“ವಚನಗಳಲ್ಲಿ ಪ್ರಸಾದ ತತ್ವ” / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ

12 ನೇ ಶತಮಾನವು ಮನುಕುಲದ ಇತಿಹಾಸದಲ್ಲಿ ವಿಶೇಷವಾದಂತಹ ಕಾಲ, ಅದು ಪಾರಮಾರ್ಥವನ್ನು ಸಕಲ ಮಾನವರಿಗೆ ಉಣಬಡಿಸಿದಂತಹ ಶತಮಾನ. ಮಾನವ ಕುಲಕ್ಕೆ ಬದುಕನ್ನು ಕಲಿಸಿದ ಶತಮಾನ ಭವ-ಭವದಲ್ಲಿ ಬೇಯುತ್ತಿದ್ದ ಮಾನವರು ಶರಣಾಗುವ ಮಾರ್ಗ ಕಲಿಸಿದಂತಹ, ಬೆಳಕಿಗೆ ಬಂದಂತಹ ಶತಮಾನ ದೇವನ ಹಂಬಲವುಳ್ಳವರಿಗೆ ಗುರು ಕಾರುಣ್ಯವು ಲಭಿಸಿದಂತಹ ಕಾಲ. ಅದು ಬಸವಣ್ಣನವರು ಅವತರಿಸಿದ ಕಾಲ ಕನಿಷ್ಠವೆನಿಸಿದ ವ್ಯಕ್ತಿಗಳನ್ನು ಆಧ್ಯಾತ್ಮಿಕದ ತುಟ್ಟ ತುದಿಗೆ ಕರೆದೊಯ್ಯವುವ ಅಸ್ಸಿಮ ಶಕ್ತಿ ಬಸವಣ್ಣನವರ ಬೋಧನೆಯಲ್ಲಿ ತುಂಬಿತ್ತು. ಪ್ರತಿಯೊಬ್ಬರ ನಡೆ-ನುಡಿ, ಆಚಾರ-ವಿಚಾರ ಮನೋಭಾವ ಗುಣಗಳು, ಬದುಕುವ ರೀತಿ ಇತ್ಯಾದಿಗಳೆಲ್ಲವನ್ನು ತಿದ್ದಿ ತೀಡಿ, ಅವರನ್ನು ಆದ್ಯಾತ್ಮಿಕದ ನೆಲೆಯಲ್ಲಿ ಮೇಲಕ್ಕೇರಿರಿಸಿ, ಇವುಗಳೆಲ್ಲವುಗಳಿಂದ ಆಗ ಬಂದು ಹೊಸ ಅಲೆಯು ಹೊರಹೊಮ್ಮಿತು.

ಬಸವಣ್ಣನವರ ಪರಿಕಲ್ಪನೆಯಾದ ಇಷ್ಟಲಿಂಗದ ದಾರಿಗಳಿಂದ ಲಿಂಗಾಯತ ಧರ್ಮ ಉದಯವಾಯಿತು. ಲಿಂಗಾಯತ ಧರ್ಮಕ್ಕೆ ಒಂದು ಚೌಕಟ್ಟನ್ನು ಹಾಕಿ ಕೊಡಲು ಆಚಾರ-ವಿಚಾರ, ನಡೆ-ನುಡಿಗಳನ್ನು ಅಳವಡಿಸಿಕೊಳ್ಳಲು, ಸಾಧನೆಗೆ ಪೂರಕವಾಗಲು ಅಷ್ಟಾವರರ್ಣಗಳು ಪಂಚಾಚಾರಗಳು, ಷಟ್‌ಸ್ಥಳಗಳು ಮೂಡಿ ಬಂದ್ವು, ಇವುಗಳನ್ನು ಲಿಂಗಾಯತ ಧರ್ಮದ ಸಂವಿಧಾನ ಅನ್ನಬಹುದು. ಅಷ್ಟಾವರಣಗಳು ಅಂಗವಾದ್ರೆ, ಪಂಚಾಚಾರಗಳು ಪ್ರಾಣ ಮತ್ತು ಷಟ್‌ಸ್ಥಳಗಳು ಆತ್ಮ ಆಗಿವೆ. ಇವರು ಶರಣ ಧರ್ಮದ ಬೆನ್ನೆಲಬುಗಳು, ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಮಾಯೇಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತರನ್ನು ರಕ್ಷಿಸೋ 8 ಸದ್ಗುಣಗಳು, ಇನ್ನೊಂದು ರೀತಿಯಲ್ಲಿ ಹೇಳಬೇಕಂದ್ರ ಅತ್ಯಂತ ಸೂಕ್ಷ್ಮವಾದ ಮತ್ತು ಅತಿ ಬೆಲೆಬಾಳುವ ವಸ್ತುಗಳನ್ನು ನಾವು ಯಾವ ರೀತಿ ರಕ್ಷಿಸುತ್ತೇವೆಯೋ ಅದೇ ತರಹ ನಮ್ಮೆಲ್ಲ ಆಗು ಹೋಗುಗಳಿಗೆ ಅತ್ಯಂತ ಪ್ರಮುಖವಾಗಿ ಕಾರಣಿಭೂತವಾದ ಮನಸ್ಸನ್ನು ಬಾಹ್ಯ ಅನಾರೋಗ್ಯಕರ ವಾತಾವರಣಗಳಿಂದ ಈ ಅಷ್ಟಾವರಣಗಳು ರಕ್ಷಿಸ್ತಾವೆ.

ಈಗ ಅಷ್ಟಾವರಣಗಳು ಯಾವವು ಅಂದರೆ ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಇವುಗಳಲ್ಲಿ ಮೊದಲ ಮೂರು ಗುರು, ಲಿಂಗ, ಜಂಗಮ ಇವುಗಳಲ್ಲಿ ಪೂಜ್ಯವಾದವುಗಳು ಕ್ರಿಯಾ ಭೇದದಿಂದ ಇವು ಮೂರು ಬೇರೆ ಬೇರೆ ಅನಿಸಿದ್ರೂ ತಾತ್ವಿಕ ದೃಷ್ಟಿಯಿಂದ ಈ ತ್ರಿಮೂರ್ತಿಗಳು ಶಿವನ ಸ್ವರೂಪವೇ ಆಗಿವೆ. ಇನ್ನು ವಿಭೂತಿ ರುದ್ರಾಕ್ಷಿ ಮಂತ್ರ ಇವುಗಳು ಪೂಜಾ ಸಾಧನಗಳು ಆಗಿವೆ ಮತ್ತು ಕೊನೆಯ ಎರಡು ಪಾದೋದಕ ಮತ್ತು ಪ್ರಸಾದಗಳು ಪೂಜಾ ಪರಿಣಾಮಗಳು.

