
ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ’ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ ಮಿಕ್ಕ ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿದ್ದಾರೆ.
ಶಿವಾನುಭವ ಶಾಸ್ತ್ರದಲ್ಲಿ ‘ಕಾಯಕ’ ಈ ಶಬ್ದಕ್ಕೆ ಒಂದು ವಿಶಿಷ್ಟಾರ್ಥವಿದೆ. ಕಾಯಕವೆಂದರೆ ಕೇವಲ ಉಪಜೀವನದ ಹೊರೆಯಲ್ಲ. ಸಾಮಾನ್ಯ ಅರ್ಥದಲ್ಲಿ ಕಾಯಕವೆಂದರೆ ಉಪಜೀವನಕ್ಕೋಸ್ಕರ ಕೈಕೊಂಡ ಒಂದು ಉದ್ಯೋಗ ಎಂದು ಭಾವಿಸಲಾಗಿದೆ. ಆದರೆ ಶಿವಶರಣರಿಗೆ ಇದು ಆಧ್ಯಾತ್ಮಿಕ ಉನ್ನತಿಯ ಮುಖ್ಯ ಮಾರ್ಗವಾಗಿದೆ. ನಿತ್ಯದ ಜೀವನವು ಅಥವಾ ಕಾಯಕವು ಸ್ವೋನ್ನತಿಗೆ ಸಹಾಯಕಾರಿಯಾಗುವಂತೆ ಅದನ್ನು ಶಿವಶರಣರು ಜರುಗಿಸಿದ್ದಾರೆ. ಅವರು ನಿಂತಲ್ಲಿ, ನೋಡುವಲ್ಲಿ, ಮಾಡುವಲ್ಲಿ, ಭಾವಿಸುವಲ್ಲಿ, ಅರ್ಪಣ ಭಾವವುಳ್ಳವರಾಗಿರಬೇಕು. ಆಗ ಈ ಕ್ರಿಯೆಗಳು ಅವರಿಗೆ ಲಿಂಗಪೂಜಾ ಸಾಧನಗಳಾಗಿ ಪರಿಣಮಿಸುತ್ತವೆ. ಈ ತತ್ವಗಳಂತೆ ಶಿವಶರಣರು ತಮ್ಮ ಕಾಯಕಗಳನ್ನು ಜರುಗಿಸಿದ್ದಾರೆ.
ಕಾಯಕ ಮಾಡುವವನ ಸ್ಥಲದ ಪ್ರಕಾರ ಕಾಯಕಗಳಲ್ಲಿ ಐದು ಪ್ರಕಾರಗಳಿವೆ.
೧) ಭಕ್ತಸ್ಥಲದ ಕಾಯಕಗಳು
೨) ಮಹೇಶ್ವರಸ್ಥಲದ ಕಾಯಕಗಳು
೩) ಪ್ರಸಾದಿಸ್ಥಲದ ಕಾಯಕಗಳು
೪) ಪ್ರಾಣಲಿಂಗಿಸ್ಥಲದ ಕಾಯಕಗಳು
೫) ಶರಣಸ್ಥಲದ ಕಾಯಕಗಳು
ಎಂದಿರುತ್ತವೆ. ಭಕ್ತಸ್ಥಲದ ಕಾಯಕಗಳಲ್ಲಿ ಶ್ರದ್ಧೆ, ವಿಶ್ವಾಸಗಳು. ಮಹೇಶ್ವರಸ್ಥಲದ ಕಾಯಕಗಳಲ್ಲಿ ದೃಢಭಕ್ತಿ, ನಿಷ್ಠೆ, ಶೌರ್ಯ, ಸಾಹಸಗಳು. ಪ್ರಸಾದಿಸ್ಥಲದ ಕಾಯಕಗಳಲ್ಲಿ ನಿಸ್ವಾರ್ಥತೆ, ಆತ್ಮಾರ್ಪಣ ಭಾವ. ಪ್ರಾಣಲಿಂಗಿಸ್ಥಲದ ಕಾಯಕಗಳಲ್ಲಿ ಪ್ರಾಣಲಿಂಗದ ವಿಕಾಸ. ಅಂದರೆ ಅಂತಃಶಕ್ತಿಯ ಅಂತರಿಂದ್ರಿಯಗಳ ಜಾಗೃತಿ. ಶರಣಸ್ಥಲದ ಕಾಯಕಗಳಲ್ಲಿ ಸಮತ್ವ, ವಿಶ್ವ ಬಂಧುತ್ವ, ಸುಜ್ಞಾನ ಮುಖ್ಯವಾಗಿ ಇರುವುದನ್ನು ಗಮನಿಸುತ್ತೇವೆ. ಎಲ್ಲ ಸ್ಥಲದವರು ತಮ್ಮ ತಮ್ಮ ವಿಶಿಷ್ಟಗುಣಗಳನ್ನು ಕಾಯಕದ ಮೂಲಕ ಹೆಚ್ಚಿಸುತ್ತ ಕಡೆಯದಾಗಿ ಆರನೆಯ ಸ್ಥಲವಾದ ಐಕ್ಯಸ್ಥಲ ಅಥವಾ ಸಾಮರಸ್ಯವನ್ನು ಹೊಂದುತ್ತಾರೆ”೧ ಎಂದು ಹೇಳಬಹುದು.
