ವ್ಯೋಮಕಾಯ ಅಲ್ಲಮ ಪ್ರಭುಗಳ “ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ” ವಚನ ವಿಶ್ಲೇಷಣೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ,
ಮೇದು ಬಂದೆನೆಂದಡೆ,
ಇದ ಕಂಡು ಬೆರಗಾದೆ.
ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದರೆ,
ಇದ ಕಂಡು ಬೆರಗಾದೆ.
ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ,
ಇದ ಕಂಡು ಬೆರಗಾದೆ, ಗುಹೇಶ್ವರಾ
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-14/ವಚನ ಸಂಖ್ಯೆ-27)

ಅಲ್ಲಮಪ್ರಭುಗಳ ಈ ಬೆಡಗಿನ ವಚನ ಮನುಷ್ಯ ಸ್ವಭಾವದ ಒಳ ಸೂಕ್ಷ್ಮತೆಗಳನ್ನು ಸ್ವಾರಸ್ಯಕರ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಅಜ್ಞಾನದಲ್ಲಿ ಓಲಾಡುವ ಮನಸ್ಸಿಗೆ ಎಚ್ಚರಿಕೆ ಕೊಡುವ ಸಮರ್ಥನೆಯಾಗಿದೆ. ಆಧ್ಯಾತ್ಮದ ಬೆಳಕನ್ನು ಉಜ್ವಲಗೊಳಿಸುವ ಸಮರ್ಥನೆಯದು. ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಆ ಕಾಲದ ತಾತ್ವಿಕ ಪರಂಪರೆಗಳ ಅಸ್ತಿತ್ವ ಮತ್ತು ಅನಿರೀಕ್ಷಿತವಾದ ನಿಗೂಢತೆ ಬೆಡಗಿನ ವಚನ ಭಾಷೆಯ ಜೀವಾಳವಾಗಿದೆ.

ಪ್ರಾಣಿ, ಪಕ್ಷಿ, ಮೃಗದ ಸ್ವಭಾವಗಳು ಮನುಷ್ಯನ ದೇಹದಲ್ಲಿ ಸುಪ್ತವಾಗಿರುತ್ತವೆ ಎಂದು ಯೋಗಶಾಸ್ತ್ರದ ಅದ್ಯಯನಕಾರರು ಇದನ್ನು ಒಪ್ಪಿದ್ದಾರೆ. ದೇಹದ ಮೃಗೀಯ ಮನಸ್ಸಿನ ಆವರಣ ಶಕ್ತಿಯ ಪ್ರತಿಕ್ರಿಯೆ ಹೀಗಿದೆ.

ಹುಲಿ ಜಿಂಕೆಯನ್ನು ಬೇಟೆಯಾಡುವ ಪ್ರಾಣಿ. ಮನುಷ್ಯ ಸ್ವಭಾವದ ಹುಲಿ ಎಂಬ ವ್ಯಾಘ್ರನು ಕ್ರೂರಿ. ಬೇಟೆಗೆ ಹೊಂಚು ಹಾಕುವ ನಿರಂಕುಶ ಮನಸ್ಸುಳ್ಳವನು. ಸೌಮ್ಯ ಸ್ವಭಾವದ ಹರಿಣಿಯಂತಹ ಮನುಷ್ಯ ಪ್ರಾಣಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವನು. ದ್ವೇಷ ಅಸೂಯೆ ಅಹಂಗಳು ಈ ಶರೀರದಲ್ಲಿ ವಾಸವಾಗಿರುವಾಗ ಮನುಷ್ಯ ಹುಲಿಯಂತೆ ವರ್ತಿಸುವನು. ಪಂಚೇಂದ್ರಿಯಗಳ ಮೂಲಕ ಬಾಹ್ಯ ಸಂವೇದನೆಗಳು ಸವಾರಿ ಮಾಡುವ ದ್ವೇಷ, ಅಸೂಯೆಅಹಂಗಳು ಹುಲಿಯ ಸ್ವಭಾವದ ಕ್ರೂರತ್ವವನ್ನು ತೋರಿಸುತ್ತವೆ. ಆದರೆ, ಹುಲಿ ಮತ್ತು ಹುಲ್ಲೆಗಳು ಮನಸ್ಸನ್ನು ಕಾಡುವ ಚಂಚಲ ಪ್ರಾಣಿಗಳು. ಪಂಚೇಂದ್ರಿಯಗಳೇ ಮುಖ್ಯವಾಗಿರುವ ಈ ಶರೀರದಲ್ಲಿ ಹುಲಿ ಹೊಂಚು ಹಾಕಿ ಕಾಯುವುದು. ಹುಲ್ಲೆ ಮಾಯಾ ಜಿಂಕೆಯಾದರೂ ಶ್ರವಣ ಮತ್ತು ಘ್ರಾಣ ಶಕ್ತಿಯ ತೀಕ್ಷ್ಣತೆಯನ್ನು ಹೊಂದಿದ ಪ್ರಾಣಿಯಾಗಿದೆ.