ಬಸವಣ್ಣನವರ ಕಾಲಕ್ಕಿಂತ ಹಿಂದೆಯೂ ಅಂದರೆ 12 ನೇ ಶತಮಾನಕ್ಕಿಂತ ಮುಂಚೆಯೂ ನಮ್ಮಲ್ಲಿ ಗುರು, ಲಿಂಗ ಅಂದ್ರೆ ಸಾವರ ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ ಪಾದೋದಕ ಮತ್ತು ಪ್ರಸಾದಗಳು ಇದ್ದವು. ಇವುಗಳನ್ನು ಧಾರ್ಮಿಕ ಚಿಹ್ನೆಗಳಾಗಿ ಉಪಯೋಗಿಸುವ ಆಚರಣೆ ಬಹಳ ಹಿಂದಿನಿಂದಲೂ ನಡೆದು ಬಂದಿವೆ. ಬಹುತೇಕ ಈ ಚಿಹ್ನೆಗಳು ಬಾಹ್ಯ ಆಚರಣೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಬಸವಣ್ಣನವರು ಈ ಚೆಹ್ನೆಗಳಿಗೆ ಸಂಪೂರ್ಣ ವಿಭಿನ್ನ ಆಯಾಮಗಳನ್ನು ಕೊಟ್ಟು ಒಂದು ಸೂತ್ರ ರೂಪದಲ್ಲಿ ಜೋಡಿಸಿ ಅವುಗಳಿಗೆ ಅಷ್ಟಾವರಣಗಳೆಂದು ಕರೆದರು, ಇವುಗಳನ್ನು ಬಾಹ್ಯ ಆಡಂಬರಕ್ಕಾಗಿ ಅಥವಾ ತೋರಿಕೆಗಾಗಿ ಬಳಸದೇ ಅಂತರಂಗದ ಅರಿವನ್ನು ಹೆಚ್ಚಿಸಲು ಆಚಾರಗಳನ್ನು ಶುದ್ಧಗೊಳಿಸಲು ಮತ್ತು ಸ್ವಾನುಭಾವನ್ನು ನೆಲೆಗೊಳಿಸಕೊಳ್ಳಲು ನೆರವಾಗಲಿಕ್ಕ ಅಷ್ಟಾವರಣಗಳ ಸೂತ್ರವನ್ನು ಬಳಸಿದ್ದರು, ಬಸವಣ್ಣನವರು ಚರಲಿಂಗದ ಸ್ಥಾನದಲ್ಲಿ ಇಷ್ಟಲಿಂಗನವನ್ನು ಅಂಗದ ಮೇಲೆ ಸಾಹಿತ್ಯವ ಮಾಡಿದರು, ಅಷ್ಟಾವರಣಗಳನ್ನು ಸದಾ ಅಂಗದ ಮೇಲೆ ಹಿಂಗಡೆ ಧರಿಸುವುದರಿಂದ ಆಚಾರ ಶುದ್ಧಗೊಂಡು, ದೈಹಿಕ ವ್ಯಾಧಿಗಳ ಮಾನಸಿಕ ಕ್ಲೇಶಗಳು ನಿವೃತ್ತಿಯಾಗಿ, ಭಾವ ನಿಶ್ಚಕ್ತಿಯಡೆಗೆ ಸಾಧಕನನ್ನು ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರ ವಹಿಸುತ್ತೆ.

ಅಷ್ಟಾವರಣಗಳನ್ನು ನಿಜಶರಣ ಅಂಬಿಗರ ಚೌಡಯ್ಯನವರು ಹೀಗೆ ವಿವರಿಸುತ್ತಾರೆ.

ಗುರುವೇ ಒಂದು ಮುಖ ಲಿಂಗವೇ ಎರಡು ಮುಖ
ಜಂಗಮವೇ ಮೂರು ಮುಖ ಪಾದೋದಕವೇ ನಾಲ್ಕು ಮುಖ
ಪ್ರಸಾದವೇ ಐದು ಮುಖ ವಿಭೂತಿಯೇ ಆರು ಮುಖ
ರುದ್ರಾಕ್ಷಿಯೇ ಏಳು ಮುಖ ಮಂತ್ರವೇ ಎಂಟು ಮುಖ
ಇಂತೀ ಅಷ್ಟಾವರಣಗಳು ಇರುತಿರಲು
ಅನ್ಯ ದೈವಕ್ಕೆ ಅಡ್ಡ ಬೀಳುವ
ಎಡ್ಡ ಸುಳೇಮಕ್ಕಳನ್ನು ಹರಳಯ್ಯನ ಮನೆಯಲ್ಲಿನ
ಎಕ್ಕಡವ ತಂದು ಒದೊದ್ದು ಬುದ್ಧಿ ಹೇಳೆಂದ ಚೌಡಯ್ಯ

ಹೀಗೆ ಗುರು ಲಿಂಗ ಜಂಗಮ ಅಷ್ಟಾವರಣದ ತತ್ವವನ್ನು ಚೌಡಯ್ಯನವರು ಆಂತರ್ಯದಲ್ಲಿ ಒಪ್ಪಿ ಅಪ್ಪಿಕೊಂಡಿದ್ದರು. ಈಗ ನಾವು ಅಷ್ಟಾವರಣಗಳ ಘನ ತತ್ವಗಳಲ್ಲಿ ಒಂದಾದ ಪ್ರಸಾದದ ತತ್ವದ ಬಗ್ಗೆ ತಿಳಿಯೋಣ.

ಪ್ರಸಾದ ಅಷ್ಟಾವರಣದ ಒಂದು ಪ್ರಮುಖ ತತ್ವ. ಪ್ರಸಾದವು ಅನುಗ್ರಹ ಎಂಬ ಅರ್ಥಕೊಡುವ ಪದ. ಗುರು, ಲಿಂಗ ಜಂಗದ ಮೂಲಕ ಬಂದ ಆಶಿರ್ವಾದದ ಅನುಗ್ರಹ ಅಥವಾ ಅಂತರಂಗದ ಅರಿವು ಬಂದಾಗ ಆಗುವ ಅನುಭೂತಿಯೇ ಪ್ರಸಾದ. ತನ್ನನ್ನು ತಾನು ಗುರು, ಲಿಂಗ ಜಂಗಮಕ್ಕೆ ಅರ್ಪಿಸಿಕೊಳ್ಳುವದೇ ಪ್ರಸಾದದ ಮಹತ್ವ.

ಹಂಗದ್ರ ಪ್ರಸಾದ ಅಂದ್ರ ಏನು? ದೇಹ ಪ್ರಾಣ ಮನಸ್ಸನ್ನು ನಿರ್ಮಲಗೊಳಿಸಿ ಯಾವದು ಪ್ರಸನ್ನತೆಯನ್ನು ನೀಡುತ್ತದೆಯೋ ಅದೇ ಪ್ರಸಾದ. ನಮ್ಮ ಶರಣರು ತಮ್ಮ ವಚನಗಳಲ್ಲಿ ಪ್ರಸಾದವನ್ನು ಪರಮಜ್ಞಾನ ಎಂದಿದ್ದಾರೆ. ಪ್ರಸಾದವನ್ನು ಪರಾತ್ಪರ ಎಂದಿದ್ದಾರೆ. ಪ್ರಸಾದವೇ ಪರಮಾನಂದ ಪ್ರಸಾದವೇ ಪರಿಪೂರ್ಣ, ಪ್ರಸಾದ ಭಾವದಿಂದ ಸ್ವೀಕರಿಸಿದ ಅನ್ನ ನಮ್ಮ ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಅದಕ್ಕೆ ಅನ್ನವನ್ನು ಪರಬ್ರಹ್ಮ ಎಂದು ಕರೆದಿದ್ದಾರೆ. ಸರ್ವಜ್ಞನು “ಅನ್ನ ದೇವರ ಮುಂದೆ ಇನ್ನು ದೇವರುಂಟೆ” ಎಂದು ಹೇಳಿದ್ದಾರೆ. ಇಂತಹ ಪರಬ್ರಹ್ಮ ಸ್ವರೂಪವಾದ ಅನ್ನವನ್ನು ಧರ್ಮದ ಪರಿಭಾಷೆಯಲ್ಲಿ ಮತ್ತಷ್ಟು ಉತ್ಕೃಷ್ಟಗೊಳಿಸಿ ಅನ್ನವನ್ನು ಪ್ರಸಾದ ಎಂದಿದ್ದಾರೆ.

