ಶರಣರು ಕಂಡ ಶಿವರಾತ್ರಿ / ಅಮಂಗಳದಿಂದ ಮಂಗಳದ ಕಡೆಗೆ ಸಾಗುವುದೇ ಶಿವರಾತ್ರಿ

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು ಒಂದು ಕುಡಿತೆ ಉದಕವನೆರೆವೆ,
ಹಸಿವಾದಾಗ ಓಗರವನ್ನಿಕ್ಕುವೆ,
ನಾ ದೇವ ಕಾಣಾ ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-558)

ಒಂದು ದೇವರ ಮೂರ್ತಿಯ ಎದುರಿಗೆ ನಿಂತು ಆ ದೇವರ ವಿಗ್ರಹಕ್ಕೆ ಸವಾಲು ಹಾಕಿರುವ ಅಲ್ಲಮಪ್ರಭುದೇವರ ವಚನ ಸಂಪೂರ್ಣವಾಗಿ ಪರಮ ಪೂಜ್ಯ ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರು ಪ್ರತಿವರ್ಷ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ದಾಸೋಹ ನೀಡಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡುವುದರ ಜೊತೆಗೆ ಪ್ರಸಾದ ಮಾಡಿಸಿ ಕಳಿಸುತ್ತಿದ್ದರು. ಅವರ ಈ ಭಾವನೆ ಸರ್ವರಲ್ಲೂ ನಡೆದಾಡುವ ದೇವರು ಎಂದು ರೂಡಿಯಲ್ಲಿ ಬರಲು ಕಾರಣವಾಯಿತು. ಪೂಜ್ಯ ಶ್ರೀಗಳಿಂದ ಆಶೀರ್ವಾದ ಪಡೆದು ಪ್ರಾರಂಭಿಸಿದ ಯಾವುದೇ ಕೆಲಸ ಯಶಸ್ವಿಯಾಗುತ್ತಿತ್ತು ಎಂಬುದಕ್ಕೆ ನಾನೇ ಸಾಕ್ಷಿ. ಅಂತಹ ತೇಜೋಮಯ ದಿವ್ಯಮೂರ್ತಿಯ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ಪವಿತ್ರ ಪಾವನ ಪರ್ವ “ಅಮಂಗಳದಿಂದ ಮಂಗಳದ ಕಡೆಗೆ ಸಾಗುವ ಶಿವರಾತ್ರಿ” ಕುರಿತು ಒಂದಿಷ್ಟು ಚಿಂತನೆಯನ್ನು ಹಂಚಿಕೊಳ್ಳೋಣ.

“ಶಿವರಾತ್ರಿ” ಇದರಲ್ಲಿ ಎರಡು ಶಬ್ದಗಳಿವೆ. ಒಂದು ಶಿವ ಇನ್ನೊಂದು ರಾತ್ರಿ. ಶರಣರ ಪರಿಭಾಷೆಯಲ್ಲಿ ಈ ಎರಡೂ ಶಬ್ದಗಳಿಗೆ ಅತ್ಯಂತ ಶ್ರೇಷ್ಠ ಅರ್ಥಗಳಿವೆ. ಶರಣರು ಇವುಗಳನ್ನು ತತ್ವಗಳೆಂದೇ ನಾವು ಪರಿಭಾವಿಸುತ್ತಾರೆ.

ಮೊದಲನೇಯ ಶಬ್ದ ಶಿವ. ಅಂತರಂಗದಲ್ಲಿರುವ ಆತ್ಮದ ಪಾರಮ್ಯವನ್ನು ತಿಳಿಸುವ ಸಿದ್ಧಾಂತ. ಸತ್, ಚಿತ್, ಆನಂದ, ನಿತ್ಯ ಮತ್ತು ಪರಿಪೂರ್ಣಗಳೆಂಬ ಐದು ಸ್ವರೂಪಗಳನ್ನು ನಾವು ಈ ಶಿವ ಎನ್ನುವ ತತ್ವದಲ್ಲಿ ಕಾಣುತ್ತೇವೆ. ಮಾನವೀಯತೆಯನ್ನು ತನ್ನದಾಗಿಸಿಕೊಂಡು ಬಾಳುವುದೇ ಶಿವ ತತ್ವದ ಪರಮ ಗುರಿಯಾಗಿದೆ. ಶಿವ ತತ್ತ್ವ ಮನುಷ್ಯನನ್ನು ಮೃಗತ್ವದಿಂದ ಪಾರು ಮಾಡಿ ಶಿವತ್ವದ ಕಡೆಗೆ ನಡೆಸುವ ದೇವಪಥವಾಗಿದೆ.

ಇದನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಅತ್ಯಂತ ಸರಳವಾಗಿ ನಿರೂಪಣೆ ಮಾಡುತ್ತಾರೆ:

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-246/ವಚನ ಸಂಖ್ಯೆ-873)

“ಶರಣ ನುಡಿದುದೇ ಪಾವನ ಕಾಣಿರೋ ಶರಣ ನುಡಿದುದೇ ಶಿವತತ್ತ್ವ ಕಾಣಿರೋ” ಅಂತಾ ಬಸವಣ್ಣನವರು ಹೇಳುತ್ತಾರೆ. ಈ ಅಂಗ, ಕಾಯ ಅಥವಾ ಶರೀರ ಕೂಡಲಸಂಗಮನಾಥ ಇರುವ ಕ್ಷೇತ್ರ. ತನುವನ್ನು ಆಶ್ರಯಿಸಿದ ಅಂತರಂಗದ ಅರಿವು ತನುವಿನಲ್ಲಿ ಬೆರೆತಾಗ ಅಂದರೆ ಲಿಂಗಾಂಗ ಸಾಮರಸ್ಯವಾದಾಗ ಅದುವೇ ನಿಶ್ಚಲ, ಅದುವೇ ನಿದ್ರೆ ಮಾಡಿದರೆ ಜಪ, ಅದುವೇ ಕುಳಿತರೆ ಶಿವರಾತ್ರಿ ಅದು ನುಡುದುದೇ ಶಿವತತ್ವ. ಈ ಕಾಯದಲ್ಲಿ ಅಡಗಿರುವ ಪಂಚೇಂದ್ರಿಯಗಳಿಗೆ ತನ್ನ ಇರುವಿನ ಅರಿವಾದಾಗ ಕಾಯವೇ ಕೈಲಾಸ ಎನ್ನುವ ಅದೇ ಆನಂದದ ಅನುಭೂತಿ. ಈ ಆನಂದವನ್ನೇ ಶರಣರು ಶೀವರಾತ್ರಿ ಎನ್ನುವ ಪ್ರಸಾದವೆಂದರು. ಇದನ್ನು ಅರಿತ ತನು ಪ್ರಸಾದ ಕಾಯ ಇಲ್ಲದಿದ್ದರೆ ಈ ಅಂಗವೇ ಮಂಗವಾಗುವ ಸ್ಥಿತಿ.

ಪಾರಿಭಾಷಿಕ ಶಬ್ದದಲ್ಲಿ ಹುಡುಕಿದರೆ ಶಿವ ಎಂದರೆ ಮಂಗಲ, ಶುಭ, ಪವಿತ್ರ ಎಂಬ ಅರ್ಥಗಳು ನಮಗೆ ಸಿಗುತ್ತವೆ. ಆಧ್ಯಾತ್ಮಿಕವಾಗಿ ನೋಡಿದರೆ ಶಿವ ಎಂದರೆ ಚೈತನ್ಯ, ಪ್ರಣವ ಸ್ವರೂಪ, ಅನಿಕೇತನ ಎನ್ನುವ ಅರ್ಥಗಳೂ ಇವೆ. ಇಂತಹ ಪ್ರಣವ ಚೈತನ್ಯನಾದ ಮಂಗಲಮಯ ಶಿವನ ನೆನಪಿನಲ್ಲಿ ಒಂದು ರಾತ್ರಿ ಜಾಗರಣೆ ಮಾಡುವ ಒಂದು ಮಾರ್ಗವೇ ಶಿವರಾತ್ರಿ. ಶಿವಚಿಂತನ, ಶಿವಪೂಜೆ, ಶಿವಭಾವಗಳಿಂದ ಮಾಡುವ ನಮ್ಮ ಎಲ್ಲ ಕಾರ್ಯಗಳು ಮಂಗಲ ಮಹೋತ್ಸವಗಳಾಗುತ್ತವೆ ಎನ್ನುವುದು ನಮ್ಮ ಹಿರಿಯರು ಕಟ್ಟಿಕೊಟ್ಟ ಒಂದು ಸಂಸ್ಕಾರ.

