ವಚನ ಸಾಹಿತ್ಯ-ಸಂಶೋಧನೆಯ ಸವಾಲುಗಳು | ಡಾ. ವೀರೇಶ ಬಡಿಗೇರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

No Source, No Research ಎನ್ನುವಂತೆ ಸಂಶೋಧನೆಗೆ ಆಕರಗಳೇ ಪ್ರಮುಖ ಎಂದು ನಂಬಲಾಗಿದೆ. ಇದರಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು.

  1. ಬೌದ್ಧಿಕ ಆಕರಗಳು.
  2. ವಚನಗಳ ಅಂತಃಸಂಭಾವ್ಯತೆಗಳು.

ವಚನಕಾರರಿಗೆ ಸಂಬಂಧಿಸಿದಂತೆ ಶಾಸನಗಳು, ಐತಿಹ್ಯಗಳು, ಸ್ಥಳ ಪುರಾಣಗಳು, ಸಂಪ್ರದಾಯಗಳು, ಇತಿಹಾಸದ ಆಕರಗಳು, ಜನಪದ ಹಾಗೂ ಶಿಷ್ಟ ಪುರಾಣಗಳು ಒಂದು ರೀತಿಯ ಆಕರಗಳಾದರೆ, ವಚನಗಳೇ ಕಟ್ಟಿಕೊಡುವ ಆಂತರಿಕ ಸಾಕ್ಷ್ಯಗಳು ಇನ್ನೊಂದು ರೀತಿಯ ಆಕರಗಳು. ಇದನ್ನೇ ಅಂತರ್‌ಸಂಭಾವ್ಯತೆ, ಅಂತರ್‌ಪಠ್ಯೀಕರಣ ಎಂದು ಕರೆಯಲಾಗುತ್ತದೆ. ಒಂದು ವಚನವೇ ಪಠ್ಯವಾಗುವ, ಆ ಪಠ್ಯದಲ್ಲಿಯೇ ಹಲವು ಪಠ್ಯಗಳಿರುವ ಹಲವು ಆಲೋಚನೆಗಳಿರುವ ಸಂಗತಿಯನ್ನು ಗಮನಿಸಬಹುದು.

  • ಸಮಸ್ಯೆ ಒಂದು

ಸಾಮಾನ್ಯವಾಗಿ ವಚನ ಸಂಸ್ಕೃತಿಯನ್ನು ದುಂಡಾಗಿ ಗ್ರಹಿಸಿದ್ದೇ ಹೆಚ್ಚು. ಹೀಗೆ, ದುಂಡಾಗಿ ನೋಡುವ ಕ್ರಮದಲ್ಲಿ ಅನೇಕ ಒಳಸೂಕ್ಷ್ಮಗಳು ಮತ್ತು ವೈಚಾರಿಕ ಸಂಘರ್ಷಗಳು ಕಣ್ತಪ್ಪಿ ಹೋಗುತ್ತವೆ. ವಚನಕಾರರು ಅನುಭವ ಮಂಟಪದಲ್ಲಿ ಕುಳಿತು ಒಬ್ಬರ ಮಾತಿಗೆ ಮತ್ತೊಬ್ಬರು ಉಪಮೆ ಮೂಲಕ, ಪ್ರತಿಮೆ ಮೂಲಕ, ವಿಚಾರದ ಮೂಲಕ, ಅನುಭವದ ಮೂಲಕ ಸಂವಾದಿಸುತ್ತಿದ್ದರು. ಒಬ್ಬರ ವಿಚಾರವನ್ನು ಅಲ್ಲಗಳೆಯುವ, ಒಬ್ಬರ ವಿಚಾರವನ್ನು ಮತ್ತೊಬ್ಬರು ಸಮರ್ಥಿಸಿಕೊಳ್ಳುವ, ಪ್ರಶ್ನಿಸುವ ಇಂತಹ ಎಷ್ಟೋ ಧ್ವನಿಗಳು ವಚನಗಳ ಆಂತರ್ಯದಲ್ಲಿ ಕಾಣುತ್ತವೆ. ಹಾಗಾಗಿ ಪ್ರತಿಯೊಂದು ವಚನಕ್ಕೂ ಅದರದೇ ಆದ ಧ್ವನಿ ಇರುತ್ತದೆ. ಆ ಧ್ವನಿ ನಮ್ಮ ಮನಸ್ಸಿಗೆ ನಾಟಿತು ಅಂದರೆ ಪ್ರತಿಯೊಂದು ವಚನ ನಮಗೆ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದು ನನ್ನ ಸ್ವಅನುಭವ.

ವಚನ ಸಾಹಿತ್ಯವನ್ನು ಆದರ್ಶೀಕೃತ ಮಾದರಿಯಲ್ಲಿ ಪರಿಭಾವಿಸಿದಾಗ ಮತ್ತು ಸಂಶೋಧನೆಗೆ ತೊಡಗಿದಾಗ ಅದರೊಳಗಿರುವ ವೈವಿಧ್ಯತೆಗಳು ನಮ್ಮ ಶೋಧಕ್ಕೆ ಸಿಗುವುದಿಲ್ಲ. ಆಗ ನಾವು ಒಂದು ಆಯಾಮಕ್ಕೆ, ಒಂದು ಪಾತಳಿಗೆ ಸೀಮಿತವಾಗಿ, ವಚನ ಚಳುವಳಿಯಲ್ಲಿ ಅಥವಾ ವಚನ ಸಾಹಿತ್ಯದಲ್ಲಿ ಅಥವಾ ವಚನಕಾರರಲ್ಲಿ ಇರಬಹುದಾದ ವಿಚಾರ ಭೇದಗಳನ್ನು, ಆಚಾರ ಭೇದಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತೇವೆ. ಸರಳವಾಗಿ ಹೇಳುವುದಾದರೆ ಭಾಷಣಗಳಲ್ಲಿ, ತರಗತಿಗಳಲ್ಲಿ ಮಾತನಾಡುತ್ತಿರುವಾಗ ಶರಣ ಸಂಸ್ಕೃತಿ, ವಚನ ಸಂಸ್ಕೃತಿ ಎನ್ನುವ ಮಾತು ಬಳಕೆ ಮಾಡುತ್ತೇವೆ. ಇಂತಹ ಮಾತುಗಳು ವಚನಗಳನ್ನು ಸಿದ್ಧ ಮಾದರಿಯಲ್ಲಿ ಗ್ರಹಿಸಲು ಒತ್ತಾಯಿಸುತ್ತವೆ. ಈ ಮಾದರಿಯಿಂದ ಏಕರೂಪಿ ಅಥವಾ ಪೂರ್ವನಿರ್ಧಾರಿತ ತೀರ್ಮಾನಗಳಿಗೆ ನಾವು ಹೋಗುತ್ತೇವೆ. ವಚನ ಚಳುವಳಿ ನಾನು ಗ್ರಹಿಸಿರುವಂತೆ ಒಂದು ಏಕಾಕಾರವಾಗಿರುವಂತ ಆಧ್ಯಾತ್ಮದ ಪರಿಭಾಷೆಯಲ್ಲ. ಧರ್ಮದ ಪರಿಭಾಷೆಯಲ್ಲ ಅಥವಾ ಮತದ ಪರಿಭಾಷೆಯಲ್ಲ, ನಿರ್ದಿಷ್ಟ ಮತ ಮೌಲ್ಯದ ಪ್ರತಿರೂಪವೆಂದು ನಂಬಿದಲ್ಲಿ ಈಗಾಗಲೇ ರೂಪಗೊಂಡಂತಹ ಅಭಿಜಾತ ಅಥವಾ ಪ್ರಾಯೋಗಿಕ ಸಂಶೋಧನೆ (Empirical Research) ಮಾದರಿಯನ್ನು, ಅದರ ಮೇಲೆ ನಾವು ಹೇರುತ್ತಿದ್ದೇವೆ ಎನ್ನುವ ಎಚ್ಚರಿಕೆ ಸಂಶೋಧಕನಿಗೆ ಇರಬೇಕು. ಏಕೆಂದರೆ ಸಂಶೋಧನೆ ಎಂದರೆ ಕಟ್ಟುವಂಥದ್ದು, ರೂಪಿಸುವಂಥದ್ದು, ಸತ್ಯ ಹುಡುಕುವಂಥದ್ದು ಎಂದು ನಂಬಿದ್ದೇವೆ. ಒಂದು ನಿರ್ದಿಷ್ಟ ಮತ, ನಿರ್ದಿಷ್ಟ ಧರ್ಮ, ನಿರ್ದಿಷ್ಟ ವ್ಯಕ್ತಿ, ನಿರ್ದಿಷ್ಟ ತತ್ವ, ನಿರ್ದಿಷ್ಟ ಸಿದ್ಧಾಂತಗಳ ಹಂಗಿನಲ್ಲಿ ವಚನ ಸಾಹಿತ್ಯವನ್ನಾಗಲಿ, ವಚನಕಾರರನ್ನಾಗಲಿ, ವಚನ ಧರ್ಮವನ್ನಾಗಲಿ ನಾವು ಅಧ್ಯಯನ ಮಾಡಲು ಹೋದಾಗ ವಚನಗಳ ಬಹು ಆಯಾಮಗಳು, ಬಹು ಅಭಿವ್ಯಕ್ತಿಯ ಮಾದರಿಗಳು, ಬಹು ಸಂವೇದನೆಗಳು ಕಡೆಗಣಿಸಲ್ಪಡುತ್ತವೆ ಎಂಬ ಎಚ್ಚರಿಕೆ ಸಂಶೋಧಕನಿಗೆ ಇರಬೇಕು.

  • ಸಮಸ್ಯೆ ಎರಡು

ರೂಢಿಯಾಗಿರುವ ಸಂಶೋಧನ ಮಾದರಿಗಳು ಒಂದು ಆಕರ ಎಂದರೆ, ಅದು ಲಿಖಿತ ಅಥವಾ ವಸ್ತು ರೂಪದಲ್ಲಿರಬೇಕು ಎಂದು ಹೇಳುತ್ತವೆ. ಹೀಗಾಗಿ ನಾವು ವಚನ ಸಾಹಿತ್ಯವನ್ನು ಆಕರ ಮುಖಿಯಾಗಿ ಅಭ್ಯಾಸ ಮಾಡಬಹುದಾ? ಶೋಧ ಮಾಡಬಹುದಾ? ಹೀಗೆ ಶೋಧ ಮಾಡಲು ಹೋದ ಸಂದರ್ಭದಲ್ಲಿ ನಮಗಾಗುವ ಅಡೆತಡೆಗಳೇನು? ತೊಂದರೆಗಳೇನು? ಎನ್ನುವ ಜಿಜ್ಞಾಸೆ ಮುಖ್ಯವಾಗುತ್ತದೆ. ಏಕೆಂದರೆ ವಚನಗಳು ಅಕ್ಷರರೂಪಿ ಪಠ್ಯಗಳಲ್ಲ. ಅನುಭವ ರೂಪಿ ಪಠ್ಯಗಳು, ಮಾತಿನ ರೂಪಿ ಪಠ್ಯಗಳು. ಹೀಗಾಗಿ ಅಕ್ಷರ ರೂಪಿಯಾದಂತಹ ಆಕರಗಳನ್ನು ನಂಬಿ ಸಂಶೋಧನೆ ಮಾಡುವ ಅನುಭವ, ಅಭ್ಯಾಸ ಮತ್ತು ತರಬೇತಿ ಇರುವ ನಾವು, ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಈ ಆಕರಮುಖಿ ನೆಲೆಗಳ ಹೊರತಾಗಿ, ಅನುಭವ ಪ್ರಧಾನವಾಗಿರುವಂತ ನೆಲೆಯಿಂದ ವಚನಗಳನ್ನು ಪ್ರವೇಶ ಮಾಡಬೇಕಾಗುತ್ತದೆ. ನಮಗೆ ತಿಳಿದಿರುವಂತೆ ವಚನಗಳು ಅಕ್ಷರರೂಪಿಯಲ್ಲ. ಮಾತು ಮತ್ತು ಅಕ್ಷರದ ಸಂಯೋಜಿತ ರೂಪಗಳಾಗಿ ಇಂದು ಸಂಪುಟ ರೂಪದಲ್ಲಿ ದೊರಕಿವೆ.

