೀಕ. ಇಂಥ ಒಂದು ಸಂಸ್ಕಾರ ಸಂಸ್ಕೃತಿಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಇಡೀ ಸಮಾಜಕ್ಕೆ ಮಾದರಿಯಾದರು ಬಸವಣ್ಣನವರು. ಇದನ್ನೇ ಈ ವಚನದ ಸಾಲುಗಳಲ್ಲಿ ಮೂಡಿಸಿದ್ದಾರೆ.
“ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ” ಎನ್ನುವಲ್ಲಿ ಇಡೀ ಸಮಾಜದ ಪರಿಕಲ್ಪನೆಯನ್ನು ನಾವು ಕಾಣಬುದು. ವಚನ ಸಾಹಿತ್ಯದಲ್ಲಿ ಇಡೀ ಸಮಷ್ಠಿ ಪ್ರಜ್ಞೆಯ ಪ್ರತೀಕವಾಗಿ ಜಂಗಮ ಶಬ್ದವನ್ನು ಪ್ರಯೋಗಿಸಲಾಗಿದೆ. “ಜಂಗಮ” ಎಂಬುದು ಇಹಪರ ಮತ್ತು ಚರಾಚರದಲ್ಲಿ ಸರ್ವತ್ರವೂ ಅಡಕವಾಗಿರುವ ವಿಶ್ವ ಚೈತನ್ಯಾತ್ಮಕ ಶಕ್ತಿಯ ಪರ್ಯಾಯ ಶಬ್ದವಾಗಿದೆ. ಸಮಷ್ಠಿ ಪ್ರಜ್ಞೆಯ ಜಂಗಮವು ಅಗಮ್ಯ, ಅಗೋಚರ, ಅಪ್ರತಿಮವೂ ಆಗಿರುವುದರಿಂದ ಇದನ್ನು ಸ್ಥಾವರ ರೂಪದಲ್ಲಿ ನೋಡಲಾಗದು. ಕಲ್ಯಾಣವನ್ನು ಬಿಟ್ಟು ಹೋಗುವಾಗಲೂ ಕೂಡ ಕಲ್ಯಾಣ ನಗರದ ಕಲ್ಯಾಣವನ್ನೇ ಬಯಸುವಂತೆ “ಕೈಯಲ್ಲಿ ಹಡಿದುಕೊಂಡು ಹೋದೆಯಲ್ಲ” ಎಂದು ಬಸವಣ್ಣನವರ ಜಂಗಮ ಪ್ರಜ್ಞೆಯನ್ನು ನೆನಪಿಸಿಕೊಳ್ಳುತ್ತಾರೆ ಮಾಚಿದೇವರು.
“ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರದೇವಾ” ಎಂದು ಕೂಡಲಸಂಗಮದಲ್ಲಿ ಬೆಳಗನುಟ್ಟು ಬಯಲಾಗಿ ಅಂದರೆ ಶಿವನ ಪ್ರಕಾಶವನ್ನು ಬೆಳಗಿಸಿ ಪರಂಜ್ಯೋತಿಯಾದರು. ಇಂಥ ಬಸವಣ್ಣನಿಗೆ ದಾರಿಯನ್ನು ನೀನೇ ತೋರಿಸು ಕಲಿದೇವಾ ಎಂದು ಗದ್ಗದಿತರಾಗುತ್ತಾರೆ.
ಆದಿಯ ಕಂಡೆ, ಅನಾದಿಯ ಕಂಡೆ
ಘನವ ಕಂಡೆ, ಮನವ ಕಂಡೆ, ಅನುವ ಕಂಡೆ
ಆಯತ ಸ್ವಾಯತ ಸನ್ನಹಿತವ ಕಂಡೆ.
ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ,
ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-322 / ವಚನ ಸಂಖ್ಯೆ-886)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಚೋದ್ಯ : ಆಶ್ಚರ್ಯ.
“ಬಸವಣ್ಣನ ಕೃಪೆಯಿಂದ ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯ” ಎಂದು ಅತ್ಯಂತ ಗೌರವದಿಂದ ಅಲ್ಲಮ ಪ್ರಭುಗಳು ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರನ್ನು ಕುರಿತು ಹೇಳಿದ್ದಾರೆಂದರೆ ಅವರ ವ್ಯಕ್ತಿತ್ವ ಎಂತಹ ಉನ್ನತ ಮಟ್ಟಕ್ಕಿತ್ತು ಎನ್ನುವುದನ್ನು ನಾವು ಕಾಣಬಹುದು.
ಕಲ್ಯಾಣ ಹತ್ಯಾಕಾಂಡದ ನಂತರ ಮಡಿವಾಳ ಮಾಚಿದೇವರು, ಅಕ್ಕ ನಾಗಲಾಂಬಿಕೆಯವರು ಹಾಗೂ ಚೆನ್ನಬಸವಣ್ಣನವರು ಶರಣ ಪಡೆಯ ನೇತೃತ್ವ ವಹಿಸಿದರು. ಬಿಜ್ಜಳನ ಸೈನ್ಯದ ಜೊತೆ ಹೋರಾಡಿ ಶರಣರ ಮತ್ತು ವಚನಕಟ್ಟುಗಳ ರಕ್ಷಣೆ ಮಾಡಿದರು.
ಅಂತರ್ಜಾತಿ ಮದುವೆಗಳು ನಡೆಯದಂತೆ, ಜಾತಿ ಪದ್ಧತಿಯನ್ನು ಮುಂದುವರೆಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಯುವಜೋಡಿಯಾದ ಶೀಲವಂತ ಮತ್ತು ಲಾವಣ್ಯವತಿಯರನ್ನು 12 ನೇ ಶತಮಾನದಲ್ಲಿ ಹತ್ಯೆ ಮಾಡಿದಂತೆ, ಇಂದಿನ ಆಧುನಿಕ ಕಾಲಘಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಶರಣರು “ಮರಣವೇ ಮಹಾನವಮಿ” ಎಂದು ಇದೇ ಮಹಾನವಮಿಯ ದಿವಸ ಕಗ್ಗೊಲೆಯಾಗಿ ಹೋಗಿದ್ದಾರೆ. ಇಂತಹ ಮಹಾನವಮಿ–ದಸರಾ ಆಚರಣೆ ನಮಗೆ ಬೇಕೆ? ಸನಾತನ ಧರ್ಮದ ಜಾತಿ ಪದ್ದತಿಯನ್ನು ನಾಶಮಾಡಬೇಕೆಂಬುದು ಬುದ್ಧ, ಬಸವಣ್ಣ, ಅಂಬೇಡ್ಕರ್. ಕುವೆಂಪು ಅವರಂಥ ಮಹನೀಯರ ಆಶಯ ಮತ್ತು ಗುರಿಗಳಾಗಿದ್ದವು ಎಂಬುದನ್ನು ಮಹಾನವಮಿಯ ಈ ದಿವಸ ನಾವು ಮರೆಯಬಾರದು. ಅವರ ತಮ್ಮ ಬದುಕಿನಲ್ಲಿ ಕಂಡುಕೊಂಡ ಆಶಯಗಳಿಗೆ ಜೀವಜಲವಿದೆ.
ಮಹಾನವಮಿ: ಶರಣರ ಹುತಾತ್ಮ ದಿನ!
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ,
ಸುಭಾಷ್ ನಗರ, ಕ್ಯಾತ್ಸಂದ್ರ,
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in
![]()





Total views : 51417