
ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು. ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣ ಮಾತ್ರ. ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ.
ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಗ್ರಾಮ ಬಳ್ಳಿಗಾವಿ. ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ. ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಅವಳ ವಿಯೋಗದ ನಂತರ ಅವರು ಸಂಸಾರದಿಂದ ವಿಮುಖರಾಗಿ ಪಾರಮಾರ್ಥಿಕದೆಡೆಗೆ ವಾಲಿದರು ಎಂಬುದು ಒಂದು ವಾದವಾದರೆ ಅವರು ಮಾಯೆಯ ಬಲೆಗೆ ಬಿದ್ದೇಯಿಲ್ಲ ಅವರು ಮಾಯೆಯನ್ನು ಗೆದ್ದು ಬಂದವರು ಎಂಬುದು ಇನ್ನೊಂದು ವಾದ. ಹೀಗೆ ಅದೇನೆ ಇದ್ದರೂ ಅವರ ವಚನಗಳಲ್ಲಿ ಅಥವಾ ಅವರನ್ನು ಸುತ್ತಿಕೊಂಡ ಬೇರೆ ಶರಣರ ವಚನಗಳಲ್ಲಿ ಮಾತ್ರ ಅವರ ಬದುಕಿನ ಎಳೆಗಳನ್ನು ಮೌಲಿಕ ವಿಚಾರಗಳನ್ನು ಇನಿತು ಅರಿಯಲು ಸಾಧ್ಯ ಆದರೂ ಸಿಕ್ಕಂತಾದರೂ ಸಿಗದೇ ಆಗಸದೆತ್ತರಕ್ಕೆ ಬೆಳೆದುಬಿಡುವರು. ಎಲ್ಲ ಶರಣರ ವಚನಗಳಲ್ಲೂ ಆತ್ಮಾವಲೋಕನ, ಇಹಪರದ ತುಡಿತಗಳನ್ನು ಬೆಳವಣಿಗೆಯ ಹಂತಗಳನ್ನು ಕಾಣಬಹುದು. ಆದರೆ ಅಲ್ಲಮರ ವಚನಗಳಲ್ಲಿ ಮಾತ್ರ ಒಬ್ಬ ಸಿದ್ಧ ಪುರುಷರಾಗಿಯೇ ಬೆಳೆದು ನಿಂತ ಹಂತದ ವಚನಗಳನ್ನೇ ಕಾಣಬಹುದು. ಅವರ ವಚನಗಳಲ್ಲಿ ಅಸಾಧ್ಯತೆಗಳನ್ನು ಕಟ್ಟುವಿಕೆ, ವೈರುಧ್ಯತೆಗಳ ಸಮೀಕರಿಸುವಿಕೆ ಇವೆಲ್ಲವುಗಳ ಮೂಲಕ ಸತ್ಯವನ್ನು, ವಾಸ್ತವವನ್ನು ಪ್ರಶ್ನಿಸುವ ಮತ್ತೇನೋ ಹೇಳ ಬಯಸುವ ಆಶಯ ಒಂದು ಗೌಪ್ಯತೆಯನ್ನು ಕಟ್ಟಿಕೊಡುವುದರಿಂದ ಇವನ್ನು ಬೆಡಗಿನ ವಚನಗಳೆಂದೇ ಗುರುತಿಸುವರು. ತುಂಬ ಆಳವಾದ ಆಧ್ಯಾತ್ಮಿಕ ಸಾಧನೆ, ಅನುಭಾವ, ಅರಿವು, ಅರಿಯದೆ ಮಾಡುವ ಅಂಧ ಆಚರಣೆಗಳು, ಇವನ್ನು ಲೇವಡಿ ಮಾಡುವ ಪರಿ ಅದು ಅಲ್ಲಮರಲ್ಲಿ ಮಾತ್ರ ಕಾಣಲು ಸಾಧ್ಯ. ತಮ್ಮ ನಿರ್ಣಯವನ್ನು ಯಾರ ಮೇಲೂ ಹೇರದೆ ಒಂದು ವಾಸ್ತವವನ್ನು ಹೇಳುತ್ತಲೇ ಚಿಂತನೆಗೆ ಹಚ್ಚುವ ಅಲ್ಲಮರು ಅವರಿಗೆ ಅವರೇ ಸಾಟಿ.
