ಇಷ್ಟಲಿಂಗದ ಪರಿಕಲ್ಪನೆ:
ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
ಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ;
ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
ಹಾದರಗಿತ್ತಿಯಂತೆ ಅವಂದಿರ ಭಕ್ತಿ.
ಅಂತಪ್ಪ ಪಂಚಮಹಾಪಾತಕರ
ಮುಖದತ್ತ ತೋರದಿರಾ ಗುಹೇಶ್ವರಾ
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-209/ವಚನ ಸಂಖ್ಯೆ-703)

ಅಂಗದ ಮೇಲೆ ಧರಿಸಿದ ಲಿಂಗವನ್ನು ಹೊರತುಪಡಿಸಿ ಬೇರೆಡೆ ದೇವರನ್ನು ಹುಡುಕುವುದು, ಪೂಜಿಸುವುದು ಸಲ್ಲದು ಎಂದು ಈ ವಚನ ಹೇಳುತ್ತದೆ. ಇಂತಹ ನಡೆಗಳನ್ನು ಅತ್ಯಂತ ಆಕ್ರೋಶದಿಂದ ವಚನಕಾರರು ಖಂಡಿಸಿದ್ದಾರೆ. ಈ ವಚನಗಳನ್ನು ಗಮನಿಸಿದಾಗ ವಚನಕಾರರು ದೇವರ ವಿಚಾರದಲ್ಲಿ ಒಂದು ನಿರ್ದಿಷ್ಟತೆಯನ್ನು ಹೇರುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಅಭಿಪ್ರಾಯ ಒಪ್ಪುವಂತಹದ್ದಲ್ಲ, ಏಕೆಂದರೆ ವಚನಕಾರರು ತಮ್ಮ ಕಾಲದಲ್ಲಿ ದೇವರು ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಹಲವು ಅಪಸವ್ಯಗಳನ್ನು, ಅವಿವೇಕದ ನಡೆನುಡಿಗಳನ್ನು ಗಮನಿಸಿ, ದೇವರು ಮಾನವನ ಪ್ರಜ್ಞೆಯ ಸಂಕೇತವಾಗಬೇಕು. ಅವನ ಅರಿವನ್ನು ನಿರಂತರವಾಗಿ ಜಾಗೃತವಾಗಿಟ್ಟುಕೊಂಡಿರಬೇಕೆಂಬ ಆಶಯದಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇವರನ್ನು ತಾನು ಪೂಜಿಸುವಂತಾಗಬೇಕು. ಆ ದೇವರ ಪೂಜೆಗೆ ಯಾವುದೇ ಮಧ್ಯದರ್ತಿಗಳಿರಬಾರದು ಹಾಗೂ ಆ ದೇವರು ಮಾನವನನ್ನು ಮಹಾದೇವನಾಗಿಸಲು ಪೂರಕವಾಗಿ ಯೋಗಸಾಧನೆಗೂ ಅವಕಾಶ ಉಂಟುಮಾಡಬೇಕೆಂಬ ಉದ್ದೇಶಗಳಿಂದ ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡಿದ್ದಾರೆ.
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು,
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು,
ನಮ್ಮ ಕೂಡಲಸಂಗನ ಕೂಡುವುದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-49/ವಚನ ಸಂಖ್ಯೆ-175)
ಕರದಲ್ಲಿ ಲಿಂಗ ಹಿಡಿದು ಲಿಂಗಸಿದ್ಧಿ ಪಡೆಯುವುದು, ಲಿಂಗದ ಒಡನಾಟದಲ್ಲಿ ಅಂಗಭಾವ ಕಳೆದುಕೊಂಡು ಸಾಮರಸ್ಯ ಸಾಧಿಸುವುದು, ಲಿಂಗಾಂಗ ಸಾಮರಸ್ಯದಿಂದ ಲಿಂಗವ್ಯಕ್ತಿತ್ವವನ್ನು ಸಂಪಾದಿಸಿಕೊಳ್ಳುವುದು. ಇಂತಹ ವ್ಯಕ್ತಿತ್ವದಿಂದ ಇಡೀ ಬದುಕನ್ನೇ ಲಿಂಗಭಾವದಿಂದ ಅನುಭವಿಸುವುದು ಶಿವಯೋಗವಾಗಿದೆ ಎಂದು ಶಿವಶರಣರು ವ್ಯಾಖ್ಯಾನಿಸುತ್ತಾರೆ. ಬಸವಣ್ಣ ಸೇರಿದಂತೆ ವಚನಕಾರರ ಪರಿಕಲ್ಪನೆಯಲ್ಲಿ ಶಿವಯೋಗ ಅಂದರೇನು ಎಂದು ಶಿವಮೊಗ್ಗದ ಬಸವಕೇಂದ್ರ, ಚಿಕ್ಕಮಗಳೂರು ಶ್ರೀ ಬಸವತತ್ತ ಪೀಠದ ಶ್ರೀಗಳು, ಲೇಖಕರೂ ಆದ ಡಾ. ಶ್ರೀ ಬಸವ ಮರುಳಸಿದ್ದಸ್ವಾಮೀಜಿ ಅವರು ವಿವಿಧ ವಚನಕಾರರ ವಚನಗಳ ಸಹಿತ ವಿವರಿಸಿದ್ದಾರೆ