  • ಸಮಸ್ಯೆ ಮೂರು

ಸಂಶೋಧನೆ ಎಂದರೆ ಹುಡುಕುವುದು ಅಥವಾ ಶೋಧಿಸುವುದು. ನಮಗೆ ಗೊತ್ತಿರುವ ಪ್ರಕಾರ ಸಂಶೋಧನೆ ಎಂದರೆ ಸತ್ಯವನ್ನು ಹುಡುಕುವುದು. ಹಾಗಾದರೆ ಸತ್ಯ ಎಲ್ಲಿರುತ್ತದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಸತ್ಯ ಸಂಶೋಧಕನ ದೃಷ್ಟಿಕೋನದಲ್ಲಿದೆಯಾ ಅಥವಾ ಸಂಶೋಧನ ವಸ್ತುವಿನಲ್ಲಿದೆಯಾ? ವಚನ ಸಾಹಿತ್ಯದ ಸಂಶೋಧನೆಗೆ ಇಳಿದಾಗ ಸತ್ಯ ಎನ್ನುವುದು ಯಾವುದು? ಬಹಳ ಸಂಕೀರ್ಣವಾದ ಸಮಸ್ಯೆ ಇದು. ಅನುಭವ, ಮಾತು ಮತ್ತು ಅಕ್ಷರದ ಸಂಯೋಜನೆ ರೂಪಗಳಾಗಿರುವ ವಚನಗಳಲ್ಲಿ ನಾವು ಹುಡುಕುವ ಸತ್ಯ ಯಾವುದು? ಸ್ವತಃ ವಚನಗಳು ನಿರ್ದಿಷ್ಟ ಆಕರಗಳನ್ನು, ಅಥವಾ ರೂಪಗಳನ್ನು ನಿರಾಕರಿಸುತ್ತವೆ. ವಚನಗಳು ಪ್ರಕ್ರಿಯಾತ್ಮಕ ಸ್ವರೂಪದಲ್ಲಿವೆ. ವಚನಕಾರರ ಇಡೀ ಚಳುವಳಿಯ ಹಿನ್ನೆಲೆಯನ್ನು ಗಮನಿಸಿದಾಗ ಜ್ಞಾನ, ಸಂಪ್ರದಾಯ, ಪಾಂಡಿತ್ಯ, ಆಚರಣೆ, ವಿಚಾರ, ಯಾವು ಸ್ಥಾವರ ರೂಪಿಯಾಗಿ ನೆಲೆ ನಿಂತಿದ್ದವೋ, ಮಲೆತು ನಿಂತಿದ್ದವೋ, ನಿರ್ದಿಷ್ಟವಾದ ಮನೋಧರ್ಮವನ್ನು ಸಮಾಜದಲ್ಲಿ ಮೂಡಿಸಿದ್ದವೋ ಅಂತಹ ಸ್ಥಾವರ ರೂಪಿ ಅನುಭವಗಳನ್ನು ನಿರಾಕರಿಸುತ್ತಾರೆ. ಅವರಲ್ಲಿ ಪಠ್ಯದ ಕಲ್ಪನೆಯೇ ಇಲ್ಲ.

  • ಮಾತೆಂಬುದು ಜ್ಯೋತಿರ್ಲಿಂಗ
  • ನುಡಿದರೆ ಮುತ್ತಿನ ಹಾರದಂತಿರಬೇಕು
  • ಬರೆವ ತೊಡೆವ ಪರಿಯಂತೋ

ಎಂದು ಅಲ್ಲಮ ಪ್ರಭುಗಳು ದೊಡ್ಡ ಜಿಜ್ಞಾಸೆಯನ್ನು ಎತ್ತುತ್ತಾರೆ. ಬಹಳ ಪಂಡಿತ, ಅಕ್ಷರಸ್ಥನಾಗಿರುವ ನೀನು ಅಕ್ಷರ ಬರೆದ ಮೇಲೆ ಯಾಕೆ ಅದನ್ನು ಅಳುಕಿಸುವೆ ಎಂದು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ನಾವು ಎಲ್ಲಿ ಸತ್ಯವನ್ನು ಹುಡುಕುತ್ತೇವೆ ಎಂದರೆ ಅಕ್ಷರರೂಪಿ ಪಠ್ಯಗಳಲ್ಲಿ ಸತ್ಯವನ್ನು ಹುಡುಕುತ್ತೇವೆ. ವಚನ ಸಾಹಿತ್ಯದ ಅಧ್ಯಯನದಲ್ಲಿ ಎದುರಾಗುವ ಮೂಲಭೂತ ತೊಡಕು ಇದು. ಆರಂಭದಲ್ಲಿ ಡಾ. ಬಿ. ಆರ್.‌ ಪೋಲಿಸ್ಪಾಟೀಲ ಸರ್ ಹೇಳಿದಂತೆ ವಚನಗಳು ಅನುಭಾವದ ನುಡಿಗಳು. ಹೀಗಾಗಿ ಇದರಲ್ಲಿ ಹುಡುಕುವ ಸತ್ಯದ ಸ್ವರೂಪ ಯಾವುದು? ಸ್ವ ಅನುಭವವಾಗಿರುವಂತ ವಚನಗಳಲ್ಲಿ ಸಂಶೋಧಕ ಹುಡುಕುವ ಸತ್ಯ ಯಾವುದು? ಬಹಳ ಮೂಲಭೂತ ಪ್ರಶ್ನೆ ಇವು. ಹೀಗಾಗಿ ಸ್ವಅರಿವು ಮತ್ತು ಅನುಭಾವವನ್ನು ಸ್ವಯಂ ಮಾಡಿಕೊಂಡಿರತಕ್ಕಂತ ಜ್ಞಾನವನ್ನು, ಇನ್ನೊಬ್ಬರಿಗೆ ಸತ್ಯ ಎಂದು ಹೇಳುವ ಬಗೆ ಯಾವುದು? ಈಗಾಗಲೇ ಸಮಾಜದಲ್ಲಿ ಪ್ರಮಾಣಗೊಂಡಿದ್ದ ಎಲ್ಲಾ ಗುರುತುಗಳನ್ನು ನಿರಾಕರಿಸುತ್ತಾರೆ. ನನಗೆ ನೀನು ಪ್ರಮಾಣ ನಿನಗೆ ನಾನು ಪ್ರಮಾಣ. ನನ್ನ ಮಾತೆ ನಿನಗೆ ಪ್ರಮಾಣ ನಿನ್ನ ಇರುವಿಕೆ ನನಗೆ ಪ್ರಮಾಣ ಅಂತ ಭಾವಿಸಿದವರು. ಶರಣರಿಗೆ ಅವರ ಅನುಭವ ಅವರಿಗೆ ಪ್ರಮಾಣ ಹೊರತು ಬೇರೆಯಲ್ಲ. ಬಸವಣ್ಣನವರು ಹೆರವರ ಬಾವಿಯ ಸಿಹಿ ನೀರಿಗಿಂತ, ನಮ್ಮ ಬಾವಿಯ ಸವಳು ನೀರು ಲೇಸು ಎಂದು ಹೇಳುತ್ತಾರೆ. ನಮ್ಮದಲ್ಲದ ಜ್ಞಾನ ಸಂಸ್ಕೃತಿಯನ್ನು ನಿರಾಕರಿಸಿ ನಮ್ಮದೇ ಆಗಿರುವಂತ ಜ್ಞಾನವನ್ನು ಅನುಭಾವವನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟ ವಚನಕಾರರನ್ನು ನಾವು ಸಂಶೋಧನೆಗೆ ಒಳಪಡಿಸುವಾಗ, ನಾನು ಸತ್ಯವನ್ನೇ ಹುಡುಕುತ್ತೇನೆ, ಸತ್ಯವನ್ನು ಶೋಧಿಸುತ್ತೇನೆ ಎನ್ನುವ ಅಕಾಡೆಮಿಕ್ ಭ್ರಮೆಗಳಿಂದ ಹೊರಬರಬೇಕು.

ವಚನ ಸಾಹಿತ್ಯವನ್ನು ಸಂಶೋಧನೆಗೆ ತೆಗೆದುಕೊಂಡಾಗ ಕೇಳಿಕೊಳ್ಳುವ ಸಮಸ್ಯೆ ಎಂದರೆ, ನನ್ನ ಶೋಧದ ದಾರಿ ಯಾವುದು? ನನ್ನ ಶೋಧದ ಸಮಸ್ಯೆ ಯಾವುದು? ನನ್ನ ಅಧ್ಯಯನ ಹೋಗುವ ನೆಲೆ ಯಾವುದು? ಎನ್ನುವುದು. ಉದಾ: ಶರಣರು ಸಾಧಿಸಿದ ಸಾಮಾಜಿಕ ಕ್ರಾಂತಿ, ಶರಣರ ವಚನಗಳ ಭಾಷಿಕ ಅಧ್ಯಯನ ಎಂಬ ಶೀರ್ಷಿಕೆಯನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಾಗ, ಇವು ಒಪ್ಪಿತ ಮನಸ್ಥಿತಿಯ ಮೂಲಕ ರೂಪಗೊಂಡಿರುತ್ತವೆ. ಪೂರ್ವನಿರ್ಧಾರಿತ ತೀರ್ಮಾನಗಳಾಗಿರುತ್ತವೆ. ಇಂತಹ ಸಂಶೋಧನಾ ಸಮಸ್ಯೆಗಳು ಕೆಲವು ಜನಪ್ರಿಯ ವಚನಗಳನ್ನು ಎತ್ತಿಕೊಂಡು ಮೆಚ್ಚುಗೆ ರೀತಿಯಲ್ಲಿ ಶರಣರ ಕ್ರಾಂತಿಕಾರಕ ನಿಲುವುಗಳನ್ನು ಸಮರ್ಥಿಸುವ ಕೆಲಸ ಮಾಡುತ್ತವೆ. ಶರಣರು ಕುಲಭೇದವನ್ನು ನಿರಾಕರಿಸುವ, ವರ್ಣಾಶ್ರಮವನ್ನು ಖಂಡಿಸುವ, ಜಾತಿ ಶ್ರೇಷ್ಠತೆಯನ್ನು ಅಲ್ಲಗಳೆಯುವ, ಸಂಸ್ಕೃತವನ್ನು ನಿರಾಕರಿಸುವ, ಗುಡಿ ಸಂಸ್ಕೃತಿಯನ್ನು ಧಿಕ್ಕರಿಸುವ ನೆಲೆಗಳನ್ನು, ಹೆಮ್ಮೆಯಿಂದ ಅವಿಮರ್ಶಾತ್ಮಕವಾಗಿ ಮಂಡಿಸುತ್ತವೆ. ಇಲ್ಲಿ ಶೋಧ ಮತ್ತು ಸಮಸ್ಯೀಕರಣಕ್ಕೆ ಯಾವ ಕೆಲಸವೂ ಇರುವುದಿಲ್ಲ. ಅದರ ಬದಲಾಗಿ ಅವರ ಕ್ರಾಂತಿಕಾರಕ ನಿಲುವುಗಳನ್ನು ಗೌರವಿಸುತ್ತಲೇ ಇಂತಹ ನಿಲುವುಗಳು ಹುಟ್ಟಿದ ಚಾರಿತ್ರಿಕ ಕಾರಣಗಳನ್ನು ಅದರ ಅನಿವಾರ್ಯತೆಯನ್ನು ಹುಡುಕಬೇಕಾಗುತ್ತದೆ.

