
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ
ಬಸವಣ್ಣನೇ ಪರಮಬಂಧುವೆನಗೆ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798)
ಎಂಬುದು ವಚನ ಸಾಹಿತ್ಯದ ಒಂದು ಪ್ರಸಿದ್ಧ ವಚನ. ಸಿದ್ದರಾಮರು ಬಸವಣ್ಣನವರಲ್ಲಿಯೇ ತಂದೆ, ತಾಯಿ, ಬಂಧು, ಬಳಗ ಎಲ್ಲರನ್ನ ಕಾಣುವ ಭಕ್ತಿ ಭಾವನೆಯನ್ನು ಸೂಚಿಸುವ ವಚನ. 12 ನೇಯ ಶತಮಾನದ ಶಿವ-ಶರಣರಲ್ಲಿ ಅಲ್ಲಮಪ್ರಭುಗಳು ಜಂಗಮಲಿಂಗ ಎಂದು, ಬಸವಣ್ಣನವರು ಭಕ್ತಿ ಭಂಡಾರಿ ಎಂದು, ಅಕ್ಕಮಹಾದೇವಿಯವರಿಗೆ ವೀರ ವಿರಾಗಿಣಿ ಎಂದು, ಚನ್ನಬಸವಣ್ಣನವರು ಷಟ್‌ಸ್ಥಳ ಜ್ಞಾನಿ ಎಂದು ಪ್ರಸಿದ್ಧರಾಗಿದ್ದರೆ ಶರಣ ಸಿದ್ದರಾಮಯ್ಯನವರು ಶಿವಯೋಗಿ ಎಂದು ಪ್ರಸಿದ್ಧರಾಗಿದ್ದಾರೆ. ಅನುಭವ ಮಂಟಪದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುತ್ತಾ ಸೊಡ್ಡಳ ಬಾಚರಸರಿಂದ “ಯೋಗಿಗಳ ಯೋಗಿ ಶಿವಯೋಗಿ ಸಿದ್ದರಾಮನೊಬ್ಬನೆ ಯೋಗಿ” ಎಂದು ಹೊಗಳಿಸಿಕೊಂಡಂತಹ ಸಿದ್ದರಾಮರು ತಮ್ಮ ಯೋಗಿಕ ಸಾಧನೆಯಿಂದ ಅದ್ಭುತ ಶಕ್ತಿಗಳನ್ನ ಪಡೆದುಕೊಂಡಂತಹ ಸಿದ್ಧರಾಗಿದ್ದರು.
ಈಗಿನ ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ ಸೊನ್ನಲಿಗೆ (ಈಗಿನ ಸೊಲ್ಲಾಪುರ). ಸುಗ್ಗವ್ವೆ ಮತ್ತು ಮುದ್ದಣ ಅಥವಾ ಮುದ್ದೆಗೌಡ ಎಂಬ ದಂಪತಿಗಳಿಗೆ ರೇವಣಸಿದ್ಧರ ವರಪ್ರಸಾದದಿಂದ ಹುಟ್ಟಿದ ಸಿದ್ದರಾಮರ ಬಾಲ್ಯದ ಹೆಸರು “ಧೂಳಿ ಮಾಕಾಳ”. ಸಿದ್ಧರಾಮರು ಬಾಲ್ಯದಲ್ಲಿ ಮೌನದ ಅಪರಾವತಾರವೆ ಆಗಿದ್ದರು. ಅವರ ತೇಜಸ್ಸು ಹಾಲಿನ ಮರೆಯ ತುಪ್ಪದಂತೆ, ತಿಲದೊಳಗಿನ ತೈಲದಂತೆ ಅಂತರಂಗದಲ್ಲಿ ಸುಪ್ತವಾಗಿತ್ತು. ನಂತರ ಮಾವಿನ ಮರದಡಿಯಲ್ಲಿನ ಪಶುಪತಿಯ ಆರಾಧನೆಯೊಂದಿಗೆ ವಿಕಾಸಗೊಳ್ಳುತ್ತಾ ಹೋಗುತ್ತದೆ. ಬಾಲಕ ಧೂಳಿ ಮಾಕಾಳನಿಗೆ ಶ್ರೀಶೈಲದ ಮಲ್ಲಯನಲ್ಲಿ ಏನೋ ಸೆಳೆತ. ಮಲ್ಲಯ್ಯ ಜನ್ಮಾಂತರದ ಬಂಧು ಎಂಬ ಭಾವನೆ. ಒಂದು ದಿನ ಗೆಳೆಯರೊಡನೆ ಹಸು ಮೇಯಿಸುತ್ತಿರುವಾಗ ಮಲ್ಲಯ್ಯನೆಂಬ ವ್ಯಕ್ತಿ ಬಂದು, ನಿನ್ನ ತಾಯಿ ಕಡೆಯಿಂದ ಬುತ್ತಿ ಕಟ್ಟಿಸಿಕೊಂಡು ಬಾ, ನಿನ್ನನ್ನ ಶ್ರೀಶೈಲಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ. ಹಿಂದು ಮುಂದು ಯೋಚಿಸದೆ, ತಾಯಿಯ ಅಕ್ಕರೆ, ಮಮತೆ, ಮಮಕಾರ, ತಹತಹಿಕೆಯನ್ನೂ ಮೀರಿ, ಶ್ರೀಶೈಲದ ಹಂಬಲ ಹೆಚ್ಚಿ ಮಲ್ಲಯ್ಯನ ಜೊತೆ ಹೋಗಲು ನಿರ್ಧರಿಸುತ್ತಾರೆ. ತಾಯಿಗೆ ಹೇಳಿ ಬುತ್ತಿ ಕಟ್ಟಿಸಿಕೊಂಡು ಬಂದಾಗ ಕರೆದುಕೊಂಡು ಹೋಗುವುದಾಗಿ ತಿಳಿಸಿದ ಮಲ್ಲಯ್ಯ ಕಾಣದೇ ಇದ್ದಾಗ, ಸ್ವತಃ ತಾನೇ ಶ್ರೀಶೈಲಕ್ಕೆ ಹೋಗುವುದಾಗಿ ನಿರ್ಧರಿಸಿ ಶ್ರೀಶೈಲದ ದಾರಿ ಗೊತ್ತಿಲ್ಲದಿದ್ದರೂ ಸಹ ಕಾಡು ಮೇಡು ಅಲೆಯುತ್ತಾ ಹೊರಟು ಬಿಡುತ್ತಾರೆ. ದಾರಿಯಲ್ಲಿ ಶ್ರೀಶೈಲಕ್ಕೆ ಹೋಗುವ ಯಾತ್ರಿಕರ ಗುಂಪು ಒಂಟಿಯಾಗಿ ಕಾಡಿನಲ್ಲಿ ಅಲೆಯುತ್ತಿದ್ದ 16 ವರ್ಷದ ಪುಟ್ಟ ಬಾಲಕ ಮಾಕಾಳನ್ನು ನೋಡಿ ವಿಚಾರಿಸಿದಾಗ, ಆತನ ಶ್ರೀಶೈಲ ನೋಡುವ ಹಂಬಲ ಅರಿತ ಯಾತ್ರಿಕರು ಧೂಳಿ ಮಾಕಾಳನನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಶ್ರೀಶೈಲದ ಪರ್ವತವನ್ನು ನೋಡಿದೊಡನೆ ಮಾಕಾಳನ ಕಂಗಳಲ್ಲಿ ಆನಂದಭಾಷ್ಪ ಹರಿಯುತ್ತದೆ. ತನ್ನ ಕನಸು ನನಸಾದಾಗ ಶ್ರೀಶೈಲ ಗಿರಿ ತಾಯಿಯ ಮಡಿಲಿನಂತೆ ಗೋಚರಿಸುತ್ತದೆ. ಮಾಕಳನ ದೃಷ್ಟಿಯಲ್ಲಿ ಶ್ರೀಶೈಲದ ಸುತ್ತಮುತ್ತಲಿನ ಮರಗಳು ವಾಸ್ತವ ಲೋಕದಿಂದ ಕಲಾ ಜಗತ್ತಿಗೆ ಏರಿದ ತೈಲ ಚಿತ್ರಗಳಂತೆ ಕಂಡರೆ, ಮಂಜು ಮಸುಕಿದ ಬೆಟ್ಟ ಆಗತಾನೆ. ಮಜ್ಜನ ಮಾಡಿದಂತೆ ನೂರು ಮಡಿ ಚೆಲುವಿನಿಂದ ತುಂಬಿದಂತೆ ಕಾಣಿಸುತ್ತಿತ್ತು. ಆದರೆ ಮಾಕಾಳನಿಗೆ ಮಲ್ಲಿಕಾರ್ಜುನನ ವಿಗ್ರಹ ರೂಪದಲ್ಲಿ ಕಂಡಾಗ ಭ್ರಮನಿರಸನವಾಗುತ್ತದೆ. ತನ್ನ ಮನದಲ್ಲಿ ಮೂಡಿದ ಮಲ್ಲಯ್ಯ ಇವನಲ್ಲ ಎಂದು ಅರಿತಾಗ ಆತನ ಮನ ಶೂನ್ಯವಾಗುತ್ತದೆ. ಮಹಾದೇವಿಯಕ್ಕ ಚೆನ್ನ ಮಲ್ಲಿಕಾರ್ಜುನನನ್ನು ಕಾಣಲು ತವಕಿಸಿದಂತೆ ಮಾಕಾಳನೂ ಪ್ರಕೃತಿಯನ್ನೆಲ್ಲ ಮಲ್ಲಯನನ್ನು ನೀವು ಕಂಡಿರಾ ನೀವು ಕಂಡಿರಾ ಎಂದು ಪ್ರಶ್ನಿಸುತ್ತ ಅಲೆಯುತ್ತಾನೆ. ತಾನು ಬಯಸಿದ ಮಲ್ಲಯ್ಯನನ್ನು ಎಲ್ಲೂ ಕಾಣದೆ, ಶ್ರೀಶೈಲ ಪರ್ವತದ ರುದ್ರಗಮ್ಮರಿ ಮೇಲಿಂದ ಹಾರಲು ಹೋದಾಗ ಮಲ್ಲಯ್ಯನ ಸಾಕ್ಷಾತ್ಕಾರವಾಗುತ್ತದೆ.
