
ಮತ್ತೆ ಕೇಳಲೆ ಕುಮಾರವ್ಯಾಸ ಬಸವನಿ
ಪ್ಪತ್ತೈದು ಸ್ಥಲದ ರಗಳೆಯ ಮಾಡಿ ನಲಿವುತ್ತು
ದಾತ್ತಭಕ್ತಿಯೊಳಾ ವಿರೂಪಾಕ್ಷ ನೆಡೆಗೊಯ್ಯಲಿನಿದು ಮಿಗಿಲಾದುದೆಂದು
ಹೊತ್ತಗೆಯ ತೆಗೆದುಕೊಂಡುರೆ ನುಂಗಿದಂ ಚೆನ್ನೆ
ಯಿತ್ತ ಪಾಲ್ಗುಡಿದಂತೆ ಸರ್ವರುಂ ಪೊಗಳಿದರು
ಚಿತ್ತಜಮದಾರಣ್ಯದಾವ ಹರಿಹರದೇವ ಕವಿಚಕ್ರವರ್ತಿಯೆಂದು
(ಹರಿಹರ ಕವಿಯ ಬಸವರಾಜದೇವರ ರಗಳೆ/ಟಿ. ಎಸ್. ವೆಂಕಣ್ಣಯ್ಯ/ಪೀಠಿಕೆ/ಪುಟ ಸಂಖ್ಯೆ. xiii)
12 ನೇ ಶತಮಾನದ ಬಸವಾದಿ ಶರಣರ ಪಕ್ಷಿನೋಟ ಕಣ್ಣೆದುರಿಗೆ ಬಂದಾಗಲೆಲ್ಲಾ ಕನ್ನಡದ ಕವಿ ಹರಿಹರ ಮತ್ತು ತೆಲುಗು ಭಾಷೆಯ ಕವಿ ಪಾಲ್ಕುರಿಗೆ ಸೋಮನಾಥ ಹಾಗೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕೋಲ್ಮಿಂಚಿನಂತೆ ಬೆಳಗುತ್ತಾರೆ. ಶರಣರ ಇತಿಹಾಸ ಮತ್ತು ಲಿಂಗಾಯತ ಧರ್ಮತತ್ವಗಳ ಅನ್ವೇಷಣೆಯಲ್ಲಿ ಪೂರಕವಾಗುವಂತೆ ತೆಲುಗಿನಲ್ಲಿ ಬರೆದ ಮೂರು ಉತ್ಕೃಷ್ಠ ಗ್ರಂಥಗಳೆಂದರೆ ಹರಿಹರನ ರಗಳೆಗಳು, ಪಾಲ್ಕುರಿಕೆ ಸೋಮನಾಥನ “ಬಸವ ಪುರಾಣಮು” ಮತ್ತು ಮಲ್ಲಿಕಾರ್ಜುನಪಂಡಿತನ “ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ ಬಹಳ ಪ್ರಮುಖವಾದ ಆಕರ ಗ್ರಂಥಗಳು. ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಶರಣರ ತತ್ವಾದರ್ಶಗಳನ್ನು ಮತ್ತು ಅವರ ಬದುಕಿನ ಸಂಗತಿಗಳನ್ನು ಕಾವ್ಯಾತ್ಮಕವಾಗಿ ಚಿತ್ರಿಸಿರುವ ಗ್ರಂಥಗಳು.
ಬಸವಾದಿ ಶರಣರು ಹುಟ್ಟುಹಾಕಿದ ಲಿಂಗಾಯತ ಧರ್ಮದ ತಾತ್ವಿಕ ನಿಲುವುಗಳನ್ನು, ತತ್ವಜ್ಞಾನದ ಸಿದ್ಧಾಂತಗಳನ್ನು, ಶರಣರ ಜೀವನ ಚರಿತ್ರೆಗಳನ್ನು ಉಳಿಸಿಕೊಡುವಲ್ಲಿ ಈ ಗ್ರಂಥಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಈ ಗ್ರಂಥಗಳಲ್ಲಿ ಬಸವಾದಿ ಶರಣರ ಸುಮಾರು 300 ಕ್ಕೂ ಹೆಚ್ಚು ಶರಣರ ಉಲ್ಲೇಖ ನಮಗೆ ಸಿಗುತ್ತದೆ. ಆಯಾ ಕಾಲಘಟ್ಟದಲ್ಲಿ ಬಂದಂಥ ಹಲವಾರು ಕವಿಗಳು ಶರಣರ ಬದುಕಿನ ಚಿತ್ರಣವನ್ನು ಮಾಡದೇ ಹೋಗಿದ್ದರೆ ಬಹುಶಃ ನಮಗೆ ಶರಣರ ಸಮಗ್ರ ಬದುಕನ್ನು ಕುರಿತು ಅಧ್ಯಯನ ಮಾಡೋದಿಕ್ಕೆ ಆಕರ ಗ್ರಂಥಗಳು ಸಿಗುತ್ತಿರಲಿಲ್ಲವೇನೋ ಎನ್ನುವ ಅನುಮಾನ ಕಾಡುತ್ತದೆ.
Very Interesting ಸಂಗತಿ ಎಂದರೆ ಬಸವ ಪುರಾಣಮು ಗ್ರಂಥದಲ್ಲಿ “ವೀರಶೈವ” ಎನ್ನುವ ಶಬ್ದದ ಉಲ್ಲೇಖವೇ ಸಿಗುವುದಿಲ್ಲ ಎನ್ನುವುದು ಅಪರೂಪದ ಸಂಗತಿ, ನನಗೆ ಅತ್ಯಂತ ಕುತೂಹಲ ಮೂಡಿಸಿದ ಸಂಗತಿಯೆಂದರೆ ಪಾಲ್ಕುರಿಕೆ ಸೋಮನಾಥನಿಗಿಂತ ಸುಮಾರು 20 ವರ್ಷ ಹಿರಿಯನಾದ ಹರಿಹರ ತನ್ನ ಕಾವ್ಯಗಳಲ್ಲಿ ಶರಣರ ಚರಿತ್ರೆಯ ಜೊತೆಗೆ ಲಿಂಗಾಯತ ಧರ್ಮದ ಯಾವ ಸಂಗತಿಗಳನ್ನು ಮತ್ತು ತತ್ವ ಸಿದ್ಧಾಂತಗಳನ್ನು ಉಲ್ಲೇಖಿಸಿದ್ದಾನೆ ಎನ್ನುವುದು.
ಪಾಲ್ಕುರಿಕೆ ಸೋಮನಾಥನ ಬಸವ ಪುರಾಣಮು ಗ್ರಂಥವನ್ನು ಭೀಮಕವಿ 14 ನೇ ಶತಮಾನದಲ್ಲಿ ಕನ್ನಡಕ್ಕೆ ಅನುವಾದವನ್ನು ಮಾಡುತ್ತಾನೆ. ಹಾಗೆಯೇ ಮಲ್ಲಿಕಾರ್ಜುನ ಪಂಡಿತಾರಾಧ್ಯನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆಯನ್ನು ನೀಲಕಂಠಾಚಾರ್ಯ ಕವಿ 15 ನೇ ಶತಮಾನದಲ್ಲಿ “ಆರಾಧ್ಯ ಚಾರಿತ್ರ್ಯ” ಎಂದು ಷಟ್ಪದಿಯ ರೂಪದಲ್ಲಿ ಕನ್ನಡಕ್ಕೆ ಅನುವಾದವನ್ನು ಮಾಡುತ್ತಾನೆ. ಹಾಗಾಗಿ ತೆಲುಗು ಮೂಲದ ಈ ಕೃತಿಗಳನ್ನು ಇಂದು ನಾವು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದ್ದು ಸಂತಸದ ವಿಷಯ.
ರಗಳೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಂಡು ಮುಂದೆ ಹೋಗೋಣ.
ರಗಳೆಯು ನಡುಗನ್ನಡ ಕಾವ್ಯದ ಛಂದಸ್ಸಿನ, ದೇಸಿಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರ. ಇದು ಮಾತ್ರಾಗಣ ಘಟಿತವಾದ ಪದ್ಯಜಾತಿ. ಹರಿಹರನ ರಗಳೆಯ ಆದಿ ಮತ್ತು ಅಂತ್ಯದಲ್ಲಿ ವಿರೂಪಾಕ್ಷ ಮುದ್ರಿಕೆಯ ಕಂದಪದ್ಯ ಇರುತ್ತದೆ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆ. ರಗಳೆಯನ್ನು ಹರಿಹರ ಜನಸಾಮಾನ್ಯರ ಚಂಪೂ ಎಂದು ಕರೆದಿದ್ದಾನೆ.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು. ಇದರಲ್ಲಿ ಮೂರು ಮುಖ್ಯ ವಿಧಗಳನ್ನು ಕಾಣಬಹುದು:
- ಉತ್ಸಾಹ ರಗಳೆ
- ಮಂದಾನಿಲ ರಗಳೆ
- ಲಲಿತ ರಗಳೆ
ಡಾ. ಎಂ. ಎಂ ಕಲಬುರ್ಗಿಯವರು ಹರಿಹರನ ರಗಳೆಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ.
- ಪುರಾತನರ ರಗಳೆಗಳು: 63.
- ಶರಣರ | ನೂತನ ರಗಳೆಗಳು: 28.
- ಸಂಕೀರ್ಣ ರಗಳೆಗಳು: 26.
- ಪ್ರತಿಪಾದದಲ್ಲೂ ಮಾತ್ರೆಗಳು ಸಮನಾಗಿರಬೇಕು.
- ಪಾದಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
- ಗಣಗಳ ಯೋಜನೆಯಲ್ಲಿ ಲಯಕ್ಕೆ ಹೊಂದುವ ವೈವಿಧ್ಯ ಇರಬೇಕು.
- ಎರಡೆರಡು ಪಾದಗಳ ಅಂತ್ಯದಲ್ಲಿ ಪ್ರಾಸವಿರಬೇಕು.
- ಸುಶ್ರಾವ್ಯವಾಗಿ, ತಾಳಬದ್ಧವಾಗಿರಬೇಕು.
ಹರಿಹರ ಕವಿಯ ಸಂಕ್ಷಿಪ್ತ ಪರಿಚಯ:
ಕ್ರಿ. ಶ. 12 ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ 13 ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ (ಕ್ರಿ.ಶ. 1150-1250) ಶೈವ ಕವಿ. ಈತನ ಸೋದರಳಿಯನೇ “ಷಟ್ಪದಿಯ ಬ್ರಹ್ಮ” ಎಂದೇ ಪ್ರಸಿದ್ಧರಾದ ರಾಘವಾಂಕ ಕವಿ.
- ಹರಿಹರ ಹುಟ್ಟಿದ್ದು ಹಂಪೆಯಲ್ಲಿ.
- ತಂದೆ ಮಹದೇವ ಭಟ್ಟ.
- ತಾಯಿ ಶರ್ವಾಣಿ.
- ತಂಗಿ ರುದ್ರಾಣಿ. ಈಕೆಯೇ ರಾಘವಾಂಕನ ತಾಯಿ.
- ಈತನ ಗುರು ಮಾಯಿದೇವ.
- ಈತನ ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.
ಹಾಸನ ಜಿಲ್ಲೆಯ ದ್ವಾರಸಮುದ್ರದಲ್ಲಿ ಅಲ್ಪಕಾಲ ಈತನಿಗೆ ರಾಜಾಶ್ರಯ ನೀಡಿದವನು ಹೊಯ್ಸಳ ರಾಜನಾದ ನರಸಿಂಹ ಬಲ್ಲಾಳ. ಹರಿಹರನು ಕೆಲವು ಕಾಲ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿದ್ದ.
ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಹರಿಹರನು ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬ. ತನ್ನ ಕಾವ್ಯಗಳಲ್ಲಿನ ವಸ್ತು ನಿಷ್ಠೆಗಾಗಿ, ಸಂಸ್ಕೃತ ಮತ್ತು ಪ್ರಾಕೃತ ಮೂಲಗಳನ್ನು ಬಿಟ್ಟು ತಮಿಳು ಮೂಲವನ್ನು ಆರಿಸಿಕೊಂಡವರಲ್ಲಿ ಹರಿಹರನೇ ಮೊದಲಿಗ. ಹನ್ನೊಂದನೆಯ ಶತಮಾನದಲ್ಲಿ ಶೆಕ್ಕಿಯಾರ್ ಎನ್ನುವವರು ರಚಿಸಿದ “ಪೆರಿಯಪುರಾಣ” ವು ಹರಿಹರನಿಗೆ ಪುರಾತನ ಶಿವಗಣದ ರಗಳೆಗಳನ್ನು ಬರೆಯಲು ಆಕರ ಗ್ರಂಥವಾಯಿತು. “ತಿರುತ್ತೊಂಡರ್ ಪುರಾಣಂ” ಎನ್ನುವುದು ಅದರ ಇನ್ನೊಂದು ಹೆಸರು. ಅದು ಚೋಳದೇಶದ ಹಿರಿಯ ಶೈವ ಸಂತರಾದ ನಾಯನಾರರುಗಳ ಜೀವನ ಚಿತ್ರಗಳನ್ನು ಕೊಡುತ್ತದೆ. ಮಧ್ಯ ಕರ್ನಾಟಕದಲ್ಲಿದ್ದ ಹರಿಹರನಿಗೆ ಈ ಕಾವ್ಯವು ಅದು ಪ್ರಕಟವಾದ ಹೊಸತರಲ್ಲಿಯೇ ಸಿಕ್ಕಿತ್ತೆನ್ನುವುದು ಕುತೂಹಲಕಾರಿಯಾದ ಸಂಗತಿ.
ಹರಿಹರ ರಗಳೆಗಳನ್ನು ಬರೆಯುವುದರ ಹಿನ್ನೆಲೆ ಭಕ್ತಿಪ್ರದಾನ ಅಂಶಗಳನ್ನು ಮುನ್ನೆಲೆಗೆ ತರುವುದು. ಅವನ ಪ್ರತಿಯೊಂದು ರಗಳೆಯೂ ಶಿವಭಕ್ತರ ಪುಣ್ಯಚರಿತೆಗಳಿದ್ದಂತೆ. ಕವಿ ಆ ಕಾಲದ ಹಲವಾರು ಶಿವಭಕ್ತರನ್ನು ಉದ್ದೇಶಿಸಿ ಅವರ ಭಕ್ತಿ ಪರಾಕಾಷ್ಠೆಯ ಚರಿತ್ರೆಯನ್ನು ತನ್ನ ಕಾವ್ಯದಲ್ಲಿ ಚಿತ್ರಿಸುತ್ತಾನೆ. ಹರಿಹರನ ರಗಳೆಗಳು ಕೇವಲ ಭಕ್ತಿಯನ್ನಷ್ಟೇ ಚಿತ್ರಿಸುವುದುಲ್ಲ. ಬದಲಾಗಿ, ಶರಣರ ಬದುಕನ್ನು ಕುರಿತಾದ ಹಲವಾರು ವಿಷಯಗಳನ್ನು ತಿಳಿಸುತ್ತಾನೆ, ರಗಳೆಗಳ ಪ್ರಾರಂಭದ ಸಾಲುಗಳಲ್ಲಿ ಭಕ್ತನ ಊರು, ದೇಶ, ತಂದೆ-ತಾಯಿ, ಹುಟ್ಟು, ಬಾಲ್ಯವನ್ನು ಕುರಿತಂತೆ ನಿರೂಪವನ್ನು ನೀಡುತ್ತಾನೆ. ನಂತರದ ಸಾಲುಗಳಲ್ಲಿ ಭಕ್ತನ ವೃತ್ತಿ, ನಿಷ್ಠೆ, ಆಸಕ್ತಿ, ಶೌರ್ಯ ಮತ್ತು ಸಾಹಸಗಳನ್ನೂ ಕೂಡ ಚಿತ್ರಿಸಿದ್ದಾನೆ.
ಹಾಗಾಗಿ ಹರಿಹರನ ರಗಳೆಗಳ ಸ್ಥಳ, ಜೀವನ ವಿವರಗಳು ಮತ್ತು ನಿರೂಪಣಾ ವಿಧಾನಗಳು ಸಂಪೂರ್ಣವಾಗಿ ಬದಲಾಗುತ್ತವೆ. ಅವು ದ್ರಾವಿಡ ಜೀವನ ಶೈಲಿಗೆ ನಿಕಟವಾಗುತ್ತವೆ. ಪುರಾತನರ ರಗಳೆಗಳ ವಿಚಾರದಲ್ಲಂತೂ ಈ ಮಾತು ಇನ್ನಷ್ಟು ನಿಜ. ಶರಣರ ರಗಳೆಗಳು ಮಧ್ಯಕಾಲೀನ ಕರ್ನಾಟಕದ ಜೀವನ ಕ್ರಮಕ್ಕೆ ಕನ್ನಡಿ ಹಿಡಿಯುತ್ತವೆ. ಅಲ್ಲಿನ ವಿವರಗಳನ್ನು ಎಚ್ಚರಿಕೆಯಿಂದ ಗಮನಿಸಿ, ಸಂವೇದನಶೀಲವಾಗಿ ಚಿತ್ರಿಸಲಾಗಿದೆ.
