
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)
ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ.
ಇಷ್ಟಲಿಂಗ ಪ್ರಾಣಲಿಂಗವೆಂದು
ಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.
ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397)
ಬಸವಾದಿ ಶಿವಶರಣರ ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ ಕುರುಹು, ಅಂಗ ಗುಣಗಳನ್ನು ಅಳಿದು ಲಿಂಗ ಗುಣಗಳನ್ನು ಸಂಪಾದಿಸಲು ಒಂದು ಸಾಧನವಾಗಿ ಅಂಗದಮೇಲೆ ಧರಿಸಿಕೊಳ್ಳುವ ನಿರಾಕಾರ ಪರಮಾತ್ಮನ ಕುರುಹು ಇಷ್ಟಲಿಂಗ. ಇದು ಬ್ರಹ್ಮಾಂಡವನ್ನು ಆವರಿಸಿರುವ ವಿಶ್ವ ಚೈತನ್ಯ. ವಿಶ್ವ ಚೈತನ್ಯದ ವಂಶವೇ ಜೀವಚೈತನ್ಯ. ಶಿವ ಜೀವೈಕ್ಯವೇ ಇಷ್ಟಲಿಂಗ ಪೂಜೆಯ ಉದ್ದೇಶ. ಇಷ್ಟಲಿಂಗ ಪೂಜೆಯಿಂದ ದೇಹ ಬಾವ ಅಳಿಯುತ್ತದೆ. ದೇಹ ಭಾವ ಅಳಿದಾಗ ಪ್ರಾಣಲಿಂಗದ ಪ್ರಜ್ಞೆ ಆಗುತ್ತದೆ. ದೇಹ ಪ್ರಾಣ ಎರಡನ್ನೂ ಮೀರಿದ ಕಾರಣ ಭಾವ ಲಿಂಗದ ಪ್ರಜ್ಞೆ ಅಳವಡುತ್ತದೆ. ಮೂರನ್ನು ಏಕೀಭವಿಸಿದಾಗ ಆತ್ಮ ಪರಮಾತ್ಮನಲ್ಲಿ ಬೆರೆತು ಒಂದಾಗಿ ನಿಲ್ಲುವದು ಸಾಧಕನ ಮುಖ್ಯ ಗುರಿಯಾಗಿರುತ್ತದೆ. ಸಾಧಕನ ಅಂಗ ಕ್ರಿಯೆಗಳೆಲ್ಲವೂ ಲಿಂಗ ಕ್ರಿಯೆಗಳಾಗುತ್ತವೆ. ಲಿಂಗ ಕ್ರಿಯೆಗಳೆಲ್ಲವೂ ಆತನ ಬದುಕನ್ನು ವ್ಯಾಪಿಸಿದಾಗ ಲಿಂಗದ ಚಿತ್ ಪ್ರಭೆಯಲ್ಲಿ ಸಾಧಕ ನಿಲ್ಲುತ್ತಾನೆ. ಕುರುಹು ಅರಿವಿಂಗೆ ಆಶ್ರಯ, ಅರಿವು ಕುರುಹಿಗೆ ಆಶ್ರಯವಾಗಿ ಅಭೇದ್ಯ ಭಾವ ಬಲಿತು ನಿಂತಾಗ ಸಾಧಕ ಸರ್ವಾಂಗ ಲಿಂಗಿ ಶರಣಾಗುತ್ತಾನೆ. ಇದನ್ನನೆ ಶರಣ ಅರಿವಿನ ಮಾರಿತಂದೆ ಉಪಮೆಗಳ ಮೂಲಕ ಲಿಂಗದ ಅರಿವು ಮೂಡಿಸುತ್ತಾನೆ.
ಲಿಂಗಾಯತ ಸಿದ್ಧಾಂತದ ಪ್ರಕಾರ ಶಿವನೆಂದರೆ ತ್ರಿಮೂರ್ತಿಗಳಲ್ಲಿ ಒಬ್ಬನಲ್ಲ. ಅದು ಪರವಸ್ತು “ಒಡಲಿಲ್ಲದ ಬಯಲು”. ಇದಕ್ಕೊಂದು ಅಲ್ಲಮ ಪ್ರಭುಗಳ ವಚನ ಅತ್ಯಂತ ಸೂಕ್ತವೆನಿಸುತ್ತದೆ.
ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ.
ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ.
ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ.
ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ?
