
ನಿರ್ಣಯವನರಿಯದ ಮನವೆ,
ದುಗಡವನಾಹಾರಗೊಂಡೆಯಲ್ಲಾ.
ಮಾಯಾ ಸೂತ್ರವಿದೇನೊ!
ಕಂಗಳೊಳ[ಗಣ] ಕತ್ತಲೆ ತಿಳಿಯದಲ್ಲಾ!
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು,
ಗುಹೇಶ್ವರಾ
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-45)
ಅಲ್ಲಮ ಪ್ರಭುದೇವರು “ಯೌಗಿಕ ಮಹಾಪುರುಷರು” ಹಾಗೂ ಲೋಕ ಸಂಚಾರಿಗಳು. ವಿಶ್ವದ ಉದಾತ್ತ ತತ್ವಜ್ಞಾನಿಗಳಲ್ಲಿ ಪ್ರಭುದೇವರು ಶ್ರೇಷ್ಠರಾದವರು. ಪ್ರಭುಗಳ ವೈಚಾರಿಕತೆ, ಯೌಗಿಕ ನಿಲುವು, ಆಧ್ಯಾತ್ಮದ ಔನ್ನತ್ಯಗಳು ಬೆರಗುಗೊಳಿಸುವಂತಹವು. ಲೋಕ ಸಂಚಾರಿಗಳಾಗಿ ಲೋಕದ ಅನುಭವಗಳ ಮೂಲಕ ಸತ್ಯದರ್ಶನವನ್ನು ಕಂಡುಕೊಂಡ ಸಿದ್ಧಪುರುಷರಿವರು.
ಅಲ್ಲಮ ಪ್ರಭುಗಳು ವಚನಗಳ ತಾತ್ವಿಕ ಅಧ್ಯಯನ ಕೈಗೊಂಡವರಿಗೆ ತಿಳಿಯುವ ಸಂಗತಿಯೆಂದರೆ ಪ್ರಭುಗಳ ಭಾವುಕತೆಗೆ ಒಳಗಾಗದ ವೈಚಾರಿಕ ಮನಸ್ಥಿತಿಯವರು ಎಂಬುದು. ಪ್ರಭುದೇವರು ಮೃದಂಗವಾದನದಂತಹ ಕಲೆಯಲ್ಲಿ ನಿಪುಣರಾದ ಒಬ್ಬ ಕಲಾವಿದ. ಹೀಗಾಗಿ ತಮ್ಮ ಬೆಡಗಿನ ವಚನಗಳಲ್ಲಿ ಲೀಲಾಜಾಲವಾಗಿ ಒಂದು ಕಲಾತ್ಮಕವಾದ ವಿಸ್ಮಯ ಲೋಕವನ್ನೇ ಸೃಜಿಸಿದ್ದಾರೆ. ಇವರ ಬೆಡಗಿನ ವಚನಗಳಲ್ಲಿರುವ “ಕಲಾತ್ಮಕತೆ” ಮತ್ತು “ವೈಚಾರಿಕತೆʼ ಯಿಂದ ಆಧುನಿಕ ಕಾಲಘಟ್ಟದಲ್ಲೂ ವೈಚಾರಿಕ ವಲಯದಲ್ಲಿ ಪ್ರಭುಗಳು ಪ್ರಿಯರಾಗುತ್ತಾರೆ.