ಶರಣ-ಶರಣೆಯರು ಸಂಸಾರದ ಸತ್ಯವನ್ನು ಅರಿತು, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ ಅದು ಪ್ರೇರಕ, ಪೋಷಕವೆಂಬುದನ್ನು ಸ್ಪಷ್ಟಪಡಿಸಿದರು. ಇವರು ವ್ರತಾಚರಣೆ, ಜಾತೀಯತೆ, ಕುಲ ಭೇದ, ಭಕ್ತಿ, ಜ್ಞಾನ, ಆಚರಣೆ, ನೀತಿ-ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಶರಣ-ಶರಣೆಯರು ತಮ್ಮ ವಚನಗಳಲ್ಲಿ ಸಮಾಜ ವಿಮರ್ಶೆ, ಕಾಯಕ, ದಾಸೋಹ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿರುವುದನ್ನು ಕಾಣುತ್ತೇವೆ.
ಶಿವಶರಣರ ಕಾಯಕ ಪರಿಕಲ್ಪನೆ ವಿನೂತನವಾದುದು. ದುಡಿಯುವ ವರ್ಗದ ಜನತೆಯ ಈ ಚಳುವಳಿಯ ಮುಖ್ಯ ಪ್ರವಾಹಕ್ಕೆ ಕಾಯಕ ತತ್ವವೇ ಕಾರಣವಾಯಿತು. ಶರಣರ ಕಾಯಕ ಚಳುವಳಿಯಲ್ಲಿ ಅನೇಕ ಹೊಸ ಕಾಯಕಗಳು ಸೃಷ್ಟಿಯಾದವು.
ಶಿವಾನುಭವದ ಪ್ರಕಾರ ಸ್ತ್ರೀಯರಿಗೆ ಸ್ವತಂತ್ರಾಧಿಕಾರವಿರುವದರಿಂದ ಕೆಲವೊಂದು ಉದ್ಯೋಗವನ್ನು ಕೈಕೊಂಡು ಅವಳು ಅದರಿಂದ ಉಪಜೀವನವನ್ನು ಹೊಂದತಕ್ಕದ್ದು. ಅಂದರೆ ಹೇಗೆ ಪುರುಷರಿಗೆ ಕಾಯಕದ ತತ್ವಗಳು ಅನ್ವಯಿಸುತ್ತವೆಯೋ ಹಾಗೆಯೇ ಅವು ಸ್ತ್ರೀಯರಿಗೂ ಅನ್ವಯಿಸುತ್ತವೆ. ಆದ್ದರಿಂದ ಬಸವೇಶ್ವರರ ಕಾಲದಲ್ಲಿ ಬಹುಜನ ಶಿವಶರಣೆಯರು ಪುರುಷರಂತೆ ಕೆಲವೊಂದು ಉದ್ಯೋಗವನ್ನು ಕೈಕೊಂಡು ಅದರಿಂದ ಅವರು ಉಪಜೀವನವನ್ನು ಹೊಂದುತ್ತ ಮಹಾ ದಾಸೋಹಿಗಳಾಗಿದ್ದಾರೆ.
ಶರಣರ ಕಾಯಕ ತತ್ವ ಮನುಷ್ಯರಲ್ಲಿ ಉತ್ಸಾಹವನ್ನು ಉಂಟುಮಾಡಿ, ಆಲಸ್ಯವನ್ನು ತಳ್ಳಿಹಾಕಿತು. ಸ್ವಾಭಿಮಾನವನ್ನು ಬೆಳೆಸಿ, ಕೈಯೊಡ್ಡಿ ಬೇಡುವ ಅಸಹಾಯಕತೆಯನ್ನು ತಪ್ಪಿಸಿತು. ಪ್ರಮಾಣಿಕತೆಯನ್ನು ಬೆಳೆಸಿ, ಮೋಸ-ವಂಚನೆಯನ್ನು ಕಿತ್ತು ಹಾಕಿತು. ಸಮಾನತೆಯನ್ನು ಹೇಳುತ್ತಲೇ ತಾರತಮ್ಯವನ್ನು ತಳ್ಳಿಹಾಕಿತು. ಕ್ರಿಯಾಶೀಲವಾಗುತ್ತಲೇ ಜಡತೆಯಿಂದ ದೂರ ಉಳಿಯುವಂತೆ ಮಾಡಿತು.