ಆದರೆ ಹುಲಿ ಬಲಿಷ್ಠವಾದರೂ ತೀಕ್ಷ್ಣ ಜಾಣನಾದ ಹುಲ್ಲೆ ಎಂಬ ಮನುಷ್ಯನ ಸ್ವಭಾವಕ್ಕೆ ಶರಣಾಗಲೇಬೇಕು. ತತ್ವಪದಕಾರರಾದ ಶಿಶುನಾಳ ಶರೀಫರು “ಕೋಡಗನ ಕೋಳಿ ನುಂಗಿತ್ತಾ ನೋಡವ್ವಾ ತಂಗಿಕೋತಿ ಎಂಬ ಚಂಚಲ ಮನಸ್ಸನ್ನು ಕೋಳಿ ಎಂಬ ಜ್ಞಾನವನ್ನು ನುಂಗಿತ್ತು. “ಹುಲಿಯ ಬೆನ್ನಲ್ಲಿ ಹುಲ್ಲೆ ಹೋಗಿ ಮೇದು ಬಂದರೆ ಇದ ಕಂಡು ಬೆರಗಾದೆಎಂಬ ಅಲ್ಲಮ ಪ್ರಭುಗಳ ಪ್ರಸ್ತುತ ವಚನದ ಸಾಲು ಇದನ್ನೇ ನೆನಪಿಸುತ್ತದೆ. ಅಜ್ಞಾನ, ಅಹಂ, ಭ್ರಾಂತಿ ಹೊಂದಿದ ಪಂಚೇಂದ್ರಿಯಗಳ ಳಗೆ ಹುಲಿಯೂ ಇದೆ, ಹುಲ್ಲೆಯೂ ಇದೆ. ತಾಳ್ಮೆ ಮತ್ತು ಸಹನೆಯುಳ್ಳ ಜಿಂಕೆ ವಿಜಯ ಸಾಧಿಸುವುದು. ಈ ದೇಹದ ಮೃಗೀಯ ಸ್ವಭಾವದ ಪ್ರಾಣಿ ರೂಪಕಗಳನ್ನು ಬಳಸುವ, ಧ್ಯಾನಿಸುವ ಮತ್ತು ನಮ್ಮನ್ನು ಚಿಂತನೆಗೆ ತೊಡಗಿಸಿಕೊಳ್ಳುವತ್ತ ಪ್ರಯತ್ನ ಅಲ್ಲಮ ಪ್ರಭುಗಳದ್ದಾಗಿದೆ.