ಲಿಂಗಕ್ಕೆ ಅಷ್ಟವಿಧಾರ್ಚನೆ ಮಾಡುವುದು ಅಂದರೆ, ಜಲ, ವಿಭೂತಿ, ಗಂಧಾಕ್ಷತೆ, ಪತ್ರೆ-ಪುಷ್ಪ ಧೂಪ, ದೀಪ, ನೈವೇದ್ಯ, ವಂದನೆ ಇವುಗಳಿಂದ ಪೂಜಿಸುವುದು ಅಥವಾ ಷೋಡಶೋಪಚಾರ ಮಾಡುವುದು. ಅಂದರೆ, ಆಭಿಷೇಕ, ವಿಭೂತಿ, ಗಂಧ, ಅಕ್ಷತೆ, ರುದ್ರಾಕ್ಷಿ, ಪತ್ರೆ, ಪುಷ್ಪ ರೂಪ, ದೀಪ, ಘಂಟಾನಾದ, ನೈವೇದ್ಯ, ಗೀತ, ಫಲ-ತಾಂಬೂಲ, ಸ್ತೋತ್ರ, ಪ್ರದಕ್ಷಿಣೆ, ನಮಸ್ಕಾರ ಇವುಗಳನ್ನು ಲಿಂಗಕ್ಕೆ ಸಲ್ಲಿಸುವ ಮೂಲಕ ಪೂಜೆ ಮಾಡುವುದು ಎಂದರ್ಥ. ಹೀಗೆ ಪೂಜೆ ಮಾಡಿದ ನಂತರ ಇಷ್ಟಲಿಂಗವನ್ನು ತದೇಕ ದೃಷ್ಟಿಯಿಂದ ನೋಡಬೇಕು. ಮನದೊಳಗೆ ಮಂತ್ರ ಜಪ ನಡೆಯುತ್ತಿರಬೇಕು. ಹೀಗೆ ನೋಡುತ್ತಾ ನೋಡುತ್ತಾ ಆನಂದದಲ್ಲಿ ಮೈಮರೆಯಬೇಕು. ಲಿಂಗದೊಡನೆ ಮೌನ ಸಂಭಾಷಣೆ ನಡೆಸಬೇಕು. ಹೀಗೆ ಮಾಡುತ್ತ ಲಿಂಗವೇ ತಾನಾಗಬೇಕು. ಹೀಗೆ ಲಿಂಗಾಂಗ ಸಾಮರಸ್ಯ ಹೊಂದಲು ನಡೆಸುವ ಈ ಎಲ್ಲ ಪ್ರಕ್ರಿಯೆಗಳನ್ನು ಒಟ್ಟಾಗಿ ಶಿವಯೋಗ ಎಂದು ಕರೆಯುತ್ತಾರೆ. ಈ ಶಿವಯೋಗದ ಕುರಿತು ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಹೀಗೆ ಹೇಳಿದ್ದಾರೆ.
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
… … … … … … … … … … … … …
… … … … … … … … … … … … …
ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ
ಭಾವ, ಮನ, ಕರದಲ್ಲಿ ಶ್ರೀಗುರು ತಂದು
ಸಾಹಿತ್ಯವ ಮಾಡಿದನಾಗಿ
ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ,
ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ,
ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನು, ಮನ, ಭಾವಂಗಳಲ್ಲಿ
ಇಷ್ಟ, ಪ್ರಾಣ, ಭಾವವಾದ ಭೇದವನರಿದು
ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ
ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ
[ತೃಪ್ತಿ]ಲಿಂಗವ ಭಾವಜ್ಞಾನದಿಂದ ಗ್ರಹಿಸಿ
ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ
ಲಿಂಗವೇ ತಾನು ತಾನಾಗಿ
ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-165/ವಚನ ಸಂಖ್ಯೆ-364)
ಇಷ್ಟಲಿಂಗವು ಬ್ರಹ್ಮರಂಧ್ರದಲ್ಲಿರುವ ಪರಮ ಚಿತ್ತಳೆಯ ರೂಪ, ಅದನ್ನೇ ಶ್ರೀಗುರು ಭಾವದಿಂದ ಮನಕ್ಕೆ ಮನದಿಂದ ಕರಸ್ಥಲಕ್ಕೆ ತಂದು, ಇಷ್ಟಲಿಂಗವನ್ನು ದೃಷ್ಟಿಯಿಂದಲೂ, ಪ್ರಾಣಲಿಂಗವನ್ನು ಮನಜ್ಞಾನದಿಂದಲೂ, ಭಾವಲಿಂಗವನ್ನು ಭಾವಜ್ಞಾನದಿಂದಲೂ ಅನುಸಂಧಾನ ಮಾಡಿ ತಾನೇ ಲಿಂಗವಾಗುವುದು ಶಿವಯೋಗ ಎಂದಿದ್ದಾರೆ. ಶಿವಯೋಗದಲ್ಲಿ ಕಣ್ಣುಗಳಿಗೆ ಬಹಳ ಮಹತ್ವವಿದೆ, ಕಣ್ಣಿನ ಮೂಲಕವೇ ಲಿಂಗವನ್ನು ನೋಡುತ್ತಾ ಚಂಚಲ ಮನವನ್ನು ನಿಶ್ಚಲಗೊಳಿಸಬೇಕು. ಅಂತೆಯೇ ವಚನಕಾರರು ಶಿವಯೋಗದಲ್ಲಿ ನೋಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-390/ವಚನ ಸಂಖ್ಯೆ-1040)
ಲಿಂಗವೆಂಬುದು ಗೋಪ್ಯವಾದ ತತ್ವವನ್ನೊಳಗೊಂಡ ಕುರುಹು, ಅದನ್ನು ಕಣ್ಣಿಂದ ನೋಡುತ್ತಾ ಕಣ್ಣಿಗೆ ಕಣ್ಣಾದ ಒಳಗಣ್ಣ ತೆರೆಯಬೇಕು. ಆದರಿಂದ ಲಿಂಗದ ನೆಲೆಕಲೆಗಳ ಅರಿಯಬೇಕು. ಅಂತೆಯೇ ಕಣ್ಣು ಬಹಳ ಮಹತ್ವದ್ದು. ಈ ಸಂಗತಿಯನ್ನು ವಚನಕಾರರು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಬಹುದು.