ಶಿವ ಎನ್ನುವ ತತ್ವ ಸಿದ್ಧಾಂತವನ್ನು ತತ್ವವನ್ನು ವಚನಗಳಲ್ಲಿ ನೂರಾರು ರೂಪಗಳಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರು ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಅಚ್ಚಿಗವೇಕಯ್ಯಾ ಸಂಸಾರದೊಡನೆ?
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-48/ವಚನ ಸಂಖ್ಯೆ-173)

ಬೌದ್ಧಿಕ ಪ್ರಖರತೆಯ ಶರಣೆ ಮುಕ್ತಾಯಕ್ಕನವರು ತಮ್ಮ ಒಂದು ವಚನದಲ್ಲಿ ಶೀವರಾತ್ರಿಯನ್ನು ಕುರಿತು ಮಾತನಾಡಿದ್ದಾರೆ.

ಸುಮ್ಮನೇಕೆ ದಿನಕಳೆವಿರಿ,
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ?
ಮಾಡ ಬನ್ನಿ ದಿನ ಶಿವರಾತ್ರಿಯ,
ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-404/ವಚನ ಸಂಖ್ಯೆ-1129)

ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ:
ಮದ್ದುತಿಂದ ಮನುಜನಂತೆ
ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ
ಶಿವರಾತ್ರಿಯ ಮಾಡು ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-441/ವಚನ ಸಂಖ್ಯೆ-1410)

ಅಂತಹ ಮಾರ್ಗವನ್ನು ಅನುಸರಿಸಿದಾಗ “ಶರಣ ನಿದ್ರೆ ಗೈದರೆ ಜಪವಾಗುತ್ತದೆ, ಶರಣರು ಎದ್ದುಕುಳಿತರೆ ಶಿವರಾತ್ರಿ ಆಗುತ್ತದೆ. ಕೊನೆಗೊಮ್ಮೆ ಶರಣನ ಕಾಯವೇ ಕೈಲಾಸವಾಗುತ್ತದೆ”.

ಶಿವರಾತ್ರಿಯು ಭಕ್ತಿ ಪ್ರಧಾನವಾದ ಶ್ರೇಷ್ಠ ರಾತ್ರಿ. ವೈಚಾರಿಕ ತಳಹದಿಯ ಮೇಲೆ ಶಿವರಾತ್ರಿಯನ್ನು ವಿಶ್ಲೇಷಿಸುವುದಾದರೆ, ಅದನ್ನು ಜಾಗೃತೆಯ ರಾತ್ರಿ ಅಥವಾ ಎಚ್ಚರಿಕೆಯ ರಾತ್ರಿ (Night of Awareness) ಎಂದು ತಿಳಿದುಕೊಳ್ಳಬಹುದು. ಕೇವಲ ಸಂಸಾರ ಸುಖದಲ್ಲೇ ತಲ್ಲೀನನಾದ ಮಾನವನು ಇಂದ್ರೀಯ ಸುಖದಿಂದ ಎಚ್ಚೆತುಕೊಂಡು ಪಾರಮಾರ್ಥಿಕ ಸುಖವನ್ನು ಪಡೆಯಬೇಕು. ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವ ಮಾನವನು ಆತ್ಮ ಜಾಗೃತಿಯನ್ನು ಮಾಡಿಕೊಳ್ಳಬೇಕು ಎನ್ನುವುದೇ ಈ ರಾತ್ರಿಯ ವಿಶೇಷತೆ. ಇನ್ನೊಂದು ಅರ್ಥದಲ್ಲಿ, ಇಡೀ ವರ್ಷದಾದ್ಯಂತ ಲೌಕಿಕ ಜಂಜಡಗಳು ಅಥವಾ ವ್ಯವಹಾರಗಳಲ್ಲಿಯೇ ತಲ್ಲೀನನಾಗಿರುವ ಮನುಷ್ಯ ವರ್ಷಕ್ಕೊಮ್ಮೆಯಾದರೂ ಭಕ್ತಿಯಲ್ಲಿ ತೊಡಗಿಸಿಕೊಂಡು ಆತ್ಮ ಸಂತೋಷವನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಈ ಶಿವರಾತ್ರಿಯನ್ನು ಆಚರಣೆಗೆ ತರಲಾಗಿದೆ. ಹಾಗಾಗಿ ಈ ರಾತ್ರಿಯನ್ನು ಮಾನವತ್ವದಿಂದ ದೈವತ್ವದ ಕಡೆಗೆ ಮತ್ತು ಅಮಂಗಳದಿಂದ ಮಂಗಳದೆಡೆಗೆ ಸಾಗುವುದನ್ನು ತಿಳಿಸುವ ರಾತ್ರಿಯಾಗಿದೆ. ಇದನ್ನು ಒಂದು ದೃಷ್ಟಾಂತದ ಮೂಲಕ ತಿಳಿಯುವ ಪ್ರಯತ್ನ ಮಾಡೋಣ.

