ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನಗಳಲ್ಲಿ ಬಸವ ದರ್ಶನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಯಾಣವೆಂಬ ಪ್ರಣತೆಯಲ್ಲಿ
ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ
ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ
ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ
ಸಂಗನಬಸವಣ್ಣನ ಮಹಿಮೆಯ ನೋಡಾ
ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059)

ಲೋಕ ಸಂಚಾರ ಮಾಡುತ್ತ ಶಿವಯೋಗಿ ಸಿದ್ಧರಾಮರೊಡಗೂಡಿ ಕಲ್ಯಾಣಕ್ಕೆ ಪುರ ಪ್ರವೇಶ ಮಾಡಿ ಮಹಾಮನೆಯತ್ತ ಬಂದಾಗ, ನೂರಾರು ಶಿವ ಶರಣ-ಶರಣೆಯರು ಹಣೆಯಲ್ಲಿ ಭಸ್ಮ, ಕೊರಳಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಮಾಲೆ, ಶುಭ್ರ ವಸ್ತ್ರ ಧರಿಸಿ ಮಹಾಮನೆಯತ್ತ ಸಾಗುತ್ತಿದ್ದರು. ಈ ದೃಶ್ಯಗಳನ್ನು ನೋಡಿದ ಅಲ್ಲಮರು ಮೇಲಿನಂತೆ ಉದ್ಗರಿಸುತ್ತಾ ಕಲ್ಯಾಣದ ಚಿತ್ರಣವನ್ನು ನೀಡುತ್ತಾರೆ.

ಮಹಾಮನೆಯ ಬಾಗಿಲಿಗೆ ಬರುತ್ತಿದ್ದಂತೆ ಪ್ರತಿ ದಿನ ಶರಣರನ್ನು ಬರಮಾಡಿಕೊಳ್ಳುತ್ತಿದ್ದ ಹಡಪದ ಅಪ್ಪಣ್ಣನವರು ದಿವ್ಯ ತೇಜಸ್ಸಿನಿಂದ ಬೆಳಗುತ್ತಿದ್ದ ಶರಣ ಜಂಗಮರನ್ನು ಭಕ್ತಿಯಿಂದ ಸ್ವಾಗತಿಸುತ್ತಾರೆ. ಆಗ ಪ್ರಭುಗಳು ಅಪ್ಪಣ್ಣನವರಿಗೆ ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವದು ಮನೆಯ ಒಡೆಯದ ಕರ್ತವ್ಯ. ಅವರಿಗೆ ಬರಲು ಹೇಳು ಎಂದಾಗ ಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದ ಬಸವಣ್ಣನವರು ಈ ಮಹಾಮನೆಗೆ ಶರಣರೇ ಒಡೆಯರು. ತಮ್ಮ ಮನೆಗೆ ಬರಲು ಬೇರೆಯವರ ಅಪ್ಪಣೆ ಏಕೆ ಎಂದು ಹೇಳಿ ಒಳಗೆ ಕರೆದು ತನ್ನಿ ಎಂದು ಅಪ್ಪಣ್ಣನವರಿಗೆ ಕರೆಯಲು ಕಳಿಸುತ್ತಾರೆ. ಆ ಹೊತ್ತಿಗೆ ಅಲ್ಲಿಗೆ ಬಂದ ಚೆನ್ನಬಸವಣ್ಣನವರು “ಬಸವಣ್ಣ ನಮ್ಮ ಮಹಾಮನೆಗೆ ಆಗಮಿಸಿದವರು ಮಹಾಮಹಿಮ ಅಲ್ಲಮ ಪ್ರಭುದೇವರು ಮತ್ತು ಶಿವಯೋಗಿ ಸಿದ್ಧರಾಮರು ಅಂತ ಹೇಳುತ್ತಾರೆ. ಅಲ್ಲಮರ ವೈರಾಗ್ಯ ಮತ್ತು ಸಿದ್ಧರಾಮರ ಯೋಗ ಸಿದ್ಧಿಯನ್ನು ಅದಾಗಲೇ ಕೇಳಿ ಬಲ್ಲವರಾಗಿದ್ದ ಬಸವಣ್ಣನವರು ಅವರ ಹೆಸರು ಕೇಳುತ್ತಲೇ ಭಕ್ತಿ ಕಂಪಿತರಾಗಿ

ಇನ್ನೇವೆನಿನ್ನೇವೆ ಕೆಮ್ಮನೆ ಕೆಟ್ಟೆನು,
ಇನ್ನೇವೆನಿನ್ನೇವೆ ಕೆಮ್ಮನೆ ಕೆಟ್ಟೆನು.
ನಿಮ್ಮ ಶರಣರು ಬಂದು ಬಾಗಿಲೊಳಿರಲು,
ದಿಮ್ಮನೆ ಇದಿರೆದ್ದು ವಂದಿಸಲರಿಯದೆ
ಕೆಟ್ಟ ಕೇಡನೇನೆಂದುಪಮಿಸುವೆನು.
ಕೂಡಲಸಂಗಮದೇವಾ,
ನಾನುಭಯಭ್ರಷ್ಟನೆಂಬುದು ಎನಗಿಂದರಿಯಬಂದಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-308/ವಚನ ಸಂಖ್ಯೆ-1060)

