
ನಮ್ಮ ಬದುಕಿನ ತಲ್ಲಣಗಳನ್ನು ಸಂಘರ್ಷಗಳನ್ನು ತರ್ಕಿಸುವಾಗ ಅನೇಕ ತಾತ್ವಿಕ ಧಾರೆಗಳು ಮುಖಮುಖಿಯಾಗುತ್ತವೆ, ಶರಣರ ಹಣತೆ ಬೆಳಕು ಜ್ಯೋತಿ ಒಂದು ವ್ಯವಸ್ಥಿತವಾದ ವೈಚಾರಿಕ ಆಕರವದು. ಭೌತಿಕ ಮತ್ತು ಅಧ್ಯಾತ್ಮದಲ್ಲಿ ಇದಕ್ಕೆ ನಾನಾ ಅರ್ಥಗಳಿವೆ. ನಮ್ಮ ಸಂಸ್ಕೃತಿಯನ್ನು ಎತ್ತರಿಸುವ, ವಿಶಾಲವಾಗಿಸುವ ಪರಿಕ್ರಮವು ಇದರಲ್ಲಿ ಅಡಗಿದೆ. ದೀಪವನ್ನು ಹಚ್ಚುವುದು ಕೇವಲ ಆಚರಣೆಯಲ್ಲ. ನಮ್ಮ ಅಂತರಂಗದ ಜ್ಯೋತಿಯನ್ನು ಹೊರಗೆ ಬೆಳಗಿಸುವ ಒಂದು ಅವಕಾಶವದು. ಹಣತೆ ಎಂಬ ಪದವೇ ಶರಣರ ಬಯಲಿನಲ್ಲಿ ಮನುಷ್ಯರು ಕಂಡುಕೊಂಡ ಸಂಸ್ಕೃತಿಯಾಗಿರಬಹುದು. ಪಂಚಭೂತಗಳಿಂದಾದ ಮನುಷ್ಯನ ಈ ದೇಹವನ್ನು ಹಣತೆಗೆ ಹೋಲಿಸಿ ಅದರಂತೆ ಪರೋಪಕಾರಿಯಾಗಿ ಬೆಳಗಬೇಕು. ವಚನಕಾರರು ಪ್ರಣತಿ ಜ್ಯೋತಿ ತೈಲವನ್ನು ವಿಶೇಷವಾಗಿ ಕಂಡಿದ್ದಾರೆ. ಅರಿವಿನ ಅನುಭಾವಿಗೆ ಸತ್ಯ ಮತ್ತು ಪ್ರಾಮಾಣಿಕತೆಯೇ ಉಸಿರು. ಆಧ್ಯಾತ್ಮಿಕ ಸಾಧನೆಗೆ ಮುಖ್ಯವಾಗಿ ತನು ಮತ್ತು ಮನದ ಕೊಳೆಯನ್ನು ಶುಭ್ರಗೊಳಿಸಲು ಜ್ಯೋತಿ ಬೇಕು. ನಮ್ಮಜೀವನಕ್ಕೂ ಜ್ಯೋತಿ, ಆರತಿ, ದೀಪ, ಹಣತೆಗೆ ಅವಿಸ್ಮರಣೀಯ ಸಂಬಂಧಗಳಿವೆ. ನಮಗೆ ಅನೇಕ ಕಷ್ಟ ತೊಂದರೆಗಳಾದರೆ ಬೆಳಕಿನ ಆಶಾಕಿರಣ ನಮ್ಮ ಹಿಂದೆ ಇರುತ್ತದೆ. ಇದೇ ಬೆಳಕಾಗಿ ನಮ್ಮನ್ನು ಎಚ್ಚರಿಸುತ್ತದೆ. ನಿರಾಶೆಯಲ್ಲಿ ಎಲ್ಲಾ ಬಾಗಿಲುಗಳು ಮುಚ್ಚಿದಾಗ ಒಳಗಣ್ಣಿನ ಬೆಳಕು ನಮ್ಮನ್ನು ಎಚ್ಚರಿಸುತ್ತದೆ. ಮಾನೋವೈಜ್ಞಾನಿಕತೆಯಲ್ಲಿ ಇದನ್ನು Sixth Sense ಎಂದು ಕರೆಯಲಾಗುತ್ತದೆ. ಶರಣರಲ್ಲಿ ನಮ್ಮೊಳಗಿನ ಶಿವ ಮತ್ತು ಬೆಳಕು ಒಂದರೊಳಗೊಂದು ಬೆಸೆದುಕೊಂಡಿರುತ್ತದೆ.
