
ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು.
ಅತ್ಯಂತ ಶ್ರೇಷ್ಠ ಕಾಯಕ ಯೋಗಿಗಳಾದ ಮಡಿವಾಳ ಶರಣ ಬಾಂಧವರು ತಮ್ಮ ಕುಲ ಕಸುಬಾದ ಶರಣರ ಬಟ್ಟೆಗಳನ್ನು ಮಡಿ ಮಾಡಿ ಕೊಡುತ್ತಿದ್ದರು. ಇದರ ಜೊತೆಗೆ ಅವರ ಇನ್ನೊಂದು ಅತ್ಯಂತ ಭಕ್ತಿಯಿಂದ ಮಾಡುವ ಕೆಲಸ ಅಂದರೆ ದೇವಸ್ಥಾನಗಳಲ್ಲಿ ಬೆಳಕನ್ನು ನೀಡುವಂಥ ಪತ್ತಗಾರರ ಕೆಲಸ. ಪತ್ತ ಅಂದರೆ ಪಂಜು ಹಿಡಿಯುವುದು. ಬಟ್ಟೆಯನ್ನು ಬಿಗಿಯಾಗಿ ಸುತ್ತಿದ ಒಂದು ಕೋಲು. ಅದರ ಮುಂಭಾಗದಲ್ಲಿ ಕಬ್ಬಿಣದ ಕೋಳದಿಂದ ಬಂಧಿಸಲಾಗುತ್ತದೆ. ಅದಕ್ಕೆ ಎಣ್ಣೆಯನ್ನು ಸುರಿದು ದೀಪವನ್ನು ಬೆಳಗಿಸಲಾಗುತ್ತದೆ. ಈ ದೀಪವನ್ನು ದಶ ದಿಕ್ಕುಗಳಿಗೂ ತೋರಿಸಲಾಗಿ ಇಡೀ ದೇವಸ್ಥಾನಕ್ಕೆ ಬೆಳಕು ಮೂಡುತ್ತದೆ ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. 1800 ರಲ್ಲಿ ಬುಕಾನನ್ ಎನ್ನುವ ಒಬ್ಬ ಬ್ರಿಟೀಷ್ ಅಧಿಕಾರಿ ಈ ಸಂಗತಿಯನ್ನು ತಮ್ಮ 2000 ಪುಟಗಳ ವರದಿಯಲ್ಲಿ ದಾಖಲೆ ಮಾಡುತ್ತಾನೆ.
ಫ್ರಾನ್ಸಿಸ್ ಬುಕಾನನ್, ಬ್ರಿಟಿಷ್ ನವರ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದಲ್ಲಿದ್ದ ಒಬ್ಬ ವೈದ್ಯಾಧಿಕಾರಿ. ಮೈಸೂರು, ಮಲಬಾರ್, ಪ್ರಾಂತ್ಯಗಳಲ್ಲಿನ ನೆಲ-ಜಲ-ಪ್ರಾಕೃತಿಕ ಸಂಪನ್ಮೂಲಗಳು ಖನಿಜಗಳು ಗಣಿಗಾರಿಕೆ ಕೈಗಾರಿಕೆ ವಾಣಿಜ್ಯ ವ್ಯವಹಾರ, ಆಡಳಿತ ವ್ಯವಸ್ಥೆ, ಅಲ್ಲಿರುವ ಜನ ಜಾತಿಗಳು-ಆಚರಣೆಗಳು-ಕೃಷಿಪದ್ಧತಿಗಳು-ದನಕರುಗಳ ತಳಿಗಳು ಹವಾಮಾನ, ಇತಿಹಾಸ ಮುಂತಾದ ಅನೇಕ ವಿಚಾರಗಳ ಬಗ್ಗೆ ನಿಖರವಾದ ಮಾಹಿತಿ ಕುರಿತು ಸರ್ವೇಕ್ಷಣಾ ವರದಿ ನೀಡಲು ಬುಕಾನನ್‌ನ್ನು ಕಂಪನಿ ಸರ್ಕಾರ 1800 ರಲ್ಲಿ ನಿಯೋಜಿಸಿತು. ಅವನು ಈ ಪ್ರದೇಶಗಳಲ್ಲಿ ಒಂದು ವರ್ಷ, ಎರಡು ತಿಂಗಳು, ಆರು ದಿನಗಳ ಕಾಲ ಸಂಚರಿಸಿ, ಸುಮಾರು 2000 ಪಟಗಳ ಸುದೀರ್ಘ ವರದಿಯನ್ನು A journey from madras-through the countries of MYSORE, CANARA AND MALABAR ನಲ್ಲಿ ದಾಖಲಿಸುತ್ತಾನೆ. ಅವನ ಮಹಾ ಪಯಣದ ದಿನಚರಿ ವರದಿ 200 ವರ್ಷದ ಕೆಳಗಿನ ಈ ಪ್ರದೇಶಗಳ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಈ ವರದಿ ಒಬ್ಬ ಸಮಾಜ ವಿಜ್ಞಾನಿಯ, ಇತಿಹಾಸಕಾರನ, ಸಸ್ಯ ವಿಜ್ಞಾನಿಯ, ಕುಲಶಾಸ್ತ್ರಜ್ಞನ, ತಳಿ ವಿಜ್ಞಾನಿಯ ಒಳನೋಟಗಳಿಂದ ಕೂಡಿದ ಅನೇಕ ಜ್ಞಾನ ಶಿಸ್ತುಗಳ ಸಂಗಮದಂತಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವಿಶ್ವಕೋಶದಂತಿರುವ ಅವನ ವಿಸ್ತೃತ ಅಧ್ಯಯನಾತ್ಮಕ ಸಂಚಾರದ ವಿವರಗಳನ್ನು ಪ್ರೊ. ಎಂ.ಜಿ. ರಂಗಸ್ವಾಮಿಯವರು ಅವರ ಅನುವಾದ ಕೃತಿ “ತುಮಕೂರು ಜಿಲ್ಲೆಯಲ್ಲಿ ಬುಕಾನನ್” ನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇತಿಹಾಸಕಾರರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯ ಗತಕಾಲದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲಿ ಜನಸಾಮಾನ್ಯರಿಗೂ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.
12 ನೇ ಶತಮಾನದ ಬಸವಣ್ಣನವರ ಮಹಾಮನೆಯ 770 ಶರಣರಲ್ಲಿ ಹಿರಿಯ ಚೇತನಗಳಲ್ಲಿ ಒಬ್ಬರಾದ ಇವರು ಶರಣ ಬಳಗದಲ್ಲಿ “ವೀರ ಗಣಾಚಾರಿ ಮಡಿವಾಳ ಮಾಚಿದೇವರು” ಎಂದೇ ಪ್ರಸಿದ್ಧರಾದವರು. ಇವರನ್ನು “ವೀರ ಗಂಟೆ ಶರಣ” ಎಂದು ಕೂಡ ಕರೆಯುತ್ತಿದ್ದರು. ಬಿಚ್ಚುಗತ್ತಿಯ ವೀರ ಬಂಟರಾದ ಮಡಿವಾಳ ಮಾಚಿದೇವರು ಅಸಾಧಾರಣ ಅನುಭವವನ್ನು ಹೊಂದಿದ ಶ್ರೇಷ್ಠ ಶರಣರು. ಮುಂದೆ ಶರಣ ಪಡೆಯ ದಂಡನಾಯಕನಾಗಿ ಮುಂದೆ ಕಾಯಕವನ್ನು ನಿರ್ವಹಿಸುತ್ತಾರೆ.
