
“ವೈರಾಗ್ಯ” ವೆಂಬ, ಪೂರ್ತಿ ಸಾಧಿಸಲಾಗದ ಹುಸಿ ಸಿದ್ಧಾಂತವೊಂದು ಜಗತ್ತಿನಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಿದೆ. ತಮ್ಮ ನಾಮಧ್ಯೇಯಗಳೊಂದಿಗೆ ‘ವೀರ ವಿರಾಗಿ’ ಮತ್ತು ‘ವೈರಾಗ್ಯಮೂರ್ತಿ’ ಎಂಬ ವಿಶೇಷಣ ಹಚ್ಚಿಕೊಂಡವರೂ ಬೇಕಾದಷ್ಟು ಜನರಿದ್ದಾರೆ. ಆದರೆ, ಎಲ್ಲವನ್ನೂ ಸಂಪೂರ್ಣ ತ್ಯಾಗ ಮಾಡಿ, ತನಗೆ ಯಾವುದೂ, ಏನೂ ಬೇಡ ಎಂದು ಜೀವವಿರೋಧಿಗಳಾಗಿ ಬದುಕುವವರು ಬಹುಶಃ ಯಾರೂ ಇಲ್ಲ. ಹೀಗೆ ಹೇಳಿದರೆ ಕೆಲವರಿಗೆ ಅಚ್ಚರಿ, ನೋವು ಎರಡೂ ಆಗಬಹುದು, ಸಿಟ್ಟೂ ಬರಬಹುದು. ಅಷ್ಟೇ ಅಲ್ಲ, ಅಂಥ ಕೆಲವು ವಿರಾಗಿನಾಮಿಗಳ ಬಾಲಂಗೋಚಿಗಳು ಅವರ ಪರ ನಿಂತು ಉಗ್ರಗಾಮಿಗಳಂತೆ ಹೋರಾಡಲೂಬಹುದು. ಕೊನೆಯಪಕ್ಷ ದೇಶ, ಧರ್ಮ, ಜಾತಿ, ಮತ, ತನ್ನ ಸಿದ್ಧಾಂತ, ನನ್ನವರು, ತನ್ನವರು, ಹಣ, ಅಧಿಕಾರ ಇಂಥ ಅನೇಕ ಉಪಾಧಿಗಳು ಎಂಥ ತ್ಯಾಗಿಗಾದರೂ ಅಂಟಿಕೊಂಡೇ ಇರುತ್ತವೆ ಎನ್ನುವುದನ್ನು ಒಪ್ಪುವುದಾದರೆ, ಯಾವ ಜೀವಿಯೂ ಪೂರ್ತಿ ವಿರಾಗಿಯಾಗಿರಲು ಸಾಧ್ಯವೇ ಇಲ್ಲ. ನಿಸರ್ಗ ಸತ್ಯದ ಇಂಥ ಕಾರಣಕ್ಕಾಗಿಯೇ ಶರಣರು ವೈರಾಗ್ಯದ ಪರಮ ವಿರೋಧಿಗಳಾಗಿದ್ದರು. ಮನುಷ್ಯನಿಗೆ ವರವಾಗಿ ದೊರಕಿರುವ ‘ಪ್ರಸಾದ ಕಾಯ’ವನ್ನು ವೈರಾಗ್ಯದ ಬೇಲಿ ಹಾಕಿ ಬಳಲಿಸಬಾರದೆಂಬ ಉದ್ದೇಶದಿಂದ, ‘ಒಲ್ಲೆ’ ಎಂದು ಹೇಳುವ ‘ವೈರಾಗ್ಯ’ವನ್ನು ಅವರು ಪೂರ್ತಿಯಾಗಿ ನಿರಾಕರಿಸಿ, ‘ಒಲಿ’ಯುವ ಕಾಯಗುಣಕ್ಕೆ ಆದ್ಯತೆ ಕೊಟ್ಟರು. ಆದರೆ ಅಂಥ ಬೇಕುಗಳನ್ನು ಪೂರೈಸಿಕೊಳ್ಳಲು ಪರಿಶುದ್ಧ ಹಾಗೂ ನೈತಿಕ ಮಾರ್ಗ ತೋರಿಸಿದರು. ಇದು ಜೀವಗುಣದ ಮತ್ತು ಲೋಕಬದುಕಿನ ಸಕಾರಾತ್ಮಕ ಪ್ರತಿಪಾದನೆ. ಇದಕ್ಕೆ ವ್ಯತಿರಿಕ್ತವಾಗಿ ಬದುಕುವವರನ್ನು ಅವರು ನೇರವಾಗಿ ತರಾಟೆಗೆ ತೆಗೆದುಕೊಂಡದ್ದೂ ಉಂಟು.