ಎನ್ನ ಭಾವವ ಸಿಂಹಾಸನವ
ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಮನವ ಸಿಂಹಾಸನವ
ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಕಂಗಳ ಸಿಂಹಾಸನವ
ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಕರಸ್ಥಲವ ಸಿಂಹಾಸನವ
ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಸರ್ವಾಂಗವ ಸಿಂಹಾಸನವ ಮಾಡಿದ,
ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
(ಸಮಗ್ರ ವಚನ ಸಂಪುಟ: ಹದಿನಾಲ್ಕು-2021/ಪುಟ ಸಂಖ್ಯೆ-177/ವಚನ ಸಂಖ್ಯೆ-173)
ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ,
ಕಟ್ಟಕಡೆಯ ಮೆಟ್ಟಿ ನೋಡಿ,
ಉಟ್ಟುದನಳಿದು ಒಟ್ಟಬತ್ತಲೆಯಾದೆ.
ಇನ್ನು ಬಿಟ್ಟುದ ಹಿಡಿಯಬಾರದು,
ಹಿಡಿದುದ ಬಿಡಬಾರದು.
ಇದಕ್ಕೆ ಒಡೆಯನಾವನೆಂದು
ನೋಡಲಾಗಿ ನೋಡಿಹೆನೆಂದರೆ ನೋಟಕ್ಕಿಲ್ಲ.
ಕೂಡಿಹೆನೆಂದರೆ ಕೂಟಕ್ಕಿಲ್ಲ,
ಹಿಡಿದಿಹೆನೆಂದರೆ ಹಿಡಿಹಿಗಿಲ್ಲ.
ಪೂಜಿಸಿಹೆನೆಂದರೆ ಪೂಜೆಗಿಲ್ಲ.
ಇದ ಮೆಲ್ಲಗೆ ಓಜೆಯಿಂದ ನೋಡಿಲಾಗಿ,
ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ,
ಹಿಡಿವುದು ಆ ಹಿಡಿಗೆ ಸಿಕ್ಕಿಕೊಂಬುದು ತಾನೆ,
ಪೂಜಿಸುವುದು ಪೂಜೆಗೊಂಬುದು ತಾನೆ.
ನಾನಿದರ ಭೇದವನರಿದು ಆದಿ
ಅನಾದಿಯನು ಏಕವ ಮಾಡಿ,
ನಾನಲ್ಲೇ ಐಕ್ಯನಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-407/ವಚನ ಸಂಖ್ಯೆ-994)
ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ
ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು
ಭಾವವೆಂಬ ಕುರುಹ ಮರೆದುದು.
ಇಂತೀ ಉಭಯ ನಿರ್ಭಾವವಾದಲ್ಲಿ
ಇಹಪರವೆಂಬ ಹೊಲಬುಗೆಟ್ಟಿತ್ತು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ
ಮಲ್ಲಿಕಾರ್ಜುನನು ಒಂದೆಂದಲ್ಲಿ
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-410/ವಚನ ಸಂಖ್ಯೆ-1142)
ಹೊತ್ತಾರೆ ಎದ್ದು ಶಿವಲಿಂಗದೇವನ
ದೃಷ್ಟವಾರಿ ನೋಡದವನ ಸಂಸಾರವೇನವನ?
ಬಾಳುವೆಣನ ಬೀಳುವೆಣನ ಸಂಸಾರವೇನವನ?
ನಡೆವೆಣನ ನುಡಿವೆಣನ ಸಂಸಾರವೇನವನ?
ಕರ್ತು ಕೂಡಲಸಂಗಾ,
ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-44/ವಚನ ಸಂಖ್ಯೆ-157)
ನೋಡುವ ನೋಟ ನೀವೆಂದರಿದೆ,
ಕೇಳುವ ಶ್ರೋತ್ರ ನೀವೆಂದರಿದೆ,
ವಾಸಿಸುವ ಘ್ರಾಣ ನೀವೆಂದರಿದೆ,
ಮುಟ್ಟುವ ಸ್ಪರ್ಶನ ನೀವೆಂದರಿದೆ,
ರುಚಿಸುವ ಜಿಹ್ವೆ ನೀವೆಂದರಿದೆ,
ಎನ್ನ ಕರಣಂಗಳು ನಿಮ್ಮ ಕಿರಣಂಗಳಾಗಿ.
ಕೂಡಲಚೆನ್ನಸಂಗಯ್ಯಾ ನಾ ನಿಮ್ಮ ಬೇಡಲಿಲ್ಲ,
ನೀ ಕೂರ್ತು ಕೊಡಲಿಲ್ಲಾಗಿ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-198/ವಚನ ಸಂಖ್ಯೆ-478)
ಆಡುವ ಹಾಡುವ ನಡೆವ ನುಡಿವ ಬೆಡಗ ಬಿಡದೆ,
ಒಡಲ ದುರ್ಗುಣಗಳ ಕೆಡದೆ,
ಪೊಡವಿಯೊಳು ನುಡಿಯ ನುಣ್ಣನೆ ನುಡಿದುಕೊಂಡು
ಒಡಲಹೊರೆವ ಅಣ್ಣಗಳಿರಾ,
ನೀವು ಭಕ್ತಮಾಹೇಶ್ವರರೆಂದು
ನುಡಿದುಕೊಂಬಿರಿ ಅಂತಲ್ಲ, ಕೇಳಿರಣ್ಣಾ.