ಶರಣರ ಶೂನ್ಯಾನುಭಾವ ದಿವ್ಯಾನುಭಾವ ಬೆಳಕೇ ಆಗಿದೆ. ಅಲ್ಲಮ ಪ್ರಭುಗಳ ಬೆಳಗಿನ ವಿಕಾಸ ಈ ತೆರನಾಗಿದೆ.
ಎಣ್ಣೆ ಮತ್ತು ಪ್ರಣತಿ ಕೂಡಿ
ಜ್ಯೋತಿಯ ಬೆಳಗಯ್ಯಾ.
ಅಸ್ತಿ ಮಾಂಸ ದೇಹ ಪ್ರಾಣ ನಿಃಪ್ರಾಣವಾಯಿತ್ತು.
ದೃಷ್ಟಿ ಪರಿದು ಮನ ಮುಟ್ಟಿದ ಪರಿಯೆಂತೋ
ಮುಟ್ಟಿ ಲಿಂಗವ ಕೊಂಡಡೆ ಕೆಟ್ಟಿತ್ತು.
ಜ್ಯೋತಿಯ ಬೆಳಗು ಇದು ಕಷ್ಟವೆಂದರಿದೆನು
ಗುಹೇಶ್ವರ.
ಅಲ್ಲಮ ಪ್ರಭುಗಳು ಬೆಳಕನ್ನು ಸರಳೀಕರಿಸಿ ಹೇಳಿದರು. ಸಾಂಪ್ರದಾಯಿಕ ಜನರ ಜ್ಯೋತಿ ಭಕ್ತಿಯ ಮಾಧುರ್ಯವದು. ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ತ್ಯಾಗದ ಸಾರ್ಥಕತೆಯನ್ನು ಬಿಂಬಿಸುತ್ತದೆ. ಹಾಗೆಂದು ಅಂತರಂಗದ ಶಕ್ತಿಯನ್ನು ನಿರಾಕರಿಸುವುದಲ್ಲ. ಪ್ರಣತಿ ತನ್ನ ಅಸ್ತಿತ್ವ ಸೂಚಿಯಾದ ಬತ್ತಿ ಅಸಾಧರಣ ಶಕ್ತಿಯನ್ನು ಪಡೆದುಕೊಂಡಿದೆ. ಬತ್ತಿ ಸುಟ್ಟುಕೊಳ್ಳುವದೆಂದರೆ ನಮ್ಮಲ್ಲಿ ಅಡಕವಾಗಿರುವ ಅಹಂಕಾರವನ್ನು ಸುಟ್ಟುಕೊಳ್ಳುವುದಾಗಿದೆ. ಅಸ್ಥಿ ಮತ್ತು ಮಾಂಸ, ಅಗ್ನಿ ಮತ್ತು ಭೂಮಿ ತತ್ವಗಳ ಪ್ರತೀಕ ಹಾಗೂ ಮನುಷ್ಯ ದೇಹದ ಮೃದು ಅಂಗಾಂಶಗಳಾಗಿವೆ. ಈ ದೇಹ ಸಂಪೂರ್ಣ ಭೌತಿಕ ಸ್ವರೂಪದ್ದಾಗಿದೆ. ಪ್ರಭುಗಳು ಹೇಳುವಂತೆ ಅಸ್ಥಿ ಒಡಲ ಕತ್ತಲೆಯಲ್ಲಿ ಬೆತ್ತಲೆ ಹೊರಟ ಮಾಂತ್ರಿಕ ಪಯಣಿಗ. ನಮ್ಮಲ್ಲಿ ಅಡಗಿದ ಭಯ ಮತ್ತು ಆತಂಕಗಳನ್ನು ದ್ವೇಷ ಅಸೂಯೆ ದುಃಖದ ಕರಿನೆರಳನ್ನು ಹಿಮ್ಮೆಟ್ಟಿಸುವುದೇ ದೀಪದ ಹಬ್ಬವಾಗಿದೆ.
ವಾಸ್ತವ ಮತ್ತು ಸತ್ಯಗಳ ಮೂಲಕ ಕಾಣುವ ವಿವೇಚಿಸುವ ಅಂಶ ದೇಹ ಮತ್ತು ಮನಸ್ಸಿಗಿದೆ. ಅದು ಭಾವನಾತ್ಮಕವಾಗಿ ಪ್ರಚೋದಿಸುತ್ತವೆ. ಆ ಶಕ್ತಿ ಪ್ರಾಣಕ್ಕಿದೆ. ಪ್ರಾಣದಲ್ಲಿ ಲಿಂಗವನ್ನು ಕಂಡಂತಹ ಶರಣರು ಪ್ರಾಣಕ್ಕೆ ಬೆಳಕು ನೀಡುವ ಶಕ್ತಿ ತುಂಬುವ ತಾಕತ್ತಿದೆ. ಹಣತೆಯ ದೀಪಕ್ಕೆ ಬೆಂಕಿಯ ಗುಣಗಳಿದ್ದರೂ ಶಾಂತತೆಯ ಪ್ರತೀಕವಾಗಿ ಬಿಂಬಿಸುತ್ತದೆ. ನಮ್ಮ ಸಂಸ್ಕೃತಿ ಆದರ್ಶ ಪ್ರೀತಿ ಬಾಂಧವ್ಯಗಳನ್ನು ನಿತ್ಯ ಹಂಚಿಕೊಳ್ಳುತ್ತೇವೆ. ಸಮೂಹದ ಉದಯದಲ್ಲಿ ಶರಣರಿಗೆ ಲಿಂಗ ಪೂಜೆಯೇ ಬೆಳಕಿನ ಹಬ್ಬ. ಏಕೆಂದರೆ ತಮ್ಮ ಸರ್ವಸ್ವವನ್ನು ಲಿಂಗದ ಚಿತ್‌ಬೆಳಕಿನಲ್ಲಿ ಏಕವಾಗುವ ಲಿಂಗ ಶರೀರಿಯಾಗುವ ಅವಕಾಶ ಶರಣರಿಗಿತ್ತು.
“ಆತ್ಮದ ಬೆಳಗಿನಲ್ಲಿ ಲಿಂಗವ ಕಂಡೆ“ಎನ್ನುವ ಮಾತು ಆತ್ಮವಿಶ್ವಾಸದ ತತ್ವವದು. ಅಲ್ಲಮ ಪ್ರಭುಗಳು ತಮ್ಮನ್ನು ಶಿವ ಎನ್ನದೆ ಲಿಂಗವೆಂದು ಸ್ವೀಕರಿಸಿದ್ದಾರೆ. ಹಣತೆ ಸಾಮಾನ್ಯವಾಗಿ ಎಲ್ಲಾ ಕಾಲದ ಕವಿಗಳಿಗೆ ಸೃಜನತೆಯನ್ನು ಬಿಂಬಿಸುವ ವಾಸ್ತವತೆಯಾಗಿದೆ ಉದಾಹರಣೆಗೆ ರಾಷ್ಟ್ರಕವಿ ಡಾ. ಜಿ ಎಸ್. ಶಿವರುದ್ರಪ್ಪನವರು ತಮ್ಮ “ಗೋಡೆ (1972)” ಕವನ ಸಂಕಲನದಲ್ಲಿ ಹಣತೆಯನ್ನು ಕುರಿತು ಕವನವನ್ನು ಬರೆಯುತ್ತಾರೆ.
ನನ್ನ ಹಣತೆ:
ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ
ಭ್ರಾಂತಿ ನನಗಿಲ್ಲ,
ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
“ತಮಸೋ ಮಾ ಜ್ಯೋತಿರ್ಗಮಯಾ” ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.
ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.
ಆದರೂ ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
ಕವಿಗಳ ಈ ತೌಲನಿಕ ಮಾಹಿತಿ ಸದಾ ಆಕರ್ಷಕ.
ಶರಣರಲ್ಲಿ ಬಾಹ್ಯ ಬೆಳಕು ವಿಶಾಲವಾದದ್ದು. ಬದುಕಿನ ನಿರೀಕ್ಷೆಯನ್ನು ಹೊತ್ತು ಮಹತ್ವಾಕಾಂಕ್ಷಗಳನ್ನು ಸಮರ್ಥಿಸಿತ್ತದೆ. ಅಲ್ಲಮ ಪ್ರಭುಗಳ ವಚನಗಳಲ್ಲಿ ಆಧ್ಯಾತ್ಮಿಕ ಕಾವ್ಯಮಾರ್ಗ ಬೆಡಗಾಗಿದೆ.