ಮಲ್ಲಯ್ಯನ ಸಾಕ್ಷಾತ್ಕಾರ ಮಾಡಿಕೊಂಡು ಶ್ರೀಶೈಲದಿಂದ ಮಾಕಾಳನು ಸಿದ್ದರಾಮನಾಗಿ ಬದಲಾಗಿ ಮರಳಿ ಸೊನ್ನಲಿಗೆಗೆ ಬರುತ್ತಾನೆ. ಸೊನ್ನಲಿಗೆಯ ರಾಜ ನನ್ನಿದೇವ ಮತ್ತು ರಾಣಿ ಚಾಮಲಾದೇವಿ ಸಿದ್ದರಾಮಯ್ಯರನ್ನು ತಮ್ಮ ರಾಜಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ದೇವಾಲಯ ಮತ್ತು ಕೆರೆಗಳನ್ನ ನಿರ್ಮಿಸಲು ವಿಶಾಲವಾದ ಜಾಗವನ್ನು ನೀಡುತ್ತಾರೆ. ಸಿದ್ದರಾಮಯ್ಯರು 4,000 ಶಿಷ್ಯರೊಂದಿಗೆ ಕೆಲಸವನ್ನು ಪ್ರಾರಂಭಿಸುತ್ತಾರೆ. ದೊಡ್ಡದೊಂದು ಮಲ್ಲಿಕಾರ್ಜುನನ ದೇವಾಲಯ ಮತ್ತು ಕೆರೆ ನಿರ್ಮಾಣವಾಗುತ್ತದೆ. ಅಂದು ಸಿದ್ದರಾಮಯ್ಯರ ನಿರ್ಮಿಸಿದ ಕೆರೆ ಎಂದಿಗೂ ಬತ್ತದೆ ಇರುವುದು ಒಂದು ವಿಶೇಷ. ಸೊನ್ನಲಿಗೆ ಯೋಗ ರಮಣಿಯ ಕ್ಷೇತ್ರ ಎಂದು ಹೆಸರಾಗುತ್ತದೆ. ಹೀಗೆ ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಕರ್ಮಯೋಗಿ ಎಂದು ಕರೆಸಿಕೊಳ್ಳುತ್ತಾರೆ. ಕಾಯಕದ ಪ್ರತಿನಿಧಿಯಾಗಿ ನಿಲ್ಲುತ್ತಾರೆ.
ಲೋಕ ಸಂಚಾರಿ ಮಹಾಜಂಗಮ ಅಲ್ಲಮರು ಗೋರಕ್ಷ, ಮುಕ್ತಾಯಕ್ಕ ಮುಂತಾದವರ ಮನದಲ್ಲಿ ಜಾಗೃತಿಯನ್ನು ಮೂಡಿಸಿ ಸೊನ್ನಲಿಗೆಗೆ ಆಗಮಿಸುತ್ತಾರೆ. ಪುರ ಪ್ರವೇಶಕ್ಕೆ ಮುನ್ನವೇ ಸಿದ್ದರಾಮಯ್ಯ ಕಟ್ಟಿಸಿದ ಅರವಟ್ಟಿಗೆಗಳು ಕೊಳಗಳು ಶಿವ ದೇವಾಲಯ ಬೃಹದಾಕಾರದ ಕೆರೆಗಳನ್ನು ಗಮನಿಸುತ್ತಾರೆ. ನೂರಾರು ಜನ ಸಿದ್ದರಾಮಯ್ಯರ ಶಿಷ್ಯಂದಿರು ಕೆರೆ ದೇವಾಲಯ ನಿರ್ಮಾಣದಲ್ಲಿ ನಿರತರಾಗಿದ್ದನ್ನು ಕಂಡ ಅಲ್ಲಮರಿಗೆ, ಸಿದ್ದರಾಮಯ್ಯ ದರ್ಶನವಿಲ್ಲದೆ ಸೋರಿ ಹೋಗುತ್ತಿರುವುದನ್ನು ಕಂಡು ಮರಗುತ್ತಾರೆ. ಸಿದ್ದರಾಮರು ಕಟ್ಟಿಸುತ್ತಿದ್ದ ಕೆರೆಯ ಬಳಿ ಬಂದ ಅಲ್ಲಮರು ಎಲ್ಲಿ ನಿಮ್ಮ ವಡ್ಡರಾಮ? ಒಂದೆಡೆಗೆ ನೆಲವನ್ನು ಅಗೆದು ಜಲವನ್ನು ತೆಗೆದು ಬಳಲುತ್ತಿದ್ದಾನೆ. ಇನ್ನೊಂದೆಡೆಗೆ ಕಲ್ಲನ್ನು ಒಡೆದು ದೇಗುಲ ಕಟ್ಟಿಸಿ ಲಿಂಗವೆಂದು ಪೂಜಿಸುವ ಅಜ್ಞಾನಿಯಾಗಿದ್ದಾನೆ ಎಂದು ಜರೆಯ ತೊಡಗುತ್ತಾರೆ. ಕೋಪಗೊಂಡ ಸಿದ್ದರಾಮರ ಶಿಷ್ಯರು ಅಲ್ಲಮರೆಡೆಗೆ ಕಲ್ಲುಗಳನ್ನ ಬೀಸತೊಡಗುತ್ತಾರೆ. ಎಷ್ಟೇ ಕಲ್ಲುಗಳನ್ನು ಎಸೆದರು ನಿಶ್ಚಲನಾಗಿ ನಿಂತ ಅಲ್ಲಮರನ್ನ ಕಂಡು ವಡ್ಡರು ಬೆರಗಾಗುತ್ತಾರೆ. ವಿಷಯ ತಿಳಿದು ಸಿದ್ದರಾಮರು ಕೋಪದಿಂದ ಅಲ್ಲಮರಡೆಗೆ ಬರುತ್ತಾರೆ.
ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ
ಶಿವಶರಣರಂಜರು.
ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ
ಶಿವಶರಣರದ ಮನಸಿಗೆ ತಾರರು.
ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು,
ಮುನಿದು ಉರಿಗಣ್ಣ ತೆಗೆದಡೆ,
ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ.
ಗುಹೇಶ್ವರಾ, ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ
ಸಿದ್ಧರಾಮಯ್ಯದೇವರೆಂಬ
ಶಿವಯೋಗಿಯ ಹೃದಯವೆ ಗುರಿ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-413/ವಚನ ಸಂಖ್ಯೆ-1109)
ಎಂದ ಅಲ್ಲಮರನ್ನು ನೋಡಿದ ಸಿದ್ದರಾಮಯ್ಯಗೆ ತಾನು ಎಲ್ಲೆಲ್ಲಿ ಯೋಗ ಸಾಧನೆಗೆ ಹೋಗುತ್ತಿದ್ದೆನೊ, ಅಲ್ಲೆಲ್ಲ ಭಯ ಭಕ್ತಿ ಗೌರವದಿಂದ ಸಾಧಕರು, ಸಿದ್ಧಪುರುಷರು ಸ್ಮರಿಸುತ್ತಿದ್ದ ಅಲ್ಲಮರೆ ಇವರು ಎಂದು ಅರಿವಾಗುತ್ತದೆ. ತನ್ನ ಎರಡೂ ಕೈಗಳನ್ನ ಚಾಚಿಕೊಂಡು ಸಿದ್ದರಾಮರ ಅಪ್ಪುಗೆಗಾಗಿ ನಿಂತಿದ್ದ ಅಲ್ಲಮರನ್ನು ಕಂಡಾಗ ಶೀತಲ ಬೆಳದಿಂಗಳ ಅಮೃತಧಾರೆ ಆ ಕಣ್ಣುಗಳ ಮೂಲಕ ಹೃದಯಕ್ಕೆ ಪ್ರವಹಿಸುತ್ತಿದೆ ಎಂದು ಅನಿಸುತ್ತದೆ. ಓಡಿಬಂದು ಅಲ್ಲಮರ ಪಾದಗಳಿಗೆ ಎರಗಿದರು. ಬಹುಕಾಲ ಸಿದ್ಧರಾಮರು ಮತ್ತು ಅಲ್ಲಮರ ನಡುವೆ ಹಲವು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದು ಕೊನೆಗೆ ಸಿದ್ದರಾಮರು ಇಷ್ಟಲಿಂಗದ ಮತ್ತು ಪ್ರಾಣಲಿಂಗದ ಸೂಕ್ಷ್ಮ ಭೇದ ತಿಳಿಸಿಕೊಡಬೇಕೆಂದು ಕೇಳಿಕೊಂಡಾಗ ಅಲ್ಲಮರು ಅದನ್ನೆಲ್ಲ ಸಾಧಿಸಿದ ಬಸವಣ್ಣನೇ ತಿಳಿಸಿಕೊಡಬಲ್ಲ ಎಂದು ಕಲ್ಯಾಣದ ಕಡೆಗೆ ಕರೆದುಕೊಂಡು ಬರುತ್ತಾರೆ.
