ವೀಣಾ ಬನ್ನಂಜೆಯವರೆ ಶರಣರು ವೇದ, ಶಾಸ್ತ್ರಗಳನ್ನು ತಿರಸ್ಕರಿಸಲಿಲ್ಲವೆ? / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ-ಟ್ಯೂಬ್ ಚಾನಲ್‌ವೊಂದರಲ್ಲಿ “ಶ್ರೀಮದ್ಬಗವದ್ಗೀತೆ ಮತ್ತು ವಚನ” ಎಂಬ ವಿಷಯ ಕುರಿತು ವೀಣಾ ಬನ್ನಂಜೆ ಅವರು ಮಾತನಾಡುವಾಗ ಅಲ್ಲಮಪ್ರಭುದೇವರ ವಚನವೊಂದನ್ನು ವಿಶ್ಲೇಷಿಸಿದ ರೀತಿ ವ್ಯತಿರಿಕ್ತವಾಗಿದೆ. ಅಲ್ಲಮರ ವಚನ:

ವೇದವೆಂಬುದು ಓದಿನ ಮಾತು;
ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ.
ಆಗಮವೆಂಬುದು ಅನೃತದ ನುಡಿ.
ತರ್ಕವೆಂಬುದು ತಗರ ಹೋರಟೆ.
ಭಕ್ತಿಯೆಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465)

ಈ ವಚನ ಕುರಿತು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು (ಅಲ್ಲಮಪ್ರಭುದೇವರ ವಚನ ನಿರ್ವಚನ ಸಂಪುಟ-2 ವಚನ ಸಂಖ್ಯೆ 464) ವಿಶ್ಲೇಷಿಸಿದ ರೀತಿ ಈ ಕೆಳಗಿನಂತಿದೆ.

ಬರೀ ಶಬ್ದ ರಾಶಿಗಳಿಂದ ಕೂಡಿದ ವೇದ, ನಿರಾಧಾರ ಮಾತುಗಳಿಂದ ಕೂಡಿದ ಶಾಸ್ತ್ರ, ಪುಂಡರ ಕಥೆಗಳನ್ನು ವೈಭವೀಕರಿಸುವ ಪುರಾಣ, ಬೌದ್ಧಿಕ ಹೋರಾಟದ ಘರ್ಷಣೆಗಳಿಂದ ಕೂಡಿದ ತರ್ಕ ಇವು ಹೇಗೆ ನಿರರ್ಥಕವೋ ಹಾಗೆಯೇ ಆಡಂಬರದ ಭಕ್ತಿಯು ನಿರರ್ಥಕವಾಗಿದೆ. ವೇದ, ಶಾಸ್ತ್ರ, ಪುರಾಣ, ತರ್ಕ, ಆಡಂಬರದ ಭಕ್ತಿ ಇವುಗಳನ್ನು ಮೀರಿದ ಪರಮಾತ್ಮನು ಘನವಾಗಿದ್ದಾನೆ ಎಂದು ವ್ಯಾಖ್ಯಾನಿಸಿದ್ದಾರೆ.

ಈ ವಿಶ್ಲೇಷಣೆಯ ಪ್ರಕಾರ ಅಲ್ಲಮರು ವೇದ, ಶಾಸ್ತ್ರ, ಪುರಾಣ, ತರ್ಕಗಳನ್ನು ಸಮ್ಮತಿಸಿಲ್ಲವೆಂಬುದು ಅರ್ಥವಾಗುತ್ತದೆ. ಆದರೆ, ವೀಣಾ ಬನ್ನಂಜೆ ಅವರು ಪ್ರಸ್ತುತ ವಚನದಲ್ಲಿ ಅಲ್ಲಮರು ವೇದ, ಶಾಸ್ತ್ರ, ಪುರಾಣ, ತರ್ಕಗಳನ್ನು ತಿರಸ್ಕರಿಸಿಲ್ಲ ಬದಲಾಗಿ ಸಮ್ಮತಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. ಪೂರ್ವಗ್ರಹ ಪೀಡಿತರಾದವರಿಗೆ ಇಂತಹ ವಿಚಾರಗಳು ಬರುವುದು ಸಹಜ. ತೆರೆದ ಮನಸ್ಸಿನಿಂದ ಈ ವಚನವನ್ನು ಗಮನಿಸಿದರೆ ಅಲ್ಲಮರು ವೇದ, ಶಾಸ್ತ್ರ, ಪುರಾಣ, ತರ್ಕಗಳನ್ನು ತಿರಸ್ಕರಿಸಿದ್ದಾರೆ ಎಂಬ ಸತ್ಯದ ಅರಿವು ಆಗುತ್ತದೆ.