ನೋಡುವ ಕಣ್ಣು, ನುಡಿವ ನಾಲಿಗೆಯ ನುಂಗಿತ್ತು.
ಕೇಳುವ ಕಿವಿ, ವಾಸಿಸುವ ನಾಸಿಕವ ನುಂಗಿತ್ತು.
ಕೊಡುವ ಕೊಂಬುವ ಕೈ, ಅಡಿ ಇಡುವ ಕಾಲ ನುಂಗಿತ್ತು.
ಇವನೊಡಬಿಡದೆ ಕೊಂಬತನುವ ನುಂಗಿತ್ತು.
ತಲೆಯಷ್ಟೆಯುಳಿದು, ಆ ತಲೆಯ ನೆಲವಿಡಿದು,
ಘನವ ನಂಬಿದವರ ಭಕ್ತ ಮಾಹೇಶ್ವರರೆಂಬೆ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-359/ವಚನ ಸಂಖ್ಯೆ-885)
ಎನ್ನ ಕಂಗಳ ಸಿಂಹಾಸನವ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ (ಷಣ್ಮುಖ ಶಿವಯೋಗಿಗಳು), ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ (ಹಡಪದ ಅಪಣ್ಣ), ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ (ಮೋಳಿಗೆ ಮಹಾದೇವಿ), ಹೊತ್ತಾರೆ ಎದ್ದು ಲಿಂಗದೇವನ ದೃಷ್ಟಿಯಾರೆ ನೋಡದವನ ಸಂಸಾರವೇನವನ? (ಬಸವಣ್ಣ), ನೋಡುವ ನೋಟ ನೀವೆಂದರಿದೆ (ಚೆನ್ನಬಸವಣ್ಣ), ನೋಡುವ ಕಣ್ಣು ನುಡಿವ ನಾಲಗೆಂದು ನುಂಗಿತ್ತು (ಹಡಪದ ಅಪಣ್ಣ). ಈ ಎಲ್ಲ ವಚನದ ಸಾಲುಗಳು ಶಿವಯೋಗದಲ್ಲಿ ಕಣ್ಣುಗಳ ಮಹತ್ವವನ್ನು ತಿಳಿಸುತ್ತವೆ.
ಸರ್ವಾಂಗಲಿಂಗ ಸ್ಥಿತಿ ಸಲುವಲು ಸಾಧಕನಿಗೆ ಸುಲಭವಾಗಲೆಂದು, ಇಂದ್ರಿಯ ಭೋಗಗಳೆಲ್ಲ ಲಿಂಗ ಭೋಗಗಳಾಗಲೆಂದು ಭಾವಿಸಿ ವಚನಕಾರರು ಶರೀರದ ಪ್ರಮುಖ ಅಂಗಗಳಿಗೂ
ಲಿಂಗಸಂಬಂಧವನ್ನು ಮಾಡುತ್ತಾರೆ. ಲೋಕದ ಅನುಭವವೆಲ್ಲ ಆಗುವುದು ಇಂದ್ರಿಯಗಳಿಂದಲೇ, ಆ ಜ್ಞಾನೇಂದ್ರಿಯಗಳಿಂದಾಗುವ ಭೋಗಗಳೆಲ್ಲ ಲಿಂಗಮುಖದಿಂದ ಬಂದು ಲಿಂಗ ಭೋಗಗಳಬೇಕೆಂಬ ಹಿನ್ನೆಲೆಯಲ್ಲಿ ಮೂಗಿನಲ್ಲಿ ಆಚಾರಲಿಂಗ, ನಾಲಗೆಯಲ್ಲಿ ಗುರುಲಿಂಗ, ಕಣ್ಣಿನಲ್ಲಿ ಶಿವಲಿಂಗ, ಚರ್ಮದಲ್ಲಿ ಜಂಗಮಲಿಂಗ, ಕಿವಿಯಲ್ಲಿ ಪ್ರಸಾದಲಿಂಗಗಳನ್ನು ಸಬಂಧಿಸಿದ್ದಾರೆ. ಅದೇ ರೀತಿಯಲ್ಲಿ ಗುದ, ಗುಹ್ಯ, ನಾಭಿ, ಹೃದಯ, ಗಂಟಲುಗಳಲ್ಲಿಯೂ ಕ್ರಮವಾಗಿ ಆಧಾರಚಕ್ರ, ಸ್ವಾಧಿಷ್ಠಾನಚಕ್ರ, ಮಣಿಪೂರಚಕ್ರ, ಅನಾಹತಚಕ್ರ, ವಿಶುದ್ದಿ ಚಕ್ರಗಳಿವೆ ಎಂದೂ ಅವುಗಳಿಗೆ ಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗಗಳನ್ನು ಹೋಲಿಸಿದ್ದಾರೆ.