ಅಲ್ಲಮ ಪ್ರಭುದೇವರ ವಚನಗಳನ್ನು ಸ್ಥಲಕ್ಕನುಗುಣವಾಗಿ ಸಂಯೋಜಿಸಲಾಗಿದೆ. “ಸ್ಥಲ” ಎಂಬ ಶಬ್ಧವು ಸಂಸ್ಕೃತ ಪದವಾಗಿದ್ದು ಅದು ಕನ್ನಡದಲ್ಲಿ “ಬಯಲು” ಎಂಬ ಪದಕ್ಕೆ ಪರ್ಯಾಯವಾದ ಪದವಾಗಿದೆ. “ಸ್ಥಲ” ಪದದ ಮತ್ತೊಂದು ಅರ್ಥವೆಂದರೆ “ಶೂನ್ಯ” ಎಂಬುದಾಗಿದ್ದು ಅದು ಆಧ್ಯಾತ್ಮಿಕ ಸಾಧನೆಯ ಘಟ್ಟವೂ ಹೌದು. ಪ್ರಸ್ತುತ ವಚನವು ಅಲ್ಲಮ ಪ್ರಭುಗಳ ವಚನಗಳಲ್ಲಿ “ಪಿಂಡಸ್ಥಲ” ವನ್ನಾಧರಿಸಿದ ವಚನವಾಗಿದೆ. “ಪಿಂಡ” ವೆಂದರೆ “ದೇಹ” ಎಂಬುದು ಸ್ಥೂಲಾರ್ಥ. ಈ ಪಿಂಡದಲ್ಲಿ “ಜೀವಾತ್ಮ” ನು ನೆಲೆಗೊಂಡಿರುತ್ತಾನೆ. ಈ ಪಿಂಡವು ಅಂದರೆ ದೇಹವು ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಶರೀರತ್ರಯಗಳಿಂದ ಕೂಡಿದ್ದಾಗಿದೆ. ಈ ಶರೀರತ್ರಯಗಳಿಗೆ ಇಂದ್ರಿಯಾನುಭವಗಳಿವೆ. ಇದೇ ಪಿಂಡವು “ಆತ್ಮ” ಕ್ಕೆ ಆಶ್ರಯವನ್ನು ನೀಡಿದೆ. ಈ ಆತ್ಮಕ್ಕೆ ಇಂದ್ರಿಯ ಗೋಚರ ಗುಣಗಳಿಲ್ಲ. ಆದರೆ ಈ “ಪಿಂಡ” ವು ಅಂದರೆ ದೇಹವು ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಪಂಚೇಂದ್ರಿಯಗಳ ಮೂಲಕ ಕಾರ್ಯತತ್ಪರವಾಗಬೇಕಾದಾಗ “ಆತ್ಮ” ದ ಮೂಲಕವೇ ಸಾಗಬೇಕಾಗುತ್ತದೆ. “ಆತ್ಮ” ವು ಉದಾತ್ತವಾದಷ್ಟು ಪರಮಾತ್ಮ (ಪರಮ + ಆತ್ಮ) ವಾಗಿ ಬೆಳೆಯುತ್ತದೆ. ಇದೇ ಆತ್ಮವನ್ನೇ ಮನಃ, ಮನಸ್ಸು, ಬುದ್ಧಿ, ಚಿತ್ ಎಂದೂ ಕರೆಯಲಾಗಿದೆ.
ಈ “ಮನ” ಕ್ಕೆ ಮಾಯೆ ಆವರಿಸಿಕೊಳ್ಳುವುದು ಸಹಜ. “ಮಾಯೆ” ಎಂದರೆ ಇಲ್ಲದ್ದನ್ನೂ ಇದ್ದಂತೆ, ಇದ್ದದ್ದನ್ನು ಇಲ್ಲದಂತೆ ಮಾಡುವ ಮಾಟ. ಇದರಿಂದ ಚಿತ್ ಮತ್ತು ಬುದ್ಧಿಗೆ ಕತ್ತಲೆ ಆವರಿಸಿ “ಮನ” ವು ಅಸ್ಥಿರತೆಗೆ, ಚಂಚಲತೆಗೆ ಒಳಗಾಗುತ್ತದೆ. ಚಂಚಲತೆಯಿಂದ, ಸಂದೇಹದಿಂದ ಚಲಿಸುವ ಮನಸ್ಸು ಚಿಂತೆಗೆ ಒಳಗಾಗುತ್ತದೆ. ಯಾವುದೇ ಸ್ಥಿರವಾದ ನಿರ್ಣಯಕ್ಕೆ ಬದ್ಧವಾಗಲು ಅಸಹಾಯಕವಾಗುತ್ತದೆ. ಅಂತಹ ಮನಸ್ಸು ದುಗುಡ, ದುಮ್ಮಾನಗಳಿಂದ ಖಿನ್ನತೆಗೆ ಒಳಗಾಗುತ್ತದೆ. ಇದರಿಂದ ಮನಸ್ಸು ವ್ಯಾಕುಲಕ್ಕೆ, ಅಸ್ವಸ್ಥಕ್ಕೆ ಒಳಗಾಗುತ್ತದೆ. ಇಂಥ ಮನಸ್ಸಿನಲ್ಲಿರುವ ಜೀವಾತ್ಮನು ತನ್ನನ್ನು ತಾನು ಅರಿಯನು. ಇದನ್ನೇ ಅಲ್ಲಮ ಪ್ರಭುಗಳು “ನಿರ್ಣಯವನರಿಯದ ಮನವೆ ದುಗುಡವನು ಆಹಾರ ಗೊಂಡೆಯಲ್ಲಾ” ಎಂದು ಹೇಳಿರುವುದು. ಇದು “ಮಾಯಾ ಪ್ರಪಂಚದ ಸೂತ್ರ” ವೆಂದು ಮಾಯೆಯ ಮುಸುಕಿನಿಂದ ಹೊರ ಬಾರದಿರುವ ಜೀವಾತ್ಮಕ್ಕೆ ಉಂಟಾಗುವ ಅಜ್ಞಾನದ ಕತ್ತಲೆಯ ಛಾಯೆಯನ್ನು ಪ್ರಭುಗಳು ಇಲ್ಲಿ ಎತ್ತಿ ತೋರುತ್ತಾರೆ. ನಿರ್ಣಯವನರಿಯದ ಅಂದರೆ ಚಂಚಲತೆಯಿಂದ ದೂರವಾಗಿ ನಿಶ್ಚಲತೆಗೆ ಬಾರದ ಮನಕ್ಕೆ ದುಗುಡ, ದುಃಖ, ದುಮ್ಮಾನ, ಬಿನ್ನತೆ, ವ್ಯಾಕುಲತೆಗಳೇ ಆಹಾರವಾಗಿ ಜೀವಾತ್ಮ ದುರ್ಬಲನಾಗುತ್ತಾನೆ. ಮಾಯಾ ಸಂಸಾರದಲ್ಲಿ ಮುಳುಗಿ ಬಿಡುತ್ತಾನೆ.