ಹರಿಹರನು ತನ್ನ “ಗಿರಿಜಾಕಲ್ಯಾಣ” ದಲ್ಲಿ ಆ ಕಾಲಘಟ್ಟದಲ್ಲಿ ಪ್ರಚಲಿತವಿದ್ದ ಚಂಪೂ ಶೈಲಿಗೆ ಮತ್ತು ಹಳೆಗನ್ನಡಕ್ಕೆ ವಿದಾಯ ಹೇಳುತ್ತಾನೆ. ಅವನ ರಗಳೆಗಳು ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡದಲ್ಲಿ ಪರಿಣಾಮಕಾರಿಯಾಗಿ ರಚಿತವಾಗಿವೆ. ಅವನ ಶೈಲಿಯು ವಾತಾವರಣ ಸೃಷ್ಟಿಗೆ ಸಹಾಯಕವಾಗಿದ್ದು, ಸಂಸ್ಕೃತ ಪದಗಳ ಬಳಕೆಯು ಬಹಳ ಕಡಿಮೆಯಾಗಿದೆ. ತನ್ನ ಕಾವ್ಯಗಳ ವಸ್ತು ಮತ್ತು ಆಕೃತಿಗಳೆರಡನ್ನೂ ಬದಲಿಸುವುದರಲ್ಲಿ ಅವನು ತೋರಿಸಿರುವ ಧೈರ್ಯವು ಮೆಚ್ಚುವಂತಹುದು.
ಹರಿಹರನ ಮೇಲೆ ಹನ್ನೆರಡನೆಯ ಶತಮಾನದ ಶಿವಶರಣರ ಹಾಗೂ ವಚನ ಸಾಹಿತ್ಯದ ದಟ್ಟವಾದ ಪ್ರಭಾವವಿದೆ. ಈ ರಗಳೆಗಳಲ್ಲಿ, ಪ್ರಾಯಶಃ ಕನ್ನಡ ಸಾಹಿತ್ಯದಲ್ಲಿಯೇ ಮೊದಲ ಬಾರಿಗೆ ಶ್ರೀ ಸಾಮಾನ್ಯನ ಬದುಕು ಕೇಂದ್ರಸ್ಥಾನವನ್ನು ಪಡೆಯುತ್ತದೆ. ಕುಂಬಾರ, ಕೃಷಿಕ, ಬೇಟೆಗಾರ, ಚಮ್ಮಾರ, ಅಗಸ ಮತ್ತು ಬೆಸ್ತರು ಹರಿಹರನ ಪ್ರಸಿದ್ಧವಾದ ರಗಳೆಗಳ ಕೇಂದ್ರ ಪಾತ್ರಗಳು. ಶಿವಭಕ್ತಿಯೆನ್ನುವುದು ಅವರೆಲ್ಲರನ್ನೂ ಒಗ್ಗೂಡಿಸುವ ಸೂತ್ರ. ಅವರೆಲ್ಲರೂ ಯಾವುದೇ ಪುರೋಹಿತರ ಮಧ್ಯಪ್ರವೇಶವಿಲ್ಲದೆ ಶಿವನ ಅನುಗ್ರಹವನ್ನು ಪಡೆಯಬಲ್ಲರೆನ್ನುವುದು ಮಹತ್ವದ ಸಂಗತಿ. ಹರಿಹರನ ಈ ದಿಟ್ಟತನವನ್ನು ಅವನ ನಂತರ ಬಂದ ಕವಿಗಳು ಮುಂದುವರಿಸಲಿಲ್ಲವೆನ್ನುವುದು ದುರದೃಷ್ಟದ ಸಂಗತಿ.
ಹರಿಹರನ ಮತ್ತೊಂದು ಮಹತ್ವದ ಸಾಧನೆಯೆಂದರೆ, ತನ್ನ ಪಾತ್ರಗಳ ಬಹಳ ವಾಸ್ತವಿಕವಾದ ಚಿತ್ರಣ ಮತ್ತು ಅವುಗಳನ್ನು ದೈವೀಕರಣಗೊಳಿಸುವ ಹಂಬಲಗಳ ನಡುವೆ ಅವನು ತಂದುಕೊಂಡಿರುವ ಸಮತೋಲನ. ಅವನ ಮಹತ್ವದ ಕೃತಿಗಳಾದ “ಬಸವರಾಜದೇವರ ರಗಳೆ” ಮತ್ತು “ನಂಬಿಯಣ್ಣನ ರಗಳೆ” ಗಳು ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿವೆ. ಹರಿಹರನು ಗದ್ಯ ಮತ್ತು ಪದ್ಯಗಳೆರಡರ ಬಳಕೆಯಲ್ಲಿಯೂ ಸಮರ್ಥನಾಗಿದ್ದಂಥವನು. ಬಸವಣ್ಣ ಮತ್ತು ನಂಬಿಯಣ್ಣರನ್ನು ಕುರಿತ ರಗಳೆಗಳಲ್ಲಿ ಅವನು ಬೇರೆ ಬೇರೆ ಅಧ್ಯಾಯಗಳಲ್ಲಿ ಗದ್ಯ ಪದ್ಯಗಳನ್ನು ಬಳಸುತ್ತಾನೆ. ಹೀಗೆ ಕನ್ನಡ ಕವಿಗಳ ಸಾಲಿನಲ್ಲಿ ಹರಿಹರನು ಬಹಳ ಮಹತ್ವದ ಸ್ಥಾನವನ್ನು ಪಡೆದಿದ್ದಾನೆ.
ಹರಿಹರನ ಕೃತಿಗಳು:
- ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ,
- ಪಂಪಾಶತಕ,
- ರಕ್ಷಾಶತಕ,
- ಮುಡಿಗೆಯ ಅಷ್ಟಕ .
- ಶಿವ ಶರಣರ (ನೂತನರು) ರಗಳೆಗಳು
- ಅರುವತ್ತಮೂರು ಪುರಾತನರು (ತ್ರಿಷಷ್ಠಿ ಪುರಾತನರು).
- ಸಂಕೀರ್ಣ ರಗಳೆಗಳು:
ಪುಷ್ಪ ರಗಳೆ.
ಲಿಂಗಾರ್ಚನೆ ರಗಳೆ.
ಹಂಪೆಯರಸನ ರಗಳೆ.
ವಿಭೂತಿ ರಗಳೆ.
ರುದ್ರಾಕ್ಷಿ ರಗಳೆ.
ಜಯ ರಗಳೆ.
ಭೃಂಗಿ ರಗಳೆ.
ಹರಿಹರ ಅನೇಕ ದೃಷ್ಟಿಗಳಿಂದ ಗಮನವನ್ನು ಸೆಳೆದವನು. ಅಂದಿನ ಕಾಲಕ್ಕೆ ಚಂಪೂ ಎಂಬುದು ಪ್ರತಿಷ್ಟಿತ ಸಾಹಿತ್ಯ ಪ್ರಕಾರ ಮತ್ತು ಪಂಥವೇ ಆಗಿತ್ತು. ಅಂತಹ ಸವಾಲಿನೆದುರಿನಲ್ಲಿ “ಗಿರಿಜಾ ಕಲ್ಯಾಣ” ವನ್ನು ಬರೆದದ್ದಲ್ಲದೇ ಈತ ರಗಳೆಗಳ ರಚನೆಯ ಮೂಲಕವಾಗಿ ಯಶಸ್ಸಿನ ಕವಿಯಾಗುತ್ತಾನೆ. ಈ ನೆಲೆಯಲ್ಲಿ ಜೀವಂತ ಕಾವ್ಯ ಪರಂಪರೆಯ ವಿಸ್ತರಣೆಯಾಗಿ ನಿಲ್ಲುತ್ತಾನೆ. ಇಲ್ಲಿ ತನ್ನೆಲ್ಲಾ ವ್ಯಕ್ತಿತ್ವವನ್ನು ಕವಿತ್ವವನ್ನಾಗಿ ಮೂಡಿಸಿ, ಕನ್ನಡ ಕಾವ್ಯ ಪರಂಪರೆಗೆ ಹೊಸ ಆಯಾಮವನ್ನು ಕಲ್ಪಿಸುತ್ತಾನೆ. ಈ ಮೂಲಕ ಪಂಪ, ರನ್ನ, ಪೊನ್ನರ ಸಾಲಿನಲ್ಲಿ ಹತ್ತರಲ್ಲಿ ಹನ್ನೊಂದನೆಯವನಾಗದೇ ಹಿಮಾಲಯದೆತ್ತರಕ್ಕೆ ಬೆಳೆದು ನಿಲ್ಲುತ್ತಾ ವಿಭಿನ್ನ ಸಾಹಿತ್ಯ ಪರಂಪರೆಯ ನಿರ್ಮಾಪಕನಾಗುತ್ತಾನೆ. ಇದು ಈತನಿಗಿರುವ ಸಾಂಸ್ಕೃತಿಕ ಆಯಾಮ ಮತ್ತು ಚಾರಿತ್ರಿಕ ಮಹತ್ವ. ಹೀಗೆ ಶಾಸ್ತ್ರ ಅಥವಾ ಮೀಮಾಂಸೆ ನಿರ್ದೇಶಿಸುವ ಕಾವ್ಯಕ್ಕಿಂತ ಪ್ರತಿಭೆಯೇ ಮುಖ್ಯವಾಗಿ ನಿರ್ದೇಶಿಸುವ ಜೀವಂತ ಕಾವ್ಯ ಪರಂಪರೆಯ ವಕ್ತಾರನಾಗಿ ನಿಲ್ಲುವ ಹರಿಹರ ಕನ್ನಡ ಕಾವ್ಯ ಮೀಮಾಂಸೆಗೆ ಹೊಸ ತತ್ವ ಅಥವ ಪಾಠವೊಂದನ್ನು ಸೇರಿಸುತ್ತಾನೆ. ಇಲ್ಲಿ ಬಸವಣ್ಣನ “ಆನು ಒಲಿದಂತೆ ಹಾಡುವೆ” ಎಂಬ ಮಾತನ್ನು ಅನ್ವಯಿಕ ನೆಲೆಯಲ್ಲಿ ಇರಿಸಿಕೊಳ್ಳಬಹುದೆಂದು ಭಾವಿಸುತ್ತೇನೆ.
