
ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಎಂಬ ಪ್ರಕಾರ ಹೆಚ್ಚು ರಚನೆಯಾಗಿ ಅಧಿಕೃತವಾಗಿ ಬೆಳಕಿಗೆ ಬಂದಿದ್ದು 12 ನೇ ಶತಮಾನದ ಶರಣ ಯುಗದಲ್ಲಿ. ಅದಕ್ಕೂ ಮೊದಲು ವಚನಗಳು ರಚನೆಯಾಗಿತ್ತು. ಜೇಡರ ದಾಸಿಮಯ್ಯ ಮೊದಲ ವಚನಕಾರರಾಗಿ ಕಂಡು ಬರುತ್ತಾರೆ. ಶರಣ ಯುಗದಲ್ಲಿ ರಚನೆಯಾದ ವಚನಗಳು ಸ್ವತಂತ್ರ ಭಾಷಾ ರಚನೆಯಿಂದ ಸರಳ, ಅಚ್ಚಗನ್ನಡ ಸೊಗಡಿನಿಂದ ಎಲ್ಲರ ಗಮನ ಸೆಳೆಯುವಂತೆ ಆಯಿತು. ಈ ಯುಗದಲ್ಲಿ ಒಂದು ಇಡೀ ಸಮೂಹವೇ ವಚನಗಳ ರಚನೆಯಲ್ಲಿ ಜಾತಿ, ವರ್ಗ, ವರ್ಣ, ಹೆಣ್ಣು, ಗಂಡು ಎಂಬ ಯಾವ ತಾರತಮ್ಯಕ್ಕೆ ಒಳಗಾಗದೆ ಸಾಮಾಜಿಕ ಕ್ರಾಂತಿಗೆ ವಚನವನ್ನು ಮಾಧ್ಯಮವಾಗಿಸಿಕೊಂಡು ಅಸಂಖ್ಯಾತ ವಚನಗಳನ್ನು ರಚನೆ ಮಾಡಿದ್ದು ವಿಶೇಷ.
“ವಚನ” ಎಂದರೆ ಪ್ರತಿಜ್ಞೆ, ಆತ್ಮ ಸಾಕ್ಷಿ, ಮಾತು ಎಂದಾಗುತ್ತದೆ. ನಡೆದಂತೆ ನುಡಿವ ಆತ್ಮಸಾಕ್ಷಿಯ ವಾಣಿ “ವಚನ” ಗಳಾದವು. ಕಾವ್ಯಮಯವಾಗಿ ಗದ್ಯದೊಡನೆ ರೂಪುಗೊಂಡವು. ಅಂದಿನ ಕಾಲಘಟ್ಟದ ಸಾಹಿತ್ಯ ರಚನೆಯಲ್ಲಿದ್ದ ಛಂದಸ್ಸು, ಅಲಂಕಾರ, ಸಂಸ್ಕೃತ, ಹಳೆಗನ್ನಡ, ಸ್ವಾಮಿನಿಷ್ಠೆ, ರಾಜಾಶ್ರಯಗಳೆಂಬ ಹಲವು ಕಟ್ಟುಪಾಡುಗಳಿಗೆ ಒಳಪಟ್ಟಿದ್ದವು. ಆದರೆ ವಚನಗಳು ಮುಕ್ತವಾಗಿ “ಅನು ಒಲಿದಂತೆ ಹಾಡುವೆ” ಎಂಬಂತೆ ತಮ್ಮ ತಮ್ಮ ಬುದ್ಧಿ ಭಾವಗಳ ಮಿಳಿತದಲ್ಲಿ ಹೃದಯದ ಧ್ವನಿಗೆ ಹತ್ತಿರವಾಗಿಸಿಕೊಂಡು ಬರೆಯಲ್ಪಟ್ಟವು. ವಚನಗಳೆಂದರೆ ಭರವಸೆ. ಕನ್ನಡ ಸಾಹಿತ್ಯಕ್ಕೆ ಮಕುಟ ಮಣಿ. ಅವರು ಮಾತಾಡಿದ್ದು ತಮ್ಮ ಕಾಯಕ ಪರಿಭಾಷೆಯ ಮೂಲಕ. ಪ್ರತಿಯೊಬ್ಬ ಶರಣರ ವಚನಗಳು ಮೇಲ್ನೋಟಕ್ಕೆ ಒಂದೇ ಆಗಿ ಕಂಡರೂ ಕೂಡ ಅವುಗಳ ಸ್ವರೂಪ, ಸಂವೇದನೆ ವಚನಕಾರರ ಜ್ಞಾನ ತೇಜಸ್ಸಿನಿಂದ ಅನನ್ಯವೆನಿಸಿದೆ. ಅಂತರಂಗ ಬಹಿರಂಗಗಳ ಆತ್ಮ ಶುದ್ಧತೆಯಿಂದ ಜೀವ, ಕಾಯಕ, ದಾಸೋಹಗಳು ನೈತಿಕ ಧೀ-ಶಕ್ತಿಯಾಗಿ ಅವರ ಜೊತೆಯಾಯಿತು. ಕವಿ-ಕಾವ್ಯ ಎರಡೂ ಒಂದೇ ಆಗಿ, ಅನುಭವಗಳು ಅನುಭಾವವಾಗಿ ಅಚ್ಚಗನ್ನಡದ ದೇಸಿ ಶೈಲಿಯಲ್ಲಿ ಜನಸಾಮಾನ್ಯರಿಂದ ರಚನೆಯಾಗಿದ್ದು ವಚನ ಸಾಹಿತ್ಯ. ಇದೊಂದು ಅನನ್ಯವಾದ ಪ್ರಯೋಗವಾಗಿದ್ದು ಕನ್ನಡ ಸಾಹಿತ್ಯಕ್ಕಷ್ಟೇ ಅಲ್ಲ ಜಾಗತಿಕ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿದೆ.