ಅಯ್ಯಾ, ನಿಮ್ಮ ಶರಣರಲ್ಲದವರ
ಮನೆ ಕೆಮ್ಮನೆ ಕಂಡಯ್ಯಾ.
ನಿಮ್ಮ ಶರಣರ ಮನೆ ನೆರೆವನೆ ನೋಡಾ ಎನಗೆ.
ಸಿರಿಯಾಳ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ.
ದಾಸಿಮಯ್ಯ ಮನೆಗಟ್ಟಿ ವ್ಯವಹಾರನಾಗಿ ಹೋದ.
ಸಿಂಧುಬಲ್ಲಾಳ ಮನೆಗಟ್ಟಿ
ಕೈಕೂಲಿಕಾರನಾಗಿ ಹೋದ.
ಗಂಗೆವಾಳುಕರು ಮನೆಗಟ್ಟಿ
ಲಿಂಗದ ಹೊಲಬನರಿಯದೆ ಹೋದರು.
ಇವರೆಲ್ಲರು ಮನೆಯ ಮಾಡಿ
ಮಹದ್ವಸ್ತುವನರಿಯದೆ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ
ಸಾಯುಜ್ಯವೆಂಬ ಪದವಿಗೊಳಗಾದರು.
ನಿಮ್ಮ ಸಂಗನಬಸವಣ್ಣ ಬಂದು
ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ,
ಮರ್ತ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು.
ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು
ನಿಜಲಿಂಗ ಫಲವ ಪಡೆದರು.
ಆ ಗೃಹವ ನೋಡಬೇಕೆಂದು
ನಾನು ಹಲವು ಕಾಲ ತಪಸಿದ್ದೆನು.
ಕಪಿಲಸಿದ್ಧಮಲ್ಲಿನಾಥಾ,
ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ
ನಮೋ ನಮೋ ಎಂದು ಬದುಕಿದೆನು.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-430/ವಚನ ಸಂಖ್ಯೆ-1377)
ಕಲ್ಯಾಣವನ್ನ ಕಂಡ ಸಿದ್ದರಾಮರು ರೋಮಾಂಚಿತರಾಗುತ್ತಾರೆ. “ಕಪಿಲಸಿದ್ಧಮಲ್ಲಿನಾಥ ನಿಮ್ಮ ಶರಣ ಸಂಗನ ಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು” ಎಂದು ಆ ಮಹಾಮನೆಗೆ ಕೈ ಮುಗಿದು ಪ್ರವೇಶಸುತ್ತಾರೆ. ಮುಂದೆ ಅನುಭವ ಮಂಟಪದಲ್ಲಿ ಸಕ್ರೀಯರಾಗುತ್ತಾರೆ. ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ನೆರವೇರುತ್ತದೆ. ಕರ್ಮಯೋಗಿ ಸಿದ್ದರಾಮರು ಶಿವಯೋಗಿ ಸಿದ್ದರಾಮರಾಗುತ್ತಾರೆ. ಸುಮಾರು ದಿನಗಳ ಕಾಲ ಅನುಭವ ಮಂಟಪದಲ್ಲಿ ಉಳಿಯುತ್ತಾರೆ. ಕಪಿಲಸಿದ್ಧಮಲ್ಲಿಕಾರ್ಜುನ ಎಂಬ ವಚನಾಂಕಿತವನ್ನಿಟ್ಟುಕೊಂಡು ವಚನಗಳನ್ನು ಬರೆಯುತ್ತಾರೆ.
ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯಾ.
ಹಾಡುವುದೊಂದೆ ವಚನ, ನೋಡುವುದೊಂದೆ ವಚನ:
ವಿಷಯ ಬಿಟ್ಟು ನಿರ್ವಿಷಯನಾಗುವುದೊಂದೆ ವಚನ,
ಕಪಿಲಸಿದ್ಧಮಲ್ಲೇಶನಲ್ಲಿ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-380/ವಚನ ಸಂಖ್ಯೆ-1219)
“ಅರುವತ್ತೆಂಟು ವಚನಂಗಳ ಹಾಡಿ ಸೋತಿತೆನ್ನ ಮನ ನೋಡಯ್ಯ” ಎಂದು ಅವರೇ ಹೇಳಿಕೊಂಡಿದ್ದರೂ ಕೂಡ ನಮಗೆ ದೊರಕಿರುವುದು ಈಗ ಕೇವಲ 1600+ ವಚನಗಳು ಮಾತ್ರ. ಬಸವಸ್ತೋತ್ರ ತ್ರಿವಿಧಿ ಅಷ್ಟಾವರಣಸ್ತೋತ್ರ ತ್ರಿವಿಧಿ, ಮಿಶ್ರತ್ರಿವಿಧಿಗಳನ್ನು ಮತ್ತು ಸಂಕೀರ್ಣ ತ್ರಿವಿಧಿ ಮುಂತಾದ ವೈವಿಧ್ಯಮಯ ಸಾಹಿತ್ಯವನ್ನು ರಚಿಸಿದ್ದಾರೆ. ಬಸವಸ್ತೋತ್ರ ತ್ರಿವಿಧಿಯಲ್ಲಿ ಬಸವಣ್ಣನವರ ಸ್ತುತಿ ಇದೆ. ಮಿಶ್ರಸ್ತೋತ್ರ ತ್ರಿವಿಧಿಯಲ್ಲಿ ಅನೇಕ ಶರಣರ ಸ್ತುತಿ ಇದೆ. ಸೊಡ್ಡಳ ಬಾಚರಸ, ನಿರ್ಲಜ್ಜ ಶಾಂತಗುರು, ಸಗರದ ಬ್ರಹ್ಮಯ್ಯ, ಬಹುರೂಪಿ ಚೌಡಯ್ಯ ಕಲಿಕೇತ ಬ್ರಹ್ಮಯ್ಯ, ಮುಕ್ತಾಯಕ್ಕ, ನಿಂಬೆಯಕ್ಕ, ನೀಲಮ್ಮ, ಅಕ್ಕ ನಾಗಾಯಿ, ಮಹಾದೇವಿಯಕ್ಕ ಸೇರಿದಂತೆ ಇನ್ನೂ ಅನೇಕ ಶರಣ ಶರಣೆಯರ ಸ್ತುತಿ ಮಾಡಲಾಗಿದೆ.