ಸಮಸ್ಯೀಕರಣದ ಪ್ರಶ್ನೆಗಳು ನಮ್ಮ ವಾಸ್ತವಿಕ ಬದುಕಿನ ಅನುಭವದಿಂದ ಹುಟ್ಟಬೇಕೆ ಹೊರತು ಸ್ಥಾಪಿತ ಸಿದ್ಧಾಂತಗಳಿಂದಲ್ಲ. ವಾದ-ವಿವಾದಗಳಿಗಿಂತ ಬದುಕಿನ ಅನುಭವ, ನಮ್ಮ ಶೋಧ ಮತ್ತು ಸಂವಾದದ ದಿಕ್ಕನ್ನು ರೂಪಿಸಬೇಕು. ಸಮಸ್ಯೀಕರಣ ಪ್ರಕ್ರಿಯೆಯು ಅನ್ಯವಾದಗಳನ್ನು ಭಿನ್ನಮತಗಳನ್ನು ಕೂಡ ಸಮಸ್ಯೆಯನ್ನು ಬಿಡಿಸುವ ಕಾರ್ಯದಲ್ಲಿ ಸಹವರ್ತಿ ಎಂದು ಭಾವಿಸುತ್ತದೆ. “ಸಮಸ್ಯೆಗಳನ್ನು ಗುರುತಿಸುವುದೆಂದರೆ, ಸಾಮಾಜಿಕ ವಿದ್ಯಮಾನಗಳು ಹೇಗೆ ಸಾಮಾಜಿಕ ಸಮಸ್ಯೆಗಳಾಗಿ ರೂಪಗೊಂಡವು ಎನ್ನುವ ಚಾರಿತ್ರಿಕ ಸತ್ಯವನ್ನು ನಿರೂಪಿಸುವುದು” ಎನ್ನುವುದು ಮಿಶಲ್ ಫುಕೋನ ಮಾತು.

ಮಿಶೆಲ್ ಫುಕೋ (Michel Foucault) (15.101926–25.06.1984) ಫ್ರೆಂಚ್ ತತ್ವಶಾಸ್ತ್ರಜ್ಞ, ವೈಚಾರಿಕ ಇತಿಹಾಸಕಾರ, ಸಾಮಾಜಶಾಸ್ತ್ರಜ್ಞ, ಭಾಷಾತಜ್ಞ ಮತ್ತು ಸಾಹಿತ್ಯ ವಿಮರ್ಶಕ. ಅವನ ಸಿದ್ಧಾಂತಗಳು ಅಧಿಕಾರ ಮತ್ತು ಜ್ಞಾನದ ನಡುವಿನ ಸಂಬಂಧವನ್ನು ಮತ್ತು ಅದು ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಸಮಾಜದ ನಿಯಂತ್ರಣವನ್ನು ಸಾಧಿಸುವ ಬಗೆಗಳನ್ನು ಕುರಿತು ವಿವರಿಸುತ್ತವೆ.

ಈ ಅರ್ಥದಲ್ಲಿ ಸಂಶೋಧನೆ ಎಂದರೆ ನನ್ನನ್ನು ನಾನು ಅರಿತುಕೊಳ್ಳುವುದು ಮತ್ತು ವಿಸ್ತರಿಸಿಕೊಳ್ಳುವುದು. ಸಂಶೋಧನೆ ಸರಳ ವೈಭವೀಕರಣವಾಗದೆ ಒಂದು ವಿಮರ್ಶಾತ್ಮಕ ಸಮತೋಲನ ಕಾಯ್ದುಕೊಳ್ಳಬೇಕು. ಒಂದು ಉದಾಹರಣೆ ನೋಡುವುದಾದರೆ:

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-735)

ಆ ಕಾಲದ ವಣಿಕ, ಕೃಷಿಕ ಹಾಗೂ ಭೂಮಾಲೀಕ ವರ್ಗದ ಸಂಘರ್ಷದ ಸೂಕ್ಷ್ಮತೆ ಈ ವಚನದಲ್ಲಿದೆ ಎನಿಸುತ್ತದೆ. ಆನುವಂಶಿಕವಾಗಿ ಭೂಮಿಯನ್ನು ಹೊಂದಿದ್ದ ಮಧ್ಯವರ್ತಿಗಳು ಮತ್ತು ಉದ್ಯಮಿಗಳು ಭಾರೀ ಪ್ರಮಾಣದ ಭೂಮಿಯನ್ನು ಇತರ ಸವಲತ್ತುಗಳನ್ನು ಪಡೆದಿದ್ದರು. ಹೊಲ ಗದ್ದೆಗಳಲ್ಲಿ ಉದ್ಯಮದ ಕೆಲಸಗಾರರನ್ನು ಇವರೆಲ್ಲ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಪ್ರಭುತ್ವದ ಆದಿಯಾಗಿ ಈ ಭೂಮಾಲೀಕರೆಲ್ಲ ಕೃಷಿ ಭೂಮಿಯ ಬಹುಭಾಗವನ್ನು ಅನುತ್ಪಾದಕ ವಿಷಯಗಳಿಗೆ ತಿರುಗಿಸಿದ್ದರು. ಭೂಮಾಲೀಕರ ಈ ನಡವಳಿಕೆ ಉತ್ಪಾದಕರ, ಕುಶಲಕರ್ಮಿಗಳ, ವರ್ತಕರ ಹಿತಗಳಿಗೆ ಹೊಂದಿಕೊಳ್ಳದಾದವು. ಉತ್ಪಾದಕ ವರ್ಗಗಳನ್ನು ಕಡೆಗಣಿಸಿ ಅನುತ್ಪಾದಕ ವರ್ಗಗಳನ್ನು ವೈಭವೀಕರಿಸುವ ಚಟುವಟಿಕೆಗಳು ಈ ಕಾಲದಲ್ಲಿ ನಡೆಯುತ್ತಿದ್ದವು. ಊಳಿಗಮಾನ್ಯ ವ್ಯವಸ್ಥೆಯು ಶ್ರಮದ ಮೌಲ್ಯವನ್ನು ದೋಚುವುದಕ್ಕೆ ಜಾತಿಯನ್ನೇ ಒಂದು ಮಾನದಂಡವಾಗಿ ಬಳಸಿಕೊಂಡಿತ್ತು. ಇಂತಹ ಹೊತ್ತಲ್ಲಿ ಊಳಿಗಮಾನ್ಯತೆಯ ಜಾತಿದಮನವನ್ನು ವಿರೋಧಿಸುವ ನೆಲೆಯಲ್ಲಿ ಕಾಯಕ ಜೀವಿಗಳ ಚಳುವಳಿ ಹುಟ್ಟಿಕೊಂಡಿತು. ದರ ಫಲಿತವೇ ಈ ವಚನ. ವ್ಯಕ್ತಿಯು ತನ್ನ ಸ್ವಂತ ಪರಿಶ್ರಮದ ಮೂಲಕ ಮಾತ್ರವೇ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಬೇಕು. ಬದುಕೇ ಒಂದು ಕಠಿಣ ಪರಿಶ್ರಮ. ಅದನ್ನು ಹಾಗೆಯೇ ಒಪ್ಪಿಕೊಳ್ಳಬೇಕು. ಅದೇ ಭಗವಂತನ ಮೆಚ್ಚಿಸುವ ರೀತಿ, ಮುಕ್ತಿಗೆ ಅರ್ಹನಾದ ರೀತಿ. ಮೇಲಾಗಲೀ ಕೀಳಾಗಲಿ ಯಾರೂ ಈ ದುಡಿಮೆಯ ನಿಯಮಕ್ಕೆ ಹೊರತಲ್ಲ. ಅನುಚಿತ ದಾನ ಧರ್ಮಗಳು ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತವೆ. ದುಡಿಮೆ ಮಾತ್ರ ಸಾಮಾಜಿಕ ಸಮಗ್ರತೆಯನ್ನು ಸ್ಥಾಪಿಸುತ್ತದೆ ಎನ್ನುವ ಆಶಯ ಈ ವಚನದ್ದಾಗಿದೆ. ಜೇಡರ ದಾಸಿಮಯ್ಯನವರ ಈ ವಚನ ನೋಟ ಕ್ರಮಕ್ಕೆ ಸರಳವಾಗಿದೆ ಅನಿಸುತ್ತದೆ. ಆದರೆ ಸೂಕ್ಷ್ಮವಾಗಿ ಅದು ಆ ಕಾಲದ ಭೂಮಾಲೀಕರ ಉಪಭೋಗದ ನೆಲೆಗಳನ್ನು ಕಟ್ಟಿಕೊಡುತ್ತದೆ.

ಯುದ್ಧ ಸಂಸ್ಕೃತಿಯಲ್ಲಿ ಗೆದ್ದವನದೇ ಸಂಪತ್ತು. ಹೆಣ್ಣು, ಹೊನ್ನು, ಮಣ್ಣು ಎಲ್ಲದಕ್ಕೂ ಅವನದೇ ಅಧಿಕಾರ. ಆದರೆ ಅದಾವುದೂ ಅವನ ಸ್ವಂತ ಪರಿಶ್ರಮದಿಂದ, ದುಡಿಮೆಯಿಂದ ಬಂದ ಸಂಪತ್ತಲ್ಲ. ತೋಳ್ಬಲದಿಂದ ಕಿತ್ತುಕೊಂಡದ್ದು. ಪ್ರಕೃತಿಯ ಮೇಲೆ ತನ್ನ ಹಕ್ಕು ಸಾಧಿಸಿ ತಾನೇ ಪ್ರತ್ಯಕ್ಷ ದೇವರು ಎಂದು ವಿವೇಚನೆ ಇಲ್ಲದೆ ಯಥೇಚ್ಛ ದಾನ ನೀಡುವ ದೊರೆಯು, ಪ್ರಜೆಗಳನ್ನು ಪಾಲಿಸುವಲ್ಲಿ ತೋರುವ ನಿರ್ಲಕ್ಷ, ದುಡಿಮೆಯ ಅಪವಿತ್ರೀಕರಣ ಕುರಿತು ಜೇಡರ ದಾಸಿಮಯ್ಯನವರು ಸಿಡಿದೇಳುತ್ತಾರೆ. ಭೂಮಿಯ ಖಾಸಗೀ, ಒಡತನದ ಪ್ರವೃತ್ತಿಗಳನ್ನು ದಾಸಿಮಯ್ಯನವರು ಟೀಕಿಸುತ್ತಾರೆ. ಸಂಪತ್ತಿನ ಕೇಂದ್ರೀಕರಣ ಹಾಗೂ ಅದರಿಂದ ಹುಟ್ಟುವ ಅಧಿಕಾರ ಮದಗಳು ಪ್ರಜಾಪೀಡಕವಾಗುತ್ತದೆನ್ನುವ ಧ್ವನಿ ವಚನದಲ್ಲಿದೆ.

ಈವರೆಗೆ ವಚನಸಾಹಿತ್ಯವನ್ನು ಅನುಸಂಧಾನ ಮಾಡಿದ ಬಗೆಯನ್ನು ನಾಲ್ಕು ನೆಲೆಯಲ್ಲಿ ಗುರುತಿಸಬಹುದು.

