
ಆಕಾಶದುರಿ, ನೆಲದ ಮಡಕೆಯಲ್ಲಿ
ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ
ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು.
ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು,
ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಗಬೇಕೆಂದು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-135/ವಚನ ಸಂಖ್ಯೆ-323)
ಅನುಭವಮಂಟಪದ ಅನುಭಾವಿಗಳು ಬಿಬ್ಬಿ ಬಾಚಯ್ಯ ಶರಣರು. ಮೊದಲು ಬ್ರಾಹ್ಮಣರಾಗಿದ್ದು ತದನಂತರ ಕಲ್ಯಾಣಕ್ಕೆ ಬಂದು ಶರಣ ಧರ್ಮ ಸ್ವೀಕಾರ ಮಾಡಿ ವಚನಕಾರರಾದವರು. ಇವರು ಮೂಲತಃ ರಾಯಚೂರು ಹತ್ತಿರದ ಗೊಬ್ಬೂರು ಗ್ರಾಮದವರು ಎಂದು ಒಮ್ಮತದ ಅಭಿಪ್ರಾಯವಿದೆ. ಇಲ್ಲಿರುವ ಅರ್ಪಣಾ ಕಟ್ಟೆ ಅದು ಈ ಶರಣರ ಸಮಾಧಿ ಎಂದು ಗುರುತಿಸುತ್ತಾರೆ. ಇವರ ತಂದೆಯ ಹೆಸರು ಭಾಸ್ಕರ, ಇವರು ತಮ್ಮ ಹುಟ್ಟೂರು ಸಮೀಪದಲ್ಲಿ ಗಣ ಪ್ರಸಾದ ಕಂಡು ಆ ಪ್ರಸಾದದಲ್ಲಿ ಭಯ ಭಕ್ತಿಯುಳ್ಳವರಾಗಿ ಮುಂದೆ ಕಲ್ಯಾಣಕ್ಕೆ ಬಂದು ಕಂತಿ ಭಿಕ್ಷೆಯ ಕಾಯಕ ಕೈಕೊಂಡು ದಾಸೋಹ ಸೇವೆಗೈದಂತೆ ಕಾಣುತ್ತದೆ. ಕಲ್ಯಾಣ ಕ್ರಾಂತಿಯ ತರುವಾಯ ಇವರು ತಮ್ಮ ಹುಟ್ಟೂರಿಗೆ ಬರುತ್ತಿರುವಾಗ ಅವರೊಂದಿಗೆ ಕಾಶ್ಮೀರದಿಂದ ಬಂದ ಚೆನ್ನವೀರ ಶರಣರು ಇವರೊಂದಿಗೆ ಗೊಬ್ಬೂರಿಗೆ ಬಂದು ಅಲ್ಲಿಂದ ಮುಂದೆ ರಾಯಚೂರು ಜಿಲ್ಲೆಯ ದೇವಸೂಗೂರಿಗೆ (ಶಕ್ತಿ ನಗರ) ಬಂದು ಅಲ್ಲಿ ಲಿಂಗೈಕ್ಯರಾದರೆಂದು ತಿಳಿದು ಬರುತ್ತದೆ. ಗೊಬ್ಬೂರಿನಲ್ಲಿರುವ ಬಿಬ್ಬಿ ಬಾಚಯ್ಯ ಶರಣರು ತಾವು ಗೊಬ್ಬೂರಿನಲ್ಲಿಯೆ ಲಿಂಗೈಕ್ಯರಾಗುವರು. ಅನುಭಾವಿಗಳಾದ ಬಿಬ್ಬಿ ಬಾಚಯ್ಯ ಶರಣರು “ಏಣಾಂಕಧರ ಸೋಮೇಶ್ವರ” ವಚನಾಂಕಿತದಿಂದ ವಚನಗಳನ್ನು ರಚಿಸಿರುವರು. ಇವರ ಸಿಕ್ಕ ವಚನಗಳು 102.
ನಿರ್ವಚನ:
ಇದು ಐಕ್ಯಸ್ಥಲದ ವಚನ. ಬ್ರಹ್ಮಾಂಡ ಮತ್ತು ಪಿಂಡಾಂಡಗಳ ಸಾಮರಸ್ಯ ಹೇಳುವ ವಚನವಿದು. ಪಂಚಭೂತಗಳಾದ ಭೂಮಿ, ಆಕಾಶ, ಬೆಂಕಿ, ನೀರು, ಗಾಳಿ ಇವುಗಳಿಂದಲೆ ರೂಪುಗೊಂಡಿರುವ ಈ ಪಿಂಡಾಂಡವು ಅದ್ಭುತವಾಗಿದೆ ಎನ್ನುತ್ತಾರೆ. ಈ ಪಿಂಡಾಂಡದಲ್ಲಿ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಶರೀರಗಳಿದ್ದು, ಶರಣರು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವೆಂಬ ಸಂಬಂಧಗಳನ್ನು ಇವುಗಳಿಗೆ ಕಲ್ಪಿಸಿದರು. ಈ ಮೂರನ್ನು ಅನುಸರಿಸಿ ಸಾಧಕ ಸಾಧನೆಗೈಯುವಾಗ ಈ ತ್ರಿವಿಧ ಅರ್ಪಣೆಯಲ್ಲಿ ತೊಡಗಿಸಿಕೊಳ್ಳಬೇಕು.