“ವಚನ” ಎಂದರೆ ಮಾತು ಎಂಬುದೇ ಸಾಹಿತ್ಯ ರೂಪವಾಗಿ, ಭಾವಗೀತದ ಲಕ್ಷಣಗಳಿಂದ ಕೂಡಿದ ಅನುಭಾವ ಗದ್ಯ-ಪದ್ಯಗಳ ಸಮ್ಮಿಶ್ರಣದ ಹೃದಯದ ಒಲುಮೆಯ ಹಾಡು. ಆಧ್ಯಾತ್ಮದ ತಳಹದಿಯ ಮೇಲೆ ಸಾಮಾಜಿಕ, ನೈತಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಭಾವಗಳ ಬೆಸುಗೆಯಲ್ಲಿ ಹೆಣೆದ ವಿನೂತನ ಪ್ರಯೋಗವೇ ಆಗಿದೆ. ತಮ್ಮ ಅಂತರಂಗದ ಆಳವಾದ ಅನುಭವಕ್ಕೆ ಕನ್ನಡಿ ಹಿಡಿದಂತೆ ಆತ್ಮ ನಿರೀಕ್ಷಣೆಯನ್ನು ಮಾಡಿಕೊಂಡಿದ್ದಾರೆ. ಶರಣರ ವಚನಗಳು ಬರೀ ಕಲ್ಪನೆ, ಪ್ರತಿಭೆಯ ವಿನ್ಯಾಸವಲ್ಲ. ಇವು ಆತ್ಮದ ಸಂಭಾಷಣೆ. ನಂಬಿದಂತೆ ನಡೆದರು, ನಡೆದಂತೆ ನುಡಿದ ಆತ್ಮ ಸಂಭಾಷಣೆಯ ತವನಿಧಿ. ವಚನ ಪರಂಪರೆ ಒಂದು ಧರ್ಮ ತತ್ವ, ಸಿದ್ಧಾಂತಗಳ ಪರಂಪರೆಯಲ್ಲಿ ಉಗಮವಾದರೂ ಅದು ತನ್ನ ದರ್ಶನದಿಂದ ವ್ಯಕ್ತಿಗತವಾದ ನೆಲೆಯನ್ನು ದಾಟಿ ವಿಶ್ವಮಾನ್ಯವಾದ ಘನತೆಯನ್ನು ಪಡೆಯಿತು. ಹಳೆಗನ್ನಡದಿಂದ ಹೊಸಗನ್ನಡಕ್ಕೆ ಪರಿವರ್ತನೆಯಾಗುತ್ತಿರುವ ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಭಕ್ತಿ ಪಾರಮ್ಯವನ್ನು ಎತ್ತಿ ಹಿಡಿಯುವುದರ ಜೊತೆಗೆ, ಅನುಭಾವಿ ವಚನಕಾರರ ಪರಂಪರೆ ಸೃಷ್ಟಿಯಾಯಿತು. ಕಾಯಕ ಚರಿತರಾದ ವಚನಕಾರರು ಮಾತಾಡಿದ್ದೇ ತಮ್ಮ ಕಾಯಕ ಪರಿಭಾಷೆಯ ಮೂಲಕ ಮೇಲ್ನೋಟಕ್ಕೆ ಒಂದೇ ಆಗಿ ಕಂಡರೂ ಅವುಗಳ ಸ್ವರೂಪ, ಸಂವೇದನೆ ವಚನಕಾರರ ವ್ಯಕ್ತಿತ್ವದ ತೇಜಸ್ಸಿನಿಂದ ಅನನ್ಯವೆನಿಸಿದೆ. ಶ್ರೀ. ರಂ. ಶ್ರೀ. ಮುಗಳಿಯವರು ತಮ್ಮ ಸಾಹಿತ್ಯ ಚರಿತ್ರೆಯಲ್ಲಿ:
“ವಚನಗಳೆಂದರೆ ನಡುಗನ್ನಡ ಶೈಲಿಯ ಅನುಭಾವ ಗದ್ಯದಲ್ಲಿ ಉಸುರಿದ ಆಧ್ಯಾತ್ಮಿಕ ಭಾವಗೀತೆಗಳು. ಜಗತ್ತಿನ ಸಾಹಿತ್ಯದಲ್ಲಿ ಇವುಗಳನ್ನು ಹೋಲುವ ರೂಪವೇ ಇಲ್ಲವೆನ್ನಬಹುದು. ಅನುಭಾವದ ಕಾವ್ಯರೂಪ ಕನ್ನಡಕ್ಕೆ ಅಪೂರ್ವ ಕೊಡುಗೆ”
ಎಂದಿದ್ದಾರೆ.
ಆದ್ಯ ವಚನಕಾರರಾಗಿ ಜೇಡರ ದಾಸಿಮಯ್ಯನವರು ಬಸವಣ್ಣನವರ ಹಿರಿಯ ಸಮಕಾಲೀನರೆಂದು ಇವರ ವಚನಗಳ ಆಧಾರದಿಂದ ವಚನ ಪರಂಪರೆ ಮೊದಲೇ ಇತ್ತು ಎಂದು ಹೇಳಲಾಗುತ್ತದೆ. ಶಂಕರ ದಾಸಿಮಯ್ಯ, ಸಕಲೇಶ ಮಾದರಸ, ಪ್ರಭುದೇವ ಇವರನ್ನು ಗುರುತಿಸಿದ ನಂತರದ ಬಸವಯುಗದಲ್ಲಿ ಶರಣರ ದೊಡ್ಡ ಸಮೂಹವೇ ಕ್ರಾಂತಿಯಲ್ಲಿ ಪಾಲ್ಗೊಂಡು ವಚನ ರಚನೆಯ ಜೊತೆಗೆ ಕಾಯಕ-ದಾಸೋಹದಲ್ಲೂ ಹೆಸರು ಮಾಡಿದ ಶರಣ ಶರಣೆಯರು ಕಂಡು ಬರುತ್ತಾರೆ. ಆಧ್ಯಾತ್ಮ ಸಾಧನೆಯ ಜೊತೆಗೆ ಅಂತರಂಗ ಬಹಿರಂಗ ಶುದ್ಧತೆಯ ಶರಣ ಸಂಕುಲವೇ ಕಂಡು ಬಂತು. ವಚನಗಳು ಸಹಜ ಸ್ಫೂರ್ತಿಯಿಂದ ಇಷ್ಟದೇವತೆಗಳ ಎದುರು ತಮ್ಮ ಆತ್ಮ ನಿರೀಕ್ಷಣೆ ಮಾಡಿಕೊಳ್ಳುತ್ತಾ, ಸ್ವಂತ ಕಾಯಕದೊಳಗೆ ಪಾರಮಾರ್ಥಿಕ ಅನುಭಾವ ಕಂಡು ಸಂಬೋಧನಾ ರೂಪವಾದ ತಮ್ಮ ಅಂಕಿತಗಳಿಂದ ಮುಕ್ತಾಯವಾಗುತ್ತದೆ.