ಜ್ಯೋತಿ ಕಂಡಾ ಇರಲು ಕತ್ತಲು ಕಂಡಾ
ನಿಧಾನ ಕಂಡಾ ಇರಲು ಬಡತನ ಕಂಡಾ
ಪ್ರಸಾದ ಕಂಡಾ ಕೊಂಡರೆ ಪ್ರಳಯ ಕಂಡಾ
ಗುಹೇಶ್ವರ ಕಂಡಾ ಇದು ಇದು ಬ್ರಾಂತು ಕಂಡಾ
ಅಲ್ಲಮ ಪ್ರಭುಗಳ ಈ ವಚನದಲ್ಲಿ ಒಂದು ವಿಶಿಷ್ಟತೆಯನ್ನು ಕಾಣಬಹುದು. ಜ್ಯೋತಿಯ ಬಗ್ಗೆ ಸಂದೇಹ ಕತ್ತಲಿನ ಶಕ್ತಿಯ ಸ್ವರೂಪ “ಜ್ಯೋತಿ ಕಂಡಾ ಇರಲು ಕತ್ತಲು ಕಂಡ” ಬೆಳಕು ಜ್ಯೋತಿ ಕತ್ತಲ ಬಗ್ಗೆ ಚರ್ಚೆ ಇದ್ದರೂ ಕೂಡ ಬೆಳಕಿನ ಹಬ್ಬವನ್ನು ಸ್ವೀಕರಿಸುವ ನಿರಾಕರಿಸುವ ಅನೇಕ ಸಂಗತಿಗಳನ್ನು ತರ್ಕಿಸುತ್ತಾರೆ. ಸಾಮಾನ್ಯವಾಗಿ ಜ್ಯೋತಿ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ನೀಡುವ ಪ್ರಜ್ವಲತೆಯದು. ಆಂತರಿಕ ದೈವಿಕ ಶಕ್ತಿಯನ್ನು ಜಾಗೃತಗೊಳಿಸುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಪರಿಕ್ರಮ ಜ್ಯೋತಿಗಿದೆ. ದೀಪ ಸ್ಥಾವರ ಪೂಜೆಗೆ ಮಾತ್ರ ಸೀಮಿತವಲ್ಲ. ಅಲೌಕಿಕ ಶಕ್ತಿಯನ್ನು ನಮ್ಮದಾಗಿಸಿಕೊಳ್ಳುವ ಕಾತರತೆಯದು. ದೇವರ ಮುಂದೆ ಹಚ್ಚುವ ಜ್ಯೋತಿ ದೈವತ್ವವನ್ನು ಆಹ್ವಾನಿಸುವ ಸಾಮರಸ್ಯವನ್ನು ಸೃಷ್ಟಿಸುವ ಪವಿತ್ರತೆಯದು. ನಮ್ಮ ಪ್ರವಚನಕ್ಕೆ ನಾಂದಿ ಹಾಡಲು ಜ್ಯೋತಿ ಬೇಕು. ಜ್ಯೋತಿ ಒಂದು ಶಕ್ತಿಯ ಮೂಲ ಸೆಲೆ. ಸಕಾರಾತ್ಮಕ ಶಕ್ತಿಯನ್ನು ನಂಬವ ವ್ಯಕ್ತಿಯನ್ನು ಭೌತಿಕ ಬದುಕಿನಿಂದ ಪಾರಮಾರ್ಥಿಕದೆಡೆ ಸೆಳೆಯುವುದಾಗಿದೆ. ಅಜ್ಞಾನದ ಕತ್ತಲನ್ನು ಹೊಡೆದೋಡಿಸಲು ದೀಪ ಬೇಕು. ಕತ್ತಲು ಕಂಡ ಅಜ್ಞಾನದ ಕೊರತೆಯಿಂದ ಉಂಟಾಗುವ ಅಂಧಕಾರ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ … ನಮ್ಮಲ್ಲಿ ಹುದುಗಿರುವ ಸಂಕುಚಿತ ಜ್ಞಾನವೇ ಅಜ್ಞಾನ. ನಮ್ಮ ಸಂಸ್ಕೃತಿ ಮತ್ತು ಸದಾಚಾರ ಗುಣಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇದ್ದಾಗ ಅದೇ ಕತ್ತಲು ಅಜ್ಞಾನ ಅಪವಿತ್ರತೆಯಾಗಿದೆ. ಇವೆಲ್ಲ ಒಂದೇ ಅರ್ಥ ಕೊಡುವ ಶಬ್ದಗಳಾದರೂ ಕತ್ತಲನ್ನು ಬೆಳಕನ್ನು ಸಮವಾಗಿ ಸ್ವೀಕರಿಸುವ ದೈವತ್ವದ ಸಾಧ್ಯತೆಯಾಗಿರುತ್ತದೆ.