- ಕೊಟ್ಟ ಕುದುರೆಯ ಏರಲರಿಯದೆ ಮತ್ತೊಂದು ಕುದುರೆಯನೇರುವವರು ವೀರರೂ ಅಲ್ಲ, ಧೀರರೂ ಅಲ್ಲ,
- ಕಾಣದುದನರಸುವರಲ್ಲದೆ ಕಂಡದುನರಸುವರೆ ಎಂದು ತನ್ನಲ್ಲಿರುವುದನ್ನು ಬಿಟ್ಟು ಬೇರೆಲ್ಲಾ ಸುತ್ತಿ ವ್ಯರ್ಥ ಗೊಳಿಸುವವರು ಯಾವ ಸಾಧನೆಯನ್ನೂ ಮಾಡಲಾರರು.
- ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ, ಸುರೂಪಿ ಕುರೂಪಿಯ ನೆನೆದಡೆ ಸುರೂಪಿಯಪ್ಪನೆ,
- ಧನವುಳ್ಳವರ ನೆನೆದಡೆ ದಾರಿದ್ರ್ಯ ಹೋಹುದೆ
ಎಂದು ಮೂಢ ಅನುಕರಣೆಗಳು ವ್ಯಕ್ತಿಯನ್ನು ಔನ್ನತ್ಯಕ್ಕೆ ಒಯ್ಯಲಾರವು ಎಂಬ ವಿವೇಚನೆಯ ಹೊಳಹು ಬಿತ್ತುವರು ಅಲ್ಲಮರು. ತಂದೆಯ ಸದಾಚಾರ ಮಕ್ಕಳದೆಂಬರು, ಗುರು ಮಾರ್ಗದಾಚಾರ ಶಿಷ್ಯನದೆಂಬರು ತತ್ವದ ಹಾದಿಯನು ಭಕ್ತಿಯ ಭೇದವನು ಇವರೆತ್ತ ಬಲ್ಲರು ಎಂದು ಪ್ರಶ್ನಿಸುತ್ತಾ ತಂದೆಯ ಸದಾಚಾರ ತಂದೆಗೆ, ಗುರುವಿನ ಜ್ಞಾನ ಗುರುವಿಗೆ ಅವರ ಹೆಸರಿನ ನೆರಳಿನಲ್ಲಿರುವವರು, ಅವರ ಸಾಂಗತ್ಯದಲ್ಲಿರುವವರು ಅವರಂತಾಗಲು ಸಾಧ್ಯವೆ? ಅರಿವು, ಆಚರಣೆ, ಅನುಷ್ಟಾನಗಳೇ ಅವರ ಸಾಧನೆಗೆ, ಅವರ ಕತೃತ್ವ ಶಕ್ತಿಗೆ ಕಾರಣ ಎಂದು ಅವರ ಅಂತಃಶಕ್ತಿಯನ್ನು ಎಚ್ಚರಿಸುವರು ಅಲ್ಲಮರು.