ಈ ಸತ್ಯಕ್ಕೆ ಪೂರಕವಾಗುವ ವಚನಗಳು:

ವೇದ ವೇಧಿಸಲರಿಯದೆ ಕೆಟ್ಟವು,
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,
ಆಗಮ ಆಗುಹೋಗುಗಳರಿಯದೆ ಕೆಟ್ಟವು.
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು;
ತಮ್ಮ ಬುದ್ದಿ ತಮ್ಮನೆ ತಿಂದಿತ್ತು.
ನಿಮ್ಮನೆತ್ತ ಬಲ್ಲರು ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-324)

ಹೋಮ-ಹವನ, ಯಜ್ಞ-ಯಾಗಾದಿ ಕ್ಲಿಷ್ಟಕರ ಕರ್ಮಪ್ರಧಾನವಾದ ವೇದಗಳು ಸತ್ಯ ವಸ್ತುವನ್ನು ಅರಿಯದೆ ಕೆಟ್ಟವು. ಬುದ್ದಿಪ್ರಧಾನವಾದ, ತರ್ಕ-ವಿತರ್ಕ, ಖಂಡನ-ಮಂಡನದ ಪಥದ ಶಾಸ್ತ್ರಗಳಿಗೆ ಪರಮ ಸತ್ಯದ ಹೊಳವು ಆಗದು. ದೇವ-ದೇವತೆಗಳ ಕಥೆ, ಭೋಗ-ವೈಭವದ ವರ್ಣನೆಗಳಿಂದ ಕೂಡಿದ ಪುರಾಣಗಳು ಸತ್ಯವನ್ನು ತಿಳಿಯಬೇಕೆಂಬ ಅಭಿಲಾಷೆಯನ್ನು ಪೂರೈಸದೆ ಹೋದವು. ತಾವೆ ಹಿರಿಯರೆಂಬ ಅಹಂಕಾರದಲ್ಲಿದ್ದ ಹಿರಿಯರು ತಮ್ಮ ನಿಜಸ್ವರೂಪವನ್ನು ಅರಿಯಲು ಅಸಮರ್ಥರಾದರು. (ಪೂಜ್ಯಶ್ರೀ ಸಿದ್ಧೇಶ್ವರ ಶ್ರೀಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಸಂಪುಟ-2 ವಚನ ಸಂಖ್ಯೆ 324)

ವೇದ ಪ್ರಮಾಣವಲ್ಲ, ಕಾಣಿ ಭೋ!
ಆಗಮ ಪ್ರಮಾಣವಲ್ಲ ಕಾಣಿ ಭೋ!
ಪುರಾಣ ಪ್ರಮಾಣವಲ್ಲ ಕಾಣಿ ಭೋ!
ಶಾಸ್ತ್ರ ಪ್ರಮಾಣವಲ್ಲ ಕಾಣಿ ಭೋ!
ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ!
ಪುರಾಣ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ
ಲಿಂಗ ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು ಬಳಸಿದ
ಗುಹೇಶ್ವರಾ, ನಿಮ್ಮ ಶರಣ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-269)

ವೇದ ಶಾಸ್ತ್ರ ಪುರಾಣಗಳು ಲಿಂಗದ ಅಪರೋಕ್ಷ ಜ್ಞಾನಕ್ಕೆ ನೇರವಾದ ಸಾಧನಗಳಲ್ಲ. ತನ್ನ ದೇಹಾಂತರಂಗದೊಳಗೆ ನೆಲೆಸಿರುವ ಪ್ರಾಣಲಿಂಗವನ್ನು ಶರಣನು ಉನ್ಮನಿಯಾಗಿ ಅನುಭವಿಸುತ್ತಾನೆ. (ಪೂಜ್ಯಶ್ರೀ ಸಿದ್ಧೇಶ್ವರ ಶ್ರೀಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಸಂಪುಟ-1 ವಚನ ಸಂಖ್ಯೆ 269)