ಶರಣರ ದೃಷ್ಟಿಯಲ್ಲಿ ಕಾಯಕವು ನಿತ್ಯ ಸೃಷ್ಟಿ. ತನು-ಮನಗಳನ್ನು ತಲ್ಲೀನಗೊಳಿಸಿ ಶ್ರಮಿಸುವ ಪ್ರಾಮಾಣಿಕ ಕ್ರಿಯೆಯಾಗಿತ್ತು. ದೇಹವನ್ನು ದಂಡಿಸದೇ ಮೋಸದ ಮೂಲಕ ಕಾರ್ಯವೆಸಗುವುದು ಕಾಯಕವಾಗಿರಲಿಲ್ಲ. ಇದನ್ನೇ ಶಿವಶರಣರು ತಮ್ಮ ಅನೇಕ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಸವಣ್ಣನವರ ದೃಷ್ಟಿಯಲ್ಲಿ-
ಕೃಷಿಕಾಯಕದಿಂದಾದಡೇನು?
ತನುಮನ ಬಳಲಿಸಿ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದÀವ ತೋರಯ್ಯಾ ತಂದೆ
ಚೆನ್ನಬಸವಣ್ಣನವರ ದೃಷ್ಟಿಯಲ್ಲಿ-
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ
ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡುವ
ಭಕ್ತನ ಪಾದವ ತೋರಯ್ಯಾ
ಮಾದಾರ ದೂಳಯ್ಯನವರ ದೃಷ್ಟಿಯಲ್ಲಿ-
ಸತ್ಯಶುದ್ಧ ಕಾಯಕವ ಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚವಳಿದು,
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ,
ಕಾಮಧೂಮ ಧೂಳೇಶ್ವರ
ಶಿವಲೆಂಕ ಮಂಚಣ್ಣನವರ ದೃಷ್ಟಿಯಲ್ಲಿ-
ಕಾಯಕವೆಂದು ಕಾಯವ ಬಳಲಿಸದೆ,
ತನು ಕರಗದೆ ಮನ ನೋಯದೆ,
ಕಾಡಿ ಬೇಡಿ ಮಾಡುವುದು ದಾಸೋಹವೆ?
ಈ ರೀತಿ ಕಾಯಕದ ಲಕ್ಷಣಗಳನ್ನು ಕುರಿತು ಅನೇಕ ವಚನಕಾರರು ವಿವೇಚನೆಗೆ ಒಳಪಡಿಸಿದ್ದಾರೆ. ಕಾಯಕವೆಂದರೆ ಶಾರೀರಿಕ ಶ್ರಮ ಅಥವಾ ಕಾಯಕಷ್ಟ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ದುಡಿಯಲೇಬೇಕೆಂಬುದು ಶರಣರ ನೇಮ, ವ್ರತ. ಯಾವುದೊಂದು ಕಾಯಕವನ್ನು ಸತ್ಯಶುದ್ಧ ಮನಸ್ಸಿನಿಂದ ಮಾಡಬೇಕು. ಅವಲಂಬಿಸಿದ ಸಂಪತ್ತನ್ನು ಸದ್ಬಳಕೆಯಾಗುವಂತೆ ಹೇಗೆ ನೋಡಿಕೊಳ್ಳಬೇಕು, ಅದನ್ನು ಹೇಗೆ ನಿರ್ವಹಿಸಬೇಕು ಎಂದು ವಚನಕಾರರು ವಿವರಿಸಿದ್ದಾರೆ. ಆದರೆ ಕಾಯಕಗಳಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ತನ್ನ ಹಾಗೂ ಸಮಾಜದ ಏಳ್ಗೆಗಾಗಿ ಮಾಡುವ ಕಾಯಕಗಳಲ್ಲಿ ತಾರತಮ್ಯವಿಲ್ಲ. ಕೃಷಿ, ವ್ಯಾಪಾರ ಇತ್ಯಾದಿ ಕಾಯಕಗಳಾಗಿರಬಹುದು. ಮಾಡುವ ಕಾಯಕವನ್ನು ತನುಮುಟ್ಟಿ, ಮನಮುಟ್ಟಿ ತ್ರಿಕರಣ ಶುದ್ಧಿಯಿಂದ ಮಾಡಬೇಕು. ಶ್ರದ್ಧೆ, ನಿಷ್ಠೆಯಿಂದ ಮಾಡಬೇಕು, ಗಳಿಸಬೇಕು, ಗಳಿಸಿದ್ದನ್ನು ವ್ಯಷ್ಟಿ-ಸಮಷ್ಟಿ ಸ್ತರಗಳಲ್ಲಿ ವಿನಿಯೋಗಿಸಬೇಕು. ‘ನೀರಿನಂತೆ ಗಳಿಸಬೇಕು, ತೀರ್ಥದಂತೆ ಬಳಸಬೇಕು’ ಎಂದು ಬಸವಣ್ಣನವರು ಹೇಳುತ್ತಾರೆ. ಆದ್ದರಿಂದ ಸಮೃದ್ಧ ಸುಖ ಸೌಖ್ಯಭರಿತ ಸಮಾಜ ನಿರ್ಮಾಣವಾಗುತ್ತದೆ. ಸರ್ವರೂ ಸುಖವಾಗಿರುತ್ತಾರೆ. ಇದನ್ನು ಶರಣರ ದೃಷ್ಟಿಯಲ್ಲಿ ‘ಕಲ್ಯಾಣ ರಾಜ್ಯ’ವೆಂದು ಕರೆದರೆ, ಗಾಂಧೀಜಿಯವರಂಥ ಆಧುನಿಕರ ದೃಷ್ಟಿಯಲ್ಲಿ ಇದನ್ನು ‘ರಾಮ ರಾಜ್ಯ’ವೆಂದು ಕರೆಯಲಾಗಿದೆ.