ಮನುಷ್ಯ ಸ್ವಾರ್ಥಿಯಾದಾಗ ಸಿಟ್ಟು ಬರುತ್ತದೆ. ಜಗತ್ತು ತನ್ನಂತೆ ಇರಬೇಕೆಂಬ ಹುಂಬತನ. ಹಾಗೆ ನಿರೀಕ್ಷೆ ಮಾಡುತ್ತಾನೆ. ತನ್ನಂತೆ ಆಗದೆ ಇದ್ದಾಗ ಕ್ರೂರಿಯಾಗಿ ವರ್ತಿಸುತ್ತಾನೆ. ಕ್ರೌರ್ಯದ ಮನಸ್ಥಿತಿಯಲ್ಲಿ ಮನುಷ್ಯತ್ವ ಮರೆಯಾಗುತ್ತದೆ. “ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈಯ್ದು ಬಂದೆನೆಂದರೆ ಅದ ಕಂಡು ಬೆರಗಾದೆ”. ಮನುಷ್ಯನ ಮನಃಶಾಂತಿಯನ್ನು ಕದಡುವ  ಅರಿಷಡ್ವರ್ಗಗಳು ಕಾಯವೆಂಬ ಅಡವಿಯಲ್ಲಿ ವಾಸವಾಗಿವೆ. ಆರೂ ಗುಣಗಳನ್ನು ಗೆದ್ದವನು ಮೂರು ಲೋಕವ ಗೆದ್ದಂತೆ. ಭೋಗದ ಆಶೆಯನ್ನು ಇಟ್ಟುಕೊಳ್ಳದೆ ಗುಹೇಶ್ವರನ ಲಿಂಗದ ಮೊರೆ ಹೊಕ್ಕವನು ಅನುಭಾವಿಯಾದವನು ರಕ್ಕಸಿಯ ಮನೆಯಲ್ಲಿ ನಿದ್ರೆಮಾಡಲು ಸಾದ್ಯ. ನ್ನ ನಿದ್ರೆಯನ್ನು ಅನುಭವಿಸುವ ಚಾತುರ್ಯ ಉಳ್ಳವನು ಅನುಭಾವಿಯಾಗಿರುತ್ತಾನೆ. ಸತ್ವ, ರಜ, ತಮೋಗುಣಗಳು ನಿರ್ಮಲ ಮತ್ತು ಪ್ರಕಾಶಗುಣಗಳನ್ನು ಹೊಂದಿದವನು ರಕ್ಕಸಿಯನ್ನು ಗೆಲ್ಲಲು ಮಾತ್ರ ಸಾದ್ಯವಾಗುವುದು.

ಜವನ ಸತ್ತವರಿಗೆ ಮರಳಿ ಜೀವವನ್ನು ಪ್ರಾಣವನ್ನು ಕೊಡುವ ಸಸ್ಯ ಸಾವಿನ ಕದ ತಟ್ಟಿದರೂ ಬದುಕಿ ಚೈತನ್ಯವನ್ನು ಕೊಟ್ಟ ಜವನವು ಪ್ರಾಣ ದಾನದ ಶಕ್ತಿ ಹೊಂದಿದೆ. “ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದರೆ ಇದ ಕಂಡು ಬೆರಗಾದೆ”. ಅಲ್ಲಮ ಪ್ರಭುಗಳು ಬೆಡಗಿನ ತತ್ವದಲ್ಲಿ ಈ ಕಾಯಕ್ಕೆ ವಿಶೇಷ ಸ್ಥಾನವನ್ನು ನೀಡುತ್ತಾರೆ. ಹುಲ್ಲೆ ಇಲ್ಲದಿದ್ದರು ಹುಲಿ ಇಲ್ಲ. ಪಿಂಡಾಂಡದಲ್ಲಿ ಹರಿಣಿಯ ನಡಿಗೆ ಇದೆ ಎಂದಾದರೆ ಅದು ಸಾವಿನ ಸೂಚನೆಯೂ ಹೌದು. ನಮ್ಮ ಅರಿವೆಗೆ ದಕ್ಕುವ ಸೂಕ್ಷ್ಮವಾಗಿ ಸ್ವೀಕರಿಸುವ, ನಿರಾಕರಿಸುವ ಹುಲಿ ಹುಲ್ಲೆ ಭಾವ ನಮ್ಮದಾಗಿದೆ.

ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್‌ ಸಂ. 94499 46839.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in

Loading

Leave a Reply