ಕಾರ್ಯಕ್ರಮದಲ್ಲಿ “ಬಸವರಾಜದೇವರ ರಗಳೆ” ಯನ್ನು ಕುರಿತು ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳೋಣ:
ಬಸವಣ್ಣನವರ ಕಾಲಘಟ್ಟದಲ್ಲಿಂದ್ದಂಥ ಸಮಕಾಲೀನರಾರೂ ಆತನ ಚರಿತೆಯನ್ನು ದಾಖಲಿಸುವ ಪ್ರಯತ್ನ ಬಹಳ ಕಡಿಮೆ, ಅವರ ವಚನಗಳ ಮೂಲಕವೇ ನಾವು ತಿಳಿದುಕೊಳ್ಳಬೇಕು. ಬಸವೋತ್ತರದ ಕಾಲಘಟ್ಟದಲ್ಲಿ ಬಂದಂಥ ಕವಿಗಳೂ ಕೂಡಾ ಅವರನ್ನು ಪುರಾಣ ಪುಣ್ಯ ಪುರುಷನಂತೆ ಚಿತ್ರಿಸಿದರೇ ಹೊರತು ಐತಿಹಾಸಿಕ ಬಸವಣ್ಣನವರು ಎಂದು ಬಿಂಬಿಸಲಿಲ್ಲ. ಮೌಖಿಕವಾಗಿ ಬೆಳೆದು ಬಂದ ಈ ಇತಿಹಾಸದ ಪುಟಗಳು ಕೆಲವು ಮಾರ್ಪಾಡುಗಳೊಂದಿಗೇನೆ ಚಿತ್ರಿತವಾದಂಥವು. ಹೆಚ್ಚಾಗಿ ತಮ್ಮ ಕಾವ್ಯದ ಸೊಬಗನ್ನು ಹೆಚ್ಚಿಸಲು ಈ ಕಾವ್ಯಗಳಲ್ಲಿ ಅನಿವಾರ್ಯವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು. ಹಾಗಾಗಿ ಬಸವಣ್ಣನವರ ಜೀವನ ಚರಿತ್ರೆಯಲ್ಲಿ ಅಲೌಕಿಕ ಮಹಿಮೆಗಳನ್ನು ಮತ್ತು ಪವಾಡಗಳನ್ನು ವೈಭವೀಕರಿಸುವ ಕಾವ್ಯಗಳಾದವು.
ಹರಿಹರನ ಅತ್ಯಂತ ಮಹತ್ವದ ಕೃತಿಗಳಲ್ಲಿ “ಬಸವರಾಜದೇವರ ರಗಳೆ” ಮೊದಲನೇಯದು. ಹಾಗೂ ಬಹಳಷ್ಟು ಚರ್ಚೆಗೆ ಒಳಗಾದಂಥ ಕೃತಿ. ಹೆಚ್ಚು ಹೆಚ್ಚು ಚರ್ಚೆಗೆ ಒಳಗಾದರೂ ಕೂಡ ಅಂತಿಮ ವಿಮರ್ಶೆ ಅಥವಾ ತೀರ್ಮಾನವನ್ನು ಕೊಡಲು ಇಂದಿಗೂ ಸಾಧ್ಯವಾಗಿಲ್ಲ. ಬಹುಶಃ ಸಾಧ್ಯವಾಗುವುದೂ ಇಲ್ಲ. ಈ ಕೃತಿ 13 ಸ್ಥಲಗಳಲ್ಲಿ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಬದುಕಿನ ಶ್ರೇಷ್ಠತೆಯನ್ನು ಯಶಸ್ವಿಯಾಗಿ ಚಿತ್ರಣ ಮಾಡುತ್ತದೆ. ಬಸವಣ್ಣನವರ ಜೀವನ ವಿಕಾಸಗೊಳ್ಳುವ ಘಟ್ಟಗಳನ್ನು ಸರಳವಾಗಿ ಮತ್ತು ಸಹಜವಾಗಿ ನಿರೂಪಿಸಿರುವದರಿಂದ “ಬಸವರಾಜದೇವರ ರಗಳೆ” ಶ್ರೇಷ್ಠ ಗ್ರಂಥವಾಗಿದೆ.
ಈ ದೃಷ್ಟಿಯಿಂದ ಬಸವಣ್ಣನವರ ಬದುಕನ್ನು ತಿಳಿದುಕೊಳ್ಳಲು ದೊರಕುವ ಪ್ರಮುಖ ಆಕರ ಗ್ರಂಥಗಳು ಎಂದರೆ:
- ಬಸವಾದಿ ಶರಣರ ವಚನಗಳು
- ಶೂನ್ಯ ಸಂಪಾದನೆಗಳು
- ಪುರಾಣಗಳು
- ರಗಳೆಗಳು
ನಾನಾಗಲೇ ಹೇಳಿರುವಂತೆ ಬಸವಾದಿ ಶರಣರ ವಚನಗಳನ್ನು ಹೊರತುಪಡಿಸಿ ಈ ಎಲ್ಲ ಕಾವ್ಯಗಳು ನೈಜ ಸಂಗತಿಯ ಜೊತೆ ಜೊತೆಗೆ ಕಲ್ಪಿತ ಸಂಗತಿಗಳು ಕಲಬೆರಕೆಯಾಗಿವೆ. ಹೀಗೆ ಕಲಬೆರಕೆಯಾದ ಸಾಹಿತ್ಯವನ್ನು ಕೈಬಿಟ್ಟರೆ ಬಸವಣ್ಣನವರ ಬದುಕನ್ನಾಗಲೀ ಚರಿತ್ರೆಯನ್ನಾಗಲಿ, ಸಾಮಾಜಿಕ ಚಿಂತನೆಗಳನ್ನಾಗಲಿ ತಿಳಿದುಕೊಳ್ಳುವುದಕ್ಕೆ ಆಕರಗಳೇ ಇಲ್ಲದಂತಾಗುತ್ತದೆ.
ಗೋದಾವರಿ ಜಿಲ್ಲೆಯ ಪಾಲ್ಕುರಿಕೆ ಸೋಮನಾಥನಿಗಿಂತ ಸುಮಾರು 20 ವರ್ಷ ಹಿರಿಯನಾದ ಹರಿಹರನು ರಚಿಸಿದ ಬಸವರಾಜದೇವರ ರಗಳೆ ಬಸವಣ್ಣನವರ ಕಾಲಘಟ್ಟಕ್ಕೆ ಅತ್ಯಂತ ಹತ್ತಿರವಾಗುತ್ತದೆ ಹಾಗೂ ವಿಶ್ವಾಸಾರ್ಹವಾಗುತ್ತದೆ.
ಈ ಬಸವರಾಜದೇವರ ರಗಳೆ ಪ್ರಾರಂಭವಾಗುವುದೇ ಕೈಲಾಸದಲ್ಲಿನ ಶಿವನ ಒಡ್ಡೋಲಗದಿಂದ.
ಕಂಪುಳ್ಳ ಸಂಪಗೆಯ ಪೂಗಳಂ ತಿರಿತಂದು
ಹೆಂಪಿನಿಂ ಶಶಿಧರನ ಸಿರಿಮುಡಿಗೆ ಬೇಕೆಂದು
ತಂದೋರ್ವ ಮಾಲೆಗಾರಂ ಭರದಿ ಕೊಡಲಲ್ಲಿ
ಮುಂದಿರ್ದ ವೃಷಭಮುಖನಂ ಕರೆವುತಿರಲಲ್ಲಿ
ಒಬ್ಬ ಹೂಗಾರನು ಅತ್ಯಂತ ಸುವಾಸಿತ ಮತ್ತು ಸುಂದರವಾದ ಸಂಪಿಗೆಯ ಹೂಗಳನ್ನು ತಂದು ಶಿವನಿಗೆ ಅರ್ಪಿಸುತ್ತಾನೆ.
