
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ?
ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ?
ಶರಣರು ಬಂದು ಬಾಗಿಲಲ್ಲಿ ನಿಂದಿರಲು
ತನ್ನ ತಾ ಮರೆದಿಪ್ಪವರ ಕಂಡಡೆ
ನಮ್ಮ ಗುಹೇಶ್ವರ ಲಿಂಗ ಒಡೆಯ
ಹಾಯ್ಕದೆ ಮಾಣ್ಬನೆ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1184)
ಜಂಗಮಮೂರ್ತಿಯಾದ ಅಲ್ಲಮ ಪ್ರಭುಗಳು ಜ್ಞಾನ ವೈರಾಗ್ಯದ ಎತ್ತರ ಶಿಬರ. ಇವರು ನಿಜವಾದ ಅನುಭಾವಿಗಳು. ಇವರು ಉಸುರಿದ ಅನುಭಾವದ ಒಲವಿನ ನಿಲುವಿನ ನುಡಿಗಳು ಅತ್ಯಂತ ಗಹನವಾದುದು. ತಮ್ಮ ಗುರುವಾದ ಅನಿಮಿಷಯೋಗಿಯಿಂದ ಲಿಂಗದೀಕ್ಷೆ ಪಡೆದುಕೊಂಡು ಲಿಂಗದೊಂದಿಗೆ ಅನುಸಂಧಾನಗೊಳ್ಳುತ್ತಾ ಅಲ್ಲಮ ಪ್ರಭುಗಳು ಶಿವಯೋಗಿಯಾಗಿ, ಮಹಾ ಅನುಭಾವಿಯಾಗಿ ರೂಪುಗೊಳ್ಳುತ್ತಾರೆ. ಲೋಕ ಸಂಚಾರ ಮಾಡುತ್ತಾ ದೀನ–ದುರ್ಬಲರನ್ನು ಸಂತೈಸುತ್ತಾ, ಅಜ್ಞಾನಿಗಳನ್ನು ಎಚ್ಚರಿಸುತ್ತಾ, ಸಾಧಕರಿಗೆ ಮಾರ್ಗದರ್ಶನ ನೀಡುತ್ತಾ ಚಲಿಸಿದ “ಚರಲಿಂಗ” ವಾಗಿ ಇವರು ಕಾಣಿಸಿಕೊಳ್ಳುತ್ತಾರೆ. ಗೊಗ್ಗಯ್ಯ, ಮುಕ್ತಾಯಕ್ಕೆ, ಸಿದ್ಧರಾಮ, ಗೋರಕ್ಷ ಮುಂತಾದ ಶರಣರನ್ನು ಉದ್ಧರಿಸಿ ನಿಜವಾದ ಬದುಕಿನ ಗಮ್ಯವನ್ನು ತೋರುತ್ತಾರೆ. ಕಲ್ಯಾಣದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪಕ್ಕೆ ಒಂದು ಹೊಸ ವ್ಯಾಖ್ಯಾನ ಬರೆಯುತ್ತಾರೆ. ಶೂನ್ಯಸಿಂಹಾಸನವನ್ನು ಏರಿ, ಬಯಲು ತತ್ವವನ್ನು ಆರುಹಿ, ಸಾಧಕರ ಮನದ ಸಂಶಯ ಕಳೆದು ಅವರನ್ನು ಲಿಂಗಾಂಗ ಸಾಮರಸ್ಯದತ್ತ, ಶಿವಯೋಗ ತತ್ವದತ್ತ ಕರೆದು ತಂದು ನಿಲ್ಲಿಸುತ್ತಾರೆ.
ಸಿದ್ಧಪುರುಷ ಗೋರಕ್ಷನಿಗೆ ಹಠಯೋಗದಿಂದ ವಜ್ರದೇಹಿಯಾಗುವುದು ದೊಡ್ಡದಲ್ಲ, ಶಿವಯೋಗದಿಂದ ಮನವನ್ನು ವಜ್ರವಾಗಿಸುವುದು ಮುಖ್ಯ ಎಂದು ಅರುಹುತ್ತಾರೆ. ಕೆರೆ, ಕೆಟ್ಟೆ, ಬಾವಿ, ಗುಡಿ, ಗೋಪುರ ಕಟ್ಟುವುದರಲ್ಲಿ ಮಗ್ನರಾಗಿದ್ದ ಕರ್ಮಯೋಗಿ ಸಿದ್ಧರಾಮರಿಗೆ ಒಬ್ಬ ನಿಜವಾದ ಶಿವಯೋಗಿ ಕಟ್ಟಬೇಕಾದ ಕೆರೆ ಎಂತಹದ್ದು ಎಂದು ತಿಳಿಸಿ:
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಕಟ್ಟಿ,
ಆಚಾರವೆಂಬ ಸೋಪಾನದಿಂದ,
ಬಲಿದು ಷಟ್ವಿಧ ಭಕ್ತಿಯ ಸೋಪಾನದಿಂದ
ಪರಮಾನಂದ ಜಲವ ತುಂಬಿ
ಕೆರೆಯ ಕೆಟ್ಟ ಬಲ್ಲವರನಾರನೂ ಕಾಣೆ!
ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು
ಗುಹೇಶ್ವರಾ, ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-455/ವಚನ ಸಂಖ್ಯೆ-1222)
ಇದು ಒಬ್ಬ ನಿಜವಾದ ಶಿವಯೋಗಿ ಕಟ್ಟಬೇಕಾದ ಕೆರೆ ಎಂದು ಮಾರ್ಮಿಕವಾಗಿ ಸಿದ್ಧರಾಮರನ್ನು ಎಚ್ಚರಿಸಿ ಕಲ್ಯಾಣಕ್ಕೆ ಕರೆತಂದು ಶಿವಯೋಗಿ ಸಿದ್ಧರಾಮರನ್ನಾಗಿಸಿದ ಶ್ರೇಯಸ್ಸು ಪ್ರಭುಗಳದು.
ಪ್ರಸ್ತುತ ವಚನದಲ್ಲಿ ಎರಡು ಮಹತ್ವದ ಸಂಗತಿಗಳಿವೆ.
- ಲಿಂಗ–ಜಂಗಮದ ನಿಜವಾದ ನೆಲೆಯನ್ನು ಗ್ರಹಿಸುವುದು.
- ಅಲ್ಲಮಪ್ರಭು, ಸಿದ್ಧರಾಮೇಶ್ವರ, ಬಸವಣ್ಣನವರು ಸಂಧಿಸುವ ಪ್ರಸಂಗ.
ಶರಣ ಸಿದ್ಧಾಂತದಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳು ಬಹುಮುಖ್ಯ ತತ್ವಗಳನ್ನು ಪ್ರತಿಪಾದಿಸುತ್ತವೆ. ಈ ಮೂರು ತತ್ವಗಳು ಒಂದಕ್ಕೊಂದು ಪೂರಕವಾಗಿದ್ದು ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಅಷ್ಟಾವರಣ ತತ್ವಗಳು ಸಾಧಕನ ಲಿಂಗದಂತಿದ್ದರೆ ಪಂಚಾಚಾರಗಳು ಪ್ರಾಣವಾಗಿ, ಷಟ್‌ಸ್ಥಲಗಳು ಆತ್ಮದಂತಿವೆ. ಮಾನವರ ಜೀವನವನ್ನು ಆಧ್ಯಾತ್ಮಿಕವಾಗಿ ಎಚ್ಚರಿಸುತ್ತವೆ.
ಅಲ್ಲಮ ಪ್ರಭುಗಳ ಈ ವಚನದಲ್ಲಿ ಒಂದು ಭಾಗ ಅಷ್ಟಾವರಣಗಳಲ್ಲಿ ಮುಖ್ಯ ತತ್ವಗಳಾದ “ಲಿಂಗ” ಮತ್ತು “ಜಂಗಮ” ದ ಕಡೆಗೆ ಗಮನ ಸೆಳೆಯುತ್ತವೆ. ಶರಣರ ಸಿದ್ಧಾಂತದಲ್ಲಿ “ಲಿಂಗ” ಕ್ಕೆ ಎಷ್ಟು ಪ್ರಾಶಸ್ತ್ಯವಿದೆಯೋ ಜಂಗಮಕ್ಕೂ ಅಷ್ಟೇ ಪ್ರಾಶಸ್ತ್ಯವಿದೆ.
ಲಿಂಗವೆಂದರೆ;
ಗ- ಉತ್ಪತ್ತಿ, ಜಿತ್ ಚೈತನ್ಯ
೦ – ಸ್ಥಿತಿ, ಚಿದ್ಬಿಂದು,
ಲಿ- ಲಯ, ಶೂನ್ಯ
ಲಿಂಗವೆಂದರೆ ಉತ್ಪತ್ತಿ, ಸ್ಥಿತಿ, ಲಯವನ್ನು ಸೂಚಿಸುವುದು. “ಲಿ” ಎಂಬ ಅಕ್ಷರ ಲಯವನ್ನು ಮಧ್ಯದ “ಂ” ಸೊನ್ನೆಯು ಸ್ಥಿತಿಯನ್ನು, “ಗ” ಅಕ್ಷರವು ಉತ್ಪತ್ತಿಯನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ ಲಿಂಗವು ಶೂನ್ಯ ತತ್ವದಿಂದ ಚೈತನ್ಯದೆಡೆಗೆ ಕರೆದೊಯ್ಯುನ ಸಾಧನ. ಇಂತಹ ಲಿಂಗವನ್ನು “ಇಷ್ಟಲಿಂಗ” ರೂಪದಲ್ಲಿ ಕರಸ್ಥಲಕ್ಕೆ ಕೊಟ್ಟವರು ಬಸವಣ್ಣನವರು. ಕರಸ್ಥಲದ ಇಷ್ಟಲಿಂಗ, ಮನಸ್ಥಲಕ್ಕೆ ಬಂದು ಭಾವಲಿಂಗವಾಗಿ, ಪ್ರಾಣಸ್ಥಲಕ್ಕೆ ಬಂದು ಪ್ರಾಣಲಿಂಗವಾಗುವ ಪರಿಯೇ ಶಿವಯೋಗ ತತ್ವ. ಶಿವಯೋಗ ಸಾಧನೆಗೆ ಇಷ್ಟಲಿಂಗ ಒಂದು ಸಾಧನ.
“ಜಂಗಮ” ಎಂದರೆ ಚಲನಶೀಲತೆ. ಶರಣ ಸಿದ್ಧಾಂತ ಸ್ಥಾವರನ್ನು ಒಪ್ಪುವುದಿಲ್ಲ. ಆದ್ದರಿಂದ ಸ್ಥಾವರಲಿಂಗದ ಬದಲಾಗಿ ಇಷ್ಟಲಿಂಗ ಆರಾಧನೆ ಅಲ್ಲಿ ಮುಖ್ಯವಾಯಿತು. “ಜಂಗಮ” ವು ಚಲನಶೀಲತೆಯನ್ನು, ಸುಜ್ಞಾನವನ್ನು ಸಂಕೇತಿಸುತ್ತದೆ. ಸುಜ್ಞಾನ ಸಂಪಾದನೆ ಮಾಡಿಕೊಂಡ ಸಾಧಕ ಜ್ಞಾನ ಪ್ರಸಾರ ಮಾಡುತ್ತಾ ಚಲಿಸುತ್ತಲೇ ಇರಬೇಕಾಗುತ್ತದೆ. ಲಿಂಗಕ್ಕೆ ಇರುವಷ್ಟು ಮಹತ್ವ ಜಂಗಮಕ್ಕೂ ಇದೆ. “ಗುರುವಿಂಗೆ ಗುರು ಪರಮ ಗುರು ಜಂಗಮವೆಂಬುದು ಕೂಡಲಸಂಗಯ್ಯನ ವಚನ” ಎಂದು ಬಸವಣ್ಣನವರೂ ಹೇಳಿದ್ದಾರೆ. “ಜಂಗಮ” ವೆಂಬ ಪದ ಜಾತಿ ಸೂಚಕ ಪದವಲ್ಲ. ಇದು ತತ್ವ ಸೂಚಕವಾದ ಪದ. ಅರಿವು–ಆಚಾರ–ಅನುಭಾವಗಳ ತ್ರಿವೇಣಿ ಸಂಗಮ ರೂಪವೇ “ಜಂಗಮ”. ಈ ಕಾರಣದಿಂದ ಲಿಂಗ–ಜಂಗಮ ಎರಡೂ ಪೂಜಾರ್ಹ ಮತ್ತು ಅಷ್ಟೇ ಒಂದಕ್ಕೊಂದು ಪೂರಕವಾಗಿವೆ. ಆದರೆ ಇಲ್ಲಿ ಗಮನಿಸಬಹುದಾದ ಸಂಗತಿಯೆಂದರೆ “ಲಿಂಗ” ವು ಚಲಿಸುವುದಿಲ್ಲ. “ಜಂಗಮ” ಚಲಿಸುತ್ತಾನೆ. ಚಲಿಸುವ ಜಂಗಮನಲ್ಲಿ ಆತ್ಮರೂಪಿ ಸ್ಥಾವರ (ಆತ್ಮ) ಲಿಂಗವಿರುತ್ತದೆ. ಆ ಲಿಂಗವನ್ನು ಹೊತ್ತು ಚಲಿಸುವವನೆ ಜಂಗಮನಾಗಿರುತ್ತಾನೆ. ಈ ಕಾರಣದಿಂದ ಜಂಗಮ ಪೂಜಿನೀಯನಾಗಿರುತ್ತಾನೆ.
ನಾವು ಲಿಂಗಕ್ಕೆ ಅರ್ಪಿಸುವುದನ್ನು ಜಂಗಮಕ್ಕೆ ಅರ್ಪಿಸಿದಾಗ ಮಾತ್ರ ಅದು ಲಿಂಗಕ್ಕೆ ಅರ್ಪಿತವಾಗುತ್ತದೆ.
ಮರಕ್ಕೆ ಬೇರು ಬಾುಯೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳ ಪದಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-421)
ಬಸವಣ್ಣನವರು ಲಿಂಗದ ಬಾಯಿ ಜಂಗಮವೆಂದು ಕರೆದಿರುವ ಔಚಿತ್ಯವನ್ನು ಮನಗಾಣಬಹುದು. ಉಣ್ಣದ ಲಿಂಗಕ್ಕೆ ಎಡೆ ಹಿಡಿಯುವುದಕ್ಕಿಂತ ಜಂಗಮನಿಗೆ ಸಂತೃಪ್ತಿ ಮಾಡಬೇಕು. ಏಕೆಂದರೆ ಲಿಂಗದ ಪ್ರಾಣವೇ ಜಂಗಮ. ಅಲ್ಲಮ ಪ್ರಭುಗಳು ಪ್ರಾರಂಭದಲ್ಲಿ ಇದನ್ನೇ ಹೇಳುತ್ತಾರೆ. ಈ ವಚನದ ಮೊದಲ ಸಾಲಿನಲ್ಲಿ “ಜಂಗಮನನ್ನು ಹೊರಗೆ ನಿಲ್ಲಿಸಿ ಒಳಗೆ ಲಿಂಗಾರ್ಚನೆ (ಲಿಂಗ ಪೂಜೆ) ಯಲ್ಲಿ ತಲ್ಲೀನರಾದರೆ ಗುಹೇಶ್ವರ ಲಿಂಗ ಶಿಕ್ಷಿಸದೆ ಬಿಡುವುದಿಲ್ಲ ಎನ್ನುತ್ತಾರೆ. ಪ್ರಾಣವನ್ನು ಹೊರಗೆ ಇರಿಸಿ ದೇಹ ಉಸಿರಾಡಲು ಸಾಧ್ಯವೇ? ಬಾಗಿಲಿಗೆ ಬಂದ ಶರಣರನ್ನು ಬಾಗಿಲಲ್ಲಿ ನಿಲ್ಲಿಸಿ ಒಳಗೆ ತಾನು ಲಿಂಗಪೂಜೆಯಲ್ಲಿ ಮೈಮರೆತರೆ ಇದನ್ನು ಗುಹೇಶ್ವರ ಎಂದೂ ಒಪ್ಪುವುದಿಲ್ಲ ಎಂದು ಈ ವಿಧಾನವನ್ನು ಅಲ್ಲಮ ಪ್ರಭುದೇವರು ಅಲ್ಲಗಳೆಯುತ್ತಾರೆ.