ಈ ಎಲ್ಲ ಸಂಗತಿಗಳು ಬಸವಯುಗದ ವಚನಕಾರದಲ್ಲಿ ಚೆನ್ನಬಸವಣ್ಣ, ಅಲ್ಲಮಪ್ರಭುದೇವರು, ಆದಯ್ಯ ಅವರ ವಚನಗಳಲ್ಲಿ ವಿವರವಾಗಿ ಬಂದಿವೆ. ಇದೇ ಸಂಗತಿಗಳ ವಿವರಣೆ ಮಡಿವಾಳ ಮಾಚಿದೇವರು, ಹಡಪದ ಅಪ್ಪಣ್ಯ ಮೇದಾರ ಕೇತಯ್ಯನವರ ವಚನಗಳಲ್ಲಿ ಪ್ರಸ್ತಾಪವಾಗಿದ್ದರೂ ಆಚಾರಲಿಂಗ, ಗುರುಲಿಂಗ ಮೊದಲಾದ ಲಿಂಗಗಳು ದೇಹದ ಯಾವ ಯಾವ ಅಂಗಗಳಿಗೆ ಸಂಬಂಧಿಸಿದವೆಂದು ತಿಳಿಸಿದರೂ ಅವೆಲ್ಲವೂ ನಮಗೆ ಬಸವಣ್ಣನೇ ಎಂದು ಬಸವಣ್ಣನವರನ್ನು ಸ್ಮರಿಸಿಕೊಂಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ.
… … … … … … … … … … … …
… … … … … … … … … … … …
ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ.
ಇಂತು ಬಸವಣ್ಣನೆ ಪರಿಪೂರ್ಣನಾಗಿ,
ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ,
ಬಸವಣ್ಣನೆ ಲಿಂಗವಾದ ಕಾರಣ,
ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ
ಎಂದು ಬಯಲಾದೆನು ಕಾಣಾ, ಕಲಿದೇವರದೇವ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-218/ವಚನ ಸಂಖ್ಯೆ-534)
ಈ ವಚನ ತಾತ್ವಿಕ ಸಂಗತಿಗಳನ್ನೇ ಪ್ರಸ್ತಾಪಿಸುತ್ತಿದ್ದು, ಎಲ್ಲವೂ ಬಸವಣ್ಣನೇ ಎಂದು ಹೇಳುತ್ತಿರುವುದನ್ನು ಕಂಡರೆ ಬಸವಣ್ಣನವರ ಬಗ್ಗೆ ವಚನಕಾರರಿಗಿದ್ದ ಗೌರವ ಹಾಗೂ ಬಸವಣ್ಣ ಶೋಷಿತರ ಪರ ದನಿ ಎತ್ತಿದ ಪರಿಣಾಮ ತಳ ಸಮುದಾಯದ ಹಲವರು ಮುಖ್ಯವಾಹಿನಿಗೆ ಬಂದದ್ದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಬಸವಣ್ಣನವರ ಒಂದು ವಚನವನ್ನು ಗಮನಿಸಬಹುದು,
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ;
ಆನು ದೇವಾ ಹೊರಗಣವನು.
“ಸಂಬೋಳಿ ಸಂಬೋಳಿ” ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-267/ವಚನ ಸಂಖ್ಯೆ-935)
ಬಸವಣ್ಣ ಲಿಂಗಾರ್ಚನೆಯಲ್ಲಿ ತೊಡಗಿರುವ ಮಹಿಮಾಶಾಲಿಗಳೆಲ್ಲ ಒಳಗಿದ್ದಾರೆ ತಾವು ಮಾತ್ರ ಹೊರಗಿದ್ದು ಸಂಭೋಳಿ ಸಂಬೋಳಿ ಎಂದು ಕೂಗು ಹಾಕುತ್ತಿದ್ದಾರೆ. ನಾನು ಹೊರಗಣವನು ಇಂಬನಲ್ಲಿದ್ದೇನೆ ಎಂದು ಹೇಳುತ್ತಾ ತಮ್ಮನ್ನು ತಾವು ತಳವರ್ಗದಿಂದ ಬಂದ ಶೋಷಿತರೊಂದಿಗೆ ಸಮೀಕರಿಸಿಕೊಂಡು ತಮ್ಮ ಜಾತಿಯಿಂದ ಬಂದ ಆಹಂಕಾರವನ್ನು ನಿರಸನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಲಿಂಗದ ಪರಿಕಲ್ಪನೆಯಲ್ಲಿ ವಚನಕಾರರ ನಿಲುವುಗಳನ್ನು ಗಮನಿಸಿದರೆ, ಅವರು ನೀಡಿದ ಇಷ್ಟಲಿಂಗವು ನಿಷ್ಕಲಲಿಂಗದಿಂದ ಪೂಜಿಸುವವನ ಭಾವಕ್ಕೆ ಭಾವದಿಂದ ಮನಕ್ಕೆ ಮನದಿಂದ ಕರಕ್ಕೆ ಬಂದ ಅಂತರಂಗದ ಲಿಂಗ ಕಳೆಯ ಕುರುಹು. ಆ ಕುರುಪನ್ನು ಹಿಡಿದು ಮತ್ತೆ ನಿಷ್ಕಲಲಿಂಗದೆಡೆಗೆ ಸಾಗಬೇಕು. ಹೀಗೆ ನಿಷ್ಕಲಲಿಂಗದ ಕಳೆ ಬಹಿರಂಗದ ಕುರುಹು ಆಗುವುದಕ್ಕೆ ಪ್ರವೃತ್ತಿ ಮಾರ್ಗವೆಂದೂ, ಆ ಕುರುಹು ಹಿಡಿದು ನಿಷ್ಕಲಲಿಂಗದೆಡೆಗೆ ಸಾಗುವುದಕ್ಕೆ ನಿವೃತ್ತಿ ಮಾರ್ಗ ಎಂದು ಶಿವಾನುಭವ ಪರಿಭಾಷೆಯಲ್ಲಿ ಕರೆಯುತ್ತಾರೆ.