  1. ವಚನ ಚಳುವಳಿಯನ್ನು ಶರಣರ ಭೌತಿಕ ಇರುವಿಕೆ ಪ್ರಶ್ನೆಯನ್ನಾಗಿ ಗ್ರಹಿಸಿದ್ದು.
  2. ವೈದಿಕ, ಜೈನ ಅಥವಾ ಶೈವರ ಮೇಲಿನ ಪರಸ್ಪರ ವೈರಭಾವದಿಂದ ನೋಡಿದ್ದು. (ಅದನ್ನು ಆದಯ್ಯ ಅಥವಾ ಏಕಾಂತ ರಾಮಯ್ಯನವರ ಸಂದರ್ಭದಲ್ಲಿ ನೋಡುತ್ತೇವೆ.)
  3. ದೇವಾಲಯಗಳು ಸಂಪತ್ತು ಮತ್ತು ಅಧಿಕಾರದ ಕೇಂದ್ರಗಳಾಗಿದ್ದ ಕಾರಣ ದೇಗುಲಗಳ ನಿರಾಕರಣೆ ಮಾಡಿದರು.
  4. ಎಲ್ಲಾ ಜಾತಿಗಳಿಗೂ ಸಮಾನತೆ ತಂದು ಕೊಟ್ಟರು. (ಆದರೆ ಕಾಯಕಗಳು ಸಮಾನವಾದರೂ ಅವುಗಳಿಗಿದ್ದ ಸಂಭಾವನೆ ಮತ್ತು ಸಾಮಾಜಿಕ ಗೌರವ ಒಂದೇ ಆಗಿರಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸುವುದಿಲ್ಲ).

ನನ್ನ ಇಲ್ಲಿನ ಮುಖ್ಯ ಚರ್ಚೆ ಎಂದರೆ ವಚನಕಾರ ಸ್ಥಾವರ ನಿರಾಕರಣೆಯನ್ನು ಕುರಿತು. ವಚನಕಾರರು ದೇವಸ್ಥಾನವನ್ನು ನಿರಾಕರಿಸಿದರು, ಆದರೆ ದೇವರ ಅಸ್ತಿತ್ವವನ್ನಲ್ಲ ಎಂಬುದು ಮುಖ್ಯ ವಿಚಾರ. ನಾವು ಎಷ್ಟೋ ಸಲ ದೇವಸ್ಥಾನ ನಿರಾಕರಣೆ ಮಾಡಿದರು ಎನ್ನುವ ಚರ್ಚೆಯಲ್ಲಿ ದೇವರನ್ನು ಏನು ಮಾಡಿದರು? ಎನ್ನುವ ಪ್ರಶ್ನೆಯನ್ನು ಗಮನಿಸುವುದಿಲ್ಲ. ವಚನಕಾರರು ದೇವರ ಮೂರ್ತೀಕರಣ ಹಾಗೂ ದೇಗುಲದ ನಿರ್ಮಾಣವನ್ನು ನಿರಾಕರಿಸುತ್ತಾರೆ. ಏಕೆಂದರೆ ದೇವಸ್ಥಾನಗಳು ಶರಣರ ಕಾಲಕ್ಕೆ ಸಂಪತ್ತಿನ ಕೇಂದ್ರಗಳಾಗಿದ್ದವು. 10 ರಿಂದ 11 ನೇ ಶತಮಾನದ ಶಾಸನಗಳು ಇದಕ್ಕೆ ಸಾಕ್ಷಿ ಒದಗಿಸುತ್ತದೆ. ವಚನ ಕಾಲದ ಇಂತಹ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ಸ್ಥಿತ್ಯಂತರಗಳನ್ನು ಆರ್. ಎನ್. ನಂದಿ, ಎಚ್, ಎಸ್. ರಾಘವೇಂದ್ರರಾವ್, ವಸುಂಧರ ಫಿಲಿಯೋಜಾ, ಪ್ರೊ. ಶೇಖ್‌ಆಲಿ, ರಾಜಾರಾಮ್ ಹೆಗಡೆ, ಪ್ರೊ. ಬಿ.ಆರ್ ಹಿರೇಮಠ ಮುಂತಾದವರು ವಚನಪೂರ್ವ ಯುಗದ ಆಕರಗಳಲ್ಲಿ ಹುಡುಕುವ ಪ್ರಯತ್ನ ಮಾಡಿದ್ದಾರೆ.

8 ರಿಂದ 11 ನೇ ಶತಮಾನದಲ್ಲಿ ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಆಳುವ ವರ್ಗ ರೈತ ಸಮುದಾಯವನ್ನು ಒಳಗೊಂಡ ಶೈವ ಸಮಾಜ ತುಂಬಾ ಉತ್ಕೃಷ್ಟ ಸ್ಥಿತಿಯಲ್ಲಿತ್ತು. ಇದನ್ನು ಇನ್ನೊಂದು ರೀತಿಯಲ್ಲಿ ಕಾಳಾಮುಖ ಮತ್ತು ಪಾಶುಪತರ ಔನ್ನತ್ಯದ ಕಾಲ ಎಂದು ಕರೆಯುತ್ತೇವೆ. ಬಸವ ಚಳುವಳಿ ನಿರಾಕರಿಸಿದಂತ ಸ್ಥಾವರ ಪರಿಕರಗಳು ಈ ಕಾಲದಲ್ಲಿ ಉಳಿಗಮಾನ್ಯ ಸಮಾಜದ ಪಳಿಯುಳಿಕೆಗಳಾಗಿರಲಿಲ್ಲ. ಬದಲಾಗಿ ಶ್ರಮ ಸಮಾಜದ ಉತ್ಪಾದಕ ಘಟಕಗಳಾಗಿದ್ದವು. ದೇವಸ್ಥಾನಗಳು ಈ ಕಾಲದಲ್ಲಿ ಕರಕುಶಲ ವರ್ಗಗಳಿಗೆ, ಕಸಬುದಾರ ವರ್ಗಗಳಿಗೆ ಆಶ್ರಯ ತಾಣಗಳಾಗಿದ್ದವು. ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಇಂತಹ ವೃತ್ತಿನಿರತ ಕಸಬುದಾರ ವರ್ಗಗಳ ಮೂಲ ಉದ್ದೇಶ ಒಕ್ಕಲು ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಆ ಮೂಲಕ ಉತ್ಪಾದಕತೆಯನ್ನು ಸ್ಥಳೀಯರ ಮೂಲಕ ಹಿಗ್ಗಿಸುವುದು ಆಗಿತ್ತೇ ಹೊರತು ಸಾಮ್ರಾಜ್ಯ ಸ್ಥಾಪನೆ ಉದ್ದೇಶ ಹೊಂದಿರಲಿಲ್ಲ.

ಜನ ಬದುಕಿನ ಸಾಂಸ್ಕೃತಿಕ ವಕ್ತಾರರಂತೆ ಕೆಲಸ ಮಾಡುತ್ತಿದ್ದ ಇಂತಹ ನೆಲೆಗಳನ್ನು ಭೂಮಾಲೀಕ ವರ್ಗಗಳು ಆಕ್ರಮಿಸಿಕೊಂಡ ಮೇಲೆ ಅವು ಉಳಿಗಮಾನ್ಯ ನೆಲೆಯಾಗಿ ಪರಿವರ್ತಿತವಾಗುತ್ತವೆ. ದುಡಿಯುವ ವರ್ಗಗಳಿಗೆ ಅನಿವಾರ್ಯವಾಗಿದ್ದ ಮಠ ಮತ್ತು ದೇವಸ್ಥಾನದಂತಹ ಸಾಂಸ್ಕೃತಿಕ ನೆಲೆಗಳ ನಿರಾಕರಣೆಯು ಹಲವು ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡುತ್ತದೆ. ಸ್ವಂತ ಉಪಜೀವನ ಮಾಡುತ್ತಿದ್ದ, ಕಾಯಕ ಮಾಡುತ್ತಿದ್ದ, ಕಾಯಕ ಜೀವಿಗಳನ್ನು ಯಾವಾಗ ಉಳಿಗಮಾನ್ಯ ವ್ಯವಸ್ಥೆ ವಶಪಡಿಸಿಕೊಂಡಿತೋ ಆಗ ಕೇಂದ್ರೀಕೃತ ಪ್ರವೃತ್ತಿ ಶುರುವಾಗುತ್ತದೆ. ಕೌಶಲ್ಯಗಳು ಕೂಲಿಗಳಾಗಿ ರೂಪಾಂತರವಾಗುತ್ತವೆ. ತೆರಿಗೆ ಭಾರ ಹೆಚ್ಚುತ್ತದೆ. ಕರಕುಶಲ ಕಲೆಗಳ ಅವಸಾನ ಇಲ್ಲಿಂದ ಶುರುವಾಗುತ್ತದೆ.

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನುವ ಬಸವಣ್ಣನವರ ವಚನವನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ. ವಸುಂಧರಾ ಫಿಲಿಯೋಜಾ ಅವರು ಹೇಳುವಂತೆ, ಈ ಕಾಲದಲ್ಲಿ ಹೊಸ ದೇವಾಲಯ ಕಟ್ಟುವುದಕ್ಕಿಂತ ಇದ್ದ ಶಿವದೇವಾಲಯಗಳನ್ನು ಊರ್ಜಿತಗೊಳಿಸಲಾಯಿತು. ಏಕಕೂಟ ದೇವಾಲಯಗಳು ತ್ರಿಕೂಟಾಚಲಗಳಾಗಿ ಪರಿವರ್ತನೆಯಾದವು ಎನ್ನುವ ಅವರ ಮಾತು ಈ ವಚನದ ಚಾರಿತ್ರಿಕ ಹಿನ್ನಲೆಯನ್ನು ಕಟ್ಟಿಕೊಡುತ್ತದೆ. ಕಾಳಾಮುಖ ಮತ್ತು ಪಾಶುಪತ ಎಂಬ ಶೈವ ಪಂಥಗಳು ಈ ಕಾಲದ ಸಾಂಸ್ಕೃತಿಕ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಈ ಪಂಥಗಳು ಮಾಡುತ್ತಿದ್ದ ಮಹತ್ವದ ಕೆಲಸವೆಂದರೆ ಪ್ರತಿಯೊಂದು ವೃತ್ತಿಯವರೂ ಒಂದೊಂದು ಶೈವ ದೇವಾಲಯವನ್ನು, ಮಠ, ಛತ್ರ, ಶಾಲೆ ನಿರ್ಮಿಸಿ ಆ ಸಮುದಾಯದ ಏಳಿಗೆ ಸಾಧಿಸಲು ಪ್ರಯತ್ನ ಪಡುತ್ತಿದ್ದರು. ಅದೊಂದು ಪುಣ್ಯದ ಕೆಲಸವೂ ಆಗಿತ್ತು. ಆ ಕಾಲದ ಪಾಶುಪತ ಮತ್ತು ಕಾಳಾಮುಖರು ದುಡಿಯುವ ಜನರಿಗೆ ಒಂದು ಜಾಗವಾಗಬೇಕು, ದುಡಿಯುವವರಿಗೆ ಅನ್ನ ಸಿಗಬೇಕು, ಜ್ಞಾನ ಪ್ರಸಾರವಾಗಬೇಕು ಎನ್ನುವ ಕಾರಣಕ್ಕೆ ಮಠ, ಛತ್ರ, ಶಾಲೆಯನ್ನು ನಿರ್ಮಿಸುತ್ತಿದ್ದರು. ಇದರ ಭಾಗವಾಗಿಯೇ ತೆಲ್ಲಿಗೇಶ್ವರ, ದಾಸೇಶ್ವರ, ನಗರೇಶ್ವರ, ಮತಂಗೇಶ್ವರ ಇತ್ಯಾದಿ ದೇವಸ್ಥಾನಗಳು  ಆ ಕಾಲದಲ್ಲಿ ಕಟ್ಟಲ್ಪಡುತ್ತವೆ. ಎಸ್. ಎಸ್. ಹಿರೇಮಠರು ಈ ಮಠದ ವ್ಯವಸ್ಥೆ, ಛತ್ರ ವ್ಯವಸ್ಥೆ, ಶಾಲೆ ವ್ಯವಸ್ಥೆ ಇರದೆ ಹೋಗಿದ್ದರೆ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಇವರೆಲ್ಲರೂ ಅನುಭವಿಗಳಾಗಲು ಸಾಧ್ಯವಿರಲಿಲ್ಲ. ಕೋಡಿಮಠದ ಪರಿಸರವಿಲ್ಲದಿದ್ದರೆ ನಾಗಾರ್ಜುನ, ಅಲ್ಲಮರಂತಹ ದೈತ್ಯ ಕನ್ನಡ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ತಮ್ಮ ಸಮಾಜ, ಸಂಸ್ಕೃತಿ, ಸಂಘರ್ಷ ಎನ್ನುವ ಕೃತಿಯಲ್ಲಿ ಹೇಳುತ್ತಾರೆ. ನಾವು ವಚನಗಳನ್ನು ವಚನಕಾರರನ್ನು ಹೀಗೆ ವಚನ ಸಾಹಿತ್ಯದ ಮುಂಚಿನ ನೆಲೆಯಲ್ಲಿ ನೋಡಿದಾಗ ಪೂರ್ವಾಶ್ರಮದಲ್ಲಿ ಅವರು ವಾಸವಾಗಿದ್ದಂತಹ ಸ್ಥಾನಿಕ ಕೇಂದ್ರಗಳು, ಅವರ ಆಧ್ಯಾತ್ಮಿಕ, ಸಾಮಾಜಿಕ ಕೌಶಲಗಳ ಬೆಳವಣಿಗೆಯಲ್ಲಿ ಹೇಗೆ ಮಹತ್ವದ ಪಾತ್ರವಹಿಸಿದ್ದವು ಎನ್ನುವಂತದ್ದು ಅರ್ಥವಾಗುತ್ತದೆ.

