
12 ನೆಯ ಶತಮಾನದಲ್ಲಿ ಶರಣರು ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಅಂತಹ ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಯ್ಯನವರು ಒಬ್ಬರು. ಶರಣರ ಸಮುದಾಯದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗಿದವರು. ಮಡಿವಾಳ ಮಾಚಯ್ಯನವರದು ಬಹುಮುಖ ವ್ಯಕ್ತಿತ್ವ. ವೀರಶ್ರೀ, ಜ್ಞಾನಪ್ರಭೆ, ಸತ್ಯ, ನಿಷ್ಠೆ, ನ್ಯಾಯನಿಷ್ಟೂರತೆ, ನಿರಹಂಕಾರ, ನಿರ್ವಂಚಕತ್ವ ಮುಂತಾದ ಸತ್ವಗಳ ಸಂಕಲನವೇ ಮಡಿವಾಳ ಮಾಚಯ್ಯನವರು. ಸಾಮಾನ್ಯವಾಗಿ ಎಲ್ಲ ಶರಣರು ಮಡಿವಾಳ ಮಾಚಯ್ಯನವರನ್ನು ಮಾಚಿತಂದೆ ಎಂದೇ ಕರೆದಿದ್ದಾರೆ. ಶರಣರಲ್ಲಿ ಪ್ರಮುಖರೆನಿಸಿದ ಮಾಚಿತಂದೆಯವರು ಬಸವಣ್ಣನವರ ಎಲ್ಲ ಕಾಯಕದಲ್ಲಿಯೂ ಸಹಕಾರ ನೀಡಿದರು. ದಾಸೋಹ, ಕಾಯಕ, ವಚನ ನಿರ್ಮಾಣ, ಸಾಮಾಜಿಕ ಪರಿವರ್ತನೆ ಮುಂತಾದ ಎಲ್ಲ ಕಾರ್ಯಗಳಲ್ಲೂ ಬಸವಣ್ಣನವರ ಜೊತೆ ಕೈಜೋಡಿಸಿದರು. ಕಲ್ಯಾಣ ಕ್ರಾಂತಿಯಲ್ಲಿ ಮಾಚಯ್ಯನವರ ಪಾತ್ರ ತುಂಬಾ ಮಹತ್ವದ್ದು. ಶರಣರಿಗೆ ಗಂಡಾಂತರ ಬಂದಾಗ ಅವರ ಬೆನ್ನ ಹಿಂದೆ ರಕ್ಷೆಯಾಗಿ ವೀರನಂತೆ ನಿಂತರು. ಬೆನ್ನಟ್ಟಿ ಬಂದ ಬಿಜ್ಜಳನ ಸೇನೆಯನ್ನು ಕಾಲರುದ್ರನಂತೆ ಖಂಡಿಸುತ್ತಾ ಹೋರಾಡುತ್ತಾರೆ. ಅನುಭವ ಮಂಟಪವನ್ನು ಕಟ್ಟುವಲ್ಲಿಯೂ ಕೂಡ ಮಾಚಯ್ಯನವರ ಪಾತ್ರ ಹಿರಿದಾದದು.
ದೇಶದ ನಾನಾ ಭಾಗಗಳಿಂದ ಬರುವ ಶರಣರನ್ನು ಮಾಚಯ್ಯನವರು ಪರೀಕ್ಷಿಸಿ ಸಮಾಲೋಚಿಸಿ ಮಡಿ ಹಾಸಿ ಸ್ವಾಗತಿಸುವ ಕಾರ್ಯ ಮಾಡುತ್ತಿದ್ದರು. ಪರೀಕ್ಷೆಗೆ ಒಳಪಡದೆ ಯಾರಿಗೂ ಪ್ರವೇಶವಿರಲಿಲ್ಲ ಎಂಬುದು ಮಾಚಯ್ಯನವರ ಮಹಾಘನತೆಗೆ ಸಾಕ್ಷಿಯಾಗಿದೆ.