ಹಂಗಂದ್ರ ಯಾವುದಕ್ಕೆ ಪ್ರಸಾದ ಅಂತ ಕರಿಬಹುದು? ದೇಹ ಪ್ರಾಣ ಮತ್ತು ಮನಸ್ಸನ್ನು ನಿರ್ಮಲಗೊಳಿಸಿ ಯಾವದು ನಮಗೆ ಪ್ರಸನ್ನತೆ ನೀಡ್ತದೆಯೋ, ಯಾವದು ನಮಗ ಆನಂದವನ್ನು ನೀಡುತ್ತದೆಯೋ, ಯಾವುದು ನಮಗೆ ಸಂತೃಪ್ತಿಯನ್ನು ನೀಡುತ್ತದೆಯೋ ಅದೆ ಪ್ರಸಾದ ಎನಿಸಿಕೊಳ್ತದೆ.

ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವು ಪ್ರಸಾದವೇ ಆಗಿದೆ. ಇದಕ್ಕೆ ಈಶ ಪ್ರಸಾದ ಅಂತ ಕರಿತಾರ. ಈ ಈಶ ಪ್ರಸಾದದಲ್ಲಿ ರೂಪು, ರುಚಿ ತೃಪ್ತಿ ಎಂಬ ಮೂರು ಗುಣಗಳು ಸಹಜವಾಗಿರುತ್ತೆ, ಇದನ್ನ ಕ್ರಿಯೋಭಸ್ಮ, ಮಂತ್ರ ಮತ್ತು ಪಾದೊದಕದ ಸಹಾಯದಿಂದ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳಿಗೆ ಅರ್ಪಿಸಿ ಆಮೇಲೆ ಪ್ರಸಾದ ಭಾವನೆಯಿಂದ ತನು ಮನ ಪ್ರಾಣಗಳ ಶುದ್ಧಿಗಾಗಿ ಭಕ್ತಿಪೂರ್ವಕವಾಗಿ ಸ್ವೀಕರಿಸಿದಾಗ ಪದಾರ್ಥ ಎಂಬ ಭಾವ ಅಳಿದು ಪ್ರಸಾದ ಭಾವ ಮೂಡುತ್ತದೆ.

ಪ್ರಸಾದಗಳಲ್ಲಿ 11 ವಿಧಗಳಿವೆ ಇವು ಏಕಾದಶ ಪ್ರಸಾದಗಳು ಅಂತ ಕರೆಯಲ್ಪಡತಾವ. ಅವುಗಳು:

  1. ಗುರು ಪ್ರಸಾದ
  2. ಲಿಂಗ ಪ್ರಸಾದ
  3. ಜಂಗಮಪ್ರ ಸಾದ
  4. ಪ್ರಸಾದಿಯ ಪ್ರಸಾದ
  5. ಆಪ್ಯಾಯನ ಪ್ರಸಾದ
  6. ಸಮಯ ಪ್ರಸಾದ
  7. ಪಂಚೇಂದ್ರಿಯ ವಿರಹಿತ ಪ್ರಸಾದ
  8. ಸದ್ಭಾವ ಪ್ರಸಾದ
  9. ಅಂತಃಕರಣ ಚತುಷ್ಟಯ ವಿರಹಿತ ಪ್ರಸಾದ
  10. ಸಮತಾ ಪ್ರಸಾದ
  11. ಜ್ಞಾನ ಪ್ರಸಾದ.

ಈ ಅವುಗಳ ಬಗ್ಗೆ ಸ್ವಲ್ಪ ವಿವರವಾಗಿ ನೋಡೊಣ ಗುರುವಿನ ಮುಖಾಂತರ ಬರುವುದೇ ಗುರು ಪ್ರಸಾದ ಅದನ್ನ ಶುದ್ಧ ಪ್ರಸಾದ ಅಂತಲೂ ಕರಿತಾರೆ. ಎರಡನೇದು ಲಿಂಗದ ಮುಖಾಂತರ ಬರುವತಹದ್ದು ಲಿಂಗಪ್ರಸಾದ ಅಥವಾ ಸಿದ್ಧ ಪ್ರಸಾದ, ಮೂರನೆಯದು ಜಂಗಮದಿಂದ ಬಂತಹದ್ದು, ಅದು ಜಂಗಮಪ್ರಸಾದ ಅಥವಾ ಪ್ರಸಿದ್ಧ ಪ್ರಸಾದ ಇವುಗಳನ್ನು ಮುಂದೆ ಶರಣರ ವಚನಗಳ ಮುಖಾಂತರ ನೋಡೋಣ.

ಈ ಮೂರು ಗುರು ಲಿಂಗ ಜಂಗಮದಿಂದ ಬಂದಂತಹ ಪ್ರಸಾದವನ್ನು ಸೇವಿಸುವೆನೆಂಬ ಭಾವನೆಯೇ ಪ್ರಸಾದಿಯ ಪ್ರಸಾದ ಅದಕ್ಕೆ ಬಸವಣ್ಣನವರು ಈ ರೀತಿ ಹೇಳ್ತಾರೆ.

ನಂಬಿದಡೆ ಪ್ರಸಾದ; ನಂಬದಿದ್ದಡೆ ವಿಷವು.
ತುಡುಕಬಾರದು ನೋಡಾ, ಲಿಂಗನ ಪ್ರಸಾದ,
ಕೂಡಲಸಂಗನ ಪ್ರಸಾದ ಸಿಂಗಿ, ಕಾಳಕೂಟ ವಿಷವು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-70 / ವಚನ ಸಂಖ್ಯೆ-773)

ಭಾವ ಬದಲಾದಾಗ ಪದಾರ್ಥವು ಪ್ರಸಾದವಾಗುತ್ತೆ, ಇಂತಹ ಪ್ರಸಾದದ ಸೇವನೆಯಿಂದ ಆಗುವ ಮನಸ್ಸಿನ ವಿಕಾಸವೇ ಆಪ್ಯಾಯನ ಪ್ರಸಾದ.

ಪ್ರಸಾದಿಯು ಬೇರೆ ಕಡೆ ಗಮನಹರಿಸದೇ ಕೇವಲ ಪ್ರಸಾದ ಭಾವದಿಂದ ಇರುವುದೇ ಸಮಯ ಪ್ರಸಾದ.

ಈ ಸಮಯ ಪ್ರಸಾದವನ್ನು ಪಂಚೇಂದ್ರಿಯಗಳ ಮುಟ್ಟುವ ಮುನ್ನವೇ ಲಿಂಗಾರ್ಪಿತ ಮಾಡುವದೇ ಪಂಚೇಂದ್ರಿಯ ವಿರಹಿತ ಪ್ರಸಾದ. ಅಂತಃಕರಣ ಚತುಷ್ಟಯಗಳಾದ ಮನೋ, ಬುದ್ಧಿ, ಚಿತ್ತ ಮತ್ತು ಅಹಂಕಾರಗಳು ಮನಸ್ಸಿನಲ್ಲಿ ಸುಳಿಯದಂತೆ ಅವುಗಳನ್ನು ಕೇವಲ ಪ್ರಸಾದ ಭಾವದಿಂದ ನೋಡುವುದೇ ಅಂತಃಕರಣ ಚತುಷ್ಟಯ ವಿರಹಿತ ಪ್ರಸಾದ ಬಸವಣ್ಣನವರು ಹೇಳುವಂತೆ:

ಮೌನದಲುಂಬುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ “ಶಿವಶರಣೆ” ನುತ್ತಿರಬೇಕು.
ಕರಣವೃತ್ತಿಗಳಡಗುವವು, ಕೂಡಲಸಂಗನ ನೆನೆವುತ್ತ ಉಂಡಡೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-71 / ವಚನ ಸಂಖ್ಯೆ-787)