ಇವರ ಹುಟ್ಟೂರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಗ್ರಾಮ. ತಂದೆ ಪರುವತಯ್ಯ, ತಾಯಿ ಸುಜ್ಞಾನವ್ವ. ಇವರ ದೀಕ್ಷಾಗುರು ಮಲ್ಲಿಕಾರ್ಜುನ ಎಂದು ತಿಳಿದುಬರುತ್ತದೆ. ದೇವರ ಹಿಪ್ಪರಗಿಯಲ್ಲಿ ಸಿಂಧಗಿಗೆ ಹೋಗುವ ಮಾರ್ಗದಲ್ಲಿ ಅತ್ಯಂತ ಸುಂದರವಾದ ಕಲ್ಲಿನಲ್ಲಿಯೇ ಕಟ್ಟಿದ ಶರಣ ಮಡಿವಾಳ ಮಾಚಿದೇವರ ದೇವಸ್ಥಾನವಿದೆ. ಆ ದೇವಸ್ಥಾನವನ್ನು ಪ್ರವೇಶ ಮಾಡುತ್ತಲೇ ನಮ್ಮಲ್ಲಿಯೇ ಒಂದು ಕಂಪನವಾಗುವುದಂತೂ ನಿಜ. ಅಂಥ ಜಾಗೃತ ಸ್ಥಳ ಮಡಿವಾಳ ಮಾಚಿದೇವರ ಗುಡಿ. ಬಸವಣ್ಣನವರಿಗಿಂತ ಮಡಿವಾಳ ಮಾಚಯ್ಯನವರು ವಯಸ್ಸಿನಲ್ಲಿ ಹಿರಿಯರು ಎಂದು ಗುರುತಿಸಲಾಗಿದೆ.
ಕಲ್ಯಾಣಕ್ಕೆ ಬರುವ ಮುಂಚೆ, ದೇವರ ಹಿಪ್ಪರಗಿಯ ಕುಲದೈವವಾದ ಕಲ್ಲಿನಾಥ ಅಥವಾ ಕಲಿದೇವರ ದೇವ ಎನ್ನುವ ಸ್ಥಾವರಲಿಂಗ ಇವರ ಆರಾಧ್ಯ ದೈವವಾಗಿತ್ತು. ಕಲ್ಯಾಣಕ್ಕೆ ಬಂದಮೇಲೆ ಏಕದೇವೋಪಾಸನೆಯಲ್ಲಿ ತೊಡಗಿದಾಗ “ಕಲಿದೇವರದೇವ” ಎಂಬ ವಚನಾಂಕಿತದಿಂದ ವಚನ ಸಾಹಿತ್ಯವನ್ನು ರಚನೆ ಮಾಡುತ್ತಾರೆ. ಅವರು ಬೆರದ ಸುಮಾರು 346 ವಚನಗಳು ಇಲ್ಲಿಯವರೆಗೆ ಸಿಕ್ಕಿವೆ. ಶರಣ ಅಶೋಕ ದೊಮಲೂರು ಅವರು ಹೋದ ವರ್ಷ ಇನ್ನೂ 390 ವಚನಗಳನ್ನು ಸಂಶೋಧಿಸಿ ಒಟ್ಟು 736 ವಚನಗಳ ಸಂಪುಟವನ್ನು ನಮಗೆ ನೀಡಿದ್ದಾರೆ. ಅವರ ವಚನಗಳಲ್ಲಿ ಅತ್ಯಂತ ಪ್ರಮುಖವಾಗಿ ಕಂಡು ಬರುವ ತತ್ವ ಅಂದರೆ ಏಕದೇವೋಪಾಸನೆ. ನಾವು ಏಕದೇವೋಪಾಸನೆಯಲ್ಲಿ ನೋಡಬಹುದು. ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರಂತೆಯೇ ಇವರ ವಚನಗಳೂ ಕೂಡ ಅತ್ಯಂತ ತೀಕ್ಷ್ಣವಾಗಿವೆ. ಅಂದರೆ ಮುಖಕ್ಕೆ ಹೊಡೆದ ಹಾಗೆ ಹೇಳುವುದು ಈ ಇಬ್ಬರೂ ಗಣಾಚಾರಿ ಶರಣರ ವೈಶಿಷ್ಟ್ಯತೆ. ಬಸವಣ್ಣನವರ ಸಾಮಾಜಿಕ ಚಿಂತನೆಗಳನ್ನು ಮೆಚ್ಚಿಕೊಂಡು ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣಕ್ಕೆ ಬಂದು ತಮ್ಮ ಹಿಂದಿನ ಕಾಯಕವನ್ನೇ ಮುಂದುವರೆಸುತ್ತಾ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.
