ವಚನ ಸಾಹಿತ್ಯದಲ್ಲಿ ಮಹಿಳೆ ಮತ್ತು ಕುಟುಂಬ/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ
ಮರುಳಾಗಿ ತೋರುವುದು.
ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-98/ವಚನ ಸಂಖ್ಯೆ-278)

ಮರ್ತ್ಯದ ಕತ್ತಲೆಯನ್ನು ಕಳೆದು ಅಜ್ಞಾನದಿಂದ ಸುಜ್ಞಾನದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತದಿಂದ ಅಮೃತದೆಡೆಗೆ ನಡೆಸಿದ ನಾಡು ಕಂಡ ಚೇತನ ಶಕ್ತಿಗಳು ಬಸವಾದಿ ಶಿವಶರಣರು. ಮನುಷ್ಯತ್ವದ ನಿಜ ನೆಲೆಯನ್ನು ಅರುಹಿ, ಮಾನವತ್ವದ ಮಹಾಬೆಳಗಿನೊಳಗೆ ಸಕಲ ಚೇತನರನ್ನೂ ದೇವನನ್ನಾಗಿ ಕಂಡ ದಿವ್ಯಾತ್ಮರು, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಸಮ ಸಮಾಜ ಕಟ್ಟಲು ಮುಂದಾದ ಹರಿಕಾರರು ಬಸವಾದಿ ಶಿವಶರಣರು ಇವರು ಕಟ್ಟಿಕೊಟ್ಟ ಪರ್ಯಾಯ ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಕಟ್ಟುಪಾಡುಗಳ ಹಗ್ಗ ಚಟಪಟನೆ ಹರಿದು ಹೋಯಿತು. ವರ್ಗ, ವರ್ಣ, ಲಿಂಗ ತಾರತಮ್ಯಕ್ಕೆ ತೆರೆ ಬಿದ್ದಿತು. ಬದುಕಿದರೆ ಎಲ್ಲರೂ ಸಮಾನವಾಗಿಯೇ ಬದುಕೋಣ ಉಂಡರೆ ಎಲ್ಲರೂ ಕೂಡಿಯೇ ಉಣ್ಣೋಣ. ಪರಸ್ಪರ ವ್ಯಕ್ತಿ, ಗೌರವ, ಆತ್ಮಾಭಿಮಾನಗಳಿಂದ ಒಬ್ಬರನ್ನೊಬ್ಬರು ಅಪ್ಪಿಕೊಳ್ಳೋಣ ಒಪ್ಪಿಕೊಳ್ಳೋಣ. ಮನುಷ್ಯ ಮನುಷ್ಯರನ್ನು ಮನುಷ್ಯರಂತೆ ಕಾಣೋಣ. ಈ ದಸ್ಯು ಸಂಸ್ಕೃತಿಯಿಂದ ದೂರಾಗಿ ವ್ಯಕ್ತಿ ಸ್ವಾತಂತ್ರ್ಯ ಸ್ವಾಗತಿಸೋಣ ಎಂಬ ಮಹಾ ಮಣಿಹದಲ್ಲಿ ಹೊಸ ಬೆಳಕನ್ನು ತಂದು ಕೊಟ್ಟವರು ಬಸವಾದಿ ಶಿವಶರಣರು. ಈ ಕಾರಣದಿಂದಲೇ ಅವರು ನಿತ್ಯ ಸ್ಮರಣೀಯರು.

ದಸ್ಯು ಸಂಸ್ಕೃತಿಯಲ್ಲಿ ಪುರುಷನ ಅಡಿಯಾಳಾಗಿ ತಲೆ ತಗ್ಗಿಸಿ, ಒಪ್ಪಿಸಿ, ಸ್ವಾತಂತ್ರ ರಹಿತ ಸ್ಥಿತಿಯಲ್ಲಿ ವಸ್ತುವಿನಂತೆ ಅಸ್ತಿತ್ವವನ್ನೇ ಕಳೆದುಕೊಂಡು, ಮೂಕ ರೋಧನೆಯಲ್ಲಿ ಪರಿತಪಿಸುತ್ತಿದ್ದ ಮಹಿಳೆಯ ಶತ ಶತಮಾನಗಳ ಅಖಂಡ ಮೌನಕ್ಕೆ ಧ್ವನಿಯಾದ ಬಸವಾದಿ ಶಿವಶರಣರ ವಿಚಾರಗಳನ್ನು ಅವರ ಬದುಕನ್ನು ಮುಂದಿಟ್ಟುಕೊಂಡೆ ನಾನು ಮಹಿಳೆಯ ಕುರಿತು, ಅವಳು ಕಟ್ಟಿದ ಕುಟುಂಬ (ಮನೆತನ) ದ ಕುರಿತು ಈ ಲೇಖನವನ್ನು ಬರೆಯುತ್ತಿರುವೆ. ಮಹಿಳೆಯ ಸ್ಥಿತಿಗತಿ, ವೈದಿಕಶಾಹಿ ಪರಂಪರೆಯಲ್ಲಿ ಅವಳು ಅನುಭವಿಸಿದ ಯಾತನೆಯೊಂದಿಗೆ ಸಮಾಜಕ್ಕೆ ಅವಳು ನೀಡಿದ ಬಹು ಮುಖ್ಯವಾದ ಉಡುಗೊರೆ “ಕುಟುಂಬ ವ್ಯವಸ್ಥೆ” ಯನ್ನು ಬಹು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ.

ಭಾರತಕ್ಕೆ ಆರ್ಯರ ಆಗಮನಕ್ಕಿಂತ ಮುನ್ನ “ಮಾತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ” ಇದ್ದು, ಆರ್ಯರ ಆಗಮನವಾದ ನಂತರ “ಪಿತೃಪ್ರಧಾನ ಕೌಟುಂಬಿಕ ವ್ಯವಸ್ಥೆ” ಪಾದಾರ್ಪಣೆ ಮಾಡಿತು. ಇದರ ಪರಿಣಾಮವಾಗಿ ಯಜಮಾನಿಕೆಯ ಸಂಸ್ಕೃತಿಯ ರಾಜಕಾರಣ ಕುಟುಂಬದಲ್ಲಿ ಪ್ರಾರಂಭವಾಗಿ ಕ್ರಮೇಣ ಕುಟುಂಬದಲ್ಲಿ, ಸಮಾಜದಲ್ಲಿ ಮಹಿಳೆಯ ಪ್ರಧಾನ್ಯತೆ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಗೌಣತೆ ಕಾಣಿಸಿಕೊಳ್ಳಲಾರಂಭಿಸಿತು. ಅವಳು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದೆ ತೆರೆಮರೆಯ ಹಿಂದೆಯೇ ಉಳಿಯಬೇಕಾಯಿತು.

ವೈದಿಕಶಾಹಿಯ ವ್ಯವಸ್ಥೆಯಲ್ಲಿ ಮಹಿಳೆಯನ್ನು ನೋಡಿದ ಕ್ರಮದಲ್ಲಿ ವೈರುದ್ಧತೆಗಳಿವೆ. ಸಾಮಾನ್ಯವಾಗಿ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” (ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.) ಈ ಮಾತು ಕೇಳಿದ ಕ್ಷಣ ಸ್ತ್ರೀಯರಿಗೆ ಅತ್ಯಂತ ರೋಮಾಂಚನವಾಗಿ ಹರ್ಷೋಲ್ಲೋಸದಲ್ಲಿ ಮೈಮರೆತು ಬಿಡುತ್ತಾರೆ. ಅವರಿಗೆ ಗೊತ್ತಿಲ್ಲ ದೇವತೆ’ಯಾಗುವ ದುರಂತ. ಸಾಮಾನ್ಯವಾಗಿ ದೇವತೆಗಳನ್ನು ಕಲ್ಲನ್ನಾಗಿ ಮಾಡಿರುತ್ತಾರೆ. ಆ ಕಲ್ಲಿಗೆ ಯಾವ ಸ್ವಾತಂತ್ರ್ಯವೂ ಇರಲು ಸಾಧ್ಯವಿಲ್ಲ. ಅದು ಜಡ. ಆ ದೇವತೆ ಗರ್ಭಗುಡಿಯಲ್ಲಿ ಕಣ್ಣು ತೆರೆದು ಹಾಗೆಯೇ ಅದೇ ಭಂಗಿಯಲ್ಲೇ ಕುಳಿತುಕೊಳ್ಳಬೇಕು. ಅವರು ಮಾಡುವ ಪೂಜೆಗಳನ್ನು ಮಾಡಿಸಿಕೊಳ್ಳುತ್ತಲೆ ಇರಬೇಕು. ಇದಕ್ಕಿಂತ ದೊಡ್ಡ ದುರಂತವೆಂದರೆ ಹೆಣ್ಣು ದೇವತೆಗಳನ್ನು ಪೂಜಿಸಲು ಸಹ ಮಹಿಳೆಗೆ ಸ್ವಾತಂತ್ರ್ಯವಿಲ್ಲ. ಪೂಜೆ ಮಾಡುವ ಹಕ್ಕು ಸಹ ಪುರುಷನದೆ ಆಗಿ ಉಳಿದು ಬಿಟ್ಟಿತು. ಇದು ದೇವತೆಯಾಗುವ ದುರಂತ. ಅಂದರೆ ಸ್ತ್ರೀಗೆ ದೇವತೆಯ ಪಟ್ಟ ಕಟ್ಟಿ ಅಲ್ಲಿಯೂ ಅವಳ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಒಳ ರಾಜಕೀಯ ಸಾಮಾನ್ಯವಾಗಿ ಅರ್ಥವಾಗುವುದು ಬಹಳ ಕಷ್ಟ.