ಬಡವ ಮತ್ತು ಶ್ರೀಮಂತ ಶಬ್ದಗಳಿಗೆ ಒಂದು ಅಂತರವಿದೆ. ಸಂದೇಹವಿದೆ. ಬಡವ ಶ್ರೀಮಂತಿಕೆಯನ್ನು ಕಾಣಲು ಸಾಧ್ಯವಿಲ್ಲ. ಬಡತನ ಕೇವಲ ದುಃಖವಲ್ಲ. ಸಿರಿತನ ಸಂತೋಷವಲ್ಲ. ಏಕೆಂದರೆ ಬದುಕಿನ ಎಲ್ಲಾ ಅವಕಾಶಗಳು ಬಡತನಕ್ಕೆ ಸಿಗುವುದಿಲ್ಲ. ಸ್ವಾರ್ಥ ಹೆಚ್ಚಿದಂತೆಲ್ಲ ಮನುಷ್ಯ ಶ್ರೇಷ್ಠ ಕನಿಷ್ಠವೆಂದು ವಿಭಾಗಿಸಿಕೊಂಡಿದ್ದಾನೆ.
ಪ್ರಸಾದ ಮತ್ತು ಪ್ರಳಯ ಎರಡು ವಿರುದ್ಧ ಶಬ್ದಗಳು. ಮನದ ಅಂತಃಕರಣವನ್ನು ಲಿಂಗಕ್ಕೆ ಅರ್ಪಿಸುವುದೇ ಪ್ರಸಾದ. ನೈವೇದ್ಯದ ಅರ್ಪಣೆಯೇ ಜ್ಯೋತಿಯದು. ಪ್ರಾಣದಲ್ಲಿ ಗುಹೇಶ್ವರನ ನೇರ ಸಂಪರ್ಕ ಪಡೆಯಲು ಮನದ ಪ್ರಸಾದ ನಮಗೆ ಬೇಕು. ಮನುಷ್ಯನ ದುರಾಸೆ ಹಿಂಸೆ ಅಟ್ಟಹಾಸಗಳು ಹೆಚ್ಚಾದಂತೆ ಪ್ರಳಯವಾಗುತ್ತದೆ. ಅದಕ್ಕೆ ಅಲ್ಲಮ ಪ್ರಭುಗಳು ಕೊಡುವ ಹಣತೆ ಬೆಳಕು ದೇಹವಾದರೆ ಬತ್ತಿ ತನ್ನನ್ನು ಸುಟ್ಟುಕೊಳ್ಳುತ್ತಾ ತನ್ನತನವನ್ನು ಪಡೆಯುವ ಜ್ಯೋತಿಯಾಗುತ್ತದೆ. ಬೆಳಕು ಪ್ರಜ್ವಲತೆ ಮತ್ತು ಜ್ಞಾನದ ಪ್ರತೀಕ, ಸತ್ಯದ ಪ್ರತೀಕವದು. ನಮ್ಮ ಸಂಸ್ಕೃತಿಯ ಅಧ್ಯಯನದಲ್ಲಿ ಅನುಮಾನಗಳೆ ತುಂಬಿದ್ದರಿಂದ ಈ ಬೆಳಕು ನಮಗೆ ಮಸುಕಾಗಿ ಕಾಣುತ್ತದೆ. ಅದಕ್ಕೆ ಸ್ಪಷ್ಟತೆಯನ್ನು ನೀಡಿದವರೇ ಶರಣರಾಗಿದ್ದರು.