ಶ್ರೀ ಸಿದ್ಧೇಶ್ವರ ಶ್ರೀಗಳನ್ನು ಗೌರವದಿಂದ “ಅಪ್ಪಾಜಿ” ಎಂದು ಕರೆಯುತ್ತಿದ್ದ ವೀಣಾ ಅವರು ಅಪ್ಪಾಜಿ ಅವರು ಮಾಡಿದ ವಚನ ವಿಶ್ಲೇಷಣೆಯನ್ನು ಒಪ್ಪಿ ತಮ್ಮ ಪೂರ್ವಗ್ರಹ ಪೀಡಿತ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಿರೆಂಬುದು ನಮ್ಮ ನಂಬಿಕೆ. ನಾನು ಹೇಳಿದ್ದೆ ನಿತ್ಯ ಸತ್ಯ ಎಂಬ ಮೊಂಡುವಾದಿಯಾದರೆ ಶ್ರೀಗಳಿಗೆ ಅಪ್ಪಾಜಿ ಎಂದು ಸಂಭೋದಿಸುವುದನ್ನು ಬಿಡಬೇಕು. ಎರಡೂ ಮಾಡುವುದಾದರೆ ಅಪ್ಪಾಜಿ ಎನ್ನುವ ಪದಕ್ಕೆ ಅಗೌರವ ತೋರಿದಂತಾಗುತ್ತದೆ.

ವೇದ ಶಾಸ್ತ್ರ ಪುರಾಣ ತರ್ಕ ಇವುಗಳನ್ನು ಶರಣರು ತಿರಸ್ಕರಿಸಿದ್ದಾರೆ ಎನ್ನುವುದನ್ನು ಸಾಕ್ಷಿಕರಿಸುವ ವಚನಗಳು:

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ,
ಆಗಮದ ಮೂಗ ಕೊಯಿವೆ, ನೋಡಯ್ಯಾ
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-195/ವಚನ ಸಂಖ್ಯೆ-717)

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವೂ
ಕೊಟ್ಟಣವ ಕುಟ್ಟಿದ ನುಚ್ಚು ತವಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿವವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-368)

ಅಕ್ಕಮಹಾದೇವಿಯವರ ವಚನಗಳ ಕುರಿತು Ph. D ಮಾಡಿದ ವೀಣಾ ಅವರಿಗೆ ಅಕ್ಕನ ಈ ವಚನ ಗಮನಕ್ಕೆ ಬರಲಿಲ್ಲವೇನು?

ಅಜ್ಷಾನವೆಂಬ ತೊಟ್ಟಿಲೊಳಗೆ,
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ,
ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು, ನೇಣ ಹರಿದು,
ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-146/ವಚನ ಸಂಖ್ಯೆ-460)

ಶರಣರು ವೇದ ಶಾಸ್ತ್ರಗಳೆಂಬ ನೇಣಿನಿಂದ ಮುಕ್ತರಾಗಲು ತಿಳಿಸಿದರೆ ನೀವು ಅಮಾಯಕರನ್ನು ಇನ್ನೂ ನೇಣ ಹಾಕಿ ಅಜ್ಞಾನದ ಅಂಧಕಾರಕ್ಕೆ ದೂಡುತ್ತಿರುವಿರಲ್ಲ

ವೇದವೆಂಬ ಅಂಜನವ ನೆಚ್ಚಿಕೊಂಡು,
ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು.
ನರಗುರಿಗಳೆತ್ತ ಬಲ್ಲರು ಹೇಳಾ? ಯಜುರ್ವೇದ:
ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ
ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ
ಶ್ರೀರುದ್ರಭಾಷ್ಯೇ:
ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ |
ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ |
ನಯಾಮಸ ಶಿವಸಂಕಲ್ಪೋಪನಿಷದಿ
ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ
ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು ||
ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ,
ಕುರುಡಗೆ ಕನ್ನಡಿಯೇಕೋ,
ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ
ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ?
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-150/ವಚನ ಸಂಖ್ಯೆ-348)

ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ?
ವೇದವೆಂಬುದೊಂದು ಸಾಧಕ ಸಂಪತ್ತು.
ವೇದಂಗಳು ಶ್ವೇತ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು.
ಶಬ್ದಗಾಂಭೀರ್ಯ ಶ್ರುತಿಕೋಟಿ ಚರಣಕಮಲನೆಂಬ
ಲಿಂಗದ ಕೈಯಲ್ಲಿ ಕಲಿತ ವೇದಂಗಳು
ಅಜ್ಞಾನಸಂಗವಾಗಿ ಅಗೋಚರವಾಗಿ ನುಡಿದವು.
ಋಗ್ವೇದʼನಾಹಂಕಾರೋ ಬ್ರಹ್ಮತೇಜಃʼ ಎಂದುದಾಗಿ, ಯಜುರ್ವೇದʼನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃʼ ಎಂದುದಾಗಿ,
ಸಾಮವೇದʼನಾಹಂ ದೇವೋ ರುದ್ರತೇಜಃʼ ಎಂದುದಾಗಿ, ಅಥರ್ವಣವೇದʼನಾಹಂ ಸ್ಥಲಂʼ ಎಂದುದಾಗಿ,
ಕುಲಮದದಿಂದ ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ,
ದೈವಮದದಿಂದ ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ,
ಇಂತೀ ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ
ನೂಂಕಿಸಿಕೊಂಡವು, ಶಿವನ ಅರಮನೆಯ ಬಾಗಿಲಲ್ಲಿ.
ಮತ್ತಾ ಚತುರ್ವೇದಂಗಳು ಬಂದು,
ಲಿಂಗದ ಚತುರ್ದಿಶೆಯಲ್ಲಿ ಓಲೈಸಿ,
ಕೈಮುಗಿದುಕೊಂಡು ಹೊಗಳುತ್ತಿದ್ದವು. ಅದೆಂತೆಂದಡೆ ಶ್ರುತಿ,
ʼಓಂ ಜಯತತ್ವಾನಾಂ ಪುರುಷಮೇರು ಕಾಮ್ಯಾನಾಂ
ಪುಣ್ಯಜಪಧ್ಯಾನಾನಾಂ ಸರ್ವಜನ್ಮವಿನಾಶಿನಾಂ
ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ
ದೇವಕೋಟಿಚರಣಕಮಲಾನಾಂʼ ಎಂದು
ವೇದಂಗಳು ದೇವರ ಚರಣದ ಕುರುಹ ಕಾಣವು.
ಆದಿಯಲ್ಲಿ ನಮ್ಮ ಪುರಾತನರು ವೇದವನೋದಿದರೆ? ಇಲ್ಲ.
ಕಲ್ಲಿಲಿಟ್ಟರು, ಕಾಲಿಲೊದೆದರು,
ಬಿಲ್ವಪತ್ರದ ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷ್ಠೆಯ ಪಡೆದರು.
ಮನೆಯ ಬಾಗಿಲ ಕಾಯಿಸಿಕೊಂಡರು,
ಆಡಿಸಿದರು, ಅಡಗಿಸಿದರು,
ಓಡಿದ ಲಿಂಗವಂ ತಂದು ಪ್ರತಿಷೆ*ಯಂ ಮಾಡಿದರು.
ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ ಪುರಾತನರು.
ನಿಮ್ಮವರು ವೇದವನೋದಿದರೆಂಬುದನರಿದು.
ಅವರನೊಲ್ಲದೆ ಬಿಟ್ಟ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-651/ವಚನ ಸಂಖ್ಯೆ-1529)

ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು.
ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ
ತರ್ಕ ವ್ಯಾಕರಣ ಕವಿತ್ವ ಪ್ರೌಢಿ.
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ.
ಇದು ಕಾರಣ, ತನ್ನೊಳಗನರಿದ
ಅನುಭಾವಿಯಿಂದ ಘನವಿಲ್ಲೆಂದ, ಕಲಿದೇವ
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-298/ವಚನ ಸಂಖ್ಯೆ-732)

ವೇದಂಗಳೆಲ್ಲ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುನೆಂಜಲು,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು,
ಅಕ್ಷರತ್ರಯಂಗಳು ಪ್ರಕೃತಿ ಎಂಜಲು,
ಇಂತಿವೆಲ್ಲವ ಹೇಳುವರು ಕೇಳುವರು
ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-93/ವಚನ ಸಂಖ್ಯೆ-249)