ಹಳೆಗನ್ನಡವು ಹೊಸಗನ್ನಡವಾಗಿ ರೂಪಾಂತರವಾದ ಸಂಧಿಕಾಲದ ನಡುಗನ್ನಡ ಶೈಲಿಯ ಪ್ರಯೋಗವಾಗಿದೆ, ಅನುಭಾವಿಗಳ ಆತ್ಮ ಮಂಥನದಿಂದ ವಚನ ಸಾಹಿತ್ಯ ಹೊರಹೊಮ್ಮಿತು. ವಚನಗಳಲ್ಲಿ ರಸಭಾವ ಅಲಂಕಾರಗಳು, ಉದಾತ್ತ ಧ್ಯೇಯಗಳು ಇರುವುದರಿಂದ ಉತ್ತಮ ಸಾಹಿತ್ಯವೆಂದು ಧಾರಾಳವಾಗಿ ಹೇಳಬಹುದು. ವಚನಗಳು ಕನ್ನಡ ಸಾಹಿತ್ಯದ ಅಪೂರ್ವ ರತ್ನ. ವಚನಕಾರರು ಕನ್ನಡ ಸಾಹಿತ್ಯದ ರಸ ಋಷಿಗಳು. ಇಲ್ಲಿ ವ್ಯಕ್ತಿತ್ವ ಮಹಿಮೆ, ಜೀವನ ಸಿದ್ಧಿ, ಆತ್ಮಾನುಭವ, ದೃಷ್ಟಿ ವೈಶಾಲ್ಯತೆ. ಸತ್ಯ, ಧರ್ಮ ದರ್ಶನ ಇವು ವಚನಕಾರರಲ್ಲಿತ್ತು. ಅದರಿಂದಲೇ ವಚನಗಳು ಇಂದಿಗೂ ಪ್ರಸ್ತುತವಾಗಿದೆ.
12 ನೇ ಶತಮಾನದ ವಚನಕಾರರು ನಾವು ಸಾಹಿತ್ಯ ರಚನೆಮಾಡುತ್ತಿದ್ದೇವೆ ಎಂದು ಪ್ರಜ್ಞಾಪೂರ್ವಕವಾಗಿ ಬರೆದವರಲ್ಲ. ಧಾರ್ಮಿಕ, ಸಾಮಾಜಿಕ ಚಳುವಳಿಯಲ್ಲಿ ಭಾಗಿಗಳಾಗಿ ಅಲ್ಪ ಸ್ವಲ್ಪ ಬರೆಯಬಲ್ಲ ಶಕ್ತಿಯಿದ್ದವರೆಲ್ಲಾ ಬರವಣಿಗೆಗೆ ತೊಡಗಿಕೊಳ್ಳಲು ಆ ಕಾಲವು ಪ್ರೇರಣೆ ಉಂಟುಮಾಡಿತು. ನೂರಾರು ವಚನಕಾರರ ಮೂಲಕ ಚಳುವಳಿಯ ವಿವಿಧ ಅಂಶಗಳು ತೀವ್ರ ಚರ್ಚೆಗೆ ಒಳಗಾದವು. ಶರಣರ ವಚನಗಳು ವೈಯಕ್ತಿಕ ನೆಲೆಯಿಂದ ಮೂಡಿಬಂದರೂ ಅವು ಸಮಷ್ಟಿ ಪ್ರಜ್ಞೆಯನ್ನು ಒಳಗೊಂಡೇ ಚಳುವಳಿಗೆ ಸ್ಪಷ್ಟ ರೂಪವನ್ನು ಕೊಟ್ಟಿತು. ಬಸವಾದಿ ಶರಣರ ಆಶಯ, ತತ್ವ, ಸಿದ್ಧಾಂತಗಳು ಸರಳ ಅಚ್ಚಗನ್ನಡದಲ್ಲಿ ವಚನಗಳ ಮೂಲಕ ಅಭಿವ್ಯಕ್ತಗೊಂಡಿತು. ವಚನ ಸಾಹಿತ್ಯ ಹುಟ್ಟಿದ್ದು ಸಾಮಾನ್ಯ ಜನರಿಂದ ಶ್ರಮಿಕರಿಂದ, ಅನಕ್ಷರಸ್ಥ ಕೆಳವರ್ಗದವರಿಂದ ಹುಟ್ಟಿ ಅವರಿಗಾಗಿಯೇ ಭಾಷೆ ಸರಳವಾಯಿತು. ಎಲ್ಲಿ ಒಂದು ವರ್ಗ ತಟಸ್ಥವಾಗಿತ್ತೊ ಅಲ್ಲಿ ತಡೆ ಹಿಡಿದ ನೀರು ಪುಟಿಯುವ ಕಾರಂಜಿಯಂತೆ ವಚನಗಳು ಎಲ್ಲರಿಂದ ಆಕರ್ಷಿತಗೊಂಡು ಮಾನ್ಯವಾಯಿತು. ಪ್ರಸಿದ್ಧವಾಯಿತು. ನಮ್ಮ ಕನ್ನಡ ಸಾಹಿತ್ಯ ಪರಂಪರೆಗೆ ವಚನ ಸಾಹಿತ್ಯ ಅಮೂಲ್ಯ ಹೊನ್ನಿನ ಕಳಸವಾಯಿತು.