ಶಿವಶರಣರ ಮತ್ತು ಕಾಯಕದಲ್ಲಿ ನಿಷ್ಠೆಯುಳ್ಳ ಶರಣರ ಮೈಲಿಗೆ ಬಟ್ಟೆಗಳನ್ನ ಮಡಿ ಮಾಡುವ ಕಾಯಕ ಮಾಚಯ್ಯನವರದಾಗಿತ್ತು. ಮಡಿ ಬಟ್ಟೆಗಳನ್ನು ಹೊತ್ತುಕೊಂಡು ವೀರಗಂಟೆ ಬಾರಿಸುತ್ತಾ ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮಗಳನ್ನು ವಿಧಿಸಿಕೊಂಡಿದ್ದರು. ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ಎಚ್ಚರಿಸಿ ಚೆಲ್ಲುತ್ತಾ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಕಾಯಕ ಮಾಡದ, ಸೋಮಾರಿಗಳ, ಬಡವರನ್ನು ಶೋಷಿಸುವವರ, ದುರ್ಗುಣ ಉಳ್ಳವರ ಬಟ್ಟೆಗಳನ್ನೆಂದೂ ಅವರು ಮುಟ್ಟುತ್ತಿರಲಿಲ್ಲ. ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂಬುದನ್ನು ಲೋಕಕ್ಕೆ ಸಾರಿದರು. ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಎಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ ದೇವರನ್ನೂ ಕೂಡ ಪ್ರಶ್ನಿಸುವ ಎದೆಗಾರಿಕೆ ಮಾಚಯ್ಯನವರದಾಗಿತ್ತು. ಭಕ್ತಿ ಭಂಡಾರಿ ಎನಿಸಿದ ಬಸವಣ್ಣನವರ ಅಹಂಕಾರವನ್ನು ಸಹ ಮಾಚಯ್ಯನವರು ದೂರಗೊಳಿಸಿದರು. ನುಲಿಯ ಚಂದಯ್ಯನವರಿಗೆ ಮತ್ತು ಮೇದಾರ ಕೇತಯ್ಯನವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಮಾಚಯ್ಯನವರ ಬಾಲ್ಯ ಮತ್ತು ಕಾಯಕ:
ಮಡಿವಾಳ ಕುಲದಲ್ಲಿ ಹುಟ್ಟಿದ ಮಾಚಯ್ಯನವರು ಅಸಾಧಾರಣ ಅನುಭವವನ್ನು ಹೊಂದಿ ಶ್ರೇಷ್ಠ ಶರಣರೆನಿಸಿಕೊಂಡರು. ಮಾಚಯ್ಯನವರು ಬಸವಣ್ಣನವರಹಿರಿಯ ಸಮಕಾಲೀನರು. ತಂದೆ ಪರ್ವತಯ್ಯ, ತಾಯಿ ಸುಜ್ಞಾನವ್ವ. ಬಿಜಾಪುರದ ಅಂದರೆ ಈಗಿನ ವಿಜಯಪುರದ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದರು. ಹಿಪ್ಪರಗಿಯ ಕುಲದೇವರಾದ ಕಲಿದೇವರನ್ನೇ ಆರಾಧಿಸಿದ ಮಾಚಯ್ಯನವರು, ತಮ್ಮ ಅಂಕಿತದಲ್ಲೂ “ಕಲಿದೇವರದೇವ” ಹೆಸರನ್ನೇ ಬಳಸಿಕೊಂಡಿದ್ದಾರೆ.
ಜನಪದ ಗೀತೆಗಳಲ್ಲಿ ಅವರ ಜನನವನ್ನ ಈ ರೀತಿ ವಿವರಿಸಿದ್ದಾರೆ.