ಶರಣರೊಬ್ಬರು ಲೋಕ ಸಂಚಾರ ಮಾಡುತ್ತಾ ಕಲ್ಯಾಣದ ಮಹಾಮಾರ್ಗದಲ್ಲಿ ನಡೆದು ಹೊರಟಿದ್ದರು. ಅನೇಕರು ಅವರನ್ನು ನೋಡಿ ಮಾತಾಡಿಸುತ್ತಾ ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಒಬ್ಬ ವ್ಯಕ್ತಿ ಶರಣರನ್ನು ಉದ್ದೇಶಿಸಿ “ತಾವು ಈ ಲೋಕಸಂಚಾರ ಏಕೆ ಕೈಗೊಂಡಿರುವಿರಿ” ಅಂತ ಕೇಳತಾರೆ. ಅವರು ನಗುತ್ತ ಅವರು ವಿಡಂಬನಾತ್ಮಕವಾಗಿ “ತಮ್ಮಾ ಜನರನ್ನು ಮಲಗಿಸುವುದಕ್ಕೆ, ಮತ್ತೆ ಎಚ್ಚರ ಮಾಡುವುದಕ್ಕೆ” ಎಂದು ಉತ್ತರಿಸಿದರು.

ಆಶ್ಚರ್ಯಚಕಿತರಾದ ಜನರು “ಸ್ವಾಮಿ, ಜನರನ್ನು ಎಚ್ಚರ ಮಾಡುವುದೇನೊ ಸರಿ. ಆದರೆ ಮಲಗಿಸುವುದು ಅಂತೀರಲ್ಲಾ ಯಾಕೆ?” ಅಂತ ಕೇಳತಾರೆ. ಆಗ ಅವರು:

“ಈ ಜಗತ್ತಿನಲ್ಲಿ ನಿದ್ರೆ ಹತ್ತಿದವರನ್ನು ಎಚ್ಚರಿಸಬಹುದು, ಆದರೆ ನಿದ್ರೆ ಹತ್ತಿದಂತೆ ನಾಟಕ ಮಾಡುವವರನ್ನು ಎಚ್ಚರಿಸಲಾಗದು, ಅಂಥ ಜನರು ಅಜ್ಞಾನ, ಅವಿವೇಕ, ಅಂಧ ಶ್ರದ್ಧೆ, ಅರಾಜಕತೆ ಬಿತ್ತುತ್ತಾರೆ. ಅಂಥವರು ವೇಶ ಡಂಬಕರು. ಇಲ್ಲಿ ಎಚ್ಚರಾಗಿ ಏನು ಪ್ರಯೋಜನ ಹೇಳಿ? ಅವರು ನಿರಂತರ ಮಲಗಿದರೆ ನಾಡಿಗೇ ಒಳ್ಳೆಯದು. ಯಾರು ದೇಶ, ಭಾಷೆ, ನಾಡು, ಸುಜ್ಞಾನ, ಸೇವೆ, ಶಿವಸಂಸ್ಕೃತಿ ಬಿತ್ತುತ್ತಾರೋ ಅಂಥವರು ನಿತ್ಯ ಜಾಗೃತರಾಗಿರಬೇಕು, ಮತ್ತೆ ಎಚ್ಚರವಾಗಬೇಕು. ಅಂಥವರನ್ನು ಎಚ್ಚರಿಸುವುದೇ ನನ್ನ ಶಿವರಾತ್ರಿಯ ಕಾಯಕ” ಎಂದರು.