ಯಾವ ಮನುಶಾಸ್ತ್ರ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂದು ಹೇಳಿತೊ ಅದೇ ಶಾಸ್ತ್ರ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎಂದು ಘೋಷಿತು. ಇದೇ ವೈರುಧ್ಯದ ಮತ್ತೊಂದು ಹೇಳಿಕೆ. ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯೌವನದಲ್ಲಿ ಪತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಗನ ಆಶ್ರಯದಲ್ಲಿ ಜೀವನ ಕಳೆಯುವ ಸ್ತ್ರೀಗೆ ಸ್ವಾತಂತ್ರ್ಯ ಪಡೆದುಕೊಳ್ಳುವ ಅರ್ಹತೆಯೇ ಇಲ್ಲ ಎಂಬುದು ಖಂಡಿತವಾಗಿಯೂ ಮಹಿಳೆಗೆ ಖುಷಿ ಕೊಡುವ ಸಂಗತಿಯೇ ಅಲ್ಲ. ವಾಸ್ತವದಲ್ಲಿ ಮಹಿಳೆಗಿಂತ ಪುರುಷನೆ ಮಹಿಳಾ ಅವಲಂಬಿಯಾಗಿದ್ದಾನೆ. ಪುರುಷ ಹುಟ್ಟಿನಿಂದಲೆ ಸ್ತ್ರೀಯ ಮೆಲೆ ಅವಲಂಬಿತವಾಗುವ ಜೀವನಕ್ರಮ ಪ್ರಾರಂಭವಾಗುತ್ತದೆ. ಅವನು ಹುಟ್ಟಿದಾಗಲೆ “ರೋಗ ನಿರೋಧಕ” ಶಕ್ತಿ ನೀಡುವ ತಾಯಿಯೇ ಎದೆ ಹಾಲು ಕುಡಿಸುವ ಮೂಲಕ ಪುರುಷನ ಅವಲಂಬಿತ ಜೀವನ ಪ್ರಾರಂಭವಾಗುತ್ತದೆ. ಶೈಶವಾಸ್ಥೆಯಿಂದ ಯೌವನಾವಸ್ಥೆಯವರೆಗೆ ಅವನು ತಾಯಿ, ಸಹೋದರಿಯರ ಮೇಲೆ ಅವಲಂಬಿತನಾಗುತ್ತಾನೆ. ಅವನ ಪಾಲನೆ-ಪೋಷಣೆ, ಊಟ-ಉಪಚಾರ ಎಲ್ಲದಕ್ಕೂ ಕುಟುಂಬದ ಮಹಿಳೆಯರನ್ನು ಅವಲಂಬಿಸುತ್ತಾನೆ. ಮುಂದಿನ ಹಂತದಲ್ಲಿ ತಾಯಿಗೆ ವಯಸ್ಸಾದಂತೆ ಮಗ (ಪುರುಷನ) ನ ಆರೈಕೆಗೆ ಕನ್ಯೆ ಹುಡುಕಿ ಮದುವೆ ಮಾಡಲಾಗುತ್ತದೆ. ತಾಯಿಯ ಪರ್ಯಾಯದಲ್ಲಿ ಪತ್ನಿಯ ರೂಪದ ಹೆಣ್ಣುಮಗಳು ಪುರುಷನ ಸಕಲ ಆಗು ಹೋಗುಗಳನ್ನು ಮತ್ತು ಆರೈಕೆಯನ್ನು ನೋಡಿಕೊಳ್ಳುತ್ತಾಳೆ. ಮುಪ್ಪಾವಸ್ಥೆಯಲ್ಲಿ ಸೊಸೆ, ಇಲ್ಲದಿದ್ದರೆ ಮಗಳು, ಅವಳೂ ಇಲ್ಲದಿದ್ದರೆ ದಾದಿ, ಸೇವಕಿ ಹೀಗೆ ಯಾವುದೇ ಸಂಬಂಧದಲ್ಲಿ ಮಹಿಳೆಯ ಆಶ್ರಯದಲ್ಲಿ ಪುರುಷನಿರುತ್ತಾನೆ. ಮಹಿಳೆ ಪುರುಷನಿಗೆ ಅವಲಂಬಿತಳಾಗುತ್ತಾಳೆ ಎಂಬುದಾದರೆ ಇದನ್ನು ಹೀಗೂ ಅರ್ಥೈಯಿಸಬಹುದಲ್ಲವೇ? ಅದು ಪುರುಷನ ಅಭಿಮಾನವಾದರೇ, ಇದು ಸ್ತ್ರೀಯ ಅಭಿಮಾನವಲ್ಲವೇ? ಇದನ್ನೇ ನಾನು ಪ್ರಾರಂಭದಲ್ಲಿ ಉಲ್ಲೇಖಿಸಿದ ಮಹಿಳಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕ್ಷಿ ನುಡಿದ ಅಕ್ಕಮಹಾದೇವಿಯವರ ವಚನದಲ್ಲಿ ದರ್ಶಿಸಿದ್ದು. ಎಲ್ಲೊ ಹುಟ್ಟಿ ಬೆಳೆದ ಹೆಣ್ಣೊಂದು ನೂರಾರು ಕನಸುಗಳನ್ನು ಹೊತು ಮತ್ತೊಂದು ಮನೆಗೆ ಬಂದು ಕಣ್ಣಾಗುವದು, ಬೆಳಕಾಗುವುದು, ಕುಟುಂಬ ಕಟ್ಟಿ ಬೆಳೆಸುವುದು ಮಾತಾಡಿದಷ್ಟು ಸುಲಭದ ಕೆಲಸವಲ್ಲ.

ದೇವತೆ ಎಂದು ಕರೆದರು ಜೊತೆಗೆ ರಾಕ್ಷಸಿಯ ಪಟ್ಟವನ್ನೂ ಕಟ್ಟಿ ಇನ್ನೊಂದು ವೈರುಧ್ಯದ ದಿಕ್ಕು ಮಹಿಳೆಯನ್ನು ದಿಕ್ಕೆಗ್ಗೆಡಿಸಿದ್ದು ಪುರೋಹಿತಶಾಹಿಯ ಮತ್ತೊಂದು ಕ್ರೂರ ಮುಖ. ಲಿಂಗಭೇದವನ್ನೇ ಮುಂದು ಮಾಡಿಕೊಂಡು ಲಿಂಗತಾರತಮ್ಯ ಮಾಡಿದ್ದು ಮಹಿಳಾ ಲೋಕಕ್ಕೆ ಮಾಡಿದ ಬಹು ದೊಡ್ಡ ಅನ್ಯಾಯ. ಸಂತಾನೋತ್ಪತ್ತಿಗಾಗಿ ಮಹಿಳೆ ಮತ್ತು ಪುರುಷನ ಜನನಾಂಗದ ಭೇದ ಹೊರತು ಪಡಿಸಿದರೆ ಇಬ್ಬರಲ್ಲೂ ಸಮಾನ ಅವಯವಗಳು ಇದ್ದದ್ದನ್ನು ಯಾಕೆ ಮರೆಯಲಾಯಿತು? ಹುಟ್ಟಿಗೆ ಕಾರಣವಾಗುವ ಹೆಣ್ಣಿನ ಮುಟ್ಟನ್ನೇ ಮುಂದಿಟ್ಟುಕೊಂಡು ಅವಳನ್ನು, ಮಲಿನೆ, ಕುಲೀನೆ, ಅಪವಿತ್ರಾತ್ಮೆ, ಅಮಂಗಲೆ, ಮೈಲಿಗೆ ಎಂದು ಅವಳನ್ನು ಮತ್ತು ಅವಳ ದೇಹವನ್ನು ಯಾಕೆ ತುಚ್ಛೀಕರಿಸಲಾಯಿತು? ಧರ್ಮ, ದೇವರು, ದೇವಾಲಯ, ಮಂತ್ರ ಪಠಣ, ಶಾಸ್ತ್ರ ಅಧ್ಯಯನಗಳಿಂದ ಯಾಕೆ ದೂರವಿರಿಸಲಾಯಿತು? ಇದೊಂದು ಪುರುಷ ರಾಜಕೀಯ, ಇದೊಂದು ಯಜಮಾನಿಕೆಯ ದರ್ಪಹಾಗಾಗಿ ಇದು ಖಂಡನೀಯವಾಗಿದೆ.

ಹೆರಿಗೆ ಮನೆ, ಅಡುಗೆ ಮನೆಗೆ ಸೀಮಿತಗೊಳಿಸಲಾಗಿಯೂ ಮಹಿಳೆ ಕುಟುಂಬ ಕಟ್ಟಿ ಅದನ್ನು ನಿರ್ವಹಣೆ ಮಾಡಿದು ಸುಳ್ಳೆ? ಮನೆತನವನ್ನು ಕಟ್ಟಿ ಮುನ್ನಡೆಸುತ್ತಿರುವ ಮಹಿಳೆಯ ಶಕ್ತಿ ಕಡಿಮೆಯೇ? ಅದೇಕೆ ಕಡೆಗಣಿಸಲ್ಪಡುತ್ತಿದೆ? ಇಂತಹ ವ್ಯವಸ್ಥೆಯನ್ನೇ 12 ನೇ ಶತಮಾನದ ಬಸವಾದಿ ಶಿವಶರಣರು ಪ್ರಶ್ನಿಸಿದ್ದರು ಮತ್ತು ಅಲ್ಲಗಳೆದಿದ್ದರು.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-546)

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ,
ಹೆಣ್ಣೊ ಗಂಡೊ ನಾಸ್ತಿನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-301/ವಚನ ಸಂಖ್ಯೆ-778)

ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು.
ಮೊಲೆ ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು.
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು,
ಆ ಇಬ್ಬರ ನಡುವೆ ಸುಳಿದ ಆತ್ಮನು
ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ.
ಇದರಂತುವ ತಿಳಿದು ನೋಡಿಹೆನೆಂದರೆ
ಶ್ರುತಿಗಳಿಗೋಚರೆಂದ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-99/ವಚನ ಸಂಖ್ಯೆ-261)

ಎಂಬ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತನೆಗೈದ ಶರಣರು ತಮ್ಮ ಕಾಲಘಟ್ಟದಲ್ಲಿ ಮಹಿಳೆಯರಿಗೆ ಉನ್ನತವಾದ ಗೌರವ ಸ್ಥಾನ ನೀಡಿದರು. ಆ ಸಂದರ್ಭದಲ್ಲೇ ಮಹಿಳಾ ಅಸ್ಮಿತೆ, ಮಹಿಳಾ ಅಸ್ತಿತ್ವ, ಲಿಂಗ ಸಮಾನತೆ ಎಂಬ ಪದಗಳಿಗೆ ನಿಜವಾದ ಅರ್ಥ ಬಂದದ್ದು. ಆಗಲೇ ಮಹಿಳೆ ಸಾಮಾಜಿಕವಾಗಿ, ಕೌಟುಂಬಿಕವಾಗಿ ಗೌರವ ಪಡೆದುಕೊಂಡದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖ್ಯ ನೆಲೆಯಾದ ಸಾಹಿತ್ಯ ರಂಗಕ್ಕೆ ತನ್ನನ್ನು ತೆರೆದುಕೊಂಡಿದ್ದು ಆಧ್ಯಾತ್ಮದ ನೆಲೆಯ ತುತ್ತ ತುದಿಗೇರಿದ್ದು. ಮಹಿಳೆಯು ಕುಟುಂಬ ವ್ಯವಸ್ಥೆಗೆ ಮತ್ತು ಸಾಮಾಜಿಕವಾಗಿ ಪಾಲ್ಗೊಳ್ಳಲು ಅವಕಾಶ ನೀಡಿದವರು ಬಸವಾದಿ ಶಿವಶರಣರೇ ಆಗಿದ್ದಾರೆ. ಇವರೆಂದೂ ಸಂಸಾರವನ್ನು ತುಚ್ಛೀಕರಿಸಲಿಲ್ಲ. ಸಂಸಾರ ಹೇಯ ಎಂದು ಸಂಸಾರದಿಂದ ದೂರ ಓಡಿ ಹೋಗಲಿಲ್ಲ. ಸಂಸಾರದಲ್ಲಿ ಇದ್ದುಕೊಂಡೆ ಸದ್ಗತಿ ಹೊಂದಬಹುದು ಎಂಬುದನ್ನು ಸಾಬಿತು ಮಾಡಿದವರು. ಪ್ರತಿ ಕುಟುಂಬವೂ ದೇವಾಲಯವಾಗುವ ಮಾರ್ಗ ತೋರಿದರು. ಸತಿ-ಪತಿ ಒಂದಾದ ಕುಟುಂಬ ಶಿವನ ಅಸ್ಥಾನವೇ ಆಗುವುದು ಎಂದು ನಡೆದು ತೋರಿದರು. ಸಂಸಾರದಿಂದಲೇ ಪದ್ದತಿ, ಅದರಲ್ಲೂ ಸತಿಯಿಂದಲೇ ಸದ್ಗತಿ ಎಂದರು. ಸತಿ ಮತ್ತು ಪತಿ ಇಬ್ಬರ ಸಹಭಾಗಿತ್ವವೂ ಬಹಳ ಮುಖ್ಯವಾಗಿರುತ್ತದೆ, ದಾಂಪತ್ಯವನ್ನು ದಾಂಪತ್ಯಧರ್ಮ ಎನ್ನುತ್ತಲೆ ದಾಂಪತ್ಯ ಧರ್ಮವನ್ನು ಸ್ವೀಕರಿಸಿದರು, ಪುರಸ್ಕರಿಸಿದರು. ಶಿವಶರಣರು ಸಮಾಜವು ಆರೋಗ್ಯಪೂರ್ಣವಾಗಿ ಇರಬೇಕೆಂದರೆ ದಾಂಪತ್ಯ, ಕುಟುಂಬಗಳು ಎಷ್ಟು ಮುಖ್ಯ ಎಂಬುದನ್ನು ಪ್ರತಿಪದಿಸಿದರು.

ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು?
ಸತಿಪತಿರತಿಸುಖಭೋಗೋಪಭೋಗವ, ವಿಳಾಸವ
ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮಾಚಾರಕ್ಕೆ ದೂರ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-174/ವಚನ ಸಂಖ್ಯೆ-639)

ಎಂಬಲ್ಲಿ ಬಸವಣ್ಣನವರು ಪವಿತ್ರ ದಾಂಪತ್ಯದ ಮಹತ್ವವನ್ನು ತಿಳಿಯಪಡಿಸುತ್ತಲೆ ಇಂದ್ರಿಯ ನಿಗ್ರಹದಿಂದಾಗುವ ದುಷ್ಪರಿಣಾಮದ ವೈಜ್ಞಾನಿಕ ಚಿಂತನೆ ಮಾಡುತ್ತಾರೆ. ಶಿವಯೋಗಿ ಸಿದ್ಧರಾಮೇಶ್ವರರು ಇದನ್ನೇ ಹೇಳುತ್ತಾರೆ. ‌

ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-252/ವಚನ ಸಂಖ್ಯೆ-826)

“ಭಕ್ತನ ಮನ ಹೆಣ್ಣಿನೊಳಗಾದರೆ ವಿವಾಹವಾಗಿ ಕೊಡುವುದು” ಎಂದು ವೈದಿಕತೆಯು ಬ್ರಹ್ಮಚರ್ಯವನ್ನು ಪುರಸ್ಕರಿಸಿತು ನಿಜ. ಆದರೆ ಇಂದ್ರಿಯ ನಿಗ್ರಹಿಸಲಾಗದೆ ಅನೈತಿಕ ಸಂಬಂಧದಿಂದ ಸಮಾಜದ ಸ್ವಾಸ್ಥ್ಯ ಹದಗೆಡಲು ಸಾಕಷ್ಟು ಸಾಧ್ಯತೆ ಇದೆ. ಅಕ್ರಮ ಸಂತಾನದಿಂದ ಸಮಾಜವು ಹದಗೆಡುತ್ತದೆ. ಅದಕ್ಕಾಗಿ ವೈಜ್ಞಾನಿಕವಾದ ಸತ್ಯವೆಂದರೆ ಮದುವೆ, ಸಂಸಾರ, ಮಕ್ಕಳು, ಕುಟುಂಬದ ಸಂರಚನೆಯಿಂದ ಸಮಾಜದಲ್ಲಿ ಹೊಂದಾಣಿಕೆಯು ಸಾಧ್ಯವಾಗುತ್ತದೆ ಎಂಬುದಾಗಿದೆ. ಈ ಸತ್ಯದ ಅರಿವು ಇರುವುದರಿಂದ ಶರಣರು ವಾಸ್ತವಕ್ಕೆ ಅಂಟಿಕೊಂಡು, ಸಂಸಾರದಲ್ಲಿದ್ದುಕೊಂಡು, ಸತಿ ಪತಿಗಳಿಬ್ಬರೂ ಸೇರಿ ಸತಿ ಪತಿ ಭಾವದಿಂದ ಲಿಂಗಾಂಗ ಸಾಮರಸ್ಯ ಹೊಂದಿ ಜೀವಿತಾವಧಿಯಲ್ಲೇ ಮುಕ್ತಿ ಪಥವನ್ನು ಕಂಡುಕೊಂಡರು. ಮೇಲೆ ನಿರೂಪಿತವಾದ ಶಿವಯೋಗಿ ಸಿದ್ಧರಾಮೇಶ್ವರರ ವಚನದಲ್ಲಿರುವಂತೆ “ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು”, “ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು” ಎಂಬ ಮನುಷ್ಯ ಸಹಜ ಕಾಮಾದಿಗಳ ಕುರಿತು ಅರಿವನ್ನು ತಾಳಿ, ಇದನ್ನು ಆತ್ಮೀಯ ನೆಲೆಯಲ್ಲಿ ಗೌರವಯುತವಾಗಿ ಪೂರೈಸಲು ಕುಟುಂಬ, ವಿವಾಹ, ದಾಂಪತ್ಯದ ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದು ಅವರ ಪ್ರಬುದ್ಧ ಮನಸ್ಥಿತಿಯ ಪ್ರತೀಕ ಇಂತಹ ಕುಟುಂಬವನ್ನು ಪ್ರೀತಿಯಿಂದ ಕಟ್ಟುವಲ್ಲಿ ಮಹಿಳೆಯ ಪಾತ್ರಗಣನೀಯವಾಗಿದೆ.

ಶಿವ ಶರಣರು ಪಾಲಿಸಿದ ದಾಂಪತ್ಯ ಧರ್ಮ:

ಎಲ್ಲೋ ಹುಟ್ಟಿದ ಹೆಣ್ಣು, ಎಲ್ಲೋ ಹುಟ್ಟಿದ ಗಂಡು ವಿವಾಹ ವ್ಯವಸ್ಥೆಯ ಮೂಲಕ ಒಂದೆಡೆ ಸೇರಿಕೊಂಡು ಜೀವನ ನಡೆಸುವ ಕ್ರಮವೇ ದಾಂಪತ್ಯ ಧರ್ಮವಾಗಿದೆ. ಭಾರತೀಯ ಸಮಾಜದಲ್ಲಿ ಮದುವೆ ಅಥವಾ ವಿವಾಹ ಎಂಬ ಸಂಸ್ಥೆ ಅತ್ಯಂತ ಪವಿತ್ರವಾದುದು. ಹೆಣ್ಣು-ಗಂಡು ಒಂದಾಗಿ ಬದುಕಲು ವಿವಾಹದ ಮುದ್ರೆ ಬೇಕು ಎಂಬುದು ಸಂಪ್ರದಾಯವಾಗಿದೆ. ದಾಂಪತ್ಯವು ಮುಂದೆ ಮಕ್ಕಳು-ಮೊಮ್ಮಕ್ಕಳು ಎಂದು ವಿಸ್ತರಿಸಿಕೊಂಡು ಕುಟುಂಬವಾಗಿ ಬೆಳೆಯುತ್ತದೆ. ಕುಟುಂಬ ಸಮಾಜದ ಬಹುದೊಡ್ಡ ಘಟಕವಾಗಿ ಮಾನ್ಯತೆ ಪಡೆದುಕೊಳ್ಳುತ್ತದೆ.

ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯದು ಅತ್ಯಂತ ಮಹತ್ವದ ಪಾತ್ರವಾಗಿದೆ. ಅದಕ್ಕಾಗಿಯೇ ಆದ್ಯ ವಚನಕಾರರಾದ ಶಿವಶರಣ ಜೇಡರದಾಸಿಮಯ್ಯನವರು

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-287/ವಚನ ಸಂಖ್ಯೆ-822)

“ದುಗ್ಗಳೆಯನ್ನು ತಂದು ನಾನು ಬದುಕಿದೆನಯ್ಯಾ” ಎಂದು ಆತ್ಮ ತೃಪ್ತಿಯಿಂದ ಹೇಳಿದ್ದನ್ನು ಕಾಣಬಹುದಾಗಿದೆ. ಒಂದು ಕುಟುಂಬವನ್ನು ಕಟ್ಟುವಲ್ಲಿ ಬೌದ್ಧಿಕ ಸಾಮರ್ಥ್ಯ ಹೊಂದಿದ ಮಹಿಳೆ ಎಷ್ಟು ಪ್ರಮುಖವಾಗಿರುತ್ತಾಳೆ ಎಂಬುದನ್ನು ದುಗ್ಗಳೆಯು ಸಾಬೀತು ಮಾಡುತ್ತಾಳೆ. ಜೇಡರ ದಾಸಿಮಯ್ಯನವರು ಒಡ್ಡಿದ ಪರೀಕ್ಷೆ ‘ಮಳಲಕ್ಕಿ ಪಾಯಸ’ ಮಾಡುವಲ್ಲಿ ಯಶಸ್ವಿಯಾಗಿ ನಿಲ್ಲುತ್ತಾರೆ. ಕಟ್ಟಿಗೆ, ನೀರು ಬಳಸದೆ ಮಳಲು ಮಿಶ್ರಿತ ಅಕ್ಕಿಯಲ್ಲಿ ಪಾಯಸ ಮಾಡುವ ಪರೀಕ್ಷೆ ಅದಾಗಿರುತ್ತದೆ. ದುಗ್ಗಳೆಯು ಕಬ್ಬನ್ನು ತಂದು ರಸ ತೆಗೆದು ಅದನ್ನು ಮಳಲು ಮಿಶ್ರಿತ ಅಕ್ಕಿಗೆ ಸುರಿದು ಕಬ್ಬಿನ ಜಲ್ಲೆಯನ್ನು ಉರುಹಿ ‘ಮಳಲಕ್ಕಿ ಪಾಯಸ’ ಮಾಡಿ ಆ ಪರೀಕ್ಷೆಯನ್ನು ಗೆಲ್ಲುತ್ತಾಳೆ. ಇಂತಹ ಬುದ್ಧಿವಂತ ಹೆಂಡತಿಯನ್ನು ಆಯ್ಕೆ ಮಾಡಿಕೊಂಡು ಜೇಡರ ದಾಸಿಮಯ್ಯನವರು ಶ್ರೇಷ್ಠ ದಾಂಪತ್ಯ ನಡೆಸುತ್ತಾರೆ. ಶರಣ ದಂಪತಿಗಳಾದ ಇರ್ವರೂ ಲಿಂಗಪೂಜಾ ನಿಷ್ಠರಾಗಿ, ಕಾಯಕ ಪ್ರೇಮಿಗಳಾಗಿ ಸುಂದರ ಕುಟುಂಬ ಕಟ್ಟುತ್ತಾರೆ.

ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ,
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ!
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-296/ವಚನ ಸಂಖ್ಯೆ-862)

“ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ; ಸತಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷ ಬೆರೆಸಿದಂತೆ” ಎಂಬ ಜೇಡರ ದಾಸಿಮಯ್ಯನವರ ವಚನದ ಸಾಲುಗಳು ಅಮೃತಮಯ ದಾಂಪತ್ಯಕ್ಕೆ ಹಿಡಿದ ಕನ್ನಡಿಯಂತಿವೆ.

ಸಂಸಾರದ ಶ್ರೇಷ್ಠತೆಯ ಕುರಿತು ಶಿವನ ಒಡ್ಡೋಲಗದಲ್ಲಿ ಚರ್ಚೆ ನಡೆದಿರುತ್ತದೆ. ಶಿವಗಣಂಗಲ್ಲಿ ಕೆಲವರು ಸಂಸಾರ ಶ್ರೇಷ್ಠ ಎಂದರೆ ಕೆಲವರು ಸಂನ್ಯಾಸ ಶ್ರೇಷ್ಠ ಎಂದು ಕೆಲವರು ವಾದಿಸುತ್ತಿರುತ್ತಾರೆ. ಈ ವಾದ-ವಿವಾದ ಶಿವನ ಹತ್ತಿರ ಹೋಗುತ್ತದೆ. ಈ ಎರಡೂ ತಂಡದವರ ವಾದ-ವಿವಾದ ಕೇಳಿಸಿಕೊಂಡು ಶಿವನು ಅವರನ್ನು ಕರೆದು ನಿಮಗೆ ಸಮರ್ಥ ಉತ್ತರ ಬೇಕಾದರೆ ಜೇಡರ ದಾಸಿಮಯ್ಯನವರ ಹತ್ತಿರ ಹೋಗಿ ತಿಳಿದುಕೊಳ್ಳಿ ಎನ್ನುತ್ತಾನೆ. ಹೀಗೆ ಉತ್ತರವನ್ನರಿಸಿ ಶಿವಗಣಂಗಳು ದಾಸಿಮಯ್ಯನವರ ಅಂಗಳದಲ್ಲಿ ಮಾರು ವೇಷದಿಂದ ಬಂದು ನಿಲ್ಲುತ್ತಾರೆ. ಆಗ ಮಧ್ಯಾಹ್ನವಾಗಿರುತ್ತದೆ. ಜೇಡರ ದಾಸಿಮಯ್ಯನವರು ಅಂಗಳದಲ್ಲಿ ಹಾಕಿದ ಹೊರಸಿನ (ಹಗ್ಗದಿಂದ ಹೆಣೆದ ಮಂಚ) ಮೇಲೆ ಕುರಿತು ಸೂಚಿಗೆ ದಾರವನ್ನು ಪೋಣಿಸುತ್ತಿರುತ್ತಾರೆ. ಶಿವಗಣಂಗಳ ಈ ತಂಡವನ್ನು ನೋಡಿ ಬಂದ ಕಾರಣವೇನು? ಎಂದು ಪ್ರಶ್ನಿಸುತ್ತಾರೆ. ಆಗ ಅವರು ನಿಮ್ಮಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಬೇಕಿತ್ತು ಎಂದು, ತಮ್ಮ ಪ್ರಶ್ನೆಯಾದ ಸಂಸಾರ ಶ್ರೇಷ್ಠವೋ? ಸನ್ಯಾಸ ಶ್ರೇಷ್ಠವೋ? ಎಂಬುದನ್ನು ಜೇಡರ ದಾಸಿಮಯ್ಯನವರ ಮುಂದಿಡುತ್ತಾರೆ. ಅದಕ್ಕೆ ದಾಸಿಮಯ್ಯನವರು ನಸು ನಕ್ಕು ಉತ್ತರ ಹೇಳುತ್ತೇನೆ ಮೊದಲು ತಾವು ಕುಳಿತುಕೊಳ್ಳಿ ಎನ್ನುತ್ತಾರೆ. ದುಗ್ಗಳೆಯನ್ನು ಕರೆಯುತ್ತಾರೆ, ಸೂಜಿಗೆ ದಾರ ಪೋಣಿಸಬೇಕಿದೆ ದೀಪ ಹಚ್ಚಿ ತಾ ಎನ್ನುತ್ತಾರೆ. ಆ ಗಣಂಗಳು ನಗುತ್ತಾರೆ. ಇವರಿಗೇನು ಹುಚ್ಚೇ? ಇಷ್ಟು ಬೆಳಕಿರುವಾಗ ದೀಪದ ಅವಶ್ಯಕತೆ ಇತ್ತೇ? ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾರೆ. ಆದರೆ ದುಗ್ಗಳೆ ಮರು ಮಾತನಾಡದೆ ದೀಪವನ್ನು ಹಚ್ಚಿಕೊಂಡು ಬರುತ್ತಾಳೆ. ಶಿವಗಣಂಗಳು ಮತ್ತೇ ತಮ್ಮ ಪ್ರಶ್ನೆ ಮುಂದಿಟ್ಟರು. ಈಗ ಪ್ರಸಾದದ ವೇಳೆಯಾಗಿದೆ. ಪ್ರಸಾದ ತೆಗೆದುಕೊಳ್ಳೋಣ ನಡಿಯಿರಿ ಎಂದು ಪ್ರಸಾದಕ್ಕೆ ಕರೆದುಕೊಂಡು ಹೋಗುತ್ತಾರೆ. ದುಗ್ಗಳೆಯು ನುಚ್ಚಿನ ಅಂಬಲಿಯನ್ನು ಮಜ್ಜಿಗೆಯನ್ನು ನೀಡುತ್ತಾಳೆ. ಅದಕ್ಕೆ ದಾಸಿಮಯ್ಯನವರು ತುಂಬಾ ಬಿಸಿಯಾಗಿದೆ ಗಾಳಿ ಬೀಸು ಎನ್ನುತ್ತಾರೆ. ಶಿವಗಣಂಗಳು ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ದುಗ್ಗಳೆ ಮರು ಮಾತನಾಡದೆ ಗಾಳಿ ಬೀಸುತ್ತಾಳೆ. ಊಟದ ನಂತರ ಮತ್ತೆ ಸೂಜಿಗೆ ದಾರ ಪೋಣಿಸುತ್ತ ಕುಳಿತುಕೊಳ್ಳುತ್ತಾರೆ. ತಮ್ಮ ತುರುಬಿನಲ್ಲಿರುವ ಸೂಜಿಯನ್ನು ಕೊಡು ಎನ್ನುತ್ತಾರೆ. ಗಣಂಗಳು ಕೈ ಎಟುಕುವಂತಿರುವ ಸೂಜಿ ತೆಗೆದುಕೊಳ್ಳಲು ಮತ್ತೆ ಹೆಂಡತಿ ಕರೆಯುತ್ತಿದ್ದಾರಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ದುಗ್ಗಳೆ ಮಾತ್ರ ಮರು ಮಾತನಾಡದೆ ಸೂಜಿಯನ್ನು ತೆಗೆದು ಕೊಡುತ್ತಾಳೆ. ಆಗ ನಸು ನಗುತ್ತ ದಾಸಿಮಯ್ಯನವರು ಹೇಳುತ್ತಾರೆ, “ಈಗ ನಿಮಗೆ ಉತ್ತರ ದೊರೆತಿರಬಹುದು ಎಂದುಕೊಳ್ಳುತ್ತೇನೆ”, ದುಗ್ಗಳೆಯಂತಹ ಹೆಂಡತಿ ಇರುವುದಾದರೆ ಸಂಸಾರವೇ ಶ್ರೇಷ್ಠ ಎನ್ನುತ್ತಾರೆ.

ಇದು ಒಂದು ದಂತಕತೆಯೇ ಇರಬಹುದು, ಆದರೆ ಇದರಿಂದ ಗ್ರಹಿಸಿಕೊಳ್ಳುವುದೇನೆಂದರೆ ಒಂದು ಕುಟುಂಬ ಕಟ್ಟುವಲ್ಲಿ ಬೇಕಾಗಿರುವುದು ಪರಸ್ಪರ ಇದೆಲ್ಲವೂ ದುಗ್ಗಳೆಯಲ್ಲಿ ಇತ್ತು. ಅವಳು ಮರು ಮಾತನಾಡದೇ ಇರುವುದಕ್ಕೆ ಪತಿಯಲ್ಲಿರುವ ನಂಬಿಕೆ, ವಿಶ್ವಾಸಗಳು. ಅಲ್ಲಿ ತನ್ನ ಪತಿ ಯಾವುದೇ ಉದ್ದೇಶಕ್ಕೆ ಈ ರೀತಿ ವರ್ತಿಸುತ್ತಿದ್ದಾನೆ ಎಂಬ ಸೂಕ್ಷ್ಮಗ್ರಹಿಕೆ ಅವಳ ಬುದ್ಧಿವಂತಿಕೆ. ತನ್ನ ಉದ್ದೇಶಗಳು ಹೆಂಡತಿಗೆ ತಿಳಿಯುತ್ತದೆ ಎಂಬ ನಂಬಿಕೆ ದಾಸಿಮಯ್ಯನವರದು. ಅದಕ್ಕಾಗಿಯೇ ಅವರು “ದುಗ್ಗಳೆಯನ್ನು ಹೊಂದಿ ಆನು ಸುಖಿಯಾದೆನಯ್ಯಾ” ಎಂದಿರುವುದು. ಕುಟುಂಬ ರಚನೆಯಲ್ಲಿ ಮಹಿಳೆಯ ಪಾತ್ರ ಅನನ್ಯವಾಗಿರುತ್ತದೆ ಎಂದು 12 ನೇ ಶತಮಾನದಲ್ಲೇ ಶರಣರು ಒಪ್ಪಿಕೊಂಡಿದ್ದರು. ಆ ಕಾಲಘಟ್ಟದಲ್ಲಿ ಮಹಿಳೆಯನ್ನು ಎರಡನೆ ದರ್ಜೆಯ ಪ್ರಜೆಯಾಗಿ ನೋಡುತ್ತಿದ್ದ ವ್ಯವಸ್ಥೆಯನ್ನೇ ಒಡೆದು ಸತಿಗೂ ಪ್ರಾಮುಖ್ಯತೆ ನೀಡಿದ ದಾಸಿಮಯ್ಯನವರು ಇವತ್ತಿಗೂ ಆದರ್ಶಪ್ರಾಯರಾಗುತ್ತಾರೆ.