ಹೀಗಿದ್ದರೂ ವೈರಾಗ್ಯದ ನಾಟಕ ನಿಂತೇ ಇಲ್ಲ. ನಾನು ‘ಸರ್ವಸಂಗ ಪರಿತ್ಯಾಗಿ’ ಎಂದು ಎಂದು ಹೇಳಿಕೊಳ್ಳುವ ಅನೇಕರು ಕೋಟಿ ಕೋಟಿ ಹಣ ಸಂಪಾದಿಸಿಕೊಂಡು, ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡು ಹೊರಗೆ ಸಾಚಾಗಳಂತೆಯೇ ನಟಿಸುತ್ತ, ಒಳಗೊಳಗೆ ಭಯಗ್ರಸ್ಥ ಜೀವನ ನಡೆಸುತ್ತಿರುವುದು ಸುಳ್ಳಲ್ಲ. ಇಂಥವರಲ್ಲಿ ಲೌಕಿಕರ ಹಾಗೆ ಧಾರ್ಮಿಕ ಕ್ಷೇತ್ರದ ‘ವೈರಾಗ್ಯಮೂರ್ತಿ’ಗಳ ಸಂಖ್ಯೆಯೂ ಹೆಚ್ಚಾಗಿರುವುದು ನಗೆಪಾಟಲಿನ ಸಂಗತಿ. ಇಂಥವರನ್ನೂ ಒಳಗೊಂಡಂತೆ, ಬಹುತೇಕ ಜನರು ನೋವಿನ ಘಟನೆಗಳು ಘಟಿಸಿದಾಗ, ಆ ಸಂದರ್ಭಗಳಲ್ಲಿ ಮಾತ್ರ ಪರಮ ವೈರಾಗ್ಯದ ಮಾತುಗಳನ್ನಾಡುವುದು ಮತ್ತು ಹಾಗೆ ಮಾತಾಡುತ್ತಲೇ ಇನ್ನೇನು ಮನೆ, ಮಾರು, ಕೆಂಡತಿ-ಮಕ್ಕಳು, ಆಸ್ತಿ-ಪಾಸ್ತಿ, ಅಧಿಕಾರ ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ಹೊರಟೇ ಬಿಡುತ್ತಾರೇನೋ ಎಂಬಂತೆ ವರ್ತಿಸುವುದು ವಾಸ್ತವ. ಆದರೆ, ಆ ಘಟನೆ ಗತಿಸಿ ಹೋಯಿತೋ ಜನ ಮತ್ತೆ ಕೆಲವೇ ಕ್ಷಣಗಳಲ್ಲಿ ‘ಯಥಾಪ್ರಕಾರ’ ತಮ್ಮ ನಿತ್ಯದ ನಡೆಯನ್ನೇ ಅನುಸರಿಸುತ್ತಾರೆ. ಇದೊಂದು ಬಗೆಯ ನಗೆನಾಟಕ ಮತ್ತು ಬೂಟಾಟಿಕೆ. ಸಾಧ್ಯವೇ ಇರದ ವೈರಾಗ್ಯವನ್ನು ಸಾಧಿಸುತ್ತೇವೆಂದು ಹೊರಡುವ ಈ ಬಗೆಯ ಮನುಷ್ಯರು, ಮನಸ್ಸು ಮತ್ತು ದೇಹದ ನಡುವಿನ ಸಂಬಂಧದ ಸ್ವರೂಪವನ್ನಾಗಲಿ, ಅಥವಾ ಮಾನವ ಸಹಜ ಬಯಕೆಗಳನ್ನಾಗಲಿ ಅರಿಯದೆ ಕೊನೆಗೆ ಸಂಪೂರ್ಣ ಮರ್ಯಾದೆಗೇಡಿನ ಸ್ಥಿತಿಗೆ ತಲುಪುತ್ತಾರೆ. ಈ ವಾಸ್ತವವನ್ನೇ ಶರಣರು ತಮ್ಮ ವಚನಗಳಲ್ಲಿ ವೈಚಾರಿಕವಾಗಿ ಪ್ರತಿಪಾದಿಸಿ, ವೈರಾಗ್ಯವೆಂಬ ಹುಸಿನಾಟಕದ (ಕಲ್ಪನೆಯ) ಒಳಸುಳಿಯನ್ನು ಎಳೆಯೆಳೆಯಾಗಿ ಭೇದಿಸಿಡುತ್ತಾರೆ. ಶರಣ ವೀರಸಂಗಯ್ಯನ ವಚನವೊಂದು ಈ ಪರಿಪ್ರೇಕ್ಷದಲ್ಲಿ ವಿಶೇಷ ಗಮನ ಸೆಳೆಯುವಂತಿದೆ.
ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ, ಸ್ಮಶಾನ ವೈರಾಗ್ಯ
-ಯಾತನ ಶರೀರಕೆ ಇವು ವ್ಯಾಪಾರಂಗಳು.
ನೂತನ ಕಲಿಕೆಯ ಮಾತು ನುಡಿ ವೈರಾಗ್ಯವು.
ಸೂಕತ ಹೋದ ಮೂರು ದಿನಕ್ಕೆ ಸುರತಾನಂದವು.
ತತ್ಕಾಲದ ಶವಕ್ಕೇಪರಿ ದುಃಖಂಗಳು.
ಆ ತತ್ಕಾಲಕ್ಕೆ ವೈರಾಗ್ಯ ಕ್ಷಣದೊಳು ಯೋಗ್ಯವು.
ನೀತಿ-ಭಕ್ತಿ-ವೈರಾಗ್ಯ ಸ್ವರೂಪು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
ಲೋಕಜೀವನದಲ್ಲಿ ಪ್ರಚಲಿತವಿರುವ ಮೂರು ಬಗೆಯ ವೈರಾಗ್ಯಗಳನ್ನು ವೀರಸಂಗಯ್ಯ ಇಲ್ಲಿ ಪ್ರಸ್ತಾಪಿಸುತ್ತಾನೆ. ಅವುಗಳೆಂದರೆ, ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ ಮತ್ತು ಸ್ಮಶಾನ ವೈರಾಗ್ಯ. ಈ ಮೂರೇ ಸಂದರ್ಭಗಳನ್ನು ಆತ ಪ್ರಸ್ತಾಪಿಸಿರುವುದರ ಹಿಂದಿನ ಉದ್ದೇಶವೆಂದರೆ, ಈ ಸಂದರ್ಭಗಳಲ್ಲಿ ಮಾತ್ರ ಮನುಷ್ಯನ ಹುಸಿ ವೈರಾಗ್ಯದ ಖರೇ ಖರೇ ಬಣ್ಣ ಸ್ಪಷ್ಟವಾಗಿ ಬಯಲಾಗುವುದು. ಮುಖ್ಯ ಮಾತೆಂದರೆ, ವೀರಸಂಗಯ್ಯ ಇಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಮಾತಾಡದೆ, ಒಟ್ಟು ಮನುಷ್ಯರ ಸ್ವಭಾವದ ಸಾಮಾನ್ಯೀಕೃತ ಹಾಗೂ ನೈಜ ಗುಣದ ದರ್ಶನ ಮಾಡಿಸಿರುವುದು.