ವೇದ ಯೋನಿಯ ಹಂಗು.
ಶಾಸ್ತ್ರ ಯೋನಿಯ ಹಂಗು.
ಪುರಾಣ ಯೋನಿಯ ಹಂಗು.
ಆಗಮ ಯೋನಿಯ ಹಂಗು.
ನಾದದಿಂದ ಉದಿಸಿದವು ಶ್ರೋತ್ರದ ಹಂಗು.
ಹೇಳುವುದು ವೆಜ್ಜ, ಕೇಳುವುದು ವೆಜ್ಜ.
ತಾ ಹಿಂದೆ ಬಂದುದು ವೆಜ್ಜ.
ಈಗ ನಿಂದು ಮಾಡವುದು ವೆಜ್ಜ.
ಇಂತಿ ವೆಜ್ಜದಜ್ಜೆಯ ಗುದ್ದಿನಲ್ಲಿ
ಬಿದ್ದವರಿಗೆ ನಿರ್ಧರವಿಲ್ಲ
ಅತುರವೈರಿ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-438/ವಚನ ಸಂಖ್ಯೆ-1253)

ವೇದವನೋದಿದವರೆಲ್ಲ ನಮ್ಮ ಶರಣರು
ಹೋದ ಹಾದಿಯನರಿಯದೆ,
ನಾಹಂ ಎಂದು ಅಹಂಕರಿಸಿ,
ಅನಿತ್ಯದೇಹಿಗಳಾಗಿ, ಅನಾಮಿಕರಾಗಿ ಹೋದರು.
ಶಾಸ್ತ್ರವನೋದಿದವರೆಲ್ಲ ನಮ್ಮ ಶರಣರು
ಹೋದ ಹಾದಿಯನರಿಯದೆ.
ಶ್ರವಣ, ಸನ್ಯಾಸಿ, ಯೋಗಿ,
ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು.
ಆಗಮವನೋದಿದವರೆಲ್ಲ ನಮ್ಮ
ಶರಣರು ಹೋದ ಹಾದಿಯನರಿಯದೆ,
ಕ್ರಿಯಾಪಾದ, ಚರ್ಯಪಾದ, ಜ್ಞಾನಪಾದವೆಂದು
ನಾನಾಪರಿಯ ಕರ್ಮಭಕ್ತಿಯ ಮಾಡಿ,
ಲಿಂಗ ಜಂಗಮದ ಮರ್ಮವನರಿಯದೆ,
ಅಧರ್ಮಿಗಳಾಗಿ ಹೋದರು.
ಪುರಾಣವನೋದಿದವರೆಲ್ಲ ನಮ್ಮ ಪುರಾತರು
ಹೋದ ಹಾದಿಯನರಿದೆ,
ಪುರದ ಬೀದಿಯೋಳಗೆ ಮಾತು
ಕಥೆಯ ಪಸರವನಿಕ್ಕಿ ಮಾಡಿ,
ಫಲಪದ ಮುಕ್ತಿಗೆ ಸಲ್ಲದೆ ಹೋದರು.
ಇದು ಕಾರಣ, ಈ ಚತುರ್ವಿಧದೊಳಗಾವಂಗವು ಅಲ್ಲ.
ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ
ಶರಣರ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-425/ವಚನ ಸಂಖ್ಯೆ-1034)

ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು ಬಳಲದಿರು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-401/ವಚನ ಸಂಖ್ಯೆ-1084)

ವೇದವಿತ್ತುಗಳು ಅಗ್ನಿಪುರುಷನೆ ದೇವರೆಂಬರಯ್ಯಾ.
ಶಾಸ್ತ್ರವಿತ್ತುಗಳು ಪಾಸಾಣವನೆ ದೇವರೆಂಬರಯ್ಯಾ.
ಆತ್ಮವಿತ್ತುಗಳು ಆತ್ಮನೆ ದೇವರೆಂಬರಯ್ಯಾ.
ಶಬ್ದವಿತ್ತುಗಳು ಸಮಯಂಗಳನೆ ದೇವರೆಂಬರಯ್ಯಾ.
ಇವರೆಲ್ಲರೂ ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವನರಿಯದೆ
ಜವನ ಜಾಡ್ಯಂಗಳಿಂ ಭವಭಾರಿಗಳಾದರಯ್ಯಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-401/ವಚನ ಸಂಖ್ಯೆ-1085)