ವಚನಕಾರರು ಎಲ್ಲ ಇಂದ್ರಿಯಗಳಲ್ಲಿ ಲಿಂಗಗಳಿದೆ ಎಂದು ಭಾವಿಸಿಕೊಳ್ಳಬೇಕೆಂದು ಹೇಳುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಅಂಗ ಲಿಂಗವಾಗಲು ಸುಲಭವಾಗುತ್ತವೆ ಎಂಬ ಕಾರಣಕ್ಕೆ ಮುಖ್ಯವಾಗುತ್ತವೆ. ಮಾನವ ಈ ಸ್ಥಿತಿ ತಲುಪಲು ಸಾಧನೆಯ ಹಾದಿಯಲ್ಲಿ ನಿರ್ದಿಷ್ಟತೆ ಸಾಧ್ಯವಾಗಬೇಕು. ವಚನಕಾರರು ಈ ನಿರ್ದಿಷ್ಟತೆಗಾಗಿ ಇಷ್ಟಲಿಂಗವನ್ನು ಅವಲಂಬಿಸಿದರು. ವಚನಕಾರರು ಇಷ್ಟಲಿಂಗವನ್ನು ಹೊರತುಪಡಿಸಿ ಅನ್ಯ ಲಿಂಗಗಳು, ಅನ್ನ ತೀರ್ಥಕ್ಷೇತ್ರಗಳಿಗೆ ಶ್ರದ್ದೆ ಭಕ್ತಿಗಳನ್ನು ಸಮರ್ಪಿಸುವುದನ್ನು ತೀವ್ರವಾಗಿ ಖಂಡಿಸುತ್ತಾರೆ.
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-51/ವಚನ ಸಂಖ್ಯೆ-183)
ಈ ವಚನವು ತನ್ನ ಊಟವನ್ನು ಹಾಗೂ ತನ್ನ ಗೃಹಸ್ಥಾಶ್ರಮದ ಕೂಟವನ್ನು ತಾನೇ ಹೇಗೆ ಮಾಡಬೇಕೋ ಹಾಗೆಯೇ ಇಷ್ಟಲಿಂಗವಿಡಿದು ಸಾಧಕನು ತಾನೇ ಸಾಧಿಸಬೇಕೇ ಏನು ಬೇರೊಬ್ಬರಿಂದ ಮಾಡಿಸಲಾಗದು ಎಂದು ತಿಳಿಸುತ್ತದೆ.
ಲಿಂಗದಲ್ಲಿ ಪೂಜೆ ಮಾಡುವ ಮೂಲಕ ತನ್ನ ಭಕ್ತಿಯನ್ನು ತೃಪ್ತಿಗೊಳಿಸಿ ಕೊಳ್ಳುವ ಅವಕಾಶ ಭಕ್ತನಿಗಿದೆ. ಪೂಜೆಯನ್ನು ಏಕಾಗ್ರತೆಯಿಂದ ನೋಡುತ್ತ ಮನದ ಚಂಚಲತೆಯನ್ನು ಕಳೆದುಕೊಂಡು ಧ್ಯಾನಸ್ಥನಾಗಲು ಇಷ್ಟಲಿಂಗ ಸಹಕಾರಿಯಾಗುತ್ತದೆ. ಪೂಜೆ, ಭಕ್ತಿ, ಧ್ಯಾನದ ಮೂಲಕ ಯೋಗ ಸಾಧನೆಗೆ ಅವಕಾಶವಾಗುವ ಇಷ್ಟಲಿಂಗ ವಚನಕಾರರ ವಿಶಿಷ್ಟ ಕೊಡುಗೆಯಾಗಿದೆ. ಜೊತೆಗೆ ಇಷ್ಟಲಿಂಗವು, ಅಂಗ-ಲಿಂಗ ಸಾಮರಸ್ಯದ ಅರಿವಿನ ಕುರುಹಾಗಿದೆ. ಇಷ್ಟಲಿಂಗವಿಡಿದು ಕುರುಹಿನ ಹಿನ್ನೆಲೆಯಲ್ಲಿರುವ ಅರಿವನ್ನು ತಿಳಿಯಬೇಕು. ಅದರಂತೆ ನಡೆಯಬೇಕು. ಹಾಗಾಗದಿದ್ದರೆ ಇಷ್ಟಲಿಂಗವೂ ಕೂಡಾ ತನಗೆ ಎಷ್ಟೇ ತಾತ್ವಿಕ ಚಲನಶೀಲತೆ ಇದ್ದರೂ ಅದು ಸ್ಥಾವರವೆನಿಸುತ್ತದೆ. ಕೇವಲ ಪೂಜೆಗೆ ಮಾತ್ರ ಲಿಂಗ ಬಳಕೆಯಾದರೆ ಆ ಲಿಂಗವನ್ನು ಧರಿಸಿದವನನ್ನು ಹೆಡ್ಡ ಎಂದು ವಚನಕಾರರು ಕರೆದಿದ್ದಾರೆ. ಇಷ್ಟಲಿಂಗ ಪೂಜೆಯನ್ನು ‘ಅಹಂಗ್ರಹೋಪಾಸನೆ’ ಎಂದು ಕರೆಯುತ್ತಾರೆ. ಅಂದರೆ ತನ್ನನ್ನು ತಾನೇ ಪೂಜಿಸಿಕೊಳ್ಳುವುದು ಎಂದರ್ಥ, ಪೂಜೆಯ ಹಿನ್ನೆಲೆಯಲ್ಲಿ ಇದು ಸರಿಯಾದ ವ್ಯಾಖ್ಯಾನವೇ, ಯೋಗದ ದೃಷ್ಟಿಯಿಂದ ಆಲೋಚಿಸಿದಾಗ ಇದು “ಅಹಂ” ನಿಂದ “ಸೋಹಂ” (ನಾನೇ ವರಮಾತ್ಮ ಎಂಬ ಭಾವನೆ) ಆಗುವ ಪ್ರಕ್ರಿಯೆಗೆ ಬೇಕಾದ ಬಹು ಮುಖ್ಯ ಸಾಧನವಾಗುತ್ತದೆ.