ಹಿಪ್ಪರಗಿ ಮೆರೆಯುತಲಿ | ಉಪ್ಪರಿಗೆ ಆಗೆಂದು ||
ತುಪ್ಪ ಹೊಳೆಯಾಗಿ ಹರಿಯುತಲಿ | ಊರೊಳಗೆ ||
ಅಪ್ಪ ಮಾಚಣ್ಣ | ಜನಿಸಿದ ||
ಮಾಚಯ್ಯ, ಮಾರ್ಚಣ್ಣ, ಮಾಚಿತಂದೆ ಎಂದು ಪ್ರಸಿದ್ಧರಾದ ಮಾಚಯ್ಯನವರ ಹೆಸರಿನ ಮೂಲವೆಂದರೆ ಅವರ ಶಕ್ತಿಶಾಲಿ ದೇಹ, ಅಜಾನುಬಾಹು ಶರೀರ ಬಲಗಳಾಗಿವೆ. ಮಹಾಕಾಯ, ಮಾಕಾಯ, ಮಾಕಯ್ಯ, ಮಾಚಯ್ಯ ಹೀಗೆ ಬಂದಿರಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ.
ಪರಂಪರೆಯಿಂದ ಬಂದ ಮಡಿವಾಳ ವೃತ್ತಿಯನ್ನು ಮಾಚಯ್ಯನವರು ಸಹ ಅನುಸರಿಸಿದರು. ಆಗಿನ ಕಾಲದಲ್ಲಿ ವಿದ್ಯೆ ಕಲಿಯಲು ಅವಕಾಶ ದೊರೆಯಲಿಲ್ಲ. ಆದರೆ ಹಿಪ್ಪರಿಗೆಯ ಮಲ್ಲಿಕಾರ್ಜುನ ಸ್ವಾಮಿಗಳು ಮಾಚಯ್ಯನವರ ದಿವ್ಯ ವ್ಯಕ್ತಿತ್ವ, ಸಹಜ ಭಕ್ತಿ, ವಿದ್ಯಾಸಕ್ತಿಗಳನ್ನ ಗಮನಿಸಿ, ವಿದ್ಯೆ ಕಲಿಸಿ ಸಕಲ ವೇದ ಶಾಸ್ತ್ರಗಳನ್ನು ತಿಳಿಸಿಕೊಟ್ಟರು. ಜಾತಿ, ವರ್ಣಪದ್ಧತಿ ಹೆಚ್ಚು ಪ್ರಭಾವಶಾಲಿಯಾಗಿದ್ದ ಆ ಕಾಲದಲ್ಲಿ ಕೆಳವರ್ಗದಿಂದ ಬಂದಂತಹ ಶಿಶ್ಯನಿಗೆ ವಿದ್ಯೆ ಕಲಿಸಿದ್ದು ಹೊಸ ಕ್ರಾಂತಿಯೇ ಆಗಿತ್ತು. ಹೆಚ್ಚಿನ ಸಾಧನೆಗೆ ಒಲವನ್ನು ಹೊಂದಿದ್ದ ಮಾಚಯ್ಯನವರ ಮನಸ್ಸು ಸಾಗರವನ್ನು ಸೇರುವ ನದಿಯಂತೆ ಆತುರತೆಯನ್ನು ಹೊಂದಿತ್ತು. ಕಲ್ಯಾಣದಲ್ಲಿ ಬಸವಣ್ಣನವರು ನಡೆಸುತ್ತಿದ್ದ ಕಾಯಕ ತತ್ವ, ದಾಸೋಹ, ಗುರು-ಲಿಂಗ-ಜಂಗಮ ಸೇವೆಗಳಿಂದ ಆಕರ್ಷಿತರಾದ ಮಾಚಯ್ಯನವರು ತಮ್ಮ ಗುರುಗಳ ಅಪ್ಪಣೆ ಪಡೆದು ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣಕ್ಕೆ ಬಂದ ನಂತರವೂ ಮಾಚಯ್ಯನವರು ಮಡಿ ಮಾಡುವ ಕಾಯಕ ಮುಂದುವರಿಸುತ್ತಾರೆ. ಕಲ್ಯಾಣದ ಹೊರವಲಯದಲ್ಲಿರುವ ತ್ರಿಪುರಾಂತಕ ಕೆರೆಯನ್ನು ಈಗಲೂ ನಾವು ಕಾಣಬಹುದಾಗಿದೆ.