ಸಿದ್ಧರಾಮಯ್ಯ, ನೀನು ಮರುಳಾದೆಯಲ್ಲಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-391/ವಚನ ಸಂಖ್ಯೆ-1043)
ಶಿವ ಅಂದರೆ ಸ್ವಯಂಜ್ಯೋತಿ ಸ್ವರೂಪ, ನಿರಂಜನ ಸ್ವರೂಪ, ನಿರಾಕಾರ ಸ್ವರೂಪ, ಅದಕ್ಕೆ ಹೆಸರು, ಲಿಂಗ, ರೂಪ, ಕ್ರಿಯಾದಿಗಳಿಲ್ಲ. ಇದು ಅಲ್ಲಮ ಪ್ರಭುವಿನ ನಿರಾಕಾರ ನಿರ್ಗುಣದ ಶಿವ – ಶೂನ್ಯ ಎಂಬಂತೆ – ಶಿವ ಎಂದರೆ ‘ಶೂನ್ಯ‘ ಎಂಬುದು ಅಲ್ಲಮನ ಸಿದ್ದಾಂತ. ಶಿವ ಕೈಲಾಸವಾಸಿಯಲ್ಲ, ಅವನಿಗೆ ಹೆಂಡಿರು ಮಕ್ಕಳಿಲ್ಲ. ಆತ ನಿರ್ಗುಣ, ನಿರಾಕಾರ ಶಿವ ಎಂದರೆ ಮಂಗಳ, ಆಭ್ಯುದಯ, ಲೇಸು, ಒಳಿತು, ಹಿತ, ಕಲ್ಯಾಣ, ನಮ್ಮ ಶಿವ ಸ್ಥಾವರ ಪ್ರತಿಮೆಯಲ್ಲ ಆವನು ಜಂಗಮಸ್ವರೂಪಿ ಅವನು ಗುಡಿಯಲ್ಲಿಲ್ಲ. ಪ್ರತಿಯೊಬ್ಬರ ದೇಹದಲ್ಲಿ ಜಂಗಮರೂಪಿಯಾಗಿ, ಇಷ್ಟಲಿಂಗರೂಪಿಯಾಗಿ ಇದ್ದಾನೆ, ಲಿಂಗಾಯತ ಧರ್ಮದಲ್ಲಿ ಕೈಲಾಸ, ಸ್ವರ್ಗ, ನರಕಗಳಿಗೆ ಸ್ಥಾನವೇ ಇಲ್ಲ ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಹಾಗೆ:
ಕೈಲಾಸ ಕೈಲಾಸವೆಂದು ಬಡಿದಾಡುವ
ಅಣ್ಣಗಳಿರಾ, ಕೇಳಿರಯ್ಯಾ.
ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ.
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು.
ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ.
ಇದರಾಡಂಬರವೇಕಯ್ಯಾ?
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ,
ಅಂಗಾಂಗ ಸಾಮರಸ್ಯವ ತಿಳಿದು,
ನಿಮ್ಮ ಪಾದಪದ್ಮದೊಳು
ಬಯಲಾದ ಪದವೆ ಕೈಲಾಸವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-460/ವಚನ ಸಂಖ್ಯೆ-1468)
ಕೈಲಾಸವೆಂಬುದು ಹಾಳು ಬೆಟ್ಟ ಆಲ್ಲಿರುವ ಮುನಿಗಳು ಜೀವಗಳ್ಳರು, ಅಲ್ಲಿರುವ ಶಿವನೊಬ್ಬ ಹೆಡ್ಡ. ಬಸವಣ್ಣನವರು ಆಚಾರವೇ ಸ್ವರ್ಗ, ಅನಾಚಾರವೇ ನರಕ. ಆಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕಎನ್ನುವರು. ಶಿವ ಜಗದಗಲ, ಮುಗಿಲಗಲ ಎತ್ತೆತ್ತ ನೋಡಿದರೂ ಅತ್ತ ಶಿಕಾಣುತ್ತಾನೆ.
ಬಸವಣ್ಣನವರ ವಚನಗಳಲ್ಲಿ ವಿಶೇಷವಾಗಿ ಕಂಡುಬರುವ ಮತ್ತೊಂದು ಪ್ರಧಾನ ಅಂಶ ಭಕ್ತಿಪ್ರತಿಪಾದನೆ. “ಭಕ್ತಿಭಂಡಾರಿ” ಎಂಬ ವಿಶೇಷಣಕ್ಕೆ ಇವರ ವಚನಗಳು ಸಮರ್ಥವಾಗಿ ಪೋಷಣೆ ನೀಡುತ್ತವೆ. ನಾಮಸಂಕೀರ್ತನೆಯ ಹಿರಿಮೆ, ಸರ್ವಸಮರ್ಪಣೆಯ ಭಾವ, ಸತಿಪತಿ ಭಾವ ಹೀಗೆ ಭಕ್ತಿಯ ಆಚರಣೆಯ ವಿವಿಧ ಮುಖಗಳನ್ನು ಅವುಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಭಾವದ ತೀವ್ರತೆಯಿದೆ, ಆಳವಾದ ಅನುಭವದ ಪ್ರತಿಫಲನವಿದೆ.
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು.
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು.