ಕಾಯಕದಲ್ಲಿ ನಿರತನಾದಡೆ, ಗುರುದರುಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
‘ಕಾಯಕವೇ ಕೈಲಾಸ’ವೆಂದು ನುಡಿದು ಹಾಗೂ ನುಡಿದಂತೆ ಆ ಮಾರ್ಗದಲ್ಲಿ ನಡೆದು ಆದರ್ಶಪ್ರಾಯನಾಗಿರುವ ಕಾಯಕ ನಿಷ್ಠ ಶರಣ ವಚನಕಾರ ಆಯ್ದಕ್ಕಿ ಮಾರಯ್ಯ. ಈತನ ಮೌಖಿಕ ವಿಚಾರವನ್ನು ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಿರುವ ಅಂಬಿಗರ ಚೌಡಯ್ಯ ಸಂಸಾರ ಸಾಗರವನ್ನು ದಾಟಿ, ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನ ನಡೆಸಿದ ಹಾಗೂ “ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನ ಶಿವನೊಂದೆ ಠಾವಿಗೊಯ್ದಿಳುಹುವೆ” ಎಂದು ದೃಢಮನಸ್ಸಿನಿಂದ ಹೇಳಿಕೊಂಡು, ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರಿಗೆಲ್ಲ ಶಿವಪಥ ಮಾರ್ಗವನ್ನು ತೋರಿಸಿದವ.
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರು ಕೊಡುಗೆಯನ್ನಿತ್ತಷ್ಟು, ಮತ್ಯಾವ ಯುಗದಲ್ಲಿ ಕಾಣಲು ಸಾಧ್ಯವಿಲ್ಲ. ವಚನ ಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸುವ ಮೂಲಕ ಎಲ್ಲಾ ವರ್ಗದ ಶರಣೆಯರು ವಚನರಚನೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿತು. ಅವರಲ್ಲಿ ಕೆಲ ಶರಣೆಯರು ತಮ್ಮ ಗಂಡನ ಹೆಸರನ್ನು ವಚನದ ಅಂಕಿತವನ್ನಾಗಿ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ಅಂಕಿತವಾಗಿಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ.
ಕಾಯಕವನ್ನು ಮಾಡಿ, ಜನರಿಗೆ ನೀಡಿ ಬದುಕಬೇಕೇ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವನ್ನು ಹೊಂದಿದವಳು ಆಯ್ದಕ್ಕಿ ಲಕ್ಕಮ್ಮ. ಆಯ್ದಕ್ಕಿ ಲಕ್ಕಮ್ಮಳ ವಚನಗಳಲ್ಲಿ ಆತ್ಮೋದ್ಧಾರ, ಲೋಕೋದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಇಲ್ಲಿ
ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ,
ಬೇಗ ಹೋಗು ಮಾರಯ್ಯಾ
ಎಂದು ಗಂಡನಾದ ಮಾರಯ್ಯ ಕಾಯಕ ಮರೆತು ಅನುಭಾವಗೋಷ್ಠಿಯಲ್ಲಿ ಮೈಮರೆತಾಗ, ಅತನನ್ನು ಎಚ್ಚರಿಸುವಲ್ಲಿ ಲಕ್ಕಮ್ಮಳ ಸಮಯಪ್ರಜ್ಞೆ ಹಾಗೂ ಕಾಯಕ ನಿಷ್ಠೆಯನ್ನು ಅರಿಯಬಹುದು.