ಶರಣರು ಕಂಡಂತೆ ಮಡಿವಾಳ ಮಾಚಯ್ಯನವರು:
ಬಸವಣ್ಣನವರು ಆರಂಭಿಸಿದ ಕಲ್ಯಾಣದ ಅನುಭವ ಮಂಟಪದಲ್ಲಿ ಮಾಚಯ್ಯನವರಿಗೆ ವಿಶೇಷವಾದ ಸ್ಥಾನವಿತ್ತು. ಅನುಭವ ಮಂಟಪದಲ್ಲಿ ನಡೆಯುವ ದಾಸೋಹ, ಗುರು-ಲಿಂಗ-ಜಂಗಮ ಸೇವೆ ಷಟ್ಸ್ಥಲ, ಕಾಯಕ ಮಹಿಮೆ ಮುಂತಾದ ವಿಷಯಗಳ ಚರ್ಚೆಗಳಲ್ಲಿ ಮಾಚಿತಂದೆಯವರು ಭಾಗವಹಿಸುತ್ತಿದ್ದರು.
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-315/ವಚನ ಸಂಖ್ಯೆ-525)
ಎಂದು ಕಲ್ಯಾಣದ ಜನರಿಗಷ್ಟೇ ಅಲ್ಲದೆ ವಿಶ್ವದ ಜನರಲ್ಲಿ ಭಕ್ತಿಯ ಬೀಜ ಬಿತ್ತಿದ ಬಸವಣ್ಣನವರು ಎಲ್ಲಾ ಕಡೆ ಕಾಣುವರೆಂದು ವಿವರಿಸಿದ್ದಾರೆ.
ಸೆಟ್ಟಿಯೆಂದೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ
ಕೂಡಲಸಂಗಯ್ಯ ನಗುವನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-90/ವಚನ ಸಂಖ್ಯೆ-345)
“ಮಡಿವಾಳನೆಂಬನೆ ಮಾಚಯ್ಯನ” ಎಂದು ಬಸವಣ್ಣನವರು ಮಾಚಯ್ಯನವರ ಜ್ಞಾನವನ್ನು, ಅನುಭವವನ್ನು ಗೌರವಿಸಿದ್ದಾರೆ.
ಅಲ್ಲಮ ಪ್ರಭುಗಳು ಅನುಭಾವಿಗಳಲ್ಲಿ ಅಗ್ರಗಣ್ಯರಾದ ಮಡಿವಾಳ ಮಾಚಯ್ಯನವರನ್ನ ಬಸವಣ್ಣನವರ ಸರಿಸಮಾರೆಂದು ಭಾವಿಸಿದ್ದರು. ಮಾಚಯ್ಯನವರ ಕಾಯಕ ನಿಷ್ಠೆ, ನಿರಹಂಕಾರತೆ ಮತ್ತು ಸರಳತೆಗಳನ್ನು ಅಪಾರವಾಗಿ ಮೆಚ್ಚಿದ್ದರು. ಅದನ್ನೇ ಈ ವಚನದಲ್ಲಿ ವರ್ಣಿಸಿದ್ದಾರೆ.
ವಾರಿಕಲ್ಲ ಪುತ್ಥಳಿಯ ಅಪ್ಪು ಕೊಂಡಂತಾಯಿತ್ತು.
ಅಗ್ನಿಪುರುಷನ ಮುಸುಕ ತೆಗೆದ ಕರ್ಪುರದಂತಾಯಿತ್ತು.
ಕತ್ತಲೊಳಗೆ ರವಿಯ ಬೆಳಗು ಹೊಕ್ಕಂತಾಯಿತ್ತು.
ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಯ ಕೃಪೆಯಿಂದ
ಬಸವಣ್ಣಾ ನಿನ್ನ ಕಂಡೆನು.
