
12 ನೇಯ ಶತಮಾನ ಎಂದರೆ ಇದು ಒಂದು ಅನ್ವೇಷಣೆಯ ಯುಗ. ಜಗತ್ತನ್ನು ಪಲ್ಲಟಗೊಳಿಸಿದ ಸಂಚಲನೆಯ ಯುಗವೂ ಹೌದು. ಆ ಕಾಲದ ಜಡಗೊಂಡ ಬದುಕನ್ನು ಉತ್ತಮಗೊಳಿಸಿ ಹೊಸ ಮೌಲ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಬದುಕಿನ ಆದರ್ಶದ ರೀತಿಯೇ ಸಾಹಿತ್ಯವಾಗಿ ಹೊರಹೊಮ್ಮಿದ್ದು ಇತಿಹಾಸ. ಬದುಕಿನಿಂದ ಸಾಹಿತ್ಯ ಹಾಗೂ ಸಾಹಿತ್ಯದಿಂದ ಬದುಕು ಒಂದಕ್ಕೊಂದು ಜೀವದಾನ ಪಡೆಯುತ್ತಲೇ ಇಂದಿಗೂ ಜೀವಂತವಾಗಿರುವ ಅಪರೂಪದ ಜೀವನ ಮೌಲ್ಯ ಈ ವಚನಗಳು.
ಆದ್ದರಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಐತಿಹಾಸಿಕ ಚರಿತ್ರೆಯಲ್ಲಿ ವಚನ ಯುಗವೆಂಬುದು ಒಂದು ಮುಖ್ಯ ಘಟ್ಟ. ಇದು ಪ್ರಾಮುಖ್ಯತೆ ಪಡೆಯಲು ಕಾರಣವೇನು? ಜಗತ್ತಿನ ಎಲ್ಲ ಚಳುವಳಿ-ಹೋರಾಟ ಸ್ವಾತಂತ್ರ‍್ಯಕ್ಕಾಗಿ, ಸಮಾನತೆಗಾಗಿ, ಹಕ್ಕುಗಳಿಗಾಗಿ ಹೀಗೆ ಒಂದೊಂದು ಉದ್ದೇಶದ ಬೆನ್ನಟ್ಟಿ ಆದಂತವು. ಫ್ರಾನ್ಸ್‌ನಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ಸಂಘರ್ಷವಾದರೆ, ರಷ್ಯಾದಲ್ಲಿ ರಾಜಕೀಯ, ಸಾಮಾಜಿಕ ಕಾರಣಗಳಿಗಾಗಿ ಹಾಗೂ ಅಮೇರಿಕಾದಲ್ಲಿ ಬ್ರಿಟೀಷರ ವಿರೋಧಿ ನೆಲೆಯಲ್ಲಿ ತೀವ್ರವಾದ ಚಳುವಳಿಗಳಾದವು. ಹೀಗೆ ಇವೆಲ್ಲವೂ ಒಂದೊಂದು ಕಾರಣಗಳಿಗಾಗಿ ಜರುಗಿದರೆ ವಚನ ಚಳುವಳಿ ಒಂದೊಂದು ವಿಷಯಕ್ಕಾಗಿ ಮಾತ್ರವೆ ಜರುಗಲಿಲ್ಲ. ಇಲ್ಲಿ ಬದುಕಿನ ಸರ್ವೋತೋಮುಖ ಅಭಿವೃದ್ಧಿಗಾಗಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಹೀಗೆ ಬದುಕಿನ ಎಲ್ಲಾ ಸ್ಥರಗಳಲ್ಲೂ ಅಮೂಲಗ್ರವಾದ ಬದಲಾವಣೆಗಳಿಗಾಗಿ ನಡೆದಂಥ ಸಮಗ್ರ ಚಳುವಳಿ.
ಯಾವುದೇ ಚಳುವಳಿಯ ಉದ್ದೇಶ ಇರುವ ಸ್ಥಿತಿಯ ಬದಲಾವಣೆ. ಬದುಕಿನ ಕ್ರಮ, ವ್ಯವಸ್ಥೆ ಒಂದು ಜಾಡಿಗೆ ಬಿದ್ದು ಜಡಗೊಂಡಾಗ ಅದನ್ನು ಬದಲಾಯಿಸುವ ಹಾಗೂ ಜೀವಂತಗೊಳಿಸುವ ಪ್ರಕ್ರಿಯೆಯಾಗಿ ಚಳುವಳಿ ಆರಂಭವಾಗುತ್ತದೆ. ಒಪ್ಪಿತ ಮೌಲ್ಯಗಳನ್ನು ಯಥಾ ಸ್ಥಿತಿಯನ್ನು ಅದು ವಿರೋಧಿಸುತ್ತದೆ. ಹೀಗಾಗಿ ಮೌಲ್ಯಗಳ ಅಂಗೀಕಾರದ ಸಂದರ್ಭದಲ್ಲಿ ಚಳುವಳಿ ಇರುವುದಿಲ್ಲ. ಅದರ ವಿರೋಧದ ಪ್ರತಿಭಟನೆಯ ಸಂದರ್ಭ ಚಳುವಳಿಯನ್ನು ಸೃಷ್ಟಿ ಮಾಡುತ್ತದೆ. ಆದ್ದರಿಂದ ಚಳುವಳಿಯು ಮೌಲ್ಯಗಳಿಗೆ ಸಂಬಂಧಿಸಿದ್ದು, ಜೀವನ ದೃಷ್ಟಿಗೆ ಸಂಬಂಧಿಸಿದ್ದು. ಭಾಷೆ, ಸಂಸ್ಕೃತಿ, ಸಮಾಜ, ಸಮುದಾಯ, ನಾಗರಿಕತೆ ನಂಬಿಕೆ, ಪದ್ಧತಿ, ಆಚರಣೆ, ದೇವರು ಮುಂತಾದ ಅಂಶಗಳು ಚಳುವಳಿಯಲ್ಲಿ ನಿರ್ಣಾಯಕ ಸಂಗತಿಗಳಾಗಿ ಪಾತ್ರ ವಹಿಸುತ್ತವೆ. ಹಾಗಾಗಿ ಇದು ಕೂಡ ಸ್ಥಗಿತವಾದ ಒಂದು ವ್ಯವಸ್ಥೆಯನ್ನು ತಳ್ಳಿಹಾಕಿ ಚಲನಶೀಲವಾದ ಅಂದರೆ ಜನ ಪರವಾದ ಬೇರೊಂದು ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲು ನಡೆಸಿದ ಅಪೂರ್ವ ಆಂದೋಲನ ಆಗಿದೆ.
ಆಳುವ ವರ್ಗದ ಪ್ರಭುತ್ವದ ಕಪಿಮುಷ್ಠಿಯಲ್ಲಿ ಸಿಕ್ಕು ನಿಕೃಷ್ಟವಾದ ಬದುಕಿಗೆ ಈಡಾಗಿದ್ದ ಜನತೆಯಲ್ಲಿ ಅರಿವು ಆಲೋಚನೆಗಳನ್ನು ಹುಟ್ಟು ಹಾಕುವುದರ ಮೂಲಕ ಬದುಕನ್ನೇ ಬದಲಿಸಿದ ಸಮಗ್ರವಾದ ಚಳುವಳಿಯೊಂದು ಈ ನೆಲದಲ್ಲಿ ಜರುಗಿತು. ಈ ಚಳುವಳಿಯ ನೇತಾರರು 12 ನೇ ಶತಮಾನದ ವಚನಕಾರರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನಿರಿಸಿಕೊಂಡು ಜೀವನವನ್ನು ರೂಪಿಸುವ ನಿಟ್ಟಿನಲ್ಲಿ ವಚನ ಚಳುವಳಿ ಮಾಡಿದ್ದು ಒಂದು ಗಂಭೀರವಾದ ಪ್ರಯತ್ನ. ಅದರ ಸಫಲತೆ-ವಿಫಲತೆ ಇಲ್ಲಿ ಮುಖ್ಯವಾಗುವುದಿಲ್ಲ. ಅದು ರೂಪಿಸಿಕೊಂಡಿದ್ದ ವಿಚಾರಗಳು ಚಿಂತನೆಗಳ ಸ್ವರೂಪ ಅತ್ಯಂತ ಗಂಭೀರ ಮತ್ತು ಗಮನಾರ್ಹ. ಮಾನವ ಸಮುದಾಯವನ್ನು ಒಟ್ಟಾಗಿ ಕಟ್ಟುವ ದಿಶೆಯಲ್ಲಿ ರೂಪುಗೊಂಡ ಈ ಚಳುವಳಿ ಹಾಕಿಕೊಟ್ಟ ಹೋರಾಟ ಮಾರ್ಗ ಅನನ್ಯವಾದದು. ಅಂತಲೇ ತೀರ ತೀರ ಸಾಮಾನ್ಯರೂ ಕೂಡ ಅಸಾಮಾನ್ಯ ವಿಷಯಗಳನ್ನು, ಚಿಂತನೆಗಳನ್ನು ಅಭಿವ್ಯಕ್ತಿಸಿದ್ದು ಇದರ ಬಹುದೊಡ್ಡ ಪರಿಣಾಮ.