ರೆಮ್ಮವ್ವೆ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ‘ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ’ ಅಂಕಿತ ನಾಮದೊಂದಿಗೆ ‘ಬೆಡಗಿನ ವಚನ’ಗಳನ್ನೂ ರಚಿಸಿದ್ದಾಳೆ. ತನ್ನ ಜೀವನ ನಡೆಸಲು, ಸ್ವತಂತ್ರವಾಗಿ ಬದುಕಲು ಮಾರ್ಗತೋರಿದ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು.
ನಾ ತಿರುಗುವ ರಾಟೆಯ ಕುಲಜಾತಿಯ ಕೇಳಿರಣ್ಣಾ;
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು;
ನಿಂದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ – ಎನ್ನ ಗಂಡ ಕುಟ್ಟಿಹ;
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ?
ಈ ವಚನದಲ್ಲಿ ಸೃಷ್ಠಿ, ಸ್ಥಿತಿ, ಲಯಕಾರಕರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿದ್ದಾಳೆ.
ಎಲ್ಲರ ಗಂಡಂದಿರಗೆ ಬೀಜವುಂಟು;
ನಿನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ
ಎಂದು ಹೇಳುವಲ್ಲಿ ತನ್ನ ವೃತ್ತಿ ಸಾಧನವಾದ ಮಗ್ಗವನ್ನು ಕುರಿತೇ ಹೇಳಿದ್ದಾಳೆ. ವೃತ್ತಿ ಪ್ರತಿಮೆಯು ಇಲ್ಲಿ ಸತಿಪತಿಭಾವದ ಮೂಲಕ ಕಾಣಿಸಿಕೊಂಡಿದೆ.
ಹರಳಯ್ಯನವರಿಗೆ ಬಸವಣ್ಣ ಮೂರು ಸಲ ಶರಣಾರ್ತಿಯನ್ನು ಹೇಳಿದಕ್ಕಾಗಿ ಹರಳಯ್ಯನು ತನ್ನ ತೊಡೆಯ ಚರ್ಮದಿಂದ ಪಾದುಕೆಗಳನ್ನು ತಯಾರಿಸಲು ಮುಂದಾಗುತ್ತಾನೆ. ಆಗ ಕಲ್ಯಾಣಮ್ಮ ತನ್ನ ಎಡ ತೊಡೆಯ ಚರ್ಮವನ್ನು ತೆಗೆದುಕೊಂಡು ಪಾದುಕೆಗಳನ್ನು ತಯಾರಿಸಲು ವಿನಂತಿಸಿಕೊಳ್ಳುವಳು. ಇಲ್ಲಿ ಅವಳ ಪತಿ ಭಕ್ತಿ ಹಾಗೂ ಪತಿಯ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾಯಕಕ್ಕೆ ನೇರವಾಗುವಲ್ಲಿ ಅವಳ ಕಾಯಕ ಮನೋಧರ್ಮವನ್ನು ಅರಿಯಬಹುದು.
ಬಸವಯ್ಯನವರ ಧರ್ಮಪತ್ನಿ ಕಾಳವ್ವೆ. ಈ ದಂಪತಿಗಳಿಬ್ಬರೂ ಬಾಚಿ ಕಾಯಕ ಮಾಡುತ್ತಿರುತ್ತಾರೆ. ಕಾಳವ್ವೆ ಗಂಡನ ಕಾಯಕ ದೃಷ್ಟಾಂತದೊಂದಿಗೆ ತನ್ನ ಕಾಯಕ ನಿಷ್ಠೆ ಹಾಗೂ ವ್ರತಗಳ ಮಹತ್ವವನ್ನು ಈ ವಚನದಲ್ಲಿ ಪ್ರತಿಪಾದಿಸಿದ್ದಾಳೆ.
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ,
ಕರ್ಮಹರ ಕಾಳೇಶ್ವರಾ.