ಶಾಸ್ತ್ರೋಕ್ತ ಹಾಗೂ ಪುರಾಣಗಳನ್ನು ಹೇಳುವ ಸಂದರ್ಭಗಳಲ್ಲಿ ಪುರಾಣಿಕರು ಜನರ ಮನಃಪರಿವರ್ತನೆಗೆಂದು ನಡು ನಡುವೆ ವೈರಾಗ್ಯದ ಹಾಗೂ ಇಹಜೀವನದ ನಶ್ವರತೆಯ ಬಗೆಗೆ ಆಕರ್ಷಕ ದೃಷ್ಟಾಂತಗಳನ್ನು ಹೇಳುತ್ತಿರುತ್ತಾರೆ. ಅವುಗಳಿಗೆ ಪೂರಕವಾಗಿ ಕಲ್ಪಿತ ಕಥೆ ಮತ್ತು ಉಪಕಥೆಗಳನ್ನು ಹೇಳುತ್ತ ಕೇಳುಗರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನೂ ಉಂಟು ಮಾಡುತ್ತಿರುತ್ತಾರೆ. ಅವರ ಮಾತಿನ ಪ್ರಭಾವ ಎಷ್ಟಿರುತ್ತದಯೆಂದರೆ, ಕೇಳುತ್ತ ಕುಳಿತವರ ಮನಸ್ಸುಗಳಲ್ಲಿ ಆ ಕ್ಷಣಕ್ಕೆ ‘ಅಯ್ಯೋ ಈ ಜೀವನ ಇಷ್ಟೆಯೇ, ಯಾರಿಗೆ ಬೇಕು ಇದೆಲ್ಲ, ಸಾಕಪ್ಪಾ ಸಾಕು…’ ಎಂಬ ವೈರಾಗ್ಯದ ಭಾವನೆ ಬಂದು, ‘ಅರ್ಥವೇ ಇಲ್ಲದ ಇಂಥ ಬುದುಕು ಯಾಕೆ ಬೇಕು? ಇದನ್ನು ತ್ಯಾಗ ಮಾಡಿ ಹೊರಟು ಬಿಡುವುದೇ ಮೇಲು’ ಎಂದು ಹೇಳುವುದುಂಟು. ಇದನ್ನೇ ವೀರಸಂಗಯ್ಯ ‘ನುಡಿ ವೈರಾಗ್ಯ’ ಎಂದು ಕರೆದಿರುವುದು. ಆದರೆ, ಶಾಸ್ತ್ರ-ಪುರಾಣ ಮುಗಿದು ಮನೆಗೆ ಹಿಂದಿರುಗಿದರೋ ಮತ್ತೆ ಅದನ್ನೆಲ್ಲ ಮರೆತು, ‘ಯಥಾಪ್ರಕಾರ’ ತಮ್ಮ ದಿನನಿತ್ಯದ ಬದುಕನ್ನೇ ಅಪ್ಪಿಕೊಳ್ಳುತ್ತಾರೆ ಜನ. ನುಡಿಗೆ ಮಾತ್ರ ಸೀಮಿತವಾಗುವ ಇಂಥ ವೈರಾಗ್ಯ ನಡೆಯಲ್ಲಿ ಬರುವುದೇ ಇಲ್ಲ!
ಇನ್ನು ಪ್ರಸೂತಿ ವೈರಾಗ್ಯದ ಮಾತು. ಇದು ಹೆಚ್ಚಾನುಹೆಚ್ಚು ಮಹಿಳೆಯರಿಗೆ ಸಂಬಂಧಿಸಿದ್ದು. ಹೆರಿಗೆಯ ಸಂದರ್ಭದಲ್ಲಿ ಕೂಸು ಹೊರಬರುವಾಗ ಉಂಟಾಗುವ ನೋವನ್ನು ಸಹಿಸಲಾಗದೆ, ‘ಅಯ್ಯೋ ದೇವರೇ ಸಾಕಪ್ಪಾ ಈ ಮಕ್ಕಳ ಉಸಾಬರಿ, ಇನ್ನು ಮಕ್ಕಳೇ ಬೇಡ, ಸಂಸಾರದ ಬಂಧನವೇ ಸಾಕು’ ಎಂದು ನಿರ್ಧಾರಕ್ಕೆ ಬರುವುದೇ ‘ಪ್ರಸೂತಿ ವೈರಾಗ್ಯ. ಈ ವೈರಾಗ್ಯ ಮಗು ಹುಟ್ಟುವ ವರೆಗೆ ಮಾತ್ರ ಇದ್ದು, ಹೆರಿಗೆ ಆಯಿತೋ ಮುಗಿಯಿತು, ಮತ್ತೆ ‘ಯಥಾಪ್ರಕಾರ’ ಸುರತಾನಂದದ ಬಯಕೆ ಹುಟ್ಟಿ, ಆ ವೈರಾಗ್ಯ ಹೇಳಹೆಸರಿಲ್ಲದೆ ಮಟಾಮಾಯ ಆಗಿಬಿಡುತ್ತದೆ. ಮೂರೇ ದಿನಗಳಲ್ಲಿ ಮತ್ತೆ ಗಂಡ-ಹೆಂಡತಿ ಒಂದಾಗುತಾರೆ. ಇದು ಬಹಳ ಪ್ರಚಲಿತ ವಿದ್ಯಮಾನ.