ಈ ಚಳುವಳಿಗೆ ಕಾರಣವಾದ ಅಂಶಗಳು ಅನೇಕ. ಬಸವಾದಿ ಶರಣರ ಆಗಮನ ಪೂರ್ವದಲ್ಲಿ ಅಲ್ಲಲ್ಲಿ ಮಹಮ್ಮದೀಯ ಆಕ್ರಮಣ ನಡೆದಿದ್ದವು. ಜೈನ, ಬೌದ್ಧ, ವೈದಿಕ ಧರ್ಮಗಳು ಜನರ ಬದುಕನ್ನು ಸಂಕೀರ್ಣಗೊಳಿಸಿದ್ದವು. ವೈದಿಕ ಧರ್ಮವು ಯಜ್ಞ, ಯಾಗಾದಿ, ವರ್ಣಾಶ್ರಮ ವ್ಯವಸ್ಥೆಗಳಿಂದ ಜನರಿಂದ ದೂರವಾಗಿ ಉಳಿದಿತ್ತು. ಇಲ್ಲಿ ಜೈನರು ಜೀವ ನಶ್ವರತೆ ಮತ್ತು ವಿಪರೀತ ದೇಹದಂಡನೆಗಳಿಂದ ಜನರ ಬದುಕನ್ನು ಸಂಕೀರ್ಣಗೊಳಿಸಿದ್ದರೆ, ಬೌದ್ಧರು ತಮ್ಮ ನಿರೀಶ್ವರ ವಾದದಿಂದ ದೂರವಾಗಿದ್ದರು. ವಿಕ್ರಮಾದಿತ್ಯನಂತಹ ಆಳ್ವಿಕೆಯಿಂದ ಉತ್ಕೃಷ್ಟ ಸಾಮ್ರಾಜ್ಯ ಹೊಂದಿದ್ದ ಕಲ್ಯಾಣದ ಚಾಲುಕ್ಯರು ದುರ್ಬಲರಾಗುತ್ತಾ ನಡೆದಿದ್ದರು. ಮೂರನೆಯ ತೈಲ ಅತ್ಯಂತ ದುರ್ಬಲ ದೊರೆ ಆಗಿದ್ದ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕಳಚೂರಿ ವಂಶದವನಾದ ಚಾಲುಕ್ಯರ ಸಾಮಂತ ಬಿಜ್ಜಳ ತನ್ನ ಸಂಬಂಧಿ ಆದ ತೈಲನನ್ನು ಕೊಂದು ಸಿಂಹಾಸನವನ್ನೇರಿ ಚಕ್ರವರ್ತಿ ಎಂದು ಘೋಷಿಸಿಕೊಂಡ. ಬುದ್ಧ ತನ್ನ ವೈಚಾರಿಕ ಚಿಂತನೆಗಳ ಮೂಲಕ ರೂಪಿಸಿದ್ದ ಹೊಸ ಸಂಘಟನೆ ಎಷ್ಟು ಜನ ಜನಪ್ರಿಯವಾಯಿತೋ ಅಷ್ಟೇ ಬೇಗ ಭಾರತೀಯರಿಂದ ಹೊರಗೆ ದಾಟಿತು. ಜೈನ ತನ್ನ ಅತಿಯಾದ ಮಡಿವಂತಿಕೆ, ಕ್ಲಿಷ್ಟ ಆಚರಣೆಗಳಿಂದ ಜನ ಮಾನಸದಿಂದ ದೂರವಾಯಿತು. ಈ ವಿಚಾರವನ್ನು ಅವಲೋಕಿಸಿದ ಬಸವಣ್ಣನವರು ಸರಳ ಸಹಜ ಧರ್ಮದ ಹುಟ್ಟಿಗಾಗಿ ಹೊಸ ಪ್ರಗತಿಪರ ಆಲೋಚನೆ ಅವುಗಳನ್ನು ಆಚರಣೆಗೆ ತರಲು ಅರಿವು ಮೂಡಿಸಲು ಜನಜಾಗೃತಿ ಮಾಡಿದರು. ಒಂದು ಅಪೂರ್ವವಾದ ಸಂಘಟನೆಯೊಂದಿಗೆ ತೀವ್ರತರ ಸಂಘರ್ಷವನ್ನು ಮಾಡಲು ಜನ ಸಮುದಾಯವನ್ನು ಪ್ರೇರೇಪಿಸಿ ಸಂಘಟಿಸಿದರು. ಜನರಲ್ಲಿ ಸಂಚಲನೆ ಮೂಡಿಸಿದರು, ಯುಗ ಪ್ರವರ್ತನೆಗೆ ಕಾರಣರಾದರು. ಅತ್ಯಂತ ನಿಕೃಷ್ಟವಾಗಿ ಕಂಡವರು ಶೋಷಿತರು ಕೆಳಸ್ಥಳರದವರು ಎಲ್ಲರೂ ಸ್ವಚ್ಛಂದವಾಗಿ ಗಾಳಿ ಬೆಳಕನ್ನು ಕಾಣುವಂತಹ ಸ್ಥಿತಿಯನ್ನು ತರಬೇಕೆಂದು ಕನಸು ಕಂಡು ಅದನ್ನು ನನಸಾಗಿಸಲು ಇಡೀ ಶರಣ ಸಮುದಾಯವೇ ತಲೆಯೆತ್ತಿ ನಿಂತಿತು. ಕತ್ತಲೆಯ ಪಾಳ್ಯವ ರವಿಯು ಹೊಕ್ಕಂತಾಯಿತು ಎಂಬ ಉಲ್ಲೇಖವನ್ನು ಅದಕ್ಕಾಗಿಯೇ ಅಕ್ಕಮಹಾದೇವಿಯವರು ಮಾಡುವರು. ಅವರ ಬದುಕಿನ ದಿಕ್ಕುಗಳನ್ನೇ ಬದಲಿಸಿದ ಒಂದು ಮಹಾನ್ ಕ್ರಾಂತಿ ಜರುಗಿದ್ದು ಈ ನೆಲದ ಬಹು ದೊಡ್ಡ ಐತಿಹಾಸಿಕ ದಾಖಲೆ. ಎಲ್ಲ ಪ್ರಥಮಗಳಿಗೆ ಕಾರಣವಾದಂತಹ ಒಂದು ಅಪರೂಪದ ಅನೂಹ್ಯ ಕ್ರಾಂತಿ ಜರುಗಲು ನಿರಂತರವಾದ ಬೃಹತ್ ಪ್ರಮಾಣದ ಚಳುವಳಿ ಕಾರಣವಾಯಿತು.
ಸಾಂಸ್ಕೃತಿಕ ಮುಖಾಮುಖಿ ಒಂದು ಚರ್ಚೆ:
ಭಾಷೆ, ಜೀವನ ಮೌಲ್ಯಗಳು, ದೈವ, ಸಂಪ್ರದಾಯ, ನಂಬಿಕೆ, ಆಚರಣೆ, ಉಡುಗೆ-ತೊಡುಗೆ ಎಲ್ಲವುಗಳ ಮೊತ್ತದ ಜೀವನ ವಿಧಾನವನ್ನು ಒಟ್ಟಾರೆಯಾಗಿ ಸಂಸ್ಕೃತಿ ಎನ್ನುವರು. ಹೀಗೆ ವಚನಕಾರರು ಬರುವ ಪೂರ್ವದಲ್ಲಿ ಸ್ಥಿತವಾಗಿದ್ದ ಬದುಕು ಹಾಗು ತದನಂತರದ ಬದಲಾದ ಜೀವನ ವಿಧಾನ ಎರಡರ ಮಧ್ಯ ಅಗಾಧವಾದ ವ್ಯತ್ಯಾಸ ಇದೆ. ಅರಿವು, ಆಲೋಚನೆ, ನಿಲುವುಗಳಲ್ಲು ನಿರಂತರವಾದ ಚಳುವಳಿಯ ಪರಿಣಾಮ ಅಸೀಮವಾಗಿದೆ. ಈ ಚಳುವಳಿಗೆ ಕಾರಣವಾದ ವೈದಿಕ ಸಂಸ್ಕೃತಿ ಹಾಗೂ ಶರಣ ಸಂಸ್ಕೃತಿ ಯಾವ ರೀತಿ ಮುಖಾಮುಖಿ ಆಗಿದೆ ಒಂದು ಅವಲೋಕನ.
ವೈದಿಕ ಸಂಸ್ಕೃತಿಯ ಮೂಲವೇ ವರ್ಣಾಶ್ರಮ ಪದ್ಧತಿ ಅಥವಾ ಕರ್ಮ ಸಿದ್ಧಾಂತ. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು. ಅತ್ಯಂತ ಶ್ರೇಷ್ಠ ಬ್ರಾಹ್ಮಣ ನಂತರ ಅವರೋಹಣ ಕ್ರಮದಲ್ಲಿ ಕ್ಷತ್ರಿಯ, ವೈಶ್ಯ ಕೊನೆಗೆ ಶೂದ್ರ. ಅತ್ಯಂತ ಕನಿಷ್ಠ ಅಷ್ಟೇ ಅಲ್ಲದೆ ಯಾವ ಹೆಸರಿಗೂ ಅರ್ಹನೆನಿಸದೆ ಇರುವ ಅತೀವ ನಿಕೃಷ್ಟನಾಗಿರುವವ ಅಂದರೆ ಕಡೆಗಣಿಸಲ್ಪಟ್ಟವನು ಹೊಲೆಮಾದಿಗ ಅಥವಾ ಅಸ್ಪೃಶ್ಯ. ವೇದ, ಉಪನಿಶತ್ತು, ಗೀತೆ ಎಲ್ಲವುಗಳಲ್ಲೂ ಕರ್ಮಾನುಸಾರ ಈ ವರ್ಣಗಳಲ್ಲಿ ಹುಟ್ಟಿ ಬರುವರು ಎಂಬ ಉಲ್ಲೇಖವೇ ಈ ವರ್ಣಾಶ್ರಮದ ಮೂಲ. ಬ್ರಾಹ್ಮಣರಿಗೆ ಹುಟ್ಟಿನಿಂದಲೆ ಉಚ್ಚಸ್ಥಾನ ಸಿಗುವದು ಅವರ ಜನ್ಮಸಿದ್ಧ ಹಕ್ಕು. ಉಳಿದವರು ಹುಟ್ಟಿನಿಂದಲೇ ಅವರಿಗಿಂತ ಕೀಳು ಎಂಬ ಧೋರಣೆಗಯೆ ಇಲ್ಲಿ ಅತ್ಯಂತ ಹೀನಾಯವಾದುದು. ಹೀಗೆ ಈ ಎಲ್ಲ ವರ್ಣ ಧರ್ಮದ ವೇದ, ಶಾಸ್ತ್ರ, ಆಗಮಾದಿಗಳು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಶೋಷಣೆಯ ಮಾಧ್ಯಮಗಳಾದವು. ಶೂದ್ರ ಹಾಗೂ ಅಸ್ಪೃಶ್ಯರು ಶಿಕ್ಷಣ, ಧರ್ಮ, ಸಮಾಜ ಎಲ್ಲದರಿಂದಲೂ ದೂರವಾಗಿರಿಸಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ಹಾಗೂ ದಾಸ್ಯ, ಗುಲಾಮಗಿರಿ ಮತ್ತು ದಬ್ಬಾಳಿಕೆಯಿಂದ ಅತ್ಯಂತ ನಿಕೃಷ್ಟವಾದ ಬದುಕನ್ನು ಅವರು ನಡೆಸಲು ಈ ವರ್ಣಾಶ್ರಮ ಪದ್ಧತಿ ಕಾರಣವಾಗಿದ್ದಿತು. ಅದಕ್ಕೆ ವಿರೋಧಿ ನೆಲೆಯಲ್ಲಿ ಶರಣರ ನಡೆ ಏನು ಎಂಬುದನ್ನು ವಚನಗಳ ಮೂಲಕ ನೋಡೋಣ.
ಶಾಸ್ತ್ರಘನವೆಂಬೆನೆ? ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ? ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧದಾಸೋಹದಲಲ್ಲದೆ ಕಾಣಬಾರದು
ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-57/ವಚನ ಸಂಖ್ಯೆ-208)
ಬಸವಣ್ಣನವರ ಈ ವಚನ ವೈದಿಕ ಜಾತಿ ವ್ಯವಸ್ಥೆಗೆ ಮೂಲವಾಗಿರುವ ಕರ್ಮ ಸಿದ್ಧಾಂತವನ್ನೂ ಅದಕ್ಕೆ ಮೂಲವಾಗಿರುವ ಶಾಸ್ತ್ರಾದಿಗಳನ್ನೂ ತರ್ಕಬದ್ಧವಾಗಿ ಪ್ರಶ್ನೆ ಮಾಡುವುದರ ಮೂಲಕ ಅವುಗಳನ್ನು ಅಲ್ಲಗಳೆಯುವ ಮಾತನ್ನು ಸ್ಪಷ್ಟವಾಗಿ ನಿರೂಪಿಸುವದು.
ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣಬಯಲು,
ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-391/ವಚನ ಸಂಖ್ಯೆ-1092)
ಎಂದು ಹೇಳುವ ಶರಣೆ ಬೋಂತಾದೆವಿಯವರ ವಚನ ಬಯಲಿನಲ್ಲಿ ನಿಂತು ಎಲ್ಲೆಲ್ಲೂ ಒಂದೇ ಆದ ಬಯಲಿನ ಬಗ್ಗೆ ಹೇಳುತ್ತಾ ಬಯಲಿಗೆ ಗೋಡೆಗಳನ್ನು ಕಟ್ಟಿ ವಿಭಜಿಸಲು ಸಾಧ್ಯವೆ ಎಂದು ಕೇಳುವ ವೈಚಾರಿಕತೆಯಲ್ಲಿ ಈ ಎಲ್ಲ ಜಾತಿಯ ಗೋಡೆಗಳು ತನ್ನಷ್ಟಕ್ಕೆ ತಾನೇ ಕಳಚಿಕೊಳ್ಳುತ್ತವೆ.
ವೇದ, ಶಾಸ್ತ್ರ, ಆಗಮ ಎಂದು ಯಾವವು ಪ್ರಮಾಣವಾಗಿದ್ದವೋ, ಯಾವವು ಶೋಷಣೆಯ ಮೂಲಗಳಾಗಿದ್ದವೋ ಅವುಗಳನ್ನು ಅಲ್ಲಗಳೆಯುವುದರ ಮೂಲಕ ವಚನಕಾರರು ಬದುಕಿಗೆ ಹೊಸ ದಿಕ್ಕುಗಳನ್ನು ತೋರಿದರು. ಇಲ್ಲಿ ಅಲ್ಲಗಳೆದದ್ದು ಈ ಪ್ರಮಾಣಗಳನ್ನಷ್ಟೆ ಅಲ್ಲಾ ಆ ಪ್ರಮಾಣಗಳನ್ನು ಎದುರಿಟ್ಟು ಆಳಿದ ಮತ್ತು ಶೋಷಣೆ ಮಾಡಿದ ಭಾಷೆಯನ್ನೂ ಕೂಡಾ. ಜನಸಾಮಾನ್ಯರು ಅರಿಯದ ಸಂಸ್ಕೃತ ಭಾಷೆಯನ್ನು ತಳ್ಳಿ ಹಾಕಿದ ಶರಣರು ಆಡು ಭಾಷೆಯಾದ ಕನ್ನಡವನ್ನೇ ತಮ್ಮ ದೈವಿಕ ಭಾಷೆಯನ್ನಾಗಿಸಿದ್ದು ಚಳುವಳಿಯ ಅತ್ಯಂತ ಪ್ರಮುಖ ಘಟ್ಟ.
ಮಾತೆಂಬುದು ಜ್ಯೋತಿರ್ಲಿಂಗ,
ಸ್ವರವೆಂಬುದು ಪರತತ್ವ;
ತಾಳೋಷ್ಟ್ರಸಂಪುಟವೆಂಬುದು
ನಾದಬಿಂದುಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-548/ವಚನ ಸಂಖ್ಯೆ-1443)
ಎಂದು ಶರಣರ ನುಡಿಗಳೇ ಸ್ವಾನುಭವದ ಜ್ಯೋತಿರ್ಲಿಂಗಗಳು, ಅದುವೆ ಪರತತ್ವ ಎಂದು ದೇವಭಾಷೆ, ವೇದ, ಆಗಮಗಳ ಪ್ರಮಾಣ ಎನ್ನುವ ಪೂರ್ವಾಗ್ರಹಗಳನ್ನೆಲ್ಲವನೂ ಮೀರಿದ ಶರಣರ ಸತ್ಯದ ನುಡಿಗಳು ಒಳಗೂ-ಹೊರಗು ಬೆಳಗಿದ ವಚನ ದೀಪಗಳು.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
“ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ |
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ||” ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-160/ವಚನ ಸಂಖ್ಯೆ-590)
“ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ” ಎಂಬ ವಚನವೇ ಚಳುವಳಿಗೆ ಮೂಲ ಪ್ರೇರಣೆ. ವರ್ಣಾಶ್ರಮದ ನೆಲೆಯನ್ನೇ ಅಲುಗಾಡಿಸಿ ಬೇರು ಸಮೇತ ಕಿತ್ತೆಸೆಯುವ ಪ್ರಬಲ ವಚನಕಾರರ ನಿಲುವು ಚಳುವಳಿಯ ಮೂಲ ಆಶಯವಾಗಿದೆ. ವರ್ಣಾಶ್ರಮವನ್ನು ವಿರೋಧಿಸುತ್ತಾ ಸಮಸಮಾಜದ ಬೀಜ ಬಿತ್ತಲು ಮೈದಳೆದ ಮೂಲ ಸಮಾಜವೇ ಕಾಯಕ ಜೀವಿಗಳ ಸಮಾಜ. ಇಲ್ಲಿ ಮೇಲಿಲ್ಲ ಕೀಳಿಲ್ಲ ಎಲ್ಲ ಕಾಯಕಗಳು ಸಮಾನ. ಈ ಕಾಯಕಗಳ ಮೂಲಕ ಜಾತಿಯನ್ನರಸುತ್ತಿದ್ದ ಸನಾತನಿಗಳಿಗೆ ಕೇಳುವರು ಬಸವಣ್ಣನವರು ಹೀಗೆ ಹೇಳುತ್ತಾರೆ:
ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-453)
ಹೀಗೆ ಭಕ್ತನೊಂದಿಗೆ ಆ ದೇವರೇ ಆಗಮಿಸಿದರೂ ಕಾಯಕ ಯಾವುದೆಂದು ವಿಚಾರಿಸಿದೆನಾದಡೆ ಭಕ್ತರಲ್ಲಿ ಮೆಲುಕೀಳು ಎಂದು ಕುಲವನರಸಿದರೆ ನೀನೆ ನೋಡಿಕೋ ಎಂದು ಬಸವಣ್ಣವರು ಆತನನ್ನೆ ಸಾಕ್ಷಿಮಾಡಿ ಬಿಡುವರು. ವಚನಕಾರರು ವರ್ಣಾಶ್ರಮದ ಶ್ರೇಷ್ಠ, ನಿಕೃಷ್ಟ ಎಂಬ ಅಮಾನವೀಯ ಅಂತರಗಳನ್ನು ಅಲ್ಲಗಳೆದು ಅದಕೆ ಕಾಯಕ ಎಂದು ಎಲ್ಲ ದುಡಿಮೆಗಳನ್ನೂ ಅಷ್ಟೇ ಗೌರವಯುತವಾಗಿ ಕಾಣುವ ಹಾಗೂ ಆ ಕಾಯಕ ಜೀವಿಗಳೆಲ್ಲ ಆತ್ಮಗೌರವದೊಂದಿಗೆ ಬದುಕುವಂತೆ ಮಾಡಿದ್ದು ವಚನ ಚಳುವಳಿಯ ಮಹೋನ್ನತ ಕಾರ್ಯ.
ಎಲ್ಲ ಶರಣರು ತಮ್ಮ ಕಾಯಕವನ್ನು ಅಭಿಮಾನದಿಂದ ತಮ್ಮ ಹೆಸರಿನೊಂದಿಗೆ ಗುರುತಿಸಿಕೊಂಡದ್ದು ಈ ಚಳುವಳಿಯ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿ. ಹೊರಗಣವನು ಎಂದು ದೇವಾಲಯಗಳಿಂದ ದೂರವಾದವರೆಲ್ಲರನ್ನು ಅಂತರಂಗದ ದೇವಾಲಯಕೆ ಕೈಹಿಡಿದು ಕರೆ ತಂದವರು ಶರಣರು.
ದೇಹದೊಳಗೆ ದೇವಾಲಯವಿದ್ದು,
ಮತ್ತೆ ಬೇರೆ ದೇವಾಲಯವೇಕಯ್ಯಾ?
ಎರಡಕ್ಕೆ ಹೇಳಲಿಲ್ಲಯ್ಯ,
ಗುಹೇಶ್ವರಾ ನೀನು ಕಲ್ಲಾದಡೆ ನಾ ನು ಏನಪ್ಪೆನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-77/ವಚನ ಸಂಖ್ಯೆ-213)
ಎಂದು ದೇಹವೆಂಬ ದೇವಾಲಯ ಇರುವಾಗ ಅನ್ಯ ದೇವಾಲಯವೇಕೆ ಎಂದು ಪ್ರಶ್ನಿಸಿದ ಅಲ್ಲಮರು ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲನ್ನು ಕೆತ್ತಿ ನಿಲ್ಲಿಸಿರುವರು ಎಂದು ದೇವಾಲಯಗಳ ಬಗೆಗೆ ಹಾಸ್ಯಾಸ್ಪದವಾಗಿ ಹೇಳುವರು. ಯಾವ ದೇವಾಲಯಗಳ ಪ್ರವೇಶಕ್ಕೆ ಅಂತ್ಯಜರು, ಅಸ್ಪೃಶ್ಯರು ದೂರೀಕರಿಸಲ್ಪಟ್ಟಿದ್ದರೋ ಅಂಥವರೆಲ್ಲ ಈಗ ತಮ್ಮಲ್ಲೇ ತಾವು ದೇವವನ್ನು ಕಾಣುವ ಅನನ್ಯ ಅರಿವು ವಚನಕಾರರು ಬೆಳಗಿದ ಪ್ರಭೆ.