ಮೌನದಲ್ಲಿ ಎಂಬುದು ಆಚಾರವಲ್ಲ, ಲಿಂಗಾರ್ಪಿತವ ಮಾಡಿದ ಬಳಿಕೆ ತುತ್ತಿಗೊಮ್ಮೆ ಶಿವಶರಣರೆನ್ನುತ್ತಿರಬೇಕೆ ಕರಣ ವೃತ್ತಿಗಳು ಅಡಗುವುವು. ಕೂಡಲ ಸಂಗಮ ನೆನೆಯುತ್ತ ಉಂಡರೆ ಎಂಬಂತೆ ಪ್ರಸಾದ ಸ್ವೀಕರಿಸುವ ವೇಳಗೆ ಒಳ್ಳೆಯ ವಿಚಾರಗಳನ್ನು ಮಾಡುತ್ತ ಸದ್ಭಾವದಿಂದ ಪ್ರಸಾದ ಸ್ವೀಕರಿಸುವ ಸದ್ಭಾವ ಪ್ರಸಾದ, ಪ್ರಸಾದ ಲಿಂಗಾರ್ಪಿತವಾದ ಬಳಿಕ ಉಳಿದ ಸಮಯದಲ್ಲಿ ಹಸಿವು ತೃಷೆಗಳನ್ನು ಬಿಟ್ಟು ಕ್ಷಮೆ ದಯೇ ಶಾಂತಿಯಿಂದ ಇರುವದೇ ಸಮತಾ ಪ್ರಸಾದ. ಈ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಸ್ವಲ್ಪ ಸಮಯದ ನಂತರ ಪುನಃ ಯಾವುದಾದರೂ ಪ್ರಸಾದ ಬಂದ್ರೆ ಆಗ ಪುನಃ ಹಸಿವಿನ ಭ್ರಮೆ ಆಗಬಾರದು ಆಗ ಪ್ರಸನ್ನತೆ ಬಂದಿರುವುದಿಲ್ಲ. ಈ ತರಹ ಪ್ರಸನ್ನತೆ ಉಂಟಾಗುವುದೆ ಸಮತಾ ಪ್ರಸಾದ.

ಇನ್ನು ಕೊನೆಯದಾಗಿ ಬರುವುದು ಜ್ಞಾನ ಪ್ರಸಾದ ಪೂಜೆ ಮುಗಿದ ಬಳಿಕ ಮುಂದಿನ ಪೂಜೆಯ ವೇಳೆಯವರೆಗೂ ಪ್ರಸಾದ ಕಾಯದ ಭಾವದಿಂದ ಇರುತ್ತೇನೆ ಎನ್ನು ಭಾವವೇ ಜ್ಞಾನ ಪ್ರಸಾದ.

ಹೀಗೆ ಏಕಾದಶಿ ಪ್ರಸಾದಗಳ ಬಗ್ಗೆ ಚನ್ನಬಸವಣ್ಣನವರು ಅತ್ಯಂತ ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ಪ್ರಸಾದವನ್ನು ಸಿದ್ಧಪಡಿಸಬೇಕಾದ್ರೂ ವೈಜ್ಞಾನಿಕ ಸಿದ್ಧಿ ಇದೆ. ನಮ್ಮ ಹಿರಿಯ ಎಚ್ಚರಿಕೆ ಇದೆ. ಪ್ರಸಾದ ಸಿದ್ಧ ಪಡಿಸಬೇಕಾದ್ರ ಅರ್ಪಣೆ ಭಾವ ಇರಬೇಕು, ಪ್ರೀತಿಯ ವೈಶಾಲ್ಯತೆ ಇರಬೇಕು, ಹಸನ್ಮುಖಿಯಾಗಿ ಮಾಡಿದ ಪ್ರಸಾದ ಅಮೃತ ಸಮಾನ.

ಇನ್ನು ಮೊದಲ ಮೂರು ಪ್ರಸಾದಗಳಾದ ಗುರು, ಲಿಂಗ, ಜಂಗಮ ಪ್ರಸಾದಗಳ ಬಗ್ಗೆ ಚನ್ನ ಬಸವಣ್ಣನವರು ತಮ್ಮ ವಚನದಲ್ಲಿ ಈ ರೀತಿ ಹೇಳಿದ್ದಾರೆ.

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು ಹೇಳಿಹೆ ಕೇಳಿರೇ:
ಶುದ್ಧಪ್ರಸಾದವು ಗುರುವಿನಲ್ಲಿ, ಸಿದ್ಧಪ್ರಸಾದವು ಲಿಂಗದಲ್ಲಿ,
ಪ್ರಸಿದ್ಧಪ್ರಸಾದವು ಜಂಗಮದಲ್ಲಿ.
ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ?
ಘನಕ್ಕೆ ಘನ ಮಹಾಘನ ಪ್ರಸಾದವು.
ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು
ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-321 / ವಚನ ಸಂಖ್ಯೆ-249)

ಶುದ್ಧ ಸಿದ್ಧ ಮತ್ತು ಪ್ರಸಿದ್ಧ ಪ್ರಸಾಧಗಳನ್ನು ಇಷ್ಟಲಿಂಗ ಪ್ರಸಾದ, ಪ್ರಾಣಲಿಂಗ ಪ್ರಸಾದ ಮತ್ತು ಭಾವಲಿಂಗ ಪ್ರಸಾದಗಳೆಂದು ಹೇಲ್ತಾರೆ. ಅರಿವು ಜ್ಞಾನವನ್ನು ತಿಳಿಸುವ ಈ ಶುದ್ಧ ಪ್ರಸಾದವು ಗುರುವಿನಲ್ಲಿ ಎಂದು ಹೇಳುವ ಮೂಲಕ ಗುರುಪ್ರಸಾದ ಎಂತಲೂ ಅಥವಾ ಇಷ್ಟಲಿಂಗ ಪ್ರಸಾದ ಎಂತಲೂ ಹೇಳಬಹುದು. ಅರಿವು ತಾನಾಗುವ ಅಥವಾ ತಾನೆ ಅರಿವಾಗುವ ಶಬ್ದ ಮುಗ್ಧವಾಗುವ ಈ ಸಿದ್ಧಿ ಪ್ರಸಾದವು ಲಿಂಗದಲ್ಲಿ ಎಂದು ಹೇಳುವ ಮೂಲಕ ಇದನ್ನು ಪ್ರಾಣಲಿಂಗ ಪ್ರಸಾದ ಅಂತಾನೂ ಕರಿತಾರೆ. ಜಂಗಮದ ಅರಿವನ್ನು ಅರಿತು, ಅರಿವಿನ ಭಾವವಾದ ಪ್ರಸಿದ್ಧ ಪ್ರಸಾದವು ಜಂಗಮದಲ್ಲಿ ಎಂದು ಹೇಳುವ ಮೂಲಕ ಭಾವಲಿಂಗ ಪ್ರಸಾದ ಎಂದು ಹೇಳುತ್ತಾರೆ. ಈ ಮೂರು ಪ್ರಸಾದಗಳು ಯಾವವು ಹೆಚ್ಚಿಲ್ಲ, ಯಾವವೂ ಕಡಿಮೆ ಇಲ್ಲ, ಎಲ್ಲವೂ ಮಹಾಘನ ತತ್ವಗಳು ಮತ್ತು ಕಾಯವನ್ನು ಪ್ರಸಾದ ಕಾಯವಾಗಿಸುವ ನಿಟ್ಟಿನಲ್ಲಿ ನೋಡುವಂತಹ ತತ್ವಗಳು ಈ ಮೂರು ಪ್ರಸಾದಗಳು ಆತ್ಮದ ಶುದ್ಧಿ, ಅರಿವಿನ ಶುದ್ಧಿ ಮತ್ತು ಚಿತ್ತ ಶುದ್ಧಿಯನ್ನು ನೀಡುತ್ತವೆ.