ಮೂರನೆಯದು ಸ್ಮಶಾನ ವೈರಾಗ್ಯ. ಸಂಬಂಧಿಕರೋ, ಪಕ್ಕದ ಮನೆಯವರೋ, ಆಪ್ತರೋ ಅಥವಾ ಸ್ನೇಹಿತರೋ-ಹೀಗೆ ಯಾರಾದರೂ ತೀರಿಕೊಂಡಾಗ, ಅವರ ಅಂತ್ಯಕ್ರಿಯೆಗೆ ಹೋಗುವ ಜನ, ಅಲ್ಲಿ ಹೆಣ ಸುಡುವುದನ್ನೋ ಅಥವಾ ಹುಗಿಯುವುದನ್ನೋ ನೋಡಿ, ‘ಅಯ್ಯೋ, ಈ ಬದುಕಿನ ಕಥೆಯೇ ಇಷ್ಟು. ಯಾರಿಗೆ ಬೇಕು ಇದೆಲ್ಲ? ಇನ್ನು ಬದುಕಿ ಏನರ್ಥ? ಸಾಕು ಸಾಕು’ ಎಂದು ತತ್ಕಾಲಕ್ಕೆ ಸುಡುಗಾಡದಲ್ಲಿ ವಿರಕ್ತಿ ಭಾವನೆ ತಾಳುವುದೇ ಈ ‘ಸ್ಮಶಾನ ವೈರಾಗ್ಯ’. ಇಲ್ಲಿಯೂ ಅಷ್ಟೇ, ಹೆಣದ ಅಂತಿಮ ಸಂಸ್ಕಾರ ಮುಗಿದು ಜನ ಮನೆಗೆ ಮರಳಿದರೋ ಮುಗಿಯಿತು, ಅದೆಲ್ಲವನ್ನೂ ಮರೆತು ಮತ್ತೆ ‘ಯಥಾಪ್ರಕಾರ’ ನಾನು, ನನ್ನವರು, ಸಂಪತ್ತು, ಆಸ್ತಿ-ಹೀಗೆ ಬದುಕಿನ ಹಿಂದಣ ಕಥೆಯೇ ಆರಂಭವಾಗಿಬಿಡುತ್ತದೆ. ಸ್ಮಶಾನ ವೈರಾಗ್ಯವೇ ಸ್ಮಶಾನ ಸೇರುತ್ತದೆ!