ಡಾ.ವೀಣಾ ಬನ್ನಂಜೆ ಅವರೆ ಸುಳ್ಳಿನಿಂದ ಸತ್ಯವನ್ನು ಮುಚ್ಚಲಾಗದು. ಸೂರ್ಯನನ್ನು ಬಚ್ಚಿಡಲಾಗದು. ಸತ್ಯವನ್ನು ಮುಚ್ಚಿಡಲಾಗದು. ಅನುಭವ ಮಂಟಪವಿರಲಿಲ್ಲವೆಂದು ಬಸವಾದಿ ಶರಣರು ವೇದ, ಶಾಸ್ತ್ರ, ಪುರಾಣ, ತರ್ಕಗಳನ್ನು ತಿರಸ್ಕರಿಸಲಿಲ್ಲವೆಂಬ ಸುಳ್ಳನ್ನು ಪದೆ ಪದೆ ಹೇಳುವುದರಿಂದ ಸತ್ಯ ಸುಳ್ಳಾಗದು. ಅನುಭವ ಮಂಟಪವಿತ್ತು ಎಂಬುದಕ್ಕೆ ಮತ್ತು ವೇದ, ಶಾಸ್ತ್ರ, ಪುರಾಣ, ತರ್ಕಗಳನ್ನು ಶರಣರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಶರಣರ ನೂರಾರು ವಚನಗಳೇ ಸಾಕ್ಷಿಯಾಗಿವೆ. ಈ ವಿಷಯವನ್ನು ಮಹನೀಯರಾದ ವಿಶ್ರಾಂತ ಐಎಎಸ್ ಅಧಿಕಾರಿ ಡಾ. ಶಿವಾನಂದ ಜಾಮದಾರ, ಪೂಜ್ಯ ಶ್ರೀ ಬೆಲ್ದಾಳ ಶರಣರು ಹಾಗೂ ಮನಗುಂಡಿಯ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು ತಮ್ಮ ಗಮನಕ್ಕೆ ತಂದಿರುತ್ತಾರೆ.

ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಶಾಸ್ತ್ರ, ಪುರಾಣಗಳ ಕುರಿತು ತಾವು ಏನನ್ನಾದರೂ ಹೇಳಿಕೊಳ್ಳಿ. ಆದರೆ, ವಚನಗಳ ನಿಜದ ನಿಲುವನ್ನು ತಿರುಚುವ ಮತ್ತು ಮರೆಮಾಚುವ ಕಾರ್ಯಕ್ಕೆ ಹೋಗಬೇಡಿ. ಕೃಷ್ಣನನ್ನು ಬಸವಣ್ಣನವರ ಜೊತೆ ಹೋಲಿಸಬೇಡಿರಿ. ವಚನ ಸಾಹಿತ್ಯವು ದಾಯಾದಿಗಳು ರಾಜಪ್ರಭುತ್ವಕ್ಕಾಗಿ ಹೊಡೆದಾಡಿದ ಕಾವ್ಯದಂತಲ್ಲ. ಕಾಯಕ, ದಾಸೋಹ, ಅನುಭಾವ, ಸಮಾನತೆ, ಸಮನ್ವಯತೆ, ಸಮತೆ, ಸದಾಚಾರ, ವೈಚಾರಿಕತೆ, ಆಧ್ಯಾತ್ಮಿಕತೆಯಂತಹ ಮಾನವೀಯ ಮೌಲ್ಯಗಳನ್ನೊಳಗೊಂಡ ವಿಶ್ವದಲ್ಲಿಯೇ ವಿನೂತನ ಸಾಹಿತ್ಯವಾಗಿದೆ. ವಚನ ಸಾಹಿತ್ಯವು ರಾಜ ಮಹಾರಾಜರನ್ನು ವೈಭವೀಕರಿಸಿ ವರ್ಣಿಸಿ ರಚಿಸಿದ ಸಾಹಿತ್ಯವಲ್ಲ. ಕಾಯಕಯೋಗಿಗಳ ಸರಳ ಸಹಜ ಸುಂದರ ಬದುಕಿಗೆ ಸಾಹಿತ್ಯವಾಗಿದೆ. ವಚನ ಸಾಹಿತ್ಯವು ಅರಮನೆಯಲ್ಲಿ ರಾಜನ ಅಣತಿಯಂತೆ ರಚಿಸಿದ ಸಾಹಿತ್ಯವಲ್ಲ, ಗುರುಮನೆಯಲ್ಲಿ ರಚಿಸಿದ ಸಮಾನತೆಯ ಸಾಹಿತ್ಯವಾಗಿದೆ.