ಆ ಕಾಲದ ದೇವಾಲಯಗಳು ಕೇವಲ ಒಂದೊಂದು ಜಾತಿ ಸಮುದಾಯದ ಪೂಜಾ ಸ್ಥಾನಗಳಷ್ಟೇ ಆಗಿರದೇ ಸಮೂಹದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವ, ಸಂಪತ್ತನ್ನು ರಕ್ಷಿಸುವ ಹಾಗೂ ನಿರ್ವಹಿಸುವ ವ್ಯವಸ್ಥೆಗಳಾಗಿದ್ದವು ಎಂಬುದನ್ನು ಡಾ. ಬಿ. ಆರ್. ಹಿರೇಮಠ ಗುರುತಿಸುತ್ತಾರೆ. ಉದಾ: 1144 ಶಾಸನದಲ್ಲಿ ತೆಲ್ಲಿಗೇಶ್ವರ ದೇವರ ದೇವಸ್ಥಾನವನ್ನು ಗಾಣಿಗರು ಕಟ್ಟಿಸಿದ ಉಲ್ಲೇಖವಿದೆ. ಇವರ ದೇವರು ತೆಲ್ಲಿಗರೈವತ್ಮೂರು ಒಕ್ಕಲಿನ ದೇವತೆಯಾಗಿತ್ತು. ಹಾಗೆಯೇ ಶಿಲ್ಪಿ ಕುಲದವರು ಕುಸುಮೇಶ್ವರ ಎನ್ನುವ ದೇವಾಲಯವನ್ನು ಕಟ್ಟಿಕೊಂಡು ಅಲ್ಲಿ ತಮ್ಮ ಸಮುದಾಯದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವಂತಹ, ಸಂಪತ್ತನ್ನು ರಕ್ಷಿಸುವ, ತರಬೇತಿ ಕೊಡುವ ಕೆಲಸ ಮಾಡುತ್ತಿದ್ದರು. ಚಿನ್ನ ಕೆಲಸಗಾರರು ಕಮಠೇಶ್ವರ ದೇವಸ್ಥಾನ ಕಟ್ಟಿಕೊಂಡಿದ್ದನ್ನು ಬಿ. ಎಲ್. ರೈಸ್‌ರು ಎಫಿಗ್ರಾಫಿಕಾ ಸಂಪುಟ7 ರಲ್ಲಿ ಉಲ್ಲೇಖಿಸುತ್ತಾರೆ. ಹಾಗೆಯೇ ಶಿಕಾರಿಪುರದ ಶಾಸನದಲ್ಲಿ ಬಿಲ್ಲಮೂನ್ನೂರ್ವರು ಬಿಲ್ಲೇಶ್ವರ ಎನ್ನುವ ಗುಡಿಯನ್ನು ಕಟ್ಟಿಸುತ್ತಾರೆ. ಏಕವ್ಯಕ್ತಿ ಹೆಸರಿನಲ್ಲಿ ಬಳ್ಳಿಗಾವಿಯ ತಳಾರ ಮಂಜಯ್ಯ ನಾಯಕ ಮಂಜೇಶ್ವರ ದೇವಾಲಯವನ್ನು ಕಟ್ಟಿಸುತ್ತಾನೆ. ಹೀಗೆ ವಿಭಿನ್ನ ವ್ಯಕ್ತಿ ಸಮುದಾಯಗಳು ದೇವಸ್ಥಾನಗಳನ್ನು ಕಟ್ಟಿಸಿ ದಾನ ಬಿಟ್ಟಿರುವುದನ್ನು ಗಮನಿಸಬಹುದು.

ಎಸ್.ಕೆ. ರಾಮಚಂದ್ರರಾವ್ ಎಂಬ ಶಿಲ್ಪಶಾಸ್ತ್ರಜ್ಞರು ಆಲಯ ಸಂಸ್ಕೃತಿಯನ್ನು ಜನಮುಖಿಯಾಗಿ ರೂಪಿಸಿದವರು ಕಾಳಾಮುಖ ಶೈವ ಪಂಥದ ಆಚಾರ್ಯರು ಎಂದು ಹೇಳುತ್ತಾರೆ. ಈ ಅರ್ಥದಲ್ಲಿ ವಚನಕಾರರು ದೇವಸ್ಥಾನ ಸಂಸ್ಕೃತಿಯ ಸಹಾಯವಿಲ್ಲದೆ ದೇವರ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬಹುದು ಎಂದು ನಂಬಿದ್ದರು. ಆದರೆ ಅದೇ ಕಾಲದಲ್ಲಿ ಏಕಾಂತ ರಾಮಯ್ಯ, ಆದಯ್ಯನಂತವರು ಆಲಯ ಸಂಸ್ಕೃತಿಯನ್ನು ಒಂದು ರೀತಿ ಅತಿಗೆ (Exsterm) ಒಯ್ಯುವುದನ್ನು ನೋಡಬಹುದು. ಏಕೆಂದರೆ ವಚನ ಸಾಹಿತ್ಯದಲ್ಲಿ ಒಂದೇ ಸಂಸ್ಕೃತಿ, ಒಂದೇ ಸಾಮಾಜಿಕ ನೆಲೆಯಿಂದ ಬಂದವರು ಇರಲಿಲ್ಲ. ಅವರ ಸಾಮಾಜಿಕ ಹಿನ್ನೆಲೆಯಲ್ಲಿ ವಚನಗಳನ್ನು ವಚನಗಳ ತಾತ್ವಿಕತೆಯನ್ನು ಗ್ರಹಿಸಿದಾಗ ವಚನ ಸಾಹಿತ್ಯದ ಬಗ್ಗೆ ಹೊಸ ಹೊಳಹುಗಳು ದೊರಕುತ್ತವೆ.

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ವಚನದ ಹಿನ್ನೆಲೆ ಏನೆಂದರೆ 1162 ರ ಆಸುಪಾಸಿನಲ್ಲಿ ಬಳ್ಳಿಗಾವಿಯ ಸುತ್ತಮುತ್ತ ಬಹಳಷ್ಟು ದೇವಾಲಯಗಳು ಕಟ್ಟಲ್ಪಡುತ್ತವೆ ಮತ್ತು ಜೀರ್ಣೋದ್ಧಾರಗೊಳ್ಳುತ್ತವೆ. ಬಿಜ್ಜಳ ಈ ದೇವಾಲಯಗಳಿಗೆ ಉಂಬಳಿಯಾಗಿ ಭೂಮಿಯನ್ನು ಕಾಣಿಕೆ ಕೊಡುತ್ತಾನೆ. ಹಿಂದೆ ಯಾವ ಚಕ್ರವರ್ತಿ ಕೊಡದಷ್ಟು ಸಂಪತ್ತನ್ನು ದೇವಸ್ಥಾನಕ್ಕೆ ಕೊಡುತ್ತಾನೆ ಎಂದು ಶಿಕಾರಿಪುರ ಶಾಸನದಲ್ಲಿ ಉಲ್ಲೇಖವಿದೆ. ಹೀಗಾಗಿ ಬಸವಣ್ಣ ಇರುವ ಕಾಲದಲ್ಲಿ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ದೇವಸ್ಥಾನಗಳ ನಿರ್ಮಾಣ ಹಾಗೂ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿತ್ತು. ಅಂದಿನ ಸಾಮಾಜಿಕ ಚಾರಿತ್ರಿಕ ಸಂದರ್ಭವನ್ನು ಹೇಳುವುದಕ್ಕೆ ಬಸವಣ್ಣನವರ ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂಬ ವಚನ ಹುಟ್ಟಿರಬಹುದು ಎಂಬುದು ನನ್ನ ಅಭಿಮತ.

ವಚನಕಾರರ ಕಾಲಕ್ಕೆ ದೇವಾಲಯ ಸಂಸ್ಕೃತಿ ಎಂದು ಯಾವುದನ್ನು ಕರೆಯುತ್ತೇವೆಯೋ ಬಹುಶಃ ವೈಭೋಗ ಮಾಡುವಂತ ಕೆಲವು ಸ್ಥಾನಪತಿಗಳು, ಮಠಾಧಿಪತಿಗಳಿಂದ ನಾಶದ ಅಂಚಿಗೆ ಬಂದಿರಬಹುದು. ದಿಂಡಿ ದಿಂಡಿ ಭೂದಾನದಿಂದ ಸಂಪತ್ತು ಕ್ರೋಢೀಕರಣವಾಗಿ ಮಠ ಮತ್ತು ದೇವಸ್ಥಾನಗಳು ಉಪಭೋಗದ ಕೇಂದ್ರಗಳಾಗುತ್ತಿರುವುದನ್ನು ಮನಗಂಡು ಶರಣರು ಅಲ್ಲಿರುವಂತ ಉಪಭೋಗ ಸಂಸ್ಕೃತಿಯನ್ನು ನಿರಾಕರಿಸುವ ಕೆಲಸ ಮಾಡಿರಬಹುದು.