ಹಾಗಾಗಿ “ಶಿವರಾತ್ರಿ” ಎಂದರೆ ಮತ್ತೆ ಮತ್ತೆ ನಮ್ಮೊಳಗೆ ಎಚ್ಚರವಾಗುವುದು. ನಮ್ಮ ಅಂತರಂಗದಲ್ಲಿನ ಅರಿವನ್ನು ಜಾಗೃತಗೊಳಿಸುವುದು. ರಾತ್ರಿಯೆಲ್ಲಾ ಜಾಗರಣೆ ಮಾಡುವುದು ಎಂದರೆ ನಮ್ಮಲ್ಲಿರುವ ಜಡತ್ವ, ಅಜ್ಞಾನ, ಅವಿವೇಕ, ಅಂಧಶ್ರದ್ಧೆಯಿಂದ ನಾವುಗಳು ಎಚ್ಚೆತ್ತು ಸಹನೆ, ಸನ್ನಡತೆ, ಕಾಯಕ, ದಾಸೋಹ, ಸ್ನೇಹ, ಬಂಧುತ್ವ, ವಿಶ್ವಪ್ರಜ್ಞೆಗಳ ಮೂಲಕ ನಾವು ಇಂದು ಕೈಗೊಳ್ಳುತ್ತಿರುವ ಮಹಾ ಶಿವರಾತ್ರಿ, ನಮ್ಮೆಲ್ಲರಲ್ಲಿ ಅರಿವಿನ ಜಾಗೃತಿಯ ಬೆಳಕು ಮೂಡಬೇಕು.

ಶಿವರಾತ್ರಿಯಂದು ಉಪವಾಸ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪರಂಪರೆ. “ಉಪ” ಎಂದರೆ ಹತ್ತಿರ, ಸಮೀಪ ಮತ್ತು ವಾಸ ಎಂದರೆ ಇರುವುದು, ಇರುವಿಕೆ. ವಾಸ್ತವಿಕವಾಗಿ ಅರಿವವನ್ನು ನಿರಾಕಾರ ಮಹಾಲಿಂಗದ ಜೊತೆ ಜೋಡಿಸುವುದೇ ನಿಜವಾದ ಉಪವಾಸವಾಗಿದೆ. ಯಾರ ಹತ್ತಿರ ಇರುವುದು? ಶಿವ ನಾಮಸ್ಮರಣೆಯ ಮೂಲಕ ಶಿವನ ಸಮೀಪ ಇರುವುದಕ್ಕೆ ಉಪವಾಸ ಅಂತಾರೆಯೇ ಹೊರತು, ಕೇವಲ ಹೊಟ್ಟೆಗೆ ಕಠಿಣ ಶಿಕ್ಷೆ ವಿಧಿಸುವುದು ಉಪವಾಸವಾಗಲಾರದು. ಆರೋಗ್ಯದ ದೃಷ್ಟಿಯಿಂದ ಒಂದು ದಿನದ ಉಪವಾಸ ಸರಿಯಾದ ಕ್ರಮದಲ್ಲಿ ಮಾಡಿದರೆ ಸರಿಯಾದೀತು. ಅದೆಲ್ಲದಕ್ಕಿಂತ ನಮ್ಮ ಪರಿಶುದ್ಧ ಮನದಿಂದ ಮಾಡುವ ಸಹಜ ಆಚರಣೆಯಾದರೆ ಕಾಯವೇ ಕೈಲಾಸವಾಗುತ್ತದೆ.