ನೀನೀ ಪ್ರಸಾದಮಂ ಶರಣತತಿಗೀಯೆನುತೆ
ಮಾನನಿಧಿ ವೃಷಭಮುಖಗಂದೀಯೆ ಪುಳಕಿಸುತೆ
ಈ ಸುಂದರ ಮತ್ತು ಸುವಾಸಿತ ಸಂಪಿಗೆಯ ಪುಷ್ಪವನ್ನು ಎಲ್ಲರಿಗೂ ಹಂಚುವಂತೆ ವೃಷಭಮುಖನೆಂಬ ಗಣನಾಥನನ್ನು ಕರೆದು ಅಪ್ಪಣೆ ಮಾಡುತ್ತಾನೆ.
ಶಿವಪುತ್ರನಂ ಸ್ಕಂದದೇವನಂ ಮರೆವುತಂ
ತವೆ ಸಭೆಯೊಳಿರ್ದರ್ಗೆ ವೃಷಭಮುಖನೀವುತಂ
ಎಲ್ಲರ್ಗೆ ಕೊಟ್ಟೆನೆಂದಭವಂಗೆ ಬಿನ್ನೈಸೆ
ಈ ಪ್ರಸಾದವನ್ನು ಹಂಚುವ ಗಡಿಬಿಡಿಯಲ್ಲಿ ಕುಮಾರಸ್ವಾಮಿಯವರಿಗೆ ಹಂಚುವದನ್ನು ಮರೆತು ಬಿಡುತ್ತಾನೆ.
ಕೊಟ್ಟೆನೆಂದಾ ವೃಷಭಮುಖನಲ್ಲಿ ನುಡಿವಿತಿರೆ
ಕೊಟ್ಟುದಿಲ್ಲೆನಗೆ ಪುಸಿಮಾತದೇಕೆನುತಮಿರೆ
ಎನೆ ವೃಷಭಮುಖನಲ್ಲಿ ಕೊಟ್ಟೆನೆರೆಡಿಲ್ಲಯ್ಯ
ನಿನಗೆ ಕೊಡದಿರ್ಪೆನೇ ಕೇಳು ಕೇಳೆನ್ನಯ್ಯ
ಕುಮಾರಸ್ವಾಮಿಯವರು ಇದಕ್ಕೆ ಪ್ರತಿಭಟಿಸಲು ಇಲ್ಲಾ ಪ್ರಸಾದವನ್ನು ಹಂಚಿದ್ದೇನೆ ಎಂದು ಗಣನಾಥ ವಾದಿಸುತ್ತಾನೆ.
ಹುಸಿನುಡಿವರೇ ಕುಡದೆ ಎನ್ನು ಕುಮಾರಂಗೆ
ಎಸೆವ ನಿಜಭಕ್ತಿ ಭೂಷಣನೆನಿಪ ವೀರಂಗೆ
ಸುಳ್ಳು ಹೇಳತಾ ಇದೀಯ ನೀನು ಅಂತಾ ಶಿವಾ ಸಿಟ್ಟಗೆದ್ದು ಪ್ರತಿಕ್ರಿಯೆ ನೀಡುತ್ತಾನೆ.
ಇದರಿಂದ[ವೊ]ದು ಜನನಂ ನಿನಗೆ ದೊರಕಿತ್ತು
ಮುದದಿಂದ ಹೋಗಯ್ಯ ಜನನವಂ ನೀ ಹೊತ್ತು
ಧರಣಿಯೊಳು ವೃಷಭಮುಖ ಹುಟ್ಟೆಂದು ಬೆಸಸುತಿರೆ.
ಇಂಥ ಸುಳ್ಳು ಹೇಳಿದ ತಪ್ಪಿಗಾಗಿ:
ವೃಷಭಮುಖನು ಭೂಮಿಯಲ್ಲಿ ಮನುಷ್ಯನಾಗಿ ಒಂದು ಜನ್ಮವನ್ನು ಎತ್ತಿ ಅಲ್ಲಿ ಶಿವಭಕ್ತರಾದ ಜಂಗಮರಿಗೆ ದಾನ ಸನ್ಮಾನಗಳನ್ನು ಮಾಡಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ಅನಂತರ ಕೈಲಾಸಕ್ಕೆ ಹಿಂದಿರುಗಬೇಕು.
ಅಂತಾ ಶಿವನು ಆಜ್ಞಾಪಿಸುತ್ತಾನೆ. ಹಾಗಾಗಿ ವೃಷಭಮುಖನೆಂಬ ಗಣನಾಥ ಧರೆಗೆ ಬರುವ ವೃತ್ತಾಂತ. ಆತ ಬಾಗೇವಾಡಿಯಲ್ಲಿ ಜನಿಸುತ್ತಾನೆ. ಈ ಬಾಗೇವಾಡಿಯೆನ್ನುವ ಸ್ಥಲವನ್ನು ಮತ್ತು ತಂದೆ ತಾಯಿಯವರ ಹೆಸರನ್ನೂ ಕೂಡ ಹರಿಹರ ಉಲ್ಲೇಖ ಮಾಡುತ್ತಾನೆ.
ಅಗ್ರಹಾರಂ ಬಾಗೆವಾಡಿಯೊಳಗೆಸೆದಿರ್ಪ
ಅಗ್ರೇಶ್ವರಂ ಕಮ್ಮೆಕುಲದಿಂದೆ ಮೆರೆದಿರ್ಪ
ವಿಪ್ರನಿರ್ಪಂ ಮಾದಿರಾಜನಾತನ ಸತಿಯು
ಅಪ್ರತಿಮಮಾದಂಬೆಯೆಂದೆಂಬ ಗುಣವತಿಯು
ಬ್ರಾಹ್ಮಣರಲ್ಲಿ ಕಮ್ಮೆಕುಲದವರಾದ ಮಾದಿರಾಜ ಮತ್ತು ಮಾದಾಂಬೆಯವರು ಬಾಗೆವಾಡಿಯ ಅಗ್ರಹಾರದಲ್ಲಿದ್ದರು. ಮಾದಿರಾಜ ಆ ಅಗ್ರಹಾರದ ಅಗ್ರೇಶ್ವರ ಅಂದರೆ ಆ ಅಗ್ರಹಾರದಲ್ಲಿ ನಾಯಕನಾಗಿದ್ದವನು ಅಂತಾ ಹರಿಹರ ತನ್ನ ರಗಳೆಯಲ್ಲಿ ಬರೆದಿದ್ದಾನೆ. ಇಂಥ ಶ್ರೇಷ್ಠ ದಂಪತಿಗಳಿಗೆ ಬಸವರಾಜರು ಜನಿಸುತ್ತಾರೆ.
ಪುಟ್ಟುವಂತಿರೆ ಪುಟ್ಟಿದಂ ಶಿವನ ಶಿಶುವಲ್ಲಿ
ಪುಟ್ಟಿದಂ ಸಂಸಾರಸುಖದ ಲೀಲೆಯಿನಲ್ಲಿ
ಸುಮೂರ್ತವೇ ಗಂಡುರೂಪಾದ ತೆರನಾಗೆ
ಅಮಮ ಕಾರಣಿಕಶಿಶು ಜನಿಯಿಸಿದನನುವಾಗೆ
ಆಗಳಾ ಪುತ್ರಂಗೆ ಜಾತಕಕರ್ಮವ ಮಾಡಿ
ರಾಗದಿಂ ಬಸವನೆಂಬಭಿಧಾನಮಂ ಕೂಡಿ
ಬಸವೇಶ್ವರರು ಶಿವನ ಪ್ರಕಾಶವೇ ಹೊತ್ತಂತೆ ಬಾಗೆವಾಡಿಯ ಅಗ್ರಹಾರದಲ್ಲಿ ಮಾದರಸ ಮಾದಾಂಬೆಯವರ ಮಗನಾಗಿ ಜನಿಸುತ್ತಾರೆ. ಆ ಶಿಶುವಿಗೆ ಜಾತಕಕರ್ಮಗಳನ್ನೆಲ್ಲಾ ಮಾಡಿ “ಬಸವ” ಎಂದು ನಾಮಕರಣ ಮಾಡುತ್ತಾರೆ. ಹೀಗೆ ಬಸವಣ್ಣನವರ ಜನನ ವೃತ್ತಾಂತವನ್ನು ಹರಿಹರ ಅತ್ಯಂತ ಸುಂದರವಾಗಿ ನಿರೂಪಣೆ ಮಾಡಿದ್ದಾನೆ. ಮುಂದೆ ಬಸವೇಶ್ವರರು ಹುಣ್ಣಿಮೆಯ ಚಂದ್ರನಂತೆ ಬೆಳಯುತ್ತಾರೆ.