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲ ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ ಎಂದು ದೇವರ ಆಸ್ತಿತ್ವ ಸ್ಥಾವರಗಳಲ್ಲಿ ಇದೆಯೆ ಎಂದು ಪ್ರಶ್ನಿಸುತ್ತಾ, ನಾ ದೇವರಲ್ಲದೆ ನೀ ದೇವನೆ? ನೀ ದೇವನಾದಡೆ ಎನ್ನನೇಕೆ ಸಲಹೆ, ಆರೈದು ಒಂದು ಕುಡಿತೆ ಉದವನೆರೆವೆ, ಹಸಿದಾಗ ಒಂದು ತುತ್ತು ಓಗರವನಿಕ್ಕುವೆ ನಾ ದೇವ ಕಾಣಾ ಗುಹೇಶ್ವರಾ ಎಂದು ತಾನೇ ದೇವ ಎಂಬ ನಿಷ್ಟುರವಾದವನ್ನು ಮಂಡಿಸುವರು ಅಲ್ಲಮರು. “ಅಣೋರಣಿಯಾನ್ ಮಹತೋ ಮಹಿಯಾನ್” ಎಂಬ ಶೃತಿ ಹುಸಿ ಎಂದು ಅಲ್ಲಗಳೆಯುತ್ತ ಭಕ್ತರ ಭಾವದಲ್ಲಿರ್ಪನಲ್ಲದೆ ಮತ್ತೆಲ್ಲಿಯೂ ಇಲ್ಲ ಗುಹೇಶ್ವರ ಎಂದು ಭಾವ ಬಿತ್ತಿ ಸರ್ವಕಾರಣ ಎಂಬ ತಾತ್ವಿಕ ಸತ್ಯದ ನಿಲುವ ತೋರುವರು. ಎಲ್ಲರೂ ಅಗ್ಘವಣಿ, ಪತ್ರೆ, ಪುಷ್ಪ, ಧೂಪ ಎಂದು ಪೂಜಿಸಿ ಬಳಲುತ್ತಿರುವರು, ಏನೆಂದರಿಯದೆ, ಎಂತೆಂದರಿಯದೆ, ಜನ ಮರುಳೋ ಜಾತ್ರೆ ಮರುಳೋ ಎಂದು ಲೋಕದ ಭಜನೆಯಲ್ಲಿ ಸಿಲುಕಿ ಲಯವಾಗುವ ಜಗದ ಪರಂಪರಾಗತ ಮೂಢ ಆಚರಣೆಗಳನ್ನು ಅಲ್ಲಗಳೆವರು.
ಮಜ್ಜನಕೆರೆದು, ಪುಷ್ಪವ ಅರ್ಪಿಸಿ ತಾವು ಫಲ ಬೇಡುವರು, ಅರ್ಪಣೆ ಆದ ವಸ್ತುಗಳಿಗೆ ಆ ಫಲ ದೊರೆವದು, ಅರ್ಪಿಸಿದವರಿಗೆ ಹೇಗೆ ದೊರೆವದು ಎಂದು ತಾರ್ಕಿಕ ಪ್ರಶ್ನೆ ಮುಂದಿಡುವರು ಅಲ್ಲಮರು. ಹಗಲು ರಾತ್ರಿಗಳು ಜಗದ ನಿಯಮಗಳು ಲಿಂಗಕ್ಕೆ ಯಾವ ನಿಯಮವಿಲ್ಲ, ಲಿಂಗದ ನೆಲೆ ಯಾವದು? ಎಡನೊ? ಬಲನೋ? ಮುಂದೋ? ಹಿಂದೋ? ಮೇಲೋ? ಕೆಳಗೋ? ಎಂದು ಸತ್ಯದ ಸೂತ್ರವನ್ನು ಬಿಚ್ಚಿಡುವರು. ಹೀಗೆ ಎಲ್ಲ ಆಚರಣೆಗಳನ್ನು ಅವುಗಳ ಆಸ್ತಿತ್ವವನ್ನು, ಸ್ವರೂಪವನ್ನು ವಾಸ್ತವದೊಂದಿಗೆ ಮುಖಾಮುಖಿ ಆಗಿಸುವ ಅಲ್ಲಮರು ವಿಭಿನ್ನ ಹಾಗೂ ವಿಶಿಷ್ಟ ವ್ಯಕ್ತಿಯಾಗಿ ಗೋಚರಿಸುವರು.