ಇನ್ನೊಂದು ವಚನದಲ್ಲಿ ಚೆನ್ನ ಬಸವಣ್ಣನವರು ಈ ರೀತಿ ಹೇಳ್ತಾರೆ:

ಬಯಸಿ ಬಂದುದಂಗ ಭೋಗ, ಬಯಸದೆ ಬಂದುದು ಲಿಂಗಭೋಗ.
ಅಂಗಭೋಗ ಅನರ್ಪಿತ, ಲಿಂಗಭೋಗ ಪ್ರಸಾದ,
[ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯ
ಬೇಕೆಂಬುದು ಅಲ್ಲ ಬೇಡೆಂಬುದು ಅಲ್ಲ
ಈ ಉಭಯವನತಿಗಳೆದು ಭೋಗಿಸಬಲ್ಲಡೆ]
ಕೂಡಲಚೆನ್ನಸಂಗಾ [ನಿಮ್ಮ ಶರಣನೆಂಬೆ]
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-326 / ವಚನ ಸಂಖ್ಯೆ-295)


ಇಲ್ಲಿ ತನ್ನ ವಿಷಯ ಸುಖದಿಚ್ಛೆಗೆ ಬಯಸಿ ಬಂದುದೆಲ್ಲ ಅಂಗ ಸುಖಭೋಗ ಅನಿಸುತ್ತೆ ಮತ್ತು ತಾನು ಬಯಸದೇ ತಾನಾಗಿಯೇ ಬಂದೊದಗಿದ್ದೆಲ್ಲ. ಲಿಂಗ ಸುಖ ಭೋಗ ಅನಿಸುತ್ತೆ. ಇವರೆಡರಲ್ಲಿ ತಾನು ಬಸಯಸಿದಂತೆ ಬಂದ ಅಂಗ ಭೋಗವು ಲಿಂಗಾರ್ಪಿವಾಗದು. ಬಯಸದೇ ಬಂದಂತಹ ಶುದ್ಧವಾದ ಇಂದ್ರಿಯಗಳಿಂದ ಸಹಜವಾಗಿ ಬಂದ ಲಿಂಗ ಭೋಗವು ಲಿಂಗಕ್ಕೆ ಅರ್ಪಿತವಾಗಿ ಪ್ರಸಾದ ಎನಿಸುವುದು ಎಂಬದನ್ನು ಚೆನ್ನ ಬಸವಣ್ಣನವರು ಹೇಳಿದ್ದಾರೆ.

ತನುವ ತಾಗದ ಮುನ್ನ, ಮನವ ತಾಗದ ಮುನ್ನ,
ಆಪ್ಯಾಯನ ಬಂದು ಎಡೆಗೊಳ್ಳುವ ಮುನ್ನ ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳೆತಟವಾಗುವ ಮುನ್ನ ಅರ್ಪಿತವ ಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು,
ಉರಿ ಹತ್ತಿದ್ದು ಗುಹೇಶ್ವರ ನಿಮ್ಮ ಪ್ರಸಾದಿಯ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-151 / ವಚನ ಸಂಖ್ಯೆ-165)

ಶಬ್ದ, ಸ್ಪರ್ಷ, ರೂಪ, ರಸ, ಗಂಧ ಮುಂತಾದ ಯಾವ ಪದಾರ್ಥವಾದರೂ ಅದನ್ನ ಹಸಿವಿನಾಸೆಗೆ ತನುವು ಬಂದು ಸೊಂಕುವ ಮುನ್ನ, ಮನವು ಬಂದು ಸೊಂಕುವ ಮುನ್ನ ಅದರಂತೆ ತೃಪ್ತಿಯು ಬಂದು ಆವರಿಸುವ ಮೊದಲೇ ಲಿಂಗಕ್ಕೆ ಅರ್ಪಿತವ ಮಾಡಬೇಕು. ಎಡ ಕೈಯಲ್ಲಿ ಲಿಂಗ ಎನ್ನುವ ಉರಿ, ಬಲದ ಕೈಲಿ ಹುಲ್ಲು ಎಂಬ ಭೊಗ ವಸ್ತು ಇರುವುದರಿಂದ ಆ ಲಿಂಗಾರ್ಪಿವಾದ ಪ್ರಸಾದವನ್ನು ಭೋಗಿಸುವವರ ಸರ್ವಾಂಗವೆಲ್ಲ ಲಿಂಗ ಎಂಬ ಉರಿ ಆವರಿಸಿ ಪರಿಶುದ್ಧವಾಗಿ ಲಿಂಗಾಯತವಾಗುತ್ತೆ ಎಂದು ಅಲ್ಲಮರು ತಮ್ಮ ಈ ವಚನದಲ್ಲಿ ಹೇಳುತ್ತಾರೆ.

ಅರಿವಿನ ಆನಂದವೆ ಪ್ರಸಾದ, ಸಾವಧಾನವೇ ಪ್ರಸಾದ ಪ್ರಸಾದದ ಬಗ್ಗೆ ಮಹಾದೇವಿಯಕ್ಕ ಹೇಳುವ ಪರಿ ಹೀಗಿದೆ:

ಕಾಯ ಪ್ರಸಾದವೆನ್ನ, ಜೀವ ಪ್ರಸಾದವೆನ್ನ,
ಪ್ರಾಣ ಪ್ರಸಾದವೆನ್ನ, ಮನಪ್ರಸಾದವೆನ್ನ,
ಧನ ಪ್ರಸಾದವೆನ್ನ, ಭಾವ ಪ್ರಸಾದವೆನ್ನ,
ಸಯದಾನ ಪ್ರಸಾದವೆನ್ನ, ಸಮಭೋಗ ಪ್ರಸಾದವೆನ್ನ.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-802 / ವಚನ ಸಂಖ್ಯೆ-163)

ನನ್ನ ಕಾಯದ ಕತ್ತಲೆಯಳಿದು ಕಾಯವ್ವ ಶುದ್ಧ ಪ್ರಸಾದವಾಗಿ ಜೀವಭಾವದ ಜಂಡವಳಿದು ಪ್ರಸಿದ್ಧ ಪ್ರಸಾದವಾಗಿದೆ ಎನ್ನ ಭಾವವು ಲಿಂಗ ಸುಖದಲ್ಲಿ ತೃಪ್ತವಾದ ಕಾರಣ ಭಾವವು ತೃಪ್ತಿ ಪ್ರಸಾದವಾಗಿದೆ. ಎನ್ನ ಪ್ರಾಣವು ಲಿಂಗವೇ ಆದ ಬಳಿಕ ಪ್ರಾಣ ಪ್ರಸಾದವಾಗಿದೆ. ಆದಕಾರಣ ಮಹಾ ಘನಲಿಂಗ ಚೆನ್ನ ಮಲ್ಲಿಕಾರ್ಜುನಯ್ಯ ನಿಮ್ಮ ಪರಿಶುದ್ಧ ಪ್ರಸಾದವೇ ಎನ್ನ ಸರ್ವಾಂಗದಲ್ಲಿಯೂ ಹಾಸಿ ಹೊದಿಸಿಕೊಂಡಿದ್ದೇನೆ ಎಂದು ಮಹಾದೇವಿ ಅಕ್ಕ ಪ್ರಸಾದ ತನ್ನ ಜೀವನ್ನಾವರಿಸಿದ ಪರಿಯನ್ನು ಹೇಳುತ್ತಾಳೆ.

ಜೇಡರ ದಾಸಿಮಯ್ಯನವರ ಪ್ರಕಾರ ಪ್ರಸಾದ ಎಂದರೆ ಈ ಪ್ರಕಾರ ಇರುತ್ತದೆ.

ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ,
ಹತ್ತೆ ಕರೆದಿಕ್ಕವು ಪ್ರಸಾದವಲ್ಲ,
ತರ್ಕೈಸಿ ನಿಮ್ಮನಟ್ಟಿಕೊಂಡದೆ
ನಿಶ್ಚಯ ಪ್ರಸಾದ ರಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1277 / ವಚನ ಸಂಖ್ಯೆ-754)

ಇಲ್ಲಿ ದಾಸಿಮಯ್ಯನವರು ತಟ್ಟೆಯಲ್ಲಿ ಕೈಚಾಚಿ ಸುರಿದುದು ಪ್ರಸಾದವಲ್ಲ, ಉಂಡು ಉಳಿದುದು ಪ್ರಸಾದವಲ್ಲ, ಪ್ರಸಾದ ನೀಡುತ್ತೆನೆಂದು ಬಡಿಸುವುದು ಪ್ರಸಾದವಲ್ಲ, ಅವೆಲ್ಲ ರೂಢಿ ಸಂಪ್ರದಾಯ ಅಷ್ಟೆ ಪ್ರಸಾದ ಅಂದ್ರ ವಿಶ್ವನ್ನೊಳಗೊಂಡ ಲಿಂಗ ತಂದೆ ನಿಮ್ಮನ್ನು ಸರ್ವಾಂಗಲ್ಲಿಯೂ ಎಂದೆಂದು ಅಗಲದೆ ಆಲಂಗಿಸಿ ಅಪ್ಪಿ ಬೇರಿಲ್ಲದಿರುವುದು ನಿಜವಾದ ಪ್ರಸಾದ, ಗುರುಲಿಂಗ ಜಂಗಮದ ದಿವ್ಯ ಪ್ರಸಾದ ಎಂದಿದ್ದಾರೆ.

ಈ ಮುಂದಿನ ವಚನ ನೋಡೊಣ.
ಸಿಂಹದ ಮೂಲೆವಾಲು ಸಿಂಹದ ಮರಿಗಳಲ್ಲದೇ,
ಸೀಳು ನಾಯಿಗೆ ಯೋಗ್ಯವೇ ಅಯ್ಯ?
ಶಿವಪ್ರಸಾದ ದೊಲುಮೆ ಶಿವಶರಣಿಗಲ್ಲದೇ
ಉಳಿದ ಭಯ ಭಾರಿಗಳಿಗೆ ಅಳವಡುವುದೆ ಅಯ್ಯ
ಅಖಂಡೇಶ್ವರ?
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1068 / ವಚನ ಸಂಖ್ಯೆ-516)

ಷಣ್ಮುಖ ಶಿವಯೋಗಿಗಳು ತಮ್ಮ ಈ ವಚನದಲ್ಲಿ ಸಿಂಹದ ಮೂಳೆ ಹಾಲು ಸೀಳು ನಾಯಿಗೆ ಹೇಗೆ ಸಲ್ಲದೊ ಅದೇ ರೀತಿ ಪರಮ ಪರಿಶುದ್ಧವಾದ ಶಿವಪ್ರಸಾದದ ಕರುಣೆಯೆ ಒಲುಮೆ ಸರ್ವಾಂಗ ಶುದ್ಧರಾದ ಶಿವಶರಣರಿಗಲ್ಲದೇ ಅನ್ಯ ವಿಷಯ. ಲಂಪಟರಾದ ಭವ ಜೀವಿಗಳಿಗೆ ಅಲ್ಲ ಎಂದಿದ್ದಾರೆ.

ವೈರಾಗ್ಯನಿಧಿ ಅಕ್ಕಮಹಾದೇವಿಯವರ ಇನ್ನೊಂದು ವಚನ ನೋಡೋಣ.

ಬಸವಣ್ಣನ ಮನೆಯ ಮಗಳಾದ ಕಾರಣ
ಭಕ್ತಿ ಪ್ರಸಾದವ ಕೊಟ್ಟನು
ಚನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕಪ್ರಸಾದವ ಕೊಟ್ಟನು.
ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ
ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು.
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಿದ್ಧಿಸಿ ಕೊಟ್ಟನು.
ಮಡಿವಾಳಯ್ಯನ ಮನೆಯ ಮಗಳಾದ ಕಾರಣ
ನಿರ್ಮಲ ಪ್ರಸಾದವ ನಿಶ್ಚಯಿಸಿಕೊಟ್ಟನು.
ಇಂತಿ ಅಸಂಖ್ಯಾತ ಗಣಂಗಳೆಲ್ಲರು
ತಮ್ಮ ಕರುಣದ ಕಂದನೆಂದು ತಲೆದಡಹಿತ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗಳಾದೇನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-816 / ವಚನ ಸಂಖ್ಯೆ-294)

ಎನ್ನುವ ಈ ವಚನದಲ್ಲಿ ಮಹಾದೇವಿಯಕ್ಕ ಬಸವಣ್ಣನವರು ಶಿವಾದ್ವೈತದ ಭಕ್ತಿಪ್ರಸಾದ, ಚೆನ್ನ ಬಸವಣ್ಣನವರು ಲಿಂಗಕ್ಕೆ ಅರ್ಪಿಸಿ ಉಳಿದ ಶಿಶಪ್ರಸಾದ, ಅಲ್ಲಮ ಪ್ರಭುದೇವರು ತನ್ನ ತಾನರಿಯವ ಶಿವಜ್ಞಾನ ಪ್ರಸಾದ ಶಿವಯೋಗಿ ಸಿದ್ಧರಾಮಯ್ಯರು ಪ್ರಾಣವೇ ಲಿಂಗವಾಗಿಸುವ ಲಿಂಗ ಪ್ರಸಾದವನ್ನು ಸಿದ್ಧಿಸಿ ಕೊಟ್ಟಿದ್ದಾರೆ. ಮಹಾಮಹಿಮ ಮಡಿವಾಳಯ್ಯನವರು ತನು, ಮಾನ, ಭಾವ ಮತ್ತು ಸರ್ವಾಂಗದ ಮಲವ ಹರಿದು ಶುದ್ಧಗೊಳಿಸುವ ನಿರ್ಮಲ ಪ್ರಸಾದವನ್ನು ನಿಶ್ಚಯಿಸಿಕೊಟ್ಟರೆಂದು, ಹಾಗೆಯೇ ಸಕಲ ಶರಣ ಗಣಂಗಳು ತನ್ನನ್ನು ಕರುಣೆಯ ಕಂದನೆಂದು ಮಮತೆಯಿಂದ ತಲೆ ಸವರಿ ಚನ್ನಮಲ್ಲಿಕಾರ್ಜುನಯ್ಯನ ಶ್ರೀ ಪಾದಕ್ಕೆ ಅರ್ಪಿತವಾಗಲು ತಕ್ಕವಳನ್ನಾಗಿಸಿದರು ಎಂದು ಶರಣರ ಒಲುಮೆಯ ಪ್ರಸಾದದ ಬಗ್ಗೆ ಹೇಳಿದ್ದಾರೆ.