ಎಲ್ಲ ಕಾವ್ಯಗಳಲ್ಲಿ ವೈಭವದಿಂದ ನಿರೂಪಣೆಯಾದಂತೆ ಬಸವಣ್ಣನವರ ಉಪನಯನದ ವೃತ್ತಾಂತವನ್ನು ಹರಿಹರ ಸರಳವಾಗಿ ಚಿತ್ರಿಸಿದ್ದಾನೆ. ಆತ ನೇರವಾಗಿ ಜನಿವಾರವನ್ನು ತ್ಯಜಿಸುವುದಕ್ಕೆ ಬಂದು ನಿಲ್ಲುತ್ತಾನೆ ಎನ್ನುವುದು ಗಮನಾರ್ಹವಾದ ಸಂಗತಿ.
ಇಂತಲ್ಲಲ್ಲಿ ಶಿವಭಕ್ತಿಯುಂ ಕರ್ಮಮಂ
ಎಂದುಮೊಂದಾಗಿರದು-ಎಂದೊಲ್ಲದೆ
ಪರಮವೈರಾಗ್ಯಯುಕ್ತಂ ಶಿವಲಿಂಗಾರ್ಚನಾ
ಯತ್ತಚಿತ್ತಂ ಕರ್ಮಲತೆಯಂತಿರ್ದ ಜನ್ನಿವಾರಂ
ಕಳೆದು ಬಿಸುಟು ಹೋತಿನ ಗಂಟಲಂ ಬಿಗಿವಂತಿರ್ದ
ಮೌಂಜಿಯಂ ಪರಿದು ಬಿಸುಟು ನವ್ಯದುಕೂಲಂ
ತೆಗೆದಿಟ್ಟು ದಿವ್ಯವಸ್ತ್ರವಂ ಪೊದೆದು ಮನೆನೆಳಲಂ
ನೆನೆಯದೆ ಅರ್ಥಮಂ ಲೆಕ್ಕಿಸದೆ ವೃತ್ತಿಯಂ ವಿಚಾರಿಸದೆ
ಬಂಧುಗಳಂ ಬಗೆಯದೆ ಪುರಜನವಂ ಪರಿಕಿಸದೆ
ಹರಭಕ್ತಿಯೊಳಾತುರದಿಂ ಬಾಗೆವಾಡಿಯಂ ಪೊರಮಟ್ಟು
ಪೂರ್ವದಿಶಾಮುಖನಾಗಿ ಕಿರಿದಂತರಂ ನಡೆದು ಬಂದು
ಜನನದಿಂದ ಬಂದ ಯೌವನವನ್ನು ಶಿವಪೂಜೆಯಲ್ಲಿ ಸಾರ್ಥಕಗೊಳಿಸಬೇಕು. ಕರ್ಮಲತೆಯಂತಿದ್ದ ಜನಿವಾರವನ್ನು ಹಾಕಿಕೊಂಡು ಶಿವಪೂಜೆಯಲ್ಲಿ ಸಮಯ ಕಳೆಯುವುದು ಅಸಾಧ್ಯ. ಶಿವಪೂಜೆಯೂ ಕರ್ಮಾಚರಣೆಗಳೂ ಎಂದಿಗೂ ಒಂದಾಗಿರಲು ಸಾಧ್ಯವಿಲ್ಲ. ಜನಿವಾರವು ಹೋತಿನ ಗಂಟಲಿಗೆ ಕಟ್ಟಿದ ಮೌಂಜಿ ಎಂದು ಬಸವಣ್ಣನವರ ವಾದವಾಗಿತ್ತು ಎಂದು ಹರಿಹರ ಈ ರಗಳೆಯಲ್ಲಿ ಪ್ರಸ್ತಾಪ ಮಾಡುತ್ತಾನೆ. ಹೀಗೆ ಜನಿವಾರವನ್ನು ತ್ಯಜಿಸಿ ಮನೆಯನ್ನು ತೊರೆದು ಕೂಡಲಸಂಗಮಕ್ಕೆ ಬಸವಣ್ಣನವರು ಹೋದರು ಎನ್ನುವುದುನ್ನು ಹರಿಹರ ನಿರೂಪಣೆ ಮಾಡತಾನೆ.
ಸಂಗಮೇಶ್ವರನಿಪ್ಪ ಕಪ್ಪಡಿಯ ಸಂಗಮಂ ಪೊಕ್ಕು
ಕೇರಿಕೇರಿಯೊಳು ನಡೆತಪ್ಪಾಗಳು ಶಂಕರಾಲಯಮಂ
ಭೋಂಕನೆ ಕಂಡು ಪೂರ್ವಸ್ಮರಣೆ ಕೈಗೂಡಿ
ಕಣ್ ಬಂದಂತೆ ಉಸಿರ ಒಂದಂತೆ ಪರಿತಂದು
ರಂಗಮಂಟ[ದೊಳು ದೊಪ್ಪನೆ ಬಿದ್ದೆಂತಕ್ಕೆದ್ದು ನಿಂತು
ಕೂಡಲಸಂಗಮದಲ್ಲಿದ್ದ ಶಂಕರ ದೇವಾಲಯವನ್ನು ಕಂಡು ಪ್ರವೇಶಿಸಿ ರಂಗಮಂಟಪದಲ್ಲಿ ನಿಂತು ಬಸವಣ್ಣನವರು ದೇವ ದೇವ ಮಹಾದೇವ ನನ್ನನ್ನು ಕಾಪಾಡು ಎನ್ನುತ್ತಾ ಅಯಾಸದಿಂದ ಅಲ್ಲಿ ದೊಪ್ಪನೆ ಬಿದ್ದರು ಎಂದು ಹರಿಹರ ನಿರೂಪವನ್ನು ಕೊಡತಾನೆ.
ಬಳಿದೊತ್ತಾಗಿ ಬಂದ ಸ್ಥಾನಪತಿಯೆನಿಪ್ಪ ಈಶಾನ್ಯಗುರುಗಳ ಕಂಡು
ಈತಂ ಕಾರಣಿಕನಾಗಿ ಲೆವೇಳ್ಕುಮೆಂದು ಹತ್ತೆ ಸಾರ್ದು-ಎಲೆ ಭಕ್ತ
ನೀನೆಲ್ಲಿಗಂ ಪೋಗಬೇಡ ಆವುದಂ ಚಿಂತೆ ಬೇಡ
ಸಂಗಮೇಶ್ವರಂಗೆ ಹೊಸ ಪುಷ್ಪಮಂ ತಿಳಿಯವಗ್ಘವಣಿಯಂ
ತಂದು ಓಜೆಯಿಂ ಪೂಜೆಗೈದು ಪ್ರಸಾದಕಾಯನಾಗಿ ಸುಖದೊಳಿಪ್ಪುದು
ಇಂಥ ವೇಳೆಯಲ್ಲಿ ಅಲ್ಲಿಗೆ ಬಂದ ಈಶಾನ್ಯ ಗುರುಗಳು ಬಸವಣ್ಣನವರನ್ನು ಕಂಡು ನೀನೆಲ್ಲಿಗೂ ಹೋಗಬೇಡಾ ಇಲ್ಲಿಯೇ ಇದ್ದು ವಿದ್ಯಾಭ್ಯಾಸದ ಜೊತೆಗೆ ಸಂಗಮನಾಥನ ಸೇವೆ ಮಾಡಿಕೊಂಡಿರು ಎಂದು ತಿಳಿಸಿದ ಬಳಿಕ ಬಸವಣ್ಣನವರು ಅಲ್ಲಿಯೇ ತಂಗುತ್ತಾರೆ.
ಕೂಡಲಸಂಗಮದಲ್ಲಿ ಬಸವಣ್ಣನವರ ದಿನಚರಿಯನ್ನು ಹರಿಹರ ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತಾನೆ.