ಸಿದ್ದರಾಮ ಚರಿತ್ರೆ:
ಕವಿ ರಾಘವಾಂಕರು 13 ನೇ ಶತಮಾನದಲ್ಲಿ ಸಿದ್ದರಾಮರ ಜೀವನ ಮತ್ತು ತತ್ವಗಳನ್ನು ವಿವರಿಸುವ ಸಿದ್ಧರಾಮ ಚರಿತ್ರೆಯನ್ನು ರಚಿಸಿದ್ದಾರೆ. ಇದು ಇತಿಹಾಸ, ಪುರಾಣ ಮತ್ತು ಕಾವ್ಯಗಳ ಮಿಶ್ರಣವಾಗಿದ್ದು, ಸಿದ್ದರಾಮರ ಮತ್ತು ಸಾಮಾಜಿಕ ಕಾರ್ಯಗಳು (ಕೆರೆಗಳ ನಿರ್ಮಾಣ, ಅಂತರ್ಜಾತಿಯ ವಿವಾಹಕ್ಕೆ ಕೊಟ್ಟಂತಹ ಪ್ರೋತ್ಸಾಹ) ಮತ್ತು ಬರೆದ ವಚನಗಳ ಬಗ್ಗೆ ತಿಳಿಸುತ್ತದೆ. ಸಿದ್ದರಾಮರು ಆಗಿನ ಕಾಲದಲ್ಲಿ ವಚನಕಾರ ಸಿದ್ದರಾಮರೆಂದು ಪರಿಚಿತರಿದ್ದರೆ ಹೊರತು ಪವಾಡ ಪುರುಷ ಆಗಿರಲಿಲ್ಲ. ಆದರೆ ಸೊನ್ನಲಿಗೆಯ ಜನ ಸಿದ್ಧರಾಮರು ಪವಾಡ ಪುರುಷನೆಂದು ನಂಬುವುದರಲ್ಲೇ ಹೆಚ್ಚು ಖುಷಿ ಪಡುತ್ತಾರೆ. ಅವರ ದೃಷ್ಟಿಯಲ್ಲಿ ಸಿದ್ಧರಾಮರು ಪ್ರತಿ ದಿನಾ ರಾತ್ರಿ ಕೈಲಾಸಕ್ಕೆ ಹೋಗಿ, ಬೆಳಿಗ್ಗೆ ಅಲ್ಲಿಂದಲೇ ಬರೋದು ಎನ್ನುವುದು ಅವರ ನಂಬಿಕೆಯಾಗಿತ್ತು
ಹೊಸಗನ್ನಡದಲ್ಲಿ ಡಾ. ಎಲ್ ಬಸವರಾಜು ಅವರು ಸೊನ್ನಲಾಪುರದ ಸಿದ್ದರಾಮರ ನಿಜ ವಚನಗಳು ಎಂಬ ಗ್ರಂಥ, ಕನ್ನಡ ಮತ್ತು ಮರಾಠಿ ಭಾಷೆಯ ಪ್ರಮುಖ ಕವಯತ್ರಿ ಜಯದೇವಿ ತಾಯಿಯವರು ಸಿದ್ದರಾಮೇಶ್ವರ ಪುರಾಣ ಎಂಬ ಕೃತಿ ರಚಿಸಿ ಸಿದ್ದರಾಮಯ್ಯರ ಇತಿಹಾಸವನ್ನು ಕನ್ನಡಿಗರ ಮನದಲ್ಲಿ ತುಂಬಿದ್ದಾರೆ. ಶಿವಸಿದ್ಧಕುಲ ಚಕ್ರೇಶ, ಶಿವಕೀರ್ತಿ ಶರತಿಂಥಿಣಿ, ಜಂಗಮ ಜ್ಯೋತಿ, ನರರೂಪಿ ರುದ್ರ, ಕರ್ಮಯೋಗಿ, ಕಾಯಕಯೋಗಿ ಶಿವಯೋಗಿ ಮುಂತಾದ ಬಿರುದುಗಳಿಂದ ಗುರುತಿಸಿಕೊಂಡಿರುವ ಸಿದ್ದರಾಮೇಶ್ವರರ ಕಾರ್ಯವಿಸ್ತಾರ ಮತ್ತು ಧರ್ಮ ಪ್ರಚಾರಕ್ಕಾಗಿ ಬಸವಣ್ಣನವರಿಂದ ನಿರ್ಮಿತವಾದ ಶೂನ್ಯ ಸಿಂಹಾಸನಕ್ಕೆ ಅಲ್ಲಮಪ್ರಭುಗಳು ಮತ್ತು ಚೆನ್ನಬಸವಣ್ಣನವರ ನಂತರ ಮೂರನೇ ಶೂನ್ಯ ಪೀಠಾಧ್ಯಕ್ಷರಾಗಿ ಗೌರವಿಸಲ್ಪಟ್ಟರು. ಕಾಯಕಯೋಗಿ ಸಿದ್ದರಾಮರ ಕುರಿತು ಅನೇಕ ಶಾಸನಗಳಲ್ಲಿ ಕಾವ್ಯಗಳಲ್ಲಿ ಪ್ರಸ್ತಾಪವಿದೆ. ದೇವಗಿರಿಯ ಯಾದವರು, ಗೋವೆಯ ಕದಂಬರು, ವಿಜಯನಗರದ ಸಂಗಮ ಅರಸರ ಆಳ್ವಿಕೆಯಲ್ಲಿ ಸುಮಾರು 22 ಶಾಸನಗಳಲ್ಲಿ ಶಿವಯೋಗಿ ಸಿದ್ದರಾಮರ ಪ್ರಸ್ತಾಪವಿದೆ.
ಸುಡ್ಡಳ ಚಾಚರಸರು ಸಿದ್ದರಾಮನ ಬಗೆಗೆ ಹೀಗೆ ಹೇಳಿದ್ದಾರೆ:
ಉಂಡುಂಡು ಜರಿದವನು ಯೋಗಿಯೆ?
ಅಶನಕ್ಕೆ ಅಳುವವನು ಯೋಗಿಯೆ?
ವ್ಯಸನಕ್ಕೆ ಮರುಗುವವ[ನು] ಯೋಗಿಯೆ?
ಆದಿವ್ಯಾಧಿಯುಳ್ಳವ[ನು] ಯೋಗಿಯೆ?
ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ.
ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ,
ಸಿದ್ಧರಾಮನೊಬ್ಬನೆ ಶಿವಯೋಗಿ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-297/ವಚನ ಸಂಖ್ಯೆ-740)
ಶರಣ ಜೇಡರ ದಾಸಿಮಯ್ಯನವರ ಧರ್ಮಪತಿ ದುಗ್ಗಳೆಯವರು:
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-785)
“ಯೋಗಿಯಾದಡೆ ಸಿದ್ದರಾಮನಂತಾಗಬೇಕು” ಎಂದು ಅಭಿಮಾನಪೂರ್ವಕವಾಗಿ ನುಡಿದಿದ್ದಾರೆ.
ಸಿದ್ಧರಾಮರ ಕೊನೆಯ ದಿನಗಳು:
ಕಲ್ಯಾಣವನ್ನು ತೊರೆದ ಸಹಸ್ರಾರು ಶರಣರು ವಚನದ ಕಟ್ಟುಗಳ ಜೊತೆಗೆ ಅಷ್ಟ ದಿಕ್ಕುಗಳಲ್ಲಿ ಸಾಗಿದರು. ಅರ್ಧದಷ್ಟು ಶರಣರು ಕಾಕತೀಯರ ಅರಸು ರುದ್ರದೇವ (ಕ್ರಿ. ಶ. 1158 – 1195) ನ ರಾಜ್ಯದಲ್ಲಿ ಆಶ್ರಯ ಪಡೆಯುತ್ತಾರೆ. ಶರಣರಿಗಾಗಿಯೇ ಆಶ್ರಯ ತಾಣಗಳನ್ನು ನಿರ್ಮಿಸಿ ಊಟ ವಸತಿ ನೀಡಿದ್ದ ಅರಸು ರುದ್ರದೇವನೆಂದು ತಿಳಿದು ಬರುತ್ತದೆ. ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.