ಇದೆ ತರಹ ಬಸವಣ್ಣನವರದೂ ಒಂದು ವಚನವಿದೆ:
ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ,
ಎನ್ನ ಮನವ ನಿರ್ಮಳವ ಮಾಡಿದಾತ ಮಡಿವಾಳ,
ಎನ್ನಂತರಂಗವ ಬೆಳಗಿದಾತ ಮಡಿವಾಳ,
ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ,
ಕೂಡಲಸಂಗಮದೇವಾ,
ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-97 / ವಚನ ಸಂಖ್ಯೆ-1084)

ಇಲ್ಲಿ ಬಸವಣ್ಣನವರು ಎನ್ನ ಕಾಯವನಾವರಿಸಿದ ಕಾರ್ಮಿಕ ಮಲವ ಕಳೆದು ಕಾಯವನ್ನು ಶುದ್ಧ ಪ್ರಸಾದ ಮಾಡಿದವರು ಮಾಡಿವಾಳ ತಂದೆ, ಮನವನಾವರಿಸಿದ ಮಾಯಾ ಮೇಲವಿ ತೊಳೆದು ಸಿದ್ಧ ಪ್ರಸಾದವಾಗಿರಿಸಿ ಮನವನ್ನು ನಿರ್ಮಮಾಡಿದವರು ಮಡಿವಾಳ ತಂದೆ, ಎನ್ನ ಅಂತರಂಗದ ಚಿತ್ತ ಬುದ್ಧಿ, ಅಹಂಕಾರ ತೊಡೆದು ಮನದಲ್ಲಿ ಅರಿವಿನ ಜ್ಯೋತಿಯನ್ನು ಬೆಳಗಿದಾತ ಮಡಿವಾಳ ತಂದೆ ಎನ್ನ ಬಹಿರಂಗದ ಶುಶ್ಕಾಚಾರದ ಜಂಜಡ ಬಡಿಸಿದವರು ಮಡಿವಾಳ ತಂದೆ ಎಂದಿದ್ದಾರೆ.

ಪ್ರಸಾವೆಂಬ ಸುಸ್ವರೂಪದ ಅನುಭವವನ್ನು ನೀಡುವ ಪರಮ ಶಿವಜ್ಞಾನ ಪ್ರಸಾದ ಎಂದರೆ ಪರಕ್ಕೆ ಪರ ಎನಿಸುವ ಪರಮ ವಸ್ತು, ಪ್ರಸಾದ ಎಂದರೆ ನಿರಾಕಾರ ನಿರ್ವಿಕಾರ ಸರ್ವಕಾರಣವಾದ ಪರಬ್ರಹ್ಮ ವಸ್ತು, ಪ್ರಸಾದ ಎಂದರೆ ಶಿವಯೋಗಿಗಳು ಅಂತರಂಗದಲ್ಲಿ ಅನವರತವೂ ಅನುಭವಿಸುವ ಪರಮಾನಂದ, ಪ್ರಸಾದ ಅಂದ್ರ ಸರ್ವ ವ್ಯಾಪ್ತಿಯಾದ ಸಕಲಕ್ಕೂ ಆಧಾರವಾದ ಲಿಂಗವು ಇದನ್ನು Contended Mind ಅಂತಾರೆ.

ಪ್ರಸಾದ ಅಂದ್ರ ಚಲಿಸುವ ಚೇತನ ಎನಿಸುವ ಜಂಗಮ ಲಿಂಗ ಪ್ರಸಾದ ಅಂದ್ರ ಎಲ್ಲೆಲ್ಲೊ ತುಂಬ ತುಳುಕುವ ಪರಿಪೂರ್ಣ ಎನಿಸುವ ಪರಿಶಿವ ತತ್ವವು ಪ್ರಸಾದ ಅಂದ್ರ ವಿಶ್ವವನ್ನೊಳಗೊಂಡ ವಿಶ್ವಾತ್ಮ ನೆನಿಸುವ ಪರಶಿವಲಿಂಗ ಪ್ರಸಾದ ಅಂದ್ರ ಪರಿಶುದ್ಧ ಪ್ರಶಾಂತತೆಯ ಎಂದು ಪ್ರಸಾದದ ಮಹಿಮೆಯನ್ನು ಆದಯ್ಯನವರು ಈ ವಚನದಲ್ಲಿ ಹೇಳಿದ್ದಾರೆ.

ಪ್ರಸಾದವೆ ಪರಮಜ್ಞಾನ, ಪ್ರಸಾದವೆ ಪರಾತ್ಮರ,
ಪ್ರಸಾದವೇ ಪರಬ್ರಹ್ಮ, ಪ್ರಸಾದವೇ ಪರಮಾನಂದ,
ಪ್ರಸಾದವೇ ಗುರು, ಪ್ರಸಾವೇ ಲಿಂಗ, ಪ್ರಸಾದವೇ ಜಂಗಮ,
ಪ್ರಸಾದವ ಪರಿಪೂರ್ಣ,
ಸೌರಾಷ್ಟ್ರ ಸೋಮೇಶ್ವರ ಲಿಂಗದ ಪ್ರಸನ್ನತೆಯ ಪ್ರಸಾದ,
ಇಂತಪ್ಪ ಪ್ರಸಾದವ ಮಹಾತ್ಮೆಗೆ
ಆನು ನಮೋ ನಮೋ ಎನ್ನುತಿರ್ದೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1051 / ವಚನ ಸಂಖ್ಯೆ-1023)

ನಿಜವಾದ ಪ್ರಸಾದ ಯಾವದು ಎಂದು ಚೆನ್ನಬಸವನ್ನನವರು ಈ ರೀತಿ ಹೇಳಿದ್ದಾರೆ.

ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ನುಡಿವವರಿಗೆ ಪ್ರಸಾದವೆಲ್ಲಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ,
ತನು ಮುಟ್ಟಿ ಕೊಂಬುಡು ಪ್ರಸಾದವಲ್ಲ,
ಧನಮುಟ್ಟಿ ಕೊಂಡುದು ಪ್ರಸಾದವಲ್ಲ,
ಅವು ಏಕಾಗಿ ಈ ತ್ರಿವಿಧ ಸಾಹಿತ್ಯದಲ್ಲಿ ಕೊಂಡುದು ಪ್ರಸಾದವಲ್ಲ.
ಇಕ್ಕುವವ ಶಿವದ್ರೋಹಿ, ಕೊಂಬುವವ ಗುರುದ್ರೋಹಿ.
ಇದು ಕಾರಣ, ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ, ನಾನೇನೆಂದು ಬಣ್ಣಿಸುವೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-321 / ವಚನ ಸಂಖ್ಯೆ-246)

ತಮ್ಮ ಇಂದ್ರಿಯ ದಿಚ್ಛೆಗೆ ಭೊಗಿಸುವ ವಿಷಯ ಸುಖಗಳನ್ನು ಪ್ರಸಾದ ಎನ್ನಲಾಗಿದ್ದು, ಲಿಂಗಾರ್ಪಿತಾಗದ ಪ್ರಸಾದವನ್ನು ಮನದಿಚ್ಛೆಗೆ ಸ್ವೀಕರಿಸುವ, ಭಾವದ ಬಯಕೆಗೆ ಸ್ವೀಕರಿಸುವ ಯಾವ ಭೊಗಿ ಪದಾರ್ಥವು ಪ್ರಸಾದವಲ್ಲ, ಪ್ರಸಾದದ ನಿಜವಾದ ಅರ್ಥ ತಿಳಿಯದೆ ಕೊಳೆ ಪ್ರಸಾದ ಎಂದು ಕೈಗಡ್ಡಿ ಬೇಡುವ ಶಿಷ್ಯ, ಗುರುದ್ರೋಹಿ, ಕೈಯೊಡ್ಡಿದವನಿಗೆ ನೀಡುವವನು ಗುರದ್ರೋಹಿ ಎನಿಸಿಕೊಳ್ಳುತ್ತಾನೆ. ಪರಿಶುದ್ಧವಾದ ಪರಶಿವನ ಪರಮ ಪ್ರಸಾದ ಎಲ್ಲವನ್ನು ಮೀರಿದ ಮಹಾಘನವೆನಿಸುವ ನಿಜವಾದ ಪ್ರಸಾದ ಎಂದು ಚನ್ನಬಸವಣ್ಣನವರು ಹೇಳ್ತಾರೆ.