ಬಸವಂ ಪ್ರಭಾತಸಮಯಕ್ಕೆ ಮುನ್ನವೆ ಎದ್ದು
ಒದೆದು ಭಸಿತೋದ್ಧೂಳನಂ ಮಾಡುತಂ ಬಾಳ್ದು
ಸಂಗಂಗೆ ಸಾಷ್ಟಾಂಗದಿಂದಲ್ಲಿ ಪೊಡಮಟ್ಟು
ಪಿಂಗದೀಶಂಗೆ ಭಯಭಕ್ತಿಯಂ ಮುಂದಿಟ್ಟು
ನಸುಕಿನಲ್ಲಿಯೇ ಏಳುವ ಪರಿಪಾಠವನ್ನು ಬಾಲಕ ಬಸವಣ್ಣ ಇಟ್ಟುಕೊಂಡಿದ್ದರು. ಹಣೆಯ ಮೇಲೆ ವಿಭೂತಿಯನ್ನು ಧರಿಸಿ ಸಂಗಮನಾಥನಿಗೆ ಪೂಜೆಯನ್ನು ಮಾಡುವುದು ಬಸವಣ್ಣನವರ ಬೆಳಗಿನ ದಿನಚರಿಯಾಗಿತ್ತು.
ಸೋಂಪಿನಿಂ ಕಂಪಿಡುವ ಸಂಪಗೆಗಳಂ ಕೊಂಡು
ಹೊಂಪೆಸೆವ ಹೊಂಗೇದಗೆ ಹೂಗಳಂ ಕೊಂಡು
ಅದೆ ಮಲ್ಲಿಕಾಕುಟ್ಮಲಂ ಸಂಗಗೆಂದೆನುತೆ
ಅದೆ ಮಾಲತೀವಿತತಿ ಸಂಪಗೆಯು ನಿಮಗೆನುತೆ
ಹೂತೋಟಕ್ಕೆ ಹೋಗಿ ಸುವಾಸಿತ ಹೂಗಳಾದ ಜಾಜಿ, ಮಲ್ಲಿಗೆ, ಸಂಪಿಗೆ ಹೂಗಳನ್ನು ಹಾಗೂ ಮರುಗದ ಎಲೆ, ಸುರಹೊನ್ನೆ, ಕಮಲ, ಸೇವಂತಿಗೆಗಳನ್ನು ಕೊಂಡು ಬದುಕಿದೆನು ಎಂದೆನ್ನುತ್ತಾ ಪುಷ್ಫಗಳನ್ನು ತರುವ ಆನಂದವನ್ನು ಆಯ್ಕೆ ಮಾಡಿ ತರುವುದನ್ನು ಹರಿಹರ ಅತ್ಯಂತ ಸೊಗಸಾಗಿ ವಿವರಿಸಿದ್ದಾನೆ.
ಹರಿಹರ ಬಸವಣ್ಣನವರು ಭಾವಪರವಶರಾಗಿ ಸಂಗಮನಾಥನನ್ನು ಪೂಜಿಸುವುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾನೆ. ಭಕ್ತಿಪ್ರಧಾನವಾದ ಈ ರಗಳೆಗೆ ತಕ್ಕಂತೆ ಉತ್ತಮ ಸಂದರ್ಭವನ್ನು ಇಲ್ಲಿ ನಿರೂಪಿಸಲಾಗಿದೆ.
ಲಿಂಗ ಜಂಗಮವೋ ಮೇಣ್ ಜಂಗಮವೆ ಲಿಂಗವೋ
ಲಿಂಗಜಂಗಮವೆರಡು ಇಳೆಯೊಳು ವಿಭೇಧವೋ
ಎಂಬಂತೆ ಸಾತ್ವಿಕಪ್ರಭು ಪೂಜಿಸುತ್ತಮಿರೆ
ಅಂಬಕತ್ರಯನ ಪುತ್ರಂ ಪೂಜಿಸುತ್ತಮಿರೆ.
ದಿನ ದಿನಕೆ ಘಳಿಗೆ ಘಳಿಗೆಗೆ ಭಕ್ತಿ ಮಿಗಿಲಾಗಿ ಅನುದಿನವೂ ಸಂಗನಾಮಗಳನ್ನು ಪುರಜನಕ್ಕೆ ತಿಳಿಸುತ್ತಾ ನುಡಿವಲ್ಲಿ ನಡೆವಲ್ಲಿ ಸಂಗನೆನುತ್ತಾ ಊರ ಜನರ ಪ್ರೀತಿಗೆ ಪಾತ್ರನಾದನು ಬಸವಣ್ಣ ಎನ್ನುವುದನ್ನು ಚಿತ್ರಣ ಮಾಡಲಾಗಿದೆ. ಹೀಗೆ ಪೂಜೆ ಮಾಡತಾ ಮಾಡತಾ ಬಸವಣ್ಣನವರ ಕಣ್ಣಲ್ಲಿ ಆನಂದಭಾಷ್ಪಗಳು ಹರಿಯುತ್ತಿದ್ದವು ಎನ್ನುವುದು ಹರಿಹರನ ಚಿತ್ರಣ. ಪೂಜೆಯೊಳಗೆ ಹುಟ್ಟಿದ ಸುಧಾಕರನಂತೆ ಲಿಂಗ ಜಂಗಮವೋ ಜಂಗಮ ಲಿಂಗವೋ ಅವೆರಡೂ ಅಭೇಧ್ಯವೆನಿಸುತ್ತಿತ್ತು ಎನ್ನುವ ಹರಿಹರ ಭಕ್ತಿ ಪರಾಕಾಷ್ಠೆಯಲ್ಲಿ ಬಸವಣ್ಣ ಮೈಮರೆಯುತ್ತಿದ್ದ ಎನ್ನುವುದು ಹರಿಹರನ ನಿರೂಪ.
ಹೀಗೆ ದಿನಗಳು ಕೂಡಲಸಂಗಮದಲ್ಲಿ ದಿನಗಳು ಉರುಳುತ್ತಿದ್ದವು. ಬಸವಣ್ಣನವರು ಬಿಜ್ಜಳರಾಜ ಅಸಥಾನಕ್ಕೆ ಹೋಗಬೇಕು ಎನ್ನವುದುನ್ನು ಕನಸಿನ ಮೂಲಕ ಹರಿಹರ ಚಿತ್ರಣ ಮಾಡತಾನೆ.
ಎಲೆ, ಮಗನೇ ಬಸವ ಬಸವಣ್ಣ ಬಸವಿದೇವ
ನಿನ್ನಂ ಮಹಿತದೊಳು ಮೆರೆದಪೆವು ನೀಂ
ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಪೋಗು.
ಧ್ಯಾನ ಮಡತಾ ಮಾಡತಾ ನಿದ್ರೆ ಹೋದ ಬಸವಣ್ಣನಿಗೆ ಕನಸಿನಲ್ಲಿ ಶಿವ ಬರತಾನೆ. ಶಿವನ ಆ ದಿವ್ಯಪ್ರಭೆಯನ್ನು ಹರಿಹರ ಬಹಳ ಸುಂದರವಾಗಿ ಚಿತ್ರಣ ಮಾಡಿದ್ದಾನೆ. ಎಲೆ ಮಗನೆ ಬಸವ, ಬಸವಣ್ಣಾ, ಬಸವೀದೇವಾ ನಿನ್ನನ್ನು ಈ ಭೂಮಂಡಲದಲ್ಲಿ ಮೆರೆಯಿಸುವೆವು. ನೀನು ಬಿಜ್ಜಳರಾಯನಾಳುತ್ತಿರುವ ಮಂಗಳವಾಡಕ್ಕೆ ಹೋಗು ಅಂತಾ ಶಿವನು ಅಪ್ಪಣೆ ಮಾಡುತ್ತಾನೆ.
ಬಸವ ಮನೋರಥಂ ನಿನಗೆ ಸಂದುದು ನಿನ್ನಗಲ್ವುದಿಲ್ಲ ಕೇಳ್
ವಸುಮತಿಗೈದ ಪೂಣ್ದು ಮೆರೆದಪ್ಪೆವು ಮಂಗಳವಾಡದಲ್ಲಿ
ಚಿಂತಿಸದೆ ಸಮಸ್ತ ಜಂಗಮಕ್ಕೆ ಮಾಡುತೆ ಬಿಜ್ಜಳರಾಯನಿಂದ
ವಂದಿಸಿಕೊಳುತಿರ್ಪುದೆಂದು ಬಸವಂಗುಸಿರ್ದಂ ಗುರು ಸಂಗಮೇಶ್ವರಂ.
ಮಾಡಿತಂ ಮಾಡುವೆಂ ಕೂಡಿತಂ ಕೂಡುವೆಂ
ನಡೆಯಯ್ಯಾ ನಡೆ ಮಗನೆ ನಡೆ ಕಂದ ಬಸವಣ್ಣ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ
ನಾನು ನಿನ್ನನ್ನು ಅಗಲಿರಲಾರೆ ನೀನು ಬಿಜ್ಜಳನ ಆಸ್ಥಾನದಲ್ಲಿ ಶೋಭಿಸುವೆ ಎಂದು ಶಿವ ಆಶ್ವಾಸನೆ ನೀಡಿದಾಗ ಮಂಗಳವಾಡಕ್ಕೆ ಬಸವಣ್ಣನವರು ಹೊರಡುತ್ತಾರೆ.