ಭಕ್ತನಾಗುವುದೆಂದರೆ ಕೇವಲ ಅಂಗದ ಮೇಲೆ ಲಿಂಗಧರಿಸಿ, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಧರಿಸುವುದಷ್ಟೇ ಅಲ್ಲ, ಅವನು ಈ ಲಾಂಛನಗಳಿಗೆ ತಕ್ಕುದಾದ ಆಚಾರಗಳನ್ನು ಪಾಲಿಸಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಅವನು ಪರೋಪಜೀವಿ ಎನಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯವರು:
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-51/ವಚನ ಸಂಖ್ಯೆ-183)
“ಕೃತ್ಯಕಾಯಕವಿಲ್ಲದವರು ಭಕ್ತರಲ್ಲ ಸತ್ಯಶುದ್ಧವಿಲ್ಲಮದು ಕಾಯಕವಲ್ಲ” ಎಂದು ಹೇಳಿ ಭಕ್ತನೆನಿಸಿಕೊಳ್ಳಲು ಕಾಯಕ ಮಾಡಬೇಕು. ಅದು ಕಾಯಕವೆನಿಸಿಕೊಳ್ಳಲು ಸತ್ಯಶುದ್ಧವಾಗಿರಬೇಕೆಂದು ತಿಳಿಸುತ್ತಾರೆ. ಕೇವಲ ಕಾಯಕ ಮಾಡಿದರಷ್ಟೇ ಸಾಲದು, ಅದರಿಂದ ಬಂದ ಪ್ರತಿಫಲವನ್ನು ಹಂಚಿ ಉಣಬೇಕು. ಹೀಗೆ ಉಣ್ಣುವಾಗ ನಾನು ಮಾಡಿದೆ, ನಾನು ನೀಡಿದೆನೆಂಬ ಅಹಂಭಾವ ಕಳೆದು ದೋಸೋಹಂ ಭಾವ ನೆಲೆಸಿರಬೇಕು. ಈ ಪ್ರಕ್ರಿಯೆಯು ಸಾಧಕನು ಸೋಹಂ ಆದ ಮೇಲೆ ವಿನಯವಂತನಾಗಿರಲು ಬೇಕಾದ ಗುಣವನ್ನು ದೊರಕಿಸಿಕೊಡುತ್ತದೆ. ತಪೋ ಮದ ಉಂಟಾಗದಂತೆ ಸಾಧಕನನ್ನು ಕಾಯುತ್ತದೆ. ಇದು ಅತಿಯಾದ ವಿರಾಗವನ್ನು ಅತಿಯಾದ ಅನುರಾಗವನ್ನೂ ಹೇಳದೆ, ರಾಗ-ವಿರಾಗಗಳ ಹದವನರಿತ ಮಾರ್ಗ ಎಂದು ಹೇಳಬೇಕೆನಿಸುತ್ತದೆ.
ಇಂದ್ರಿಯ ನಿಗ್ರಹ ಮಾಡಬೇಕು:
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು?
ಸತಿಪತಿರತಿಸುಖಭೋಗೋಪಭೋಗ, ವಿಳಾಸವ
ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮಾಚಾರಕ್ಕೆ ದೂರ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-174/ವಚನ ಸಂಖ್ಯೆ-639)
ಇಂದ್ರಿಯ ನಿಗ್ರಹ ಮಾಡುವುದು ದೋಷಕ್ಕೆ ಕಾರಣ ಎನ್ನುತ್ತಾರೆ ಬಸವಣ್ಣನವರು. ಯಾವುದನ್ನು ನಿಗ್ರಹಿಸುತ್ತೇವೆಯೋ ಅದು ಪದೇ ಪದೆ ಬಂದು ಕಾಡುತ್ತದೆ. ಅಂತೆಯೇ ಅದರ ನಿಗ್ರಹಕ್ಕಿಂತಲೂ ಅದರ ಬಳಕೆಯ ಸಂಸ್ಕಾರವನ್ನರಿಯುವುದು ಮುಖ್ಯ ಎಂದು ಸಿರಿಯಾಳ-ಚೆಂಗಳೆ, ಸಿಂಧು-ಬಲ್ಲಾಳರ ಉದಾಹರಣೆಯನ್ನು ನೀಡಿ ಅವರು ಗೃಹಸ್ತಾಶ್ರಮದ ಭೋಗಗಳೆಲ್ಲವನ್ನು ಅನುಭವಿಸಿಯೂ ಶಿವನೊಲುಮೆಗೆ ಪಾತ್ರರಾಗಿರುವುದರಿಂದ ಇಂದ್ರಿಯ ಭೋಗ ದೋಷವಲ್ಲ, ಅದಕ್ಕಾಗಿ ಪರಧನ-ಪರಸತಿಯರನ್ನು ಮೋಹಿಸುವುದು ದೋಷ ಎಂದು ಪ್ರತಿಪಾದಿಸುತ್ತಾರೆ.