ಹೀಗೆ ತತ್ಕಾಲದಲ್ಲಿ ಮೂಡುವ ಈ ಮೂರೂ ಬಗೆಯ ವೈರಾಗ್ಯದ ಭಾವನೆಗಳನ್ನು ವೀರಸಂಗಯ್ಯ-‘ಯಾತನ ಶರೀರಕೆ ಇವು ವ್ಯಾಪಾರಂಗಳು’ ಎನ್ನುತ್ತಾನೆ. ಇದೆಲ್ಲವೂ ವ್ಯಾಪಾರಿ ಮನೋಭಾವದ ಮನುಷ್ಯನ ಸಹಜ ಸ್ವಭಾವದ ಪರಿಣಾಮ ಎಂಬುದು ಅವನ ಅಭಿಮತ. ಇದು ಯಾತನ (ನೋವಿಗೆ ಪ್ರತಿಕ್ರಿಯಿಸುವ) ಶರೀರವು ಆಯಾ ಘಟನೆಗಳಿಗೆ ತೋರ್ಪಡಿಸುವ ತತ್‌ಕ್ಷಣದ ಪ್ರತಿಕ್ರಿಯೆ ಮಾತ್ರ. ಘಟನೆ ಮುಗಿದು ಹೋಯಿತೋ ಮತ್ತೆ ಮೊದಲಿನ ‘ಯಾಥಾಸ್ಥಿತಿಗೆ’ ಹಿಂತಿರುಗುವುದೇ ಮನುಷ್ಯನ ಸ್ವಭಾವಸಹಜ ಗುಣ. ಇದೇ ವಾಸ್ತವ. ಸತ್ಯಸ್ಥಿತಿ ಹೀಗಿರುವಾಗ ವೈರಾಗ್ಯ ಎಂಬುದನ್ನು ಅದರ ಸಂಪೂರ್ಣ ಅರ್ಥದಲ್ಲಿ ಸಾಧಿಸಲು ಸಾಧ್ಯವೆ? ಖಂಡಿತ ಇಲ್ಲ. ಈ ಕಾರಣಕ್ಕಾಗಿಯೇ ವೈರಾಗ್ಯವೆಂಬುದು ಹುಸಿ ಸಿದ್ಧಾಂತ ಎಂದು ಸ್ಪಷ್ಟವಾಗಿ ಹೇಳುವುದು. ಅದು ತೋರಿಕೆ ಅಥವಾ ನಟನೆ ಮಾತ್ರ. ಇಂಥ ವೈರಾಗ್ಯ ಪೂರ್ಣ ಪ್ರಮಾಣದಲ್ಲಿ ಆಚರಣೆಗೆ ಬಂದದ್ದು ತೀರಾ ವಿರಳ, ಅಥವಾ ಇಲ್ಲವೇ ಇಲ್ಲ.
ವಸ್ತುಸ್ಥಿತಿ ಹೀಗಿರುವಾಗ ವೈರಾಗ್ಯ ಎಂಬುದಕ್ಕೆ ಅರ್ಥವೇ ಇಲ್ಲ ಎನ್ನುವ ವೀರಸಂಗಯ್ಯ ಅದನ್ನು ‘ಆ ತತ್ಕಾಲಕ್ಕೆ ವೈರಾಗ್ಯ ಕ್ಷಣದೊಳು ಯೋಗ್ಯವು’ ಎಂದು ಹೇಳಿ, ಅದು ಒಂದು ಕ್ಷಣಕ್ಕೆ ಪ್ರಕರ್ಷಕ್ಕೆ ಬರುವಂಥದ್ದೇ ಹೊರತು, ಶಾಶ್ವತವಾಗಿ ಇರವಂಥದ್ದಲ್ಲ ಎಂಬ ಸತ್ಯವನ್ನೇ ಸಾರುತ್ತಾನೆ. ಹಾಗಾದರೆ ಇದಕ್ಕೆ ಪರ್ಯಾವವೇನು? ಎಂಬ ಪ್ರಶ್ನೆ ಕೇಳಿದರೆ, ಅದಕ್ಕೂ ಖಚಿತ ಉತ್ತರ ಕೊಡುತ್ತಾನೆ ಆತ- ‘ನೀತಿ-ಭಕ್ತಿ-ವೈರಾಗ್ಯ ಸ್ವರೂಪು ಕಾಣಾ’ ಎಂದು. ಅಂದರೆ ಸಾಧಿಸಲಾಗದ ವೈರಾಗ್ಯದ ನಾಟಕವಾಡುವ ಬದಲು. ಬದುಕನ್ನು ನೀತಿ ಮತ್ತು ಭಕ್ತಿಯ ಮಾರ್ಗದಲ್ಲಿ ನಿರ್ಮಿಸಿಕೊಂಡರೆ ಅದೇ ನಿಜವಾದ ವೈರಾಗ್ಯವೆಂಬುದು ಆತನ ಖಚಿತ ಅಭಿಪ್ರಾಯ. ಮನುಷ್ಯನಿಗೆ ಸಾಧಿಸಲು ಸಾಧ್ಯವಿರುವ ಭಕ್ತಿ ಹಾಗೂ ನೀತಿಯ ಮಾರ್ಗವೇ ನಿಜವಾದ ವೈರಾಗ್ಯ ಎಂದು ಹೇಳುವ ಈ ಕ್ರಮವು ವೈರಾಗ್ಯಕ್ಕೆ ಹೊಸ ಭಾಷ್ಯ ಬರೆದಂತಿದೆ. ಹುಸಿ ಹಾಗೂ ತೋರಿಕೆಯ ಬದುಕಿಗಿಂತ ನೈತಿಕ ಮಾರ್ಗದಲ್ಲಿ ಶ್ರದ್ಧೆಯಿಂದ ಸಾಗುವುದೇ ಶ್ರೇಷ್ಠ ಎಂಬುದು ವಾಸ್ತವವಲ್ಲವೆ? ಹೀಗೆ ಹೇಳುವ ಮೂಲಕ ನಡೆಯಲು ಸಾಧ್ಯವಿರುವ ಪ್ರಾಯೋಗಿಕ ಸತ್ಯದ ಮಾರ್ಗವೊಂದನ್ನು ತೆರೆದು ತೋರಿಸಿದರು ಶರಣರು. ವೈರಾಗ್ಯದ ನಾಟಕ ಆಡುವವವರಿಗೆ ಇದು ಧ್ವನಿಪೂರ್ಣ ವ್ಯಂಗ್ಯ, ಒಳ್ಳೆಯ ಪಾಠ ಮತ್ತು ಪಥ ಕೂಡ.
ವೀರಸಂಗಯ್ಯನ ಈ ಚಿಂತನೆಯಲ್ಲಿ ವೈಚಾರಿಕತೆ ಮತ್ತು ಮನೋವೈಜ್ಞಾನಿಕ ಸತ್ಯ ಎರಡೂ ಸೇರಿವೆ. ನಟನೆಯೇ ಸತ್ಯವೆಂದು ನಂಬಿಸುವ ಹುನ್ನಾರಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ಅವೆಲ್ಲವೂ ಹುಸಿ ಸಿದ್ಧಾಂತಗಳೆಂದು ಖಚಿತಪಡಿಸಿ, ಅವುಗಳನ್ನು ಕಿತ್ತೊಗೆದು, ಪ್ರಯೋಗಸಾಧ್ಯವಾದ ತತ್ವಗಳನ್ನು ಪ್ರತಿಪಾದಿಸಿರುವಲ್ಲಿಯೇ ಶರಣರ ಮಹತ್ವದ ಕ್ರಮ ಮತ್ತು ಸಾಧನೆ ಇದೆ. ವೀರಸಂಗಯ್ಯನ ಪ್ರಸ್ತುತ ವಚನ ಅದಕ್ಕೊಂದು ಸಮರ್ಥ ಸಾಕ್ಷಿ.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು, ಆಕಾಶವಾಣಿ, ಬೆಂಗಳೂರು (ನಿ)
#303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
Public memory is short. Any grave blunder committed by politicians will be remembered only on that day or maximum one or two days. After that everything is forgotten. This Vairagya is fully utilised by the nasty politicians and they commit more and more blunders. about delivery and child birth, on seeing the baby, the mother forgets all her pains. But in olden times, this was not the case, The child birth was considered as a natural process. with modernisation, women are finding it more painful for giving birth to a child.
ನಿತ್ಯ ಬೇಡ ಅಂದ್ರೂ ವಿಕಾರ ವಿಷಯಗಳು ಬೀಳುವ ಈ ಸಮಯದಲ್ಲಿ, ಓದಿ ಮಹಾದಾನಂದವಾಯಿತು ಸರ