ನಾನು ಉಭಯ ಭ್ರಷ್ಟನೆಂದು ಎನಗಿಂದು ಅರಿಯಬಂದಿತ್ತು ಎನ್ನುತ್ತ ಬಾಗಿಲಿಗೆ ಬಂದು ತಾವು ಮಾಡಿದ ಮಹಾ ಪ್ರಮಾದಕ್ಕೆ ನೊಂದುಕೊಳ್ಳುತ್ತಾರೆ. ಬಾಗಿಲಿಗೆ ಬಂದು ಗೌರವ ಪೂರ್ವಕವಾಗಿ ಬರಮಾಡಿಕೊಂಡ ಬಸವಣ್ಣನವರಿಗೆ ಲಿಂಗಪೂಜೆಗಿಂತ ಜಂಗಮ ಪೂಜೆ ಅಂದರೆ ಸಮಾಜದ ಸೇವೆ ದೊಡ್ಡದೆಂದು ಅರಿವು ಮೂಡಿಸುತ್ತಾರೆ ಅಲ್ಲಮರು.

ಲಿಂಗದೊಳಗೆ ಜಂಗಮ,
ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು
ಬರುದೊರೆವೋದವರು,
ಜಂಗಮವನಿನ್ನು ಬೇರೆ ಅರಸಲೇಕಯ್ಯಾ?
ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು.
ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ
ಲಿಂಗಾರ್ಚನೆಯ ಮಾದು,
ಜಂಗಮಕ್ಕೆ ಇದಿರೆದ್ದು ವಂದಿಸಿ
ಭಕ್ತಿಯ ಮಾಡಬಲ್ಲಾತನೆ ಭಕ್ತ.
ಆ ಜಂಗಮ ಹೊರಗಿರಲು
ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ?
ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡು
ಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ
ಭೃತ್ಯಾಚಾರದ್ರೋಹನು.
ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ.
ನಮ್ಮ ಗುಹೇಶ್ವರನ ಶರಣರ ಕೂಡ
ಅಹಂಕಾರವ ಹೊತ್ತಿಪ್ಪವರ ಕಂಡಡೆ
ನಾನೊಲ್ಲೆ ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-563/ವಚನ ಸಂಖ್ಯೆ-1478)

ಬಸವಣ್ಣನ ಭಕ್ತಿಯ ನಿಲುವ ನಾನು ಅರಿಯದವನೇನಲ್ಲ ಲೋಕವೆಲ್ಲ ತನು-ಮನ-ಧನಗಳನ್ನು ಗೆಲ್ಲಲರಿಯದೆ ಭ್ರಮೆಗೊಂಡು ಬಳಲುತ್ತಿರುವಾಗ ಮನವನ್ನು ಲಿಂಗಧ್ಯಾನದಲ್ಲಿ, ತನುವನ್ನು ದಾಸೋಹದಲ್ಲಿ, ಧನವನ್ನು ಜಂಗಮದಲ್ಲಿ ಸವೆಸಿದ ಬಸವನಿಗೆ ಶರಣು ಎನ್ನುತ್ತ ಬಸವಣ್ಣನವರನ್ನು ಎದೆಗಪ್ಪಿಕೊಳ್ಳುತ್ತಾರೆ. ಈ ರೀತಿ ಎರಡು ಮಹಾನ್ ಚೇತನಗಳು ಜಗತ್ ಕಲ್ಯಾಣಕ್ಕಾಗಿ ಒಂದುಗೂಡುತ್ತಾರೆ. ಈ ಅಪೂರ್ವ ಸಂಗಮ ಮಹಾ ಮನೆಯ ಶರಣರೆಲ್ಲರು ಧನ್ಯತೆಯಲ್ಲಿ ಪರಾಕಾಷ್ಟೆಯಲ್ಲಿ ಮಿಂದೇಳುತ್ತಾರೆ.

ಅನುಭವ ಮಂಟಪದಲ್ಲಿ ತಮ್ಮ ಮಾತುಗಳಿಂದ ವಚನಗಳಿಂದ ಶರಣರಿಗೆ ಅರಿವಿಲ್ಲದಂತೆ ಅವರನ್ನು ಇಷ್ಟಲಿಂಗ ಪೂಜೆಯಿಂದ ಪ್ರಾಣಲಿಂಗ ಪೂಜೆಯತ್ತ ಕರೆದೊಯ್ಯುತ್ತಿದೆ. ಸಾಕಾರದಿಂದ ನಿರಾಕಾರದೆಡೆಗೆ ಸಾಗುತ್ತಿದ್ದ ಅಲ್ಲಮರನ್ನು ಕಂಡು ಬಸವ-ಚೆನ್ನಬಸವರು ಮೂಕ ವಿಸ್ಮಿತರಾದರು. ಎಲ್ಲವನ್ನೂ ಇಲ್ಲಗೊಳಿಸುತ್ತ ಶೂನ್ಯ ಸಂಪಾದನೆಯ ಮಾರ್ಗ ತೋರಿದ ಅಲ್ಲಮರನ್ನು ಶೂನ್ಯ ಪೀಠದ ಅಧಿಪತಿಗಳನ್ನಾಗಲು ಭಿನ್ನವಿಸಿಕೊಳ್ಳುತ್ತಾರೆ. ಎಲ್ಲರ ಬಯಕೆಯಂತೆ ಅಲ್ಲಮರು ಶೂನ್ಯ ಪೀಠಾಧಿಶರಾಗಿ ಅನುಭವ ಮಂಟಪ ಅಧಿಪತಿಗಳಾಗುತ್ತಾರೆ.