ಮಹಾಭಾರತದಲ್ಲಿ ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಣೆಯಾಗಿ ಬೇಡುವಂಥ ದ್ರೋಣಾಚಾರ್ಯರಂಥ ಗುರುಗಳು ಶರಣರಲ್ಲಿಲ್ಲ. ಸಕಲ ಜೀವಿಗಳಿಗೆ ಲೇಸನೆ ಬಯಸುವ ಬಸವಗುರು ಇಲ್ಲಿದ್ದಾನೆ. ತುಂಬಿದ ಸಭೆಯಲ್ಲಿ ಸ್ತ್ರೀ ವಸ್ತ್ರಾಪಹರಣ ನೋಡುತ್ತ ಮೌನ ತಾಳಿದ ಭೀಷ್ಮರಂತಹ ಹಿರಿಯರು ಶರಣರಲ್ಲಿಲ್ಲ. ಸೂಳೆ ಸಂಕವ್ವೆಯನ್ನೂ ಶರಣರು ಶರಣೆಯನ್ನಾಗಿಸಿದರು. “ಮಾದಾರ ಚೆನ್ನಯ್ಯನ ಮಗ ನಾನಯ್ಯ”, “ಎನಗಿಂತ ಕಿರಿಯರಿಲ್ಲ. ಶಿವ ಭಕ್ತರಿಗಿಂತ ಹಿರಿಯರಿಲ್ಲ” ಎಂದು ಹೇಳುವ ಬಸವಣ್ಣನನ್ನು ಕೃಷ್ಣನಿಗೆ ಸಮೀಕರಿಸದಿರಿ. ಧರ್ಮ ರಕ್ಷಣೆಗೆ ಕೃಷ್ಣ ಕುರುಕ್ಷೇತ್ರ ಯುದ್ಧ ಸಾರಿದರೆ, ಸಮಾಜೋ-ಧಾರ್ಮಿಕ ಸುಧಾರಣೆಗಾಗಿ ಬಸವಣ್ಣನವರು ವೈಚಾರಿಕ ಕ್ರಾಂತಿ ಮಾಡಿದರು. ನಿಮ್ಮ ಸಂಪ್ರದಾಯವನ್ನು ಶರಣ ಸಂಪ್ರದಾಯಕ್ಕೆ ಹೋಲಿಕೆ ಮಾಡದಿರಿ.

“ಹಸಿವನಿಂದ ಐನೂರು ಪಶುವ ಕೊಂದವ ಲೇಸು, ಶಿಶು ವಧೆಯ ಮಾಡಿದವ ಲೇಸು” ಎಂದು ಸರ್ವಜ್ಞ ಹೇಳುವಂತೆ ಸುಳ್ಳು ಹೇಳುವುದು ಹತ್ಯೆಗಿಂತ ಪಾಪ, ಅರಿತರಿತು ಮಾಡಿದ ತಪ್ಪು ತಮ್ಮ ಕಣ್ಣುಗಳಿಗೆ ತಾವೆ ಚುಚ್ಚಿಕೊಂಡಂತೆ ಎಂದು ಹೇಳುವಂತೆ ವಚನ ಸಾಹಿತ್ಯದ ನಿಜದ ನಿಲುವನ್ನರಿತೂ ನೀವು ಹುಸಿ ಹೇಳುತ್ತಿರುವುದು ನಿಮ್ಮ ಪಾಂಡಿತ್ಯಕ್ಕೆ ನೀವೇ ದ್ರೋಹ ಬಗೆದಂತಾಗುವುದು.

ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,
ಜಮಖಂಡಿ.
ಮೋಬೈಲ್‌ ಸಂ. 94497 13204

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply