
ರಾವ್ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರ ಪೂರ್ವಜರು ಮೂಲತಃ ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವರು. ಧಾರವಾಡಕ್ಕೆ ವಲಸೆ ಬಂದ ನೇಕಾರ ಕುಟುಂಬ ಅವರದಾಗಿತ್ತು. ಅವರ ಪೂರ್ಣ ಹೆಸರು ಫಕೀರಪ್ಪ. ಡಾ. ಫ. ಗು. ಹಳಕಟ್ಟಿಯವರ ತಂದೆ ಸಾಹಿಗಳು ಮತ್ತು ಶಿಕ್ಷಕರಾಗಿದ್ದ ಶ್ರೀ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ಶ್ರೀಮತಿ ದಾನಾದೇವಿ. 02.07.1880 ರಂದು ಧಾರವಾಡದಲ್ಲಿ ಜನಿಸಿದ ಅವರು ತಮ್ಮ ಮೂರನೇಯ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಧಾರವಾಡದಲ್ಲಿ ತಮ್ಮ ಪ್ರಾಥಮಿಕ ಹಾಗೂ 1896 ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗುತ್ತಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ 1901 ರಲ್ಲಿ ಸೇಂಟ್ ಝೇವಿಯರ್ ಕಾಲೇಜಿನಿಂದ ಬಿ. ಎ; ಮುಂಬೈ ವಿಶ್ವವಿದ್ಯಾಲಯದಿಂದ ಎಲ್. ಎಲ್. ಬಿ ಪೂರೈಸುತ್ತಾರೆ. ಇದೇ ಸಂದರ್ಭದಲ್ಲಿ ಆಲೂರು ವೆಂಕಟರಾವ್ ಅವರು ಸಹಪಾಠಿಗಳಾಗಿದ್ದರು. ಉಭಯತರು ಕರ್ನಾಟಕ ಏಕೀಕರಣಕ್ಕೆ ಹಾಗೂ ಕನ್ನಡ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುವುದಾಗಿ ನಿರ್ಧರಿಸುತ್ತಾರೆ. ತಮ್ಮ 16 ನೇ ವಯಸ್ಸಿನಲ್ಲಿ ಸೋದರ ಮಾವನವರಾದ ಬನಹಟ್ಟಿಯ ಶ್ರೀ. ತಮ್ಮಣ್ಣಪ್ಪ ಚಿಕ್ಕೋಡಿಯವರ ಸುಪುತ್ರಿ ಭಾಗೀರಥಿಯೊಂದಿಗೆ ವಿವಾಹವಾಗಿ, ಸಂಸಾರಿಕ ಜೀವನ ನಿರ್ವಹಿಸುತ್ತಾರೆ.
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ?
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ?
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-57)
ಪ್ರಪಂಚದಲ್ಲಿ ಸಂಭವಿಸುವ ಸರ್ವ ಘಟನೆಗಳಿಗೂ ಶಿವನೆ ಕಾರಣ. ಹುಟ್ಟು, ಸಾವು, ಕೈವಶ, ಕೈ ತಪ್ಪುವುದು ಎಲ್ಲವೂ ಶಿವನ ಸದ್ವಿಚ್ಚೆಯಂತೆ ಸಾಗುತ್ತವೆ. ಆದರೂ ಸ್ವಾರ್ಥ ಬದುಕಿನ ಮಾನವರ ಬೇಕು, ಬೇಡಿಕೆ ಮತ್ತು ಆಲೋಚನೆಗಳಿಗೆ ಕೊನೆಯಿಲ್ಲ, ಮಹತ್ವವೂ ಇಲ್ಲ. ಆದ್ದರಿಂದ ಎಲ್ಲವೂ ನನ್ನದು, ತನ್ನದು ಎಂದು ಗರ್ವ ಪಡದೆ, ಸೃಷ್ಠಿಕರ್ತನಿಗೆ ಶರಣಾಗಿ, ಅರಿವಿನಿಂದ ಜೀವಿಸಬೇಕೆಂದು ವಿಶ್ವಗುರು ಬಸವಣ್ಣನವರು ಈ ವಚನದ ಮೂಲಕ ಉಪದೇಶಿಸಿದ್ದಾರೆ.