ಬಸವಣ್ಣನವರ ಘನವೆತ್ತ ವ್ಯಕ್ತಿತ್ವವನ್ನು ಅವರ ಸಮಕಾಲೀನ ಶರಣರೆಲ್ಲರೂ ತಮ್ಮ ವಚನಗಳಲ್ಲಿ ಸ್ತುತಿಸಿದ್ದಾರೆ. ಒಬ್ಬ ವ್ಯಕ್ತಿ ಸಮಾನ್ಯವಾಗಿ ಕಾಲವಾದ ಮೇಲೆ ಆತ ದೈವತ್ವಕ್ಕೇರುವ ದೃಷ್ಟಾಂತಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಬಸವಣ್ಣನವರು ಕಲ್ಯಾಣದಲ್ಲಿ ಸಾಮುದಾಯಿಕ ಪ್ರಜ್ಞೆಯಿಂದ ಮತ್ತು ಪ್ರಜಾಸತ್ತಾತ್ಮಕ ಆಶಯಗಳೊಂದಿಗೆ ಒಂದು ಸದೃಢ ಸಂಘಟನಾತ್ಮಕ ಚಳುವಳಿಯನ್ನು ಹುಟ್ಟುಹಾಕಿದವರು. ಅವರ ಸಮಕಾಲೀನ ಶರಣರು ಅದರಲ್ಲೂ ಅಲ್ಲಮ ಪ್ರಭುಗಳು ಬಸವಣ್ಣನವರ ಬಗ್ಗೆ ಇರಿಸಿಕೊಂಡಿದ್ದ ಭರವಸೆ ವಿಶ್ವಾಸಗಳು ಅವರ ಅನೇಕ ವಚನಗಳಲ್ಲಿ ಮಾರ್ದನಿಸಿವೆ.

ಯಾವುದೇ ಫಲಾಪೇಕ್ಷೆ ಇಲ್ಲದೇನೆ ತಮ್ಮೊಡನಿರುವ ಜೀವಪರ ಚಿಂತಕ ಮತ್ತು ಮಹಾನ್ ದಾರ್ಶನಿಕ ವ್ಯಕ್ತಿತ್ವವನ್ನು ಅವರ ಸಮಕಾಲೀನರು ಎತ್ತಿ ಹಿಡಿಯುವುದು ಅತ್ಯಂತ ಅಪರೂಪದ ಸಂಗತಿ. ಆದರೆ ಬಸವಣ್ಣನವರ ವಿಷಯದಲ್ಲಿ ಹಾಗಾಗಲಿಲ್ಲ.
ಬಸವಣ್ಣನವರ ಕುರಿತು ಅಲ್ಲಮರ ಈ ವಚನ ನೋಡೋಣ:

ಕೌಪು ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯ.
ಎನ್ನಲ್ಲಿ ನಿಜವಿಲ್ಲದೆನ್ನಕ್ಕ?
ಹೊನ್ನು ಹೆಣ್ಣು, ಮಣ್ಣು, ತ್ರಿವಿಧವ ತೊರಿದಡೆನಯ್ಯ
ಮನದಲ್ಲಿ ವೃತಿಯಾಗದೆನ್ನಕ್ಕ?
ಹಸಿವು ತೃಷೆ ವ್ಯಸನಾದಿಗಳ ಬಟ್ಟಿದೇನಯ್ಯ
ಅರ್ಥದಿಷ್ಷೆ ಮನದಲ್ಲಿ ಹಿಂಗದೆನ್ನಕ?
ಆನು ಜಂಗಮವೇ?
ಆನು ಹಿರಿಯನಾದೆನೆಲ್ಲದೆ ಆನು ಜಂಗಮನೆ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ
[ಎನ್ನ] ಬಸವಣ್ಣನಾಗಿ ಹುಟ್ಟಿಸದೆ,
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1138)