ಜ್ಞಾನದಿಂದ ನಿಮ್ಮನರಿದೆನೆಂದಡೆ
ಅರಿವಿಂಗೆ ಬಂದಾಗಲೇ ಕುರುಹು
ಕುರುಹಿಂಗೆ ಕೇಡುಂಟು ಜ್ಞಾನವೆಂಬುದೇನು
ಮನೋಬೇಧ ಇಂತಪ್ಪ ಜ್ಞಾನದ ಕೈಯಲ್ಲಿ
ಅರುಹಿಸಿ ಕೊಂಡಡೆ ನೀ ದೇವನಲ್ಲ
ನಾ ಶರಣನಲ್ಲ ನೀ ದೇವ ನಾ ಶರಣನೆಂತಾದೆ
ಹೇಳಾ ಗುಹೇಶ್ವರ.
ಬೆಳಕಿನ ಪ್ರಜ್ಞೆಯು ಅಲ್ಲಮ ಪ್ರಭುಗಳಲ್ಲಿ ವಿಶೇಷ ರೀತಿಯಲ್ಲಿ ಅರ್ಥೈಸಲು ಸಾಧ್ಯವಾಗುತ್ತದೆ. ಜ್ಞಾನದಿಂದ ನಿಮ್ಮ ನರಿದೆನೆಂದಡೆ … ಜ್ಞಾನವೆಂಬುದು ಅರಿವಿನ ಕ್ರಮ. ಶಿಸ್ತಿನ ಬದುಕಿನ ಅನುಭವಗಳನ್ನು ಮುಂದು ಮಾಡುತ್ತದೆ.
ಇನ್ನೊಂದು ಕ್ರಮವೆಂದರ “ದೇಶ ಸುತ್ತಿ ನೋಡು ಕೋಶ ಓದಿ ನೋಡು” … ಸಜ್ಜನರ ಸಹವಾಸ ಚಿಂತನಗಳಿಂದ ಆಧ್ಯಾತ್ಮಿಕ ಶಕ್ತಿಯ ಅನುಭವ ಅನುಭಾವವಾಗುತ್ತದೆ. ಅರಿವು ಕುರುಹಿನ ಅವಲೋಕನದಲ್ಲಿ ಶರಣರ ಜ್ಞಾನ ಒಂದು ಮಿತಿಗೆ ಸೀಮಿತವಾಗುವ ಅನುಭಾವವಲ್ಲ. ಅದು ಒಮ್ಮೆ ಬೆಳಕಾಗುತ್ತದೆ. ಅರಿವು ಕುರುಹಾಗಿ ಕಾಡುತ್ತದೆ. ಅರಿವು ಗುಹೇಶ್ವರ ಲಿಂಗದ ಶೋಧ. ಮರೆವು ಜೀವನದ ಕುರುಹು. ಮರೆವು ಅರಿವಾದಾಗ ಜೀವ ದೇವನಾಗುವನು. ಅಲ್ಲಮ ಪ್ರಭುಗಳು ಪ್ರಶ್ನಿಸುವಂತೆ “ನಾನಾ ಮನೋಭೇದವೇ” … ಅಷ್ಟಮದಗಳಲ್ಲಿ ಜ್ಞಾನದ ಮದ ತುಂಬಾ ಅಪಾಯವಾದದ್ದು. “ನಾ ದೇವನಲ್ಲದೆ ನೀ ದೇವನೇ” … ಈ ವಚನವನ್ನು ನೆನಪಿಸಿಕೊಳ್ಳಬೇಕು. ದೇವರ ಅಸ್ತಿತ್ವವನ್ನು ನಿರಾಕರಿಸಿ ಶರಣತ್ವವನ್ನು ಸ್ವೀಕರಿಸಿಕೊಳ್ಳುವ ದೈವದ ಭಾವವದು.
ಜ್ಞಾನದ ಶಿಸ್ತು ಸಂಯಮದ ಜೀವನ ಬೆಳಕನ್ನು ಮುಂದು ಮಾಡುವ ಜ್ಯೋತಿಯ ಆಕರವದು. ಎಣ್ಣೆಯ ಹಣತೆ ಹೋರಾಟದ ರೂಪಕವಾಗಿದೆ. ಅಷ್ಟೇಯಲ್ಲ ಬದುಕಿಗೆ ಶಿಸ್ತಿನ ಕ್ರಮವನ್ನು ಬಿಂಬಿಸುತ್ತದೆ. ಒಂದು ಬೀಜದಿಂದ ಹಲವು ಸಸಿಗಳಾಗುವಂತೆ ಒಂದು ಜ್ಯೋತಿಯಿಂದ ಹಲವಾರು ಜ್ಞಾನದ ಜ್ಯೋತಿಯನ್ನು ಹಚ್ಚಲು ಸಾಧ್ಯವಾಗುವುದು. ಶರಣತ್ವವೆಂಬ ಬತ್ತಿ ಭಕ್ತಿಯ ಎಣ್ಣೆಯಿಂದ ಜ್ಞಾನವೆಂಬ ಬೆಳಕು ಬೆಳಗಿ ತಾಮಸವನ್ನು ದೂರ ಮಾಡುವ ಪ್ರಕ್ರಿಯೆ ಶರಣರದಾಗಿತ್ತು. ಹೀಗಾಗಿ ಶರಣರು ದೀಪಾವಳಿಯ ಪರ್ವಕ್ಕೆ ತಮ್ಮದೇ ಆದ ಮುಕ್ತತೆಯನ್ನು ಧರ್ಮಕ್ಕೆ ಸಮಾಜಕ್ಕೆ ನೀಡಿದ್ದರು. ವಿಶ್ವಸಮಾಜದ ಬೆಳಕಿನಲ್ಲಿ ಶರಣರ ಸ್ವತಂತ್ರ ವಿಚಾರಗಳನ್ನು ಶರಣಾಗತಿ ಭಾವದಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ.
ಧೂಪ ದೀಪಾದಾರತಿಯ ಬೆಳಗುವಡೆ
ನೀನು ಸ್ವಯಂ ಜ್ಯೋತಿ ಪ್ರಕಾಶನು
ಅರ್ಪಿತವ ಮಾಡುವಡೆ ನೀನು
ನಿತ್ಯ ತೃಪ್ತನು ಅಷ್ಟವಿದಾರ್ಚನೆಯ
ಮಾಡುವಡೆ ನೀನು ಮುಟ್ಟಬಾರದ
ಘನವೇದ್ಯನು ನಿತ್ಯನೇಮಂಗಳ
ಮಾಡುವಡೆ ನಿನಗೆ ಅನಂತ ನಾಮಂಗಳಾದವು
ಗುಹೇಶ್ವರ.
ಶಿವನಿಗೆ ಧೂಪ ದೀಪದಾರತಿ ಆಹ್ಲಾದ ಮತ್ತು ಸಂತೋಷ ಕೊಡುವ ತತ್ವಗಳಾಗಿವೆ. ಬಹಿರಂಗ ಲಿಂಗಪೂಜೆಯ ವಿಧಾನದಲ್ಲಿ ಅಗ್ನಿತತ್ವದ ಶಕ್ತಿಯಿಂದ ನಮ್ಮ ಸುತ್ತಲಿನ ವಾತಾವರಣ ಮತ್ತು ಮನೆ, ಮನ ಶಾಂತತೆಯನ್ನು ಪಡೆದುಕೊಳ್ಳುತ್ತದೆ. ಅಗ್ನಿ ಧೂಪದಿಂದ ಪವಿತ್ರಗೊಳಿಸುವ ಸಮರ್ಥನೆಯಾಗಿದೆ. ಆದರೆ ಶರಣರು ಅರ್ಚನೆ ಅರ್ಪಿತ ಆಚಾರ ಅವಧಾನಗಳನ್ನು ವೈದಿಕ ಆಚರಣೆಗಳನ್ನು ನಿರಾಕರಿಸುತ್ತಾರೆ. ಅಲ್ಲಮರು ತಮ್ಮನ್ನು ಗುಹೆಶ್ವರನಿಗೆ ಅರ್ಪಿಸಿ ಕೊಳ್ಳ ಬೇಕಾದರೆ ನೀನು ಸ್ವಯಂ ಜ್ಯೋತಿ ಪ್ರಕಾಶಕರೆಂದು ಹೇಳಿದ್ದನ್ನು