ಪರಂಪರಾಗತವಾಗಿ ಬಂದ ಆಧ್ಯಾತ್ಮದ ನಂಬಿಕೆಯ ಬೇರುಗಳಾದ ಹೆಣ್ಣು, ಹೊನ್ನು, ಮಣ್ಣು ಮಾಯೆಯೆಂಬ ಬೇರುಗಳನ್ನೆ ಅಲುಗಾಡಿಸಿ ಮಾಯೆ ವಸ್ತು, ವಿಷಯಗಳಲ್ಲಿಲ್ಲ ಅದನ್ನು ಬಯಸುವ ಮನಸಿನಲ್ಲಿದೆ ಎಂದು ನಂಬಿಕೆಗಳಿಗೆ ಚಾಟಿ ಏಟು ಕೊಡುವರು. ಇಂತಹ ನಿಷ್ಟುರ, ಅಪ್ರಿಯ ಸತ್ಯವನ್ನು ಹೇಳುವುದು ಅಲ್ಲಮರಿಂದ ಮಾತ್ರ ಸಾಧ್ಯ. ಭೂಮಿ, ಹೇಮ, ಕಾಮಿನಿಗಳೆಂಬ ಭ್ರಮೆಗಳು ನಿನ್ನವಲ್ಲ, ಜ್ಞಾನವೆಂಬ ರತ್ನ ಮಾತ್ರ ನಿನ್ನ ಒಡವೆ ಎಂದು ಭ್ರಾಂತಿಯ ಮಂಜಿನ ಮೋಡಗಳನ್ನು ಸರಿಸುವರು.
ಈ ಕಾಯವು ಶಾಶ್ವತವಲ್ಲ. ಹುಟ್ಟಿದ್ದು ಅಳಿಯಲೇಬೇಕು. ಖೇಚರರಾಗಲಿ, ಭೂಚರರಾಗಲಿ, ಲಾಂಛನಧಾರಿಗಳಾಗಲಿ ಮರಣವಾರಿಗೂ ಮನ್ನಣೆಯಿಲ್ಲ ಅಂದರೆ ಆಕಾಶದಲ್ಲಿರುವರಾಗಲಿ, ಭೂಮಿಯ ಮೇಲಿರುವರಾಗಲಿ, ಅಥವಾ ಯೋಗಿ, ಸಂತ, ಸನ್ಯಾಸಿಗಳಾಗಲಿ ಯಾರಿಗೂ ಸಾವು ತಪ್ಪಿದ್ದಲ್ಲ. ಎಲ್ಲಿಯವರೆಗೆ ಇರುವರೋ ಅಲ್ಲಿಯವರೆಗೆ ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ ಇದನ್ನು ಮಾಡಲೇಬೇಕು. ಅಂಗವುಳ್ಳನ್ನಬರ ಲಿಂಗಪೂಜೆಯ ಮಾಡಲೇಬೇಕೆಂದು ಕಾಯವನ್ನು ಅಲ್ಲಗಳೆಯದೆ ಕುರುಹು ಹಿಡಿದು ಕುರುಹುಗೆಡಬೇಕು ಎಂಬ ಲಿಂಗವಿಸ್ತಾರವನ್ನು, ರಹಸ್ಯವನ್ನು ಬಿಚ್ಚಿಡುವರು. ಸತ್ತಬಳಿಕ ಮುಕ್ತಿಯ ಹಡೆದಿಹೆನೆಂದು ಪೂಜಿಸಹೋದರೆ ಆ ದೇವರೇನ ಕೊಡುವರೋ ಎಂದು ಹುಟ್ಟು ಸಾವುಗಳ ಅನಿವಾರ್ಯತೆಗಳ ಮಧ್ಯದ ಬದುಕಿವ ಸಾರ್ಥಕತೆಯ ಮೇಲೆ ಬೆಳಕು ಚೆಲ್ಲುವ ಅಲ್ಲಮರು ನಿರ್ದಿಗಂತವಾಗಿ ಬೆಳೆವರು. ಭಾವ ಮನಗಳಿಗೂ ನಿಲುಕದ ಅನೂಹ್ಯ ,ಅನುಪಮ ವ್ಯಕ್ತಿಯಾಗಿ ಒಂದು ಬೆರಗಾಗೇ ಉಳಿವರು.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,
ಧಾರವಾಡ – 580 007.
ಮೋಬೈಲ್ ನಂ. 99864 37474
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in