ಬಸವಣ್ಣನವರಂತೆ ಮಹಾವ್ಯಕ್ತಿಯಾಗಿ ಬದುಕಬಲ್ಲವನಾಗದ ನಾನು ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯನಾಗಬಲ್ಲನೆ ಹೊರತು ಆತನಂತೆ ಚೈತನ್ಯ ರೂಪ ಜಂಗಮನಾಗಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ತಾರೆ ಅಲ್ಲಮರು. ಸತ್ಯ ಮಾರ್ಗವನ್ನು ಅನುಸರಿಸಿ ಸತ್ಯ ಶುದ್ಧವಾದ ಕಾಯಕದ ಮೂಲಕ ನಿತ್ಯ ಜಂಗಮ ಸೇವೆಯನ್ನು ಮಾಡುವ ಬಸವಣ್ಣನು ಕಾಯಾ, ವಾಚಾ, ಮನಸಾ, ಹೆಣ್ಣು, ಹೊನ್ನು, ಮಣ್ಣು, ಹಸಿವು, ತೃಷೆ, ವ್ಯಸನಾದಿಗಳನ್ನು ತ್ಯಜಿಸಿದ ಮಹಾ ಜಂಗಮರೂಪಿಯಾಗಿದ್ದಾರೆ. ಇಂತಹ ಮಹಾನ್ ಚೇತನವಾದ ಬಸವಣ್ಣನನ್ನಾಗಿ ಹುಟ್ಟಿಸದೆ ನನಗೆ ಪ್ರಭುದೇವರಾಗಿ ಏಕೆ ಹುಟ್ಟಿಸಿದ ಎಂದು ಗುಹೇಶ್ವರದಲ್ಲಿ ಪ್ರಶ್ನಿಸುತ್ತಾರೆ.
ಅಲ್ಲಮ ಪ್ರಭುಗಳು ಬಸವಣ್ಣನವರಲ್ಲಿ ಕಂಡಂತಹ ವಿಶೇಷ ಗುಣಗಳಾದ ಅರಿವು, ಆಚಾರ, ದಾಸೋಗಳೆಂದರೆ ಸ್ವಯಂ ಬಸವಣ್ಣನೆ ಎಂದು ಶರಣನಾದ ನುಲಿಯ ಚಂದಯ್ಯನವರಿಗೆ ವರ್ಣಿಸುವ ಅಲ್ಲಮರ ಈ ವಚನ ನೋಡಿ:

ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು ಬಸವಣ್ಣನು,
ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು ಬಸವಣ್ಣನು,
ಈ ಎರಡರ ಸಂಗವೆ ತಾನೆಂದರಿದನು ಬಸವಣ್ಣನು,
ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ಬಸವಣ್ಣನು,
ನಮ್ಮ ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-220/ವಚನ ಸಂಖ್ಯೆ-707)

ಅಂಗದ ಮೇಲಿರುವ ಲಿಂಗವನ್ನು ತನ್ನಲ್ಲಿ ಅಳವಡಿಸಿಕೊಂಡು ಲಿಂಗ ತತ್ವವನ್ನು ರೂಢಿಸಿಕೊಳ್ಳಬೇಕು. ಬಸವಣ್ಣನವರು ಈ ಲಿಂಗತತ್ವವನ್ನು ಅದರ ಉದಾತ್ತ ಆಚಾರಗಳನ್ನು ಅಳವಡಿಸಿಕೊಂಡು ಆ ಆಚಾರಗಳನ್ನೇ ಲಿಂಗವೆಂದು ಭಾವಿಸಿದ್ದಾರೆ. ಮನಸ್ಸಿನಲ್ಲಿ ಬೆಳಗುವ ಜ್ಞಾನವನ್ನು ಚಲನಶೀಲ ಜಂಗಮ ತತ್ವ ಅಂತ ತಿಳಿದವರಾಗಿದ್ದ ಬಸವಣ್ಣನವರು ಅರಿವು ಆಚಾರಗಳ ಬಲದಿಂದ ಸಮಾಜದ ಸೇವೆಯನ್ನು ಮಾಡುವ ಬಸವಣ್ಣನವರ ನಿಲುವು ದೇವರನ್ನು ಪ್ರತಿಬಿಂಬಿಸುವ ನಿಲುವು ಇದನ್ನು ಶರಣರಾದ ನಾವೆಲ್ಲ ತಿಳಿದುಕೊಳ್ಳಬೇಕೆಂದು ಶರಣ ನುಲಿಯ ಚಂದಯ್ಯನವರಿಗೆ ಅಲ್ಲಮ ಪ್ರಭುಗಳು ಈ ವಚನದಲ್ಲಿ ಹೇಳುತ್ತಾರೆ.

ಬಸವಣ್ಣನವರ ವ್ಯಕ್ತಿತ್ವ ಅನುಪಮವಾದದ್ದು. ಅವರ ವ್ಯಕ್ತಿತ್ವದ ರೂಪವನ್ನು ಅವರ ಸಮಕಾಲೀನ ಶರಣರ ವಚನಗಳಲ್ಲಿ ಧಾರಾಳವಾಗಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಲ್ಲಮ ಪ್ರಭುಗಳದ್ದು ಒಂದು ಕೈ ಮುಂದೆಯ. ಅವರ ಈ ವಚನದಲ್ಲಿ:

ಕುಂಡಲಿಗನ ಕೀಟದಂತೆ,
ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಜಲದೊಳಗಣ ತಾವರೆಯಂತೆ
ಹೊದ್ದಿಯೂ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣಾ.
ಜಲದಿಂದಲಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಗುಹೇಶ್ವರಲಿಂಗದ ಆಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಬಂದೆಯಯ್ಯಾ,
ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-416/ವಚನ ಸಂಖ್ಯೆ-1116)

ಕುಂಡಲಿಗನ ಕೀಟ ಅಂದರೆ ಕಣಜಿಗ ಅದು ಮಣ್ಣಿನಲ್ಲಿದ್ದರೂ ತನ್ನ ಮೈಗೆ ಮಣ್ಣನ್ನು ಅಂಟಿಕೊಳ್ಳುವುದಿಲ್ಲ. ಅದರಂತೆ ಬಸವಣ್ಣನವರು ಕೂಡ ಹುಟ್ಟಿ ಬೆಳದದ್ದು ತಾರತಮ್ಯ ಪೋಷಿಸುವ ಅಗ್ರಹಾರದ ವಾತಾವರಣದಲ್ಲಿಯಾದರೂ ಕಲ್ಮಶ ವಿಚಾರಗಳನ್ನು ಮೈಗೆ ಸೋಕದಂತೆ, ನೀರಿನೊಳಗಿರುವ ಕಮಲದ ಪುಷ್ಪದಂತೆ ಸಂಸಾರಕ್ಕೆ ಅಂಟಿಯೂ ಅಂಟದಂತೆ ಬದುಕಿದರು. ನೀರಲ್ಲಿ ಹುಟ್ಟುವ ಮುತ್ತಿನ ಮತ್ತೆ ನೀರಾಗದೆ ತನ್ನತನವನ್ನು ಕಾಯ್ದುಕೊಳ್ಳುವಂತೆ ಬಸವಣ್ಣನವರು ಸಮಾಜದಲ್ಲಿನ ಯಾವುದೇ ಕೊಳಕು ಕಲ್ಮಷಗಳನ್ನು ಹಚ್ಚಿಕೊಳ್ಳದೆ ಇದ್ದರು. ಈ ದೈಹಿಕ, ಲೌಕಿಕ ಜಗತ್ತಿನಿಂದ ಹೊರಬರಲಾಗದ ಮತ್ತು ಸಂಪತ್ತಿನ ಮದದಿಂದ ಮೆರೆಯುತ್ತಿರುವವರನ್ನ ಅವರ ಸಂಪ್ರದಾಯವನ್ನು ಧಿಕ್ಕರಿಸಲು ಬಂದೆಯಾ ಬಸವಣ್ಣ ಅಂತ ಅಲ್ಲಮರು ಬಸವಣ್ಣನವರ ಗುಣಗಾನ ಮಾಡುತ್ತಾರೆ.

ಇನ್ನು ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆಯ ಜನಕ ಅಂತ ಅವರ ಸಮಕಾಲೀನ ಶರಣರು ತಮ್ಮ ವಚನಗಳಲ್ಲಿ ಸ್ಪಷ್ಟ ಪಡಿಸಿದ್ದಾರೆ. ಅಲ್ಲಮರು ಬಸವಣ್ಣನವರಿಗಿಂತ ಅಗಾಧವಾಗಿ ಜ್ಞಾನವನ್ನು ಹೊಂದಿದ್ದರೂ ಕೂಡ ಬಸವಣ್ಣನವರಲ್ಲಿ ಜನರ ಅಂಧಕಾರ ಕಳೆವ ಮಹಾ ಜ್ಞಾನವೇ ಇರುವುದನ್ನು ಗುರುತಿಸುತ್ತಾರೆ. ಯಾರ ಊಹೆಗೂ ನಿಲುಕದ ಇಷ್ಟಲಿಂಗದ ಪರಿಕಲ್ಪನೆ ಹುಟ್ಟು ಹಾಕಿದ ಬಸವಣ್ಣನವರ ಕುರಿತು ಅಲ್ಲಮರು ತಮ್ಮ ಈ ವಚನದಲ್ಲಿ ಈ ರೀತಿ ಹೇಳಿದ್ದಾರೆ:

ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
ಅರಿದೆಹೆನೆಂದಡೆ ಕುರುಹಿಂಗೆ ಬಾರದು,
ಕಂಡೆಹೆನೆಂದಡೆ ಮೂರ್ತಿಯಲ್ಲ.
ತನುವಿನೊಳಗಿಲ್ಲದ ಮನದೊಳಗಿಲ್ಲದ ಘನವು,
ನಿಮ್ಮ ಮನಕ್ಕೆ ವೇದ್ಯವಾದ ಪರಿ, ಎಂತಯ್ಯಾ?
ಗುಹೇಶ್ವರನೆಂಬ ಲಿಂಗವು
ಜಗದ ಕಣ್ಣಿಂಗೆ ಕತ್ತಲೆಯ ಕವಿಸಿ,
ತನ್ನ ತಪ್ಪಿಸಿಕೊಂಡಿಪ್ಪ [ಆ] ಭೇದ
ನಿನ್ನೊಳಗಡಗಿದ ಪರಿ ಎಂತು
ಹೇಳಾ ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-488/ವಚನ ಸಂಖ್ಯೆ-1309)

ಅಗಮ್ಯವಾದ ವಿಶ್ವರೂಪಿ ದೇವ ನಮ್ಮ ಮನದ ವ್ಯಾಪ್ತಿಗೆ ಸಿಗದಷ್ಟು ಆಗಾಧನಾಗಿದ್ದಾನೆ. ಈ ಅಗೋಚರ ದೇವರನ್ನು ಅರಿಯಲು ಆತನ ಕುರುಹು ತೋರುತ್ತಿಲ್ಲ. ಭೌತಿಕವಾಗಿ ನೋಡಬೇಕೆಂದರೆ ಆತ ಮೂರ್ತಿಯಲ್ಲ. ಇಂತಹ ಈ ಅಗಮ್ಯ ಅಗೋಚರ ಘನವಾದ ನಮ್ಮ ಮನದೊಳಗೆ ಹೊಳೆಯದ ನಿನ್ನ ಕಲ್ಪನೆಗೆ ನಿಲುಕಿದ್ದು ಹೇಗೆ ಅಂತ ಬಸವಣ್ಣನವರಿಗೆ ಕೇಳ್ತಾರೆ. ಗುಹೇಶ್ವರನೆಂಬ ಲಿಂಗ ಜಗತ್ತಿನ ಎಲ್ಲ ಹುಲುಮಾನವರಿಗೆ ಕಲ್ಪನೆಗೆ ನಿಲುಕದೆ ದೃಷ್ಟಿಗೂ ಬಾರದೆ ಜನರನ್ನೆಲ್ಲ ಕತ್ತಲೆಯಲ್ಲಿ ಇಟ್ಟು, ನಿನ್ನ ಕಲ್ಪನೆಗೆ ನಿಲುಕಿ, ಇಷ್ಟಲಿಂಗದ ಕುರುಹಾಗಿ ರೂಪುಗೊಂಡ ಬಗೆ ಹೇಳು ಬಸವಣ್ಣ ಅಂತ ಅಲ್ಲಮರು ಬಸವಣ್ಣನವರ ಆಗಾಧವಾದ ಜ್ಞಾನವನ್ನು ವರ್ಣಿಸುತ್ತಾರೆ.

ಅಂಗದಲ್ಲಿ ಆಚಾರವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ಆಚಾರದಲ್ಲಿ ಪ್ರಾಣವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ಪ್ರಾಣದಲ್ಲಿ ಲಿಂಗವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ಲಿಂಗದಲ್ಲಿ ಜಂಗಮವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ಜಂಗಮದಲ್ಲಿ ಪ್ರಸಾದವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ಪ್ರಸಾದಲ್ಲಿ ನಿತ್ಯವ ಸ್ವಾಯತವ
ನಿತ್ಯದಲ್ಲಿ ದಾಸೋಹವ ಸ್ವಾಯತವ
ಮಾಡಿಕೊಂಡನಯ್ಯ ಬಸವಣ್ಣನು.
ದಾಸೋಹದಲ್ಲಿ ತನ್ನ ಮರೆದು,
ನಿಶ್ಚಿಂತ ನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ಶ್ರೀ ಪಾದಕ್ಕೆ ಶರಣೆಂದು
ಧನ್ಯರಾದಬೇಕು ನಡೆಯಾ-ಸಿದ್ಧರಾಮಯ್ಯ
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-221/ವಚನ ಸಂಖ್ಯೆ-708)

ಇದು ಅಲ್ಲಮ ಪ್ರಭುಗಳು ಸೊಲ್ಲಾಪುರಕ್ಕೆ ತೆರಳಿ ಶಿವಯೋಗಿ ಸಿದ್ಧರಾಮರಿಗೆ ಬಸವಣ್ಣನವರ ಮಹಿಮೆಯನ್ನು ಈ ವಚನದ ಮೂಲಕ ತಿಳಿಸಿ ಕಲ್ಯಾಣಕ್ಕೆ ಬರಲು ಆಹ್ವಾನವನ್ನು ನೀಡುತ್ತಾರೆ.

ಸರ್ವಾಂಗದಲ್ಲೂ ಸದಾಚಾರವನ್ನು ತುಂಬಿಕೊಂಡು, ಆ ಸದಾಚಾರಗಳನ್ನೇ ತನ್ನ ಪ್ರಾಣವನ್ನಾಗಿಸಿ ಆ ಪ್ರಾಣದಲ್ಲೆ ಲಿಂಗವನ್ನು ಕಂಡುಕೊಂಡವರು ಬಸವಣ್ಣನವರು. ಆ ಲಿಂಗದಲ್ಲಿ ಇಡೀ ಜಗತ್ತನ್ನು ಕಂಡು ಅಂದರೆ ಜಂಗಮವನ್ನು ಕಂಡುಕೊಂಡ ಸಕಲ ಜೀವಾತ್ಮರ ಸೇವೆ ಪರಮಾತ್ಮನ ಸೇವೆಗಿಂತ ಶ್ರೇಷ್ಠ ಅಂತ ಹೇಳಿ ಬಸವಣ್ಣ ಬಂದುದೆಲ್ಲವನ್ನ ಸಂಗಮನ ಪ್ರಸಾದ ಎಂದು ಸ್ವೀಕರಿಸಿ ಸಕಲರಿಗೂ ಲೇಸನ್ನೇ ಬಯಸುತ್ತ ನಿತ್ಯವೂ ಸದಾಚಾರವನ್ನು ತುಂಬಿಸಿಕೊಂಡ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳಲು ದಾಸೋಹದ ಪದ್ಧತಿ ಕಂಡುಕೊಂಡರು ಅಂತ ಅಲ್ಲಮರು ಬಸವಣ್ಣನವರ ಬಗ್ಗೆ ಸಿದ್ಧರಾಮರಿಗೆ ಹೇಳುತ್ತಾರೆ.