ಬಸವಣ್ಣನವರು ಮಂಗಳವಾಡಕ್ಕೆ ಬಂದು ಬಿಜ್ಜಳನ ಆಸ್ಥಾನದಲ್ಲಿ ಕರಣಿಕನಾಗಿ ಕೆಲಸ ಶುರು ಮಾಡುತ್ತಾನೆ. ಬಿಜ್ಜಳನ ಭಂಡಾರವನ್ನು ಹರಿಹರ ತುಂಬ ಸೊಗಸಾಗಿ ನಿರೂಪಣೆ ಮಾಡಿದ್ದಾನೆ.
ಹೀಗೆ ಬಿಜ್ಜಳನಲ್ಲಿ ಕೆಲಸ ಶುರು ಮಾಡಿದ ಬಸವಣ್ಣನವರಿಗೆ ಸಿದ್ಧರಸರ ಆಶ್ರಯವೂ ದೊರಕಿತು. ಬಸವಣ್ಣನವರ ಅಗಾಧ ಪಾಂಡಿತ್ಯವನ್ನು ಮೆಚ್ಚಿದ ಸಿದ್ಧರಸ ತನ್ನ ಮಗಳಾದ ಗಂಗಾದೇವಿಯವರೊಡನೆ ವಿವಾಹ ಮಾಡುತ್ತಾನೆ.
ಬಸವಂ ಸಂಗವರಪ್ರಸಾದಸುಖನಾಗುತ್ತೈದಿ ಒಂದಾದ
ಸಂತಸದಿಂ ಮಂಗಳವಾಡದೊಳ್ ಕನಕಭಂಡಾರಾಜ್ಞೆಯಂ
ದಂಡನಾಥ ಸಮಗ್ರ ಪ್ರಭುವೃತ್ತಿಯಂ ಸಕಲಸಂಪದ್ವೈಭವಾಭಾರ್ಯ
ದೊಂದೆಸವಂ ಬಿಜ್ಜಳರಾಯನಿಂದೆ ಪಡೆದಂ ದಂಡೇಶದಿಕ್ಕುಂಜರಂ.
ಹೀಗೆ ಬಸವಣ್ಣನವರು ಭಕ್ತಿ ಭಂಡಾರಿಯಾಗಿ ಮತ್ತು ಪ್ರಧಾನಿಯಾಗಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಬಸವಣ್ಣನವರ ಕಾರ್ಯದಕ್ಷತೆ ಮತ್ತು ಪ್ರಮಾಣಿಕತೆಯಿಂದ ಇಡೀ ರಾಜ್ಯವನ್ನು ವ್ಯಾಪಿಸಿತ್ತು ಎನ್ನುವುದನ್ನು ಹರಿಹರ ಅದ್ಭುತವಾಗಿ ಚಿತ್ತರಿಸಿದ್ದಾನೆ.
ಗಂಗಾದೇವಿಯವರ ಸುಗರ್ಭದಲ್ಲಿ ಪುತ್ರನ ಜನ್ಮವನ್ನು ಹರಿಹರ ತಿಳಿಸುತ್ತಾನೆ.
ಸುರನದಿಯೊಳನರ್ಘ್ಯರತ್ನವುದಯಿಸುವಂತೆ
ತನ್ನರಸಿ ಗಂಗಾದೇವಿಯುರ್ಗೆ ಗರ್ಭವುದಯಿಸಿ
ಬಹಿರಂಗಭಾವರಸಂಮಿಕ್ಕು ಸೌಕುಮಾರ್ಯವೇರು
ಮೆಲ್ಲಡಿಗಳು ಮೆಲ್ಲನೆ ರಾಗಿಸೆ ಕಿಳ್ಪೊಡೆ ತ್ರಿವಳಿಳಂ ಬೀಳ್ಕೊಡೆ
ಬಸವಣ್ಣನವರ ಮತ್ತು ಗಂಗಾದೇವಿಯವರಿಗೆ ಮಗು ಆಗಿದ್ದನ್ನು ಹರಿಹರ ಸುಂದರ ಶಬ್ದಗಳೊಂದಿಗೆ ವರ್ಣಿಸತಾನೆ.
ಇನ್ನು ಕೊನೇಯದಾಗಿ ಬಸವಣ್ಣನವರನ್ನು ಕೈಲಾಸಕ್ಕೆ ಕರೆದುಕೊಳ್ಳುವದನ್ನು ಹರಿಹರ ಬಹಳ ಸೊಗಸಾಗಿ ನಿರೂಪಣೆ ಮಾಡತಾನೆ.
ಸಾಕುಮಾಡೈ ತಂದೆ ಲೋಕದಾಟವನಿನ್ನು
ಸಾಕಾರವಲ್ಲದ ನಿರಾಕಾರವೆಡೆಗೊ[ಡಿನ್ನು]
ತೆರಪುಗೊಡು ತಂದೆ ಬಂದಿಹೆನು ಬಸವನು ನೊಂದೆ
ತೆರಪುಗೊಡು ಕರುಣಾಬ್ಧಿ ತೆರಪುಗೊಡು ಭಕ್ತ್ಯಾರ್ತಿ
ತೆರಪುಗೊಡು ತಂದೆ ಕೂಡಲಸಂಗ ಭಕ್ತಾಂಗ
ಎನಲು ಸಂಗಮದೇವ ಬಸವನ ನಿರೀಕ್ಷಿಸುತ
ತೆರಹ ತನ್ನೊಳು ಕೊಟ್ಟು ಬಸವನಂ ಸೈತಿಟ್ಟು
ನೋಡುತಿರೆ ಭಕ್ತರೆಲ್ಲರ ಮುಂದೆ ಬಸವಂಣ
ಗಾಢದಿಂ ಶಿವನೊಳಗೆ ಬೆರೆದು ತಾ ಬಯಲಾದ.
ಹೀಗೆ ಬಸವಣ್ಣ ಮರ್ತ್ಯಲೋಕದಲ್ಲಿ ತನ್ನ ಮಹಿಮೆಗಳನ್ನು ತೋರಿ ಶಿವಸುಖವನ್ನು ಆನಂದಿಸಿ ಶರಣ ಸದ್ಗೋಷ್ಠಿಗಳನ್ನು ಜನಮಾನಸಕ್ಕೆ ಅರ್ಪಿಸಿ ಸಂಗಮೇಶ್ವರನನ್ನು ಪೂಜಿಸಿ ಆನಂದವನ್ನು ಅನಿಭವಿಸುತ್ತಾನೆ. ಬಸವಣ್ಣ ಕೂಡಲಸಂಗಮದೇವನಿಗೆ ಭಿನೈಸಿಕೊಳ್ಳುವ ಸಂದರ್ಭವನ್ನು ಅತ್ಯಂತ ಭಕ್ತಿಪರಾಕಾಷ್ಠೆಯ ಪದಗಳಿಂದ ಹರಿಹರ ಚಿತ್ರಿಸಿರುವುದು ಮನೋಜ್ಞವಾಗಿದೆ.
ಇನ್ನು ಬಸವರಾಜದೇವರ ರಗಳೆಯ ಅಂತಿಮ ಸಾಲುಗಳು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.
ಧರೆಯೊಳಗರಿದರಿದೆಂದನೆ
ಪುರಹರ ಸದ್ಭಕ್ತಿಯಂ ಮೆರೆಯಿಸಿ ಸಂದ
ತ್ಯುರು ವೃಷಭಾಂಕನ ಮೋಹದ
ತರಳಂ ಹರಿಪಂಗೆ ಭಕ್ತಿಯನಿದೀಗೆ
ಹಂಪೆಯ ವಿರೂಪಾಕ್ಷಂ
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
ಸಹಾಯಕ ಗ್ರಂಥಗಳು:
- ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
- ಹರಿಹರನ ರಗಳೆಗಳು: ಡಾ. ಸದಾನಂದ ಪಾಟೀಲ.
- ಹರಿಹರ ಕವಿಯ ಬಸವರಾಜದೇವರ ರಗಳೆ; ಟಿ. ಎಸ್. ವೆಂಕಣ್ಣಯ್ಯ.
- ವಚನ ಸಾಹಿತ್ಯ ಚಿತ್ರಗಳು: ಎಲ್. ಗುಂಡಪ್ಪ.
- ಹರಿಹರನ ರಗಳೆಗಳ ಸಾಹಿತ್ಯಕ ಅಧ್ಯಯನ: ಡಾ. ಕೆ. ಪಿ. ಮಹಾದೇವಯ್ಯ.
- ಹರಿಹರನ ಲಿಂಗಭೇದ ನಿರಸನ ರಗಳೆಗಳು: ಡಾ. ಗುರುಪಾದ ಮರಿಗುದ್ದಿ.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in
![]()





Total views : 51410