“ಊಟದಷ್ಟೇ ಉಪಾಹಾರ” ಅಂದರೆ ದಿನಾ ಮಾಡುವ ಊಟವನ್ನು ಬಿಟ್ಟು, ಉಳಿದ ಎಲ್ಲವನ್ನು ತಿನ್ನುವುದು ಕೆಲವರ ಉಪವಾಸವಾಗಿದೆ. ಮತ್ತೆ ಕೆಲವರು ನಿರಾಹಾರ ಮಾಡಿ ಖಾಲಿ ಹೊಟ್ಟೆಯಿಂದ ಇರುತ್ತಾರೆ. ಈ ಎರಡು ಮಾರ್ಗಗಳು ತುಂಬಾ ತಪ್ಪು ತಿಳುವಳಿಕೆಯಿಂದ ಕೂಡಿವೆ. ಇಂಥ ಉಪವಾಸಗಳು ಮೂರು ವಿಧವಾಗಿವೆ.

 ನಿರ್ಜಲ ವ್ರತ: ಆಹಾರ ಮತ್ತು ನೀರು ಎರಡನ್ನೂ ತ್ಯಜಿಸಲಾಗುತ್ತದೆ.
 ಫಲಾಹಾರ ವ್ರತ: ಫಲಹಾರ ಮಾತ್ರ ಸೇವಿಸುತ್ತಾರೆ.
 ಸಮಾಪ್ತ: ಒಂದು ಹೊತ್ತಿನ ಊಟವನ್ನು ಸೇವಿಸಬಹುದಾಗಿದೆ. ಒಂದತ್ತು ಅಂತಾರೆ.

ಭಾರತೀಯ ಸಂಪ್ರದಾಯದ ಆಚರಣೆಗಳಲ್ಲಿ ಉಪವಾಸವೂ ಒಂದು. ಏಕಾದಶಿಯಂದು ಸಾಮಾನ್ಯವಾಗಿ ಉಪವಾಸವನ್ನು ಆಚರಿಸಲಾಗುತ್ತದೆ. ಇದಕ್ಕೆ ವೈಜಾನಿಕ ತಳಹದಿಯೂ ಕೂಡ ಇದೆ. ಜಪಾನಿನ ಜೀವಕೋಶ ವಿಜ್ಞಾನಿಯಾದ ಯೊಶಿನೋರಿ ಓಶುಮಿ ಅವರು Autophagy ಎನ್ನುವ ಜೈವಿಕ ಅಂಶದ ಸಂಶೋಧನೆಗೆ 2016 ರ ನೋಬೆಲ್‌ ಪುರಸ್ಕಾರ ದೊರೆತಿದೆ.

ಸ್ವಯಂಭಕ್ಷಣ ಪ್ರಕ್ರಿಯೆ ಅಥವ ಆಟೋಫ್ಯಾಗಿ ನೈಸರ್ಗಿಕವಾಗಿ ಉಂಟಾಗುವ ಕ್ರಿಯೆ. ಒಂದು ಜೀವಕೋಶದ ಅನಗತ್ಯ ಅಥವಾ ನಿಷ್ಕ್ರಿಯ ಅಂಶಗಳನ್ನು ನಿಯಂತ್ರಿತ ಕ್ರಮದಲ್ಲಿ ಕೆಡವುವ ವಿನಾಶಕಾರಿ ವ್ಯವಸ್ಥೆ ಈ ಕ್ರಿಯೆ. ಸ್ವಯಂಭಕ್ಷಣೆ ಜೀವಕೋಶದ ಘಟಕಗಳ ಕ್ರಮಬದ್ಧವಾದ ಅವನತಿ ಮತ್ತು ಮರುಬಳಕೆಗೆ ಅವಕಾಶ ಮಾಡಿಕೊಡುತ್ತದೆ. ಈ ಪ್ರಕ್ರಿಯೆ ಉಪವಾಸವಿದ್ದಾಗ ನಡೆಯುವಂಥ ಪ್ರಕ್ರಿಯೆ. ಇದನ್ನು ನಾವು “Practical Nature Cure” ಎನ್ನಬಹುದು. ಯೊಶಿನೋರಿ ಓಶುಮಿ ಅವರು ಹೇಳುವ ಹಾಗೆ:

Human body is the living temple of God. It’s a living miraculous machine is itself reliant in maintaining health as well as curing ill health through the normal medicines produced in its own body.