ಕಾಲಲಿ ಕಟ್ಟಿದ ಗುಂಡು,
ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು,
ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ,
ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-338/ವಚನ ಸಂಖ್ಯೆ-1149)
ಎಂದು ಅಪ್ಪ ಬಸವಣ್ಣನವರೂ ಸಹ ಜೀವಾತ್ಮನ ಜಂಜಡವನ್ನು ಬಿಡಿಸು ಎಂದು ಸಂಗಮನಾಥನಲ್ಲಿ ಬೇಡಿಕೊಳ್ಳುತ್ತಾರೆ.
ಪ್ರಪಂಚದ ಮಾಯೆಯು ಕಂಗಳನ್ನು ತುಂಬಿದಾಗ ಕತ್ತಲೆ ಆವರಿಸಿಕೊಳ್ಳುತ್ತದೆ. ಮಾಯೆಯು “ಜ್ಞಾನದ ಕಣ್ಣ” ನ್ನು ತುಂಬಿದಾಗ ಸತ್ಯವು ಮರೆಯಾಗುತ್ತದೆ. ಇದರಿಂದ ಜೀವಾತ್ಮನು ಬಳಲುತ್ತಾನೆ. ಜನನ–ಮರಣಗಳ ಚಕ್ರದಲ್ಲಿ ಸಿಲುಕಿ ಸುಖ–ದುಃಖ, ನೋವು-ನಲಿವು, ಭಯ-ಬಂಧನಗಳೆಂಬ ಭವದಲ್ಲಿ ಸಿಲುಕಿಕೊಳ್ಳುತ್ತಾನೆ. ಇದನ್ನೇ ಪ್ರಭುಗಳು “ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ” ಎನ್ನುತ್ತಾರೆ. “ಬೆಳಗು” ಎಂಬುದೇ ವಿಮಲಜ್ಞಾನ ರೂಪವಾದ ಪರಮಾತ್ಮ ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಸದಾ ತಾದ್ಯಾತ್ಮವಾಗಿ ಹೊಂದಾಣಿಕೆಯಿಂದ ಇರಬೇಕು. ಇದು ಸಾಧಕನು ಮಾಡಬೇಕಾದ ನಿಜವಾದ ಸಾಧನೆ. ಜೀವಾತ್ಮ ಶೃಂಗಾರಮಯವಾದ ಪ್ರಕಾಶವಾದರೂ ಅದು ಪ್ರಕಾಶಿಸಲು ಮಾಯಾ ಮೋಹ ಬಂಧನಗಳಾಚೆ ನಿಲ್ಲಬೇಕಾಗುತ್ತದೆ. ಸರಿಯಾದ ಗುರುವಿನ ಮಾರ್ಗದರ್ಶನದಿಂದ ಚಂಚಲಮನವನ್ನು ನಿಶ್ಚಲವಾಗಿಸಿಕೊಂಡು ಮನವನ್ನು ಮಹಾಮನವನ್ನಾಗಿ, ಆತ್ಮವನ್ನು ಪರಮಾತ್ಮನವನ್ನಾಗಿಸಿಕೊಂಡು ಮುಂದಿನ ಸಾಧನಾ ಮಾರ್ಗದಲ್ಲಿ ನಡೆಯಬೇಕು ಎಂಬುದು ಈ ವಚನದ ಆಶಯವಾಗಿದೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೊಬೈಲ್ ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()




Total views : 55987