ಶರಣೆ ಆಯ್ದಕ್ಕೆ ಲಕ್ಕಮ್ಮನವರ ಈ ವಚನ ಪ್ರಸಾದದ ಮಹತ್ವ ಹೇಳುವ ಒಂದು ಅತ್ಯುತ್ಮ ವಚನ.
ಬಸವಣ್ಣನವರ ಪ್ರಸಾದದ ಕೊಂಡು, ಎನ್ನ ಕಾಯ ಶುದ್ಧವಾಯಿತಯ್ಯ.
ಚೆನ್ನಬಸವಣ್ಣನ ಪ್ರಸಾದವಕೊಂಡು, ಎನ್ನ ಜೀವ ಶುದ್ಧವಾಯಿತಯ್ಯ.
ಮಡಿವಾಳಯ್ಯನ ಪ್ರಸಾದವಕೊಂಡು, ಎನ್ನ ಭಾವ ಶುದ್ಧವಾಯಿತಯ್ಯ.
ಶಂಕರದಾಸಿಮಯ್ಯನ ಪ್ರಸಾದವಕೊಂಡು, ಎನ್ನ ತನು ಶುದ್ಧವಾಯಿತಯ್ಯ.
ಸಿದ್ದರಾಮಯ್ಯನ ಪ್ರಸಾದವಕೊಂಡು, ಎನ್ನ ಮನ ಶುದ್ಧವಾಯಿತಯ್ಯ.
ಘಟ್ಟಿವಾಳಯ್ಯನ ಪ್ರಸಾದವಕೊಂಡು, ಎನ್ನ ಪ್ರಾಣ ಶುದ್ಧವಾಯಿತಯ್ಯ.
ಅಕ್ಕನಾಗಮ್ಮನ ಪ್ರಸಾದವಕೊಂಡು, ಎನ್ನ ಅಂತರಂಗ ಶುದ್ಧವಾಯಿತಯ್ಯ.
ಮುಕ್ತಾಯಕ್ಕಳ ಪ್ರಸಾದವಕೊಂಡು, ಎನ್ನ ಬಹಿರಂಗ ಶುದ್ಧವಾಯಿತಯ್ಯ.
ಪ್ರಭುದೇವರ ಪ್ರಸಾದವಕೊಂಡು, ಎನ್ನ ಸರ್ವಾಂಗ ಶುದ್ಧವಾಯಿತಯ್ಯ.
ಇವರು ಮುಖ್ಯವಾದ ಏಳುನೂರಾಎಪ್ಪತ್ತು ಅಮರಗಣಂಗಳ
ಪ್ರಸಾದವ ಕೊಂಡು ಬದುಕಿದೆನಯ್ಯ,
ಮಾರಯ್ಯ ಪ್ರಿಯ ಅಮರೇಶ್ವರಾ,
ನಿಮ್ಮ ಶರಣರ ಪಾದಕ್ಕೆ ಅಹೋ ರಾತ್ರಿಯಲ್ಲಿ,
ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-867 / ವಚನ ಸಂಖ್ಯೆ-720)

ಬಸವಾದಿ ಶರಣರ ಮತ್ತು ಏಳುನೂರಾಎಪ್ಪತ್ತು ಅಮರಗಣಂಗಳ ಪ್ರಸಾದದಿಂದ ತನ್ನ ಕಾಯ, ಜೀವ, ಭಾವ, ತನು, ಮನ ಅಂತರಂಗ, ಬಹಿರಂಗ, ಪ್ರಾಣ ಅಷ್ಟೆ ಅಲ್ಲದೇ ತನ್ನ ಸರ್ವಾಂಗವೂ ಶುದ್ಧವಾಯಿತೆಂದು ಲಕ್ಕಮ್ಮನವರು ಹೇಳುತ್ತಾರೆ.

ಗುರುವಿಡಿದು ಲಿಂಗವಾವುದು ಎಂದರಿಯಬೇಕು,
ಲಿಂಗವಿಡಿದು ಜಂಗಮವಾವುದು ಎಂದರಿಯಬೇಕು,
ಜಂಗಮವಿಡಿದು ಪ್ರಸಾದವಾವುವು ಎಂದರಿಯಬೇಕು,
ಪ್ರಸಾದವಿಡಿದು ಪರಿಮ ಪರಿಣಾಮವೆಡೆಗೊಳ್ಳಬೇಕು
ಅಂತಪ್ಪ ಪರಮ ಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಿಹಿತ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1063 / ವಚನ ಸಂಖ್ಯೆ-906)


ಈ ವಚನದಲ್ಲಿ ಗುರು, ಲಿಂಗ ಜಂಗದಿಂದಲೇ ಪ್ರಸಾದ ಎನ್ನೊದನ್ನ ಆದಯ್ಯನವರು ಹೇಳ್ತಾರೆ.

ಜಾಗತಿಕ ಇತಿಹಾಸದಲ್ಲಿಯೇ ಮಹೋನ್ನತ ಬದುಕು ಬಾಳಿ ಬೆಳಗಿದವರು ಬಸವಾದಿ ಶರಣರು. 12 ನೇ ಶತಮಾನದ ಹೊಸ ಬೆಳಕು ಇಂದಿಗೆ ವಿಶ್ವವನ್ನು ಪಸರಿಸಬೇಕಾಗಿತ್ತು. ಆದ್ರ ಅದಕ್ಕ ತಕ್ಕ ಸಕಾಲ, ಸದಾವಕಾಶಗಳು ಕೂಡಿ ಬರಲಿಲ್ಲ ಅನ್ನೊದು ವಿಶಾದದ ಸಂಗತಿ ಮಾನವ ಕುಲಕೋಟಿಯ ದುರಂತವು.

ಬಸವಾದಿ ಶರಣರು ಮಾನವನ ಬದುಕು ವ್ಯರ್ಥವಲ್ಲ ಅರ್ಥಪೂರ್ಣ ಎಂದು ಸಾಧಿಸಿ, ಭೋದಿಸಿ ಬಯಲಾದ ಮಹಾ ಮಹಿಮರು ವಿಶ್ವನ್ನೊಳಗೊಂಡ ಮಹಾಘನ ಪರವಸ್ತು ಪರಶಿವ ಲಿಂಗದಿಂದ ಉದಯವಾದ ಸಮಸ್ತ ಸೃಷ್ಟಿ ಮಾನವ ಪುನಃ ಆ ಪರಶಿವ ಲಿಂಗದಲ್ಲಿಯೇ ಸಮರಸವಾಗಿ ಪರಿಪೂರ್ಣತ್ವ ಅಳವಡಬೇಕು. ಅಂಗ ಲಿಂಗವಾಗಬೇಕು. ಮನ ಘನ ಮನವಾಗಬೇಕು ಅಂಗೇಂದ್ರಿಯಗಳೆಲ್ಲವೂ ಲಿಂಗೇಂದ್ರಿಯಗಳಾಗಬೇಕು, ವಿಷಯ ಪದಾರ್ಥಗಳೆಲ್ಲವೂ ಪ್ರಸಾದವಾಗಬೇಕು.

ಪ್ರಸನ್ನ ಪ್ರಶಾಂತ ಪ್ರಸಾದ ಭೊಗವ ಭೋಗಿಸಿ ಸ್ವಯಂ ಲಿಂಗವೆ ತಾನಾಗಿ ಸಂತೃಪ್ತವಾಗಬೇಕೆಂಬುದೆ ಬಸವಾದಿ ಶರಣರು ಲೋಕಕ್ಕೆ ಇತ್ತ ಮಹೋನ್ನತ ಮಹಾತತ್ವ, ಆ ದಿನ್ನ ಕೇವಲ ಉಪದೇಶಿಸದೆ ಅದರಂತೆ ಬದುಕಿ ತೋರಿದರು.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.

Loading

Leave a Reply