ಅದಕ್ಕೆ ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ “ಉಗುಳು ನುಂಗಿ ಹಸಿವ ಕಳೆದು” ಎಂದು ಉಪವಾಸದ ಕುರಿತು ಮಾತನಾಡಿದ್ದಾರೆ.

ಉಗುಳ ನುಂಗಿ, ಹಸಿವ ಕಳೆದು,
ತೆವರ ಮಲಗಿ ನಿದ್ರೆಗೆಯ್ದು,
ನೋಡಿ ನೋಡಿ ಸುಖಂಬಡೆದೆನಯ್ಯಾ.
ಗುಹೇಶ್ವರಾ ನಿಮ್ಮ ವಿರಹದಲ್ಲಿ
ಕಂಗಳೇ ಕರುವಾಗಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-121/ವಚನ ಸಂಖ್ಯೆ-368)

ಶಿವಪಥವಲ್ಲದೆ ಬೇರೆ ಪಥವನ್ನು ಅನುಸರಿಸದೆ ಅಂಗ ಅರಿವು ಆಚಾರಗಳಲ್ಲಿ ಶಿವಸಂಸ್ಕೃತಿಯನ್ನು ತುಂಬಿಕೊಂಡು ನಾವು ಶಿವಾಯತರಾಗಬೇಕು. ಎಲ್ಲ ಚೇತನಗಳ ಮೂಲ ಶಕ್ತಿಯೇ ಶಿವ. ಎಲ್ಲ ಸಂಸ್ಕೃತಿಗಳ ಮೂಲ ದ್ರವ್ಯವೇ ಶಿವ ಸಂಸ್ಕೃತಿ. ಈ ಮೂಲ ತತ್ವದ ಶಿವ ಸಿದ್ಧಾಂತವೇ ನಮ್ಮೆಲ್ಲರ ಉಸಿರಾಗಬೇಕು. ಹೌದು, ನಾವು ಮಾಡುವ ಆಚಾರ, ವಿಚಾರಗಳು, ಕೇವಲ ತೋರಿಕೆಯ ತೊರು ದೀಪಗಳಾಗದೆ ಬಾಳ ಬದುಕಿಗೆ ಮಾರ್ಗ ತೋರುವ ನಿಜದ ನೆಲೆಯಾಗಬೇಕು, ಬಾಳ ಕಲೆಯಾಗಬೇಕು ಅಂತಾ ಹೇಳತಾ ಆಯ್ದಕ್ಕಿ ಮಾರಯ್ಯನವರ ಈ ವಚನದ ಮೂಲಕ ಈ ಉಪನ್ಯಾಸಕ್ಕೆ ವಿರಾಮವನ್ನು ಹೇಳುತ್ತೇನೆ.

ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504)

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ
ಸುಭಾಷ್‌ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ : +91 9741 357 132.
ಈ-ಮೇಲ್‌ : vijikammar@gmail.com

ಸಹಾಯಕ ಗ್ರಂಥಗಳು:
• ಶರಣ ವೈದ್ಯ ಸಂಗಣ್ಣ: ಡಾ. ಮುಕ್ತುಂಬಿ.
• ಉಪವಾಸ! ಏನಿದರ ರಹಸ್ಯ?: ಪೂಜ್ಯಶ್ರೀ. ಬಸವಾನಂದ ಸ್ವಾಮಿಗಳು.
• ವಚನ ವೈದ್ಯ: ಪೂಜ್ಯಶ್ರೀ. ಬಸವಾನಂದ ಸ್ವಾಮಿಗಳು.
• ಆಧುನಿಕ ಜಗತ್ತಿಗೆ ಶ್ರೀ ಬಸವೇಶ್ವರರ‌ ಹೊಸ ಸಂದೇಶ: ಡಾ. ಎಸ್‌. ವಿ. ಅಯ್ಯನಗೌಡರ, ಶ್ರೀಮತಿ. ಶಕುಂತಲಾ.
• ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
• ಪರ್ಯಾಯ ಸಂಸ್ಕೃತಿ ವಚನ ಸಂಪುಟ: ಡಾ. ಸಿ. ವೀರಣ್ಣ.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.i
n

Loading

Leave a Reply