ಕೇತಲದೇವಿ ಮತ್ತು ಕುಂಬಾರ ಗುಂಡಯ್ಯ ದಂಪತಿಗಳಿಬ್ಬರೂ ಕಾಯಕದಲ್ಲೇ ಕೈಲಾಸವನ್ನು ಕಂಡವರು. ಕೇತಲದೇವಿಯೂ ಕಾಯಕ ದೃಷ್ಟಾಂತದೊಂದಿಗೆ ವ್ರತಾಚರಣೆಯ ಮಹತ್ವವನ್ನು ಸೌಮ್ಯವಾಗಿ ಹೀಗೆ ಎತ್ತಿ ಹಿಡಿಯುವ ಶರಣೆ.
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ
ರೇಕಮ್ಮ ರೇವಣಸಿದ್ದಯ್ಯರವರ ಪುಣ್ಯಸ್ತ್ರೀ. ಹೂ ಕಟ್ಟುವ ಕಾಯಕದವಳು. ಈ ಶರಣೆ ನಿತ್ಯವೂ ಹೂ ದಂಡೆಯ ಮಧ್ಯೆ ಕೆಂಪು ಸೇವಂತಿಗೆ ಹೂವನ್ನು ಸೇರಿಸುವ ಪದ್ದತಿ ಇಟ್ಟುಕೊಂಡಿದ್ದವಳು. ಭಕ್ತ ಪರೀಕ್ಷಕನಾದ ಶಿವ ಒಮ್ಮೆ ಬೇಕೆಂದೇ ಇವಳಿಗೆ ಕೆಂಪು ಸೇವಂತಿಗೆ ಹೂ ಸಿಗದಂತೆ ಮಾಡುತ್ತಾನೆ. ಇದರಿಂದ ವಿಚಲಿತಗೊಳ್ಳದ ಈಕೆ ತನ್ನ ದೇಹದ ಮಾಂಸವನ್ನೇ ಕೊಯ್ದು ಕೆಂಪು ಸೇವಂತಿಗೆ ಹೂವಿಗೆ ಬದಲಾಗಿ ದಂಡೆ ಕಟ್ಟಿ ಶಿವನಿಗೆ ಅರ್ಪಿಸಿದಳಂತೆ. ಹೀಗೆ ಇವಳು ತನ್ನ ಉಗ್ರ ಭಕ್ತಿಯಿಂದ ಕಾಯಕವನ್ನು ಮಾಡಿ ಶಿವನನ್ನು ಒಲಿಸಿಕೊಂಡು ಶರಣರ ಮೆಚ್ಚುಗೆ ಪಡೆದವಳಾಗಿದ್ದಾಳೆ.
ಕೊಟ್ಟಣದ ಸೋಮಮ್ಮ ಕೊಟ್ಟಣ ಕುಟ್ಟುವ ಕಾಯಕದವಳು. ಸಾಮಾನ್ಯ ವರ್ಗದ ವ್ರತಾಚಾರ ನಿಷ್ಠೆಯ ಶಿವಶರಣೆ. ಅಪಾರ ಧೈರ್ಯವಂತೆ, ಕಾಯಕದಲ್ಲಿ ಕೈಲಾಸ, ನೆಮ್ಮದಿಯನ್ನು ಕಂಡವಳು. ಈಕೆಯು ತನ್ನ ಕಾಯಕ ದೃಷ್ಟಾಂತ ಬಳಸಿ ತಾನು ಹೇಳಬೇಕಾದುದನ್ನು ಧ್ವನಿಪೂರ್ಣವಾಗಿ ಹೀಗೆ ಹೇಳಿದ್ದಾಳೆ.
ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ
ಕಾಶ್ಮೀರದ ದೊರೆ ಮಹದೇವರಸ ಮತ್ತು ಈತನ ಪಟ್ಟ ಮಹಿಷಿ ಗಂಗಾದೇವಿ ದಂಪತಿಗಳಿಬ್ಬರು ಕಲ್ಯಾಣಕ್ಕೆ ಬಂದು ಶರಣದೀಕ್ಷೆ, ಶರಣತ್ವ ಸ್ವೀಕರಿಸಿದರು. ಇವರು ರಾಜ ವೈಭವವನ್ನು ತೊರೆದು, ಈರ್ವರು ಮಹದೇವರಸ ಮೋಳಿಗೆ ಮಾರಯ್ಯನೆಂದು, ರಾಣಿ ಗಂಗಾದೇವಿ ಮೋಳಿಗೆ ಮಹಾದೇವಿಯೆಂಬ ಹೆಸರನ್ನು ಪಡೆದು ಸಾಮಾನ್ಯರಂತೆ ಕಟ್ಟಿಗೆ ಮಾರುವ ಕಾಯಕವನ್ನು ಕೈಗೊಂಡವರು.