ತಮ್ಮ ಪ್ರಥಮ ವಕಾಲತ್ತನ್ನು ಬೆಳಗಾವಿ ನ್ಯಾಯಾಲಯದಿಂದ ಆರಂಭಿಸಿ, ನಂತರ 1904 ರಿಂದ 1964 ರ ವರೆಗೆ ವಿಜಯಪುರ ಅವರಿಗೆ ಕರ್ಮಭೂಮಿಯಾಯಿತು. ಫಕೀರಪ್ಪ ಅವರ ತಂದೆ ವೃತ್ತಿಯಿಂದ ಶಿಕ್ಷಕರಾಗಿದ್ದರು. ಅವರು ಅಂದಿನ ಪ್ರಖ್ಯಾತ “ವಾಗ್ಭೂಷಣ” ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳನ್ನು ವಾಚಿಸುತ್ತಿದ್ದ ಫಕೀರಪ್ಪನವರಲ್ಲಿಯೂ ಸಾಹಿತ್ಯದ ಅಭಿರುಚಿ ಚಿಗುರೊಡೆಯಲು ಕಾರಣವಾಯಿತು. ಮುಂದೆ ಅವರು ಎಂತಹ ಸಾಹಿತ್ಯದ ನಿಧಿಯಾಗಿ ಬೆಳೆದರು ಎಂದರೆ, 1928 ರ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬಿ. ಎಂ. ಶ್ರೀ ಯವರು ವಿಜಯಪುರಕ್ಕೆ ಆಗಮಿಸಿದ್ದಾಗ, ಅವರ ಮಿತ್ರರೊಬ್ಬರು ಗೋಳಗುಮ್ಮಟದ ದರ್ಶನಕ್ಕೆ ಒತ್ತಾಯಿಸಿದ್ದರು. ಅದರ ಬದಲು “ವಚನ ಗುಮ್ಮಟ” ವೀಕ್ಷಿಸುವುದಾಗಿ ಬಿ. ಎಂ. ಶ್ರೀ ಹೇಳಿದಾಗ ಸಂಘಟಕರು ತಬ್ಬಿಬ್ಬರಾದರಂತೆ. ಸ್ವತಃ ಬಿ. ಎಂ. ಶ್ರೀಯವರೆ ಹಳಕಟ್ಟಿಯವರನ್ನು “ವಚನ ಗುಮ್ಮಟ” ಎಂದು ಕರೆದರು.
ಅಂದಿನ ವಿಜಯಪುರ ಉಪಲಿ ಬುರಜು ಹತ್ತಿರದ ಮುರುಕು ಬಾಡಿಗೆ ಮನೆಯಲ್ಲಿ, ಹರುಕು ಚಾಪೆಯ ಮೇಲೆ, ವಚನಗಳ ತಾಡೋಲೆಗಳನ್ನು ಹರವಿಕೊಂಡು ಕುಳಿತ್ತಿದ್ದ ಹಳಕಟ್ಟಿಯವರ ಮನೆಯನ್ನು, ದೊಢೀರನೆ ಪ್ರವೇಶಿಸಿದ ಬಿ. ಎಂ. ಶ್ರೀಯವರನ್ನು ನೋಡಿದ ಹಳಕಟ್ಟಿಯವರು, ತಕ್ಷಣ ತಮ್ಮ ಒಡುಕು ಕನ್ನಡಕ ತೊಟ್ಟು, ಅವರೊಂದಿಗೆ ಅದೆಷ್ಟೊ ಗಂಟೆಗಳವರೆಗೆ ವಚನ ಸಂಶೋಧನೆ ಕುರಿತು ಸಮಾಲೋಚನೆಗೆ ತೊಡಗಿದ್ದರಂತೆ.
