ಮುಚ್ಚಿದ ಸ್ಥಾವರ; ತೆರೆದ ಜಂಗಮ | ಶ್ರೀ. ಎನ್. ಸಿ. ಶಿವಪ್ರಕಾಶ, ಮಸ್ಕತ್, ಒಮಾನ್.

ಆರಾಧನೆಯ ಮಾಡಿದಡೆ ಅಮೃತದ ಬೆಳಸು,
ವಿರೋದ್ಥಿಸಿದಡೆ ವಿಷದ ಬೆಳಸು,
ಇದು ಕಾರಣ, ಜಂಗಮಕ್ಕೆ ಅಂಜಲೇಬೇಕು.
ಸ್ಥಾವರ ಜಂಗಮ ಒಂದೆಂದರಿದಡೆ
ಕೂಡಲಸಂಗಮದೇವ ಶರಣಸನ್ನಿಹಿತ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-422)

ನಾವು ನಾಲ್ಕೈದು ಜನ ಲಿಂಗವಂತರು ಪರವೂರಿನ ಪುರಾತನ ಶಿವಮಂದಿರದ ಶಿವಲಿಂಗದರ್ಶನಕೆಂದು ತೆರಳಿದ್ದೆವು. ದೇಗುಲ ಹೊಕ್ಕಾಗ ಗರ್ಭಗುಡಿ ಮುಚ್ಚಿತ್ತು. ಶಿವಲಿಂಗದರ್ಶನದ ಸಮಯ ಮೀರಿತ್ತು. ಮಸುಕಾದ ಮುಸುಕು ಹೊದಿಕೆ ಗರ್ಭಗುಡಿಯ ಗಾಜಿನ ಜೋಡಿ ಬಾಗಿಲುಗಳ ಮುಚ್ಚಿ ಶಿವಲಿಂಗವನು ಮರೆಸಿತ್ತು.

ತಪ್ಪು ನಮ್ಮ ಗುಂಪಿನದೇ ಇತ್ತು. ಪರಶಿವನನು ಕಾಣಬೇಕೆಂದರೆ ಸಮಯದ ನಿಯಮವನು  ಅನುಸರಿಸಬೇಕಲ್ಲವೇ? ಹೊತ್ತು ಗೊತ್ತಿಲ್ಲದೆ ಬರುವ ಭಕ್ತರು ಭಕ್ತಿಯ ಮಾಡಲೆಳೆಸಿದರೆ  ಸ್ವೀಕರಿಸುವುದಕೆ ಗುಡಿಯ ಶಿವಲಿಂಗವೇನು ಕೊರಳಿಗೆ ಕಟ್ಟಿದ ಇಷ್ಟಲಿಂಗ ಕೆಟ್ಟಿತೇ? ದೂರದೂರಿನಿಂದ ಬಂದಿದ್ದೆವು. ಉದ್ಭವಲಿಂಗವನು ಕಣ್ತುಂಬಿಕೊಳ್ಳಲು.

ನಿರಾಸೆಯಿಂದ ದೇಗುಲದ ಆವರಣದಲ್ಲಿದ್ದ ಅರ್ಚಕರನು ಪರಿಪರಿಯಾಗಿ ಬೇಡಿದೆವು. ಒಂದೈದು ನಿಮಿಷ ಗರ್ಭಗುಡಿಯ ಬಾಗಿಲು ತೆಗೆಯಿರಿ, ಒಮ್ಮೆ ಶಿವಲಿಂಗದ ದರ್ಶನವಾದರೆ ಸಾಕು ಸಂಜೆಯವರೆಗೆ ನಾವು ಕಾಯಲಾರೆವು. ಪಕ್ಕದೂರಿನ ಮಂದಿರದ ದರ್ಶನವ ಮಾಡಬೇಕಿಂದು. ಸುಂಕದವರ ಮುಂದೆ ಸುಖ-ದುಃಖ ಹೇಳಿಕೊಂಡರೇನು ಪ್ರಯೋಜನ? ಸ್ಥಾವರ ಶಿವಲಿಂಗದ ಪೂಜಾರಿಯ ಮುಂದೆ ಭಕ್ತಿ ತೋಡಿಕೊಂಡರೇನು ಪ್ರಯೋಜನ? ಲಿಂಗವನು ಕಾಣಲು ಮಾಡಿದ ಪ್ರಯತ್ನಗಳೆಲ್ಲ ಹೊಳೆಯಲ್ಲಿ ತೊಳೆದ ಹುಣಸೆ ಹಣ್ಣಾದವು. ಶಿವಸಮಯ ನಿಯಂತ್ರಕ ಪೂಜಾರಿಗೇಕೋ ನಮ್ಮ ಮೇಲೆ ಇನಿತೂ ಕರುಣೆ ಬರಲಿಲ್ಲ. ಶಿವಲಿಂಗಕ್ಕೆ ಈ ಪರಿ ಬಿನ್ನವಿಸಿಕೊಂಡಿದ್ದರೆ ಅಲ್ಲಿ ಮತ್ತೊಂದು ಕನಕನ ಕಿಂಡಿ ಒಡೆದು ನಿಲ್ಲುತ್ತಿತ್ತೇನೋ?