ಶರಣ ಸಂಕುಲದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಾಗಿದ್ದ ಶರಣ ಮಡಿವಾಳ ಮಾಚಿದೇವರನ್ನು ಎಲ್ಲ ಶರಣರೂ ತಮ್ಮ ತಮ್ಮ ವಚನಗಳಲ್ಲಿ ಉಲ್ಲೇಖ ಮಾಡಿದ್ದನ್ನು ನಾವು ಗಮನಿಸಬಹುದು.
ಬಸವಣ್ಣನವರು:
ಅಯ್ಯಾ, ನಾನು ದಾಸೋಹವ ಮಾಡುವೆನಲ್ಲದೆ, ಸಮಯವನರಿಯೆ,
ಅಯ್ಯಾ, ನಾನು ಭಕ್ತಿಯ ಮಾಡುವೆನಲ್ಲದೆ, ಭಾವವನರಿಯೆ.
ಸ್ಥಳಕುಳವ ವಿಚಾರಿಸಿದಡೆ, ಎನ್ನಲ್ಲಿ ಏನೂ ಹುರುಳಿಲ್ಲ,
ನಿಮ್ಮ ಶರಣರ ಸೋಂಕಿನಲ್ಲಿ ಶುದ್ಧನಾದೆನು.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-287/ವಚನ ಸಂಖ್ಯೆ-989)
ಸಿದ್ಧರಾಮೇಶ್ವರರು:
ಗುರುವಿಗೆ ಘನಗುರು ಮಾಚಿತಂದೆಗಳು;
ಲಿಂಗಕ್ಕೆ ಘನಲಿಂಗ ಮಾಚಿತಂದೆಗಳು;
ಜಂಗಮಕ್ಕೆ ನಿರಂಜನ ವಸ್ತು ನಮ್ಮ ಮಾಚಿತಂದೆಗಳು.
ಅಂತಪ್ಪ ಮಾಚಿತಂದೆಗೆ ಪೇಳ್ವ ತ್ರಾಣ ಎನ್ನಲ್ಲಿಹುದೆ?
ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-494)
ಕಲ್ಯಾಣ ಕ್ರಾಂತಿಯ ಶರಣರ ಕಗ್ಗೊಲೆಯಾದ ವಿಷಮ ಪರಿಸ್ಥಿತಿಯಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಸಾಹಸದಿಂದ ಶರಣ ಧರ್ಮ ಸಂರಕ್ಷಣೆ ಮತ್ತು ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಸುತ್ತಾರೆ, ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬ್ರಹ್ಮಯ್ಯ ಮೊದಲಾದವರೊಂದಿಗೆ ಮಾಚಿದೇವರು ಶರಣ ಸಮೂಹದ ರಕ್ಷಣೆಗೆ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಯುದ್ಧವನ್ನು ಮಾಡತಾರೆ. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯನವರು. ಕೊನೆಯ ಕದನ ಕಾದರವಳ್ಳಿ ನಂತರದಲ್ಲಿ ರಾಮದುರ್ಗದ ಹತ್ತಿರದ ಕಲಹಾಳದಲ್ಲಿ ಇವರು ಉಳಿದಿದ್ದರು ಎಂಬ ಮಾಹಿತಿ ತಿಳಿದು ಬರುತ್ತದೆ. ಈಗ ಅದನ್ನು ಮಲ್ಲಪ್ಪಯ್ಯನಮಠ ಎಂದು ಕರೆಯಲಾಗುತ್ತದೆ. ರಾಮದುರ್ಗದ ಗೊಡಚಿಯಲ್ಲಿರುವ ವೀರಭದ್ರನ ವಿಗ್ರಹವಿದೆ ಅದು ಕೂಡ ಮಡಿವಾಳ ಮಾಚಿದೇವರ ವಿಗ್ರಹವೆಂದು ಹಲವಾರು ದಾಖಲೆಗಳಿಂದ ಪ್ರಸ್ತುತಪಡಿಸಿದೆ. ಈ ಸ್ಥಳವೇ ಅವರ ಐಕ್ಯಸ್ಥಳವೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

ರಾಯಚೂರಿನ ಝರಿಬೆಟ್ಟಕ್ಕೆ ಹೊಂದಿಕೊಂಡಿರುವ ಬೃಹತ್ ಶಿಲೆಯಲ್ಲಿ ಮಡಿವಾಳ ಮಾಚಿದೇವರ ವಿಗ್ರಹ ಇದೆ. ಇದನ್ನು ಮಡಿವಾಳ ವಂಶಸ್ಥರು ಕ್ರಿ. ಶ. 1700 ರಲ್ಲಿ ಪ್ರತಿಷ್ಠಾಪಿಸಿದರು ಎಂದು ತಿಳಿದುಬರುತ್ತದೆ. ಧಾರವಾಡದಿಂದ ಹತ್ತು ಕಿಲೋಮೀಟರ ದೂರವಿರುವ ಅಮ್ಮಿನಭಾವಿಯಲ್ಲಿ ಅವರ ಪಾದುಕೆಗಳನ್ನು ಇಟ್ಟಿರುತ್ತಾರೆ, ಮುಳಗುಂದ, ಗೋಡಚಿ, ರಾಯಚೂರು, ಗದಗಿನಲ್ಲಿ ಅನೇಕ ದಾಖಲೆಗಳು ದೊರೆತಿವೆ.
ಅಮೂಲ್ಯವಾದ ತತ್ವಗಳನ್ನು ತಮ್ಮ ವಚನಗಳಲ್ಲಿ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸಿದವರು ಮಡಿವಾಳ ಮಾಚಯ್ಯನವರು. ವಚನ ಸಾಹಿತ್ಯದ ಉಳಿವಿಗಾಗಿ ಶ್ರಮಿಸಿದವರು. ತಮ್ಮ ವೀರತನದಿಂದ ಗಣಾಚಾರ ತತ್ವವನ್ನು ಅಳವಡಿಸಿಕೊಂಡು, ವೀರಾವೇಶದಿಂದ ಹೋರಾಡಿ ತಮ್ಮ ಪ್ರಾಣವನ್ನೇ ಕೊಟ್ಟು ವಚನ ಸಾಹಿತ್ಯವನ್ನು ರಕ್ಷಿಸಿದರು. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಶರಣರಿಗೆ ದಾರಿ ತೋರುತ್ತ ಬಿಜ್ಜಳನ ಸೈನ್ಯದ ಜೊತೆ ಯುದ್ಧ ಮಾಡುತ್ತಾ. ಎಲ್ಲರನ್ನು ರಕ್ಷಿಸುತ್ತಾ ಮಡಿದಂತಹ ವೀರ ಶರಣ ಮಡಿವಾಳ ಮಾಚಿದೇವ.
ಮಡಿವಾಳ ಮಾಚಿದೇವರು ನೇರ, ನಿಷ್ಟುರ ಶರಣರು ಅವರಲ್ಲಿ ಯಾವುದೇ ಕಿಂಕರ ಮನೋಭಾವನೆ ಇದ್ದಿಲ್ಲ. ಇದ್ದದ್ದನ್ನು ಇದ್ದಂಗೆ ಹೇಳಿ ನೇರ ನುಡಿಗಳಿಂದ ಹಲವಾರು ಶರಣರನ್ನು ಸ್ವತಃ ಬಸವಣ್ಣನವರ ತಪ್ಪುಗಳನ್ನು ತಿಳಿಸಿ ಸರಿಪಡಿಸಿದ್ದಾರೆ. ಅದಕ್ಕೆ ಒಂದು ಉದಾಹರಣೆ ಎಂದರೆ ಶರಣ ಮಡಿವಾಳ ಮಾಚಿದೇವರ ಈ ವಚನ:
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.
ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು
ಹೋದೆಯಲ್ಲಾ ಬಸವಣ್ಣ.
ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ.
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ
ಕಲಿದೇವರದೇವಾ.
(ಸಮಗ್ರ ವಚನ ಸಂಪುಟ: ಎಂಟು-2016/ಪುಟ ಸಂಖ್ಯೆ-212/ವಚನ ಸಂಖ್ಯೆ-516)
ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಶರಣರ ಮಾರಣ ಹೋಮವಾಗಿ, ಮನನೊಂದು ಬಸವಣ್ಣನವರು ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ಕೂಡಲಸಂಗಮಕ್ಕೆ ಹೋಗುತ್ತಾರೆ ಮತ್ತು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಬಸವಣ್ಣನವರ ಅನುಪಸ್ಥಿತಿಯಲ್ಲಿ ಮನನೊಂದು ಮಡಿವಾಳ ಮಾಚಿದೇವರ ಮನದಾಳದಿಂದ ಹೊರಬಂದ ಹೃದಯಸ್ಪರ್ಷಿ ವಚನವಿದು.
“ಉಟ್ಟ ಸೀರೆಯ ಹರಿದು” ಅಂದರೆ ಬಸವಣ್ಣನವರು ಸವೆಸಿದ ಕಠಿಣ ಹಾದಿ ಅಥವಾ ಕಷ್ಟ ಕಾರ್ಪಣ್ಯಗಳನ್ನು ಮುಂದೆ ಬರುವ ಪ್ರಧಾನಿಗಳು ಅನುಭವಿಸದಿರಲಿ ಎಂದು ಸಾಂಕೇತಿಕವಾಗಿ ಹರಿದು ಹಾಕಿದರು ಬಸವಣ್ಣ.
“ಮೆಟ್ಟಿದ ಕೆರಹ ಕಳೆದು” ಅಂದರೆ ರಾಜೋಚಿತವಾದ ಪಾದರಕ್ಷೆಗಳನ್ನು ಮತ್ತು “ಕಟ್ಟಿದ ಮುಡಿ” ಅಂದರೆ ರತ್ನ ಖಚಿತವಾದ ಕಿರೀಟವನ್ನು ಕಳಚಿಟ್ಟರು. ಬಸವಣ್ಣನವರು ಕಲ್ಯಾಣದಲ್ಲಿ ಇರುವಷ್ಟು ದಿನ ತಮಗೆ ದೊರೆತ ಪದವಿಗಳು ಅವರಿಗೆ ಅಹಂಕಾರ ಬರದಂತೆ ನಡೆದುಕೊಂಡರು. ಎಂದೂ ಅಧಿಕಾರದ ದರ್ಪ-ದಾರ್ಷ್ಟ್ಯತೆಗಳು ಅವರಲ್ಲಿ ಕಂಡು ಬರಲಿಲ್ಲ.
ಯಾವ ಕಲ್ಯಾಣ ರಾಜ್ಯವನ್ನು ಸಮ ಸಮಾಜದ ಪರಿಕಲ್ಪನೆಯಡಿಯಲ್ಲಿ ಸಮರ್ಥವಾಗಿ ನಿರ್ಮಿಸಿದರೋ ಅದೇ ಕಲ್ಯಾಣ ಛಿದ್ರ ಛಿದ್ರವಾಗುವುದನ್ನು ಕಣ್ಣಾರೆ ಕಂಡ ಬಸವಣ್ಣನವರು ಸೀಮೆಯನ್ನು ತೊರೆದು ಹೋದದ್ದನ್ನು ನೊಂದುಕೊಂಡು ಮಾಚಿದೇವರು ಇಲ್ಲಿ ಹೇಳಿದ್ದಾರೆ. ತಾವೇ ಕಟ್ಟಿ ಬೆಳೆಸಿದ, ತಾವೇ ನಿರ್ಮಿಸಿದ ಕಲ್ಯಾಣವೆಂಬ ಸಮ ಸಮಾಜವನ್ನು ತೊರೆದರು.