ಮುಂದೆ 15 ನೇ ಶತಮಾನದಲ್ಲಿ ಶರಣರ ವಚನಗಳು ಸಂಕಲನ, ಸಂಪಾದನೆಗೆ ಒಳಪಟ್ಟಿತು. ಶೂನ್ಯ ಸಂಪಾದನೆಯಂತಹ ಕೃತಿಗಳಲ್ಲಿ ವಚನಗಳನ್ನು ಕಥನ-ಸಂವಾದದ ರೂಪದಲ್ಲಿ ಅತ್ಯಂತ ಸೃಜನಶೀಲವಾಗಿ ಸೇರ್ಪಡೆಗೊಂಡಿತು . ಕ್ರಿ. ಶ. 1420 ರಲ್ಲಿ ಮೊಟ್ಟ ಮೊದಲಿಗೆ “ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ” ಅನಂತರ ಕ್ರಿ. ಶ. 1500 ರ ಹೊತ್ತಿಗೆ ಹಲಗೆಯಾರ್ಯನಿಂದ ಪರಿಷ್ಕೃತವಾಯಿತು. ನಂತರ ಗುಮ್ಮಳಾಪುರದ ಸಿದ್ಧಲಿಂಗಯತಿಗಳಿಂದ ಕ್ರಿ. ಶ. 1560 ರ ಕಾಲದಲ್ಲಿ ಎರಡನೆಯ ಬಾರಿಗೆ ಪರಿಷ್ಕರಣೆಗೊಂಡು ಮತ್ತೆ ಗುಳೂರು ಸಿದ್ಧವೀರಣ್ಣ ಒಡೆಯರಿಂದ ಕ್ರಿ. ಶ. 1600 ರಲ್ಲಿ ಮೂರನೆಯ ಮತ್ತು ಕೊನೆಯ ಬಾರಿ ಪರಿಷ್ಕರಣಕ್ಕೆ ಒಳಗಾಯಿತು. ನಂತರ ಬಂದ ಶೂನ್ಯ ಸಂಪಾದನೆಗಳಲ್ಲೂ ಶರಣರ ಜೀವನವನ್ನು ಕಟ್ಟಿಕೊಡುವುದರ ಜೊತೆಗೆ ಅವರ ವಚನಗಳನ್ನು ಸಾಕಷ್ಟು ಸೃಜನಶೀಲ ರೀತಿಯಲ್ಲಿ ಬಳಸಿಕೊಳ್ಳಲಾಯಿತು. ನಂತರ ಬಂದ ವಿವಿಧ ಸಂಕಲನಕಾರರು ವಚನಗಳನ್ನು ಷಟ್‌ಸ್ಥಲಗಳಿಗೆ ಅನುಗುಣವಾಗಿ ವಿಂಗಡಣೆ ಮಾಡಿದರು. ಕಲ್ಲುಮಠದ ಪ್ರಭುದೇವ, ಮಹಾದೇವ, ಗುಬ್ಬಿಯ ಮಲ್ಲಣ್ಣಾರ್ಯ ಮುಂತಾದವರು ವಚನಗಳಿಗೆ ವ್ಯಾಖ್ಯಾನವನ್ನು ಬರೆದರು. ಸಿಂಗಳದ ಸಿದ್ಧಬಸವರಾಜದೇವನು ಬೆಡಗಿನ ವಚನಗಳನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಾನೆ. ಹೀಗಾಗಿ ಈ ಕಾಲಘಟ್ಟವನ್ನು ಸಂಗೋಪನ ಯುಗವೆಂದು ಕರೆಯಲಾಗುತ್ತದೆ. ವಚನಗಳ ಸಂಕಲನ ಸಂಪಾದನೆಗಳಿಂದಾಗಿ ಅದರ ಶುದ್ಧತೆಯನ್ನು ಕಡಿಮೆ ಮಾಡುವಂತ ಪ್ರಕ್ಷಿಪ್ತ ವಚನಗಳು ಈ ಕಾಲದಲ್ಲಿ ತಲೆ ಎತ್ತಿದವು. ಶರಣರ ವಚನಗಳಲ್ಲಿ ಸೇರಿಕೊಂಡ ಅನ್ಯ ಚಿಂತನಾ ಭಾವಗಳು, ವಚನಗಳು ಶರಣ ಆಶಯ ಚಿಂತನೆಗಳಿಗೆ ವಿರುದ್ಧವಾಗಿತ್ತು. ಅವು 12 ನೇ ಶತಮಾನದ ಶರಣರ ವಚನಗಳು ಎಂಬಂತೆ ಇವತ್ತಿಗೂ ಬಿಂಬಿತವಾಗುತ್ತಿವೆ.
16 ನೇ ಶತಮಾನದಿಂದ ಮತ್ತೆ ಸ್ವತಂತ್ರ ವಚನ ರಚನೆಯು ಕಂಡುಬಂತು. ತೋಂಟದ ಸಿದ್ಧಲಿಂಗಯತಿಗಳು ನಂತರದ 43 ಮಂದಿ ವಚನಕಾರರು ವಚನಗಳನ್ನು ರಚನೆ ಮಾಡಿದ್ದಾರೆ. ವಚನಕಾರರು ತಮ್ಮ ವಚನಗಳನ್ನು ಸೀಮಿತ ಉದ್ದೇಶದಿಂದಲೇ ರಚಿಸಿರುವುದು ಅವರು ಸಂಪುಟಗಳಿಗೆ ಕೊಟ್ಟ ಶೀರ್ಷಿಕೆಗಳಿಂದಲೇ ತಿಳಿದುಬರುತ್ತದೆ.