ಬಸವಣ್ಣನವರ ತುಂಬು ಕುಟುಂಬದ ಚಿತ್ರಣವಂತೂ ಅತ್ಯಂತ ಸುಂದರವಾದುದು. ಬಸವಣ್ಣನವರು ತಮ್ಮ ಜೊತೆಯಲ್ಲಿ ಸಹೋದರಿ ಅಕ್ಕನಾಗಮ್ಮ, ಪತ್ನಿಯರಾದ ಗಂಬಾಬಿಕೆ, ನೀಲಾಂಬಿಕೆ, ಸಹೋದರಳಿಯ ಚನ್ನಬಸವಣ್ಣನವರ ಜೊತೆಗೂಡಿ ಒಂದೇ ಸೂರಿನಡಿಯಲ್ಲಿ ಬದುಕಿದ್ದರು. ವಿಘಟನೆಯ, ಮನಸ್ತಾಪದ ಒಂದೆಳೆಯೂ ಅಲ್ಲಿ ಸುಳಿಯಲಿಲ್ಲ. ಹೀಗೆ ಬಸವಣ್ಣನವರು ತಮ್ಮ ಮನೆಯನ್ನು ಮಹಾಮನೆಯನ್ನಾಗಿಸಿ, ತಮ್ಮ ಕುಟುಂಬದ ಸದಸ್ಯರ ಮನವನ್ನು ಮಹಾಮನವನ್ನಾಗಿಸಿದರು. ನಂತರ ಮಹಾಮನೆಯನ್ನು ಕಟ್ಟಿ ವಿಶ್ವ ಕುಟುಂಬಿಯಾದರು. ಇಂದು ಒಂದು ಮನೆಯಲ್ಲಿ ನಾದಿನಿ, ನೆಗೆಣ್ಣಿಯರು ಕೂಡಿ ಬದುಕುವುದನ್ನು ಕಲ್ಪಿಸಿಕೊಳ್ಳಲು ಅಸಾಧ್ಯ ಎನಿಸುತ್ತಿದೆ. ಕುಟುಂಬದ ಸದಸ್ಯರಲ್ಲಿ ವೈಮನಸ್ಸು ಉಂಟಾಗಿ ಅವಿಭಕ್ತ ಕುಟುಂಬಗಳು ಛಿದ್ರಗೊಂಡು ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಮನೆಯಲ್ಲಿ ಮಹಿಳೆಯ ಹೊಂದಾಣಿಕೆಯ ಮೇಲೆ ಶಾಂತಿ, ನೆಮ್ಮದಿ ನಿಂತಿರುತ್ತವೆ ಎಂದರೆ ಮಹಿಳೆ ಅದೆಷ್ಟು ಕಾಳಜಿಯಿಂದ ಕುಟುಂಬ ಕಟ್ಟಿರುತ್ತಾಳೆ ಎಂದು ತಿಳಿದುಕೊಳ್ಳಬಹುದು. ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆಯವರು ಇದಕ್ಕೆ ನಿದರ್ಶನರಾಗಿ ನಿಲ್ಲುತ್ತಾರೆ.

ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರದು ಶರಣ ದಾಂಪತ್ಯ. ಕುಟುಂಬ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಟ್ಟುವಲ್ಲಿ ಶರಣೆ ಲಕ್ಕಮ್ಮನವರ ಪಾತ್ರವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿಯನ್ನೇ ಪುನರಾವರ್ತನೆ ಮಾಡುತ್ತೇನೆ. ಮಾರಯ್ಯನವರು ದಿನಕ್ಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತಂದದ್ದನ್ನು ಲಕ್ಕಮ್ಮನವರು:

ಆಸೆಯೆಂಬುದು, ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708)

“ಈಸಕ್ಕಿಯಾಸೆ ನಿಮಗೇಕೆ ಮಾರಯ್ಯ?” ಎಂದು ಪ್ರಶ್ನಿಸಿದ್ದು ಸಂಗ್ರಹದಿಂದ ಕಾಯಕದ ಕ್ರಮ ತಪ್ಪಬಾರದು, ಅಸಂಗ್ರಹ ನೀತಿ ತಪ್ಪು, ಸಂಗ್ರಹಣೆಯಿಂದ ಕಾಯಕ ಪ್ರೀತಿ ತಪ್ಪಿ ಸೋಮಾರಿತನ ಅಂಟಿಕೊಳ್ಳುತ್ತದೆ. ಇಷ್ಟು ಸೂಕ್ಷ್ಮತೆಗಳು ಇರುವುದನ್ನು ಗಂಭೀರವಾಗಿ ಪರಿಗಣಿಸಿ ಗಂಡನನ್ನೇ ಪ್ರಶ್ನಿಸಿ ತನ್ನ ಕುಟುಂಬದಿಂದಲೇ ಆದರ್ಶದ ಪಾಠಗಳನ್ನು ಹೇಳಿಕೊಟ್ಟ ಆಯ್ದಕ್ಕಿ ಲಕ್ಕಮ್ಮನವರಂತಹ ಶರಣಸತಿ ಪ್ರತಿಯೊಂದು ಕುಟುಂಬದಲ್ಲಿಯೂ ಇದ್ದಿದ್ದರೆ ಭ್ರಷ್ಟಾಚಾರವೇ ಇರುತ್ತಿರಲಿಲ್ಲವೇನೋ? ಲೋಕಾಯುಕ್ತರ ಅವಶ್ಯಕತೆಯೇ ಬರುತ್ತಿರಲಿಲ್ಲವೇನೋ? ಹೀಗೆ ಒಂದು ಎಚ್ಚರಿಕೆಯ ಘಂಟೆಯಾಗಿ ಕುಟುಂಬ ಸದಸ್ಯರನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಮಹಿಳೆಗೆ ಇದೆ. ಹೀಗೆ ಶರಣರು ಒಂದು ನಿಷ್ಠೆಯ ಕುಟುಂಬವನ್ನು, ಒಂದು ಬದ್ಧತೆಯ ಕುಟುಂಬವನ್ನು, ಒಂದು ಜೀವ ಪ್ರೀತಿ, ಜೀವ ಕಾರುಣ್ಯದ ಕುಟುಂಬವನ್ನು ಕಟ್ಟಿದರು. ಅದಕ್ಕೆ ತಮ್ಮ ತಮ್ಮ ಧರ್ಮಪತ್ನಿಯರೇ ಕಾರಣ ಎಂದು ಪ್ರಾಂಜಲ ಮನಸ್ಸಿನಿಂದ ಶರಣರು ಒಪ್ಪಿಕೊಂಡಿದ್ದರು. ಇದಕ್ಕೆ ಶರಣ ದಂಪತಿಗಳಾದ ಮೋಳಿಗಯೆ ಮಹಾದೇವಿ ಮತ್ತು ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ-ಲಿಂಗಮ್ಮ, ಉರಿಲಿಂಗಪೆದ್ದಿ-ಕಾಳವ್ವೆ ಮುಂತಾದವರೆಲ್ಲಾ ಸಾಕ್ಷಿಯಾಗಿದ್ದಾರೆ.

ಒಟ್ಟಿನಲ್ಲಿ ಶಿವಶರಣರು ದಾಂಪತ್ಯವನ್ನಾಗಲಿ, ಕುಟುಂಬ ವ್ಯವಸ್ಥೆಯನ್ನಾಗಲಿ ತುಚ್ಛೀಕರಿಸಲಿಲ್ಲ. ಪರರ ಸತಿಯನ್ನು “ಮಹಾದೇವಿ” ಎಂದು ಪರಿಗಣಿಸಿದ್ದರು. ಹೀಗಾಗಿ ಅಂದು ಬಸವ ಕಲ್ಯಾಣ ಆತ್ಮ ಕಲ್ಯಾಣವಾಗಿತ್ತು. ಕುಟುಂಬ ವ್ಯವಸ್ಥೆಯಲ್ಲಿ ಅವರು ಹೊಂದಿದ ಸತಿ-ಪತಿ ಭಾವ, ಮುಂದೆ ಲಿಂಗಾಂಗ ಸಾಮರಸ್ಯವಾಗಿ, ಶರಣಸತಿ-ಲಿಂಗಪತಿ ಎಂಬ ಸತಿ ಪತಿಭಾವದಿಂದ ಉದಾತ್ತತೆಗೆ ತೆರೆದುಕೊಂಡಿತು. ಸತಿಗೆ ಪತಿ ಅರ್ಧಾಂಗವಾದರೆ ಪತಿಗೆ ಸತಿ ಅರ್ಧಾಂಗ. ಇವೆರಡೂ ಸೇರಿ ಪರಿಪೂರ್ಣಾಂಗವಾಯಿತು. ಇದೇ ಅರ್ಧನಾರೀಶ್ವರ ಪರಿಕಲ್ಪನೆ. ಇಂತಹ ಉದಾತ್ತವಾದ ಶರಣರ ದಾಂಪತ್ಯ ನಮ್ಮ ಕಣ್ಣ ಮುಂದೆ ಇದ್ದರೂ ಇವತ್ತಿನ ಕಾಲ ಸಂದರ್ಭದಲ್ಲಿ ಸಾಕಷ್ಟು ಕೌಟುಂಬಿಕ ವಿಘಟನೆ ಕಾಣಿಸಿಕೊಳ್ಳುತ್ತಿವೆ. ಕುಟುಂಬ ಪ್ರೀತಿ ಛಿದ್ರವಾಗುತ್ತಿದೆ. ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತಿರುವುದು ವಿಪರ್ಯಾಸ.