ನಿನ್ನನ್ನು ಮಡಿವಾಳನನು ನೀನೆಂದೆ ಕಂಡೆನಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-572/ವಚನ ಸಂಖ್ಯೆ-1500)
ಬಸವಣ್ಣನವರು ನಿಶ್ಚಯಿಸಿದ ಕಾರ್ಯವನ್ನು ಚೆನ್ನಬಸವಣ್ಣ, ಮಾಚಯ್ಯನವರು ಮತ್ತು ಹಡಪದ ಅಪ್ಪಣ್ಣನವರು ನೆರವೇರಿಸುತ್ತಿದ್ದರು. ಅದನ್ನು ಈ ಜನಪದ ಪದ್ಯದಲ್ಲಿ ಸುಂದರವಾಗಿ ವಿವರಿಸಿದ್ದಾರೆ.
ನೂರೊಂದು ಸ್ಥಲಗಳಿಗೆ | ನೂರೊಂದು ಶರಣರು ||
ವೀರಮಾಚಣ್ಣ ಕರೆವಾಳು | ಬಸವಣ್ಣನಿಗೆ ||
ಧೀರ ಕಾಯಕದ | ಹುರಿಯಾಳು ||
ಬಸವಣ್ಣನವರು ಮನಸಾರೆ ಮೆಚ್ಚಿ ಹಾಡಿ ಹೊಗಳಿದ ಮಾಚಯ್ಯನವರ ಕಾಯಕದ ವರ್ಣನೆ ಇಂತಿದೆ.
ಮಡಿವಾಳ ಮಡಿವಾಳನೆಂಬರು,
ಮಡಿವಾಳನೆಂಬುದನಾರೂ ಅರಿಯರು,
ಎನ್ನ ಮಲಯದಲ್ಲಿ ಹೊದಕುಳಿಗೊಂಡ
ಮನದ ಮೈಲಿಗೆಯ ತಂದು,
ತನ್ನ ಮನೆಗೆ ಕೊಂಡುಹೋಗಿ ಹಾಯ್ಕಿದಡೆ,
ಕೈಮುಟ್ಟಿದಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ,
ಅಲುಬಿ ಸೆಳೆದನಯ್ಯಾ.
ತನ್ನ ನಿರ್ಮಲವ ಕೊಟ್ಟನೆನಗೆ,
ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ,
ಮಡಿವಾಳ ಮಾಚಿತಂದೆಯ
ಕೃಪೆಯಿಂದಲಾನು ಬದುಕಿದೆನಯ್ಯಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-388/ವಚನ ಸಂಖ್ಯೆ-1300)
ಹಾಗೆಯೇ ಸೊನ್ನಲಿಗೆಯ ಶಿವಯೋಗಿ ಸಿದ್ದರಾಮರು ಮಾಚಯ್ಯನವರನ್ನು ತಮ್ಮ ಹೃದಯದ ಭಾಗವೆಂದೇ ಈ ವಚನದಲ್ಲಿ ತಿಳಿಸಿದ್ದಾರೆ.
ಎನ್ನ ಪಾದವಿಡಿದು ಮಧ್ಯತನಕ ಪ್ರಭುವು ನೋಡಾ,
ಮಧ್ಯವಿಡಿದು ಹೃದಯ ಪರಿಯಂತರ ಬಸವಣ್ಣ ನೋಡಾ;
ಹೃದಯವಿಡಿದು ಕಂಠಪರಿಯಂತರ ಮಡಿವಾಳ ನೋಡಾ;
ಕಂಠವಿಡಿದು ಕೇಶಾಂತತನಕ ಚೆನ್ನಬಸವಣ್ಣ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-511/ವಚನ ಸಂಖ್ಯೆ-1652)
ಬಸವಾದಿ ಶರಣರು ಆರಂಭಿಸಿದ ವಚನ ಕ್ರಾಂತಿಯಲ್ಲಿ ಕಂಡುಬರುವ ಎಲ್ಲ ಗುಣಗಳು ಮಡಿವಾಳ ಮಾಚಯ್ಯನವರ ವಚನಗಳಲ್ಲಿ ಇವೆ. ಆತ್ಮವಿಶ್ವಾಸ, ಎದೆಗಾರಿಕೆ, ಜ್ಞಾನ, ಭಕ್ತಿ, ಡಾಂಭಿಕಕತೆಯ ನಿರಾಕರಣೆ, ಕೀಳು ದೈವದ ಖಂಡನೆ ಮತ್ತು ಶಿವಭಕ್ತಿಯು ಮಹತ್ವದ ಸ್ಥಾನ ಪಡೆದಿವೆ. ಅವರ ವಚನಗಳಲ್ಲಿ ನೈತಿಕ ಆಕ್ರೋಶದ ಕ್ರಾಂತಿಯನ್ನು ಕಾಣಬಹುದು. ಕಲಿದೇವರದೇವ ಎಂಬ ವಚನಾಂಕಿತದಿಂದ ಸುಮಾರು 345 ವಚನಗಳು ಲಭ್ಯವಾಗಿವೆ.
