ಮಾದಾರ ಚನ್ನಯ್ಯನವರ ಜಯಂತಿ | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾದಾರ ಚನ್ನಯ್ಯನವರ ಜಯಂತಿ ಅಂಗವಾಗಿ ಅವರನ ಸಾತ್ವಿಕ ಬದುಕು, ನಡೆ ನುಡಿ ಸಿದ್ಧಾಂತ ಕುರಿತು ಲೇಖನ.

ಇದ್ದು ಇರದಂತೆ, ಹೊದ್ದೂ ಹೊದೆಯದಂತೆ, ಸದ್ದು ಗದ್ದಲವಿಲ್ಲದೆ, ನಿರಾಳವಾಗಿ, ನಿತ್ಯ ತೃಪ್ತನಾಗಿ ಬದುಕಿದ್ದ ಚನ್ನಯ್ಯನವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ಕಂಚಿಪುರದಲ್ಲಿ. “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ” “ಆಚಾರವೇಕುಲ, ಅನಾಚಾರವೇ ಹೊಲೆಯಂದು ಅರಿತು ಶ್ರಮ ಗೌರವ ಅಳವಡಿಸಿಕೊಂಡ ಭಕ್ತ ಶ್ರೇಷ್ಠ, ಕಾಯಕನಿಷ್ಠೆಯ ಮೇರು ಶಿಖರವನ್ನು ಅಲಂಕರಿಸಿದ ಶರಣ ಚನ್ನಯ್ಯನವರು 12 ನೇ ಶತಮಾನದ ಬಸವ ಸಂಕುಲದ ಆದರ್ಶ ಪುರುಷ. ಮಾದಾರ ಚನ್ನಯ್ಯನವರು ತಮಿಳುನಾಡಿನ ಕಂಚಿ ಪಟ್ಟಣದಲ್ಲಿ ಚೋಳ ರಾಜನ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕದಲ್ಲಿ ನಿರತರಾಗಿದ್ದವರು. ಕಾಯಕಕ್ಕೆ ಪ್ರಾಮುಖ್ಯತೆ ಕೊಟ್ಟು ತಮ್ಮ ಆದರ್ಶ ನಡೆ ನುಡಿಯಿಂದ ಶ್ರೇಷ್ಠರಾಗಿದ್ದರು. ಶರಣರು ಕಾಯಕ ಜೀವಿಗಳನ್ನು ಶ್ರೇಷ್ಠರೆಂದು ಕಾಯಕವಿಲ್ಲದಿದ್ದರೆ ಕನಿಷ್ಠ ಎಂದು ಹೇಳಿದರು. ಮಾದಾರ ಚನ್ನಯ್ಯನವರು ಕಲ್ಯಾಣದ ಬಸವಣ್ಣನವರ ಪ್ರಭೆ ಮತ್ತು ಶರಣರ ಅನುಭವಗಳ ಚಿಂತನೆಗಳ ಆಕರ್ಷಣೆಗೆ ಒಳಗಾಗಿ ಕಲ್ಯಾಣಕ್ಕೆ ಬಂದು ತಮ್ಮ ಮೂಲ ಕಾಯಕವಾದ ಪಾದರಕ್ಷೆ ತಯಾರಿಸುವ ಕಾಯಕದಲ್ಲಿ ನಿರತರಾಗಿ ತಮ್ಮ ವಿಭಿನ್ನ ವೈಚಾರಿಕ ಅನುಭವದಿಂದ ವಚನಗಳನ್ನು ರಚನೆ ಮಾಡಿದರು. ಇವರ ವಚನಗಳು ಸರಳ, ಸುಂದರ ಹಾಗೂ ನೇರವಾಗಿ ಅಂದಿನ ಸಮಾಜದ ವ್ಯವಸ್ಥೆಯಲ್ಲಿರುವ ಮೌಢ್ಯತೆ, ಅಸಮಾನತೆ ವಿರುದ್ಧ ಚಾಟಿಯನ್ನು ಬೀಸಿದ ನುಡಿಗಳನ್ನು ಅವರ ವಚನಗಳಲ್ಲಿ ಕಾಣಬಹುದು.