ವಚನ ಚಳುವಳಿಯಲ್ಲಿನ ತಾತ್ವಿಕ ಭಿನ್ನಾಭಿಪ್ರಾಯವನ್ನು ಗಮನಿಸುವುದಾದರೆ ಉಳ್ಳವರು ಶಿವಾಲಯ ಮಾಡುವರು, ದೇಹವೇ ದೇಗುಲ ಎಂಬ ಪರಿಕಲ್ಪನೆಯನ್ನು ಬಸವಣ್ಣನವರು ಕೊಟ್ಟಾಗ, ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯ ಏಕೆ”? ಎನ್ನುವ ಧ್ವನಿ ಅಲ್ಲಮ ಪ್ರಭುವಿನದು. ದೇಹಾರವ ಮಾಡುವ ಅಣ್ಣಗಳಿರಾ ದೇಹಾರಕ್ಕೆ ಆಹಾರವೇ ನಿಚ್ಚಣಿಕೆ, ದೇಹಾರವ ಮಾಡದೆ ಆಹಾರವನಿಕ್ಕದ್ದಿದ್ದಡೆ ಆ ಹರನಿಲ್ಲೆಂದ ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ. ವಚನಗಳಲ್ಲಿ ಇಂಥ ಭಿನ್ನ ಧ್ವನಿಗಳನ್ನು, ಭಿನ್ನ ತಾತ್ವಿಕತೆಯನ್ನು ಗುರುತಿಸಬೇಕಾಗುತ್ತದೆ. ಹಾಗೆಯೇ ಹಸಿವು ಹಾಗೂ ಹುಸಿಯ ಪರಿಕಲ್ಪನೆಗಳನ್ನು ನೋಡಬಹುದು. ಉದಾ: ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎನ್ನುವ ಬಸವಣ್ಣನವರ ತಾತ್ವಿಕತೆಗೂ ಹಸಿವಿನ ಜಗತ್ತಿನಿಂದ ಬಂದಂತ ಶರಣರು ಹೇಳುವ ಹಸಿವೆಂಬ ಹೆಬ್ಬಾವು ಬಸಿರ ಹಿಡಿದಿರುವಾಗ ಆ ಬಸಿರ ಬೇಗೆಯನೀಗಿಸದೆ ಮುಂದುವರೆಯುವುದೆಂತು”, ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ನಿನೊಮ್ಮೆ ಒಡಲುಗೊಂಡು ನೋಡಾ ಇಲ್ಲಿ ಒಟ್ಟು ಮೂರು ರೀತಿ ಸತ್ಯಗಳಿವೆ. ಬಸವಣ್ಣನವರ ಸತ್ಯ, ಅಲ್ಲಮ ಪ್ರಭುಗಳ ಸತ್ಯ, ಅಂಬಿಗರ ಚೌಡಯ್ಯನವರ ಸತ್ಯ. ಸಂಶೋಧಕ ಯಾವ ಸತ್ಯವನ್ನು ಹುಡುಕಬೇಕು? ಏಕೆಂದರೆ ಅವರವರ ಸತ್ಯ ಅವರ ಅನುಭಾವದ ಹಿನ್ನೆಲೆಯಲ್ಲಿ ಅವರ ಸಾಮಾಜಿಕ ಹಿನ್ನೆಲೆಯಲ್ಲಿ, ಅವರ ಜ್ಞಾನದ ಹಿನ್ನೆಲೆಯಲ್ಲಿ, ಅವರ ಸಾಧನೆಯ ಹಿನ್ನೆಲೆಯಲ್ಲಿ ಹುಟ್ಟಿ ಬಂದಂತವು.

ವಚನಕಾರರಲ್ಲಿ ಕಾಣುವ ಅಷ್ಟಾವರಣಗಳು ವಚನ ಪೂರ್ವದ ಕಾಳಾಮುಖ ಯತಿಗಳಲ್ಲಿ ಕೂಡ ಇದ್ದವು. ಕಾಳಾಮುಖ ಯತಿಗಳಲ್ಲಿ ಅವು ದಶಾಂಗ ನಿಯಮಗಳಾಗಿ ಬರುತ್ತವೆ. ಅವೇ ಬ್ರಹ್ಮಚರ್ಯ, ದಯೆ, ಸತ್ಯ, ಅಕ್ರೋಧ, ಶಾಂತಿ, ಅರ್ಜವ, ಶಿವಭಕ್ತಿ, ತಪಸ್ಸು, ಗುರು ಮತ್ತು ಜಪ. ಇವುಗಳನ್ನು ವಿವರಿಸುವುದಾದರೆ

  1. ಬ್ರಹ್ಮಚರ್ಯ: ಲೋಲುಪತೆಯಿಂದ ಅಥವಾ ಉಪಭೋಗ ಸಂಸ್ಕೃತಿಯಿAದ ಹೊರಗುಳಿಯುವುದು.
  2. ದಯೆ: ಸರ್ವಜೀವಿಗಳಲ್ಲಿ ಯಾವನ ಮನಸ್ಸು ಕರಗುತ್ತದೆಯೋ ಅವನೇ ದಯಾಶಾಲಿ, ಅವನೇ ಸಾಕ್ಷಾತ್ ಶಿವ. ಇದು ತಪಸ್ಸಿನಿಂದ ಬರುವಂತದ್ದಲ್ಲ, ಮನುಷ್ಯತ್ವದಿಂದ ಬರುವಂಥದ್ದು, ದಯವೇ ಪ್ರಾಣವಾಗಿರಬೇಕು. ಇದನ್ನೆ `ದಯವೇ ಧರ್ಮದ ಮೂಲ’ ಎಂದು ಶರಣರು ಹೇಳಿದರು.
  3. ಸತ್ಯ: ಸತ್ಯವೇ ಸರ್ವಾಂಗ ಭೂಷಣ. ಸದಾ ಸುಖವಾಗಿರುವಂಥ ಸತ್ಯವನ್ನು ಪ್ರತಿಯೊಬ್ಬರ ನಡೆಯಲ್ಲಿ ನುಡಿಯಲ್ಲಿ ಕಾಣಬೇಕು. ಹಿತಮಿತವಾದ ಮಾತೇ ಸತ್ಯ. ಶರಣರಲ್ಲಿ ಸತ್ಯ ನುಡಿಯುವುದೇ ಮರ್ತ್ಯಲೋಕ, ಮಾತೆಂಬುದು ಜ್ಯೋತಿರ್ಲಿಂಗವಾಯಿತು.
  4. ಅಕ್ರೋಧ: ಕ್ರೋಧ ನಾಶಕ್ಕೆ ಕಾರಣವಾದರೆ ಅಕ್ರೋಧ ಸಾಧನೆಗೆ ದಾರಿ ಮಾಡುತ್ತದೆ. ಅಕ್ರೋಧದಿಂದ ಇರುವಂತವನೆ ಮುನಿ. ಇದು ಶರಣರಲ್ಲಿ ಮುನಿಯಬೇಡ ಎನ್ನುವ ತಾತ್ವಿಕತೆಯನ್ನು ಸೃಷ್ಟಿಸಿತು.
  5. ಶಾಂತಿ: ಮನೆ, ಮಠ, ಮನಸ್ಸು ಶಾಂತವಾಗಿರಬೇಕು. ಸುಖವೇ ಶಾಂತಿ. ಶಾಂತಚಿತ್ತ ಇಂದ್ರಿಯ ನಿಗ್ರಹಕ್ಕೆ ಕಾರಣವಾಗುತ್ತದೆ.
  6. ಅರ್ಜವ (ಆಸ್ತೆಯ): ನಂಬಿಕೆ, ನಮ್ರತೆಯಿಂದಿರುವುದು. ಶಂಭುವಿನಲ್ಲಿ ನಂಬಿಕೆಯಿಡುವುದು. ನಮ್ರತೆ ನಿಷ್ಕಪಟತೆಯನ್ನು ಹುಟ್ಟಿಸುತ್ತದೆ. ಇದನ್ನೇ ಶರಣರು  ನಡೆ ಶುದ್ಧತೆ, ನುಡಿ ಶುದ್ಧತೆ ಎಂದರು.
  7. ಶಿವಭಕ್ತಿ: ಶಿವಭಕ್ತಿಯೇ ಪರವು. ಭಕ್ತಿ ಇಲ್ಲದವನಿಗೆ ಯಶಸ್ಸಿಲ್ಲ ಎಂದು ಕಾಳಾಮುಖ ಸಿದ್ಧಾಂತದಲ್ಲಿ ಹೇಳಲಾಗಿದೆ. ‘ಕೂಡಲಸಂಗಮನಲ್ಲದೇ ಮತ್ತೊಂದಕ್ಕೆ ಎರಗಿದರೆ ಕಿವಿ ಮೂಗ ಕೊಯ್ಯುವರು’ ಎನ್ನುವಲ್ಲಿ ಶರಣರ ಏಕದೇವ ನಿಷ್ಠೆ ಕಾಣುತ್ತದೆ.
  8. ತಪಸ್ಸು: ಕಾಯಾ, ವಾಚಾ, ಮನಸಾ ಶುದ್ಧವಾಗಿರಬೇಕು. ಅಂತರAಗ ಬಹಿರಂಗ ಶುದ್ಧತೆ, ತನು ಶುಚಿ ಮನ ಶುಚಿ ತಪಸ್ಸಿಗೆ ಬಹುಮುಖ್ಯ.
  9. ಗುರು: ಗುರುವೇ ಶಿವನು. ಗುರು ಸೇವೆಯಿಂದ ಸರ್ವಾಭಿಮತ ಸಿದ್ದಿ. ತ್ರಿಕರಣಪೂರ್ವಕವಾಗಿ ಗುರು ಸೇವೆ ಮಾಡುವುದು.
  10. ಜಪ: ವಿಷಯ ಪದಾರ್ಥಗಳನ್ನು ವಿಸರ್ಜಿಸಿ ಶಿವ ಭಕ್ತಿಯನ್ನು ಪಡೆಯುವುದೇ ಜಪ. ಚಿತ್ತವನ್ನು ನೆಲೆಗೊಳಿಸುವುದು ಜಪ. ಮಹಾವ್ರತರಲ್ಲಿ ಇವು ಚರ್ಯೆಯಾಗಿ ಕಂಡರೆ ವಚನಕಾರರಲ್ಲಿ ಅಷ್ಟಾವರಣಗಳಾಗಿ ಕಾಣುತ್ತವೆ. ಹೀಗೆ ವಚನಕಾರರನ್ನು ಅರ್ಥಮಾಡಿಕೊಳ್ಳಲು ವಚನಕಾರರ ಪೂರ್ವದ ಸ್ಥಿತಿಗತಿಗಳ ತಿಳುವಳಿಕೆ ಬಹಳ ಮುಖ್ಯವೆನಿಸುತ್ತದೆ.

ಈ ಅರ್ಥದಲ್ಲಿ ವಚನ ಸಾಹಿತ್ಯದ ಸಂಶೋಧನೆ ಎಂದರೆ ಸವೆದ ಹಾದಿಗಳಲ್ಲಿ ನಡೆಯುವುದಲ್ಲ, ಸವೆಯದ ಹೊಸ ಹಾದಿಗಳಲ್ಲಿ ನಡೆಯುವುದಾಗಿದೆ. ಸರಳ ದಾರಿಗಿಂತ ಸರಿಯಾದ ದಾರಿಯನ್ನು ಹುಡುಕಬೇಕು. ಅಂದರೆ ಪ್ರಶ್ನೆ ಹಾಗೂ ಅನುಮಾನಗಳ ಮೂಲಕ ವಚನಗಳ ಸಂಕೀರ್ಣತೆ ಮತ್ತು ಬಹುಸ್ಥರೀಯ ಅರ್ಥಗಳನ್ನು ಕಂಡುಕೊಳ್ಳುವುದು. ವಚನಗಳ ರಚನಾ ಸ್ವರೂಪವೇ ಪ್ರಶ್ನೆ ಅಥವಾ ಅನುಮಾನಗಳಿಂದ ಕೂಡಿದೆ. ವಚನಕಾರರು ಪ್ರಶ್ನೆ ಮಾಡುತ್ತಾರೆ ಮತ್ತು ಉತ್ತರಿಸುತ್ತಾರೆ, ಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ನಿನಗಾಗಿ ಸತ್ತವರನ್ನಾರನ್ನೂ ಕಾಣೆ. ವಚನಗಳು ಹುಟ್ಟುವುದೇ ಪ್ರಶ್ನೆ ಅನುಮಾನಗಳ ಮೂಲಕ. ನೀನೊಲಿದರೆ ಕೊರಡು ಕೊನರುವುದಯ್ಯ? ಒಲಿಯದಿದ್ದರೆ; ಕೊರಡು ಕೊನರದೆ ಇರಬಹುದು. ಹೀಗೆ ಪ್ರಶ್ನೆ ಮತ್ತು ಅನುಮಾನದ ಮೂಲಕ ವಚನಗಳನ್ನು ಶೋಧ ಮಾಡಬೇಕು.