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-436/ವಚನ ಸಂಖ್ಯೆ-1165)
ಎಂದು ಕಾಯಕಯೋಗಿ ಆಯ್ದಕ್ಕಿ ಮಾರಯ್ಯನವರು ನುಡಿದಂತೆ ಕಾಯಕದೋಳು ನಿರತನಾದಡೆ ಗುರು, ಲಿಂಗ ಹಾಗೂ ಜಂಗಮ ಸೇವೆಯನ್ನೂ ತೊರೆಯಬೇಕು. ಹಿಡಿದ ಕೆಲಸ ಪರಿಪೂರ್ಣತೆ ಸಾಧಿಸುವವರೆಗೆ ವಿಚಲಿತನಾಗಬಾರದು. ಅದಕ್ಕೆಂದು ಸರ್ವ ಹಂಗು ತೊರೆದು ತಲ್ಲೀನತೆಯಿಂದ ಹಿಡಿದ ಕಾರ್ಯ ಸಾಧಿಸಬೇಕೆಂಬುದು ಈ ವಚನದ ತಾತ್ಪರ್ಯ. ಅದರಂತೆ ಡಾ. ಫ. ಗು. ಹಳಕಟ್ಟಿಯವರು ಸತತ 60 ವರ್ಷಗಳ ಕಾಲ ಸೈಕಲ್ ಸವಾರಿ ಮಾಡಿ, ಕಾಲ್ನಡಿಗೆಯಲ್ಲಿ ಎಲ್ಲೆಂದರಲ್ಲಿ ಸಂಚರಿಸಿ, ಭೂಗತವಾಗಿದ್ದ ವಚನಗಳ ಕಟ್ಟುಗಳನ್ನು ಸಂಗ್ರಹಿಸುತ್ತಾರೆ. ಅವೆಲ್ಲವೂ ತಾಳೆಗರಿ, ಓಲೆಗರಿ, ತಾಡೋಲೆಗಳಲ್ಲಿ ಅಡಗಿಕೊಂಡಿದ್ದನ್ನು ಹುಡುಕಿ ಹೊರ ತಂದರು. ಡಾ. ಫ. ಗು. ಹಳಕಟ್ಟಿಯವರ ಪರಿಶ್ರಮದಿಂದ ಸುಮಾರು 250 ವಚನಕಾರರನ್ನು ಬೆಳಕಿಗೆ ಬಂದರು. 1925 ರಲ್ಲಿ ತಮ್ಮ ಸ್ವಂತ ಮನೆ ಮಾರಿ “ಹಿತಚಿಂತಕ ಮುದ್ರಣಾಲಯ” ಸ್ಥಾಪಿಸಿ, ವಚನ ಸಾಹಿತ್ಯವನ್ನು ಮುದ್ರಣ ರೂಪಕ್ಕೆ ತಂದರು. 1926 ರಲ್ಲಿ ಶಿವಾನುಭವ, 1927 ರಲ್ಲಿ ನವಕರ್ನಾಟಕ ಎಂಬೆರಡು ವಾರ ಪತ್ರಿಕೆಗಳನ್ನು ಆರಂಬಿಸಿದರು. ಅವುಗಳ ಮೂಲಕ ನಿರಂತರವಾಗಿ ವಚನ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ತಲ್ಲೀನರಾದರು. ಅವರ ಪತ್ನಿ ಭಾಗೀರಥಿ ವಿಧಿವಶರಾದಾಗ, ಅಂದೇ ಶವ ಸಂಸ್ಕಾರ ಮಾಡಿ, ತಕ್ಷಣವೇ ಮುದ್ರಣಾಲಯಕ್ಕೆ ಬಂದು ವಚನ ಪ್ರಕಟಣೆಯಲ್ಲಿ ತೊಡಗಿಕೊಂಡಿದ್ದರಂತೆ. ದಿಲ್ಲಿಯಲ್ಲಿ ಅವರ ಮಗ ಅಪಘಾತದಿಂದ ಅಕಾಲಿಕವಾಗಿ ತೀರಿಕೊಂಡಾಗ ಟೆಲಿಗ್ರಾಮ ಸಂದೇಶ ಗಮನಿಸಿಯೂ, ವಚನ ಮುದ್ರಣ ಕಾರ್ಯ ಕೈಬಿಡದೆ, ಮುದ್ರಿತ ಪ್ರತಿಗಳನ್ನು ಅಂಚೆ ಇಲಾಖೆಗೆ ಸಾಗಿಸಿದ ನಂತರ ಮಗನ ಸಂಸ್ಕಾರಕ್ಕಾಗಿ ದಿಲ್ಲಿಗೆ ಹೋಗಿದ್ದರು.
ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ?
ತಂದಿಕ್ಕುವ ಶಿವಂಗೆ ಬಡತನವೆ? ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-732)
ಇಂದು ಮತ್ತು ನಾಳೆಯ ಬದುಕಿನ ಬಗ್ಗೆ ಚಿಂತೆಬೇಡ. ಅದರನ್ನು ಎದುರಿಸಲು ಒಂದಿಲ್ಲ ಒಂದಿನ ಒಡೆಯ, ಸೃಷ್ಠಿಕರ್ತ ಸನ್ಮಾರ್ಗದ ದಾರಿ ತೋರುತ್ತಾನೆ ಎಂದು ದಾಸಿಮಯ್ಯನವರ ಅಚಲ ನಂಬಿಕೆಯಂತೆ. ಕೆ. ಸಿ. ಸಿ ಬ್ಯಾಂಕಿನಲ್ಲಿ ಪಡೆದ ಸಾಲ ತೀರಿಸಲಾಗದೆ ತಾವಿದ್ದ ಮನೆ ಜಪ್ತಿಗೆ ಬಂದಾಗ, ಹಳಕಟ್ಟಿಯವರು ದಾವಣಗೆರೆಯ ತರಳುಬಾಳು ಹುಣ್ಣಮೆ ಉತ್ಸವದ ಕಾರ್ಯಕ್ರಮದಲ್ಲಿದ್ದರು. ಸಿರಿಗೆರೆ ಮಠದ ಅಂದಿನ ಶ್ರೀ. ಶಿವಕುಮಾರ ಸ್ವಾಮಿಗಳು ಆ ವಿಷಯ ತಿಳಿದು ಕಾರ್ಯಕ್ರಮ ಮುಗಿವಷ್ಟರಲ್ಲಿ ತಮ್ಮ ಮಠದಿಂದ ಬಂಗಾರದ ಪದಕ ತರಿಸಿ, ಹಳಕಟ್ಟಿಯವರಿಗೆ ಸನ್ಮಾನಿಸಿ ಕಾಣಿಕೆಯಾಗಿ ನೀಡುತ್ತಾರೆ. “ಮಠ ಕೊಟ್ಟ ಕಾಣಿಕೆಯೆಂದು ಇಟ್ಟುಕೊಳ್ಳದೆ, ಈ ಪದಕವನ್ನು ಮಾರಿ ನಿಮ್ಮ ಸಾಲ ತೀರಿಸಿಕೊಳ್ಳಿ” ಎಂದು ಹೇಳುತ್ತಾರೆ. ಹೀಗೆ ಕುಟುಂಬಕ್ಕೆ ಅಂಟಿದ ಬಡತನ, ಅನಾರೋಗ್ಯ, ಆರ್ಥಿಕ ಸಂಕಟ, ಮನೆಯಲ್ಲಿನ ನಿರಂತರ ಸಾವು, ನೋವು ಡಾ. ಫ. ಗು. ಹಳಕಟ್ಟಿಯವರನ್ನು ನುಜ್ಜು ಗುಜ್ಜು ಮಾಡಿದ್ದವು. ತಮ್ಮ ಜೀವನದ ಅಂತ್ಯದವರೆಗೂ ವಿಜಯಪುರದ ಬಾಡಿಗೆ ಮನೆಯಲ್ಲೇ ಜೀವನ ಸವೆಸಿದ್ದರು. ಬಾಡಿಗೆ ಹೆಚ್ಚಿಸಿದ್ರೆ, ಮನೆ ಬದಲಿಸಿ, ಬಾಡಿಗೆ ಕಡಿಮೆ ಇರುವ ಮನೆ ಹುಡುಕುತ್ತಿದ್ದರು. ಹೀಗೆ ನಗರಾದ್ಯಂತ ವಿವಿಧ ಬಡಾವಣೆಗಳಲ್ಲಿ ಕಡಿಮೆ ದರದ ಬಾಡಿಗೆ ಮನೆಗಳಲ್ಲಿಯೇ ಕಾಲ ಕಳೆದರು.
