
ಧಾರ್ಮಿಕ ಮತ್ತು ವೈಚಾರಿಕ ನಿರ್ಣಯಗಳ ಒಟ್ಟು ಮೊತ್ತ ಮಹೇಶ್ವರಸ್ಥಲದಲ್ಲಿದೆ. ನಿಷ್ಠೆಯಿಂದ ಕೂಡಿದ ಭಕ್ತಿ. ಧರ್ಮದ ಕೊಡುಗೆ ಸುಬುದ್ದಿಯ ಮೂಲಕ ವೀರ ವ್ರತಾಚರಣೆಯನ್ನು ಗುರು-ಲಿಂಗಕ್ಕೆ ಅರ್ಪಿಸುವ ಉಪಾಸನೆಯನ್ನು ಮಹೇಶ್ವರಸ್ಥಲದಲ್ಲಿ ಮಾಡಬೇಕಾಗುತ್ತದೆ. ಮಹೇಶ್ವರನು ಸುಳ್ಳು ಹೇಳುವುದಿಲ್ಲ, ಆಚಾರವನ್ನು ಬಿಡುವುದಿಲ್ಲ. ಇತರರನ್ನು ಹಿಂಸಿಸುವುದಿಲ್ಲ. ಪರಧನ, ಪರಸ್ತ್ರೀ, ಪರನಿಂದೆಗಳನ್ನು ಸಹಿಸದ ಭಕ್ತನಾಗಿರಬೇಕು. ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕು. ಶುದ್ಧ ಮನಸ್ಸುಳ್ಳ ಮಹೇಶ್ವರಸ್ಥಲದಲ್ಲಿ ಮನ ಮತ್ತು ಇಂದ್ರಿಯ ಬೇರೆಡೆಗೆ ಹೋಗದಂತೆ ಗಟ್ಟಿಯಾಗಿ ಹಿಡಿದಿಡುವ ಪ್ರಯತ್ನ ಈ ಸ್ಥಲದಲ್ಲಿದೆ. ಲಿಂಗದಲ್ಲಿ ಪ್ರೇಮ, ಜಂಗಮದಲ್ಲಿ ದಾಸೋಹ, ಗುರು ಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿದ ಭಕ್ತನಾಗಿರಬೇಕು. ತಾತ್ವಿಕವಾಗಿ ಷಟಸ್ಥಲ ಮಾರ್ಗದಲ್ಲಿ ದೃಢ ನಂಬಿಕೆ ಮುಖ್ಯವಾಗಿರುತ್ತದೆ. ಶಿವನಿಂದೆಯನ್ನು ಮಹೇಶ್ವರನು ಕೇಳಬಾರದು. ಪರವಾದಿಗಳನ್ನು ಸಹಿಸಬಾರದು. ಹೀಗೆ ಮಹೇಶ್ವರಸ್ಥಲ ಪ್ರಕ್ರಿಯೆಯನ್ನು ಸಮರ್ಪಿಸಿಕೊಂಡು ಪ್ರಸಾದಿಸ್ಥಲಕ್ಕೆ ಪ್ರವೇಶಿಸಬೇಕಾಗುತ್ತದೆ.
ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ?
ಲಿಂಗಪೂಜೆಯಲ್ಲಿ ಲೀಯವಾಗಿ
ಅಂಗಗುಣವಿರೋಧಿಯಾಗದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ?
ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ?