ಹಾಗಾದರೆ ಅಲ್ಲಮಪ್ರಭುದೇವರು, ಚೆನ್ನಬಸವಣ್ಣ, ಸಿದ್ದರಾಮೇಶ್ವರ, ಅಕ್ಕಮಹಾದೇವಿ ಗೃಹಸ್ಥರಲ್ಲ. ಅವರು ಇಂದ್ರಿಯ ನಿಗ್ರಹಿಸಿಕೊಂಡಿದ್ದರಲ್ಲ, ಅವರಿಗೆ ಪಂಚೇಂದ್ರಿಯಗಳು ಕಾಡಲಿಲ್ಲವೆ? ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡಿಬರುತ್ತದೆ. ಇದಕ್ಕೆ ಉತ್ತರವೆಂದರೆ. ಇಂದ್ರಿಯ ಭೋಗವೆಂದರೆ ಕೇವಲ ಲೈಂಗಿಕ ತೃಪ್ತಿಯನ್ನು ಹೊಂದುವುದಷ್ಟೇ ಎಂದು ಭಾವಿಸುವುದಲ್ಲ, ಅದರ ಬಗೆಗೆ ಆಸಕ್ತಿಯಿಲ್ಲದವರು ಅದರಂತೆಯೇ ಬದುಕಿ ತೋರಿಸಿದ್ದಾರೆ. ಆಸಕ್ತಿ ಇದ್ದೂ ಮಾನಸಿಕವಾಗಿ ಆಸಹಜ ಬದುಕು ನಡೆಸುವುದು ತನಗೆ ಮಾಡಿಕೊಳ್ಳುವ ಮೋಸವಾದರೆ, ಆಸಕ್ತಿಯಿಲ್ಲದವನಂತೆ ತೋರಿಸುತ್ತಾ ತೆರೆಮರೆಯಲ್ಲಿ ಭೋಗ ಜೀವನ ನಡೆಸುವುದು ಸಮಾಜಕ್ಕೆ ಮಾಡುವ ದ್ರೋಹವಾಗುತ್ತದೆ.
ಈ ಕಾರಣದಿಂದಾಗಿಯೇ ಸಿದ್ದರಾಮೇಶ್ವರರು:
ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-252/ವಚನ ಸಂಖ್ಯೆ-826)
ವಿರಾಗಿಯಾಗಿ ಬದುಕಿದರೆ ಸರಿ, ಆದರೆ ಮನಸ್ಸು ಹೆಣ್ಣಿನ ಸುಖಕ್ಕಾಗಿ ಆಸೆಪಟ್ಟರೆ ವಿವಾಹವಾಗಿ ಸುಖಿಸಬೇಕು. ಅದೇ ರೀತಿಯಲ್ಲಿ ಹೊನ್ನು ಮಣ್ಣುಗಳೂ ಕೂಡಾ ಬೇಕೆನಿಸಿದರೆ ಪರಿಶ್ರಮದಿಂದ ಮೊರಕಿಸಿಕೊಳ್ಳಬೇಕೇ ವಿನಃ ಅಪಮಾರ್ಗದಿಂದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಚನಕಾರರು ಶರೀರವನ್ನು ತುಚ್ಚವೆಂದು ಕಾಣಲಿಲ್ಲ. ಬದಲಿಗೆ ಅದು ಶಿವನೊಲುಮೆಗಾಗಿ ಇರುವ ಪ್ರಸಾದಕಾಯ ಎಂದು ಭಾವಿಸಿದ್ದಾರೆ, ಅಂತೆಯೇ ಶರೀರವನ್ನು ಕೆಡಿಸಬಾರದು. ಹಾಗಾಗಿ ಅನ್ನ-ಸ್ನಾನಗಳು ಶರೀರಕ್ಕೆ ಅತ್ಯಂತ ಅಗತ್ಯ. ಅವನ್ನು ಉಸಿರಿರುವವರೆಗೂ ಮಾಡಬೇಕು. ಅಂತೆಯೇ ಲಿಂಗಕ್ಕೆ ಭಕ್ತಿ ಆಚರಣೆಗಳನ್ನು ಮಾಡಬೇಕು. ಉಸಿರಿರುವವರೆಗೂ ದೇಹ ಧರ್ಮವನ್ನು, ಅತ್ಮವಿರುವವರೆಗೂ ಭಕ್ತಿ ಧರ್ಮವನ್ನು ಪಾಲಿಸಬೇಕೆಂಬುದು ವಚನಕಾರರ ಆಶಯವಾಗಿದೆ. ಈ ಎಲ್ಲ ಕಾರಣಗಳಿಂದ ವಚನಕಾರರು ಪ್ರತಿಪಾದಿಸಿದ ಇಷ್ಟಲಿಂಗದೊಂದಿಗೆ ನಡೆಸುವ ಶಿವಯೋಗವು ಎಲ್ಲ ಮಾನವರಿಗೂ ಸಾಧ್ಯವಾದ ಯೋಗ ಮಾರ್ಗ ಎಂದು ಭಾವಿಸಬಹುದಾಗಿದೆ.
ಡಾ. ಶ್ರೀ. ಬಸವ ಮರುಳಸಿದ್ಧ ಸ್ವಾಮಿಗಳವರು,
ಶ್ರೀ ಬಸವ ತತ್ವ ಪೀಠ, ಚಿಕ್ಕಮಗಳೂರು,
ಬಸವ ಕೇಂದ್ರ, ಶಿವಮೊಗ್ಗ.
ಮೋಬೈಲ್ ಸಂ. +91 80954 21985
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in