- ಕಾಡಸಿದ್ಧೇಶ್ವರರ ಕೃತಿ “ವೀರಶೈವ ಷಟ್‌ಸ್ಥಲ”
- ತೋಂಟದ ಸಿದ್ಧಲಿಂಗಯತಿಗಳ “ಷಟ್‌ಸ್ಥಲಜ್ಞಾನಸಾರಾಮೃತ”
- ಇಮ್ಮಡಿ ಗುರುಸಿದ್ಧನ ಕೃತಿ “ಶೂನ್ಯ ಮಂತ್ರಗೋಪ್ಯ”
- ನಿರಾಲಂಬಪ್ರಭುವಿನ “ಶಿವಭಕ್ತಿ ಪಂಚಾಂಗದ ವಚನ”
ಮುಂತಾದ ಕೃತಿಗಳು ರಚನೆಯಾಯಿತು. ಹೀಗೆ ಸ್ವತಂತ್ರ ರಚನೆ ಮಾಡಿದವರೆಲ್ಲಾ ಮಠಾಧೀಶರೇ ಆಗಿದ್ದು, ವಸ್ತು, ಅನುಭವದ ವೈವಿಧ್ಯಕ್ಕೆ ಅವಕಾಶವಿರಲಿಲ್ಲ. ಈ ಕಾಲಘಟ್ಟದಲ್ಲಿ ಯಾವ ಶರಣೆಯರೂ ಮಹಿಳಾ ರಚನಕಾರರೂ ಕಂಡುಬರುವುದಿಲ್ಲ. 12 ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಮಾನವೀಯ ಸಮ-ಸಮಾಜದ ಆಶೋತ್ತರಗಳು ಕೊನೆಗೊಂಡು ಮತ್ತೆ ಮಠಾಧಿಪತಿಗಳ ಕೈಯಲ್ಲಿ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಚಿಂತನೆಗಳು ಬತ್ತಿಹೋಗಿ ಚಲನೆಯಿಲ್ಲದ ಜಡತ್ವ, ಮತೀಯತೆ ಅವರಿಸಿತು. ಶರಣರ ಕ್ರಾಂತಿಯ ಆಶಯ ಮರೆತುಹೋಗಿ ವಚನವೆಂದರೆ ಗಿಳಿಪಾಠದ ಸರಕಾಗಿತ್ತು. ಏಕತಾನತೆಯಲ್ಲಿ ನಿಯಂತ್ರಣಗೊಂಡ ಸಾಹಿತ್ಯ ಬೋಧನಾ ಪ್ರಧಾನವಾಯಿತು. ಆಧುನಿಕ ವೈಚಾರಿಕ ಚಿಂತನೆಗಳು, ಜೀವನ ಪ್ರೀತಿ ಮಾಯವಾಗಿ ಅದಕ್ಕೆ ವಿರುದ್ಧವಾದ ಆಚರಣೆಗಳು ಕಾಣಿಸಿಕೊಂಡವು. ಬಸವಾದಿ ಕಾಲದ ವಚನ ರಚನೆಗಳು ಅನುಭಾವದ ಭಾವ ತೀವ್ರತೆಯಿಂದ ಸಹಜವಾಗಿ ಅರಳಿದ ಸುಗಂಧ ಭರಿತ ನವ ಪುಷ್ಪದಂತೆ ಸೌಂದರ್ಯಯುತವಾಗಿದ್ದವು.
16 ನೇ ಶತಮಾನದ ನಂತರದ ವಚನಗಳು ಬುದ್ಧಿಪೂರ್ವಕ ಕಸರತ್ತುಗಳಾಗಿ ಬಹು ದೀರ್ಘವಾದ ರಚನೆಗಳಾಗಿದ್ದವು. ಜಂಗಮತ್ವ ತೊಲಗಿ ಸ್ಥಾವರವೇ ಮುಖ್ಯವಾಯಿತು. ಭಕ್ತಿಯೊಡಗೂಡಿದ ಅನುಭಾವ ಇಲ್ಲವಾಗಿ ತರ್ಕಬದ್ಧವಾದ ಹುಸಿ ವಿಚಾರಗಳು ಮುನ್ನೆಲೆಗೆ ಬಂದವು. ಬಸವಾದಿ ಶರಣರ ಕಾಲದಲ್ಲಿ ಅಂಕಿತಗಳು ಸಾಕ್ಷಿಪ್ರಜ್ಞೆ, ಆತ್ಮಪ್ರಜ್ಞೆಗಳ ಪ್ರತೀಕವಾಗಿ ಪ್ರಮಾಣಿಕತೆಯಿಂದ ಮೂಡಿ ಬಂದವುಗಳಾಗಿದ್ದರೆ, ಇಲ್ಲಿ ಅಂಕಿತಗಳು ಅನುಕರಣೆಯಿಂದ ಬುದ್ಧಿಪೂರ್ವಕವಾಗಿ ರೂಪುಗೊಂಡಿತ್ತು.
ವಚನ ಪರಂಪರೆ 20 – 21 ನೇ ಶತಮಾನಕ್ಕೆ ಆಧುನಿಕ ವಚನಗಳಾಗಿ ರೂಪುಗೊಂಡವು. 12 ನೇ ಶತಮಾನದ ವಚನಗಳ ಸೌಂದರ್ಯಕ್ಕೆ ಮಾರುಹೋದ ಆಧುನಿಕ ಕವಿಗಳು ಅಲ್ಲಿಯ ಸೃಜನಶೀಲತೆಯನ್ನು, ರಸಭರಿತವನ್ನು ತಮ್ಮ ವಚನಗಳಲ್ಲೂ ತರುವ ಪ್ರಯತ್ನ ಮಾಡಿದರು. ತಮ್ಮ ವೈಯಕ್ತಿಕ ಭಾವಾಭಿವ್ಯಕ್ತಿಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಅದನ್ನೇ ಪ್ರಧಾನವಾಗಿಸಿಕೊಂಡರು. 12 ನೇ ಶತಮಾನದಲ್ಲಿ ವೈಯಕ್ತಿಕ ಭಾವನೆಗಳ ಹಿಂದೆ ಸಮಾಜದ ಸಾಮೂಹಿಕ ಪ್ರಜ್ಞೆ ಸದಾ ಜಾಗೃತವಾಗಿತ್ತು. ಆಧುನಿಕ ವಚನಗಳು ಹೊರ ರೂಪದಲ್ಲಿ ಮಾತ್ರವೇ ಶರಣರ ವಚನಗಳನ್ನು ಹೋಲುತ್ತವೆ. ಆದರೆ ವಚನಗಳ ರಚನೆ ಇವರಿಗೆ ಒಂದು ಬಾಹ್ಯರೂಪದ ಮಾಧ್ಯಮವಾಗಿತ್ತೇ ಹೊರತು, ಅಂತರ್ಯದ ಶುದ್ಧ ಜೀವ ಸಿಂಧುವಾಗುವಲ್ಲಿ ಬಹಳಷ್ಟು ಆಧುನಿಕ ವಚನಕಾರರು ಸೋಲನ್ನು ಕಂಡರು. ಅವರ ವಚನಗಳು ಪ್ರಯೋಗಕ್ಕೆ ಅಷ್ಟೇ ಸೀಮಿತಗೊಂಡಿತು.