ಕೂಡಲಚೆನ್ನಸಂಗಯ್ಯನಲ್ಲಿ,
ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-654/ವಚನ ಸಂಖ್ಯೆ-1371)
ಅವಿರಳಜ್ಞಾನಿ ಚೆನ್ನಬಸವಣ್ಣನವರ ಈ ವಚನದಲ್ಲಿ ಮಹೇಶ್ವರನು ಸದ್ಭಕ್ತನಾಗಬೇಕೆಂಬ ವಿವೇಚನೆಯನ್ನು ಕಾಣಬಹುದು. ಮಹೇಶ್ವರ ಅನ್ಯ ಸ್ತ್ರೀ, ಅನ್ಯರ ಧನಕ್ಕೆ ಆಸೆಪಡಬಾರದು. ಆಧ್ಯಾತ್ಮಿಕ ಪಥದಲ್ಲಿ ಪರಸತಿ, ಪರಧನ ವ್ಯಾಮೋಹಕ್ಕೆ ಒಳಪಟ್ಟರೆ ಏಕಾಗ್ರತೆಯ ಈ ಚಿತ್ತಕ್ಕೆ ಮನ ಸ್ಪಂದಿಸುವುದಿಲ್ಲ. ಲಿಂಗ ಭಕ್ತಿಯಲ್ಲಿ ಲೀನವಾಗದ ಹೊರತು ಮಹೇಶ್ವರಸ್ಥಲವನ್ನು ಮುಟ್ಟಲು ಸಾಧ್ಯವಿಲ್ಲ. ಬಸವಣ್ಣನವರ ಒಂದು ವಚನದಂತೆ:
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು?
ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-213/ವಚನ ಸಂಖ್ಯೆ-775)
ಎಲ್ಲವೂ ತನಗೆ ಬೇಕೆಂಬ ಆಸೆ ಈ ದೇಹಕ್ಕೆ ಇದೆ. ನಮಗೆ ಲಭಿಸಿದ್ದನ್ನು ಲಿಂಗಾರ್ಪಿತವ ಮಾಡಬೇಕು. ಅದುವೇ ಶಿವಪ್ರಸಾದ, ಲಿಂಗಪ್ರಸಾದ, ಗುರುಪ್ರಸಾದವಾಗುತ್ತದೆ.
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-137/ವಚನ ಸಂಖ್ಯೆ-421)
ಮಹೇಶ್ವರಸ್ಥಲದಲ್ಲಿ ಅದ್ವೈತ ಭಾವ, ಶರಣಾಗತಿ ಭಾವವಾಗಿ ಪ್ರಕಟವಾಗುತ್ತದೆ. ಮಹೇಶ್ವರ ಶಕ್ತಿಯಲ್ಲಿ ಲೀನವಾಗುವ ಆಧ್ಯಾತ್ಮಿಕ ಶಾಸ್ತ್ರೀಯತೆ ಅದು. ಸ್ವತಃ ವ್ಯೋಮಮೂರ್ತಿ ಅಲ್ಲಮ ಪ್ರಭುಗಳೇ ಭಾವವೆ ಐಕ್ಯವಾದ ಬಳಿಕ ಬಯಸುವುದು ಇನ್ನಾರನಯ್ಯ ಎಂದು ನಿರೂಪಣೆ ಮಾಡುತ್ತಾರೆ.
ಅಂಗ-ಲಿಂಗ ಸಂಬಂಧ ತತ್ವವಾಗಿ ಆಧ್ಯಾತ್ಮಿಕ ಸಂಕಲ್ಪದ ಸುಖ ನೀಡುತ್ತದೆ. ನೈತಿಕವಾಗಿ ನಮಗೆ ಲಭ್ಯವಾದದ್ದನ್ನು ಶಿವನಿಗೆ ಸಮರ್ಪಿಸಿ ನೈವೇದ್ಯವೆಂದು ಸ್ವೀಕರಿಸಬೇಕು. ಮಹೇಶ್ವರನಾದ ಭಕ್ತನು ಶರಣಾಗತಿ ಭಾವದಲ್ಲಿ ಮಿಂದೆದ್ದು ತನ್ನನ್ನು ಸಮರ್ಪಿಸಿಕೊಳ್ಳುವುದೇ ಪ್ರಸಾದ ಕಾಯವಾಗುತ್ತದೆ. ಶಿವನೊಂದಿಗೆ ಏಕ ರೂಪ ಧೋರಣೆ ತಾಳಲಾಗದ ಡಾಂಬಿಕ ಭಕ್ತರನ್ನು ಕಂಡು ಮರಗುವ ನಿಷ್ಠೆ ಇಲ್ಲದ ಭಕ್ತಿಯನ್ನು ಕಂಡು ವಿಡಂಬಿಸುವ ಪರಿ ಹೀಗಿದೆ.
ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-118)
ಧಾರ್ಮಿಕ ಮತ್ತು ಸಾಮಾಜಿಕ ಹಿತಚಿಂತಕರಾದ ಶರಣರು ನಿಷ್ಠಾ ಭಕ್ತಿಯ ಸತ್ಯಾ ಸತ್ಯತೆಯ ಒಳಿತು ಕೆಡುಕುಗಳನ್ನು ಪರಿಶೀಲಿಸಿ ಮುನ್ನಡೆದವರಾಗಿದ್ದರು. ಆಡಂಬರದ ಪೂಜೆ ತೋರಿಕೆಯ ಪೂಜೆಯಾಗುತ್ತದೆ ಎಂದು ಎಚ್ಚರಿಸಿದರು. ತೋರಿಕೆಯ ವ್ರತ, ಪೂಜೆ ಅಲಂಕಾರಗಳಿಂದ ಏಕಾಗ್ರತಾ ಭಕ್ತಿಗೆ ತೊಂದರೆಯಾಗುತ್ತದೆ. ಈ ಕಾಯ ಮಹೇಶ್ವರನಾಗಬೇಕಾದರೆ ನಿಷ್ಕಲ್ಮಶ ನಿಷ್ಕಳಂಕ ಮನಸ್ಸಾಗಿರಬೇಕು. ಮಡಿ, ಪತ್ರೆ, ಧೂಪ-ದೀಪಗಳು ಅಂಗ-ಲಿಂಗ ಮನಸ್ಸಿನ ಈ ಕಾಯ ಸ್ವೀಕರಿಸುವುದಿಲ್ಲ. ಗುಡಿ-ಗೋಪುರಗಳಲ್ಲಿ ಜನ-ಜಂಗುಳಿಯ ಜಾತ್ರೆಯಲ್ಲಿ ಲಿಂಗದ ಅಲಂಕಾರದಲ್ಲಿ ದೇವರು ಕಾಣುವುದಿಲ್ಲ. ಮನ ಗುಹೇಶ್ವರನಾಗಬೇಕಾದರೆ ಅಸಾಧಾರಣ ಶಕ್ತಿ ಮಹೇಶ್ವರನ ನಿಲುವಿಗೆ ತಲುಪಬೇಕು.
ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ,
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ
ಶರಣೆನ್ನಬಾರದು ಎಲೆ ತಂದೆ.
ಆಡಬಹುದು ಪಾಡಬಹುದಲ್ಲದೆ,
ನುಡಿದಂತೆ ನಡೆಯಲು ಬಾರದು ಎಲೆ ತಂದೆ.
ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು
ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-121/ವಚನ ಸಂಖ್ಯೆ-348)
ಮಹೇಶ್ವರ ಮಾರ್ಗದಲ್ಲಿ ಸುಲಭವಾಗಿ ಸಾಮ್ಯತೆಯನ್ನು ಕಾಣಬೇಕಾದರೆ ಲಿಂಗ ಜಂಗಮವಾಗಬೇಕು. ಇದೊಂದು ತೆರನಾದ ಆರಾಧನಾ ಭಾವವದು. ಲಿಂಗವೇ ಪತಿಯಾಗುವ ಶರಣ ಭಾವ. ಅಂಗ ಗುಣಗಳು ಅಳಿದು ಲಿಂಗ ಗುಣಗಳಾಗುವ ಮಹೇಶ್ವರನ ಫಲ. ಲಿಂಗಮಯವಾದ ಈ ದೇಹದಲ್ಲಿ ಅರಿವೆಂಬ ಜಂಗಮನನ್ನು ಪೂಜಿಸುವುದು. ಚೆನ್ನಮಲ್ಲಿಕಾರ್ಜುನನ್ನೇ ಪತಿಯಾಗಿಸಿಕೊಂಡ ಅಕ್ಕಮಹಾದೇವಿಯವರಿಗೆ ಮಹೇಶ್ವರನೇ ಸಮಾಜ. ಮಾನವ ಸಮಾಜವಾದ ಜಂಗಮಕ್ಕೆ ವಿಶೇಷವಾದ ಕಾಳಜಿ. ಕಪಟ ಮನದಿಂದ ಪೂಜಿಸಿದರೆ ಜಂಗಮಕ್ಕೆ ಶರಣಾಗಬಾರದು. ಮನವು ಸುವಿಚಾರಗಳ ನೆಲೆಯದು. ದುರ್ವಿಚಾರಗಳಿಗೆ ಆಸ್ಪದವಿಲ್ಲ. ಸತ್ಯ, ವಿವೇಕದಲ್ಲಿ ಮನವೇ ಲಿಂಗವಾಗುವ ಮಹೇಶ್ವರನಾಗುವ ಅವಸ್ಥೆ ಅದು. ಮನ-ಚಿತ್ತ-ಬುದ್ದಿ ಶೂನ್ಯಭಾವದಲ್ಲಿ ಜಂಗಮವಾಗುತ್ತದೆ.
