ವೀರಗಂಟಿ ಶರಣ ಮಡಿವಾಳ ಮಾಚಿದೇವರ ವಚನ “ಉಟ್ಟ ಸೀರೆಯ ಹರಿದು ಹೋದಾತ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.
ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ
ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1416/ವಚನ ಸಂಖ್ಯೆ-516)

ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಸುತ್ತಾರೆ, ಅತ್ಯಂತ ದಕ್ಷತನದಿಂದ ನೇತೃತ್ವ ವಹಿಸಿ ವಚನಗಳನ್ನು ಸಂರಕ್ಷಣೆ ಮಾಡುವುದರ ಮೂಲಕ “ವೀರ ಗಣಾಚಾರಿ” ಎನ್ನುವ ಹೆಸರಿಗೆ ತಕ್ಕಂತೆ ನಡೆದುಕೊಂಡವರು.

ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಶರಣರ ಮಾರಣ ಹೋಮವಾಗಿ, ಮನನೊಂದು ಬಸವಣ್ಣನವರು ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ಕೂಡಲಸಂಗಮಕ್ಕೆ ಹೋಗುತ್ತಾರೆ ಮತ್ತು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಬಸವಣ್ಣನವರ ಅನುಪಸ್ಥಿತಿಯಲ್ಲಿ ಮನನೊಂದು ಮಡಿವಾಳ ಮಾಚಿದೇವರ ಮನದಾಳದಿಂದ ಹೊರಬಂದ ಹೃದಯಸ್ಪರ್ಷಿ ವಚನವಿದು.

“ಉಟ್ಟ ಸೀರೆಯ ಹರಿದು” ಅಂದರೆ ಬಸವಣ್ಣನವರು ಸವೆಸಿದ ಕಠಿಣ ಹಾದಿ ಅಥವಾ ಕಷ್ಟ ಕಾರ್ಪಣ್ಯಗಳನ್ನು ಮುಂದೆ ಬರುವ ಪ್ರಧಾನಿಗಳು ಅನುಭವಿಸದಿರಲಿ ಎಂದು ಸಾಂಕೇತಿಕವಾಗಿ ಹರಿದು ಹಾಕಿದರು ಬಸವಣ್ಣ.

ರಾಜೋಚಿತವಾದ ಪಾದರಕ್ಷೆಗಳನ್ನು ಮತ್ತು ಕಟ್ಟಿದ ಮುಡಿ ಅಂದರೆ ರತ್ನ ಖಚಿತವಾದ ಕಿರೀಟವನ್ನು ಕಳಚಿಟ್ಟರು. ಬಸವಣ್ಣನವರು ಕಲ್ಯಾಣದಲ್ಲಿ ಇರುವಷ್ಟು ದಿನ ತಮಗೆ ದೊರೆತ ಪದವಿಗಳು ಅವರಿಗೆ ಅಹಂಕಾರ ಬರದಂತೆ ನಡೆದುಕೊಂಡರು. ಎಂದೂ ಅಧಿಕಾರದ ದರ್ಪ-ದಾರ್ಷ್ಟ್ಯತೆಗಳು ಅವರಲ್ಲಿ ಕಂಡು ಬರಲಿಲ್ಲ.

ಯಾವ ಕಲ್ಯಾಣ ರಾಜ್ಯವನ್ನು ಸಮ ಸಮಾಜದ ಪರಿಕಲ್ಪನೆಯಡಿಯಲ್ಲಿ ಸಮರ್ಥವಾಗಿ ನಿರ್ಮಿಸಿದರೋ ಅದೇ ಕಲ್ಯಾಣ ಛಿದ್ರ ಛಿದ್ರವಾಗುವುದನ್ನು ಕಣ್ಣಾರೆ ಕಂಡ ಬಸವಣ್ಣನವರು ಸೀಮೆಯನ್ನು ತೊರೆದು ಹೋದದ್ದನ್ನು ನೊಂದುಕೊಂಡು ಮಾಚಿದೇವರು ಇಲ್ಲಿ ಹೇಳಿದ್ದಾರೆ. ತಾವೇ ಕಟ್ಟಿ ಬೆಳೆಸಿದ, ತಾವೇ ನಿರ್ಮಿಸಿದ ಕಲ್ಯಾಣವೆಂಬ ಸಮ ಸಮಾಜವನ್ನು ತೊರೆದರು. 

“ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ” ಎನ್ನುವಲ್ಲಿ ಇಷ್ಟಲಿಂಗದಲ್ಲಿ ನಂಬಿಕೆಯನ್ನು ಉಳಿಸಿಕೊಂಡೇ ಹೋದರು. ಇಲ್ಲಿ ಲಿಂಗವೆಂದರೆ ಸಂಸ್ಕೃತಿ ಸಂಸ್ಕಾರಗಳ ಪ್ರತೀಕ. ಇಂಥ ಒಂದು ಸಂಸ್ಕಾರ ಸಂಸ್ಕೃತಿಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಇಡೀ ಸಮಾಜಕ್ಕೆ ಮಾದರಿಯಾದರು ಬಸವಣ್ಣನವರು. ಇದನ್ನೇ ಈ ವಚನದ ಸಾಲುಗಳಲ್ಲಿ ಮೂಡಿಸಿದ್ದಾರೆ.‌

“ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ” ಎನ್ನುವಲ್ಲಿ ಇಡೀ ಸಮಾಜದ ಪರಿಕಲ್ಪನೆಯನ್ನು ನಾವು ಕಾಣಬುದು. ವಚನ ಸಾಹಿತ್ಯದಲ್ಲಿ ಇಡೀ ಸಮಷ್ಠಿ ಪ್ರಜ್ಞೆಯ ಪ್ರತೀಕವಾಗಿ ಜಂಗಮ ಶಬ್ದವನ್ನು ಪ್ರಯೋಗಿಸಲಾಗಿದೆ. “ಜಂಗಮ” ಎಂಬುದು ಇಹಪರ ಮತ್ತು ಚರಾಚರದಲ್ಲಿ ಸರ್ವತ್ರವೂ ಅಡಕವಾಗಿರುವ ವಿಶ್ವ ಚೈತನ್ಯಾತ್ಮಕ ಶಕ್ತಿಯ ಪರ್ಯಾಯ ಶಬ್ದವಾಗಿದೆ. ಸಮಷ್ಠಿ ಪ್ರಜ್ಞೆಯ ಜಂಗಮವು ಅಗಮ್ಯ, ಅಗೋಚರ, ಅಪ್ರತಿಮವೂ ಆಗಿರುವುದರಿಂದ ಇದನ್ನು ಸ್ಥಾವರ ರೂಪದಲ್ಲಿ ನೋಡಲಾಗದು. ಕಲ್ಯಾಣವನ್ನು ಬಿಟ್ಟು ಹೋಗುವಾಗಲೂ ಕೂಡ ಕಲ್ಯಾಣ ನಗರದ ಕಲ್ಯಾಣವನ್ನೇ ಬಯಸುವಂತೆ “ಕೈಯಲ್ಲಿ ಹಡಿದುಕೊಂಡು ಹೋದೆಯಲ್ಲ” ಎಂದು ಬಸವಣ್ಣನವರ ಜಂಗಮ ಪ್ರಜ್ಞೆಯನ್ನು ನೆನಪಿಸಿಕೊಳ್ಳುತ್ತಾರೆ ಮಾಚಿದೇವರು.  

“ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರದೇವಾ” ಎಂದು ಕೂಡಲಸಂಗಮದಲ್ಲಿ ಬೆಳಗನುಟ್ಟು ಬಯಲಾಗಿ ಅಂದರೆ ಶಿವನ ಪ್ರಕಾಶವನ್ನು ಬೆಳಗಿಸಿ ಪರಂಜ್ಯೋತಿಯಾದರು. ಇಂಥ ಬಸವಣ್ಣನಿಗೆ ದಾರಿಯನ್ನು ನೀನೇ ತೋರಿಸು ಕಲಿದೇವಾ ಎಂದು ಗದ್ಗದಿತರಾಗುತ್ತಾರೆ.

ಆದಿಯ ಕಂಡೆ, ಅನಾದಿಯ ಕಂಡೆ
ಘನವ ಕಂಡೆ, ಮನವ ಕಂಡೆ, ಅನುವ ಕಂಡೆ
ಆಯತ ಸ್ವಾಯತ ಸನ್ನಹಿತವ ಕಂಡೆ.
ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ,
ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-218 / ವಚನ ಸಂಖ್ಯೆ-886)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಚೋದ್ಯ    : ಆಶ್ಚರ್ಯ.

“ಬಸವಣ್ಣನ ಕೃಪೆಯಿಂದ ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯ” ಎಂದು ಅತ್ಯಂತ ಗೌರವದಿಂದ ಅಲ್ಲಮ ಪ್ರಭುಗಳು ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರನ್ನು ಕುರಿತು ಹೇಳಿದ್ದಾರೆಂದರೆ ಅವರ ವ್ಯಕ್ತಿತ್ವ ಎಂತಹ ಉನ್ನತ ಮಟ್ಟಕ್ಕಿತ್ತು ಎನ್ನುವುದನ್ನು ನಾವು ಕಾಣಬಹುದು.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104.
ಮೋಬೈಲ್‌ ನಂ: 9741 357 132.
ಈ-ಮೇಲ್‌ : vijikammar@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in

Loading

Leave a Reply