ನನೆಯೊಳಗಣ ಪರಿಮಳದಂತೆ ಇದ್ದಿತ್ತು.
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-1)
ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು. ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು. ನನೆಯೊಳಗಣ ಪರಿಮಳದಂತೆ ಇದ್ದಿತ್ತು ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ಶಿವನನ್ನು ಕುರಿತು ತಮ್ಮ ದರ್ಶನಾನುಭವವನ್ನು ವರ್ಣಿಸುತ್ತಾರೆ.
ಪಾರಿಭಾಷಿಕ ಶಬ್ದದಲ್ಲಿ ಹುಡುಕಿದರೆ ಶಿವ ಎಂದರೆ ಮಂಗಲ, ಶುಭ, ಪವಿತ್ರ ಎಂಬ ಅರ್ಥಗಳು ನಮಗೆ ಸಿಗುತ್ತವೆ. ಆಧ್ಯಾತ್ಮಿಕವಾಗಿ ನೋಡಿದರೆ ಶಿವ ಎಂದರೆ ಚೈತನ್ಯ, ಪ್ರಣವ ಸ್ವರೂಪ, ಅನಿಕೇತನ ಎನ್ನುವ ಅರ್ಥಗಳೂ ಇವೆ. ಶಿವ ಎನ್ನುವ ತತ್ವ ಸಿದ್ಧಾಂತವನ್ನು ವಚನಗಳಲ್ಲಿ ನೂರಾರು ರೂಪಗಳಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರು ವ್ಯಕ್ತಪಡಿಸಿರುವುದನ್ನು ಕಾಣಬಹುದು. ಅದರಲ್ಲಿ ಒಂದು ವಚನ ಈ ಲೇಖನದ ಕೇಂದ್ರಬಿಂದು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)
ಶರಣರೊಬ್ಬರು ಲೋಕ ಸಂಚಾರ ಮಾಡುತ್ತಾ ಕಲ್ಯಾಣದ ಮಹಾಮಾರ್ಗದಲ್ಲಿ ನಡೆದು ಹೊರಟಿದ್ದರು. ಅನೇಕರು ಅವರನ್ನು ನೋಡಿ ಮಾತಾಡಿಸುತ್ತಾ ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಒಬ್ಬ ವ್ಯಕ್ತಿ ಶರಣರನ್ನು ಉದ್ದೇಶಿಸಿ “ತಾವು ಈ ಲೋಕಸಂಚಾರ ಏಕೆ ಕೈಗೊಂಡಿರುವಿರಿ” ಅಂತ ಕೇಳತಾರೆ. ಅವರು ನಗುತ್ತ ಅವರು ವಿಡಂಬನಾತ್ಮಕವಾಗಿ “ತಮ್ಮಾ ಜನರನ್ನು ಮಲಗಿಸುವುದಕ್ಕೆ, ಮತ್ತೆ ಎಚ್ಚರ ಮಾಡುವುದಕ್ಕೆ” ಎಂದು ಉತ್ತರಿಸಿದರು.
ಆಶ್ಚರ್ಯಚಕಿತರಾದ ಜನರು “ಸ್ವಾಮಿ, ಜನರನ್ನು ಎಚ್ಚರ ಮಾಡುವುದೇನೊ ಸರಿ. ಆದರೆ ಮಲಗಿಸುವುದು ಅಂತೀರಲ್ಲಾ ಯಾಕೆ?” ಅಂತ ಕೇಳತಾರೆ. ಆಗ ಅವರು:
“ಈ ಜಗತ್ತಿನಲ್ಲಿ ನಿದ್ರೆ ಹತ್ತಿದವರನ್ನು ಎಚ್ಚರಿಸಬಹುದು, ಆದರೆ ನಿದ್ರೆ ಹತ್ತಿದಂತೆ ನಾಟಕ ಮಾಡುವವರನ್ನು ಎಚ್ಚರಿಸಲಾಗದು, ಅಂಥ ಜನರು ಅಜ್ಞಾನ, ಅವಿವೇಕ, ಅಂಧ ಶ್ರದ್ಧೆ, ಅರಾಜಕತೆ ಬಿತ್ತುತ್ತಾರೆ. ಅಂಥವರು ವೇಶ ಡಂಬಕರು. ಇಲ್ಲಿ ಎಚ್ಚರಾಗಿ ಏನು ಪ್ರಯೋಜನ ಹೇಳಿ? ಅವರು ನಿರಂತರ ಮಲಗಿದರೆ ನಾಡಿಗೇ ಒಳ್ಳೆಯದು. ಯಾರು ದೇಶ, ಭಾಷೆ, ನಾಡು, ಸುಜ್ಞಾನ, ಸೇವೆ, ಶಿವಸಂಸ್ಕೃತಿ ಬಿತ್ತುತ್ತಾರೋ ಅಂಥವರು ನಿತ್ಯ ಜಾಗೃತರಾಗಿರಬೇಕು, ಮತ್ತೆ ಎಚ್ಚರವಾಗಬೇಕು. ಅಂಥವರನ್ನು ಎಚ್ಚರಿಸುವುದೇ ನನ್ನ ಕಾಯಕ” ಎಂದರು.