ಅಯ್ಯಾ, ನಾವು ಗುರು ಲಿಂಗ ಜಂಗಮದ
ಪಾದೋದಕ ಪ್ರಸಾದಸಂಬಂಧಿಗಳೆಂದು
ನುಡಿದುಕೊಂಬ ಪಾತಕರ ಮುಖವ ನೋಡಲಾಗದು.
ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ,
ಜನನದ ಬೇರ ಕಿತ್ತೊರಸಬೇಕು.
ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು.
ಇಂತಪ್ಪ ಚಿದ್ರಸ ಪಾದೋದಕ ಚಿತ್ಪ್ರಕಾಶ ಪ್ರಸಾದ.
ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ
ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ
ಸಂಬಂಧಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು,
ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ,
ಸದಾಚಾರದಿಂದ ಆಚರಿಸಲರಿಯದೆ,
ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ,
ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ
ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ
ಅಷ್ಟಾವರಣವೆಂತು ಸಿದ್ಧಿಯಹುದೋ?
ಅದೇನು ಕಾರಣವೆಂದಡೆ:
ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ
ಉಪಮಂತ್ರ ಕೋಟ್ಯಾನುಕೋಟಿಗೆ
ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು.
ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ
ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು.
ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ
ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು.
ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ
ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು.
ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು.
ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ
ಇಂಥವರಿಗೆಂತು ಸಾಧ್ಯವಹುದು?
ಆಗದೆಂದಾತ ನಮ್ಮ ಶರಣ ಕಲಿದೇವರದೇವ
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-193/ವಚನ ಸಂಖ್ಯೆ-465)
ಎಂದು ಭಕ್ತಿ ಜ್ಞಾನಗಳ ಮಹತ್ವ ಹೇಳಿದ್ದಾರೆ
ಆಶಾಪಾಶವ ಬಿಟ್ಟಡೇನಯ್ಯಾ
ರೋಷಪಾಶವ ಬಿಡದನ್ನಕ್ಕರ?
ರೋಷಪಾಶವ ಬಿಟ್ಟಡೇನಯ್ಯಾ
ಮಾಯಾಪಾಶವ ಬಿಡದನ್ನಕ್ಕರ?
ಇಂತೀ ತ್ರಿವಿಧಪಾಶವ ಹರಿದು
ನಿಜನಿಂದ ಲಿಂಗೈಕ್ಯರ ತೋರಾ ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-207/ವಚನ ಸಂಖ್ಯೆ-503)
ವ್ಯಕ್ತಿಯು ತನ್ನ ಮನದಲ್ಲಿ ಮೂಡುವ ಆಸೆ, ಕೋಪ, ಮೋಹದ ಒಳಮಿಡಿತಗಳೆಲ್ಲವನ್ನೂ ಒಟ್ಟಾಗಿ ಹತೋಟಿಯಲ್ಲಿಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಒಳ್ಳೆಯ ನಡೆ-ನುಡಿಗಳನ್ನು ರೂಪಿಸಿಕೊಳ್ಳಲು ಆಗುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ?