“ಲಿಂಗಕ್ಕೆ ಮಾಡಿದುದ ಸೋಂಕದೇ ಹೋದೆಯಲ್ಲಾ” ಎನ್ನುವಲ್ಲಿ ಇಷ್ಟಲಿಂಗದಲ್ಲಿ ನಂಬಿಕೆಯನ್ನು ಉಳಿಸಿಕೊಂಡೇ ಹೋದರು. ಇಲ್ಲಿ ಲಿಂಗವೆಂದರೆ ಸಂಸ್ಕೃತಿ ಸಂಸ್ಕಾರಗಳ ಪ್ರತೀಕ. ಇಂಥ ಒಂದು ಸಂಸ್ಕಾರ ಸಂಸ್ಕೃತಿಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಇಡೀ ಸಮಾಜಕ್ಕೆ ಮಾದರಿಯಾದರು ಬಸವಣ್ಣನವರು. ಇದನ್ನೇ ಈ ವಚನದ ಸಾಲುಗಳಲ್ಲಿ ಮೂಡಿಸಿದ್ದಾರೆ.
“ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ” ಎನ್ನುವಲ್ಲಿ ಇಡೀ ಸಮಾಜದ ಪರಿಕಲ್ಪನೆಯನ್ನು ನಾವು ಕಾಣಬುದು. ಕಲ್ಯಾಣವನ್ನು ಬಿಟ್ಟು ಹೋಗುವಾಗಲೂ ಕೂಡ ಕಲ್ಯಾಣ ನಗರದ ಕಲ್ಯಾಣವನ್ನೇ ಬಯಸುವಂತೆ “ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲ” ಎಂದು ಬಸವಣ್ಣನವರ ಜಂಗಮ ಪ್ರಜ್ಞೆಯನ್ನು ನೆನಪಿಸಿಕೊಳ್ಳುತ್ತಾರೆ ಮಾಚಿದೇವರು.
“ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರದೇವಾ” ಎಂದು ಕೂಡಲಸಂಗಮದಲ್ಲಿ ಬೆಳಗನುಟ್ಟು ಬಯಲಾಗಿ ಅಂದರೆ ಶಿವನ ಪ್ರಕಾಶವನ್ನು ಬೆಳಗಿಸಿ ಪರಂಜ್ಯೋತಿಯಾದರು. ಇಂಥ ಬಸವಣ್ಣನಿಗೆ ದಾರಿಯನ್ನು ನೀನೇ ತೋರಿಸು ಕಲಿದೇವಾ ಎಂದು ಗದ್ಗದಿತರಾಗುತ್ತಾರೆ.
ಡಾಂಭಿಕ ಭಕ್ತಿ ಸ್ಥಾವರ ವ್ಯವಸ್ಥೆ ನಿಷ್ಠುರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳು ಎತ್ತಿ ತೋರುತ್ತವೆ ಇವರ ವಚನಗಳು. ಮತ್ತು ಶಿವಯೋಗ ಸಾಧನೆಯ ಬಗ್ಗೆ ಹಲವಾರು ವಚನಗಳಲ್ಲಿ ಕಂಡು ಬರುತ್ತದೆ. ಹೀಗೆ ಶರಣರು ನಮಗಾಗಿ ಬದುಕಿ ತಮ್ಮ ಗುರುತುಗಳಾದ ವಚನಗಳನ್ನು ಬಿಟ್ಟು ಹೋಗಿದ್ದಾರೆ. ನಮಗೆ ಗುರು ವಚನಗಳು ಆಗಬೇಕು ಮತ್ತು ಅದರೆ ಅರಿವು ನಮಗೆ ಬರಬೇಕು. ಆಗ ಶರಣರು ಕಂಡ ಕನಸು ನನಸಾಗುತ್ತದೆ ಅವರು ನಮಗಾಗಿ ಮಾಡಿದ ತ್ಯಾಗ ಸಾರ್ಥಕವಾಗುತ್ತದೆ.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104.
ಮೋಬೈಲ್ ನಂ: 9741 357 132.
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in