ಆಧುನಿಕ ಸಂದರ್ಭದಲ್ಲಿ ವಚನ ರಚಿಸುತ್ತಿರುವವರ ಸಂಖ್ಯೆಯ ಬಹು ದೊಡ್ಡ ಸಾಲೇ ಇದ್ದರೂ 12 ನೇ ಶತಮಾನದ ವಚನಕಾರರ ಸಮಷ್ಠಿ ಪ್ರಜ್ಞೆ, ಅನನ್ಯತೆಯನ್ನು ತಮ್ಮ ವಚನಗಳಲ್ಲಿ ತರುವುದಕ್ಕೆ ಸಾಧ್ಯವಾಗಿಲ್ಲ. ವಚನಗಳು 12 ನೇ ಶತಮಾನದ ಕಾಲಘಟ್ಟಕ್ಕೆ ಸಮುದಾಯಿಕ ಪ್ರಜ್ಞೆಯಾಗಿ ಬಂದ ವಚನಗಳಾಗಿದ್ದವು. ಆಧುನಿಕತೆಯಲ್ಲಿ ಯಾವೊಬ್ಬ ವಚನಕಾರನಿಗೂ ಅಂತ ಕಾಲಘಟ್ಟದ ತೀವ್ರತೆಯ ಸ್ವರೂಪಗಳು ಎದುರಾಗಿಲ್ಲ. ಆಯಾ ಕಾಲದ ಸಾಮಾಜಿಕ ಸನ್ನಿವೇಶಗಳು ವ್ಯಕ್ತಿ, ಕಾವ್ಯ, ಸಾಹಿತ್ಯಕ್ಕೆ ಮೂಲ ಸತ್ವವಾಗಿರುತ್ತದೆ. ಅಯಾ ಕಾಲದ ಸತ್ವವನ್ನು ಹೀರಿಕೊಂಡು ಬರೆದ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ನಮಗೆ ವಚನಯುಗ ಕಂಡುಬರುತ್ತದೆ.
ಆಧುನಿಕ ವಚನಕಾರರಲ್ಲಿ ಮೊದಲಿಗೆ ವರಕವಿ ಡಾ. ದ. ರಾ. ಬೇಂದ್ರೆಯವರು ತಮ್ಮ ರಚನೆಗಳನ್ನು “ವಚನ” ಗಳೆಂದು ಕರೆದುಕೊಂಡರು. 1920 – 21 ರ ಹೊತ್ತಿಗೆ ಕೆಲವು ವಚನಗಳನ್ನು ಬರೀತಾರೆ. ಈ ಎಲ್ಲ ಕವನಗಳನ್ನು ಸೇರಿಸಿ 1937 ರಲ್ಲಿ “ಉಯ್ಯಾಲೆ” ಎನ್ನುವ ಕವನ ಸಂಕಲನವನ್ನು ಪ್ರಕಟ ಮಾಡುತ್ತಾರೆ. “ಕರುಳಿನ ವಚನಗಳು” ಎನ್ನುವ 20 ಕವನಗಳನ್ನು ಈ ಉಯ್ಯಾಲೆ ಎನ್ನುವ ಕವನ ಸಂಕಲನದಲ್ಲಿ ಬರೆದಿದ್ದಾರೆ. ವರಕವಿ ಡಾ. ದ. ರಾ. ಬೇಂದ್ರೆಯವರೇ ಮುನ್ನುಡಿಯಲ್ಲಿ ಬರೀತಾರೆ:
100 ಕವನಗಳನ್ನು 4 ಭಾಗಗಳಾಗಿ ವಿಂಗಡಿಸಿದ್ದೇನೆ. 4 ನೇ ಭಾಗವೇ ವಚನಗಳು. Free Verse ಗೆ (ಎಲ್ಲವೂ ಮುಕ್ತವಾಗಿರುವ ಮುಕ್ತಕಗಳು) ಸರಿಯಾಗುವ ಸ್ವಚ್ಛಂದ ಗೀತ ಪ್ರಕಾರವನ್ನು ಹುಟ್ಟಿಸಿಕೊಳ್ಳಲು ನಾನು 1920 – 21 ರಲ್ಲಿ ಯೋಚಿಸಿ ನೋವಿನ ಬೆಲೆ, ಹಿಗ್ಗಿನ ನೆಲೆ ಮೊದಲಾದ ವಚನಗಳನ್ನು ಬರೆದೆ. 1924 ರಲ್ಲಿ ಈ ಕರುಳಿನ ವಚನಗಳನ್ನು ಪೂರ್ಣಗೊಳಿಸಿದರೂ 1931 ರಲ್ಲಿ “ಜಯಕರ್ನಾಟಕ” ಪತ್ರಿಕೆಯಲ್ಲಿ ಪ್ರಕಟವಾದವು. ಪ್ರಾಚೀನರ ವಚನಗಳು ಅಂದರೆ ಶಿವಶರಣರ ವಚನಗಳು ಶುದ್ಧ, ಪಾರಮಾರ್ಥಿಕ ಮಾರ್ಗಗಳಾಗಿದ್ದವು. ಆದರೆ ನನ್ನ ಕರುಳಿನ ವಚನಗಳು ಲೌಕಿಕ ಭಾವದ ಪ್ರಕಟಣೆಗೆ ಬಳಸಿಕೊಂಡಂಥವುಗಳಾಗಿವೆ ಎಂದು ವರಕವಿ ಡಾ. ದ. ರಾ. ಬೇಂದರೇಯವರೇ ಹೇಳಿದ್ದಾರೆ. ಇದರಲ್ಲಿರುವ 20 ಕವನಗಳು ವರಕವಿ ಡಾ. ದ. ರಾ. ಬೇಂದ್ರೆಯವರ ಹೃದಯ ವಚನಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಹಾಗಾಗಿ 12 ನೇ ಶತಮಾನದ ವಚನಗಳನ್ನು ಹೋಲುವುದಿಲ್ಲ. ಅಂಕಿತಗಳನ್ನು ಬಳಕೆ ಮಾಡದೆ ಬರೆದ ಕವನಗಗಳಾಗಿವೆ.
ನಂತರದಲ್ಲಿ ಶ್ರೀ. ಎಸ್. ವಿ. ರಂಗಣ್ಣನವರು “ಮಾವಿನಕೆರೆ ರಂಗಯ್ಯ” ಎಂಬ ಅಂಕಿತದಲ್ಲಿ 1212 ವಚನಗಳನ್ನು ತಮ್ಮ ರಂಗಬಿನ್ನಪದಲ್ಲಿ ಸೇರಿಸಿದ್ದಾರೆ. 1932 – 34 ರಲ್ಲಿ ರಂಗನಾಥ ರಾಮಚಂದ್ರ ದಿವಾಕರರು ಹಿಂಡಲಗಿ ಸೆರೆಮನೆಯಲ್ಲಿದ್ದಾಗ ಅರವತ್ತು ವಚನಗಳನ್ನು “ಅಂತರಾತ್ಮ” ಎಂಬ ಅಂಕಿತದಲ್ಲಿ ಸಂಕಲನವಾಗಿ ಹೊರತಂದರು. ಇವುಗಳ ಮೇಲೆ 12 ನೇ ಶತಮಾನದ ವಚನಗಳ ಪ್ರಭಾವವಿದ್ದರೂ ರವೀಂದ್ರನಾಥ ಠಾಕೂರರ ಗೀತಾಂಜಲಿಯ ರಚನೆಗಳನ್ನು ಹೋಲುತ್ತದೆ. ನಂತರ ಕುವೆಂಪು ರವರ ‘ಕಿಂಕಿಣಿ’ ಎಂಬ ವಚನ ಸಂಗ್ರಹ ಪ್ರಕಟಿಸಿದ್ದಾರೆ. ಇಲ್ಲಿ ಅಂಕಿತದ ಬಳಕೆಯಿಲ್ಲ. ಆಧ್ಯಾತ್ಮ, ಶೃಂಗಾರದ ರಚನೆಗಳಾಗಿದ್ದು ಗದ್ಯ ಕವನಗಳಾಗಿವೆ.
ಆಧುನಿಕ ವಚನಕಾರರಲ್ಲಿ ಹೆಚ್ಚು ವಚನಗಳನ್ನು ಬರೆದ ಜ. ಚ. ನಿ. ಯವರು ಎಲ್ಲಾ ಕಾಲದ ಎಲ್ಲಾ ವಚನಕಾರರಿಗಿಂತ ಹೆಚ್ಚಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾರೆ.
- ಮಣಿ ವಚನಗಳು
- ವಚನ ಮಂಜರಿ
- ವಚನಾಂಜಲಿ
- ವಚನ ವಲ್ಲರಿ
- ಸೊಗವಚನ
- ಮಿಡಿ ವಚನ
- ಯುಗ ವಚನ
ಮುಂತಾದ ಹೆಸರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಇಲ್ಲಿಯ ವಸ್ತು ವೈವಿಧ್ಯತೆ ಹಿರಿದು. ಸರಳವಾಗಿ, ನೇರವಾಗಿ ಭಾವ ನಿರೂಪಣೆ ಮಾಡಿದ್ದಾರೆ. ತಮ್ಮ ಕಾಲದ ರಾಜಕೀಯವನ್ನು ವಸ್ತುವಾಗಿಸಿ ಕೊಂಡಿದ್ದಾರೆ
ಒಡೆತನಕ್ಕೆ ಹೊಡೆದಾಡುವ ಹಿರಿಯರ ನೋಡಾ
ಪಕ್ಷಕ್ಕೊಮ್ಮೆ ಪಕ್ಷಾಂತರವಾಗುವ ಪ್ರತಿಷ್ಠಿತರ ನೋಡಾ
… … … … … … … … … …
… … … … … … … … … …
ಇವರು ಒಡೆತನಕ್ಕೆ ಉಚಿತರಹರೆ?
ಇವರಿಂದ ನಾಡು ನುಡಿ ಉದ್ಧಾರವೆ?
ಎಂಬ ವಿಡಂಬನಾತ್ಮಕವಾದ ಟೀಕೆ ಅಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ಶ್ರೀ. ಎಸ್. ವಿ. ಪರಮೇಶ್ವರ ಭಟ್ಟರು “ಸದಾಶಿವ” ಎಂಬ ಅಂಕಿತದಲ್ಲಿ “ಉಪ್ಪು ಕಡಲು” ಎಂಬ ವಚನ ಸಂಗ್ರಹವನ್ನು ಹೊರತಂದರು. ನಂತರ ಬಂದ ಡಾ. ಸಿದ್ದಯ್ಯ ಪುರಾಣಿಕರು “ಸ್ವತಂತ್ರ ಧೀರ ಸಿದ್ಧೇಶ್ವರ” ಅಂಕಿತದಲ್ಲಿ ಬರೆದ ವಚನಗಳಲ್ಲಿ ಬಸವಣ್ಣನವರ ವಚನಗಳ ಪ್ರಭಾವವಿರುವುದನ್ನು ಕಾಣುತ್ತೇವೆ. ಮಹಾದೇವ ಬಣಕಾರರು “ಎನ್ನ ವರಗುರು ಶಿವಕುಮಾರ ಪ್ರಭುವೇ” ಎಂಬ ಅಂಕಿತದಲ್ಲಿ ಬರೆದರು. ಕುಮಾರ ಕಕ್ಕಯ್ಯನೆಂಬ ವಚನಕಾರ ಆಧುನಿಕ ಸಂವೇದನೆಯ ಭಾಷೆಯಲ್ಲಿ ಬರೆದಿದ್ದು ದಲಿತ ಸಂವೇದನೆಯೇ ಪ್ರಧಾನವಾಗಿದೆ.