ವಚನ ತನ್ನಂತಿರದು, ತಾನು ವಚನದಂತಿರ,
ಅದೆಂತೆಂದಡೆ;
ತನುಮನಧನವನೆಲ್ಲ ಹಿಂದಿಟ್ಟುಕೊಂಡು,
ಮಾತಿನ ಬಣಬೆಯ ಮುಂದಿಟ್ಟುಕೊಂಡು,
ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,
ಆ ತೆರನಾಯಿತೆಂದ ಕಲಿದೇವರದೇವಯ್ಯ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-295/ವಚನ ಸಂಖ್ಯೆ-725)
ತನ್ನ ನಿತ್ಯ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ನಡೆ-ನುಡಿಗಳನ್ನು ಹೊಂದಿರದೆ, ಸದಾಕಾಲ ಶಿವಶರಣಶರಣೆಯರ ವಚನಗಳನ್ನು ಕೇಳುವವರ ಮನ ಮುಟ್ಟುವಂತೆ ಆಡಿದ ಮಾತ್ರಕ್ಕೆ, ಯಾವುದೇ ಒಬ್ಬ ವ್ಯಕ್ತಿಯು ಒಳ್ಳೆಯವನಾಗಲಾರನು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅತ್ಯಂತ ಮಹತ್ವವಾದದ್ದು. ಶರಣಧರ್ಮ ಸಂರಕ್ಷಣೆ, ವಚನ ಸಾಹಿತ್ಯದ ರಕ್ಷಣೆಯ ದಂಡನಾಯಕತ್ವದ ಜವಾಬ್ದಾರಿ ಹೊತ್ತು, ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವರು ಶರಣ ಸಮೂಹದ ಭೀಮರಕ್ಷೆಯಾಗಿ ನಿಂತರು. ಕಲಚೂರ್ಯ ರಾಯಮುರಾರಿಯನ್ನು ಎದುರಿಸಿ ಭೀಮಾ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡಕೋಡ, ಮೂಗಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದರು. ಹೋರಾಡುತ್ತಲೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಗೊಡಚಿ ಕ್ಷೇತ್ರದಲ್ಲಿ ಬಯಲಾದರು ಎಂದು ಪ್ರತೀತಿಯಿದೆ. ಇನ್ನೊಂದು ನಿರೂಪದ ಪ್ರಕಾರ ಬೆಳಗಾವಿ ಜಿಲ್ಲೆಯ ಮುರಗೋಡ ತಾಲೂಕಿನ ಕಾರೀಮನಿ ಊರಲ್ಲಿ ಐಕ್ಯರಾದರೆಂದೂ ಕೂಡ ಪ್ರತೀತಿ ಇದೆ. ಅವರ ಹುಟ್ಟೂರಾದ ದೇವರ ಹಿಪ್ಪರಗಿಯಲ್ಲಿಯೂ ಕೂಡ ಐಕ್ಯರಾಗಿರಬಹುದೆಂದು ಊಹಿಸಲಾಗಿದೆ. ಹಾಗಾಗಿ ಕಾರೀಮನಿ, ಗೊಡಚಿ ಹಾಗೂ ದೇವರ ಹಿಪ್ಪರಗಿ ಈ ಮೂರರಲ್ಲಿ ಯಾವುದು ಮಾಚಿತಂದೆಯವರ ಐಕ್ಯಸ್ಥಳ ಎಂದು ಗುರುತಿಸುವುದು ಸುಲಭವಲ್ಲ.
ಇಂತಹ ಶರಣ ಶ್ರೇಷ್ಠ ಮಡಿವಾಳ ಮಾಚಿದೇವರ ಜಯಂತಿ ಇಂದು. ಅಂದರೆ ಭಾದ್ರಪದ ಮಾಸದ ಚತುರ್ಥಿಯಂದು ಇದೆ. ತನ್ನಿಮಿತ್ತ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ಸೌಭಾಗ್ಯ ನನ್ನದು. ಇದಕ್ಕೆ ಅವಕಾಶ ಮಾಡಿಕೊಟ್ಟಂತಹ ವಚನಸಾಹಿತ್ಯ ಮಂದಾರ ಫೌಂಡೇಶನ್ ವೇದಿಕೆಗೆ ಮತ್ತು ಡಾ. ವಿಜಯಕುಮಾರ ಕಮ್ಮಾರ ಗುರುಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in