ರಗಳೆ ಕವಿ ಹರಿಹರ ಚನ್ನಯ್ಯನವರ ವ್ಯಕ್ತಿತ್ವದ ಕುರಿತು

ಚನ್ನನ ನಿಧಿ, ಚನ್ನನ ಸುಧೆ
ಚನ್ನನ ಸಕಳಾಯಂ
ಚನ್ನನ ವೃತ ಮುದ್ರಂ, ಚನ್ನ
ರಕ್ಷಿಸು ಗೆ ನಂ ಚನ್ನನಸುತನೆಂದು
ಹೇಳಿದ್ದಾರೆ. ಬಸವಣ್ಣನವರು
ಕುಲಕ್ಕೆ ತಿಲಕ ನಮ್ಮ ಮಾದಾರ ಚನ್ನಯ್ಯ

ಎಂದು ಚನ್ನಯ್ಯನ ಶ್ರೇಷ್ಠ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಚನ್ನಯ್ಯನವರದು ನಡೆಯೊಳಗಣ ನುಡಿಯಾಗಿತ್ತು. ನಡೆದ ನಂತರವೇ ನುಡಿಯಲು ಬದ್ಧರಾಗಿದ್ದರು. ಅದಕ್ಕಾಗಿಯೇ ಬಸವಣ್ಣನವರು ಮಾದಾರ ಚನ್ನಯ್ಯನ ಮಗ ನಾನೆಂದು ಹೇಳುತ್ತಿದ್ದರು. ಚನ್ನಯ್ಯನವರು ತಮ್ಮ ಸಾತ್ವಿಕ ಬದುಕಿನಿಂದಾಗಿ ಕಾಯಕ, ಪ್ರಸಾದ, ದಾಸೋಹ ಮತ್ತು ತತ್ವಗಳಿಂದಾಗಿ ಅನುಭವ ಮಂಟಪದಲ್ಲಿ ಮಹಾನ್ ಶರಣ ಎಸಿಕೊಳ್ಳುತ್ತಾರೆ.

ಮಾದರ ಚನ್ನಯ್ಯನವರ ಅಂಬಲಿ ವಿಷಯದ ಕುರಿತು ಹೇಳುವದಾದರೆ “ಅಂಬಲಿ ಕಂಬಳಿ ಆಸ್ತಿ ಮಿಕ್ಕಿದ್ದೆಲ್ಲಾ ಜಾಸ್ತಿ” ಅಂತ ಹೇಳುವ ಮಾತಿನಲ್ಲಿ ಬುದ್ಧನು ಹೇಳಿದ ಹಾಗೆ “ಆಸೆಯೇ ದುಃಖಕ್ಕೆ ಮೂಲ” ಎಂದು. ಬಸವಣ್ಣನವರು “ಛಲಬೇಕು ಶರಣಂಗೆ ಪರಧನವನ್ನೊಲ್ಲೆನೆಂಬ” “ಅನ್ನದೊಳಗಂದಗುಳ ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಎಂದೆನಾದರೆ ನಿಮ್ಮಾಣಿ” ಎನ್ನುವ ಶರಣರ ಅನುಭಾವದ ನುಡಿಗಳನ್ನು ಚನ್ನಯ್ಯನವರು ಬಹಳ ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ. ಸರಳವಾಗಿ ಬದುಕುವ, ಜನ ಸಾಮಾನ್ಯರಿಗೆ, ಬಡವರಿಗೆ ಪೌಷ್ಟಿಕವಾದ ಆಹಾರ ಅಂಬಲಿ ಮತ್ತು ಮಲಗಲು ಕಂಬಳಿ ಇಷ್ಟಿದ್ದರೆ ಸಾಕು ಮಿಕ್ಕಿದ್ದೆಲ್ಲ ಜಾಸ್ತಿ ಎಂಬ ಮಾತನ್ನು ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದಾರೆ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚಾರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1153)

