
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ,
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ,
ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ,
ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ,
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-120)
ಕನ್ನಡ ಸಾಹಿತ್ಯ ಮತ್ತು ವಚನ ಸಂಸ್ಕೃತಿಯನ್ನು ಬಹು ಎತ್ತರಕ್ಕೆ ಒಯ್ದ ಶರಣ ಬೆಡಗಿನ ಭಾಷೆಯ ಹರಿಕಾರ ಅಲ್ಲಮಪ್ರಭುಗಳಾಗಿದ್ದಾರೆ. ವಚನ ಚಂದ್ರಿಕೆಯಲ್ಲಿ ಇವರ 1612 ವಚನಗಳಿವೆ. ಗುಹೇಶ್ವರ, ಗೊಹೇಶ್ವರ ಅಲ್ಲಮಪ್ರಭುಗಳ ವಚನಾಂಕಿತವಾಗಿದೆ. ಬೆಡಗಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಬಹು ಕಠಿಣವೆಂಬ ಮಾತಿದೆ. ವಚನಗಳಲ್ಲಿ ಬರುವ ರೂಪಕ ಮತ್ತು ಬೆಡಗಿನ ವಿಶಿಷ್ಟ ಧಾರೆಯಾಗಿ ಪ್ರಭುಗಳು ನಮಗೆ ಪರಿಚಯವಾಗುತ್ತಾರೆ.
ಅಲ್ಲಮಪ್ರಭುಗಳ ಸಾಹಿತ್ಯದಲ್ಲಿ ಪಶು ಪಕ್ಷಿ ಪ್ರಾಣಿಗಳ ಕುರಿತು ಸಾಕಷ್ಟು ವಚನಗಳಿವೆ. ಬೆಕ್ಕು ಕುದುರೆ ಕಪ್ಪೆ ತುಂಬಿ ಲೌಕಿಕರಿಗೆ ಸಾಮಾನ್ಯ ಪ್ರಾಣಿ ಪಕ್ಷಿಗಳೆಂದು ಗುರುತಿಸಿದರೂ ಇವುಗಳ ವಿಶಿಷ್ಟ ಗುಣಗಳು ನಮ್ಮನ್ನು ಸೆಳೆಯುತ್ತವೆ. ಮಾನವ ಶರೀರದಲ್ಲಿ ಮೃಗ ಪಕ್ಷಿಯ ಸ್ವಭಾವಗಳು ಸುಪ್ತವಾಗಿರುತ್ತವೆ.
“ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ” ಈ ವಚನದ ಅರ್ಥವನ್ನು ಸರಳವಾಗಿ ಗ್ರಹಿಸಬಹುದು. ಬೆಕ್ಕು ಬೆಡಗಿನ ಭಾಷೆಯಲ್ಲಿ ಪರಿಪೂರ್ಣ ಜ್ಞಾನವನ್ನು ಪಡೆದ ಪ್ರಾಣಿ. ಬೆಕ್ಕನ್ನು ದೇವರಂದು ನಮ್ಮ ಮಾನಸಿಕ ತೊಂದರೆಗಳನ್ನು ದೂರ ಮಾಡುವ ಪ್ರಾಣಿ ಎಂದು ನಂಬಿಕೆ ನಮ್ಮ ಹಿರಿಯರದ್ದು. ಹೀಗಾಗಿ ಶರಣರ ಶರಣತ್ವ ಕೇವಲ ಭಕ್ತಿಯ ನಿಷ್ಠೆಯಾಗದೆ ತನ್ನಲ್ಲಿ ಅಡಗಿರುವ ಇಚ್ಛೆಗಳನ್ನು ದೇವರಿಗೆ ಅರ್ಪಿಸುವ ತಾದಾತ್ಮಕ ಭಕ್ತಿಯ ಅನುಸಂಧಾನವದು. ಹಾಲಿನಷ್ಟು ಪರಿಶುಭ್ರತೆಯನ್ನು ಪಡೆದ ಶರಣನು ಬೆಕ್ಕಾಗಿ ಅಧ್ಯಾತ್ಮದ ವಾಸನೆಯನ್ನು ಗ್ರಹಿಸುವ ವೈಚಾರಿಕತೆ ಅಲ್ಲಮಪ್ರಭುಗಳವರದು. ಅಲ್ಲಮಪ್ರಭುಗಳು ಡಾಂಬಿಕ ಭಕ್ತರನ್ನು ಬೆಕ್ಕಿನಂತೆ ಹಿಡಿಯುತ್ತಾರೆ. ಮುದ್ದಿನ ಬೆಕ್ಕಿಗೆ ಜ್ಞಾನದ ಪರಿಶುಭ್ರತೆಯ ಹಾಲನ್ನು ನೀಡಿ ಪ್ರೀತಿಸಿದ್ದಾರೆ. ಹೀಗಾಗಿ ದೇವರೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವದು ಅಲ್ಲಮಪ್ರಭುಗಳಲ್ಲಿ ಹಾಲಿನ ನೇಮವಾಗಿ ಕಾಡಿದೆ. ನೇಮವ ಹಿಡಿದಾತನು ಆಧ್ಯಾತ್ಮದ ಶಕ್ತಿಯನ್ನು ಪಡೆಯಲು ಸಾಧ್ಯ. ವಚನದ ಶಕ್ತಿ ಇರುವುದು ನೇಮದ ಅರ್ಥದಲ್ಲಿ ಅಲ್ಲ. ಪ್ರಾಣಿ ಮತ್ತು ನೇಮ ಬೇರೆ ಬೇರೆ ಶಬ್ದಗಳಾದರೂ ವ್ರತದ ಬಂಧವು ಆಧ್ಯಾತ್ಮದಲ್ಲಿ ಒಂದಾಗಲು ಸಾಧ್ಯವೆಂದು ಅಲ್ಲಪ್ರಭುಗಳ ಸಮರ್ಥನೆಯಾಗಿದೆ.
“ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ” ಅಲ್ಲಮ ಪ್ರಭುಗಳ ಭಾಷೆ ಇಲ್ಲಿ ಸೀಮಿತವಾಗಿ ಕಂಡರೂ ವಚನದ ಶಬ್ದಗಳು ಅನೇಕ ಅರ್ಥಗಳನ್ನು ಮುಂದೆ ಮಾಡುತ್ತವೆ. ಆಧ್ಯಾತ್ಮಿಕವಾಗಿ ಕಡಲೆ ಕುದುರೆ ಜ್ಞಾನದ ಪಕ್ವತೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುದುರೆ ಶಕ್ತಿಯ ವೇಗ ಮನುಷ್ಯನ ಪ್ರಗತಿಗೂ ಕಾರಣ. ಇಲ್ಲಿ ಗುಹೇಶ್ವರ ರಾಜನೂ ಅಲ್ಲ ಕ್ಷತ್ರಿಯನೂ ಅಲ್ಲ. ಆತ ಭಾವ ಲಿಂಗ. ಹೀಗಾಗಿ ಗುಹೇಶ್ವರನೆಂಬ ಕುದುರೆ ಪೃಥ್ವಿಯ ಒಡೆಯ. ಅಶ್ವಶಕ್ತಿಯನ್ನು ಪಡೆದ ಆಧ್ಯಾತ್ಮದ ಕುದುರೆ ಕಡಲೆಯ ನಿಯಮವನ್ನು ಸ್ವೀಕರಿಸಿ ನೈತಿಕ ಪರಿಶುದ್ಧತೆಯನ್ನು ನಮ್ಮದಾಗಿಸಿಕೊಳ್ಳುತ್ತದೆ. ಗುಹೇಶ್ವರನಿಗೆ ಮಾನಸಿಕ ಕುದುರೆಯಾಗಿ ಕಂಡು ಬರುವ ಭೌತಿಕ ರೂಪಕಗಳಾಗಿವೆ.
“ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ” ಕರಸ್ಥಲದ ಲಿಂಗ ಪೂಜೆಗೆ ಅಗ್ಘವಣಿ, ಪತ್ರೆ, ಪುಷ್ಪ ಆಧ್ಯಾತ್ಮಿಕ ಸೌಂದರ್ಯದ ಪೂಜೆಯನ್ನು ಹೆಚ್ಚಿಸುತ್ತದೆ. ಅಗ್ಗವಣಿ ಎಂದರೆ ಪವಿತ್ರವಾದ ಜಲ. ಶರಣರು ಜಲವನ್ನು ಜೀವನದ ಅಗತ್ಯತೆಗಳಿಗೆ ಹೋಲಿಸದೆ ಅದರಲ್ಲಿ ದೈವೀಶಕ್ತಿಯ ಪಾದೋದಕವಾಗಿ ಕರುಣ ಜಲವಾಗಿ ಕಂಡರು. ಅಗ್ಘವಣಿ ಎಂದರೆ ಮನುಷ್ಯನ ಸೂಕ್ಷ್ಮ ಮನಸ್ಸಿನ ಶಿವ. ನಿರಾಕಾರ ಶಿವನಿಗೆ ಅಭಿಷೇಕ ಮಾಡಲು ಸರಳವಾದ ಅಗಘವಣಿ, ಪತ್ರೆ ಪುಷ್ಪಗಳು ಬೇಕು. ಷೋಢಷೋಪಚಾರಗಳಲ್ಲಿ ಜಲಾಭಿಷೇಕವೂ ಒಂದು. ಅರಿವಿನ ಬೆಳಕಿನಲ್ಲಿ ಗುಹೇಶ್ವರನನ್ನು ಕಾಣುವ ತೀವ್ರತೆ ಒಂದೆಡೆ. ಶರಣರು ಪೂಜಾ ಪರಿಕ್ರಮದ ನೈತಿಕ ನಿಯಮಗಳನ್ನು ವಿಶಾಲವಾಗಿಸಿದರು. ಅಗ್ಘವಣಿ ನೀರು ಹೌದು. ಪ್ರಾಣ ಸ್ಪರ್ಶದ ಚಂಚಲ ಮನಸ್ಸು ಅದು. ನೀರೆಂಬ ಮನದಲ್ಲಿ ಕಪ್ಪೆ ವಾಸವಾಗಿದೆ. ಕಲ್ಮಶದಿಂದ ಕೂಡಿದ ಈ ಮನದಲ್ಲಿ ಕ್ರಿಮಿ-ಕೀಟಗಳನ್ನು ತಿನ್ನುವ ಕಪ್ಪೆ ಅಂತರಂಗದ ಮನಸ್ಸನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತದೆ. ಅಲ್ಲಮರ ಪ್ರಕಾರ ಕಪ್ಪೆ ಶಾಂತಿಯ ಸಂಕೇತ. ಗುಹೇಶ್ವರನೆಂಬ ಶರಣ ದೇವನಾಗಲು ಸಾಧ್ಯ. ಶರಣಾಗಲು ಸಾಧ್ಯ. ಶರಣರಲ್ಲಿ ಮನಸ್ಸು ಸುಖದ ಸಾಕ್ಷಾತ್ಕಾರಕ್ಕೆ ಒಂದು ಸಾಧನೆ ಮಾತ್ರ.
ಅಲ್ಲಮರಲ್ಲಿ ವಿಶೇಷವಾಗಿ ಆಕರ್ಷಣೆಗೆ ಒಳಗಗಾದದ್ದು ಪ್ರಾಣಿ-ಪಕ್ಷಿಗಳ ಪ್ರತಿಮೆಗಳಾಗಿವೆ. ಹೀಗಾಗಿ ಅವರ ವಚನಗಳು ಓದುಗರಿಗೆ ಮುಕ್ತ ಚರ್ಚೆಗೆ ಪ್ರೇರೇಪಿಸುತ್ತವೆ.
“ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ“ ಸ್ವಾನುಭಾವವೆಂಬ ವಾಸನೆ ಗ್ರಹಿಸಿದ ಮನವೆಂಬ ತುಂಬಿ ಹೃದಯ ಕಮಲದ ಹೂವಿನಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಳ್ಳುತ್ತದೆ. ಹೃದಯಾಕಾಶದಲ್ಲಿರುವ ಕಮಲವೆಂಬ ನಂಬಿಕೆ ಹೃದಯ ಕಮಲದಲ್ಲಿ ಗುಹೇಶ್ವರನ ಸ್ಥಾನವಾಗಿರುತ್ತದೆ. ಇಲ್ಲಿ ಪುಷ್ಪದ ನೇಮವು ತನು ಮತ್ತು ಮನದಲ್ಲಿ ಏಕವಾಗಿರಬೇಕು. ನೇಮಗಳಿಗಿಂತ ನಮ್ಮ ಆತ್ಮ ಮತ್ತು ಮನಸ್ಸು ಶುದ್ಧವಾಗಿರಬೇಕು. ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ನೇಮಗಳನ್ನು ಶರಣರು ವಿಬಿಡಂಬಿಸಿದ್ದಾರೆ. ಶರಣರ ಪ್ರಕಾರ ವ್ರತ ನೇಮವೆಂದರೆ ಪೂಜೆ ಪುನಸ್ಕಾರಗಳಲ್ಲ. ಆದಯ್ಯನವರ ವಚನದಂತೆ “ಜಪ ತಪ ನೇಮವಲ್ಲ. ಮಂತ್ರ ತಂತ್ರ ನೇಮವಲ್ಲ. ಪರಧನ ಪರಸ್ತ್ರೀ ಪರದೈವ0ಗಳಿಗೆ ಎರಗದಿರುವುದೇ ನೇಮ. ಸೌರಾಷ್ಟ್ರ ಸೋಮೇಶ್ವರ ಲಿಂಗವಲ್ಲಿದ್ದ ಕಾರಣ ಅದು ನಿತ್ಯ ನೇಮ”. ಹೀಗಾಗಿ ಈ ವಚನದಲ್ಲಿರುವಂತೆ ಇವು ಷಡುಸ್ಥಲಕ್ಕೆ ಹೊರಗು. ನಿಜ ಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರ. ಶರಣ ಧರ್ಮದಲ್ಲಿ ನಮ್ಮ ನಡೆ ನುಡಿಗಳು ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೆ ಷಟ್‌ಸ್ಥಲಗಳು. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯಸ್ಥಲಗಳು. ಮನಃಶಾಸ್ತ್ರೀಯ ಅರ್ಥವನ್ನು ವಿಶಿಷ್ಟವಾಗಿ ನೀಡಿದ್ದಾರೆ. ಈ ಜಗತ್ತು ಯಾವುದರಲ್ಲಿ ಹುಟ್ಟಿ ಯಾವುದರಲ್ಲಿ ಲಯವಾಗುತ್ತೊ ಏಕಾಮೇವಾದ್ವಿತೀಯವಾದ ಪರಶಿವನ ಜ್ಞಾನಕ್ಕೆ ಸ್ಥಲವೆಂದು ಹೇಳಲಾಗಿದೆ. ನಮ್ಮ ನಡೆ ನುಡಿಯಲ್ಲಿ ಶ್ರದ್ದಾ ಭಕ್ತಿ ನಿಶ್ಯಬ್ದವಾಗಿ ಸುಪ್ತವಾಗುರುತ್ತದೆ. ಹೂವಿನ ಪರಿಮಳದಂತೆ ಈ ಕಾಯವನ್ನು ಆವರಿಸಿರುತ್ತದೆ. ನಡೆ-ನುಡಿ ಆಚಾರಗಳು ಭಕ್ತ ಮಹೇಶ್ವರ ಸ್ಥಾನಗಳನ್ನು ಒಪ್ಪಿಕೊಳ್ಳಬೇಕು. ನೇಮದ ಮೂಲಕ ನಾನು ಪಡೆದೆ ಎಂಬ ವಾಸ್ತವತೆ ಇಲ್ಲಿ ಇಲ್ಲ. ಅಹಂ ಇಲ್ಲವೇ ಇಲ್ಲ. ಷಟ್‌ಸ್ಥಲಗಳು ಭಕ್ತನ ಮನ ಮುಟ್ಟಬೇಕು. ಮಹೇಶ್ವರನಿಗೆ ಅರ್ಪಿತವಾಗಬೇಕು. ನಿಜ ಭಕ್ತಿ ಇಲ್ಲದವರು ಷಟ್‌ಸ್ಥಲಕ್ಕೆ ದೂರವೆಂಬ ಕಠೋರ ಪ್ರಜ್ಞಾಭಕ್ತಿಯಾಗಿದೆ.
ಅಲ್ಲಮಪ್ರಭುಗಳ ವಚನಗಳಲ್ಲಿ ಕಂಡುಬರುವ ಪ್ರಾಣಿ-ಪಕ್ಷಿಗಳ ಕುರಿತು ಬೆಡಗು ನಮ್ಮ ಪೂರ್ವಿಕರಿಂದ ಬಂದಂಥಹ ಮೌಖಿಕ ಜಾನಪದ ದೃಷ್ಟಾಂತಗಳಾಗಿವೆ. ನಮ್ಮ ಜನಪದರು ಮನುಷ್ಯನ ಸುಗುಣ ಮತ್ತು ದುರ್ಗುಣಗಳನ್ನು ಮೃಗ-ಪಕ್ಷಿಗಳಿಗೆ ಹೋಲಿಸಿ ಕಥೆ ಹೇಳುವುದು ಹಾಡನ್ನು ಹಾಡುವುದು ಇವೆಲ್ಲ ವಚನ ಸಾಹಿತ್ಯದಲ್ಲಿ ಪ್ರೇರಣೆ ಪಡೆದುಕೊಂಡವುಗಳಾಗಿವೆ. ಈ ವಚನಗಳು ಕಥಾ ಹಂದರದ ಪ್ರೇರಣಾ ಭಿತ್ತಿ ಎನಿಸಿದರೂ ಅಧ್ಯಾತ್ಮದ ಸುಖವಿರುತ್ತದೆ. ವಾಸ್ತವ ಮತ್ತು ಭ್ರಮೆಗಳ ನಡುವಿನ ಅಂತರ ಹೋಗಲಾಡಿಸಲು ಪಶು-ಪಕ್ಷಿ-ಪ್ರಾಣಿಗಳು ಪ್ರಧಾನವಾಗುತ್ತವೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ,
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in
![]()





Total views : 51410