ಗಮನಿಸಬೇಬೇಕು. ಅಷ್ಟವಿದಾರ್ಚನೆಯ ಮಾಡುವಡೆ … ಪೂಜಾ ವಿಧಾನದಲ್ಲಿ ಆಡಂಬರರಹಿತ ಜೀವನಕ್ಕೆ ಮಾರು ಹೋಗಿದ್ದರು. ಹೀಗಾಗಿ ದೇಹವು ದೀಪದ ಕಂಬಕ್ಕೆ ಹೋಲಿಸಿದ್ದಾರೆ. ಇಂದ್ರಿಯಗಳೇ ಹಣತೆಯನ್ನು ತತ್ವವಾಗಿಸಿದ್ದಾರೆ. ಎಣ್ಣೆ ಸೂಕ್ಷ್ಮದೇಹದ ದಿವ್ಯ ಶಕ್ತಿಯಾಗಿದೆ. ಹೀಗಾಗಿ ಶರಣರ ಆತ್ಮಪೂಜೆ ಧರ್ಮದ ಘನತೆಯ ಪ್ರತೀಕವಾಗಿದೆ. ಲಿಂಗಪೂಜೆ ಶರಣಲ್ಲಿ ಕಾಣುವ ಪ್ರಮುಖ ಪೂಜಾ ವಿಧಾನವಾಗಿದೆ. ನೆನಹು ನಿರೀಕ್ಷಣೆ ಅನುಸಂಧಾನಗಳು ಮೂರು ಘಟ್ಟಗಳಿಂದ ಕೂಡಿರುತ್ತದೆ. ಪೂಜೆಯ ಪರಿಕ್ರಮದಲ್ಲಿ ಆಡಂಬರ ಪೂಜೆಗೆ ಅವಕಾಶವಿಲ್ಲ. ಶರಣರು ಅಷ್ಟವಿಧಾರ್ಚನೆ ಷೋಢಶೋಪಚಾರಗಳನ್ನು ಖಂಡಿಸಿದ್ದಾರೆ. ಅದರೆ ಅನಾದಿ ಕಾಲದಿಂದಲೂ ನಮ್ಮ ಧರ್ಮದಲ್ಲಿ ಮುಗ್ದತೆ ಮತ್ತು ಅರಿವಿನ ಕೊರತೆಯಿಂದ ಅಷ್ಟವಿದಾರ್ಚನೆ ಷೋಢಶೋಪಚಾರಗಳನ್ನು ಆಚರಿಸುತ್ತಾ ಬಂದಿದ್ದಾರೆ. ಈ ಆಚರಣೆಗಳು ಶೈವಧರ್ಮದ ಸ್ಥಾವರ ಪೂಜೆಯ ಅನುಕರಣೆಯೆಂದು ಸ್ಪಷ್ಟಪಡಿಸಬಹುದು. “ನಿತ್ಯ ನೇಮವ ಮಾಡುವಡೆ ಅನಂತನಾಮಂಗಳಾದವು” ಇಲ್ಲಿ ಸ್ಥಾವರಪೂಜಾ ವಿಧಾನಕ್ಕೆ ಆಸ್ಪದವಿಲ್ಲ.
ಧೂಪ ದೀಪದಾರತಿಯ ಆಚರಣೆಗಳು ಒಂದು ಸಾಂಸ್ಕ್ರತಿಕ ಆಚರಣೆಗಳನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ನಮ್ಮ ಹಿರಿಯರಿಂದ ಪಡೆದುಕೊಂಡು ಬಂದ ಶಕ್ತಿಯೂ ಹೌದು. ಇದರಲ್ಲಿ ನಮ್ಮ ಜನಪದರ ಭಯ ನಿಷ್ಠೆ ಶ್ರದ್ಧೆ ಆಸಕ್ತಿ ಮತ್ತು ತತ್ವದ ಆಚರಣೆಯೂ ಇದೆ. ಇಂತಹ ದೀಪದ ಹಬ್ಬವನ್ನು ವೈಚಾರಿಕವಾಗಿ ವಿಶಾಲವಾಗಿಸಬೇಕು.
ಡಾ. ಸರ್ವಮಂಗಳ ಸಕ್ರಿ.
ಲೇಖಕರು | ಅಧ್ಯಕ್ಷರು |
ಜಾಗತಿಕ ಲಿಂಗಾಯತ ಮಹಾಸಭಾ, ಮಹಿಳಾ ಘಟಕ,
ರಾಯಚೂರು.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51417