ಹಾಗಾಗಿ ಶಿವ ಎಂದರೆ ಮತ್ತೆ ಮತ್ತೆ ನಮ್ಮೊಳಗೆ ಎಚ್ಚರವಾಗುವುದು. ನಮ್ಮ ಅಂತರಂಗದಲ್ಲಿನ ಅರಿವನ್ನು ಜಾಗೃತಗೊಳಿಸುವುದು. ನಮ್ಮಲ್ಲಿರುವ ಜಡತ್ವ, ಅಜ್ಞಾನ, ಅವಿವೇಕ, ಅಂಧಶ್ರದ್ಧೆಯಿಂದ ನಾವುಗಳು ಎಚ್ಚೆತ್ತು ಸಹನೆ, ಸನ್ನಡತೆ, ಕಾಯಕ, ದಾಸೋಹ, ಸ್ನೇಹ, ಬಂಧುತ್ವ, ವಿಶ್ವಪ್ರಜ್ಞೆಗಳ ಮೂಲಕ ನಾವು ಇಂದು ಶಿವನ ಅರಿವಿನ ಜಾಗೃತಿಯ ಬೆಳಕು ಮೂಡಿಸಿಕೊಳ್ಳಬೇಕು.
ಶಿವಪಥವಲ್ಲದೆ ಬೇರೆ ಪಥವನ್ನು ಅನುಸರಿಸದೆ ಅಂಗ ಅರಿವು ಆಚಾರಗಳಲ್ಲಿ ಶಿವಸಂಸ್ಕೃತಿಯನ್ನು ತುಂಬಿಕೊಂಡು ನಾವು ಶಿವಾಯತರಾಗಬೇಕು. ಎಲ್ಲ ಚೇತನಗಳ ಮೂಲ ಶಕ್ತಿಯೇ ಶಿವ. ಎಲ್ಲ ಸಂಸ್ಕೃತಿಗಳ ಮೂಲ ದ್ರವ್ಯವೇ ಶಿವ ಸಂಸ್ಕೃತಿ. ಈ ಮೂಲ ತತ್ವದ ಶಿವ ಸಿದ್ಧಾಂತವೇ ನಮ್ಮೆಲ್ಲರ ಉಸಿರಾಗಬೇಕು. ಹೌದು, ನಾವು ಮಾಡುವ ಆಚಾರ, ವಿಚಾರಗಳು, ಕೇವಲ ತೋರಿಕೆಯ ತೊರು ದೀಪಗಳಾಗದೆ ಬಾಳ ಬದುಕಿಗೆ ಮಾರ್ಗ ತೋರುವ ನಿಜದ ನೆಲೆಯಾಗಬೇಕು, ಬಾಳ ಕಲೆಯಾಗಬೇಕು ಅಂತಾ ಹೇಳತಾ ಆಯ್ದಕ್ಕಿ ಮಾರಯ್ಯನವರ ಈ ವಚನದ ಮೂಲಕ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504)
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
ಸಹಾಯಕ ಗ್ರಂಥಗಳು:
- ಆಧುನಿಕ ಜಗತ್ತಿಗೆ ಶ್ರೀ ಬಸವೇಶ್ವರರ ಹೊಸ ಸಂದೇಶ: ಡಾ. ಎಸ್. ವಿ. ಅಯ್ಯನಗೌಡರ, ಶ್ರೀಮತಿ. ಶಕುಂತಲಾ.
- ನಾನು ಕಲಬುರ್ಗಿ: ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್ ತರೀಕೆರೆ, ಡಾ. ಮೀನಾಕ್ಷಿ ಬಾಳಿ.
- ಬಸವಣ್ಣನ ವಚನಗಳ ವರ್ಣನಾತ್ಮಕ ವ್ಯಾಕರಣ: ಡಾ. ನಾಗರಾಜ ದೊರೆ.
- ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
- ವಚನ ಸಾಹಿತ್ಯದಲ್ಲಿ ಸಮಾಜೋ-ಭಾಷಿಕ ಚಿಂತನೆಗಳು: ಡಾ. ವಿ. ಶಿವಾನಂದ.
- ಪರ್ಯಾಯ ಸಂಸ್ಕೃತಿ ವಚನ ಸಂಪುಟ: ಡಾ. ಸಿ. ವೀರಣ್ಣ.
- ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
- ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾಸ ಭಟ್ಟಾಚಾರ್ಯ.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in