ಇಂದಿನ ಯುವ ಜನಾಂಗದವರಿಗೆ ಮದುವೆ ಎಂದರೆ ಬಂಧನವೆನಿಸಿದೆ. ಕುಟುಂಬವೆಂದರೆ ಕೇವಲ ಪತಿ-ಪತ್ನಿ ಸ್ವತಂತ್ರವಾಗಿರುವುದು ಎಂದುಕೊಂಡಿದ್ದಾರೆ. ಅಷ್ಟೇ ಅಲ್ಲ ಅದನ್ನೇ ಅವರು ಬಯಸುತ್ತಾರೆ. ಪರಸ್ಪರ ಪತಿ-ಪತ್ನಿಯರಲ್ಲಿ ಸ್ನೇಹ, ಪ್ರೀತಿ, ನಿಷ್ಠೆ, ವಿಶ್ವಾಸಕ್ಕೆ ಬದಲಾಗಿ, ಸಂಶಯ, ಅಹಂಕಾರ, ಅಸಹಕಾರ, ಸ್ವಾರ್ಥ, ಸ್ವಚ್ಛಂದತೆ ಮನೆ ಮಾಡುತ್ತಿದೆ. ಕುಟುಂಬದ ಸದಸ್ಯರು ಅವರಿಗೆ ಹೊರೆಯಾಗುತ್ತಿದ್ದಾರೆ. ಹಿಂದಿನ ಹಿರಿಯರ ಸುದೀರ್ಘ ದಾಂಪತ್ಯ ಜೀವನ, ಕುಟುಂಬ ನಿರ್ವಹಣೆಯ ತಿಳುವಳಿಕೆ ಇಂದಿನವರಿಗೆ ಇಲ್ಲದಾಗಿದೆ. ಅವರು ಸಾಕಷ್ಟು ವಿದ್ಯಾವಂತರು, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು, ಆರ್ಥಿಕ ಸಬಲರು ಇದ್ದಾರೆ. ಆದರೆ ಜೀವನ ನಿರ್ವಹಣೆಯಲ್ಲಿ ಅಸಫಲರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಕುಟುಂಬವನ್ನು ನಿರ್ವಹಿಸಿ ಮನೆತನ ಕಟ್ಟಿದ ಹೆಗ್ಗಳಿಕೆ ಗೃಹಿಣಿಯರದು ಅಥವಾ ಗರತಿಯರದಾಗಿದೆ. ಹುಟ್ಟಿದ ಮನೆ, ಮೆಟ್ಟಿದ ಮನೆ ಎರಡನ್ನೂ ಪ್ರೀತಿಯಿಂದ ಸಂಭಾಳಿಸಿದ ಕಲೆ, ನೈಪುಣ್ಯತೆ, ಬುದ್ಧಿವಂತಿಕೆ ಇವರದು.

ಸರದಾರ ಬರುವಾಗ ಸುರಿದಾವ ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ
ಏಲಕ್ಕಿ ಗೊನೆ ಬಾಗಿ ಹಾಲ ಸುರಿದಾವ
(ಸಮಗ್ರ ಜನಪದ ಸಂಪುಟ/ ಡಾ. ಸಿಂಪಿ ಲಿಂಗಣ್ಣ: ಐದು-1987/ ಗರತಿಯ ಬಾಳಸಂಹಿತೆ)

ಎಂದು ಗರತಿ ಹಾಡಿಕೊಳ್ಳುವಾಗ ಗಂಡನ (ಸರದಾರ) ಮೇಲಿನ ಪ್ರೀತಿ, ಸಹೋದರನ ಮೇಲಿನ ಪ್ರೀತಿಗೆ ತೂಕದಲ್ಲಿ ಯಾವ ವ್ಯತ್ಯಾಸ ಇಲ್ಲ. ಸರದಾರ ಬರುವಾಗ ಮಲ್ಲಿಗೆಯ ಹೂವಿನ ಮಳೆಯೇ ಸುರಿದರೆ, ತನ್ನ ಸಹೋದರನೇನು ಕಡಿಮೆಯೇ?! ಅವನು ಬರುವಾಗ ಏಲಕ್ಕಿ ಗೊನೆಯೇ ಬಾಗಿ ಹಾಲು ಸುರಿಯುವ ಈ ಕ್ರಿಯೆಗಳು ಪತಿಯ ಪ್ರೀತಿ, ತವರಿನ ಪ್ರೀತಿ ಏಕಕಾಲಕ್ಕೆ ಹೊರ ಹೊಮ್ಮುತ್ತದೆ. ಹೀಗೆ ಪ್ರೀತಿ, ಗೌರವದಿಂದ ಕುಟುಂಬ ಕಟ್ಟಿದ ರೀತಿ ಇದು.

ಅತ್ತಿಗಿ ಹಡೆಯಲಿ
ಹತ್ತೆಮ್ಮಿ ಹಿಂಡಲಿ ಹಿತ್ತಲ ಬಾಳಿ ಚಿಗುರಲಿ
ಅತ್ತೆಂದು ಅಣ್ಣನ ಮಗಳು ಕರೆಯಲಿ
(ಹಳ್ಳಿಗರ ಹಾಡುಗಳು/ಡಾ. ಬೆಟಗೇರಿ ಕೃಷ್ಣ: 1930/ಪುಟ ಸಂ 19

ತವರ ಸಂಬಂಧ ಕೊನೆ ತನಕ ಉಳಿಸಿಕೊಳ್ಳಬೇಕು ಎನ್ನುವ ಹಂಬಲದಲ್ಲಿ ಕುಟುಂಬದ ಸಂಬಂಧವನ್ನು ಗಟ್ಟಿಗೊಳಿಸುವ ಹೆಣ್ಣುಮಗಳು ಹತ್ತು ಎಮ್ಮಿ ಹಿಂಡಲಿ ಅಂದರೆ ತವರಿನಲ್ಲಿ ಹೈನು ಚನ್ನಾಗಿರಲಿ, ಹಿತ್ತಲಲ್ಲಿ ಬಾಳೆಯ ಗಿಡ ಚಿಗಿಯಲಿ ಎಂದರೆ ಸದಾ ತವರ ಸಂಪತ್ತು ಬೆಳೆಯುತ್ತಲೇ ಇರಲಿ, ಜೊತೆಗೆ ಅತ್ತಿಗೆ (ಅಣ್ಣನ ಹೆಂಡತಿ) ಹೆಣ್ಣು ಹಡೆಯಬೇಕು, ಅಣ್ಣನ ಆ ಮಗಳನ್ನು ಇವಳು ತನ್ನ ಮಗನಿಗೆ ತಂದುಕೊಳ್ಳಬೇಕು, ಆ ಮಗಳು ಸೊಸೆಯಾಗಿ ತನ್ನ ಮೆನೆ ಬೆಳಗಿ ತನ್ನನ್ನು ಅತ್ತಿ ಎಂದು ಕರೆಯಬೇಕು ಎನ್ನುವ ಗರತಿಯ ಭಾವನೆಗಳು ಒಂದು ಕುಟುಂಬ ಪ್ರೀತಿಯನ್ನು ಮನೆತನ ಬೆಳೆಸುವುದನ್ನು ತೋರ್ಪಡಿಸುತ್ತವೆ. ಹೀಗೆ ಸದಾ ಹೆಣ್ಣುಮಗಳು ತನ್ನ ತವರು ಮನೆ, ಗಂಡನ ಮನೆಯ ಏಳಿಗೆಯನ್ನು ಬಯಸುತ್ತಿರುತ್ತಾಳೆ. ಗರತಿಯ ಹಾಡಿನಲ್ಲಿ ಕುಟುಂಬ ಮತ್ತು ಮಹಿಳೆಗಿರುವ ಅನ್ಯೋನ್ಯ ಸಂಬಂಧವನ್ನು ಗುರುತಿಸಬಹುದು.

ಹಳ್ಳಿಯ ಈ ಹೆಣ್ಣುಮಗಳಿಗೆ ಜತನದಿಂದ, ತಾಳ್ಮೆಯಿಂದ ಮನೆತನ ಮಾಡುವುದು ಚೆನ್ನಾಗಿ ತಿಳಿದಿರುತ್ತದೆ. ಹೀಗೆಯೇ ಗೆಳತಿಯರಿಬ್ಬರು ಮಾತನಾಡುತ್ತಾ ಕುಳಿತಾಗ ಮಾತಿಗೆ ಮಾತು ಬಂದು ಆ ಗೆಳತಿ ಹೇಳುತ್ತಾಳೆ. “ನಿನ್ನ ಗಂಡ ಯಾರೋ ಹೆಣ್ಣು ಮಗಳ ಜೊತೆಗೆ ನಗ್ತಾ ನಗ್ತಾ ಮಾತನಾಡುತ್ತಿದ್ದ” ಎಂದು, ಪಟ್ಟಣದ ಹುಡುಗಿಯಾಗಿದ್ದರೆ ತಕ್ಷಣ ಕೋಪ ಬಂದು ತನ್ನ ಗಂಡನನ್ನೇ ಗೆಳತಿಯ ಎದುರು ಹೀಯಾಳಿಸಿ ಮಾತನಾಡುತ್ತಿದ್ದಳೇನೋ? ಆದರೆ ಈ ಹೆಣ್ಣು ಮಗಳು ಗೆಳತಿಗೆ ಹೀಗೆ ಉತ್ತರಿಸುತ್ತಾಳೆ;

ನಕ್ಕರ ನಗಲೆವ್ವ ನಗೆಮುಖದ ಖ್ಯಾದೀಗಿ
ನಾ ಮುಚ್ಚಿ ಮುಡಿದ ಪರಿಮಳದ ಹೂವ
ಅವಳೊಂದು ಬಾರಿ ಮುಡಿಯಲೇ.
(ಸಮಗ್ರ ಜನಪದ ಸಂಪುಟ/ ಡಾ. ಸಿಂಪಿ ಲಿಂಗಣ್ಣ: ಒಂದು-1954/ ಗರತಿಯ ಬಾಳು)