ಜಂಗಮವೇ ಲಿಂಗ ಲಿಂಗವೇ ಜಂಗಮನಾಗಿ ಸಮಾಜಮುಖಿಯೆಡೆಗೆ ಎಚ್ಚರಿಸುತ್ತದೆ. ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನ್ನು ಮಹೇಶ್ವರನಸ್ಥಾನದಲ್ಲಿ ಭಕ್ತಿಯ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ. ಮಹೇಶ್ವರಸ್ಥಲವೆನ್ನುವುದು ಅತೀಂದ್ರಿಯ ಅನುಭವದ ಶಕ್ತಿಯದು.
12 ನೇ ಶತಮಾನದಲ್ಲಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮಾಟ, ಮಂತ್ರ, ಅಣಿಮಾ, ಅಷ್ಟಸಿದ್ದಿಗಳು, ಅಂಜನ, ಘಟಿಕ, ನಾರು-ಬೇರು, ರಸ ಸಿದ್ದಿಗಳಿಗೆ ಮಾರು ಹೋಗುವ ಜನರಿಗೆ ಶರಣರು ಎಚ್ಚರಿಸಿದರು. ಶರಣ ಪ್ರೇಮ, ಆತ್ಮ ವಿಶ್ವಾಸದ ನಿಷ್ಕಾಮ ಭಕ್ತಿಯನ್ನು ಪ್ರೇರೇಪಿಸಿದರು. ಅಸಮಾನತೆ, ಅಸ್ಪೃಶ್ಯತೆಯ ನಿವಾರಣೆ, ವರ್ಗ-ವರ್ಣಗಳ ಪ್ರತಿಭಟನೆ ಇವೆಲ್ಲವನ್ನು ಮಹೇಶ್ವರಸ್ಥಲದಲ್ಲಿ ಅಳವಡಿಸಿಕೊಂಡು ಅನುಭಾವಿಕ ಮಾರ್ಗವನ್ನು ಗಟ್ಟಿಗೊಳಿಸಿದರು. ಷಟಸ್ಥಲದ ಮೊದಲ ಒಳ ನೋಟದ ವಿವರಗಳು ಆಧ್ಯಾತ್ಮಿಕ ಪಯಣವನ್ನು ಮುನ್ನಡೆಸುವ ಶರಣ ಧರ್ಮವನ್ನು ಗೌರವಿಸುವ ಪರಿ ಇದಾಗಿದೆ. ಭಕ್ತ ಮತ್ತು ಮಹೇಶ್ವರಸ್ಥಲದ ಮುಖಾಮುಖಿಯ ಒಳನೋಟಗಳಲ್ಲಿ ಭಕ್ತಿ, ಶ್ರದ್ದೆ, ಜ್ಞಾನ, ಧರ್ಮ, ಆತ್ಮ ವಿಶ್ವಾಸಗಳು ಒಂದು ಗಟ್ಟಿಯಾದ ಜ್ಞಾನವನ್ನು ಕಟ್ಟಲು ಸಾದ್ಯವಾಗುತ್ತದೆ. ಶ್ರದ್ದೆ, ನಿಷ್ಠಾ ಭಕ್ತಿಯ ಪರಾಮರ್ಶನದಲ್ಲಿ ಸತ್ಯ ಮತ್ತು ಅಸತ್ಯಗಳ ತುಲನಾತ್ಮಕತೆ ನಮ್ಮನ್ನು ಸೆಳೆಯುತ್ತದೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in