ಗಂಗಮ್ಮ ಹಾದರದ ಕಾಯಕ ಮಾಡುತ್ತಿದ್ದವಳು. ಬಸವಣ್ಣನವರ ಮಾರ್ಗದರ್ಶನದಂತೆ ತನ್ನ ಕಾಯಕವನ್ನು ಬಿಟ್ಟು ‘ಮಾರಯ್ಯ’ ಎಂಬುವನನ್ನು ವರಿಸಿ ಗೃಹಿಣಿಯಾದಳು. ಇವಳ ದೃಷ್ಠಿಯಲ್ಲಿ ವ್ಯಕ್ತಿ ಸಮಾಜದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮೈಗಳ್ಳನಾಗದೆ ಬದುಕುವುದು ಮುಖ್ಯವೇ ಹೊರತು, ಅವನದು ಮೇಲು ಕಾಯಕ, ನನ್ನದು ಕೀಳು ಕಾಯಕವೆಂಬ ಕೀಳರಿಮೆ ಹೊಂದಬಾರದು. ತನ್ನ ವೃತ್ತಿಯ ಬಗ್ಗೆ ಅಭಿಮಾನ, ಗೌರವವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ.
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ; ವ್ರತ ತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕ ನರಕ
ಗಂಗೇಶ್ವರಲಿಂಗದಲ್ಲಿ
ಇಲ್ಲಿ ಕಾಯಕಗಳಲ್ಲಿ ಸಮಾನ ಗೌರವವನ್ನು ತಾಳಿದ ಗಂಗಮ್ಮ ಎಲ್ಲ ವ್ರತಗಳನ್ನು ಒಂದೇ ಎಂದು ಭಾವಿಸುತ್ತಾಳೆ. ವ್ರತನಿಷ್ಠರು, ವ್ರತಹೀನರನ್ನು ಬಗೆಯುವುದು ಕೋಗಿಲೆ ಕಾಗೆಯ ಸಂಗ ಬೆಳೆಸಿದಂತೆನಿಸುತ್ತದೆ. ಇಂಥವರಿಗೆ ಘೋರ ನರಕ ಪ್ರಾಪ್ತಿಯಾಗುತ್ತದೆ ಎಂದು ಹೇಳುವಲ್ಲಿ ವ್ರತಾಚಾರದ ಮಹತಿಯನ್ನು ಅರಿಯಬಹುದು.
ಗೊಗ್ಗವ್ವೆ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಇವಳ ನಿಷ್ಠೆಯನ್ನು ಪರೀಕ್ಷಿಸಲು ಶಿವನು ಸ್ಪುರದ್ರೂಪಿ ಯುವಕನ ವೇಷದಲ್ಲಿ ಕಾಣಿಸಿಕೊಂಡು ತನ್ನನ್ನು ಮದುವೆಯಾಗಲು ಗೊಗ್ಗವ್ವೆಯನ್ನು ಒತ್ತಾಯಿಸುವನು. ಅದಕ್ಕೆ ಒಪ್ಪದಿದ್ದಾಗ, ಅವಳ ನಿಷ್ಠೆಯನ್ನು ಮೆರೆಯಲು ವೀರಶೈವೋಪದೇಶವನ್ನು ಮಾಡಿ ಶಿವಭಕ್ತರಿಗೆ ಧೂಪವನ್ನರ್ಪಿಸುತ್ತ ಜೀವನವನ್ನು ಸಾಗಿಸಲು ಹೇಳುತ್ತಾನೆ. ಅಂದಿನಿಂದ ಧೂಪದ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಮುನ್ನಡೆದಳೆಂದು ತಿಳಿದು ಬರುತ್ತದೆ.
ಆದ್ಯ ವಚನಕಾರನೆಂಬ ಹೆಗ್ಗಳಿಕೆ ಕಾರಣನಾದ ಜೇಡರ ದಾಸಿಮಯ್ಯನ ಧರ್ಮಪತ್ನಿ ದುಗ್ಗಳೆ. ಪತಿಯೊಂದಿಗೆ ಏಕವಾಗಿ ಬೆರೆತು ಹಿತವಾದ ಶಿವಭಕ್ತಿಯಲ್ಲಿ ನಿರತಳಾದ ಶಿವಶರಣೆ. ಈಕೆಯ ಕಾಯಕ ಬಟ್ಟೆ ನೇಯುವದು. ಈ ಅನುರೂಪವಾದ ಪತಿಪತ್ನಿಯರ ಕಾಯಕ ನಿಷ್ಠೆ, ವಸ್ತ್ರದಾನದ ವೈಶಿಷ್ಟö್ಯಗಳನ್ನು ಬಸವಣ್ಣ, ಕೋಲಶಾಂತಯ್ಯ, ಸತ್ಯಕ್ಕ ಮೊದಲಾದವರು ಕೊಂಡಾಡಿದ್ದಾರೆ.