ನಡೆ ನುಡಿ ಒಂದಾಗಿರದಿದ್ದರೆ ಅದು ಆತ್ಮ ವಂಚನೆಯಾಗುವುದೆಂದು ನಡೆ-ನುಡಿಯೊಳಗೊಂದಾಗಿ ಬದುಕುವವರೇ ಕುಲಜರು. ಅವರಿಗೆ ಕುಲದ ಸೂತಕವಿಲ್ಲ, ಹೊಲೆಯ ಸೂತಕವಿಲ್ಲ ಎಂದಿದ್ದಾರೆ. ಈ ಮೇಲಿನ ವಚನದಲ್ಲಿ ಅಸ್ಪೃಶ್ಯತೆ ನಿವಾರಣೆ, ವರ್ಣಭೇದ ನಿವಾರಣೆಯನ್ನು ದೃಢತೆಯಿಂದ ತೋರಿದ್ದಾಗಿದ್ದು ಇಂದಿನ ಸಮಾಜಕ್ಕೆ ಒಳ್ಳೆಯ ದಿಕ್ಸೂಚಿಯಾಗಿದೆ. ಕೆಟ್ಟ ನಡವಳಿಕೆ ಇದ್ದು ಒಳ್ಳೆಯ ಮಾತುಗಳನ್ನಾಡಿದರೆ ಅದು ಮುಕ್ತಿ ಸಿಗದ ಹೊಲೆ ಬದುಕು ಎಂದೆನ್ನುತ್ತಾ “ಸದಾಚಾರವೇ ಕುಲ ಅನಾಚಾರವೇ ಹೊಲೆ” ಎಂಬ ಮಾರ್ಮಿಕವಾದ ನುಡಿಯನ್ನು ವ್ಯಕ್ತಪಡಿಸಿದ್ದು ಅವರ ಗಟ್ಟಿಯಾದ ಸಿದ್ದಾಂತಕ್ಕೆ ಸಾಕ್ಷಿಯಾಗಿದೆ. ಅವರ ಪ್ರಕಾರ ಜನನದಿಂದ ಹೊಲೆತನ ಬರುವುದಿಲ್ಲ, ವ್ಯಕ್ತಿಯ ಗುಣ, ಸ್ವಭಾವ, ಪಾಪಕೃತ್ಯಗಳಿಂದ ಹೊಲೆತನ ಬರುತ್ತದೆ. ಅಂತವರು ಮಾತ್ರ ನಿಜಕ್ಕೂ ಅಸ್ಪೃಶ್ಯರೆಂದು ಅವರು ಅರಿತಿದ್ದರು. ಹಲವರಲ್ಲಿರುವ ಜಾತಿ ಭೇದಗಳನ್ನು, ಮೇಲು ಕೀಳುಗಳನ್ನು ಮತ್ತು ಕಚ್ಚಾಟಗಳನ್ನು ಕಂಡ ಅಂದಿನ ಬಸವಾದಿ ಶರಣರ ಮನಸ್ಸು ರೋಸಿ ಹೋಗಿತ್ತು. ಶರಣರಿಗೆ ಮಾನವ ವರ್ಗದಲ್ಲಿ ಕಂಡದ್ದು ಎರಡೇ ಕುಲಗಳು. ಅವು ಗುಣಗಳ ಮನಸ್ಥಿತಿ ಮತ್ತು ನಡೆಯ ಆಧಾರದ ಮೇಲೆ ಗುರುತಿಸಲಾಗಿರುವ ನೀಚ ಮತ್ತು ಶ್ರೇಷ್ಠ ಕುಲಗಳು ಮಾತ್ರ. ಚನ್ನಯ್ಯನವರಂತೂ ಸ್ವತಃ ಅನುಭವಿಸಿದ ನೋವಿನ ಧ್ವನಿಯನ್ನು ಮತ್ತು ಜಾತಿಗಿಂತ ಕಾಯಕಕ್ಕೆ ಕೊಟ್ಟಿರುವ ಮಹತ್ವವನ್ನು ಅವರ ಈ ವಚನಗಳಲ್ಲಿ ಕಾಣುತ್ತೇವೆ.

ವೇದ ಶಾಸ್ತ್ರಕ್ಕೆ ಹಾರುವನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ,
ಇಂತೀ ಜಾತಿಗೋತ್ರದೊಳಗಾದ
ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ,
ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ.
ಬ್ರಹ್ಮವನರಿದಲ್ಲಿ ಬ್ರಾಹ್ಮಣ,
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ,
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾ[ತ್ಮ]ರಾಮ ರಾಮನಾ
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-449/ವಚನ ಸಂಖ್ಯೆ-1157)

ಇಲ್ಲಿ ಮಾನವ ಮತ್ತು ಪ್ರಾಣಿಗಳಲ್ಲಿ ವಿಪ್ರ, ಶ್ವಪಚನಲ್ಲಿರುವದು ಒಂದೇ ಆತ್ಮ. ಹೀಗಾದಾಗ ಇವನು ಮಾದಿಗ, ಇವನು ಕೊರಚ, ಇವನು ಶೂದ್ರ ಎಂದು ವರ್ಗೀಕರಿಸಿ ಪರಸ್ಪರ ಮನುಷ್ಯರನ್ನೇ ಮನುಷ್ಯರು ನಾಯಿಗಿಂತಲೂ ಕಡೆಯಾಗಿ ಕಾಣುತ್ತಿರುವದನ್ನು ಬಹಳ ನೋವಿನಿಂದ ಹೇಳಿದ್ದಾರೆ.  

ಈ ಜಾತಿ, ಅಸ್ಪೃಷ್ಟತೆ ವ್ಯವಸ್ಥೆ ಇಂದಿಗೂ ಜೀವಂತವಾಗಿರುವುದನ್ನು ನಾವು ನಿತ್ಯ ಕಾಣುತ್ತೇವೆ. ಬಸವಾದಿ ಶರಣರ ಪೂರ್ವದಲ್ಲಿ ಅದೆಂತಹ ಘೋರಂಧಕಾರ ತುಂಬಿತೆಂಬುದನ್ನೂ ಊಹಿಸಿಕೊಳ್ಳಲು ಅಸಾಧ್ಯ. ಅಂತಹ ಘೋರ ಜಾತಿ ಪದ್ಧತಿಯ ಬೇರನ್ನು ಕಿತ್ತೆಸೆಯುವ ಕಾರ್ಯವನ್ನು ಚನ್ನಯ್ಯನವರನ್ನೊಳಗೊಂಡು ಬಸವಾದಿ ಪ್ರಮಥರೆಲ್ಲ ಮಾಡಿದರು. ಇದಕ್ಕೆ ಚನ್ನಯ್ಯನವರ ವಚನಗಳು ಇಂದಿನ ಅವ್ಯವಸ್ಥೆಯ ಸುಧಾರಣೆಗೆ ಹಿಡಿದ ಕೈಗನ್ನಡಿಯಾಗಿವೆ. ಹಿಂದುಗಳೇ ಹಿಂದುಗಳನ್ನು ತುಳಿದು ಪಾದದಡಿಯಲ್ಲಿ ಹೊಸಿಕಿ ಹಾಕಿರುವ  ಬಗೆಗೆ ಶರಣರಿಗೆ ನೋವಿದೆ. ಇಂಥ ಕಣ್ಣೀರಿನ ಕಣ್ಣುಗಳುನ್ನು ಒರೆಸಲು ಚನ್ನಯ್ಯನವರು ದೇವರ ಬಗೆಗೆ, ಧರ್ಮದ ಬಗೆಗೆ ತಿಳಿಸುತ್ತಾರೆ. ಪುರೋಹಿತರು ತಮ್ಮ ಅನುಕೂಲಕ್ಕಾಗಿ ತಾವೇ ರಚಿಸಿಕೊಂಡಿರುವ ಪುಸ್ತಕಗಳ ತತ್ವಗಳನ್ನು ಕಿತ್ತೆಸೆದು ಕಾಯಕ, ದಾಸೋಹ, ಭಕ್ತಿ, ದಯೆ, ಅಂತಃಕರಣವನ್ನು ಶೂದ್ರರಿಗೆ, ಅಸ್ಪೃಶ್ಯರಿಗೆ ತೋರಿಸಿದ್ದಾರೆ.