ಅಲ್ಲಮ ಪ್ರಭುಗಳು ಶ್ರೀಶೈಲದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಚನ್ನಬಸವಣ್ಣನವರು ಮತ್ತು ಮಡಿವಾಳ ಮಾಚಿದೇವರು ಅಕ್ಕ ನಾಗಲಾಂಬಿಕೆಯ ನೇತೃತ್ವದಲ್ಲಿ ಹಿರೇಬಾಗೆವಾಡಿ, ಚಿಕ್ಕಬಾಗೇವಾಡಿ, ಮುರಗೋಡ, ಹುಣಶಿಕಟ್ಟಿ, ಕಾದ್ರೊಳ್ಳಿ, ಲಿಂಗನಮಠದ ಮಾರ್ಗವಾಗಿ ಉಳವಿಗೆ ತೆರಳುತ್ತಾರೆ. ಶರಣ ಸಿದ್ಧರಾಮೇಶ್ವರ ಶಿವಯೋಗಿಗಳ ನೇತೃತ್ವದಲ್ಲಿ ಉರಿಲಿಂಗ ಪೆದ್ದಿಗಳು ಮತ್ತು ಉಳಿದ ಶರಣರು ಸೊಲ್ಲಾಪುರ ಮತ್ತು ಲಾತೂರಕ್ಕೆ ಹೋಗುತ್ತಾರೆ. ಸೊಲ್ಲಾಪುರದ ಕಡೆಗೆ ವಚನ ಕಟ್ಟುಗಳ ಜೊತೆಗೆ ಬಂದಿದ್ದ ಶರಣರನ್ನ ರಕ್ಷಿಸುವ ಜವಾಬ್ದಾರಿಯನ್ನು ರಾಣಿ ಚಾಮಲಾದೇವಿ ಅವರು ವಹಿಸಿಕೊಳ್ಳುತ್ತಾರೆ. ಇಮ್ಮಡಿ ಬಿಜ್ಜಳನ ಸಾವಿನ ನಂತರ ರೇವಣಸಿದ್ದೇಶ್ವರರು ಮಂಗಳವೇಡೆಯನ್ನು ತೊರೆದು ದಕ್ಷಿಣ ಭಾರತದತ್ತ ವಿಶೇಷವಾಗಿ ದಕ್ಷಿಣ ಕರ್ನಾಟಕದತ್ತ ಲೋಕ ಸಂಚಾರವನ್ನಾರಂಭಿಸುತ್ತಾರೆ. ಆಗ ಅವರ ಜತೆಗೆ ರೇವಣಸಿದ್ದೇಶ್ವರರ ಪುತ್ರ ರುದ್ರಮುನಿ ಮತ್ತು ಸಿದ್ದರಾಮ ಹಾಗೂ ಮರುಳಸಿದ್ದ ಎಂಬುವವರಿದ್ದರು.
ಸಿದ್ದರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವ, ಸಿದ್ಧರಾಮೇಶ್ವರಲಿಂಗವನ್ನು ಶಿವಗಂಗೆ ಬೆಟ್ಟದಲ್ಲಿ ಮತ್ತು ರೇವಣಸಿದ್ದೇಶ್ವರ ಬೆಟ್ಟದಲ್ಲಿ ಈಗಲೂ ಇರುವುದನ್ನು ಕಾಣಬಹುದು. ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಈಗಲೂ ಸಿದ್ದರಾಮರ ಹೆಸರಿನ ಊರುಗಳು, ದೇವಸ್ಥಾನಗಳು ಅಪಾರವಾಗಿರುವುದನ್ನು ಗಮನಿಸಿದರೆ ಅವನು ಈ ಪ್ರದೇಶದಲ್ಲಿ ಬಹಳ ಕಾಲ ಸುತ್ತಾಡಿರಬೇಕು ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಸಿದ್ದರಾಮರ ದೇವಸ್ಥಾನಗಳು ಬಹಳ ಇವೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಅಜ್ಜಂಪುರದ ಬಳಿಯ ಸೊಲ್ಲಾಪುರದಲ್ಲಿ ಹನ್ನೆರಡು ವರುಷಕ್ಕೊಮ್ಮೆ ಜರುಗುವ ಜಾತ್ರೆಯಲ್ಲಿ ಅದರ ವಿವಿಧ ಆಚರಣೆಗಳಲ್ಲಿ ಕುರುಬರೇ ಭಾಗವಹಿಸುತ್ತಾರೆಂದು ತಿಳಿದು ಬರುತ್ತದೆ.
ಹೀಗೆ ಸಿದ್ಧರಾಮೇಶ್ವರರು ನಾಡಿನ ತುಂಬ ಬಸವ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡಿ ಮತ್ತೆ ಸೊನ್ನಲಿಗೆಗೆ ಬಂದು ಅಲ್ಲಿಯೆ ಲಿಂಗೈಕ್ಯರಾಗುತ್ತಾರೆ.
ಶ್ರೀಮತಿ. ಅನುಪಮಾ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993