ಅಲ್ಲಮ ಪ್ರಭುಗಳು ಈ ವಚನ ರಚನೆ ಮಾಡಲು ಒಂದು ಸಂದರ್ಭವಿದೆ; ಅಲ್ಲಮ ಪ್ರಭುಗಳು ಸಿದ್ಧರಾಮೇಶ್ವರರನ್ನು ಸೊನ್ನಲಿಗೆಯಿಂದ ಕಲ್ಯಾಣಕ್ಕೆ ಕರೆ ತರುತ್ತಾರೆ. ಇಬ್ಬರೂ ಬಸವಣ್ಣನವರ ಮನೆಯ ಬಾಗಿಲಿನಲ್ಲಿ ನಿಂತು ತಾವು ಬಂದಿರುವುದಾಗಿ ಹೇಳಿ ಕಳಿಸುತ್ತಾರೆ. ಆಗ ಬಸವಣ್ಣನವರು ಲಿಂಗಪೂಜೆಯಲ್ಲಿ ನಿರತರಾಗಿರುತ್ತಾರೆ. ಬಸವಣ್ಣನವರು ಮನೆಯ ಬಾಗಿಲಿಗೆ ಬಂದ ಜಂಗಮರಿಗಿಂತ ಲಿಂಗಪೂಜೆಗೆ ಪ್ರಾಮುಖ್ಯತೆ ನೀಡುವುದನ್ನು ಕಂಡು ಅದನ್ನು ಖಂಡಿಸಿ ಈ ವಚನ ನುಡಿಯುತ್ತಾರೆ. ಪ್ರಭುದೇವರ ವಚನಗಳಲ್ಲಿ ಜಂಗಮ ಮಹತ್ವ ಎದ್ದು ಕಾಣುತ್ತದೆ. “ಜಂಗಮವೆ ಲಿಂಗವೆಂದು ನಂಬಿದ ಬಳಿಕ ಸಂದೇಹವಿಲ್ಲದೆ ಇರಬೇಕು ನೋಡಾ” ಎಂದು ಜಂಗಮದ ಮಹತ್ವ ಸಾರಿದ ಪ್ರಭುಗಳು ಮತ್ತೊಂದು ವಚನದಲ್ಲಿ ಜಂಗಮ ಎಂದರೇನು ಎಂಬುದನ್ನು ತುಂಬಾ ಮಾರ್ಮಿಕವಾಗಿ ಹೀಗೆ ಹೇಳಿದ್ದಾರೆ.
ಜಂಗಮ ಜಂಗಮವೆಂಬ
ಭಂಗಿತರ ಮುಖವ ನೋಡಲಾಗದು.
ಅದೇನು ಕಾರಣವೆಂದಡೆ;
ನಿರಾಳಜಂಗಮವನರಿಯದೆ ನಾನೆ ಜಂಗಮವೆಂಬರು.
ಗ್ರಂಥ “ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ |
ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಜಂಗಮಂ ||” ಎಂದುದಾಗಿ,
ಇಂತಪ್ಪ ನಿರ್ದೇಹಿ ಜಂಗಮವ ಕರ-ಮನ-ಭಾವದಲ್ಲಿ ಆರಾಧಿಸಿ
ಜನನ ಮರಣಂಗಳ ಗೆಲಿದು ಕರ್ಪುರದ ಜ್ಯೋತಿಯಂತೆ ಇರಬಲ್ಲಡೆ
ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ,
ಆ ಮಹಾತ್ಮನೆ ವಿಶ್ವಪರಿಪೂರ್ಣನೆಂಬೆನು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1180)
“ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ | ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಜಂಗಮಂ ||” ಎಂದಿದ್ದಾರೆ. ಜನನ, ಗಮನ, ಮರಣ ನಾಸ್ತಿಯಾಗಿ ಅಂದರೆ ಭವವನ್ನು ಗೆದ್ದು ನಿಂತವನೆ ಜಂಗಮ ಎಂದಿದ್ದಾರೆ.
ಅಚಲವಾದ ಲಿಂಗವನ್ನು ಚಲಿಸುವ ಜೀವಿ ಹೊತ್ತು ತಿರುಗುತ್ತಿರುತ್ತಾನೆ, ಆತನೆ ಚರಲಿಂಗ (ಜಂಗಮ), ಆತನೆ ಜಂಗಮ ಲಿಂಗ, ಜಂಗಮಲಿಂಗವನ್ನು ತೃಪ್ತಿಗೊಳಿಸುವುದೇ ನಿಜವಾದ ಲಿಂಗಪೂಜೆ. ಶರಣ ಜಂಗಮಲಿಂಗವನ್ನು ಆರಾಧಿಸಿದರೇ ಅದೇ ಲಿಂಗಕ್ಕೆ ಮಾಡುವ ಆರಾಧನೆ. ಜಂಗಮಾರಾಧನೆಯೇ ಮಹಾರಾಧನೆ ಎಂದು “ಲಿಂಗ” “ಜಂಗಮ” ದ ಅವಿನಾಭವತೆಯನ್ನು ಪ್ರಭುಗಳು ಈ ವಚನದಲ್ಲಿ ಉಲ್ಲೇಖಿಸಿದ್ದಾರೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೊಬೈಲ್ ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()





Total views : 55993