ಇವರ ನಡೆ-ನುಡಿ, ಆಚಾರ-ವಿಚಾರ, ಕಾಯಕ-ದಾಸೋಹ ಇವೆಲ್ಲವನ್ನು  ಪರಿಗಣಿಸಿ ಬಸವಣ್ಣನವರು ಹೇಳುತ್ತಾರೆ

ಚೆನ್ನ ಚೇರಮನ ಬಂಟ ನಾನಯ್ಯಾ,
ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು.
ಕೂಡಲಸಂಗನ ಶರಣರೊಡೆಯರಾಗಿ
ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-88/ವಚನ ಸಂಖ್ಯೆ-338)

ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್‍ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-343)

ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-344)

ಸೆಟ್ಟಿಯೆಂದೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ
ಕೂಡಲಸಂಗಯ್ಯ ನಗುವನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-345)

ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ,
ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-346)

ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದಡೆಯೂ “ಅಯ್ಯಾ, ಅಯ್ಯಾ” ಎನಲಾರೆ.
ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು.
ಕೂಡಲಸಂಗನ ಮಹಾಮನೆಯಲಿ
ಧರ್ಮಸಂತಾನಿ ಭಂಡಾರಿ ಬಸವಣ್ಣನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-347)

ಹರನು ಮೂಲಿಗನಾಗಿ, ಪುರಾತರೊಳಗಾಗಿ,
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ.
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-348)

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ? ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-349)

ಹಿರಿಯಯ್ಯ ಶ್ವಪಚಯ್ಯ,
ಕಿರಿಯಯ್ಯ ಡೋಹರ ಕಕ್ಕಯ್ಯ,
ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ.
ಕೂಡಲಸಂಗಮದೇವಾ,
ನಿಮ್ಮ ಶರಣರೊಲಿದೆನ್ನ ಸಲಹುವರಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-351)

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೊರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ
ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-352)

ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು.
ಬಾಣನವ ನಾನು, ಮಯೂರನವ ನಾನು,
ಕಾಳಿದಾಸನವ ನಾನು.
ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ
ಎತ್ತಿ ಮುದ್ದಾಡಿಸಿದರೆನ್ನ, ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-353)

ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು,
ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು,
ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯ ನಿಮ್ಮಡಿಯಾದ.
ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ?
“ಶ್ವಪಚೋsಪಿ ಮುನಿಶ್ರೇಷ್ಠೋ ಯಸ್ತು ಲಿಂಗಾರ್ಚನೇ ರತಃ
ಲಿಂಗಾರ್ಚನವಿಹೀನೋsಪಿ ಬ್ರಾಹ್ಮಣಃ ಶ್ವಪಚಾಧಮಃ ಎಂದುದಾಗಿ,
ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು?
ಆತನೇ ಹೊಲೆಯ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-164/ವಚನ ಸಂಖ್ಯೆ-605)

ಸಿರಿಯಾಳನ ಮಗನ ಬಾಣಸವ ಮಾಡಿಸಿ
ಉಣಲೊಲ್ಲದೆ, ಕಾಡಿದೆ.
ಚೋಳನ ಮನೆಯಲು ಉಣಲೊಲ್ಲದೆ,
ಚೆನ್ನನ ಮನೆಯಲುಂಡೆ.
ಒಬ್ಬರಿಗೊಂದು ಪರಿಯ ಮಾಡಿದೆ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-201/ವಚನ ಸಂಖ್ಯೆ-741)

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ!
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ!
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-203/ವಚನ ಸಂಖ್ಯೆ-750)

ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ.
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-232)

ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ!
ದೇವಾ ನೀನೊಲಿದವನ, ಸ್ವಾಮೀ ನೀ ಹಿಡಿದವನ ಕುಲವೇನೋ!
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
ನಿಮ್ಮಿಂದಧಿಕ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-199/ವಚನ ಸಂಖ್ಯೆ-732)

ಎಂದು ಬಸವಣ್ಣನವರು ತಮ್ಮ ಹಲವಾರು ವಚನಗಳಲ್ಲಿ ಶರಣ ಮಾದಾರ ಚನ್ನಯ್ಯನವರನ್ನು ಕೊಂಡಾಡಿದ್ದಾರೆ. ಶಿವನನ್ನು ಆರಾಧಿಸಿ ಕುಲಕ್ಕೆ ಕೀರ್ತಿ ತಂದು ಶರಣ ಪಥದಲ್ಲಿ ದೇವರನ್ನು  ಒಲಿಸಿಕೊಂಡಿರುವ ಚನ್ನಯ್ಯನವರನ್ನು ಬಸವಣ್ಣನವರು ತಮ್ಮ ವಚನದಲ್ಲಿ ಹಾಡಿ ಹೋಗಳಿದ್ದಾರೆ.