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ?
ಘನಶಿವಭಕ್ತರಿಗೆ ಬಡತನವಿಲ್ಲ
ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ
ಅಮಲೇಶ್ವರಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-267/ವಚನ ಸಂಖ್ಯೆ-703)
ನಂಬಿದವರಿಗೆ ಬಡತನವುಂಟೆ ಅಯಾ? ಶರೀರ ಕಾಯಕ್ಕೆ ಬಡತನ ಅಂಟಿದರೂ, ಅದರೊಳಗಿನ ಮನಸ್ಸು ಮತ್ತು ಹೃದಯಕ್ಕೆ ಬಡತನ ಆತುಕೊಳ್ಳಬಾರದು. ಪರದೈವನ ಮೇಲೆ ಅಚಲ ನಂಬಿಕೆ, ವಿಶ್ವಾಸ ಇರಿಸಿದರೆ ಎಂದಿಗೂ ಆಂತರಿವಾಗಿ ಬಡತನ ಕಾಡುವುದಿಲ್ಲ ಎಂದು ಈ ವಚನದಲ್ಲಿ ಆಯ್ದಕ್ಕೆ ಲಕ್ಕಮ್ಮ ಹೇಳಿದ್ದಾಳೆ. 1956 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿತ್ತು. ಅವಾಗಿನ ಕುಲಪತಿಗಳಾಗಿದ್ದವರು ಡಾ. ಡಿ. ಸಿ. ಪಾವಟೆಯವರು ಹಾಗೂ ಡಾ. ಎಸ್. ಎಸ್. ಒಡೆಯರ್ ಅವರು ಕುಲಸಚಿವರಾಗಿದ್ದರು. ಘಟಿಕೋತ್ಸವದ ಬಳಿಕ ಮಧ್ಯಾಹ್ನ ಭೋಜನ ಕೂಟವನ್ನು ಅತಿಥಿ ಗೃಹದಲ್ಲಿ ಏರ್ಪಡಿಸಿದ್ದರು. ಹಳಕಟ್ಟಿಯವರು ತಮ್ಮ ಹಳೆಯ ಕಪ್ಪು ಕೋಟು ತೊಟ್ಟು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಗಮನಿಸಿದ ಡಾ. ಡಿ. ಸಿ. ಪಾವಟೆಯವರು ಹಳಕಟ್ಟಿಯವರಿಗೆ ಕೋಟು ಬಿಚ್ಚಿಟ್ಟು ಊಟ ಮಾಡುವಂತೆ ತಿಳಿಸುತ್ತಾರೆ. ಅದಕ್ಕೆ ಹಳಕಟ್ಟಿಯವರ ಪ್ರತ್ಯುತ್ತರ ಹೇಗಿತ್ತೆಂದರೆ, “ಬ್ಯಾಡ್ರಿ, ಮೇಲಿದ್ದ ಕೋಟು ನನ್ನ ಬಡತನದ ಮರ್ಯಾದೆ ಉಳಿಸೈತಿ. ಯಾಕಂದ್ರ, ಒಳಗಿನ ಬಿಳಿ ಶರ್ಟು ಹರಿದೈತಿ”! ಎಂದಿದ್ದಕ್ಕೆ ಸ್ವತಃ ಕುಲಪತಿ, ಕುಲಸಚಿವರು ತಬ್ಬಿಬ್ಬರಾದರಂತೆ.
ಡಾ. :ಫ. ಗು. ಹಳಕಟ್ಟಿಯವರು ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಾಗ, ಬಬಲೇಶ್ವರ ವಿರಕ್ತಮಠದ ಶಾಂತವೀರ ಸ್ವಾಮಿಗಳು ಭೇಟಿಗೆ ಬಂದಿದ್ದರು. ನಿಮ್ಮ ಆರೋಗ್ಯ ಚೇತರಿಕೆಗೆ ನನ್ನಿಂದ ಏನಾದ್ರೂ ನೆರವು ಬೇಕಾದ್ರೆ ಕೇಳಿ ಎಂದರಂತೆ. ಅವಾಗ ಹಳಕಟ್ಟಿಯವರು ಸಂಕೋಚದಿಂದ “ಸ್ವಾಮಿಗಳೇ ಅವೇನೂ ಬೇಡ. ಇನ್ನೂ 12 ವಚನಗಳನ್ನು ಅಚ್ಚು ಹಾಕಿಲ್ಲ. ಅವುಗಳನ್ನು ಮುದ್ರಿಸಿದರೆ, ಅದೊಂದೆ ದೊಡ್ಡ ಉಪಕಾರ ಸಾಕು” ಎಂದರಂತೆ. ಇಂತಹ ವಚನ ಸಾಹಿತ್ಯದ ಸಾತ್ವಿಕ ವ್ಯಕ್ತಿ 26.06.1964 ಲಿಂಗೈಕ್ಯರಾದರು. ಬೆರಳೆಣಿಕೆಯಷ್ಟು ಜನರು ಮಾತ್ರ ಅವರ ಶವ ಸಂಸ್ಕಾರದಲ್ಲಿ ಪಾಲ್ಗೊಂಡರು. ಶವ ಸಂಸ್ಕಾರದ ವೆಚ್ಚಕ್ಕೂ ಅವರ ಮನೆಯಲ್ಲಿ ಹಣ ಇರಲಿಲ್ಲ. ಜನರಿಂದ ದೇಣಿಗೆ ಸಂಗ್ರಹಿಸಿದ ಹಣದಿಂದ ತಮ್ಮ ಶವ ಸಂಸ್ಕಾರ ಮಾಡಿಸಿಕೊಂಡ ಏಕೈಕ ವ್ಯಕ್ತಿ ಎಂದರೆ ಅವರೆ ಡಾ. ಫ. ಗು. ಹಳಕಟ್ಟಿಯವರು.
ಆಧಾರ ಗ್ರಂಥಗಳು:
- ಡಾ. ಫ. ಗು. ಹಳಕಟ್ಟಿ ಆತ್ಮ-ಚರಿತ್ರೆ: ಡಾ. ಎಂ. ಎಂ.ಕಲ್ಬುರ್ಗಿ ಮತ್ತು ಡಾ. ಎಸ್. ಆರ್. ಗುಂಜಾಳ, ಶಿವಾನುಭವ ಗ್ರಂಥಮಾಲೆ–೧, ಬಸವ ತತ್ವ ಪ್ರಸಾರ ಸಂಸ್ಥೆ, ಧಾರವಾಡ (2008)
- ವಚನ ಸಾಹಿತ್ಯ: ಸಂಶೋಧನೆ ಮತ್ತು ವಿಮರ್ಶೆ: ಡಾ. ಆರ್. ಸಿ. ಹಿರೇಮಠ, ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (2005)
- ವಚನ ಸಾಹಿತ್ಯ ಚರಿತ್ರೆ: ಫ. ಗು. ಹಳಕಟ್ಟಿ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು (1952)
- ಶಿವಾನುಭವ: ಡಾ. ಫ. ಗು. ಹಳಕಟ್ಟಿ, ಫೆಬ್ರವರಿ, (1926)
- ಫ. ಗು. ಹಳಕಟ್ಟಿಯವರ ಕುರಿತು ಡಾ. ಜಿ. ಎಸ್. ಸಿದ್ಧಲಿಂಗಯ್ಯಯವರ ಲೇಖನ: ಬನ್ನೂರು ಕೆ. ರಾಜು, ಸಂಸ್ಕೃತಿ ಸಲ್ಲಾಪ ((https://www.sallapa.com)
ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129.
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್: satshitagi10@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993