ಕೇವಲ ಬಾಹ್ಯ ಆಚರಣೆಗಳ ಮೂಲಕ ಮಾಡುವ ಭಕ್ತಿ ನೂರ್ಕಾಲ ಮಾಡಿದರೂ ವ್ಯರ್ಥ ಎನ್ನುತ್ತಾರೆ ಬಾಚಯ್ಯ ಶರಣರು. ಲೌಕಿಕ ಪದಾರ್ಥ ಬಳಸಿಕೊಂಡು ಅಲೌಕಿಕವಾದ ಸ್ಪಷ್ಟತೆ ಕೊಡುತ್ತಾರೆ. ಬಾಹ್ಯ ಮಡಿಕೆಯಲ್ಲಿ ನೀರು ಹಾಕಿ ಅದಕ್ಕೆ ಬೇಕಾದಷ್ಟು ಅಕ್ಕಿ ಹಾಕಿದರೆ ಮಾತ್ರ ಅನ್ನವಾಗುವದು. ಅಕ್ಕಿ ಹೆಚ್ಚಾಗಿ ನೀರು ಕಡಿಮೆಯಾದರೆ ಅನ್ನ ಹಾಳಾಗುವದು. ಹಾಗೆಯೆ ಈ ದೇಹವೆಂಬ ಮಡಿಕೆಯಲ್ಲಿ ಬಯಲವಿಲ್ಲದ ನೀರು ಎಂದರೆ ರೂಪಿಲ್ಲದ ಆತ್ಮ ತುಂಬಿಕೊಂಡಿದೆ. ಇಂತಹ ಆತ್ಮವನ್ನು ಅರಿಯಲು ಬಹಿರಂಗದ ಶುದ್ಧಿಗಿಂತ ಅಂತರಂಗದ ಶುದ್ಧತೆಗೆ ಗಮನವಿರಿಸಿ ನಡೆಯಬೇಕು. ಅಂದರೆ ಹಿಡಿದ ಲಿಂಗದೊಳು ಅನನ್ಯವಾದ ಭಕ್ತಿಯಿರಿಸಿ, ಅರಿಷಡ್‌ವರ್ಗಗಳನ್ನು ದೂರವಿರಿಸಿ ಏಕ ನಿಷ್ಠೆಯಿಂದ ನಡೆಯಬೇಕು. ಆ ಭಕ್ತಿಯು ಅರಿವಿನಿಂದೊಡಗೂಡಬೇಕು. ಗಂಜಿಯೆಲ್ಲವೂ ಇಂಗಿ ಹೋದಂತೆ ನಾನೆಂಬ ಅಹಂಕಾರ ಸುಟ್ಟು ಹೋಗಬೇಕು. ಆ ಅಹಂಕಾರ ಕಳೆದುಕೊಂಡಾಗ ಮಾತ್ರ ಸಾಧಕನಲ್ಲಿ ಏನೊಂದು ಉಳಿಯಕೂಡದು.
ಅಂತೆಯೆ ಬಾಚಯ್ಯ ಶರಣರು ಜ್ಞಾನವೆಂಬ ಬೆಂಕಿಯಲ್ಲಿ ಅಜ್ಞಾನವೆಂಬುದು ಅಳಿಸಿ ಹಾಕಬೇಕು ಎನ್ನುತ್ತಾರೆ. ಆಗ ಉಳಿಯುವ ನಿಷ್ಕಲ್ಮಶ ಭಕ್ತಿ ಮಾತ್ರ ಪರಶಿವನಿಗೆ ನೈವೇದ್ಯ ರೂಪದಲ್ಲಿ ಸಲ್ಲುತ್ತದೆ ಎಂಬುವುದು ಅವರ ವಿಚಾರ ಧಾರೆಯಾಗಿದೆ. ಅದೇ ಸಾಮರಸ್ಯ. ಬಯಲು ಸ್ಥಿತಿ. ಇಂತಹ ಲಿಂಗಾಂಗ ಸಾಮರಸ್ಯದ ಮಾರ್ಗದಲ್ಲಿ ತಾವು ಪ್ರಸಾದಿಯಾಗಿ ಏಣಾಂಕಧರ ಸೋಮೇಶ್ವರ ಎನ್ನುವ ನಿರಾಕಾರ ಶಿವನಿಗೆ ಪ್ರಸಾದಿಗಳಾದರು ಬಿಬ್ಬಿ ಬಾಚಯ್ಯ ಶರಣರು.
ಶ್ರೀಮತಿ ಮೈತ್ರಾ ಎಂ. ಕುಣಚಿ,
ವಚನ ಸಾಹಿತ್ಯ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್. ಸಂ. 91138 64117
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()




Total views : 55988