ವಚನ ಸಾಹಿತ್ಯದಲ್ಲಿ ಮಹಿಳಾ ಸ್ವಾತಂತ್ರ‍್ಯದ ಸ್ವರೂಪ ಅಥವಾ ವಚನಗಳಲ್ಲಿ ಆರ್ಥಿಕ ನಿರ್ವಹಣೆಯ ಸ್ವರೂಪ ಎಂಬ ಶೀರ್ಷಿಕೆ ತೆಗೆದುಕೊಂಡಿದ್ದೇವೆ ಎಂದಿಟ್ಟುಕೊಂಡಾಗ, ಆರ್ಥಿಕ ನಿರ್ವಹಣೆಯ ಕುರಿತು ಯಾವ ಯಾವ ಶರಣರು ಯಾವ ಯಾವ ರೀತಿ ಹೇಳಿದರು ಎಂಬುದು ಮುಖ್ಯವಾಗುತ್ತದೆ. ವರ್ತಕರು, ಕುಶಲಕರ್ಮಿ ಹಿನ್ನೆಲೆಯ ಶರಣರು ಹೇಳಿರುವ ಆರ್ಥಿಕತೆ ಬೇರೆ ಬೇರೆಯಾಗಿರುತ್ತದೆ. ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುವಾಗ ಆ ಕಾಲದಲ್ಲಿ ಯಾವ ಯಾವ ಸ್ವರೂಪದ ಆರ್ಥಿಕ ವಹಿವಾಟುಗಳು ಇದ್ದವು? ಹಾಗೆಯೇ ಮಹಿಳಾ ಸ್ವಾತಂತ್ರ‍್ಯದ ಸ್ವರೂಪ ಎಂದಾಗ, ಯಾವ ರೀತಿ ಸ್ವಾತಂತ್ರ‍್ಯ? ಈಗಿನ ಕಾಲದ ಸ್ವಾತಂತ್ರ‍್ಯವೋ ಅಥವಾ 12 ನೇ ಶತಮಾನದಲ್ಲಿದ್ದಂತಹ ಸ್ವಾತಂತ್ರ‍್ಯವೋ? ಎಂಬುದು ಮುಖ್ಯ. ಸಂಶೋಧಕನಿಗೆ ಪರಿಭಾಷೆಗಳ ಕುರಿತು ಸ್ಪಷ್ಟ ತಿಳಿವಳಿಕೆ ಇರಬೇಕು. ಇಲ್ಲದೆ ಹೋದರೆ ಇವತ್ತಿನ ಮೌಲ್ಯಗಳನ್ನು ಅಂದು, ಅಂದಿನ ಮೌಲ್ಯಗಳನ್ನು ಇಂದು ಅನುಸರಿಸುವುದರಿಂದ ಸಂಶೋಧನೆ ಹದಗೆಡುತ್ತದೆ.

ಹಾಗೆಯೇ ಸಮಾನತೆ ಎಂಬುದಕ್ಕೆ, ಅದು ಈ ಕಾಲದ ಸಮಾನತೆಯೇ, ಲಿಂಗ ಸಮಾನತೆಯೇ, ಸಾಮಾಜಿಕ ಸಮಾನತೆಯೇ, ಆಧ್ಯಾತ್ಮಿಕ ಸಮಾನತೆಯೇ, ಯಾವುದು ಆಚರಣೆಯಲ್ಲಿದೆ. ಸಮಾನತೆ ಎನ್ನುವುದು ಆಧ್ಯಾತ್ಮಿಕ ಸಾಧನೆಯಲ್ಲಿ ಮಾತ್ರವಿತ್ತೆ, ಸಾಮಾಜಿಕ ವಾಸ್ತವದಲ್ಲಿ ಸಮಾನತೆ ಇತ್ತೇ ಎಂಬ ಹಲವು ಪ್ರಶ್ನೆಗಳು ಹುಟ್ಟುತ್ತವೆ. ವಚನಕಾರರಲ್ಲಿ ಆಧ್ಯಾತ್ಮಿಕ ಸಮಾನತೆಯನ್ನು ಅನುಭಾವಿಕ ಸಮಾನತೆಯನ್ನು ನೋಡುತ್ತೇವೆ. ಆದರೆ ಸಾಮಾಜಿಕ ಸಮಾನತೆ ಇತ್ತಾ? ಇದ್ದರೆ ಅದರ ಸ್ವರೂಪ ಯಾವುದಾಗಿತ್ತು, ಯಾವ ರೀತಿ ಸಮಾಜ ಇತ್ತು, ಸಮುದಾಯಗಳಿದ್ದವು, ಇವುಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿತ್ತು ಎಂಬುದನ್ನು ಆಯಾ ಸಾಮಾಜಿಕ, ಆರ್ಥಿಕ ನೆಲೆಯಲ್ಲಿ ಸಂಶೋಧಕ ನೋಡಬೇಕಾಗುತ್ತದೆ.

ವಿಚಾರ ಸ್ವಾತಂತ್ರ‍್ಯದಲ್ಲಿ ಶರಣ ಮತ್ತು ಶರಣೆಯರು ಒಂದೇ ನಿಲುವು ಉಳ್ಳವರಾಗಿದ್ದರೆ? ಅಥವಾ ಭಿನ್ನಮತ ಹೊಂದಿದ್ದರೆ? ಏಕೆಂದರೆ ಅವರವರ ಸಾಮಾಜಿಕ ಹಿನ್ನೆಲೆಗಳು, ವೃತ್ತಿ ಹಿನ್ನೆಲೆಗಳು, ಅವರವರ ನೋವು ನಲಿವುಗಳು, ಅವರವರ ಸ್ವಾತಂತ್ರವನ್ನು, ಅವರವರ ಅಭಿವ್ಯಕ್ತಿ ರೂಪಗಳನ್ನು ನಿರ್ಮಿಸಿರುತ್ತವೆ.

ಹೆಣ್ಣು ಮಾಯೆ, ಹೊನ್ನು ಮಾಯೆ, ಮನದ ಮುಂದಣ ಆಸೆಯೇ ಮಾಯೆ ಎಂಬುದನ್ನು ಅನುಸಂಧಾನ ಮಾಡುವ ಬಗೆ ಯಾವುದು? ಹೆಣ್ಣಿನ ಕುರಿತು ಯಾರು ಯಾರು ಹೇಗೆ ಹೇಳಿದ್ದಾರೆ. ಹೀಗೆ ಹೇಳುವ ಸಂದರ್ಭದಲ್ಲಿದ್ದ ರಾಜಕೀಯ, ಸಾಮಾಜಿಕ ಬಿಕ್ಕಟ್ಟುಗಳೇನು? ಆರ್ಥಿಕ ಬಿಕ್ಕಟ್ಟುಗಳೇನು? ಆ ಸಂದರ್ಭದ ಒತ್ತಡಗಳೇನು?, ಏನಾಗಿದ್ದವು? ಎನ್ನುವಂಥದ್ದರ ಮೂಲಕ ಗುರುತಿಸಬೇಕೆ ವಿನಃ, ಇವರು ಹೀಗೆ ಹೇಳಬೇಕಾಗಿತ್ತು, ಇವರು ಹೀಗೆ ಹೇಳಿದರು ಎನ್ನುವಂತಹ ತೀರ್ಮಾನ ಕೊಡಬಾರದು. ಅದಕ್ಕೆ ಸರಿಯಾದ ಮಾರ್ಗವನ್ನು ಸಂಶೋಧಕ ಹುಡುಕಬೇಕು. ಭಾರತದ ಎಲ್ಲಾ ಆಧ್ಯಾತ್ಮಿಕ ಪಂಥಗಳು, ಆತ್ಮದ ನೆಲೆಯಲ್ಲಿ ಆಧ್ಯಾತ್ಮದ ನೆಲೆಯಲ್ಲಿ ಗಂಡು ಹೆಣ್ಣುಗಳ ತಾರತಮ್ಯವನ್ನು ನಿರಾಕರಿಸುತ್ತವೆ ಎಂಬುದನ್ನು ಗಮನಿಸಬೇಕು.

ಶರಣರಲ್ಲಿ ಹಲವು ಸಾಮಾಜಿಕ ದಾರ್ಶನಿಕ ನೆಲೆಯಿಂದ ಬಂದವರು ಇದ್ದರು. ಏಕಾಂತ ರಾಮಯ್ಯ, ಜೇಡರ ದಾಸಿಮಯ್ಯ, ಹಾವಿನಾಳ ಕಲ್ಲಯ್ಯ, ನುಲಿಯ ಚಂದಯ್ಯ ಬೇರೆ ಬೇರೆ ವೃತ್ತಿ ಹಾಗೂ ಮೂಲದಿಂದ ಬಂದಿರುವುದನ್ನು ಗಮನಿಸಿ ನಾವು ಅವರ ವಚನಗಳನ್ನು ವ್ಯಾಖ್ಯಾನ ಮಾಡಬೇಕು. ಸತ್ಯಕ್ಕ, ಲಕ್ಕಮ್ಮ, ಮುಕ್ತಾಯಕ್ಕ ಇವರು ಸ್ವತಂತ್ರವಾಗಿ ಆಲೋಚಿಸುವವರಾಗಿದ್ದರು. ಇವರೆಲ್ಲರ ಆಧ್ಯಾತ್ಮಿಕ ನೆಲೆಗೆ, ಸಮಾನತೆಯ ಚಿಂತನೆಗಳಿಗೆ ಯಾವ ಆರ್ಥಿಕ, ಸಾಮಾಜಿಕ ಆಯಾಮಗಳಿದ್ದವು ಎನ್ನುವಂತದನ್ನು ಕೇಳಿಕೊಳ್ಳಬೇಕು. ಶರಣರಲ್ಲಿ ಕಾಣುವಂತಹ ಕುಟುಂಬ, ಸಮಾಜ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಗಂಡೆಜಮಾನಿಕೆ ಒಪ್ಪಿಕೊಂಡ ನಿಲುವುಗಳು ಕಾಣುತ್ತವೆ. ಶರಣಸತಿ ಲಿಂಗಪತಿ ಎನ್ನುವ ಮಾತುಗಳಾಗಿರಬಹುದು, ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಸಂಸಾರದಲ್ಲಿ ಗಂಡು ಶ್ರೇಷ್ಠ ಎನ್ನುವ ಪುರುಷವಾದಿ ನೆಲೆಗಳಿದ್ದವೆ? ಹೆಂಡತಿಯಾದವಳು ಗಂಡನಿಗೆ ಲೈಂಗಿಕ ನಿಷ್ಠೆ ತೋರಬೇಕು ಎನ್ನುವಂತದ್ದು, ಈ ನಿಷ್ಠೆ ಇಲ್ಲದಿದ್ದರೆ ಆಕೆಯನ್ನು ಬಹಳ ಕನಿಷ್ಠವಾಗಿ ನೋಡುವ ಸಂದರ್ಭಗಳು ವಚನಗಳಲ್ಲಿಯೇ ಇವೆ. ಸೂಳೆಯ ಮಗ ಮಾಳವ ಮಾಡಿದರೆ ತಾಯಿ ಹೆಸರಾಯಿತು, ತಂದೆ ಹೆಸರಲ್ಲ, ಸೂಳೆಗೆ ಹುಟ್ಟಿದ ಕೂಸಿನಂತೆ ಅಯ್ಯಾ ಅಯ್ಯಾ ಎಂದು ಕರೆಯಲಾರೆ. ಸ್ತ್ರೀ ಸಮಾನತೆ ಅಂತ ಬಂದಾಗ ಸಮಾನತೆಯನ್ನು ಇಲ್ಲಿ ನಾವು ವ್ಯಾಖ್ಯಾನ ಮಾಡಿಕೊಳ್ಳುವ ರೀತಿ ಯಾವುದು? ಇಂತಹ ಸಾಲುಗಳನ್ನು ನಾವು ಹೇಗೆ ತೆಗೆದುಕೊಳ್ಳುವುದು? ಅಂದರೆ ಗಂಡನಿಗೆ ನಿಷ್ಠೆ ಇಲ್ಲದ ಶಿವಭಕ್ತರಾದಂತಹ ಹೆಣ್ಣು ಮಕ್ಕಳ ಬಗ್ಗೆ ವಚನಕಾರರ ನಿಲುವು ಏನು? ಗಂಡ ಶಿವಭಕ್ತನಾದರೆ ಹೆಂಡತಿ ಮಾರಿಮಸಣಿಯ ಭಕ್ತಳು, ಭವಿ ಮತ್ತು ಭಕ್ತರಿಗಿದ್ದ ವ್ಯತ್ಯಾಸಗಳನ್ನು, ಶಿವಭಕ್ತರನ್ನು ನೋಡುವ ದೃಷ್ಟಿಕೋನಗಳಿಗೂ ಭವಿಗಳನ್ನು ನೋಡುವಂತಹ ದೃಷ್ಟಿಕೋನಗಳಿಗೂ ಶರಣರ ವಚನಗಳಲ್ಲಿ ವ್ಯತ್ಯಾಸವನ್ನು ಗಮನಿಸಬೇಕು. ಗಂಡನಿಲ್ಲದ ಮಗುವಿಗೆ ಬೆಲೆ ಇರಲಿಲ್ಲವೆ. ಪರಮಪತಿವ್ರತೆಗೆ ಗಂಡನೊಬ್ಬನೇ ಹಸಿದು ಬಂದ ಗಂಡನಿಗೆ ಉಣ್ಣಲಿಕ್ಕದೆ ಮರಗುವ ಸತಿಯಂತೆ ಎಂಬ ಮಾತುಗಳನ್ನು ಗ್ರಹಿಸುವ ಬಗೆಗಳಾವವು?