ಅನುಭವ ಮಂಟಪದ ಅನುಭಾವ ಗೋಷ್ಠಿಗಳಲ್ಲಿಯ ಶರಣರ ವಿಚಾರಗಳನ್ನು ಬಂಗಾರವನ್ನು ಒರೆಗೆ ಹಚ್ಚಿ ಪ್ರಮಾಣೀಕರಿಸುವ ಅಕ್ಕಸಾಲಿಗನಂತೆ ಅಲ್ಲಮರು ಪ್ರಮಾಣೀಕರಿಸುತ್ತಿದ್ದರು. ಅವರು ಬಸವಣ್ಣನವರನ್ನು ವ್ಯಕ್ತಿತ್ವನ್ನು ಮೆಚ್ಚಿ ಅವರ ಕುರಿತು ಹೇಳಿರುವ ಪ್ರಮಾಣೀಕೃತ ನುಡಿಗಳು ಈ ವಚನದಲ್ಲಿ ಕಂಡು ಬರುತ್ತದೆ.

‘ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು.
‘ಸ’ ಎಂಬಲ್ಲಿ ಸರ್ವಜ್ಞನಾದೆನು.
‘ವ’ ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು.
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ ‘ಬಸವಾ’ ‘ಬಸವಾ’ ‘ಬಸವಾ’
ಎನುತಿರ್ದೆವಯ್ಯಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-513/ವಚನ ಸಂಖ್ಯೆ-1356)

ಇಲ್ಲಿ ‘ಬ’ ಎನ್ನುವಲ್ಲಿ ಭವ ಹರಿವದು ಅಂದರೆ ಲೌಕಿಕ ಬಂಧನಗಳಿಂದ ಮುಕ್ತಿ ಅಂದರೆ ಪುನರ್ಜಜನ್ಮದಿಂದ ಮುಕ್ತಿ. ಬಸವ ಎನ್ನುವ ಶಬ್ದದ ಒಂದು ಅಕ್ಷರಕ್ಕೇನೇ ಇಷ್ಟೊಂದ ಶಕ್ತಿ ಇದೆ ಎಂದರೆ ಬಸವಣ್ಣನವರ ಆಧ್ಯಾತ್ಮಿಕ ಸಾಧನೆ ಎಂತಹದು ಎಂದು ಅರಿವಾಗುತ್ತದೆ. ‘ಸ’ ಎಂಬಲ್ಲಿ ಸರ್ವಜ್ಞ ಅಂದರೆ ಎಲ್ಲ ಬಲ್ಲವನು. ಜ್ಞಾನಿಯಾದ ಬಸವಣ್ಣನವರ ಹೆಸರಿನ ಒಂದಕ್ಷರಕ್ಕೆ ಸ್ಮರಿಸಿದರೆ ಅಜ್ಞಾನಿಯೂ ಕೂಡ ಸುಜ್ಞಾನ ಪಡೆಯುತ್ತಾನೆ. ಜ್ಞಾನವನ್ನು ಧಾರೆ ಎರೆಯುವ ಮಹಾಜ್ಞಾನಿ ಬಸವಣ್ಣನವರಾಗಿದ್ದಾರೆ. ಇನ್ನು ‘ವ’ ಎನ್ನುವ ಅಕ್ಷರವನ್ನು ನುಡಿದರೆ ಸಾಕು ಇಡೀ ದೇಹವು ಚೈತನ್ಯಮಯವಾಗುತ್ತದೆ. ಅದಕ್ಕೇನೇ ನಾನು ನೀವು ಎಲ್ಲರೂ ಬಸವಾ ಬಸವಾ ಎಂದು ಸ್ಮರಿಸುತ್ತೇವೆ ಅಂತಾರೆ. ಬಸವಣ್ಣನನ್ನು ಅರಿಯದೆ ಯಾರನ್ನ ಅರಿಯುವುದೂ ಬೇಕಾಗಿಲ್ಲ. ಬಸವ ಜಗದ ಜ್ಯೋತಿ, ಕಲ್ಪನೆಗೂ ನಿಲುಕದ ಅಸಾಮಾನ್ಯ ವ್ಯಕ್ತಿ.

ಆದಿ ಅನಾದಿಯಿಲ್ಲದಂದತ್ತ ಬಸವಣ್ಣನುತ್ಪತ್ಯವಾದ ಕಾರಣ
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಮರ್ತ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಗುಹೇಶ್ವರಾ ನಿಮ್ಮಾಣೆ,
ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-92)

ಸಮಸ್ತ ಸೃಷ್ಟಿ ರಚನೆಗೆ ಆದಿ ಸ್ಥಿತಿ ಎನಿಸುವ ಮಹಾಲಿಂಗದಿಂದ ಬಸವಣ್ಣನು ಉದಯವಾದ ಕಾರಣ ಎಲ್ಲ ಗಣಂಗಳಿಗೆ ಮರ್ತ್ಯ ಲೋಕದ ಮಹಾಗಣಗಣಗಳಿಗೂ ಮತ್ತು ಹಿಮಗಿರಿಯ ದೇವಲೋಕದ ದೇವ ಗಣಗಳಿಗೂ ಬಸವಣ್ಣನ ಜ್ಞಾನ ಪ್ರಸಾದವೇ ಯೋಗ್ಯ. ಅಷ್ಟೇ ಅಲ್ಲ ಮಹಾ ಘನಲಿಂಗವೇ ಸಾಕಾರ ಸ್ವರೂಪಗೊಂಡ ನನಗೂ ಮತ್ತು ನಿರಾಕಾರ ಸ್ವರೂಪನಾದ ನಿನಗೂ ಬಸವಣ್ಣನ ಜ್ಞಾನ ಪ್ರಸಾದವೇ ಯೋಗ್ಯ ಅಂತ ಅಲ್ಲಮ ಪ್ರಭುಗಳು ಬಸವಣ್ಣನವರ ಬಗ್ಗೆ ಹೇಳುತ್ತಾರೆ.