ಎಷ್ಟು ಮಾರ್ಮಿಕ ಮಾತುಗಳಿವು! ಅವಳು ತನ್ನ ಗಂಡನನ್ನು ಅವಳೆದುರು ಬಯ್ಯುವುದಿಲ್ಲ. ಏಕೆಂದರೆ ಬೇರೆವರೆದುರು ತನ್ನ ಕುಟುಂಬದ ಮರ್ಯಾದೆ ಕಾಪಾಡಿಕೊಳ್ಳುವ ಜಾಣ್ಮೆ ಇದು. ಅದಕ್ಕೆ ಗೆಳತಿ ಹೇಳುತ್ತಾಳೆ. ನಕ್ಕರೆ ನಗಲಿ ಬಿಡು, ಅದು ನನ್ನ ಗಂಡನ ಸಹಜ ಸ್ವಭಾವ. ಅವನದು ನಗುಮುಖ. ಹೀಗಾಗಿ ನಾನು ಅವರ ಘಮಲನ್ನು ಅನುಭವಿಸಿದವಳು. ಅವಳು ಸ್ವಲ್ಪ ಮಾತಾಡಿ ಸಂತೋಷ ಹಂಚಿಕೊಂಡಿರಬಹುದು. ಇದರಲ್ಲಿ ಅಂತಹ ತಪ್ಪೇನಿದೆ? ಎಂದು ಅವಳನ್ನೇ ತರಾಟೆಗೆ ತಗೊಂಡು ಬಾಯಿ ಮುಚ್ಚಿಸಿ ಮನೆತನದ ಗೌರವ ಕಾಪಾಡುವ ಗರತಿ ಅವಳನ್ನು ಸಾಗು ಹಾಕಿ ಮನದಲ್ಲಿ ಲೆಕ್ಕಾಚಾರ ಹಾಕುತ್ತಾಳೆ. ತನ್ನ ಪತಿಯನ್ನು ನೇರವಾಗಿ ಪ್ರಶ್ನಿಸಿದರೆ ಸಂಸಾರದಲ್ಲಿ ಬಿರುಕು ಉಂಟಾಗಬಹುದು ಎಂದು ಉಪಾಯದಲ್ಲಿ ಪತಿಯನ್ನು ಸನ್ಮಾರ್ಗಕ್ಕೆ ತರುವ ಸಾವಧಾನ ಮಾರ್ಗ ಅನುಸರಿಸುತ್ತಾಳೆ ಆ ಗರತಿ. ಮನೆಗೆ ಬಂದ ತಕ್ಷಣ ಗಂಡನ ಜೊತೆ ಅವಳು ವಾದಕ್ಕೆ ಇಳಿಯಲಿಲ್ಲ. ಬದಲಾಗಿ ಅವನಿಗಾಗಿ ಹದವಾದ ಬಿಸಿ ನೀರನ್ನು ಹಂಡೆಯಲ್ಲಿ ಕಾಯಿಸಿ, ಮೈ-ಕೈಗೆ ಎಣ್ಣೆ ಹಚ್ಚಿ ತಲೆಗೂ ಎಣ್ಣೆ ಹಾಕಿ ಬಿಸಿನೀರಿನ ಸ್ನಾನಕ್ಕೆ “ರನ್ನ ಬಚ್ಚಲಿಗೆ ಹೊನ್ನಮಣೆ ಹಾಕಿ” ಸ್ನಾನ ಮಾಡಿಸುತ್ತಾಳೆ. ತನ್ನ ಪತಿಗೆ ಹೊಟ್ಟೆ ಹಸಿದಿದೆ ಎಂದು ಅವಳಿಗೆ ಗೊತ್ತು. ಸವಿಯಾದ ಬಿಸಿ ಅಡುಗೆ ಮಾಡಿ ಬಡಿಸುತ್ತಾಳೆ. ಇನ್ನೇನು ಅವನ ಹಸಿವು ತಣಿಯಲು ಬಂದಾಗ ಆ ಗರತಿ ಗಂಡನಿಗೆ ಕೇಳುವ ಪ್ರಶ್ನೆ ಅವಳ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ: ಅವಳು ಪತಿಗೆ ಹೀಗೆ ಕೇಳುತ್ತಾಳೆ;

ಅಂಗಿಯ ಮ್ಯಾಲಂಗಿ ಚಂದೇನು ನನರಾಯ
ರಂಬಿಯ ಮ್ಯಾಲೆ ಪ್ರತಿರಂಬಿ ತಂದರ
ಚಂದೇನು ನನರಾಯ.
(ಸಮಗ್ರ ಜನಪದ ಸಂಪುಟ/ ಡಾ. ಸಿಂಪಿ ಲಿಂಗಣ್ಣ: ಒಂದು-1954/ ಗರತಿಯ ಬಾಳು)

ಎನ್ನುವಲ್ಲಿ ಅವಳ ಜಾಣ್ಮೆ, ತಾಳ್ಮೆ ಎಲ್ಲವೂ ವ್ಯಕ್ತವಾಗುತ್ತದೆ. ಯಾವ ಹೆಣ್ಣುಮಗಳು ಸಹ ತನ್ನ ಪತಿ ಇನ್ನೊಬ್ಬಳ ಸಹವಾಸಕ್ಕೆ ಹೋಗುವುದನ್ನು ಸಹಿಸಲ್ಲ. ಆದರೆ ದುಡುಕಿ ಈ ಹೆಣ್ಣುಮಗಳು ಗಂಡನ ಜೊತೆ ಜಗಳವಾಡಿಲ್ಲ. ಬದಲಾಗಿ ಗಂಡನನ್ನು ಸಮಜಾಯಿಸಿ ನಾನು ಮಾಡುತ್ತಿರುವುದು ತಪ್ಪು ಎಂದು ಅಪರೋಕ್ಷವಾಗಿ ತೋರಿಸಿಕೊಡುತ್ತಾಳೆ. ಅಂಗಿಯ ಮೇಲೆ ಅಂಗಿ ಧರಿಸುವದು ಹೇಗೆ ಯೋಗ್ಯವಲ್ಲವೋ ಹಾಗೆ ರಂಭೆಯಂತಹ ಹೆಂಡತಿ ಇರುವಾಗ ಮತ್ತೊಂದು ಪ್ರತಿರಂಭೆ ತರುವುದು ಸಾಧುವಲ್ಲ ಎಂದು ಎಚ್ಚರಿಸುವದಲ್ಲಿ ಅಧಿಕಾರ ಇಲ್ಲ, ಆಕ್ರೋಶ ಇಲ್ಲ. ಬದಲಾಗಿ ಸ್ನೇಹ ಪ್ರೀತಿ ಭಾವದ ತಿಳಿವಳಿಕೆ ಇದೆ. ಹೀಗೆ ಮಹಿಳೆ ಒಂದು ಕುಟುಂಬವನ್ನು ಪ್ರೀತಿ, ಮಮತೆ, ವಾತ್ಸಲ್ಯ, ತ್ಯಾಗ, ಸಹನೆ ಮುಂತಾದವುಗಳಿಂದ ಕಟ್ಟುತ್ತಾಳೆ.

ಒಟ್ಟಿನಲ್ಲಿ ಮಹಿಳೆಗೂ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇದು ಮಹಿಳೆಯ ಹುಟ್ಟಿನಿಂದ ಸಾಯುವವರೆಗೂ ಬೆಸೆದುಕೊಂಡಿರುತ್ತದೆ. ಪುರುಷನಿಗಿಂತ ಮಹಿಳೆಗೆ ಕುಟುಂಬವು ಬಹಳ ಮಹತ್ವಪೂರ್ಣವಾಗಿರುತ್ತದೆ. ಅದು ಅವಳ ಜೀವಕೊರಳಿನ ಸಂಬಂಧವಾಗಿರುತ್ತದೆ. ಕುಟುಂಬವೆನ್ನುವುದು ಸಮಾಜದ ಮೂಲ ಘಟಕವಾಗಿದ್ದು ಅದರ ರಚನೆ ಸುಂದರವಾಗಿರುತ್ತದೆ. ಈ ಕುಟುಂಬವೇ ಸಹಬಾಳ್ವೆಯನ್ನು ಕಲಿಸುವ ಪಾಠಶಾಲೆಯಾಗಿರುತ್ತದೆ. ಇಲ್ಲಿ ಪ್ರೀತಿ-ಪ್ರೇಮ-ಮಮತೆ-ವಾತ್ಸಲ್ಯ-ತ್ಯಾಗ-ಸಹನೆ-ಹೊಂದಾಣಿಕೆ-ಸಿಟ್ಟು-ಸೆಡವು-ಜಗಳ-ಕೋಪ-ತಾಪ ಹೀಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬ ತನ್ನ ಸದಸ್ಯರಿಗೆ ರಕ್ಷಾ ಕವಚವಾಗಿರುತ್ತದೆ. ಕುಟುಂಬ ಒಂದು ಚಲನಶೀಲ ಸಂಸ್ಥೆಯಾಗಿರುತ್ತದೆ. ಇಂತಹ ಕುಟುಂಬದಲ್ಲಿ ಮಹಿಳೆಯದು ಹಲವಾರು ಪಾತ್ರವಿದೆ. ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಸಹೋದರಿಯಾಗಿ, ಸೊಸೆಯಾಗಿ, ಸಖಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಹೀಗೆ ಅನಂತ ಮುಖವಾಗಿ ವಿಕಸಿಸಿದ ವ್ಯಕ್ತಿತ್ವ ಮಹಿಳೆಯದಾಗಿದೆ.

ಕುಟುಂಬದಲ್ಲಿಯ ಸದಸ್ಯರು ಮಹಿಳೆಯಿಂದ ಒಂದಿಲ್ಲಾ ಒಂದು ಸೇವೆಯನ್ನು ಬಯಸುತ್ತಾರೆ. ಕುಟುಂಬ ನಿರ್ವಹಿಸುವಲ್ಲಿ ಮಹಿಳೆಯ ಪಾತ್ರ ಹಿರಿದು. ಪುರುಷ ಹೊರಗೆ ದುಡಿದರೆ ಮಹಿಳೆಯರು ರಜೆ-ಸಂಬಳ ಇಲ್ಲದ ದುಡಿಮೆಯಾಗಿದೆ. ಮಕ್ಕಳ ಪಾಲನೆ-ಪೋಷಣೆ, ಅಡುಗೆ, ಗಂಡನ ಬೇಕು-ಬೇಡ, ಹಿರಿಯರ ಸೇವೆ, ಬಂಧು ಬಳಗದ ಜೊತೆ ಸಂಬಂಧ ನಿಭಾಯಿಸುವಿಕೆ, ಪಶುಪಾಲನೆ, ಕೃಷಿಕಾರ್ಯ ಹೀಗೆ ಹತ್ತು ಹಲವು ಕಾರ್ಯಗಳ ಜೊತೆ ಅವಳಿಗೆ ಬಿಡುವಿಲ್ಲದ ಸಂಬಂಧವಿರುತ್ತದೆ. ಇದನ್ನೆಲ್ಲಾ ಅವಳು ಪ್ರೀತಿಯಿಂದಲೇ ನಿಭಾಯಿಸುತ್ತಾಳೆ. ಅವಳು ಬೇಸರಿಸಿದರೆ ಮನೆಯ ವಾತಾವರಣವೇ ಕಲುಷಿತವಾಗುತ್ತದೆ. ಅದಕ್ಕಾಗಿಯೇ “ಗೃಹಿಣಿ ಗೃಹಮುಚ್ಛತೆ” ಎಂದು ಕರೆಯಲಾಗಿದೆ. ಇವಳಿಂದಲೇ ಗೃಹಸ್ಥನಿಗೆ ಬೆಲೆ. ನನ್ನಾಕೆ, ನನ್ನ ಮನೆಯಾಕೆ, ನನ್ನ ಕುಟುಂಬ ಎಂದು ಪರ್ಯಾಯ ನಾಮಗಳಿಂದ ಅವನು ಅವಳನ್ನು ಒಪ್ಪಿಕೊಂಡಿರುತ್ತಾನೆ. ಈ ಗೃಹಿಣಿ ಮನೆಯನ್ನು ಕೊಟ್ಟರೆ ಗೃಹವನ್ನಾಗಿಸುವ, ಧಾನ್ಯ ಕೊಟ್ಟರೆ ಆಹಾರವನ್ನಾಗಿಸುವ, ವೀರ್ಯವನ್ನು ಕೊಟ್ಟರೆ ಮಗುವನ್ನಾಗಿ ಪರಿವರ್ತಿಸುವ ಅದ್ಭುತ ಶಕ್ತಿ ಹೊಂದಿದ್ದಾಳೆ. ತಾಯಿಯ ನಂತರ ಪುರುಷನ ಸಂಪೂರ್ಣ ಬೇಕು-ಬೇಡುಗಳ ನಿರ್ವಹಣೆ ಮಡದಿಯದೇ ಆಗಿರುತ್ತದೆ. ಹೀಗಾಗಿ ಕುಟುಂಬದಲ್ಲಿ ಇಬ್ಬರು (ತಾಯಿ ಮತ್ತು ಮಡದಿ) ಮಹಿಳೆಯರೂ ಪೂಜನೀಯರು.