ವರ್ಗ, ವರ್ಣ, ಲಿಂಗ ಎಲ್ಲ ಅಸಮಾನತೆಗಳನ್ನು ಅಳಿಸಿ ಹಾಕಿ ಸಮಾನತೆಯ ಪಾತಳಿಯ ಮೇಲೆ ಸಮಾಜವನ್ನು ಕಟ್ಟುವಲ್ಲಿ ಇಷ್ಟಲಿಂಗವೆಂಬ ಮಹತ್ತರವಾದ ದೈವದ ಕಲ್ಪನೆ ಬಿತ್ತಿ ಬೆಳೆದು ಪ್ರಜ್ಞೆಯ ಜಗತ್ತನ್ನೆ ಬದಲಿಸಿದ್ದು ಎಂದಿಗೂ ಕೇಳರಿಯದ ಅಪರೂಪದ ಅನ್ವೇಷಣೆ.
ಅರಿವಿನ ಕುರುಹಾಗಿ, ಸಮಾನತೆಯ ದ್ಯೋತಕವಾಗಿ ಇಷ್ಟಲಿಂಗವನ್ನು ಕರುಣಿಸಿದ ಗುರು ಬಸವಣ್ಣನವರು ಅದನ್ನು ಜಂಗಮ ಎಂಬ ಅಸೀಮ ಅನಂತದ ಜೊತೆ ಅನುಸಂಧಾನಗೊಳಿಸಿದರು. ಲಿಂಗಪೂಜೆ ವ್ಯಕ್ತಿಗತವಾದರೆ ಜಂಗಮಪೂಜೆ ಸಮಷ್ಟಿಗೊಳಪಟ್ಟಿದ್ದು. ಜಂಗಮವನ್ನು ಅವರು ಬಹಳ ವಿಶಾಲವಾದ ಅರ್ಥದಲ್ಲಿ ಬಳಸಿದರು. ಜಂಗಮ ಎನ್ನುವದು ಜಗದ್ಭರಿತವಾದುದು ಎಂದು ವಿಶ್ವವನ್ನೇ ಮೀರಿದ ಮಹಾಂತವಾಗಿಸಿದರು. ಲಿಂಗದ ಬಾಯಿ ಜಂಗಮ ಎಂದರು.
ಕನ್ನಡಿಯ ನೋಡುವ ಅಣ್ಣಗಳಿರಾ,
ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.
`ಸ್ಥಾವರ ಜಂಗಮ ಒಂದೆ’ ಎಂದುದು ಕೂಡಲಸಂಗನ ವಚನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-187)
“ಕನ್ನಡಿಯ ನೋಡುವ ಅಣ್ಣಗಳಿರಾ ಜಂಗಮವ ನೋಡಿರೆ” ಎಂದರು.
ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ,
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-196)
ಎಂದು ಲಿಂಗದ ಬಾಯಿಯನ್ನು ಜಂಗಮವಾಗಿಸಿದರು. ಇಲ್ಲಿಯವರೆಗೆ ಪೂಜೆಗೊಳ್ಳುತ್ತಿದ್ದ ಎಲ್ಲ ಲಿಂಗಗಳು ಸ್ಥಾವರವಾಗಿದ್ದವು. ಜಂಗಮಕ್ಕೆ ಅಂದರೆ ಸಮಷ್ಟಿಗಾಗಿ ಅರ್ಪಿಸಿಕೊಂಡಾಗಲೆ ಲಿಂಗಪೂಜೆಗೆ ಅರ್ಥ ಎಂದು ಪೂಜೆಯ ಅರ್ಥವನ್ನೆ ವ್ಯಾಪಕವಾಗಿಸಿದರು.
ಮೊದಲು ಪೂಜೆಗೊಳ್ಳುತ್ತಿದ್ದ ಲಿಂಗವು ಪತ್ರೆ, ಪುಷ್ಪ, ಅರ್ಚನೆ, ಅಭಿಷೇಕ ಎಂಬ ಬಹಿರಂಗದ ಆಚರಣೆಗಳಿಗೆ ಸೀಮಿತವಾದದ್ದು. ನಂತರ ಶರಣರ ಇಷ್ಟಲಿಂಗ ಇವೆಲ್ಲವುಗಳನು ಅತಿಗಳೆದ ಅಂತರಂಗದ ಪೂಜೆ, ಒಳಹೊರಗಿನ ಬದುಕಿನ ಶುದ್ಧತೆಯೊಂದಿಗೆ ಸಮಸ್ತ ಜೀವ ಚೈತನ್ಯದಲ್ಲಿ ಲಿಂಗವ ಕಾಣುವ ಉನ್ನತೀಕರಣದೊಂದಿಗೆ ಬದುಕು ಮೌಲಿಕವಾಯಿತು. ದಯವಿಲ್ಲದ ಧರ್ಮ ಏನನ್ನೂ ಕೊಡಲು ಸಾಧ್ಯವಿಲ್ಲ. ದಯವೇ ಧರ್ಮದ ಮೂಲವಾಗಿದ್ದರಿಂದ ಸಕಲ ಜೀವ ಚರಾಚರದಲ್ಲಿ ದೈವತ್ವವನ್ನು ಕಾಣುವ ಬಗೆ ಶರಣರು ಜೀವ ಕಾರುಣ್ಯದ ನಡೆ.
ಇಲ್ಲಿಯವರೆಗೆ ಹೆಣ್ಣು, ಹೊನ್ನು, ಮಣ್ಣುಗಳು ಮಾಯೆಯೆಂದು ಹೆಣ್ಣನ್ನು ಆಧ್ಯಾತ್ಮದಿಂದ, ಸಾಧನೆಯಿಂದ, ಧರ್ಮದಿಂದ ಅಸ್ಪೃಶ್ಯಳಂತೆ ದೂರವೇ ಇರಿಸಲಾಗಿತ್ತು. ಇದನ್ನು ತೀವ್ರವಾಗಿ ವಚನಕಾರರು ಧಿಕ್ಕರಿಸಿದರು. ಹೆಣ್ಣು, ಹೊನ್ನು, ಮಣ್ಣು ಮಾಯೆಯೆಂಬರು ಆದರೆ ಇವಾವೂ ಮಾಯೆಯಲ್ಲ, ಮನದ ಮುಂದೆ ನಿಂತು ಕಾಡುವ ಈ ಆಸೆಯೇ ಮಾಯೆ ಎಂದು ಅಲ್ಲಮರು ಹೇಳಿದರೆ, ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಎದುರಿಟ್ಟು ಕಾಡುವದು ಮಾಯೆ ಎಂದಳು. ಹೀಗೆ ಬಸವಪೂರ್ವದಲ್ಲಿ ಆಸ್ತಿತ್ವದಲ್ಲೇ ಇರದ ನಾಕು ಗೋಡೆಗಳಲ್ಲಿ ಮೂಕವಾಗಿ ಬಂಧಿಯಾಗಿದ್ದ ಹೆಣ್ಣು ಎಲ್ಲ ಸೌಲಭ್ಯಗಳಿಂದಲೂ ವಂಚಿತಳಾಗಿದ್ದವಳು. ಬಸವ ಎಂಬ ಮೇರುವಿನಡಿಯಲ್ಲಿ ತಾನೂ ಸಮಾನವಾದ ಬದುಕನ್ನು ಅನುಭವಿಸಿ ಅಕ್ಷರಗಳನ್ನು ಕಲಿತು ಸ್ವತಃ ತನ್ನ ಅನುಭಾವವನ್ನು ವಚನಗಳ ಮೂಲಕ ಅಭಿವ್ಯಕ್ತಿಸಿದ್ದು ಈ ಕಾಲಘಟ್ಟದ ಬಹುದೊಡ್ಡ ಹೆಗ್ಗಳಿಕೆ.
ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದೀತ್ತೆ?
ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-289/ವಚನ ಸಂಖ್ಯೆ-834)
ದೇಹದ ಒಳಗಿರುವ ಚೈತನ್ಯಕ್ಕೆ ಸ್ತ್ರೀ ಪುರುಷ ಎಂಬ ಭೇದವಾಗಲಿ ಒಡೆಯ ಸೇವಕ ಎಂಬ ಬಿನ್ನತೆ ಆಗಲಿ ಇಲ್ಲ. ಹುಟ್ಟುವಾಗಲೇ ಕುಲಜನು ತನ್ನ ಮತದ ಚಿಹ್ನೆ ಹಿಡಿದು ಅಂತ್ಯಜನು ತನ್ನ ಸೇವೆಯ ಚಿಹ್ನೆಯಾದ ಕೋಲನಾಗಲಿ ಹಿಡಿದುಕೊಂಡೆ ಹುಟ್ಟುವುದಿಲ್ಲ. ಸದಾಚಾರದಿಂದ ಸಾಧನೆಯಲ್ಲಿ ಮುಂದುವರೆದರೆ ಅವನೇ ಕುಲಜನಾಗುವನು. ಆಚಾರ ತಪ್ಪಿದರೆ ಕುಲಹೀನನಾಗುವನು ಎಂದು ದಾಸಿಮಯ್ಯನವರ ವಚನ ಉಲ್ಲೇಖಿಸುವದು. ಹೀಗೆ ಶರಣ ಚಳುವಳಿ ಜರುಗುವ ಮುನ್ನವಿದ್ದ ಮಾನವ ಮಾನವರ ನಡುವಿನ ಅಭೇದ್ಯ ಗೋಡೆಗಳು ಬಸವಕಾರುಣ್ಯದಿಂದ ಮತ್ತೆ ಎಲ್ಲರಂತೆ ಗೌರವಯುತವಾದ ಸಾಮಾನ್ಯ ಬದುಕನ್ನು ಬದುಕಿ ಅಕ್ಷರಲೋಕಕ್ಕೂ ಕೂಡಾ ಮರೆಯದ ವಚನಗಳನ್ನು ದಾಖಲಿಸಿದ್ದು ಅನೂಹ್ಯ.
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ,
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1160)
ಎಂದು ಮಹಾನ್ ಸಾಧನೆಗೈದ ಋಷಿಗಳ ಹೆಸರನ್ನು ಉಲ್ಲೇಖಿಸುತ್ತಾ ಅವರ ಮೂಲ ಜಾತಿಗಳು ಅವರ ಸಾಧನೆಗೆ ಅಡ್ಡಿ ಆಗಲಿಲ್ಲ ಎಂದು ಕುಲಮದದಿಂದ ಮೆರೆವವರನ್ನು ಮಾದಾರ ಶರಣ ಚೆನ್ನಯ್ಯ ತಿರಸ್ಕರಿಸುತ್ತಾನೆ. ಹೀಗೆ ವರ್ಣಾಶ್ರಮದಲ್ಲಿ ಬಾಯಿಲ್ಲದೆ ನೆಲೆಯಿಲ್ಲದೆ ಕಳೆದು ಹೋಗಿದ್ದ ಕೆಳಸ್ತರದಲ್ಲಿದ್ದ ಜನರು ವಚನ ಚಳುವಳಿಯಲ್ಲಿ ಜಾತಿಭೇದಗಳಳಿದು ಕಾಯಕ ಸಂಸ್ಕೃತಿಯಲ್ಲಿ ಪರಮೋನ್ನತ ಗೌರವಕ್ಕೆ ಭಾಜನರಾದರು. ಆತ್ಮ ವಿಶ್ವಾಸದಿಂದ ಕಾಯಕದ ಬದುಕನ್ನು ಬದುಕಿದರು.
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು
ವಂದಿಸಿ, ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-364/ವಚನ ಸಂಖ್ಯೆ-1218)
“ದಾಸಿ ಪುತ್ರನಾಗಲಿ ವೇಶ್ಯಾ ಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂಬೆ” ಎಂದು ಆ ಕಾಲದ ಸಾಮಾಜಿಕ ವ್ಯವಸ್ಥೆಯ ಕರಾಳತೆಯಲ್ಲಿ ದಾಸ್ಯಕ್ಕೆ ಒಳಗಾಗಿದ್ದ ದಾಸಿ ಹಾಗೂ ವೇಶ್ಯೆಯರ ಸಂತಾನವನ್ನೂ ಕೂಡಾ ಮುಖ್ಯ ವಾಹಿನಿಗೆ ಸೇರಿಸಿದ್ದು ಕೂಡಾ ವಚನಕಾರರ ಬಹುದೊಡ್ಡ ಹಿರಿಮೆ. ಹೀಗೆ ಅಮಾನವೀಯವಾಗಿ ಜಾತಿಯ ತುಳಿತಕ್ಕೊಳಗಾದ, ಜೀತಕ್ಕೊಳಗಾದ ದೂರೀಕರಿಸಲ್ಪಟ್ಟ ಎಲ್ಲ ಸಚೇತನಗಳು ಮತ್ತೆ ಬದುಕೆಂಬ ಕೊಂಡಿಗೆ ಬಂದು ಬೆಸೆದುಕೊಂಡವು. ಕಾಡಿನಲ್ಲಿ ಅರಳಿದ ಎಲ್ಲ ನಿಷ್ಪಾಪಿ ಹೂವುಗಳು ಇಲ್ಲಿ ಘಮಘಮಿಸಿದವು.
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-83)
ಸನಾತನ ಸಂಸ್ಕೃತಿಯಲ್ಲಿ ಕಂಡು ಬರುತ್ತಿದ್ದ ಲಗ್ನ, ಮುಹೂರ್ತ, ಸುಸಮಯ ಸುದಿನ, ಚಂದ್ರಬಲ, ತಾರಾಬಲ ಎಂದು ಜ್ಯೋತಿಷ್ಯ ಹೇಳಿ ಬೆದರಿಸಿ, ಭಯ ಹುಟ್ಟಿಸಿ ದುಡಿಮೆ ಇಲ್ಲದೆ ಅದನ್ನೆ ವ್ಯಾಪಾರ ಮಾಡಿಕೊಂಡಿದ್ದ ಅನೇಕರಿಗೆ ಶರಣರ ಇಂತಹ ವಚನಗಳು ಚಾಟಿ ಏಟು ಬೀಸಿದವು. ಎಲ್ಲರೂ ಸೇರಿದ ಸಮಯವೆ ಶುಭ ಸಮಯ, ಸಮಯದಲ್ಲಿ ಒಳ್ಳೆಯದು ಕೆಟ್ಟದ್ದು ಎಂದಿಲ್ಲ. ಎಲ್ಲ ಸಮಯವೂ ಒಳ್ಳೆಯದೆ ಎಂದು ಹೇಳುತ್ತ ದಿನವಿಂದೆ ಶಿವಶರಣೆಂಬುವಂಗೆ, “ದಿನವಿಂದೆ ಹರಶರಣೆಂಬುವಂಗೆ”, “ಬಾರದು ಬಪ್ಪದು”, “ಬಪ್ಪದು ತಪ್ಪದು ಆದ್ದರಿಂದ ಬಂದುದ ಕೈಕೊ”, “ನಿಜವನರಿತು ನಿಶ್ಚಿಂತನಾಗಿರು,” ಎಂಬ ಶರಣರ ವಚನಗಳು ಪೂರ್ವಾಗ್ರಹ ಪೀಡಿತವಾದ ಮನಸುಗಳಿಗೆ ವೈಚಾರಿಕತೆಯ ಬೀಜ ಬಿತ್ತುವ ಮೂಲಕ ಸಂಚಲನೆ ಮೂಡಿಸಿದರು. ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದರು, ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯ ಲೋಕ ಎಂದು ಎರಡು ಕಲ್ಪಿತ ಲೋಕಗಳನ್ನು ಅಲ್ಲಗಳೆದು ಅಲ್ಲಿ ಇದ್ದ ಬದುಕಿನ ಸಾರ್ಥಕತೆಯತ್ತ ಅದರ ಮುಖವನ್ನು ಪಲ್ಲಟಗೊಳಿಸಿದರು. ಸ್ವರ್ಗ-ಮರ್ತ್ಯವೆಂಬ ಕಾಣದ ಲೋಕಗಳ ಸೃಷ್ಟಿ ಕೂಡ ಶೋಷಣೆಯ ಒಂದು ಮುಖವೇ ಆಗಿತ್ತು. ವಚನ ಚಳುವಳಿಯಲ್ಲಿ ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು
ಬಂದಡೊಂದು ಲೇಸು ಬಾರದಿದ್ದರೆರಡು ಲೇಸು,
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ,
ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ,
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-62/ವಚನ ಸಂಖ್ಯೆ-229)
ಇದು ಬಸವಣ್ಣವರ ವಚನ. ಇದು ಸಮಾನ ಅರ್ಥ ವ್ಯವಸ್ಥೆಗೆ ಹೇಳಿ ಮಾಡಿಸಿದ ವಚನ. ಈ ಮೊದಲು ಸಮಾಜದಲ್ಲಿ ಉಳ್ಳವರು ಹಾಗೂ ಇಲ್ಲದವರು ಎಂಬ ಅಗಾಧ ಅಂತರವುಳ್ಳ ವರ್ಗ ವ್ಯವಸ್ಥೆಗೆ ಮೂಲ ಕಾರಣವೇ ಅರ್ಥದ ಸಂಗ್ರಹಣೆ. ಒಂದೆಡೆ ಅತಿಯಾದ ಸಂಪತ್ತು ಕೊಳೆತು ನಾರುವಷ್ಟು ಸಂಗ್ರಹ. ಇನ್ನೊಂದೆಡೆ ಬದುಕಲು ಹೋರಾಟ ನಡೆಸುವಷ್ಟು ಬಡತನ. ಈ ಅರ್ಥ ವ್ಯವಸ್ಥೆಯನ್ನು ನೋಡಿಯೇ ಬಸವಣ್ಣವರು ಹಾಗೂ ಶರಣರು ಇದರ ಸುವ್ಯವಸ್ಥೆಗಾಗಿ ಇದ್ದ ಕೆಟ್ಟಿರುವ ಸ್ಥಿತಿಯ ಸುಧಾರಣೆಗಾಗಿ ಜಾರಿ ತಂದುದೇ ದಾಸೋಹ. ದಾಸೋಹವೆಂದರೆ ತಾನು ಸತ್ಯ ಶುದ್ಧದಿಂದ ಗಳಿಸಿದ್ದರಲ್ಲಿ ಬೇಕಾದಷ್ಟು ಬಳಸಿ ಉಳಿದಿದ್ದನ್ನು ಸಮಾಜಕ್ಕೆ ಅರ್ಪಿಸುವದು. ವಿಶೇಷವಾದದ್ದನ್ನು ಸಮಾಜಕ್ಕೆ ಅರ್ಪಿಸಿ ಶೇಷವಾದದ್ದನ್ನು ಬಳಸುವದು. ಹೀಗೆ ಸಮ ಸಮಾಜದ ಕಲ್ಪನೆಗೆ ಈ ನೀತಿ ಅತ್ಯಂತ ತೀವ್ರವಾಗಿ ಪರಿಣಾಮ ಬೀರಿತು. ಅಂಥ ಒಂದು ವ್ಯವಸ್ಥೆಗೆ ಈ ಮೇಲಿನ ವಚನ ತುಂಬ ಸೂಕ್ತವಾದ ಉದಾಹರಣೆ. ಇಲ್ಲಿ ಬಸವಣ್ಣವರು ತಾನು ಗಳಿಸಿದ ಒಡವೆ, ಸಂಪತ್ತು, ಹಣವನ್ನು ಭಕ್ತರಲ್ಲಿ ಅಂದರೆ ಶರಣರಲ್ಲಿ ಅವಶ್ಯವಿದ್ದವರಿಗೆ ಹಂಚುವದು ಎಂದು ಹೇಳುವರು. ಆದರೆ ಬಡ್ಡಿಯಂತೆ ಕೊಡುವದು ತರವಲ್ಲ. ಏಕೆಂದರೆ ಈ ಬಡ್ಡಿ ವ್ಯವಸ್ಥೆ ಮತ್ತೆ ಹಣ ಸಂಗ್ರಹಣೆ ಒಂದೆಡೆಯಾಗಿ ಕಪ್ಪುಹಣಕ್ಕೆ ದಾರಿ ಮಾಡುವದು. ವರ್ಗ ಪ್ರಭೇದಕ್ಕೂ ಕಾರಣವಾಗುವದು. ಆದ್ದರಿಂದ ಬಡ್ಡಿಗಾಗಿ ಕೊಡುವಂತಿಲ್ಲ. ಇನ್ನು ಆ ಕೊಟ್ಟ ಹಣ ಬಂದರೂ ಸರಿ, ಬಾರದಿದ್ದರೂ ಸರಿ. ಏಕೆಂದರೆ ಬಂದರೆ ಮತ್ತೆ ಅದನ್ನು ಬೇರೆಯವರಿಗೆ ಹಂಚುವ ಜವಾಬ್ದಾರಿ ಅಂಟಿಕೊಳ್ಳುವದು. ಬಾರದಿದ್ದರೆ ತೆಗೆದುಕೊಂಡವನ ಜವಾಬ್ದಾರಿ ಆಗುವದು. ಮತ್ತೆ ಸಮಾಜಕ್ಕೆ ಮರುಕಳಿಸುವದು. ಹೀಗೆ ಆ ಹಣ ಅಥವಾ ಸಂಪತ್ತು ಎಲ್ಲಿದ್ದರೂ ಲಿಂಗಕ್ಕೆ ಪ್ರಸಾದವಾದಂತೆ. ಅದು ಕೊಟ್ಟವನ ಬಳಿಯೇ ಇರಲಿ ಅಥವಾ ತೆಗೆದುಕೊಂಡವನ ಬಳಿಯೆ ಇರಲಿ. ಇಂಥ ಒಂದು ಕಾರಣದಿಂದ ಕಲ್ಯಾಣ ಎಂತಹ ಸಂಪದ್ಭರಿತವಾಯಿತು ಎನ್ನುವದಕ್ಕೆ ಬಸವಣ್ಣನವರ ಒಂದು ವಚನವೇ ಸಾಕ್ಷಿ.
ಆನೆ, ಭಂಡಾರ, ಲಾಯದ ಕುದುರೆಯ
ಬೇಡುವರಿಲ್ಲದೆ ಬಡವಾದೆನಯ್ಯಾ.
ಬೇಡುವುದೇನು ದೇವಾ?
ಮುನ್ನ ಬೇಡಿದೆ ಸಿಂಧುಬಲ್ಲಾಳನ ವಧುವನು,
ಇನ್ನು ಬೇಡಿದಡೆ, ನಿಗಳವನಿಕ್ಕುವೆ.
ಬೇಡಿದ ಶರಣರಿಗೆ ನೀಡದಿರ್ದಡೆ ತಲೆದಂಡ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-307/ವಚನ ಸಂಖ್ಯೆ-1053)
“ನಾನು ಬೇಡುವವರಿಲ್ಲದೆ ಬಡವನಾದೆನಯ್ಯಾ” ಎಂದು. ಹೀಗೆ ಎಲ್ಲಿದ್ದರೂ ಲಿಂಗದ ಒಡವೆಯೇ ಆಗುವದರಿಂದ ಅದು ತನ್ನದು ಎನ್ನುವ ಸ್ವಾರ್ಥ ಇಲ್ಲ, ತನ್ನದು ಎನ್ನುವ ಅಹಮಿಕೆ ಇಲ್ಲ. ಎಲ್ಲರ ಸೊತ್ತು ಎಲ್ಲರೂ ಬಳಸಿದಂತೆ ಲಿಂಗದ ಒಡವೆ ಲಿಂಗಕ್ಕೆ ಅರ್ಪಿಸಿದಂತೆ. ಆದ್ದರಿಂದ ಈ ಬಡ್ಡಿ ವ್ಯವಸ್ಥೆಯನ್ನು ವಚನಕಾರರು ವಿರೋಧಿಸಿದರು. ಆ ನೆಲೆಯಲ್ಲಿ ಈ ಪೂರ್ವದಲ್ಲಿ ಇದ್ದ ಉಳ್ಳವರ ಶೋಷಣೆ ತಗ್ಗಲು ಕಾರಣವಾಯಿತು.
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-60/ವಚನ ಸಂಖ್ಯೆ-223)
“ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ” ಎಂಬುದು ಮೌಲಿಕವಾದ ಮಾತು. ಇಂಥ ಅನ್ಯಾಯದ ಗಳಿಕೆಯಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ಉಪಯೋಗಿಸಲಾಗದು ಎಂಬ ನೀತಿಯು ಅವರ ಆದರ್ಶಗಳಿಗೆ ಹಿಡಿದ ಕನ್ನಡಿ.
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲುವನರಿಯದೆ ಹೋದಿರಲ್ಲಾ.
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-638)
ಎಂಬ ಬಸವಣ್ಣವರ ವಚನವು ಅತ್ಯಂತ ಸ್ಪಷ್ಟವಾಗಿ ಅಂದಿನ ಶ್ರೀಮಂತಿಕೆಯ ಅಹಂಭಾವದ ಸಂಸ್ಕೃತಿಯನ್ನು ಬಿಂಬಿಸುವದು. ಮೊದಲ ಸಾಲುಗಳಲ್ಲಿ ಬಸವಣ್ಣನವರು ಹೇಳುವರು. ಆನೆಯನ್ನು ಏರಿಕೊಂಡು, ಕುದುರೆಯನೇರಿಕೊಂಡು, ಪರಿಮಳದ ದ್ರವ್ಯಗಳನ್ನು ಪೂಸಿಕೊಂಡು ಅಹಂಕಾರದಿಂದ ಎದುರಿಗೆ ಇದ್ದವರನ್ನು ಪಾದಚಾರಿಗಳನ್ನೂ ಗಮನಿಸದೆ ನೆಲದ ಮೇಲಿನ ಬದುಕನ್ನು ನಿರ್ಲಕ್ಷಿಸಿ ಎಲ್ಲವೂ ತನ್ನದೇ ಎಂದು ಮೆರೆಯುತ್ತಾ ಹೋಗುವ ಚಿತ್ರಣ.
ಹಣಮದ, ಕುಲಮದ, ಅಧಿಕಾರಮದ ಹೀಗೆ ಹತ್ತು ಹಲವಾರು ಮದಗಳಿಂದ ತುಂಬಿ ಮೇರೆಯಿಲ್ಲದಂತೆ ಮೆರೆಯುತ್ತಿದ್ದವರಿಗೇನೇ ಉದ್ದೇಶಪೂರ್ವಕವಾಗಿ ಬಸವಣ್ಣನವರ ಈ ವಚನವೊಂದು ಬಹು ಮಾರ್ಮಿಕವಾಗಿ ಮೂಡಿ ಬಂದಿದೆ. ಹೀಗೆ ಹೋಗುವವರ ಇನ್ನೊಂದು ಮುಖವನ್ನು ಪಾರಮಾರ್ಥಿಕ ನೆಲೆಯಲ್ಲಿ ಹೇಳುವರು. ಇಷ್ಟೆಲ್ಲ ಮಾಡುವವರು ಸತ್ಯದ ನಿಲುವನ್ನೇ ಅರಿಯದೆ ಹೋದರಲ್ಲ, ಅಹಂಕಾರವೆಂಬ ಮದದ ಆನೆಯನೇರಿ ನರಕಕ್ಕೆ ಗುರಿಯಾಗಿ ಹೋದರು ಎಂದರೆ ಸಮಾಜಕ್ಕೆ ಏನನ್ನೂ ಕೊಡದೆ ಯಾರಿಗೂ ಉಪಕಾರವಾಗದೆ ವ್ಯರ್ಥವಾಗಿ ಬದುಕನ್ನು ಕಳೆದು ಹೋಗುವರು. ಬದುಕಿನ ಸಾರ್ಥಕತೆ ನಿಜವಾದ ಜೀವ ಚೈತನ್ಯಕ್ಕಾಗಿ ಮಿಡಿವುದೇ ಆಗಿದೆ ಎಂಬ ಅರ್ಥಪೂರ್ಣ ಸಂದೇಶವನ್ನು ಕೊಡುವರು.
ಹೀಗೆ ಶರಣ ಚಳುವಳಿಯು ಬದುಕಿನ ಸರ್ವಾಂಗೀಣ ಅಭಿವೃದ್ಧಿಗೆ, ಸಮ ಸಮಾಜದ ಕನಸು ನನಸಾಗಿಸಲು ಬದುಕು ಪೂರ್ತಿ ಆ ಆದರ್ಶಗಳನ್ನು ಉಸಿರಾಗಿಸಿಕೊಂಡು ನಡೆಯಿತು. ಆ ಬದುಕನ್ನು ಸಾರ್ಥಕವಾಗಿಸಿಕೊಂಡು ಸಾಂಘಿಕ ಬದುಕಿಗೆ ಸುಖಿ ಬದುಕಿಗೆ ಹೊಸ ಮುನ್ನುಡಿ ಬರೆದರು ಶರಣರು. ಅವರು ಇಹದ ಬದುಕನ್ನು ಬಿಟ್ಟು ಸಾಧನೆಗಾಗಿ ಗಿರಿಶಿಖರಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಹೋಗಲಿಲ್ಲ. ಎಲ್ಲವನ್ನೂ ಪರಿಶುದ್ಧ ನಡೆ-ನುಡಿಯಲ್ಲಿ ಕಂಡುಕೊಂಡು ಅದರಂತೆ ಬದುಕಿದರು. ಉಳ್ಳವರ, ಆಳುವವರ, ಒಡೆಯರ ದಬ್ಬಾಳಿಕೆಗೆ ತಲೆಬಾಗದೆ ಆತ್ಮಗೌರವದಿಂದ ಬದುಕಿ ಆದರ್ಶಮಯ ಬದುಕಿನ ಭಾಷ್ಯ ಬರೆದರು. ಅಂಥ ಅಮೂಲ್ಯ ಸಂಪತ್ತು ಈ ವಚನಗಳು. ಇಡೀ ಶರಣ ಸಮುದಾಯದ ಹೋರಾಟ ಅವರು ಕಂಡುಂಡ ಬದುಕು ಅವರು ಹರಿಸಿದ ನೆತ್ತರ ಎಲ್ಲವುಗಳಿಗೂ ಮುಂದಿನ ಪೀಳಿಗೆಗಳು ಋಣಿ. ಶತಮಾನಗಳವರೆಗೆ ದಾಟಿಸಿಕೊಂಡು ಬಂದ ಈ ಸಾಹಿತ್ಯ ಈ ಜಗತ್ತು ಇರುವವರೆಗೂ ತನ್ನ ಅಂತಃಸತ್ವದಿಂದ ಮೌಲಿಕವಾಗೇ ಸಾರ್ವಕಾಲಿಕವಾಗಿ ಇರುವದು.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥ ಪುರ,
ಮಾಳಮಡ್ಡಿ, ಧಾರವಾಡ.
ಫೋ ನಂ. 9986 437 474
- ಓದುಗರು ತಮ್ಮ ಅನಿಸಿಕೆಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
ಮೋಬೈಲ್ ನಂ. 97413 57132
e-Mail ID: info@vachanamandara.in / admin@vachanamandara.in
![]()





Total views : 51381