ಸ್ಥಾವರವೆಂತಂತೆ ಮನದಲ್ಲಿ ಭಾವಿಸಿ,
ಸಕಲಜೀವದ ನಿಂದೆಯ ಮಾಬುದು.
ಲಿಂಗಜಂಗಮವೊಂದೆಯೆಂದು ನಂಬೂದು.
ಬಂದುದು ಲಿಂಗಾಧೀನವೆಂದು ಕಾಬುದು.
ಸತ್ಯವ ನುಡಿವುದು, ಶುಚಿಯಾಗಿಪ್ಪುದು.
ಎರಡುವಿಡಿಯದೆ, ಎರಡು ನಡೆಯದೆ,
ಮುನ್ನಾದಿಯ ಪುರಾತರು ಕೂಡಿದ ಪಥವಿದು,
ಸಕಳೇಶ್ವರದೇವರನೊಲಿಸಿಹೆನೆಂಬವಂಗೆ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-214/ವಚನ ಸಂಖ್ಯೆ-500)

ಆಚೀಚೆ ಕಾಲು ಸುಟ್ಟ ಬೆಕ್ಕಿನಂತೆ ತಿರುಗುತ್ತಿದ್ದ ನನ್ನ ಎದೆಗೆ ಏನೋ ಚುಚ್ಚಿದಂತಾಯಿತು. ಏನೆಂದು ಎದೆ ಸವರಲು ಕರಡಿಗೆ ಕೈಗೆ ತಾಗಿತು. ಕೋಟಿ ಸೂರ್ಯರು ಹೊಳೆದಂತೆ ನನ್ನರಿವು ಒಮ್ಮಿಂದೊಮ್ಮೆಗೆ ಜಗಮಗಿಸಿತು. ಜೊತೆಗಿಟ್ಟು ನಡೆವ ಇಷ್ಟಲಿಂಗವ ಮರೆತು ಊರೂರು ಅಲೆಯುತ ಸ್ಥಾವರ ಲಿಂಗಗಳ ದರ್ಶನ ಮಾಡಬೇಕೆನ್ನುವ ಮತಿಗೇಡಿತನ ನನ್ನ ಅಣಕಿಸಿ ನಕ್ಕಂತಾಯಿತು.

ಗೆಳೆಯರೆಲ್ಲರು ಇಷ್ಟಲಿಂಗಪೂಜೆಗೆಂದು ಸಾಲಾಗಿ ಕುಳಿತೆವು. ಕರಗಳಲಿ ಇಷ್ಟಲಿಂಗಗಳ ಹಿಡಿದು, ಅಲ್ಲಿ ಸ್ಥಾವರಲಿಂಗದ ಎದುರಲ್ಲಿ ಮೂಢಭಕ್ತರ ನಡುವಲ್ಲಿ ಮಧ್ಯವರ್ತಿ ಪೂಜಾರಿ. ಇಲ್ಲಿ ಕರದ ಇಷ್ಟಲಿಂಗ, ಮನದ ಅರಿವಿನ ಶಿವನ ಹೊದ್ದು ನಿಂತಿದೆ, ಭಾವವೊಲಿದಿದೆ. ಶಿವ ನಾನು ನಾನೆ ಶಿವನೆನ್ನುವ ಲಿಂಗಾಂಗ ಯೋಗಕೆ.

ಗರ್ಭಗುಡಿಯಲಿ ಮಲಗಿದ ಅಚಲ ಶಿವಲಿಂಗ, ಕರದಲಿ ಸ್ಥಿತ ಅರಿವಿನ ಚರಲಿಂಗ. ಸಮಯಕೆ ಪಾಬಂಧಿಯಾದ ಸ್ಥಾವರ. ಸಮಯದ ಎಲ್ಲೆ ಮೀರಿದ ಜಂಗಮ. ನೂರು ಯೋಜನ ದಾಟಿ ಜ್ಯೋತಿರ್ಲಿಂಗವನು ನೋಡಲು ಬಂದ ನಮ್ಮ ಕಂಡು ನಮಗೆ ಹೇಸಿಗೆಯೆನಿಸಲು ಕರದಲಿ ಅರಿವ ಮುಗುಳ್ನಗೆ ಬೀರುತ ಹರಸುತ್ತಿದ್ದ ನನ್ನ ಶಿವ.

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ?
ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-275/ವಚನ ಸಂಖ್ಯೆ-962)

ಇಷ್ಟೆಲ್ಲಾ ಆದಮೇಲೆ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ, ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾದೀತೇ?

ಶ್ರೀ. ಎನ್. ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್.
ಮೋಬೈಲ್‌ ಸಂ. +968 9272 9206

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in

Loading

Leave a Reply