ಹೀಗೆ ಕನ್ನಡ ಸಾಹಿತ್ಯ ಲೋಕದಲ್ಲಿಯೂ ತಾಯಿಯಂತೆ ಸತಿಗೂ ಮಹತ್ವದ ಸ್ಥಾನ ನೀಡಿದ್ದಾರೆ. ಕುವೆಂಪು ಅವರು ತಮ್ಮ “ಸ್ವರ್ಗ ಲೋಕದಿ ಯಕ್ಷ ಪ್ರಶ್ನೆ” ಎಂಬ ಕವಿತೆಯಲ್ಲಿ ತಮ್ಮ ಧರ್ಮಪತ್ನಿ “ಹೇಮಾವತಿ” ಯವರನ್ನು ಗೌರವಿಸಿದ್ದಾರೆ. “ನಾನು ಹೇಮಿಗಂಡ” ಎಂದು ಗುರುತಿಸಿಕೊಂಡಿದ್ದಾರೆ. ಕೆ. ಎಸ್. ನರಸಿಂಹಸ್ವಾಮಿಯವರಂತೂ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರ ನಾನು ಒಬ್ಬ ಸಿಪಾಯಿ” ಎಂದಿದ್ದಾರೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ!
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ.


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ.


ಭರಣಿಯ ತಂದರೆ ಅರಸಿನ ಕುಂಕುಮ-
ಅವಳದು ಈ ಸಂಪತ್ತು.
ತುಟಿಗಳ ತೆರೆದರೆ ತುಳುಕುವುವಿಂಪಿನ
ಎರಡೋ ಮೂರೋ ಮುತ್ತು.


ಯುದ್ಧದ ಬೇಗೆಯನರಿತವಳಿವಳಲ್ಲ;
ಮುತ್ತಿಗೆ ಪಡಿತರವಿಲ್ಲ.
ತುರುಬಿಗೆ ಮಲ್ಲಿಗೆ ತಪ್ಪುವುದಿಲ್ಲ;
ಹೂವಿಗೆ ಬಡತನವಿಲ್ಲ.


ಕೈಬಳೆ, ತಾಳಿ, ಓಲೆ, ಮೂಗುತಿ-
ಬಡವರ ಮಗಳೀ ಬಾಲೆ.
ತಿಂಗಳ ಚೆಲುವಿನ ಮಂಗಳ ಮೂರುತಿ,
ಶೀಲದ ಧವಳ ಜ್ವಾಲೆ.


ಕೈ ಹಿಡಿದವಳು, ಕೈ ಬಿಡದವಳು
ಮಾಡಿದಡಿಗೆಯೇ ಚೆಂದ.
ನಾಗರ ಕುಚ್ಚಿನ ನಿಡು ಜಡೆಯವಳು
ಈಕೆ ಬಂದುದು ಎಲ್ಲಿಂದ?


ಎಲ್ಲಿಯ ಹಾಡಿದು? ಏನಿದು ಗಡಿಬಿಡಿ?
ಏಕಿದು ಹಸಿರು ಮತಾಪು?
ಒಲುಮೆಯು ತಂಗಿತು ಬಡತನ ಮನೆಯಲಿ;
ಕಂಬಳಿಯೇ ಕಿನಕಾಪು!


ಕಬ್ಬಿಗನೂರಿಗೆ ದಾರಿಗಳಿದ್ದರೆ –
ಕನಸೇ ಇರಬೇಕು!
ಅಲ್ಲಿಯ ದೊರೆತನ ಸಿಗುವಂತಿದ್ದರೆ,
ನನಗೇ ಸಿಗಬೇಕು!


ತಾರೆಯ ಬೆಳಕಿನ ತುಂಬಿದ ಸಭೆಯಲಿ
ಸುಂದರಿ ಮೆರೆದಾಳು!
ನನ್ನೊಡನವಳೂ ಸಿಂಹಾಸನದಲಿ
ಮೆಲ್ಲನೆ ನಕ್ಕಾಳು!


ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ?


ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ.
ಹೆಂಡತಿಯೊಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ.

ದ. ರಾ. ಬೇಂದ್ರೆಯವರು “ಮನದನ್ನೆ” ಎಂಬ ಕವನದಲ್ಲಿ “ಗಂಡು ದರ್ಪವ ಹರಿದು, ಬಿರುಸು ಬಿಂಕವರೊರೆದು, ತೋಳ ತೊಟ್ಟಿಲ ಮಗುವಾಗಿ ಬಂದೆ; ಗೊಂಬೆಯಾಡಿಸಿದಂತೆ ಆಡಿಸೆನ್ನ ಎಂದೆ” ಎಂದಿದ್ದಾರೆ.

ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು

ಜಿ. ಎಸ್. ಶಿವರುದ್ರಪ್ಪನವರಂತೂ ತಮ್ಮ “ಸ್ತ್ರೀ” ಕವನದಲ್ಲಿ ಮಹಿಳೆಯ ಕುಟುಂಬ ಪ್ರೆಮವನ್ನು ಪುಟಕ್ಕಿಟ್ಟ ಚಿನ್ನದಂತೆ ಶೋಧಿಸಿ ತೋರಿಸಿದ್ದಾರೆ.

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ


ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ


ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ


ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ


ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ


ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಹೀಗೆ ಮನೆ-ಮನೆಯಲಿ ದೀಪ ಮುಡಿಸುವ, ಹೊತ್ತು-ಹೊತ್ತಿಗೆ ಅನ್ನ ಉಣಿಸುವ ಈ ಕ್ರಿಯೆ ಒಂದು ದಿನದ ಮಾತಲ್ಲ. ಅದು ನಿರಂತರ ಕ್ರಿಯೆ. ಮಹಿಳೆ ಇದನ್ನು ಶತಶತಮಾನಗಳಿಂದ ಮಾಡುತ್ತ ಬಂದಿದ್ದಾಳೆ. ಹೀಗಾಗಿ ಮಹಿಳೆಗೂ ಕುಟುಂಬಕ್ಕೂ ಬಿಡಲಾರದ ನಂಟು. ಅವಳು ಭಾಗಿರಥಿಯಾಗಿ ಕೆರೆಗೆ ಹಾರವಾಗಿದ್ದಾಳೆ. ಉತ್ತರಿ ಮಳೆಯಾಗಿ ಲೋಕಕ್ಕೆ ಹಿತ ಮಾಡಿದ್ದಾಳೆ. ಅವಳ ತ್ಯಾಗ ಬಲಿದಾನದ ಹಿಂದೆ ಸಾಮಾಜಿಕ ಕಾಳಜಿಯೂ ಇದೆ.

ಒಂದು ಕುಟುಂಬದ ನಿರ್ವಹಣೆಯು ಸಹನೆ, ತ್ಯಾಗ, ಪ್ರೀತಿಯಿಂದ ಆಗಬೇಕಾಗುತ್ತದೆ. ಇದು ಮಹಿಳೆಯಿಂದ ಸಾಧ್ಯ. ಈ ಕಾರಣದಿಂದ ಮಹಿಳೆಯರ ಸಮರ್ಪಣಾಭಾವ ಬಹುಮುಖ್ಯವಾಗಿ ಕುಟುಂಬದಲ್ಲಿ ಕೆಲಸ ಮಾಡುತ್ತದೆ. ಕುಟುಂಬ ಕಟ್ಟಿ ನಿರ್ವಹಿಸುವಲ್ಲಿ ಮಹಿಳೆ ದಾಸಿಯಾಗಿ, ಮಾರ್ಗದರ್ಶಿಯಾಗಿ, ಭೋಗಿಯಾಗಿ, ಮಾತೆಯಾಗಿ, ಕ್ಷಮಯಾ ಧರಿತ್ರಿಯಾಗಿ ಕಾರ್ಯ ನಿರ್ವಹಿಸಿರುತ್ತಾಳೆ. ಈ ಎಲ್ಲಾ ಕಾರಣದಿಂದ ಅವಳು ಲಕ್ಷ್ಮಿ, ಮಹಾಲಕ್ಷ್ಮಿ, ಶಕ್ತಿ, ಆದಿಶಕ್ತಿ ಎನಿಸುತ್ತಾಳೆ.

ಮಹಿಳೆಗೆ ತನ್ನಲ್ಲಿರುವ ಈ ಶಕ್ತಿಯ ಮೌಲ್ಯ ತಿಳಿಯಬೇಕಿದೆ. ಈ ಶಕ್ತಿಯನ್ನು ಅವಳು ಸದ್ಭಳಕೆ ಮಾಡಿಕೊಳ್ಳಬೇಕಿದೆ. ಮನೆತನ ಕಟ್ಟುವಲ್ಲಿ ಅದನ್ನು ಸರಿಯಾಗಿ ನಿಭಾಯಿಸಬೇಕಾಗುತ್ತದೆ. ಏಕೆಂದರೆ ಕಟ್ಟುವ ಕೆಲಸ ಮುಖ್ಯವಾಗಿದೆ. ಸೃಷ್ಟಿಯ ಒಂದು ಭಾಗವಾಗಿರುವ ಮಹಿಳೆಯ ಕುಟುಂಬ ಕಟ್ಟುವ ರೀತಿ, ಅವಳ ಶ್ರಮವನ್ನು ಎಲ್ಲರೂ ಗುರುತಿಸಿ ಗೌರವಿಸಬೇಕಾಗುತ್ತದೆ. ಮತ್ತು ಕುಟುಂಬ ಕಟ್ಟುವ ಮಹಿಳೆಗೆ ಸಹಕಾರ ನೀಡಬೇಕಾಗಿರುವುದು ಒಂದು ಗುರುತರ ಜವಾಬ್ದಾರಿ ಎಂದು ಪ್ರತಿ ಪುರುಷನೂ ಆಲೋಚಿಸಿದಾಗ ಪ್ರತಿ ಕುಟುಂಬವೂ ದೇವಾಲಯವಾಗುತ್ತದೆ. ಪ್ರತಿ ಕುಟುಂಬವೂ ಸುಖೀ ಕುಟುಂಬವಾಗುತ್ತದೆ.

ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has One Comment

  1. Raghushankha Bhatambra

    ಲೇಖನ ಬಹಳಷ್ಟು ಅರ್ಥಪೂರ್ಣವಾಗಿದೆ.

Leave a Reply