ಆಧುನಿಕ ಕಾಲದ ಸ್ತ್ರೀವಾದ ಪ್ರತಿಪಾದಿಸುವ ಸ್ತ್ರೀ ಸಮಾನತೆಯ ಆಶಯಗಳನ್ನು ವಚನಕಾರರ ಮೇಲೆ ಹೇರದೆ, ಆ ಕಾಲದ ಚಾರಿತ್ರಿಕ ಮಿತಿಗಳಲ್ಲಿ, ಚಾರಿತ್ರಿಕ ಹೊಳಹುಗಳಲ್ಲಿ ಹುಡುಕಬೇಕಾಗುತ್ತದೆ. ಶರಣರು ಮಾಡಿದಂತಹ ಸಾಮಾಜಿಕ, ಆರ್ಥಿಕ ಸುಧಾರಣೆ ಆಗಿರಬಹುದು ಅಥವಾ ವೃತ್ತಿ ಗೌರವವಾಗಬಹುದು, ವ್ಯಕ್ತಿ ಗೌರವವಾಗಬಹುದು, ಕಾಯಕ ದಾಸೋಹಗಳಾಗಬಹುದು ಯಾವುದೇ ಪರಿಕಲ್ಪನೆಯನ್ನು ತೆಗೆದುಕೊಂಡಾಗ ಅವುಗಳನ್ನು ಸಂಶೋಧಕರು ಕೇವಲ ವಚನದ ಹಂಗಿನಿಂದ ವಿವೇಚನೆ ಮಾಡದೆ ಆ ವಚನ ಹುಟ್ಟಿದ ಸಾಮಾಜಿಕ ಮತ್ತು ಚಾರಿತ್ರಿಕ ಕಾಲಘಟ್ಟಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು.

ನನ್ನ ಪ್ರಕಾರ ವಚನ ಸಾಹಿತ್ಯದ ಓದು ಮತ್ತು ಶೋಧವೆಂದರೆ ಹೊರಗೆ ಹುಡುಕುವುದಲ್ಲ. ನಮ್ಮನ್ನು ನಾವೇ ಹುಡುಕಿಕೊಳ್ಳುವುದು. ಅಲ್ಲಮ ಪ್ರಭುಗಳು ಹೇಳುವಂತೆ ತಾನೇ ತಾನಾದ ಮೇಲೆ ಇನ್ನೇನು ಎನ್ನುವಂತದ್ದು. ಅರಿವಾದ ಮೇಲೆ ಕುರುಹು ಏಕೆ ಎನ್ನುವ ಪದವನ್ನು ಅಲ್ಲಮ ಪ್ರಭುಗಳು ಬಳಸುತ್ತಾರೆ. ನುಡಿದರೆ ನುಡಿಗೆಡಿಸಿ ನುಡಿಯಬೇಕು, ನಡೆದರೆ ನಡೆಗೆಡಸಿ ನಡೆಯಬೇಕು ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಪಿಹೆಚ್.ಡಿ ಎಂದರೆ ಕೇವಲ ಡಿಗ್ರಿ ಅಲ್ಲ. ಮುಂದೆ ನಾವು ಸಾಮಾಜಿಕವಾಗಿ ಹೊಸ ಹೊಸ ಶೋಧ ಮಾಡುವುದಕ್ಕೆ ಇರುವಂತಹ ಅರ್ಹತೆ. ನಾವು ಇರುವ ತನಕ ನಾವು ನೋಡುವ ವಸ್ತುಗಳನ್ನು, ಮುಟ್ಟುವ ವಸ್ತುಗಳನ್ನು, ಬದುಕುವ ಲೋಕವನ್ನು ಮತ್ತೆ ಮತ್ತೆ ಹೊಸದಾಗಿ ನೋಡುವ, ಹೊಸ ರೀತಿ ಅನುಸಂಧಾನ ಮಾಡುವ, ಹೊಸ ಬೆಳಕಿನಲ್ಲಿ, ಹೊಸ ಜ್ಞಾನದಲ್ಲಿ ನೋಡುವ ಒಂದು ನಿರಂತರ ಪ್ರಕ್ರಿಯೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವಲ್ಲಿ ಅಜ್ಞಾನವನ್ನು ಜ್ಞಾನದ ಬೆಳಕಾಗಿ ಪರಿವರ್ತಿಸುವ ಬಹಳ ದೊಡ್ಡ ತಾತ್ವಿಕತೆ ವಚನಗಳಲ್ಲಿದೆ. ಹಾಗಾಗಿ ವಚನಗಳ ಸಂಶೋಧನೆಯ ಸವಾಲೆಂದರೆ ಮೊದಲು ಅವುಗಳನ್ನು ಅರ್ಥ ಮಾಡಿಕೊಳ್ಳುವ ಸಮಸ್ಯೆ, ವಚನಗಳನ್ನು ಅವುಗಳ ರಾಚನಿಕತೆ ಜೊತೆಗೆ ಚಾರಿತ್ರಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡಾಗ ನಮಗೆ ಆ ಕಾಲದ ಪರಿಸರ ಶೋಧ ಮಾಡಿದಂತೆ ಆಗುತ್ತದೆ. ಪರಿಸರ ಶೋಧದ ಮೂಲಕ ವಚನಗಳನ್ನು ಅನುಸಂಧಾನ ಅಥವಾ ವ್ಯಾಖ್ಯಾನ ಮಾಡಿದಾಗ ಅವು ನಮ್ಮೊಳಗೆ ಹೊಸ ಅರಿವನ್ನು ಹುಟ್ಟಿಸುತ್ತವೆ. ಅರಿವನ್ನು ಸ್ವಯಂ ಆಗಿಸಿಕೊಳ್ಳುವುದು, ನನ್ನದಾಗಿಸಿಕೊಳ್ಳುವುದು, ಸ್ವಂತದ್ದಾಗಿಸಿಕೊಳ್ಳುವುದೇ ಸಂಶೋಧನೆ. ಶರಣರ ಸ್ವಯಂ ಅರಿವೇ ಅವರಿಗೆ ಪ್ರಮಾಣವಾಗಿತ್ತು. ಹಾಗಾಗಿ ಸಂಶೋಧಕ ಆಕರಗಳ ಜೊತೆಗೆ ತನ್ನ ಅರಿವನ್ನು ತನಗೆ ಪ್ರಮಾಣವಾಗಿಸಿಕೊಳ್ಳಬೇಕು. ಒಂದು ನಿರ್ದಿಷ್ಟ ಸಂಸ್ಕೃತಿಯ ಯಾವುದೇ ರೂಪಗಳನ್ನು ಅಧ್ಯಯನ ಮಾಡಬೇಕೆಂದಾಗ ಮೊದಲು ಆ ನಿರ್ದಿಷ್ಟ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಸಂಶೋಧಕನ ಮೊದಲ ಆದ್ಯತೆಯಾಗಬೇಕು. ನಮಗೆ ತಿಳಿದಂತೆ ವಚನ ಚಳುವಳಿಯಲ್ಲಿ ಭಿನ್ನ ಭಿನ್ನ ಬದುಕಿನ ಕ್ರಮಗಳಿಂದ ಬಂದವರಿದ್ದರು. ಬದುಕು ಕಟ್ಟಿಕೊಳ್ಳುವಾಗ ಅವರದೇ ಆದ ಸಾಂಸ್ಕೃತಿಕ ರೂಢಿ ಸಂಪ್ರದಾಯಗಳನ್ನು ಕಾಲಕಾಲಕ್ಕೆ ಮಾರ್ಪಾಡು ಮಾಡಿಕೊಳ್ಳುತ್ತಾ ಬಂದವರಿದ್ದರು. ತಮ್ಮದೇ ಆದ ಲೋಕವಿವರಣೆ ಕೊಡುವವರಿದ್ದರು. ಪಶ್ಚಿಮ ಜ್ಞಾನದಿಂದ ಸೃಷ್ಟಿಸಿದ ಸಂಶೋಧನ ವಿಧಾನಗಳನ್ನು ವಚನಗಳ ಅಧ್ಯಯನಕ್ಕೆ ಬಳಸುವಾಗ ಬಹಳ ಎಚ್ಚರ ವಹಿಸಬೇಕಾಗುತ್ತದೆ.

(ದಿನಾಂಕ: 23.07.2022 ರಂದು ನಡೆದ ವಚನ ಮಂದಾರ ಅಂತರ್ಜಾಲ ವಚನ ಸಾಹಿತ್ಯ” ಉಪನ್ಯಾಸ ಆಯೋಜನೆ, ಪ್ರಥಮ ಇಂಟರ್‌ನ್ಯಾಷನಲ್ ಸ್ಕೂಲ್ ತುಮಕೂರು.)    

ಡಾ. ವೀರೇಶ ಬಡಿಗೇರ,
ಪ್ರಾಧ್ಯಾಪಕರು,
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ 583 276

ಮೋಬೈಲ್‌ ಸಂ. 94488 45789

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132.
    • e-Mail ID: admin@vachanamandara.in | info@vachanamandara.in

Loading

Leave a Reply