ಬಸವಣ್ಣಾ,
ನಿನ್ನ ಕಂಡು ಎನ್ನ ತನು ಬಯಲಾಯಿತ್ತು.
ಬಸವಣ್ಣಾ,
ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು.
ಬಸವಣ್ಣಾ,
ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು.
ಬಸವಣ್ಣಾ, ನಿನ್ನ ಮಹಾನುಭಾವವ
ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು.
ನಮ್ಮ ಗುಹೇಶ್ವರಲಿಂಗದಲ್ಲಿ
ನೀನು ಅಜಾತನೆಂಬುದ ನೆಲೆಮಾಡಿ
ಭವಪಾಶಂಗಳ ಹರಿದಿಪ್ಪೆಯಾಗಿ,
ನಿನ್ನ ಸಂಗದಿಂದಲಾನು ಬದುಕಿದೆನು
ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-520/ವಚನ ಸಂಖ್ಯೆ-1374)

ಈ ವಚನದಲ್ಲಿ ಅಲ್ಲಮರು ಬಸವಣ್ಣನವರ ಬಗ್ಗೆ ಒಂದು ಭಾವುಕವಾದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಈ ವಚನವು ಬಸವಣ್ಣನವರನ್ನ ಕಂಡು ನಂತರ ಅವರ ಸನ್ನಿಧಿಯಲ್ಲಿ ತನ್ನ ದೇಹ ಮತ್ತು ಮನಸ್ಸು ಯಾವ ರೀತಿ ಬಯಲಾಯ್ತು ಎಂದು ಹೇಳುತ್ತಾ ಬಸವಣ್ಣನವರ ಮೇಲಿನ ಪ್ರೀತಿ ಮತ್ತು ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ.

ಹೀಗೆ ಬಸವಣ್ಣನವರಿಗೂ ಮತ್ತು ಅಲ್ಲಮರಿಗೂ ಅವಿನಾಭಾವ ಸಂಬಂಧ, ಗುರು-ಶಿಷ್ಯರ ಸಂಬಂಧ. ಅಲ್ಲಮರು ಗುರು ಬಸವಣ್ಣರು ಶಿಷ್ಯರು. ಗುರು ಶಿಷ್ಯರ ಭಾಂಧವ್ಯಕ್ಕೆ ಇವರಿಬ್ಬರೂ ಅತ್ಯುತ್ತಮ ಉದಾಹರಣೆ ಪ್ರಭುದೇವರು ಯಾವುದಕ್ಕೂ ಅಂಟಿಕೊಳ್ಳದ ನಿರ್ಲಿಪ್ತರು. ಆದರೆ ಬಸವಣ್ಣನವರು ಸಂಸಾರದೊಳಗೆ ಅಷ್ಟೆ ಅಲ್ಲ ಜಗದ ಸಂಸಾರಿಗಳು. ಆದರೂ ಅದಕ್ಕೆ ಅಂಟಿಯೂ ಅಂಟದಂತೆ ಇದ್ದ ಮಹಾನ್ ದಾರ್ಶನಿಕರು. ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗಕ್ಕೆಲ್ಲ ಗುರು ಅಂತ ಹೇಳಿ ಗೌರವಿಸಿದ್ದಾರೆ.

ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-317/ವಚನ ಸಂಖ್ಯೆ-1087)

ಅಂತ ಅಲ್ಲಮರ ಬಗ್ಗೆ ಮನತುಂಬಿ ಹಾಡುತ್ತಾರೆ. ಬಸವಣ್ಣನವರು. ಕೈಗೆತ್ತಿಕೊಂಡ ಮಹಾ ಆಂದೋಲನದ ಬಗ್ಗೆ ಅಲ್ಲಮರಿಗೆ ತುಂಬಾ ಗೌರವ. ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನಿತ್ತ ಅಲ್ಲಮರು ಕಲ್ಯಾಣದ ಅನುಭವ ಮಂಟಪದ ಕೇಂದ್ರ ವ್ಯಕ್ತಿಯಾಗಿ ಶರಣ ತತ್ವಗಳ ಬಗ್ಗೆ ತತ್ವ-ತತ್ವಗಳ ನಡುವೆ ಸಮನ್ವಯ ಸಾಧಿಸುವ ಬಗ್ಗೆ ಆದರ್ಶ ಸಮಾಜ ರಚನೆಯ ಬಗ್ಗೆ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಕೇಂದ್ರ ವ್ಯಕ್ತಿಯಾಗಿದ್ದು ಶರಣರಿಗೆ ಮಾರ್ಗದರ್ಶನ ನೀಡುತ್ತಾರೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

This Post Has One Comment

  1. ಸಿ. ಎನ್. ಹಿರೇಮಠ

    ಉತ್ತಮ ಕಾರ್ಯ ಮಾಡಾತಾ ಇದ್ದೀರಿ. ನಾವು ನಿಮ್ಮ ಜೊತೆಗೆ ಸೇರುತ್ತೇವೆ

Leave a Reply