ಹೀಗೆ ಮುಂದೆ ಅಸಂಖ್ಯಾತ ಆಧುನಿಕ ಕವಿಗಳು ತಮ್ಮ ರಚನೆಯ ವಿವಿಧ ಪ್ರಕಾರಗಳ ಜೊತೆಗೆ ಆಧುನಿಕ ವಚನಗಳನ್ನು ಪ್ರಯೋಗದ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರೆದಿದ್ದಾರೆ. ಅಂದಿನ ವಚನಕಾರರ ಪ್ರಭಾವ ಆಧುನಿಕ ವಚನಕಾರರ ಮೇಲೆ ಇದ್ದು, ಹಿರಿಯ ಕವಿಗಳು ತಮ್ಮ ಕೆಲವು ರಚನೆಗಳನ್ನು ವಚನಗಳೆಂದು ಕರೆದು ಅದರ ಬಗ್ಗೆ ಒಲವನ್ನು ಪ್ರಕಟಿಸಿದರು. ಆದರೆ 12 ನೇ ಶತಮಾನದಲ್ಲಿ ರಚನೆಯಾದ ವಚನಗಳಂತೆ ಆತ್ಮ ಸಂವೇದನಾ ಚೈತನ್ಯದ ಬೆಳಕಾಗಿಸಿಕೊಳ್ಳಲಿಲ್ಲ. ನವ್ಯ ಕಾವ್ಯವೂ ವಚನಗಳಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪ್ರೇರಣೆಗೆ ಒಳಗಾಯಿತು. ದಲಿತ, ಬಂಡಾಯ ಲೇಖಕರೂ ವಚನ ಸಾಹಿತ್ಯ ತಮ್ಮದೇ ಆಸ್ಮಿತೆಯ ಪ್ರತೀಕವೆಂಬಂತೆ ಭಾವಿಸಿದರು. ಅದನ್ನು ಹೆಚ್ಚು ಬೆಂಬಲಿಸುವ ಉದಾಹರಣೆಗೊಳಿಸುವ ಪರಿಪಾಠದಿಂದ ವಚನ ಯುಗವನ್ನು ತಮ್ಮದೇ ಭಾಗವೇನೊ ಎಂಬಂತೆ ಅದರ ಬಗ್ಗೆ ಹೆಚ್ಚು ಆಕಾಂಕ್ಷಿಗಳಾದರು. ಯಾಕೆಂದರೆ ವಚನ ಚಳುವಳಿಯಲ್ಲಿ ಭಾಗಿಗಳಾಗಿದ್ದವರು ಕೆಳವರ್ಗದ ದಲಿತರೇ ಆಗಿದ್ದರು ಅದ್ದರಿಂದ ಅವರ ಸಾಹಿತ್ಯಭಿವ್ಯಕ್ತಿಯ ಮೇಲೆ ಪಭಾವ ಬೀರಿದೆ.
12 ನೇ ಶತಮಾನದ ವಚನಗಳು ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಪರಂಪರೆಯನ್ನು ಮುನ್ನೆಡೆಸಿದ ಅತ್ಯಂತ ಪ್ರಭಾವ ಬೀರಿದ ಹೊನ್ನಿನ ಯುಗ. ಅನನ್ಯ ಆತ್ಮ ವಿಶ್ವಾಸ, ದಿಟ್ಟತನ, ಸಹಜ, ಸರಳಭಾಷೆಯಿಂದ ಹೃದಯಕ್ಕೆ ಮುಟ್ಟುವಂತೆ ಬರೆದ ವಚನಗಳು ಕಾಲ ಕಾಲಕ್ಕೂ ತನ್ನದೇ ಆದ ಮಾದುರ್ಯ, ಪರಿಮಳದಿಂದ ಕಂಗೊಳಿಸುತ್ತಿದೆ. ವಚನಗಳ ಕಾವ್ಯ ಭಾಷೆ ಸಹಜ ಸೌಂದರ್ಯದಿಂದ ಕೂಡಿದ ಅಪ್ರಯತ್ನ ಪ್ರಯೋಗಗಳು. ಆಧುನಿಕ ವಚನಗಳನ್ನು ರಚಿಸುತ್ತಿರುವವರ ಬಹು ದೊಡ್ಡ ಸಾಲೇ ಇದ್ದರೂ 12 ನೇ ಶತಮಾನದ ವಚನಕಾರರಿಗೆ ಸರಿ ಸಮಾನವಾಗಿ ನಿಲ್ಲುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಆ ಕಾಲದ ಪ್ರಭಾವ, ಅನಿವಾರ್ಯತೆ, ಒತ್ತಡ, ಬಿಡುಗಡೆಯಲ್ಲಿ ಹೊಚ್ಚ ಹೊಸ ಹೊಳಹುಗಳನ್ನು ತನ್ನ ಮುಡಿಗೇರಿಸಿಕೊಂಡು ಆತ್ಮದ ಪ್ರಜ್ವಲವಾದ ಬೆಳಕಲ್ಲಿ ಬೆಳಗಿದ ವಚನಗಳಾಗಿದ್ದವು. ಹಾಗಾಗಿ ಅದಕ್ಕೆ ಸರಿಸಮವಾದ ವಚನಗಳ ರಚನೆಗಳನ್ನು ನಾವು ಇದುವರೆಗೂ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಭವಿಷ್ಯತ್ತಿನಲ್ಲಿ ಶರಣರ ವಚನಗಳಂತ ಸೃಷ್ಟಿ ಪುನರ್ ಸ್ಥಾಪನೆಯ ಸಂಭವನೀಯತೆ ದುಸ್ಥರವೇನೊ … …! ಕಾಲಕ್ಕೆ ಇದನ್ನೆಲ್ಲಾ ನಾವು ಬಿಟ್ಟು ಕೊಡಬೇಕಾಗುತ್ತದೆ.
ಶ್ರೀಮತಿ. ಸುಶೀಲಾ ಸದಾಶಿವಯ್ಯ.
ಲೇಖಕಿ, ಕವಯಿತ್ರಿ.
“ಪ್ರಣವಂ” 1 ನೇ ಬ್ಲಾಕ್, 3 ನೇ ಮೈನ್,
ಟೂಡಾ ಕಛೇರಿ ಹಿಂಭಾಗ.
ಕುವೆಂಪುನಗರ.
ತುಮಕೂರು – 572 103.
ಮೋಬೈಲ್ ಸಂ. 7019843776
ಆಕರ ಕೃತಿ:
ವಚನ ಸಾಹಿತ್ಯ ಒಂದುಪರಿಚಯ: ಡಾ. ಪಿ. ವಿ. ನಾರಾಯಣ.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()



Total views : 55814