ಕಾಯಕ ತತ್ವವು ಉದ್ಯೋಗದ ಹಿಂದೆ ಬಂದ ಜಾತಿಗಳ ನಡುವಿನ ಬಂಬಂಧವನ್ನು ಕಿತ್ತುಹಾಕಿ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭೇದ-ಭಾವವನ್ನು ಅಳಿಸಿಹಾಕಿತು. ಈ ಮೂಲಕ ಅಸಂಗ್ರಹ ತತ್ವವನ್ನು ಪ್ರತಿಪಾದಿಸಿತು. ಈ ಮೂಲಕ ಸಾಮಾಜಿಕ ಸಾಮರಸ್ಯ, ಸ್ವಾಸ್ಥö್ಯವನ್ನು ನೆಲೆಗೊಳ್ಳುವಂತೆ ಮಾಡಲು ಪ್ರಯತ್ನಿಸಿದರು ನಮ್ಮ ಶಿವಶರಣ ಮತ್ತು ಶಿವಶರಣೆಯರು. ಸಾಮಾಜಿಕ ಮೌಲ್ಯಗಳನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಮೀಕರಿಸಿ ಹೇಳುವ ಪ್ರಯತ್ನವನ್ನು ಮಾಡಿದರು ಹೇಳಬಹುದು.
ಡಾ. ಮಲ್ಲಿಕಾರ್ಜುನ ಕೆ.
ಸಹ ಪ್ರಾಧ್ಯಾಪಕರು,
ಡಾ.ಎಂ.ಚಿದಾನಂದಮೂರ್ತಿ ಕನ್ನಡ ಅಧ್ಯಯನ
ಮತ್ತು ಸಂಶೋಧನಾ ಕೇಂದ್ರ,
ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.
ಮೋಬೈಲ್. ನಂ. ೯೮೪೪೮ ೫೨೬೪೩
ಕೊನೆ ಟಿಪ್ಪಣಿಗಳು :
೧. ಕೊಪ್ಪಾ ಎಸ್.ಕೆ., ಪಡಶೆಟ್ಟಿ ಎಂ. ಎಂ. (ಸಂ): ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ (ಸಂ-೧೦); ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಾಪುರ, ೨೦೦೭, ಪು.-೯೫
೨. ಸಮಗ್ರ ವಚನ ಸಂಪುಟ-೧: ಡಾ.ಎಂ.ಎಂ.ಕಲಬುರ್ಗಿ (ಸಂ.), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧
೩. ಸಮಗ್ರ ವಚನ ಸಂಪುಟ-೩: ಡಾ. ಬಿ. ವಿ. ಮಲ್ಲಾಪೂರ (ಸಂ.), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧, ವ.ಸಂ.-೧೧೦೬
೪. ಸಮಗ್ರ ವಚನ ಸಂಪುಟ-೮: ಡಾ. ಬಿ. ಆರ್. ಹಿರೇಮಠ (ಸಂ.), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧ಸಮಗ್ರ ವಚನ ಸಂಪುಟ-೮, ವ.ಸಂ.-೧೨೬೬
೫. ಸಮಗ್ರ ವಚನ ಸಂಪುಟ-೯: ಡಾ. ಬಿ. ಆರ್. ಹಿರೇಮಠ (ಸಂ.), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧ ವ.ಸಂ.-೨೬೬
೬. ಸಮಗ್ರ ವಚನ ಸಂಪುಟ-೬: ಡಾ. ಎಂ. ಎಂ. ಕಲಬುರ್ಗಿ (ಸಂ.), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧ ವ. ಸಂ-೧೧೭೦
೭. ಸಮಗ್ರ ವಚನ ಸಂಪುಟ-೫: ಡಾ. ವೀರಣ್ಣ ರಾಜೂರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೧, ವ. ಸಂ-೭೧೩.
ಸ್ಥಲಾಧಾರದ ಮೇಲೆ ಕಾಯಕ ವರ್ಗೀಕರಣ ಸರಿ ಎನಿಸುವುದಿಲ್ಲ.
ಯಾವ ಕಾಯಕವಿಡಿದರೂ ಆ ಕಾಯಕದಲ್ಲಿ ಆರೂ ಸ್ಥಲವಳವಡಬೇಕು ಇದು ಶರಣರ ಸ್ಪಷ್ಟ ನಿಲುವು.