ಜಾತೀಯ ಕಾರಣದಿಂದಾಗಿ ಕೀಳಾಗಿ ಕಾಣಲ್ಪಡುವ ಜನರಿಗೆ ದೇವರನ್ನು ಪೂಜಿಸುವ ಒಲಿಸಿಕೊಳ್ಳುವ ಪರಿಯನ್ನು ತಿಳಿಸಿದರು. ಪ್ರತಿಯೊಬ್ಬನ ಹೃದಯದಲ್ಲಿ ಅಡಗಿರುವ ದೈವತ್ವವನ್ನು ಬೆಳಕಿಗೆ ತಂದು ಕುಲ ಜಾತಿಯನ್ನು ಮೀರಿ ದೇವರನ್ನ ಒಲಿಸಿಕೊಂಡವರನ್ನು ಶರಣರೆಂದು ಕರೆದರು. ಜಾತಿ, ಕುಲ ಎಂದು ಟೀಕಿಸುವ ಜನರಿಗೆ ನೇರವಾಗಿ

ವೇದವನೋದಿದಡೇನು?
ಶಾಸ್ತ್ರವ ಕೇಳಿದಡೇನಯ್ಯಾ?
ಜಪವ ಮಾಡಿದಡೇನು?
ತಪವ ಮಾಡಿದಡೇನಯ್ಯಾ?
ಏನ ಮಾಡಿದಡೇನು?
ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-162/ವಚನ ಸಂಖ್ಯೆ-599)

ವೇದ ಶಾಸ್ತ್ರ ಪುರಾಣವನ್ನು ಓದಿ ಜಪ ತಪವನ್ನು ಮಾಡಿ ಆತ್ಮಜ್ಞಾನವನ್ನು ಹೊಂದದೆ ಢಾಂಬಿಕ ಆಚರಣೆಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಕಾಯಕ ನಿಜ ಭಕ್ತಿಯಿಂದ ಮಾತ್ರ ಪರಮಾತ್ಮನನ್ನು ತಲುಪಬಹುದು ಎಂದು ಶರಣರು ಹೇಳುತ್ತಾರೆ.

12 ನೇ ಶತಮಾನದಲ್ಲಿಯೇ ಇಂತಹ ಸಾಮಾಜಿಕ ಬದಲಾವಣೆ ತಂದು ಮಾನವ ಕುಲವನ್ನು ಉದ್ದರಿಸಿದ ಮಹಾ ಮಾನವತಾವಾದಿ ಬಸವಣ್ಣನವರು ಕಾಯಕದ ಮೂಲಕ ಆರ್ಥಿಕ ಸಬಲತೆಯನ್ನು, ವೃತ್ತಿ ಗೌರವವನ್ನು ಜಾರಿಗೆ ತಂದರು. ಸಮಾನತೆಯ ಮೂಲಕ ಸಾಮಾಜಿಕ ಸಬಲತೆಯನ್ನು, ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ದಾಸೋಹದ ಮೂಲಕ ಸಹಕಾರ ತತ್ವವನ್ನು ಹಂಚಿಕೊಂಡು ತಿನ್ನುವ ನೀತಿಯನ್ನು ಬೆಳೆಸಿದರು. ದಯೆಯ ಮೂಲಕ ಮಾನವೀಯತೆಯ ಪರಿಕಲ್ಪನೆಯನ್ನು ಬಳಸಿ ಪ್ರಾಣಿ ಹಿಂಸೆಯನ್ನು ತಡೆಗಟ್ಟಿದರು. ಮಾನವ ಕುಲಕ್ಕೆ ಅವರು ಬೋಧಿಸಿದ ಆತ್ಮಜ್ಞಾನ, ತತ್ವಜ್ಞಾನ ಮನುಕುಲವನ್ನು ಸುಜ್ಞಾನದೆಡಿಗೆ ಕೊಂಡೊಯ್ಯುವ ದಿವ್ಯಜೋತಿಗಳು.

ಶ್ರೀಮತಿ. ಅಮರವಾಣಿ ಐದನಾಳ,
ಅಧ್ಯಕ್ಷರು,
ಜಾಗತಿಕ ಲಿಂಗಾಯತ ಮಹಾಸಭಾ – ಮಹಿಳಾ ಘಟಕ,
ಲಿಂಗಸುಗೂರು.
ಮೋಬೈಲ್‌ ಸಂ. 99809 58759

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply