
ವಚನ ಸಾಹಿತ್ಯ ನನ್ನ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರ. ಸುಮಾರು 45 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ, ಬರವಣಿಗೆ, ಗ್ರಂಥ ಪ್ರಕಟಣೆ ಕಾರ್ಯ ಮಾಡುತ್ತ ಬಂದಿದ್ದೇನೆ. ಇದುವರಗೆ ನಾನು 125 ಗ್ರಂಥಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಕರ್ನಾಟಕ ಸರ್ಕಾರ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ನಾನು 5 ಸಂಪುಟಗಳನ್ನು ಸಂಪಾದಿಸಿದ್ದೇನೆ. ಹೀಗಾಗಿ ವಚನ ಸಾಹಿತ್ಯದ ಹಸ್ತಪ್ರತಿಗಳ ನಿರಂತರ ಒಡನಾಟದಿಂದ ಅವುಗಳ ಸ್ವರೂಪ, ಪರಂಪರೆ, ಪರಿಷ್ಕರಣೆ, ಪ್ರಕ್ಷಿಪ್ತತೆ ಬಗೆಗೆ ಹೆಚ್ಚಿನ ತಿಳುವಳಿಕೆ ಪಡೆಯಲು ನನಗೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಚನಗಳಲ್ಲಿ ಬಳಕೆಯಾದ ಲಿಂಗಾಯತ ಮತ್ತು ವೀರಶೈವ ಪದಗಳ ಶುದ್ಧಾಶುದ್ಧತೆ – ಸತ್ಯಾಸತ್ಯತೆಯ ಬಗೆಗೆ ಕೆಲವು ಸಂಗತಿಗಳನ್ನು ಸಾಧಾರವಾಗಿ ತಿಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಪೀಠಿಕೆ:
- ವಚನ ಸಾಹಿತ್ಯ 12 ನೇ ಶತಮಾನದಲ್ಲಿ ಕಾಯಕಜೀವಿಗಳೆನಿಸಿದ ಬಸವಾದಿ ಶರಣರು ಗೈದ ಸಮಾಜೋ-ಧಾರ್ಮಿಕ ಚಳವಳಿಯ ಸಮರ್ಥ ಮಾಧ್ಯಮವಾಗಿ ಸೃಷ್ಟಿಯಾದ ಒಂದು ವಿನೂತನ – ಸ್ವತಂತ್ರ ಸಾಹಿತ್ಯ ಪ್ರಕಾರ.
- ಇದು ಯಾವುದೇ ಪಾರಂಪರಿಕ ಛಂದೋಬದ್ಧ ಕಾವ್ಯ ಲಕ್ಷಣದ ಬಂಧನಕ್ಕೆ ಒಳಗಾಗದ ಮುಕ್ತರೂಪ. ಸರಳತೆ, ಸಹಜತೆ, ಸ್ವಚ್ಛಂದತೆ ಇದರ ಸ್ವರೂಪ. ಹೀಗಾಗಿ ಇದರಲ್ಲಿ ಯಾರಾದರೂ ಹೆಚ್ಚಿನದನ್ನು ಸೇರಿಸಲು, ಇಲ್ಲವೇ ಕಡಿಮೆ ಮಾಡಲು ಅಥವಾ ಇಡಿಯಾಗಿ ಹೊಸದನ್ನೇ ಬರೆದು ಜೋಡಿಸಲು ಅವಕಾಶ ಉಂಟು.
- ಈ ಕಾರಣದಿಂದ ವಚನಗಳಲ್ಲಿ ಉದ್ದೇಶಿತ ಇಲ್ಲವೆ ಅನುದ್ದೇಶಿತ, ಸಕಾರಣ ಇಲ್ಲವೆ ವಿನಾಕಾರಣ; ಸದುದ್ದೇಶ ಇಲ್ಲವೇ ದುರುದ್ದೇಶದಿಂದ ಅನೇಕ ಪಾಠಾಂತರ, ಪ್ರಕ್ಷಿಪ್ತಗಳು ಉಂಟಾಗಿ ವಚನ ಸಾಹಿತ್ಯದ ಶುದ್ಧೀಕರಣ ಇಂದು ಒಂದು ಜಟಿಲವಾದ ಸಮಸ್ಯೆಯಾಗಿ ಪರಿಣಮಿಸಿದೆ.
- 12 ನೇ ಶತಮಾನದಲ್ಲಿ ಅನೇಕ ಶರಣರಿಂದ ಅಪಾರವಾಗಿ ಸೃಷ್ಟಿಯಾದ ವಚನ ಸಾಹಿತ್ಯ ಕಲ್ಯಾಣದ ಕ್ರಾಂತಿಯಿಂದಾಗಿ ಬಹುಪಾಲು ನಷ್ಟವಾಯಿತು; ಕೆಲವು ಭಾಗ, ಚದುರಿ ಹೋದ ಶರಣರ ಜೊತೆ ನಾಡಿನ ಬೇರೆ ಬೇರೆ ಕಡೆಗೆ ಹಂಚಿಹೋಯಿತು. 13 ಮತ್ತು 14 ಈ ಎರಡು ಶತಮಾನ ಕಾಲ ಗುಪ್ತ ನಿಧಿಯಂತೆ ಅಜ್ಞಾತವಾಸ ಅನುಭವಿಸಿತು.
- 15 ನೇ ಶತಮಾನ ವಚನ ಸಾಹಿತ್ಯದ ಪುನರುಜ್ಜೀವನದ ಕಾಲ. ಆಗ ಲಿಂಗಾಯತ ದೊರೆ ಪ್ರೌಢದೇವರಾಯ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದ. ಆತನ ಆಶ್ರಯದಲ್ಲಿ ನೂರೊಂದು ವಿರಕ್ತರೆಂಬ ಅನುಭಾವಿಗಳು ವಿರಾಜಮಾನರಾಗಿದ್ದರು. ಅವರು ದಿಕ್ಕು ದಿಕ್ಕಿಗೆ ಚದುರಿಹೋಗಿ ಅಲ್ಲಲ್ಲಿ ಅಡಗಿ ಕುಳಿತಿದ್ದ ಬಸವಾದಿ ಶರಣರ ಜ್ಞಾನನಿಧಿಯೆನಿಸಿದ ವಚನ ಸಾಹಿತ್ಯವನ್ನು ಸಂಗ್ರಹಿಸುವ ಕಾರ್ಯ ಕೈಕೊಂಡರು. ಆ ಕಾರಣದಿಂದ ಅನೇಕ ವಚನ ಕಟ್ಟುಗಳು ಒಂದೆಡೆ ರಾಶಿಗೊಂಡವು.
- ಹಾಗೆ ರಾಶಿಗೊಂಡ ವಚನ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಪಡಿಸಿದ ಅವರು ಮುಕ್ತವಾಗಿದ್ದ ಅವುಗಳನ್ನು ತಮ್ಮ ತಮ್ಮ ಅನುಭವದ ಇತಿಮಿತಿಗಳ ಹಿನ್ನೆಲೆಯಲ್ಲಿ ಬೇರೆ ಬೇರೆ ತಾತ್ವಿಕ ಸ್ಥಲಕಟ್ಟಿನ ಬಂಧನಕ್ಕೆ ಅಳವಡಿಸಿದರು. ಹೀಗಾಗಿ ಸಕಲ ಪುರಾತನರ ವಚನಗಳು ಎಂಬ ಸಂಗ್ರಹಗಳು; ಷಟ್‌ಸ್ಥಲ, ಏಕೋತ್ತರ ಶತಸ್ಥಲ, ಮಿಶ್ರಷಟ್‌ಸ್ಥಲ ಎಂಬಂಥ ಸಂಕಲನಗಳು, ಶೂನ್ಯಸಂಪಾದನೆ – ಎಂಬಂಥ ಸಂಪಾದನೆಗಳು ಹುಟ್ಟಿಕೊಂಡವು.
- ಈ ಸಂದರ್ಭದಲ್ಲಿ ಸಂಕಲನಕಾರನ ಆಶಯಕ್ಕನುಗುಣವಾಗಿ ಕೆಲವು ವಚನಗಳು ತಿದ್ದುಪಡಿಗೊಳಗಾದವು; ಮತ್ತೆ ಕೆಲವು ವಚನಗಳು ಹೊಸದಾಗಿ ಸೇರಿಕೊಂಡವು, ಇನ್ನೂ ಕೆಲವು ವಚನಗಳಲ್ಲಿ ಮೂಲದಲ್ಲಿ ಇಲ್ಲದ ಸಂಸ್ಕೃತ ಶ್ಲೋಕಗಳು ಪ್ರವೇಶ ಪಡೆದವು. ಇದರಿಂದಾಗಿ ಮೂಲ ಶರಣರ ಮೂಲವಚನದ ಸ್ವರೂಪವನ್ನು ಕಂಡು ಹಿಡಿಯುವುದು ಕಷ್ಟ ಸಾಧ್ಯದ ಕಾರ್ಯವಾಗಿ ಪರಿಣಮಿಸಿತು.
- ಇಂದು ನಮಗೆ 12 ನೇ ಶತಮಾನದಲ್ಲಿ ಬರವಣಿಗೆಗೊಂಡ ಮೂಲ ಹಸ್ತಪ್ರತಿಗಳು ದೊರೆಯುತ್ತಿಲ್ಲ. ಈಗಿರುವವೆಲ್ಲ 15 ನೇ ಶತಮಾನದಿಂದೀಚೆಗೆ ನಕಲು-ಪ್ರತಿನಕಲು ಮಾಡಿದ ಹಸ್ತಪ್ರತಿಗಳು. ಅವುಗಳಲ್ಲಿಯೇ ಎಲ್ಲ ಪುರಾತನರ ವಚನಗಳು, ಷಟ್‌ಸ್ಥಲ ವಚನಗಳು ಹೆಚ್ಚು ಮಟ್ಟಿಗೆ ಮೂಲ ಸ್ವರೂಪವನ್ನು ಕಾಯ್ದುಕೊಂಡು ಬಂದಿವೆ ಎನಿಸಿದರೆ, ಉಳಿದ ವಿವಿಧ ನೆಲೆಯ ತಾತ್ವಿಕ ಸ್ಥಲಕಟ್ಟಿನ ಕೃತಿಗಳು ತಿದ್ದುಪಡಿಗೆ ಒಳಗಾಗಿವೆ ಎಂಬುದು ಎರಡರ ತೌಲನಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.
ಉದಾಹರಣೆಗೆ:
ಬಸವಣ್ಣನವರ ಷಟ್‌ಸ್ಥಲ ಕಟ್ಟಿನಲ್ಲಿರುವ:
ಜ್ಞಾನದ ಬಲದಿಂದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ. (ವ. ಸಂ. 842)
ಎಂಬ ವಚನ ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಎಂಬ ಸಂಕಲನದಲ್ಲಿ ಹೀಗೆ ಪಾಠಾಂತರಗೊಂಡಿದೆ:
ಜ್ಞಾನದ ಬಲದಿಂದ ಅಜ್ಞಾನ ಕೆಡುವುದು ನೋಡಯ್ಯ
ಜ್ಯೋತಿಯ ಬಲದಿಂದ ಕತ್ತಲೆ ಕೆಡುವುದು ನೋಡಯ್ಯ
ಪರುಷದ ಬಲದಿಂದ ಅವಲೋಹವು ಕೆಡುವುದು ನೋಡಯ್ಯ
ಕೂಡಲಸಂಗಮದೇವಯ್ಯ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಭವ ಕೆಡುವುದು ನೋಡಯ್ಯಾ. (ವ. ಸಂ. 11)
ಅಕ್ಕಮಹಾದೇವಿಯ ಈ ಕೆಳಗಿನ ವಚನ:
ಲಿಂಗ ಸಂಗ ಸುಖದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ನಿರವಯವು ?
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ಕೂಡುವುದು ?
ಪರಮಸುಖ ಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ (ವ.ಸಂ. 358)
ಹಲಗೆದೇವನ “ಶೂನ್ಯ ಸಂಪಾದನೆ”ಯಲ್ಲಿ ಈ ಕೆಳಗಿನಂತೆ ವಿಸ್ತಾರಗೊಂಡಿದೆ:
ಲಿಂಗಾಂಗ ಸಂಗಸುಖ ಸಮರಸ ಸುಖದಲ್ಲಿ ಮನ ವೇದ್ಯವಾಯಿತ್ತು
ನಿಮ್ಮ ಶರಣರ ಅನುಭಾವ ಸಂಗದಿಂದ
ಎನ್ನ ತನುಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು
ಶುದ್ಧಸಿದ್ಧ ಪ್ರಸಿದ್ಧ ಪ್ರಸಾದಿಯಾದೆನು.
ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ
ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನ ಪ್ರಸಾದಿಯಾದೆನು.
ಇಂತೀ ಸರ್ವಾಚಾರ ಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು
ಇನ್ನೆಲ್ಲಿಯಯ್ಯಾ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು?
ಪರಮಸುಖದ ಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ. (ವ. ಸಂ. 1067)
ಚೆನ್ನಬಸವಣ್ಣನವರ ಈ ಕೆಳಗಿನ ವಚನ:
ಉಪದೇಶವ ಮಾಡಿದ ಗುರು ಒಂದೆ ಲಿಂಗವೊಂದೆಯಲ್ಲದೆ
ಸತಿಗೊಂದು ಲಿಂಗ, ಸುತಗೊಂದು ಲಿಂಗ
ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ
ಇಂತು ಒಂದು ಮನೆಗೆ ಗುರುಲಿಂಗವನೆಂದು ಮಾಡಿದರೆ
ಮೆಚ್ಚರು ನಮ್ಮ ಕೂಡಲಚೆನ್ನಸಂಗನ ಶರಣರು. (ವ. ಸಂ. 172)
ಇದು ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಸಂಕಲನದಲ್ಲಿ ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡು ಕೆಳಗಿನಂತೆ ಬೆಳೆದು ನಿಂತಿದೆ:
ಉಪದೇಶ ಮಾಡುವ ಗುರು ಒಬ್ಬನಲ್ಲದೆ, ಲಿಂಗವೊಂದೆಯಲ್ಲದೆ
ಪತಿಗೊಂದು ಲಿಂಗ, ಸತಿಗೊಂದು ಲಿಂಗ, ಸುತಗೊಂದು ಲಿಂಗ
ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ, ಭೃತ್ಯಗೊಂದು ಲಿಂಗ
ಇಂತೀ ಒಂದು ಮನೆಗೆ ಎರಡು ಲಿಂಗ ಉಂಟೆ?
ಅದೆಂತೆಂದಡೆ – ಶಿವನವಾಕ್ಯ:
“ದಾಸೀಗೋಪಾಲ ಭೃತ್ಯಾನಾಂ ಗೃಹಸ್ಥ ಸುತಯೋಃ ಶಿವಃ |
ಲಿಂಗ ಸಾಹಿತ್ಯಃ ಸರ್ವೇಕ್ಷಾಮನ್ಯಶ್ಚಾಂಡಾಲ ತದ್ಗೃಹಮ್ ||
ಮತ್ತೆಯು-
ಗುರುರೇಕೋ ಲಿಂಗಮೇಕಂ ದೀಕ್ಷೈಕಾ ತು ಪ್ರಸಾದಕಮ್|
ಏತದ್ವಯಮದಂ ದೇವ ವಿಶೇಷಂ ಪಾತಕಂ ಭವೇತ್ ||
ಎಂದುದಾಗಿ, ಇಂತೀ ಒಂದು ಮನೆಗೆ ಗುರು ಲಿಂಗವೆರಡಮಾಡಿ ನಡೆದರೆ
ಅಘೋರ ನರಕದಲ್ಲಿಕ್ಕುವ ನೋಡಾ ನಮ್ಮ ಕೂಡಲಚನ್ನಸಂಗಮದೇವರು. (ವ. ಸಂ. 228)
ಬಸವಣ್ಣನವರ ಈ ಕೆಳಗಿನ ವಚನ:
ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು.
ಎಂತಯ್ಯಾ, ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗಮದೇವ ಕೇಳಯ್ಯಾ?
ಹೊಲತಿ ಶುದ್ಧನೀರ ಮಿಂದಂತಾಯಿತ್ತಯ್ಯಾ. (ವ. ಸಂ. 628)
ಇದು ಗುಬ್ಬಿ ಮಲ್ಲಣ್ಣನ “ಗಣಭಾಷಿತ ರತ್ನಮಾಲೆ” ಸಂಕಲನದಲ್ಲಿ ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡು ಅನೇಕ ಪಾಠಾಂತರಗಳಿಂದ ಕೂಡಿ ನಿಂತಿದೆ:
ಉಂಬಲ್ಲಿ ಉಡುವಲ್ಲಿ ಕುಲವು ಅಳಿಯಿತೆಂಬಿರಿ
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವ ಮಾದಿಗರನೇನೆಂಬೆನಯ್ಯಾ?
ಇವರನೆಂತು ಭಕ್ತರೆಂಬೆನಯ್ಯಾ? ಇವರನೆಂದು ಮುಕ್ತರೆಂಬೆನಯ್ಯಾ?
ಇವರು ಒಚ್ಚೊಚ್ಚಿ ಭಕ್ತರು, ಒಚ್ಚೊಚ್ಚಿ ಭವಿಗಳು
ಅದೆಂತೆಂದಡೆ – ಲೈಂಗ್ಯೇ:
“ಸ್ತ್ರೀವಾಥ ಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ |
ನಜಾತಿಭೇದೋ ಲಿಂಗಾರ್ಚೇ ಸರ್ವೇರುದ್ರಗಣಾಃ ಸ್ಮೃತಃ ||’
ಎಂದುದಾಗಿ, ಇಂತೆಂಬ ಪುರಾಣವಾಕ್ಯವ ತಿಳಿದುನೋಡಿರೆ,
ಸರ್ವರು ರುದ್ರಗಣಂಗಳೆಂದೇ, ಸರ್ವರು ಸದ್ಭಕ್ತರೆಂದೇ,
ಅವರಲ್ಲಿ ಕುಲವನೋಡದೆ, ಆಚಾರವ ನೋಡಿ,
ಅವರಿಗೆ ಬೇಕಾದ ಹೆಣ್ಣುಕೊಟ್ಟು
ತನಗೆ ಬೇಕಾದ ಹೆಣ್ಣು ತಂದುಕೊಂಬುದು.
ಈ ಕ್ರಮವನರಿಯದವರ ಭಕ್ತಿ
ಹೊಲತಿ ಶುದ್ಧನೀರ ಮಿಂದಂತಾಯಿತ್ತು ಕೂಡಲಸಂಗಮದೇವಾ. (ವ. ಸಂ. 278)
ಇವು ಕೇವಲ ಒಂದೆರಡು ಉದಾಹರಣೆಗಳು ಮಾತ್ರ. ಇಂಥ ಇನ್ನೂ ನೂರಾರು ದೃಷ್ಟಾಂತಗಳು ವಚನ ಸಾಹಿತ್ಯ ರಾಶಿಯನ್ನು ಬಗೆದು ನೋಡಿದಾಗ ಕಣ್ಣಿಗೆ ಹೊಡೆದು ಕಾಣುತ್ತವೆ.
- ಇದರಿಂದ ವ್ಯಕ್ತವಾಗುವ ಅಭಿಪ್ರಾಯವೇನೆಂದರೆ, ಈಗ ದೊರೆತು ಪ್ರಕಟವಾಗಿರುವ ವಚನಗಳಲ್ಲಿ “ನಿಜವಚನ” ಮತ್ತು “ಪ್ರಕ್ಷಿಪ್ತ ವಚನಗಳು” ಕಲಸು ಮೇಲೋಗರವಾಗಿವೆ ಎಂಬುದು. ಇವುಗಳನ್ನು ಬೇರ್ಪಡಿಸಲು ಅನೇಕ ವಿದ್ವಾಂಸರಿಂದ ಪ್ರಯತ್ನಗಳು ನಡೆಯುತ್ತ ಬಂದಿವೆ. ಆದರೂ ಇನ್ನೂ ಸಂಪೂರ್ಣ ಶುದ್ಧೀಕರಣ ಕಾರ್ಯ ಸಾಧ್ಯವಾಗಿಲ್ಲ. ಈ ಸತ್ಯ ಅರಿಯದೆ ಕೆಲವರು, ಅರಿತೂ ಕೆಲವರು ವಚನಗಳನ್ನು ತಮ್ಮ ತಮ್ಮ ಅಭಿಪ್ರಾಯಕ್ಕೆ (ಮೂಗಿನ ನೇರಕ್ಕೆ) ಪೂರಕವಾಗುವಂತೆ-ಅನುಕೂಲವಾಗುವಂತೆ ಬಳಸಿಕೊಳ್ಳುತ್ತ ನಡೆದಿದ್ದಾರೆ. ಹೀಗಾಗಿ ವಚನಗಳಲ್ಲಿ ಬಳಕೆಯಾದ ಅನೇಕ ಪದಗಳ ಸತ್ಯಾಸತ್ಯತೆಯ ಬಗೆಗೆ ಗೊಂದಲ ಸೃಷ್ಟಿಯಾಗಲು ಕಾರಣವಾಗಿದೆ.
- ಈಗ ಉಂಟಾಗಿರುವ ವಚನಗಳಲ್ಲಿ “ವೀರಶೈವ” ಮತ್ತು “ಲಿಂಗಾಯತ” ಪದಗಳ ಬಳಕೆಗೆ ಸಂಬಂಧಿಸಿದಂತೆ ಸಮಸ್ಯೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಲು ಬಯಸುತ್ತೇನೆ.
- ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯ ಸಂಪುಟಗಳಲ್ಲಿ (ಬೈಬಲ್ ಮಾದರಿಯ 2 ಸಂಪುಟಗಳಲ್ಲಿ–ಈ ಮೊದಲು 15 ಸಂಪುಟಗಳಲ್ಲಿ ಪ್ರಕಟವಾಗಿದ್ದವು) 252 ಶರಣರ ಒಟ್ಟು 22,845 ವಚನಗಳು ಸಂಗ್ರಹವಾಗಿವೆ. ಅವುಗಳಲ್ಲಿ ಬಸವಯುಗಕ್ಕೆ ಸಂಬಂಧಿಸಿದ ವಚನಗಳು-14,895; ಬಸವೋತ್ತರ ಯುಗಕ್ಕೆ ಸಂಬಂಧಿಸಿದ ವಚನಗಳು-7,950.
ಈ ವಚನಗಳನ್ನು 15 ನೇ ಶತಮಾನದಿಂದ 18 ನೇ ಶತಮಾನದವರೆಗೆ ರಚಿತವಾದ ಸುಮಾರು 125 ಸ್ಥಲಕಟ್ಟಿನ ವಿವಿಧ ವಚನ ಸಂಕಲನಗಳಿಂದ ಸಂಗ್ರಹಿಸಲಾಗಿದೆ. ಈ ಸಂಕಲನಗಳಲ್ಲಿ ಕೆಲವು ಏಕವ್ಯಕ್ತಿ ಷಟ್‌ಸ್ಥಲ ವಚನಗಳಾದರೆ (ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಗಳು), ಹೆಚ್ಚಿನವು ಅನೇಕ ವ್ಯಕ್ತಿಗಳ ವಚನಗಳನ್ನು ಮಿಶ್ರಗೊಳಿಸಿ ಸಿದ್ಧಪಡಿಸಿದ ವಿವಿಧ ವಿಷಯ ಸಂಬಂಧಿ ಸ್ಥಲಕಟ್ಟಿನ ಕೃತಿಗಳಾಗಿವೆ. ಇವುಗಳಲ್ಲಿ ಏಕವ್ಯಕ್ತಿ ಷಟ್‌ಸ್ಥಲ ವಚನಗಳು ಹೆಚ್ಚು ಮಟ್ಟಿಗೆ ಶುದ್ಧರೂಪದವೆಂದೂ, ಇತರ ಸ್ಥಲಕಟ್ಟಿನ ಸಂಕಲನಗಳು ಸಮ್ಮಿಶ್ರ ಮತ್ತು ಅವುಗಳಲ್ಲಿ ಕೆಲವು ಪ್ರಕ್ಷಿಪ್ತವಾದುವು ಎಂದು ವಿದ್ವಾಂಸರು ಗುರುತಿಸಿದ್ದಾರೆ.
ಸದ್ಯದ ಮಟ್ಟಿಗೆ ಈ ಕೆಳಗಿನ ಕೃತಿಗಳನ್ನು “ಕೂಟವಚನ ಸಂಕಲನ” ಗಳೆಂದು ಗುರುತಿಸಿ ಹೊರಗಿಡಲಾಗಿದೆ.
- ಮುಕ್ತಿಕಂಠಾಭರಣ – ಅಜ್ಞಾತ ಕೃರ್ತ.
- ಸಿದ್ಧರಾಮೇಶ್ವರ ಷಟ್‌ಸ್ಥಲವಚನಗಳು – ಅಜ್ಞಾತ ಕರ್ತೃ
- ದೀಕ್ಷಾ ಬೋಧೆ – ಅಜ್ಞಾತ ಕರ್ತೃ
- ಭಕ್ತಿ ಶಿಖಾಮಣಿ – ಅಜ್ಞಾತ ಕರ್ತೃ
- ಸಿದ್ಧರಾಮ ಶಾಂತಶೆಟ್ಟಿ ವಾದದ ವಚನಗಳು – ಅಜ್ಞಾತ ಕರ್ತೃ
- ಸಿದ್ಧರಾಮ ಪ್ರಭು ವಾದದ ವಚನಗಳು – ಅಜ್ಞಾತ ಕರ್ತೃ
- ಮಡಿವಾಳಸ್ತೋತ್ರ – ಅಜ್ಞಾತ ಕರ್ತೃ
ಇವುಗಳ ಜೊತೆಗೆ
- ಶೀಲಸಂಪಾದನೆ.
- ಷಟ್ಪ್ರಕಾರ ಸಂಗ್ರಹ.
- ಗಣಭಾಷಿತ ರತ್ನಮಾಲೆ.
- ಶಿವಯೋಗ ಚಿಂತಾಮಣಿ.
- ಜ್ಞಾನಷಟ್‌ಸ್ಥಲಸಾರ.
- ಚಿದೈಶ್ವರ್ಯ ಚಿದಾಭರಣ.
- ವೀರಶೈವ ಚಿಂತಾಮಣಿ.
- ಲಿಂಗಚಿದಮೃತಬೋಧೆ.
- ಷಟ್‌ಸ್ಥಲಾಡಂಬರ.
ಮೊದಲಾದ ಸಂಕಲನಗಳಲ್ಲಿಯೂ ಅನೇಕ ಖೋಟಾ ವಚನಗಳು ಸೇರ್ಪಡೆಯಾಗಿರುವುದರಿಂದ ಇವುಗಳನ್ನು “ಅರೆಕೂಟವಚನ ಸಂಕಲನ” ಗಳೆಂದು ಗುರುತಿಸಬಹುದಾಗಿದೆ.
ಹೀಗಾಗಿ ಸರ್ಕಾರಿ ವಚನ ಸಂಪುಟಗಳಲ್ಲಿ “ಷಟ್‌ಸ್ಥಲ ವಚನಗಳು” ಮತ್ತು “ಹೆಚ್ಚಿನ ವಚನಗಳು” ಎಂದು ಪ್ರತ್ಯೇಕಿಸಿ ಸಂಗ್ರಹಿಸಲಾಗಿದೆ. ಹೆಚ್ಚಿನ ವಚನಗಳಲ್ಲಿ ಪ್ರಕ್ಷಿಪ್ತ ವಚನಗಳು ಉಳಿದುಕೊಂಡಿವೆ.
ವಚನಗಳಲ್ಲಿ ವೀರಶೈವ ಪದ ಬಳಕೆ
- ಈಗ ಪ್ರಸ್ತುತವಾಗಿರುವ “ವೀರಶೈವ” ಮತ್ತು “ಲಿಂಗಾಯತ” ಪದಗಳು ಬಳಕೆಯಾದ ವಚನಗಳನ್ನು ಕುರಿತು ನೋಡಬಹುದು. (ಇಲ್ಲಿ ಬಸವಯುಗದ ವಚನಕಾರರ ವಚನಗಳನ್ನು ಮಾತ್ರ ಅನುಲಕ್ಷಿಸಲಾಗಿದೆ).
- ವೀರಶೈವ ಪದ ಬಸವಯುಗದ 16 ಜನ ವಚನಕಾರರ 66 ವಚನಗಳಲ್ಲಿ ಬಳಕೆಯಾದುದು ಕಂಡುಬರುತ್ತದೆ. ಈ ವಚನಗಳು ಷಟ್‌ಸ್ಥಲವಚನಗಳಲ್ಲಿ ಸೇರಿಲ್ಲ; ಎಲ್ಲವೂ ಮಿಶ್ರವಚನ ಸಂಕಲನಗಳಲ್ಲಿ ಬಂದಿವೆ. ಅದರಲ್ಲಿಯೂ “ಅರೆಕೂಟವಚನ ಸಂಕಲನ” ಗಳಲ್ಲಿ ಸಮಾವೇಶಗೊಂಡಿವೆ.
- ಇವು ಹೆಚ್ಚು ದೀರ್ಘವಾಗಿವೆ; ತತ್ವಭೂಯಿಷ್ಠ ಎನಿಸಿವೆ; ಸಂಸ್ಕೃತ ಶ್ಲೋಕಗಳನ್ನು ಸೇರಿಸಿಕೊಂಡಿವೆ; ಶಿಥಿಲ ಬಂಧದಿಂದ ಕೂಡಿವೆ; ಆಯಾ ಶರಣನ ವಚನ ರಚನಾ ಶೈಲಿಗೆ ಅನುಗುಣವಾಗಿಲ್ಲ. ಕೆಲವು ಶರಣತತ್ವಕ್ಕೆ ವಿರೋಧವಾಗಿವೆ; ವಿರೋಧಾಭಾಸವೆನಿಸಿವೆ.
- ಹೀಗಾಗಿ ಇವು ಶರಣರು ರಚಿಸಿದ ನಿಜವಚನಗಳಲ್ಲ; ಸಂಕಲನಕಾರರು ಬರೆದು ಸೇರಿಸಿದ ಪ್ರಕ್ಷಿಪ್ತ ವಚನಗಳು; ಅದೂ 16–17 ನೇ ಶತಮಾನದಲ್ಲಿ ರಚಿತವಾದ ಸ್ಥಲಕಟ್ಟಿನ ಕೃತಿಗಳಲ್ಲಿ ಮಾತ್ರ ಇವು ದೊರಯುತ್ತವೆ. ಇವು ಸೇರಿದ ಕೆಲವು ಸಂಕಲನಕಾರರ ಹೆಸರೇ ಇಲ್ಲದಿರುವುದು, ಇವನ್ನು ಉದ್ದೇಶ ಪೂರ್ವಕವಾಗಿ ಅಳವಡಿಸಲಾಗಿದೆ ಎಂಬುದು ಮನದಟ್ಟಾಗುತ್ತದೆ.
- ಇವು ಬಸವಾದಿ ಶರಣರ ರಚನೆಗಳಲ್ಲ ಎಂಬುದನ್ನು ಅವರ ಉಳಿದ ವಚನಗಳ ಜೊತೆ ಹೋಲಿಸಿ ನೋಡಿ ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.
- ಬಸವಣ್ಣನವರ 3 ವಚನಗಳಲ್ಲಿ “ವೀರಶೈವ” ಪದ ಬಳಕೆಯಾಗಿದೆ. ಈ ವಚನಗಳು ಷಟ್‌ಸ್ಥಲ ಕಟ್ಟುಗಳಲ್ಲಿ ಇಲ್ಲ. ಈ ಮೊದಲು ಬಸವಣ್ಣನವರ ವಚನಗಳನ್ನು ಸಂಪಾದಿಸಿ ಪ್ರಕಟಿಸಿದ ಡಾ. ಫ. ಗು. ಹಳಕಟ್ಟಿ, ಪ್ರೊ. ಶಿ. ಶಿ. ಬಸವನಾಳ, ಡಾ. ಆರ್. ಸಿ. ಹಿರೇಮಠ, ಡಾ. ಎಲ್. ಬಸವರಾಜು ಇವರಾರ ಕೃತಿಗಳಲ್ಲಿಯೂ ಸೇರಿಲ್ಲ. ಹಾಗಾದರೆ ಇವುಗಳ ಮೂಲ ಆಕರ ಯಾವುದು ಎಂದು ಹುಡುಕುತ್ತ ಹೋದಾಗ 17 ನೇ ಶತಮಾನದಲ್ಲಿ ಸಂಕಲನಗೊಂಡ ಅಜ್ಞಾತ ಕರ್ತೃವಿನ “ಶೀಲಸಂಪಾದನೆ” ಎಂಬ ಏಕೈಕ ಕಾಗದ ಹಸ್ತಪ್ರತಿಯಿಂದ ಸಂಪಾದಿಸಿದ ಕೃತಿಯಲ್ಲಿ ಎರಡು, ಅದೇ ಕಾಲದ ಶಾಂತದೇವನ ಷಟ್ಪ್ರಕಾರ ಸಂಗ್ರಹ ಎಂಬ ಕೃತಿಯಲ್ಲಿ ಒಂದು ವಚನ ಅಳವಟ್ಟಿರುವುದು ಅರಿತಕ್ಕೆ ಬರುತ್ತದೆ.
ಈ ವಚನಗಳು ದೀರ್ಘವಾಗಿವೆ. ಶಿಥಿಲಬಂಧದಿಂದ ಕೂಡಿವೆ. ತಾತ್ವಿಕ ವಿಷಯವನ್ನು ಹೇಳುತ್ತವೆ. ಒಂದರಲ್ಲಿ ಸಂಸ್ಕೃತಶ್ಲೋಕ ಬಳಕೆಯಾಗಿದೆ. ಬಸವಣ್ಣನವರ ವಚನಗಳು ನಮಗೆಲ್ಲ ಗೊತ್ತಿರುವಂತೆ ಹೆಚ್ಚು ಸರಳ, ಸಂಕ್ಷಿಪ್ತ ಸೂತ್ರಬದ್ಧವಾಗಿರುತ್ತವೆ. ತತ್ವನಿರೂಪಣೆಗಿಂತ ಹೆಚ್ಚಾಗಿ ಸಮಾಜಮುಖಿ, ಅನುಭಾವಮುಖಿ ಚಿಂತನೆ ಹಾಗೂ ಸಾಹಿತ್ಯಿಕ ಸತ್ವದಿಂದ ಕೂಡಿರುತ್ತವೆ. ಈ ಯಾವ ಲಕ್ಷಣವೂ ಈ ಮೂರು ವಚನಗಳಲ್ಲಿ ಕಂಡುಬರುವುದಿಲ್ಲ. ಓದುವುದಿರಲಿ, ಹಾಗೇ ನೋಡಿದ ತಕ್ಷಣವೇ ಇವು ಬೇರೆ ಯಾರೋ ಬರೆದು ಸೇರಿಸಿದವು ಎಂದು ಅನ್ನಿಸುತ್ತದೆ.
ಉದಾಹಣೆಗೆ:
ಅಂಗಲಿಂಗ ಸಂಗ ಸುಖ ಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದ ಭೋಗಿಯಾಗಿ
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗ ಸಂಬಂಧಕನ್ಯವಾದ ಜಡಭೌತಿಕ ಪ್ರತಿಷ್ಠೆಯನ್ನುಳ್ಳ
ಭವಿಶೈವ ದೈವ ಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಲಿಲ್ಲ; ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗ ನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗೆ ನರಕಕ್ಕಿಳಿವನು ಕಾಣಾ
ಕೂಡಲಸಂಗಮದೇವಾ. (ಹೆ. ವ. 966)
ಏಕಲಿಂಗ ನಿಷ್ಠೆಯನ್ನು ಕುರಿತು ಹೇಳುವ ಈ ವಚನದಲ್ಲಿ “ಲಿಂಗವಂತ”, “ವೀರಶೈವ” ಪದಗಳು ಎರಡೆರಡು ಬಾರಿ, “ವೀರಮಾಹೇಶ್ವರ” ಎಂಬುದು ಒಂದು ಬಾರಿ ಬಂದಿದೆ. ಇಲ್ಲಿ “ವೀರಶೈವ” ಪದವನ್ನು ಒತ್ತಾಯದಿಂದ ಸೇರಿಸಿದುದು ಕಂಡುಬರುತ್ತದೆ. ಅದನ್ನು ತೆಗೆದು ಓದಿದರೆ ವಚನದ ಅರ್ಥ- ಆಶಯಗಳಿಗೆ ಯಾವುದೇ ಭಂಗ ಉಂಟಾಗುವುದಿಲ್ಲ. ಬದಲಾಗಿ ಅರ್ಥ ಗೊಂದಲದಿಂದ ಬಿಡುಗಡೆ ಹೊಂದುತ್ತದೆ. ಇಲ್ಲಿ ಬಳಸಿರುವ “ವೀರಶೈವ ಸಂಪನ್ನನೆನಿಸಿ ಲಿಂಗವಂತನಾದಬಳಿಕ” ಎಂಬುದರ ಅರ್ಥವೇನು? “ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದ ಭೋಗಿಯಾಗಿ ಲಿಂಗವಂತನಾದ ಬಳಿಕ” ಎಂದರೆ ಸಹಜವೆನಿಸುವದಿಲ್ಲವೆ? ಹಾಗೆಯೆ “ಷಡುಸ್ಥಲಕ್ಕೆ” “ವೀರಶೈವ” ಎಂಬ ವಿಶೇಷಣದ ಅಗತ್ಯವಿದೆಯೆ? ಇಷ್ಟಾಗಿಯೂ ಈ ರೀತಿಯ ರಚನೆಯನ್ನು ಚೆನ್ನಬಸವಣ್ಣನಲ್ಲಿ ಕಾಣಬಹುದಲ್ಲದೆ, ಬಸವಣ್ಣನಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಇದು ಖಂಡಿತವಾಗಿ ಬಸವಣ್ಣನವರ ವಚನವಲ್ಲ.
ಇನ್ನು “ಶೀಲಸಂಪಾದನೆ” ಸಂಕಲನದಲ್ಲಿ ಮಾತ್ರ ಬರುವ –
ಎನ್ನ ಬಂದ ಭವಂಗಳನು ಪರಿಹರಿಸಿ ಎನಗೆ ಭಕ್ತಿ ಘನವೆತ್ತಿ ತೋರಿ
ಎನ್ನ ಹೊಂದಿದ ಶೈವಮಾರ್ಗಂಗಳನತಿಗೆಳೆದು
ನಿಜವೀರಶೈವಾಚಾರವನರುಹಿಗತೋರಿ … … (ಹೆ. ವ. 1093)
ಎಂದು ಆರಂಭವಾಗುವ ವಚನವಂತೂ ಅನೇಕ ಆಭಾಸಗಳಿಂದ ಕೂಡಿದೆ. ಒಂದು ಶೈವ ಪ್ರಭೇದಗಳಲ್ಲಿಯೇ ಒಂದಾದ ವೀರಶೈವವನ್ನು-ಶೈವಮಾರ್ಗವನ್ನು ಅತಿಗಳೆದು ಅರುಹಿ ತೋರುವುದೆಂದರೇನು? ಶೈವಮಾರ್ಗವನ್ನು ತಿರಸ್ಕರಿಸುವುದೆಂದರೆ, ವೀರಶೈವವನ್ನೂ ತಿರಸ್ಕರಿಸಿದಂತಲ್ಲವೆ? ಎರಡು: ಗುರುಸ್ವರೂಪನೂ, ಮಾವನೂ ಎನಿಸಿದ ಬಸವಣ್ಣನವರು ಚೆನ್ನಬಸವಣ್ಣನವರಿಂದ ಭಕ್ತಿ-ಜ್ಞಾನ-ಆಚಾರ ಮಾರ್ಗವನ್ನು ತಿಳಿದುಕೊಂಡರು ಎಂಬುದು ಎಷ್ಟು ಸಮಂಜಸ? ಶರಣರಲ್ಲಿ “ಅರಿವಿಂಗೆ ಹಿರಿದುಕಿರಿದೆಂಬುದಿಲ್ಲ” ನಿಜ. ಆದರೆ ಈ ವಚನದ ನಿರೂಪಣೆಯ ಕ್ರಮ ಬಸವಣ್ಣನವರಿಂದ ಚೆನ್ನಬಸವಣ್ಣ ಉಪದೇಶ ಪಡೆದನೆಂಬುದಕ್ಕೆ ಸರಿಹೊಂದುತ್ತದೆಯೇ ವಿನಃ ಚೆನ್ನಬಸವಣ್ಣನಿಂದ ಬಸವಣ್ಣನವರು ಪಡೆದರು ಎಂಬುದಕ್ಕೆ ಹೊಂದಿಕೆಯಾಗುವುದಿಲ್ಲ. ಅದೇನಿದ್ದರೂ ವಚನದ ರಚನಾ ಶಿಲ್ಪವಂತೂ ಬಸವಣ್ಣನವರದಲ್ಲ.
ಇದೇ ಸಂಕಲನದಲ್ಲಿ ಬರುವ “ಜನನಸೂತಕ ಕುಲಸೂತಕ ರಜಸೂತಕ” (ಹೆಚ್ಚಿನ ವಚನಗಳು ವ. ೧೧೯೬) ಎಂದು ಆರಂಭವಾಗುವ ವಚನವಂತೂ 27 ಸಾಲುಗಳಷ್ಟು ದೀರ್ಘವಾಗಿದ್ದು, ಪಂಚಸೂತಕಗಳ ಬಗೆಗೆ ನಿರೂಪಿಸುತ್ತಿದ್ದು, ಮಧ್ಯ ಒಂದು ಸಂಸ್ಕೃತ ಶ್ಲೋಕವನ್ನು ಸೇರಿಸಿಕೊಂಡು ಬಸವಣ್ಣನವರ ರಚನೆಯ ಯಾವ ಲಕ್ಷಣವನ್ನೂ ಪಡೆದುಕೊಂಡಿಲ್ಲ. ಇದರಲ್ಲಿ “ವೀರಶೈವ” ಪದ ಸಂಸ್ಕೃತ ಶ್ಲೋಕದಲ್ಲಿ ಮಾತ್ರ ಬಳಕೆಯಾಗಿದೆ. ಶ್ಲೋಕಗಳು ಮೂಲತಃ ವಚನಕಾರರು ಅಳವಡಿಸಿದುವಲ್ಲ. ಅನಂತರದ ಸಂಕಲನಕಾರರು ಸೇರಿಸಿದುವು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.
- ಪ್ರಭುದೇವರ 5 ವಚನಗಳಲ್ಲಿ ‘ವೀರಶೈವ’ ಪದ ಬಳಕೆಯಾದುದು ಕಂಡುಬರುತ್ತದೆ. ಅವುಗಳಲ್ಲಿ ಒಂದು ವಚನ ಹೀಗಿದೆ :
ಅಯ್ಯಾ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ
ಅನುಭಾವವಿಲ್ಲದ ಷಟ್‌ಸ್ಥಲವು ಕಣ್ಣಿಲ್ಲದ ಕುರುಡನಂತೆ
ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ
ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯೂ ಪ್ರಯೋಜನಕ್ಕೆ ಬಾರದು.
ಅನುಭಾವವಿಲ್ಲದ ಲಿಂಗಪೂಜೆ ಬರಿಕೈಯಲ್ಲಿ
ಹುಡಿಮಣ್ಣ ಹೊಯ್ದುಕೊಂಡಂತೆ –
ಇದು ಕಾರಣ,
ಭಕ್ತಿಗೆ, ವಿರಕ್ತಿಗೆ, ಮುಕ್ತಿಗೆ, ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು.
ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ ಪ್ರಸಾದವ ಕೊಳಲಾಗದು
ಅನುಭಾವವುಳ್ಳ ಸದಾಚಾರ ಸಂಪನ್ನನಾದ ಸದ್ಭಕ್ತನಲ್ಲಿ
ಅನಾದಿ ಪಾದೋದಕ ಪ್ರಸಾದವ ಕೊಂಡವರು ಪರಮ ಮುಕ್ತರಾದರಯ್ಯ.
ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ. (ಹೆ. ವ. 773)
ಇಲ್ಲಿ “ವೀರಶೈವ” ಎಂಬ ಪದವನ್ನು ಮುದ್ದಾಂ ಆಗಿ ಸೇರಿಸಲಾಗಿದೆ. ಅದನ್ನು ತೆಗೆದು ಹಾಕಿದರೆ ವಚನದ ಭಾವಕ್ಕೆ ಯಾವುದೇ ಬಾಧೆ ಬರುವುದಿಲ್ಲ. ಹಾಗೆಯೇ ಈ ಕೆಳಗಿನ ವಚನವನ್ನು ನೋಡಿ:
ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು
ಲಿಂಗವಂತರಲ್ಲದೆ ಪ್ರಾಣಲಿಂಗ ಸಂಬಂಧಿಗಳಾಗಬಲ್ಲರೆ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು
ಆಚಾರ ವೀರಶೈವ ಸಂಪನ್ನ ಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೇದ್ಯ
ನಿರಾಳ ನಿರಂಜನ ಪರಾತ್ಪರನು ತಾನೆ ನೋಡಾ
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು
ಸಂದೇಹ ಸಂಕಲ್ಪದಿಂದ ದೂಸಿಸಿ ಜರೆವ
ದುರಾಚಾರಿಗಳ ಬಾಯಲ್ಲಿ ಹುಳ ಸುರಿಯದೆ
ಮಾಣ್ಬುದೆ ಗುಹೇಶ್ವರಾ? (ಹೆ. ವ. 1347)
ಇಲ್ಲಿ ಸೇರಿದ “ಆಚಾರವೀರಶೈವ ಸಂಪನ್ನ ಸಿದ್ಧಾಂತ” ಎಳ್ಳಷ್ಟೂ ಹೊಂದಿಕೆಯಾಗಿಲ್ಲ. ಒತ್ತಾಯಪೂರ್ವಕ ಸೇರಿಸಿದ್ದು ಎಂದು ಯಾರಿಗಾದರೂ ಮೇಲ್ನೋಟಕ್ಕೇ ಅರಿತಕ್ಕೆ ಬರುತ್ತದೆ.
ಇನ್ನು “ಯೋಗ ಶಿವಯೋಗಗಳ ಹೊಲಬನರಿಯದೆ” (ಹೆ. ವ. 1484) ಎಂದು ಆರಂಭವಾಗುವ ವಚನವಂತೂ 36 ಸಾಲುಗಳಷ್ಟು ದೀರ್ಘವಾಗಿದ್ದು, 10 ಸಾಲಿನ ಸಂಸ್ಕೃತ ಶ್ಲೋಕವನ್ನು ಅಳವಡಿಸಿಕೊಂಡು ತತ್ವಭೂಯಿಷ್ಠವಾಗಿದೆ. ಇದು ಈವರೆಗಿನ ಯಾವುದೇ ಪ್ರಭುದೇವರ ಷಟ್‌ಸ್ಥಲವಚನಗಳಲ್ಲಾಗಲಿ, ಇತರ ಸಂಕಲನಗಳಲ್ಲಾಗಲಿ ಬಂದಿಲ್ಲ. ಅಜ್ಞಾತವಾಗಿರುವ ಅಜ್ಞಾತ ಕರ್ತೃವಿನ “ಷಟ್‌ಸ್ಥಲಾಡಂಬರ” ಎಂಬ ಸಂಕಲನದಲ್ಲಿ ಮಾತ್ರ ಸೇರಿಕೊಂಡಿದೆ. ಅನುಭಾವವನ್ನು ಬೆಡಗಿನ ಪರಿಭಾಷೆಯಲ್ಲಿ ತುಂಬ ಸಾಂದ್ರವಾಗಿ ಹೇಳುವ ಪ್ರಭುದೇವನಿಂದ ಈ ವಚನ ರಚನೆಯಾಗಿದೆಯೆಂದು ಹೇಳಿದರೆ ಯಾರೂ ನಂಬುವಂತಿಲ್ಲ. – ಹೀಗಾಗಿ ಪ್ರಭುದೇವರ ಷಟ್‌ಸ್ಥಲ ವಚನಗಳಲ್ಲಿ ಎಡೆಪಡೆಯದೆ, ಹೆಚ್ಚಿನ ವಚನಗಳಲ್ಲಿ ಮಾತ್ರ ಸಂಗ್ರಹಿಸಲಾದ ಈ ಐದೂ ವಚನಗಳು ಮೂಲತಃ ಪ್ರಭುದೇವರ ರಚನೆಗಳಲ್ಲ ಎಂದು ಹೇಳಲು ಯಾವ ಅನುಮಾನವನ್ನೂ ಪಡಬೇಕಾಗಿಲ್ಲ.
- ಚೆನ್ನಬಸವಣ್ಣನವರ 25 ವಚನಗಳಲ್ಲಿ “ವೀರಶೈವ” ಪದ ಬಳಕೆಯಾದುದು ತೋರುತ್ತದೆ. ಎಲ್ಲ ವಚನಗಳು ತಾತ್ವಿಕವೆನಿಸಿವೆ. ಹೆಚ್ಚು ದೀರ್ಘವಾಗಿವೆ. ಹೆಜ್ಜೆ-ಹೆಜ್ಜೆಗೆ ಸಂಸ್ಕೃತ ಶ್ಲೋಕಗಳನ್ನು ಬಳಸಿಕೊಂಡಿವೆ. ಚೆನ್ನಬಸವಣ್ಣನವರ ವಚನಗಳು ಹೆಚ್ಚು ತಾತ್ವಿಕವಾದುವಾಗಿರುವದರಿಂದ ಇಲ್ಲಿ ಸಂಕಲನಕಾರರಿಗೆ ತಮಗೆ ಬೇಕಾದುದನ್ನು ಸೇರಿಸಲು ಹೆಚ್ಚಿನ ಅವಕಾಶ ದೊರೆತಿದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ವೀರಶೈವ ಪದವನ್ನು ಸೇರ್ಪಡೆ ಮಾಡುತ್ತ ಬಂದಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಈ ವಚನಗಳು ದೊರೆತುದು “ಅರೆಕೂಟವಚನ” ಸಂಕಲನಗಳೆನಿಸಿದ ಶೀಲಸಂಪಾದನೆ, ಷಟ್ಪ್ರಕಾರಸಂಗ್ರಹ, ಚಿದೈಶ್ರ‍್ಯ ಚಿದಾಭರಣ, ಜ್ಞಾನಷಟ್‌ಸ್ಥಲಸಾರ, ಷಟ್‌ಸ್ಥಲಾಡಂಬರ ಮೊದಲಾದವುಗಳಲ್ಲಿ ಎಂಬುದನ್ನು ಗಮನಿಸಬೇಕು. ಇಲ್ಲಿ ಬಳಕೆಯಾದ ಪದ ಹೆಚ್ಚಾಗಿ “ನಿಜವೀರಶೈವ” ಎಂಬುದಾಗಿದೆ. ಅಂದರೆ ಸಂಕಲನಕಾರರ ದೃಷ್ಟಿಯಲ್ಲಿ “ಸುಳ್ಳುವೀರಶೈವ” ಎಂಬುದೂ ಒಂದು ಇತ್ತು ಎಂದು ವೇದ್ಯವಾಗುತ್ತದೆ.
- ಸಿದ್ಧರಾಮನ ಆರು ವಚನಗಳಲ್ಲಿ “ವೀರಶೈವ” ಪದ ಬಳಕೆಯಾಗಿದೆ. ಅದು ಸಹಜವಾದುದಲ್ಲ. “ಶರಣ” ಎಂಬ ಪದದ ಸ್ಥಾನದಲ್ಲಿ ಉದ್ದೇಶಪೂರ್ವಕವಾಗಿ ಸೇರಿಸಿದುದಾಗಿದೆ. ಉದಾಹರಣೆಗೆ:
ಚತುರ್ವರ್ಣಿಯಾದಡೇನು
ಚತುರ್ವರ್ಣಾತೀತನೆ ವೀರಶೈವ ನೋಡಾ. (ವ. ಸಂ. 1701)
ಕುಲದಲ್ಲಿ ಶೂದ್ರನಾದಡೇನು
ಮನದಲ್ಲಿ ಮಹಾದೇವ ನೆಲೆಗೊಂಡವನೆ ವೀರಶೈವ ನೋಡಾ. (ವ. ಸಂ. 1814)
ಇಲ್ಲಿ “ವೀರಶೈವ” ದ ಸ್ಥಾನದಲ್ಲಿ “ಶರಣ” ಪದವಿರಬೇಕು. ಅದನ್ನು ಪಲ್ಲಟಗೊಳಿಸಲಾಗಿದೆ.
- ಸಿದ್ಧರಾಮನಷ್ಟು ದಾಳಿಗೆ ತುತ್ತಾದ ಶರಣ ಮತ್ತೊಬ್ಬನಿಲ್ಲ. ಅವನ ಚರಿತ್ರೆಯನ್ನು ವಿಕೃತಗೊಳಿಸಿದ್ದು, ವಚನಗಳಲ್ಲಿ ಹೇರಳವಾದ ಪ್ರಕ್ಷಿಪ್ತಗಳನ್ನು ಸೇರಿಸಿದ್ದು ನಮ್ಮ ಕಣ್ಣ ಮುಂದಿನ ಸತ್ಯವೇ ಆಗಿದೆ.
- ಸಿದ್ಧರಾಮನ ವಚನಗಳ ಶುದ್ಧೀಕರಣಕ್ಕಾಗಿಯೇ ತಮ್ಮ ಇಡೀ ಬದುಕನ್ನು ಮೀಸಲಾಗಿಟ್ಟ ಮೈಸೂರಿನ ಶ್ರೀ. ಪಿ. ಎಂ. ಗಿರಿರಾಜು ಅವರು ಸದ್ಯ ಪ್ರಕಟವಾದ ಸಿದ್ಧರಾಮನ 1,992 ವಚನಗಳಲ್ಲಿ 804 ಪ್ರಕ್ಷಿಪ್ತ ವಚನಗಳೆಂದು ಗುರುತಿಸಿದ್ದಾರೆ. 2008 ರಲ್ಲಿ “ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು” (ವ್ಯಾಖ್ಯಾನ ಸಹಿತ) ಎಂಬ ಗ್ರಂಥವನ್ನು ಪ್ರಕಟಿಸಿದ ಡಾ. ಎಲ್. ಬಸವರಾಜು ಅವರು ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ ಸಿದ್ಧರಾಮನ 1,378 ವಚನಗಳಲ್ಲಿ 1077 ಕೋಟಾ ವಚನಗಳೆಂದು ಗುರುತಿಸಿ, 301 ಮಾತ್ರ ನಿಜವಚನಗಳು ಎಂದು ನಿರ್ಧರಿಸಿದ್ದಾರೆ. ಹೀಗಾಗಿ “ವೀರಶೈವ” ಪದ ಬಳಕೆಯಾದ ಸಿದ್ಧರಾಮನ ಆರೂ ವಚನಗಳು ಪ್ರಕ್ಷಿಪ್ತ ವಚನಗಳಲ್ಲಿ ಸೇರುತ್ತವೆ.
- ಅಕ್ಕಮಹಾದೇವಿಯ 3 ವಚನಗಳಲ್ಲಿ ವೀರಶೈವ ಪದ ಸೇರಿದೆ. ಈ ಮೂರು ವಚನಗಳಲ್ಲಿ “ಅಯ್ಯಾ ಸದಾಚಾರ ಸದ್ಭಕ್ತಿ … … ’(ವ.ಸಂ. ೩೬) ಎಂದು ಆರಂಭವಾಗುವ ವಚನ ಚಿದೈಶ್ರ‍್ಯರ್ಯ ಚಿದಾಭರಣದಲ್ಲಿ ಮಾತ್ರ ಬಂದಿದೆ. “ಭವಿಯಾಚಾರವ ಬಿಡದೆ … …’(ವ.ಸಂ. ೩೧೪) ಎಂದು ಆರಂಭವಾಗುವ ವಚನ “ಷಟ್‌ಸ್ಥಲಾಡಂಬರ” ಎಂಬ ಅಜ್ಞಾತ ಸಂಕಲನದಲ್ಲಿ ಮಾತ್ರ ಸೇರಿದೆ. ಇದು “ಶ್ರೀ ಗಿರಿಚೆನ್ನಮಲ್ಲಿಕಾರ್ಜುನಯ್ಯ” ಎಂಬ ಅಂಕಿತವನ್ನು ಹೊಂದಿದ್ದು, 6 ಸಂಸ್ಕೃತ ಶ್ಲೋಕಗಳನ್ನು ಅಳವಡಿಸಿಕೊಂಡು ಸಾಕಷ್ಟು ದೀರ್ಘವಾಗಿದೆ. ವೀರಶೈವ ಪದ ಶ್ಲೋಕದಲ್ಲಿ ಬಳಕೆಯಾಗಿದೆ. ವಚನ ರಚನೆ ಸಾಕಷ್ಟು ಶಿಥಿಲವಾಗಿದೆ. ಹೀಗಾಗಿ ಹೆಚ್ಚಾಗಿ ಚೆನ್ನಮಲ್ಲಿಕಾರ್ಜುನನನ್ನು ಕೇಂದ್ರವಾಗಿಟ್ಟುಕೊಂಡು ಸತಿಪತಿ ಭಾವದ ಸರಳ ಸಂಕ್ಷಿಪ್ತ ವಚನಗಳನ್ನು ಬರೆದ ಅಕ್ಕಮಹಾದೇವಿ ಇಂಥ ವಚನವನ್ನು ಸುತಾರಾಂ ಬರೆದಿರಲು ಸಾಧ್ಯವಿಲ್ಲ.
- ಇನ್ನು “ಶಿವ ಶಿವಾ ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ” (ವ. ಸಂ. ೩೭೮) ಎಂದು ಆರಂಭವಾಗುವ ವಚನದ ಮಧ್ಯದಲ್ಲಿ ಬರುವ “ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ ವೀರಶೈವ ಮಾರ್ಗವನರುಪುವುದಕ್ಕೆ ಭಾವನ್ನವಿವರವನೊಳಕೊಂಡು ಚರಿಸಿದನದೆಂತೆಂದಡೆ” ಎಂಬಲ್ಲಿ ಬಳಸಿದ “ವೀರಶೈವಮಾರ್ಗ” ಎಂಬುದು ಮೂಲತಃ “ಶರಣಮಾರ್ಗ” ಎಂದಿರಬೇಕು. ಹೀಗಾಗಿ ಅಕ್ಕಮಹಾದೇವಿಯೂ ತನ್ನ ವಚನಗಳಲ್ಲಿ ‘ವೀರಶೈವ’ ಪದವನ್ನು ಬಳಸಿಲ್ಲವೆಂದೇ ಹೇಳಬೇಕಾಗುತ್ತದೆ.
- ಇನ್ನುಳಿದ ಅಮುಗೆ ರಾಯಮ್ಮ, ಅಂಬಿಗರ ಚೌಡಯ್ಯ, ಆದಯ್ಯ, ಚಂದಿಮರಸ, ಘಟ್ಟಿವಾಳಯ್ಯ, ಬಹುರೂಪಿ ಚೌಡಯ್ಯ, ಪ್ರಸಾದಿ ಭೋಗಣ್ಣ, ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯನವರ ವಚನಗಳಲ್ಲಿ ಬಳಕೆಯಾದ ʼವೀರಶೈವ” ಪದವೂ ಹೀಗೆಯೇ ಉದ್ದೇಶಪೂರ್ವಕವಾಗಿ ಸೇರಿಸಿದುದಾಗಿದೆ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.
ವಚನಗಳಲ್ಲಿ ಲಿಂಗಾಯತ – ಲಿಂಗವಂತ ಪದ ಬಳಕೆ
- 12 ನೇ ಶತಮಾನದ ಶರಣರ ವಚನಗಳಲ್ಲಿ “ವೀರಶೈವ” ಪದ ಉದ್ದೇಶ ಪೂರ್ವಕವಾಗಿ ಸೇರಿಸಿದ್ದೆನಿಸಿದರೆ, “ಲಿಂಗವಂತ” ಮತ್ತು “ಲಿಂಗಾಯತ” ಪದಗಳು ಸಹಜವಾಗಿ ಬಳಕೆಗೊಂಡುವೆನಿಸುತ್ತವೆ .
- ಸದ್ಯ ಈ ಕೆಳಗಿನ 19 ಜನ ವಚನಕಾರರ 101 ವಚನಗಳಲ್ಲಿ ಲಿಂಗವಂತ ಪದ 167 ಬಾರಿ (ಲಿಂಗಾಯತ-6 ಸಲ, ಲಿಂಗವಂತ–161 ಸಲ) ಬಳಕೆಯಾಗಿದೆ.
- ಬಸವಣ್ಣ-5,
- ಪ್ರಭುದೇವ-6,
- ಚೆನ್ನಬಸವಣ್ಣ–20,
- ಸಿದ್ಧರಾಮ–4,
- ಅಕ್ಕಮ್ಮ–3,
- ಅಮುಗೆ ರಾಯಮ್ಮ–2,
- ಕೇತಲದೇವಿ-1,
- ಅಂಬಿಗರ ಚೌಡಯ್ಯ–1,
- ಅವಸರದ ರೇಕಣ್ಣ–2,
- ಉರಿಲಿಂಗಪೆದ್ದಿ–34,
- ಏಲೇಶ್ವರದ ಕೇತಯ್ಯ–1,
- ಗಜೇಶ ಮಸಣಯ್ಯ–1,
- ಮಡಿವಾಳ ಮಾಚಯ್ಯ–5,
- ಮನುಮುನಿ ಗುಮ್ಮಟದೇವ–1,
- ಮರುಳಶಂಕರದೇವ–5,
- ಮೋಳಿಗೆ ಮಾರಯ್ಯ–3,
- ಸಕಳೇಶ ಮಾದರಸ-1.
- ಹೊಡೆಹುಲ್ಲ ಬಂಕಣ್ಣ–1,
- ನಿರಾಲಂಬಪ್ರಭು–1.
- ಚೆನ್ನಬಸವಣ್ಣ ಮತ್ತು ಉರಿಲಿಂಗಪೆದ್ದಿಯ ಒಂದೆರಡು ವಚನಗಳನ್ನು ಬಿಟ್ಟರೆ ಉಳಿದುವೆಲ್ಲವೂ ಸಂಕ್ಷಿಪ್ತವಾಗಿವೆ; ಶರಣತತ್ವ ಸಮ್ಮತವಾಗಿವೆ. ಆಯಾ ಶರಣರ ವಚನ ಶೈಲಿಗೆ ಅನುಗುಣವಾಗಿವೆ; ಸರಳ ನಿರೂಪಣೆಯಿಂದ ಕೂಡಿವೆ; ಸಂಸ್ಕೃತ ಶ್ಲೋಕಗಳಿಂದ ಮುಕ್ತವಾಗಿವೆ.
- ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಗಳಲ್ಲಿಯೂ ಹಾಗೂ ಹೆಚ್ಚಿನ ವಚನಗಳಲ್ಲಿಯೂ ಈ ಪದ (ಲಿಂಗವಂತ) ಉಚಿತವಾಗಿ ಬಳಕೆಯಾಗಿದೆ.
- ಕೆಲವು ಉದಾಹರಣೆಗಳಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು:
ಬಸವಣ್ಣ:
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀಗಂಧದ ಸನ್ನಿಧಿಯಲ್ಲಿ ಪರಿಮಳವಾಗವೇ?
ಲಿಂಗವಂತನ ಸನ್ನಿಧಿಯಿಂದ
ಹಿಂದಣ ದುಸ್ಸಂಗವು ಕೆಡುವುದು.
ಕೂಡಲಸಂಗಮದೇವಯ್ಯಾ
ಸಿರಿಯಾಳನ ಸಾರಿರ್ದ ನರರೆಲ್ಲ ಸುರರಾಗರೆ? (ಷಟ್‌ಸ್ಥಲ ವಚನ ಸಂ. 151)
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತಂಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮತ್ಸರಿಸುವರ ಮೆಚ್ಚ ಕೂಡಲಸಂಗಮದೇವ (ಅದೇ ವ. 653)
ಲಿಂಗವಶದಿಂದ ಬಂದ ನಡೆಗಳು
ಲಿಂಗವಶದಿಂದ ಬಂದ ನುಡಿಗಳು
ಲಿಂಗವಂತರು ತಾವು ಅಂಜಲದೇಕೆ?
ಕೂಡಲಸಂಗಮದೇವ
ಭಕ್ತರಭಿಮಾನ ತನ್ನದೆಂಬನಾಗಿ. (ಅದೇ ವ. 685)
ಲಿಂಗವಿದ್ದಲ್ಲಿ ನಿಂದೆಯಿರದು,
ನಿಂದೆಯಿದ್ದಲ್ಲಿ ಲಿಂಗವಿರದು.
ಅವರೆಂತಿದ್ದರೇನು? ಹೇಗಿದ್ದರೇನು ?
ಲಿಂಗವಂತರವರು
ಉಪಮಿಸಬಾರದ ಮಹಾಘನವು
ಕೂಡಲಸಂಗನ ಶರಣರು. (ಹೆ. ವ. 1336)
ಪ್ರಭುದೇವ:
ಲಿಂಗವಂತರಿಗೆ ಲಿಂಗವಾರ್ತೆಯ ನುಡಿವುದೇ ಬಂಗ.
ಹಂಗು ನೋಡಾ, ಹಂಗಿನ ಶಬ್ದ ನೋಡಾ.
ಕೊಡನತುಂಬಿದ ಹಾಲನೊಡೆದು ಹಾಯಿಕಿ
ಇನ್ನು ಉಡುಗಿಹೆನೆಂದಡೆ ಉಂಟೆ, ಗುಹೇಶ್ವರಾ? (ಷಟ್‌ಸ್ಥಲ ವಚನ-628)
ಪೌರ್ಣಮಿ ಬಪ್ಪನಕ್ಕ
ಬಾಯಿಬಂಧನದಲ್ಲಿದ್ದ ಚಕೋರನಂತಿದ್ದೆನಯ್ಯಾ.
ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ
ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಗೆ?
… … … ಗುಹೇಶ್ವರಂಗೆ. (ಹೆ. ವ. 1346)
ಚೆನ್ನಬಸವಣ್ಣ:
ಉದಯ ಮುಖದಲ್ಲಿ ಲಿಂಗದರುಶನ
ಹಗಲಿನ ಮುಖದಲ್ಲಿ ಜಂಗಮದರುಶನ
ಲೇಸು ಲೇಸು, ಲಿಂಗವಂತಂಗೆ ಇದೆ ಪಥವು
ಸದ್ಭಕ್ತಂಗೆ ಇದೇ ಪಥವು.
ಲೇಸು ಲೇಸು, ಕೂಡಲಚೆನ್ನಸಂಗಯ್ಯನಲ್ಲಿ
ಅಚ್ಚ ಲಿಂಗೈಕ್ಯಂಗೆ. (ಷಟ್‌ಸ್ಥಲ ವಚನ–59)
ಶೀಲವಂತರೆಲ್ಲ ಶೀಲವಂತರಯ್ಯಾ
ಭಾಷೆವಂತರೆಲ್ಲ ಭಾಷೆವಂತರಯ್ಯಾ
ವೃತವಂತರೆಲ್ಲ ವೃತವಂತರಯ್ಯಾ
ನೇಮವಂತರೆಲ್ಲಾ ನೇಮವಂತರಯ್ಯಾ
ಕೂಡಲಚೆನ್ನಸಂಗಮದೇವಯ್ಯಾ
ಸಂಗನಬಸವಣ್ಣನೊಬ್ಬನೇ ಲಿಂಗವಂತ. (ಅದೇ. ವ. 608)
ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆಬಾಗದಾತನ ಲಿಂಗವಂತನೆಂಬೆನಯ್ಯಾ
ಕರಸ್ಥಲದಲ್ಲಿ ಲಿಂಗವಧರಿಸಿ
ಭವಿಸಂಗವಮಾಡದಾತನ ಲಿಂಗವಂತನೆಂಬೆನಯ್ಯಾ. (ಹೆ. ವ. 1125)
ಸಿದ್ಧರಾಮ:
ಲಿಂಗವಂತರು ತಾವಾದ ಬಳಿಕ
ಅಂಗನೆಯರ ನಡೆನುಡಿಗೊಮ್ಮೆ
ಲಿಂಗದ ರಾಣಿಯರೆಂದು ಭಾವಿಸಬೇಕು
ಲಿಂಗವಂತರು ತಾವಾದಬಳಿಕ
ಅನುಭವ ವಚನಗಳ ಹಾಡಿ
ಸುಖ ದುಃಖಗಳಿಗಭೇದ್ಯವಾಗಿರಬೇಕು.
ಲಿಂಗವಂತರು ತಾವಾದಬಳಿಕ
ಜಂಗಮವ ಪೂಜಿಸಿ ಸದಾ ಲಿಂಗೈಕ್ಯ ಸುಖಿಗಳಾಗಿರಬೇಕು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ. (ವ. ಸಂ. 1866)
ಅಮುಗೆರಾಯಮ್ಮ:
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬಿಡಲೇಕೆ? (ವ. ಸಂ. 590)
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ:
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. (ವ. ಸಂ. 772)
ಉರಿಲಿಂಗಪೆದ್ದಿ:
ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ
ಆತನನುಡಿಯೇ ವೇದ,
ಆತನ ನಡೆಯೇ ಶಾಸ್ತ್ರ ಪುರಾಣ ಆಗಮ ಚರಿತ್ರವು.
ಆ ಮಹಾ ಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು.
ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ.
ಲಿಂಗವನರಿದ ಮಹಾಮಹಿಮಂಗೆ ನಮೋ ಎಂಬೆನು.
ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರಾ. (ವ. ಸಂ. 1511)
ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ
ಲಿಂಗ ಮಾಡಿತ್ತೇ ಅರ್ಪಿತ
ಲಿಂಗವಂತನ ಆರೋಗಣೆ ಲಿಂಗದಾರೋಗಣೆ. (ಅದೇ 1568)
ಮಡಿವಾಳ ಮಾಚಯ್ಯ:
ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು. (ವ. 512)
ನಮಗೆ ಲಿಂಗವುಂಟು
ನಾವು ಲಿಂಗವಂತರೆಂದು ನುಡಿವರು
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
ಈ ಮಂಗಮಾನವರನೇನೆಂಬೆನಯ್ಯಾ
ಕಲಿದೇವಯ್ಯ? (ವ. 638)
ಸಕಳೇಶ ಮಾದರಸ:
ಪಂಚಮಹಾಶೈವರು ಭ್ರಷ್ಟರಾಗಿ ಹೋದರು
ಎಂತು ಲಿಂಗವಂತಂಗೆ ಸರಿಯೆಂಬೆ? (ವ. ಸಂ. 415)
ಸಮಾರೋಪ:
ಇದುವರೆಗಿನ ಪರಾಮರ್ಶೆಯಿಂದ ಈ ಕೆಳಗಿನ ಅಂಶಗಳು ಬೆಳಕಿಗೆ ಬಂದಂತಾಗಿದೆ:
- ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ “ವೀರಶೈವ”, “ಲಿಂಗವಂತ” ಎಂಬ ಎರಡೂ ಪದಗಳು ಬಳಕೆಯಾದುದು ಕಂಡುಬಂದರೂ “ವೀರಶೈವ” ಪದ ಬಳಕೆ ಅಸಹಜ, ಲಿಂಗವಂತ ಪದ ಬಳಕೆ ಸಹಜವೆನಿಸಿದೆ. ಅಂದರೆ ವೀರಶೈವ ಪದ ಸಂಕಲನಕಾರರು ರಚಿಸಿ ಸೇರಿಸಿದ ಪ್ರಕ್ಷಿಪ್ತ ವಚನಗಳಲ್ಲಿ ಕಂಡುಬಂದರೆ, ಲಿಂಗವಂತ ಪದ ಶರಣರೇ ರಚಿಸಿದ ನಿಜವಚನಗಳಲ್ಲಿ ಕಂಡುಬರುತ್ತದೆ.
- ವೀರಶೈವ ಪದ ಬಳಕೆಯಾದ ವಚನಗಳೆಲ್ಲ ಹೆಚ್ಚು ತಾತ್ವಿಕವಾಗಿವೆ; ದೀರ್ಘವಾಗಿವೆ, ಸಂಸ್ಕೃತ ಶ್ಲೋಕಗಳಿಂದ ಕೂಡಿವೆ; ಶಿಥಿಲವಾಗಿವೆ; ಆಯಾ ಶರಣರ ವಚನ ಶೈಲಿಗೆ ಅನುಗುಣವಾಗಿಯಿಲ್ಲ. ಲಿಂಗವಂತ ಪದಬಳಕೆಯಾದ ವಚನಗಳಲ್ಲಿ ಕೆಲವನ್ನು ಬಿಟ್ಟರೆ ಹೆಚ್ಚಿನವು ಸರಳವಾಗಿವೆ; ಸಂಕ್ಷಿಪ್ತವಾಗಿವೆ, ಸೂತ್ರಬದ್ಧವೆನಿಸಿವೆ; ಆಯಾ ಶರಣರ ರಚನಾಶೈಲಿಗೆ ಹೊಂದಿಕೊಂಡಿವೆ.
- ವೀರಶೈವ ಪದ ಹೆಚ್ಚಾಗಿ ವಚನಗಳಲ್ಲಿ ಸೇರಿದ ಸಂಸ್ಕೃತ ಶ್ಲೋಕಗಳಲ್ಲಿ ಕಂಡುಬರುತ್ತದೆ. ಸಂಸ್ಕೃತ ಶ್ಲೋಕಗಳು ಮೂಲತಃ ಶರಣರು ಬಳಸಿಕೊಂಡುವಲ್ಲ. ಅನಂತರದ (15 ನೇ ಶತಮಾನದ ನಂತರದ) ಸಂಕಲನಕಾರರು ಉದ್ದೇಶಪೂರ್ವಕವಾಗಿ ಸೇರಿಸಿದುವು. ಹೀಗಾಗಿ ಆಯಾ ವಚನಕಾರರೇ ವೀರಶೈವ ಪದವನ್ನು ಬಳಸಿದ್ದಾರೆಂದು ಹೇಳಲು ಬರುವುದಿಲ್ಲ. ಈ ಕಾರಣದಿಂದ ಹನ್ನೆರಡನೆಯ ಶತಮಾನದ ಬಸವಾದಿ ವಚನಕಾರರು ವೀರಶೈವ ಪದವನ್ನು ಬಳಸಿದ್ದಾರೆ ಎಂಬ ವಾದ ಬಿದ್ದುಹೋಗುತ್ತದೆ.
- ಈಗ ನಮಗೆ ದೊರಕುವ ಆಧಾರಗಳ ಮೇಲಿಂದ ಹೇಳುವುದಾದರೆ “ವೀರಶೈವ” ಪದ ಕನ್ನಡದಲ್ಲಿ ಮೊದಲು ಬಳಕೆಯಾದದ್ದು 13 ನೇ ಶತಮಾನದ ಭೀಮಕವಿಯ ಬಸವಪುರಾಣದಲ್ಲಿ. ಅವನಿಗಿಂತ ಪೂರ್ವದ ಹರಿಹರನ ರಗಳೆಗಳಲ್ಲಿ “ವೀರಮಾಹೇಶ್ವರ” ಎಂಬ ಪದ ಬಳಕೆಯಾಗಿದೆ. ಜೊತೆಗೆ “ಲಿಂಗವಂತ” ಎಂಬ ಪದವೂ ಬಳಕೆಯಾಗಿದೆ. (ಬಾಲಕ ಬಸವಣ್ಣನನ್ನು ಹರಿಹರ ತನ್ನ ಬಸವರಾಜದೇವರ ರಗಳೆಯಲ್ಲಿ “ಹೊಂಗಡಗದ ಲಿಂಗವಂತ” ಎಂದು ಕರೆದಿದ್ದಾನೆ).
- 14 ನೇ ಶತಮಾನದ ನಂತರದ ಕಾವ್ಯಗಳಲ್ಲಿ ಮತ್ತು ವಚನಗಳಲ್ಲಿ ವೀರಶೈವ ಪದ ಬಳಕೆ-ಆಂಧ್ರದ ಆರಾಧ್ಯರಿಂದ ಹೆಚ್ಚು ಬಳಕೆಗೆ ಬಂದುದು ಕಂಡುಬರುತ್ತದೆ.
- ಈ ಸಂದರ್ಭದಲ್ಲಿ ಅವರು ವೀರಶೈವ ಶಿರೋನಾಮೆಯ ಅನೇಕ ಸಂಸ್ಕೃತ ಗ್ರಂಥಗಳನ್ನು ರಚಿಸಿ ಹೆಚ್ಚು ಪ್ರಚಾರ ಮಾಡಿದರು. ಸಂಸ್ಕೃತ ಮೂಲದ ಆಕರ್ಷಕವೆನಿಸಿದ “ವೀರಶೈವ” ಎಂಬ ಈ ಪದವನ್ನು ನಮ್ಮ ಕವಿಗಳು ಒಪ್ಪಿಕೊಂಡರು. ಹೀಗಾಗಿ ಬಸವಾದಿ ಶರಣರ “ಲಿಂಗವಂತ” ಪದ ಮರೆಯಾಗಿ “ವೀರಶೈವ” ಪದ ವಿಜೃಂಭಿಸತೊಡಗಿತು.
- ಇದು ಆಧುನಿಕ ವಿದ್ವಾಂಸರನ್ನೂ ಆಕರ್ಷಿಸಿ ತಮ್ಮ ಬರವಣಿಗೆಯಲ್ಲಿ ಲಿಂಗಾಯತಕ್ಕೆ ಬದಲಾಗಿ ಇದನ್ನು ಬಳಸಲು ಪ್ರೇರಣೆ ನೀಡಿತು.
- ಇತ್ತೀಚಿಗೆ ವಚನ ಸಾಹಿತ್ಯ ಸಮಗ್ರವಾಗಿ ಪ್ರಕಟವಾಗಿ, ಅದರ ವಿಭಿನ್ನ ನೆಲೆಯ ಅಧ್ಯಯನ ನಡೆದಾಗ “ವೀರಶೈವ” “ಲಿಂಗಾಯತ” ಎರಡಲ್ಲಿಯ ಅಂತರ ಸ್ಪಷ್ಟವಾಯಿತು.
- “ವೀರಶೈವ” ಶೈವಧರ್ಮದ ಒಂದು ಪ್ರಭೇದ. “ಲಿಂಗಾಯತ” ಬಸವಾದಿ ಶರಣರು ಸೃಷ್ಟಿಸಿದ ಸ್ವತಂತ್ರ ಧರ್ಮ.
- “ವೀರಶೈವ” ಶೈವದ ಒಂದು ಪ್ರಭೇದವಾಗಿರುವುದರಿಂದ ಅದು ಹಿಂದೂ ಧರ್ಮದ ಒಂದು ಭಾಗವಾಗಿ ಪರಿಗಣಿಸಲ್ಪಡುತ್ತದೆ. ಹಿಂದೂ ವೇದ ಪ್ರಮಾಣ ಧರ್ಮ. ವರ್ಣಾಶ್ರಮಗಳ ಅನುಸರಣೆ, ಬಹುದೇವೋಪಾಸನೆ, ಯಜ್ಞಯಾಗಾದಿ ಕರ್ಮಗಳ ಪಾಲನೆ, ಜ್ಯೋತಿಷ್ಯಾದಿಗಳಲ್ಲಿ ನಿಷ್ಠೆ, ಅನೇಕ ಕಂದಾಚಾರಗಳಲ್ಲಿ ನಂಬಿಕೆ–ಈ ಧರ್ಮದ ಪ್ರಮುಖ ಲಕ್ಷಣಗಳು. ವೀರಶೈವವೂ ಇವುಗಳನ್ನು ಪಾಲಿಸುತ್ತಿದೆ.
- ಆದರೆ ಲಿಂಗವಂತಧರ್ಮ ಇವೆಲ್ಲವನ್ನೂ ವಿರೋಧಿಸುತ್ತದೆ. ಇದು ಇಷ್ಟಲಿಂಗನಿಷ್ಠ ಧರ್ಮ. ಬಸವಾದಿ ಶರಣರು ರಚಿಸಿದ ವಚನಗಳೇ ಇದರ ಪ್ರಮಾಣಗ್ರಂಥಗಳು. ವರ್ಗ-ವರ್ಣ-ಲಿಂಗಭೇದ ಇಲ್ಲಿಲ್ಲ. ಸಮಾನತೆ-ಸ್ವಾತಂತ್ರ್ಯ-ಸಹೋದರತ್ವ ಇದರ ಧ್ಯೇಯ. ಸಕಲಜೀವಾತ್ಮರ ಲೇಸು ಇದರ ಗುರಿ. ಜ್ಯೋತಿಷ್ಯ–ಯಜ್ಞಯಾಗ–ಮೂಢನಂಬಿಕೆ-ಸ್ಪೃಶ್ಯಾಸ್ಪೃಶ್ಯತೆಗಳಿಗೆ ಇಲ್ಲಿ ಅವಕಾಶವಿಲ್ಲ. ಹೀಗಾಗಿ “ಲಿಂಗಾಯತ” ವು ಹಿಂದೂ ಧರ್ಮದ ಒಂದು ಭಾಗವಲ್ಲ; ಹಿಂದೂ ಧರ್ಮಾಚರಣೆಗಳನ್ನು ಅನುಸರಿಸುವ ವೀರಶೈವದ ಒಂದು ಭಾಗವೂ ಅಲ್ಲ. ತನ್ನದೇ ಆದ ಸ್ವತಂತ್ರ ತತ್ವ-ಧ್ಯೇಯ-ಧೋರಣೆ, ಸಾಹಿತ್ಯ-ಸಮಾಜ-ಸಂಸ್ಕೃತಿಗಳನ್ನು ಹೊಂದಿದ ಪ್ರತ್ಯೇಕ ಧರ್ಮ. ಕನ್ನಡಿಗರಾದ ಕಾಯಕ ಜೀವಿಗಳು. 12 ನೇ ಶತಮಾನದಲ್ಲಿಯೇ ಸೃಷ್ಟಿಸಿದ ಕರ್ನಾಟಕದ ಮೊದಲ ಸ್ವತಂತ್ರ ಧರ್ಮ.
- ಈ ಹಿನ್ನೆಲೆಯಲ್ಲಿ ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯಲು “ಲಿಂಗಾಯತ ಧರ್ಮ” ಎಲ್ಲ ದೃಷ್ಟಿಯಿಂದಲೂ ಅರ್ಹತೆಯನ್ನು ಪಡೆದಿದೆ.
ಡಾ. ವೀರಣ್ಣ ರಾಜೂರ,
ಮುಖ್ಯಸ್ಥರು (ವಿಶ್ರಾಂತ),
ಕನ್ನಡ ಅಧ್ಯಯನ ಪೀಠ,
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ – 580 003.
ಮೋಬೈಲ್ ಸಂ. 99003 34731
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()



Total views : 55962
ಅತ್ಯುತ್ತಮ ಸಂಶೋಧನಾತ್ಮಕ ಪ್ರಬಂಧ ಇದಾಗಿದೆ.
ಪ್ರೊಫೆಸರ್ ವೀರಣ್ಣ ರಾಜೂರವರಿಗೆ ಅನಂತ ಶರಣು ಶರಣಾರ್ಥಿಗಳನ್ನು ಅರ್ಪಿಸುತ್ತೇನೆ.